ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ರಾಷ್ಟ್ರೋತ್ಥಾನ ಸಾಹಿತ್ಯ – ಪುಸ್ತಕ ವಿಮರ್ಶೆ > ಮಾತನಾಡಲೇ ಬೇಕಾದ ಹಲವು ಮೌನಗಳ ದನಿ ’ಪರಕಾಯ ಪ್ರವೇಶ’

ಮಾತನಾಡಲೇ ಬೇಕಾದ ಹಲವು ಮೌನಗಳ ದನಿ ’ಪರಕಾಯ ಪ್ರವೇಶ’

ಮುಖವರ್ಣಿಕೆಯಲ್ಲಿ ತೊಡಗಿಸಿಕೊಂಡಿರುವ ಕಲಾವಿದನ ಚಿತ್ರವಿರುವ ಮುಖಪುಟವೇ ಪರಕಾಯ ಪ್ರವೇಶಕ್ಕೆ ನಮ್ಮನ್ನು ಅಣಿಯಾಗಿಸುತ್ತದೆ. ದಂಡಕ, ವಿಕರ್ಣ, ಸುದೇಷ್ಣಾ, ರಥಕಾರ, ಭದ್ರ, ಪ್ರಾತಿಕಾಮಿ, ಅಶ್ವಸೇನ, ಸಾರಥಿ, ರುಮಾ, ರುರು, ಸಾಲ್ವ, ಕೌರವ, ಪರೀಕ್ಷಿತ ಹೀಗೆ ಪಾತ್ರಗಳು ನಮ್ಮೊಂದಿಗೆ ಮಾತನಾಡುತ್ತವೆ. ಪುರಾಣದ ಮೌನವನ್ನು ತುಂಬುವ ಒಂದು ಪ್ರಯತ್ನ ಇದು ಎಂದವರು ಕಲ್ಚಾರರು. ಹೌದು, ಮಾತನಾಡಲೇ ಬೇಕಾದ ಹಲವು ಮೌನಗಳು ಇಲ್ಲಿ ದನಿಯೆತ್ತುತ್ತವೆ.ಮಾನವ ಶ್ರೇಷ್ಠನಾಗಬೇಕಿದ್ದ ದಂಡಕ, ಮನುವಿನ ಮೊಮ್ಮಗ ಶುಕ್ರಾಚಾರ್ಯರ ಮಗಳನ್ನು ಬಲಾತ್ಕರಿಸಿ ಶಾಪಗ್ರಸ್ತನಾಗಿ ಸಾಯುವ ಘಳಿಗೆಯಲ್ಲಿ ಅವನಲ್ಲಿ ಹುಟ್ಟಿದ ಪ್ರಶ್ನೆ ನಮ್ಮನ್ನು ಕಾಡದೆ ಬಿಡದು. ನಾನು ದಾನವನಾದೆ ನಿಜ, ಉಳಿದವರು? ನಿರಪರಾಧಿಗಳಾದ ನನ್ನ ಪ್ರಜೆಗಳಿಗೂ ಶಾಪ ಕೊಟ್ಟ ಆಚಾರ್ಯರು, ಇಂತಹ ಘೋರ ಶಾಪ ಕೊಡಿಸಿದ ಅವಳು, ನನ್ನನ್ನು ತಿದ್ದಿ ಸರಿಯಾದ ದಾರಿಯಲ್ಲಿ ನಡೆಸಬೇಕಿದ್ದ ನನ್ನ ತಂದೆ, ಯಾವ ಉಳಿಪೆಟ್ಟೂ ಸಿಗದೇ ತಂತಾನೇ ಉಳಿದ ಕಲ್ಲಿನಂತೆ ಆ ದಂಡಕ ಬಾಳಿದವನಾದರೂ ಮಕ್ಕಳನ್ನು ತಿದ್ದಬೇಕಾದಲ್ಲಿ ತಿದ್ದದೇ ಹೋದರೆ ಆಗುವ ದುರಂತಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾನೆ.ಪಾಂಚಾಲೆಗೆ ತುಂಬಿದ ಸಭೆಯಲ್ಲಿ ಅವಮಾನವಾಗುತ್ತಿರುವ ವೇಳೆ ಈ ದಿನ, ಈ ಕ್ಷಣ ಮಾತನಾಡದೇ ಇದ್ದರೆ ನನ್ನ ಇದುವರೆಗಿನ ಮೌನವೂ ಅರ್ಥ ಕಳೆದುಕೊಳ್ಳುತ್ತಿತ್ತು ಎಂಬ ವಿಕರ್ಣ ಅಪ್ಪನಂತೆ ನಾನೂ ಕುರುಡನೇ ಆಗುತ್ತಿದ್ದರೆ ಒಳಿತಿತ್ತು. ಹಾಗಾಗದಿದ್ದುದು ನನ್ನ ದುರದೃಷ್ಟ ಎಂದು ಪರಿತಪಿಸುವುದು ದುಷ್ಟರ ಕೂಟದೊಳಗೆ ಅನಿವಾರ್ಯವಾಗಿ ಸಿಲುಕಿ ಹಾಕಿಕೊಂಡ ಒಳ್ಳೆಯ ಮನಸ್ಸುಗಳ ಪ್ರತಿಬಿಂಬ. ತಪ್ಪನ್ನು ತಪ್ಪೆಂದು ಖಂಡಿಸಲಾಗದೇ ಒಪ್ಪಿಕೊಳ್ಳಲೂ ಆಗದೇ ವಿಕರ್ಣನಂತಹವರು ಅದೆಷ್ಟು ನೊಂದರೋ! ಕೃಷ್ಣನಿಗೇ ಗೊತ್ತು.ಸತ್ತ ಕೀಚಕನ ಶವವನ್ನು ನೋಡಿ ಮನಸ್ಸನ್ನು ತೆರೆದುಕೊಳ್ಳುವವಳು ಸುದೇಷ್ಣಾ. ತಮ್ಮನಿಗಾಗಿ ಕಣ್ಣೀರುಗರೆಯುವ ಬದಲು ಸದ್ಯ, ಅವನು ಸತ್ತನಲ್ಲ ಎಂಬ ನಿರಾಳತೆಯನ್ನು ಅನುಭವಿಸುವ ಸುದೇಷ್ಣಾಗೆ ಅವನಿಗೆ ಅಕ್ಕ ಬೇಕಾದದ್ದು ಅಂತಃಪುರದ ಸುಂದರ ದಾಸಿಯರಿಗಾಗಿ ಮಾತ್ರ ಎಂದೆನಿಸಿದ್ದು ಘೋರ! ನಮ್ಮ ರಾಜ್ಯಕ್ಕೆ ಬಾಹ್ಯ ಶತ್ರುಗಳ ಭಯವಿರಲಿಲ್ಲ. ಆದರೆ ಸ್ವಂತ ತಮ್ಮನೇ ನನ್ನ ಶತ್ರುವಾಗಿದ್ದ ಎಂದು ಅವಳಿಗನ್ನಿಸಿರಬೇಕಾದರೆ ಅವನಿಂದಾಗಿ ಮನಸ್ಸು ಅದೆಷ್ಟು ನೊಂದಿರಬಹುದು? ಸೈರಂಧ್ರಿಗೆ ನೆರವಾಗದೇ ಪರೋಕ್ಷವಾಗಿ ಕೀಚಕನ ಸಾವಿಗೆ ಕಾರಣಳಾಗುವ ಅವಳು ಅಕ್ಕನಾಗಿ ಹೇಗೇ ವರ್ತಿಸಿರಲಿ, ಒಬ್ಬ ಹೆಣ್ಣಾಗಿ ಸರಿಯಾದುದನ್ನೇ ಮಾಡಿದ್ದೇನೆ ಎಂಬ ಸಮಾಧಾನ ತಳೆಯುವುದು ನಮಗೂ ನೆಮ್ಮದಿಯೆನಿಸುತ್ತದೆ.ಮಹಾಭಾರತವನ್ನು ಅವಲೋಕಿಸುವ ರಥಕಾರ ಅವರದೇ ಸೃಷ್ಟಿ. ಯುದ್ಧಕ್ಕೆ ಅಗತ್ಯವಿರುವ ರಥಗಳನ್ನು ರೂಪಿಸುವಲ್ಲಿ ರಥಕಾರನ ಪಾತ್ರ ದೊಡ್ಡದು. ರಾಜಕೀಯ ನಾಯಕರ ಪ್ರಭಾವ ಮನೆಮನೆಗಳನ್ನೂ ಆವರಿಸಿಕೊಂಡಿದ್ದ ಆ ಕಾಲಕ್ಕೂ ಧರ್ಮಕ್ಕಾಗಿ ಬದುಕುವುದನ್ನು ಮಾತ್ರವಲ್ಲ, ಸಾಯುವುದನ್ನೂ ಆಚಾರ್ಯರು ಕಲಿಸಿಕೊಟ್ಟಿದ್ದಾರೆ ಎಂಬ ಭದ್ರ ರಥಕಾರನ ಮನೆಯ ಬೆಳಕಾದ ಸೊಸೆಯನ್ನು ಉಳಿಸಿಕೊಡುತ್ತಾನೆ. ಆಳುವ ನಾಯಕರು ನಡತೆ ತಪ್ಪಿದರೆ ಪ್ರಜೆಗಳು ಇನ್ನಷ್ಟು ಅಧೋಗತಿ ಪಡೆಯಬೇಕಾದೀತು ಎಂಬ ಸೂಚನೆ ನಮ್ಮನ್ನು ಕಾಡುತ್ತದೆ.ರಾಮ ಸೀತೆಯನ್ನು ಪರಿತ್ಯಜಿಸುವ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದ ಜನಾಪವಾದದ ಮಾತನ್ನು ರಾಮನಿಗೆ ಅರುಹಿದವನು ಭದ್ರ. ತಪ್ಪಿರಲಿ ಇಲ್ಲದಿರಲಿ, ಶಿಕ್ಷೆಯನ್ನಂತೂ ಅನುಭವಿಸಲೇಬೇಕು, ಸೀತೆಯಂತೆ ಎಂಬ ಭದ್ರ ಯಾರನ್ನೂ ದೂಷಿಸುವುದಿಲ್ಲ. ಆದರೆ ರಾಮ ಅಂತರ್ಮುಖಿಯಾದುದನ್ನು ಕಂಡು ಕೊರಗುತ್ತಾನೆ. ರಾಮ ದೇವರೆಂಬ ಅರಿವಾದಾಗ ಹಗುರಾಗುವ ಅವನು ರಾಮ ಯಾರೇ ಆಗಿರಲಿ, ನಮಗೆ ನಾವು ಮಾಡಿದ್ದರ ಹೊಣೆಯನ್ನು ಹೊರುವುದಕ್ಕೊಂದು ಹೆಗಲು ಸಿಕ್ಕಿತಲ್ಲ ಎಂದು ಸಮಾಧಾನ ತಾಳುತ್ತಾನೆ. ಈ ಬಗೆಯ ಪಾತ್ರಸೃಷ್ಟಿ ಒಂದು ವಿಸ್ಮಯ.ಆಳುವಾತ ದುರ್ಬುದ್ಧಿಯವನಾದರೆ ಅವನ ಕೈಕೆಳಗಿರುವವರು ಒಳ್ಳೆಯವರಾಗುವುದು ಸಾಧ್ಯವೇ? ಎಂಬ ಪ್ರಾತಿಕಾಮಿಯ ಸ್ವಗತ ಪಾಂಚಾಲೆಯನ್ನು ರಾಜಸಭೆಗೆ ಬರಹೇಳಬೇಕಾಗಿ ಬಂದ ತನ್ನ ಅಸಹಾಯಕತೆಯನ್ನು ಚಿತ್ರಿಸುತ್ತದೆ. ಯುದ್ಧಭೂಮಿಯಲ್ಲಿ ಸಾವಿನ ಪ್ರತೀಕ್ಷೆಯಲ್ಲಿರುವ ಅವನಿಗೆ ಕಣ್ಣುಗಳೆದುರು ಆರ್ತಳಾದ ಪಾಂಚಾಲೆಯ ದೀನಸ್ಥಿತಿ ಸ್ತಬ್ಧಚಿತ್ರವಾಗಿ ಕಟ್ಟುತ್ತದೆ. ಮಹಾಭಾರತದಲ್ಲಿ ಮಾತನಾಡಿರದ ಈ ಪ್ರಾತಿಗಾಮಿಯ ಮನದಾಳ ನಮ್ಮನ್ನೂ ಕಲಕುತ್ತದೆ.