ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ದೀಪ್ತಿ

ವಿದ್ಯಾ ವಿನಯೋಪೇತಾ ಹರತಿ

                ನ ಚೇತಾಂಸಿ ಕಸ್ಯ ಮನುಜಸ್ಯ |

ಮಣಿಕಾಂಚನಸಂಯೋಗೋ ಜನಯತಿ

                                ಲೋಕಸ್ಯ ಲೋಚನಾನಂದಮ್ ||

– ಹರಿಹರಸುಭಾಷಿತ

ವಿನಯದಿಂದ ಕೂಡಿದ ವಿದ್ಯೆಯು ಯಾರ ಮನಸ್ಸನ್ನು ತಾನೆ ಸೂರೆಗೊಳ್ಳುವುದಿಲ್ಲ? ಚಿನ್ನವನ್ನೂ ರತ್ನವನ್ನೂ ಎರಡನ್ನೂ ಒಳಗೊಂಡ ಆಭರಣವು ಎಲ್ಲರ ಕಣ್ಣಿಗೂ ಆನಂದವನ್ನುಂಟುಮಾಡುತ್ತದೆ.

ಮಣಿ-ಕಾಂಚನ-ಸಂಯೋಗ

deeptiಹಲವರು ವಿದ್ವಾಂಸರಲ್ಲಿಯೂ ಸಾಧಕರಲ್ಲಿಯೂ ಸ್ವಪ್ರತಿಷ್ಠೆ ತುಂಬಿರುತ್ತದೆ. ವಿನಯವಂತರಾದವರೆಲ್ಲರೂ ಉನ್ನತ ಸಾಧಕರಾಗಿರುತ್ತಾರೆಂದು ಹೇಳಲಾಗದು. ಮೇಲ್ಮಟ್ಟದ ಸಾಧನೆಯೂ ಅಹಮಿಕೆಯಿಲ್ಲದ ವಿನೀತಸ್ವಭಾವವೂ ಒಬ್ಬರಲ್ಲಿಯೇ ಕಂಡರೆ ಅದು ಮೃದುವಾದ ಬೆಳದಿಂಗಳಿನಂತೆ ಆಹ್ಲಾದವನ್ನು ತರುತ್ತದೆ.

ಗಾಯನಕ್ಷೇತ್ರದ ಸಮ್ರಾಜ್ಞಿಯೆಂದು ಭಾರತರತ್ನ ಎಂ.ಎಸ್. ಸುಬ್ಬುಲಕ್ಷ್ಮಿ ಲೋಕವಿಶ್ರುತರಾಗಿದ್ದರು. ಅವರ ಸಂಗೀತಪ್ರತಿಭೆಯಂತೆ ಸರಳತೆ, ಗುರುಜನಭಕ್ತಿ, ಔದಾರ್ಯ ಮೊದಲಾದ ಗುಣಗಳೂ ಮನೋಜ್ಞವೆನಿಸುತ್ತಿದ್ದವು. ತಮ್ಮ ಔನ್ನತ್ಯವನ್ನು ಎಂದೂ ಪ್ರದರ್ಶಿಸಿದವರಲ್ಲ. ಎಲ್ಲರಲ್ಲಿಯೂ ಅವರ ವರ್ತನೆ ಅತ್ಯಂತ ಹಿತಕರವಾಗಿರುತ್ತಿತ್ತು.

