ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಆಗಸ್ಟ್ 2019 > ಜಟಿಲ ಸಮಸ್ಯೆಗೆ ಸರಳ ಪರಿಹಾರ ಇರದು

ಜಟಿಲ ಸಮಸ್ಯೆಗೆ ಸರಳ ಪರಿಹಾರ ಇರದು

ತಮ್ಮ ಎರಡನೇ ಅಧಿಕಾರಾವಧಿಯ ಮೊದಲ ‘ಮನ್ ಕೀ ಬಾತ್’ ಪ್ರಸಾರದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಇದೀಗ ನಾಡು ಎದುರಿಸುತ್ತಿರುವ ಅತ್ಯಂತ ಗಂಭೀರ ಸಮಸ್ಯೆಯೆಂದರೆ ಜಲಕ್ಷಾಮ ಎಂದು ಹೇಳಿದುದು ಸಮುಚಿತವಾಗಿದೆ. ನೀರಿನ ಮಿತವ್ಯಯ ಮತ್ತು ಸಂರಕ್ಷಣೆ, ಹಳೆಯ ಹಾಗೂ ಹೊಸ ವಿಧಾನಗಳ ಮೂಲಕ ಜಲಮೂಲಗಳ ಸಂವರ್ಧನ – ಇವು ಆದ್ಯತೆಯನ್ನು ಬೇಡುತ್ತವೆಂಬ ಪ್ರಧಾನಿಯವರ ಕಳಕಳಿಯ ಮಾತನ್ನು ಎಲ್ಲರೂ ಅಂತಃಸ್ಥ ಮಾಡಿಕೊಳ್ಳಬೇಕಾಗಿದೆ. ನೆರೆಯ ಚೆನ್ನೈ ಎದುರಿಸುತ್ತಿರುವ ಜಲಾಭಾವವು ಮನ ಕಲಕುತ್ತದೆ. ಬೆಂಗಳೂರು ಸೇರಿದಂತೆ ಇನ್ನೂ ಇಪ್ಪತ್ತು ನಗರಗಳಲ್ಲಿ ಅಂತರ್ಜಲವಷ್ಟೂ ಕ್ಷಿಪ್ರವಾಗಿ ಬತ್ತಿಹೋಗಲಿದೆಯೆಂದು ತಜ್ಞರು ಎಚ್ಚರಿಸಿದ್ದಾರೆ. ಮುಂಗಾರಿನ ಆಗಮನ ಕೆಲವು ದಿನ ತಡವಾದುದೇ ಎಲ್ಲೆಡೆ ಆತಂಕವನ್ನು ಸೃಷ್ಟಿಸಿತ್ತು. ದೇಶದ ಗಣನೀಯ ಭಾಗದಲ್ಲಿ ಬಿತ್ತನೆ ಸಾಧ್ಯವಾಗಿಲ್ಲ; ದಿನಬಳಕೆಯ ನೀರಿಗೇ ಕೊರತೆಯಾಗಿದೆ. ಹೆಚ್ಚಿನೆಡೆಗಳು ಕಳೆದ ವರ್ಷದ ಮಳೆ ಕುಸಿತದಿಂದಲೇ ಇನ್ನೂ ಚೇತರಿಸಿಕೊಂಡಿಲ್ಲ. ಈ ವರ್ಷ ಮುಂಗಾರು ನಿರೀಕ್ಷಿತಮಟ್ಟದಲ್ಲಿ ಇರದಿದ್ದರೆ ಏನಾದೀತೆಂದು ಊಹಿಸುವುದೇ ದುಷ್ಕರ. ನೀರು-ಗಾಳಿಗಳು ಪುಕ್ಕಟೆಯಾಗಿ ಅನಂತಕಾಲದವರೆಗೆ ಸಿಗುತ್ತಿರುತ್ತವೆಂಬ ನಿರಾಧಾರ ಧೋರಣೆಯಿಂದುಂಟಾದ ಅಜಾಗ್ರತೆ, ಕೆರೆ-ಕುಂಟೆ-ಬಾವಿಗಳ ಅಲಕ್ಷ್ಯ, ಮಿತಿಯಿಲ್ಲದ ನಗರೀಕರಣ ಮತ್ತು ಕಟ್ಟಡ ಉದ್ಯಮದಿಂದಾಗಿ ಅಂತರ್ಜಲ ಶೋಷಣೆ, ಸಾಂಪ್ರದಾಯಿಕ ಅನುಶಾಸನದ ಬಗೆಗೆ ದುರ್ಲಕ್ಷ್ಯ – ಹೀಗೆ ಹಲವಾರು ಪ್ರವೃತ್ತಿಗಳು ಈಗಿನ ವಿಷಮಸ್ಥಿತಿಯನ್ನು ನಿರ್ಮಿಸಿವೆ. ದುರ್ಬಲ ಕಾನೂನುಗಳ ಅನುಸಂಧಾನವೂ ಶಿಥಿಲರೂಪದ್ದಾಗಿದೆ. ಜಲರಕ್ಷಣದ ಪ್ರಮುಖ ಅಂಗವಾಗಬೇಕಾದ ಮಳೆಕುಯ್ಲು ಈಗೀಗಷ್ಟೇ ಮತ್ತು ಅಲ್ಪಪ್ರಮಾಣದಲ್ಲಷ್ಟೇ ಕಾಣಬಹುದಾಗಿದೆ. ಜಾಗತಿಕಸ್ತರದಲ್ಲಿಯೆ ಹವಾವೈಪರೀತ್ಯ ತೋರಿದೆ; ಇದು ದುರ್ನಿವಾರವಾಗಿದೆ. ಪಾರಂಪರಿಕ ಹಾಗೂ ನೂತನ ಜಲಸಂರಕ್ಷಣಕ್ರಮಗಳು, ಮಿತವ್ಯಯ, ನಗರೀಕರಣಕ್ಕೆ ಪರಿಮಿತಿ, ಲಬ್ಧ ಅಂತರ್ಜಲ ಬಳಕೆಯ ಕಟ್ಟುನಿಟ್ಟಾದ ನಿಯಂತ್ರಣ – ಈ ವಿವಿಧಮುಖ ಪ್ರಯಾಸಗಳು ಏಕಕಾಲದಲ್ಲಿ ಸಮರೋಪಾದಿಯಲ್ಲಿ ನಡೆಯುವುದು ಈಗ ಅನಿವಾರ್ಯವಾಗಿದೆ. ಇದಕ್ಕೆ ಯಾವುದೇ ‘ಷಾರ್ಟ್‍ಕಟ್’ಗಳು ಇಲ್ಲ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