ಮನುಷ್ಯರು ನಮ್ಮ ಹಾಗಲ್ಲ, ನಮಗೆ ಹಲ್ಲಿನಲ್ಲಿ ಮಾತ್ರ ವಿಷವಾದರೆ ಅವರಿಗೆ ಮೈಬುದ್ಧಿಗಳಲ್ಲೂ ಅದೇ ತುಂಬಿದೆ ಎಂಬ ಅಶ್ವಸೇನನ ತಾಯಿ, ನನಗೆ ಅಶ್ವಹೃದಯ ತಿಳಿದಿರಲಿಲ್ಲ ನಿಜ, ಮನುಷ್ಯ ಹೃದಯ ಅರ್ಥವಾಗುತ್ತಿತ್ತು ಎಂಬ ಸಾರಥಿ, ಮೆಲ್ಲನೆ ನಮ್ಮನ್ನು ತಟ್ಟುತ್ತಾರೆ.ಎಲ್ಲರಿಗಿಂತ ಹೆಚ್ಚು ನಮ್ಮನ್ನು ಆವರಿಸುವುದು ಸುಗ್ರೀವನ ಹೆಂಡತಿ ರುಮಾ. ವಾಲಿ-ತಾರೆ-ಸುಗ್ರೀವರ ನಡುವೆ ನಜ್ಜುಗುಜ್ಜಾದವಳು. ತಾರೆಯನ್ನು ಸುಗ್ರೀವ ಕೈಹಿಡಿದದ್ದರಿಂದ ಆಘಾತಕ್ಕೊಳಗಾಗುವ ರುಮೆ ಗಂಡು ಹೆಣ್ಣಿನ ಸಂಬಂಧ ಹೇಗೂ ನಡೆದೀತು, ಆದರೆ ಗಂಡ ಹೆಂಡತಿಯರ ಸಂಬಂಧ ತುಂಬ ಸೂಕ್ಷ್ಮವಾದದ್ದು. ಸಣ್ಣ ಪುಟ್ಟ ಬಿರುಕೂ ಪರಸ್ಪರ ನಂಬಿಕೆ ಪ್ರೇಮಗಳನ್ನು ಸುಟ್ಟುಬಿಡುತ್ತದೆ. ಸುಗ್ರೀವನ ಕುರಿತು ಇವ ನನ್ನವ ಎಂಬ ಭಾವದ ಎಳೆ ತುಂಡಾಗಿ ಬಿಟ್ಟಿತು ಎನ್ನುತ್ತಾಳೆ. ವಾಲಿ ತನ್ನನ್ನು ಸೆಳೆದೊಯ್ದ ಮೇಲೆ ಭಾವನೆಗಳೆಲ್ಲವನ್ನೂ ಕಳೆದುಕೊಂಡು ಬದುಕುತ್ತಾಳೆ. ರಾಮ ವಾಲಿಯನ್ನು ಕೊಂದ ಮೇಲೆ ಅವನೆದುರು ತನ್ನ ಆಂತರ್ಯವನ್ನು ತೆರೆದಿಡಲು ಬಯಸುತ್ತಾಳೆ. ಅದು ಸಾಧ್ಯವಾಗದೇ ಹೋದಾಗ ಕಲ್ಲಾಗಿ ಬಿದ್ದಿದ್ದ ಅಹಲ್ಯೆಯನ್ನು ಉದ್ಧರಿಸಿದ ರಾಮನ ಕಣ್ಣಿಗೆ ಇನ್ನೊಂದು ಕಲ್ಲಿನಂತೆ ಜೀವಚ್ಛವವಾಗಿದ್ದ ನಾನು ಕಾಣಲೇ ಇಲ್ಲ ಎನ್ನುವ ರುಮೆಯ ಬದುಕಿನ ನೋವು ನಮಗರ್ಥವಾಗುವಂತೆ ಕಟ್ಟಿಕೊಟ್ಟ ಕರ್ತೃವಿಗೊಂದು ನಮನ.ಮತ್ತುಳಿದಂತೆ ರುರು, ಸಾಲ್ವ, ತೊಡೆ ಮುರಿದು ಬಿದ್ದ ಕೌರವ, ಪರೀಕ್ಷಿತ ಎಲ್ಲರ ಸ್ವಗತಗಳೂ ನೇರವಾಗಿ ನಮ್ಮ ಅಂತರಂಗದೊಂದಿಗೇ ಮಾತನಾಡುತ್ತವೆ. ಮೌನವನ್ನು ಅರ್ಥ ಮಾಡಿಕೊಳ್ಳಬಲ್ಲವರಷ್ಟೇ ಮಾತನ್ನೂ ಅರ್ಥ ಮಾಡಿಕೊಳ್ಳಬಲ್ಲರು ಎಂದೆಲ್ಲ ಹೇಳುವವರು ಪರಕಾಯ ಪ್ರವೇಶ ಮಾಡಿ ನೋಡಬೇಕು. ಮಾತಾಡದೇ ಉಳಿದ ಮೌನದೊಳಗೆ ಅಸಹನೀಯ ನೋವು, ನಿರಾಸೆ ಹೇಳತೀರದ ಹತಾಶೆಯಿರುತ್ತದೆ. ಅಂತಹ ಮೌನವೊಂದು ತೆರೆದುಕೊಂಡಾಗ ಅದಕ್ಕೆ ಕಿವಿಯಾಗಲು ನಮ್ಮಿಂದಾದೀತೇ? ಇಲ್ಲಿನ ಪಾತ್ರಗಳ ಸ್ವಗತಗಳಿಗೆ ತಾನು ದನಿಯಾಗಬೇಕೆಂದರೆ ಅದು ಸುಲಭದ ಕೆಲಸವಲ್ಲ. ಅದೊಂದು ತಪಸ್ಸು.ರಾಧಾಕೃಷ್ಣ ಕಲ್ಚಾರರ ಅರ್ಥಗಾರಿಕೆಯನ್ನು ಕೇಳಿ ಬಲ್ಲವರಿಗೆ ಇಲ್ಲಿನ ಎಲ್ಲ ಸ್ವಗತಗಳೂ ಅವರ ದನಿಯಲ್ಲೇ ಕೇಳಿಸೀತು ಎಂಬುದು ಈ ಬರಹಗಳ ವಿಶೇಷತೆ!

