ಆರಕ್ಷಣನೀತಿಯ ವಸ್ತುನಿಷ್ಠ ಪುನರ್ವಿಮರ್ಶೆಯಾಗಲಿ
ಕೆಲವು ಸಮಸ್ಯೆಗಳನ್ನು – ಅವುಗಳ ಜಟಿಲತೆಯ ಕಾರಣದಿಂದಲೋ ಅಥವಾ ಅವುಗಳ ರಾಜಕೀಯ ಲಾಭಾಸ್ಪದತೆಯ ಕಾರಣದಿಂದಲೋ – ಅನಿಶ್ಚಯ ಸ್ಥಿತಿಯಲ್ಲಿಯೆ ಮುಂದುವರಿಸುತ್ತ ಹೋಗುವ ಪರಿಪಾಟಿ ಬಂದಿದೆ. ಆರಕ್ಷಣೆ ಇಂತಹ ಒಂದು ವಿಷಯ. ಅದಕ್ಕೆ ಮುಖಾಮುಖಿಯಾಗಿ ಪರಿಹಾರವನ್ನರಸುವುದು ಜೇನುಗೂಡಿಗೆ ಕೈಹಾಕಿದಂತೆ ಎಂಬ ಭಾವನೆ ನೆಲೆಯೂರಿದೆ. ಕೆಲವು ಸಮುದಾಯಗಳು ಹಿಂದುಳಿದಿದ್ದ ಕಾರಣ ಅವುಗಳ ಉನ್ನತೀಕರಣಕ್ಕೆ ವಿಶೇಷ ವ್ಯವಸ್ಥೆಗಳ ಆವಶ್ಯಕತೆ ಇದೆಯೆಂಬುದನ್ನು ಇಡೀ ಸಮಾಜವೇ ಸಂವಿಧಾನರಚನೆಯ ದಿನಗಳಲ್ಲಿ ಒಪ್ಪಿತ್ತು. ಆದರೆ ಅಂತಹ ವಿಶೇಷ ಪೋಷಣೆ ಅನಿರ್ದಿಷ್ಟಾವಧಿಯದಾಗುವುದು ವ್ಯವಹಾರ್ಯವಲ್ಲ – ಎಂದು ಮನಗಂಡ ಸಂವಿಧಾನಕರ್ತರು ಆ ವಿಶೇಷ ಪೋಷಣವ್ಯವಸ್ಥೆಗೆ ಹತ್ತು ವರ್ಷಗಳ ಅವಧಿಮಿತಿಯನ್ನು ವಿಧಿಸಿದ್ದುದು ಔಚಿತ್ಯಪೂರ್ಣವಾಗಿದ್ದಿತು. ಆದರೆ ಆ ಸಂವಿಧಾನನಿರ್ದೇಶವನ್ನು ಕಳೆದ ಆರೂವರೆ ದಶಕಗಳುದ್ದಕ್ಕೂ ನಿರ್ಭಿಡೆಯಾಗಿ ಉಲ್ಲಂಘಿಸಲಾಗಿದೆ. ಸಮಾಜ ೨೦೨೨ರಲ್ಲಿಯೂ ೧೯೪೭ರಲ್ಲಿದ್ದ ಸ್ಥಿತಿಯಲ್ಲಿದೆಯೆ? ಅಥವಾ ಬದಲಾಗಿದೆಯೆಂದರೆ ಈಗಿನ ಸನ್ನಿವೇಶದ ಭೂಮಿಕೆಯಲ್ಲಿ ಆರಕ್ಷಣ ವ್ಯವಸ್ಥೆಯ ಪುನಃಪರಿಶೀಲನೆ ಆಗಬೇಡವೆ? ಇಷ್ಟಾಗಿ ದಶಕಗಳುದ್ದಕ್ಕೂ ಆರಕ್ಷಣನೀತಿಯನ್ನು ಅನುಸರಿಸುತ್ತ ಬಂದಿರುವುದರ ಫಲಾಫಲಗಳು ಏನಾಗಿವೆಯೆಂಬುದರ ವಸ್ತುನಿಷ್ಠ ವಿಶ್ಲೇಷಣೆ ಈಗಲಾದರೂ ಆಗಬೇಕಲ್ಲವೆ?
ಈ ವೈಪರೀತ್ಯಕ್ಕೆ ಸರ್ವೋಚ್ಚ ನ್ಯಾಯಾಲಯ ಹಿಂದೆ ಹಲವಾರು ಬಾರಿ ಗಮನಸೆಳೆದಿದ್ದರೂ ವಿಷಯ ನೆನೆಗುದಿಯಲ್ಲಿಯೆ ಮುಂದುವರಿದಿದೆ.
ಸರ್ವೋಚ್ಚ ನ್ಯಾಯಾಲಯದ ಅಭಿಮತವನ್ನೂ ಲೆಕ್ಕಿಸದೆ ನೌಕರಿ ಬಡ್ತಿಗಳ ಬಗೆಗೆ ೧೯೯೫ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗಿತ್ತು.
ಇತ್ತೀಚೆಗೂ ಕಳೆದ ವರ್ಷ (೨೦೨೧) ಅಕ್ಟೋಬರ್ ತಿಂಗಳ ಮೊದಲ ಭಾಗದಲ್ಲಿ ಸರ್ಕಾರೀ ನೌಕರಿಗಳಲ್ಲಿ ಆರಕ್ಷಣಾನುಸಾರಿ ಬಡ್ತಿಗಳ ವಿಷಯದ ವಿಚಾರಣೆಯ ಸಂಬಂಧದಲ್ಲಿ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರರಾವ್, ಸಂಜೀವ್ ಖನ್ನಾ, ಬಿ.ಆರ್. ಗವಾಯಿ – ಇವರನ್ನೊಳಗೊಂಡ ಪೀಠವು ಆರಕ್ಷಣಾನುಸರಣೆ ಕುರಿತಂತೆ ಖಚಿತ ಅಂಕಿ-ಅಂಶಗಳನ್ನು ಸರ್ಕಾರವು ಹಾಜರುಪಡಿಸಬೇಕೆಂದು ಅಟಾರ್ನಿ-ಜನರಲ್ರಿಗೆ ಸೂಚನೆ ನೀಡಿದೆ; ಕರಾರುವಾಕ್ಕಾದ ಮಾಹಿತಿಯ ಆಧಾರದ ಮೇಲೆ ಮಾತ್ರ ಸರ್ಕಾರದ ನೀತಿನಿರ್ಣಯಗಳು ಆಗುವುದು ಯುಕ್ತವೆಂದು ವ್ಯಾಖ್ಯೆ ಮಾಡಿದೆ.