ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಜುಲೈ 2019 > ನನ್ನ ಪೆನ್ನು

ನನ್ನ ಪೆನ್ನು

ನನಗೂ ಪೆನ್ನಿಗೂ ಮೊದಲಿನಿಂದಲೂ ಒಂದು ರೀತಿಯ ಅವಿನಾಭಾವ ಸಂಬಂಧ. ಆ ಮೊದಲು ಯಾವಾಗ ಅಂದರೆ, ನಾನು ಐದು-ಆರನೇ ಕ್ಲಾಸಿನಲ್ಲಿದ್ದಾಗ. ನಾನು ಉಪಯೋಗಿಸಿದ ಮೊದಲ ಪೆನ್ನು ಎಂದರೆ ‘ಅಶೋಕ’ ಪೆನ್ನು. ಆಗ ಅದು ತುಂಬಾ ಜನಪ್ರಿಯ ಬ್ರಾಂಡಿನ ಪೆನ್ನು. ಬೆಲೆಯಂತೂ ತೀರಾ ಅಗ್ಗ, ಒಂದೇ ರೂಪಾಯಿ. ಗಟ್ಟಿಮುಟ್ಟಾದ ನೂರಾರು ವರ್ಷವಾದರೂ ಒಡೆದು ಹೋಗದು, ಮುರಿದುಹೋಗದು ಎನಿಸುವಂತಹ ಪೆನ್ನು. ತುಂಬ ಇಂಕೂ ಹಿಡಿಸುತ್ತಿತ್ತು.

ಕ್ಲಾಸಿನಲ್ಲಿದ್ದ ಬೇರೆ ಹುಡುಗರು ತರುತ್ತಿದ್ದ ಬೇರೆಬೇರೆ ಬಣ್ಣಗಳ, ಬೇರೆಬೇರೆ ವಿನ್ಯಾಸಗಳ ಪೆನ್ನುಗಳನ್ನು ಕುತೂಹಲದಿಂದ ಗಮನಿಸುತ್ತಿದ್ದೆ. ಚಿಲ್ಲರೆ ಸಾಮಾನು ತರಲು ಅಮ್ಮ ಕೊಡುತ್ತಿದ ಚಿಲ್ಲರೆ ಕಾಸಿನಲ್ಲೂ ಮೂರು ಕಾಸು ಆರು ಕಾಸುಗಳ ಪುಡಿಗಾಸನ್ನು ‘ಹೊಡೆದು’ ಒಂದೋ ಒಂದೂವರೆ ರೂಪಾಯಿ ಸೇರಿದ ಕೂಡಲೇ ಹೊಸ ಪೆನ್ನೊಂದನ್ನು  ಖರೀದಿಸುತ್ತಿದ್ದೆ. ಒಂದು ವರ್ಷದಲ್ಲಿ ಸುಮಾರು ಐದಾರು ಪೆನ್ನುಗಳ ಒಡೆಯನಾದೆ. ಒಂದೊಂದು ದಿವಸ ಒಂದೊಂದು ಪೆನ್ನನ್ನು ಕ್ಲಾಸಿಗೆ ತೆಗೆದುಕೊಂಡು ಹೋಗುತ್ತಿದ್ದೆ. ಹೊಸ ಪೆನ್ನೊಂದನ್ನು ಮನೆಗೆ ತಂದ ತಕ್ಷಣ ನಾನು ಮಾಡುತ್ತಾ ಇದ್ದ ಮೊದಲ ಕೆಲಸ ಎಂದರೆ ಅದರ ಎಲ್ಲ ಭಾಗಗಳನ್ನೂ ಬಿಚ್ಚಿ ಒಂದೊಂದನ್ನೂ ಸೂಕ್ಷ್ಮವಾಗಿ ಗಮನಿಸಿ ಮತ್ತೆ ಜೋಡಿಸುತ್ತಿದ್ದದ್ದು. ಆ ಥರ ಜೋಡಿಸುವುದರಲ್ಲಿ ನನಗೆ ಸಿಗುತ್ತಿದ್ದ ಮಜವೇ ಬೇರೆ.