ಆರತಿ ಪಟ್ರಮೆ, ಉಪನ್ಯಾಸಕಿ,  ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯೆ

ಸಂವೇದನೆಗಳನ್ನು ಜಾಗೃತಗೊಳಿಸಿದೆ’

ಪರಕಾಯ ಪ್ರವೇಶ’ ಸ್ವಗತದಲ್ಲಿ ಅನಾವರಣಗೊಳ್ಳುವ ಇಲ್ಲಿಯ ಪಾತ್ರಗಳು ಅತ್ಯಂತ ಸೂಕ್ಷ್ಮ ನೇಯ್ಗೆಯಲ್ಲಿ ಹೆಣೆದ ಸೂಜಿಮಲ್ಲಿಗೆಯ ದಂಡೆಯಂತಿದೆ. ಸಾಕ್ಷಿ ಪ್ರಜ್ಞೆಯಲ್ಲಿ ಎಚ್ಚರಗೊಂಡ ವ್ಯಕ್ತಿತ್ವ ಮಾತ್ರ ಪ್ರಾಮಾಣಿಕವಾಗಿರುತ್ತದೆ. ಸುದೇಷ್ಣೆಗೆ ಸಹೋದರನಿಂದ ಹೆಣ್ಣು ಕುಲಕ್ಕಾಗುವ ಸಂಕಟದ ಅರಿವಿದೆ. ಅಂತೆಯೇ, ಅವನ ಅಂತ್ಯದ ಹಾರೈಕೆಯೂ ಇದೆ. ಜೊತೆಗೆ ಅದನ್ನು ಮನ್ನಡೆಸುವ ಬುದ್ಧಿವಂತಿಕೆಯೂ ಇದೆ. (ದ್ರೌಪದಿ ಮೇಲಿನ ಭರವಸೆ) ಕಲಾವಿದನ ಪಾತ್ರಗಳು ರಸಾಭಿವ್ಯಕ್ತಿಯ ಬಿಡುಗಡೆ ಮಾತ್ರವಲ್ಲ ಪಾತ್ರಗಳ ಸಂದೇಶದಿಂದ ಪ್ರಸ್ತುತವಾಗುವುದೇ ಕಲಾಕೃತಿಗಳ ಹೆಗ್ಗಳಿಕೆ. ಕಲ್ಚಾರರು ಸೂಕ್ಷ್ಮ ಅರ್ಥಧಾರಿ. ಎಲ್ಲೂ ವಾಚ್ಯವಾಗದೇ ಓದುಗ ತನ್ನ ಸಂವೇದನೆಗಳನ್ನು ಜಾಗೃತಗೊಳಿಸಿಕೊಳ್ಳುವಂತೆ ಮಾಡಿದ ಪರಕಾಯ ಪರೋಕ್ಷವಾಗಿ ಸಹೃದಯದವರನ್ನೂ ಪಾತ್ರಗಳೊಂದಿಗೆ ಪರಕಾಯಗೊಳಿಸುವುದು ವಿಶೇಷವಾಗಿದೆ.

