ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

 • ಭವಿಷ್ಯದಲ್ಲಿ ಸೇನಾಪಡೆಗಳ ಮಟ್ಟ ಹೇಗಿರಬೇಕು; ನಮಗೆ ಯಾವೆಲ್ಲ ಫೈಟರ್ ವಿಮಾನಗಳ ಅಗತ್ಯವಿದೆ; ಅವುಗಳ ಜೀವಿತಾವಧಿಯ ವೆಚ್ಚ ವಿಶ್ಲೇಷಣೆ, ಹಂತಹಂತಗಳಲ್ಲಿ ವಾರ್ಷಿಕ ಉನ್ನತೀಕರಣ, ಅವುಗಳಿಗೆ ಹಣ ಒದಗಿಸುವುದು ಮುಂತಾದ ವಿಷಯಗಳ ಕುರಿತು ರಚನಾತ್ಮಕವಾದ ಚರ್ಚೆಯನ್ನು ನಡೆಸಬೇಕೇ ಹೊರತು ಗದ್ದಲ ಎಬ್ಬಿಸಿ ಗೊಂದಲ ನಿರ್ಮಿಸಬಾರದು; ಮತ್ತು ಆ ಮೂಲಕ ನಿರ್ಧಾರ ಕೈಗೊಳ್ಳುವುದಕ್ಕೆ ಅಡ್ಡಿಯಾಗಿ ಪರಿಣಮಿಸಬಾರದು.

  ಪರಸ್ಪರ ವಿರುದ್ಧವಾದ ಮಾತುಗಳನ್ನಾಡುವುದು, ಉತ್ಪ್ರೇಕ್ಷೆ ಮಾಡುವುದು, ದಾರಿತಪ್ಪಿಸುವುದು ಹಾಗೂ ಚರ್ಚೆಯನ್ನೇ ಭಂಗಗೊಳಿಸುವುದು – ಇವುಗಳಿಗಿಂತ ಈಗ ಹಿಂದೆಂದಿಗಿಂತಲೂ ಮುಖ್ಯವಾದ ವಿಷಯವೆಂದರೆ, ಭಾರತೀಯ ವಾಯುಪಡೆಯ ಆಧುನಿಕೀಕರಣಕ್ಕೆ ನಾವು ತಕ್ಷಣದಲ್ಲಿ ಏನು ಮಾಡಬೇಕು ಎನ್ನುವ ಬಗ್ಗೆ ಸರಿಯಾದ ಒಂದು ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದಾಗಿದೆ. ಅದಕ್ಕೆ ಸಮೀಪ, ಮಧ್ಯ ಹಾಗೂ ದೂರಮಟ್ಟದ ಯುದ್ಧವಿಮಾನಗಳನ್ನು ಹೊಂದುವುದು ಮತ್ತು ನಮ್ಮ ಶತ್ರುಗಳು ಯಾವುದೇ ದುಸ್ಸಾಹಸಕ್ಕೆ ಇಳಿಯುವುದನ್ನು ತಪ್ಪಿಸುವುದಕ್ಕೆ ಬೇಕಾದ ಫೈಟರ್‌ಗಳನ್ನು ಹೊಂದುವುದು ಅವಶ್ಯ. ೨೦೩೦ರ ಹೊತ್ತಿಗೆ ೫೦ರಷ್ಟು ವಾಯುತುಕಡಿ (ಸ್ಕ್ವಾಡ್ರನ್)ಗಳು ಸಾಕೆ? ಅವು ಎಷ್ಟಿರಬೇಕು? ಎಂತಹ ಮಿಶ್ರಣ ಇರಬೇಕು? ಅವುಗಳ ವೆಚ್ಚ ಎಷ್ಟು ಮತ್ತು ಹಂತಹಂತವಾಗಿ ಅವುಗಳನ್ನು ಹೇಗೆ ಸಾಧಿಸಬಹುದು?

  ಹಿಂದೆ ರಕ್ಷಣಾ ಸಚಿವಾಲಯದ ಸಂಸದೀಯ ಸ್ಥಾಯೀ ಸಮಿತಿಯು ವಾಯುತುಕಡಿಗಳ ಸಂಖ್ಯೆಯನ್ನು ಮಂಜೂರಾಗಿರುವ ೩೯.೫ರಿಂದ ೪೨ಕ್ಕೆ ಏರಿಸಬೇಕೆಂದು ಶಿಫಾರಸು ಮಾಡಿತ್ತು. ಪ್ರತಿ ವಾಯುತುಕಡಿಯಲ್ಲಿ ಸುಮಾರು ೧೮-೨೦ ವಿಮಾನಗಳಿರುತ್ತವೆ ಎಂದು ಪರಿಗಣಿಸಿದರೆ ಒಟ್ಟು ಫೈಟರ್‌ಗಳ ಆವಶ್ಯಕತೆ ಸುಮಾರು ೭೫೬-೮೪೦ ಆಗುತ್ತದೆ.

  ೨೦೩೦ರ ಹೊತ್ತಿಗೆ ಸುಮಾರು ೫೦ ವಾಯುತುಕಡಿಗಳು ಇರಬೇಕು ಎನ್ನುವುದಾದರೆ ಅಪೇಕ್ಷಿತ ಸಂಖ್ಯೆ ೯೦೦ರಿಂದ ೧೦೦೦ದಷ್ಟಾಗುತ್ತದೆ. ಹಾಗಿದ್ದರೆ ಶಸ್ತ್ರಾಸ್ತ್ರಗಳ ಮಿಶ್ರಣವಿನ್ಯಾಸ ಹೇಗಿರಬೇಕು?

  ಅದು – ಐದು ಸಾಮಾನ್ಯ ಸ್ಟೆಲ್ತ್ ಫೈಟರ್‌ಗಳು, ಸೂಪರ್ Su-30MKI, Su-30MKI, ತೇಜಸ್, ರಾಫೆಲ್, ಸುಧಾರಿತ ಮಿಗ್-೨೯, ಸುಧಾರಿತ ಮಿರಾಜ್-೨೦೦೦, ಅಪ್‌ಗ್ರೇಡೆಡ್ ಜಾಗ್ವಾರ್; ಇಷ್ಟೇ ಅಲ್ಲದೆ ಮಾನವರಹಿತ ವೈಮಾನಿಕ ಯುದ್ಧವಿಮಾನ (UACV – Unmanned Aerial Combat Vehicle)  ಮತ್ತು ವಿವಿಧ ರೀತಿಯ ಕ್ಷಿಪಣಿಗಳು.

  ದೇಶದ ಹಿತಾಸಕ್ತಿಯಲ್ಲೂ ರಾಜಕೀಯ
  ರಾಫೆಲ್ ಯುದ್ಧವಿಮಾನ ಖರೀದಿಗೆ ಸಂಬಂಧಿಸಿ ವಿರೋಧ ಪಕ್ಷಗಳು ಎಬ್ಬಿಸಿದ ವಿವಾದದಿಂದಾಗಿ ಭಾರತೀಯ ವಾಯುಪಡೆಯ ಆಧುನಿಕೀಕರಣ ಅದರಲ್ಲೂ ಮುಖ್ಯವಾಗಿ ೨೦೫೦ರ ಹೊತ್ತಿಗೆ ಸುಮಾರು ೫೦ ವಾಯುತುಕಡಿಗಳಿರಬೇಕು ಎನ್ನುವ ಗಮ್ಯಕ್ಕೆ ಮಂಕು ಕವಿದಂತಾಗಿದೆ.

  ಅದಕ್ಕಿಂತ ಹೆಚ್ಚಾಗಿ ಯಶವಂತ ಸಿನ್ಹಾ, ಅರುಣ್ ಶೌರಿ ಮತ್ತು ಪ್ರಶಾಂತ್ ಭೂಷಣ್ – ಈ ಮೂವರು ಮಾಧ್ಯಮಗಳಲ್ಲಿ ಉಂಟುಮಾಡಿದ ಆಕ್ರೋಶ ಮತ್ತು ಗದ್ದಲದಿಂದಾಗಿ ವಾಯುಪಡೆಯ ಆಧುನಿಕೀಕರಣದ ಮುಖ್ಯವಿಷಯವನ್ನೇ ಭಂಗಗೊಳಿಸುವಂತಿದೆ. ಈ ಮೂವರೂ ವಾಯುಸೇನೆಯ ಸ್ಥಿತಿಗತಿಯನ್ನು ಬಲ್ಲವರಾದ ಕಾರಣ, ಅಲ್ಲಿನ ಆಧುನಿಕೀಕರಣದ ಸಮಸ್ಯೆಗಳನ್ನು ಬೆಳಕಿಗೆತರಬೇಕಿತ್ತು; ಮತ್ತು ರಾಷ್ಟ್ರೀಯ ಭದ್ರತೆಗೆ ನ್ಯಾಯ ಒದಗಿಸಬೇಕಿತ್ತು. ಅವರಲ್ಲಿ ಇಬ್ಬರಂತೂ ಕೇಂದ್ರ ಸಂಪುಟದಲ್ಲಿ ಸಚಿವರಾಗಿದ್ದವರು. ಅಂಥವರು ದೇಶಕ್ಕೆ ಹಾನಿ ಎಸಗುವ ’ಪಾರ್ಶ್ವವಾಯು ರಾಜಕಾರಣ’ದಲ್ಲಿ ತೊಡಗಿರುವುದು ರಾಷ್ಟ್ರಕ್ಕೆ ಎಸಗುವ ಅನ್ಯಾಯವೇ ಸರಿ.

  ಪ್ರತಿವರ್ಷ ನಡೆಯುವ ವಾಯುಪಡೆ ಕಮಾಂಡರ್‌ಗಳ ಸಮಾವೇಶದ ಹೊತ್ತಿಗೆ ವಾಯುಪಡೆ ತನ್ನ ಭವಿಷ್ಯದ ಯೋಜನೆಗಳನ್ನು ಪ್ರಕಟಿಸಬೇಕು. ಅದರಲ್ಲಿ ಪ್ರಧಾನಿ, ರಾಷ್ಟ್ರೀಯ ಭದ್ರತೆಯ ಸಂಪುಟ ಸಮಿತಿ ಸದಸ್ಯರು, ರಕ್ಷಣಾ ಯೋಜನಾ ಸಮಿತಿ ಸದಸ್ಯರು, ಹಿಂದುಸ್ತಾನ್ ಏರೋನಾಟಿಕ್ಸ್ ಲಿ. (ಎಚ್‌ಎಎಲ್) ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿರ್‌ಡಿಓ) ಮುಖ್ಯಸ್ಥರು ಭಾಗವಹಿಸುತ್ತಾರೆ.

  ನಮ್ಮ ಪ್ರಸ್ತುತ ಶತ್ರುಗಳನ್ನು ಗಮನದಲ್ಲಿರಿಸಿಕೊಂಡು ೨೦೩೦ರ ಹೊತ್ತಿಗೆ ನಾವು ಯಾವೆಲ್ಲ ತಾಂತ್ರಿಕ ಸಾಮರ್ಥ್ಯವನ್ನು ಹೊಂದಬೇಕು; ಯಾವ ಶಸ್ತ್ರಾಸ್ತ್ರಗಳು ನಮ್ಮಲ್ಲಿ ಇರಬೇಕು ಎಂಬುದನ್ನು ಆ ಸಮಾವೇಶದಲ್ಲಿ ತೀರ್ಮಾನಿಸಲಾಗುತ್ತದೆ. ಅದರಂತೆ ಆರು ಹೈಪರ್‌ಸೋನಿಕ್ ಫೈಟರ್ ದಳಗಳು, ಹತ್ತು ೫/೫-ಪ್ಲಸ್ ಜನರೇಶನ್ ಸ್ಕ್ವಾಡ್ರನ್‌ಗಳು, ಮೂವತ್ತು ೪-ಪ್ಲಸ್ ಜನರೇಶನ್ ಸ್ಕ್ಯಾಡ್ರನ್‌ಗಳು, ಹತ್ತು ಭೂದಾಳಿ ಸ್ಕ್ಯಾಡ್ರನ್‌ಗಳು ಅವಶ್ಯಬೀಳುತ್ತವೆ. ಅದಲ್ಲದೆ ರಾಡಾರ್‌ಗಳು, ಎಲ್ಲ ಬಗೆಯ ಜನರೇಶನ್-೬ರ ಕ್ಷಿಪಣಿಗಳು ಕೂಡ ಬೇಕಾಗುತ್ತವೆ. ಶಸ್ತ್ರರಹಿತ ವೈಮಾನಿಕ ಸಮರವಾಹನಗಳು ಮತ್ತು ಸಂಬಂಧಪಟ್ಟ ಮೂಲಸವಲತ್ತುಗಳ ಬಗ್ಗೆ ಕೂಡ ಮುಂಚಿತವಾಗಿ ಹೇಳಬೇಕು.

  ಮುಖ್ಯವಾಗಿ ಸರಿಯಾದ ಫೈಟರ್ ವಿಮಾನಗಳನ್ನು ಆರಿಸುವಲ್ಲಿ ಮತ್ತು ಕಾರ್ಯಾಚರಣೆಯ ಅಗತ್ಯಕ್ಕೆ ಅನುಗುಣವಾಗಿ ಅವುಗಳ ಸಂಖ್ಯೆಯನ್ನು ಕಾಪಾಡುವಲ್ಲಿ ಫೈಟರ್‌ಗಳ ಆರಂಭದಿಂದ ಅಂತ್ಯದವರೆಗಿನ ವೆಚ್ಚವೂ ನಿರ್ಣಾಯಕವೆನಿಸುತ್ತದೆ. ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ ೨೦೧೩ರಲ್ಲಿ ಒಂದು 30-MKI ವಿಮಾನಕ್ಕೆ ತಗಲುವ ವೆಚ್ಚ ೩೫೮ ಕೋಟಿ ರೂ.ಗಳಾಗಿತ್ತು; ‘ತೇಜಸ್ MK-1Aಯದ್ದು ೪೬೩ ಕೋಟಿ ರೂ. (೬೭೦ ಲಕ್ಷ ಡಾಲರ್). ೮೩ ’ತೇಜಸ್ MK-1A’ ವಿಮಾನಗಳ ಉತ್ಪಾದನೆಗೆ ಮುಂಗಡಪತ್ರದಲ್ಲಿ ೫೦,೦೨೫ ಕೋಟಿ ರೂ.ಗಳನ್ನು ಒದಗಿಸಿದ್ದು ಅದರಂತೆ ಒಂದು ವಿಮಾನಕ್ಕೆ ತಗಲುವ ವೆಚ್ಚ ೬೦೦ ಕೋಟಿ ರೂ. ಗಳಿಗಿಂತಲೂ ಅಧಿಕವಾಗುತ್ತದೆ. ಅದಕ್ಕೆ ಹೋಲಿಸಿದರೆ ಒಂದು ರಾಫೇಲ್ ವಿಮಾನಕ್ಕೆ ತಗಲುವ ವೆಚ್ಚ ಸುಮಾರು ೬೭೦ ಕೋಟಿ ರೂ.

  ಚೀನಾದ Su-35 ಮತ್ತು J-31ಫೈಟರ್ ವಿಮಾನಗಳಿಗೆ ಎದುರಾಗಿ ೮೦ Su-೩೦ ಎಂಕೆಐಗಳನ್ನು ’ಸೂಪರ್ ಸುಕೋಯ್’ ದರ್ಜೆಗೆ ಏರಿಸಬೇಕಾಗಿದೆ. ಅದಕ್ಕಾಗಿ ಆ ವಿಮಾನಗಳಿಗೆ ೩೦೦ ಕಿ.ಮೀ. ವ್ಯಾಪ್ತಿಯವರೆಗಿನ ದೂರವ್ಯಾಪ್ತಿ ಕ್ಷಿಪಣಿಗಳನ್ನು ಅಳವಡಿಸಬೇಕಾಗಿದೆ ಮತ್ತು ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಗಳನ್ನು ಜೋಡಿಸಬೇಕು. ಆಧುನಿಕ ಡಿಜಿಟಲ್ ಶಸ್ತ್ರಾಸ್ತ್ರನಿಯಂತ್ರಣ ವ್ಯವಸ್ಥೆ ಹಾಗೂ ಹೆಚ್ಚು ಸುಧಾರಿತ ಜಾಮಿಂಗ್ ತಡೆ ವ್ಯವಸ್ಥೆ, ಮುಂದುವರಿದ ಗುರಿನಿಗದಿ (ಟಾರ್ಗೆಟಿಂಗ್) ಮತ್ತು ಆಕಾಶದಲ್ಲಿಯೆ ಒಂದು ಸ್ಥಾನದಿಂದ ಬೇರೆಡೆಗೆ ಕ್ರಮಿಸಬಲ್ಲವು, ಸಮೀಪ ಹಾಗೂ ಕಣ್ಣಳತೆಯ ಆಚೆಗಿನ ಕ್ಷಿಪಣಿಗಳು, ಆಕಾಶದಿಂದ ನೆಲದತ್ತ ಹಾರುವ ಕ್ಷಿಪಣಿಗಳು, ಸಮೀಪದಿಂದ ಬಳಸುವ ಶಸ್ತ್ರಾಸ್ತ್ರಗಳು – ಇವೆಲ್ಲವೂ ಬೇಕಾಗಿದೆ.

  ಈಗ, ಈ ಕ್ಷೇತ್ರದಲ್ಲಿ ೬೦ ವರ್ಷಗಳ ಸೇವೆಯ ಬಳಿಕವೂ ಎಚ್‌ಎಎಲ್, ಡಿಆರ್‌ಡಿಓ, ಗ್ಯಾಸ್ ಟರ್ಬೈನ್ ಸಂಶೋಧನ ಸಂಸ್ಥೆ(ಜಿಟಿಆರ್‌ಇ) – ಇವು ಲೋಹಶಾಸ್ತ್ರ ಮತ್ತು ಮೂಲಸವಲತ್ತಿನ ಸಾಮರ್ಥ್ಯದ ಕೊರತೆಯಿಂದಾಗಿ ಮುಂದುವರಿದ ಇಂಜಿನ್‌ಗಳ ಉತ್ಪಾದನೆಯಲ್ಲಿ ತಾಂತ್ರಿಕವಾಗಿ ಹಿಂದೆಬಿದ್ದಿವೆ.
  ಆದ್ದರಿಂದ ಸಂಸತ್ಸದಸ್ಯರು, ಮಾಧ್ಯಮಗಳು ಹಾಗೂ ರಕ್ಷಣಾತಜ್ಞರು ಈಗ ಭವಿಷ್ಯದಲ್ಲಿ ಸೇನಾಪಡೆಗಳ ಮಟ್ಟ ಹೇಗಿರಬೇಕು; ನಮಗೆ ಯಾವೆಲ್ಲ ಫೈಟರ್ ವಿಮಾನಗಳ ಅಗತ್ಯವಿದೆ; ಅವುಗಳ ಜೀವಿತಾವಧಿಯ ವೆಚ್ಚ ವಿಶ್ಲೇಷಣೆ, ಹಂತಹಂತಗಳಲ್ಲಿ ವಾರ್ಷಿಕ ಉನ್ನತೀಕರಣ, ಅವುಗಳಿಗೆ ಹಣ ಒದಗಿಸುವುದು ಮುಂತಾದ ವಿಷಯಗಳ ಕುರಿತು ರಚನಾತ್ಮಕವಾದ ಚರ್ಚೆಯನ್ನು ನಡೆಸಬೇಕೇ ಹೊರತು ಗದ್ದಲ ಎಬ್ಬಿಸಿ ಗೊಂದಲ ನಿರ್ಮಿಸಬಾರದು; ಮತ್ತು ಆ ಮೂಲಕ ನಿರ್ಧಾರ ಕೈಗೊಳ್ಳುವುದಕ್ಕೆ ಅಡ್ಡಿಯಾಗಿ ಪರಿಣಮಿಸಬಾರದು.

  ಉದಾಹರಣೆಗೆ, ಫೈಟರ್ ವಿಮಾನಗಳಲ್ಲಿ ಇಂಜಿನ್ ಮುಖ್ಯ ವಿಭಾಗವಾಗಿರುತ್ತದೆ. ಆದ್ದರಿಂದ ಎಚ್‌ಎಎಲ್ ಮುಖ್ಯಸ್ಥರು ಮತ್ತು ಡಿಆರ್‌ಡಿಓದವರು ತಮಗೆ ಯಾವ ಇಂಜಿನ್‌ಗಳು ಬೇಕು ಎಂಬುದನ್ನು ದೃಢಪಡಿಸಬೇಕು; ತೇಜಸ್ ಮಾರ್ಕ್-೧ಕ್ಕೆ ೧೦೦ ಎಫ್-೪೧೪ ಇಂಜಿನ್, ತೇಜಸ್ ಮಾರ್ಕ್-೨ಕ್ಕೆ ೧೦೦ ಎಫ್-೪೧೪ ಇಂಜಿನ್‌ಗಳು, ಮುಂದಿನ ತಲೆಮಾರಿನ ಫೈಟರ್‌ಗಳಿಗೆ ೪೦೦ ಎಫ್-೪೧೪ ಸುಧಾರಿತ ಇಂಜಿನ್‌ಗಳು. ಒಂದು ಏರೋ-ಇಂಜಿನ್‌ನ ಜೀವಿತಾವಧಿ ಸುಮಾರು ೧,೫೦೦ ಗಂಟೆಗಳು; ಸೇವಾವಧಿ ಐದಾರು ಸಾವಿರ ಗಂಟೆ; ಅಂದರೆ ಮೂರೂವರೆ ಇಂಜಿನ್ ಬೇಕಾಗುತ್ತದೆ. ೭೦೦ ಇಂಜಿನ್‌ಗಳಲ್ಲಿ ಜಿಇ ಎಷ್ಟನ್ನು ಒದಗಿಸುತ್ತದೆ? ತೇಜಸ್ ಮಾರ್ಕ್-೧ ಮತ್ತು ೨ಕ್ಕಾಗಿ ದೇಶೀಯವಾಗಿ ಎಷ್ಟು ಇಂಜಿನ್‌ಗಳನ್ನು ಉತ್ಪಾದಿಸಲಾಗುತ್ತದೆ? ಮುಂದಿನ ತಲೆಮಾರಿನ ಫೈಟರ್‌ಗಳಲ್ಲಿ ದೇಶೀಯವಾಗಿ ಎಷ್ಟು ಇಂಜಿನ್ ತಯಾರಾಗುತ್ತವೆ? ಡಿಆರ್‌ಡಿಓ ಅಂದಾಜಿನ ಪ್ರಕಾರ ಮುಂದಿನ ದಶಕದಲ್ಲಿ ಬೇಕಾಗುವ ಇಂಜಿನ್‌ಗಳ ಮೌಲ್ಯ ಸುಮಾರು ೩.೫೦ ಲಕ್ಷ ಕೋಟಿ ರೂ. ನಿಜಸಂಗತಿಯೆಂದರೆ, ಇಂಜಿನ್‌ಗಳ ಸಂಶೋಧನೆ ಮತ್ತು ಅವುಗಳ ವೆಚ್ಚದ ಬಗ್ಗೆ ಈಗ ಮಾಹಿತಿಪೂರ್ಣವಾದ ಚರ್ಚೆ ಇನ್ನೂ ನಡೆಯಬೇಕಾಗಿದೆ!

  ನಿವೃತ್ತ ಏರ್ ಮಾ?ಲ್ ಅನಿಲ್ ಚೋಪ್ರಾ ಅವರು ೨೦೧೭ರಲ್ಲಿ ಬರೆದ ಒಂದು ಲೇಖನವು, ೧೯೫೭ರಲ್ಲಿ ಸ್ಥಾಪಿತವಾದ ಎಚ್‌ಎಎಲ್ ಇಂಜಿನ್ ಡಿವಿಷನ್ ಬೆಂಗಳೂರಿನಲ್ಲಿ ಮತ್ತು ಡಿಆರ್‌ಡಿಒ-ಜಿಟಿಆರ್‌ಇನಲ್ಲಿ ಯಾವ ರೀತಿಯಲ್ಲಿ ಏರ್‌ಕ್ರಾಫ್ಟ್ ಜೆಟ್ ಇಂಜಿನ್‌ಗಳ ಅಭಿವೃದ್ಧಿ ಆಗಿವೆ ಎನ್ನುವ ಮಾಹಿತಿಯನ್ನು ನೀಡುತ್ತದೆ. ಎರಡನೇ ವಿಶ್ವಯುದ್ಧದ ಬಳಿಕ, ಯುದ್ಧವಿಮಾನ ಮಾತ್ರವಲ್ಲದೆ, ಗ್ಯಾಸ್ ಟರ್ಬೈನ್ ಇಂಜಿನ್, ಟರ್ಬೋಜೆಟ್, ಸೂಪರ್‌ಸೋನಿಕ್ ಏರ್‌ಕ್ರಾಫ್ಟ್‌ಗಳಿಗೆ ಆಫ್ಟರ್‌ಬರ್ನರ್ ಇಂಜಿನ್‌ಗಳ ಅಗತ್ಯವಿಲ್ಲದ ಸೂಪರ್‌ಕ್ರೂಸ್ ಇಂಜಿನ್‌ಗಳನ್ನು ಅಭಿವೃದ್ಧಿಗೊಳಿಸಿರುವುದನ್ನು ಗುರುತಿಸಿದ್ದಾರೆ.

  ಭವಿಷ್ಯದ ಅಗತ್ಯ
  ಸೂಪರ್ ಕ್ರೂಸ್‌ನಿಂದ ಎಫ್-೨೨ ರ‍್ಯಾಫ್ಟರ್, ರಾಫೇಲ್, ಯೂರೋ ಫೈಟರ್ ಟೈಫೂನ್ ಮತ್ತು ಎಫ್-೩೫ ಯುದ್ಧವಿಮಾನಗಳು ಸೂಪರ್‌ಸಾನಿಕ್ ವೇಗವನ್ನು ಪಡೆದುಕೊಳ್ಳುತ್ತವೆ; ಮತ್ತು ಆ ವೇಗವನ್ನು ಅನಿರ್ದಿಷ್ಟಾವಧಿಯವರೆಗೆ ಉಳಿಸಿಕೊಳ್ಳುತ್ತವೆ; ಅದಲ್ಲದೆ ಸೂಪರ್‌ಕ್ರೂಸ್ ಐಆರ್ (ಇನ್‌ಫ್ರಾರೆಡ್) ಪ್ರಮಾಣವನ್ನು ಶೇ. ೭೫ರ? ತಗ್ಗಿಸುತ್ತದೆ. ಅದರಿಂದ ಕ್ಷಿಪಣಿ ಕಾರ್ಯಾಚರಣೆಯ ವೇಳೆ ಸುರಕ್ಷಿತವಾಗಿ ಉಳಿಯುತ್ತದೆ.

  ವಿಮಾನದ ಜೆಟ್ ಇಂಜಿನ್‌ಗಳನ್ನು ಉತ್ಪಾದಿಸುವ ಕಾರ್ಯ ಈಗಲೂ ಕೆಲವರಿಗೆ ಸೀಮಿತವಾದ ಕ್ಷೇತ್ರವಾಗಿದೆ ಎಂಬುದನ್ನಿಲ್ಲಿ ಹೇಳಲೇಬೇಕು; ಅವುಗಳು ಮುಖ್ಯವಾಗಿ ಪ್ರಾಟ್ ಆಂಡ್ ವಿಟ್ನಿ (ಅಮೆರಿಕ), ಜನರಲ್ ಎಲೆಕ್ಟ್ರಿಕ್ (ಅಮೆರಿಕ), ಲ್ಯೂಲ್ಕಾ/ಸ್ಯಾಟರ್ನ್(ರ?)), ಯೂರೋ ಜೆಟ್ (ಬ್ರಿಟನ್, ಜರ್ಮನಿ, ಇಟಲಿ, ಸ್ಪೇಯ್ನ್) ಮತ್ತು ’ಎಸ್‌ಎನ್‌ಇಸಿಎಂಎ’ (ಫ್ರಾನ್ಸ್, ಮಿರಾಜ್-೨೦೦೦, ರಾಫೇಲ್). ಚೀನಾದಂತಹ ಕೆಲವು ಇತರ ದೇಶಗಳು ಲಭ್ಯವಿರುವ ಯುದ್ಧವಿಮಾನ ಎಂಜಿನ್‌ಗಳ ವಿನ್ಯಾಸದ ಆಧಾರದಲ್ಲಿ ಹೊಸ ಇಂಜಿನ್‌ಗಳನ್ನು ಆವಿಷ್ಕರಿಸಲು ಶ್ರಮಿಸುತ್ತಿವೆ; ಹೊಸತನ್ನು ಕಂಡುಹಿಡಿಯುವುದಿರಲಿ ಅಥವಾ ರಿವರ್ಸ್ ಇಂಜಿನಿಯರಿಂಗ್ ಇರಲಿ, ಎರಡರಲ್ಲೂ ಎಚ್‌ಎಎಲ್ ಮತ್ತು ಡಿಆರ್‌ಡಿಓ-ಜಿಟಿಆರ್‌ಇಗಳು ಬಹಳಷ್ಟು ಹಿಂದಿವೆ.

  ಹಿಂದಿರುಗಿ ನೋಡಿದರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಎಚ್‌ಎಎಲ್ ಮತ್ತು ಡಿಆರ್‌ಡಿಓ-ಜಿಟಿಆರ್‌ಇಗಳು ಎಲ್‌ಸಿಎ ತೇಜಸ್‌ನ ಹೈಟೆಕ್ ಇಂಜಿನ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರೀಕ್ಷಿತ ಮಟ್ಟವನ್ನು ಸಾಧಿಸಲಾಗಿಲ್ಲ ಎಂಬುದು ಗಮನಕ್ಕೆ ಬರುತ್ತದೆ; ಯೋಜನೆ ಆರಂಭವಾಗಿ ೨೫ ವ?ಗಳಾದರೂ ನ್ಯೂನತೆ ಉಳಿದಿದೆ. ಬಹುಶಃ ಹೊಸತನ್ನು ಕಂಡುಹಿಡಿಯುವುದರಲ್ಲಿ ಆಸಕ್ತಿ ಕಡಮೆ ಎನಿಸುತ್ತದೆ. ಬಹುಶಃ ಜಿಟಿಆರ್‌ಇಯ ಹೆಸರನ್ನೇ ಬದಲಿಸಬೇಕೇನೋ!

  ನನ್ನ ಮನವಿ ಸರಳವಾದದ್ದು: ಇದರಲ್ಲಿ ರಾಜಕೀಯ ಬೇಡ ಮತ್ತು ವಾಯುಸೇನೆಯ ಅಗತ್ಯಗಳ ಅಧುನಿಕೀಕರಣಕ್ಕೆ ತಡೆಯೊಡ್ಡಬೇಡಿ. ಇದರಲ್ಲಿ ಪಾರದರ್ಶಕತೆ ಇರಲಿ. ಸಂಸತ್ತಿನ ಒಳಗೆ ಹಾಗೂ ಹೊರಗೆ ಸಾರ್ವಜನಿಕ ವೇದಿಕೆಗಳಲ್ಲಿ ಮುಕ್ತ ಚರ್ಚೆ ನಡೆಯಲಿ.

  ಅನುವಾದ: ಎಂ.ಬಿ. ಹಾರ‍್ಯಾಡಿ

  ರಾಫೇಲ್ ಖರೀದಿ : ವಿವಾದ ಬೇಡ

 • ಭಾರತೀಯ ಪಾರಂಪರಿಕ ಕಲೆಯ ಅನನ್ಯತೆಯೆಂದರೆ ಧಾರ್ಮಿಕತೆ ಮತ್ತು ಕಲೆಗಳ ಪರಸ್ಪರ ಅನ್ಯೋನ್ಯಾಶ್ರಯವನ್ನು ಚಿತ್ರಕಲೆ ಮತ್ತು ಶಿಲ್ಪಕಲೆಗಳು ಬಿಂಬಿಸಿರುವುದು. ಪಾರಲೌಕಿಕ ಜಿಜ್ಞಾಸೆ, ಧಾರ್ಮಿಕತೆ, ಕಲೆ – ಇವು ಮೂರೂ ಸಮ್ಮಿಳಿತವಾಗಿರುವುದು ಇಲ್ಲಿಯ ವಿಶೇಷತೆ. ಮಂತ್ರದರ್ಶನ, ತತ್ತ್ವಜಿಜ್ಞಾಸೆ, ಸೌಂದರ್ಯಾನುಭೂತಿ – ಇವು ಒಂದರ ಮೇಲೆ ಇನ್ನೊಂದು ಹೇಗೆ ಪ್ರಭಾವ ಬೀರುತ್ತ ಬಂದವೆಂಬುದರ ಭವ್ಯ ಅಭಿವ್ಯಕ್ತಿಯನ್ನು ಐದಾರು ಸಾವಿರ ವರ್ಷಗಳ ಕಲಾನುಸಂಧಾನದಲ್ಲಿ ಕಾಣುತ್ತೇವೆ. ಅನ್ಯ ದೇಶಗಳಿಗಿಂತ ಬಹುಪಾಲು ಹೆಚ್ಚು ಸಮೃದ್ಧವಾಗಿರುವ ಭಾರತೀಯ ವಾಸ್ತುಕಲೆಯಲ್ಲಿ ಎದ್ದುಕಾಣುವ ಸಂಗತಿಯೆಂದರೆ ದೇವದೇವತೆಗಳ ಮತ್ತು ಪೌರಾಣಿಕ ಆಖ್ಯಾನಗಳ ಸಾಂಕೇತಿಕತೆಯ ಅರಿವು ಜನಸಾಮಾನ್ಯರ ಮಟ್ಟದಲ್ಲಿಯೂ ಪ್ರಚಲಿತವೇ ಆಗಿದ್ದಿತೆಂಬುದು. ಉದಾಹರಣೆಗೆ: ಬ್ರಹ್ಮ ವಿಷ್ಣು ಮಹೇಶ್ವರರನ್ನು ಒಂದೇ ಶಿಲ್ಪದಲ್ಲಿ ಸಂಯೋಜಿಸಿರುವುದು ವಿರಳವಲ್ಲ. ಹೀಗೆ ಆ ದೇವತೆಗಳು ಒಂದೇ ಮೂಲತತ್ತ್ವದ ಬೇರೆಬೇರೆ ಶಕ್ತಿವಿಶೇಷಗಳ ಅಭಿವ್ಯಕ್ತಿಗಳು ಎಂಬುದನ್ನು ಧ್ವನಿಸಲಾಗಿದೆ. ಮಹಾಬಲಿಪುರ ದ ಮಹಿಷಮಂಡಪದ ವಿಷ್ಣು ಅನಂತಶಾಯಿ ಶಿಲ್ಪದಲ್ಲಿ (ಕ್ರಿ..ಶ. ೭ನೇ ಶತಮಾನದ ಆರಂಭ) ಇದನ್ನು ಕಾಣಬಹುದು. ಅನಂತಶಯನ ಎಂಬ ಕಲ್ಪನೆಯೇ ಅದ್ಭುತವಾದದ್ದು. ಅನಂತನ ವಸತಿಗೆ ಇಡೀ ವಿಶ್ವವೇ ಬೇಕಲ್ಲವೆ! ಶೇಷ್ಠ ಎಂಬ ಕಲ್ಪನೆಯೂ ವಿಸ್ಮಯಕರ. ಮಹಾಸಾಗರದ ಒಂದು ಸಣ್ಣ ಅಂಶವಷ್ಟೆ.

  ಇದು ಉತ್ಥಾನ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕ ಡಾ|ಎಸ್. ಆರ್. ರಾಮಸ್ವಾಮಿಯವರು ೧೩ ಏಪ್ರಿಲ್ ೨೦೧೪ರಂದು ಮೈಸೂರಿನ ರಾಮ್‌ಸನ್ಸ್ ಕಲಾ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ ಕಲಾವಿದ ಜಿ.ಎಲ್.ಎನ್. ಸಿಂಹ ಅವರ ಮಂತ್ರಮುಕುರ ಚಿತ್ರಸಮೂಹದ ಪ್ರದರ್ಶನದ ಹಿನ್ನೆಲೆಯಲ್ಲಿ ಮಾಡಿದ ಭಾಷಣದ ಪಾಠ.

  ಮೂಲೋಕಗಳಾಗಿ ಹೊಮ್ಮಿದೆ. ಉಳಿದ ಅಗಾಧತೆಯೇ ಶೇಷ ಎಂದರೆ ಅವ್ಯಾಕೃತ ವಾಗಿಯೆ ಉಳಿದುಕೊಂಡದ್ದು. ವಿಷವು ಶೇಷನ ಮಡಿಲಲ್ಲಿ ಪವಡಿಸಿರುವುದು ಒಂದೇ ಮಹಾತತ್ತ್ವವು ಮನುಷ್ಯರೂಪದಲ್ಲಿಯೂ ಪ್ರಾಣಿರೂಪದಲ್ಲಿಯೂ ಹೊಮ್ಮಿತು ಎಂಬುದನ್ನು ಸಂಕೇತಿಸಿರುವುದು ಸ್ಪಷ್ಟವೇ ಆಗಿದೆ. ಭಿನ್ನಭಿನ್ನ ಅಭಿವ್ಯಕ್ತಿಗಳಿಗೆ ಆಧಾರವಾದದ್ದು ಅನಂತ.

