ಜೀವಾತ್ಮ-ಪರಮಾತ್ಮ

jeevatmaಮರವೊಂದರಲಿ ಕುಳಿತ| ಎರಡು ಹಕ್ಕಿಗಳಿಹವು

ಗುಣ ಭಾವ ಬಣ್ಣದಲಿ| ಸಲೆ ಹೋಲುತಿಹವು            ||೧||

ಫಲವೊಂದ ತಿನ್ನುತಿದೆ| ಮೊದಲನೆಯ ಹಕ್ಕಿ

ಕುಳಿತು ನೋಡುತಲಿಹುದು| ಎರಡನೆಯ ಹಕ್ಕಿ      ||೨||

`ತಿನುವ ಬಾ’ ಎನ್ನುತಿದೆ| ಮೊದಲನೆಯ ಹಕ್ಕಿ|

`ನಿನಗಿರಲಿ, ನಾನೊಲ್ಲೆ’| ಎನಲು ಜೊತೆವಕ್ಕಿ         ||೩||

ತಿನುವಾಸೆ ಬಿಡದಿಹುದು| ಮೊದಲನೆಯ ಹಕ್ಕಿ|

ತಿನಲಾರೆನೆನ್ನುತಿದೆ| ಎರಡನೆಯ ಹಕ್ಕಿ ||೪||

ಸಾಕೆನದೆ ತಿನ್ನುತಿದೆ| ಮೊದಲನೆಯ ಹಕ್ಕಿ

ಸಾಕ್ಷಿ ತಾನಾಗಿಹುದು| ಎರಡನೆಯ ಹಕ್ಕಿ               ||೫||

ಸುಖದುಃಖ ಸಂಗಾತಿ| ಮೊದಲನೆಯ ಹಕ್ಕಿ|

ಅಕಳಂಕ ಸಂನ್ಯಾಸಿ| ಎರಡನೆಯ ಹಕ್ಕಿ                ||೬||

ವಾಸನೆಯ ಬಲೆಯೊಳಗೆ| ಮೊದಲನೆಯ ಹಕ್ಕಿ|

`ಕ್ಲೇಶ ನೋಡೆನ್ನುತಿದೆ| ಎರಡನೆಯ ಹಕ್ಕಿ              ||೭||

`ಬದ್ಧ ಜೀವಾತ್ಮ’ನಿಹ| ಮೊದಲನೆಯ ಹಕ್ಕಿ|

`ಶುದ್ಧ ಪರಮಾತ್ಮ’ನಾ| ಎರಡನೆಯ ಹಕ್ಕಿ             ||೮||

Facebook
X
WhatsApp
Print
Email