  • ವಿದ್ಯಾಶರ್ಮ, ಪ್ರಾಧ್ಯಾಪಕಿ, ಬೆಳಗಾವಿ

ಪಾತ್ರಗಳ ಕಾಯುವಿಕೆ ಒಂದೇ; ಧಾರ್ಮಿಕ ತಳಹದಿ ಬೇರೆ

ರಾಧಾಕೃಷ್ಣ ಕಲ್ಚಾರ್‌ರು ’ಪರಕಾಯ ಪ್ರವೇಶ’ದಲ್ಲಿ ೧೩ ಪಾತ್ರಗಳ ದೇಹವನ್ನು ಹೊಕ್ಕು ಅವುಗಳ ಭಾವಗಳನ್ನು ನಮಗುಣಬಡಿಸಿದ್ದಾರೆ. ಹಲವಾರು ಕಡೆಯಲ್ಲಿ ಭಾವಾಭಿವ್ಯಕ್ತಿ ಮನಮುಟ್ಟುವಂತಿದೆ. ಪದಜೋಡಣೆಯಲ್ಲಿ ಅದ್ಭುತವಾದ ಹಿಡಿತ ಲೇಖಕರದು. ಪರಕಾಯ ಪ್ರವೇಶದ ಚಿಂತನೆಯ ಬಗೆಗೆ ವಿವರಿಸುತ್ತಾ ಅವರು ಹೇಳುವ ಬಗೆ ನೋಡಿ ಚೇತನ ಅದರ ಮಟ್ಟಿಗೆ ಸ್ವತಂತ್ರವೇ ಆದರೂ ಏನನ್ನಾದರೂ ಸವಿಯಬೇಕಾದರೆ ಅದಕ್ಕೆ ಕಾಯದ ಆಲಂಬನ ಬೇಕು – ಅಂದರೆ ಭಾಷೆಗೆ ಭಾವದಂತೆ. ಭಾವ ಭಾಷೆಗಿಂತ ಭಿನ್ನ, ಸ್ವತಂತ್ರ. ಅದು ಅಭಿವ್ಯಕ್ತವಾಗುವುದು ಭಾಷೆಯಿಂದ. ಭಾವಸ್ಪಂದನ ಭಾಷೆಯಿಲ್ಲದೆ ಹೇಗೆ ಸಾಧ್ಯ? ಭಾಷೆಯಿಂದ ಅಭಿವ್ಯಕ್ತವಾಗದ ಭಾವವನ್ನು ಗುರುತಿಸಲಾರೆವು. ಹಾಗಾಗಿ ಚೇತನಕ್ಕೆ ಪ್ರಕಟಣೆಗೆ ದೇಹ ಬೇಕು. ದೇಹ ಸ್ಪಂದನಶೀಲವಾಗುವುದು ಚೇತನದಿಂದ. ಎರಡೂ ಒಟ್ಟು ಸೇರಿಕೊಂಡಾಗ ಮಾತ್ರ ಏನನ್ನಾದರೂ ಆಸ್ವಾದಿಸಿ ಅನುಭವಿಸುವ ಅದನ್ನು ಪ್ರಕಟಿಸುವ ಸಾಧ್ಯತೆ ಒದಗುತ್ತದೆ. ಅಷ್ಟರಮಟ್ಟಿಗೆ ಎರಡೂ ಸಂಯುಕ್ತ, ಪರಸ್ಪರ ಅವಲಂಬಿತ. ದೇಹ ಮತ್ತು ಆತ್ಮದ ಸಂಬಂಧವನ್ನು ಭಾವ ಮತ್ತು ಭಾಷೆಗೆ ಅದೆಷ್ಟು ಸೊಗಸಾಗಿ ಹೋಲಿಕೆ ಮಾಡಿದ್ದಾರೆ.’ದಂಡಕ’ನಿಂದ ಪ್ರಾರಂಭಿಸಿ ’ಮೃತ್ಯುಮುಖ’ ಅರ್ಥಾತ್ ಪರೀಕ್ಷಿತನವರೆಗೆ ಒಟ್ಟು ೧೩ ದೇಹವನ್ನು ಹೊಕ್ಕು ಆ ಪಾತ್ರವನ್ನು ನಮ್ಮ ಕಣ್ಮುಂದೆ ತಂದು ನಿಲ್ಲಿಸುತ್ತಾರೆ. ಪುಸ್ತಕದ ಆದಿ ಮತ್ತು ಅಂತ್ಯದ ಪಾತ್ರಗಳ ಕಾಯುವಿಕೆ ಒಂದೇ. ಆದರೆ ಆ ಪಾತ್ರಗಳ ಧಾರ್ಮಿಕ ತಳಹದಿ ಬೇರೆ ಬೇರೆ. ಓರ್ವ ಧಾರ್ಮಿಕನಾದರೆ ಮತ್ತೋರ್ವ ಅಧರ್ಮಿ. ಇಬ್ಬರಿಗೂ ಶಾಪ ಫಲಿಸುವ ಸಮಯದ ಕಾಯುವಿಕೆ. ಆದರೆ ಭಾವದಲ್ಲಿ ಅಜಗಜಾಂತರ ವ್ಯತ್ಯಾಸ. ತಪ್ಪು ತನ್ನದಾದರೂ ದಂಡಕ ಕೊನೆಯಲ್ಲಿ ಎಲ್ಲರೊಳಗೂ ರಾಕ್ಷಸತ್ವವನ್ನೇ ಹುಡುಕಿದರೆ, ಪರೀಕ್ಷಿತ ತನ್ನ ತಪ್ಪಿಗೆ ಸಾವೇ ನ್ಯಾಯಯುತವಾದ ಶಿಕ್ಷೆ ಎಂದು ಸಾವನ್ನೇ ನಿರೀಕ್ಷಿಸುತ್ತಾನೆ. ಪ್ರೀತಿಯಿಂದ ಯಮನನ್ನು ಸ್ವಾಗತಿಸುತ್ತಾನೆ. ಹೆಣ್ಣಾಗಿದ್ದು, ತನ್ನ ತಮ್ಮನಿಂದಲೇ ಹೆಣ್ಣಿನ ರಕ್ಷಣೆ ಮಾಡಲಾಗದಂತಹ ಅಸಹಾಯಕತೆಯನ್ನು ಪ್ರದರ್ಶಿಸುವ ಸುದೇಷ್ಣೆ, ಅಗಸನ ಮಾತುಗಳನ್ನು ತಾನು ಹೇಳಿದ ಕಾರಣದಿಂದಲೇ ಶ್ರೀರಾಮಚಂದ್ರ ಮತ್ತು ಸೀತಾದೇವಿಯ ಅಗಲುವಿಕೆಯಾಯಿತೇನೋ ಎಂದು ತೊಳಲಾಡುವ ಭದ್ರ, ದ್ರೌಪದಿಯ ಮಾನಭಂಗದಲ್ಲಿ ತನ್ನ ಪಾಲೂ ಇತ್ತೇನೋ ಎಂದು ಸಂಕಟಪಡುವ ಪ್ರಾತಿಕಾಮಿ, ಪ್ರೀತಿಸಿದ ಹೆಣ್ಣನ್ನು ಪತ್ನಿಯಾಗಿ ಪಡೆಯಲು ತನ್ನ ಅರ್ಧ ಆಯುಸ್ಸನ್ನೇ ಧಾರೆ ಎರೆದು ಕೊಡುವ ’ರುರು’ವಿನ ನಿಷ್ಕಲ್ಮಶ ಪ್ರೇಮ, ಅಂಬೆಯನ್ನು ತಿರಸ್ಕರಿಸಿ ಅಮೂಲ್ಯವಾದ ಸ್ತ್ರೀರತ್ನವೊಂದನ್ನು ಕಳೆದುಕೊಂಡೆನೇನೋ ಎಂದು ಸಂಕಟಪಡುವ ಸಾಲ್ವ ಮತ್ತವನ ರಾಜಕೀಯದ ಯೋಚನೆಗಳು, ಸಾವಿನಮಡಿಲಲ್ಲೂ ಸ್ವಾಭಿಮಾನದ ಕುರಿತಾಗಿ ಯೋಚಿಸುವ ದುರ್ಯೋಧನ, ಯಾವ ನಿಷ್ಪಾಂಡವ ಪೃಥ್ವಿಯನ್ನಾಳಬೇಕು ಅಂತ ಕನಸು ಕಂಡೆನೋ ಅದೇ ಪಾಂಡವರ ನೆಲದಲ್ಲಿ ಉಸಿರು ಬಿಡಬೇಕಾಯಿತಲ್ಲಾ ಅನ್ನುವ ನೋವಿನ ಭಾವಗಳೆಲ್ಲವೂ ಓದುಗನಿಗೆ ರುಚಿ ನೀಡುತ್ತವೆ.