ಅನುರಾಗದ ರಾಗಗಳು

ಈಗಿನವರ ಪ್ರೇಮನಿವೇದನೆ ಕಣ್ಣು, ಹೃದಯಗಳಲ್ಲಷ್ಟೇ ಆಗದು; ಅದಕ್ಕೆ ಗುಲಾಬಿಯೇ ಆಗಬೇಕು. ಹುಡುಗನು ಮಂಡಿಯೂರಿ ಕುಳಿತು, ಕೈಯಲ್ಲಿನ ಗುಲಾಬಿಯನ್ನು ಅವನ ತಲೆಗಿಂತ ಎತ್ತರದಲ್ಲಿ ಹಿಡಿದು, ಹುಡುಗಿಯನ್ನೇ ನೋಡುತ್ತಾ “ಐ ಲವ್ ಯೂ’’ ಎಂದಾಗ ಹುಡುಗಿಯ ಕಣ್ಣಲ್ಲಿ ಸಮ್ಮತಿ ಕಂಡರೆ ಅವನು ಗೆದ್ದಂತೆ.

ದಿಲ್ ಅನ್ನು ಖುಷ್ ಮಾಡುವ ಸಾಧನವಿದು. ‘ರಾಮ ಸೀತೆಯರು ಪರಸ್ಪರ ಪ್ರೀತಿಸುತ್ತ ಸಂತೋಷದಿಂದಿದ್ದ ಸಮಯದಲ್ಲಿ ಮೂಡಿದ ಮಕ್ಕಳೇ ಲವ್ ಮತ್ತು ಖುಷ್’ ಎಂದಿದ್ದರು ತರ್ಲೆಸುಬ್ಬನಹಳ್ಳಿಯ ಮೆಂಟಲೇಶರು. ಹಿಂದಿಯಲ್ಲಿ ಅರ್ಧಾಕ್ಷರಾಂತ್ಯವೇ ಪ್ರಧಾನ. ಅಂತೆಯೇ ಪ್ಯಾರ ಎನ್ನುವುದು ಪ್ಯಾರ್ ಎಂದು ಉಚ್ಚರಿಸಲಾಗುತ್ತದೆ. ಪ್ರೀತಿ ಉರುಫ್ ಲವ್ ಅಲಿಯಾಸ್ ಪ್ರಣಯವು ಜೀವನವೆಂಬ ದೀರ್ಘ ಕಥೆಯಲ್ಲಿ ಒಂದು ಪ್ಯಾರ (Paragaraph) ಎನ್ನುವುದನ್ನೇ ಹಿಂದಿಯ ‘ಪ್ಯಾರ್’ ಸೂಚಿಸುತ್ತದೆ ಎಂದೂ ತ.ಮೆಂ. ನುಡಿದಿದ್ದರು.

