ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ದೀಪ್ತಿ

ವೈರಮುದ್ದೀಪಯತಿ ಪ್ರಶಾಂತಂ ದರ್ಪಮಾರೋಹತಿ ನಾಸ್ತಮೇತಿ|

ದುರ್ಗತೋsಸ್ಮೀತಿ ಕರೋತ್ಯಕಾರ್ಯಂ ತಮಾರ್ಯಶೀಲಂ ಪರಮಾಹುರಾರ್ಯಾಃ||

(ಅಜ್ಞಾತಮೂಲ)

ಯಾರು ಬೇರೆಯವರಲ್ಲಿ ದ್ವೇಷಭಾವನೆಯನ್ನು ಉತ್ತೇಜಿಸುವುದಿಲ್ಲವೋ, ಯಾರು ದುರಭಿಮಾನ ಮೆರೆಯುವುದಿಲ್ಲವೋ, ಯಾರು ತಾನು ಏಕಾಕಿಯೂ ಅಸಹಾಯನೂ ಆಗಿದ್ದೇನೆಂಬ ಕಾರಣದಿಂದ ಅಕಾರ್ಯವನ್ನು ಮಾಡುವುದಿಲ್ಲವೋ, ಅಂಥವನನ್ನು ಆರ್ಯಶೀಲನೆಂದು ಜ್ಞಾನಿಗಳು ಪರಿಗಣಿಸುತ್ತಾರೆ.

ಶೀಲೌನ್ನತ್ಯ

dynamic-blue-background_zy9vsq_dಎಲ್ಲವೂ ಸುಗಮವಾಗಿರುವಾಗ, ತನಗೆ ಹಾನಿಯ ಸಂಭವವಿಲ್ಲದಾಗ ಯುಕ್ತಕರ್ಮಾಚರಣೆ ಮಾಡುವುದರಲ್ಲಿ ಅತಿಶಯವಿಲ್ಲ. ವಿಷಮಸ್ಥಿತಿ ಎದುರಾದಾಗಲೂ, ಯಾರಿಂದಲೂ ಬೆಂಬಲ ದೊರೆಯದೆ ನಿಸ್ಸಹಾಯನಾಗಿದ್ದಾಗಲೂ ಯಾರು ಉನ್ನತಲಕ್ಷ್ಯದಿಂದ ವಿಚಲಿತನಾಗದೆ ಸಂಭಾವ್ಯ ಕ್ಲೇಶವನ್ನೂ ಲೆಕ್ಕಿಸದೆ ಋಜುಮಾರ್ಗದಲ್ಲಿ ನಡೆಯುತ್ತಾನೋ ಅವನು ಶ್ರೇಷ್ಠನೆನಿಸುತ್ತಾನೆ – ಎಂದಿದೆ ಈ ನೀತಿವಾಕ್ಯ. ಸಾಧುಸ್ವಭಾವದವರೂ ಕರ್ತವ್ಯನಿಷ್ಠರೂ ಆಗಿದ್ದರೂ ಕ್ಲೇಶಕ್ಕೋ ಲೋಕಾಪವಾದಕ್ಕೋ ಹೆದರಿ ಅಪೇಕ್ಷಿತ ಆಚರಣೆಯಿಂದ ಹಿಂದೆಸರಿಯುವುದು ಪ್ರಶಂಸ್ಯವಾಗದು ಎಂಬುದು ಜ್ಞಾನಿಗಳ ಪರಾಮರ್ಶನೆ. ಶೀಲೌನ್ನತ್ಯಕ್ಕೆ ನಿದರ್ಶನವಾದ ಒಂದು ನಿಜಜೀವನಪ್ರಸಂಗ ಇಲ್ಲಿ ಸ್ಮರಣಾರ್ಹ. ಅದು ಈಗ್ಗೆ ಎಂಬತ್ತು ವರ್ಷ ಹಿಂದೆ ಅಮೆರಿಕದಲ್ಲಿ ನಡೆದದ್ದು.