ಶುಲ್ಕರಹಿತ ರಿಪೇರಿ

ಒಮ್ಮೆ ನನ್ನ ಪಕ್ಕದಲ್ಲಿ ಕೂತಿದ್ದ ಗಿರೀಶ ತನ್ನ ಹೊಸ ಪೆನ್ನನ್ನು, ನನಗೆ ತೋರಿಸುವ ಸಂಭ್ರಮದಲ್ಲಿ ಕ್ಯಾಪ್ ತೆಗೆಯುತ್ತಿದ್ದಂತೆ ಬೀಳಿಸಿಬಿಟ್ಟ. ಅದನ್ನೆತ್ತಿಕೊಂಡ ಅವನ ಮುಖ ಬಾಡಿಹೋಯಿತು. ‘ಏನಾಯ್ತೋ’ ಎಂದೆ. ಪೆನ್ ತೋರಿಸಿದ. ನೋಡಿದರೆ ನಿಬ್ಬು ಬಗ್ಗಿಹೋಗಿತ್ತು. ‘ಎಂಟು ರೂಪಾಯಿ ಪೆನ್ನು ಕಣೋ. ನಮ್ಮಪ್ಪ ಬಾರಿಸಿಹಾಕಿಬಿಡ್ತಾರೆ’ ಎಂದ ಅಳುಮೋರೆ ಮಾಡಿಕೊಂಡು. ‘ಏ, ಇಷ್ಟೇ ತಾನೇ? ಇಲ್ಲಿ ಕೊಡು. ರಿಪೇರಿ ಮಾಡಿಕೊಂಡು ನಾಳೆ ತರುತ್ತೇನೆ’ ಎಂದೆ. ಮನೆಗೆ ಹೋದೆ. ಪುಸ್ತಕದ ಮೇಲೆ ಮುಳ್ಳನ್ನಿಟ್ಟು ಮೆಲ್ಲಗೆ ಒತ್ತಿದೆ. ಬಗ್ಗಿದ್ದ ಮುಳ್ಳೇನೋ ನೇರವಾಯಿತು. ಆದರೆ ಮುಳ್ಳಿನ ಸೀಳಿನ ಎಡ ಬಲ ಭಾಗಗಳು ಸ್ವಲ್ಪ ಮೇಲೆ-ಕೆಳಗೆ ಆಗಿದ್ದವು. ಬ್ಲೇಡ್ ಒಂದನ್ನು ತೆಗೆದುಕೊಂಡು ಆ ಸೀಳಿನಲ್ಲಿ ತೂರಿಸಿ ಒಂದೇ ಪಂಕ್ತಿಯಲ್ಲಿ ಕೂರಿಸಿದೆ. ಆದರೆ ಬರೆಯುವುದಕ್ಕೆ ಹೋದರೆ ‘ಕರಕರ’ ಶಬ್ದ ಮಾಡಿತು. ಸ್ವಲ್ಪ ಉಜ್ಜಿದರೆ ಸರಿಹೋಗುತ್ತದೆ ಎನ್ನಿಸಿತು. ನೆಲದ ಮೇಲೆ ಉಜ್ಜಿದರೆ ‘ಕರಕರ’ ಇನ್ನೂ ಜಾಸ್ತಿಯಾಗಬಹುದು ಎನ್ನಿಸಿ ಕನ್ನಡಿಯನ್ನು ತೆಗೆದುಕೊಂಡು ಅದರ ಮೇಲೆ ಉಜ್ಜಿಯೇ ಉಜ್ಜಿದೆ. ಸಲೀಸಾಗಿ ಬರೆಯಿತು. ಏನನ್ನೋ ಸಾಧಿಸಿದ ಖುಷಿ. ಮಾರನೆಯ ದಿನ ಗಿರೀಶನಿಗೆ ಕೊಟ್ಟೆ. ಅವನ ಮುಖ ಮೊರದಗಲವಾಯಿತು. ನನ್ನ ಮುಖವೂ ಅರಳಿತು. ಅದು ಹೇಗೋ ಗಿರೀಶನ ಪೆನ್ನು ರಿಪೇರಿಯಾದ ಸುದ್ದಿ ಬಹಳ ಬೇಗ ಕ್ಲಾಸಿನ ತುಂಬ ಹರಡಿತು. ಆವತ್ತೇ ಎರಡು ಮೂರು ಪೆನ್ನುಗಳು ರಿಪೇರಿಗೆ ಬಂದವು. ಇಂಕು ಧುಮುಕುತ್ತೆ, ಇಂಕು ಸರಿಯಾಗಿ ಬರುತ್ತಾ ಇಲ್ಲ, ಲೀಕ್ ಆಗ್ತಾ ಇದೆ ಎಂದು ಕಂಪ್ಲೈಂಟುಗಳು. ಎಲ್ಲರ ಪೆನ್ನುಗಳನ್ನೂ ಮನೆಗೆ ಕೊಂಡೊಯ್ದೆ. ಒಂದಕ್ಕೆ ನಾಲಗೆ ಬಾಗಿದ್ದರೆ, ಇನ್ನೊಂದಕ್ಕೆ ನಾಲಿಗೆಯ ಬೆನ್ನಿನ ಮೇಲಿನ ಗೆರೆಗಳಲ್ಲಿ ಕೊಳೆ ತುಂಬಿಕೊಂಡಿತ್ತು, ಮತ್ತೊಂದರಲ್ಲಿ ತೆರೆದಿಟ್ಟದ್ದರಿಂದ ಇಂಕು ಒಣಗಿಹೋಗಿ ಹರಿಯದಾಗಿತ್ತು. ಬಳಪವೊಂದರಿಂದ ಪೆನ್ನಿನ ನಾಲಗೆಯನ್ನು ತಯಾರಿಸಿ ಅದರ ಮೇಲೆ ಎರಡು ಆಳವಾದ ಗೆರೆಗಳನ್ನು ಮೂಡಿಸಿ ಮತ್ತೆ ಜೋಡಿಸಿ ಬರೆದೆ. ಸರಿಹೋಯಿತು. ಇನ್ನೊಂದರ ನಾಲಗೆಯ ಬೆನ್ನಮೇಲಿನ ಗೆರೆಯಲ್ಲಿ ಕೂತಿದ್ದ ಕೊಳೆಯನ್ನು ಸೂಜಿಯಿಂದ ತೆಗೆದೆ. ಮತ್ತೊಂದರ ತಿರುಪಿಗೆ ಸ್ವಲ್ಪ ಅಮೃತಾಂಜನವನ್ನು ಮೆತ್ತಿ ತಿರುಗಿಸಿದೆ. ಮೂರೂ ಪೆನ್ನು ಸರಾಗವಾಗಿ (ಆಡುಮಾತಿನಲ್ಲಿ ಬೆಣ್ಣೆಯಂತೆ) ಬರೆದವು. ಗೆಳೆಯರೆಲ್ಲರೂ ನಾನೇನೋ ಮ್ಯಾಜಿಕ್ ಮಾಡಿಬಿಟ್ಟೆನೆನ್ನುವಂತೆ ನನ್ನನ್ನು ನೋಡಿದ ರೀತಿಗೆ ನಾನು ದೊಡ್ಡ ಹೀರೋ ಆಗಿಬಿಟ್ಟೆನೆನ್ನುವ ಅನುಭವ. ಕೆಲವು ಹುಡುಗರಿಗಂತೂ ಪೆನ್ನಿಗೆ ಸರಿಯಾಗಿ ಇಂಕು ತುಂಬುವುದಕ್ಕೂ ಬರುತ್ತಾ ಇರಲಿಲ್ಲ; ನಾನೇ ತುಂಬಿಕೊಡುತ್ತಿದ್ದೆ. ಒಟ್ಟಿನಲ್ಲಿ ಸಂಬಳವಿಲ್ಲದ ರಿಪೇರಿ ಕೆಲಸ ಪರ್ಮನೆಂಟಾಗಿ ಸಿಕ್ಕಿಬಿಟ್ಟಿತ್ತು.

‘ಸ್ಕೂಲ್ ಮಾಸ್ಟರ್’

ಹೆಚ್ಚುಕಡಮೆ ಇದೇ ಸಮಯಕ್ಕೆ (ಆಗ ಹೈಸ್ಕೂಲಿನಲ್ಲಿದ್ದೆ) ಒಂದು ಕನ್ನಡ ಸಿನೆಮಾ ಬಿಡುಗಡೆಯಾಯಿತು. ಹೆಸರು ‘ಸ್ಕೂಲ್ ಮಾಸ್ಟರ್’. ಮೇಷ್ಟರು ಹಾಗೆ ಹೋಗಿ ಹೀಗೆ ಬರುವಷ್ಟರಲ್ಲಿ ಮುಂದಿನ ಬೆಂಚಿನ ಒಬ್ಬ ಹುಡುಗ ಅವರ ಪೆನ್ನನ್ನೇ ಕದ್ದುಬಿಡ್ತಾನೆ. ಪೆನ್ನು ಕಳ್ಳತನವಾಗಿರುವುದನ್ನು ತಿಳಿದು ಕೊಂಚ ಸಮಯದ ನಂತರ ‘ಯಾರಿಗಾದರೂ ಫೌಂಟನ್ ಪೆನ್ನಿಗೆ ಇಂಕು ತುಂಬುವುದು ಗೊತ್ತಾ?’ ಎಂದು ಕೇಳುತ್ತಾರೆ. ‘ಓ ಗೊತ್ತು. ಕ್ಯಾಪು ತೆಗೆಯೋದು, ಮೇಲಿಂದ ತುಂಬೋದು’ ಎಂದದ್ದಕ್ಕೆ ‘ಅಲ್ಲ, ಅಲ್ಲ, ಹಾಗಲ್ಲ’ ಎಂದ ಮೇಷ್ಟರಿಗೆ ‘ಅಯ್ಯೋ ಹಾಗೇನೇ ಸಾರ್. ನೋಡಿ ಬೇಕಾದರೆ ತೋರಿಸ್ತೀನಿ’ ಎಂದು ಅವರಿಗೆ ತನ್ನ ಜಾಣ್ಮೆಯನ್ನು ಪ್ರದರ್ಶಿಸುವ ಹುಮ್ಮಸ್ಸಿನಲ್ಲಿ ಅದಾಗ ಕದ್ದಿದ್ದ ಪೆನ್ನನ್ನು ತೆಗೆದ…. ‘ಕೇಳಿದ್ದರೆ ನಾನೇ ಕೊಡ್ತಿದ್ದೆನಲ್ಲಪ್ಪಾ’ ಎಂದಾಗ ‘ಇಲ್ಲ ಸಾರ್, ಇನ್ನು ಮೇಲೆ ಕದಿಯೋಲ್ಲ’ ಎಂದು ತಪ್ಪೊಪ್ಪಿಕೊಳ್ಳುತ್ತಾನೆ. ಮೇಷ್ಟರು ‘ತೊಗೊ. ಇದನ್ನ ನೀನೇ ಇಟ್ಟುಕೋ’ ಎಂದು ಪೆನ್ನನ್ನು ಕೊಟ್ಟು ‘ನೀನು ಖಂಡಿತ ಕದಿಯೋಲ್ಲ ಎಂದು ನನಗೆ ಗೊತ್ತು. ನೀನು ಕದಿಯೋರನ್ನೆಲ್ಲಾ ಹಿಡಿಯೋನಾಗ್ತೀಯ’ ಎಂದು ಹರಸುತ್ತಾರೆ. ಮುಂದೊಂದು ದಿನ ಅದೇ ಹುಡುಗ ಪೊಲೀಸ್ ಆಫೀಸರ್ ಆಗುತ್ತಾನೆ. ಹರಾಜಿಗೆ ಬಂದಿದ್ದ ಮೇಷ್ಟರ ಮನೆಯನ್ನು ತಾನೇ ಕೊಂಡು, ಮೇಷ್ಟರನ್ನು ಅದೇ ಮನೆಗೆ ಕರೆತರುತ್ತಾನೆ. ಪೇಪರಿಗೆ ಸಹಿ ಹಾಕಲು ಪೆನ್ನನ್ನು ಕೇಳಿದಾಗ ತನ್ನ ಜೇಬಿನಿಂದ ಪೆನ್ ತೆಗೆದುಕೊಡುತ್ತಾನೆ. ಮೇಷ್ಟರಿಗೆ ಅದರ ಗುರುತು ಹತ್ತುತ್ತದೆ. ಶಿಷ್ಯನ ಗುರುತೂ ಹತ್ತುತ್ತದೆ. ನನ್ನ ಕಣ್ಣಿಂದ ಧಾರಾಕಾರವಾಗಿ ಕಂಬನಿ ಸುರಿದದ್ದನ್ನು ನೆನಪಿಸಿಕೊಂಡರೆ ಈಗಲೂ ನನ್ನ ಕಣ್ಣಾಲಿಗಳು ತುಂಬಿ ಬರುತ್ತವೆ. ಬಹುಶಃ, ಈ ಒಂದು ದೃಶ್ಯ ನನ್ನ ಪುಟ್ಟ ಹೃದಂiÀiದಲ್ಲಿ ಗುಪ್ತಗಾಮಿನಿಯಾಗಿ ಹರಿದು ಪೆನ್ನಿನ ಬಗ್ಗೆ ನನಗೆ ಪ್ರೀತಿ ವ್ಯಾಮೋಹಗಳು ಮೂಡುವಂತಹ ಪ್ರಭಾವವನ್ನೇ ಬೀರಿದೆ.

