ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮಾರ್ಚ್ 2015 > ಟಿ.ವಿ. ಛಾನಲ್ ನಿರ್ದೇಶಕರಿಗೊಂದು ಬಹಿರಂಗ ಪತ್ರ

ಟಿ.ವಿ. ಛಾನಲ್ ನಿರ್ದೇಶಕರಿಗೊಂದು ಬಹಿರಂಗ ಪತ್ರ

ನಾವು ನಮ್ಮ ವೈದಿಕ ಸಂಸ್ಕೃತಿಗೆ ಮರ್ಯಾದೆಕೊಡುವುದಕ್ಕೆ ಹೋಗಿ, ಬಂದಿರುವ ಅಂಧಾಚರಣೆಗಳಿಗೆ ಸಮರ್ಥನೆಗಳನ್ನೇ ಹುಡುಕಬೇಕಾದ್ದಿಲ್ಲ. ಅವುಗಳನ್ನು ಪೂರ್ವಗ್ರಹದಿಂದ ವಿಶ್ಲೇಷಿಸುವುದು ಬೇಡ. ಅಜ್ಞಾನದಿಂದಲೋ ಭಯದಿಂದಲೋ ಅವು ಬಂದಿರುವುದು ನಿಶ್ಚಯವಾದರೆ ನಿರ್ಭೀತತೆಯಿಂದ ಕೈಬಿಡಬೇಕು.

ಮಾನ್ಯರೇ,
ಇದೇ ತಿಂಗಳ, ಅಂದರೆ ೨೦೦೮ರ ಆಗಸ್ಟ್ ೧ನೇ ತಾರೀಖು, ಶುಕ್ರವಾರ ಸಾಯಂಕಾಲ ಸೂರ್ಯಗ್ರಹಣ ಸಂಭವಿಸಿತ್ತು. ಸಾಮಾನ್ಯ ಜನಗಳ ತಿಳಿವಳಿಕೆಗೋಸ್ಕರ ನೀವು ಏರ್ಪಡಿಸಿದ್ದ ಚರ್ಚಾಗೋಷ್ಠಿಯನ್ನು ವೀಕ್ಷಿಸಿದೆ. ವಿಜ್ಞಾನಿಗಳಿಗೂ ಜ್ಯೋತಿಷಿಗಳಿಗೂ ಆದ ಚಕಮಕಿಯನ್ನು ಕುತೂಹಲದಿಂದ ಕೇಳಿದೆ. ನಿರಾಶೆಯಾಯಿತೆಂದು ಹೇಳಿದರೆ ಬೇಜಾರುಪಟ್ಟುಕೊಳ್ಳಬಾರದು. ಕಾರಣ, ಅವರವರ ದೃಷ್ಟಿಕೋನದಿಂದಲೇ ಮಾತನಾಡುತ್ತಿದ್ದರೇ ಹೊರತು ಅವರಾರೂ ಇನ್ನೊಬ್ಬರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡ ಹಾಗೇ ಕಾಣಿಸಲಿಲ್ಲ. ಈ ವಿಷಯಗಳಲ್ಲಿ ವಾದಮಾಡಿ ಗೆಲ್ಲುವ ಇಚ್ಛೆ ಬೇಡ. ನಿರಪೇಕ್ಷ(ಆisಠಿಚಿssioಟಿಚಿಣe)ವಾಗಿ, ಇರುವ ವಸ್ತುಸ್ಥಿತಿಯನ್ನು ಮಂಡಿಸಬೇಕೇ ಹೊರತು ನ್ಯೂನತೆಗಳನ್ನೇ ಹುಡುಕುತ್ತಾ ಹೋಗುವುದು ಅಪೇಕ್ಷಣೀಯವಲ್ಲ.

The-Sun-Will-Become-a-Ring-of-Fire-in-Next-Weeks-Solar-Eclipse-Videoಮುಖ್ಯವಾಗಿ ಅವರು ಮರೆತದ್ದು ಏನೆಂದರೆ ಜ್ಯೋತಿಃಶಾಸ್ತ್ರವು ನಮ್ಮ ವೈದಿಕ ಸಂಸ್ಕೃತಿಯ ಒಂದು ಅಂಗ. ವೇದಗಳು, ಅವುಗಳನ್ನನುಸರಿಸಿರುವ ಋಷಿಪ್ರಣೀತ ಸೂತ್ರಗಳೇ ಅದಕ್ಕೆ ಮೂಲಭೂತವಾದ ಪ್ರಮಾಣ. ಅವುಗಳಲ್ಲಿ ಗ್ರಹಣದ ಬಗ್ಗೆ ಏನು ಹೇಳಿರುವುದೆಂಬುದನ್ನೇ ನೋಡಬೇಕಾದ್ದು ಅವಶ್ಯ. ನನಗೆ ತಿಳಿದಿರುವಂತೆ ವೇದಗಳಲ್ಲಾಗಲಿ ಸೂತ್ರಗಳಲ್ಲಾಗಲಿ ಗ್ರಹಣದ ಅಥವಾ ಗ್ರಹಣವೇಕೆ – ನವಗ್ರಹಗಳ ಉಲ್ಲೇಖವೇ ಇಲ್ಲ.

