ಕವನಗಳು

ನಿಮಗೆ ನೀವೇ ರೂವಾರಿ

dvgಗ್ರಾಮ್ಯದಾವರಣವೇ ತಳಮೂಲ
ಮುಂದೆ ನೀವು ಬೆಳೆದು ಆದದ್ದು ವಿಶಾಲ ಆಲ!
ನಿಮ್ಮನರಿಯಲುಂಟೇ ನನ್ನ ಅಳವು?
ಮುಕ್ತ ಮನವಾಗಿ ನಿಮ್ಮಿರವು ತೆರವು
ಡಿವಿಜಿ ನನಗೆ ನೀವು ಸೋಜಿಗ
ಎಲ್ಲ ಅರಿತು ಅರ್ಥೈಸಿದಿರಿ ಈ ಜಗ!
***
ಬೆಳಕಿನೊಡನೆ ತಳುಕು ಹಾಕಿ
ಶಿಖರದತ್ತ ಹೆಜ್ಜೆ ಹಾಕಿ-
ಪ್ರತಿಘಟ್ಟದಲ್ಲೂ
ಅನುಭವದಟ್ಟದಲ್ಲೂ
ಹತ್ತಿ ಇಳಿದು ನಿಂತು ಕುಂತು ನಡೆದು ಮಿಡಿದು
ಸವಿದು ಅಳೆದು ಸುರಿದು ಬಿರಿದು ತೆರೆದು
ಹರಿಸಿದಿರಿ ಒಟ್ಟಾರೆ ಜ್ಞಾನಧಾರೆ….
ಮಂಕುತಿಮ್ಮನ ಕಗ್ಗದಲಿದೆ ನಿಮ್ಮ ಚಹರೆ!
***

doddarangegowda1  ಡಾ|| ದೊಡ್ಡರಂಗೇಗೌಡ 

ಲೇಖಕರು ಸುಪ್ರಸಿದ್ಧ ಕವಿಗಳು

doramgowda@gmail.com

ವೀರಯೋಧನಿಗೆ…

utthana - veera yodhanige 27 11 2015ಗಡಿನಾಡ ಅಂಚಿನಲಿ
ಗಡಗಡಿಪ ನಡುಕದಲಿ
ನೀನಿಂತೆ ತಡೆಗೋಡೆಯಂತೆ |
ನೆಮ್ಮದಿಯ ಜೀವನವ
ನೆಮ್ಮದಿಯ ಪ್ರತಿಕ್ಷಣವ
ನೀನಿತ್ತೆ ನಮಗೆ, ನಿಶ್ಚಿಂತೆ |
ಉರಿಬಿಸಿಲು, ಹಿಮಶೀತ
ಕಡುವೈರಿ ಎಣಿಸದಲೆ
ಪ್ರತಿಕ್ಷಣವು ನಮಗಾಗಿ ನಿಂತೆ |
ನಿನ್ನೊಲವ ಜೀವನ ತೊರೆದು
ಮಾತೆಯನು ರಕ್ಷಿಸಲು
ಅನುಗಾಲ ಪಣತೊಟ್ಟ ಘನತೆ |
ನಿನ್ನದೆಂಬ ಬದುಕು
ನಿನ್ನವರೆಂಬ ಜನರ
ಎಲ್ಲವನು ನಮಗಾಗಿ ತೊರೆದೆ |
ದುರ್ಗಾತಿದುರ್ಗಮದ
ಶೌರ್ಯಾತಿಶೌರ್ಯದ
ಹೋರಾಟದಿ ನಮಗಾಗಿ ಮಡಿದೆ |
ವೀರಗತಿ ನೀನಿಂದು ಪಡೆದಿರಲು
ನಿನ್ನ ಹೆತ್ತವರ ದುಃಖದೊಳು ಹೆಮ್ಮೆ ಕಂಡೆ
ಮಡದಿ ಮಕ್ಕಳ ಸ್ಥೈರ್ಯಕೆ ಶರಣೆಂದೆ |
ದೇಶರಕ್ಷಕನೆ ನಿನಗೆನ್ನ ಆಶ್ರುತರ್ಪಣವು
ನಿನ್ನ ಧೀರತೆಗೆ ಶರಣು
ನಿನ್ನ ಧೀಮಂತಿಕೆಗೆ ಶರಣು ಶರಣು ||

