ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಜುಲೈ 2015 > ಗುರುದಕ್ಷಿಣೆ

ಗುರುದಕ್ಷಿಣೆ

ಅಲ್ಲಿದ್ದ ಪಂಡಿತ ಒಂದು ವಿಚಿತ್ರ ಸ್ವರದಲ್ಲಿ ಕೂಗಿಟ್ಟ. ಅದೊಂದು ಸಂಕೇತವಾಗಿತ್ತು. ಕೂಗು ಕೇಳಿದೊಡನೆ ಭೂಮಿಯಿಂದ ಎದ್ದುಬಂದಂತೆ ರಾಜಪಡೆ ಪ್ರದೇಶವಷ್ಟನ್ನೂ ಸುತ್ತುವರಿದು ನಿಂತಿತು. ಯಾರಿಗೂ ತಪ್ಪಿಸಿಕೊಂಡು ಹೋಗಲು ಅವಕಾಶವಿರಲಿಲ್ಲ.

Rajatarangini4-2ಕ್ರಿ. ಪೂ. ೧೪ರಿಂದ ೧೨ನೇ ಶತಮಾನದ ಕಾಲದ ಕಥೆ ಈಗ ಹೇಳಹೊರಟಿರುವುದು.

ಆ ದಿನಗಳಲ್ಲಿ ಕಶ್ಮೀರವನ್ನು ಆಳುತ್ತಿದ್ದವನು. ಜಲೌಕ ಎಂಬ ಮಹಾರಾಜ. ಜಲೌಕನು ಅಶೋಕಚಕ್ರವರ್ತಿಯ ಪುತ್ರ. ಅಶೋಕನಾದರೋ ಭಾರತವನ್ನೆಲ್ಲ ವ್ಯಾಪಿಸಿ ‘ಮ್ಲೇಚ್ಛ’ರನ್ನು (ಎಂದರೆ ‘ಅನಾಗರಿಕ’ ವೇದಭ್ರಷ್ಟ ಭಾರತೀಯರನ್ನು) ಉಚ್ಚಾಟಿಸಲು ಪ್ರಯತ್ನಿಸುತ್ತಿದ್ದವನು. ಆದರೆ ಬೌದ್ಧಮತವನ್ನು ಸ್ವೀಕರಿಸಿದ ಮೇಲೆ ಅಶೋಕನ ದೃಷ್ಟಿ ಬದಲಾಗಿತ್ತು. ಯುದ್ಧವೆಂದರೆ ಅವನು ಅಸಹ್ಯಪಟ್ಟುಕೊಳ್ಳತೊಡಗಿದ್ದ. ಸೈನ್ಯದ ನಿರ್ವಹಣೆಯನ್ನು ಅವನು ನಿರ್ಲಕ್ಷ್ಯ ಮಾಡತೊಡಗಿದ್ದುದರಿಂದ ಅಶೋಕನ ಭುಜಬಲ ಕುಸಿದು ಅವನಿಂದ ಉಚ್ಛಾಟಿತರಾಗಿದ್ದ ‘ಮ್ಲೇಚ್ಛ’ರು ಮತ್ತೆ ದೇಶದೊಳಕ್ಕೆ ಬಂದು ವಿಜೃಂಭಿಸುತ್ತಿದ್ದರು. ಅನೇಕ ದುರ್ಗಗಳನ್ನು ವಶಪಡಿಸಿಕೊಂಡಿದ್ದರು. ಒಟ್ಟಿನ ಮೇಲೆ ದೇಶದಲ್ಲಿ ಅಕಾಂಡತಾಂಡವ ನಡೆದಿತ್ತು.

ತಾನು ಕಷ್ಟಪಟ್ಟು ಸಾಧಿಸಿದ್ದ ವಿಜಯ ಈಗ ನಿರರ್ಥಕವೆನಿಸತೊಡಗಿದ್ದುದು ಅಶೋಕನಿಗೆ ತೀವ್ರ ಆತಂಕವನ್ನು ತಂದಿದ್ದಿತು. ಪಂಡಿತವರ್ಗದ ನೆರವನ್ನೂ ಪಡೆದು ದೇಶದಿಂದ ‘ಮ್ಲೇಚ್ಛ’ರನ್ನು ಉಚ್ಚಾಟಿಸಬಲ್ಲ ಸಮರ್ಥನಾದ ಪುತ್ರನು ತನಗೆ ಜನಿಸಲಿ ಎಂದು ತೀವ್ರ ತಪಸ್ಸನ್ನು ಆಚರಿಸಿದ. ಆ ತಪಸ್ಸಿನ ಫಲಿತವಾಗಿ ಜನಿಸಿದವನೇ ಜಲೌಕ ಮಹಾರಾಜ; ಇದೀಗ ಕಶ್ಮೀರವನ್ನು ಆಳುತ್ತಿದ್ದವನು.

ಊರಿನ ಸರಹದ್ದು ತಲಪಿದೊಡನೆ ಅಶ್ವಾರೋಹಿಗಳಿಬ್ಬರೂ ಮೌನವಾಗಿ ಕುದುರೆಗಳಿಂದ ಕೆಳಕ್ಕೆ ಇಳಿದು ಮೊದಲೇ ಗೊತ್ತುಪಡಿಸಿಕೊಂಡಿದ್ದ ರಹಸ್ಯ ಸ್ಥಾನದಲ್ಲಿ ಕುದುರೆಗಳನ್ನು ಕಟ್ಟಿಹಾಕಿದರು. ಅನಂತರ ನಿಃಶಬ್ದವಾಗಿ ತಮ್ಮ ಉಡುಪನ್ನು ಚಕಚಕ ಬದಲಾಯಿಸಿದರು. ಈಗ ಅವರು ಸಾಮಾನ್ಯ ಜನರ ದಿರಿಸಿನಲ್ಲಿ ಇದ್ದರು. ವೇಷ ಬದಲಾದರೂ ಅವರ ಮುಖದಲ್ಲಿದ್ದ ವಿಶೇಷ ವರ್ಚಸ್ಸನ್ನು ಮಾತ್ರ ಅಡಗಿಸಿಡಲಾಗಲಿಲ್ಲ.

ಅಶೋಕನ ಕಾಲದಲ್ಲಿ ಬೌದ್ಧಮತವು ಉಕ್ಕಿಹರಿಯುವ ಪ್ರವಾಹದಂತೆ ಕಶ್ಮೀರದಾದ್ಯಂತ ಪಸರಿಸಿತ್ತು. ಅವರು ಇವರು ಎಂಬ ಭೇದವಿಲ್ಲದೆ ಬಹುತೇಕ ಜನರು ಸನಾತನಧರ್ಮವನ್ನು ತ್ಯಜಿಸಿ ಬೌದ್ಧರಾಗಿ ಮಾರ್ಪಟ್ಟಿದ್ದರು.

ವಾಸ್ತವವಾಗಿ ‘ಬೌದ್ಧ’ ಎಂಬ ವರ್ಣನೆ ಸಲ್ಲುತ್ತಿದ್ದುದು ಸಂನ್ಯಾಸಿಗಳಿಗೆ ಮಾತ್ರ. ಆದರೆ ಬರುಬರುತ್ತ ಸಂಸಾರವಂದಿಗರೂ ಬೌದ್ಧಮತಸಿದ್ಧಾಂತದಲ್ಲಿ ನಂಬಿಕೆ ಬೆಳೆಸಿಕೊಂಡು ತಾವೂ ‘ಬೌದ್ಧ’ರೆಂದು ಕರೆದುಕೊಳ್ಳತೊಡಗಿದ್ದರು. ಇನ್ನೊಂದು ಕಾರಣವೂ ಇದ್ದಿತು. ಅಶೋಕ ಮಹಾರಾಜನು ಬೌದ್ಧಮತದ ಅನುಯಾಯಿಯಾದ ಮೇಲೆ ಅವನ ಆಡಳಿತದಲ್ಲಿ ಉನ್ನತ ಪದವಿಗಳೆಲ್ಲ ಬೌದ್ಧರಿಗೇ ಮೀಸಲಾಗಿದ್ದವು. ಹೀಗೆ ರಾಜಾಶ್ರಯವನ್ನು ಬಯಸುವವನು ಬೌದ್ಧಮತವನ್ನು ಅವಲಂಬಿಸದೆ ಗತ್ಯಂತರವಿರಲಿಲ್ಲ. ಅಧಿಕಾರಾಕಾಂಕ್ಷಿಗಳು, ಸಾಮಾನ್ಯರು – ಎಲ್ಲರೂ ಹಾಗೆ ಆವೇಶಗೊಂಡವರಂತೆ ಸನಾತನಧರ್ಮವನ್ನು ತ್ಯಜಿಸಿ ಬೌದ್ಧಮತದ ಹಿಂದೆ ಬೀಳತೊಡಗಿದ್ದರು. ಅನೇಕ ಪ್ರಮುಖ ಅಧಿಕಾರಸ್ಥಾನಗಳು ಬೌದ್ಧಶ್ರವಣರ ಪಾಲಾಗಿದ್ದವು.