‘ಪೆನ್ ಡಾಕ್ಟರ್’

ಮತ್ತೆ ರಿಪೇರಿಗೆ ಬರುತ್ತೇನೆ. ಪೆನ್ ರಿಪೇರಿಗೆ ಬೇಕಾದ ಸಲಕರಣಗಳನ್ನೆಲ್ಲ ಇಟ್ಟುಕೊಳ್ಳುವುದಕ್ಕೆ ಒಂದು ಸಣ್ಣ ಪೆಟ್ಟಿಗೆಯನ್ನೇ ಇಟ್ಟುಕೊಂಡೆ. ಬಿಸಾಡುವ ಪೆನ್ನುಗಳನ್ನು ನಾನೇ ಇಸಿದುಕೊಂಡು ಸ್ಪೇರ್ ಪಾರ್ಟ್‍ಗಳನ್ನು ಸಂಗ್ರಹಿಸತೊಡಗಿದೆ. ಜೊತೆಗೆ ನೋಸ್ ಪ್ಲೇಯರ್, ಬ್ಲೇಡುಗಳು, ಬಳಪಗಳು (ನಾಲಗೆಗಳನ್ನು ತಯಾರಿಸಲು), ಗುಂಡುಪಿನ್ನುಗಳು, ನಯವಾದ ಹತ್ತಿ ಬಟ್ಟೆ, ಒಂದು ಕನ್ನಡಿಯ ಚೂರು, ಉಪಯೋಗಿಸಿದ ಉಪ್ಪುಕಾಗದ ಇತ್ಯಾದಿಗಳು ಆ ಪೆಟ್ಟಿಗೆಯಲ್ಲಿ ಸೇರಿಕೊಂಡವು. ನಾನು ‘ಪೆನ್ ಡಾಕ್ಟರ್’ ಎಂಬ ಅಘೋಷಿತ ಬಿರುದಿಗೆ ಅಯಾಚಿತವಾಗಿ ಭಾಜನನಾದೆ.

ಒಂದು ಪೆನ್ನು, ನೆನಪು ನೂರಾರು

ಅರವತ್ತು ವರ್ಷಗಳ ಹಿಂದಿನ ಮಾತು. ಮಾರನೆಯ ದಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಶುರು. ಚೆನ್ನಾಗಿ ಓದಿದ್ದೆ. ದೇವರ ಮನೆಯಲ್ಲಿದ್ದ ಅಮ್ಮ ನನ್ನನ್ನು ಕರೆದಳು. ದೇವರ ಮನೆಯ (ಒಂದು ಮೂಲೇಲಿ ಚಿಕ್ಕ ಮಣೆಯ ಮೇಲೆ ಒಂದೆರಡು ದೇವರ ಫೋಟೋಗಳು, ಅದರ ಮುಂದೆ ಎರಡು ಮೂರು ವಿಗ್ರಹಗಳು. ಅದೇ ದೇವರ ಮನೆ) ಮುಂದೆ ನಿಂತು ‘ಏನಮ್ಮಾ’ ಎಂದೆ. ‘ಕಣ್ಣು ಮುಚ್ಚಿಕೋ’ ಎಂದಳು. ಮುಚ್ಚಿಕೊಂಡೆ. ಕೈ ಹಿಡಿ ಎಂದಳು. ಹಿಡಿದೆ. ಕೈಯಲ್ಲಿ ಏನೋ ಬಿತ್ತು. ನೋಡುವಾಸೆ. ಕಣ್ಣು ತೆಗಿ ಎಂದು ಅಮ್ಮ ಹೇಳುವವರೆಗೂ ಕಾದೆ. ‘ಕಣ್ಣು ತೆಗಿ’ ಎಂದು ಹೇಳಿದ ಮೇಲೆ ಕಣ್ಣು ತೆಗೆದು ನೋಡಿದೆ. ಗಿಣಿ ಹಸಿರು ಬಣ್ಣದ ‘ಪೈಲಟ್’ ಪೆನ್ನು! ಅದರ ಬೆಲೆ ಹದಿನೈದು ರೂಪಾಯಿ ಎಂದು ನನಗೆ ಗೊತ್ತು. ಆಗ ನಮ್ಮಮ್ಮನಿಗೆ ಬರುತ್ತಿದ್ದ ಸಂಬಳ ಅರವತ್ತು ರೂಪಾಯಿ. ನನಗೋ ಎಲ್ಲೆ ಮೀರಿದ ಸಂತೋಷ. ಪೆನ್ನನ್ನು ಮುಟ್ಟಿಮುಟ್ಟಿ ಈ ಕಡೆ ಆ ಕಡೆ ತಿರುಗಿಸಿ ನೋಡಿದ್ದೇ ನೋಡಿದ್ದು, ಸಂಭ್ರಮ ಪಟ್ಟಿದ್ದೇ ಪಟ್ಟಿದ್ದು. ‘ನೋಡಪ್ಪಾ, ನಿಮ್ಮಪ್ಪ ತೀರಿಕೊಂಡ ಮೇಲೆ ಅವರ ಹತ್ತಿರ ಇದ್ದ ಪೆನ್ನನ್ನು ನಿಮ್ಮ ಚಿಕ್ಕಪ್ಪ ಇಟ್ಟುಕೊಂಡರು. ಎಷ್ಟು ಕೇಳಿದರೂ ನಮಗೆ ಕೊಡಲಿಲ್ಲ. ‘ನಾನು ಇದಕ್ಕಿಂತಲೂ ಒಳ್ಳೆ ಪೆನ್ನನ್ನು ನನ್ನ ಮಗನಿಗೆ ಕೊಡಿಸ್ತೀನಿ’ ಎಂದು ಆವತ್ತೇ ಶಪಥ ಮಾಡಿದೆ. ತೊಗೋಪ್ಪ. ಚೆನ್ನಾಗಿ ಬರಿ, ಒಳ್ಳೇದಾಗಲಿ’ ಎಂದು ಆಶೀರ್ವಾದ ಮಾಡುತ್ತಿದ್ದ ಹಾಗೆ ಅಮ್ಮನ ಕಣ್ಣುಗಳಿಂದ ನಾಲ್ಕಾರು ತೊಟ್ಟು ಕಣ್ಣೀರು ಹರಿಯಿತು. ನಾನೂ ಅತ್ತುಬಿಟ್ಟೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಈವತ್ತಿಗೂ ಆ ಪೆನ್ನಿನಲ್ಲೇ ಬರೆಯುತ್ತಿದ್ದೇನೆ. ಅದರ ಕ್ಲಿಪ್ಪು ಬಿದ್ದುಹೋಗಿದೆ. ಕ್ಯಾಪಿನ ಮೇಲಿನ ಗಿಲೀಟು ಬಣ್ಣವೆಲ್ಲ ಸವೆದು ನುಣುಪಾಗಿದ್ದ ಅದರ ಮೈ ಒರಟೊರಟಾಗಿದೆ. ಆರಂಕಿಯ ಸಂಬಳ ತರುವ ನನ್ನ ಮಗ ‘ಇದೇನು ಡ್ಯಾಡೀ, ಈ ಹಳೇ ಪೆನ್ನನ್ನೇ ಇನ್ನೂ ಇಟ್ಟುಕೊಂಡಿದ್ದೀರ, ಹೊಸಾ ಪೆನ್ ತಂದುಕೊಡ್ತೀನಿ’ ಎಂದ. ನನ್ನ ಪೆನ್ನಿನ ಹಿಂದಿನ ಕಥೆಯನ್ನು ಅವನಿಗೆ ಹೇಳಿದ ಮೇಲೆ ಪಾಪ, ಹೊಸ ಪೆನ್ ಕೊಡಿಸುವ ಆಸೆಯನ್ನು ಬಿಟ್ಟು ಮೌನಿಯಾದ. ಅಂದಿನಿಂದ ಪೆನ್ನಿನ ಮೇಲೆ ಒಂದು ರೀತಿಯ ಗೌರವವೂ ಮೂಡಿತು.

