ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮಾರ್ಚ್ 2015 > ಬದಲಾವಣೆಗೊಂದು ಅವಕಾಶ ನೀಡೋಣವೇ?

ಬದಲಾವಣೆಗೊಂದು ಅವಕಾಶ ನೀಡೋಣವೇ?

ಗಮನ ಸೆಳೆದ ಇತ್ತೀಚಿನ ಎರಡು ವರದಿಗಳು ಹೀಗಿವೆ:

ವರದಿ ೧:
ಬೆಂಗಳೂರಿನ ಪರಪ್ಪನ ಅಗ್ರಹಾರ ಎದುರಿಗೆ ಜೈಲುವಾಸಿಗಳೇ ನಿರ್ಮಿಸಿದ ಒಂದು ಬೇಕರಿ. ಸ್ಥಳದಲ್ಲಿ ಜಮಾಯಿಸುತ್ತಿದ್ದ ಪತ್ರಕರ್ತರ, ಪೊಲೀಸು ಅಧಿಕಾರಿಗಳ ಹಸಿವು ತಣಿಸುತ್ತಿರುವ ಈ ಪುಣ್ಯಕಾರ್ಯದ ಯೋಚನೆ ಬಂದಿದ್ದೂ ಅಲ್ಲಿನ ಜೈಲುವಾಸಿಗಳಿಗೇ! ಐವತ್ತಕ್ಕೂ ಹೆಚ್ಚು ಖೈದಿಗಳು ಸೇರಿ ಆಧುನಿಕ ಯಂತ್ರೋಪಕರಣಗಳಿಂದ ಕೇಕ್, ಬ್ರೆಡ್ ಇನ್ನಿತರ ಆಹಾರ ತಿನಿಸುಗಳನ್ನು ತಾವೇ ತಯಾರಿಸಿ ಮಾರಾಟಕ್ಕಿಡುತ್ತಿದ್ದಾರೆ. ತಂದಿಡುವ ತಿನಿಸುಗಳೂ ಫಟಾಫಟ್ ಎಂಬಂತೆ ಖಾಲಿಯಾಗುತ್ತಿವೆಯಂತೆ. ದಿನಾಂತ್ಯಕ್ಕೆ ಉಳಿದ ಆಹಾರೋತ್ಪನ್ನಗಳನ್ನು ಮರುದಿನ ಮಾರಾಟ ಮಾಡಲಾಗುವುದಿಲ್ಲ.

ವರದಿ ೨:
ಆತ ೫೨ರ ಹರೆಯದ ಭಿಕ್ಷುಕ. ಚೆನ್ನೈನ ಪೆರಂಬೂರಿನ ಅಯ್ಯಪ್ಪನ್ ದೇವಸ್ಥಾನ ಬಗಲಲ್ಲಿ ಭಿಕ್ಷೆ ಬೇಡುತ್ತಿದ್ದ ಆತನಿಗೆ ಸ್ಥಳೀಯ ಪಿಯುಸಿಯ ೧೩ ವಿದ್ಯಾರ್ಥಿಗಳ ತಂಡವೊಂದು ಹೊಸಜೀವನ ನೀಡಿದೆ. ಎರಡೂವರೆ ಸಾವಿರ ರೂಪಾಯಿ ಖರ್ಚುಮಾಡಿ, ಆತನಿಗೆ ದೇವಾಲಯದ ಎದುರಿಗೆ ಪುಟ್ಟ ಅಂಗಡಿಯೊಂದನ್ನು ತೆರೆದುಕೊಟ್ಟಿದ್ದಾರೆ. ಆ ಮೂಲಕ ಸಣ್ಣದೊಂದು ಬದಲಾವಣೆಯ ಕಿಡಿ ಹೊತ್ತಿಸಿದ್ದಾರೆ. ಅಷ್ಟೇ ಅಲ್ಲ, ನಗರದ ಸುತ್ತಮುತ್ತಲಿನ ಇನ್ನಷ್ಟು ಭಿಕ್ಷುಕರಿಗೆ ಹೀಗೆಯೇ ಒಂದಿಲ್ಲೊಂದು ಉದ್ಯೋಗ ದೊರಕಿಸುವ ಪಣತೊಟ್ಟಿದ್ದಾರೆ. ವಿದ್ಯಾರ್ಥಿಗಳ ಈ ಇಚ್ಛಾಶಕ್ತಿಗೆ ತಲೆದೂಗಿರುವ ನಗರದ ಮೇಯರ್ ಇಂಥವರಿಗೆ ಸಾಲದ ರೂಪದಲ್ಲಿ ಆರ್ಥಿಕ ನೆರವು ನೀಡುವುದಾಗಿಯೂ ಘೋಷಿಸಿದ್ದಾರೆ. ಹಾಗೆಂದು ಕಂಡಕಂಡ ಭಿಕ್ಷುಕರಿಗೆಲ್ಲಾ ಈ ನೆರವು ಹಮ್ಮಿಕೊಂಡಿಲ್ಲ. ಭಿಕ್ಷುಕರನ್ನು ಮೊದಲಿಗೆ ರಕ್ತಪರೀಕ್ಷೆಗೆ ಒಳಪಡಿಸಲಾಗುತ್ತದೆ. ಒಂದೊಮ್ಮೆ ಆತ ಮದ್ಯ ಅಥವಾ ಧೂಮಪಾನ ವ್ಯಸನಿಯಾದರೆ ಆತನಿಗೆ ಸಹಾಯದ ಮಾತೇ ಇಲ್ಲ. ಈ ರೀತಿ ಭಿಕ್ಷುಕಮುಕ್ತ ಸಮಾಜದ ನಿರ್ಮಾಣಕ್ಕೆ ಇಂದಿನ ಪ್ರಜೆಗಳೇ ನಾಂದಿ ಹಾಡಿದ್ದಾರೆ.

