ಕೈಯಲ್ಲಿ ಮೊಬೈಲ್, ಅದಕ್ಕೆ ಇಂಟರ್ನೆಟ್, ಬೇಕಾದಂತೆ ರೀಚಾರ್ಜ್ ಮಾಡಿಸಿಕೊಳ್ಳಲು ಹಣ
– ಇಷ್ಟಿದ್ದ ಮೇಲೆ ಮಕ್ಕಳು ದಾರಿತಪ್ಪುವ ಸಾಧ್ಯತೆಗಳನ್ನು ಅಲ್ಲಗಳೆಯುವವರಾರು?
ತರಗತಿಯಲ್ಲಿ ಒಂದು ದಿನ ಅವರವರ ಹವ್ಯಾಸಗಳ ಬಗ್ಗೆ ಹೇಳುವಂತೆ ವಿದ್ಯಾರ್ಥಿಗಳನ್ನು ಕೇಳಿದ್ದೆ. ಬಹುಶಃ ಹವ್ಯಾಸಗಳೇ ಇಲ್ಲದ ಮನುಷ್ಯರಿರುವುದು ಅಸಂಭವ. ಮೊಬೈಲ್‌ನಲ್ಲಿ ಗೇಮ್ ಆಡುವುದರಿಂದ ತೊಡಗಿ, ಸಂಗೀತ ನೃತ್ಯದವರೆಗೂ ವಿವಿಧ ಹವ್ಯಾಸಗಳ ಪಟ್ಟಿ ತರಗತಿಯಲ್ಲಿ ತೆರೆದುಕೊಂಡಿತು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು ಹೊಸ ಸ್ನೇಹಿತರನ್ನು ಪಡೆಯುವುದು ತನ್ನ ಹವ್ಯಾಸ ಎಂದು ವಿದ್ಯಾರ್ಥಿಯೊಬ್ಬ ಹೇಳಿದಾಗ ಇಡೀ ತರಗತಿಯೇ ಬೆರಗಾಗಿ ಅವನನ್ನು ನೋಡಿತು. ಯಾಕೆಂದರೆ ಅವನಿನ್ನೂ ಪ್ರಥಮ ಪಿಯುಸಿ ಹುಡುಗ. ನನಗೂ ಅಚ್ಚರಿಯೇ. ನೋಡಿದರೆ ಉತ್ತಮ ಸ್ಥಿತಿವಂತರ ಮನೆಯ ಮಗನಂತಿತ್ತು ಅವನ ಒಟ್ಟೂ ವೈಖರಿ.
ತರಗತಿಯ ಪ್ರತಿಕ್ರಿಯೆಯಿಂದ ಕಸಿವಿಸಿಗೊಂಡ ಅವನು ತಪ್ಪೇನಿದೆ ಮಿಸ್? ನಾನು ನಿಜವಾಗ್ಲೂ ಮಾಡೋದನ್ನ ಹೇಳಿದೆ, ಅಷ್ಟೇ ಎಂದ. ಸರಿಯಪ್ಪ. ನಿನ್ನ ಪ್ರಾಮಾಣಿಕತೆ ಮೆಚ್ಚಬೇಕಾದದ್ದೇ. ಆದರೂ ನಿನ್ನ ವಯಸ್ಸಿಗೆ ಅದು ಹೇಳಿಸಿದ್ದಲ್ಲ ಎಂಬುದು ನಮ್ಮ ಸಾಮಾನ್ಯ ಅನಿಸಿಕೆ. ಯಾಕೆ, ನಿನ್ನನ್ನು ಮನೆಯಲ್ಲಿ ಯಾರೂ ಪ್ರಶ್ನಿಸುವುದಿಲ್ಲವೇ? ಅಥವಾ ನೀನು ಫೇಸ್‌ಬುಕ್ಕಿನಲ್ಲಿ ಹೆಚ್ಚು ಸಮಯ ಕಳೆಯುತ್ತೀ ಎಂಬುದಕ್ಕೆ ಅಪ್ಪ-ಅಮ್ಮ ನಿನಗೆ ಯಾವುದೇ ರೀತಿಯ ನಿರ್ಬಂಧ ವಿಧಿಸುವುದಿಲ್ಲವೇ?” ಎಂದು