  ಸನಾತನಧರ್ಮದ ಪ್ರಜ್ವಲತೆಯು ಶ್ರುತಿ, ಸ್ಮೃತಿ, ಪುರಾಣ – ಈ ಮೂರು ಪಥಗಳಲ್ಲಿ ನಿವಿಷ್ಠವಾಗಿದೆ. ಶ್ರುತಿಯಲ್ಲಿ ಎಂದರೆ ವೇದದಲ್ಲಿ ಇರುವವು ಪರತತ್ತ್ವದ ನೇರ ದರ್ಶನ ಪಡೆದ ಋಷಿಗಳ ಉದ್ಗಾರಗಳು. ವಿಶೇಷ ಪ್ರಗಲ್ಭತೆ ಇದ್ದವರಿಗಷ್ಟೆ ಶ್ರುತಿಯ ಆಶಯವು ಗೋಚರಿಸಬಲ್ಲದು. ಆ ಬೋಧೆಗಳು ಕಾಲದಿಂದ ಕಾಲಕ್ಕೆ ಆಚರಣೆಯಲ್ಲಿ ಹೇಗೆ ಪ್ರತಿಫಲಿತವಾದವೆಂಬುದರ ದಾಖಲೆಗಳು ಸ್ಮೃತಿಗಳು. ಮಹಾಪುರುಷರ ಇತಿವೃತ್ತಗಳ ಕಥನದ ಮೂಲಕ ಧರ್ಮದ ಸ್ವರೂಪವನ್ನು ಸಾಮಾನ್ಯರಿಗೆ ತಿಳಿಸಿಕೊಡಲು ಆಯೋಜನೆಗೊಂಡವು ಪುರಾಣಗಳು. ಈ ಮೂರು ಅಭಿವ್ಯಂಜನೆಗಳೂ ಅಖಂಡವಾದವು ಮತ್ತು ಪರಸ್ಪರ ಪೂರಕಗಳು. ಸಾಧಕರ ಮನಃಪಕ್ವತೆ ಹೆಚ್ಚಿದಂತೆಲ್ಲ ಹೊಸಹೊಸ ಅರ್ಥದ ಆಯಾಮಗಳು ಸ್ಫುರಿಸುವುದು ಅಭಿಜಾತ ವಾಙ್ಮಯದ ಲಕ್ಷಣ.

  ಪೌರಾಣಿಕ ವಾಙ್ಮಯದ ಅಂತರ್ನಿಹಿತ ಅರ್ಥವನ್ನು ಯಾರು ಗ್ರಹಿಸಿಲ್ಲವೋ ಅವರನ್ನು ಕಂಡು ಇವರು ಅಲ್ಪಶ್ರುತರು, ಇವರು ನನ್ನನ್ನು ಬಾಧಿಸುತ್ತಾರೆ ಎಂದು ವೇದವು ಗಾಬರಿಗೊಳ್ಳುತ್ತದೆ – ಎಂಬ ಪ್ರಾಚೀನೋಕ್ತಿಯು ಮಹಾಭಾರತದ ಆದಿಪರ್ವದಲ್ಲಿ ಉಲ್ಲೇಖಗೊಂಡಿದೆ:

  ಇತಿಹಾಸಪುರಾಣಾಭ್ಯಾಂ
  ವೇದಾರ್ಥಮುಪಬೃಂಹಯೇತ್ |
  ಬಿಭೇತ್ಯಲ್ಪಶ್ರುತಾದ್ ವೇದಃ
  ಮಾಮಯಂ ಪ್ರಹರಿಷ್ಯತಿ ||

  ವೇದ, ಸ್ಮೃತಿ, ಪುರಾಣ – ಇವು ಜ್ಞಾನಿಗಳ ಮೂರು ಕಣ್ಣುಗಳು – ಎಂದಿದೆ ಸ್ಕಾಂದಪುರಾಣ:

  ಶ್ರುತಿ-ಸ್ಮೃತಿ-ಪುರಾಣಾನಿ
  ವಿದುಷಾಂ ಲೋಚನತ್ರಯಮ್ |
  ಯಸ್ತ್ರಿಭಿರ್ನಯನೈಃ ಪಶ್ಯೇತ್
  ಸೋsಂಶೋ ಮಾಹೇಶ್ವರೋ ಮತಃ ||

  ವೇದಗಳನ್ನು ವಿಭಾಗ ಮಾಡಿ ವ್ಯವಸ್ಥೆಗೊಳಿಸಿದ ವೇದವ್ಯಾಸರೇ ಪುರಾಣಗಳ ರಚಯಿತರೂ ಆಗಿದ್ದಾರೆ – ಎಂಬುದನ್ನು ನೆನಪಿಡಬೇಕು.

  ವೇದಗಳ ವಿಷಯವು ಲೋಕಾತೀತವಾದುದು. ಲೋಕಾತೀತವಾದುದನ್ನು ವಿವರಿಸಲು ಲೌಕಿಕ ಭಾಷೆಯು ಸಾಕಾಗುವುದಿಲ್ಲವೆಂಬುದು ಸ್ಪಷ್ಟವೇ ಆಗಿದೆ; ಮತ್ತು ವೇದಗಳು ಮೊದಲು ಪ್ರಕಟಗೊಂಡ
  ಕಾಲದ ವೇಳೆಗೆ ಈಗ ನಮಗೆ ಪರಿಚಿತವಾಗಿರುವ ಭಾಷೆಯು ವಿಕಾಸಗೊಂಡಿರಲೂ ಇಲ್ಲ. ಋಷಿಗಳ ದರ್ಶನವೇನೋ ಸ್ಫುಟವಾಗಿಯೆ ಇದ್ದಿತು, ಮತ್ತು ಆ ದರ್ಶನವನ್ನು ಸಂರಕ್ಷಿಸಿ ಪ್ರಚುರಗೊಳಿಸುವ ಆಶಯ ಋಷಿಗಳಿಗೆ ಇದ್ದಿತು. ಈ ಹಿನ್ನೆಲೆಯಲ್ಲಿ ಸಹಜವಾಗಿ ಆಲಂಕಾರಿಕ ಭಾಷೆಯ ಬಳಕೆಯಾಯಿತು. ವೇದಗಳಿಗೆ ಇನ್ನೊಂದು ಹೆಸರಾದ ಛಂದಸ್ ಎಂಬ ಮಾತಿನ ಅರ್ಥವೇ ಗೋಪ್ಯವಾಗಿಸುವುದು (ಛಾದನಾತ್) ಎಂಬುದು. ಬಳಕೆಮಾತುಗಳ ಹಿಂದುಗಡೆ ನಿಗೂಢ ಅರ್ಥಗಳನ್ನು ಅಡಗಿಸಿಡಲಾಗಿದೆ ಎಂಬುದು ತಾತ್ಪರ್ಯ ಉದಾಹರಣೆಗೆ: ದೇವದೇವತೆಯರೆಂದರೆ ಅಂತರ್ನಿಹಿತ ಚೈತನ್ಯದ ವಿಶೇಷ ಅಭಿವ್ಯಕ್ತಿಗಳು – ಎಂದೇ ವೇದದ ಲಬ್ಧ ಕೈಪಿಡಿಗಳಲ್ಲಿ ಅತ್ಯಂತ ಪ್ರಾಚೀನವಾದ ಯಾಸ್ಕರಚಿತ ನಿರುಕ್ತ ವಿವರಿಸಿದೆ. ಹೀಗೆ ತತ್ಸಂಬಂಧಿತ ಪೌರಾಣಿಕ ಕಥನಗಳು ಬೋಧನಸೌಕರ್ಯಕ್ಕಾಗಿ ಆಮೇಲಿನ ಕಾಲದಲ್ಲಿ ಯೋಜಿತವಾದವು ಎಂಬುದು ಸ್ಪಷ್ಟವಾಗಿದೆ ನಿರುಕ್ತಕಾರ ಯಾಸ್ಕರು ಸ್ಪಷ್ಟವಾಗಿ ಹೇಳುತ್ತಾರೆ:

  ಏಕ ಆತ್ಮಾ ಬಹುಧಾ ಸ್ತೂಯತೇ |
  ಏಕಸ್ಯ ಆತ್ಮನಃ ಅನ್ಯೇ ದೇವಾಃ ಪ್ರತ್ಯಂಗಾನಿ ಭವನ್ತಿ ||

  ಭೂಲೋಕದಲ್ಲಿ ಮಳೆ, ಗಾಳಿ, ಬಿಸಿಲು ಮೊದಲಾದವೆಲ್ಲ ಪರಸ್ಪರ ಸಹಕರಿಸುವ ಹಾಗೆ ಅಂತರಿಕ್ಷಲೋಕದಲ್ಲಿ ಪರ್ಜನ್ಯ, ವಾಯು, ಆದಿತ್ಯ ಮೊದಲಾದ ದೇವತೆಗಳೆಲ್ಲ ಪರಸ್ಪರ ಪೂರಕಗಳಾಗಿರುತ್ತಾರೆ.

  ವೇದಗಳು ಜಗತ್ತಿನ ಅತ್ಯಂತ ಪ್ರಾಚೀನ ದಾಖಲೆಗಳು. ಹೀಗಾಗಿ ಅನೇಕ ಶಬ್ದಗಳು ಅಕೃತಕ ಮೂಲಾರ್ಥದಲ್ಲಿ ಬಳಕೆಯಾಗಿರುತ್ತವೆ. ಉದಾಹರಣೆಗೆ: ಅಗ್ನಿ ಎಂಬ ಮಾತು ಅಗ್ರಸ್ಥಾನದಲ್ಲಿ ಎಂದರೆ ಮುಂದೆ ಇರುವವನು ಎಂಬ ಅರ್ಥದಲ್ಲಿಯೆ (ಅಗ್ರಣೀಃ ಭವತಿ) ಹಲವಾರೆಡೆ ಪ್ರಯುಕ್ತವಾಗಿರುವುದು. ಇಂದ್ರ ಎಂಬ ಮಾತಿನ ಅರ್ಥ ಸತ್ಯವನ್ನು ನೋಡಿದವನು (ಇದಿಂ + ದ್ರ) ಎಂದಿದೆ. ರುದ್ರ ಎಂಬ ಮಾತಿನ ನಿರ್ವಚನ ಸೂಚನೆಗಳನ್ನು ಕೊಡುವವನು (ರುದ್ + ದ್ರ).

  ಈ ಭೂಮಿಕೆಯನ್ನು ನೆನಪಿನಲ್ಲಿ ಇರಿಸಿಕೊಂಡಲ್ಲಿ ಅರ್ವಾಚೀನ ಪ್ರಯೋಗದ ಅರ್ಥಗಳನ್ನು ಪ್ರಾಚೀನ ವೇದಮಂತ್ರ ಪ್ರಯೋಗಗಳಿಗೆ ಜೋಡಿಸುವುದು ಯುಕ್ತವಾಗದು ಎಂದು ಅರಿವಾಗುತ್ತದೆ.

  ಈಗ ಪರಿಚಿತವಾಗಿರುವ ಅನೇಕ ಶಬ್ದಗಳು ಪೂರ್ತಿ ಭಿನ್ನವಾದ ಅರ್ಥಗಳಲ್ಲಿಯೆ ವೇದವಾಙ್ಮಯದಲ್ಲಿ ಬಳಕೆಯಾಗಿವೆ. ಉದಾಹರಣೆಗೆ: ಆರ್ಯ ಎಂಬ ಶಬ್ದವು ಎಲ್ಲೆಡೆ ಬಳಕೆಯಾಗಿರುವುದು ಕೃಷಿ ಮತ್ತು ವಾಣಿಜ್ಯದ ಮೂಲಕ ಸಂಪತ್ತನ್ನು ವೃದ್ಧಿಗೊಳಿಸಿದ್ದವರು ಎಂಬ ಅರ್ಥದಲ್ಲಿ. ಪಾರಂಪರಿಕ ಪ್ರಮಾಣಕ್ಕೆ ಅನುಗುಣವಾಗಿರುವುದು, ಬೇರೆಬೇರೆ ಸಂದರ್ಭಗಳ ಪ್ರಯೋಗಗಳಿಗೆ ಹೊಂದಾಣಿಕೆಯಾಗುವುದು, ಸ್ವವಿರೋಧವಿಲ್ಲದಿರುವುದು; – ಇಂತಹ ನಿಯಮಗಳಿಗೊಳಪಟ್ಟು ಮಂತ್ರಗಳನ್ನು ಅರ್ಥೈಸಬೇಕಾಗುತ್ತದೆ.

  ಅನೇಕ ಮಂತ್ರಗಳಲ್ಲಿ ಅವು ಸಂಕೇತಾರ್ಥಸೂಚಕಗಳೆಂಬುದು ಆ ಹೇಳಿಕೆಗಳಲ್ಲಿಯೆ ವ್ಯಕ್ತವಾಗಿರುವುದೂ ಉಂಟು. ಒಂದು ಪ್ರಸಿದ್ಧ ಮಂತ್ರ ಹೀಗಿದೆ:

  ಚತ್ವಾರಿ ಶೃಂಗಾ ತ್ರಯೋ ಅಸ್ಯ ಪಾದಾ
  ದ್ವೇ ಶೀರ್ಷೆ ಸಪ್ತಹಸ್ತಾಸೋ ಅಸ್ಯ |
  ತ್ರಿಧಾ ಬದ್ಧೋ ವೃಷಭೋ ರೋರವೀತಿ
  ಮಹೋ ದೇವೋ ಮರ್ತ್ಯಾನಾವಿವೇಶ ||
  (ಋಗ್ವೇದ, iv: ೫೮:೩)

  ಈ ಋಷಭನಿಗೆ ನಾಲ್ಕು ಕೊಂಬುಗಳೂ ಮೂರು ಕಾಲುಗಳೂ ಎರಡು ತಲೆಗಳೂ ಏಳು ಕೈಗಳೂ ಇವೆ – ಎಂಬುದು ಮಂತ್ರದ ಮಾತುಗಳಿಂದ ಹೊರಡುವ ಅರ್ಥ. ಆದರೆ ಅದು ಉದ್ದಿಷ್ಠ ಅರ್ಥವಲ್ಲವೆಂಬುದು
  ಮೇಲ್ನೋಟಕ್ಕೇ ತಿಳಿಯುತ್ತದೆ. ಈ ವಾಕ್ಯದಲ್ಲಿ ನಾಲ್ಕು ಎಂದರೆ ನಾಮ, ಆಖ್ಯಾತ, ಉಪಸರ್ಗ, ನಿಪಾತ ಎಂಬ ವಾಕ್ಯಾಂಗಗಳು; ಎರಡು ಎಂದರೆ ಶಬ್ದದ ನಿತ್ಯ ಮತ್ತು ಕಾರ್ಯ ದಶೆಗಳು; ಮೂರು ಎಂದರೆ ಭೂತ-ವರ್ತಮಾನ-ಭವಿಷ್ಯ ಕಾಲಗಳು; ಏಳು ಎಂದರೆ ವಿಭಕ್ತಿಗಳು; – ಮೊದಲಾದ ಸ್ಪಷ್ಟೀಕರಣಗಳು
  ಪಾತಂಜಲ ಮಹಾಭಾಷ್ಯದಲ್ಲಿ ದೊರೆಯುತ್ತವೆ. ವೇದಸಂಹಿತೆಯಲ್ಲಿಯೆ ಬೇರೊಂದೆಡೆಯಲ್ಲಿ (ಚತ್ವಾರಿ ವಾಕ್ ಪರಿಮಿತಾ ಪದಾನಿ ಇತ್ಯಾದಿ) ವಾಕ್ಕಿನ ಪರಾ, ಪಶ್ಯಂತೀ, ಮಧ್ಯಮಾ, ವೈಖರೀ ಎಂಬ ಭೇದಗಳ ಪ್ರಸ್ತಾವ ಬರುತ್ತದೆ.

  ಇಡೀ ವೇದವಾಙ್ಮಯದಲ್ಲಿ ಅತ್ಯಂತ ಅರ್ಥಗರ್ಭಿತ ಭಾಗಗಳಲ್ಲೊಂದು ಪುರುಷಸೂಕ್ತ. ಋಗ್ವೇದದ
  ದಶಮ ಮಂಡಲದ ಈ ಸೂಕ್ತ ಬಹುತೇಕ ಎಲ್ಲ ವೇದಶಾಖೆಗಳಲ್ಲೂ ಅನುವೃತ್ತವಾಗಿದೆ ಎಂಬುದರಿಂದ ಇದರ ಮುಖ್ಯತೆಯನ್ನು ಊಹಿಸಬಹುದು. ಗಾಯತ್ರೀಮಂತ್ರವು ಇಡೀ ನಾಮರೂಪಾತ್ಮಕ ಜಗತ್ತನ್ನು ಸಂಕೇತಿಸಿದ್ದಲ್ಲಿ ಅದಕ್ಕೆ ಅತೀತವಾದ ಬ್ರಹ್ಮವನ್ನು ಬೋಧಿಸಿರುವುದು ಪುರುಷಸೂಕ್ತ – ಎಂದಿದ್ದಾರೆ ಶಂಕರರು. ಎಲ್ಲವನ್ನೂ ಸಮಗ್ರಗೊಳಿಸುವುದು ಯಾವುದೋ ಅದು ಪುರುಷ : ಪುರುಷಃ ಸರ್ವ-ಪೂರಣಾತ್. ಪುರುಷ ಎಂದರೆ ಪೂರ್ಣತ್ವ – ಎಂದು ವಿವರಿಸಿದ್ದಾರೆ ಆನಂದತೀರ್ಥರು:

  ಸ ಪೂರ್ಣತ್ವಾತ್ ಪುಮಾನ್ನಾಮ ಪೌರುಷೇ ಸೂಕ್ತ ಈರಿತಃ ||

  ಪುರುಷ ಶಬ್ದದ ಯೌಗಿಕ ಅರ್ಥವೇ ಮುಂದೆಮುಂದೆ ಸಾಗುವುದು (ಪುರತಿ ಅಗ್ರೇ ಗಚ್ಛತಿ) ಎಂದು, ಎಲ್ಲದರಲ್ಲಿಯೂ ಬಲವನ್ನು ತುಂಬುವುದು (ಪಿಪರ್ತಿ ಪೂರಯತಿ ಬಲಂ ಯಃ) ಎಂದಿದೆ. ಸಾಂಖ್ಯದರ್ಶನದಂತೆ ಪ್ರಕೃತಿಯು ಜಡವಾದುದರಿಂದ ಅದರಲ್ಲಿ ಚೈತನ್ಯವನ್ನು ತುಂಬುವುದು ‘ಪುರುಷ’.

  ಸಹಸ್ರ ಎಂಬ ಶಬ್ದವು ವೇದಸಾಹಿತ್ಯದುದ್ದಕ್ಕೂ ಅನಂತ ಎಂಬ ಅರ್ಥದಲ್ಲಿಯೇ ಬಳಕೆಗೊಂಡಿದೆ. ಸರ್ವಂ ವೈ ಸಹಸ್ರಂ ಎಂದಿದೆ ಶತಪಥಬ್ರಾಹ್ಮಣ. ಹಾಗೆಯೇ ಪಾದ ಎಂದರೆ ರಶ್ಮಿ, ಕಿರಣ, ಪ್ರಭಾವ ಎಂಬ ಅರ್ಥವೇ ಪ್ರಚಲಿತ. ಅಗ್ನಿ, ಇಂದ್ರ, ವಾಯು, ಸೂರ್ಯರ ವಾಚಕವಾದ ಅಕ್ಷ ಶಬ್ದವು ಭೂಲೋಕ ಭುವರ್ಲೋಕ ಸುವರ್ಲೋಕಗಳಷ್ಟನ್ನೂ ಗರ್ಭೀಕರಿಸಿದೆ. ವಿರಾಟ್‌ಪುರುಷನು ವಿಶ್ವದಿಂದ ಅತೀತನೆಂಬ ಅತ್ಯತಿಷ್ಯತ್ ದಶಾಂಗುಲಂ ಮಂತ್ರದ ಆಶಯ ಸ್ಪಷ್ಟವೇ ಇದೆ. ಅವಿದ್ಯಾಜನ್ಯ ಜಗತ್ತಿನಿಂದ ಅತೀತನಾಗಿ ವಿಕಾರರಹಿತ ಬ್ರಹ್ಮನು ವಿರಾಜಿಸುತ್ತಾನೆ ಎಂದು ಸೂಕ್ತವು ಮುಂದುವರಿದಿದೆ (ಊರ್ಧ್ವ ಉದೈತ್). ಸೂಕ್ತದ ಮುಂದಿನ ಭಾಗದಲ್ಲಿ ಸೃಷ್ಟಿಯೇ ಯಜ್ಞ ಎಂಬ ಕಲ್ಪನೆಯು ವ್ಯಾಖ್ಯೆಗೊಂಡಿದೆ. ವಸಂತ ಗ್ರೀಷ್ಮಾದಿ ಪ್ರತಿಮೆಗಳ ಮೂಲಕ ಈ ಯಜ್ಞದ ವೈಶ್ವಿಕತೆಯನ್ನು ತಿಳಿಸಲಾಗಿದೆ. ಸೃಷ್ಟಿಕಾರ್ಯದ ಹಂತಗಳನ್ನು ಯಜ್ಞ ಪರಿಭಾಷೆಯಲ್ಲಿಯೆ ಸೂಕ್ತವು ವಿವರಿಸಿದೆ. ಯಜ್ಞವು ದೇವತೆಗಳ ರಥ; ಆಜ್ಯವೆಂಬುದು ಪೃಥಿವಿ- ದ್ಯುಲೋಕಗಳೆರಡನ್ನೂ ಚೈತನ್ಯಯುಕ್ತಗೊಳಿಸುವ ರಸ; – ಇತ್ಯಾದಿ. ಅಶ್ವಜಾತಿ, ಗೋಜಾತಿ, ಅಜ-ಜಾತಿ ಮೊದಲಾದ ಸಚೇತನ ಪ್ರಾಣಿಜಾತಿಗಳೆಲ್ಲದರ ಮೂಲವು ಪುರು?. ಋಕ್, ಸಾಮ, ಯಜುಸ್; ಅಶ್ವ, ಗೌ, ಅಜ; –  ಹೀಗೆ ಎಲ್ಲೆಡೆ ಮೂರು ಮೂರು ವರ್ಗಗಳ ಉಲ್ಲೇಖವೇ ಇರುವುದರಿಂದ ಧ್ವನಿತವಾಗುವುದು ಮೂರು ಲೋಕಗಳು ಎಂಬ ಪ್ರತಿಮೆ. ಈ ಸಂಕೇತಾರ್ಥಸರಣಿಯ ಕ್ರೋಡೀಕರಣವೆಂಬಂತೆ ಕಡೆಯ ಎಂದರೆ ೧೬ನೇ ಋಕ್ಕಿನಲ್ಲಿ ಕ್ರಿಯೆಯ ಉದ್ದೇಶ, ಕಾರ್ಯದ ಸಾಧನ ಮತ್ತು ಸ್ವಯಂ ಕ್ರಿಯೆ – ಮೂರನ್ನೂ ಸೂಚಿಸಲು ಯಜ್ಞ ಎಂಬ ಒಂದೇ ಮಾತನ್ನು ಬಳಸಲಾಗಿದೆ (ಯಜ್ಞೇನ ಯಜ್ಞಂ ಅಯಜನ್ತ ದೇವಾಃ). ಜ್ಞಾನ ಮತ್ತು ಕರ್ಮಗಳ ಏಕತ್ರೀಕರಣ ಇಲ್ಲಿ ಸೂಚಿತವಾಗಿದೆ.

  ವೇದಗಳ ಅರ್ಥದ ಅನುಸಂಧಾನದ ಪರಂಪರೆ ದುರ್ಬಲಗೊಂಡು ಬಹುಮಟ್ಟಿಗೆ ಸಸ್ವರ ಪಠನ ಪಾಠನಗಳಿಗೆ ಸೀಮಿತವಾಗಿದ್ದುದರ ಹಿನ್ನೆಲೆಯಲ್ಲಿ ಜನಸಾಮಾನ್ಯರ ಸ್ಪಂದನವನ್ನೂ ಗಳಿಸಬಲ್ಲ ಪುರಾಣಗಳು ಪ್ರಾಚುರ್ಯವನ್ನು ಪಡೆದಿದ್ದಿರಬಹುದು. ಪೌರಾಣಿಕ ಮಾಧ್ಯಮವು ಸ್ಥಪತಿ ಕಲಾವಿದರಿಗೂ
  ಅನುಕೂಲಕರವಾಗಿ ಒದಗಿಬಂದಿತು. ಇನ್ನೊಂದು ಮುಖ್ಯ ಅಂಶವನ್ನೂ ಇಲ್ಲಿ ಸ್ಮರಿಸಬಹುದು. ದುರ್ಗ್ರಾಹ್ಯತೆಯ ಕಾರಣದಿಂದ ವೇದಸೂಕ್ತಗಳ ನಿಜಾರ್ಥವಿಶೇಷಗಳ ಪರಿಚಯ ಹಿಂದೆ ಸರಿದಿತ್ತು; ಶುಷ್ಕ ಬಾಹ್ಯಾಚರಣೆಗಳು ಮೆರೆದಿದ್ದವು. ಹಾಗೆ ಉಂಟಾದ ಕೊರತೆಯನ್ನು ಪೌರಾಣಿಕ-ಆಧಾರದ ಸ್ಥಾಪತ್ಯಕಲೆ ತುಂಬಿದುದು ಅತ್ಯಂತ ಪ್ರಯೋಜನಕರವಾಯಿತು. ಏಕೆಂದರೆ ಈ ಶಿಲ್ಪಕಲಾ ಭವ್ಯತೆಯು ಪ್ರಸಾರಗೊಂಡಿರದಿದ್ದರೆ ಸಮಾಜದಲ್ಲಿ ನಿಧರ್ಮೀಯತೆ ಹರಡಲು ಅವಕಾಶವಾಗುತ್ತಿತ್ತು. ಆಗಮಗಳಿಂದ ನಿರ್ದೇಶನಗೊಂಡ ಕಲೆಗಳೂ ಪೂಜಾವಿಧಾನಗಳೂ ಧರ್ಮವನ್ನು ಪೂರ್ತಿ ನಶಿಸದಂತೆ ಸಂರಕ್ಷಿಸಿದವು. ಸ್ಥಾಪತ್ಯಕಲಾಕೇಂದ್ರಿತವಾದ ದೇವಾಲಯಗಳು ಸಾಮಾಜಿಕ ಜೀವನದ ಕೇಂದ್ರಗಳೂ ಆದವು. ಪ್ರಾಚೀನ ಯುಗದಲ್ಲಿ ಯಜ್ಞಕಲಾಪಗಳು ಜನಜೀವನದಲ್ಲಿ ಸಾಮೂಹಿಕತೆಯನ್ನು ಪ್ರವರ್ತಿಸಿದ್ದಂತೆ, ಅರ್ವಾಚೀನ ಕಾಲದಲ್ಲಿ ದೇವಾಲಯಗಳೂ ಪೂಜೆ- ಆಚರಣೆಗಳ ರೂಢಿಗಳೂ ಸಮಾಜಸಂಘಟನೆಯ
  ಸಾಧನಗಳಾದವು.

  ಕಾಲದಿಂದ ಕಾಲಕ್ಕೆ ವೇದಪ್ರಭುತ್ವಸ್ಥಾಪನೆಯ ಪ್ರಯತ್ನಗಳು ನಡೆದುದು ಪ್ರಶಂಸನೀಯವೆಂಬುದು ನಿರ್ವಿವಾದ. ಆದರೆ ಜ್ಞಾನಾನ್ವೇಷಿಗಳ ಪರಿಮಾಣವು ಸಮಾಜದಲ್ಲಿ ಅಧಿಕವಾಗಿರುವ ಸಂಭವ ಯಾವಾಗಲೂ ಕಡಮೆಯೇ. ಈ ವಾಸ್ತವದ ಹಿನ್ನೆಲೆಯಲ್ಲಿ ಧಾರ್ಮಿಕತೆಯನ್ನು ಉಳಿಸಿರುವವು ಭಕ್ತಿಪಂಥ ಮತ್ತು ಜಾನಪದೀಯ ರೂಢಿಗಳು. ಇದಕ್ಕೆ ಪೂರಕವೆಂಬ ರೀತಿಯಲ್ಲಿ ವಿರಳ ಪ್ರಮಾಣದಲ್ಲಿ
  ಶುದ್ಧಜ್ಞಾನೋಪಾಸಕರೂ ಯೋಗಸಾಧಕರೂ ಎಲ್ಲ ಕಾಲದಲ್ಲಿಯೂ ಇರುತ್ತಾರೆ. ಈ ಎರಡು ಪಂಥಗಳ ನಡುವೆ ವಿಷಮತೆಯೇನಿಲ್ಲ. ಎರಡೂ ಸಮಾನಾಂತರವಾಗಿ ಸಾವಿರಾರು ವರ್ಷಗಳುದ್ದಕ್ಕೂ ನಡೆದುಬಂದಿವೆ.

  ಜೀವನವೇ ಯಜ್ಞ, ದೇಹವೇ ದೇವಾಲಯ ಮೊದಲಾದ ಉದಾತ್ತ ಔಪನಿಷದ ತತ್ತ್ವಗಳನ್ನು ವಚನಸಾಹಿತ್ಯಕಾರರೂ ಹರಿದಾಸರೂ ತಮ್ಮ ರಚನೆಗಳ ಮೂಲಕ ಪ್ರಭಾವಿಯಾಗಿ ಪ್ರವರ್ತನೆ ಮಾಡಿದ್ದಾರೆ. ಹೀಗೆ ಉಪನಿಷದ್ ದರ್ಶನದ ಹೃದಯಭಾಗವನ್ನು ದೇಸೀ ವಾಙ್ಮಯವು ಜೀವಂತವಾಗಿ ಇರಿಸಿದೆ.

  ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಗಳು ವಿವಿಧ ಆಕ್ರಮಣಗಳನ್ನು ಎದುರಿಸಿಯೂ ನಶಿಸದೆ ಕನಿಷ್ಠ ಏಳೆಂಟು ಸಾವಿರ ವರ್ಷಕಾಲ ಉಳಿದಿರಲು ಉಪಸ್ತಂಭಕವಾದದ್ದು ಮೇಲೆ ಸಂಕ್ಷಿಪ್ತವಾಗಿ ಪ್ರಸ್ತಾವಿಸಿದ ಆಂತರಿಕ ಗತಿಶೀಲತೆ (ಡೈನಾಮಿಸ್ಮ್).

  ಗಮನಿಸಬೇಕಾದ ಅಂಶವೆಂದರೆ – ಮೂರ್ತಿಪೂಜನ ಮೊದಲಾದವು ಸಾಂಕೇತಿಕ ಕಲಾಪಗಳೆಂಬುದನ್ನು ಗ್ರಾಮೀಣ ಜನತೆಯೂ ಸೇರಿದಂತೆ ಎಲ್ಲರೂ ಗ್ರಹಿಸಿಯೇ ಇರುತ್ತಾರೆ. ನಾವು ಕಲ್ಲನ್ನು ಪೂಜಿಸುತ್ತಿದ್ದೇವೆ ಎಂದು ಯಾರಾದರೂ ಅಂದುಕೊಂಡದ್ದು ಉಂಟೆ? ಅವರವರಿಗೆ ಆಸ್ವಾದ್ಯವೆನಿಸಿದ ರೂಪದಲ್ಲಿ ಅವರವರು ಭಗವದುಪಾಸನೆ ಮಾಡಬಹುದೆಂದೂ ಎಲ್ಲ ಉಪಾಸನಾಮಾರ್ಗಗಳೂ ಸಾಧುವಾದವೇ ಎಂದೂ ಸ್ಮೃತಿವಾಕ್ಯಗಳೇ ಇವೆ.

  ಸಾಂಕೇತಿಕ ಆಚರಣೆಗಳೂ ಗೂಢಾರ್ಥಸ್ಮರಣೆಯೂ ನಮ್ಮ ಸಂಪ್ರದಾಯದಲ್ಲಿ ಹಾಸುಹೊಕ್ಕಾಗಿಬಿಟ್ಟಿವೆ. ಉದಾಹರಣೆಗೆ: ಗೃಹ್ಯಸೂತ್ರಾನುಸಾರಿ ಪೂಜನವು ಗಣಪತಿಯ ಆರಾಧನೆಯೊಡನೆ ಆರಂಭವಾಗುತ್ತದೆ. ಇಲ್ಲಿ ಪಾರ್ವತೀಪುತ್ರನ ಅನುಗ್ರಹವನ್ನು ಬೇಡುತ್ತೇವೆಂದು ಭಕ್ತರು ಭಾವಿಸಿದರೆ ಆಕ್ಷೇಪಿಸಬೇಕಾದುದೇನೂ ಇಲ್ಲ. ಆ ಸಂದರ್ಭದಲ್ಲಿ ಮಂತ್ರಲಿಂಗ ಪದ್ಧತಿಯಂತೆ ವೇದಮಂತ್ರಗಳನ್ನೂ ಬಳಸಲಾಗುತ್ತದೆ. ಆದರೆ ವೇದವಾಙ್ಮಯದಲ್ಲಿ ಗಣ-ಪತಿ ಎಂಬ ಮಾತಿನ ಬಳಕೆಯಾಗಿರುವುದು ಮೂರೂ ಲೋಕಗಳ ಲೋಕಹಿತಕಾರಿ ಗಣಗಳಿಗೆ ಅಧಿಪತಿ ಎಂಬ ವ್ಯಾಪಕ ಅರ್ಥದಲ್ಲಿ.

  ನಮ್ಮ ಶರೀರವೇ ಮೂರೂ ಲೋಕಗಳ ಆವಾಸ – ಎಂಬ ಪ್ರತಿಪಾದನೆಯನ್ನು ವೇದಗಳಲ್ಲಿಯೆ ಕಾಣುತ್ತೇವೆ.

  ಯಜ್ಞದ ಆಚರಣೆಯು ಅಮೃತತ್ವಸಂಪಾದನೆಗಾಗಿ ಮತ್ತು ಜ್ಞಾನಪ್ರಕಾಶಪ್ರಾಪ್ತಿಗಾಗಿ – ಎಂಬ ನಿರೂಪಣೆಯನ್ನು ಋಗ್ವೇದದಲ್ಲಿಯೆ ಕಾಣುತ್ತೇವೆ.

  ಕಾಲಗತಿಯ ವಿಪರಿಣಾಮಗಳ ನಡುವೆಯೂ ಎಷ್ಟು ಅಗಾಧ ಗಾತ್ರದ ವೇದ-ವೇದಾಂಗ ಸಾಹಿತ್ಯ ಈಗಲೂ ಉಳಿದಿದೆ ಎಂಬುದನ್ನು ಗಮನಿಸಿದರೆ ವೈದಿಕದರ್ಶನ ಯಾರೋ ಕೆಲವರ ಹವ್ಯಾಸದ ರೀತಿಯದಲ್ಲವೆಂದೂ ಅದು ಭಾರತೀಯ ನಾಗರಿಕತೆಗೆ ಅಸ್ತಿಭಾರ ಆಗಿರುವ ಕಾರಣದಿಂದಲೇ ಚಿರಂತನವಾಗಿ ಉಳಿದುಬಂದಿದೆ ಎಂಬುದೂ ಸ್ಪಷ್ಟವಾಗುತ್ತದೆ.

  ಇತಿಹಾಸಜ್ಞಾನ, ರಾಜನೀತಿ, ಸಾಮಾನ್ಯನೀತಿ, ಪರಮಾರ್ಥಜ್ಞಾನ ಮೊದಲಾದವನ್ನು ಜನರಿಗೆ ಆಸಕ್ತಿಕರಗೊಳಿಸುವ ದೃಷ್ಟಿಯಿಂದ ಆಲಂಕಾರಿಕವಾಗಿ ಯೋಜಿತವಾಗಿರುವವು ಪುರಾಣಗಳು. ಹೀಗೆ ಅವು ಪ್ರಾಚೀನಕಾಲದ ಘಟನೆಗಳ ದಾಖಲೆಗಳಾಗಿರುವುದರ ಜೊತೆಗೆ ಸಾರ್ವಕಾಲಿಕ ಬೋಧೆಗಳ ಕಾವ್ಯಮಯ ಪ್ರತಿಪಾದನೆಗಳೂ ಆಗಿವೆ. ಎಲ್ಲ ಪ್ರಾಚೀನ ವಾಙ್ಮಯದ ವಿಶೇಷತೆಯೆಂದರೆ ಅದರ ಸಂಸ್ಕಾರಜನಕ ಸ್ವರೂಪ. ಯಾವುದೇ ಮಂಡನೆಗೆ ಚಿರಕಾಲಿಕತೆ ಬರುವುದು ಉಕ್ತಿ ಸೌಂದರ್ಯದಿಂದಲೇ – ಎಂಬುದು ಲೋಕಾನುಭವ. ಘಟನೆಗಳ ಕೇವಲ ವಾಚ್ಯರೀತಿಯ
  ಶುಷ್ಕ ನಿರೂಪಣೆಗಳ ಪರಿಣಾಮ ಪರಿಮಿತವಾಗಿರುತ್ತದೆ.

  ಒಂದೊಂದು ಜ್ಞಾನಾಂಗದ ಅಧ್ಯಯನಕ್ಕೂ ಕೆಲವು ವಿಶೇಷ ನಿಯಮಗಳು ಇರುತ್ತವಷ್ಟೆ. ಹಾಗೆ ಪುರಾಣಗಳ ಅಧ್ಯಯನಕ್ಕೆ ಎರಡು ಮುಖ್ಯ ಅಂಗಗಳು ಇರುತ್ತವೆ:

  (೧) ಸೃಷ್ಟಿಯ ಎಂದರೆ ಜಗತ್‌ಸ್ವರೂಪದ ವಿವೇಚನೆ,
  (೨) ಆಖ್ಯಾನಗಳಲ್ಲಿ ಅಡಗಿರುವ ಗೂಢತತ್ತ್ವಗಳ ಗ್ರಹಿಕೆ.

  ಅಭ್ಯಾಸಿಯ ಬುದ್ಧಿಯ ಪ್ರಖರತೆ ಹೆಚ್ಚಿದಂತೆಲ್ಲ ಪುರಾಣೋಕ್ತ ಸಂಗತಿಗಳ ಸಂಕೇತಾರ್ಥವು ಗೋಚರಿಸುತ್ತಹೋಗುತ್ತದೆ.

  ಲೋಕಾಂತರಗಳೆಂದು ವರ್ಣಿತವಾಗಿರುವವು ವ್ಯಕ್ತಿವಿಕಾಸದ ಅವಸ್ಥಾಂತರಗಳು – ಎಂಬ ಸಂಕೇತಾರ್ಥವು ಮೇಲ್ನೋಟಕ್ಕೇ ಗೋಚರಿಸುತ್ತದೆ.

  ಬೇರೆ ಬೇರೆ ಬೌದ್ಧಿಕ ಮಟ್ಟಗಳವರಿಗೆ ಅವರವರ ವಿಕಾಸದ ಹಂತಕ್ಕೆ ಅನುಗುಣವಾಗಿ ಶಾಶ್ವತ ತತ್ತ್ವಗಳನ್ನು ತಿಳಿಸಿಕೊಡಬೇಕು – ಎಂಬುದು ಋಷಿಗಳ ಉದಾರದೃಷ್ಟಿ.