‘ಗ್ಯಾಸ್’ ಕಾಲೇಜು ಅನುಭವ

‘ಗ್ಯಾಸ್’ (Government Arts and Science) ಕಾಲೇಜಲ್ಲಿ ಓದುವಾಗ ಪೆನ್ನಿನ ಮೇಲೆ ಹೆಸರನ್ನು ಕೆತ್ತಿಕೊಡುವವನೊಬ್ಬ ಬಂದಿದ್ದ. ಎರಡು ಕಾಲುಗಳ ನಡುವೆ ಪೆನ್ನನ್ನು ಸಿಕ್ಕಿಸಿಕೊಂಡು ಒಂದೆರಡು ನಿಮಿಷಗಳಲ್ಲಿ ಪೆನ್ನಿನ ಮೇಲೆ ಸುಂದರವಾಗಿ ಹೆಸರನ್ನು ಕೆತ್ತುತ್ತಿದ್ದ. ನನಗೂ ನನ್ನ ಪೈಲಟ್ ಪೆನ್ನಿನ ಮೇಲೆ ಹೆಸರು ಬರೆಸುವಾಸೆ. ಬರೀ ಎಂಟಾಣೆ ಮಜೂರಿ. ಆದರೆ ಅವನ ಕೈಗೆ ಅದನ್ನು ಕೊಡುವುದಕ್ಕೆ ಭಯ, ಎಲ್ಲಿ ತೂತು ಮಾಡಿ ಹಾಳುಮಾಡಿಬಿಡುತ್ತಾನೋ ಎಂದು. ಹೆಸರನ್ನು ಬರೆಯಿಸಲೋ ಬೇಡವೋ ಎಂದು ನಿರ್ಧರಿಸಲಾಗಲಿಲ್ಲ. ಏಳೆಂಟು ಪೆನ್ನುಗಳಿಗೆ ಹೆಸರುಗಳನ್ನು ಕೆತ್ತಿಕೊಡುವವರೆಗೂ ನೋಡುತ್ತ ನಿಂತಿದ್ದೆ. ಕಡೆಗೂ ಬರೆಸುವ ಆಸೆಯೇ ಗೆದ್ದು ಚೀಟಿಯೊಂದರಲ್ಲಿ ನನ್ನ ಹೆಸರನ್ನು ಬರೆದು ಕೊಟ್ಟೆ. ಅವನು ಪೆನ್ನನ್ನು ಕಾಲುಗಳ ಮಧ್ಯೆ ಸಿಕ್ಕಿಸಿಕೊಳ್ಳುತ್ತಿದ್ದ ಹಾಗೇ ‘ಬೇಡ ಬೇಡ’ ಎಂದು ಬಾಯಿ ಬಿಡಬೇಕೆನ್ನುವಷ್ಟರಲ್ಲಿ ಅವನು ಸಣ್ಣ ಉಳಿಯೊಂದನ್ನು ಅದರ ಮೇಲಿಟ್ಟು ಕೆತ್ತುವುದಕ್ಕೆ ಶುರು ಮಾಡಿಯೇಬಿಟ್ಟಿದ್ದ. ಪೂರ್ತಿ ಹೆಸರು ಕೆತ್ತುವವರೆಗೂ ನನ್ನ ಜೀವ ಡವಡವ ಹೊಡೆದುಕೊಳ್ಳುತ್ತಿತ್ತು. ಕೆತ್ತಿದ ಮೇಲೆ ಹಳದಿ ಬಣ್ಣವನ್ನು ಹೆಸರೊಳಗೆ ತುಂಬಿ ನನ್ನ ಕೈಗೆ ಕೊಟ್ಟ. ಹೋದ ಜೀವ ಬಂದ ಅನುಭವ. ತುಂಬ ಸುಂದರವಾಗಿ ಕೆತ್ತಿದ್ದ. ಅವತ್ತಿನಿಂದ ಅದನ್ನು ಬೇರೆ ಯಾರ ಕೈಗೂ ಕೊಟ್ಟಿಲ್ಲ.

ನೆಟ್ ಬನಿಯನ್ ತೂತು

ಅದೊಂದು ದಿನ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಸಹಪ್ರಯಾಣಿಕನೊಬ್ಬ ತನ್ನ ಜೇಬಿಗೆ ಸಿಕ್ಕಿಸಿಕೊಂಡಿದ್ದ ಪೆನ್ನನ್ನು ಯಾವಾಗಲೋ ಬೀಳಿಸಿಕೊಂಡು ‘ನಿನ್ನೆ ತಾನೇ ನನ್ನ ಪೆನ್ನನ್ನು ಯಾವನೋ ಎಗರಿಸಿಬಿಟ್ಟ. ಇನ್ನೊಂದು ಪೆನ್ ತೊಗೊಂಡೆ. ಅದೂ ಈವತ್ತು ಬಿದ್ದುಹೋಯಿತು’ ಎಂದು ಹಲುಬುತ್ತಿದ್ದುದನ್ನು ನೋಡಿದೆ. ಆವತ್ತಿನಿಂದ ನನ್ನ ಪೆನ್ನನ್ನು ನೆಟ್ ಬನಿಯನ್‍ಗೆ ಸಿಕ್ಕಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡೆ. ಒಂದೇ ತಿಂಗಳಲ್ಲಿ ನೆಟ್ ಬನಿಯನ್ ಎದೆಯ ಭಾಗದಲ್ಲಿ ತೂತಾಯಿತು. ಸಿಕ್ಕಿಸಿಕೊಳ್ಳುವುದೇ ಕಷ್ಟವಾಯಿತು. ಸರಿ, ನೆಟ್‍ಬನಿಯನ್ ಒಳಭಾಗದಲ್ಲಿ ಕಿರುಬೆರಳಿನಗಲದ ಒಂದು ಸಣ್ಣ ಜೇಬನ್ನು ಹೊಲಿಸಿದೆ. ನನ್ನ ಪೆನ್ನು ನನ್ನ ಹೃದಯಕ್ಕೆ ಇನ್ನೂ ಹತ್ತಿರವಾಯಿತಷ್ಟೇ ಅಲ್ಲದೆ, ಕಳೆದುಹೋಗುವ ಭಯವೂ ಇಲ್ಲವಾಯಿತು.