ವಿಚಾರಿಸಿದೆ. ಅಯ್ಯೋ ಬಿಡಿ ಮಿಸ್, ಅಪ್ಪ-ಅಮ್ಮಂಗೆ ಅದೆಲ್ಲ ನೋಡೋದಕ್ಕೆ ಎಲ್ಲಿ ಬಿಡುವಿರುತ್ತದೆ? ಅಪ್ಪ ಬ್ಯುಸಿನೆಸ್‌ನಲ್ಲಿ ಬ್ಯುಸಿ. ಅಮ್ಮ ತನ್ನ ಮಹಿಳಾ ಸಮಾಜ, ಮಹಿಳಾ ಕ್ಲಬ್ ಎಂದು ಬ್ಯುಸಿ. ಅವರು ಮನೆಗೆ ಬರೋ ಹೊತ್ತಿಗೆ ನಾನು ಅಚ್ಚುಕಟ್ಟಾಗಿ ಓದಿಕೊಳ್ತಾ ಇರ್ತೀನಿ. ಅವರು ಅದರ ಬಗ್ಗೆ ಎಲ್ಲ ತಲೇನೇ ಕೆಡಿಸಿಕೊಳ್ಳೋದಿಲ್ಲ. ಅಷ್ಟಕ್ಕೂ ನಾನೇನೂ ಓದಲ್ಲಿ ಹಿಂದೆ ಇಲ್ವಲ್ವಾ? ಫಸ್ಟ್‌ಕ್ಲಾಸ್ ಅಂತೂ ತೆಗೆದೇ ತೆಗೀತೀನಿ…
ಅವನ ಧಾಟಿ, ಮಾತಿನಲ್ಲಿದ್ದ ವಿಶ್ವಾಸ ನೋಡಿದರೆ ಅವನಿಗೆ ಸಾಮಾಜಿಕ ಜಾಲತಾಣಗಳಿಂದ ಹದಿಹರೆಯದ ಮಕ್ಕಳು ಯಾವೆಲ್ಲಾ ಬಗೆಯ ತೊಂದರೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ಹೇಳಬೇಕಾಗಿಲ್ಲ ಅನಿಸಿತು. ಅಂದರೂ ತರಗತಿಯ ಇತರ ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣಗಳ ಬಗ್ಗೆ ಜಾಗೃತರಾಗಿರಬೇಕಾದ ಅನಿವಾರ್ಯತೆಯನ್ನು ಕೊಂಚ ವಿವರಿಸಿ ಮಾತು ಬದಲಿಸಿದೆ.
ಎಡವಟ್ಟು ಖಯಾಲಿ
ಇಂದು ಪ್ರಪಂಚ ಚಿಕ್ಕದು. ವಿಶ್ವದ ಯಾವ ಮೂಲೆಯಲ್ಲಿರುವವರೊಂದಿಗಾದರೂ ನಿಮಿಷಗಳಲ್ಲಿ ಸಂವಹನ ಸಾಧ್ಯ. ಆದರೆ ವಿಪರ್ಯಾಸವೆಂದರೆ ಯಾವ ಮಾಧ್ಯಮಗಳು ಪ್ರಪಂಚವನ್ನು ಕಿರಿದಾಗಿಸಿವೆಯೋ ಅವೇ ಮಾಧ್ಯಮಗಳು ಮನೆಯ ಒಂದೊಂದು ಕೊಠಡಿಯನ್ನೂ ದೂರ ದೂರ ಮಾಡಿಬಿಟ್ಟಿವೆ. ಮನೆಯೊಳಗಿನ ಹೃದಯಗಳು ಬೆಸುಗೆ ಕಳೆದುಕೊಂಡಿವೆ. ಕಾರಣ ಮತ್ತೇನಿಲ್ಲ, ಹೊಸ ಸ್ನೇಹಿತರನ್ನು ಪಡೆಯುವ, ದೂರದ ಗೆಳೆಯರು ಏನೇನು ಮಾಡುತ್ತಿದ್ದಾರೆ ಎಂದು ಅರಿಯುವ ಆಕಾಂಕ್ಷೆ ಅದೆಷ್ಟು ಬಲವಾಗಿರುತ್ತದೆಯೆಂದರೆ ಅದರ ಹೊರತಾಗಿನ ಬದುಕು ಕ್ಷುಲ್ಲಕವೆನಿಸಿಬಿಡುತ್ತದೆ. ಪ್ರಾಯ ಪ್ರಬುದ್ಧರೇ ಅದೆಷ್ಟೋ ವೇಳೆ ಯಾವ್ಯಾವುದೋ ಫೋಟೋಗಳನ್ನು ಹಾಕಿ ಎಡವಟ್ಟು ಮಾಡಿಕೊಳ್ಳುವುದಿದೆ. ಅಂದಮೇಲೆ ಈಗಿನ್ನೂ ಹದಿನಾರರ ಮಕ್ಕಳು ಅದೇನು ಮಾಡಿಯಾವೋ!
ಯಾವುದೋ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದಿದ್ದ ಹಿರಿಯರೊಬ್ಬರು ಸಾಮಾಜಿಕ ಜಾಲತಾಣಗಳ ಬಗ್ಗೆ ಮಾತಾಡುತ್ತಾ ಕಥೆಯೊಂದನ್ನು ಉಲ್ಲೇಖಿಸಿದ್ದರು. ಹದಿವಯಸ್ಸಿನ ಹುಡುಗಿಯೊಬ್ಬಳಿಗೆ ಸದಾ ಫೇಸ್‌ಬುಕ್ಕಿನಲ್ಲಿರುವ ಹುಚ್ಚು. ಸಾಲದ್ದಕ್ಕೆ ಆಗಿಂದಾಗ್ಗೆ ಅದರಲ್ಲಿ ಸ್ಟೇಟಸ್ ಬದಲಿಸಿಕೊಳ್ಳುವ ಖಯಾಲಿ. ಒಂದು ದಿನ ಮನೆಯಲ್ಲಿ ಆಕೆ ಒಂಟಿಯಾಗಿದ್ದಳು ಮತ್ತು ತಾನು ಮನೆಯಲ್ಲಿ ಒಂಟಿಯಾಗಿದ್ದೇನೆ ಎಂದು ಸ್ಟೇಟಸ್ ಹಾಕಿಕೊಂಡಿದ್ದಳು. ಅವಳ ಗೆಳೆಯರೆನಿಸಿಕೊಂಡ ಕೆಲವರು ಅವಳ ಒಂಟಿತನ ನೀಗುವ ನೆಪದಲ್ಲಿ ಅವಳ ಮನೆಗೆ ಬಂದಿದ್ದೂ ಆಯಿತು. ಆದರೆ ಅವರ ಉದ್ದೇಶವೇ ಬೇರೆ. ಅರಳಬೇಕಾದ ಹೂವೊಂದು ನಜ್ಜುಗುಜ್ಜಾಗಿ ಸಾಯಬೇಕಾದರೆ ಹೆಚ್ಚು ಕಾಲವೇನೂ ಬೇಕಾಗಲಿಲ್ಲ. ಸಾಮೂಹಿಕ ಅತ್ಯಾಚಾರಕ್ಕೊಳಗಾದದ್ದು ಮಾತ್ರವಲ್ಲದೆ ಆಕೆ ಅವರಿಗೆ ಬಲಿಯಾಗಿ ಹೋದಳು. ಇದು ಕಥೆಯಿರಬಹುದು. ಆದರೆ ಇದರಲ್ಲಿ ಎಚ್ಚರಿಕೆಯ ಗಂಟೆಯೊಂದು ಮೊಳಗುತ್ತಿರುವುದು ಖಂಡಿತಾ ನಿಜ. ತಮ್ಮ ಮಕ್ಕಳಿಗೆ ಎಲ್ಲಾ ಸೌಕರ್ಯ ಒದಗಿಸಿ ಅವರು ಅಪ್‌ಡೇಟ್ ಆಗಿರಬೇಕೆಂದು ಬಯಸುವ ಹೆತ್ತವರು ತಮಗೇ ಅರಿವಿಲ್ಲದೇ ಮಕ್ಕಳ ಬದುಕಿಗೆ ಕೊಳ್ಳಿ ಇಡುತ್ತಿದ್ದಾರೆಯೇ?