ವೇದಗಳನ್ನು ಷಡಂಗಸಹಿತವಾಗಿ ಅಧ್ಯಯನ ಮಾಡಬೇಕೆಂಬ ನಿಯಮವಿದೆ. ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಕಲ್ಪ, ಜ್ಯೋತಿಷಗಳೆಂಬ ಆರು ಭಾಗಗಳೇ ಷಡಂಗಗಳು. ಶಿಕ್ಷೆಯು ವೇದಗಳನ್ನು ಹೇಳುವ ಬಗೆ ಮುಂತಾದವನ್ನು ಹೇಳುತ್ತದೆ. ವ್ಯಾಕರಣವು ವೇದಕ್ಕೆ ಅರ್ಥಮಾಡಲು ಬೇಕು. ಛಂದಸ್ಸು ಇಲ್ಲದೆ ಯಾವ ಮಂತ್ರವೂ ಇಲ್ಲ. ನಿರುಕ್ತವು ವೇದಕ್ಕೆ ಅರ್ಥಹೇಳಲು ಹೊರಟಿದೆ. ಕಲ್ಪದಲ್ಲಿ ವೇದೋಕ್ತ ಆಚರಣವಿಧಾನಗಳ ವಿಸ್ತಾರ ಚರ್ಚೆ ಇದೆ. ಜ್ಯೋತಿಷದಲ್ಲಿ ಕಾಲಗಣನೆ, ನಕ್ಷತ್ರಗಣನೆಗಳನ್ನು ಹೇಳಿದೆ.
ಇಲ್ಲಿ ವೇದಾಂಗಜ್ಯೋತಿಷವೇ ಮುಂದೆ ಜ್ಯೋತಿಃಶಾಸ್ತ್ರವೆಂದು ಪ್ರಸಿದ್ಧವಾಗಿದೆ. ಈ ವೇದಾಂಗಜ್ಯೋತಿಷವನ್ನು ಲಗಡಮಹರ್ಷಿ ರಚಿಸಿದ್ದಾರೆ. ಇದಕ್ಕೂ ಇವತ್ತು ಪ್ರಚಾರದಲ್ಲಿರುವ ಫಲಜ್ಯೋತಿಷಕ್ಕೂ ಯಾವ ವಿಧವಾದ ಸಂಬಂಧವೂ ಇಲ್ಲ. ಯಜ್ಞಯಾಗಾದಿಗಳನ್ನು ಮಾಡುವ ಕಾಲ, ನಕ್ಷತ್ರಗಳ ನಿರ್ಣಯವೇ ವೇದಾಂಗಜ್ಯೋತಿಷ. ಬಹಳ ಸಣ್ಣದು.

ಕಾಲ – ನಂಬಿಕೆ
ಗ್ರಹಣವೆಂಬುದು Solar system ನಲ್ಲಿ ಸಂಭವಿಸುವ ಒಂದು ವಿದ್ಯಮಾನ. ಭೂಮಿಯು ಸೂರ್ಯನ ಸುತ್ತ ತಿರುಗುವಾಗ, ಚಂದ್ರನು ಭೂಮಿಯ ಸುತ್ತ ತಿರುಗುವಾಗ, ಮೂರು ಒಂದೇ ಸರಳರೇಖೆಯಲ್ಲಿ ಬರುವ ಸಂಭವವುಂಟು. ಆಗ ಸೂರ್ಯನೋ, ಚಂದ್ರನೋ, ಭೂಮಿಯ ಮೇಲಿರುವವರಿಗೆ ಸ್ವಲ್ಪಕಾಲ ಕಾಣಿಸದಿರುವ ಸಂಭವ ಉಂಟು. ಇದೇ ಸೂರ್ಯ ಅಥವಾ ಚಂದ್ರಗ್ರಹಣ. ಇದರ ವೈಜ್ಞಾನಿಕ ಹಿನ್ನೆಲೆ ತಿಳಿಯದೆ ಇದ್ದ ಕಾಲದಲ್ಲಿ, ಇದ್ದಕ್ಕಿದ್ದ ಹಾಗೆ ಅಂತರಿಕ್ಷದಲ್ಲಿ ಸೂರ್ಯನನ್ನೇ ಕಾಣದೆ ಕತ್ತಲಾಗಿದ್ದನ್ನು ಕಂಡು ಜನರು ಭಯಭೀತರಾಗಿರಬೇಕು. ಆವತ್ತಿನ ನಂಬಿಕೆಯಂತೆ ಯಾರೋ ರಾಕ್ಷಸರು ಸೂರ್ಯಚಂದ್ರರನ್ನು ಆಕ್ರಮಿಸಲು ಪ್ರಯತ್ನ ಪಟ್ಟಿರಬೇಕೆಂದು ಊಹಿಸಿದಂತಿದೆ. ಆ ವೇಳೆಗೆ ನವಗ್ರಹಗಳ ಪ್ರಭಾವದ ನಂಬಿಕೆ ಬಂದಿತ್ತು. ಪುರಾಣದ ಕಥೆಗಳಂತೆ ರಾಹು, ಕೇತುಗಳೆಂಬ ಛಾಯಾಗ್ರಹಗಳು ಸೂರ್ಯಚಂದ್ರರನ್ನು ಆಕ್ರಮಿಸುತ್ತಾರೆಂದು ಊಹಿಸಿದರು. ಅದಕ್ಕೆ ರಾಹುಗ್ರಸ್ತ ಅಥವಾ ಕೇತುಗ್ರಸ್ತ, ಸೂರ್ಯೋಪರಾಗ, ಚಂದ್ರೋಪರಾಗ ಎಂದು ಹೆಸರು ಕೊಟ್ಟರು. ಅಂಥ ಪವಿತ್ರರಾದ ಸೂರ್ಯಚಂದ್ರರನ್ನು ಆಕ್ರಮಿಸಿರುವುದರಿಂದ, ಆ ಸಮಯದಲ್ಲಿ ಎಲ್ಲರೂ ಸೂತಕವನ್ನು ಅನುಷ್ಠಾನಮಾಡಬೇಕೆಂದೂ, ಸ್ನಾನಾದಿಗಳನ್ನು ಮಾಡಿ ಜಪಾನುಷ್ಠಾನಗಳನ್ನು ಮಾಡಬೇಕೆಂದೂ ವಿಧಿಸಿದರು.