ಲೇಖಕರು ಚಿತ್ರಿಸಿರುವ ವಿಕರ್ಣ ಮತ್ತು ರುಮೆ – ಇವರೀರ್ವರ ಪಾತ್ರಗಳಿಗೂ ನನ್ನ ಮನಸ್ಸಿನ ಪಾತ್ರಗಳಿಗೆ ಒಂದಷ್ಟು ವ್ಯತ್ಯಾಸ ಕಂಡುಬಂದಿತು. ಇಲ್ಲಿ ಲೇಖಕರ ಪ್ರಕಾರ ವಿಕರ್ಣನು ಉತ್ತಮ ವ್ಯಕ್ತಿ. ಆದರೆ ಅದನ್ನ ತೋರ್ಪಡಿಸಿಕೊಳ್ಳಲಾಗದ ಅಸಹಾಯಕತೆಯು ಅವನನ್ನು ಆವರಿಸಿರುತ್ತದೆ. ಆದರೆ ಪ್ರವಚನವೊಂದರಲ್ಲಿ ಪ್ರವಚನಕಾರರು ಈ ವಿಕರ್ಣನ ಪಾತ್ರವನ್ನು ಬೇರೆಯೇ ರೀತಿಯಾಗಿ ಚಿತ್ರಿಸಿದ್ದರು. ಅಲ್ಲಿ ವಿಕರ್ಣನಿಗೆ ತಾನೋರ್ವ ಭಿನ್ನ ಅಂತ ತೋರಿಸಿಕೊಳ್ಳುವ ಚಪಲ. ಜನರ ಗಮನ ಸೆಳೆಯಲು ಏನಾದರೂ ಮಾಡುವ ಮನಸ್ಸಿನವ. ಹಾಗಾಗಿಯೇ ಆತ ತೋರಿಕೆಯ ಸುಭಗನೇ ಹೊರತು ವಾಸ್ತವದಲ್ಲಿ ಅಲ್ಲ. ಒಂದು ವೇಳೆ ಒಳ್ಳೆಯವನಾಗಿದಿದ್ದರೆ ಅಣ್ಣನ ಸಂಗವನ್ನು ತೊರೆದು ಬರುತ್ತಿದ್ದ ಯುಯುತ್ಸುವಿನಂತೆ. ಈ ಪಾತ್ರ ವಿಶ್ಲೇಷಣೆ ನನಗೆ ಹಿಡಿಸಿತ್ತು. ಯಾಕೆಂದರೆ ಕೌರವರು ನೂರು ಜನರೂ ದುರ್ಮಾರ್ಗಿಗಳೇ. ಒಬ್ಬೊಬ್ಬರದು ಒಂದೊಂದು ರೀತಿಯ ಧೂರ್ತತನ. ಹಾಗಾಗಿ ಲೇಖಕರ ಪಾತ್ರ ನಿರೂಪಣೆ ನನ್ನ ಮನದಲ್ಲಿ ಮೊದಲಿದ್ದ ಚಿಂತನೆಯನ್ನು ಬದಲಿಸಲಿಲ್ಲ.ಇನ್ನೊಂದು ರುಮೆಯ ಪಾತ್ರ. ಒಬ್ಬ ಹೆಣ್ಣಿನ ಭಾವವನ್ನು ಲೇಖಕರು ಚಿತ್ರಿಸಿದ ರೀತಿ, ಅದೂ ತನ್ನ ಪತಿ ಇನ್ನೋರ್ವ ಹೆಣ್ಣನ್ನು ಪತ್ನಿಯಂತೆ ಪ್ರೇಮಿಸುವಾಗ ಆಗುವ ಅಂತರಂಗದ ತಳಮಳ, ಚೆನ್ನಾಗಿ ಬರೆದಿದ್ದಾರೆ. ಓದುತ್ತಾ ಹೋದಂತೆ ಅಯ್ಯೋ ಎನ್ನುವ ಭಾವ ಕಾಡದೇ ಇರದು. ಆದರೆ ವಾಸ್ತವದಲ್ಲಿ ಸುಗ್ರೀವ ಅಂತಹವನೇ? ಅನ್ನುವ ಅನುಮಾನ ಕಾಡಿಸಿತು. ಈ ಅನುಮಾನಕ್ಕೆ ಕಾರಣ- ಆತನನ್ನ ಮಿತ್ರನಾಗಿ ಸ್ವೀಕರಿಸಿದ ಶ್ರೀರಾಮನ ವ್ಯಕ್ತಿತ್ವ. ತನ್ನ ಪತ್ನಿಗಾಗಿ ಆಕೆಯನ್ನು ಪಡೆಯಲು ವಾಲಿಯಂತಹ ಬಲಾಢ್ಯನನ್ನು ಎದುರು ಹಾಕಿಕೊಂಡು ಏಟು ತಿನ್ನುವಾತನ ಪತ್ನಿಪ್ರೇಮ ಅಷ್ಟೊಂದು ದುರ್ಬಲವಾಗಿರಲಿಕ್ಕಿಲ್ಲ ಎನ್ನುವ ಊಹೆ. ಅಂತಹ ಪತ್ನಿ ಪ್ರೇಮ ಇಲ್ಲದೇ ಇರುತ್ತಿದ್ದರೆ ಶ್ರೀರಾಮನಿಗೆ ಇದರ ಸುಳಿವಾದರೂ ಸಿಗುತ್ತಿತ್ತಲ್ಲವೇ? ಎನ್ನುವ ಸಣ್ಣ ಅನುಮಾನ. ತನ್ನ ಅಣ್ಣನ ಹೆಂಡತಿಯ ಪ್ರೇಮದಿಂದ ಈ ರೀತಿಯಾಗಿ ವರ್ತಿಸುತ್ತಿದ್ದರೆ ನಿಷ್ಕಲ್ಮಶವಲ್ಲದ ಪ್ರೇಮಕ್ಕೆ ಶ್ರೀರಾಮನ ಸಹಾಯ ದೊರೆತಂತಾಗುವುದಿಲ್ಲವೇ? ಈ ಅನುಮಾನದಿಂದ ರುಮೆಯ ಪಾತ್ರವಿಶ್ಲೇಷಣೆಯ ಹಾಗಿದ್ದಿರಲಿಕ್ಕಿಲ್ಲವೇನೋ ಅನ್ನುವ ತರ್ಕ.ಅದೇನೇ ಇರಲಿ, ಇದರ ಖಚಿತತೆ ನನಗೂ ಇಲ್ಲ. ಹಾಗಾಗಿ ಲೇಖಕರು ಹೇಳಿರುವ ರೀತಿ ಇರುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಈ ಪುಸ್ತಕ ಪುರಾಣದ ಲೋಕಕ್ಕೆ ಕರೆದೊಯ್ಯುವುದಂತೂ ಸತ್ಯ.