  ವಿಶ್ವವು ಹೇಗೆ ಸೃಷ್ಟಿಯಾಯಿತು, ಅನಂತರದಲ್ಲಿ ಯಾವಯಾವ ಮಹಾಪುರು?ರು ಆಗಿಹೋದರು, ರುದ್ರಧ್ಯಾನ ಹಿಂದೆ ಯಾವಾವ ಸ್ವಾರಸ್ಯಕರ ವಿದ್ಯಮಾನಗಳು ನಡೆದವು, ಹಿಂದೆ ಯಾವಾವ ಬಗೆಯಲ್ಲಿ ಉತ್ಕಷ್ಕ ಪ್ರಯತ್ನಗಳು ನಡೆದವು – ಇವೇ ಮೊದಲಾದ ಮುಖ್ಯ ಮಾಹಿತಿಗಳ ಸಂಕಲನಗಳು ಪುರಾಣಗಳು. ಸೃಷ್ಟಿ-ಪ್ರಳಯಗಳು, ವಂಶಗಳು, ಮನ್ವಂತರಗಳು, ಆನುವಂಶಿಕ ವೃತ್ತಾಂತಗಳು – ಇವನ್ನು ಒಳಗೊಂಡಿರುವುದು ಪುರಾಣದ ಲಕ್ಷಣ – ಎಂದಿದೆ ವಿಷ್ಣುಪುರಾಣ:

  ಸರ್ಗಶ್ಚ ಪ್ರತಿಸರ್ಗಶ್ಚ ವಂಶೋ ಮನ್ವನ್ತರಾಣಿ ಚ |
  ವಂಶಾನುಚರಿತಂ ಚೇತಿ ಪುರಾಣಂ ಪಂಚಲಕ್ಷಣಮ್ ||

  ಪುರಾ ನವಂ ಭವತಿ – ಹಳೆಯದಾದರೂ ನಿತ್ಯನೂತನವಾಗಿ ಉಳಿಯುವುದು ಎಂಬುದು ಪುರಾಣ ಶಬ್ದದ ನಿರ್ವಚನ – ಎಂದು ಯಾಸ್ಕಾಚಾರ್ಯರು ನಿರುಕ್ತ ಗ್ರಂಥದಲ್ಲಿ ಹೇಳಿದ್ದಾರೆ.

  ವೈದಿಕ ಮತ್ತು ಪೌರಾಣಿಕ ಆಖ್ಯಾನಗಳನ್ನು ಕುರಿತು ಚಿಂತಿಸಿದಲ್ಲಿ ಅವುಗಳಲ್ಲಿ ಹೆಚ್ಚಿನವು ಸಂಕೇತಾರ್ಥದ್ಯೋತಕಗಳೆಂಬುದು ಮೇಲ್ನೋಟಕ್ಕೇ ಕಾಣುತ್ತದೆ. ಉದಾಹರಣೆಗೆ: ಪ್ರಸಿದ್ಧ ದಶಾವತಾರಗಳ ಅನುಕ್ರಮವು ಆಧುನಿಕ ವೈಜ್ಞಾನಿಕ ವಿಕಾಸವಾದದೊಡನೆ ಸವಿವರವಾಗಿ ತಾಳೆಯಾಗುತ್ತದೆ. ಇದನ್ನು ಆಕಸ್ಮಿಕವೆನ್ನಲಾಗದು. ಸಮುದ್ರಮಂಥನವು ಸಾತ್ತ್ವಿಕ ಮತ್ತು ತಾಮಸಿಕ ಶಕ್ತಿಗಳ ನಡುವಣ ನಿತ್ಯಸಂಘರ್ಷವನ್ನು ಪ್ರತಿನಿಧಿಸುತ್ತದೆ ಎಂಬುದು ಸ್ಪಷ್ಟವೇ ಆಗಿದೆ. ಗಣಪತಿ, ಲಕ್ಷ್ಮಿ, ಶಿವ, ವಿಷ್ಣು ಮೊದಲಾದ ದೇವ-ದೇವತೆಗಳ ರೂಪಕಲ್ಪನೆಯೂ ಅತ್ಯಂತ ಅರ್ಥಪು?ವಾಗಿದೆ.
  ಹೆಚ್ಚಿನ ದೇವತಾರೂಪಗಳು ಏಕಕಾಲದಲ್ಲಿ ಅಧರ್ಮನಿಯಂತ್ರಣ, ಅಭಯಾನುಗ್ರಹ – ಎರಡನ್ನೂ ಪ್ರತಿಮೀಕರಿಸುವ ಅಂಶಗಳನ್ನು ಒಳಗೊಂಡಿರುತ್ತವೆ. ನೈಮಿತ್ತಿಕ ಪೂಜೆಯ ಸಂದರ್ಭದಲ್ಲಿಯೂ ಜಗತ್‌ಸ್ಥಿತಿಯ ಊರ್ಜಿತತೆಗೆ ಆಧಾರವಾದ ಈ ವಿವಿಧ ಗುಣವಿಶೇಷಗಳನ್ನು ಸ್ಮರಿಸಲಾಗುತ್ತದೆ. ಒಂದೊಂದು ದೇವತೆಯ ವಿಶೇಷಅನುಸಂಧಾನಾರ್ಹ ಗುಣಗಳನ್ನು ಧ್ಯಾನಶ್ಲೋಕಗಳಲ್ಲಿ ಸೂಚಿಸಲಾಗುವುದೂ ಉಂಟು. ಸ್ಥಾಪತ್ಯಕಲೆಗೆ ಸಂಬಂಧಿಸಿದ ಆಗಮಗ್ರಂಥಗಳಲ್ಲಂತೂ ಸಂಕೇತಾರ್ಥಗಳ ವಿಶಾಲ ಪ್ರಪಂಚವನ್ನೇ ತೆರೆದಿರಿಸಲಾಗಿದೆ. ಈ ಸೂಕ್ಷ್ಮಾರ್ಥಗಳನ್ನು ಅನುಸರಿಸಿಯೇ ಆಕೃತಿ ವಿಶೇಷಗಳನ್ನೂ ತಾಳಮಾನಾದಿಗಳನ್ನೂ ಒಳಗೊಂಡ ಶಾಸ್ತ್ರೀಯ ಲಕ್ಷಣಗಳು ನಿರ್ದೇಶಗೊಂಡಿರುತ್ತವೆ.

  ಅಮೂರ್ತಭಾವನೆಗಳನ್ನು ಮೂರ್ತೀಕರಿಸುವ ಆಕಾಂಕ್ಷೆಯಿಂದ ಕಲೆಯ ಆವಿಷ್ಕಾರವಾಗುತ್ತದೆ – ಎಂಬ ತತ್ತ್ವದ ಸಾಂಕೇತಿಕ ಕಥನವನ್ನು ಪ್ರಾಚೀನ ಉಷಾ- ಅನಿರುದ್ಧ-ಚಿತ್ರಲೇಖಾ ಪ್ರಕರಣದಲ್ಲಿ ಕಾಣುತ್ತೇವೆ. ಇತರ ಹಲವು ಆಯಾಮಗಳ ಅರ್ಥನಿಗೂಹನಗಳೂ ಆ ಕಥೆಯಲ್ಲಿ ಅಡಗಿವೆ. ಕಥೆಯು ಪ್ರಸಿದ್ಧವಾದದ್ದೇ.

  ಉಷಾ ಎಂಬ ರಾಜಕುಮಾರಿಗೆ ಗೌರೀದೇವಿ ಹೇಳಿರುತ್ತಾಳೆ – ವೈಶಾಖ ಶುದ್ಧ ದ್ವಾದಶಿ ನಿನಗೆ ಕನಸಿನಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿ ನಿನ್ನ ಪತಿ ಆಗುತ್ತಾನೆ ಎಂದು. ಉಷಾ ಇದನ್ನು ತನ್ನ ಸಹಾಯಕಿ ಚಿತ್ರಲೇಖಾಗೆ ತಿಳಿಸುತ್ತಾಳೆ. ತುಂಬಾ ಪ್ರತಿಭಾವಂತಳಾದ ಚಿತ್ರಲೇಖಾ ಅತ್ಯಂತ ಸುಂದರರಾದ ಮನುಷ್ಯರ, ಗಂಧರ್ವರ, ದೇವತೆಗಳ ಚಿತ್ರಗಳನ್ನು ತನ್ನ ಕಲ್ಪನೆಯಿಂದ ರಚಿಸಿ ತೋರಿಸುತ್ತಾಳೆ. ಉಷಾ ಅವುಗಳಲ್ಲಿ ದೇವತೆಗಳನ್ನೆಲ್ಲ ಬಿಟ್ಟು ಅನಿರುದ್ಧನೆಂಬ ಮಾನವವ್ಯಕ್ತಿಯ ಚಿತ್ರವನ್ನು ಆರಿಸಿ ಇವನೇ ನನ್ನ ಕನಸಿನ ವ್ಯಕ್ತಿ ಎನ್ನುತ್ತಾಳೆ. ಮಾಂತ್ರಿಕ ಶಕ್ತಿಗಳೂ ಇದ್ದ ಚಿತ್ರಲೇಖಾ ಉಷಾಗೆ ಅನಿರುದ್ಧನ ಭೇಟಿ ಮಾಡಿಸುತ್ತಾಳೆ. ಚಿತ್ರಕಲೆ ಉದಿಸಿದ್ದು ಹೀಗೆ – ಎಂದು ಸಾಂಪ್ರದಾಯಿಕ ಕಥನವಿದೆ. ಮಾನುಷಮಾಧ್ಯಮದ ಮೂಲಕ ದೈವಸಾಕ್ಷಾತ್ಕಾರವು ಶಕ್ಯ – ಮೊದಲಾದ ಸಂಕೇತಾರ್ಥಗಳೂ ಈ ಕಥೆಯಲ್ಲಿ ಇವೆ.

  ಈ ವಿಶಾಲವಾದ ಮತ್ತು ಗಹನವಾದ ಪ್ರತಿಮಾಲೋಕವನ್ನು ವರ್ಣಚಿತ್ರ ಮಾಧ್ಯಮದಲ್ಲಿ ಅಭಿವ್ಯಂಜಿಸುವುದು ವೇದವಾಙ್ಮಯಾಧಾರಿತ ಕಲೆಯ ಆಶಯ. ಸುದೀರ್ಘ ಧ್ಯಾನದಿಂದ ಲಬ್ಧವಾದ ಸಂಕೇತಾರ್ಥಸಮೂಹವನ್ನು ವರ್ಣಚಿತ್ರ ಮಾಧ್ಯಮದಲ್ಲಿ ನಿವೇಶಗೊಳಿಸುವುದು ಇಲ್ಲಿಯ ಪ್ರಯತ್ನ. ಈ ಭೂಮಿಕೆಯಿಂದಾಗಿ ಈ ಪ್ರಸ್ಥಾನದ ಚಿತ್ರಗಳು ಗಾಢವಾದ ಮನನಕ್ಕೆ ಸಾಮಗ್ರಿಯನ್ನು ಒದಗಿಸುತ್ತವೆ. ಈ ಸೌಂದರ್ಯಾನುಭೂತಿಯ ಹಿನ್ನೆಲೆಯಲ್ಲಿಯೆ ಲಾರೆನ್ಸ್ ಬಿನ್ಯನ್ (Laurence Binyon) ಹೀಗೆಂದಿದ್ದ:

  “One comes in the end to recognize that profound conceptions can dispense with the formulas of calculated surface-arrangement and have their own occult means of knitting together forms in apparent diffusion.”

  ಸೌಂದರ್ಯಾನುಭೂತಿಯಿಂದ ತತ್ತ್ವಸಾಕ್ಷಾತ್ಕಾರಕ್ಕೆ ಕ್ರಮಣವು ಕ್ಷಿಪ್ರಗತಿಯದು. ಅದು ಪ್ರಜ್ಞೆಯ ಕ್ರಿಯಾಶೀಲತೆಯ ಹೆದ್ದಾರಿ. ಪ್ರಜ್ಞೆಯ ಉನ್ನತ  ಹಂತಗಳಲ್ಲಿ ರಸಾನುಭವವೂ ತತ್ತ್ವಸಾಕ್ಷಾತ್ಕಾರವೂ ಅಭಿನ್ನವಾಗಿಬಿಡುತ್ತವೆ. ಈ ಐಕ್ಯಸ್ಥಿತಿಯನ್ನೇ ಸತ್-ಚಿತ್-ಆನಂದ ಎಂದು ಅರ್ಥಪೂರ್ಣವಾಗಿ ಸಂಕೇತಿಸಿರುವುದು. ಈ ಹಿನ್ನೆಲೆಯಲ್ಲಿಯೆ ಬ್ರಹ್ಮಾನುಭವದ ಉದ್ಗಾರಗಳು ಅತ್ಯಂತ ಕಾವ್ಯಮಯವೂ ಆಗಿರುವುದು. ಉದಾಹರಣೆಗೆ ವಿಶ್ವಸೃಷ್ಟಿಯ ವೈಭವವನ್ನು ಶಬ್ದಿತಗೊಳಿಸಿರುವ ನಾಸದೀಯ ಸೂಕ್ತವು ಅನುಪಮ ಕಾವ್ಯವೂ ಆಗಿದೆ.

  ಪರತತ್ತ್ವವನ್ನು ತಾವು ಕಂಡಂತೆ ಜ್ಞಾನೇಶ್ವರರು ವರ್ಣನೆ ಮಾಡಿದುದು ಲೋಕೋತ್ತರ ಕಾವ್ಯವೇ ಆಗಿ ಪರಿಣಮಿಸಿತು. ಒಂದು ಅನನ್ಯವಾದ ಭವ್ಯ ಚಿತ್ರಸರಣಿಯನ್ನು ನೋಡುತ್ತ ವಿವರಿಸುತ್ತಿರುವಂತೆಯೇ ಜ್ಞಾನೇಶ್ವರೀ ಕಾವ್ಯ ವಿಜೃಂಭಿಸಿದೆ. ಇದು ಅಂತಃಪ್ರಜ್ಞೆಯ ಸ್ತರದ ಸಂವಹನವೆಂಬುದು ಸ್ಪಷ್ಟವೇ ಆಗಿದೆ. ಹೊರಗಣ್ಣು ಇಲ್ಲದ ಸೂರದಾಸರು ನೀಡಿರುವ ವರ್ಣನೆಗಳು ಯಾವ ತ್ರೀ-ಡೈಮೆನ್ ಷನಲ್ ಚಿತ್ರಣಕ್ಕಿಂತ ಪ್ರಜ್ವಲವಾಗಿವೆಯಲ್ಲವೆ?

  ವಸ್ತುಸ್ಥಿತಿಯೆಂದರೆ – ಭಾರತೀಯ ಪರಂಪರೆಯ ಸಂದರ್ಭದಲ್ಲಿ ಅಂತರನುಭವಗಳ ವಿವಿಧ ಪ್ರಕಾರಗಳ ನಡುವೆ ಗೋಡೆಗಳಿಲ್ಲ. ಎಲ್ಲವೂ ಅಖಂಡ. ಹೊರಗಿನ ಅಭಿವ್ಯಕ್ತಿಪ್ರಕಾರಗಳ ಲಾಕ್ಷಣಿಕ ಮಿತಿಗಳನ್ನು ಅತಿಕ್ರಮಿಸಿ ಪರಮಸತ್ಯದಲ್ಲಿ ನೆಲೆಗೊಳ್ಳಬೇಕು – ಎಂಬುದೇ ಆಶಯ.

  ಸೌಂದರ್ಯಾಭಿಜ್ಞತೆಯು ಸುಸಂಸ್ಕೃತ ಅಂತಶ್ಚೇತನದ ಸಹಜ ಸ್ಪಂದನವೂ ಆಗಿದೆ. ಅದು ದೇಶಕಾಲಾತೀತವಾದುದು ಎಂದೂ ಗ್ರಹಿಸಬೇಕು. ಉದಾಹರಣೆಗೆ ಫ್ರಾನ್ಸ್-ಸ್ಪೇಯ್ನ್‌ಗಳ ಇತಿಹಾಸಪೂರ್ವಕಾಲದ ಗುಹಾಚಿತ್ರಗಳ ಪ್ರಾಣಿಚಿತ್ರಣರೀತಿಗೂ ಕ್ರಿ.ಶ. ೧ನೇ ಶತಮಾನದ ಅಜಂತಾ ಭಿತ್ತಿಚಿತ್ರಗಳ ಶೈಲಿಗೂ ಸಾಮ್ಯವಿರುವುದನ್ನು ಕಾಣುತ್ತೇವೆ. ವಾಸ್ತವವಾಗಿ ಅವೆರಡರ ನಡುವೆ ಶತಮಾನಗಳೇ ಉರುಳಿಹೋಗಿದ್ದವು. ಕಾಲಾಂತರಗಳ ಮತ್ತು ಹಲವು ಸಾವಿರ ಮೈಲಿಗಳ ದೇಶಾಂತರಗಳ ವ್ಯತ್ಯಯಗಳು ಇದ್ದರೂ, ಪ್ರಾಣಿಸಂಕುಲ ಮೊದಲಾದವುಗಳ ರೇಖನರೀತಿಗಳಲ್ಲಿ ದಟ್ಟ ಸಾಮ್ಯ ಎದ್ದುಕಾಣುತ್ತದೆ. ಗ್ರೀಕ್ ದೇವದೇವತೆಗಳ ಮತ್ತು ಭಾರತದ ಅಪ್ಸರೆಯರ ಮತ್ತಿತರ ಚಿತ್ರಣರೀತಿಯಲ್ಲಿ ಅನುಸ್ಯೂತತೆಯನ್ನು ಕಾಣಬಹುದು. ಪರಸ್ಪರ ಹೋಲಿಕೆಗಳಿರುವ ಪೌರಾಣಿಕ ಆಖ್ಯಾನಗಳೂ ಉಂಟು. ಉದಾಹರಣೆಗೆ: ಅಯೋನಿಯನ್ ಸಮುದ್ರದಿಂದ ಅಪ್ಸರೆಯರು ಉಗಮಗೊಂಡರು ಎಂಬ ಪಾಶ್ಚಾತ್ಯ ಪೌರಾಣಿಕ ಪರಂಪರೆಗೆ ಸಂವಾದಿಯಾದ ಕಥನಗಳು ಭಾರತೀಯ ಪುರಾಣಗಳಲ್ಲಿಯೂ ಲಭ್ಯವಿವೆ.

  ಹೀಗೆ ಮೂಲಪ್ರೇರಣೆ, ಚಿತ್ರಣೋತ್ಸಾಹ, ಅಭಿವ್ಯಕ್ತಿಮಾರ್ಗ – ಎಲ್ಲದರ ಆಂತರ್ಯದಲ್ಲಿ ಸಮಾನಾಂಶಗಳು ಉಂಟು.

  ಆಧುನಿಕ ಕಲೆ ಎಂದು ಲಕ್ಷಿತವಾಗಿರುವ ಈಚಿನ ಕೆಲವು ಐರೋಪ್ಯ ಕಲಾಪ್ರಸ್ಥಾನಗಳಲ್ಲಿಯೂ ಕಲಾಕಾರನು ನಿಸರ್ಗಕ್ಕೆ ಹೆಚ್ಚು ನಿಕಟವರ್ತಿಯಾಗಬೇಕೆಂಬ ಧೋರಣೆ ಇದೆ.

  “In Indian civilization there was never a division or fundamental contradiction between art and religion, or between art, religion and philosophical thought. Inherited revelation, the scholastic traditions of the priesthoods, and the popular beliefs worked upon each other by ever renewed processes of influence and were pervaded meanwhile by philosophical ideas originating in ascetic experiences, yogic exercises, and introverted intuition.  The luxuriant display of religious sculpture so characteristic of the great temples of pilgrimage is therefore a readily legible pictorial script that conveys, through an elaborate yet generally understood symbolism, not only the legends of popular cult, but simultaneously the profoundest teachings of Indian metaphysics”

  [Heinrich Zimmer: ‘The Art of Indian Asia: Its Mythology and Transformation.’ Bollingen Series XXXIX. Pantheon Books, New York. 1955. Second edition 1960. Page 12].

   

  ಕಲಾವಿದ ಜಿ.ಎಲ್.ಎನ್. ಸಿಂಹ

  ವೇದಗಳನ್ನೂ ಪುರಾಣಗಳನ್ನೂ ಆಧರಿಸಿದ ಸರ್ಜನಾತ್ಮಕ ವರ್ಣಚಿತ್ರಗಳ ರಚನೆಗಾಗಿ ಪ್ರಸಿದ್ಧರಾದವರು ಜಿ.ಎಲ್.ಎನ್. ಸಿಂಹ (ಗೋಪಾಲಾಚಾರ್ಯ ಲಕ್ಷ್ಮೀನರಸಿಂಹ). ಮೈಸೂರು ಜಿಲ್ಲೆಯ ನಂಜನಗೂಡು ಸಮೀಪದ ಕಳಲೆ ಗ್ರಾಮದಲ್ಲಿ ನೆಲಸಿರುವ ಸಿಂಹ (ಜನನ:  ೧೯ ಡಿಸೆಂಬರ್ ೧೯೩೭) ಮೈಸೂರಿನ ಚಾಮರಾಜೇಂದ್ರ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್ ಕಲಾ ಶಾಲೆಯಲ್ಲಿ ವೈ. ಸುಬ್ರಹ್ಮಣ್ಯರಾಜು, ಎಸ್.ಎನ್. ಸ್ವಾಮಿ, ಎಫ್.ಎಂ. ಸೂಫಿ ಮೊದಲಾದ ವಿಖ್ಯಾತ ಕಲಾವಿದರಲ್ಲಿ ತರಬೇತಿ ಹೊಂದಿ ಧ್ಯಾನಸ್ಥ ಚಿತ್ರಗಳ ರಚನೆಗೆ ತಮ್ಮನ್ನು ಮೀಸಲಾಗಿಸಿಕೊಂಡರು. ಅಸಾಮಾನ್ಯ ಚಿತ್ರಣತಂತ್ರ ಪ್ರೌಢಿಮೆಗಾಗಿ ಅವರ ರಚನೆಗಳು ವಿಶಾಲ ಪ್ರಸಿದ್ಧಿ ಪಡೆದಿವೆ. ೧೯೯೦ರ ದಶಕದಲ್ಲಿ ದಸರಾ ಪ್ರದರ್ಶನದಲ್ಲಿ ಹಲವು ವರ್ಷ ಸತತವಾಗಿ ಪ್ರಥಮ ಬಹುಮಾನ ಗಳಿಸಿಕೊಂಡರು. ಅನಂತರ ಮೈಸೂರು ರ‍್ಯಾಮ್‌ಸನ್ ಕಲಾ ಪ್ರತಿಷ್ಠಾನದ ಪ್ರಶಸ್ತಿ (೨೦೦೩), ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ (೨೦೦೪), ಕರ್ನಾಟಕ ಚಿತ್ರಕಲಾ ಪರಿಷತ್ ಪ್ರಶಸ್ತಿ (೨೦೦೪), ಎಂ.ವಿ. ಮಿಣಜಗಿ ಪ್ರಶಸ್ತಿ (೨೦೧೩) ಮೊದಲಾದ ಹಲವಾರು ಪ್ರತಿಷ್ಠಿತ ಸಂಮಾನಗಳು ಅವರಿಗೆ ಸಂದಿವೆ. ಸಿಂಹ ಅವರ ಬಗೆಗೆ ಸಾಕ್ಷ್ಯಚಿತ್ರವನ್ನು ಇಂದಿರಾ ಗಾಂಧಿ ರಾಷ್ಟ್ರೀಯ  ಕಲಾಕೇಂದ್ರ ನಿರ್ಮಿಸಿದೆ. ಸಿಂಹ ಅವರು ಖ್ಯಾತ ಸಾಂಪ್ರದಾಯಿಕ ವಿದ್ವಾಂಸ ಮೈಸೂರು ಲಕ್ಷ್ಮೀಪುರಂ ಶ್ರೀನಿವಾಸಾಚಾರ್ಯರಲ್ಲಿ ಶಿಷ್ಯತ್ವ ಮಾಡಿ ಅಷ್ಟಾಂಗಯೋಗ ಸಾಧನೆ ಮಾಡಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಅವರು ನಿರ್ಮಿಸಿರುವ ವೇದ ಪುರಾಣ ವಾಙ್ಮಯದಿಂದ ಆಯ್ದುಕೊಂಡ ವಿಷಯಗಳ ವಿಸ್ತೃತಾರ್ಥಗಳನ್ನು ಹೊಮ್ಮಿಸುವ ನಾಲ್ಕಾರು ವರ್ಣಚಿತ್ರಸರಣಿಗಳು ಅನನ್ಯ ರೀತಿಯವಾಗಿವೆ.

  ವೇದಾರ್ಥಾನುಸಂಧಾನ ಮತ್ತು ವರ್ಣಚಿತ್ರ ಮಾಧ್ಯಮ

 • ಶಿಕ್ಷಣವ್ಯವಸ್ಥೆಯ ಕುರಿತು ಇಂದು ಸಾಕಷ್ಟು ಚಿಂತನ-ಮಂಥನಗಳು ನಡೆಯುತ್ತಿವೆ. ಅದರಲ್ಲಿ ಭಾರತದ ಶಿಕ್ಷಣವ್ಯವಸ್ಥೆಯು ಒಳಗೊಂಡಿರುವ ಕಲಿಕೆ ವಿಧಾನದ ಗುಣಮಟ್ಟ ಕಳಪೆ ಎನ್ನುವ ಮಾತು ವ್ಯಾಪಕವಾಗಿ ಕೇಳಬಂದಿದೆ. ಈ ನಡುವೆ ಕಂಡುಬರುವ ಆಶಾಕಿರಣವೆಂದರೆ ಹೊಸ ಪದ್ಧತಿಯೊಂದನ್ನು ಕಂಡುಹಿಡಿಯುವುದಕ್ಕೆ ಇದು ಸಕಾಲವಾಗಿದೆ; ವಿಶೇಷವಾಗಿ ಶಿಕ್ಷಣ ವ್ಯವಸ್ಥೆಯನ್ನು ನೌಕರಶಾಹಿಯ ಕಪಿಮುಷ್ಟಿಯಿಂದ ಮುಕ್ತಗೊಳಿಸಬೇಕಾಗಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗವನ್ನು (ಯುಜಿಸಿ) ಇತ್ತೀಚೆಗೆ ಬರ್ಖಾಸ್ತುಗೊಳಿಸಿರುವುದು ಮತ್ತು ವಿವಾದಾಸ್ಪದ ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್ (ಔನ್ನತ್ಯದ ಸಂಸ್ಥೆ) ಯೋಜನೆ ಬಗೆಗಿನ ಮಾತುಗಳು ಇಂದಿನ ತೃತೀಯ ದರ್ಜೆ ಶಿಕ್ಷಣವ್ಯವಸ್ಥೆಗೆ ಬದಲಾಗಿ ಬೇರೇನೋ ಬರಲಿದೆ ಎನ್ನುವ ಸೂಚನೆಯನ್ನು ಕೊಡುತ್ತಿವೆ.

  ಏನಿದ್ದರೂ ಇಂದಿನ ಶಿಕ್ಷಣದ ಕಳಪೆ ಗುಣಮಟ್ಟ ಶಾಲಾಹಂತದಲ್ಲೇ ಹಣಿಕಿಕ್ಕುತ್ತದೆ. ಈ ನಿಟ್ಟಿನಲ್ಲಿ ನಾಟಕೀಯವಾದ ಬದಲಾವಣೆಯೇ ಅಗತ್ಯವೆನಿಸಿದ್ದು, ಉತ್ತಮ ಗುಣಮಟ್ಟದ ಸಾಧನೆಗೆ ಈ ಕೆಳಗಿನ ಕೆಲವು ಅಂಶಗಳನ್ನು ಪರಿಶೀಲಿಸಬಹುದು. ಮೊದಲನೆಯದಾಗಿ ಇಂದಿನ ಶಿಕ್ಷಣವ್ಯವಸ್ಥೆಯ ಮೂಲವನ್ನು ಮತ್ತು ಇದರಲ್ಲಿರುವ ದೋಷಗಳನ್ನು ಕಂಡುಹಿಡಿಯಬೇಕು. ಎರಡನೆಯದಾಗಿ, ಹೊಸ ಸವಾಲುಗಳನ್ನು ಎದುರಿಸುವುದಕ್ಕಾಗಿ ತಂತ್ರಜ್ಞಾನದ ಮುಂದುವರಿಕೆಯನ್ನು ಬಳಸಿಕೊಳ್ಳಬೇಕು; ಮತ್ತು ಮೂರನೆಯದಾಗಿ, ಪರಂಪರೆಯಿಂದ ಬಂದ ಶಿಕ್ಷಣದ ಒಳ್ಳೆಯ ಅಂಶಗಳನ್ನು ಮರಳಿ ಶೋಧಿಸಬೇಕು.

  ಪಾರಂಪರಿಕ ಭಾರತಕ್ಕಿದೆ ಸಾಮರ್ಥ್ಯ
  ಈ ಸಂಬಂಧವಾಗಿ ಪೂಜ್ಯ ಗುರು ದಲಾ ಲಾಮಾ ಅವರು ಏಪ್ರಿಲ್ ೩ರಂದು ನೀಡಿದ ಹೇಳಿಕೆ ಗಮನಾರ್ಹ ಮತ್ತು ಸಕಾಲಿಕವೆನಿಸುತ್ತದೆ. ಶಿಕ್ಷಣದಲ್ಲಿ ಪ್ರಾಚೀನ ಭಾರತೀಯ ಪರಂಪರೆಯನ್ನು ಹೇಗೆ ಸೇರಿಸಿಕೊಳ್ಳಬಹುದು ಎಂಬ ಬಗ್ಗೆ ಚರ್ಚೆ ನಡೆಯಬೇಕು. ಜಗತ್ತಿನ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ತನ್ನ ಪ್ರಾಚೀನ ಪರಂಪರೆಯನ್ನು ಆಧುನಿಕ ಶಿಕ್ಷಣದೊಂದಿಗೆ ಮೇಳೈಸುವ ಸಾಮರ್ಥ್ಯ ಭಾರತಕ್ಕಿದೆ ಎಂದವರು ಹೇಳಿದ್ದರು. ಇದು ನಿಜವಾಗಿಯೂ ಅಮೂಲ್ಯ ಮತ್ತು ಒಳನೋಟದಿಂದ ಕೂಡಿದ ಸಲಹೆಯಾಗಿದೆ; ಏಕೆಂದರೆ ಒಂದು ಕಾಲದಲ್ಲಿ ಭಾರತವು ಜಗತ್ತೇ ಮತ್ಸರಗೊಳ್ಳುವಂತಹ ಶಿಕ್ಷಣ ವಿಧಾನವನ್ನು ರೂಪಿಸಿಕೊಂಡಿತ್ತು; ನಾಲಂದಾ ಮತ್ತು ತಕ್ಷಶಿಲಾ ಅದಕ್ಕೆ ಉದಾಹರಣೆಗಳು.

  ಈ ನಡುವೆ ಏಪ್ರಿಲ್ ೨೯ರಂದು ಮಧ್ಯಪ್ರದೇಶ ಮುಖ್ಯಮಂತ್ರಿಗಳು, ರಾಜ್ಯಸರ್ಕಾರದ ವತಿಯಿಂದ ಗುರುಕುಲಗಳನ್ನು ನೋಂದಣಿಗೊಳಿಸಿ, ಅವುಗಳನ್ನು ಮುಖ್ಯವಾಹಿನಿಯ ಶಾಲೆಗಳಿಗೆ ಸಮಾನವಾಗಿ ಪರಿಗಣಿಸಲಾಗುವುದು ಎಂದು ಪ್ರಕಟಿಸಿದರು. ಕೆಲವು ವಿಶ್ಲೇಷಕರು ಅದೊಂದು ಅತಿರೇಕದ ಚಿಂತನೆ ಎಂದು ವ್ಯಂಗ್ಯವಾಡಿದರು; ನಾವಂದುಕೊಂಡಂತೆ ಅದು ಅಷ್ಟೇನೂ ಆಕರ್ಷಕವಲ್ಲದ ಪ್ರಸ್ತಾವವೂ ಇರಬಹುದು.

  ಗಮನಾರ್ಹವಾದ ಸಂಗತಿಯೆಂದರೆ, ತಂತ್ರಜ್ಞಾನದ ಪ್ರಗತಿಯಿಂದಾಗಿ ಗುರುಕುಲ ಸೇರಿದಂತೆ ಸಾಂಪ್ರದಾಯಿಕ ಪದ್ಧತಿಗಳ ಬಗ್ಗೆ ಪರಿಶೀಲಿಸುವುದು ಸಾಧ್ಯವಷ್ಟೇ ಅಲ್ಲ, ಅನಿವಾರ್ಯ ಎನ್ನುವ ದಿನಗಳು
  ಬರುತ್ತಿವೆ ಎನಿಸುತ್ತದೆ. ಇದು ಶುದ್ಧ ಪ್ರಾಯೋಗಿಕ ಪರಿಕಲ್ಪನೆ. ಕಳೆದ ಕೆಲವು ಶತಮಾನಗಳಲ್ಲಿ ನಾವು ಯಾವೊಂದು ಶಿಕ್ಷಣವ್ಯವಸ್ಥೆಯನ್ನು ರೂಪಿಸಿಕೊಂಡಿದ್ದೇವೋ ಅದು ಸಾಮ್ರಾಜ್ಯಶಾಹಿಗಳ ಆವಶ್ಯಕತೆಗಳನ್ನು ಪೂರೈಸುವಂಥದ್ದು ಮತ್ತು ಅವರು ನಮ್ಮ ಮೇಲೆ ಹೇರಿದ್ದು. ಅದನ್ನೀಗ ಪುನರ್ವಿಮರ್ಶೆಗೆ ಒಳಪಡಿಸಬೇಕಾಗಿದೆ.

  ಪದ್ಧತಿ ಪಾಶ್ಚಿಮಾತ್ಯ; ಗುಣಮಟ್ಟದ ಕುಸಿತ
  ವಸಾಹತುಶಾಹಿ ಶಿಕ್ಷಣಪದ್ಧತಿಯು (ಮೊದಲನೇ) ಕೈಗಾರಿಕಾ ಕ್ರಾಂತಿಯ ಉತ್ಪನ್ನವಲ್ಲದೆ ಬೇರೇನೂ ಅಲ್ಲ. ಅದು ವಿಲಿಯಂ ಬ್ಲೇಕ್ ಹೇಳುವ ಸೈತಾನನ ಕಪ್ಪು ಕಾರ್ಖಾನೆಗಳು ಎಂಬ ಕಲ್ಪನೆಗೆ ಅನುಗುಣವಾಗಿ ಮನುಷ್ಯಸಂಬಂಧಗಳನ್ನು ಕಡಿಯಿತು; ಆತ್ಮವನ್ನು ಜಡಗೊಳಿಸುವ ಕೈಗಾರಿಕಾ ಸಂಕೀರ್ಣಗಳ ಮೂಲಕ ಜನರನ್ನು ಕೃಷಿಜೀವನದಿಂದ ಆಚೆಗೆ ತಳ್ಳಿತು. ಈ ಕಾರ್ಖಾನೆಗಳಿಗೆ ಬೇಕಾಗಿದ್ದ ಜನಸಮೂಹ ಯಾವ ತರಹದ್ದೆಂದರೆ ಅವರು ಸಾಕ್ಷರರಾಗಿರಬೇಕು ಮತ್ತು ಪ್ರಶ್ನೆಕೇಳದೆ ಕೊಟ್ಟ ಸೂಚನೆಗಳನ್ನು ಪಾಲಿಸುವವರಾಗಿರಬೇಕು. ಅವರು ಚಿಂತಿಸುವ ಅಗತ್ಯವಿಲ್ಲ ಅಥವಾ ಸೃಷ್ಟಿಶೀಲರಾಗುವುದು ಕೂಡಬೇಕಾಗಿಲ್ಲ; ಅದೆಲ್ಲ ಬೇಕಾದದ್ದು ಇಂಜಿನಿಯರ್‌ಗಳು ಮತ್ತು ಮ್ಯಾನೇಜರುಗಳ ಒಂದು ಸಣ್ಣ ಗುಂಪಿಗೆ.

  ಅದೇ ಪದ್ಧತಿಯನ್ನು ಭಾರತಕ್ಕೆ ಆಮದು  ಮಾಡಲಾಯಿತು. ಸಾಮ್ರಾಜ್ಯಕ್ಕೆ ಬೇಕಾದ ದುಡಿಯುವ ವರ್ಗವೆಂದರೆ- ಸಿಪಾಯಿಗಳು ಮತ್ತು ಕೂಲಿಗಳು; ಶಿಕ್ಷಣತಜ್ಞ ಮೆಕಾಲೆ ವರ್ಣಿಸಿದಂತೆ ರಕ್ತ ಮತ್ತು ಬಣ್ಣದಲ್ಲಿ ಭಾರತೀಯರು; ಅಭಿರುಚಿ, ಅಭಿಪ್ರಾಯ, ಮಾತು ಹಾಗೂ ಬುದ್ಧಿಶಕ್ತಿಯಲ್ಲಿ ಇಂಗ್ಲಿ?ರು. ಇದು ಈಗ ಮೆಕಾಲೆಯ ಕನಸನ್ನು ದಾಟಿ ಬಹಳ ಮುಂದುವರಿದಿದೆ; ಮತ್ತು ಇದರಿಂದ ಭಾರತಕ್ಕಾದ ಹಾನಿ ಸಣ್ಣದಲ್ಲ. ಸೋವಿಯತ್ ರಷ್ಯಾ ಮಾದರಿಯ ಮೇಲಿನಿಂದ ಕೆಳಕ್ಕೆ ಬರುವ ಕೇಂದ್ರೀಕೃತ ಶಿಕ್ಷಣ ಮತ್ತು ಸಂಶೋಧನ ಪದ್ಧತಿಯು ನಮ್ಮಲ್ಲಿ ಬಂದಿತು; ಆದರೆ ಸ್ವತಂತ್ರ ಚಿಂತನೆಯೇ ಅದರಿಂದ ನಾಶವಾಯಿತು. ಪರಿಣಾಮವಾಗಿ ದೇಶದ ಶಿಕ್ಷಣದ ಗುಣಮಟ್ಟ ಕುಸಿಯುತ್ತಾ ಬಂದಿದೆ.