ಮೇಲಿನ ಎರಡೂ ಘಟನೆಗಳು ಹಲವರ ಬದುಕಿನಲ್ಲಿ ಹೊಸ ಬೆಳಕನ್ನು ಹರಿಸಿದ್ದು ನಿಜ. ಇಂದು ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಸಾವಿರಾರು ಭಿಕ್ಷುಕರು ನೋಡಲು ಸಿಗುತ್ತಾರೆ. ಅವರ ಸ್ಥಿತಿಯನ್ನು ಓರೆಗಣ್ಣಿನಿಂದ ಕಂಡು ಮುಖ ತಿರುಗಿಸಿಕೊಳ್ಳುತ್ತೇವೆ, ಶಪಿಸುತ್ತೇವೆ, ಗೊಣಗಿಕೊಳ್ಳುತ್ತೇವೆ. ಆದರೆ ಅಂತಹ ವ್ಯಕ್ತಿಗಳ ಜೀವನಕ್ಕೊಂದು ಹೊಸ ರೂಪುರೇಷೆ ನೀಡುವುದಕ್ಕೆ ಆ ಶಾಲಾವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಶಾಲಾಮಕ್ಕಳಿಗೇ ಇಂಥದ್ದೊಂದು ಬದಲಾವಣೆ ಮಾಡಲು ಸಾಧ್ಯವಾಗುವುದಾದರೆ, ನಮ್ಮ ದೇಶದ ಜನಪ್ರತಿನಿಧಿಗಳೆಲ್ಲಾ ಒಗ್ಗೂಡಿ ಇಂತಹ ಕೆಲಸಕ್ಕಿಳಿದರೆ ಇಡೀ ದೇಶವನ್ನು ಭಿಕ್ಷುಕಮುಕ್ತವನ್ನಾಗಿಸಲು ಎಷ್ಟು ಸಮಯ ತಾನೇ ತಗಲಬಹುದು? ಇದು ಸಾರ್ವಜನಿಕರ ಕೈಲಾಗದ ಕೆಲಸವೆಂದು ಹೇಳುತ್ತಿಲ್ಲ, ಆದರೆ ರಾಜಕಾರಣಿಗಳಿಗಿರುವ ಸಾಮಾಜಿಕ ಮತ್ತು ಆರ್ಥಿಕ ‘ಪವರ್’ ಜನಸಾಮಾನ್ಯನಿಗೆ ತುಸು ಕಷ್ಟ. ಪ್ರಧಾನಿಗಳ ಸ್ವಚ್ಛಭಾರತ ಆಂದೋಲನಕ್ಕೂ ಮೊದಲೂ ಅದೆಷ್ಟೋ ಜನರು ಸ್ವಚ್ಛತೆಯನ್ನು ಪಾಲಿಸುತ್ತಿದ್ದರು. ಆದರೆ ಅಂತಹವರಿಗೆ ಸಿಗುತ್ತಿದ್ದದ್ದು ‘ನಿನ್ನೊಬ್ಬನಿಂದೇನಾದೀತು?’ ಎಂಬ ಲೇವಡಿಯ ಮಾತಷ್ಟೇ. ಅದೇ ಈಗ ಪ್ರಧಾನಿಗಳೇ ಖುದ್ದು ಪೊರಕೆ ಹಿಡಿದಾಗ ಸಿಕ್ಕಿದ ಬೆಲೆಯೇ ಬೇರೆ; ಇದು ರಾಜಕಾರಣಿಗಳ ಮತ್ತು ಜನಸಾಮಾನ್ಯರ ನಡುವಿನ ವ್ಯತ್ಯಾಸ.

