ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ದೀಪ್ತಿ > ದೀಪ್ತಿ

ದೀಪ್ತಿ

ವಿಷಯಾನನುಕೂಲಯಿತುಂ

ವಿಷಯಿಣಿ ಹೃದಯೇ ವಿಧೀಯತಾಂ ಯತ್ನಃ|

ದೃಶಿದೇಯಮೌಷಧಂ

ಕೋ ದೃಶ್ಯೇ ದತ್ವಾ ಸಖೀ ಭವತಿ||

– ಅಪ್ಪಯ್ಯ ದೀಕ್ಷಿತರ ‘ವೈರಾಗ್ಯಶತಕ’

“ರಸ-ಗಂಧಾದಿ ಹೊರಗಿನ ವಿಷಯಗಳನ್ನು ತಮಗೆ ಅನುಕೂಲಗಳನ್ನಾಗಿಸಿಕೊಳ್ಳಬೇಕಾದರೆ ಆ ವಿಷಯಗಳನ್ನು ಗ್ರಹಿಸುವ ಹೃದಯವನ್ನು ಪ್ರಕ್ಷಾಳನ ಮಾಡಿ ಪರಿಶುದ್ಧಗೊಳಿಸಲು ಯತ್ನಿಸಬೇಕು. ಚಿಕಿತ್ಸೆಗಾಗಿ ಕಣ್ಣಿಗೆ ಹಾಕಿಕೊಳ್ಳಬೇಕಾದ ಔಷಧವನ್ನು ಕಣ್ಣೆದುರಿಗೆ ಕಾಣುವ ಹೊರಗಿನ ವಸ್ತುವಿಗೆ ಹಾಕಿದರೆ ಅಂತಹವನು ಹೇಗೆ ಸುಖಿಯಾದಾನು?”

ಸೌಂದರ್ಯವಿರುವುದು ನೋಡುವವನ ಕಣ್ಣಿನಲ್ಲಿ – ಎಂಬ ಗಾದೆಮಾತಿದೆ. ಇದರ ತಾತ್ಪರ್ಯ ಹೊರಗಿನ ಕುರೂಪವನ್ನು ವೈಭವೀಕರಿಸಬೇಕೆಂದಲ್ಲ. ಆರೋಗ್ಯಕರ ದೃಷ್ಟಿ ಇಲ್ಲದವನ ಪಾಲಿಗೆ ನಿಜವಾದ ಸೌಂದರ್ಯ ಎದುರಿಗಿದ್ದರೂ ಅದು ಆಕರ್ಷಕವೆನಿಸದಿರಬಹುದು – ಎಂಬುದು ಆಶಯ.

ಮಧ್ಯಭಾರತದಲ್ಲಿ ಒಬ್ಬ ತಹಶೀಲ್ದಾರನಿದ್ದ. ಅವನು ನೇಮಿಸಿಕೊಂಡಿದ್ದ ಅಡುಗೆಯವನು ಒಮ್ಮೆ ತೀರಾ ಹೆಚ್ಚು ಉಪ್ಪು, ಒಮ್ಮೆ ತೀರಾ ಕಡಮೆ ಉಪ್ಪು – ಹೀಗೆ ತೋರಿದಂತೆ ಅಡುಗೆ ಮಾಡಿರುತ್ತಿದ್ದ. ಇದನ್ನು ಹಲವು ದಿನಗಳು ಸಹಿಸಿಕೊಂಡ ತಹಶೀಲ್ದಾರ ಒಮ್ಮೆ ಹೇಗಾದರೂ ಅಡುಗೆಯವನಿಗೆ ಅವನ ಕಾರ್ಯ ರೀತಿಯ ಬಗೆಗೆ ತಿಳಿಹೇಳಬೇಕೆಂದು ನಿರ್ಧರಿಸಿದ. ಒಂದು ದಿನ ತಾನೇ ಅಡುಗೆ ಮಾಡಿ ಸಾರಿನಲ್ಲಿ ಧಾರಾಳವಾಗಿ ಉಪ್ಪು ಬಳಸಿ ಅಂದು ಅಡುಗೆಯವನು ತನ್ನೊಡನೆಯೇ ಊಟ ಮಾಡಬೇಕೆಂದು ಕರೆದ. ಹೆಚ್ಚು ಉಪ್ಪಿನಿಂದಾಗಿ ಅಡುಗೆಯವನು ಕ್ಲೇಶಕ್ಕೆ ಒಳಗಾದಾನೆಂದು ನಿರೀಕ್ಷಿಸಿದ್ದ. ಆದರೆ ಅಡುಗೆಯವನು ಸಂತೋಷಚಿತ್ತನಾಗಿಯೇ ಊಟ ಮುಗಿಸಿದ. ತಹಶೀಲ್ದಾರ ತಡೆದುಕೊಳ್ಳಲಾಗದೆ “ನಿನಗೆ ಅಡುಗೆ ಸರಿಯಿಲ್ಲವೆಂದು ಅನಿಸಲಿಲ್ಲವೆ?” ಎಂದು ಕೇಳಿದ. ಅಡುಗೆಯವ ಹೇಳಿದ:

 “ಯಜಮಾನರೇ, ಈ ರುಚಿ-ಅರುಚಿ, ಹೆಚ್ಚು-ಕಡಮೆ ಎಂಬ ಪರಿಶೀಲನೆ ದೊಡ್ಡಮನುಷ್ಯರಿಗಷ್ಟೆ. ಒಂದು ವೇಳೆ ಉಪ್ಪು ಜಾಸ್ತಿ ಇದ್ದರೆ ನಾನು ಹೆಚ್ಚು ಅನ್ನ ಕಲಸಿಕೊಂಡು ಸಾರನ್ನು ಕಡಮೆ ಬಳಸುತ್ತೇನೆ. ಉಪ್ಪು ಕಡಮೆ ಇದ್ದರೆ ಹೆಚ್ಚು ಸಾರನ್ನು ಹಾಕಿಕೊಳ್ಳುತ್ತೇನೆ. ನನಗೆ ಈ ಅಭ್ಯಾಸ ಇರುವುದರಿಂದ ಯಾವಾಗಲೂ ಊಟ ನನಗೆ ರುಚಿಕರವೆಂದೇ ಎನಿಸುತ್ತದೆ.”

ತಾನು ದಡ್ಡನೆಂದುಕೊಂಡಿದ್ದ ನೌಕರನಿಂದ ಸಹಜವಾಗಿ ಬಂದ ಮಾತು ತಹಶೀಲ್ದಾರನನ್ನು ಆಶ್ಚರ್ಯಗೊಳಿಸಿತು. ಪರಿಚಾರಕನಿಂದ ತಾನು ಸಾಮರಸ್ಯದೃಷ್ಟಿಯ ಮಹತ್ತ್ವವನ್ನು ಅರಿತುಕೊಳ್ಳುವಂತಾಯಿತೆಂದು ವಿಚಾರ ಮಾಡತೊಡಗಿದ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