  ಈ ಶಿಕ್ಷಣ ಮತ್ತು ನಮ್ಮಲ್ಲಿ ಹಿಂದೆ ಇದ್ದ ಶಿಕ್ಷಣವ್ಯವಸ್ಥೆಗಳು ಪೂರ್ತಿ ವಿಭಿನ್ನವಾಗಿವೆ. ಹಿಂದಿನ ಶಿಕ್ಷಣದ ಬಗ್ಗೆ ನಮಗೆ ಹೆಚ್ಚು ಗೊತ್ತಿಲ್ಲ. ಧರ್ಮಪಾಲ್ ಅವರ ಗ್ರಂಥಗಳು ಸೇರಿದಂತೆ ಲಭ್ಯವಿರುವ ಅಲ್ಪಸ್ವಲ್ಪ ಮಾಹಿತಿಯನ್ನು ಆಧರಿಸಿ ಹೇಳುವುದಾದರೆ, ನಮ್ಮಲ್ಲಿ ವಿಶಾಲವಾದ ಮಾನವಿಕ (ವಿಷಯಗಳ) ಶಿಕ್ಷಣ ವ್ಯವಸ್ಥೆಯಿತ್ತು. ಅದು ಜೀವನಕ್ಕೆ ಸಮೀಪವಾಗಿದ್ದು, ಪ್ರಾಯೋಗಿಕ ಸಮಸ್ಯೆಗಳನ್ನು ಪರಿಹರಿಸುವಂತಿತ್ತು. ಸಾಂದರ್ಭಿಕ ಸಾಕ್ಷ್ಯಗಳು ಇದನ್ನು ದೃಢಪಡಿಸುತ್ತವೆ. ಏಕೆಂದರೆ ಪ್ರಾಚೀನ ಭಾರತದಲ್ಲಿ ಅದ್ಭುತವಾದ ಸಂಶೋಧನೆಗಳು, ಬೌದ್ಧಿಕ ಸಾಧನೆಗಳು ನಡೆದಿದ್ದವು. ಪಾಣಿನಿಯ ವ್ಯಾಕರಣ, ಪೈ ಮತ್ತು ಟ್ರಿಗೊನೊಮೆಟ್ರಿ ಬಗೆಗಿನ ಶೋಧಗಳು, ನ್ಯಾನೋ-ಕಾರ್ಬನ್ ಲೋಹಶಾಸ್ತ್ರ – ಊಟ್ಜ್ (ಉಕ್ಕು) ಕುರಿತು ತಮಿಳು ಉರುಕ್ಕುಗಳಲ್ಲಿ ಉಲ್ಲೇಖವಿದೆ.

  ಈಗ ನಾಲ್ಕನೇ ಕೈಗಾರಿಕಾ ಕ್ರಾಂತಿ ನಮ್ಮನ್ನು ಆವರಿಸುತ್ತಿದೆ; ವಿಶೇ?ವಾಗಿ ಕಂಪ್ಯೂಟರಿನ ಶಕ್ತಿ ಮತ್ತು ಕೃತಕ ಬುದ್ಧಿಮತ್ತೆಗಳು ಮೊದಲ ಕೈಗಾರಿಕಾ ಕ್ರಾಂತಿಯ ಫಲಗಳನ್ನು ಶೂನ್ಯಗೊಳಿಸುತ್ತಿವೆ. ತನ್ನ ಸಿನೆಮಾ ಹಾರ್ಡ್ ಟೈಮ್ಸ್ನಲ್ಲಿ ಚಾರ್ಲಿ ಚಾಪ್ಲಿನ್ ತೋರಿಸುವಂತಹ ಕೂಲಿಕಾರರ ಸಮೂಹ ನಮಗಿಂದು ಬೇಕಾಗಿಲ್ಲ. ರೋಬೋಗಳು ಇಂದು ಕಾರ್ಖಾನೆಗಳನ್ನು ನಡೆಸುವ ಮತ್ತು ಬಿಳಿಕಾಲರ್ ಕೆಲಸಗಳನ್ನು ನಿರ್ವಹಿಸುವ ಮಟ್ಟಕ್ಕೆ ಬೆಳೆದುನಿಂತಿವೆ. ಆಕ್ಸ್‌ಫರ್ಡ್ ನಡೆಸಿದ The Future of Employment – How Susceptible Are Jobs to Computerisation?’ ಎನ್ನುವ ಪ್ರಸಿದ್ಧ ಅಧ್ಯಯನದ ಪ್ರಕಾರ ಇಂದು ಇರುವ ಒಟ್ಟು ಉದ್ಯೋಗಗಳಲ್ಲಿ ಶೇ. ೪೭ರಷ್ಟು ಮುಂದಿನ ೨೦ ವರ್ಷಗಳಲ್ಲಿ ಗತಾರ್ಥವಾಗಲಿವೆ. ಇಂಜಿನಿಯರ್‌ಗಳು ಹಿಂದೆ ಸ್ಲೈಡ್‌ರೂಲ್‌ಗಳು ಮತ್ತು ಲಾಗ್ ಟೇಬಲ್‌ಗಳನ್ನು ಬಳಸುತ್ತಿದ್ದರು; ಎಲೆಕ್ಟ್ರಾನಿಕ್ ಕ್ಯಾಲ್ಕ್ಯುಲೇಟರ್‌ನಿಂದ ಅವು ಮೂಲೆಗೆ ಹೋಗಿವೆ. ಹಿಂದೆ ನೇವಿಗೇಶನ್‌ಗೆ ಕಾಗದದ ಮ್ಯಾಪ್‌ಗಳಿದ್ದರೆ ಈಗ ಜಿಪಿಎಸ್ ಮತ್ತು ಗೂಗಲ್ ಮ್ಯಾಪ್ ಬಂದು ಅವನ್ನೆಲ್ಲ ಬದಿಗೊತ್ತಿವೆ. ಈ ಮೂಲಕ ಶಿಕ್ಷಣದ ಆಧಾರದಂತಿದ್ದು ಪರೀಕ್ಷೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದ ಜ್ಞಾಪಕಶಕ್ತಿ, ಬಾಯಿಪಾಠಗಳು ಮುಂದಿನ ದಿನಗಳಲ್ಲಿ ಉಪಯುಕ್ತ ಕೌಶಲಗಳು ಎನಿಸಲಾರವು.

  ಕೆಲಸ ಮತ್ತು ವೃತ್ತಿ – ಬದಲಾವಣೆ
  ಅವಲ್ಲದೆ ಕೆಲಸದ ಸ್ವರೂಪ ಬಹಳ ವೇಗವಾಗಿ ಬದಲಾಗುತ್ತಿದೆ. ಹಿಂದೆ ಜನ ಕೆಲಸ (job) ಬದಲಾಯಿಸುತ್ತಿದ್ದರೆ ಈಗ ವೃತ್ತಿಯನ್ನೇ (career) ಬದಲಾಯಿಸುತ್ತಾರೆ; ಕೆಲವರು ತಮ್ಮ ಆಸಕ್ತಿ ಬದಲಾದಂತೆ ಮತ್ತು ಅವಕಾಶಗಳು ಸಿಕ್ಕಿದಂತೆ ೩-೪ ಬಾರಿ ವೃತ್ತಿಯನ್ನು ಬದಲಿಸುತ್ತಿದ್ದಾರೆ. ಅಲ್ಲದೆ ಗಳಿಸಿದ ಜ್ಞಾನಜೀವಮಾನ ಬಹುಬೇಗ ಮುಗಿದುಹೋಗುತ್ತಿದೆ. ಹತ್ತು ವರ್ಷಗಳ ಹಿಂದೆ ನೀವು ಗಳಿಸಿದ ಕಂಪ್ಯೂಟರ್ ಜ್ಞಾನ ಇಂದು ಅರ್ಥಹೀನವಾಗುತ್ತಿದೆ; ಆದ್ದರಿಂದ ನೀವು ಸದಾ ಕಲಿಯುತ್ತಲೇ ಇರಬೇಕಾಗುತ್ತದೆ.

  ಉದ್ಯೋಗ ಎಂಬುದರ ಅಸ್ತಿತ್ವವೇ ಅಲುಗಾಡುತ್ತಿದೆ. ದೊಡ್ಡ ಸಂಸ್ಥೆಗಳ ನಿರ್ವಹಣೆ ಸುಲಭವಾಗುತ್ತಿದೆ. ವ್ಯವಹಾರದ ವೆಚ್ಚ ಕಡಮೆಯಾಗುತ್ತಿದೆ (ರೊನಾಲ್ಡ್ ಕೋಸ್‌ನ ಸಿದ್ಧಾಂತದ ಪ್ರಕಾರ). ಹಗುರ ಆರ್ಥಿಕತೆ (gig economy) ಬೆಳೆದಂತೆ ಈ ಬದಲಾವಣೆ ಆಗುತ್ತಿದೆ. ದೂರವು ಇಲ್ಲವಾಗುತ್ತಿದೆ (death
  of distance). ಇದಕ್ಕೆ ಬದಲಾಗಿ ಒಕ್ಕೂಟಗಳು (federations) ಬರಬಹುದು; ಅದರಂತೆ ಒಂದು ನಿರ್ದಿ? ಕೆಲಸಕ್ಕಾಗಿ ಸ್ವತಂತ್ರವಾಗಿರುವ ಕೆಲಸಗಾರರು ಒಂದೆಡೆ ಸೇರಬಹುದು; ಮತ್ತೆ ದೂರವಾಗಬಹುದು.

  ಭಯಹುಟ್ಟಿಸುವ ಒಂದು ಅಂಶವೆಂದರೆ, ತಮ್ಮ ಕೌಶಲವು ನಿರುಪಯುಕ್ತವಾದ ಕಾರಣ ಒಂದು ದೊಡ್ಡ ಜನವರ್ಗ ಶಾಶ್ವತವಾಗಿ ನಿರುದ್ಯೋಗಿಗಳಾಗಬಹುದು. ಹಿಂದೆ ಒಂದು ಕೆಲಸ ಇಲ್ಲವಾದಾಗ ಅದರಲ್ಲಿದ್ದವರಿಗೆ ಬೇರೆ ತರಬೇತಿ ನೀಡಿ ಉದ್ಯೋಗದಲ್ಲಿ ಮುಂದುವರಿಸುವ ಕ್ರಮ ಇತ್ತು. (ಉದಾ. – ಎಟಿಎಂ ಬಂದಾಗ ಕೆಲಸ ಇಲ್ಲವಾದ ಬ್ಯಾಂಕ್ ಸಿಬ್ಬಂದಿಯನ್ನು ಜನಸಂಪರ್ಕದ ಮ್ಯಾನೇಜರ್‌ಗಳಾಗಿ ಬಳಸಿಕೊಳ್ಳಲಾಯಿತು.) ಅದು ಇನ್ನು ಹೆಚ್ಚು ಕಾಲ ನಡೆಯಲಾರದು. ಕೆಲವು ಕ್ಷೇತ್ರಗಳಲ್ಲಿ ಸಾರ್ವತ್ರಿಕ ಮೂಲಭೂತ ಆದಾಯದ (Universal Basic Income) ಪರಿಕಲ್ಪನೆ ಕಂಡುಬರುತ್ತಿದೆ; ಅಂದರೆ ಕೆಲವರು ಕಾಲಕಳೆದಂತೆ ಹೆಚ್ಚುವರಿ ಮತ್ತು ನಿರುಪಯುಕ್ತ ಎನಿಸುತ್ತಾರೆ. ಹಾಗಾಗದಂತೆ ನೋಡಿಕೊಳ್ಳಬೇಕಿದ್ದರೆ ಪ್ರತಿಯೊಬ್ಬರೂ ಆರಂಭದಲ್ಲೇ ಯೋಗ್ಯವಾದ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಈ ರೀತಿಯಲ್ಲಿ ಶಿಕ್ಷಣದ ಬಗೆಗಿನ ಬೇಡಿಕೆಯಲ್ಲಿ ವ್ಯಾಪಕ ಬದಲಾವಣೆಯಾಗಿದೆ. ಜನ ಕ್ರಮೇಣ ತುಂಬ ಸ್ಥಿತಿಸ್ಥಾಪಕ ಗುಣ ಇರುವ ಶಿಕ್ಷಣವನ್ನು ಬಯಸುತ್ತಾರೆ, ಅಂದರೆ ಸಮಸ್ಯೆ ಎದುರಾದಾಗ ಅದಕ್ಕೆ ಹೊಂದುವಂತೆ ತಮ್ಮನ್ನು ಬದಲಿಸಿಕೊಳ್ಳಲು ಸಾಧ್ಯವಾಗಬೇಕು. ಅದರ ಮೂಲಕ ನಿರುದ್ಯೋಗಿಗಳಾಗದೆ ಮುಕ್ತ ಏಜೆಂಟರಂತೆ ಕೆಲಸ ಮಾಡಿ ಆದಾಯ ಗಳಿಸಲು ಸಾಧ್ಯವಾಗಬೇಕು.

  ಕೃತಕ ಬುದ್ಧಿಮತ್ತೆ
  ಅದೃಷ್ಟವಶಾತ್, ಪೂರೈಕೆಯ ದಿಕ್ಕಿನಲ್ಲಿ ಕೂಡ ಬದಲಾವಣೆಗಳಾಗುತ್ತಿವೆ; ಅದರಲ್ಲಿ ತಂತ್ರಜ್ಞಾನ ಮತ್ತು ಪಾರಂಪರಿಕ ಕಲಿಕೆಗಳು ಸಹಕರಿಸಬಲ್ಲವು. ತಂತ್ರಜ್ಞಾನದ ಸಾಧ್ಯತೆಗಳನ್ನು ಗಮನಿಸಿ. ಈಗ ಕೃತಕ ಬುದ್ಧಿಶಕ್ತಿಯ ಅನ್ವಯದ ಮೂಲಕ ಒಂದು ಪಾಠಪಟ್ಟಿ, ಪಾಠಕ್ರಮ, ಪರೀಕ್ಷೆ, ಸ್ವಯಂಶಿಕ್ಷಣ – ಇವು ಸಾಧ್ಯ. ಆಯಾ ವ್ಯಕ್ತಿಗನುಗುಣವಾಗಿ ಇದನ್ನು ಪಡೆದುಕೊಳ್ಳಬಹುದು.

  ದೊಡ್ಡದಾದ ಕ್ಲಾಸ್‌ರೂಮಿಗೆ ಬದಲು ಬೇರೆ ವಿಧಾನವನ್ನು ಅನುಸರಿಸಬಹುದು. ಕ್ಲಾಸ್‌ರೂಂ ಶಿಕ್ಷಣ ಯಾವಾಗಲೂ ಸಾಮಾನ್ಯ ಮಟ್ಟದ ವಿದ್ಯಾರ್ಥಿಯ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ. ಅದರಿಂದ ಬುದ್ಧಿವಂತರು, ದಡ್ಡರು ಇಬ್ಬರಿಗೂ ನಷ್ಟ; ವಿದ್ಯಾರ್ಥಿಗಳಿಗೆ ಅವರವರ ಆಸಕ್ತಿ, ಸಾಮರ್ಥ್ಯದಂತೆ ಕಲಿಸಲು ಅಲ್ಲಿ ಸಾಧ್ಯವಾಗುವುದಿಲ್ಲ. ಭವಿಷ್ಯದ ಶಿಕ್ಷಣದಲ್ಲಿ ಆಲ್ಗೋರಿದಂ ಶಿಕ್ಷಣಕ್ಕೆ ಯಂತ್ರದ ಬಳಕೆ ಸಾಧ್ಯ.ಒಟ್ಟಿನಲ್ಲಿ ಮುಂದೆ ಕೃತಕ ಬುದ್ಧಿಮತ್ತೆಯು ಗುರುಕುಲದ ಗುರುವಿನ ಪಾತ್ರವನ್ನು ನಿರ್ವಹಿಸಬಹುದು. ಗುರುಕುಲದ ಆದರ್ಶ ಸನ್ನಿವೇಶದಲ್ಲಿ ಗುರುವಿಗೆ ಶಿಷ್ಯರ ಸಾಮರ್ಥ್ಯವು ಖಚಿತವಾಗಿ ತಿಳಿದು ಅದರಂತೆ ಕಲಿಸುತ್ತಿದ್ದರು; ಏಕೆಂದರೆ ಅವರು ಒಟ್ಟಿಗೇ ವಾಸಿಸುತ್ತಿದ್ದರು. ಅದರಿಂದ ಶಿಷ್ಯನ ಪ್ರತಿಭೆಗಳು ಕ್ರಮಕ್ರಮವಾಗಿ ವಿಕಾಸಗೊಳ್ಳುತ್ತಿದ್ದವು.

  ಏಕಮುಖ ಕಲಿಕೆಗೆ ಬದಲಾಗಿ (ಅದರಲ್ಲಿ ಅಧ್ಯಾಪಕ ಭಾಷಣ ಮಾಡುತ್ತಿರುತ್ತಾನೆ) ಬಹುಮುಖೀ ಕಲಿಕೆಗೆ
  ಅವಕಾಶ ಕಲ್ಪಿಸಬಹುದು; ಅದರಲ್ಲಿ ವಿದ್ಯಾರ್ಥಿಗಳ ನಡುವೆಯೂ ಕೊಡು-ಕೊಳ್ಳುವಿಕೆಗೆ ಅವಕಾಶವಿರುತ್ತದೆ. ಇದರಲ್ಲಿ ತಡೆಸೂತ್ರ – ಬ್ಲಾಕ್‌ಚೈನ್ ತಂತ್ರದ ಬಳಕೆ ಇರುತ್ತದೆ. ಅದರಿಂದಾಗಿ ಉದ್ಯೋಗದ ಮಾರುಕಟ್ಟೆಯಲ್ಲೂ ಅನುಕೂಲ ಆಗಬಹುದು.

  ಅದಲ್ಲದೆ ಎಲ್ಲರಿಗೂ ವಿಪುಲವಾದ ಬೋಧನಸಾಮಗ್ರಿಗಳು ಸಿಗಲಿವೆ. ಮುಂದಿನ ದಿನಗಳಲ್ಲಿ ಯಾವುದೂ ದೂರ ಎನಿಸುವುದಿಲ್ಲ. ೪ಜಿ ಮತ್ತು ಒಂದು ಸ್ಮಾರ್ಟ್‌ಫೋನ್ ಲಭ್ಯವಾದಾಗ ದೇಶದ ಹೆಚ್ಚಿನ ವಿದ್ಯಾರ್ಥಿಗಳಿಗೆ ಬಹಳಷ್ಟು ಆನ್‌ಲೈನ್ ಕೋರ್ಸುಗಳು ಅಥವಾ ಮೂಕ್ಗಳು (ಎಂಓಓಸಿ) ಕೈಗೆಟುಕುತ್ತವೆ; ಅವುಗಳಲ್ಲಿ ಹೆಚ್ಚಿನವು ಉಚಿತ. ಇಲ್ಲಿ ಖಾನ್ ಅಕಾಡೆಮಿ, Courseera, Udacity, ಟೆಡ್, ವಿಕಿಪೀಡಿಯ, ಎಡ್‌ಎಕ್ಸ್ ಮತ್ತು ಅದೇ ರೀತಿ ಭಾರತೀಯ ಸಂಸ್ಥೆಗಳೂ ಇವೆ; ಇನ್ನು ಯೂಟ್ಯೂಬ್ ಇದ್ದೇ ಇದೆ. ಒಬ್ಬ ಉತ್ತಮ ಅಧ್ಯಾಪಕನಿಂದ ಶಿಕ್ಷಣ ಪಡೆಯುವುದಕ್ಕೆ ನೀವು ಒಂದು ಉತ್ತಮ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಅಗತ್ಯವೇ ಇಲ್ಲ (ಆದರೆ ವಿಶ್ವವಿದ್ಯಾಲಯಗಳಿಗೆ ಅವುಗಳದ್ದಾದ
  ಮೌಲ್ಯ, ಪದವಿನೀಡಿಕೆಯ ಅರ್ಹತೆ ಇತ್ಯಾದಿ ಇದೆ ಎಂಬುದು ನಿಜ).

  ಪರಿಶ್ರಮಕ್ಕಿದೆ ಪ್ರತಿಫಲ
  ೨೦೧೮ ಮೇ ೯ರ ವರದಿಯಲ್ಲಿ ಗಮನಿಸಬೇಕಾದ ಕೆಲವು ಅಂಶಗಳಿವೆ; ಅದು ಮನಸ್ಸನ್ನು ಕಲಕುವಂಥದು. ಕೇರಳದ ಎರ್ನಾಕುಳಂ ರೈಲುನಿಲ್ದಾಣದ ಕೂಲಿ ಶ್ರೀನಾಥ್ ಕೇರಳ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣನಾದ. ರೈಲು ನಿಲ್ದಾಣದಲ್ಲಿ ವೈ-ಫೈ ಮೂಲಕ ಪ್ರಶ್ನಪತ್ರಿಕೆಗಳು, ಆನ್‌ಲೈನ್ ಪರೀಕ್ಷೆ ಫಾರ್ಮ್ ಮುಂತಾದವನ್ನು ಆತ ಡೌನ್‌ಲೋಡ್ ಮಾಡಿಕೊಂಡಿದ್ದ. ತನ್ನ ಸ್ಮಾರ್ಟ್‌ಫೋನ್ ಮತ್ತು ಇಯರ್‌ಫೋನ್‌ಗಳನ್ನಷ್ಟೇ ಬಳಸಿಕೊಂಡಿದ್ದ ಆತ ಚೆನ್ನಾಗಿ ಕಲಿತು ಲಿಖಿತ ಪರೀಕ್ಷೆಗಳಲ್ಲಿ ಪಾಸಾದ. ಏನೂ ಖರ್ಚಿಲ್ಲದೆ ಸ್ವಯಂ ಅಧ್ಯಯನಕ್ಕೆ ಇದು ಶ್ರೇಷ್ಠ ಉದಾಹರಣೆ.

  ಬಡವಿದ್ಯಾರ್ಥಿ ಶ್ರೀನಾಥ್ ಇದನ್ನು ಸಾಧಿಸಬಹುದಾದರೆ ಸ್ಥಿತಿವಂತರಾದ ಮಧ್ಯಮವರ್ಗದ ವಿದ್ಯಾರ್ಥಿಗಳು ಅಥವಾ ವಯಸ್ಕರು ‘ಮೂಕ್’ಗಳ ಮೂಲಕ ಬಹಳಷ್ಟು ವಿಷಯಗಳ ಅಧ್ಯಯನ ಮಾಡಬಹುದು; ಇದರಲ್ಲಿ ಗಮನವಿಡಬೇಕಾದ ಅಂಶವೆಂದರೆ, ಹೇಗೆ ಕಲಿಯಬೇಕು ಎಂಬುದು; ಮತ್ತು ಮುಂದೆ ನಿರುಪಯುಕ್ತ ಆಗಬಹುದಾದ್ದನ್ನು ಕಲಿಯಬಾರದು.

  ಮಾನವಿಕ ವಿಷಯಗಳಿಗೆ ಮತ್ತೆ ಮಣೆ
  ಎರಡನೆಯದಾಗಿ, ಭವಿ?ದಲ್ಲಿ ಸ್ಟೆಮ್ (ಸಯನ್ಸ್, ಟೆಕ್ನಾಲಜಿ, ಇಂಜಿನಿಯರಿಂಗ್ ಮತ್ತು ಮೆಥಮೆಟಿಕ್ಸ್) ವಿಷಯಗಳು ಪರ್ಯಾಪ್ತವಾಗಲಾರದು. ಭಾರತದಲ್ಲಿ ಈ ನಾಲ್ಕು ವಿಷಯಗಳು ಉಪಯುಕ್ತ, ಅರ್ಥಪೂರ್ಣ ಎಂಬ ಭಾವನೆಯಿದೆ; ಬದಲಾಗಿ ಮಾನವಿಕ ವಿಷಯಗಳು ದುರ್ಬಲ, ಬಹುತೇಕ ನಿರುಪಯುಕ್ತ ಎಂಬ ಅಭಿಪ್ರಾಯವಿದೆ. ನಿಜವೆಂದರೆ, ಸ್ಟೆಮ್ ವಿಷಯಗಳೀಗ ಅಸಂಗತವೆನಿಸಿ ವಾಸ್ತವಜ್ಞಾನದಲ್ಲಿ ಅವುಗಳಿಗೆ ಸ್ಥಾನವಿಲ್ಲ ಎಂಬಂತಾಗಿದೆ. ಇಂಜಿನಿಯರುಗಳು ಕಂಪ್ಯೂಟರ್‌ನಲ್ಲಿ ವಿನ್ಯಾಸವನ್ನು ಮಾಡುತ್ತಾರೆ; ಕೈಯಿಂದ ಯಾರೂ ಮಾಡುವುದಿಲ್ಲ; ಅದು ಕೆಳಹಂತದವರ ಕ್ರಮ ಎನ್ನುವ ಭಾವನೆಯಿದೆ; ಏಕೆಂದರೆ ಕೈಯಿಂದ ಮಾಡಿದರೆ ಕೈಕೊಳೆಯಾಗುತ್ತದೆ!

  ಪಾರಂಪರಿಕ ಭಾರತೀಯ ಶಿಕ್ಷಣಕ್ರಮದೊಂದಿಗೆ ಹೋಲಿಸಿದರೆ ಇದು ಪೂರ್ತಿ ವಿರುದ್ಧ ಎನಿಸುತ್ತದೆ. ಪಾರಂಪರಿಕ ಶಿಕ್ಷಣವು ಪ್ರಾಯೋಗಿಕಕ್ಕೆ ಒತ್ತುನೀಡಿತ್ತು. ೩,೦೦೦ ವರ್ಷಗಳ ಹಿಂದಿನ ಬೌಧಾಯನದ ಶುಲ್ಬ ಸೂತ್ರಗಳು ಕೆಲಸಗಳನ್ನು ಕೈಯಿಂದಲೇ ಮಾಡಬೇಕೆಂದು ಹೇಳುತ್ತವೆ. ಉದಾಹರಣೆಗೆ, ಅಗ್ನಿಕುಂಡದ ನಿರ್ಮಾಣ. ಬೌಧಾಯನನಿಗೆ ಪೈಥಾಗೊರಸ್ ಸಿದ್ಧಾಂತ ಗೊತ್ತಿತ್ತು; ಅದನ್ನು ಬೌಧಾಯನ ಎಂದು ಕೂಡ ಈಗ ಕರೆಯುತ್ತಾರೆ. ಅದು ಸೈದ್ಧಾಂತಿಕ ಸೂತ್ರಕ್ಕಿಂತ ಹೆಚ್ಚಾಗಿ ಸಮಸ್ಯೆಯ ಪ್ರಾಯೋಗಿಕ ಪರಿಹಾರವಾಗಿತ್ತು (ಮಂಜುಲ ಭಾರ್ಗವ ಇದನ್ನು ವಿವರಿಸಿದ್ದಾರೆ). ಪೈಥಾಗೊರಸ್ ಸಿದ್ಧಾಂತವನ್ನು ತಿಳಿದಿದ್ದ ಭಾರತೀಯರು ಅದನ್ನು ವ್ಯಾಪಕವಾಗಿ ಬಳಸಿದರೆ ಚೀನೀಯರು ಅದಕ್ಕೆ ಔಪಚಾರಿಕವಾದ ಪುರಾವೆಯನ್ನು ಒದಗಿಸಿದರು.

  ಹಿಂದೆ ಪ್ರಾಯೋಗಿಕಕ್ಕೆ ಒತ್ತು ನೀಡುತ್ತಿದ್ದ ಭಾರತೀಯರಾದ ನಾವು ನಡುವೆ ಎಲ್ಲೋ ಆ ಗುಣವನ್ನು ಕಳೆದುಕೊಂಡೆವು. ಅದರಿಂದಾಗಿ ಪ್ರಬಂಧಗಳನ್ನು ಧಾರಾಳ ಬರೆದೆವಲ್ಲದೆ ಸಂಬಂಧಪಟ್ಟ ವಸ್ತುವನ್ನು ಉತ್ಪಾದಿಸಲಿಲ್ಲ; ಸ್ವಾತಂತ್ರ್ಯಾನಂತರ ಇದು ಸ್ವಷ್ಟವಾಗಿ ಕಾಣಿಸುತ್ತದೆ. ಇದು ಆತಂಕಕಾರಿ. ಬ್ರಿಟಿಷ್ ಸಾಮ್ರಾಜ್ಯದ ಅಡಿಯಲ್ಲಿ ನಮ್ಮಲ್ಲಿ ಸಿ.ವಿ. ರಾಮನ್, ಜೆ.ಸಿ. ಬೋಸ್, ಎಸ್.ಎನ್. ಬೋಸ್, ಶ್ರೀನಿವಾಸ ರಾಮಾನುಜನ್ ಎಲ್ಲ ಆಗಿಹೋದರು. ಸ್ವಾತಂತ್ರ್ಯಾನಂತರ ನಮ್ಮ ಶಿಕ್ಷಣ ಎಷ್ಟು ಕೆಟ್ಟುಹೋಗಿದೆ ಎಂಬುದಕ್ಕೆ ಇದೊಂದೇ ಉದಾಹರಣೆ ಸಾಕು.

  ವಸ್ತುಗಳ ಭೌತಿಕ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುವ ಉತ್ಪಾದನಾ ಆಂದೋಲನ (The Maker  Movement) ಕೂಡ ಪುಸ್ತಕದ ಬದನೆಕಾಯಿಗೆ ಇನ್ನೊಂದು ಉದಾಹರಣೆ ಆಗಬಹುದು (ಒಂದು
  ಉದಾಹರಣೆ ೩ಡಿ ಮುದ್ರಣ). ನಮಗೆ ಅಂಟಿದ ಇನ್ನೊಂದು ಸಮಸ್ಯೆ ಇಂಗ್ಲಿ?ನ ವ್ಯಾಮೋಹ. ಇಂಗ್ಲಿಷ್  ಜ್ಞಾನದಿಂದಾಗಿ ನಮ್ಮ ಸಂಶೋಧಕರು ಇತರರ ಸಂಶೋಧನೆಯನ್ನು ಮೂಲದಲ್ಲೇ ಓದಿಕೊಂಡು ಪ್ರಯೋಜನ ಪಡೆಯಲು ಸಾಧ್ಯವಾಯಿತೆಂದು ಕೆಲವರು ವಾದಿಸುತ್ತಾರೆ. ಆದರೆ ತಮ್ಮದೇ ಭಾಷೆಗೆ ಅಂಟಿಕೊಂಡಿರುವ ಚೀನೀಯರು ಅಮೆರಿಕದವರಿಗಿಂತ ಹೆಚ್ಚು ಸಂಶೋಧನ ಪ್ರಬಂಧಗಳನ್ನು ಬರೆದಿದ್ದಾರೆ; ಪೇಟೆಂಟ್‌ಗಳನ್ನು ಮಾಡಿಕೊಂಡಿದ್ದಾರೆ. ವೈದ್ಯಕೀಯ ಅಥವಾ ಕಾನೂನಿನಂತೆಯೇ ತಾಂತ್ರಿಕ ವಿಷಯಗಳಿಗೆ ಕೂಡ ನಾವು ನಮ್ಮ ಮಾತೃಭಾ?ಗಳತ್ತ ತಿರುಗುವುದು ಉತ್ತಮವೆನಿಸುತ್ತದೆ.

  ರಿಯಲ್-ಟೈಮ್ ಟ್ರಾನ್ಸ್‌ಲೇಶನ್ (ಅನುವಾದ) ಮೂಲಕ ನಮ್ಮ ಜನ ವಿವಿಧ ವಿ?ಯಗಳನ್ನು ತಮ್ಮ ಮಾತೃಭಾಷೆಯಲ್ಲೇ ತಿಳಿದುಕೊಳ್ಳಬಹುದು. ಸ್ವಯಂ (ಆಟೊಮೆಟಿಕ್) ಅನುವಾದ ಮಾಮೂಲಾಗಿ ಸಿಕ್ಕಿತೆಂದರೆ ವಿದ್ಯಾರ್ಥಿಗಳಿಗೆ ತಮ್ಮ ಮಾತೃಭಾಷೆಯಲ್ಲೇ ಕಲಿಯಲು ಸಾಧ್ಯವಾಗುತ್ತದೆ. ಮೂಕ್ ಗಳ ಎಲ್ಲ ವಿಷಯಗಳು ಅವರಿಗೆ ಸುಲಭವಾಗಿ ಕರಗತವಾಗುತ್ತವೆ.

  ನಮ್ಮ ಪಾರಂಪರಿಕ ಶಿಕ್ಷಣದ ಯಾವ ಅಂಶ ನಮಗೀಗ ಉಪಯುಕ್ತ ಎನ್ನುವ ಪ್ರಶ್ನೆಯನ್ನು ಇಲ್ಲಿ ಇನ್ನೊಮ್ಮೆ ಎತ್ತಬಹುದು. ಧರ್ಮಪಾಲ್ ಅವರು ಹಿಂದೆ ನಮ್ಮಲ್ಲಿ ಇತ್ತೆಂದು ದಾಖಲಿಸಿದ ವಿಷಯಗಳಲ್ಲಿ ವ್ಯಾಕರಣ, ತರ್ಕ, ಗಣಿತ, ಖಗೋಳಶಾಸ್ತ್ರ, ರಸ (ಅಲಂಕಾರಶಾಸ್ತ್ರ), ದರ್ಶನ (ತತ್ತ್ವಶಾಸ್ತ್ರ), ಅರ್ಥಶಾಸ್ತ್ರ (ರಾಜ್ಯಶಾಸ್ತ್ರ) ಮತ್ತು ಪ್ರಮಾಣ(ಪ್ರಮಾಣ-ಪ್ರಮೇಯ ವಿಚಾರ)ಗಳು ಸೇರಿವೆ. ಈ ವಿಷಯಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎನ್ನುವುದರ ಬಗೆಗೆ ಎರಡುಮಾತಿಲ್ಲ; ಅಂತಹ ವಿದ್ಯಾರ್ಥಿಗಳು ಇನ್ನಷ್ಟು ಹೊಸವಿಷಯಗಳನ್ನು ಕಲಿಯಬಲ್ಲರು. ಇದೇ ಇಂದಿನ ಸಂಕುಚಿತ ತಾಂತ್ರಿಕ ಶಿಕ್ಷಣವನ್ನು ಮೀರಿ, ವಿಶಾಲವಾದ ಮಾನವಿಕ ಶಿಕ್ಷಣ ಎನಿಸಬಲ್ಲದು; ಅಂದರೆ ದಲಾ ಲಾಮಾ ಹೇಳಿದ್ದು ಸರಿ.

  ಒಂದು ಅಂಶವಂತೂ ನಿಜ. ಈಗ ಇರುವ ಸಿಬಿಎಸ್‌ಇ ಅಥವಾ ಇನ್ನೊಂದು ಶಿಕ್ಷಣಕ್ರಮವನ್ನು ಬಿಟ್ಟು ರಾತ್ರೋರಾತ್ರಿ ಗುರುಕುಲ ಪದ್ಧತಿಗೆ ಬದಲಾಯಿಸಿಕೊಳ್ಳಿ ಎಂದು ಯಾರೂ ಹೇಳಲಾರರು. ಆಧುನಿಕ ಶಿಕ್ಷಕರಿಗೆ ಪ್ರಯೋಜನಕಾರಿ ಆಗಬಹುದಾದ ಒಂದೆರಡು ಅಂಶಗಳಾದರೂ ನಮ್ಮ ಪ್ರಾಚೀನ ಗುರುಗಳಲ್ಲಿ ಇದ್ದವು. ಎರಡೂ ಪದ್ಧತಿಗಳ ಒಳ್ಳೆಯ ಅಂಶಗಳನ್ನು ತೆಗೆದು ಒಂದು ಹೊಸ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದು ಉತ್ತಮ. ಅದರಿಂದ ಭಾರತದ ಮುಂದಿನ ತಲೆಮಾರು ಸ್ಪರ್ಧಾತ್ಮಕವಾಗಿ ರೂಪುಗೊಳ್ಳಬಲ್ಲದು.

  ಇಂಗ್ಲಿಷ್ ಮೂಲ: ರಾಜೀವ್ ಶ್ರೀನಿವಾಸನ್         ಅನುವಾದ : ಎಚ್. ಮಂಜುನಾಥ್ ಭಟ್
  ಸೌಜನ್ಯ: ಸ್ವರಾಜ್ಯ ಇಂಗಿಷ್  ಮಾಸಪತ್ರಿಕೆ

  ಭವಿಷ್ಯದ ಶಿಕ್ಷಣಕ್ಕೆ ಒಂದು ಸಲಹೆ

 • ಅದು ೧೯೫೭ರ ಸಂದರ್ಭ. ವಿದೇಶಾಂಗ ಖಾತೆಯನ್ನು ಸ್ವತಃ ಪ್ರಧಾನಿ ಜವಾಹರಲಾಲ್ ನೆಹರು ಅವರೇ ನಿರ್ವಹಿಸುತ್ತಿದ್ದರು. ವಿದೇಶಾಂಗ ಖಾತೆಯ ಕುರಿತು ಎರಡುಮೂರು ದಿನಗಳ ಸುದೀರ್ಘ ಚರ್ಚೆ ನಡೆಯಿತು. ಚರ್ಚೆಯ ಕೊನೆಯಲ್ಲಿ ಪ್ರತಿಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತ ಪ್ರಧಾನಿ ನೆಹರು ವಿದೇಶಾಂಗ ನೀತಿಯ ಕುರಿತು ಅಟಲ್‌ಜೀ ಅವರ ಅಭಿಪ್ರಾಯವನ್ನು ನಾನು ಒಪ್ಪಿಕೊಳ್ಳುತ್ತೇನೆ
  ಎಂದರು.
  ಅಟಲ್‌ಜೀ, ಆಗಷ್ಟೇ ಲೋಕಸಭೆಯ ಮೆಟ್ಟಿಲು ಹತ್ತಿದ್ದ ೩೨ರ ತರುಣ. ಇದಕ್ಕೂ ಹೆಚ್ಚಾಗಿ ಯಾವುದೇ ರಾಜಕೀಯ ಹಿನ್ನೆಲೆಯಾಗಲಿ ಅನುಭವವಾಗಲಿ ಇಲ್ಲದೆ ಕೇವಲ ನಾಲ್ಕು ಜನ ಸದಸ್ಯರನ್ನು ಹೊಂದಿದ್ದ ಪಕ್ಷವೊಂದರಿಂದ ಆರಿಸಿಬಂದ ವಾಜಪೇಯಿ ಮೊದಲ ಬಾರಿಗೇ ನೆಹರು ಗಮನಸೆಳೆಯುವುದರಲ್ಲಿ ಮಾತ್ರವಲ್ಲದೆ, ತನ್ನ ವಿಚಾರಗಳಿಗೆ ಮನ್ನಣೆ ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆಗ ಪ್ರತಿಪಕ್ಷಗಳ ಸಾಲಿನಲ್ಲಿ ಆಚಾರ್ಯ ಜೆ.ಬಿ. ಕೃಪಲಾನಿ, ಪ್ರೊ|| ಹೀರೇನ್ ಮುಖರ್ಜಿ, ಮಿನೂ ಮಸಾನಿಯಂತಹ ಘಟಾನುಘಟಿ ನಾಯಕರಿದ್ದರು ಎನ್ನುವುದನ್ನೂ ಮರೆಯುವಂತಿಲ್ಲ.