ಇನ್ನು ಜೈಲಿನಲ್ಲಿಯೂ ಪರಿವರ್ತನೆ ಸಾಧ್ಯ ಎನ್ನುವುದನ್ನು ಸಾಬೀತುಪಡಿಸಿದ ಕಾರಾಗೃಹ ತಿಹಾರ್ ಜೈಲು. ದಕ್ಷಿಣ ಏಷ್ಯಾದಲ್ಲಿಯೇ ಅತಿದೊಡ್ಡ ಕಾರಾಗೃಹವಾಗಿರುವ ಇಲ್ಲಿ ಬದಲಾವಣೆಯ ಕಿಡಿ ಹೊತ್ತಿಸಿದ್ದು ಐಪಿಎಸ್ ಅಧಿಕಾರಿಯಾಗಿದ್ದ ಕಿರಣ್ ಬೇಡಿ. ತಿಹಾರ್ ಜೈಲಿನಲ್ಲಿ ೨ ವರ್ಷ ಅಧಿಕಾರಿಯಾಗಿ ನೇಮಕಗೊಂಡ ಅವರು ಖೈದಿಗಳ ಮನಪರಿವರ್ತನೆಗೆಂದು ಅದನ್ನು ‘ತಿಹಾರ್ ಜೈಲ್’ನ ಬದಲಿಗೆ ‘ತಿಹಾರ್ ಆಶ್ರಮ’ ಎಂದು ಕರೆಯತೊಡಗಿದರು. ಜೈಲಿನ ಅಧಿಕಾರಿಗಳೂ ಸಹಿತ ಅಲ್ಲಿನ ಖೈದಿಗಳಿಗೆ ಧ್ಯಾನದ ತರಬೇತಿಯನ್ನು ಆರಂಭಿಸಿದರು. ಅನಂತರದ ವರ್ಷಗಳಲ್ಲಿ ಅಲ್ಲಿನ ಖೈದಿಗಳು ದೂರಶಿಕ್ಷಣದ ಮೂಲಕ ತಮ್ಮ ಶಿಕ್ಷಣದ ಬಯಕೆಯನ್ನು ಪೂರೈಸಿಕೊಂಡರು. ಯಾವ ಮಟ್ಟಕ್ಕೆಂದರೆ ಓರ್ವ ಖೈದಿ ಐಎಎಸ್ ಪರೀಕ್ಷೆಯನ್ನೇ ಪಾಸುಮಾಡಿದ! ಆತನಲ್ಲಾದ ಬದಲಾವಣೆಯನ್ನು ಕಂಡು ನ್ಯಾಯಾಲಯ ಆತನಿಗೆ ವಿಧಿಸಿದ್ದ ಶಿಕ್ಷೆಯ ಪ್ರಮಾಣವನ್ನೇ ಕಡಮೆಮಾಡಿತು. ಇತ್ತೀಚೆಗಷ್ಟೆ ಅಲ್ಲಿನ ೬೬ ಖೈದಿಗಳಿಗೆ ಬೇರೆಬೇರೆ ಕಂಪೆನಿಗಳಲ್ಲಿ ಉದ್ಯೋಗಾವಕಾಶ ಲಭಿಸಿದೆ. ಅದರಲ್ಲೂ ಒಬ್ಬರಿಗೆ ದೊರೆತ ಕೆಲಸದ ಪ್ರಾರಂಭಿಕ ಸಂಬಳವೇ ೩೫,೦೦೦ ರೂಪಾಯಿ ಎನ್ನುವುದು ಗಮನಾರ್ಹ.