‘ಥಿಂಕ್ ಬಿಫೋರ್ ಇಂಕ್’

ವಯಸ್ಸಾಗುತ್ತಿದ್ದಂತೆ ಪೆನ್ನುಗಳೆಡೆಗಿನ ಸೆಳೆತ ಹೆಚ್ಚಾಯಿತು. ಅವುಗಳ ಮೇಲಿನ ಪ್ರೀತಿ ವ್ಯಾಮೋಹ ಆಕರ್ಷಣೆಗಳು ಜಾಸ್ತಿಯಾದವು. ಅವಕ್ಕೂ ಜೀವವಿದೆ, ಅವು ನಮಗೆ ಏನನ್ನೋ ಹೇಳುತ್ತವೆ ಅನ್ನಿಸತೊಡಗಿತು. ಕ್ರಮೇಣ ಅವು ಹೇಳುವುದೆಲ್ಲ ನನಗೆ ಅರ್ಥವಾಗತೊಡಗಿತು. ಅದರ ನಾಲಗೆ ಬರೀ ಇಂಕಿನ ಹರಿವನ್ನು ನಿಯಂತ್ರಿಸುವುದಷ್ಟೇ ಅಲ್ಲ, ‘ಥಿಂಕ್ ಬಿಫೋóರ್ ಇಂಕ್’ ಎನ್ನುವ ಗಾದೆಯ ಮಾತಿನಂತೆ ಬರೆಯುವ ಮುಂಚೆ ಬರವಣಿಗೆಯನ್ನು ನಿಯಂತ್ರಿಸಬೇಕು ಎನ್ನುವುದನ್ನೂ ನಮಗೆ ಒತ್ತಿಒತ್ತಿ ಹೇಳುತ್ತದೆ. ಇಂಕನ್ನು ಹಿಡಿದಿಟ್ಟುಕೊಳ್ಳುವ ನಳಿಕೆ (barrel)ಯಲ್ಲಿ ಇಂಕು ಮುಗಿಯುತ್ತ ಬಂದರೂ ಬರೆಯುವುದನ್ನು ಮುಂದುವರಿಸಿದರೆ ‘ಆರುವ ಮುನ್ನ ದೀಪ ಪ್ರಜ್ವಲವಾಗಿ ಬೆಳಗುತ್ತದೆ’ ಎನ್ನುವ ಹಾಗೆ ಒಮ್ಮೆಗೇ ಇಂಕು ಧುಮುಕಿಬಿಡುತ್ತದೆ; ಅಲ್ಲಿಯವರೆಗೂ ಬರೆದದ್ದೆಲ್ಲ ವ್ಯರ್ಥ. ನಾಲಗೆ ಮತ್ತು ಮುಳ್ಳು ಸಮರಸದಿಂದ ಜೊತೆಯಲ್ಲಿರಬೇಕಾದರೆ ಅದಕ್ಕೆ ಒಂದು ಹೋಲ್ಡರ್ ಇರಲೇಬೇಕು. ಬ್ಯಾರೆಲ್ಲಿನಲ್ಲಿನ ಇಂಕು, ಮುಳ್ಳು ಮತ್ತು ನಾಲಗೆಗಳನ್ನು, ಮನೆ ಯಜಮಾನನಂತೆ ಒಟ್ಟಿಗೆ ಹಿಡಿದಿಟ್ಟುಕೊಳ್ಳುವುದೇ ಈ ಹೋಲ್ಡರ್‍ನ ಕೆಲಸ. ಯಾರು ಏನೇ ಕೆಲಸ ಮಾಡಿದರೂ ಒಬ್ಬರ ಹಿಡಿತದಲ್ಲಿದ್ದರೆ ತಾನೇ ಕೆಲಸ ಸುಗಮವಾಗಿ ಸಾಗುವುದು? ಇನ್ನು ಕ್ಯಾಪು ಎಂಬ ಜೀವರಕ್ಷಕ. ಕ್ಯಾಪು ಹಾಕದಿದ್ದರೆ ಇಂಕು ಒಣಗಿಹೋಗುತ್ತದೆ. ಇಂಕು ಒಣಗಿಹೋದರೆ ಇಂಕು ಹರಿಯುವುದಿಲ್ಲ. ಇಂಕು ಹರಿಯದಿದ್ದರೆ? ಹೃದಯದಲ್ಲಿನ ರಕ್ತ ಹೆಪ್ಪುಗಟ್ಟಿ ರಕ್ತನಾಳಗಳು ಬ್ಲಾಕ್ ಆಗಿ ಪ್ರಾಣವೇ ಹೋಗುವಂತೆ ಇಂಕೂ ಹೆಪ್ಪುಗಟ್ಟಿ ಪೆನ್ನಿನ ಜೀವವೇ ಹಾರಿಹೋಗುತ್ತದೆ. ಹಾಗೆಂದು ಆತಂಕ ಪಡಬೇಕಾಗಿಲ್ಲ. ತೆರೆದ ಹೃದಯದ ಚಿಕಿತ್ಸೆಯನ್ನೇನೂ ಮಾಡಬೇಕಾಗಿಲ್ಲವಾದರೂ ಎಲ್ಲ ಬಿಡಿ ಭಾಗಗಳನ್ನೂ ಬಿಚ್ಚಿ ನೀರಿನಲ್ಲಿ ನೆನೆಸಿ ಚೆನ್ನಾಗಿ ತೊಳೆದರೆ ಸಾಕು, ಹಾರಿಹೋದ ಜೀವ ಮತ್ತೆ ಬಂದು ಸೇರಿಕೊಳ್ಳುತ್ತದೆ. ಇನ್ನು ನಿಬ್ಬು (nib), ಅಂದರೆ ಬರೆಯುವ ಮುಖ್ಯ ಅಂಗ ಮುಳ್ಳು. ಮುಳ್ಳುಗಿಡದ ಗಟ್ಟಿಮುಳ್ಳಿನಿಂದ ಹಿಡಿದು ಸ್ಟೀಲ್, ಚಿನ್ನ, ಪ್ಲಾಟಿನಂ, ಇರಿಡಿಯಂ ಮುಂತಾದ ಅನೇಕ ವಸ್ತುಗಳಿಂದ ಮಾಡಲ್ಪಟ್ಟ ಮುಳ್ಳುಗಳಿಂದಲೂ ಬರೆಯಬಹುದಾದರೂ, ಚಿನ್ನದ ಮುಳ್ಳಿನಿಂದ

ಬರೆದಾಕ್ಷಣಕ್ಕೆ ಬರೆದದ್ದಕ್ಕೆ ಶ್ರೇಷ್ಠತೆ ಲಭ್ಯವಾಗುತ್ತದೆ ಎನ್ನುವುದು ಕೆಲವರ ಭ್ರಮೆಯಷ್ಟೇ. ಈ ಲೋಕದಲ್ಲಿ, ಇಂಥ ಭ್ರಮೆಯನ್ನುಳ್ಳ ಸ್ವರ್ಣಲೇಪಿತ ಪೆನ್ನುಗಳ ಪ್ರತಿಷ್ಠಿತ ಒಡೆಯರು ಬೇಕಾದಷ್ಟು ಸಂಖ್ಯೆಯಲ್ಲಿರಬಹುದು. ಕೊನೆಯದಾಗಿ ಕ್ಯಾಪಿಗೆ ಜೋಡಿಸಿರುವ ಕ್ಲಿಪ್ಪು (clip). ಈ ಕ್ಲಿಪ್ಪು ಎಂಬ ಕ್ಲಿಪ್ಪು ಪೆನ್ನಿಗೆ ಹೊರಳಲು ಅವಕಾಶ ಮಾಡಿಕೊಟ್ಟರೂ, ಉರುಳಿಹೋಗದಂತೆ ನೋಡಿಕೊಳ್ಳುವ ಅಂಕುಶ.