ಪ್ರಕೃತಿಯಲ್ಲಿ ನಡೆಯುವ ಈ ಸೋಜಿಗವು ಒಂದು ವಿಶೇಷವಾದ ಸಂದರ್ಭವೆಂದು ತಿಳಿದು (ಅದಕ್ಕೆ ಪರ್ವಕಾಲ ಎಂದು ಹೆಸರು) ನಮ್ಮ ವೈದಿಕ ಸಂಸ್ಕೃತಿಯಂತೆ ಆ ಕಾಲದಲ್ಲಿ ಪಿತೃಗಳಿಗೆ ಪೂಜೆಮಾಡಬೇಕೆಂದರು (ಇದನ್ನೇ ಗ್ರಹಣ ಶ್ರಾದ್ಧವೆಂದು ಕರೆಯುತ್ತಾರೆ).

ಆ ಕಾಲದಲ್ಲಿ ಎಲ್ಲರೂ ಮೈಲಿಗೆ ಎಂಬ ಭಾವನೆಯಿಂದ ಬಟ್ಟೆಗಳನ್ನೆಲ್ಲ ನೆನೆಸಿಹಾಕುವುದು, ಪೂಜಾಪಾತ್ರೆಗಳನ್ನು ತೊಳೆಯುವುದು ಇವೆಲ್ಲಾ ಅಭ್ಯಾಸಕ್ಕೆ ಬಂದವು. ಪ್ರಾಯಃ ಶ್ರಾದ್ಧ ಮಾಡಬೇಕೆಂಬ ಕಾರಣದಿಂದ, ಕರ್ತೃಗಳು ಉಪವಾಸ ಇರಬೇಕೆಂದು ಹೇಳಿದರು. (ಸಾಮಾನ್ಯವಾಗಿ ಶ್ರಾದ್ಧದ ದಿನ ಉಪವಾಸವಿದ್ದು ಶ್ರಾದ್ಧ ಮಾಡುವುದು ಮಾಡುವವರ ಶ್ರದ್ಧೆಯನ್ನು ಸೂಚಿಸುತ್ತದೆ). ಅದು ಹೋಗಿ, ಗ್ರಹಣಕ್ಕೆ ಮುಂಚೆ ತಿಂದುಬಿಟ್ಟರೆ ಶರೀರಕ್ಕೆ ತೊಂದರೆಯಾಗುತ್ತದೆಂದು ತಿಳಿದು ಗ್ರಹಣಕ್ಕೆ ೯ ಗಂಟೆಗಳ ಕಾಲ ಮುಂಚೆ ಏನನ್ನೂ ತೆಗೆದುಕೊಳ್ಳಬಾರದೆಂದು ವಿಧಿಸಿದರು. ಪಕ್ವಮಾಡಿದ ವಸ್ತುಗಳಿಗೆ ಗ್ರಹಣ ಮೈಲಿಗೆಯಾಗುವುದರಿಂದ, ಗ್ರಹಣ ಮೋಕ್ಷವಾದಮೇಲೆ ಅಡುಗೆ ಮಾಡಬೇಕೆಂದರು. ಈಗೀಗ ಗ್ರಹಣಕಾಲದಲ್ಲಿ (ಸೂರ್ಯಗ್ರಹಣದಲ್ಲಿ) ಯಾರೂ ಹೊರಗೇ ಬರಬಾರದೆಂಬ ರೂಢಿಯನ್ನು ತಂದಿದ್ದಾರೆ: ಗ್ರಹಣಕಾಲದ ಕಿರಣಗಳು ಮೈಮೇಲೆ ಬಿದ್ದು ತೊಂದರೆಯಾಗುತ್ತದಂತೆ! ಮನೆಯಲ್ಲಿರುವ ತಿಂಡಿಪದಾರ್ಥಗಳ ಮೇಲೆ, ಉಪ್ಪಿನಕಾಯಿ, ಎಣ್ಣೆ ಮುಂತಾದುವುಗಳ ಮೇಲೆ ಗ್ರಹಣ ಕಿರಣಗಳಿಂದ ರಕ್ಷಿಸಲು ದರ್ಭೆಯನ್ನೋ, ತುಳಸಿಯನ್ನೋ ಇಡುವ ರೂಢಿಯೂ ಇದೆ. ಇವೆಲ್ಲವೂ ಅವಿಚಾರಿತ ರಮಣೀಯವೆಂದೇ ಹೇಳಬೇಕು.