  ಹೀಗೆ ಅಟಲ್‌ಜೀ ಮೊದಲ ಬಾರಿಗೇ ಭಾರತದ ರಾಜಕೀಯದಲ್ಲಿ ಅಚಲವಾದ ಮೈಲುಗಲ್ಲನ್ನು
  ಸ್ಥಾಪಿಸಿಬಿಟ್ಟಿದ್ದರು.

  ದಿಗ್ಗಜರ ಪ್ರಶಂಸೆ
  ಭಾರತೀಯ ರಾಜಕಾರಣದ ಅಪರೂಪದ ವ್ಯಕ್ತಿತ್ವ ಅಟಲ್ ಬಿಹಾರಿ ವಾಜಪೇಯಿ ಅವರದು. ಅರವತ್ತರ ದಶಕದಲ್ಲಿ ವಿಶ್ವಸಂಸ್ಥೆಯ ಸೆಕ್ರೆಟರಿ-ಜನರಲ್ ಆಗಿದ್ದ ಡಾಗ್ ಹಾಮರ್ ಷೋಲ್ಡ್‌ರಿಗೆ ವಾಷಿಂಗ್ಟನ್‌ನ ಭಾರತೀಯ ದೂತಾವಾಸ ಕಚೇರಿಯಲ್ಲಿ ವಾಜಪೇಯಿಯವರನ್ನು ಪ್ರಧಾನಿ ನೆಹರು ಮುಂದೆ ಭಾರತದ ಪ್ರಧಾನಿಯಾಗಬಲ್ಲ ಯುವಪ್ರತಿಭೆ ಎಂದು ಪರಿಚಯಿಸಿದ್ದರು. ಮಾಜಿ ಪ್ರಧಾನಿ ಚಂದ್ರಶೇಖರ್ ಅವರು ವಾಜಪೇಯಿಯವರನ್ನು ಗುರೂಜಿ ಎಂದೇ ಸಂಬೋಧಿಸುತ್ತಿದ್ದರು. ಪಿ.ವಿ. ನರಸಿಂಹರಾಯರು  ೧೯೯೪ರಲ್ಲಿ ಅವರನ್ನು ಉತ್ತಮ ಸಂಸದೀಯ ಪಟು ಎಂದು ಪುರಸ್ಕರಿಸುತ್ತ , ಭಾರತೀಯ ಸಂಸದೀಯ ಚರಿತ್ರೆಗೆ ವಿಶೇಷ ಮೆರುಗು ನೀಡಿದ ನಾಯಕ ವಾಜಪೇಯಿ. ನನ್ನ ರಾಜಕೀಯ ಗುರು ಎಂದಿದ್ದರು. ಮನಮೋಹನ್‌ಸಿಂಗ್ ಅವರು ವಾಜಪೇಯಿ, ಭಾರತದ ಸಮಕಾಲೀನ ರಾಜಕಾರಣದ ಭೀಷ್ಮಪಿತಾಮಹ ಎಂದು ವರ್ಣಿಸಿದ್ದರು.
  ಹೀಗೆ ಪ್ರತಿಪಕ್ಷದವರೂ ಸೇರಿದಂತೆ ಎಲ್ಲರ ಗೌರವ, ಮೆಚ್ಚುಗೆಗೆ ಪಾತ್ರರಾದ ಅಪರೂಪದ ದುರ್ಲಭ
  ರಾಜಕಾರಣಿ ಅಟಲ್‌ಜೀ. ನೆಹರು ನಂತರ ಭಾರತದ ರಾಜಕಾರಣದಲ್ಲಿ ಬಹುಮುಖ ಪ್ರತಿಭೆಯ ಮೇಧಾವಿ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದರು.

  ಅಟಲ್‌ಜೀಯವರು ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೇ ಓರ್ವ ಶಾಲಾ ಉಪಾಧ್ಯಾಯನ  ಮಗನಾಗಿ ತನ್ನ ಪ್ರತಿಭೆ, ಪರಿಶ್ರಮ ಮತ್ತು ಕೌಶಲದಿಂದಲೇ ರಾ?ರಾಜಕಾರಣದಲ್ಲಿ ಬೆಳೆದ ಪರಿ ಒಂದು ಅಚ್ಚರಿಯೇ ಸರಿ.

  ಬೆಳೆಯ ಸಿರಿ ಮೊಳಕೆಯಲ್ಲಿ
  ಅಟಲ್‌ಜೀ ಹುಟ್ಟಿದ್ದು ೧೯೨೪ ಡಿಸೆಂಬರ್ ೨೫ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ. ತಂದೆ ಕೃ? ಬಿಹಾರಿ ವಾಜಪೇಯಿ ಹಾಗೂ ತಾಯಿ ಸುಮಾದೇವಿ.

  ನುಡಿದರೆ ಮತ್ತಿನ ಹಾರದಂತಿರಬೇಕು, ಲಿಂಗ ಮೆಚ್ಚಿ ಅಹುದಹುದೆನಬೇಕು ಎಂಬ ವಚನದಂತೆ ಅಟಲ್‌ಜೀ  ಅವರ ಮಾತುಗಳಿರುತ್ತಿದ್ದವು. ತಮ್ಮ ಭಾಷಣದ ಗತ್ತು, ಗೈರತ್ತು, ಕಲೆಗಾರಿಕೆ, ಮಾತಿನ ಓಘಕ್ಕೆ ಹುಯ್ದಾಡುವ ಶರೀರ, ಕುಣಿಯುವ ಕೈ, ಚಿಟಿಕೆ ಹಾಕುವ ಬೆರಳುಗಳು ಮತ್ತು ಮುತ್ತು ಉದುರಿದಂತಿರುವ ಮಾತುಗಳಿಂದ ಕಾಲೇಜುದಿನಗಳಲ್ಲಿಯೇ ಪ್ರಾಧ್ಯಾಪಕರಿಗೂ, ಇತರ ವಿದ್ಯಾರ್ಥಿಗಳಿಗೂ ಅಚ್ಚುಮೆಚ್ಚಿನವರಾಗಿದ್ದರು.

  ಒಮ್ಮೆ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯಸ್ತರದ ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸಲು ಹೊರಟಾಗ, ರೈಲು ತಡವಾಗಿದ್ದರಿಂದ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಾನವನ್ನು ತಲಪುವ ವೇಳೆಗೆ ಚರ್ಚಾಸ್ಪರ್ಧೆ ಮುಗಿದೇ ಹೋಗಿತ್ತು; ವಿಜೇತರನ್ನು ಘೋಷಿಸುವುದಷ್ಟೇ ಬಾಕಿ. ಕೊಳೆಬಟ್ಟೆಗಳಲ್ಲಿಯೇ ಏದುಸಿರುಬಿಡುತ್ತಾ ಅಲ್ಲಿಗೆ ಬಂದ ತರುಣ ಅಟಲ್‌ಜೀ ನೇರವಾಗಿ ವೇದಿಕೆಯನ್ನೇರಿ ತಡವಾಗಿ ಬಂದ ಪರಿಸ್ಥಿತಿಯನ್ನು ಮನಮುಟ್ಟುವಂತೆ ವಿವರಿಸಿದರು. ಅವರ ಸೌಜನ್ಯ, ವಿನಯವಂತಿಕೆ ಮತ್ತು ವಿಷಯವನ್ನು ಎಲ್ಲರಿಗೂ ಮುಟ್ಟಿಸಬೇಕೆಂಬ ಕಳಕಳಿ ಗುರುತಿಸಿ, ಅವರಿಗೆ ಮಾತನಾಡಲು ಅವಕಾಶ ನೀಡಲಾಯಿತು. ಅಂತಹ ಪರಿಸ್ಥಿತಿಯಲ್ಲಿಯೂ ಅವರು ಸಂಯಮದಿಂದ ವಿಷಯಮಂಡನೆ ಮಾಡಿದರು. ಅವರ ಮಾತಿನಲ್ಲಿದ್ದ ಬಿರುಸು, ಸತ್ತ್ವ, ಮೋಹಕತೆ ಮತ್ತು ಸತ್ಯದ ಪ್ರತಿಪಾದನೆಯಿಂದ ಸಭಿಕರು ಮಂತ್ರಮುಗ್ಧರಾದರು.  ತೀರ್ಪುಗಾರರೂ ಆಶ್ಚರ್ಯಚಕಿತರಾದರು. ಪ್ರಥಮ ಬಹುಮಾನ ಅವರಿಗೇ ಲಭಿಸಿತು. ಈ ತೀರ್ಪುಗಾರರ ಮಂಡಲಿಯ ಸದಸ್ಯರಲ್ಲಿ ಹಿಂದಿ ಸಾಹಿತ್ಯದ ಪ್ರಸಿದ್ಧ ಕವಿ ಡಾ. ಹರಿವಂಶರಾಯ್ ಬಚ್ಚನ್ (ಹಿಂದಿ ಚಿತ್ರನಟ ಅಮಿತಾಭ್ ಬಚ್ಚನ್ ತಂದೆ) ಒಬ್ಬರಾಗಿದ್ದರು.

  ತಾರುಣ್ಯದಲ್ಲಿಯೇ ಮಾತಿನ ಕಲೆಯನ್ನು ಬೆಳೆಸಿಕೊಂಡು ನಿರಂತರವಾಗಿ ಪೋಷಿಸಿ ಸಮಾಜೋಪಯೋಗಿಯನ್ನಾಗಿಸಿಕೊಂಡವರು ಅಟಲ್‌ಜೀ. ಮುಂದೆಯೂ ಅವರ ಮಾತುಗಳನ್ನು ಕೇಳಲು ಜನ ಹಾತೊರೆಯುತ್ತಿದ್ದರು (ವಿದೇಶಗಳಲ್ಲಿಯೂ).  ಕಾವ್ಯಮಯವಾದ ಭಾಷೆ, ಪ್ರಾಸಬದ್ಧ ಮಾತು, ಚುರುಕು ಮತ್ತು ಮೊನಚಾದ ನುಡಿ ಅವರ ಮಾತುಗಾರಿಕೆಯ ಜೀವಾಳವಾಗಿತ್ತು. ಅಂತರಾಳದಿಂದ ಹೊರಹೊಮ್ಮುವ ಅವರ ಪ್ರಾಮಾಣಿಕ ನುಡಿಮುತ್ತುಗಳಿಗೆ ಜನರು ಅದ್ಭುತ ಸಂಗೀತಗಾರನೊಬ್ಬನ ಅಪೂರ್ವ ರಾಗಕ್ಕೆ ತಲೆದೂಗುವಂತೆ, ಯಕ್ಷಿಣಿಗಾರನ ಮೋಡಿಗೆ ಒಳಗಾದ ಮಕ್ಕಳಂತೆ ನಿಶ್ಚಲರಾಗಿ ಮೈಮರೆಯುತ್ತಿದ್ದರು.

  ಶಾಸ್ತ್ರೀಯ, ಜನಪದೀಯ ಹಿಂದೀಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ ಅವರು ಎದುರಿಗೆ ಎಂತಹ ವಿರೋಧಿಗಳಿದ್ದರೂ ನಿಶ್ಶಸ್ತ್ರಗೊಳಿಸಿಬಿಡುತ್ತಿದ್ದರು. ಎಂತಹ ಪರಿಸ್ಥಿತಿಯಲ್ಲಿಯೂ ಹಾಸ್ಯಪ್ರಜ್ಞೆಯಿಂದ
  ಅವರು ದೂರವಾಗುತ್ತಿರಲಿಲ್ಲ. ಬಾಬರಿ ಕಟ್ಟಡ ಕೆಡವಿದ ಸಂದರ್ಭದಲ್ಲಿ ರಾಮವಿಲಾಸ ಪಾಸ್ವಾನ್ ಬಿಜೆಪಿ ಜೈ ಶ್ರೀರಾಮ್ ಎನ್ನುತ್ತಿದೆ. ಆದರೆ ಅವರಲ್ಲಿ ಯಾರೂ ರಾಮ ಇಲ್ಲ. ನನ್ನ ಹೆಸರಿನಲ್ಲೇ ರಾಮ್ ಇದೆ ಎಂದರು. ಅದಕ್ಕೆ ಉತ್ತರಿಸಿದ ಅಟಲ್‌ಜೀ ಅದು ನಿಜ. ಆದರೆ ಹರಾಮ್ ನಲ್ಲಿಯೂ ರಾಮ್ ಇದೆಯಲ್ಲವೇ? ಎಂದರು. ಅವರೊಡನೆ ಇಡೀ ಸಂಸತ್ತು ನಕ್ಕಿತು.

  ಪತ್ರಕರ್ತರಾಗಿ
  ಧರ್ಮದ ಆಧಾರದಲ್ಲಿ ದೇಶವಿಭಜನೆ, ತದನಂತರವೂ ಬದಲಾಗದ ರಾಷ್ಟ್ರನಾಯಕರ ಮನಃಸ್ಥಿತಿಯನ್ನು ಮೂಕಪ್ರೇಕ್ಷಕರಂತೆ ಸಹಿಸಿಕೊಳ್ಳಲಾಗದೆ ರಾಷ್ಟ್ರೀಯ ಸ್ವಯಂಸೇವಕ ಸಂಘ ದೇಶದ ಜನರಲ್ಲಿ ಜಾಗೃತಿ ಮೂಡಿಸುವ ಪತ್ರಿಕೆಯೊಂದನ್ನು ಪ್ರಾರಂಭಿಸಲು ನಿರ್ಧರಿಸಿತು. ಸಂಘದ ಪ್ರಚಾರಕರಾಗಿದ್ದ ದೀನದಯಾಳ್ ಉಪಾಧ್ಯಾಯರ ನೇತೃತ್ವದಲ್ಲಿ ೧೯೪೬ರ ಪ್ರಾರಂಭದಲ್ಲಿ ರಾಷ್ಟ್ರಧರ್ಮ ಮಾಸಿಕ ಪ್ರಾರಂಭಿಸಲಾಯಿತು. ಇದರ  ಸಂಪಾದಕತ್ವದ ಹೊಣೆ ಅಟಲ್ ಬಿಹಾರಿ ವಾಜಪೇಯಿ (ಮತ್ತು ರಾಜೀವಲೋಚನ ಅಗ್ನಿಹೋತ್ರಿ) ಅವರ ಹೆಗಲಿಗೇರಿತು. ಶಾಲಾದಿನಗಳಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿದ್ದ ಅಟಲ್‌ಜೀ ಅದಾಗಲೇ ತಮ್ಮ ಕವಿತೆಗಳ ಮೂಲಕ ಸಮಾಜದಲ್ಲಿ ಗಣ್ಯತೆ ಗಳಿಸಿದ್ದರು. ರಾಷ್ಟ್ರಧರ್ಮದ ಸಂಪಾದಕತ್ವದ ಹೊಣೆಹೊತ್ತ ಅಟಲ್‌ಜೀ ಸ್ವತಃ ಲೇಖನ, ಕವನಗಳನ್ನು ಬರೆಯುವುದು, ಬರೆಸುವುದರ ಜೊತೆಗೆ ಅಚ್ಚುಮೊಳೆ ಜೋಡಿಸುವುದರಿಂದ ಭಾಂಗಿ ಹೊರೆಹೊರುವ ಕೆಲಸಗಳಲ್ಲೂ ಕೈಜೋಡಿಸಿ ಪತ್ರಿಕೆಗೆ ಜನಮನ್ನಣೆ ಗಳಿಸಿಕೊಟ್ಟಿದ್ದರು.

  ಬೇರೆಯವರ ಸಹಾಯವಿಲ್ಲದೇ ಭಾರತವು ಅಭಿವೃದ್ಧಿ ಹೊಂದಲಾರದು ಎನ್ನುವ ವಾದ ತಪ್ಪು. ನಾವು ಅಗಣಿತ ನೈಸರ್ಗಿಕ ಸಂಪನ್ಮೂಲ, ಪರಿಣತ ತಂತ್ರಜ್ಞರು ಮತ್ತು ಮಾನವಶಕ್ತಿಯನ್ನು ಹೊಂದಿದ್ದೇವೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ಸಾಧನೆ ಅನುಪಮ. ಭಾರತಕ್ಕೆ ಸಾಧಿಸುವ ಸಾಮರ್ಥ್ಯವಿದೆ ಮತ್ತು ಅದು ಸಾಧನೆಯನ್ನು ಮಾಡುತ್ತದೆ.
  – ಅಟಲ್‌ಜೀ

  ಸಂಘದ ಅಂಗಳದಲ್ಲಿ ಬೆಳೆದು, ದೀನದಯಾಳ್ ಉಪಾಧ್ಯಾಯರ ಗರಡಿಯಲ್ಲಿ ವ್ಯಕ್ತಿತ್ವ ವಿಸ್ತರಿಸಿಕೊಂಡ
  ಅಟಲ್‌ಜೀ ರಾ?ಧರ್ಮದ ಯಶಸ್ಸಿನಿಂದ ಪ್ರೇರಣೆಗೊಂಡು ಪಾಂಚಜನ್ಯ ವಾರಪತ್ರಿಕೆ (೧೯೪೬ ಏಪ್ರಿಲ್ ೬) ಹಾಗೂ ಸ್ವದೇಶ್ ದಿನಪತ್ರಿಕೆ (೧೯೫೦) ಪ್ರಾರಂಭಿಸಿದಾಗಲೂ ದೀನದಯಾಳರ ಅಪೇಕ್ಷೆಯಂತೆ ಸಮರ್ಥವಾಗಿ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ಅಲಹಾಬಾದ್‌ನಿಂದ ಪ್ರಕಟವಾಗುತ್ತಿದ್ದ  ಕರ್ಮಯೋಗಿ,  ಕಾಶಿಯಿಂದ ಪ್ರಕಟವಾಗುತ್ತಿದ್ದ ಚೇತನಾ, ದೆಹಲಿಯಿಂದ ಪ್ರಕಟವಾಗುತ್ತಿದ್ದ ವೀರ್
  ಅರ್ಜುನ್ ದೈನಿಕಗಳ ಸಂಪಾದಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

  ಆಪ್ತಸಹಾಯಕನಿಂದ ಪ್ರಧಾನಿವರೆಗೆ
  ಜನಸಂಘದ ಪ್ರಾರಂಭದ ದಿನಗಳಲ್ಲಿ ಶ್ಯಾಮಪ್ರಸಾದ್ ಮುಖರ್ಜಿ ಅವರ ಆಪ್ತಸಹಾಯಕನಾಗಿ
  ದೇಶಾದ್ಯಂತ ಪ್ರವಾಸ ನಡೆಸಿದರು. ಮುಖರ್ಜಿ ಅವರಿಗೆ ಭಾಷಣ ಸಿದ್ಧಪಡಿಸಿಕೊಡುವುದು ಮಾತ್ರವಲ್ಲದೆ ಅವರ ಅಪೇಕ್ಷೆಯಂತೆ ಕೆಲವೆಡೆಗಳಲ್ಲಿ ಅವರ ಸಮ್ಮುಖದಲ್ಲಿ ಸ್ವತಃ ಭಾಷಣಗಳನ್ನೂ ಮಾಡುತ್ತಿದ್ದರು. ಶ್ಯಾಮಪ್ರಸಾದ್ ಮುಖರ್ಜಿಯವರ ಅನುಮಾನಾಸ್ಪದ ಸಾವು, ತದನಂತರ ದೀನದಯಾಳ್ಉ ಪಾಧ್ಯಾಯರ ಅನುಮಾನಾಸ್ಪದ ಕೊಲೆಗಳ ನಂತರ ಜನಸಂಘದ ನೇತೃತ್ವ ವಹಿಸಿ (೧೯೬೮) ರಾಜಕೀಯವಾಗಿ ಜನಸಂಘವನ್ನು ದೇಶದ ಮುಖ್ಯವಾಹಿನಿಗೆ ತಂದು ನಿಲ್ಲಿಸಿದವರು ಅಟಲ್‌ಜೀ.

  ೧೯೫೭ರಿಂದ ೨೦೦೯ರ ತನಕ ನಿರಂತರವಾಗಿ (೧೯೮೪ ಹೊರತುಪಡಿಸಿ) ಸಂಸತ್ ಪ್ರವೇಶಿಸಿದ
  ಅಟಲ್‌ಜೀ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಪಕ್ಷದ ಸಂಖ್ಯೆಗನುಗುಣವಾಗಿ ಮಾತನಾಡುವ ಅವಕಾಶ ಲಭಿಸುತ್ತಿದ್ದರೂ ಸಿಕ್ಕಸಮಯವನ್ನು ಅವರು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳುತ್ತಿದ್ದರು. ವಾಜಪೇಯಿ ಅವರ ಭಾಷಣ ಕೇಳಲು ನೆಹರು ಆದಿಯಾಗಿ ಎಲ್ಲ ಸದಸ್ಯರೂ ಉಪಸ್ಥಿತರಿರುತ್ತಿದ್ದರು; ಗ್ಯಾಲರಿಗಳೂ ತುಂಬಿರುತ್ತಿದ್ದವು ವಾಜಪೇಯಿಯವರ ವಾಕ್ಚಾತುರ್ಯಕ್ಕೂ ವಿಷಯತಜ್ಞತೆಗೂ ಮರುಳಾಗಿದ್ದ ಡಾ. ಎಸ್. ರಾಧಾಕೃಷ್ಣನ್ ಅವರು ರಾಜ್ಯಸಭೆಯಲ್ಲಿ ಮೊದಲ ಸಾಲಿನಲ್ಲಿ ವಾಜಪೇಯಿಯವರಿಗೆ (೧೯೬೨ರಲ್ಲಿ ಜನಸಂಘ ರಾಜ್ಯಸಭೆಯಲ್ಲಿ ಕೇವಲ ೨ ಸದಸ್ಯರನ್ನು ಹೊಂದಿತ್ತು) ಸ್ಥಾನ ಮೀಸಲಿರಿಸಿದ್ದರು. ಮಾತ್ರವಲ್ಲದೆ ಪ್ರತಿ ವಿಷಯದಲ್ಲಿ ಅಟಲ್ ಜೀಗೆ ತಮ್ಮಅಭಿಪ್ರಾಯ ತಿಳಿಸಲು ಅವಕಾಶ ನೀಡುತ್ತಿದ್ದರು. ವಿರೋಧ ಪಕ್ಷದಲ್ಲಿದ್ದರೂ ಅವರೆಂದೂ ಸರ್ಕಾರದ ನಡೆಯನ್ನು ವಿರೋಧಿಸುವುದಕ್ಕೆಂದೇ ವಿರೋಧಿಸದೆ
  ತುಲನಾತ್ಮಕವಾಗಿ ಚಿಂತಿಸಿ ವಾದ ಮಂಡಿಸುತ್ತಿದ್ದುದೇ ಇದಕ್ಕೆ ಮುಖ್ಯ ಕಾರಣ.

  ಅಟಲ್‌ಜೀ ಸದಾ ಪಕ್ಷಾತೀತವಾಗಿ ಜನರ ಧ್ವನಿಯಾಗಿ ರಾಷ್ಟ್ರದ ಒಳಿತಿನ ವಿಚಾರವನ್ನು ಮಂಡಿಸುತ್ತಿದ್ದರು. ಅವರ ಇಡೀ ರಾಜಕೀಯ ಜೀವನದಲ್ಲಿ ದೇಶ ಮೊದಲು, ನಂತರ ಪಕ್ಷ, ವ್ಯಕ್ತಿ ಎಂಬ ಸಿದ್ದಾಂತವೇ ಕಾಣಸಿಗುತ್ತದೆ. ರಾಷ್ಟ್ರಕ್ಕೆ ಹೊರಗಿನಿಂದ ಸವಾಲು ಎದುರಾದಾಗ ಪಕ್ಷಭೇದ ಮರೆತು ಸರ್ಕಾರದೊಂದಿಗೆ ಹೆಜ್ಜೆಹಾಕಬೇಕು ಎಂಬುದು ವಾಜಪೇಯಿ ಅವರ ನಿಲುವಾಗಿತ್ತು. ಚೀಣಾ ಆಕ್ರಮಣದ ಸಂದರ್ಭದಲ್ಲಿ, ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ವಿರೋಧಪಕ್ಷದ ನಾಯಕನಾಗಿ ಬೆಂಬಲವಾಗಿ ನಿಂತರು.ವಾಜಪೇಯಿ ಅವರ ಈ ಗುಣವನ್ನು ಮೆಚ್ಚಿಕೊಂಡಿದ್ದ ಲಾಲ್‌ಬಹಾದುರ್ ಶಾಸ್ತ್ರೀ ಕಾಶ್ಮೀರದ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ವಿವರಿಸಲು ಕಳುಹಿಸಿದ ಭಾರತೀಯ ನಿಯೋಗದ ನೇತೃತ್ವವನ್ನು ವಾಜಪೇಯಿಯವರಿಗೆನೀಡಿದ್ದರು.

  ಆತ್ಮವಿಶ್ವಾಸವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬ ವಿವೇಕಾನಂದರ ವಾಣಿಗೆ ಅಟಲ್‌ಜೀ ಪ್ರತಿರೂಪದಂತಿದ್ದರು. ಶ್ಯಾಮಪ್ರಸಾದ್ ಮುಖರ್ಜಿ, ದೀನದಯಾಳ್‌ರಂತಹ ನಾಯಕರನ್ನು ಕಳೆದುಕೊಂಡಾಗಲೂ ಎದೆಗುಂದದೆ ಪಕ್ಷವನ್ನು ಸಂಘಟಿಸಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಜನಸಂಘವನ್ನು ಕಟ್ಟಿ ಬೆಳೆಸಿದ್ದರು. ಮಾತ್ರವಲ್ಲ  ತುರ್ತುಪರಿಸ್ಥಿತಿಯ ನಂತರ ಕಾಂಗ್ರೆಸ್ಸೇತರ ಸರ್ಕಾರ ರೂಪುಗೊಳ್ಳುವುದರಲ್ಲಿಯೂ ವಿದೇಶಾಂಗ ಸಚಿವರಾಗಿಯೂ ಪ್ರಮುಖ ಪಾತ್ರ ನಿರ್ವಹಿಸಿದರು.

  ೧೯೮೪ರ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಎರಡೇ ಸ್ಥಾನ ಗಳಿಸಿದಾಗ ಉತ್ಸಾಹ ಕಳೆದುಕೊಂಡಿದ್ದ
  ಕಾರ್ಯಕರ್ತರಿಗೆ ಸ್ಫೂರ್ತಿ ತುಂಬಿದವರು ಅಟಲ್‌ಜೀ. ಕತ್ತಲೆ ಕಳೆಯುತ್ತದೆ, ಬೆಳಕು ಬರಲೇ ಬೇಕು.
  ನಿರುತ್ಸಾಹದಿಂದ ಸುಮ್ಮನೆ ಕೂಡುವ ಸಮಯವಿದಲ್ಲ. ಪುನಶ್ಚ ಹರಿಃ ಓಂ. ಎಲ್ಲವನ್ನೂ ಮತ್ತೆ ಪ್ರಾರಂಭಿಸೋಣ ಎಂದು ಹೇಳಿ ಉತ್ಸಾಹ ಮೂಡಿಸಿದರು. ಅನಂತರದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ೮೯ ಸ್ಥಾನ ಪಡೆದು ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಚುನಾವಣೆಯಿಂದ ಚುನಾವಣೆಗೆ ವೃದ್ಧಿಸುತ್ತಾ ಪಕ್ಷ ವೇಗವಾಗಿ ಬೆಳೆಯಿತಾದರೂ ಅಧಿಕಾರ ಹಿಡಿಯುವಷ್ಟು ಸಂಖ್ಯಾಬಲ ಪ್ರಾಪ್ತವಾಗಲಿಲ್ಲ.

  ಬಾಬ್ರಿ ಕಟ್ಟಡ ಧ್ವಂಸದ ನಂತರದಲ್ಲಿ ಇತರ ಪಕ್ಷಗಳು ಬಿಜೆಪಿಗೆ ಅಂಟಿಸಿದ್ದ ಅಸ್ಪೃಶ್ಯ ಹಣೆಪಟ್ಟಿಯನ್ನು ಕಳಚಿದ ಕೀರ್ತಿ ಅಟಲ್‌ಜೀಗೆ ಸಲ್ಲುತ್ತದೆ. ಅಧಿಕಾರ ಅಷ್ಟು ಸುಲಭವಲ್ಲ ಎಂಬ ಅರಿವಿದ್ದರೂ ೧೯೯೬ರಲ್ಲಿ ಪ್ರಧಾನಿಯಾಗಿ ಕೇವಲ ೧೩ ದಿನಗಳಲ್ಲೇ ರಾಜೀನಾಮೆ ನೀಡಬೇಕಾಗಿ ಬಂದು ಸಂಸತ್ತಿನಲ್ಲಿ ಭಾ?ಣ ಮಾಡಿದ್ದು, ೧೯೯೮ರ ಚುನಾವಣೆಯಲ್ಲಿ ಬಿಜೆಪಿಗೆ ಅತಿಹೆಚ್ಚು ಸೀಟು ಬಂದರೂ ಬಹುಮತವಿಲ್ಲದಿದ್ದಾಗ ಎನ್‌ಡಿಎ ಎಂಬ ಮೈತ್ರಿಕೂಟ ರಚಿಸಿ ಹೊಸ ರಾಜಕೀಯ ಅಧ್ಯಾಯ ಪ್ರಾರಂಭಿಸಿದ್ದು, ಜಾತ್ಯತೀತರೆಂದು ಬಿಂಬಿಸಿಕೊಂಡ ಚಂದ್ರಬಾಬು ನಾಯ್ಡು, ದಲಿತ ನಾಯಕಿ ಮಾಯಾವತಿ, ದ್ರಾವಿಡ ಚಳವಳಿಯಿಂದ ಬಂದ ಕರುಣಾನಿಧಿ, ಸಮಾಜವಾದಿ ಜಾರ್ಜ್ ಫರ್ನಾಂಡೆಸ್ – ಹೀಗೆ ಎಲ್ಲರನ್ನೂ ಒಂದು ಸರ್ಕಾರದ ಭಾಗವಾಗಿ ಬೆಸೆಯುವ ಮೂಲಕ ವಾಜಪೇಯಿ ವ್ಯವಸ್ಥಿತವಾಗಿ ಇದನ್ನು ಸಾಧಿಸಿದ್ದರು.

  ೧೯೯೯ರಲ್ಲಿ ಪುನಃ ಅಧಿಕಾರಕ್ಕೆ ಬರುವ ಮೂಲಕ ಪೂರ್ಣಾವಧಿ ಸರ್ಕಾರ ನಡೆಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆ ಅಟಲ್‌ಜೀ ಅವರದು. ಆರ್ಥಿಕ ಯೋಜನೆಗಳಿಗೆ ಹೊಸ ಕಾಯಕಲ್ಪ ನೀಡಿದ ಅವರು, ದೂರಸಂಪರ್ಕ, ನಾಗರಿಕ ವಿಮಾನಯಾನ, ಬ್ಯಾಂಕಿಂಗ್, ಇನ್ಶೂರೆನ್ಸ್, ಸಾರ್ವಜನಿಕ ಉದ್ದಿಮೆಗಳು, ವಿದೇಶೀ ವ್ಯಾಪಾರ ಮತ್ತು ಬಂಡವಾಳ, ಸಣ್ಣಕೈಗಾರಿಕೆ, ಹೆದ್ದಾರಿ, ಗ್ರಾಮೀಣ ರಸ್ತೆಗಳು, ಮೂಲಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿ ಎದ್ದುಕಾಣುವ ಬದಲಾವಣೆ ತಂದರು. ಅವರು ಅಧಿಕಾರದಿಂದ ಕೆಳಗಿಳಿಯುವಾಗ ಭಾರತ ಎಲ್ಲ ರಂಗಗಳಲ್ಲೂ ಮುನ್ನೆಲೆಗೆ ಬರಲಾರಂಭಿಸಿತ್ತು.

  ರಸ್ತೆಗಳಿಂದ ಹಿಡಿದು ದೊಡ್ಡದೊಡ್ಡ ವಿಶ್ವವಿದ್ಯಾಲಯಗಳು ಸಂಘಸಂಸ್ಥೆಗಳವರೆಗೆ ನೂರಾರು ಯೋಜನೆಗಳಿಗೆ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರನ್ನಿಟ್ಟಿರುವುದನ್ನು ನಾವು ಕಾಣುತ್ತೇವೆ. ಆದರೆ ತಮ್ಮ ಹೆಸರಿನಲ್ಲಿ ಯಾವುದೇ ಸರ್ಕಾರಿ ಯೋಜನೆ, ಸಂಸ್ಥೆಗಳು ಇರಕೂಡದೆಂದು ವಾಜಪೇಯಿ ಸ್ಪಷ್ಟ ಸೂಚನೆ ನೀಡಿದ್ದರು. ಹಾಗಿದ್ದರೂ ಗ್ರಾಮೀಣ ರಸ್ತೆ ಯೋಜನೆಯನ್ನು ಘೋಷಿಸುವಾಗ ಅಟಲ್ ಗ್ರಾಮ ಸಡಕ್ ಯೋಜನೆ ಎಂದು ಹೆಸರಿಸಲಾಗಿತ್ತು. ಆದರೆ ವಾಜಪೇಯಿ ಅದನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಎಂದು ಬದಲಾಯಿಸಿದರು. ಇಂತಹ ಹಲವು ನಡೆಗಳಿಂದ ವಾಜಪೇಯಿ ಜನರ ಮನಸ್ಸನ್ನು ಗೆದ್ದರು.

  ನಿಷ್ಕಲ್ಮಶ ಹೃದಯಿ
  ತಮ್ಮ ಇಡೀ ರಾಜಕೀಯ ಜೀವನದಲ್ಲಿ ಅವರೆಂದೂ ವೈಯಕ್ತಿಕವಾಗಿ ಯಾರನ್ನೂ ದ್ವೇಷಿಸಿದವರಲ್ಲ.
  ದೇಶಹಿತದ ಪ್ರಶ್ನೆ ಬಂದಾಗ ಯಾರನ್ನು ಟೀಕಿಸಲೂ ಅವರು ಹಿಂದೆಮುಂದೆ ನೋಡುತ್ತಿರಲಿಲ್ಲ. ನೆಹರು
  ಅವರ ಪಂಚಶೀಲ ತತ್ತ್ವಗಳನ್ನು ವಾಜಪೇಯಿ ಬಲವಾಗಿ ಟೀಕಿಸಿದ್ದರು. ೧೯೬೪ರಲ್ಲಿ ನೆಹರು ತೀರಿಕೊಳ್ಳುವ ಸ್ವಲ್ಪ ಮೊದಲು ಶೇಕ್ ಅಬ್ದುಲ್ಲಾರನ್ನು ಜೈಲಿನಿಂದ ಬಿಡುಗಡೆಗೊಳಿಸಿ ಪಾಕ್ ಅಧ್ಯಕ್ಷ ಆಯೂಬ್ ಖಾನ್‌ರೊಂದಿಗೆ ಮಾತುಕತೆಗಾಗಿ ಪಾಕಿಸ್ತಾನಕ್ಕೆ ಕಳುಹಿಸುವ ತೀರ್ಮಾನವನ್ನು ನೆಹರು ತೆಗೆದುಕೊಂಡಾಗ ವಾಜಪೇಯಿ ನೆಹರುರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ನೆಹರು ನಿಧನರಾದಾಗ ಅವರು ಇಂದು ತಾಯಿ ಭಾರತಿ ಶೋಕತಪ್ತೆ, ತನ್ನ ಮುದ್ದು ರಾಜಕುಮಾರನನ್ನು ಕಳೆದುಕೊಂಡಿದ್ದಾಳೆ.  ಮನುಷ್ಯತ್ವ ಮರುಗಿದೆ, ಆರಾಧಕ ಇಲ್ಲವಾಗಿದ್ದಾನೆ. ಶಾಂತಿ ತಳಮಳಿಸಿದೆ, ರಕ್ಷಕ ಗತಿಸಿದ್ದಾನೆ. ಕೊನೆಗೂ ತೆರೆಬಿದ್ದಿದೆ. ವಿಶ್ವವೇದಿಕೆಯ ಪ್ರಧಾನ ಪಾತ್ರಧಾರಿ ತನ್ನ ಪಾತ್ರ ಮುಗಿಸಿದ್ದಾನೆ ಎಂದು ಆರ್ದ್ರವಾಗಿ ಬಣ್ಣಿಸಿದ್ದರು.