ಎತ್ತಣಿಂದೆತ್ತ ಸಂಬಂಧ

ಇಂಕು ಧುಮುಕುವುದು ಎಂದ ತಕ್ಷಣ ನೆನಪಿಗೆ ಬಂದ ಸ್ವಾರಸ್ಯಕರವಾದ ಒಂದು ಸಣ್ಣ ಘಟನೆಯನ್ನು ಹೇಳಿ ಮುಂದುವರಿಯುತ್ತೇನೆ. ಚಾಮರಾಜಪೇಟೆಯಲ್ಲಿ ಹಾರನಹಳ್ಳಿ ಸುಬ್ರಹ್ಮಣ್ಯಶಾಸ್ತ್ರಿಗಳು ಎಂಬ ಒಬ್ಬ ಆಸ್ಥಾನ ಜ್ಯೋತಿಷಿಗಳಿದ್ದರು. ನಾನು ಅವರ ಮುಂದೆ ಕುಳಿತಾಗ ಏನನ್ನೋ ಬರೆಯುತ್ತಿದ್ದರು. ‘ಹೂಂ ಹೇಳಿ’ ಎಂದರು. ನಾನು ‘ನಾನು ಪ್ರೀತಿಸ್ತಾ ಇರೋ ಹುಡುಗಿ ಜೊತೆ ನನ್ನ ಮದುವೆ ಆಗುತ್ತಾ ಸ್ವಾಮಿ?’ ಎಂದು ಕೇಳಿದೆ. ನನ್ನ ಪ್ರಶ್ನೆ ಮುಗಿಯುವುದಕ್ಕೂ ಅವರು ಬರೆಯುತ್ತಿದ್ದ ಪೆನ್ನಿನಿಂದ ಒಂದು ತೊಟ್ಟು ಇಂಕು ಪೇಪರಿನ ಮೇಲೆ ಧುಮುಕುವುದಕ್ಕೂ ಸರಿಹೋಯಿತು. ‘ನೋಡಿ, ಇಂಕು ಧುಮುಕಿಬಿಡ್ತು. ಈ ಹುಡುಗಿ ಜೊತೆ ನಿಮ್ಮ ಮದುವೆ ಖಂಡಿತ ಆಗಲ್ಲ’ ಅಂತಂದು ಪಕ್ಕದಲ್ಲಿ ಕೂತಿದ್ದವರ ಕಡೆ ತಿರುಗಿದರು, ನೀವು ಹೋಗಬಹುದು ಎನ್ನುವುದನ್ನು ನನಗೆ ಸೂಚಿಸುತ್ತಾ. ಅವರ ಮಾತು  ನಿಜವಾಯಿತು. ಆ ಹುಡುಗಿಯೊಡನೆ ನನ್ನ ಮದುವೆ ಆಗಲಿಲ್ಲ. ಆನಂತರದ ವರ್ಷಗಳಲ್ಲಿ ಅವರು ಇಂತಹ ಎಷ್ಟೋ ಭವಿಷ್ಯವಾಣಿಗಳನ್ನು ವಿಚಿತ್ರವಾದ ರೀತಿಯಲ್ಲಿ ನಿಖರವಾಗಿ ಹೇಳಿದ್ದನ್ನು ಕಂಡಿದ್ದೇನೆ. ಅದು ಯಾವ ಸೀಮೆ ಜ್ಯೋತಿಷವೋ ನನಗೆ ಗೊತ್ತಿಲ್ಲ. ಈಗ ಅವರಿಲ್ಲ. ಅಷ್ಟು ನಿಖರವಾಗಿ ಭವಿಷ್ಯ ಹೇಳುವ ಜ್ಯೋತಿಷಿಗಳು ಈಗ ಇದ್ದಾರೋ ಇಲ್ಲವೋ ನಾನರಿಯೆ.

ಬರವಣಿಗೆ, ವಿವಿಧ ಬಗೆ

ಹೌದೂ, ಈ ಬರವಣಿಗೆ ಹೇಗೆ ಶುರುವಾಯಿತು, ಯಾವುದರಿಂದ ಬರೆಯುವುದಕ್ಕೆÉ ಪ್ರಾರಂಭಿಸಿದರು ಎನ್ನುವ ಪ್ರಶ್ನೆ ನನ್ನ ತಲೆಯಲ್ಲಿ ತಲೆಎತ್ತಿತು. ತೋರುಬೆರಳೇ ಮೊದಲ ಪೆನ್ನು ಎಂದು ತೋರುತ್ತದೆ.

ಮರಳ ಹಲಗೆಯೇ ಕಾಗದ. ಆದರೆ ಅಕ್ಷರಾಭ್ಯಾಸ ಮಾಡಿಸುವುದು ಮಾತ್ರ ಚಿನ್ನದ ಉಂಗುರದಿಂದ ಅಕ್ಕಿಯ ಮೇಲೆ ಬರೆಸುವುದರ ಮೂಲಕ. (ಸಿನಿಮಾದಲ್ಲಿ ಮೊದಲು ಅಪ್ಪ ಅಕ್ಕಿಯ ಮೇಲೆ ಬರೆಸಿದ ಹಾಗೆ, ಆನಂತರ ಸ್ಲೇಟಿನ ಮೇಲೆ ಬಳಪದಿಂದ ಬರೆಯುವುದರ ಮೂಲಕ ಆನಂತರ ಪೆನ್ನಿನಿಂದ ಪೇಪರ್ ಮೇಲೆ ಬರೆಯುವುದರ ಮೂಲಕ ಹುಡುಗ ದೊಡ್ಡವನಾಗುವುದನ್ನು ಅರ್ಧ ನಿಮಿಷದಲ್ಲಿ ತೋರಿಸಿಬಿಡಬಹುದು). ಹಕ್ಕಿಗಳ ಗರಿಯಿಂದಲೂ ಬರೆಯುತ್ತಿದ್ದರು. ಕಣ್ಣಿನ ಕಾಡಿಗೆಯನ್ನುಪಯೋಗಿಸಿ ತಮ್ಮ ಉಗುರಿನ ತುದಿಯಿಂದ ಪ್ರೇಮಪತ್ರಗಳನ್ನು ಬರೆಯುತ್ತಿದ್ದ ಶಾರ್ಪ್‍ನಖಿಯರನ್ನು ಜಾನಪದ ಕಥೆಗಳಲ್ಲಿ ಹೇರಳವಾಗಿ ನೋಡಬಹುದು. ಇದ್ದಲಿನಿಂದ ಗೋಡೆಯ ಮೇಲೆ ಬರೆಯಬಹುದಾದರೆ, ಅರಿಶಿನದಿಂದ ಗೃಹಪ್ರವೇಶ ಮುಂತಾದ ಸಂದರ್ಭಗಳಲ್ಲಿ ಸ್ವಸ್ತಿಕ್, ಓಂಕಾರ, ಶ್ರೀಕಾರ ಮುಂತಾದ ಕಾರಗಳನ್ನು ಬರೆದು ಗೋಡೆಯ ಅಂದವನ್ನು ಹೆಚ್ಚಿಸುವ/ಗಬ್ಬೆಬ್ಬಿಸುವ ಪದ್ಧತಿಯಿದ್ದು ವಿಧಿಯಿಲ್ಲದೆ ಮೌನವಹಿಸಬೇಕಾಗಿರುವ ಪರಿಸ್ಥಿತಿ ನಮ್ಮ ಅನೇಕ ಮನೆಯೊಡೆಯರನ್ನು ಈಗಲೂ ಕಾಡುತ್ತದೆ. ಸುಣ್ಣಬಳಿದ ಮನೆಯ ಗೋಡೆಗಳ ಮೇಲೆ ಕೆಮ್ಮಣ್ಣಿನಿಂದ ಬೆರಳುಗಳಿಂದಲೋ ಕುಂಚಗಳಿಂದಲೋ ಚಿತ್ರಗಳನ್ನು ಬಿಡಿಸಿ ಅಲಂಕಾರ ಮಾಡುವ ಪದ್ಧತಿ ಹಳ್ಳಿಗಳಲ್ಲಿ ಅನೂಚಾನವಾಗಿ ನಡೆದು ಬಂದಿದ್ದರೂ ನಗರಗಳಲ್ಲಿ ಇದನ್ನೇ ಮಾಡರ್ನ್ ಆರ್ಟ್ ಹೆಸರಿನಲ್ಲಿ ಕಲಿಸುತ್ತಾರೆ.