ನ ಸಾಧು ಸರ್ವಂ
ಪ್ರಾಯಃ ಪ್ರಾಚೀನಕಾಲದಲ್ಲಿ ಸೌರವ್ಯೂಹದ ಬಗ್ಗೆ ಇದ್ದ ಜ್ಞಾನದಲ್ಲಿ ಈ ಅವಿಚಾರಿತ ರೂಢಿಗಳು ಚಾಲ್ತಿಯಲ್ಲಿ ಬಂದಿರಬಹುದು. ಇವತ್ತು ಖಗೋಳಶಾಸ್ತ್ರದಲ್ಲಿ ಆಗಿರುವ ಅದ್ಭುತವಾದ ಬೆಳವಣಿಗೆಗಳಿಂದ ಗ್ರಹಣದ ಪ್ರಕ್ರಿಯೆ (mechanism) ಏನು ಎಂಬುದು ಖಚಿತವಾಗಿ ತಿಳಿದಿದೆ. ಉತ್ಪಾತವಲ್ಲ, ಕೇಡನ್ನೂ ಉಂಟುಮಾಡುವ ಸೂಚನೆಯೂ ಅಲ್ಲ, ಪ್ರಕೃತಿಯಲ್ಲಿ ನಡೆಯುವ ಅನೇಕ ವಿದ್ಯಮಾನಗಳಂತೆ ಅದೂ ನಡೆಯುತ್ತದೆ. ಪೂರ್ಣಿಮೆ, ಅಮಾವಾಸ್ಯೆಗಳಷ್ಟು ರೂಢಿಯಾಗಿ ಕಾಣಿಸದೆ ಇರುವುದರಿಂದ ಸ್ವಲ್ಪ ವಿಶೇಷತೆ ಇರಬಹುದು ಅಷ್ಟೆ. ಬಾಕಿ ನಂಬಿಕೆಗಳಿಗೆ ಖಂಡಿತ ಅವಕಾಶವಿಲ್ಲ. ಹಾಗೇ ಮನುಷ್ಯರ ಮೇಲೆ, ಪ್ರಾಣಿಗಳ ಮೇಲೆ, ಪರಿಸರದ ಮೇಲೆ ಅವುಗಳು ಪ್ರಭಾವ ಬೀರುವ ಹಾಗಿದ್ದರೆ, ಅವುಗಳಿಗೆ ಖಗೋಳಶಾಸ್ತ್ರಜ್ಞರು (astronomers)  ಪ್ರಮಾಣವೇ ಹೊರತು ಜ್ಯೋತಿಷವಲ್ಲ. ಮಾನ್ಯ ಡಿ.ವಿ.ಜಿಯವರು ಹೇಳುವಂತೆ ಇಂದ್ರಿಯಗೋಚರವಾದ ವಿಷಯಗಳಿಗೆ ನಮ್ಮ ಬುದ್ಧಿ ಮತ್ತು ವಿಜ್ಞಾನಗಳೇ ಪ್ರಮಾಣ; ಅತೀಂದ್ರಿಯ ವಿಷಯಗಳಲ್ಲಿ ವೇದೋಪನಿಷತ್ತುಗಳು ಪ್ರಮಾಣ. ಆದ್ದರಿಂದ ಅವುಗಳ ಪರಿಣಾಮವನ್ನು ಕಂಡುಹಿಡಿಯಲು ಶಾಸ್ತ್ರಗಳನ್ನು ಹುಡುಕಿಕೊಂಡು ಹೋಗಬೇಕಾದ್ದಿಲ್ಲ. ಗ್ರಹಣಕಾಲದಲ್ಲಿ ದೇಹಕ್ಕೆ ಅಶುಚಿತ್ವ ಉಂಟಾಗುತ್ತದೆ, ಆಹಾರ ತಿಂದರೆ ಅಜೀರ್ಣವಾಗುತ್ತದೆ, ನೋಡಿದರೆ ಕಣ್ಣು ಹೋಗುತ್ತದೆ, ಗರ್ಭಿಣಿ ಸ್ತ್ರೀಯರಿಗೆ ಭ್ರೂಣಕ್ಕೆ ತೊಂದರೆಯಾಗುತ್ತದೆ ಎಂಬ ವಿಷಯಗಳಿಗೆ ಖಗೋಳಶಾಸ್ತ್ರವೂ ವೈದ್ಯಕೀಯ ಜ್ಞಾನವೂ ಪ್ರಮಾಣ. ಆ ಕಾಲದಲ್ಲಿ ಶ್ರಾದ್ಧ ಮಾಡಬೇಕೆ? ಮಾಡಿದರೆ ಹೇಗೆ ಮಾಡಬೇಕು? ಯಾರ್‍ಯಾರಿಗೆ ಮಾಡಬೇಕು ಎಂಬುದು ನಮ್ಮ ಶಾಸ್ತ್ರಗಳಿಗೆ ಬಿಟ್ಟದ್ದು. ಅವುಗಳನ್ನು ನಂಬಿರುವ ನಾವು ಅದರಂತೆ ನಡೆಯಬೇಕಾದ್ದು ಧರ್ಮ. ಅದೂ ಸಕಾರಣವಾಗಿದ್ದರೆ. ಇಲ್ಲಿ ಕಾಳಿದಾಸನ ಮಾತನ್ನು ಜ್ಞಾಪಿಸಿಕೊಳ್ಳಬಹುದು.

ಪುರಾಣಮಿತ್ಯೇವ ನ ಸಾಧು ಸರ್ವಂ
ನ ಚಾಪಿ ಕಾವ್ಯಂ ನವಮಿತ್ಯವದ್ಯಮ್ |
ಸಂತಃ ಪರೀಕ್ಷ್ಯ ಅನ್ಯತರದ್ಭಜನ್ತೇ
ಮೂಢಃ ಪರಪ್ರತ್ಯಯನೇಯಬುದ್ಧಿಃ ||

ಎಂದು ತನ್ನ ‘ಮಾಲವಿಕಾಗ್ನಿಮಿತ್ರ’ ನಾಟಕವನ್ನು ಜನಗಳ ಮುಂದಿಡುತ್ತಾ ಹೇಳಿದ.
ಹಳೆಯದೆಂದು ಎಲ್ಲವೂ ಸಾಧು (ಒಳ್ಳೆಯದು) ಎಂದಲ್ಲ. ಕಾವ್ಯ ನೂತನವಾಗಿದೆಯೆಂದು ತಿರಸ್ಕರಿಸಬೇಕಾದ್ದಿಲ್ಲ. ಯೋಗ್ಯರೂ ವಿವೇಕಿಗಳೂ ಪರೀಕ್ಷಿಸಿ, ಯಾವುದು ಚೆನ್ನಾಗಿದೆಯೋ ಅದನ್ನು ಗ್ರಹಿಸುತ್ತಾರೆ. ಮೂಢರು ಇನ್ನೊಬ್ಬರು ಹೇಳಿದ್ದನ್ನೇ ಅಂಧರಂತೆ ಅನುಸರಿಸುತ್ತಾರೆ.