ಗುರುಪ್ರಸಾದ್ ಆಚಾರ್ಯ, ಕುಂಜೂರು, ಮಂಗಳೂರು

ಅಂತಃಕರಣವನ್ನು ಬೆರಗುಗೊಳಿಸುವ ಭಾವಸಂಧಿಗಳು

ಇದು ಚಿಂತನ ಮಂಥನಗಳಿಗಿಂತ ಬೇರೆಯೇ ಆದ ವಿವೇಚನೆಯ ಫಲ. ಇದೊಂದು ಅದ್ಭುತ ಮನೋಯಾನ. ಹೃನ್ಮನ ಗೆಲುವಿನ ಭಾವಯಾನ. ಕಣ್ಣುಮುಚ್ಚಿ ಕುಳಿತಾಗ ಬುದ್ಧಿಯು ಅಂತಃಕರಣದೊಂದಿಗೆ ಮಿಳಿತಗೊಂಡು ಚಿತ್ರಿಸಿದ ದೃಶ್ಯಕಾವ್ಯ. ನಮ್ಮ ಮಹಾಕಾವ್ಯ ವೃಕ್ಷಗಳ ರೆಂಬೆಕೊಂಬೆಗಳಲ್ಲಿ ಸಣ್ಣಸಣ್ಣ ಗೆಲ್ಲುಗಳಲ್ಲಿ ಯಾಕೆ ಬರೆ ಪತ್ರ ಒಂದರಲ್ಲಿ ಹರಿದು, ಸರಿದು, ಸುರಿದ ಹರಿದ್ವರ್ಣಮಾಲಾ ಜಲಸೇಚನ. ಮೇಲ್ನೋಟ/ಒಳನೋಟಕ್ಕೂ (ಹೃದಯ) ಅನಾಹತದ ಹಸಿರು ಬಣ್ಣ. ಆಹ್! ಆ ಹಸಿರುಬಣ್ಣಕ್ಕೆ ಸದಾ ಇರುವ ಜಿಡಿeshಟಿess ಇಲ್ಲಿ ಎಲ್ಲಿಯೂ ಕ್ಷರವಾಗಲಿಲ್ಲ.ಉಸಿರಿನಷ್ಟು ಸಹಜ ಉದಾರತೆ, ನಿರ್ವ್ಯಾಜ ಪ್ರೀತಿ, ಸದಾ ತುಂಬಿರುವ ಅಂತಃತೃಪ್ತಿ ಹೊಂದಿರುವವನ ಬದುಕು ಹೊರಜಗತ್ತಿಗೆ ದಾರುಣವಾಗಿ ಕಾಣುವುದೇ ಹೆಚ್ಚು. ಕಾವ್ಯ, ಇತಿಹಾಸ, ಪುರಾಣಗಳು – ಇಂತಹವನ್ನೇ ಹೆಕ್ಕಿ ಹೆಕ್ಕಿ ಇದನ್ನೇ ಬದುಕಿನ ತುಂಬುತನವೆಂದು ತೋರಿಸುತ್ತವೆ. ಸದಾ ಗತಿಶೀಲವಾದ ಜಗದ ಪರಿಕ್ರಮದಲ್ಲಿ ಸಾಗುತ್ತಾ ಅದನ್ನೇ ಪ್ರಗತಿಯೆಂದೋ, ಪ್ರವಾಹವೆಂದೋ, ಬದುಕುವ ಜನ ಸಮೂಹದ ಮಧ್ಯೆ ಆಗಲೂ ಇವೆಲ್ಲ ಮಾದರಿಯಾಗಿಯೇ ಉಳಿಯುತ್ತದೆ.ಇಲ್ಲಿ ಅನಾವರಣಗೊಂಡಿರುವುದು ೧೩ ಕತೆ. ಅಂತಃಕರಣವನ್ನು ಬೆರಗುಗೊಳಿಸುವ ಭಾವಸಂಧಿಗಳು ಅಸಂಖ್ಯ. ತಾಳಮದ್ದಳೆಯ ಶ್ರೋತೃವರ್ಗಕ್ಕೆ ವಸ್ತುಗಳೆಲ್ಲವೂ ಪರಿಚಿತ. ಆದರೆ ಇದು ಹೊಸ ಬಗೆಯ ಕುಲುಕುವಿಕೆಯೊಳುದಿಸಿದ ನವನೀತ. ನಾವದನ್ನು ಕಾಯಿಸಿ ಇಟ್ಟುಕೊಂಡರೆ ಬಹುಕಾಲ ಉಳಿವ ಘೃತ. ಕಲ್ಚಾರರ ಬಿಗುವಿಲ್ಲದ ಸರಳ ಭಾಷೆ, ಪಾತ್ರವನ್ನು ಕೇಳುಗನ ಮುಂದೆ ಕೆತ್ತಿ ಇಡುವ ಕ್ರಮ. ಕೇಳುಗನ ಒಳ ತೋಟಿಯನ್ನು ಹೊಕ್ಕು ಒಂದು (ಪಾತ್ರ) ಹಲವಾಗಿ ಅನುಭವಿಸುವ ಅವರ ಬಗೆ ಅದೊಂದು ಸೊಬಗು. ಭೈರಪ್ಪನವರ ’ಪರ್ವ’ದ ಕೊನೆಯ ಭಾಗ, ದೇರಾಜೆಯವರ ’ಕುರುಕ್ಷೇತ್ರಕ್ಕೊಂದು ಆಯೋಗ’ಗಳ ನೆನಪಾಯಿತು.