ಕಳ್ಳನ ಮಗ ಕಳ್ಳ, ಭಿಕ್ಷುಕನ ಮಗ ಭಿಕ್ಷುಕನೇ ಆಗಬೇಕೆಂಬ ನಿಯಮವೇನಿಲ್ಲವಲ್ಲ. ಯಾವುದೋ ಓಬೀರಾಯನ ಕಾಲದಲ್ಲಿ ಕದ್ದಿದ್ದವನ ಪೂರ್ತಿ ವಂಶವನ್ನೇ ಕಳ್ಳರ ವಂಶ ಎನ್ನಲಾಗುತ್ತದೆಯಾ? ಅವರಲ್ಲೂ ಮಹತ್ತರವಾದ ಬದಲಾವಣೆಯನ್ನು ತರಬಹುದು. ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸುವುದು ಮತ್ತು ಪರಿವರ್ತನೆ ಬಯಸುವವರನ್ನು ಉತ್ತೇಜಿಸುವುದು ಸಮಾಜದ ಪ್ರಮುಖ ಹೊಣೆಯೂ ಹೌದು. ಈ ನಿಟ್ಟಿನಲ್ಲಿ ಮೇಲಿನ ಎರಡೂ ಉದಾಹರಣೆಗಳು ಮಾದರಿ ಎನಿಸಬಲ್ಲವು.

 – ಅರ್ಜುನ್ ಶೆಣೈ, ಕುಂದಾಪುರ

ಇಂಗ್ಲಿಷ್ ಹಾಗೂ ತ್ರಿಭಾಷಾ ಸೂತ್ರ: ಮತ್ತೊಂದಷ್ಟು ವಿಚಾರಗಳು
ಇಂಗ್ಲಿಷ್‌ನ ಅತಿರೇಕದ ಬಳಕೆಯನ್ನು (ಅಂದರೆ, ನಮಗೆ ನಾವೇ ಬೇಕಿಲ್ಲದ ಕಡೆಗಳಲ್ಲೂ ಇಂಗ್ಲಿಷ್‌ಅನ್ನು ಹೇರಿಕೊಳ್ಳುತ್ತಿರುವುದನ್ನು) ಭಾರತದಲ್ಲಿ ವಿರೋಧಿಸುವವರಲ್ಲಿ ಒಬ್ಬನಾಗಿಯೇ ನಾನು ಕೆಲವು ವಾಸ್ತವಿಕತೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಪಡುತ್ತಿದ್ದೇನೆ.