Apim2ನಾವು ನಮ್ಮ ವೈದಿಕ ಸಂಸ್ಕೃತಿಗೆ ಮರ್ಯಾದೆಕೊಡುವುದಕ್ಕೆ ಹೋಗಿ, ಬಂದಿರುವ ಅಂಧಾಚರಣೆಗಳಿಗೆ ಸಮರ್ಥನೆಗಳನ್ನೇ ಹುಡುಕಬೇಕಾದ್ದಿಲ್ಲ. ಅವುಗಳನ್ನು ಪೂರ್ವಗ್ರಹದಿಂದ ವಿಶ್ಲೇಷಿಸುವುದು ಬೇಡ. ಅಜ್ಞಾನದಿಂದಲೋ ಭಯದಿಂದಲೋ ಅವು ಬಂದಿರುವುದು ನಿಶ್ಚಯವಾದರೆ ನಿರ್ಭೀತತೆಯಿಂದ ಕೈ ಬಿಡಬೇಕು.

ಆತ್ಮವಂಚನೆ
ಆ ಚರ್ಚೆಯಲ್ಲಿ ಒಂದು ವಿಷಯವನ್ನು ಪುನಃ ಪುನಃ ಜ್ಯೋತಿಷ್ಯವಿದ್ವಾಂಸರು ಹೇಳುತ್ತಿದ್ದರು – ಜ್ಯೋತಿಃಶಾಸ್ತ್ರದ ಬಗ್ಗೆ ಪೂರ್ತಿ ಓದದೆ ಅದರ ಬಗ್ಗೆ ಟೀಕೆ ಮಾಡಬಾರದೆಂದು. ನಿಜ. ಆದರೆ ಯಾವ ವೈದಿಕ ಸಂಸ್ಕೃತಿಯ ಅಂಗವಾಗಿ ಜ್ಯೋತಿಷ್ಯಶಾಸ್ತ್ರ (ಫಲಜ್ಯೋತಿಷ) ಹೊರಟಿದೆಯೋ, ಆ ವೈದಿಕ ಸಂಸ್ಕೃತಿಯ ಮೂಲಭೂತ ತತ್ತ್ವಕ್ಕೆ ವಿರೋಧವಾದ ಪ್ರಮೇಯವನ್ನೇ ತಳಹದಿಯನ್ನಾಗಿ ಮಾಡಿಕೊಂಡಿರುವ ಶಾಸ್ತ್ರವನ್ನು ಟೀಕೆಮಾಡಲು ನಾವು ಅದನ್ನು ಅಧ್ಯಯನ ಮಾಡಬೇಕಾದ್ದಿಲ್ಲ. ಸರ್ವಸಾಮಾನ್ಯವಾದ ವೇದೋಪನಿಷತ್ತುಗಳು ಕರ್ಮಸಿದ್ಧಾಂತವನ್ನು ಉದ್ಘೋಷಿಸುತ್ತಿವೆ. ನಮ್ಮ ಕಷ್ಟಕಾರ್ಪಣ್ಯಗಳಿಗೆ, ನಮ್ಮ ಭವಿಷ್ಯಕ್ಕೆ, ನಾವೇ ಹೊಣೆ, ನಮ್ಮ ಕರ್ಮಫಲವನ್ನು ನಾವೇ ಅನುಭವಿಸಬೇಕೆಂದೂ, ಬ್ರಹ್ಮನೂ ಅದನ್ನು ವ್ಯತ್ಯಾಸಮಾಡಲು ಸಾಧ್ಯವಿಲ್ಲ ಎಂಬುದೂ ನಮ್ಮ ಪ್ರಾಚೀನ ಸಿದ್ಧಾಂತ. ಎಲ್ಲರೂ ಒಪ್ಪುವಂಥಾದ್ದೂ ಆಗಿದೆ. ಅದಕ್ಕೆ ಭವಿಷ್ಯವನ್ನು ವ್ಯತ್ಯಾಸಮಾಡಿಕೊಳ್ಳಬಹುದೆಂದು ಹೇಳುವ ಜ್ಯೋತಿಷ್ಯವನ್ನು ವೈದಿಕಧರ್ಮಾನುಯಾಯಿಗಳಾದ ನಾವು ಹೇಗೆ ನಂಬಲು ಸಾಧ್ಯ? ಅದಕ್ಕೆ ಓದದೆ ಟೀಕೆಯನ್ನು ಮಾಡಬಾರದೆಂದರೆ ಹೇಗೆ ಸಂಗತವಾಗುತ್ತದೆ? ಮೂಲಭೂತವಾದ ನಮ್ಮ ತತ್ತ್ವಕ್ಕೇ ವಿರೋಧವಾಗಿರುವ ಶಾಸ್ತ್ರದಲ್ಲಿ ನಮಗೆ ರುಚಿ ಬರುವುದು ಹೇಗೆ? ಅದೂ ಅಲ್ಲದೆ ವೇದಗಳಲ್ಲಾಗಲಿ, ಅವುಗಳನ್ನು ಅನುಸರಿಸಿ ಬರೆದಿರುವ ಸೂತ್ರಗಳಲ್ಲಾಗಲಿ ಗ್ರಹಗಳ ಉಲ್ಲೇಖವೇ ಇಲ್ಲ. ಬೃಹಸ್ಪತಿ, ಶುಕ್ರ ಇವರುಗಳ ಹೆಸರು ಬರುತ್ತದೆ. ಆದರೆ ಅವು ಗ್ರಹಗಳೆಂದಲ್ಲ, ಬೇರೆ ದೇವತೆಗಳು. ಗ್ರಹಗಳ ಉಲ್ಲೇಖವೇ ಇಲ್ಲದ ವೇದಗಳಿಂದ ಯಾವುಯಾವುದೋ ಮಂತ್ರಗಳನ್ನು ಆರಿಸಿಕೊಂಡು ಇವತ್ತು ಗ್ರಹಯಜ್ಞ ಎಂದು ನಡೆಯುತ್ತಿದೆ. ಅವುಗಳಲ್ಲಿ ಒಂದು ಮಂತ್ರವಾಗಲಿ ಗ್ರಹಗಳಿಗೆ ಸಂಬಂಧಿಸಿಲ್ಲ. ಇವುಗಳನ್ನು ಹೇಳಿ ಗ್ರಹಗಳನ್ನು ತೃಪ್ತಿಪಡಿಸುತ್ತೇವೆಂದರೆ ಮೂರ್ಖತನವಾಗುತ್ತದೆ. ಆತ್ಮವಂಚನೆ ಮಾಡಿಕೊಳ್ಳುತ್ತಿದ್ದೇವೆ ಎಂದರೆ ತಪ್ಪಾಗಲಾರದು.