ರಾಜ್ಯದಲ್ಲಿ ಪ್ರಬಲರಾದಾಗಿನಿಂದ ಬೌದ್ಧರು ಸನಾತನ ವಿದ್ಯಾವ್ಯವಸ್ಥೆಯನ್ನು ನಾಶಮಾಡುವ ಯತ್ನದಲ್ಲಿ ತೊಡಗಿದರು. ಏಕೆಂದರೆ ವೇದಗಳಿಗೆ ಬೌದ್ಧಮತದಲ್ಲಿ ಮಾನ್ಯತೆ ಇರಲಿಲ್ಲ. ಪುರಾಣಗಳಲ್ಲಿ ಬೌದ್ಧಮತಕ್ಕೆ ವಿಶ್ವಾಸ ಇರಲಿಲ್ಲ. ಅವೆಲ್ಲ ಪೂರ್ತಿ ಕಾಲ್ಪನಿಕವೆಂಬುದು ಬೌದ್ಧರ ನಿಲುವು. ಹಿಂದೆ ವೇದಪುರಾಣಗಳಿಗೆ ಇದ್ದ ಸ್ಥಾನ ಈಗ ಬೌದ್ಧಮತಸಾಹಿತ್ಯಕ್ಕೂ ಜಾತಕಕಥೆಗಳಿಗೂ ಸಂದಿತ್ತು. ಹಿಂದೆ ಇದ್ದ ಗುರುಕುಲಗಳಿಗೆ ಬದಲಾಗಿ ಈಗ ‘ವಿಹಾರ’ಗಳು ಏರ್ಪಟ್ಟಿದ್ದವು. ಅವೇ ಈಗಿನ ಉಚ್ಚಶಿಕ್ಷಣ ಸಂಸ್ಥೆಗಳಾಗಿದ್ದವು. ಹಿಂದಿನ ದಿನಗಳಲ್ಲಿ ಎಷ್ಟೇ ದೊಡ್ಡ ಪಾಂಡಿತ್ಯ ಸಂಪಾದಿಸಿದ್ದರೂ ಅದೆಲ್ಲ ಈಗ ವ್ಯರ್ಥವೆನಿಸಿತ್ತು. ವಿದ್ಯೆ ಎಂದರೆ ‘ವಿಹಾರ’ಗಳಲ್ಲಿ ಚಲಾವಣೆಯಲ್ಲಿರುವುದು ಮಾತ್ರ ಎನಿಸತೊಡಗಿತ್ತು. ಅಷ್ಟೇ ಅಲ್ಲ. ಯಾರೋ ಒಬ್ಬ ಬೌದ್ಧ ಸಂನ್ಯಾಸಿಯ ಶಿಷ್ಯನಾದ ಹೊರತು ಒಬ್ಬ ವ್ಯಕ್ತಿ ಕಲಿತಿದ್ದ ಯಾವುದಕ್ಕೂ ಬೆಲೆ ಇರಲಿಲ್ಲ. ಸಾಂಪ್ರದಾಯಿಕ ಪಂಡಿತರಿಗೆ ರಾಜಮರ್ಯಾದೆ ಇರಲಿಲ್ಲ; ಸಮಾಜಗೌರವವೂ ಇರಲಿಲ್ಲ. ಹೀಗೆ ಬೌದ್ಧಮತಾನುಸಾರಿ ವಿದ್ಯೆ ಕಲಿಯದಿದ್ದವರಿಗೆ ಜೀವನಾವಕಾಶವೇ ದುರ್ಲಭವಾಗಿ ಬಿಟ್ಟಿತ್ತು. ಈ ಕಾರಣದಿಂದ ಅನೇಕ ಮಂದಿ ವೇದಪಂಡಿತರು ಕಶ್ಮೀರವನ್ನು ತ್ಯಜಿಸಿ ವೇದಪಾಂಡಿತ್ಯಕ್ಕೆ ಗೌರವವಿದ್ದ ಅನ್ಯ ಪ್ರಾಂತ್ಯಗಳಿಗೆ ವಲಸೆ ಹೋಗತೊಡಗಿದರು. ಹಾಗೆ ವಲಸೆ ಹೋಗಲಾಗದಿದ್ದವರು ಬೌದ್ಧಮತವನ್ನು ಅಂಗೀಕರಿಸಿ ಬೌದ್ಧ ಸಂನ್ಯಾಸಿಗಳನ್ನು ಹೊಗಳುತ್ತಾ ಬೌದ್ಧರಾಗಿ ಬದುಕನ್ನು ಸಾಗಿಸುತ್ತಿದ್ದರು.

ಆ ಸನ್ನಿವೇಶದಲ್ಲಿಯೂ ಪ್ರವಾಹಕ್ಕೆ ಎದುರಾಗಿ ಈಜುವ ಸಾಹಸ ಮಾಡಿದ ಕೆಲವು ಕುಟುಂಬಗಳು ಬಂಡೆಯಂತೆ ಅಚಲವಾಗಿ ಉಳಿದು ಸನಾತನಧರ್ಮದ ಪಾಲನೆಯನ್ನು ಮುಂದುವರಿಸಿದ್ದರು. ಕೆಲವೆಡೆಗಳಲ್ಲಿ ಇಡೀ ಊರೇ ಬೌದ್ಧಮತಾವಲಂಬಿಯಾಗಿದ್ದರೂ ಎರಡೋ ಮೂರೋ ಸನಾತನಧರ್ಮ ಕುಟುಂಬಗಳು ತಮ್ಮ ಜೀವನರೀತಿಗೇ ಬದ್ಧರಾಗಿ ಮುಂದುವರಿದಿದ್ದವು. ಅಂತಹವರ ವಿಷಯದಲ್ಲಿ ಬಹುಸಂಖ್ಯಾತ ಬೌದ್ಧರು ಅಸಡ್ಡೆಯಿಂದ ನೋಡುತ್ತಿದ್ದರು. ಆ ಬ್ರಾಹ್ಮಣಕುಟುಂಬಗಳವರು ಬೌದ್ಧಮತವನ್ನು ಸ್ವೀಕರಿಸಿದಲ್ಲಿ ಅವರಿಗೆ ರಾಜನ ಆಸ್ಥಾನದಲ್ಲಿ ದೊಡ್ಡ ಹುದ್ದೆಗಳನ್ನು ಕಲ್ಪಿಸಲಾಗುತ್ತದೆಂದೂ ಹಾಗೆ ಅವರ ಬಡತನ ನೀಗುತ್ತದೆಂದೂ ಅವರ ಮನವೊಲಿಸಲು ಯತ್ನಿಸುತ್ತಿದ್ದರು. ಈ ಓಲೈಕೆಗೆ ಬಾಗದವರಿಗೆ ಬೆದರಿಕೆಗಳನ್ನು ಒಡ್ಡುತ್ತಿದ್ದರು. ಅವರನ್ನು ಏನೇನೋ ಕ್ಷುಲ್ಲಕ ಕಾರಣಗಳನ್ನು ನೀಡಿ ದಂಡನೆಗೆ ಒಳಪಡಿಸುವ ಯತ್ನಗಳು ಆಗುತ್ತಿದ್ದವು. ಆನಂತರ ಹಾಗೆ ರಕ್ಷಣೆ ತಪ್ಪಿದ ಕುಟುಂಬಗಳನ್ನು ಬಲಾತ್ಕಾರದಿಂದ ಬೌದ್ಧಮತಕ್ಕೆ ಪರಿವರ್ತಿಸುವ ಪ್ರಯತ್ನಗಳು ಆಗುತ್ತಿದ್ದವು. ಈ ಯಾವುದಕ್ಕೂ ಬಾಗದ ಕುಟುಂಬಗಳನ್ನು ಊರಿನಿಂದ ಆಚೆಗೆ ದಬ್ಬುವುದು ಅಥವಾ ಅವರ ಆಸ್ತಿ-ಪಾಸ್ತಿಗಳನ್ನು ವಶಪಡಿಸಿಕೊಳ್ಳುತ್ತಿದ್ದುದೂ ಉಂಟು.