ನಮ್ಮವರು ಇಂಗ್ಲಿಷ್‌ನಲ್ಲಿ ಪುಸ್ತಕಗಳನ್ನು ಬರೆದಾಗ ಭಾರತೀಯರಾರೂ ರೇಗಲಿಲ್ಲ. ಎಂ. ಹಿರಿಯಣ್ಣಯ್ಯ, ಡಾ. ರಾಧಾಕೃಷ್ಣನ್, ವಿ. ರಾಘವನ್, ಡಾ. ಪಿ.ವಿ. ಕಾಣೆ, ಡಾ. ಕೃಷ್ಣಮೂರ್ತಿ ಮುಂತಾದವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದೇ ಅವರ ಇಂಗ್ಲಿಷ್ ಬರವಣಿಗೆಗಳಿಂದ. ಅವರು ಮಾಡಿದ್ದು ಮಹಾ ಅಪರಾಧವೆಂದು ನಾವು ಯಾರೂ ಹೇಳಿಯೂ ಇಲ್ಲ, ಹೇಳುತ್ತಲೂ ಇಲ್ಲ. ರಾಜಾಜಿಯವರು ತಮಿಳಿನಲ್ಲಿ ಬರೆದಿದ್ದ ರಾಮಾಯಣ, ಮಹಾಭಾರತಗಳನ್ನು ತಾವೇ ಇಂಗ್ಲಿಷ್ ಅನುವಾದ ಮಾಡಿದ್ದು ಹಾಗೂ ಅವು ಭಾರತೀಯ ವಿದ್ಯಾಭವನದಿಂದ ಪ್ರಕಟವಾದದ್ದು ಪ್ರಸಿದ್ಧವಾದ ಸಂಗತಿಯಷ್ಟೇ. ಹೆಚ್ಚಿನ ವಿದೇಶೀಯರಿಗೆ ರಾಮಾಯಣ, ಮಹಾಭಾರತಗಳ ಬಗೆಗೆ ಮೊಟ್ಟಮೊದಲು ಗೊತ್ತಾದದ್ದೇ ರಾಜಾಜಿಯವರ ಅನುವಾದಗಳಿಂದ. ಇಲ್ಲಿ ಅತ್ಯಂತ ಮುಖ್ಯವಾದ ಸಂಗತಿಯೆಂದರೆ, ಅನೇಕ ಸಾವಿರಾರು ಭಾರತೀಯರು ಸಹ ರಾಜಾಜಿಯವರ ಇಂಗ್ಲಿಷ್ ರಾಮಾಯಣ ಭಾರತಗಳನ್ನು ಇಷ್ಟಪಟ್ಟೇ ಓದಿದ್ದಾರೆ, ಓದುತ್ತಿದ್ದಾರೆ.

ಅಮರ್ ಚಿತ್ರಕಥಾ ಶ್ರೇಣಿಯು ಹಲವಾರು ಭಾರತದ ಭಾಷೆಗಳಲ್ಲಿ ಬರುವಂತೆ ಇಂಗ್ಲಿಷ್‌ನಲ್ಲಿಯೂ ಬರುತ್ತಿದೆಯಷ್ಟೆ. ಇಂಗ್ಲಿಷ್ ಮಾಧ್ಯಮದಲ್ಲಿ ಓದುವ ಮಕ್ಕಳು ಈ ಶ್ರೇಣಿಯನ್ನು ಇಷ್ಟಪಡುತ್ತಿದ್ದಾರೆ. ಇಂಗ್ಲಿಷ್‌ನಲ್ಲಿನ ಮಕ್ಕಳ ಕಥಾಪುಸ್ತಕಗಳಲ್ಲಿ ಮಕ್ಕಳು ತಲ್ಲೀನರಾಗಿರುವಾಗ ಅವರಿಂದ ಆ ಪುಸ್ತಕಗಳನ್ನು ಕಿತ್ತುಕೊಳ್ಳಲು ಯಾರಿಗಾದರೂ ಮನಸ್ಸು ಬರುತ್ತದೆಯೇ? ಅದು ಹಾಗಿರಲಿ, ನೂರಾರು ಮಕ್ಕಳ ಮಾಹಿತಿಪುಸ್ತಕಗಳು ಬಣ್ಣಬಣ್ಣದ ಚಿತ್ರಗಳಿಂದ ಇಂಗ್ಲಿಷ್‌ನಲ್ಲಿ ಬರುತ್ತಿವೆ. ನಮ್ಮ ಭಾರತೀಯ ಮಕ್ಕಳೇ ಅವುಗಳಲ್ಲಿ ಮುಳುಗಿ ಹೋಗಿರುತ್ತಾರೆ. ಅವುಗಳನ್ನು ರಚಿಸುವವರಿಗೆ `ನೀವು ಇಂಗ್ಲಿಷ್‌ನಲ್ಲಿ ಕಥೆಗಳನ್ನು ಬರೆಯಲೇಬೇಡಿ’ ಎಂದು ಹೇಗೆ ಹೇಳುವುದು? ಅಥವಾ, ಯಾಕೆ ಹೇಳಬೇಕು? ಇದನ್ನು ಗಮನಿಸಿದಾಗ ಇಂಗ್ಲಿಷ್‌ಅನ್ನು ಯಾವ ಹಿನ್ನೆಲೆಯಲ್ಲಿ ವಿರೋಧಿಸಬೇಕೆಂದು ಗೊತ್ತಾಗದೇ ಗೊಂದಲಕ್ಕೆ ಸಿಕ್ಕಿಕೊಳ್ಳಬೇಕಾಗುತ್ತದೆ.