ನೂರುಸಲ ಯೋಚಿಸಿ
ಹತ್ತನೇ ಕ್ಲಾಸಿನಲ್ಲಿ ಶೇಕಡಾ ತೊಂಭತ್ತಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ತಕ್ಷಣ ಅವರಿಗೆ ಸ್ಕೂಟರು, ದುಬಾರಿ ಮೊಬೈಲುಗಳನ್ನು ಉಡುಗೊರೆ ನೀಡುವ ಹೆತ್ತವರನ್ನು ಕಂಡಾಗಲೆಲ್ಲ ಕರುಳು ಹಿಸುಕಿದಂತಾಗುತ್ತದೆ. ಹತ್ತನೇ ತರಗತಿ, ಪಿಯುಸಿ ದಾಟಿದರೆಂದಮಾತ್ರಕ್ಕೆ ಅವರು ಮಾನಸಿಕವಾಗಿ ಸದೃಢರಾದರು ಎಂದೇನು ಇಲ್ಲ. ಗಾಡಿ ಸಿಕ್ಕಿದ ತಕ್ಷಣ ತಮ್ಮೊಂದಿಗೆ ಇನ್ನಿಬ್ಬರು ಗೆಳೆಯರನ್ನು ಕೂರಿಸಿಕೊಂಡು ಓಡಿಸುವುದೆಂದರೆ ಮಕ್ಕಳಿಗೆ ಸಿಕ್ಕಾಪಟ್ಟೆ ಮೋಜು. ಅದೇ ಒಂದು ಹೆಗ್ಗಳಿಕೆ ಕೂಡಾ. ಈ ವಿಷಯದಲ್ಲಿ ಹೆಣ್ಣುಮಕ್ಕಳೂ ಕಡಮೆಯಿಲ್ಲ. ಆದರೆ ಅವರ ವೇಗ ನೋಡಿದರೆ ಮಾತ್ರ ಅವರು ಮೃತ್ಯುವನ್ನು ಬೆನ್ನಲ್ಲೂ ಅಲ್ಲ ಮುಖದಲ್ಲೇ ಇಟ್ಟುಕೊಂಡು ಓಡಾಡುತ್ತಾರೆ ಎನಿಸುತ್ತದೆ. ಅವರ ಜೀವಕ್ಕಷ್ಟೇ ಅಲ್ಲ. ರಸ್ತೆಯಲ್ಲಿ ಅದೇ ವೇಗದಲ್ಲಿ ಯಾರಿಗಾದರೂ ಗುದ್ದಿದರೆಂದರೆ ಗುದ್ದಿಸಿಕೊಂಡವನು ಗುರುತು ಪರಿಚಯ ಸಿಗದಂತೆ ಸ್ವರ್ಗಕ್ಕೇ ಹೋಗಬೇಕಷ್ಟೇ. ಮಕ್ಕಳ ಮನಸ್ಸು ಹುಚ್ಚುಖೋಡಿಯಾಗಿರುವ ವಯಸ್ಸಲ್ಲಿ ಅವರಿಗೆ ಗಾಡಿ ಕೊಡಿಸುವ ಮುನ್ನ ಹೆತ್ತವರು ನೂರು ಸಲ ಯೋಚಿಸಬಾರದೇ?