ಆ ಇಬ್ಬರು ಅಶ್ವಾರೋಹಿಗಳು ಪ್ರವೇಶಿಸಿದ ಊರಿನಲ್ಲಿ ಇನ್ನೂ ಬೌದ್ಧಮತವನ್ನು ಸ್ವೀಕರಿಸದೆ ಮೊಂಡುಹಿಡಿದಿದ್ದ ಎರಡು ಸನಾತನ ಬ್ರಾಹ್ಮಣ ಕುಟುಂಬಗಳು ಇದ್ದವು. ಮರುದಿನದ ಸೂರ್ಯೋದಯದೊಳಗಾಗಿ ಆ ಎರಡು ಕುಟುಂಬಗಳೂ ಸನಾತನಧರ್ಮವನ್ನು ತ್ಯಜಿಸಬೇಕು ಅಥವಾ ಊರುಬಿಟ್ಟು ಹೊರಟುಹೋಗಬೇಕು – ಎಂದು ಆ ಊರಿನ ಬೌದ್ಧವಿಹಾರಾಧ್ಯಕ್ಷ ಧರ್ಮಪಾಲನು ಆದೇಶಿಸಿದ್ದ. ಆದೇಶವನ್ನು ಪಾಲಿಸದವರನ್ನು ಸಜೀವವಾಗಿ ದಹನ ಮಾಡಲಾಗುವುದೆಂದೂ ಎಚ್ಚರಿಸಿದ್ದ. ಆ ದಿನಗಳಲ್ಲಿ ಸಜೀವದಹನದ ಬಗೆಗೆ ಬೌದ್ಧಮತೀಯರು ತುಂಬ ಉತ್ಸಾಹ ತೋರುತ್ತಿದ್ದರು.

ಅಶ್ವಾರೋಹಿಗಳು ಊರೊಳಕ್ಕೆ ಬರುವ ವೇಳೆಗೆ ಊರಿನ ಬೌದ್ಧರೆಲ್ಲ ಆ ಎರಡು ಕುಟುಂಬಗಳ ಮನೆಗಳನ್ನು ಸುತ್ತುವರಿದಿದ್ದರು. ಹಾಗೆ ಘೇರಾಯಿಸಿದ್ದವರಲ್ಲಿ ಬೌದ್ಧಸಂನ್ಯಾಸಿಗಳೂ ಅನೇಕರು ಇದ್ದರು.

ಆ ಎರಡು ಕುಟುಂಬಗಳ ಮುಚ್ಚಿದ್ದ ಮನೆಬಾಗಿಲುಗಳ ಎದುರಿಗೆ ನಿಂತು ಧರ್ಮಪಾಲನು ಗಟ್ಟಿಯಾಗಿ ಅರಚಿದ:” ಶೋಣೋತ್ತರಾ, ಚಂದ್ರಮೌಳೀಶ್ವರಾ! ನಿಮಗೆ ಕೊಟ್ಟಿದ್ದ ಸಮಯದ ಗಡುವು ಮುಗಿಯುತ್ತಿದೆ. ಬೇಗ ನಿಶ್ಚಯ ಮಾಡಿ – ನೀವು ಊರು ಬಿಟ್ಟು ಹೋಗುತ್ತೀರೋ, ಅಥವಾ ಬೌದ್ಧರಾಗುತ್ತೀರೋ? ಈ ರಾಜ್ಯದಲ್ಲಿ ಬೌದ್ಧೇತರರು ಯಾರೂ ಇರಲು ಆಸ್ಪದವಿರಬಾರದೆಂದು ಜಲೌಕ ಮಹಾರಾಜರ ಆಜ್ಞೆ ಇದೆ. ಒಂದು ವೇಳೆ ನೀವು ಈ ಗ್ರಾಮವನ್ನು ಬಿಟ್ಟು ಆಚೆಗೆ ಹೋದರೂ ನಿಮ್ಮ ಸಮಸ್ಯೆ ಬಗೆಹರಿಯುವುದಿಲ್ಲ. ನೀವು ಕಶ್ಮೀರ ರಾಜ್ಯವನ್ನೇ ತೊರೆದು ಹೋಗಬೇಕಾಗುತ್ತದೆ. ಇಲ್ಲವಾದಲ್ಲಿ ನೀವು ಜಲೌಕ ಮಹಾರಾಜನ ಹರಿತವಾದ ಖಡ್ಗಕ್ಕೆ ಬಲಿಯಾಗುವುದು ತಪ್ಪದು.”

ಮನೆಯೊಳಗಿನಿಂದ ಯಾವ ಸದ್ದೂ ಬರಲಿಲ್ಲ.

ಎಚ್ಚರಿಕೆಯನ್ನು ಪುನರುಚ್ಚರಿಸಲಾಯಿತು: “ಶೋಣೋತ್ತರಾ, ನೀನೇನೋ ಮುದುಕನಾಗಿದ್ದೀ. ನೀನು ಉಳಿದರೂ ಅಷ್ಟೆ, ಹೋದರೂ ಅಷ್ಟೆ. ಆದರೆ ಎಳೆವಯಸ್ಸಿನ ನಿನ್ನ ಮೊಮ್ಮಗನನ್ನು ಕುರಿತು ಯೋಚಿಸು. ನೀನು ಬೌದ್ಧನಾದರೆ ನಿನ್ನ ಮೊಮ್ಮಗನಿಗೆ ಎಷ್ಟು ಒಳ್ಳೆಯ ಭವಿಷ್ಯ ಇರುತ್ತದೆಂದು ಯೋಚಿಸು. ತನ್ನ ಯೋಗ್ಯತೆಗೆ ಮನ್ನಣೆ ಸಿಗಲಿಲ್ಲವೆಂದು ಈ ಲೋಕವನ್ನೇ ಬಿಟ್ಟುಹೋದ ನಿನ್ನ ಮಗನಿಗೆ ಬಂದ ಗತಿಯೇ ನಿನ್ನ ಮೊಮ್ಮಗನಿಗೂ ಬರದಂತೆ ನೋಡಿಕೋ.”

ಈಗಲೂ ಮನೆಯೊಳಗಿನಿಂದ ಯಾವ ಸದ್ದೂ ಬರಲಿಲ್ಲ.

ಮತ್ತೊಮ್ಮೆ ಎಚ್ಚರಿಕೆ ಮಾರ್ದನಿಸಿತು: “ಚಂದ್ರಮೌಳೀಶ್ವರಾ, ಇದನ್ನು ಕೇಳಿಸಿಕೋ. ಶೋಣೋತ್ತರನೇನೋ ಛಾಂದಸ; ಬೂಸ್ಟು ಹಿಡಿದ ಸನಾತನಧರ್ಮಕ್ಕೆ ನೇತುಬಿದ್ದಿದ್ದಾನೆ. ಯಾವುದೇ ಭೇದಭಾವ ಇಲ್ಲದ ಎಲ್ಲರ ಬಗೆಗೆ ಸಮಾನಪ್ರೇಮ ತೋರುವ ಬೌದ್ಧಧರ್ಮವನ್ನು ಸ್ವೀಕರಿಸುವುದರಿಂದ ನಿನಗೆ ಲಾಭವೇ ಹೊರತು ನಷ್ಟವೇನಿಲ್ಲ. ಈಗ ಊಟಕ್ಕೂ ದಾರಿ ಇಲ್ಲದೆ ಬವಣೆ ಪಡುತ್ತಿದ್ದೀ. ನೀನು ಬೌದ್ಧಮತವನ್ನು ಸ್ವೀಕರಿಸಿದ ಘಳಿಗೆಯಿಂದಲೇ ನಿನ್ನ ಮನೆ ಧನಧಾನ್ಯಗಳಿಂದ ತುಂಬಿ ತುಳುಕುತ್ತದೆ.”

ಈಗಲೂ ಮನೆಯೊಳಗಿನಿಂದ ಉತ್ತರ ಬರಲಿಲ್ಲ!

ಇಷ್ಟು ಹೊತ್ತಿಗೆ ಅಲ್ಲಿ ನೆರೆದಿದ್ದ ಬೌದ್ಧರಲ್ಲಿ ಒಬ್ಬ ಇಂತಹವರ ಸಂಗಡ ಮಾತನಾಡುವುದು ಏಕೆ? ಇಷ್ಟಾಗಿ ಇವರು ಏಕೆ ಹೀಗೆ ಹಠ ಹಿಡಿದಿದ್ದಾರೆ? ಆ ಧರ್ಮದಲ್ಲಿ ಏನಿದೆ? ಬೌದ್ಧಮತಕ್ಕೆ ಪರಿವರ್ತನೆಗೊಂಡ ನಮಗೆಲ್ಲ ನಷ್ಟ ಏನಾಗಿದೆ? ನಾವು ಹಾಳಾಗಿದ್ದೇವೆಯೆ? ಈ ಮೊಂಡುಜನ ಒಳ್ಳೆಯ ಮಾತಿಗೆ ಬಗ್ಗುವವರಲ್ಲ ಎನ್ನುತ್ತ ರಸ್ತೆಯಲ್ಲಿ ಬಿದ್ದಿದ ಕಲ್ಲೊಂದನ್ನು ತೆಗೆದುಕೊಂಡು ಮನೆಯ ಮೇಲೆ ಬೀಸಿದ.