  ಗುಣಕ್ಕೆ ಮತ್ಸರ ತೋರದ ವಾಜಪೇಯಿ, ಬಂಗ್ಲಾ ಯುದ್ಧದಲ್ಲಿ ಇಂದಿರಾಗಾಂಧಿ ತೋರಿದ ಕುಶಲಮತಿ, ದಿಟ್ಟತನವನ್ನು ಮೆಚ್ಚಿ ಇಂದಿರಾರನ್ನು ಹೊಗಳಿದ್ದರು. (ದುರ್ಗಾ ಎಂದು ತಾನು ಹೇಳಿಲ್ಲ ಎಂಬುದನ್ನು ಅಟಲ್‌ಜೀ ಅವರು, ಡಾ. ಎನ್.ಎಂ. ಘಟಾಟೆ ಅವರು ಬರೆದ, ವಾಜಪೇಯಿ ಪಾರ್ಲಿಮೆಂಟ್ ನಡಾವಳಿಗಳ ಬಗೆಗಿನ ಪುಸ್ತಕದಲ್ಲಿ ಐ ರಿಕಲೆಕ್ಟ್  ಎಂಬ ಅಧ್ಯಾಯದಲ್ಲಿ ಸ್ಪಷ್ಟಪಡಿಸಿದ್ದಾರೆ.) ಗುಜರಾತಿನ ಚುನಾವಣಾ ಸಭೆಯೊಂದರಲ್ಲಿ ಇಂದಿರಾಗಾಂಧಿ ನಾನು ಉತ್ತರಪ್ರದೇಶದ ಮಗಳು ಮತ್ತು ಗುಜರಾತಿನ ಸೊಸೆ. ಆ ಕಾರಣಕ್ಕಾಗಿ ನೀವು ಮತ ನೀಡಬೇಕು ಎಂದಿದ್ದರು. ಇದನ್ನು ಉಲ್ಲೇಖಿಸಿದ ಅಟಲ್‌ಜೀ ಇಂದಿರಾ ಗಾಂಧಿಯವರು ಮತ್ತೊಂದನ್ನು ನಿಮ್ಮ ಮುಂದೆ ಹೇಳಿಲ್ಲ. ಅವರು ಇಟಲಿಯ ಅತ್ತೆ ಕೂಡ ಎಂದು ತಿರುಗೇಟು ನೀಡಿದ್ದೂ ಇದೆ.

  ವಿದೇಶಾಂಗನೀತಿಗೆ ಸಮರ್ಥ ಅಡಿಗಲ್ಲು
  ತಮ್ಮ ರಾಜಕೀಯದ ಪ್ರಾರಂಭದ ದಿನಗಳಿಂದಲೂ ಅಟಲ್‌ಜೀ ಅವರಿಗೆ ವಿದೇಶನೀತಿಯ ಕುರಿತು ವಿಶೇಷ ಆಸಕ್ತಿ. ಪ್ರಧಾನಿ ನೆಹರುಗೆ ಆಪ್ತರಾದುದು ಮತ್ತು ಅಟಲ್‌ಜೀಗೆ ಜನಮನ್ನಣೆ ಲಭಿಸತೊಡಗಿದ್ದರಲ್ಲಿ ಇದೂ ಒಂದು ಪ್ರಮುಖ ಕಾರಣ. ನೆಹರು ಅನುಸರಿಸಿದ ದ್ವಂದ್ವಯುಕ್ತ ವಿದೇಶನೀತಿಗಳು – ಆಲಿಪ್ತ ನೀತಿ ಎಂದು ಹೇಳಿಕೊಳ್ಳುತ್ತ ರಷ್ಯಾದ ಕಡೆಗೆ ಅತಿಯಾಗಿ ವಾಲುತ್ತಿರುವುದನ್ನು, ಅರಬ್ ರಾಷ್ಟ್ರಗಳಿಗೆ ಅನಗತ್ಯ ಪ್ರಾಶಸ್ತ  ನೀಡಿ ಇಸ್ರೇಲನ್ನು ದೂರವಿರಿಸಿರುವುದು – ಭಾರತಕ್ಕೆ ಮಾರಕ ಎಂಬುದನ್ನು ಗುರುತಿಸಿ, ಅನೇಕ ಬಾರಿ ಅವರು ದನಿ ಎತ್ತಿದ್ದರು. ೧೯೭೭ರಲ್ಲಿ ಜನತಾಪಕ್ಷ ಅಧಿಕಾರಕ್ಕೆ ಬಂದರೆ ಅಮೆರಿಕದ ಜೊತೆ ಸಂಬಂಧ ಘನಿಷ್ಠಗೊಳಿಸುವುದಾಗಿಯೂ, ಇಸ್ರೇಲ್ ಜೊತೆಗೆ ರಾಜಕೀಯ ಸಂಬಂಧ ಸ್ಥಾಪಿಸುವುದಾಗಿಯೂ ಅವರು ಬಹಿರಂಗವಾಗಿ ಘೋಷಿಸಿದ್ದರು.  ಆದರೆ ತುರ್ತುಪರಿಸ್ಥಿತಿಯ ನಂತರ ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರದಲ್ಲಿ ವಿದೇಶಾಂಗ ಮಂತ್ರಿಯಾದರೂ ನೆಹರು ಹಾಗೂ ಇಂದಿರಾಗಾಂಧಿ ಕಾಲದ ಆಡಳಿತದ ನೀತಿಗಳಿಂದ ಹೊರಬರುವುದು ಅಷ್ಟು ಸುಲಭವಾಗಿರಲಿಲ್ಲ. ಹೀಗಾಗಿ ಭಾರತದ ವಿದೇಶ ಮಂತ್ರಿಯಾಗಿ ೧೯೭೭ರಲ್ಲಿ ಅವರು ನೆಹರು ಬೆಳೆಸಿದ ವಿದೇಶಾಂಗ ನೀತಿಯನ್ನು ಮುಂದುವರಿಸಿ ಅತ್ಯಂತ ಯಶಸ್ವಿಯಾದರು.

  ಅಟಲ್‌ಜೀ ಅವರ ವಿದೇಶಾಂಗ ನೀತಿಯ ದಿಗ್ದರ್ಶನವಾದುದು ೧೯೯೮ರಲ್ಲಿ ಪ್ರಧಾನಿಯಾದ
  ನಂತರ. ಅವರು ಕೈಗೊಂಡ ಕ್ರಮಗಳು ಅವರ ರಾಷ್ಟ್ರನಿಷ್ಠೆ, ವಿವೇಕ, ದೂರದರ್ಶಿತ್ವ ಹಾಗೂ ಕರ್ತೃತ್ವಶಕ್ತಿಗೆ ಹಿಡಿದ ಕನ್ನಡಿಯಾಗಿದೆ. ವಿಶ್ವದಲ್ಲಿ ಶಕ್ತಿಯಿಂದಲೇ ಸತ್ತ್ವದ ಪ್ರಕಟೀಕರಣ ಸಾಧ್ಯ ಎಂಬುದನ್ನು ಅವರು ಕೃತಿರೂಪದಲ್ಲಿ ತೋರಿದರು. ಪ್ರಮುಖವಾದುದು ಪೋಖರನ್ ಅಣ್ವಸ್ತ್ರ ಪರೀಕ್ಷೆ. ಅಮೆರಿಕ ಸೇರಿದಂತೆ ಜಗತ್ತಿನ ಬೃಹತ್ ರಾಷ್ಟ್ರಗಳು ಇದನ್ನು ವಿರೋಧಿಸುತ್ತವೆ ಎಂಬ ವಾಸ್ತವದ
  ಅರಿವಿದ್ದೂ ಅವರು ಈ ಸಾಹಸಕ್ಕೆ ಕೈಹಾಕಿದ್ದರು. ಇದೇ ಕಾರಣದಿಂದ ಇಂದಿರಾಗಾಂಧಿ ೧೯೭೪ರಲ್ಲಿ
  ಸಣ್ಣ ಪ್ರಮಾಣದಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದರೂ ಭಾರತ ಒಂದು ಅಣ್ವಸ್ತ್ರ ರಾಷ್ಟ್ರವೆಂದು ಘೋಷಿಸಲು
  ಹಿಂಜರಿದಿದ್ದರು. ನಮ್ಮದೊಂದು ಶಾಂತಿಯುತ ಅಣ್ವಸ್ತ್ರ ಪರೀಕ್ಷೆ ಎಂಬ ನೀತಿ ಪ್ರತಿಪಾದಿಸಿದರು. ಆದರೆ
  ಅಟಲ್‌ಜೀ ಎದೆಗುಂದದೆ, ಹಿರಿಯಣ್ಣನ ಬೆದರಿಕೆಗೆ ಬಗ್ಗದೆ ಅಣ್ವಸ್ತ್ರ ಪರೀಕ್ಷೆಗೆ ಮುಂದಾದರು. ಅಮೆರಿಕ
  ಆರ್ಥಿಕ ದಿಗ್ಬಂಧನ ಹೇರಿದಾಗ ಆರ್ಥಿಕ ಪ್ರತಿಬಂಧಕ್ಕೆ ಹೆದರಿ ನಾವು ನಿಂತಲ್ಲೇ ನಿಲ್ಲಲು ಸಾಧ್ಯವಿಲ್ಲ. ಮುಂದೆ ಹೆಜ್ಜೆ ಇರಿಸಲೇಬೇಕು ಎಂದು ಉತ್ತರಿಸಿದರು.

  ಭಾರತ ಅಣ್ವಸ್ತ್ರರಾಷ್ಟ್ರವಾಗುವುದರ ಅನಿವಾರ್ಯತೆಯನ್ನು ಅಮೆರಿಕ ಮುಂತಾದ ಬೃಹದ್ ರಾಷ್ಟ್ರಗಳು ಒಪ್ಪಿಕೊಳ್ಳಲು ಹೆಚ್ಚುಕಾಲ ಹಿಡಿಯಲಿಲ್ಲ. ಒಂದೇ ವರ್ಷದಲ್ಲಿ ಕಾರ್ಗಿಲ್ ಕದನ ಆರಂಭವಾದಾಗ ಅಮೆರಿಕ, ರಷ್ಯಾ, ಚೀನಾ, ಬ್ರಿಟನ್ ಮುಂತಾದ ದೇಶಗಳು ಭಾರತದ ನಿಲವನ್ನು ಸಮರ್ಥಿಸಿ ಪಾಕಿಸ್ತಾನಕ್ಕೆ ಛೀಮಾರಿಹಾಕಿದವು. ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಜನವರಿ ೨೦೦೧ರಲ್ಲಿ ಭಾರತಕ್ಕೆ ಭೇಟಿ ನೀಡಿ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಹಲವು ಮಹತ್ತ್ವದ ನಿರ್ಣಯಗಳನ್ನು ಕೈಗೊಂಡರು.
  ೨೨ ವರ್ಷಗಳ ನಂತರ ಅಮೆರಿಕದ ಅಧ್ಯಕ್ಷರೊಬ್ಬರ ಮೊದಲ ಭೇಟಿ ಅದು. ಇದು ನಡೆದದ್ದು ಪೋಖರನ್
  ಅಣ್ವಸ್ತ್ರ ಪರೀಕ್ಷೆ ನಡೆಸಿದ ಕೇವಲ ೨೦ ತಿಂಗಳಲ್ಲಿ ಎಂಬುದು ಮಹತ್ತ್ವದ್ದು. ಇಷ್ಟೇ ಅಲ್ಲ. ೧೯೮೭ರಲ್ಲಿಯೇ
  ರಹಸ್ಯವಾಗಿ ಅಣ್ವಸ್ತ್ರ ಗಳಿಸಿ, ಆ ಬಗ್ಗೆ ಜಗತ್ತಿನ ಕಣ್ಣಿಗೆ ಮಣ್ಣೆರಚುತ್ತಿದ್ದ ಪಾಕಿಸ್ತಾನ ಕೂಡಾ ತನ್ನಲ್ಲಿ ಅಣ್ವಸ್ತ್ರಗಳಿವೆ ಎಂಬುದನ್ನು ಜಗತ್ತಿಗೆ ಬಹಿರಂಗಗೊಳಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದ್ದು ಅಟಲ್‌ಜೀ ಅವರ ಚಾಣಾಕ್ಷ ವಿದೇಶನೀತಿ ಎನ್ನುತ್ತಾರೆ ಅಂಕಣಕಾರ ಪ್ರೇಮಶೇಖರ್.

  ಲಾಹೋರ್ ಭೇಟಿ (೧೯೯೯, ಫೆಬ್ರುವರಿ ೨೦)
  ಲಾಹೋರ್‌ಗೆ ಬಸ್ ಸಂಚಾರ ಆರಂಭಿಸುವ ಮೂಲಕ ಪಾಕಿಸ್ತಾನದೊಂದಿಗೆ ಶಾಂತಿ ಪುನಃಸ್ಥಾಪನೆಗೆ
  ಭಾರತ ಸಿದ್ಧ ಎಂದೂ ಅವರು ಸಾರಿದರು. ಇದಕ್ಕೆ ವಿರೋಧ ವ್ಯಕ್ತವಾದಾಗ ನಾವು ಸ್ನೇಹಿತರನ್ನು
  ಬದಲಿಸಬಹುದು, ನೆರೆಹೊರೆಯವರನ್ನಲ್ಲ ಎಂದರು.

  ಆದರೆ ಪಾಕಿಸ್ತಾನ ಕಾರ್ಗಿಲ್ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವ ಹುನ್ನಾರಕ್ಕೆ ತಕ್ಕ ಪ್ರತಿಕ್ರಿಯೆ ನೀಡಿ
  ಪಾಕಿಸ್ತಾನದ ನೈಜ ಮುಖವನ್ನು ಜಗತ್ತಿನೆದುರು ಅನಾವರಣಗೊಳಿಸಿದರು. ಇಂದು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಪಾಕ್ ವಿರುದ್ಧ ಕಠಿಣ ನಿಲವು ತಳೆಯುತ್ತಿರುವುದರಲ್ಲಿ ಈ ಹಿಂದಿನ ಘಟನೆಗಳ ಪಾತ್ರವೂ ಮಹತ್ತ್ವದ್ದು.

  ಕಮ್ಯೂನಿಸ್ಟನೊಬ್ಬನಿಗೆ ಸಶಸ್ತ್ರಕ್ರಾಂತಿಯಲ್ಲಿ ನಂಬುಗೆ ಇಲ್ಲದಿದ್ದರೆ ನಿಜಾರ್ಥದಲ್ಲಿ ಆತ ಕಮ್ಯೂನಿಸ್ಟನೇ ಅಲ್ಲ.
  – ರಾಜ್ಯಸಭೆಯಲ್ಲಿ, ೨೫ ಮಾರ್ಚ್ ೧೯೬೫

  ಭಾರತದ ಸುತ್ತಮುತ್ತಲಿನ ದೇಶಗಳೊಂದಿಗೆ ಘನಿಷ್ಠ ಸಂಬಂಧಗಳನ್ನು ಹೊಂದುವ ಅಗತ್ಯವನ್ನು
  ಗುರುತಿಸಿ ಕಾರ್ಯಪ್ರವೃತ್ತರಾದರು ಅಟಲ್‌ಜೀ. ಆಫಘನಿಸ್ತಾನ, ಇರಾನ್ ಮತ್ತು ಮಧ್ಯಏಶಿಯಾದ
  ಮುಸ್ಲಿಂ ಗಣರಾಜ್ಯಗಳನ್ನು ಭಾರತಕ್ಕೆ ಹತ್ತಿರವಾಗಿಸಿದರು. ಇರಾನ್‌ನ ಚಬಹಾರ್ ಬಂದರಿನ ಮೂಲಕ
  ಆಫಘನಿಸ್ತಾನ ಮತ್ತು ಮಧ್ಯಏಶಿಯಾದೊಂದಿಗೆ ಸಂಬಂಧ ಏರ್ಪಡಿಸುವ ಪ್ರಯತ್ನವನ್ನೂ ಆರಂಭಿಸಿದರು. ಭಾರತದ ಸುತ್ತಲೂ ವೃದ್ಧಿಸುತ್ತಿರುವ ಚೀನಾ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು ತಜಕಿಸ್ತಾನ, ಮಾರಿಷಸ್, ಇಂಡೋನೇಶಿಯಾದಲ್ಲಿ ಭಾರತಕ್ಕೆ ಸೇನಾ ಸವಲತ್ತುಗಳನ್ನು ಗಳಿಸಿಕೊಡಲು ಮುಂದಾದರು.  ಇವುಗಳ ಮಹತ್ತ್ವ ಇಂದು ಒಂದೊಂದಾಗಿ ಬೆಳಕಿಗೆ ಬರುತ್ತಿರುವುದನ್ನೂ ನಾವು ಕಾಣಬಹುದು. ಈ ಬಗೆಯ ದೂರದರ್ಶಿತ್ವದ ವಿದೇಶಾಂಗನೀತಿಯನ್ನು ಪ್ರದರ್ಶಿಸಿದವರಲ್ಲಿ ಅವರೇ ಮೊದಲಿಗರು.

  ಕವಿಹೃದಯ
  ಅಟಲ್‌ಜೀ ಎಂದರೆ ಸರಸ್ವತಿಯ ವರಪುತ್ರರೇ ಸರಿ. ಒಂದು ವೇಳೆ ಅವರು ರಾಜಕಾರಣಿಯಾಗಿ
  ರೂಪುಗೊಳ್ಳದಿದ್ದರೆ ಶ್ರೇಷ್ಠ ಕವಿಯಾಗಿ ಹೊರಹೊಮ್ಮುತ್ತಿದ್ದರು. ಸರಸ್ವತೀ ಕೀ ದೇಖ್ ಸಾಧನಾ, ಲಕ್ಷ್ಮೀನೇ ಸಂಬಂಧ್ ನ ಜೋಡಾ (ಸರಸ್ವತಿಯ ಸಾಧನೆಯನ್ನು ನೋಡಿ ಲಕ್ಷ್ಮಿ ಸಂಬಂಧ ಬೆಳೆಸಲಿಲ್ಲ) ಎಂದು ಅವರು ತಮ್ಮ ಸಾಹಿತ್ಯಾಸಕ್ತಿಯ ಕುರಿತು ಆವೋ ಮನ್ ಕೀ ಗಾಂಟೆ ಖೋಲೇ ಎಂಬ ಕವನದಲ್ಲಿ (೧೯೯೪ರ ಡಿಸೆಂಬರ್ ೨೫ ತಮ್ಮ ಜನ್ಮದಿನದಂದು ಬರೆದದ್ದು) ಬಿಡಿಸಿಟ್ಟಿದ್ದಾರೆ.

  ಅಟಲ್‌ಜೀಗೆ ಕವನ ರಚಿಸುವುದು ಜನ್ಮಜಾತವಾಗಿಯೇ ಬಂದಿತ್ತು. ಅವರೇ ಹೇಳುವಂತೆ ಇದು ಅವರ ತಾತ ಕಾಶೀಪ್ರಸಾದರ (ತಂದೆಯ ತಂದೆ) ಪ್ರಭಾವವಂತೆ. ಕಾಶೀಪ್ರಸಾದರು ಬಟೇಶ್ವರದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸರಸ್ವತೀ ವರಪುತ್ರ ಎಂದೇ ಜನಜನಿತರಾಗಿದ್ದರು.

  ನಿರಂತರವಾಗಿ ರಾ.ಸ್ವ. ಸಂಘದ ಸಂಪರ್ಕದಲ್ಲಿದ್ದ ಅಟಲ್‌ಜೀ ೧೦ನೇ ತರಗತಿಯಲ್ಲಿದ್ದಾಗಲೇ ಬರೆದ
  ಹಿಂದೂ ತನುಮನ್, ಹಿಂದೂ ಜೀವನ್ ಎಂಬ ಕವನ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿತ್ತು.

  ಹಿಂದೀ ಸಾಹಿತ್ಯಲೋಕದಲ್ಲಿ ಅಟಲ್‌ಜೀಯವರಿಗೆ ವಿಶಿಷ್ಟ ಸ್ಥಾನವಿದೆ, ಅದರಲ್ಲಿಯೂ ಮುಖ್ಯವಾಗಿ
  ಕುಂಡಲಿಸಾಹಿತ್ಯದಲ್ಲಿ. ಇಂಥ ಸಾಹಿತ್ಯಪ್ರಕಾರದಲ್ಲಿ ಬರೆದವರು ಬಹಳ ಕಡಮೆ. ಕುಂಡಲಿಸಾಹಿತ್ಯ ರಚನೆ ಶಿಸ್ತುಬದ್ಧವಾದುದು. ಇದಕ್ಕೆ ಛಂದಸ್ಸಿನ ಜ್ಞಾನ ಅಗತ್ಯ. ಅಟಲ್‌ಜೀ ಪ್ರಾರಂಭದಿಂದಲೂ ಕುಂಡಲಿಸಾಹಿತ್ಯದಲ್ಲಿ ವಿಶೇಷ ಆಸಕ್ತಿತಳೆದಿದ್ದರು. ೧೯೭೫ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಬೆಂಗಳೂರು ಜೈಲಿನಲ್ಲಿದ್ದಾಗಲೂ ಅವರು ಕವನಗಳನ್ನು ಬರೆಯುತ್ತಿದ್ದರು. ಆ ಅವಧಿಯಲ್ಲಿಯೆ ಅವರು ೭೦ಕ್ಕೂ ಅಧಿಕ ಕುಂಡಲಿಗಳನ್ನು ಬರೆದಿದ್ದರು. ವಿಶೇಷದರೆ ಅಟಲ್‌ಜೀ ತಮ್ಮ ೫೦ನೇ ವರ್ಷದ ಸಂಭ್ರಮದ ದಿನಗಳನ್ನು ಕಳೆದದ್ದೂ ಜೈಲುಕಂಬಿಗಳ ಮಧ್ಯೆ! ಆಗ ಅವರು ಬರೆದ ಕವನ ಜೀವನ್ ಕೀ  ಟಲನೇ ಲಗೀ ಸಾಂಜ್

  ಬರುತ್ತಿದೆ ಬಾಳಸಂಜೆ
  ಇಳಿಯುತ್ತಿದೆ ವಯಸ್ಸು
  ಸವೆದಿದೆ ದಾರಿ
  ಬರುತ್ತಿದೆ ಬಾಳಸಂಜೆ
  ಬದಲಾಗಿವೆ ಅರ್ಥಗಳು
  ವ್ಯರ್ಥವಾಗಿವೆ ಶಬ್ದಗಳು
  ನಿಸ್ಸತ್ತ್ವವಾಗಿವೆ ಶಾಂತಿಯಿಲ್ಲದ ಸಂತಸ
  ಬರುತ್ತಿದೆ ಬಾಳಸಂಜೆ

  *  *   *

  ತುರ್ತುಪರಿಸ್ಥಿತಿಯನ್ನು ಕುರಿತು ಅವರು ಬರೆದ ಕವನ:
  ಹತ್ತು ಮಾಳಿಗೆಯೇರಿ ನೋಡಿದೆ ರಾವಣ ಉರಿಯುತ್ತಿದ್ದ
  ಶತಮಾನಗಳ ಅಗ್ನಿಗೆ ಸ್ವಾಹಾ
  ಆದರೂ ನಿರಂತರ ಏರುತ್ತಿದೆ ಪಾಪ
  ರಾಮವಿಜಯದ ಕತೆಯೇನೋ ಹಳೆಯದು
  ಯುದ್ಧವಂತೂ ಮುಂದುವರಿದಿದೆ
  ರಾಜ್ಯವಾಳಲು ಅಯೋಧ್ಯೆ ಸಿದ್ಧಗೊಳ್ಳುವ ಸರದಿ
  ತಾಯಿಮಮತೆ ದೂಡಿತು ಮತ್ತೆ ಸಮಾಜವ ಸಂಕಷ್ಟಕೆ
  ನ್ಯಾಯದ ನಿಲುಗಡೆ, ಧರ್ಮದ ಗಡೀಪಾರು
  ಕೋಟಿ ಕೋಟಿ ಭಾರತವಾಸಿಗಳು ಮೂಕದರ್ಶಕರೇ?
  ಅಧಿಕಾರಬಲದಿಂದ ಹಿಡಿಯಷ್ಟು ಜನ ಇರಬಲ್ಲರೆಷ್ಟು ದಿನ?

  ೧೯೯೨ರ ಜನವರಿ ೨೫ರಂದು ಅಟಲ್‌ಜೀಗೆ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ
  ಗೌರವಿಸಿತು. ಈ ನಿಮಿತ್ತ ಅವರನ್ನು ಅಭಿನಂದಿಸಲು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಟಲ್‌ಜೀ
  ಸ್ವರಚಿತ ಕವನವೊಂದನ್ನು ಓದಿದರು. ಈ ಕವನ ಊಂಚಾಯಿ ಅಟಲ್‌ಜೀ ಬಾಳಪುಟಗಳಿಗೆ ಬರೆದ
  ಭಾಷ್ಯವೇ ಸರಿ.
  ಆ ಕವನದ ಆರಂಭ ಹೀಗಿದೆ:
  ಊಂಚೇ ಪಹಾಡ್ ಪರ್
  ಪೇಡ್ ನಹೀ ಲಗತೇ
  ಪೌಧೇ ನಹೀ ಲಗತೇ
  ನ ಘಾಸ್ ಭೀ ಜಮತೀ ಹೈ

  “ಅತ್ಯಂತ ಎತ್ತರದ ಪರ್ವತದ ಮೇಲೆ ಮರ ಬೆಳೆಯದು, ಗಿಡ ಬೆಳೆಯದು, ಹುಲ್ಲೂ ಬೆಳೆಯದು.
  ಇದೇ ಕವನದ ಸಮಾಪ್ತಿಯಲ್ಲಿ ಅವರು ಹೇಳುವುದು:
  ಓ ನನ್ನ ಪ್ರಭುವೇ!
  ಪರರನ್ನು ಆಲಿಂಗಿಸಲಾರದಂಥ
  ಎತ್ತರಕ್ಕೆ ನನ್ನನ್ನು ಏರಿಸಬೇಡ
  – ಎಂದು.

  ತೀವ್ರ ಅನಾರೋಗ್ಯದಿಂದ ನ್ಯೂಯಾರ್ಕಿನ ಆಸ್ಪತ್ರೆಗೆ ೧೯೯೮ರಲ್ಲಿ ದಾಖಲಾಗಿದ್ದಾಗ ಸಾವನ್ನು ಕುರಿತು ಅವರು ಬರೆದ ಕವನ:
  ನೀನು ಮೆಲ್ಲಮೆಲ್ಲನೆ ಕದ್ದುಮುಚ್ಚಿ ಬರಬೇಡ
  ಮುಂದೆ ಬಾ, ಹೊಡೆ. ನಾನಾರೆಂದು ತೋರಿಸುವೆ.
  ಈಗ ಇನ್ನೊಮ್ಮೆ ಬಿರುಗಾಳಿ ಎದ್ದಿದೆ
  ದೋಣಿಯು ಸುಳಿಗಾಳಿಯಲ್ಲಿ ಸಿಕ್ಕಿಹಾಕಿಕೊಂಡಿದೆ
  ದಾಟುವೆನೆಂಬ ಧೈರ್ಯ ನನಗಿದೆ.

  ಆದರ್ಶ ರಾಜಕೀಯ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ 

 • ಇಂದು ನಮ್ಮ ಸಮಾಜದಲ್ಲಿ ತಾಂಡವವಾಡುವ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಆಡಳಿತದ ಅಶಿಸ್ತು, ಅವ್ಯವಸ್ಥೆಗಳಿಂದ ರೋಸಿಹೋದ ಜನ ಇದಕ್ಕಿಂತ ಬ್ರಿಟಿಷರ ಆಳ್ವಿಕೆಯೇ ಒಳ್ಳೆಯದಿತ್ತು ಎಂದು ಆಗಾಗ ಉದ್ಗರಿಸುವುದನ್ನು ನಾವು ಕಾಣುತ್ತೇವೆ. ಸ್ವಾತಂತ್ರ್ಯಕ್ಕೆ ಯಾವುದೂ ಪರ್ಯಾಯವಲ್ಲ ಎಂಬುದು ನಿಜವಾದರೂ ಜನರಾಡುವ ಮೇಲಿನ ಮಾತಿನಲ್ಲಿ ಸತ್ಯಾಂಶವಿರುವುದು ಪರಾಂಬರಿಸಿದಾಗ ಗೋಚರವಾಗುತ್ತದೆ. ದೈನಂದಿನ ಆಡಳಿತದ ಶಿಸ್ತು-ವ್ಯವಸ್ಥೆಗಳ? ಅಲ್ಲ; ನಮ್ಮ ನೈಜಸಂಪತ್ತಾದ ನೆಲ-ಜಲಗಳ ಸಂರಕ್ಷಣೆಯಲ್ಲಿ ಕೂಡ ನಾವು ಬ್ರಿಟಿಷರಿಂದ ಹಿಂದೆ ಬೀಳುತ್ತಿದ್ದೇವೇನೋ ಅನ್ನಿಸಿದರೆ ಆಶ್ಚರ್ಯವಿಲ್ಲ. ಬ್ರಿಟಿಷರು ನಮ್ಮ ಸಂಪತ್ತನ್ನು ಲೂಟಿಮಾಡಿ ಇಂಗ್ಲೆಂಡಿಗೆ ಸಾಗಿಸಿದರೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಅವರ ಆಡಳಿತಕ್ಕೆ ಅನುಕೂಲವಾಗಲೆಂದೋ ಅಥವಾ ಪ್ರಜಾಜನಕ್ಕೆ ಆನುಷಂಗಿಕವಾಗಿ ಏನಾದರೂ ಪ್ರಯೋಜನವಾದರೆ ಆಗಲಿ ಎಂದೋ ಅವರು ಕೈಗೊಂಡ ಕೆಲವು ಯೋಜನೆಗಳಿಂದ ಜನರಿಗೆ ಅನುಕೂಲವಾದದ್ದು ಸುಳ್ಳಲ್ಲ. ಸ್ವತಂತ್ರ ಭಾರತದಲ್ಲಿ ಕ್ರಮೇಣ ಅದು ಕೂಡ ಇಲ್ಲ ಎಂಬಂತಾಗಿದೆ.

  ಇದೀಗ ಬಕ್ಕಿಂಗ್‌ಹ್ಯಾಮ್ ಕಾಲುವೆಯ ಪುನರುಜ್ಜೀವನ ಒಂದು ನೆಲೆಯಲ್ಲಿ ಆರಂಭವಾಗಿದೆ. ಭಾರತ ಒಳನಾಡು ಜಲಮಾರ್ಗ ಪ್ರಾಧಿಕಾರದ ಆಶ್ರಯದಲ್ಲಿ ಈ ಯೋಜನೆ ಸೇರಿದ್ದು, ತಮಿಳುನಾಡು ಸರ್ಕಾರ ಕೂಡ ತನ್ನ ಜಲಸಂಪನ್ಮೂಲ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗಳ ಮೂಲಕ ಹೂಳೆತ್ತುವುದು, ಕಾಲುವೆಯನ್ನು ಅಗಲಗೊಳಿಸುವುದು ಮುಂತಾದ ಕೆಲಸಗಳನ್ನು ಕೈಗೊಳ್ಳುತ್ತಿದೆ.

  ಕ್ರಮೇಣ ದೂರದೃಷ್ಟಿ ಮತ್ತು ಸೂಕ್ಷ್ಮತೆ ಇಲ್ಲದವರು ಹೆಚ್ಚುಹೆಚ್ಚಾಗಿ ನಮ್ಮ ಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿದ್ದಾರೆ. ದೇಶದ ನೆಲ-ಜಲಗಳ ಬಗೆಗಿನ ಕಾಳಜಿಗಿಂತ ಅವರಿಗೆ ಸ್ವಂತದ್ದಾದ ಧನ-ಕನಕ ಮತ್ತು ಅಧಿಕಾರಗಳು ಮುಖ್ಯವಾಗುತ್ತಿವೆ. ಅಧಿಕಾರ ಬರುವುದು ಚುನಾವಣೆಯ ಮೂಲಕ. ಈಗ
  ಚುನಾವಣೆ ಸಮೀಪಿಸಿದಾಗ ಮಾತ್ರ ಅದರ ಮೇಲೆ ಕಣ್ಣಿಡುವುದಲ್ಲ; ಅಧಿಕಾರದ ಐದು ವ?ಗಳ ಎಲ್ಲ
  ದಿನ-ಮಾಸಗಳಲ್ಲೂ ಮುಂದಿನ ಚುನಾವಣೆಯೇ ದಾರಿದೀಪವಾಗಿರುತ್ತದೆ. ಅದರಂತೆ ಮತದಾರ ಪ್ರಜೆಗಳ ಓಲೈಕೆ ಅಥವಾ ತಿರಸ್ಕಾರ. ಇರಲಿ; ಬ್ರಿಟಿಷರು ಕಾರ್ಯಗತಗೊಳಿಸಿ ಜನೋಪಯೋಗಿ ಆಗುವಂತೆ ಬಳಸಿಕೊಂಡು, ಸ್ವತಂತ್ರ ಭಾರತದಲ್ಲಿ ಪೂರ್ತಿ ಅವನತಿಯನ್ನು ಕಂಡ ಒಂದು ಯೋಜನೆಯಾಗಿ ಚೆನ್ನೈ ಸೇರಿದಂತೆ ಪೂರ್ವಕರಾವಳಿಯ ೪೨೬ ಕಿ.ಮೀ. ಉದ್ದಕ್ಕೆ ಚಾಚಿಕೊಂಡಿರುವ ಬಕ್ಕಿಂಗ್‌ಹ್ಯಾಮ್ ಕಾಲುವೆಯನ್ನು ಹೆಸರಿಸಬಹುದು.

  ಬ್ರಿಟಿಷರ ಬಳುವಳಿ
  ದಕ್ಷಿಣಭಾರತದಲ್ಲಿ ಉತ್ತರದಲ್ಲಿ ಆಂಧ್ರಪ್ರದೇಶದ ಪೂರ್ವಗೋದಾವರಿ ಜಿಲ್ಲೆಯ ಕಾಕಿನಾಡಾದಿಂದ ತಮಿಳುನಾಡಿನ ವಿಳ್ಳುಪುರಂ ಜಿಲ್ಲೆಯ ಮರಕ್ಕಣಂವರೆಗೆ ಕೋರಮಂಡಲ ಕರಾವಳಿಗೆ ಸಮಾನಾಂತರವಾಗಿ ಈ ಕಾಲುವೆ ಹರಿಯುತ್ತಿದೆ. ಈ ಭಾಗದ ಹೆಚ್ಚಿನ ನೈಸರ್ಗಿಕ ಹಿನ್ನೀರುಗಳನ್ನು ಬಕ್ಕಿಂಗ್‌ಹ್ಯಾಮ್ ಕಾಲುವೆ ಚೆನ್ನೈ ಬಂದರಿಗೆ ಜೋಡಿಸುತ್ತದೆ. ಬ್ರಿಟಿಷ್ ಆಳ್ವಿಕೆಯ ವೇಳೆಯಲ್ಲಿ ಇದನ್ನು ನಿರ್ಮಿಸಲಾಗಿದ್ದು,೧೯ನೇ ಶತಮಾನದ ಕೊನೆಯ ಭಾಗ ಮತ್ತು ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಇದು ಒಂದು ಪ್ರಮುಖ ಜಲಮಾರ್ಗವಾಗಿತ್ತು.

  ಇದು ಸಮುದ್ರದಿಂದ ಸುಮಾರು ಒಂದು ಕಿ.ಮೀ. ಒಳಭಾಗದಲ್ಲಿದ್ದು, ಸಮುದ್ರದ ಅಲೆಗಳಿಂದ ಪ್ರಭಾವಿತ(ಟೈಡಲ್)ವಾಗಿದೆ. ಒಳನಾಡು ಸಾರಿಗೆ ಇದರ ಪ್ರಮುಖ ಉದ್ದೇಶವಾಗಿತ್ತು. ಸಮುದ್ರಕ್ಕೆ ತೆರೆದುಕೊಂಡ ವಿವಿಧ ಕಡೆಗಳಲ್ಲಿ ಫ್ಲಡ್‌ಗೇಟ್‌ಗಳಿದ್ದು ಸಮುದ್ರದಿಂದ ಬಂದ ಹೂಳು ತುಂಬದಂತೆ ತಡೆಯುವುದು ಅವುಗಳ ಉದ್ದೇಶವಾಗಿದೆ. ಈ ಫ್ಲಡ್‌ಗೇಟ್(ಲಾಕ್)ಗಳಿಂದಾಗಿ ನೀರಿನ ಮಟ್ಟ ಒಂದೇ ರೀತಿ ಉಳಿಯುತ್ತದೆ. ಕಾಲುವೆಯಲ್ಲಿ ಸಾಮಾನ್ಯವಾಗಿ ಇರುವುದು ಉಪ್ಪುನೀರು; ಮಳೆಗಾಲದಲ್ಲಿ ಮಳೆನೀರು ತುಂಬಿರುತ್ತದೆ. ಒಟ್ಟು ೪೨೬ ಕಿ.ಮೀ.ನಲ್ಲಿ ದಕ್ಷಿಣದ ೧೧೦ ಕಿ.ಮೀ. ಭಾಗವನ್ನು ದಕ್ಷಿಣ ಬಕ್ಕಿಂಗ್‌ಹ್ಯಾಮ್ ಕಾಲುವೆ ಎನ್ನುತ್ತಾರೆ. ಅದು ಕೂಡ ಟೈಡಲ್ ಕಾಲುವೆಯಾಗಿದ್ದು ಅದಕ್ಕೆ ಏಳು ಕಡೆ ಸಮುದ್ರದ ಓಪನಿಂಗ್ ಇದೆ. ಒಂದು ಕಾಲದಲ್ಲಿ ಚೆನ್ನೈ (ಅಂದಿನ ಮದ್ರಾಸ್) ಭಾಗದಲ್ಲಿ ಈ ಕಾಲುವೆಗೆ ೫,೬೦೦ ಕ್ಯುಸೆಕ್ಸ್ (ಸೆಕೆಂಡಿಗೆ ಘನ ಅಡಿ) ಸಾಮರ್ಥ್ಯವಿತ್ತು.