ಕಾಳಿದಾಸನ ಕಾಲದಿಂದ ಖಾಲಿದೋಸೆಯ ಕಾಲದವರೆಗೂ, ಮುಕ್ಕಣ್ಣನ ಕಾಲದಿಂದ ಮುಕ್ಕಿ ಮುಕ್ಕಿ ಉಣ್ಣುವವರ ಕಾಲದವರೆಗೂ, ಶೂರ್ಪನಖಿಯ ಕಾಲದಿಂದ Unsure and Panicky ವ್ಯಕ್ತಿಗಳ ಕಾಲದವರೆಗೂ, ಬರ್ಬರ ಕಾಲದಿಂದ ಬರ್ಗರ್ ಕಾಲದವರೆಗೂ ಜೀವಂತವಾಗಿರುವ ಲವ್ ವೈರಸ್ ಜಗತ್ತಿನ ಅತ್ಯಂತ ಹಳೆಯ ವೈರಸ್ ಎಂಬ ಖ್ಯಾತಿ ಹೊಂದಿದೆ. ಈ ವೈರಸ್‌ನ ಕಬ್ಜೆಗೆ ಬಂದರೆ ವಯಸ್ಸು, ಅಂತಸ್ತು, ಎಲ್ಲವೂ ಗೌಣ. ಪರ್ವತರಾಜನ ಮಗಳೆಲ್ಲಿ, ಸುಡುಗಾಡಿನ ಶಿವನೆಲ್ಲಿ! ಆದರೆ ಮದನನ ಜಲ್ಲೆಬಿಲ್ಲಿನಿಂದ ಸುಮದ ಬಾಣವು ಹೊರಟಾಕ್ಷಣ ಆವರೆಗೆ ‘ಗಿರ್ ಜಾ’ ಎಂದು ತಪಸ್ಸು ಮಾಡಿದ್ದರೂ ಪಾರ್ವತಿಗೆ ಬೀಳದಿದ್ದ ಶಿವ ಗರ‍್ರನೆ ಬಿದ್ದುಬಿಟ್ಟ. ಬಿದ್ದ ಶಿವನು ಎಚ್ಚೆತ್ತು ಕಾಮನಿಗೆ ಫುಲ್‌ಸ್ಟಾಪ್ ಹಾಕಿದರೂ, ಛಿಚಿಟm ಆದನಂತರ ಕಾಮನನ್ನು ರತಿಯ ಪ್ರಾರ್ಥನೆಯ ಮೇರೆಗೆ ಮತ್ತೆ Come ಎಂದು ಬರಮಾಡಿಕೊಂಡ.

ಮಸಣದ ಬೂದಿಯ ಮೈಗೆ ಬಳಿದು ಶಿವ

ಎಲ್ಲೆಲ್ಲೂ ತಿರಿ ತಿಂಬುವನಂತೆ

ಮತ್ತೆ ನಿನ್ನ ಶಿವ ಮನೆಗೆ ಬರಲಿ

ಮನೆಯೊಳಿಲ್ಲ ಉಮೆ ಎನ್ನುವೆನು

ಎಂದು ಉಮೆಯ ಅಮ್ಮನು ಹೇಳಿದರೂ, ಪ್ರೀತಿಯಲ್ಲಿ ಬಿದ್ದ ಉಮೆಗೆ ‘ಬೂದಿಯೆ ಟಾಲ್ಕಂ; ಸುಡುಗಾಡೇ ಪಾರ್ಕು; ಭೂತಗಣಗಳೇ ಡ್ಯುಯೆಟ್ ಹಾಡುವಾಗ ಹಿಂದುಮುಂದು ಕುಣಿಯುವ ಎಕ್ಸ್ಟ್ರಾ ಆರ್ಟಿಸ್ಟ್÷್ಸ; ರುಂಡಮಾಲೆಯೇ ಲೇಟೆಸ್ಟ್ ಫ್ಯಾಷನ್’ ಎನಿಸಿತ್ತೋ ಏನೋ! ಮೋಹದ ಮುರಳಿ ಕರೆದಾಗ ಬುದ್ಧಿ ಸುರುಳಿಯಾಗಿ ಉರುಳಿಹೋಗುತ್ತದೆ.

ದೇವತೆಗಳ ಗೆಟ್ ಟುಗೆದರ್ ಒಂದರಲ್ಲಿ ಲಕ್ಷ್ಮಿಯು “ನಿನ್ನ ಗಂಡ ಯೋಗ ಮಾಡ್ತಾನೆ, ಡ್ಯಾನ್ಸ್ ಮಾಡ್ತಾನೆ. ನನ್ನ ಗಂಡನಿಗೆ ಪಾಪ, ಕಾಲುನೋವು. ದಿನವೆಲ್ಲ ಅವನ ಕಾಲೊತ್ತೋದ್ರಲ್ಲೇ ಆಗ್ಹೋಯ್ತು. ನಮ್ಮಪ್ಪ ಅವನ ಪೀತಾಂಬರವನ್ನ ನೋಡಿ ‘ಕಾಸಿರೋವ್ನು, ಚೆನ್ನಾಗಿ ನೋಡ್ಕೋತಾನೆ’ ಅಂತ ಮದುವೆ ಮಾಡ್ಕೊಟ್ಟ. ಡ್ರೆಸ್ಸು ಅಡ್ರೆಸ್‌ಗೇನೂ ಕೊರತೆ ಇಲ್ಲ ಬಿಡು. ಸ್ಟೇಟಸ್ಸೂ ಒಳ್ಳೇದೇ. ಆದರೆ ಔಟಿಂಗೇ ಇಲ್ಲ ಕಣೇ. ನೀನೇ ಲಕ್ಕಿ. ಲವ್ ಮ್ಯಾರೇಜೇ ಬೆಸ್ಟು ಅನ್ಸತ್ತೆ’’ ಎಂದಳಂತೆ.