ಆ ಶಬ್ದ ಕೇಳಿ ಬೌದ್ಧರೆಲ್ಲ ಇನ್ನಷ್ಟು ಕೆರಳಿ ಎದುರಿನ ಮನೆಯ ಮೇಲೆ ಕಲ್ಲುಗಳನ್ನು ಅರಚಾಟದ ಸಮೇತ ಎಸೆಯತೊಡಗಿದರು.

ಈ ದುಂಡಾವೃತ್ತಿಯನ್ನು ನೋಡಿ ಸಹಿಸದ ಗಂಭೀರ ಯುವಕನೊಬ್ಬ ಆವೇಶದಿಂದ ಮುಂದಕ್ಕೆ ದೊಡ್ಡಹೆಜ್ಜೆ ಹಾಕಹೊರಟ. ಆದರೆ ಪಕ್ಕದಲ್ಲಿದ್ದ ಪಂಡಿತ ಅವನನ್ನು ತಡೆದ. ಮನೆಗಳ ಮೇಲೆ ಕಲ್ಲುಗಳ ಮಳೆ ಸುರಿಯುವುದನ್ನು ಇಬ್ಬರೂ ಆಕ್ರೋಶಗೊಂಡು ಅಸಹಾಯರಾಗಿ ನೋಡುತ್ತ ನಿಂತರು.

ಸ್ವಲ್ಪ ಹೊತ್ತಾದಮೇಲೆ ಕಲ್ಲುಗಳ ಮಳೆ ನಿಂತಿತು.

ಧರ್ಮಪಾಲನು ಗಟ್ಟಿಯಾಗಿ ಕೂಗಿ ಹೇಳಿದ: “ಶೋಣೋತ್ತರಾ, ಚಂದ್ರಮೌಳೀಶ್ವರಾ, ನೀವು ಏಕೆ ಮೊಂಡುತನ ಮಾಡುತ್ತಿದ್ದೀರಿ? ನಿಮ್ಮ ವೇದಗಳ ಮತ್ತು ಸನಾತನಧರ್ಮದ ಕಾಲ ಮುಗಿದಿದೆ. ರಾಜಾಶ್ರಯವಿಲ್ಲದ ಧರ್ಮ ಗಂಡನಿಲ್ಲದ ಪತ್ನಿಯಂತೆ. ಹಿಂಸಾಚಾರ ತುಂಬಿದ ಕರ್ಮಕಾಂಡದ ನಿಮ್ಮ ಸನಾತನಧರ್ಮವನ್ನು ಈಗಲಾದರೂ ಕೈಬಿಡಿ. ಶಾಂತಿ-ಅಹಿಂಸೆಯನ್ನು ಬೋಧಿಸುವ ಉತ್ಕೃಷ್ಟ ಬೌದ್ಧಧರ್ಮವನ್ನು ಸ್ವೀಕರಿಸಿ. ಇದೇ ನಿಮಗೆ ಕಟ್ಟಕಡೆಯ ಎಚ್ಚರಿಕೆ.”

ಒಬ್ಬಿಬ್ಬ ಬೌದ್ಧರು ದಹನಕ್ರಿಯೆಗೆ ಸಿದ್ಧತೆ ನಡೆಸತೊಡಗಿದರು.

ಧರ್ಮಪಾಲ ಹೇಳಿದ:” ಶೋಣೋತ್ತರಾ, ಚಂದ್ರಮೌಳೀಶ್ವರಾ, ನಿಮಗೆ ಹದಿನೈದು ನಿಮಿಷಗಳ ಸಮಯ ನೀಡುತ್ತಿದ್ದೇನೆ. ಅಷ್ಟರೊಳಗಾಗಿ ಬಾಗಿಲ ಅಗಳಿ ತೆಗೆದು ನೀವು ಹೊರಕ್ಕೆ ಬಂದರೆ ಸರಿ, ಇಲ್ಲದಿದ್ದರೆ ನಿಮ್ಮ ಸಜೀವದಹನ ಆಗುತ್ತದೆ.”

ಹೀಗೆ ಹೇಳಿ ಅವನು ಅಲ್ಲಿದ್ದ ಕಲ್ಲೊಂದರ ಮೇಲೆ ಆಸೀನನಾದ.

ಧರ್ಮಪಾಲನು ‘ಸಜೀವದಹನ’ ಎಂದೊಡನೆ ಬೌದ್ಧರ ಉತ್ಸಾಹ ಮೇರೆಮೀರಿತು. ತಮ್ಮತಮ್ಮೊಳಗೆ ಸಜೀವದಹನ ಕುರಿತು ಮಾತನಾಡಿಕೊಳ್ಳತೊಡಗಿದರು. ಹಿಂದೆ ತಾವು ನಡೆಸಿದ್ದ ಸಜೀವದಹನಗಳ ವೃತ್ತಗಳನ್ನು ಮೆಲುಕುಹಾಕತೊಡಗಿದರು.

ಇಷ್ಟಾದರೂ ಆ ಮನೆಗಳಿಂದ ಯಾವ ಸದ್ದೂ ಬರಲಿಲ್ಲ.

ಜನರ ನಡುವೆ ಇದ್ದ ಪಂಡಿತನೊಬ್ಬ ಪಕ್ಕದಲ್ಲಿದ್ದ ಶ್ರಮಣನನ್ನು ಕೇಳಿದ: ಇಲ್ಲಿ ಏನು ಆಗಿದೆ? ಈ ಕುಟುಂಬಗಳಿಗೆ ಏಕೆ ಶಿಕ್ಷೆ ನೀಡಲಾಗುತ್ತಿದೆ?

ಶ್ರಮಣನು ಕೋಪಗೊಂಡು ಹೇಳಿದ: “ಈ ಇಡೀ ಗ್ರಾಮದಲ್ಲಿ ಉಳಿದಿರುವ ಬೌದ್ಧೇತರರು ಇವರು ಮಾತ್ರ. ಇವರು ಬೌದ್ಧಧರ್ಮವನ್ನು ಒಪ್ಪುತ್ತಿಲ್ಲ. ಪರಿವ್ರಾಜಕರನ್ನು ಗೌರವಿಸುತ್ತಿಲ್ಲ. ಬೌದ್ಧಮತವನ್ನು ಅವಹೇಳನ ಮಾಡುತ್ತಾರೆ. ಇಂತಹವರನ್ನು ಊರಿನಲ್ಲಿ ಇರಗೊಡಬಾರದು.”

ಪಕ್ಕದಲ್ಲಿದ್ದ ಇನ್ನೊಬ್ಬ ಬೌದ್ಧ ಮುಂದುವರಿಸಿದ:

“ಎರಡು – ಮೂರು ದಿವಸ ಹಿಂದೆ ಈ ಮುದಿಯ ಶೋಣೋತ್ತರ ಏನು ಹೇಳಿದ ಗೊತ್ತೆ? ಬೌದ್ಧಧರ್ಮದಲ್ಲಿ ವರ್ಣಭೇದಗಳು ಇಲ್ಲವೆಂಬುದು ಸುಳ್ಳಂತೆ. ‘ಮದುವೆ’ ಮೊದಲಾದ ವ್ಯವಹಾರಗಳಲ್ಲಿ ಬೌದ್ಧರು ವರ್ಣಭೇದಗಳನ್ನು ಅನುಸರಿಸುತ್ತಿಲ್ಲವೆ? ವರ್ಣಭೇದ ಇಲ್ಲವೆಂದು ಮೇಲೆಮೇಲೆ ಹೇಳಿದರೂ ಅಂತರಂಗದಲ್ಲಿ ವರ್ಣಭೇದಗಳ ಅನುಸರಣೆ ಇದ್ದೇ ಇದೆ. ಮತ ಬದಲಾದೊಡನೆ ವರ್ಣಬದಲಾಗುತ್ತದೆಂಬುದು ಕನಸಿನ ಮಾತು. ಇದನ್ನೆಲ್ಲ ನೋಡುವಾಗ ಸನಾತನಧರ್ಮಕ್ಕೂ ಬೌದ್ಧಧರ್ಮಕ್ಕೂ ಈ ವಿಷಯದಲ್ಲಿ ಏನು ವ್ಯತ್ಯಾಸವಿದೆ? ಎಂದೆಲ್ಲ ಅಡ್ಡಾದಿಡ್ಡಿ ಮಾತನಾಡಿದ. ಹೀಗೆ ದುಷ್ಪ್ರಚಾರ ಮಾಡುವವರನ್ನು ಹೊಡೆದು ಆಚೆಗೆ ದಬ್ಬಬೇಡ. ಇನ್ನೂ ಕೇಳು. ಅವನು ಮತ್ತೂ ಏನು ಹೇಳಿದ ಗೊತ್ತೆ? ‘ಜಗತ್ತಿನಲ್ಲಿ ಯಾವುದು ಹೇಗೆ ನಡೆಯಬೇಕು ಎಂಬುದೆಲ್ಲ ಇರುವುದು ಪರಮೇಶ್ವರನ ಕೈಯಲ್ಲಿ ಅದೆಲ್ಲ ಈ ಅಲ್ಪರಾದ ಬೌದ್ಧರ ಕೈಯಲ್ಲೇನಿಲ್ಲ. ನಾವಾದರೋ ಭಗವಂತನಲ್ಲಿ ನಂಬಿಕೆ ಇರಿಸಿರುವವರು. ಆದರೆ ಬೌದ್ಧರಾದ ನಿಮಗೆ ಭಗವಂತನೇ ಇಲ್ಲ. ನಿಮ್ಮದು ಶೂನ್ಯವಾದ. ನಿಮಗೆ ನೀವೇ ಭಗವಂತರು’ ಎಂದೆಲ್ಲ ಹುಚ್ಚುಹುಚ್ಚಾಗಿ ಮಾತನಾಡಿದ. ಈಗ ಇವರ ಸಜೀವದಹನ ನಡೆಯುವುದೂ ಪರಮೇಶ್ವರೇಚ್ಛೆಯೇ ಇರಬೇಕು!”