ಮೋರ್ಟು ರಾಘವೇಂದ್ರ ಸೋಮಯಾಜಿ

ಕಾಯಗಳಿಗೆ ಜೀವ ತುಂಬಿದ್ದಾರೆ

ನಮ್ಮ ಪುರಾಣಗಳೇ ಹಾಗೆ. ಅದು ವಿಶಾಲವಾದ ಸಾಗರ. ನಾವು ಮೊಗೆದಷ್ಟು ನೀರು ದೊರೆಯುತ್ತದೆ. ಅದಕ್ಕೆ ಅಳತೆಯಿಲ್ಲ, ಗಾತ್ರವಿಲ್ಲ. ಈ ವಿಶಾಲವಾದ ಪೌರಾಣಿಕ ಶರಧಿಯಲ್ಲಿ ನೋಟಗಳನ್ನು ವಿಸ್ತರಿಸುತ್ತ ಸಾಗಿದರೆ ಅದಕ್ಕೆ ಬಹುಶಃ ಕೊನೆಯೆಂಬುದಿಲ್ಲ. ಒಂದೊಮ್ಮೆ ಆ ನೋಟಗಳು ನಿಂತಿದ್ದರೆ, ಕೊನೆಯಾಗಿದ್ದರೆ ನಮ್ಮ ಮಹಾಭಾರತ, ರಾಮಾಯಣಗಳಲ್ಲಿ ಇಷ್ಟೊಂದು ಬಗೆಯ ಗ್ರಂಥಗಳು, ಮಹಾಕಾವ್ಯಗಳು, ಆವೃತ್ತಿಗಳು, ಭಾರತದಾದ್ಯಂತ ಸೃಷ್ಟಿಯಾಗುತ್ತಿರಲಿಲ್ಲವೇನೋ! ಇಂದಿಗೂ ಅದು ಪ್ರಸ್ತುತವಾಗಿದೆಯೆಂದರೆ ಅದರ ವಿಶಾಲತೆಗೆ ಸಾಕ್ಷಿಯಾಗುತ್ತದೆ. ಇಲ್ಲಿ ಕಾಣಿಸುವ ಪಾತ್ರಗಳು ಸಾವಿರಾರು. ಕೆಲವೊಂದು ಪಾತ್ರಗಳು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿ ಕುಳಿತಿದ್ದರೆ, ಕೆಲವು ಪಾತ್ರಗಳು ಬಂದು ಮರೆಯಾಗುವ ಕಾಯಗಳಾಗಿವೆ. ಆ ಪಾತ್ರಗಳಿಗೆ ಅಸ್ತಿತ್ವವನ್ನು ಇಲ್ಲಿಯವರೆಗೆ ನಾವು ಬಹುಶಃ ಕಂಡವರಲ್ಲ. ಆದರೆ ಪರಕಾಯ ಪ್ರವೇಶದಲ್ಲಿ ಮಾತ್ರ ಕಲ್ಚಾರರು ಕೆಲವು ಸಣ್ಣ ಪಾತ್ರಗಳನ್ನು ಹಿಡಿದು, ಆ ಪಾತ್ರಗಳಿಗೆ ಜೀವ ತುಂಬಿ, ಅವುಗಳ ಅಂತರ್ಯವನ್ನು, ಅಂತರಂಗವನ್ನು ಪ್ರತಿಪಾದಿಸಿ, ಅದರ ಇರುವಿಕೆಯನ್ನು ತೋರಿಸಿ, ಮತ್ತೆ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದಾರೆ.ಪರಕಾಯ ಪ್ರವೇಶ ಎಂದರೇನು ಎಂಬಲ್ಲಿಂದ ಪ್ರಾರಂಭವಾಗುವ ಕೃತಿಯಲ್ಲಿ, ಕಾಯ ಮತ್ತು ಚೇತನಗಳ ಅಸ್ತಿತ್ವವೇನು ಎನ್ನುವ ವಿವರಣೆ ಬಹಳ ಆನಂದವನ್ನು ಕೊಡುತ್ತದೆ. ಅಲ್ಲಿಂದ ಮುಂದೆ, ೧೩ ಪುರಾಣ ಪಾತ್ರಗಳನ್ನು ವಿಮರ್ಶಿಸಲಾಗಿದೆ. ದಂಡಕನ ಅಂತರಂಗ ಸಮಾಜಕ್ಕೊಂದು ಕನ್ನಡಿಯಂತೆ ಕಾಣುತ್ತದೆ. ಪಾಂಡವರಿಗಾಗಿ ಮಿಡಿಯುವ ಕೌರವ ಪಾಳಯದ ವಿಕರ್ಣ ಏನೂ ಮಾಡಲಾಗದೆ ಕೈಕಟ್ಟಿ ನಿಲ್ಲುವ ಸ್ಥಿತಿ, ಕೀಚಕನ ಸಾವಿಗೆ ನಿರಾಳವಾಗುವ ಸುದೇಷ್ಣೆಯ ಮನಸ್ಸು, ರಾಮಚಂದ್ರನ ಸ್ಥಿತಿಗೆ ಕಾರಣ ತಾನೆಂದು ನೊಂದುಕೊಳ್ಳುವ ಭದ್ರನ ತುಮುಲ, ದ್ರೌಪದಿಯ ಅವಮಾನದ ಪ್ರಕರಣದಲ್ಲಿ ಪ್ರಾತಿಕಾಮಿಯ ಗೊಂದಲದ ಮನಸ್ಥಿತಿ, ಪ್ರತೀಕಾರದ ಅಶ್ವಸೇನ, ಶಲ್ಯ ಸಾರಥಿಯ ತನ್ನ ಒಡೆಯನ ಅಂತರ್ಯ, ಸ್ತ್ರೀ ಸಂವೇದನೆಯನ್ನು ಪ್ರತಿಪಾದಿಸುವ ರುಮೆ – ಹೀಗೆ ಪಾತ್ರಗಳ ಪರಕಾಯ ಪ್ರವೇಶ ಮುಂದುವರಿದು, ಅಯ್ಯೋ ಇಷ್ಟು ಬೇಗ ಪುಸ್ತಕ ಮುಗಿಯಿತಲ್ಲ ಎನ್ನುವ ಕೊರಗು ಉಂಟಾಗುತ್ತದೆ. ಇನ್ನಷ್ಟು ಪಾತ್ರಗಳು ಇದ್ದಿದ್ದರೆ ಎನ್ನುವ ಭಾವ ತಳೆದು ಬಿಡುತ್ತದೆ. ಆದರೆ ಇಲ್ಲಿ ಪ್ರಕಟಿತ ಪಾತ್ರಗಳು ಮಾತ್ರ ತಲೆಯಲ್ಲಿ ಗಿರಕಿ ಹೋಡೆಯುತ್ತಲೇ, ನಮಗೊಂದು ಹೊಸ ಆಲೋಚನೆಗಳನ್ನು ಮೂಡಿಸುವುದು ಮಾತ್ರ ಸುಳ್ಳಲ್ಲ.

ರವಿ ಮಡೋಡಿ, ಸಾಫ್ಟ್‌ವೇರ್ ತಂತ್ರಜ್ಞರು, ಬೆಂಗಳೂರು

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