—-

Yashodha Bhatಯಶೋದಾ ಗಣಪತಿ ಭಟ್ಟ
ನೀರಗಾನು
ಲೇಖಕಿ ದುಬೈನಲ್ಲಿ ನೆಲೆಸಿರುವ ವಿಜ್ಞಾನ ಪದವೀಧರೆ

ybhat133@gmail.com

 

ನೀರ ಪಯಣ

Atula Neela Kadaligeಅತುಲ ನೀಲ ಕಡಲಿಗೆ ನೀರ ಪಯಣ ಸಾಗಿದೆ |

ಬಿಂದು ಸಿಂಧು ಸೇರಿದೆ, ಜೀವ ಸೂತ್ರ ಉಸುರಿದೆ ||

ರವಿಗೆ ಗಗನ ಏರುವಾಸೆ, ಭುವಿಯ ನೀರ ಹೀರುವಾಸೆ |

ಬಾಷ್ಪ-ಪುಷ್ಪ ಅರಳಿದೆ, ಮುಗಿಲ ರೂಪ ತಳೆದಿದೆ ||

ಮಳೆಗೆ ಇಳೆಯ ಸ್ನೇಹ ಬೆಸುಗೆ, ಇಳೆಗೆ ಮಳೆಯ ತೇವದೊದಿಕೆ |

ಜೀವ-ಭಾವ ತುಂಬಿದೆ, ಹಸಿರ ಹೊಸತು ತಂದಿದೆ ||

ಗಿರಿಯ ಮೇಲೆ ಹಿಮದ ಛಾಪ, ಕಣಿವೆ ಕೊರೆದು ನದಿ ಪ್ರಲಾಪ |

ಗುಡ್ಡ-ಬೆಟ್ಟ ಸುತ್ತಿದೆ, ಬಯಲು ಸೀಮೆಗಿಳಿದಿದೆ ||

ಭೂಮಿಯೊಳಗೆ ಇಳಿವ ತವಕ, ನೆಲದ ದಾಹ ತೀರೊತನಕ |

ಝರಿಯು ನೆಲದಿ ಚಿಮ್ಮಿದೆ, ಒಡಲು ತುಂಬಿ ತುಳುಕಿದೆ ||

ಹರಿವ ನೀರ ಹೆಜ್ಜೆ-ಗೆಜ್ಜೆ, ಥಳಕು-ಬಳಕು ಭಾವ ಲಜ್ಜೆ |

ನೀರು ತೆವಳಿ ದಣಿದಿದೆ, ಹಳ್ಳ-ಕೊಳ್ಳ ತುಂಬಿದೆ ||

ಹಲವು ರೂಪ ಧರಿಸಿಕೊಂಡು, ಮಣ್ಣ ಬಣ್ಣ ಮೆತ್ತಿಕೊಂಡು |

ಅಬ್ಬಿ ನೆಲದಿ ಕುಣಿದಿದೆ, ಸುಗ್ಗಿ ಕಾಲ ತಂದಿದೆ ||

ಬರಡು ಭುವಿಗೆ ಚಿಗುರುವಾಸೆ, ತೆನೆಯ ಬಿಚ್ಚಿನಲಿಯುವಾಸೆ |

ಧಾನ್ಯ ಕಣಜ ತುಂಬಿದೆ,  ದುಡಿಮೆ ಹಿರಿಮೆ ಗಳಿಸಿದೆ ||

—-

ನಾರಾಯಣ ಶೆಣೈ ಕೆ.Narayana Shenoy
ಲೇಖಕರು ಭೂವಿಜ್ಞಾನ ಪ್ರೊಫೆಸರ್ ಹಾಗೂ

ಪರಿಸರ ಚಳವಳಿ ಕಾರ್ಯಕರ್ತರು

kn.shenoy@manipal.edu

Facebook
X
WhatsApp
Print
Email