ಅಮೆರಿಕದಲ್ಲಿ ತಾಲ್ಲೂಕು (ಕೌಂಟಿ) ಸ್ತರದಲ್ಲಿ ‘ಡಿಸ್ಟ್ರಿಕ್ಟ್ ಅಟಾರ್ನಿ’ ಹುದ್ದೆ ಪ್ರತಿಷ್ಠಿತ. ಆ ಅಧಿಕಾರಿಯನ್ನು ಜನತೆ ಚುನಾಯಿಸಿರುತ್ತಾರೆ. ಹಾಗೆ ಸಿಸ್ಕಿಯೂ ಎಂಬೆಡೆ ಆಯ್ಕೆಗೊಂಡಿದ್ದವನು ಜೇಮ್ಸ್ ಡೇವಿಸ್ ಎಂಬ ಕಾನೂನು ಪದವೀಧರ; ಅಮೆರಿಕದ ಮೂಲವಾಸಿ ಸಮುದಾಯಕ್ಕೆ ಸೇರಿದವನು. ಆತ ಅಸಾಮಾನ್ಯ ಸ್ವಭಾವದವನು: ಗಂಟೆಗಟ್ಟಲೆ ನದೀತೀರದಲ್ಲಿಯೊ ಅರಣ್ಯದಲ್ಲಿಯೊ ಪ್ರಕೃತಿಯ ಸಂಗಡಿಕೆಯಲ್ಲಿ ಆನಂದಿಸುತ್ತಿದ್ದ. ವಾಸ್ತವವೆಂದರೆ ಆಧ್ಯಾತ್ಮಿಕ-ಪಾರಂಪರಿಕ ಬೇರುಗಳಿಂದ ದೂರವಿರಬಾರದೆಂಬುದು ಅವನ ಇಚ್ಛೆಯಾಗಿತ್ತು. ೧೯೩೬ರಲ್ಲೊಮ್ಮೆ ಜಗಳದಲ್ಲಿ ತೊಡಗಿದ್ದ ಇಬ್ಬರ ಮೇಲೆ ಹಾಯ್ದಿದ್ದ ಇಬ್ಬರನ್ನು ಬಂಧಿಸಲು ಬಂದ ಇಬ್ಬರು ಪೊಲೀಸ್ ಅಧಿಕಾರಿಗಳ ಹತ್ಯೆಯಾಗಿತ್ತು. ಎಲ್ಲವನ್ನೂ ಕೇಳಿಸಿಕೊಂಡ ಜೇಮ್ಸ್ ಡೇವಿಸ್‌ನ ಅನಿಸಿಕೆ ಆ ಕೊಲೆಯಾಗಿದ್ದುದು ಆಕಸ್ಮಿಕವಾಗಿ ಎಂದು; ವಿಶ್ರಾಂತಿಯಲ್ಲಿದ್ದ ಇಬ್ಬರು ಸಂದರ್ಭವೊದಗಿ ಹಗರಣದಲ್ಲಿ ಸಿಲುಕಿಕೊಂಡಿದ್ದರೆಂದು. ಆದರೆ ಕೊಲೆ ಆಗಿದ್ದುದು ವಾಸ್ತವವಾದುದರಿಂದ ‘ಅಪಾರಾಧಿ’ಗಳಿಗೆ ದಂಡನೆಯಾಗಲೇಬೇಕೆಂದು ಪೊಲೀಸರು, ಸಾರ್ವಜನಿಕರು, ಪತ್ರಿಕೆಗಳವರು – ಎಲ್ಲರ ತೀವ್ರ ಆಗ್ರಹ ವ್ಯಕ್ತವಾಯಿತು. ಆದರೂ ಆಪಾದಿತರನ್ನು ದಂಡಿಸಲು ಜೇಮ್ಸ್ ಡೇವಿಸ್‌ನ ಮನಸ್ಸಾಕ್ಷಿ ಒಪ್ಪಲಿಲ್ಲ; ಅವರ ಮೇಲೆ ಕ್ರಮ ಜರುಗಿಸಲು ನಿರಾಕರಿಸಿದ. ಹೀಗೆ ಇಡೀ ಜನಸಮುದಾಯದ ಆಕ್ರೋಶಕ್ಕೆ ತುತ್ತಾದ, ರಾಜಕೀಯವಾಗಿಯೂ ಏಕಾಂಗಿಯಾದ. ರಾಜಿ ಮಾಡಿಕೊಂಡಿದ್ದಿದ್ದರೆ ನೆಮ್ಮದಿಯಾಗಿರುತ್ತಿದ್ದ. ಆದರೆ ಯಾವ ಕಾರಣಕ್ಕೂ ನನ್ನ ಅಂತಸ್ಸಾಕ್ಷಿಗೆ ವಿರುದ್ಧವಾಗಿ ನಡೆಯಲಾರೆ ಎಂದು ಘೋಷಿಸಿ ರಾಜೀನಾಮೆ ನೀಡಿಬಿಟ್ಟ. ಆಪಾದಿತರು ಬಂಧಿತರಾದರು.

ಅದಾದ ಎಷ್ಟೋ ವರ್ಷಗಳಾದ ಮೇಲೆ ಏನೇನೊ ಕಾರಣಗಳಿಂದ ಆ ಮೊಕದ್ದಮೆ ಪುನರ್ವಿಮರ್ಶೆಗೊಳಪಡುವ ಸನ್ನಿವೇಶ ಬಂದಿತು. ಆಪಾದಿತರು ನಿರಪರಾಧಿಗಳೆಂದು ಸಿದ್ಧಪಟ್ಟಿತು; ಬಂಧಮುಕ್ತರಾದರು. ಈ ವೇಳೆಗೆ ಜೇಮ್ಸ್ ಡೇವಿಸ್ ನಿಧನನಾಗಿ ಹಲವು ವರ್ಷಗಳೇ ಸಂದಿದ್ದವು.

ಪತ್ತೆದಾರಿ ಲೇಖಕ ಅರ್ಲ್ ಸ್ಟ್ಯಾನ್ಲೀ ಗಾರ್ಡ್‌ನರ್ ತನ್ನ ಒಂದು ಕಾದಂಬರಿಯನ್ನು ಜೇಮ್ಸ್ ಡೇವಿಸ್‌ನಿಗೆ ಅಂಕಿತ ಮಾಡಿದ್ದಾನೆ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