ಒಂದು ದಿನ ವಿದ್ಯಾರ್ಥಿನಿಯೊಬ್ಬಳು ಲ್ಯಾಬ್ ಹೊರಗೆ ನಿಂತುಕೊಂಡು ಗೋಳೋ ಎಂದು ಅಳುತ್ತಿದ್ದಳು. ಕಾರಣ ಕೇಳಿದರೆ ಲ್ಯಾಬ್‌ಗೆ ಹೋಗುವ ಮೊದಲು ತನ್ನ ಮೂವತ್ತು ಸಾವಿರದ ಮೊಬೈಲನ್ನು ಬ್ಯಾಗಿನಲ್ಲಿಟ್ಟಿದ್ದಳು. ಅವಳು ಹೊರಗೆ ಬರುವಷ್ಟರಲ್ಲಿ ಮೊಬೈಲ್ ನಾಪತ್ತೆ. ಅವಳಾದರೋ ಭಲೇ ದುರಹಂಕಾರದ ಹುಡುಗಿ. ಯಾರೋ ಅವಳನ್ನು ಆಟವಾಡಿಸಬೇಕೆಂದೇ ಅವಳ ಮೊಬೈಲ್ ಎತ್ತಿಟ್ಟುಬಿಟ್ಟಿದ್ದರು. ಅಂತೂ ಒಂದು ದಿನದ ಮೇಲೆ ಅದು ವಾಪಸ್ ಸಿಕ್ಕಿತೆನ್ನಿ. ಅಂದರೂ ಆ ದಿನದ ಆತಂಕ, ಒತ್ತಡ ಯಾರಿಗೆ ಬೇಕು? ಇಲ್ಲಿ ಮುಖ್ಯವಾದ ಪ್ರಶ್ನೆಯೆಂದರೆ ಓದುವ ಹುಡುಗಿ ಮನೆಯಿಂದ ದೂರ ಹಾಸ್ಟೆಲ್ಲಿನಲ್ಲಿದ್ದಾಳೆ ಎಂದರೆ ಅನಿವಾರ್ಯವಾಗಿ ಮೊಬೈಲ್ ಕೊಡಿಸಬಹುದು. ಆದರೆ ಕೇವಲ ಫೋನ್, ಸಂದೇಶ ಕಳಿಸಲಷ್ಟೇ ಅನುಕೂಲವಿರುವ ಸೆಟ್ ಸಾಲದೇ? ಹೆತ್ತವರಲ್ಲಿ ಎಷ್ಟೇ ದುಡ್ಡಿದ್ದರೂ ಆ ಆಡಂಬರವನ್ನು ಮಕ್ಕಳಲ್ಲೂ ತುಂಬಬೇಕಾದ ಆವಶ್ಯಕತೆಯಿಲ್ಲ. ಕೈಯ್ಯಲ್ಲಿ ಮೊಬೈಲ್, ಅದಕ್ಕೆ ಇಂಟರ್ನೆಟ್, ಬೇಕಾದಂತೆ ರೀಚಾರ್ಜ್ ಮಾಡಿಸಿಕೊಳ್ಳಲು ಹಣ – ಇಷ್ಟಿದ್ದ ಮೇಲೆ ಮಕ್ಕಳು ದಾರಿತಪ್ಪುವ ಸಾಧ್ಯತೆಗಳನ್ನು ಅಲ್ಲಗಳೆಯುವರಾರು?