ಹಿಂದಿ ಚಲನಚಿತ್ರ ತಾರೆಯರೆಲ್ಲಾ ಸಂದರ್ಶನ ಕಾರ್ಯಕ್ರಮ ನಡೆಸುವಾಗ, ಪ್ರಶ್ನೆಗಳಿಗೆ ಉತ್ತರಿಸುವುದು ಬಹುತೇಕ ಇಂಗ್ಲಿಷ್‌ನಲ್ಲಿಯೇ. ಸಂದರ್ಶಕರು ಹಿಂದಿಯಲ್ಲಿ ಪ್ರಶ್ನಿಸಿದರೂ ಉತ್ತರ ಅವರಿಗೆ ತಾರೆಯರಿಂದ ಸಿಕ್ಕುವುದು ಇಂಗ್ಲಿಷ್‌ನಲ್ಲಿಯೇ. ಕನ್ನಡಚಿತ್ರ ತಾರೆಯರು ಇನ್ನೂ ಅಷ್ಟೊಂದು ಅತಿರೇಕಕ್ಕೆ ಹೋಗಿಲ್ಲವಾದರೂ, ಇಂಗ್ಲಿಷ್‌ಅನ್ನು ಮಧ್ಯೆಮಧ್ಯೆ ತೂರಿಸುವುದು ಅವರಲ್ಲೂ ಇತ್ತೀಚೆಗೆ ಪ್ರಾರಂಭವಾಗಿದೆ.

ನಮ್ಮ ಭಾರತದಲ್ಲಿ ಮಾತ್ರವಲ್ಲ, ಇದು ಎಲ್ಲಾ ಕಡೆಯೂ ಆಗಿಬಿಟ್ಟಿದೆ. ಒಮ್ಮೆ ನಾನು ಬಿಬಿಸಿ ವಾರ್ತಾವಾಹಿನಿಯನ್ನು ನೋಡುತ್ತಿದ್ದೆ. ಫ್ರಾನ್ಸ್‌ನ ರಾಜಕೀಯ ವ್ಯಕ್ತಿಯೊಬ್ಬನು ಪತ್ರಕರ್ತ ಇಂಗ್ಲಿಷ್‌ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರವನ್ನು ಫ್ರೆಂಚ್‌ನಲ್ಲಿ ಕೊಡಲು ಪ್ರಾರಂಭಿಸಿದ. ಎರಡು ನಿಮಿಷಗಳಾಗಿರಬೇಕು, ಆತ ‘ಸಾರಿ, ಐ ವಾಸ್ ಸ್ಪೀಕಿಂಗ್ ಇನ್ ಫ್ರೆಂಚ್’ ಎಂದು ಕ್ಷಮೆ ಯಾಚಿಸಿ, ಇಂಗ್ಲಿಷ್‌ನಲ್ಲಿ ತನ್ನ ಪ್ರತಿಕ್ರಿಯೆಯನ್ನು ಮುಂದುವರಿಸಿದ. ಅಂದ ಹಾಗೆ, ನಾವು ಇದುವರೆಗೆ ಕೇಳಿದ್ದೇನು? ಫ್ರೆಂಚರಿಗೆ ಇಂಗ್ಲಿಷ್ ಕಂಡರೇ ಆಗುವುದಿಲ್ಲ ಎಂದು!