  ಮೊದಲಿಗೆ ಬ್ರಿಟಿಷ್ ಸರ್ಕಾರ ಚೆನ್ನೈನಿಂದ ಉತ್ತರಕ್ಕೆ ಎನ್ನೋರ್‌ವರೆಗೆ ೧೮ ಕಿ.ಮೀ. ಉದ್ದದ ಕಾಲುವೆಯನ್ನು ತೋಡಬಯಸಿತೆಂದು ಕ್ರಿ.ಶ. ೧೮೦೧ರ ಮದ್ರಾಸ್ ಗೆಜೆಟ್ ಪ್ರಕಟಣೆ ಹೇಳುತ್ತದೆ. ೧೮೦೬ರಲ್ಲಿ ಪೂರ್ಣಗೊಂಡಾಗ ಅದರ ಹೆಸರು ಕೊಚ್ರೇನ್ ಕಾಲುವೆ ಎಂದಾಗಿತ್ತು. ಅನಂತರ ಸ್ವಲ್ಪ ಸಮಯ ಲಾರ್ಡ್ ಕ್ಲೈವ್ಸ್ ಕೆನಾಲ್ ಎಂದಾಯಿತು. ಅಂತಿಮವಾಗಿ ೧೮೭೮ರಲ್ಲಿ ಅದರ ಹೆಸರು ಬಕ್ಕಿಂಗ್‌ಹ್ಯಾಮ್ ಕೆನಾಲ್ ಎಂದಾಯಿತು. ಕಾರಣ ಅಂದಿನ ಮದ್ರಾಸ್ ಗವರ್ನರ್ ಬಕ್ಕಿಂಗ್‌ಹ್ಯಾಮ್ ಮತ್ತು ಚಾಂದೋಸ್‌ನ ಡ್ಯೂಕ್‌ನ ಆದೇಶದಂತೆ ಅದನ್ನು ನಿರ್ಮಿಸಲಾಗಿತ್ತು. ಅಂದಿನ ಭೀಕರ ಬರಗಾಲದಿಂದ ಸಂತ್ರಸ್ತರಾದ ಜನತೆಯ ಸಹಾಯಕ್ಕಾಗಿ ಅದನ್ನು ತೋಡಲಾಯಿತು. ಅಂದಿನಿಂದ ಬಕ್ಕಿಂಗ್‌ಹ್ಯಾಮ್ ಕಾಲುವೆ ಎಂಬ ಹೆಸರು ಶಾಶ್ವತವಾಯಿತು.

  ಬ್ರಿಟಿಷರು ಮೊದಲಿಗೆ ಅದನ್ನು ಉತ್ತರದ ನದಿ ಎಂದು ಕರೆದದ್ದು ಕೂಡ ಇದೆ. ಚೆನ್ನೈ ಮತ್ತು ದಕ್ಷಿಣ ಆಂಧ್ರದ ಕರಾವಳಿಗಳನ್ನು ಆಗಾಗ ಅಪ್ಪಳಿಸುವ ಚಂಡಮಾರುತವು ಎಸಗುವ ಹಾನಿಯನ್ನು ಈ ಕಾಲುವೆ ಕಡಮೆಮಾಡಿ ರಕ್ಷಣೆ ನೀಡುತ್ತದೆಂದು ನಂಬಲಾಗಿತ್ತು.

  ಹಂತಗಳಲ್ಲಿ ನಿರ್ಮಾಣ
  ಉತ್ತರ ಚೆನ್ನೈನಿಂದ ಎನ್ನೋರ್‌ವರೆಗಿನ ೧೮ ಕಿ.ಮೀ. ಕಾಲುವೆಯನ್ನು ಬಾಸಿಲ್ ಕೊಚ್ರೇನ್ ಎಂಬಾತ ತೋಡಿಸಿದ. ಅದು ಉಪ್ಪುನೀರಿನ ಜಲಮಾರ್ಗವಾಗಿತ್ತು. ಆಂಧ್ರಪ್ರದೇಶದ ನೆಲ್ಲೂರು ಸಮೀಪದ ದುರ್ಗರಾಯಪಟ್ಟಣದವರೆಗೆ ಜಲಮಾರ್ಗವನ್ನು ರಚಿಸುವುದು ಅವನ ಉದ್ದೇಶವಾಗಿತ್ತು. ಮುಂದೆ ಅದನ್ನು ಚೆನ್ನೈನಿಂದ ೪೦ ಕಿ.ಮೀ. ಉತ್ತರದಲ್ಲಿರುವ ಪುಲಿಕಾಟ್ ಕೆರೆವರೆಗೆ ವಿಸ್ತರಿಸಲಾಯಿತು ೧೮೩೭ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಸರ್ಕಾರ ಈ ಕಾಲುವೆಯನ್ನು ವಹಿಸಿಕೊಂಡಿತು. ಉತ್ತರ, ದಕ್ಷಿಣ – ಎರಡೂ ಕಡೆ ಕಾಲುವೆಯ ವಿಸ್ತರಣೆ ಮುಂದುವರಿದು, ಉತ್ತರದಲ್ಲಿ ಕೃಷ್ಣಾನದಿ ದಂಡೆಯ ವಿಜಯವಾಡದ ತನಕ ೩೧೫ ಕಿ.ಮೀ. ಮತ್ತು ಚೆನ್ನೈನಿಂದ ದಕ್ಷಿಣದಲ್ಲಿ ಮರಕ್ಕಣಂವರೆಗೆ ೧೦೩ ಕಿ.ಮೀ. ಕಾಲುವೆಯ ಕಾಮಗಾರಿ ಪೂರ್ಣಗೊಂಡಿತು. ಕಾಲುವೆಯಲ್ಲಿ ಸಂಚಾರ ಆರಂಭವಾದಾಗ ಮೇಲೆ ಹೇಳಿದಂತೆ ಮೊದಲಿಗೆ ಲಾರ್ಡ್ ಕ್ಲೈವ್ಸ್ ಕೆನಾಲ್ ಎಂದು ಕರೆದು ಮುಂದೆ ಹೆಸರು ಬಕ್ಕಿಂಗ್‌ಹ್ಯಾಮ್ ಕೆನಾಲ್ಎಂ ದಾಯಿತಾದರೂ, ಆದರೂ ಚೆನ್ನೈ ಭಾಗದ ಕಾಲುವೆಯನ್ನು ೧೯ನೇ ಶತಮಾನದುದ್ದಕ್ಕೂ ಬಹುತೇಕ ಕೊಚ್ರೇನ್ಸ್ ಕೆನಾಲ್ ಎಂದೇ ಕರೆಯುತ್ತಿದ್ದರು.

  ವಿಜಯವಾಡದ ಕೆ.ಎಲ್. ವಿಶ್ವವಿದ್ಯಾಲಯದ ಬಳಿ ಹಾದುಹೋಗುತ್ತಿರುವ ಉತ್ತರ ಬಕ್ಕಿಂಗ್‌ಹ್ಯಾಂ ಕಾಲುವೆ

  ೧೮೭೭ ಮತ್ತು ೧೮೭೮ರಲ್ಲಿ ಮದ್ರಾಸ್ ಭಾಗದಲ್ಲಿ ಭೀಕರ ಬರಗಾಲ ತಲೆದೋರಿತು; ೬೦ ಲಕ್ಷಕ್ಕೂ ಅಧಿಕ ಜನ ಸಾವಿಗೀಡಾದರು. ಬರಗಾಲ ಪರಿಹಾರ ಕಾಮಗಾರಿಯಾಗಿ ಅಡ್ಯಾರ್ ಮತ್ತು ಕೂವಂ ನದಿಗಳನ್ನು ಜೋಡಿಸುವ ೮ ಕಿ.ಮೀ. ಉದ್ದದ ಕಾಲುವೆ ನಿರ್ಮಾಣವನ್ನು ಕೈಗೊಳ್ಳಲಾಯಿತು; ಆಗ ಬಕ್ಕಿಂಗ್‌ಹ್ಯಾಮ್ ಮತ್ತು ಚಾಂದೋಸ್‌ನ ಡ್ಯೂಕ್ ಗವರ್ನರಾಗಿದ್ದು, ಆತನ ಆದೇಶದಂತೆ ೩೦ ಲಕ್ಷ ರೂ. ವೆಚ್ಚದ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಯಿತು; ಅದರಲ್ಲಿ ೨೨ ಲಕ್ಷ ರೂ.ಗಳನ್ನು ಜನರ ಕೂಲಿಗೆ ವ್ಯಯಿಸಲಾಗಿತ್ತು. ೧೮೭೮ರಿಂದ ಕಾಲುವೆಗೆ ಬಕ್ಕಿಂಗ್‌ಹ್ಯಾಮ್ ಕೆನಾಲ್ ಎಂಬ ಹೆಸರು ಬಂತು. ಕಾಲುವೆಯ ಮೂಲಕ ಡ್ಯೂಕ್ ಒರಿಸ್ಸಾದಿಂದ ಮದ್ರಾಸಿಗೆ ಐದು ಲಕ್ಷ ಚೀಲ ಅಕ್ಕಿ ತರಿಸಿದ.

  ಕಾಲುವೆಯ ಮೂಲಕ ಉತ್ತರದಿಂದ ಆಹಾರವಸ್ತುಗಳು ಬಂದು ಲಕ್ಷಾಂತರ ಜನರ ಜೀವ ಉಳಿಯಿತೆಂದು ವಿ. ಸುಂದರಂ ಎಂಬವರು ನ್ಯೂಸ್ ಟುಡೇಯ ತಮ್ಮ ಲೇಖನದಲ್ಲಿ ಹೇಳಿದ್ದಾರೆ. ಬ್ರಿಟಿಷರು ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಮಾತ್ರವಲ್ಲ; ಯಮುನಾ, ಗಂಗಾ ಮತ್ತು ಸಿಂಧೂನದೀಬಯಲುಗಳಲ್ಲಿ ಕೂಡ ಈ ರೀತಿಯ ಕಾಲುವೆಗಳನ್ನು ತೋಡಿಸಿದ್ದರು. ೧೮೮೦-೧೯೪೦ರ ಅವಧಿಯಲ್ಲಿ ಬಕ್ಕಿಂಗ್‌ಹ್ಯಾಮ್ ಕಾಲುವೆ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಒದಗಿಸಿದ್ದು, ದೋಣಿಗಳಲ್ಲಿ ಜನಸಂಚಾರ ಮತ್ತು ಸರಕು ಸಾಗಾಣಿಕೆಗಳು ವ್ಯಾಪಕವಾಗಿ ನಡೆಯುತ್ತಿದ್ದವು. ೧೮೯೦ರ ಹೊತ್ತಿಗೆ ವ್ಯಾಪಾರ-ವಹಿವಾಟಿಗೆ ಬಕ್ಕಿಂಗ್‌ಹ್ಯಾಮ್ ಕಾಲುವೆಯಿಂದ ತುಂಬ ಪ್ರಯೋಜನವಾಗುತ್ತಿತ್ತೆಂದು ಪೌಲ್ ಹೈಲ್ಯಾಂಡ್
  ಎನ್ನುವ ಲೇಖಕ ತನ್ನ‘Indian Balm’ ಎನ್ನುವ ಪುಸ್ತಕದಲ್ಲಿ ದಾಖಲಿಸಿದ್ದಾನೆ. ತುಂಬ ಮುಖ್ಯವಾದ ಅಂಶವೆಂದರೆ, ಭೀಕರ ಅತಿರೇಕಗಳಾದ ಪ್ರವಾಹ ಮತ್ತು ಬರಗಾಲಗಳನ್ನು ತಡೆಯುವಲ್ಲಿ ಬಕ್ಕಿಂಗ್‌ಹ್ಯಾಮ್ ಕಾಲುವೆ ಪ್ರಮುಖ ಪಾತ್ರ ವಹಿಸುತ್ತಿತ್ತು ಎಂದು ಕೂಡ ಆ ಪುಸ್ತಕ ಹೇಳಿದೆ.

  ಮದ್ರಾಸಿನ ಅಗತ್ಯ
  ಮದ್ರಾಸಿಗೆ ಉತ್ತಮ ನೀರು ನಿರ್ವಹಣೆ ಅಗತ್ಯವಾಗಿದ್ದು, ಪ್ರಸ್ತುತ ಕಾಲುವೆ ಅದರಲ್ಲಿ ಸಹಕರಿಸುತ್ತದೆ ಎಂದು ಆರ್ಥರ್ ಕಾಟನ್ ಹೇಳಿದ್ದಾರೆ. ೧೮೧೩ರಿಂದ ೬೪ ವರ್ಷಗಳ ಅಂಕಿ-ಅಂಶಗಳನ್ನು ಉಲ್ಲೇಖಿಸಲಾಗಿದೆ. ಚೆನ್ನೈನಲ್ಲಿ ಮಳೆ ಪ್ರಮಾಣದಲ್ಲಿ ಭಾರೀ ಅಂತರ ಇರುತ್ತದೆ. ಉದಾಹರಣೆಗೆ, ೧೮೨೭ರಲ್ಲಿ ೮೮.೪೧ ಇಂಚು ಮಳೆ ಸುರಿದರೆ ೧೮೩೨ರಲ್ಲಿ ಕೇವಲ ೧೮.೪೫ ಇಂಚು ಮಳೆ ಬಂದಿತ್ತು. ಬಕ್ಕಿಂಗ್‌ಹ್ಯಾಮ್ ಕಾಲುವೆ ಉತ್ತಮ ನೀರು ನಿರ್ವಹಣೆಯನ್ನೂ ಮಾಡುತ್ತಾ ಬಂದಿತ್ತು.

  ಚೆನ್ನೈ ಮಧ್ಯಭಾಗದಲ್ಲಿ ಹರಿಯುವ ಕೂವಮ್ ನದಿಯು ಕಾಲುವೆ ಮತ್ತು ಬಂಗಾಳಕೊಲ್ಲಿಗಳನ್ನು ಜೋಡಿಸುತ್ತದೆ. ಕೂವಮ್‌ನ ಉತ್ತರದ್ದು ಉತ್ತರ ಬಕ್ಕಿಂಗ್‌ಹ್ಯಾಮ್ ಕಾಲುವೆಯಾದರೆ ದಕ್ಷಿಣಭಾಗ ದಕ್ಷಿಣ ಬಕ್ಕಿಂಗ್‌ಹ್ಯಾಮ್‌ಗೆ ಸೇರಿದೆ. ಕಾಲುವೆಯ ೨೫೭ ಕಿ.ಮೀ. ಆಂಧ್ರಪ್ರದೇಶದಲ್ಲಿದ್ದರೆ ೧೬೩ ಕಿ.ಮೀ. ತಮಿಳುನಾಡಿನಲ್ಲಿದೆ. ಸುಮಾರು ೩೧ ಕಿ.ಮೀ. ಚೆನ್ನೈ ನಗರದೊಳಗಿದೆ.

  ಬಕ್ಕಿಂಗ್‌ಹ್ಯಾಮ್ ಕಾಲುವೆಯ ಮೂಲಕ ವಿಜಯವಾಡ ಮತ್ತು ಚೆನ್ನೈ ನಡುವೆ ಸರಕುಸಾಗಾಟ ದೊಡ್ಡ ಪ್ರಮಾಣದಲ್ಲೇ ನಡೆದಿತ್ತು. ಆದರೆ ಈಗ ಅದೆಲ್ಲವೂ ಗತವೈಭವ. ಕೆರೆ-ಸರೋವರಗಳು ನಿಧಾನವಾಗಿ ಕಾಲುವೆಯೊಂದಿಗೆ ಸಂಪರ್ಕ ಕಳೆದುಕೊಂಡವು. ಇದರಿಂದ ಅಂತರ್ಜಲ ಮತ್ತು ಕೆರೆಗಳ ಪೋಷಣೆಯೂ ಕಡಮೆಯಾಯಿತು. ದಿ ಹಿಂದೂ ದಿನಪತ್ರಿಕೆ ಮೇ ೧೦, ೧೯೦೦ರ ಒಂದು ಲೇಖನದಲ್ಲಿ ಕೆರೆ-ಸರೋವರಗಳು ತುಂಬಾ ಕಡಮೆ ಇವೆ ಮತ್ತು ಆಳವಿಲ್ಲ. ಅವು ಹೆಚ್ಚೇನೂ ನೀರನ್ನು ಹಿಡಿದಿಡಲಾರವು ಎಂದು ಹೇಳಿತ್ತು. ಸ್ವಾತಂತ್ರ್ಯಾನಂತರ ಬಕ್ಕಿಂಗ್‌ಹ್ಯಾಮ್ ಕಾಲುವೆಯ ಬಳಕೆ ಕ್ರಮೇಣ ಕಡಮೆ ಆಯಿತು. ಅದರ ಒತ್ತುವರಿ ನಡೆಯಿತು; ಕಾಲುವೆ ನೀರಿಗೆ ಕಸಹಾಕುವ ಪ್ರವೃತ್ತಿ ಹೆಚ್ಚಿತು. ಕಾಲುವೆಯ ಸರಿಯಾದ ನಿರ್ವಹಣೆ ನಡೆಯಲಿಲ್ಲ. ೧೯೬೫-೬೬ ಮತ್ತು ೧೯೭೬ರ ಚಂಡಮಾರುತಗಳು ಕಾಲುವೆಗೆ ಬಹಳಷ್ಟು ಹಾನಿ ಎಸಗಿದವು. ಚೆನ್ನೈ ನಗರದೊಳಗೆ ಒಳಚರಂಡಿ ನೀರು ಮತ್ತು ಕೈಗಾರಿಕೆಗಳ ತ್ಯಾಜ್ಯನೀರು ಕಾಲುವೆಗೆ ಸೇರಿ ಅದು ಪೂರ್ತಿ ಮಲಿನವಾಯಿತು. ಹೂಳು ತುಂಬಿ ನೀರು ಮುಂದೆ ಹರಿಯದಾಯಿತು; ಕಾಲುವೆ ಮಲೇರಿಯ ಮುಂತಾದ ರೋಗ ಹರಡುವ ಸೊಳ್ಳೆಗಳ ಆವಾಸಸ್ಥಾನವಾಯಿತು. ಉತ್ತರ ಚೆನ್ನೈ ಉಷ್ಣವಿದ್ಯುತ್ ಸ್ಥಾವರವು (ಎನ್‌ಸಿಟಿಪಿ) ತನ್ನ ಬಿಸಿನೀರು ಮತ್ತು ಹಾರುಬೂದಿಗಳನ್ನು ಕಾಲುವೆಗೇ ಬಿಡುತ್ತಿದೆ.

  ಕೆಲವು ವರ್ಷಗಳ ಹಿಂದೆ ದಕ್ಷಿಣ ಬಕ್ಕಿಂಗ್‌ಹ್ಯಾಮ್‌ನ ೧೩ ಕಿ.ಮೀ. ಅಷ್ಟು ಭಾಗವನ್ನು ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಆಯೋಗದ ನೆರವಿನೊಂದಿಗೆ ನೂರು ಮೀ. ಅಷ್ಟು ಅಗಲಗೊಳಿಸಲಾಯಿತು. ಆದರೆ ನಿರಂತರವಾದ ಮೇಲ್ತನಿಖೆ ಇಲ್ಲವಾದ ಕಾರಣ ಕಾಲುವೆಗೆ ಕಸ ಸುರಿಯುವುದಾಗಲಿ, ಒಳಚರಂಡಿ ನೀರನ್ನು ಬಿಡುವುದಾಗಲಿ ನಿಲ್ಲಲೇ ಇಲ್ಲ.

  ಪ್ರಕಟಣೆ ಮಾತ್ರ
  ಜನವರಿ ೧, ೨೦೦೧ರಂದು ಭಾರತ ಸರ್ಕಾರ ಕಾಲುವೆ ಹಾಗೂ ಚೆನ್ನೈನ ಇತರ ಜಲಮಾರ್ಗಗಳಿಗೆ ಒಳಚರಂಡಿ ನೀರು ಬಿಡುವುದನ್ನು ತಡೆಯುವುದು, ಕಾಲುವೆಯ ಹೂಳೆತ್ತಿ ನೀರಿನ ಹರಿವನ್ನು ಸರಿಪಡಿಸುವ ಬಗ್ಗೆ ಯೋಜನೆಯೊಂದನ್ನು ಆರಂಭಿಸಿತು. ನಿಜವೆಂದರೆ, ಈ ಕಾಲುವೆಯ ಪುನರುಜ್ಜೀವನದ ಬಗ್ಗೆ ಯೋಜನೆ ಹಾಗೂ ಪ್ರಕಟಣೆಗಳಿಗೇನೂ ಕೊರತೆಯಿಲ್ಲ. ಆದರೆ ಪರಿಣಾಮಕಾರಿಯಾಗಿ ಏನೂ ಜಾರಿಯಾಗಿಲ್ಲ. ನಗರದ ತ್ಯಾಜ್ಯ ಸಹಿತವಾದ ಒಳಚರಂಡಿ ನೀರು ಸೇರುತ್ತಲೇ ಇದೆ. ದಡಗಳಲ್ಲಿ ಕಸ ಮಾತ್ರವಲ್ಲ; ಪ್ರಾಣಿಗಳ ಶವವನ್ನೂ ಎಸೆಯುತ್ತಾರೆ. ೨೦೦೬ರಲ್ಲಿ ಪ್ರಸ್ತಾವವು ಪ್ರಕಟಗೊಂಡು, ೨೦೦೮ರಲ್ಲಿ ಅಂತಿಮರೂಪ ಪಡೆದ, ರಾಷ್ಟ್ರೀಯ ಜಲಮಾರ್ಗ ಯೋಜನೆಯು ಬಕ್ಕಿಂಗ್‌ಹ್ಯಾಮ್ ಕಾಲುವೆಯನ್ನು ಇತರ ಕಾಲುವೆಗಳೊಂದಿಗೆ ಜೋಡಿಸುವ ಪ್ರಸ್ತಾವವನ್ನು ಒಳಗೊಂಡಿದೆ; ಆದರೆ ಅದು ಈ ತನಕ ಕಾಗದದ ಮೇಲಷ್ಟೇ ಇದೆ. ೫೦೦ ಕೋಟಿ ರೂ. ವೆಚ್ಚದಲ್ಲಿ ಕಾಲುವೆಯಲ್ಲಿ ೨ ಕಿ.ಮೀ. ಅಷಟ್ಉ ಹೂಳೆತ್ತಿ ಸರಕು ಸಾಗಿಸುವ ಬಾರ್ಜ್‌ಗಳು ಸರಾಗವಾಗಿ ಸಾಗುವಂತೆ ಮಾಡಬೇಕೆನ್ನುವ ಪ್ರಸ್ತಾವ ೨೦೦೨ರಲ್ಲಿ ಸೇರಿದಂತೆ ಅನೇಕ ಸಲ ಬಂದಿತ್ತು. ಚೆನ್ನೈ ಒಳಗಿನ ಭಾಗಕ್ಕೆ ಸಂಬಂಧಪಟ್ಟಂತೆ ಅದು ಸಾಧ್ಯವೇ ಎಂದು ಕೂಡ ಕೇಳಲಾಗಿತ್ತು.

  ೧೯೬೦ರ ದಶಕದ ಒಂದು ಭೀಕರ ಚಂಡಮಾರುತದಿಂದ ಕಾಲುವೆಯ ದಂಡೆಗಳಿಗೆ ವಿಪರೀತ ಹಾನಿಯಾಯಿತು; ಅದು ತನಕ ನಗರದ ೮ ಕಿ.ಮೀ. ಭಾಗದಲ್ಲಿ ಕೂಡ ದೋಣಿಗಳು ಸಂಚರಿಸುತ್ತಿದ್ದವು. ಕಾಲುವೆಯ ಅಕ್ಕಪಕ್ಕದಲ್ಲಿ ಕೊಳಗೇರಿ ನಿವಾಸಿಗಳು ಮನೆಮಾಡುತ್ತಲೇ ಇದ್ದರು. ನಗರದ ಒಳಚರಂಡಿಗಳ ಜೋಡಣೆಯಿಂದಾಗಿ ಜಲಮಾರ್ಗ ಕೊಳೆನೀರಿನ ಚರಂಡಿಯಾಗಿ ಮಾರ್ಪಾಟಾಯಿತು. ಕುತೂಹಲದ ಸಂಗತಿಯೆಂದರೆ ಚೆನ್ನೈ ನಗರದ ಹೊರಭಾಗದಲ್ಲಿ ಅನಂತರವೂ ಶುದ್ಧನೀರು ಹರಿಯುವುದನ್ನು ಕಾಣಬಹುದಿತ್ತು.


  ೧೯೮೦ರ ದಶಕದ ಹೊತ್ತಿಗೆ ಕಾಲುವೆಯ ನಗರದ ಭಾಗದಲ್ಲಿ ನೀರು ಬತ್ತಿಹೋಯಿತು. ಆಗ ಕಾಲುವೆಯ ಮೇಲ್ಭಾಗದಲ್ಲಿ ಸಾಮೂಹಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯ ((Mass Rapid Transport System -ಎಂಆರ್‌ಟಿಎಸ್) ಮಾರ್ಗವನ್ನು ಅಳವಡಿಸಲು ನಿರ್ಧರಿಸಿದರು. ನಗರದ ರಾಜಕಾಲುವೆಗಳ ಬಗ್ಗೆ ಕಾಳಜಿ ಹೊಂದಿದ್ದವರು ಮಳೆಗಾಲದಲ್ಲಿ ಕಾಲುವೆ ಆ ಕೆಲಸವನ್ನು ಉತ್ತಮವಾಗಿ ನಿರ್ವಹಿಸುತ್ತದೆ; ಎಂಆರ್‌ಟಿಎಸ್‌ನಿಂದ ಅದಕ್ಕೆ ತೊಂದರೆ ಆಗಬಹುದು ಎಂದರು. ಆದರೆ ಅದನ್ನೂ ಅಲಕ್ಷಿಸಿ ಕಾಲುವೆಯಲ್ಲಿ ಅದರ ಪಿಲ್ಲರ್‌ಗಳನ್ನು ಹಾಕಿದರು; ಕೆಲವು ಕಡೆ ಅದರ ನಿಲ್ದಾಣಗಳು ಕೂಡ ಬಂದು ಕಾಲುವೆಯ ಒತ್ತುವರಿ ನಡೆಯಿತು. ಕೆಲವು ಭಾಗಗಳಲ್ಲಿ ಕಾಲುವೆಯ ಅಗಲ ೫೦ ಮೀ.ಗಿಂತ ಕಡಮೆ ಆಯಿತು; ಕಾಲುವೆಯ ಎರಡೂ ಕಡೆ ಪ್ರವಾಹ ಬರಲು ಆರಂಭವಾಯಿತು. ಅದಲ್ಲದೆ ಎಂಆರ್‌ಟಿಎಸ್‌ನ ಪಿಲ್ಲರ್‌ಗಳಿಂದಾಗಿ ಕಾಲುವೆಯ ಪುನರುಜ್ಜೀವನ ಕಷ್ಟವೆನಿಸಿತು. ಬಹಳಷ್ಟು ಕಡೆ ಆ ಮಾರ್ಗ ಜಲಮಾರ್ಗದ ಮೇಲೆಯೇ ಹೋಗುತ್ತದೆ. ಕಾಲುವೆಯ ವಿಸ್ತರಣೆ (ಅಗಲಗೊಳಿಸುವುದು) ಅಥವಾ ಹೂಳೆತ್ತುವುದಕ್ಕೆ ಪಿಲ್ಲರ್‌ಗಳು ತಡೆಯೊಡ್ಡಿವೆ. ಸರ್ಕಾರದ ವಿವಿಧ ಇಲಾಖೆಗಳು ಪರಸ್ಪರ ಹೊಂದಾಣಿಕೆ
  ಇಲ್ಲದೆ ಕೆಲಸ ಮಾಡುವುದಕ್ಕೆ ಅದೊಂದು ಉದಾಹರಣೆಯಾಯಿತು.

  ಸದ್ಯದ ಸ್ಥಿತಿಯಲ್ಲಿ ಪ್ರಸ್ತಾವಿತ ರಾಷ್ಟ್ರೀಕರಣ ಮತ್ತು ಅಭಿವೃದ್ಧಿ ಯೋಜನೆಯಿಂದ ಲಾಭವಾಗುವುದು ಚೆನ್ನೈ ಮಹಾನಗರದ ಹೊರಗಿನವರಿಗೆ ಮಾತ್ರ ಎಂದು ಅಭಿಪ್ರಾಯಪಡಲಾಗಿದೆ. ೨೦೦೨ರ ಯೋಜನೆಯಿಂದ ಇದು ಸ್ಪ?ವಾಗಿದೆ. ಕಾಲುವೆಯ ಜಾಲವನ್ನು ರಸ್ತೆವ್ಯವಸ್ಥೆಯೊಂದಿಗೆ ಜೋಡಿಸಬೇಕು ಎಂದರೆ ನಗರದೊಳಗೆ ಅದು ಕಾಲುವೆಯನ್ನು ಮುಟ್ಟುವುದೇ ಇಲ್ಲ. ಒಟ್ಟಿನಲ್ಲಿ ಬಕ್ಕಿಂಗ್‌ಹ್ಯಾಮ್ ಕಾಲುವೆಯ ಪುನರುಜ್ಜೀವನದ ಆಸೆ ಹೊಂದಿದ್ದವರಿಗೆ ಈಗ ನಿರಾಶೆ ಕವಿದಿದೆ. ೧೯೯೬ರ ಹೊತ್ತಿಗೆ ಎಂಆರ್‌ಟಿಎಸ್ ಅನ್ನು ತಡೆಯುವ ಪ್ರಯತ್ನವಾಗಿ ನ್ಯಾಯಾಲಯದಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡಲಾಯಿತು; ಆದರೆ ಕಾಲುವೆಗೆ ಮಾರಕವಾದ ಯೋಜನೆಯನ್ನು ತಡೆಯಲು ಸಾಧ್ಯವಾಗಲಿಲ್ಲ. ಈಗ ಬಕ್ಕಿಂಗ್‌ಹ್ಯಾಮ್ ಕಾಲುವೆ ಚೆನ್ನೈನ ಅತಿ ಮಲಿನ ನೀರು ಸಾಗುವ ಮೂರು ಪ್ರಮುಖ ಮಾರ್ಗಗಳಲ್ಲಿ ಒಂದಾಗಿದೆ. ನಗರದಲ್ಲಿ ಪ್ರತಿದಿನ ಸುಮಾರು ೫೫೦ ಲಕ್ಷ ಲೀಟರ್ ಸಂಸ್ಕರಿಸದಿರುವ ಒಳಚರಂಡಿ ನೀರು ಹರಿದುಹೋಗುತ್ತದೆಂದು ಅಂದಾಜು ಮಾಡಲಾಗಿದ್ದು, ಅದರಲ್ಲಿ ಸುಮಾರು ಶೇಕಡಾ ೬೦ರಷ್ಟು ಕೊಳೆನೀರಿಗೆ ಇದೇ ಮಾರ್ಗವಾಗಿದೆ; ಈ ನೀರಿನಲ್ಲಿ ಚೆನ್ನೈ ಮಹಾನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಸಿಎಂಡಬ್ಲುಎಸ್‌ಎಸ್‌ಬಿ) ಬಿಡುವ ನೀರು ಕೂಡ ಸೇರಿದೆ.

  ಸಿಯೋಲ್ ಕಂಡ ಯಶಸ್ಸು
  ಕುತೂಹಲಕ್ಕೊಂದು ಹೋಲಿಕೆ ಕೊಡುವುದಾದರೆ, ದಕ್ಷಿಣ ಕೊರಿಯಾದ ಸಿಯೋಲ್ ನಗರ ತನ್ನ ಜಲಮಾರ್ಗವನ್ನು ನಿರ್ವಹಿಸಿದ ಕ್ರಮವನ್ನು ಗಮನಿಸಬಹುದು. ಅಲ್ಲಿ ಕೂಡ ಚೆನ್ನೈ ರೀತಿಯಲ್ಲೇ ನಗರದ ಮಧ್ಯೆ ಚಿಯೋಂಗ್ ಯೆಚೋನ್ ಎನ್ನುವ ಕಾಲುವೆ ಹರಿಯುತ್ತದೆ. ಸಿಯೋಲ್ ಜನಸಂಖ್ಯೆ ಒಂದು ಕೋಟಿಗೂ ಅಧಿಕ. ೧೮ನೇ ಶತಮಾನದ ಕೊನೆಯ ಹೊತ್ತಿಗೇ ಇದ್ದ ಆ ಕಾಲುವೆಯನ್ನು ನಗರದ ಜನಸಂಖ್ಯೆ ಬೆಳೆದಂತೆ ಅಲಕ್ಷಿಸಲಾಗಿತ್ತು. ತೆರೆದ ಒಳಚರಂಡಿಯ ಸ್ವರೂಪ ಪಡೆದ ಅದನ್ನು ಸ್ವಚ್ಛಗೊಳಿಸುವ ಬದಲು ಅಧಿಕಾರಿಗಳು ಕಾಂಕ್ರೀಟ್ ಹಾಸಿನಿಂದ ಮುಚ್ಚಲು ತೀರ್ಮಾನಿಸಿದರು (೧೯೭೭). ಮುಚ್ಚಿದಾಗ ಅದರ ಮೇಲೆ ೬ ಕಿ.ಮೀ. ರಸ್ತೆಯೂ ಆಯಿತು. ಆದರೆ ಅದರಿಂದ ಸಮಸ್ಯೆ ಹೆಚ್ಚಿತು.

  ೨೦೦೨ರಲ್ಲಿ ಅಧಿಕಾರಕ್ಕೆ ಬಂದ ಸಿಯೋಲ್‌ನ ಹೊಸ ಮೇಯರ್ ಕಾಲುವೆಯ ಪುನರುಜ್ಜೀವನವನ್ನು ಕೈಗೊಂಡು ಮೇಲಿನ ರಸ್ತೆಯನ್ನು ಒಡೆದರು. ಕಾಂಕ್ರೀಟ್ ಮುಚ್ಚಿಗೆಯನ್ನು ತೆಗೆದಾಗ ಜಲಮಾರ್ಗದ ಪುನರುಜ್ಜೀವನವಾಯಿತು. ಫುಟ್‌ಪಾತ್‌ಗಳು ಬಂದವು. ಅದೊಂದು ಸುಂದರ ಸಾರ್ವಜನಿಕ ಸ್ಥಳವಾಗಿ ಪ್ರವಾಸಿಗರನ್ನೂ ಆಕರ್ಷಿಸಿತು. ಪ್ರತಿದಿನ ಸುಮಾರು ೯೦ ಸಾವಿರ ಜನ ಅಲ್ಲಿಗೆ ಭೇಟಿ ಕೊಡುತ್ತಾರಂತೆ. ಒಂದು ಉತ್ತಮ ನಗರಾಭಿವೃದ್ಧಿ ಯೋಜನೆಯಾಗಿ ಅದು ಜಾಗತಿಕ ಶ್ಲಾಘನೆಯನ್ನೂ ಗಳಿಸಿತು. ಅಲ್ಲಿನ ನೈಸರ್ಗಿಕ ನೀರಿನ ಹರಿವನ್ನು ದಕ್ಷ ಒಳಚರಂಡಿ ಜಾಲವಾಗಿ ಅಭಿವೃದ್ಧಿಪಡಿಸಲಾಗಿದೆ.

  ಚೆನ್ನೈ ಕಥೆ ಇದಕ್ಕೆ ವಿರುದ್ಧವಾಗಿದೆ. ಬಕ್ಕಿಂಗ್‌ಹ್ಯಾಮ್ ಕಾಲುವೆ ನಗರದ ಆಚೆಗೂ ಹರಿಯುತ್ತಿದ್ದು, ಹೆಚ್ಚಿನ ಸಾಧ್ಯತೆಯನ್ನು ಒಳಗೊಂಡಿದೆ. ೧೯೬೦-೬೯ರ ನಡುವೆ ಒಮ್ಮೆ ಕಾಲುವೆ ಸುಧಾರಣೆಗೆ ಮನಸ್ಸು ಮಾಡಿ, ದೋಣಿಸಂಚಾರಕ್ಕೆ ಯೋಗ್ಯಗೊಳಿಸಲು ೬೦ ಲಕ್ಷ ರೂ. ಖರ್ಚು ಮಾಡಲಾಯಿತು. ಚಿಂತಾದ್ರಿಪೇಟೆ ಮತ್ತು ಮೈಲಾಪುರಗಳಲ್ಲಿ ವಾಪು (ಕಟ್ಟೆ) ನಿರ್ಮಿಸಿದರು; ದೋಣಿ ನಡೆಸುವವರಿಗೆ ವಿಶ್ರಾಂತಿಕೊಠಡಿಗಳೂ ಆದವು. ೧೯೬೯ರ ಹೊತ್ತಿಗೆ ಜನ ದೋಣಿಸಂಚಾರ ಮತ್ತು ಕಾಲುವೆ ಬದಿಯಲ್ಲಿ ವಾಕಿಂಗ್ ಮಾಡಬಹುದೆಂದು ಯೋಚಿಸುವಾಗ ಸರ್ಕಾರ ತನ್ನ ದಾರಿಯನ್ನು ಬದಲಿಸಿತು. ಲಾರಿಗಳು ಲಭ್ಯವಿರುವ ಕಾರಣ ಜನ ಈಗ ಕಾಲುವೆಯನ್ನು ಬಳಸುವುದಿಲ್ಲ, ಆದ್ದರಿಂದ ಅದರ ಸುಧಾರಣೆ ಬೇಡವೆಂದು ತೀರ್ಮಾನಿಸಿ, ಕಾಲುವೆ ಇರುವಲ್ಲಿ ಎಂಆರ್‌ಟಿಎಸ್ ರೈಲ್ವೇ ಮಾರ್ಗ ಹಾಕಿದರು.

  ಸುನಾಮಿಯಿಂದ ರಕ್ಷಣೆ
  ಇದೆಲ್ಲದರ ನಡುವೆ, ೨೦೦೪ರ ಡಿಸೆಂಬರ್‌ನಲ್ಲಿ ಬಂಗಾಳಕೊಲ್ಲಿ ಕರಾವಳಿಯನ್ನು ಅಪ್ಪಳಿಸಿದ ಸುನಾಮಿಯ ವೇಳೆ ಬಕ್ಕಿಂಗ್‌ಹ್ಯಾಮ್ ಕಾಲುವೆ ಸಮುದ್ರದ ಅಲೆಗಳ ಕೋಪವನ್ನು ತಣಿಸಿ ಆಂಧ್ರ, ತಮಿಳುನಾಡುಗಳ ಸಾವಿರಾರು ಮೀನುಗಾರರ ಜೀವವನ್ನು ಉಳಿಸಿತು. ಹೈದರಾಬಾದಿನ ರಾಷ್ಟ್ರೀಯ ಭೂಭೌತಿಕ ಸಂಸ್ಥೆಯ ವಿಜ್ಞಾನಿ ಡಾ| ಬಿ. ಬ್ರಹ್ಮಲಿಂಗೇಶ್ವರರಾವ್ ಅವರು ಕರೆಂಟ್ ಸಯನ್ಸ್ ಪತ್ರಿಕೆಯ ಲೇಖನದಲ್ಲಿ ಅದನ್ನು ದಾಖಲಿಸಿದ್ದಾರೆ.