ಇಡೀ ಊರೆಲ್ಲ ಬೌದ್ಧರಾಗಿ ಪರಿವರ್ತನೆಗೊಂಡರೂ ಈ ಎರಡು ಕುಟುಂಬಗಳವರು ಮಾತ್ರ ಸನಾತನಧರ್ಮಕ್ಕೆ ಅಂಟಿಕೊಂಡಿದ್ದಾರೆ. ಇವರಿಗೇಕೆ ಇಷ್ಟು ಹಠ? ಇವರನ್ನು ಸುಟ್ಟು ಬೂದಿಮಾಡಬೇಕು ಎಂದ ಮತ್ತೊಬ್ಬ ಬೌದ್ಧ ಕೋಪದಿಂದ.

ಹೀಗೆ ಆ ಎರಡು ಕುಟುಂಬಗಳ ‘ದೋಷ’ಗಳನ್ನು ಬೌದ್ಧರು ಒಬ್ಬರಿಗಿಂತ ಒಬ್ಬರು ಪೈಪೋಟಿಯಿಂದೆಂಬಂತೆ ಆಡಿಕೊಳ್ಳತೊಡಗಿದರು.

ತನ್ನನ್ನು ವಾದದಲ್ಲಿ ಯಾರಾದರೂ ಸೋಲಿಸಿದರೆ ತಾನು ಬೌದ್ಧಮತವನ್ನು ಸ್ವೀಕರಿಸುತ್ತೇನೆ ಎಂದನಂತಲ್ಲ?

ಆದರೆ ಅವನನ್ನು ವಾದದಲ್ಲಿ ಯಾರು ತಾನೆ ಸೋಲಿಸಲಾದೀತು? ಸಿದ್ಧಗುರುವಿನ ನಂತರ ಶೋಣೋತ್ತರನಷ್ಟು ಮೇಧಾವಿ ಬೇರೆ ಇಲ್ಲವೆನ್ನುತ್ತಾರೆ.

ಆ ಕಾಲದಲ್ಲಿ ಸಿದ್ಧನೆಂಬ ಒಬ್ಬ ಅವಧೂತ ಮಹಾಪುರುಷ ಇದ್ದ. ಅವನು ಬೌದ್ಧ ಪಂಡಿತರನ್ನೆಲ್ಲ ವಾದದಲ್ಲಿ ಸೋಲಿಸಿ ಬೌದ್ಧಮತದ ದೋಷಗಳನ್ನು ಸಿದ್ಧಪಡಿಸುತ್ತ ದೇಶವೆಲ್ಲ ಸಂಚಾರ ಮಾಡುತ್ತಿದ್ದ. ಅವನ ಹೆಸರು ಕೇಳಿದರೆಯೆ ಬೌದ್ಧರಿಗೆ ಎದೆನಡುಕ ಬರುತ್ತಿತ್ತು. ಅವನ ಮೇಲೆ ಹಲವರು ಬೌದ್ಧರು ಮಾಟ-ಮಂತ್ರಗಳನ್ನೂ ಪ್ರಯೋಗಿಸಿದರು. ಅವನು ಅವನ್ನೆಲ್ಲ ಅವರೆಡೆಗೇ ತಿರುಗಿಸಿದ್ದ. ಆ ಸಿದ್ಧಗುರು ದಕ್ಷಿಣಭಾರತದ ರಾಜರ ಆಸ್ಥಾನಗಳಲ್ಲಿ ಬೌದ್ಧಪಂಡಿತರನ್ನು ಪರಾಭವಗೊಳಿಸಿ ಆ ರಾಜರುಗಳು ಮತ್ತೆ ವೈಧಿಕಧರ್ಮಕ್ಕೆ ಮರಳುವಂತೆ ಮಾಡಿದ್ದ. ಹೀಗೆ ದಕ್ಷಿಣದೇಶದಲ್ಲಿ ಮತ್ತೆ ವೇದಘೋಷ ಅನುರಣಿಸತೊಡಗಿತ್ತು.

ಇದೀಗ ಸಿದ್ಧನು ಕಶ್ಮೀರ ದೇಶಕ್ಕೆ ಪ್ರವೇಶಿಸಿ ಜಲೌಕ ಮಹಾರಾಜನ ಸಮಕ್ಷಮದಲ್ಲಿ ಬೌದ್ಧಪಂಡಿತರೊಡನೆ ವಾದಮಾಡಿ ಅವರನ್ನು ಸೋಲಿಸತೊಡಗಿದ್ದಾನೆಂದೂ ಇದು ಹೀಗೆಯೇ ಮುಂದುವರಿದರೆ ಕಶ್ಮೀರರಾಜ್ಯ ಕೂಡಾ ಬೌದ್ಧರ ಕೈಬಿಟ್ಟುಹೋಗಬಹುದೆಂದೂ ಭಾವನೆ ಹರಡಿತ್ತು. ಸಿದ್ಧನ ವಾದ ವಿಧಾನ ವಿಚಿತ್ರವಾಗಿತ್ತು. ಬೌದ್ಧರು ತಮ್ಮದೆಂದು ಯಾವ ಸಿದ್ಧಾಂತವನ್ನು ಮುಂದೆ ಮಾಡಿದರು ಆತನು ಆ ಸಿದ್ಧಾಂತವನ್ನೇ ಬಿಂಬಿಸುವ ವೇದವಾಕ್ಯವನ್ನೋ ಉಪನಿಷದ್‌ವಾಕ್ಯವನ್ನೋ ಹೇಳಿ ಬೌದ್ಧಧರ್ಮದಲ್ಲಿ ಹೊಸದೇನೂ ಇಲ್ಲವೆಂದೂ ಅದರ ಎಲ್ಲ ಅಂಶಗಳೂ ವೇದಗಳಲ್ಲಿ ಇರುವವೇ ಎಂದೂ ನಿರೂಪಿಸುತ್ತಿದ್ದ.

ಈ ಕಾರಣದಿಂದಲೇ ಶೋಣೋತ್ತರನನ್ನು ಸಿದ್ಧನಿಗೆ ಹೋಲಿಸಿದಾಗ ‘ಈ ಶೋಣೋತ್ತರ ಅಷ್ಟು ದೊಡ್ಡ ಮೇಧಾವಿಯೇ? ಎಂದು ಉದ್ಗರಿಸಿದ, ಒಬ್ಬ.

