ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ದೀಪ್ತಿ

ಅಹೋ ಏಷಾಂ ವರಂ ಜನ್ಮ ಸರ್ವಪ್ರಾಣ್ಯುಪಜೀವನಮ್|

ಸುಜನಸ್ಯೇವ ಯೇಷಾಂ ವೈ ವಿಮುಖಾ ಯಾನ್ತಿ ನಾರ್ಥಿನಃ||

ಭಾಗವತ

ಸಾರ್ಥಕವಾದ ಜನ್ಮವೆಂದರೆ ಮರಗಳದು. ಇವು ಎಲ್ಲ ಪ್ರಾಣಿಗಳಿಗೂ ಜೀವನವನ್ನು ಕಲ್ಪಿಸುತ್ತವೆ. ಸಜ್ಜನರಲ್ಲಿಗೆ ಬಂದ ಯಾಚಕರು ಹೇಗೆ ಎಂದೂ ಬರಿಗೈಯಾಗಿ ಹಿಂದಿರುಗುವುದಿಲ್ಲವೋ ಹಾಗೆ ಮರಗಳಲ್ಲಿ ಆಸರೆ ಕೋರಿ ಬಂದವರಾರೂ ನಿರಾಶೆಗೊಳ್ಳುವುದಿಲ್ಲ.

ಸುಸಂಸ್ಕೃತರ ಪರಿಸರಪ್ರೇಮ

deepti

ಚಿತ್ರ: ಮಹೇಶಕೃಷ್ಣ ತೇಜಸ್ವಿ

ಪ್ರಕೃತಿದತ್ತವಾದ ಮರಗಳ ಹಿರಿಮೆಯನ್ನು ಕೊಂಡಾಡುವ ಉಕ್ತಿಗಳು ಸಂಸ್ಕೃತದಲ್ಲಿ ಹೇರಳವಾಗಿವೆ. ಹೂವು, ಹಣ್ಣು, ನೆರಳು, ಬಟ್ಟೆ ಮಾಡಲು ತೊಗಟೆ, ಹಕ್ಕಿಗಳಿಗೆ ಆಶ್ರಯ – ಅವೆಷ್ಟು ಉಪಕಾರಗಳನ್ನು ಅವು ಜೀವಲೋಕಕ್ಕೆ ಮಾಡುತ್ತ ಧನ್ಯವೆಂದುಕೊಳ್ಳುತ್ತವೆ! ತಾವು ಬಿಸಿಲಿಗೂ ಮಳೆಗೂ ಮೈಯೊಡ್ಡಿ ನಿಂತರೂ ಆಶ್ರಿತರಿಗೆ ಅವರು ಅಪೇಕ್ಷಿಸಿದುದನ್ನು ಕೊಡಲು ಮರಗಳು ಎಂದೂ ನಿರಾಕರಿಸುವುದಿಲ್ಲ. ಹೀಗೆ, ಲೋಕದಲ್ಲಿ ಎಲ್ಲೆಡೆ ಮೆರೆದಿರುವ ಮರಗಳು ತ್ಯಾಗ, ಪರೋಪಕಾರ ಮೊದಲಾದ ಅವೆಷ್ಟು ಉದಾತ್ತ ಗುಣಗಳ ಪ್ರತೀಕವಾಗಿವೆ! ಇಂತಹ ಉಪಕಾರಿಗಳ ಬಗೆಗೆ ಕ್ರೂರವಾಗಿಯೂ ಅಲಕ್ಷ್ಯದಿಂದಲೂ ವರ್ತಿಸುವ ಮನುಷ್ಯನ ಕೃತಘ್ನತೆಗೆ ಏನೆನ್ನಬೇಕು!

ಸಂವೇದನಶೀಲರಾದವರಿಗಾದರೋ ಮರಗಳು ದೈವೀಸ್ವರೂಪದವು. ಅವನ್ನು ಗೌರವಿಸುವುದು ಸಂಸ್ಕೃತಿಯ ದ್ಯೋತಕ.