ನಮ್ಮ ಅನೇಕ ಸಂಹಿತೆಗಳು ತಾಳೆಗರಿಗಳ ಮೇಲೆ ಬರೆಯಲ್ಪಟ್ಟಿದ್ದು ಸಾವಿರಾರು ವರ್ಷಗಳ ನಂತರವೂ ಬದುಕುಳಿದಿರುವುದು ಬೆರಗಿನ ವಿಷಯವೇ ಸರಿ. ಶಾಶ್ವತವಾದ ಶಾಸನಗಳನ್ನು ಬರೆಯಲು, ಸಾರಿ, ಕೊರೆಯಲು ಅಥವಾ ಕೆತ್ತಲು ಸುತ್ತಿಗೆ ಉಳಿಗಳೇ ಸಲಕರಣೆಗಳಾದರೆ, ಅಜಂತಾ ಎಲ್ಲೋರಾ ಮುಂತಾದ ಗುಹಾಂತರದೇವಾಲಯಗಳಲ್ಲಿ ಬಿಡಿಸಿರುವ ಮನಮೋಹಕ ವರ್ಣಚಿತ್ರಗಳನ್ನು ಬಿಡಿಸಲು ಅದಾವ ಕುಂಚ ಬಣ್ಣಗಳನ್ನು ಬಳಸಿದರೋ! ಗ್ರೇಟ್! ಚುಚ್ಚಿಸಿಕೊಂಡು ಹಚ್ಚೆ ಹಾಕಿಸಿಕೊಳ್ಳುತ್ತಿದ್ದವರ ಕಷ್ಟಸಹಿಷ್ಣುತೆಗೆ ನಾವು ತಲೆ ಬಾಗಲೇಬೇಕು. ಒಂದನ್ನು ಮರೆತೆವಲ್ಲಾ. ಹಣೆಯ ಮೇಲೆ ನಾಮ/ಪಂಗನಾಮ/ಮೂರುನಾಮಗಳನ್ನು ಎಳೆಯಲು, ಎಂದರೆ ಹಾಕಲು, ಒಂದು ಸಣ್ಣ ‘ಕಡ್ಡಿ’ಯೇ ಸಾಕಲ್ಲವೇ? ಇನ್ನು ಹಣೆಬರಹ ಎನ್ನುವುದನ್ನು ಆ ವಿಧಾತ ಅದಾವ ಇಂಡೆಲಿಬಲ್ ಇಂಕ್‍ನಲ್ಲಿ ಬರೆಯುತ್ತಾನೋ ಕಾಣೆ. ಹಾಗೇನೇ ದಡ್ಡಶಿಖಾಮಣಿಯಾಗಿದ್ದ ಕಾಳಿದಾಸನ ನಾಲಿಗೆಯ ಮೇಲೆ ಅದಾವ ಅಳಿಸಲಾಗದ ಮಸಿಯಿಂದ ಬರೆದು ಕಣ್ಣುರೆಪ್ಪೆ ಮಿಟುಕಿಸುವಷ್ಟರಲ್ಲಿ ಮಹಾಕವಿಯನ್ನಾಗಿ ಮಾಡಿಬಿಟ್ಟಳೋ ಆ ಮಹಾಕಾಳಿ!

ಕ್ರಿ.ಶ. 1800ರಲ್ಲಿ ಲೂಯಿಸ್ ಎಡ್ಸನ್ ವಾಟರ್‍ಮ್ಯಾನ್ ಎಂಬಾತ ಮುಳ್ಳನ್ನು ಇಂಕಿನಲ್ಲಿ ಅದ್ದಿ ಬರೆಯುವ ಲೇಖನಿಯನ್ನು ಕಂಡುಹಿಡಿದನಂತೆ. ಅದಕ್ಕಿಂತಲೂ ಎಷ್ಟೋ ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ಅಂತಹ ಲೇಖನಿಯನ್ನು ಉಪಯೋಗಿಸುತ್ತಿದ್ದರು ಎನ್ನುವುದು ನನ್ನ ನಂಬಿಕೆ. ಆದರೆ ಅದನ್ನ ಯಾರೂ ಗೂಗಲ್‍ನಲ್ಲಿ ಹಾಕಿಲ್ಲ ಅಷ್ಟೇ. ಲೇಖನಿ ಎಂದು ನಾವು ಕರೆಯುವುದನ್ನು ಅವನು ಸ್ಟೀಲ್ ಡಿಪ್ ಪೆನ್ ಎಂದು ಕರೆದ. ಬಾಚುವದಕ್ಕೆ ಬಾಚಣಿಗೆ, ಲಟ್ಟಿಸುವುದಕ್ಕೆ ಲಟ್ಟಣಿಗೆ, ಬೀಸುವುದಕ್ಕೆ ಬೀಸಣಿಗೆ, ಮೆರೆಯುವುದಕ್ಕೆ ಮೆರವಣಿಗೆಗಳಾದರೆ, ಬರೆಯುವುದಕ್ಕೆ ಮಾತ್ರ ಯಾಕೆ ಬರವಣಿಗೆ ಎಂದು ಕರೆಯದೇ ಲೇಖನಿ ಎಂದು ಕರೆದರೋ ನನಗೆ ಗೊತ್ತಿಲ್ಲ. ನನ್ನ ಲೆಕ್ಕದಲ್ಲಿ ಇಂಗ್ಲಿಷಿನ ಪೆನ್ನಿಗೆ ಸರಿಯಾದ ಕನ್ನಡ ಪದವೆಂದರೆ ಬರವಣಿಗೆಯೇ. ನೀವೇನಂತೀರಿ?

ಪೆನ್ನಿನ ನವಯುಗ

ಬಾಲ್‍ಪೆನ್ ಯುಗ ಪ್ರಾರಂಭವಾದದ್ದು 1938ರಲ್ಲಿ. ಇಂಕು ತುಂಬುವ ಕಷ್ಟವಿಲ್ಲದ, ಇಂಕು ಮುಗಿದರೆ ಎಸೆದು ಬೇರೊಂದನ್ನು ಹಾಕಿಕೊಳ್ಳುವ, ಅಗ್ಗವಾಗಿ ಸಿಕ್ಕುವ ಇದು ಬಹಳ ಬೇಗ ಜನಪ್ರಿಯವಾಯಿತು. ಈಗಂತೂ ಒಂದೊಂದು ಸ್ಟೇಷನರಿ ಅಂಗಡಿಯಲ್ಲೂ ನೂರಾರು ವಿನ್ಯಾಸದ ಸಾವಿರಾರು ಪೆನ್ನುಗಳು ದೊರೆಯುತ್ತವೆ. ಅಷ್ಟೊಂದು ಪೆನ್ನುಗಳು ಖರ್ಚಾಗುತ್ತವೆಯೇ ಎನ್ನುವ ಅನುಮಾನವೂ ಹುಟ್ಟುತ್ತದೆ. (ಇಲ್ಲೂ, ಅಂದರೆ