ಅದಕ್ಕೆ ಇನ್ನೊಬ್ಬ ಬೌದ್ಧ ಉತ್ತರಿಸಿದ: “ತಲೆಬಾಲವಿಲ್ಲದ ವಿತಂಡವಾದ ಶೋಣೋತ್ತರನದು. ‘ಎಲ್ಲವೂ ಕ್ಷಣಿಕ ಎನ್ನುವುದಾದರೆ ಎರಡನೆ ಕ್ಷಣ ಬರುವ ವೇಳೆಗೆ ಮೊದಲ ಕ್ಷಣದಲ್ಲಿದ್ದ ವಸ್ತು ಇರುವುದಿಲ್ಲ – ಹೊಸದಾದ ಬೇರೊಂದು ವಸ್ತುವಿನ ಉದಯ ಆಗಿರುವುದರಿಂದ. ಹೀಗೆ ಎರಡನೆಯದಕ್ಕೆ ಮೊದಲಿನದು ಕಾರಣ ಎಂದು ಹೇಳುವಂತಿಲ್ಲ. ಎರಡನೆಯದು ಮೊದಲಿನದರ ಕಾರ್ಯ ಎನಿಸಲಾರದು. ಹೇಗೆಂದರೆ ಮೊದಲ ವಸ್ತು ಅದೃಶ್ಯಗೊಂಡೊಡನೆ ಎರಡನೆ ವಸ್ತು ಶೂನ್ಯದಿಂದ ಜನಿಸಿಬಿಡುತ್ತದೆಯೇ? ಅದು ಪೂರ್ತಿ ಅಸಂಭವ’ ಹೀಗೆಲ್ಲ ಶೋಣೋತ್ತರ ಹುಚ್ಚುಹುಚ್ಚಾಗಿ ವಾದಿಸುತ್ತಿರುತ್ತಾನೆ. ಏನೋ ನಮಗೆ ಅರ್ಥವೇ ಆಗುವುದಿಲ್ಲ ಎಂದ ಪಕ್ಕದಲ್ಲಿದ್ದ ಬೌದ್ಧ.

ಶೋಣೋತ್ತರನನ್ನು ಸಿದ್ಧಗುರುವಿಗೆ ಹೋಲಿಸಿದ್ದ ಪಂಡಿತ ಮುಗುಳ್ನಗುತ್ತ ತನ್ನ ಸಂಗಡಿಗನೆಡೆಗೆ ನೋಡಿದ. ಆ ಸಂಗಡಿಗನು ಮಂದಸ್ಮಿತ ಬೀರಿದ. ಪಂಡಿತನು ಕೇಳಿದ :

ಧರ್ಮಪಾಲನು ಶೋಣೋತ್ತರನ ಜೊತೆ ವಾದ ಮಾಡಿದರೆ?

ವಾದಿಸಿ ಸೋತುಹೋದ ಎಂದ ಬೌದ್ಧ.

“ಅಂದರೆ ವಾದದಲ್ಲಿ ಹಿಮ್ಮೆಟ್ಟಿದ ಮೇಲೆ ದೌರ್ಜನ್ಯಕ್ಕೆ ಇಳಿದಿದ್ದಾನೆ ಎಂದಹಾಗಾಯಿತು” ಎಂದ, ಪಂಡಿತ.

ಸಮಯ ಆಗಿದ್ದುದರಿಂದ ಧರ್ಮಪಾಲ ಎದ್ದು ನಿಂತ.

ಎರುದನಿಯಲ್ಲಿ ಅರಚಿದ:

“ಶೋಣೋತ್ತರ, ಚಂದ್ರಮೌಳೀಶ್ವರಾ, ಇದು ಜಲೌಕ ಮಹಾರಾಜನ ಆಜ್ಞೆ. ಕಶ್ಮೀರ ದೇಶವಷ್ಟೂ ಬೌದ್ಧಮಯವಾಗಬೇಕು. ಈ ರಾಜ್ಯದ ಎಲ್ಲ ಕಡೆ ಬೌದ್ಧ ಆರಾಮಗಳೂ ಬೌದ್ಧ ಭಿಕ್ಷುಗಳೂ ಮೆರೆಯಬೇಕು. ಬೌದ್ಧೇತರರನ್ನು ಸಜೀವದಹನ ಮಾಡಬೇಕು. ಇದು ರಾಜಾಜ್ಞೆ” ಎಂದ, ಧರ್ಮಪಾಲ.

ಪಕ್ಕದಲ್ಲಿದ್ದ ಒಬ್ಬಾತ ಅಸಮಾಧಾನದಿಂದ ಜಲೌಕ ಮಹಾರಾಜನು ಹೀಗೆ ಆಜ್ಞೆ ಹೊರಡಿಸಿದ್ದಾನೆಯೆ? ಆತನಿಗೆ ಇತರ ಮತಗಳ ವಿಷಯದಲ್ಲಿ ಸಹಿಷ್ಣುತೆ ಇದೆಯೆಂದು ಕೇಳಿದ್ದೆನಲ್ಲ? ಎಂದ.

ಅವೆಲ್ಲ ಮೇಲುಮೇಲಿನ ಮಾತುಗಳಷ್ಟೆ, ಬಿಡಿ. ಜಲೌಕ ಮಹಾರಾಜನು ಈಗ ಬೌದ್ಧಮತವನ್ನು ಕಶ್ಮೀರದ ನಾಲ್ಕು ದಿಕ್ಕುಗಳಲ್ಲಿಯೂ ಪ್ರಸಾರ ಮಾಡಬೇಕು ಎಂದು ಹೊರಟಿದ್ದಾನೆ. ಹೀಗಾಗಿಯೆ ರಾಜೋದ್ಯೋಗಗಳು, ಸಂಮಾನಗಳು ಎಲ್ಲವೂ ಬೌದ್ಧಮತಾನುಯಾಯಿಗಳಿಗೇ ದೊರೆಯುತ್ತಿರುವುದು ಎಂದ, ಮತ್ತೊಬ್ಬ.

“ಸುಟ್ಟುಹಾಕಿರಿ. ಇನ್ನೂ ಏಕೆ ತಡ ಮಾಡುತ್ತೀರಿ?” ಎಂದು ಬೌದ್ಧನೊಬ್ಬ ಅರಚಿದ. ಸುತ್ತಲಿದ್ದವರೆಲ್ಲ ಸಜೀವದಹನವಾಗಲಿ!” ಎಂದು ಏರುದನಿಯಲ್ಲಿ ಕೂಗಿದರು.

ಗುಂಪಿನಲ್ಲಿದ್ದ ಒಬ್ಬ ಪಂಡಿತ ಸ್ವಲ್ಪ ದಯ ತೋರಿಸಿ. ಇನ್ನೊಂದು ಸಲ ಹೇಳಿ ನೋಡಿ.” ನೀವೆಲ್ಲ ಬುದ್ಧದೇವನ ಅನುಯಾಯಿಗಳು. ಯಾರನ್ನೇ ಆಗಲಿ ಸಜೀವದಹನ ಮಾಡುವುದು ನಿಮ್ಮ ಮತಸಿದ್ಧಾಂತಕ್ಕೆ ಶೋಭೆ ತರುವುದಿಲ್ಲ “ಎಂದು ಓಲೈಸಿದ.

ಧರ್ಮಪಾಲ ಒಂದು ನಿಮಿಷ ಯೋಚಿಸುತ್ತ ನಿಂತ. ಅನಂತರ ಅದೇನೆಂದುಕೊಂಡನೊ ಏನೊ ಎದುರಿನ ಮನೆಬಾಗಿಲ ಬಳಿ ಹೋಗಿ ದಬದಬ ತಟ್ಟಿದ.

ಒಳಗಿನಿಂದ ಪ್ರತಿಕ್ರಿಯೆ ಬರಲಿಲ್ಲ!

ಇಷ್ಟರಲ್ಲಿ ಉತ್ಸಾಹ ಮೇರೆಮೀರಿ ಗುಂಪಿನಲ್ಲಿದ್ದ ಇಬ್ಬರು ಮೂವರು ಮುಂದೆ ತೆರಳಿ ಬಾಗಿಲನ್ನು ಒದೆಯತೊಡಗಿದರು. ಈ ಗದ್ದಲಕ್ಕೆ ಪಕ್ಕವಾದ್ಯವೆಂಬಂತೆ ಒಂದಷ್ಟು ದೂರದಲ್ಲಿದ್ದ ವಿಹಾರದಿಂದ ಪೂಜಾಸಮಯ ಸೂಚಿಸುವ ತೂಯಾಘೋಷ ಆರಂಭವಾಯಿತು.

ದೊಡ್ಡಶಬ್ದದೊಡನೆ ಬಾಗಿಲು ತೆರೆದುಕೊಂಡಿತು. ಆವೇಶದಿಂದ ಒಳಕ್ಕೆ ನುಗ್ಗಿದ ಬೌದ್ಧರು ಅಷ್ಟೇ ವೇಗದಿಂದ ಹಿಂದಕ್ಕೆ ಸರಿದರು.