ಮೊರಾಕ್ಕೋ ದೇಶದಲ್ಲಿ ಒಮ್ಮೆ ಸಿನೆಮಾ ಚಿತ್ರೀಕರಣ ನಡೆದಿತ್ತು. ಇಡೀ ಚಲನಚಿತ್ರಜಗತ್ತಿನ ಗಮನ ಸೆಳೆದಿದ್ದ ಪ್ರತಿಷ್ಠಿತ ಚಿತ್ರ ಅದು. ಅತ್ಯಂತ ಶ್ರೀಮಂತನಾದ ಇಬ್ರಾಹಿಂ ಎಂಬಾತನ ಭವ್ಯ ಬಂಗಲೆಯ ಆವರಣದಲ್ಲಿ ಚಿತ್ರೀಕರಣ ನಡೆಸಲು ಬಯಸಿ ನಿರ್ಮಾಪಕರು ಸಾಹುಕಾರನ ಅನುಮತಿ ಕೋರಿದರು.

“ಅವಶ್ಯವಾಗಿ ಮಾಡಿಕೊಳ್ಳಿರಿ” ಎಂದ, ಆತ.

“ಆದರೆ ಒಂದು ಸಮಸ್ಯೆ ಇದೆ ಯಜಮಾನರೇ.”

“ಏನು? ”

“ನಮ್ಮ ದೊಡ್ಡ ಕ್ಯಾಮೆರಾಗಳು, ಕ್ರೇನ್ ಯಂತ್ರಗಳು, ಲೈಟಿಂಗ್ ಪರಿಕರಗಳು, ಸೆಟ್ಟಿಂಗುಗಳು – ಇವನ್ನೆಲ್ಲ ಒಳಗೆ ತರಬೇಕಾಗುತ್ತದೆ. ಇರುವ ದಾರಿ ಪ್ರದೇಶ ಅದಕ್ಕೆ ಸಾಕಾಗುವುದಿಲ್ಲ. ಅಲ್ಲಿ ಕೆಲವು ಮರಗಳಿವೆ. ಆ ಮರಗಳನ್ನು ಕಡಿದರೆ ದಾರಿ ಸುಗಮವಾಗುತ್ತದೆ.”

“ಅದೇಕೆ ಹಾಗೆ ಯೋಚಿಸುತ್ತಿದ್ದೀರಿ? ಅದಕ್ಕೆ ಬದಲಾಗಿ ಆವರಣದ ಗೋಡೆಗಳನ್ನು ಬೇಕಾದರೆ ಕೆಡವಿಸಿರಿ.”

“ಆದರೆ ಮತ್ತೆ ಗೋಡೆಗಳನ್ನು ಕಟ್ಟುವುದಕ್ಕೆ ತುಂಬಾ ಖರ್ಚು ಬರುತ್ತದಲ್ಲ? ”

“ಅಭ್ಯಂತರವಿಲ್ಲ. ಗೋಡೆಗಳನ್ನು ಮತ್ತೆ ಕಟ್ಟಿಸಬಹುದು. ನನಗೆ ಹಣದ ಕೊರತೆಯೇನಿಲ್ಲ. ದೇವರು ನನಗೆ ಯಥೇಷ್ಟ ಹಣವನ್ನು ಅನುಗ್ರಹಿಸಿದ್ದಾನೆ. ಆದರೆ ಮರಗಳನ್ನು ಕಡಿದರೆ ಮರಗಳನ್ನು ಮತ್ತೆ ಸೃಷ್ಟಿಸುವ ಶಕ್ತಿ ನನ್ನಲ್ಲಿಲ್ಲ. ಅವಕ್ಕೆ ಘಾತವೆಸಗುವ ಅಧಿಕಾರ ನನಗಿಲ್ಲ.”

ಆ ಸುಸಂಸ್ಕೃತನ ಪರಿಸರಪ್ರೇಮವನ್ನು ಕಂಡು ಚಿತ್ರನಿರ್ಮಾಪಕರು ಮೂಕರಾದರು.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