ಒಬ್ಬ ತಾಯಿಗೆ ಇಬ್ಬರು ಹೆಣ್ಣುಮಕ್ಕಳು. ಎಂಜಿನಿಯರಿಂಗ್ ಓದುತ್ತಿದ್ದಾರೆ. ತಾಯಿಗೋ ಮಕ್ಕಳ ಮೇಲೆ ಇನ್ನಿಲ್ಲದ ಪ್ರೀತಿ. ಅಷ್ಟು ದೊಡ್ಡ ಮಕ್ಕಳಾದರೂ ಇನ್ನೂ ತುತ್ತಿಡುವಷ್ಟು ಮಮಕಾರ. ಒಂದು ದಿನ ಸಂಜೆ ಅವರ ಮನೆಗೆ ಹೋಗಿದ್ದೆ. ಕಾಲೇಜಿಂದ ಹಿಂದಿರುಗಿದ ಮಕ್ಕಳು ಹೊಟ್ಟೆಗೇನೂ ತಿಂದಿಲ್ಲ ಎಂದು ತಾಯಿ ಪೇಚಾಡುತ್ತಿದ್ದರೆ ಒಬ್ಬಳು ಮೊಬೈಲಿನಲ್ಲಿ ದಿನಪೂರ್ತಿ ಬಂದಿದ್ದ ಸಂದೇಶಗಳನ್ನು ನೋಡುವಲ್ಲಿ ಮಗ್ನಳಾಗಿದ್ದರೆ, ಇನ್ನೊಬ್ಬಳು ಲ್ಯಾಪ್‌ಟಾಪ್ ಆನ್ ಮಾಡಿಕೊಂಡು ಅದಾಗಲೇ ಫೇಸ್‌ಬುಕ್ಕಿನಲ್ಲಿದ್ದಳು. ದಿನಪೂರ್ತಿ ಒಂಟಿಯಾಗಿ ಮನೆಯಲ್ಲಿರುವ ಈ ತಾಯಿಗೆ ಮಕ್ಕಳು ಕಾಲೇಜಿನಿಂದ ಬಂದಹಾಗೆ ತನ್ನಲ್ಲಿ ಮಾತಾಡಲಿ ಎಂಬಾಸೆ. ಈ ಮಕ್ಕಳಿಗೆ ಅದು ಅರ್ಥವಾಗುವುದಿಲ್ಲ. ತಾಯಿ ಪೆಚ್ಚಾಗಿ ಅವರನ್ನೇ ನೋಡುತ್ತಾ ಕುಳಿತ ನೋಟದಲ್ಲಿ ಹುದುಗಿದ್ದ ನೋವು ಬಹುಶಃ ಇನ್ನೆಂದೂ ಮಾಸುವುದಿಲ್ಲ. ಮಕ್ಕಳೇ ಇಷ್ಟು. ಸ್ವಲ್ಪ ಚಿಕ್ಕವರಿರುವಾಗ ಶಾಲೆಯಿಂದ ಬಂದು ನೂರು ಮಾತಾಡುತ್ತಾರೆ. ಆದರೆ ದೊಡ್ಡವರಾದಮೇಲೆ ಅದೇನಾಗುತ್ತೋ ಗೊತ್ತಿಲ್ಲ, ಅಮ್ಮನಲ್ಲಿ ದಿನದ ವಿಷಯಗಳನ್ನು ಮಾತಾಡೋಣ ಅಂತಲೂ ಅನಿಸುವುದಿಲ್ಲ. ಅವರೂ ಹೇಳುವುದಿಲ್ಲ. ನಮ್ಮ ಸಂಕಟಗಳನ್ನು ಕೇಳುವುದೂ ಅವರಿಗೆ ಬೇಕಿಲ್ಲ… ಆ ತಾಯಿ ಹೇಳುತ್ತಿದ್ದರೆ ನಾನು ಸುಮ್ಮನೇ ಕೇಳಿದೆ.
ಮಕ್ಕಳು ಸಾಮಾಜಿಕವಾಗಿ ಎಷ್ಟು ಬೆರೆಯುವುದನ್ನು ಕಲಿಯಬೇಕೋ ಮನೆಯ ಮಂದಿಯ ಬಗ್ಗೆಯೂ ಅಷ್ಟೇ ಸಂವೇದನೆಗಳನ್ನು ಬೆಳೆಸಿಕೊಳ್ಳಬೇಕು. ಆ ಕೆಲಸ ಮಾಡಬೇಕಾದ ಸಂಪೂರ್ಣ ಹೊಣೆಗಾರಿಕೆಯೂ ಮನೆಯದ್ದೇ ಆಗಿರುತ್ತದೆ.