ಎರಡೂ ಬ್ರಾಹ್ಮಣಕುಟುಂಬದವರು ಒಟ್ಟಿಗೇ ಇದ್ದರು. ಶೋಣೋತ್ತರನ ಕೈಯಲ್ಲಿ ಪುರಾಣಗಳೂ ತರ್ಕ ವ್ಯಾಕರಣಾದಿ ಶಾಸ್ತ್ರಗ್ರಂಥಗಳೂ ಇದ್ದವು. ಮೃತನಾದ ಮೇಲೂ ಅವನು ಅವನ್ನು ಅಪ್ಯಾಯಮಾನವಾಗಿ ಕೈಯಲ್ಲಿ ಹಿಡಿದೇ ಇದ್ದ. ಚಂದ್ರಮೌಳೀಶ್ವರನಾದರೋ ತನ್ನ ಪ್ರಭುವನ್ನು ತನ್ನಿಂದ ಯಾರೂ ಬೇರೆ ಮಾಡಲಾರರೆಂಬಂತೆ ಶಿವಲಿಂಗವನ್ನು ಕೈಯಲ್ಲಿ ಅಪ್ಪಿಕೊಂಡೇ ಮೃತಿಹೊಂದಿದ್ದ. ಇಬ್ಬರ ಪತ್ನಿಯರೂ ಗಂಡಂದಿರ ಪಾದಗಳಿಗೆರಗಿ ಆ ಸ್ಥಿತಿಯಲ್ಲಿಯೆ ಕೊನೆಯುಸಿರೆಳೆದಿದ್ದರು. ಸನಿಹದಲ್ಲಿದ್ದ ಇಬ್ಬರು ಎಳೆಮಕ್ಕಳು ಮುಗ್ಧವಾಗಿ ನಿದ್ರಿಸುತ್ತಿದ್ದಂತೆ ಇದ್ದರು. ಎಲ್ಲರ ಮುಖದಲ್ಲಿಯೂ ಪ್ರಶಾಂತಿ ನೆಲೆಸಿತ್ತು.

ವಿಷಕುಡಿದು ಸತ್ತಂತಿದೆ ಎಂದು ಯಾರೋ ಕಿರುಚಿದರು. ಅವರು ತಮ್ಮ ಕೈಗೆ ದೊರಕದೆ ಹೋದರೆಂದು ಬೌದ್ಧರು ಆಕ್ರೋಶಗೊಂಡರು.

ಧರ್ಮಪಾಲನು ತನ್ನ ಸಹಚರರಿಗೆ ಕಿವಿಯಲ್ಲಿ ಸೂಚನೆ ನೀಡಿದ. ಬೌದ್ಧರ ನಡುವೆ ಇದ್ದ ಪಂಡಿತನು ಇವರ ಬಳಿಸಾರಿದ.

“ಮನೆಯನ್ನು ಸುಟ್ಟುಬಿಡಿ. ಆ ದುಷ್ಟ ಬ್ರಾಹ್ಮಣರು ಯಾವುದೋ ಕ್ಷುದ್ರದೇವತೋಪಾಸನೆ ಮಾಡುತ್ತಿರುವಾಗ ಏನೋ ಎಚ್ಚರ ತಪ್ಪಿ ಮನೆಗಳು ಅಗ್ನಿಗೆ ಆಹುತಿಯಾದವೆಂದು ಪ್ರಚಾರ ಮಾಡಿ “ಎಂದು ಧರ್ಮಪಾಲನು ಅನುಚರರಿಗೆ ಹೇಳಿ ಅಲ್ಲಿಂದ ಮೆತ್ತಗೆ ನಿರ್ಗಮಿಸಿದ.

ಇಷ್ಟರಲ್ಲಿ ಸ್ವಲ್ಪ ನಿಲ್ಲಿ ಎಂದು ಪಂಡಿತ ಯುವಕ ಮುಂದೆ ಬಂದ.

“ನೀನು ಯಾರು? “ಎಂದ ಧರ್ಮಪಾಲ, ಕೋಪದಿಂದ ಹಿಂದಿರುಗಿ ನೋಡಿ.

ಇಷ್ಟರಲ್ಲಿ ಧರ್ಮಪಾಲನ ಅನುಚರರು ಹೊತ್ತಿಸಿದ್ದ ಕಾಗದಗಳ ಕಂತೆಯನ್ನು ಮನೆಗಳ ಮೇಲೆಸೆದರು. ಅಲ್ಲಿ ಬೆಂಕಿಯ ತಾಂಡವ ಆರಂಭವಾಯಿತು. ಇದೇ ವೇಳೆಗೆ ವಿಹಾರದಿಂದ ಪೂಜೆಯ ಮುಕ್ತಾಯದ ಸೂಚಕವಾಗಿ ತೂರ್ಯಧ್ವನಿ ತಾರಸ್ಥಾಯಿಗೆ ಏರಿತ್ತು.

ವಿಹಾರದ ಕಡೆಗೆ ಹೋಗಲು ಆತುರನಾಗಿದ್ದ ಧರ್ಮಪಾಲನನ್ನು ಯುವಕನು ಅಡ್ಡಗಟ್ಟಿದ.

“ನನ್ನ ದಾರಿಗೆ ಅಡ್ಡಬರಬೇಡ. ಬಂದರೆ ಆ ಎದುರಿನ ಉರಿಯಲ್ಲಿ ನೀನು ಸೇರಿಹೋಗುತ್ತೀ” ಎಂದು ಯುವಕನನ್ನು ಧರ್ಮಪಾಲ ಎಚ್ಚರಿಸಿದ. ಯುವಕನನ್ನು ಹಿಡಿದುಕೊಳ್ಳುವಂತೆ ಸಹಚರರಿಗೆ ಸಂಜ್ಞೆಮಾಡಿದ.

ಆದರೆ ಮಿಂಚಿನಂತೆ ಸಂಚರಿಸಿದ ಯುವಕ ಎದುರಿಗೆ ಬಂದ ಇಬ್ಬರು ಬೌದ್ಧರನ್ನು ನಿಶ್ಚೇಷ್ಟಗೊಳಿಸಿದ್ದು ಮಾತ್ರವಲ್ಲದೆ ಧರ್ಮಪಾಲನನ್ನು ಕೆಳಕ್ಕೆ ಬೀಳಿಸಿ ಅವನ ಎದೆಯ ಮೇಲೆ ತನ್ನ ಕಾಲನ್ನೊತ್ತಿ ಉಳಿದವರಾರೂ ಮುಂದೆಸಾಗದಂತೆ ತಡೆದ.

ಇಷ್ಟು ಹೊತ್ತೂ ವಿಕಟ ಅಟ್ಟಹಾಸ ಮಾಡುತ್ತಿದ್ದ ಬೌದ್ಧರು ಆಶ್ಚರ್ಯದಿಂದ ಅತ್ತನೋಡಿದರು. ಅಷ್ಟರಲ್ಲಿ ಸನಾತನಧರ್ಮೀಯರು ಧರ್ಮಪಾಲನ ವಿರುದ್ಧ ತಿರುಗಿಬಿದ್ದಿದ್ದರೆಂದುಕೊಂಡ ಬೌದ್ಧರು ಧರ್ಮಪಾಲನ ರಕ್ಷಣೆಗಾಗಿ ಸಮೀಪಿಸತೊಡಗಿದರು. ಆದರೆ ಅಲ್ಲಿದ್ದ ಪಂಡಿತ ಒಂದು ವಿಚಿತ್ರ ಸ್ವರದಲ್ಲಿ ಕೂಗಿಟ್ಟ. ಅದೊಂದು ಸಂಕೇತವಾಗಿತ್ತು. ಆ ಕೂಗು ಕೇಳಿದೊಡನೆ ಭೂಮಿಯಿಂದ ಎದ್ದುಬಂದಂತೆ ರಾಜಪಡೆ ಆ ಪ್ರದೇಶವಷ್ಟನ್ನೂ ಸುತ್ತುವರಿದು ನಿಂತಿತು. ಯಾರಿಗೂ ತಪ್ಪಿಸಿಕೊಂಡು ಹೋಗಲು ಅವಕಾಶವಿರಲಿಲ್ಲ.

ಯುವಕನ ಮೇಲೆ ದಾಳಿ ಮಾಡುತ್ತಿದ್ದ ಬೌದ್ಧರು ಕ್ಷಣದಲ್ಲಿ ಬಂದಿಗಳಾದರು. ಯುವಕನು ತನ್ನ ಕೈಯಲ್ಲಿದ್ದ ಖಡ್ಗವನ್ನು ಒಬ್ಬ ಸೈನಿಕನಿಗೆ ನೀಡಿ ಧರ್ಮಪಾಲನ ಎದೆಯ ಮೇಲಿನಿಂದ ಕಾಲನ್ನು ತೆಗೆದ ಒಡನೆಯೇ ಧರ್ಮಪಾಲನನ್ನು ಸೈನಿಕರು ಸುತ್ತುಗಟ್ಟಿದರು. ಯಾರಿಗೂ ಏನೂ ಅರ್ಥವಾಗಲಿಲ್ಲ.