ಇದರ ಜತೆಗೆ ಗ್ರಹಣಕಾಲದಲ್ಲಿ ಯಾವ ನಕ್ಷತ್ರವಿದೆಯೋ ಅದರಲ್ಲಿ ಹುಟ್ಟಿದವರೂ, ಆ ರಾಶಿಗೆ ಸೇರಿದವರೂ ಶಾಂತಿಯನ್ನು ಮಾಡಿಕೊಳ್ಳಬೇಕೆಂಬ ರೂಢಿಯೂ ಬಲವಾಗಿ ಬಂದಿದೆ. ಒಂದು ದಿನದಲ್ಲಿ ಒಂದು ನಕ್ಷತ್ರ ಇರುವಾಗ ಗ್ರಹಣ ಸಂಭವಿಸಿದರೆ, ಆ ನಕ್ಷತ್ರದಲ್ಲಿ ಹುಟ್ಟಿದವರಿಗೆ ಯಾವ ದೋಷ ಬರಲು ಸಾಧ್ಯ? ಗ್ರಹಣಗಳು ಪೂರ್ಣಿಮೆ, ಅಮಾವಾಸ್ಯೆಗಳಲ್ಲಿ ಪ್ರಪಂಚದ ಯಾವುದೋ ಒಂದು ಭಾಗದಲ್ಲಿ ಸಂಭವಿಸುತ್ತಲೇ ಇರುತ್ತವೆ. ಆಗೆಲ್ಲಾ ಆ ನಕ್ಷತ್ರದವರಿಗೆ ದೋಷ ಬರುವುದಿಲ್ಲವೆ? ನಮ್ಮ ಪ್ರದೇಶಕ್ಕೆ ಕಾಣುವಾಗ ಮಾತ್ರ ದೋಷ ಬರುತ್ತದೆಂದು ಹೇಳುವುದು ಯಾರೂ ಒಪ್ಪಲು ಸಾಧ್ಯವಿಲ್ಲ. ಇನ್ನೂ ಮೌಢ್ಯವೆಂದರೆ, ಶಾಂತಿನಿವಾರಣೆಗೆ ವಿಧಿಸಿರುವ ಪ್ರಾರ್ಥನಾಶ್ಲೋಕಗಳನ್ನು ಕಾಗದದಲ್ಲಿ ಬರೆದು ತಲೆಗೆ ಪಟ್ಟಿಯ ಹಾಗೆ ಕಟ್ಟಿಕೊಂಡುಬಿಟ್ಟರೆ ದೋಷನಿವಾರಣೆಯಾಗುತ್ತದೆಂದು ಹೇಳುವುದು! (ನಾನು ಹುಡುಗನಾಗಿದ್ದಾಗ, ಅದಕ್ಕೆ ಹೆಚ್ಚು ಪಾವಿತ್ರ್ಯಕೊಡುವುದಕ್ಕೋಸ್ಕರ ಕಾಗದದ ಮೇಲೆ ಬರೆಯದೆ, ತಾಳೆಗರಿಯಲ್ಲಿ ಬರೆಯುತ್ತಿದ್ದರು!) ಸ್ತೋತ್ರವನ್ನು ಅರ್ಥಮಾಡಿಕೊಂಡು ಹೇಳಿದರೆ ಮನಸ್ಸಿಗೆ ಶಾಂತಿ ಸಿಗಬಹುದೇನೋ. ಅದನ್ನು ಬರೆದು ತಲೆಗೆ ಕಟ್ಟಿಕೊಂಡರೆ ಸಾಕು ಅಂತ ಹೇಳುವುದು, ನಾವು ಹುಡುಗರಾಗಿದ್ದಾಗ ಪಠ್ಯಪುಸ್ತಕಗಳನ್ನೇ ಓದದೆ ತಲೆಯ ಅಡಿಯಲ್ಲಿಟ್ಟುಕೊಂಡು ಮಲಗಿದ ಹಾಗೆ! (ಪುಸ್ತಕದಲ್ಲಿರುವ ವಿಷಯಗಳು ಮೆದುಳಿನೊಳಕ್ಕೆ ತೂರಿ ಹೋಗುತ್ತದೆಂಬ ನಂಬಿಕೆ!)