ರಾಜಾಜಿಯವರ ಪ್ರತಿಮೆಯ ಸ್ಥಾಪನೆಗಾಗಿ ಹಣ ಸಂಗ್ರಹಿಸಲು ಸಹಾಯಾರ್ಥ ೧೯೭೦ರಲ್ಲಿ ದೆಹಲಿಯಲ್ಲಿ ಸುಬ್ಬುಲಕ್ಷ್ಮಿಯವರ ಗಾಯನಕಾರ್ಯಕ್ರಮ ಆಯೋಜಿತವಾಗಿತ್ತು. ಆ ಸಂದರ್ಭದಲ್ಲಿ ಶಾಲೆಯೊಂದರಲ್ಲಿ ಅವರ ವಸತಿ ಇದ್ದಿತು. ಶಾಲೆಯ ಕ್ರಮದಂತೆ ಬೆಳಗ್ಗೆ ನೂರಾರು ಮಕ್ಕಳು ಪ್ರಾರ್ಥನಾಗೀತ ಹಾಡಿದುದು ಸುಬ್ಬುಲಕ್ಷ್ಮಿಯವರಿಗೆ ತುಂಬಾ ಉಲ್ಲಾಸ ತಂದಿತು. ಅದಾದ ಮೇಲೆ ಅವರು ಶಾಲೆಯ ಮುಖ್ಯೋಪಾಧ್ಯಾಯರಲ್ಲಿ ಕೋರಿದರು: ತಾವು ದಯವಿಟ್ಟು ಅನುಮತಿ ನೀಡಿದಲ್ಲಿ ಇಲ್ಲಿಯ ಮಕ್ಕಳಿಗೆ ಒಂದು ಭಜನೆಯನ್ನು ಹೇಳಿಕೊಡಬೇಕೆಂದು ನನಗೆ ಇಚ್ಛೆಯಾಗಿದೆ. ಮುಖ್ಯೋಪಾಧ್ಯಾಯರ ಆನಂದಕ್ಕೆ ಪಾರವಿದ್ದೀತೆ! ಎಲ್ಲಿ ಎಂ.ಎಸ್., ಎಲ್ಲಿ ಶಾಲೆಯ ಎಳೆವಯಸ್ಸಿನ ಮಕ್ಕಳು! ಕೃತಜ್ಞತೆಯಿಂದ ಅದಕ್ಕೆ ವ್ಯವಸ್ಥೆ ಮಾಡಿದರು. ಮಾರನೆಯ ದಿನವೂ ಮೂರನೆಯ ದಿನವೂ ಆ ನೂರಾರು ಮಕ್ಕಳಿಗೆ ಮೀರಾಭಜನೆಯೊಂದನ್ನು ಸುಬ್ಬುಲಕ್ಷ್ಮಿಯವರು ಹೇಳಿಕೊಟ್ಟರು. ಉಳಿದ ವೇಳೆಯಲ್ಲಿ ಶಾಲೆಯ ಸಂಗೀತಶಿಕ್ಷಕರಿಗೂ ಪ್ರೌಢ ವಿದ್ಯಾರ್ಥಿಗಳಿಗೂ ಬೇರೆ ಹಲವು ಸಮೂಹಗಾಯನಾನುಕೂಲ ಕೃತಿಗಳನ್ನು ಬೋಧಿಸಿದರು. ಪ್ರವಾಸ ಮುಗಿದು ನಿರ್ಗಮಿಸುವಾಗ ಶಾಲೆಯ ಮುಖ್ಯೋಪಾಧ್ಯಾಯರಿಗೆ ಹೇಳಿದರು: ಮತ್ತೆ ದೆಹಲಿಗೆ ಬಂದಾಗ ಮಕ್ಕಳಿಗೆ ಇನ್ನು ಕೆಲವು ಹಾಡುಗಳನ್ನು ಹೇಳಿಕೊಡುತ್ತೇನೆ. ವಿದ್ಯೆ-ವಿನಯಗಳ ಇಂತಹ ಸಮಾಗಮವನ್ನು ಸಂಸ್ಕೃತದಲ್ಲಿ ‘ಮಣಿ-ಕಾಂಚನ-ಸಂಯೋಗ’ (ಮುತ್ತು ರತ್ನಗಳೂ ಬಂಗಾರವೂ ಸೇರಿದಂತೆ) ಎಂದು ವರ್ಣಿಸುತ್ತಾರೆ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