“ನಾವು ಮಾಡಿದ ತಪ್ಪು ಏನು?” ಎಂದು ಧರ್ಮಪಾಲ ಸೈನಿಕರನ್ನು ಪ್ರಶ್ನಿಸಿದ.

ಪಂಡಿತ ಉತ್ತರಿಸಿದ:” ಸ್ವಾರ್ಥಲಾಭಕ್ಕಾಗಿ ಮತ್ತು ದ್ವೇಷದಿಂದ ಇಲ್ಲಸಲ್ಲದ ರಾಜಾಜ್ಞೆಯನ್ನು ಸೃಷ್ಟಿಸುವುದು ಮೊದಲ ಅಪರಾಧ. ಅದು ರಾಜದ್ರೋಹ. ನಿರಪರಾಧಿಗಳನ್ನು ಹಿಂಸಿಸಿ ಅವರ ಮರಣಕ್ಕೆ ಕಾರಣವಾದುದು ಎರಡನೇ ಅಪರಾಧ.”

“ನನ್ನ ಮೇಲೆ ನಿನಗೆ ಅಧಿಕಾರ ಹೇಗೆ ಬಂದಿತು? ನೀನು ಯಾರು?” ಎಂದು ಧರ್ಮಪಾಲ ಕೋಪದಿಂದ ಕೇಳಿದ.

ಆ ಅಧಿಕಾರವನ್ನು ಕೊಟ್ಟಿರುವವನು ನಾನೇ! ನನ್ನ ಹೆಸರು ಜಲೌಕ. ನಾನು ಕಶ್ಮೀರ ಸಾಮ್ರಾಜ್ಯದ ಅಧಿಪತಿ ಎಂದ ಆ ಯುವಕ ಗಂಭೀರವಾಗಿ ಮುನ್ನಡಿ ಇಟ್ಟು. ಅವನ ವದನದ ತೇಜಸ್ಸಿನೆದುರಿಗೆ ಧರ್ಮಪಾಲನೂ ಅಲ್ಲಿದ್ದ ಇತರರೂ ನಡುಗಿದರು. ಕ್ಷಮಿಸಿ ಪ್ರಭುಗಳೇ ಎಂದು ಅಂಗಲಾಚಿದರು.

ಜಲೌಕ ಮಹಾರಾಜನು ಅವರತ್ತ ಒಮ್ಮೆ ತೀಕ್ಷ್ಣವಾಗಿ ನೋಡಿ ಬನ್ನಿ ಪಂಡಿತರೆ ಎಂದು ಹೇಳಿ ಮುಂದೆ ಸಾಗಿದ.

ಪಂಡಿತ ಅವನೊಡನೆ ನಿಷ್ಕ್ರಮಿಸಿದ.

“ಅವರು ಯಾರು?” ಎಂದು ಯಾರೋ ಕೇಳಿದರು. ಇನ್ನಾರೋ ಉತ್ತರಿಸಿದ: “ಅವರೇ ಅವಧೂತ ಸಿದ್ಧಪುರುಷರು. ಚೇರದೇಶದಲ್ಲಿ ಬೌದ್ಧಮತವನ್ನು ಧ್ವಂಸಮಾಡಿದ ಪಂಡಿತರು. ಈಗ ಕಶ್ಮೀರವನ್ನು ಪ್ರವೇಶಿಸಿದ್ದಾರೆ “ಎಂದು.

          * * *

ಜಗತ್ತಿನಲ್ಲಿ ದಯೆಯನ್ನು ಅನುಕಂಪವನ್ನೂ ಪ್ರಸಾರ ಮಾಡಬೇಕಿದ್ದ ಬೌದ್ಧರು ಇಷ್ಟು ಅಮಾನವೀಯವಾಗಿ ವರ್ತಿಸುತ್ತಿರುವುದಕ್ಕೆ ತಾನು ಆಸ್ಪದ ನೀಡಿದ್ದುದೂ ಕಾರಣವೆಂದು ನೆನೆದು ಜಲೌಕನು ತಳಮಳಗೊಂಡ.

ಜಲೌಕನನ್ನು ಕುಳ್ಳಿರಿಸಿಕೊಂಡು ಸಿದ್ಧಗುರು ಬೌದ್ಧಮತವು ಸನಾತನಧರ್ಮವೆಂಬ ಮಹಾವೃಕ್ಷದ್ದೇ ಒಂದು ಶಾಖೆ ಎಂದು ತಿಳಿಯಹೇಳಿದ. ರಾಜನಾದವನು ಪ್ರಜೆಗಳ ಸ್ವಂತ ಮನವಿಶ್ವಾಸಗಳನ್ನು ತಿರಸ್ಕಾರದಿಂದ ನೋಡಬಾರದೆಂದೂ ಪ್ರಜೆಗಳು ರಾಜನ ಕಣ್ಣುಗಳಿದ್ದಂತೆ ಎಂದೂ ಹಿತೋಪದೇಶ ಮಾಡಿದ.

ಸಿದ್ಧಗುರುವಿನಿಂದ ಜಲೌಕ ಮಹಾರಾಜನು ತಾನೇ ಕೋರಿ ಸನಾತನಧರ್ಮದೀಕ್ಷೆಯನ್ನು ತೆಗೆದುಕೊಂಡ.

ಅಲ್ಲಿಂದ ಆಚೆಗೆ ಪ್ರತಿದಿನ ವಿಜಯೇಶ್ವರ, ನಂದೀಶ್ವರ ಕ್ಷೇತ್ರಗಳಲ್ಲಿ ರುದ್ರದೇವನನ್ನು ತಪ್ಪದೆ ಅರ್ಚಿಸುವೆನೆಂದು ವ್ರತ ಸ್ವೀಕರಿಸಿದ.

ಜ್ಞಾನೋಪದೇಶ ಮಾಡಿದ ಸಿದ್ಧಗುರು ಜಲೌಕನಿಂದ ಗುರುದಕ್ಷಿಣೆಯನ್ನು ಕೇಳಿದ. ಆತನು ಕೋರಿದ ಗುರುದಕ್ಷಿಣೆ – ಭಾರತದೇಶದಲ್ಲಿದ್ದ ಎಲ್ಲ ಮ್ಲೇಚ್ಛರ ಉಚ್ಛಾಟನೆ.

ಜಲೌಕನು ಆ ಗುರುದಕ್ಷಿಣೆಯನ್ನು ಸಮರ್ಪಕವಾಗಿ ಸಲ್ಲಿಸುವ ಅಭಿಯಾನವನ್ನೇ ಕೈಗೊಂಡ. ಅವನ ಜೆತ್ಯಯಾತ್ರೆಯ ವಾರ್ತೆ ಕೇಳಿಯೇ ಮ್ಲೇಚ್ಛರು ಗಡಗಡ ನಡುಗಿದರು. ಅವನ ಪ್ರತಾಪಾಗ್ನಿಯ ಎದುರು ಅವರು ಮಿಡತೆಗಳಂತೆ ಹತಪ್ರಭರಾದರು. ಜಲೌಕನು ಮ್ಲೇಚ್ಛರನ್ನು ಉಚ್ಛಾಟನೆ ಮಾಡಿದ ಸ್ಥಳಗಳಿಗೆ ‘ಉಜ್ಜಟದಿಂಭ’ಗಳೆಂದು ಹೆಸರಾದವು.

ಜಲೌಕ ಮಹಾರಾಜನು ಕನ್ಯಾಕುಬ್ಜದಿಂದ ಆರಂಭಿಸಿ ಕಶ್ಮೀರೇತರ ರಾಜ್ಯಗಳನ್ನೂ ವಶಪಡಿಸಿಕೊಂಡು ದೇಶದಲ್ಲೆಲ್ಲ ವರ್ಣಾಶ್ರಮಧರ್ಮವನ್ನು ದೃಢಗೊಳಿಸಿದ. ಧಾರ್ಮಿಕರನ್ನು ರಾಜೋದ್ಯೋಗಿಗಳಾಗಿ ನೇಮಿಸಿದ. ತಾನು ಗೆದ್ದ ಪ್ರದೇಶಗಳಲ್ಲೆಲ್ಲ ಪ್ರತಿನಿಧಿಗಳನ್ನು ನೇಮಿಸಿದ. ಅವನ ಆಳ್ವಿಕೆಯಲ್ಲಿ ಸನಾತನಧರ್ಮವು ದ್ವಿಗುಣಿತ ಶೋಭೆಯನ್ನು ಪಡೆದು ವಿಜೃಂಭಿಸತೊಡಗಿತು.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