ಆಚಾರಗಳ ಉದ್ದಿಶ್ಯ
ಈ ರೀತಿ ವಿಚಾರವೇ ಮಾಡದೆ ಯಾವುಯಾವುದೋ ಆಚಾರಗಳನ್ನು ಅಭ್ಯಾಸಮಾಡಿಕೊಂಡು ಬಂದುಬಿಟ್ಟಿದ್ದೇವೆ. ಅವುಗಳಿಗೆ ವೈಜ್ಞಾನಿಕ ಹಿನ್ನೆಲೆಯನ್ನೂ ಕೊಡಲು ಹೊರಟಿದ್ದೇವೆ. ವಿಜ್ಞಾನದ ಕೆಲವು ಪಾರಿಭಾಷಿಕ ಶಬ್ದಗಳನ್ನು (electromagnetic waves, vibrations, temperature, digestive system ಇತ್ಯಾದಿ) ಉಪಯೋಗಿಸಿಬಿಟ್ಟರೆ, ವೈಜ್ಞಾನಿಕವಾಗಿ ಹೇಳಿದ ಹಾಗಾಯಿತು ಎನ್ನುವ ಪರಿಪಾಟಿ ಬಂದಿದೆ. ಈ ಸಾಹಸ ಬೇಡ. ನಮ್ಮ ಧಾರ್ಮಿಕ ಆಚಾರಗಳೆಲ್ಲವೂ ಅಂತಃಕರಣನೈರ್ಮಲ್ಯಕ್ಕೋಸ್ಕರ ಏರ್ಪಟ್ಟವು. ಅವುಗಳ ಅಭ್ಯಾಸದಲ್ಲಿ ಆನುಷಂಗಿಕ (incidental)ವಾಗಿ ಕೆಲವು ವೈಜ್ಞಾನಿಕ ಸತ್ಯಗಳೂ ಸೇರಿಕೊಂಡಿರುತ್ತವೆ. ಆದರೆ ಅವೇ ಪ್ರಧಾನ ಉದ್ದೇಶವಲ್ಲ. ಆದ್ದರಿಂದ ಮಹರ್ಷಿಗಳಿಂದ ಬಂದಿರುವ ಅಭ್ಯಾಸಗಳಿಗೆ ಮನುಷ್ಯರ ಮಾನವೀಯತೆಯನ್ನು ಅಭಿವೃದ್ಧಿಪಡಿಸುವ ರೀತಿಯನ್ನು ನೋಡಿ ಸಂತೋಷಪಡೋಣ (ಇದ್ದರೆ). ಹಾಗೆಯೆ ಅಭ್ಯಸಿಸೋಣ. ಅವುಗಳಿಗೆ ಅಸಂಬದ್ಧವಾದ ವೈಜ್ಞಾನಿಕ ಕಾರಣಗಳನ್ನು ಕೊಟ್ಟು ಅವುಗಳ credibilityಯನ್ನು ಸ್ಥಾಪಿಸುವುದು ಬೇಡ. ಆ ಕ್ಷೇತ್ರವು ವಿಜ್ಞಾನಿಗಳಿಗೆ ಸೇರಿದ್ದು. ಅವರೇ ಹೇಳಲಿ. ಇಲ್ಲದಿದ್ದರೆ ಯಾವ ನಷ್ಟವೂ ಇಲ್ಲ. ಅವುಗಳ ಅಭ್ಯಾಸದಿಂದ ಆಧ್ಯಾತ್ಮಿಕ ಉನ್ನತಿಯಾಗುವುದಾದರೆ ಗ್ರಾಹ್ಯ. ಇಲ್ಲದಿದ್ದರೆ ಧೈರ್ಯವಾಗಿ ತ್ಯಾಜ್ಯ. ಇಲ್ಲಿ ತೈತ್ತಿರೀಯೋಪನಿಷತ್ತಿನಲ್ಲಿ ಬರುವ ಯಾನ್ಯಸ್ಮಾಕಗ್ಂ ಸುಚರಿತಾನಿ| ತಾನಿ ತ್ಯಯೋಪಾಸ್ಯಾನಿ| ನೋ ಇತರಾಣಿ|| (ನಮ್ಮಲ್ಲಿ ಏನಾದರೂ ಸುಚರಿತ್ರಗಳಿದ್ದರೆ ಅವುಗಳನ್ನು ನೀನು ಅನುಸರಿಸು. ವಿರೋಧವಾದ ಆಚರಣೆಗಳಿದ್ದರೆ ಅನುಸರಿಸಬೇಡ) ಎಂಬ ಆಚಾರ್ಯರು ಶಿಷ್ಯನಿಗೆ ಮಾಡುವ ಉಪದೇಶವನ್ನು ಸ್ಮರಿಸಿಕೊಳ್ಳಬಹುದು.