ಈ ಬಾಲ್‍ಪೆನ್ ಕ್ಷೇತ್ರದಲ್ಲೂ ನಾನು ರಿಪೇರಿಗೆ ಕೈಹಾಕಿದ್ದೇನೆ. ಒಳ್ಳೆಯ ಟಿಪ್‍ಅನ್ನು ತೆಗೆದು ಅಗ್ಗದ ನಳಿಕೆಗೆ ಹಾಕುವುದು, ಇಂಕ್ ಖಾಲಿಯಾದ ಮೇಲೆ ಟಿಪ್ ತೆಗೆದು ಒಂದು ತುದಿಯನ್ನು ಇಂಕಿನೊಳಗೆ ಅದ್ದಿ ಇನ್ನೊಂದು ತುದಿಯಿಂದ ಇಂಕನ್ನು ಬಾಯಿಯ ಮೂಲಕ ಒಳಗೆಳೆದುಕೊಂಡು ಟಿಪ್ ಅನ್ನು ಹಾಕಿ ರೀಫಿಲ್ ಖರ್ಚನ್ನು ಉಳಿಸುವುದು ಮುಂತಾದ ಚಿತ್ರವಿಚಿತ್ರ ರಿಪೇರಿಗಳನ್ನು ಮಾಡಿದ್ದೇನೆ.) ಬಾಲ್‍ಪೆನ್ನಿನಲ್ಲಿ ಬಹುವರ್ಣದ ಪೆನ್ನೂ ಬರುತ್ತಿತ್ತು. ಚತುರ್ಮುಖ ಬ್ರಹ್ಮನಂತೆ ನಾಲ್ಕು ಮುಖದ ಪೆನ್ನದು. ಕೆಂಪು ಬಣ್ಣದ್ದನ್ನು ಅದುಮಿದರೆ ನೀಲಿ ಮೇಲೆ ಹೋಗಿ ಕೆಂಪು ಕೆಳಗೆÉ ಬರುತ್ತಿತ್ತು. ಹಸಿರನ್ನು ಒತ್ತಿದರೆ ಕೆಂಪು ಮೇಲೆ ಹೋಗಿ ಹಸಿರು ಕೆಳಗೆ ಹೀಗೆ. ಫೌಂಟನ್ ಪೆನ್ ಎನ್ನುವ ಇಂಕ್‍ಪೆನ್ನು ಕ್ರಮೇಣ ತನ್ನ ಅಸ್ತಿತ್ವ್ವವನ್ನು ಕಳೆದುಕೊಳ್ಳತೊಡಗಿದರೂ, ನಾಮಾವಶೇಷವಾಗದೇ ತನಗೆ ದೊರೆಯುವ ಮರ್ಯಾದೆ, ಘನತೆಗಳನ್ನು ಕಾಪಾಡಿಕೊಂಡಿದ್ದು ಇಂದಿಗೂ ಅದು ಪ್ರತಿಷ್ಠೆಯ ಸಂಕೇತವಾಗಿಯೇ ಉಳಿದಿದೆ.

ಎಂದುರೋ ಮಹಾನುಭಾವುಲು!

ಆಟೋಗ್ರಾಫ್óಗೆ ಸಹಿ ಹಾಕಿಸಿಕೊಳ್ಳುವವರು ತಮ್ಮ ಪೆನ್ ಕೊಡಬೇಕು. ಸಹಿ ಹಾಕಿದ ಮೇಲೆ ಪೆನ್ನು ಸಹಿ ಹಾಕಿದವರದ್ದೇ. ಇದೊಂದು ಅಘೋಷಿತ ಕರಾರು. ಹೀಗೆ ನೂರಾರು ಪೆನ್ನುಗಳನ್ನು ಸಂಗ್ರಹಿಸಿದವರು ನನ್ನ ಮೆಚ್ಚಿನ ಒಬ್ಬ ಅದ್ಭುತ ನಟರು. ಅವರೀಗ ದಿವಂಗತರು. ಎಂದುರೋ ಮಹಾನುಭಾವುಲು!

ನಮ್ಮ ಮದುವೆಯ 45ನೇ ವಾರ್ಷಿಕೋತ್ಸವಕ್ಕೆ ನನ್ನ ಮಗನ ಮಿತ್ರರೆಲ್ಲ ಸೇರಿ – ‘ಕಥೆ ಬರೆಯೋ ಅಂಕಲ್’ಗೆ ಪ್ರೀತಿಯಿಂದ – ಎಂದು ಬರೆದು ಭಾರಿ ಬೆಲೆಯ (SHEAFFER) ಪೆನ್ನನ್ನು ಪ್ರಸೆಂಟ್ ಮಾಡಿದರು. ಆದರೆ, ಅಷ್ಟರಲ್ಲಿ ಸುಡೋಕು, ಪದಬಂಧ, ಸಣ್ಣಪುಟ್ಟ ಲೆಕ್ಕಗಳು, ಸಹಿ ಮುಂತಾದವುಗಳಿಗೆ ಮಾತ್ರ ನನ್ನ ಬರವಣಿಗೆಯನ್ನು ಸೀಮಿತಗೊಳಿಸಿಕೊಂಡಿದ್ದು, ಕಥೆ ಕಾದಂಬರಿಗಳನ್ನು ಪೆನ್ನಲ್ಲಿ ಬರೆಯುವುದನ್ನು ಮರೆತೇಹೋಗಿದ್ದೆ ಎಂದರೂ ತಪ್ಪಾಗಲಾರದು. ಲ್ಯಾಪ್‍ಟಾಪಲ್ಲಿ ಬರೆಯುವುದು ಅಭ್ಯಾಸವಾಗಿಹೋಗಿತ್ತು. ಬರೆಯುವ ಮಜ ಟೈಪ್ ಮಾಡುವುದರಲ್ಲಿ ಸಿಗುವುದಿಲ್ಲವಾದರೂ, ಯಾಕೋ ಏನೋ ಬರೆಯಲು ಕೈ ಮನಸ್ಸು ಹಿಂದೇಟು ಹಾಕುತ್ತವೆ. ಆದರೂ, ಪ್ರೀತಿಯಿಂದ ಕೊಟ್ಟದ್ದನ್ನು ಜೋಪಾನವಾಗಿ ಎತ್ತಿಟ್ಟಿದ್ದೇನೆ. ಫೌಂಟನ್ ಪೆನ್ನಿನ ಜನಪ್ರಿಯತೆ ಕುಗ್ಗಿದ್ದರೂ ಮಾಂಟ್ ಬ್ಲಾಂಕ್, ಪಾರ್ಕರ್, ಕ್ರಾಸ್, ಪಾಲಿಕಾನ್, ವಾಟರ್ಮನ್, ಪೈಲಟ್ ಪೆನ್ನುಗಳು ಪ್ರತಿಷ್ಠೆಯ ಕುರುಹುಗಳಾಗಿಯೇ ಉಳಿದಿವೆ.

ಯಾವುದೇ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ‘ಕತ್ತಿ’ಗಿಂತ ಬಲಶಾಲಿಯಾದ ‘ಪೆನ್ನು’ (Pen is mightier than the sword) ಮಾತ್ರ ಆಚಂದ್ರಾರ್ಕ ಸ್ಥಾಯಿಯಾದ ಒಂದು ಅಪೂರ್ವ ವಸ್ತುವೆಂದರೆ ಅದು ಖಂಡಿತ ಉತ್ಪ್ರೇಕ್ಷೆಯಲ್ಲ.

ಇತ್ತೀಚೆಗೆ ನನ್ನ ಮನಸ್ಸಿನಲ್ಲಿ ಮೂಡಿ ಕಾಡುತ್ತಿರುವ ಒಂದು ಪ್ರಶ್ನೆ : ನನ್ನ ನಂತರ ನನ್ನ ಪೆನ್ನಿನ ಸ್ಥಿತಿ-ಗತಿ ಏನು?

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