  ಕರಾವಳಿ ಪ್ರದೇಶದ ೩೦೦ ಕಿ.ಮೀ.ನ? ಉದ್ದಕ್ಕೆ ಭೇಟಿ ನೀಡಿದ ಅವರು ಕಾಪು ವಲಯವಾಗಿ (buffer zone) ಈ ಕಾಲುವೆ ಕೆಲಸ ಮಾಡಿದ್ದನ್ನು ಗುರುತಿಸಿದರು. ಹಿಂದೂಮಹಾಸಾಗರದಲ್ಲಿ ಸಂಭವಿಸಿದ ಆ ಸುನಾಮಿಯ ವೇಳೆ ಬಕ್ಕಿಂಗ್‌ಹ್ಯಾಮ್ ಕಾಲುವೆ ಕಾಪು ವಲಯದಂತೆ ಕಾರ್ಯನಿರ್ವಹಿಸಿ ಕರಾವಳಿಯ ಸುಮಾರು ೩೧೦ ಕಿ.ಮೀ. ಉದ್ದಕ್ಕೂ ಸುನಾಮಿ ಅಲೆಗಳನ್ನು ನಿಯಂತ್ರಿಸಿತು (ಪೆದ್ದಗಂಜಾಂನಿಂದ ಚೆನ್ನೈವರೆಗೆ). ಕರಾವಳಿಯ ಉದ್ದಕ್ಕೂ ಕಾಲುವೆಯಲ್ಲಿ ಸುನಾಮಿ ನೀರು ತುಂಬಿದ್ದು, ಕೆಲವು ಕಡೆಗಳಲ್ಲಿ ಉಕ್ಕಿ ಹರಿದದ್ದೂ ಇದೆ; ಆದರೆ ಕೇವಲ ೧೦-೧೫ ನಿಮಿ?ಗಳಲ್ಲಿ ಆ ನೀರು ಸಮುದ್ರಕ್ಕೆ ವಾಪಸು ಹರಿದುಹೋಯಿತೆಂದು ತಮ್ಮ ವರದಿಯಲ್ಲಿ ತಿಳಿಸಿದ ಡಾ| ರಾವ್ ಈ ಕಾರಣದಿಂದ ಆಂಧ್ರ ಕರಾವಳಿ ಮತ್ತು ಚೆನ್ನೈ ಭಾಗದಲ್ಲಿ ಬಹಳಷ್ಟು ಮೀನುಗಾರರ ಜೀವ ಉಳಿಯಿತು ಎಂದಿದ್ದಾರೆ. ಸುನಾಮಿ ಅಲೆಗಳು ತಂದುಹಾಕಿದ ಮಣ್ಣು-ಕೆಸರು ತೆಗೆಯುವುದಕ್ಕೂ ಕಾಲುವೆಯಿಂದ ಸಹಾಯವಾಯಿತು. ಕಾಲುವೆಯ ಎರಡೂ ದಂಡೆಯ ಗಿಡಮರಗಳು ಕೂಡ ಸುನಾಮಿಯ ಅಬ್ಬರವನ್ನು ಕುಗ್ಗಿಸಿದವು; ಅದರಿಂದಾಗಿ ಹಲವು ಊರುಗಳಲ್ಲಿ ಹಾನಿಯು ಕನಿಷ್ಠ ಪ್ರಮಾಣದ್ದಾಗಿತ್ತು ಎಂದ ಡಾ| ಬ್ರಹ್ಮಲಿಂಗೇಶ್ವರ ರಾವ್, ಮುಂದೆ ಸಂಭವಿಸಬಹುದಾದ ಸುನಾಮಿಯಿಂದ ರಕ್ಷಣೆ ಪಡೆಯುವ ಸಲುವಾಗಿ ಈ ಕಾಲುವೆಯನ್ನು ವೇದಾರಣ್ಯಂವರೆಗೆ ಮುಂದುವರಿಸಬೇಕು ಎಂದು ಶಿಫಾರಸು ಮಾಡಿದ್ದಾರೆ. ಸುನಾಮಿ ವೇಳೆ ಸಂಭವಿಸಿದ ಭಾರೀ ಪ್ರಮಾಣದ ಸಾವು-ನೋವುಗಳನ್ನು ನೆನಪಿಸಿಕೊಂಡರೆ ಬಕ್ಕಿಂಗ್‌ಹ್ಯಾಮ್ ಕಾಲುವೆಯಿಂದ ಆಗಿರಬಹುದಾದ ಪ್ರಯೋಜನ ಮನದಟ್ಟಾಗುತ್ತದೆ.


  2015ರ ಪ್ರವಾಹ
  ೨೦೧೫ರ ನವೆಂಬರ್-ಡಿಸೆಂಬರ್‌ಗಳಲ್ಲಿ ಚೆನ್ನೈಯನ್ನು ಮುಳುಗಿಸಿದ ಭೀಕರ ಪ್ರವಾಹದ ಸಂಬಂಧವಾಗಿ ಕೂಡ ಬಕ್ಕಿಂಗ್‌ಹ್ಯಾಮ್ ಕಾಲುವೆಯ ಹೆಸರು ಪ್ರಸ್ತಾವಗೊಂಡಿದೆ. ದಕ್ಷಿಣ ಚೆನ್ನೈ ಭಾಗದಲ್ಲಿ ಕಾಲುವೆಯು ನೀರನ್ನು ಹೊರಹಾಕುತ್ತದೆ. ಬಕ್ಕಿಂಗ್‌ಹ್ಯಾಮ್‌ನಿಂದ ನೀರನ್ನು ಹೊರಹಾಕುವ ಒಂದು ವಿಭಾಜಕ ಕಾಲುವೆ ಬಕ್ಕಿಯಮ್ ಮಡುವು ಬಲ್ಲಿಂದ ಸಮುದ್ರದ ಕಡೆಗಿದ್ದರೆ ದಕ್ಷಿಣ ಚೆನ್ನೈಗೆ ನೆರೆಬಾಧೆ ಇರುವುದಿಲ್ಲವೆಂದು ೨೦೧೪ರ ಒಂದು ಸಿಎಜಿ ವರದಿ ಹೇಳಿತ್ತು. ೧೦೦ ಕೋಟಿ ರೂ. ವೆಚ್ಚದ ನರ್ಮ್ (ಎನ್‌ಯುಆರ್‌ಎಂ) ಯೋಜನೆಯ ಆ ಕಾಮಗಾರಿಯನ್ನು ಸರ್ಕಾರ ಕೈಬಿಟ್ಟಿತು. ಅದನ್ನು ಮಾಡಿದ್ದಲ್ಲಿ ದಕ್ಷಿಣ ಭಾಗದ ನೀರು ೩,೫೦೦ ಕ್ಯುಸೆಕ್ಸ್ ವೇಗದಲ್ಲಿ ಹೊರಹೋಗಿ ಪ್ರವಾಹ ಉಂಟಾಗುತ್ತಿರಲಿಲ್ಲವೆಂದು ಅಭಿಪ್ರಾಯ ಪಡಲಾಗಿದೆ. ಚೆನ್ನೈ ನಗರದಲ್ಲಿ ನೆರೆ ನಿಯಂತ್ರಣ ಯೋಜನೆ ಸರಿಯಾಗಿಲ್ಲವೆಂದು ಸಿಎಜಿ ವರದಿ ಬೊಟ್ಟುಮಾಡಿದೆ. ಅದಲ್ಲದೆ ಬಕ್ಕಿಂಗ್‌ಹ್ಯಾಮ್ ಕಾಲುವೆಯ ಒತ್ತುವರಿ ಕೂಡ ಆ ಭೀಕರ ಪ್ರವಾಹಕ್ಕೆ ಕಾರಣವಾಗಿತ್ತು. ಪ್ರಸ್ತುತ ಸುಪ್ರೀಂಕೋರ್ಟಿನ ರಾಷ್ಟ್ರೀಯ ಹಸಿರುಪೀಠದ (National Green Tribunal) ದಕ್ಷಿಣ ವಲಯವು ಬಕ್ಕಿಂಗ್‌ಹ್ಯಾಮ್ ಕಾಲುವೆಯ ಪುನರುಜ್ಜೀವನ, ಅದರಲ್ಲೂ ಪರಿಸರ ಸಮಸ್ಯೆಯ ಪರಿಹಾರಕ್ಕೆ ಶ್ರಮಿಸುತ್ತಿದೆ. ರಾಜಕಾಲುವೆ, ಅಕ್ರಮ ಒಳಚರಂಡಿ ಸಂಪರ್ಕ, ಕೊಳೆನೀರಿನ ಟ್ಯಾಂಕರ್ ಮುಂತಾಗಿ ಎಲ್ಲ ಕೊಳೆನೀರು ಕಾಲುವೆಗೆ ಸೇರದಂತೆ ತಡೆಯುವುದು ದೊಡ್ಡ ಸವಾಲಾಗಿದೆ. ಕಟ್ಟಡಗಳ (ನಿರ್ಮಾಣ ಮತ್ತು ನಾಶ) ವಿವಿಧತ್ಯಾಜ್ಯಗಳನ್ನು ಕಾಲುವೆ ಬದಿಯಲ್ಲಿ ಸುರಿಯುವುದನ್ನು ತಡೆಯಲು ಪೀಠ ಕ್ರಮಕೈಗೊಳ್ಳುತ್ತಿದೆ. ಕಾಲುವೆ ಗೋಡೆಯಿಂದ ಕೇವಲ ೧೦೦ ಮೀ. ದೂರದಲ್ಲಿ ಪಂಚತಾರಾ ಹೊಟೇಲ್(ತಾರಾಮಣಿ ಬಳಗ)ಗೆ ಅವಕಾಶ ನೀಡಿದ್ದು ಹೇಗೆಂದು ಪೀಠ ಪ್ರಶ್ನಿಸಿದೆ. ಎನ್‌ಜಿಟಿಯಲ್ಲಿ ದಾವೆ ಹೂಡಿದ ಜವಾಹರ್‌ಲಾಲ್ ?ಣ್ಮುಗಂ ಅವರು ಈ ಪ್ರಕ್ರಿಯೆ ಒಂದು ಜನಾಂದೋಲನ ಆಗದ ಹೊರತು ಕಾಲುವೆಯ ಸ್ಥಿತಿ ಸುಧಾರಿಸಲಾರದು ಎಂದು ಹೇಳಿದ್ದಾರೆ. ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಿದ್ದಾರೆಂದು ಪೀಠ ನಿರಂತರ ನಿಗಾ ಇರಿಸಿದೆ. ಈಚಿನ ಒಂದು ವಿಚಾರಣೆಯಲ್ಲಿ ಅದು ಕಾಲುವೆಗೆ ತ್ಯಾಜ್ಯನೀರು ಬಿಟ್ಟವರ ಮೇಲೆ ಕೈಗೊಂಡ ಕ್ರಮದ ಬಗೆಗಿನ ವಸ್ತುಸ್ಥಿತಿ ವರದಿ ಸಲ್ಲಿಸುವಂತ ಸಿಎಂಡಬ್ಲುಎಸ್‌ಎಸ್‌ಬಿಗೆ ಸೂಚಿಸಿತ್ತು.

  ಕಾಲುವೆಯ ಒಳಭಾಗದಲ್ಲಿ ನಿರ್ಮಾಣಗೊಂಡಿದ್ದ ೩೦ ಅಡಿ ರಸ್ತೆಯನ್ನು ತೆಗೆಸುವ ಬಗ್ಗೆ ಪೀಠ ಕ್ರಮ ಕೈಗೊಂಡಿದೆ. ರಿಯಲ್ ಎಸ್ಟೇಟಿನವರು ಕಾಲುವೆ ಬಳಿ ಒಂದು ದೊಡ್ಡ ಪ್ರಾಜೆಕ್ಟ್ ಕೈಗೊಂಡಿದ್ದು, ಅದರಿಂದ ನೀರಿನ ಹರಿವಿಗೆ ತಡೆ ಉಂಟಾಗುತ್ತಿತ್ತು. ಅದಕ್ಕೆ ಅನುಮತಿ ನೀಡುವ ಮುನ್ನ ಅಧಿಕಾರಿಗಳು ಸೂಕ್ತ ತಪಾಸಣೆ ನಡೆಸಿರಲಿಲ್ಲ. ಎಲ್ಲ ನಿಯಮ ಉಲ್ಲಂಘಿಸಿದ ಕಾರಣ ಅನುಮತಿಗಳನ್ನು ವಜಾಗೊಳಿಸಬೇಕೆಂದು ಪೀಠದ ಮುಂದೆ ಕೋರಲಾಗಿತ್ತು. ಸುಮಾರು ೨೮ ಎಕ್ರೆ ಜಾಗವನ್ನು ಆಕ್ರಮಿಸಲು ಉದ್ದೇಶಿಸಿದ್ದ ಆ ಪ್ರಾಜೆಕ್ಟ್ ಕಾಲುವೆಯ ಸಮೀಪವೇ ಇತ್ತು. ಅದಕ್ಕೆ ಒಂದೇ ಪ್ರವೇಶ. ಒಟ್ಟಿನಲ್ಲೀಗ ಕಾಲುವೆಗಿರುವ ಏಕೈಕ ಆಶಾಕಿರಣವೆಂದರೆ ಎನ್‌ಜಿಟಿ ಎಂಬಂತಾಗಿದೆ. ಆಸಕ್ತರು ಅಂತಿಮ ಪರಿಣಾಮವನ್ನು ಎದುರುನೋಡುತ್ತಿದ್ದಾರೆ.

  ಸರ್ಕಾರದ ಜಲಮಾರ್ಗ-೪ ಘೋಷಣೆ (ನವೆಂಬರ್ ೨೦೦೮)ಯನ್ವಯ ಬಕ್ಕಿಂಗ್‌ಹ್ಯಾಮ್ ಕಾಲುವೆಯ ಪುನರುಜ್ಜೀವನ ಒಂದು ನೆಲೆಯಲ್ಲಿ ಆರಂಭವಾಯಿತು. ಭಾರತ ಒಳನಾಡು ಜಲಮಾರ್ಗ ಪ್ರಾಧಿಕಾರ (Waterways Authority of India) ದ ಆಶ್ರಯದಲ್ಲಿ ಈ ಯೋಜನೆ ಸೇರಿದ್ದು, ತಮಿಳುನಾಡು ಸರ್ಕಾರ ಕೂಡ ತನ್ನ ಜಲಸಂಪನ್ಮೂಲ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗಳ ಮೂಲಕ ಹೂಳೆತ್ತುವುದು, ಕಾಲುವೆಯನ್ನು ಅಗಲಗೊಳಿಸುವುದು ಮುಂತಾದ ಕೆಲಸಗಳನ್ನು ಕೈಗೊಳ್ಳುತ್ತಿದೆ. ರಾಜ್ಯ-ಕೇಂದ್ರ ಸಹಭಾಗಿತ್ವದ ನರ್ಮ್ ಅಡಿಯಲ್ಲಿ ದಕ್ಷಿಣ ಬಕ್ಕಿಂಗ್‌ಹ್ಯಾಮ್‌ನ ೧೩.೫ ಕಿ.ಮೀ. ಭಾಗದಲ್ಲಿ ವಿಸ್ತರಣೆ ನಡೆಯುತ್ತಿದೆ. ನರ್ಮ್ ಅಡಿಯಲ್ಲಿ ಜಲಮಾರ್ಗಗಳ ಸಮಗ್ರ ಅಭಿವೃದ್ಧಿಗೆ ೧,೪೪೮ ಕೋಟಿ
  ರೂ. ಒದಗಿಸಲಾಗಿದ್ದು, ಅದರಿಂದ ಬಕ್ಕಿಂಗ್‌ಹ್ಯಾಮ್ ಕಾಲುವೆಗೆ ಸಾಕಷ್ಟು ಹಣ ಸಿಗಬಹುದೆಂದು ನಿರೀಕ್ಷಿಸಲಾಗಿದೆ. ಆದರೆ ಚೆನ್ನೈನ ೭ ಕಿ.ಮೀ. ಭಾಗದಲ್ಲಿ ಜನದಟ್ಟಣೆ, ಒತ್ತುವರಿ, ಎಂಆರ್‌ಟಿಎಸ್‌ ಗಳಿಂದಾಗಿ ಏನನ್ನೂ ಮಾಡಲಾಗದ ಸ್ಥಿತಿಯಿದೆ.

  ಏನಿದ್ದರೂ ಸಿಯೋಲ್‌ನಲ್ಲಿ ಯಾವುದು ಸಾಧ್ಯವಾಗಿದೆಯೋ ಅದು ಚೆನ್ನೈಯಲ್ಲಿ ಅನುಷ್ಠಾನಕ್ಕೆ ಬರುವುದು ಕನಸಿನ ಮಾತು. ಅಂದರೆ ಬಕ್ಕಿಂಗ್‌ಹ್ಯಾಮ್ ಕಾಲುವೆಗೆ ಅದರ ಗತವೈಭವ ಮರಳುವುದು ಅಸಂಭವ ಎಂಬುದೇ ಹೆಚ್ಚು ಸರಿ.

  ಬಕ್ಕಿಂಗ್‌ಹ್ಯಾಮ್ ಕೆನಾಲ್ : ಹೀಗೊಂದು ಸುಂದರವಾದ ಕಾಲುವೆ ಇತ್ತು…

ರಾಫೇಲ್ ಖರೀದಿ : ವಿವಾದ ಬೇಡ
ರಾಫೇಲ್ ಖರೀದಿ : ವಿವಾದ ಬೇಡ

ಭವಿಷ್ಯದಲ್ಲಿ ಸೇನಾಪಡೆಗಳ ಮಟ್ಟ ಹೇಗಿರಬೇಕು; ನಮಗೆ ಯಾವೆಲ್ಲ ಫೈಟರ್ ವಿಮಾನಗಳ ಅಗತ್ಯವಿದೆ; ಅವುಗಳ ಜೀವಿತಾವಧಿಯ ವೆಚ್ಚ ವಿಶ್ಲೇಷಣೆ, ಹಂತಹಂತಗಳಲ್ಲಿ ವಾರ್ಷಿಕ ಉನ್ನತೀಕರಣ, ಅವುಗಳಿಗೆ ಹಣ ಒದಗಿಸುವುದು ಮುಂತಾದ ವಿಷಯಗಳ ಕುರಿತು ರಚನಾತ್ಮಕವಾದ ಚರ್ಚೆಯನ್ನು ನಡೆಸಬೇಕೇ ಹೊರತು ಗದ್ದಲ ಎಬ್ಬಿಸಿ ಗೊಂದಲ ನಿರ್ಮಿಸಬಾರದು;...

ವೇದಾರ್ಥಾನುಸಂಧಾನ ಮತ್ತು ವರ್ಣಚಿತ್ರ ಮಾಧ್ಯಮ
ವೇದಾರ್ಥಾನುಸಂಧಾನ ಮತ್ತು ವರ್ಣಚಿತ್ರ ಮಾಧ್ಯಮ

ಭಾರತೀಯ ಪಾರಂಪರಿಕ ಕಲೆಯ ಅನನ್ಯತೆಯೆಂದರೆ ಧಾರ್ಮಿಕತೆ ಮತ್ತು ಕಲೆಗಳ ಪರಸ್ಪರ ಅನ್ಯೋನ್ಯಾಶ್ರಯವನ್ನು ಚಿತ್ರಕಲೆ ಮತ್ತು ಶಿಲ್ಪಕಲೆಗಳು ಬಿಂಬಿಸಿರುವುದು. ಪಾರಲೌಕಿಕ ಜಿಜ್ಞಾಸೆ, ಧಾರ್ಮಿಕತೆ, ಕಲೆ – ಇವು ಮೂರೂ ಸಮ್ಮಿಳಿತವಾಗಿರುವುದು ಇಲ್ಲಿಯ ವಿಶೇಷತೆ. ಮಂತ್ರದರ್ಶನ, ತತ್ತ್ವಜಿಜ್ಞಾಸೆ, ಸೌಂದರ್ಯಾನುಭೂತಿ – ಇವು ಒಂದರ ಮೇಲೆ ಇನ್ನೊಂದು ಹೇಗೆ...

ಭವಿಷ್ಯದ ಶಿಕ್ಷಣಕ್ಕೆ ಒಂದು ಸಲಹೆ
ಭವಿಷ್ಯದ ಶಿಕ್ಷಣಕ್ಕೆ ಒಂದು ಸಲಹೆ

ಶಿಕ್ಷಣವ್ಯವಸ್ಥೆಯ ಕುರಿತು ಇಂದು ಸಾಕಷ್ಟು ಚಿಂತನ-ಮಂಥನಗಳು ನಡೆಯುತ್ತಿವೆ. ಅದರಲ್ಲಿ ಭಾರತದ ಶಿಕ್ಷಣವ್ಯವಸ್ಥೆಯು ಒಳಗೊಂಡಿರುವ ಕಲಿಕೆ ವಿಧಾನದ ಗುಣಮಟ್ಟ ಕಳಪೆ ಎನ್ನುವ ಮಾತು ವ್ಯಾಪಕವಾಗಿ ಕೇಳಬಂದಿದೆ. ಈ ನಡುವೆ ಕಂಡುಬರುವ ಆಶಾಕಿರಣವೆಂದರೆ ಹೊಸ ಪದ್ಧತಿಯೊಂದನ್ನು ಕಂಡುಹಿಡಿಯುವುದಕ್ಕೆ ಇದು ಸಕಾಲವಾಗಿದೆ; ವಿಶೇಷವಾಗಿ ಶಿಕ್ಷಣ ವ್ಯವಸ್ಥೆಯನ್ನು ನೌಕರಶಾಹಿಯ...

ಆದರ್ಶ ರಾಜಕೀಯ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ 
ಆದರ್ಶ ರಾಜಕೀಯ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ 

ಅದು ೧೯೫೭ರ ಸಂದರ್ಭ. ವಿದೇಶಾಂಗ ಖಾತೆಯನ್ನು ಸ್ವತಃ ಪ್ರಧಾನಿ ಜವಾಹರಲಾಲ್ ನೆಹರು ಅವರೇ ನಿರ್ವಹಿಸುತ್ತಿದ್ದರು. ವಿದೇಶಾಂಗ ಖಾತೆಯ ಕುರಿತು ಎರಡುಮೂರು ದಿನಗಳ ಸುದೀರ್ಘ ಚರ್ಚೆ ನಡೆಯಿತು. ಚರ್ಚೆಯ ಕೊನೆಯಲ್ಲಿ ಪ್ರತಿಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತ ಪ್ರಧಾನಿ ನೆಹರು ವಿದೇಶಾಂಗ ನೀತಿಯ ಕುರಿತು ಅಟಲ್‌ಜೀ ಅವರ ಅಭಿಪ್ರಾಯವನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದರು....

ಬಕ್ಕಿಂಗ್‌ಹ್ಯಾಮ್ ಕೆನಾಲ್ : ಹೀಗೊಂದು ಸುಂದರವಾದ ಕಾಲುವೆ ಇತ್ತು...
ಬಕ್ಕಿಂಗ್‌ಹ್ಯಾಮ್ ಕೆನಾಲ್ : ಹೀಗೊಂದು ಸುಂದರವಾದ ಕಾಲುವೆ ಇತ್ತು…

ಇಂದು ನಮ್ಮ ಸಮಾಜದಲ್ಲಿ ತಾಂಡವವಾಡುವ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಆಡಳಿತದ ಅಶಿಸ್ತು, ಅವ್ಯವಸ್ಥೆಗಳಿಂದ ರೋಸಿಹೋದ ಜನ ಇದಕ್ಕಿಂತ ಬ್ರಿಟಿಷರ ಆಳ್ವಿಕೆಯೇ ಒಳ್ಳೆಯದಿತ್ತು ಎಂದು ಆಗಾಗ ಉದ್ಗರಿಸುವುದನ್ನು ನಾವು ಕಾಣುತ್ತೇವೆ. ಸ್ವಾತಂತ್ರ್ಯಕ್ಕೆ ಯಾವುದೂ ಪರ್ಯಾಯವಲ್ಲ ಎಂಬುದು ನಿಜವಾದರೂ ಜನರಾಡುವ ಮೇಲಿನ ಮಾತಿನಲ್ಲಿ ಸತ್ಯಾಂಶವಿರುವುದು ಪರಾಂಬರಿಸಿದಾಗ ಗೋಚರವಾಗುತ್ತದೆ. ದೈನಂದಿನ ಆಡಳಿತದ ಶಿಸ್ತು-ವ್ಯವಸ್ಥೆಗಳ? ಅಲ್ಲ; ನಮ್ಮ ನೈಜಸಂಪತ್ತಾದ ನೆಲ-ಜಲಗಳ...

ರಾಫೇಲ್ ಖರೀದಿ : ವಿವಾದ ಬೇಡ
ರಾಫೇಲ್ ಖರೀದಿ : ವಿವಾದ ಬೇಡ

ಭವಿಷ್ಯದಲ್ಲಿ ಸೇನಾಪಡೆಗಳ ಮಟ್ಟ ಹೇಗಿರಬೇಕು; ನಮಗೆ ಯಾವೆಲ್ಲ ಫೈಟರ್ ವಿಮಾನಗಳ ಅಗತ್ಯವಿದೆ; ಅವುಗಳ ಜೀವಿತಾವಧಿಯ ವೆಚ್ಚ ವಿಶ್ಲೇಷಣೆ, ಹಂತಹಂತಗಳಲ್ಲಿ ವಾರ್ಷಿಕ ಉನ್ನತೀಕರಣ, ಅವುಗಳಿಗೆ ಹಣ ಒದಗಿಸುವುದು ಮುಂತಾದ ವಿಷಯಗಳ ಕುರಿತು ರಚನಾತ್ಮಕವಾದ ಚರ್ಚೆಯನ್ನು ನಡೆಸಬೇಕೇ ಹೊರತು ಗದ್ದಲ ಎಬ್ಬಿಸಿ ಗೊಂದಲ ನಿರ್ಮಿಸಬಾರದು;...

ವೇದಾರ್ಥಾನುಸಂಧಾನ ಮತ್ತು ವರ್ಣಚಿತ್ರ ಮಾಧ್ಯಮ
ವೇದಾರ್ಥಾನುಸಂಧಾನ ಮತ್ತು ವರ್ಣಚಿತ್ರ ಮಾಧ್ಯಮ

ಭಾರತೀಯ ಪಾರಂಪರಿಕ ಕಲೆಯ ಅನನ್ಯತೆಯೆಂದರೆ ಧಾರ್ಮಿಕತೆ ಮತ್ತು ಕಲೆಗಳ ಪರಸ್ಪರ ಅನ್ಯೋನ್ಯಾಶ್ರಯವನ್ನು ಚಿತ್ರಕಲೆ ಮತ್ತು ಶಿಲ್ಪಕಲೆಗಳು ಬಿಂಬಿಸಿರುವುದು. ಪಾರಲೌಕಿಕ ಜಿಜ್ಞಾಸೆ, ಧಾರ್ಮಿಕತೆ, ಕಲೆ – ಇವು ಮೂರೂ ಸಮ್ಮಿಳಿತವಾಗಿರುವುದು ಇಲ್ಲಿಯ ವಿಶೇಷತೆ. ಮಂತ್ರದರ್ಶನ, ತತ್ತ್ವಜಿಜ್ಞಾಸೆ, ಸೌಂದರ್ಯಾನುಭೂತಿ – ಇವು ಒಂದರ ಮೇಲೆ ಇನ್ನೊಂದು ಹೇಗೆ...

ಭವಿಷ್ಯದ ಶಿಕ್ಷಣಕ್ಕೆ ಒಂದು ಸಲಹೆ
ಭವಿಷ್ಯದ ಶಿಕ್ಷಣಕ್ಕೆ ಒಂದು ಸಲಹೆ

ಶಿಕ್ಷಣವ್ಯವಸ್ಥೆಯ ಕುರಿತು ಇಂದು ಸಾಕಷ್ಟು ಚಿಂತನ-ಮಂಥನಗಳು ನಡೆಯುತ್ತಿವೆ. ಅದರಲ್ಲಿ ಭಾರತದ ಶಿಕ್ಷಣವ್ಯವಸ್ಥೆಯು ಒಳಗೊಂಡಿರುವ ಕಲಿಕೆ ವಿಧಾನದ ಗುಣಮಟ್ಟ ಕಳಪೆ ಎನ್ನುವ ಮಾತು ವ್ಯಾಪಕವಾಗಿ ಕೇಳಬಂದಿದೆ. ಈ ನಡುವೆ ಕಂಡುಬರುವ ಆಶಾಕಿರಣವೆಂದರೆ ಹೊಸ ಪದ್ಧತಿಯೊಂದನ್ನು ಕಂಡುಹಿಡಿಯುವುದಕ್ಕೆ ಇದು ಸಕಾಲವಾಗಿದೆ; ವಿಶೇಷವಾಗಿ ಶಿಕ್ಷಣ ವ್ಯವಸ್ಥೆಯನ್ನು ನೌಕರಶಾಹಿಯ...

ಆದರ್ಶ ರಾಜಕೀಯ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ 
ಆದರ್ಶ ರಾಜಕೀಯ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ 

ಅದು ೧೯೫೭ರ ಸಂದರ್ಭ. ವಿದೇಶಾಂಗ ಖಾತೆಯನ್ನು ಸ್ವತಃ ಪ್ರಧಾನಿ ಜವಾಹರಲಾಲ್ ನೆಹರು ಅವರೇ ನಿರ್ವಹಿಸುತ್ತಿದ್ದರು. ವಿದೇಶಾಂಗ ಖಾತೆಯ ಕುರಿತು ಎರಡುಮೂರು ದಿನಗಳ ಸುದೀರ್ಘ ಚರ್ಚೆ ನಡೆಯಿತು. ಚರ್ಚೆಯ ಕೊನೆಯಲ್ಲಿ ಪ್ರತಿಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತ ಪ್ರಧಾನಿ ನೆಹರು ವಿದೇಶಾಂಗ ನೀತಿಯ ಕುರಿತು ಅಟಲ್‌ಜೀ ಅವರ ಅಭಿಪ್ರಾಯವನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದರು....

ಬಕ್ಕಿಂಗ್‌ಹ್ಯಾಮ್ ಕೆನಾಲ್ : ಹೀಗೊಂದು ಸುಂದರವಾದ ಕಾಲುವೆ ಇತ್ತು...
ಬಕ್ಕಿಂಗ್‌ಹ್ಯಾಮ್ ಕೆನಾಲ್ : ಹೀಗೊಂದು ಸುಂದರವಾದ ಕಾಲುವೆ ಇತ್ತು…

ಇಂದು ನಮ್ಮ ಸಮಾಜದಲ್ಲಿ ತಾಂಡವವಾಡುವ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಆಡಳಿತದ ಅಶಿಸ್ತು, ಅವ್ಯವಸ್ಥೆಗಳಿಂದ ರೋಸಿಹೋದ ಜನ ಇದಕ್ಕಿಂತ ಬ್ರಿಟಿಷರ ಆಳ್ವಿಕೆಯೇ ಒಳ್ಳೆಯದಿತ್ತು ಎಂದು ಆಗಾಗ ಉದ್ಗರಿಸುವುದನ್ನು ನಾವು ಕಾಣುತ್ತೇವೆ. ಸ್ವಾತಂತ್ರ್ಯಕ್ಕೆ ಯಾವುದೂ ಪರ್ಯಾಯವಲ್ಲ ಎಂಬುದು ನಿಜವಾದರೂ ಜನರಾಡುವ ಮೇಲಿನ ಮಾತಿನಲ್ಲಿ ಸತ್ಯಾಂಶವಿರುವುದು ಪರಾಂಬರಿಸಿದಾಗ ಗೋಚರವಾಗುತ್ತದೆ. ದೈನಂದಿನ ಆಡಳಿತದ ಶಿಸ್ತು-ವ್ಯವಸ್ಥೆಗಳ? ಅಲ್ಲ; ನಮ್ಮ ನೈಜಸಂಪತ್ತಾದ ನೆಲ-ಜಲಗಳ...

ಬೇರು ಮಣ್ಣುಗಳ ಜೀವಯಾನ....
ಬೇರು ಮಣ್ಣುಗಳ ಜೀವಯಾನ….

ಮಣ್ಣಿನಿಂದ ಮೇಲೆದ್ದು ಪುನಃ ಮಣ್ಣಿನೊಳಗೆ ನುಗ್ಗಿದಂತಿದ್ದ ಎರಡು ಬೇರುಗಳ ಕೆಳಗೆ ನುಸುಳುತ್ತಾ ಮಕ್ಕಳು ಏನನ್ನೋ ಹಾಡಿಕೊಳ್ಳುತ್ತಿದ್ದವು. ಈ ಭೂಮಿಯ ಮಣ್ಣನ್ನೆಲ್ಲ ಈ ಬೇರುಗಳೆ ಹಿಡಿದಿಟ್ಟಿರಬಹುದೆ? ಜಗದೀಶ್ವರನ ಮಗಳು ಒಂದು ಬೇರನ್ನು ಹಿಡಿದುಕೊಂಡು, “ಇದು ನನ್ನ ಬೇರು, ನಾನಿಲ್ಲಿಂದ ಯಾರನ್ನು ಹೋಗಲು ಬಿಡಲ್ಲ”...

ಕಾಣದ ಸಾಕ್ಷಿ
ಕಾಣದ ಸಾಕ್ಷಿ

1 `ಪಾರದರ್ಶಕ’ ಪತ್ರಿಕೆಯ ಸಂಪಾದಕ ೩೫ ವರ್ಷದ ರಘುವೀರ್ ಶೆಣೈ ತನ್ನ ದಿಟ್ಟತನಕ್ಕೆ ನಗರದಲ್ಲೇ ಹೆಸರುವಾಸಿಯಾದವನು. ಆ ಸಾಪ್ತಾಹಿಕ ಪ್ರಕಟಣೆ ಆರಂಭಿಸಿದ ಸ್ವಲ್ಪ ಸಮಯದಲ್ಲೇ ಅವನು ರಾಜಕೀಯ ಭ್ರ?ರನ್ನು ಬಯಲಿಗೆ ಎಳೆಯುವಲ್ಲಿ ಯಾವ ಆಮಿಷಕ್ಕೂ ಮಣಿಯದೇ ಎಂತಹದ್ದೇ ಸವಾಲನ್ನು ಬೇಕಾದರೂ ಎದುರಿಸಿ...

ದೊಡ್ಡವರಾಗಲು ಅಡ್ಡಮಾರ್ಗ
ದೊಡ್ಡವರಾಗಲು ಅಡ್ಡಮಾರ್ಗ

ನೀವು ದೊಡ್ಡ ಮನುಷ್ಯರೇ? ’ಭಾರೀ ಆಸಾಮಿ,’ ’ವಿ.ಆಯ್.ಪಿ.’ ಎನಿಸಬೇಕೆಂದು ನಿಮ್ಮ ಇಚ್ಛೆಯೆ ಮಾರ್ಗ ಬಲು ಸುಲಭ: “ಓಹೋ, ನಮಸ್ಕಾರ, ಬೆಳ್ಳುಳ್ಳಿಯವರೆ, ಈಗ ಸ್ಟೋನ್ ಆಂಡ್ ಸ್ಟೋನ್ ಕಂಪನಿಯಲ್ಲಿದ್ದೀರಾ? ನಿಮ್ಮ ಮ್ಯಾನೆಜರ್ ಕೋಲ್ಡ್‌ವಾಟರ್ ಹೇಗಿದ್ದಾರೆ?…. ಅವರ ಗುರುತು ಹೇಗಂದಿರಾ? ಓಹೋ, ನಾವು ಕಂಟೋನ್ಮೆಂಟ್‌ನಲ್ಲಿ...

ಎರಡು ಸಾಲಿನ ಬೆಲೆ
ಎರಡು ಸಾಲಿನ ಬೆಲೆ

ಶ್ರೇಷ್ಠಿ ನಾಣ್ಯಗಳನ್ನು ಎಣಿಸುತ್ತಿದ್ದ. ಆತನ ಮಗ, ಸುಮಾರು ಹತ್ತು ವ?ದವ, ಸನಿಯದಲ್ಲೆ ಆಟವಾಡಿಕೊಂಡಿದ್ದ. “ಅಪ್ಪಾಜಿ, ಯಾರೋ ಬಂದಿದ್ದಾರೆ. ಕವಿಗಳಂತೆ.” ಶ್ರೇಷ್ಠಿಯು ಗಹನವಾದ ಆಲೋಚನೆಯಲ್ಲಿದ್ದ. ಮಗನ ಮಾತು ಅವನ ಕಿವಿಯ ಮೇಲೆ ಬಿದ್ದಂತಿರಲಿಲ್ಲ. ಬೆರಳಿನ ತುದಿಯಲ್ಲಿ ಲೆಕ್ಕವನ್ನು ಮುಂದುವರೆಸಿದ್ದ. ಸ್ವಲ್ಪ ಸಮಯ ಕಳೆಯಿತು....

ಕರುಣಾಳು ಭಾ ಬೆಳಕೆ
ಕರುಣಾಳು ಭಾ ಬೆಳಕೆ

ದೊಡ್ಡದಾದ ಬಾಳೆಲೆ ಹರಡಿದ್ದರು. ಮಿಂದು ಬಂದು ಮಡಿಯಾದ ವಸ್ತ್ರದಲ್ಲಿದ್ದ ಅಪ್ಪಣ್ಣನೆದುರು ಊಟದೆಲೆ ಹಾಕಿದಾಗ ಘಂಟೆ ಇನ್ನೂ ಹನ್ನೊಂದು. ದೂರದಲ್ಲಿ ಕಂಬದ ಅಡ್ಡದಿಂದ, ಗೋಡೆಯ ಮಗ್ಗುಲಿಂದ, ಬಾಗಿಲ ಬುಡದಲ್ಲಿ, ಚಪ್ಪರದ ಮರೆಯಿಂದ, ಅಪ್ಪಣ್ಣನ ಊಟದ ವೈಖರಿಯನ್ನು ಕಾಣಲು ಹತ್ತಿಪ್ಪತ್ತು ಜೊತೆ ಕಣ್ಣುಗಳು ಇಣುಕುತ್ತಿದ್ದವು....

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