ಇದಕ್ಕೆ ಪೂಜ್ಯ ವಿದ್ಯಾರಣ್ಯರು ಭಾಷ್ಯ ಬರೆಯುತ್ತಾ, ಇಲ್ಲಿ ಆಚಾರ್ಯರು ಹೇಳುತ್ತಿರುವ ಸುಚರಿತ್ರಗಳೆಂದರೆ, ಭಗವದ್ಗೀತೆಯ ೧೬ನೇ ಅಧ್ಯಾಯದ ಆರಂಭದ ಮೂರು ಶ್ಲೋಕಗಳಲ್ಲಿ ಹೇಳಿರುವ ದೈವೀಸಂಪದ್ಗುಣಗಳು. ಅವುಗಳು, ನನ್ನಲ್ಲಿ (ಆಚಾರ್ಯನಲ್ಲಿ) ಇದ್ದರೆ ಅವುಗಳನ್ನು ನೀನೂ ಅನುಸರಿಸು. ತದ್ವಿರೋಧವಾದ, ಮುಂದೆ ಅಲ್ಲೇ ಹೇಳಿರುವ ಆಸುರೀಸಂಪದ್ಗುಣಗಳಿದ್ದರೆ ಮಾಡಬೇಡ ಎಂದರ್ಥ, ಎಂದು ಹೇಳಿ ಅಯಮೇವ ನ್ಯಾಯಃ ಸರ್ವತ್ರ ಶಿಷ್ಟಾಚಾರೇಷು ಯೋಜನೀಯಃ (ಈ ನ್ಯಾಯವೇ ಎಲ್ಲಾ ಶಿಷ್ಟಾಚಾರದ ವಿಷಯಗಳಲ್ಲಿಯೂ ಅನ್ವಯಿಸಿಕೊಳ್ಳಬೇಕು) ಎಂದರು. ಇದೇ ನಮಗೆಲ್ಲಾ ತಾರಕಮಂತ್ರವಾಗಬೇಕು. ಎಷ್ಟೇ ಪ್ರಾಚೀನ ಕಾಲದಿಂದ ಬಂದ ಆಚಾರವಾದರೂ, ಅದನ್ನು ಪೂಜ್ಯ ವಿದ್ಯಾರಣ್ಯರು ಹೇಳಿರುವ ಪರೀಕ್ಷೆಗೆ ಅವಶ್ಯವಾಗಿ ಒಳಪಡಿಸಬೇಕು. ಆ ವಿಚಾರವನ್ನು ಅನುಸರಿಸುವುದರಿಂದ ಒಂಬತ್ತು ದೈವೀಸಂಪದ್ಗುಣಗಳ ಅಭ್ಯಾಸಕ್ಕೆ ಪೋಷಕವಾಗುವುದಾದರೆ ಅನುಸರಿಸೋಣ. ಇಲ್ಲದೆ ವಿರೋಧವಾಗಿದ್ದರೆ ಧೈರ್ಯವಾಗಿ ಬಿಡೋಣ. ಈ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಂಡು, ನಿರ್ಭಯವಾಗಿ ಬಾಳೋಣ.

ಆದರೂ ಇಷ್ಟು ಜನರು ಅನುಸರಿಸಿಕೊಂಡು ಬರುತ್ತಿರುವುದನ್ನು ಅಲ್ಲಗಳೆಯುವುದು ಹೇಗೆ ಎಂಬ ಸಂದೇಹ ಬರಬಹುದು. ನವಗ್ರಹ ಹೋಮ, ಪೂಜೆ, ಗ್ರಹಣಾಚರಣೆ ಇವುಗಳಿಗೆಲ್ಲ ಮನುಷ್ಯರ ಮನೋದೌರ್ಬಲ್ಯವೇ ಕಾರಣವೆಂದು ಧಾರಾಳವಾಗಿ ಹೇಳಬಹುದು. ಎಲ್ಲರಿಗೂ ಜೀವನದಲ್ಲಿ ಒಳ್ಳೆಯದಾಗಬೇಕು ಎಂಬ ಆಸೆ. ಐಶ್ವರ್ಯವನ್ನು ಗಳಿಸಬೇಕೆಂಬ ಆಸೆ. ಹೆಂಡತಿ, ಮಕ್ಕಳು-ಮರಿ ಎಲ್ಲಾ ಬುದ್ಧಿವಂತರಾಗಿ, ಚೆನ್ನಾಗಿರಬೇಕೆಂಬ ಆಸೆ. ಅವುಗಳಲ್ಲಿ ಕೆಲವು ನಮಗೆ ಗೊತ್ತಿಲ್ಲ. ಕೆಲವಕ್ಕೆ ಶ್ರಮ ಪಡಬೇಕು. ಗೊತ್ತಿಲ್ಲದಿರುವುದನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ, ಆತಂಕ ಎಲ್ಲರಿಗೂ ಇರುತ್ತದೆ. ಶ್ರಮ ಪಡದೆ ಐಶ್ವರ್ಯ ಸಂಪಾದನೆಯಾಗುವುದಾದರೆ ಎಲ್ಲರಿಗೂ ಇಷ್ಟ. ಈ ಕುತೂಹಲ, ಇಷ್ಟಗಳನ್ನು ತಣಿಸುವುದಕ್ಕೆ ಹೊರಟಿರುವುದು ಫಲಜ್ಯೋತಿಷಶಾಸ್ತ್ರ. ಅದಕ್ಕೆ ಜನಗಳು ಮುಗಿಬೀಳುವುದೇನೂ ಆಶ್ಚರ್ಯವಲ್ಲ. ಸತ್ಯ ಯಾವತ್ತೂ ಕಠೋರವಲ್ಲವೆ! ?

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