ಸಂಸ್ಕೃತಕ್ಕೆ ಸಂಬಂಧಿಸಿದಂತೆ ಅನುವಾದ, ಅಧ್ಯಯನ, ವಿಶ್ಲೇಷಣೆ, ಗ್ರಂಥಸಂಪಾದನೆ, ಪೀಠಿಕೆ, ಸ್ವತಂತ್ರಗ್ರಂಥಗಳು ಇತ್ಯಾದಿಗಳ ಮೂಲಕ ಇಂಗ್ಲಿಷ್‌ನಲ್ಲಿ ಬಂದ ವಾಙ್ಮಯ ಸಮುದ್ರೋಪಾದಿಯಲ್ಲಿದೆ. ಭಾರತದಲ್ಲಿಯೇ ಹೊರಡುತ್ತಿರುವ ಇಂಗ್ಲಿಷ್‌ನ ದಿನಪತ್ರಿಕೆಗಳು, ನಿಯತಕಾಲಿಕೆಗಳು ಇವುಗಳನ್ನೆಲ್ಲ ವಿರೋಧಿಸಬೇಕೆ? ಇಂಗ್ಲಿಷ್‌ನಲ್ಲಿ ಕಥೆ ಕಾದಂಬರಿಗಳನ್ನೂ ಲೇಖನಗಳನ್ನೂ ಬರೆಯುವವರ ಮನೆಯ ಮುಂದೆ ಉಪವಾಸ ಸತ್ಯಾಗ್ರಹ ಮಾಡಬೇಕೆ? ಆರ್.ಕೆ. ನಾರಾಯಣ್, ಆರ್.ಕೆ. ಲಕ್ಷ್ಮಣ್, ಹಾಸನದ ರಾಜಾರಾವ್, ಅರುಂಧತಿರಾಯ್ ಮುಂತಾದವರು ಇಂಗ್ಲಿಷ್‌ಅನ್ನು ತಮ್ಮ ಗುರುತಿಗಾಗಿ ಬಳಸಿದ್ದರ ಬಗೆಗೆ ನಮ್ಮ ನಿಲವು ನಿಷೇಧಾತ್ಮಕವಾಗಿರಬೇಕೆ? ಇಂಗ್ಲಿಷ್ ದಿನಪತ್ರಿಕೆಗಳ ಕಾರ್ಯಾಲಯಗಳ ಮುಂದೆ ಧಿಕ್ಕಾರ ಕೂಗುತ್ತಾ ಪ್ರದರ್ಶನ ಮಾಡಬೇಕೆ? ಇಂಗ್ಲಿಷ್‌ನಲ್ಲಿಯೇ ವಾರ್ತೆಗಳನ್ನು ಭಾರತದಲ್ಲಿ ಬಿತ್ತರಿಸುವ ವಾಹಿನಿಗಳನ್ನೆಲ್ಲ ಸ್ಥಗಿತಗೊಳಿಸಲು ಚಳವಳಿ ಮಾಡಬೇಕೆ?

ಇಂಗ್ಲಿಷ್‌ನಲ್ಲಿ ನಮ್ಮ ಭಾರತದ ಬಗೆಗೆ ನಮ್ಮವರೇ ಬರೆದ ಸಾವಿರಾರು ಅಧ್ಯಯನ ಯೋಗ್ಯ ಗ್ರಂಥಗಳಿವೆ. ಆದ್ದರಿಂದ ನಮ್ಮತನವನ್ನು ಇಂಗ್ಲಿಷ್ ಹಾಳುಮಾಡಿಬಿಡುತ್ತದೆಂದು ಹೇಳಲು ಸಾಧ್ಯವೇ ಇಲ್ಲ. ಇಂಗ್ಲಿಷ್‌ನ ಜೊತೆಗೆ ಸಂಸ್ಕೃತವಿದ್ದು, ರಾಜ್ಯಭಾಷೆಗಳನ್ನು ಇವೆರಡರ ಜೊತೆಗೆ ಸೇರಿಸಿದರೆ, ನಂಟೂ ಉಳಿಯುತ್ತದೆ, ಗಂಟೂ ಉಳಿಯುತ್ತದೆ. ನಂಟಸ್ತಿಕೆ, ಪ್ರಪಂಚದ ಎಲ್ಲ ಮೂಲೆಗಳ ಜೊತೆಗೆ. ಗಂಟುತನ, ನಮ್ಮ ಪರಂಪರೆಯದ್ದು.

ಇತರ ಭಾರತೀಯ ಭಾಷೆಗಳ ಪರಂಪರೆಯ ಅಧ್ಯಯನಕ್ಕೆ ನಮಗೆ ನೂರಾರು ಸಂಶೋಧನಲೇಖನಗಳ ಹಾಗೂ ಸಂಶೋಧನಗ್ರಂಥಗಳ ಮೂಲಕ ಪ್ರಯೋಜನವಾಗುವುದು ಆಯಾ ಭಾಷೆಗಳ ಅಧ್ಯಯನದಿಂದ ಹಾಗೂ ಇಂಗ್ಲಿಷ್‌ನಿಂದ. ಕನ್ನಡದ ಪರಂಪರೆಯನ್ನು ಅರ್ಥಮಾಡಿಕೊಳ್ಳಲು ಹೊರಡುವಾಗ ನಮಗೆ ಹತ್ತಿರವಾಗುವುದು, ಸಂಸ್ಕೃತ ಬಿಟ್ಟರೆ ಇಂಗ್ಲಿಷೇ ಹೊರತು ಹಿಂದಿಯಲ್ಲ. ಹೀಗಾಗಿ ರಾಜ್ಯಭಾಷೆ, ರಾಷ್ಟ್ರದ ಪ್ರಾಚೀನ ಭಾಷೆ (ಸಂಸ್ಕೃತ) ಮತ್ತು ಅಂತಾರಾಷ್ಟ್ರೀಯ ಭಾಷೆ (ಇಂಗ್ಲಿಷ್) ಎಂಬ ಸ್ವರೂಪದಲ್ಲಿ ತ್ರಿಭಾಷಾ ಸೂತ್ರ ನಮ್ಮ ಶಾಲೆಗಳಲ್ಲಿ ಅನಿವಾರ್ಯವಾದ ಭಾಷಾವಿಷಯಗಳಾಗುವುದು ಒಳ್ಳೆಯದು. ಆಗ ಭಾರತದಲ್ಲೆಲ್ಲಾ ಒಂದೇ ಭಾಷಾನೀತಿ ಇರುತ್ತದೆ.

ಭಾರತದ ನಿಜವಾದ ಪರಂಪರಾನುಗತವಾದ ಐಡೆಂಟಿಟಿಯೆಂದರೆ, ಸಂಸ್ಕೃತ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಂಸ್ಕೃತವು ಪ್ರತಿಯೊಂದು ಶತಮಾನದಲ್ಲಿಯೂ ಸಾವಿರಾರು ಗ್ರಂಥಗಳ ಸಾಹಿತ್ಯಿಕ ಹಾಗೂ ಶಾಸ್ತ್ರಸಂಬದ್ಧವಾದ ಸಮೃದ್ಧ ವಾಙ್ಮಯವನ್ನು ಸೃಷ್ಟಿ ಮಾಡಿದ್ದು ಹಾಗೂ ಈಗಲೂ ಮಾಡುತ್ತಿರುವುದರ ಬಗೆಗೆ ವಿದ್ವಾಂಸರು ಅನೇಕ ಲೇಖನಗಳಲ್ಲಿ ಹಾಗೂ ಭಾಷಣಗಳಲ್ಲಿ ಹೇಳಿದ್ದಾರೆ. ಇದನ್ನು ಲಂಬಿಸಬೇಕಾಗಿಲ್ಲ. ಇಂಗ್ಲಿಷ್ ಪ್ರಪಂಚದಾದ್ಯಂತ ಇರುವ ಭಾಷೆಯಾದ್ದರಿಂದ ಅದು ಭಾರತದದ ಐಡೆಂಟಿಟಿ ಆಗಲು ಸಾಧ್ಯವಿಲ್ಲ.

ರಾಜ್ಯಭಾಷೆಗಳ ಸಾಂಪ್ರತಿಕ ವ್ಯಾವಹಾರಿಕ ಸ್ವರೂಪವನ್ನು ಕಡೆಗಣಿಸದೆಯೇ ಅವುಗಳ ಪಳಮೆ, ಅವುಗಳಲ್ಲಿನ ಅಭಿಜಾತ ಮಹಾಕಾವ್ಯಗಳು, ಅವುಗಳಲ್ಲಿನ ಜಾನಪದ ಇವುಗಳ ಅಧ್ಯಯನಕ್ಕೆ ಒತ್ತು ಕೊಟ್ಟರೆ, ಭಾರತದ ಲಕ್ಷಾಂತರ ಎದೆಬಡಿತಗಳನ್ನು ಆಲಿಸುವ ಕೋಟ್ಯಂತರ ಮಂದಿ ಭವಿಷ್ಯದಲ್ಲಿ ತಯಾರಾಗುತ್ತಾರೆ.?

ಎಸ್. ಜಗನ್ನಾಥ, ಮೈಸೂರು

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