“ಏನ್ಲಕ್ಕೋ ಏನೋ! ಬೇರೊಬ್ಬಳ ಕಡೆ ಕಣ್ಣೆತ್ತೂ ನೋಡದೇ ನಿನ್ನ ಜೊತೆಯೇ ಮೂರ್ಹೊತ್ತೂ ಇರೋ ನಿನ್ನ ಗಂಡನ್ನ ಕಂಡರೆ ಅರೇಂಜ್ಡ್ ಮ್ಯಾರೇಜ್ ಆದರೇನೇ ಚೆನ್ನಾಗಿತ್ತು ಅನ್ಸತ್ತೆ’’ ಎಂದಳಂತೆ. ಕಡೆಗೆ ಇಬ್ಬರೂ, ‘ನಮ್ಮಿಬ್ಬರಿಗಿಂತ ಸರಸ್ವತಿ ಲಕ್ಕಿಯೆಸ್ಟ್ ಕಣೆ. ವರ್ಕ್ ಫ್ರಂ ಹೋಂ ಮಾಡೋ ಬ್ರಹ್ಮನ್ನ ಕಟ್ಕೊಂಡು, ವೀಣೆ ನುಡಿಸ್ಕೊಂಡು, ಪುಸ್ತಕ ಓದ್ಕೊಂಡು ಝುಮ್ಮಂತಿದ್ದಾಳೆ ಗೀರ್ವಾಣಿ’’ ಎಂದು ಮಾತನಾಡಿಕೊಂಡರೆಂದು ‘ದೇವಲೋಕ.ಕಾಮ್’ ವರದಿ ಮಾಡಿದೆಯಂತೆ.

ಲೋಕಮಾತೆಯರನ್ನು ಅತ್ತ ಬಿಟ್ಟು ಲವ್ ಬರ್ಡ್ಗಳ ಲೋಕಕ್ಕೆ ಮರಳೋಣ. ಇದೊಂದು ಲೋಕ ಎಂದು ಕೆಲವರು ನುಡಿದರೆ ಪ್ರೇಮವು ಒಂದು ಋತು ಎನ್ನುವವರೂ ಇದ್ದಾರೆ. ‘ಏಕ್ ಬರಸ್ ಮೇ ಮೌಸಮ್ ಚಾರ್; ಪಾಂಚವ ಮೌಸಮ್ ಪ್ಯಾರ್’ ಎಂದು ಹಿಂದಿ ಚಿತ್ರಗೀತೆಯೊಂದು ಘೋಷಿಸಿದೆ. ಆ ಮೋಸಗೊಳಿಸುವ ಅಥವಾ ಮೋಹಗೊಳಿಸುವ ಮೌಸಮ್ ಚೈತ್ರದಲ್ಲಿ ಇರುತ್ತದೆ ಎನ್ನುವುದಕ್ಕೆ ‘ವಸಂತ ಬರೆದನು ಒಲವಿನ ಓಲೆ; ಚಿಗುರಿನ ಎಲೆ ಎಲೆ ಮೇಲೆ’ ಎಂಬ ಸಾಲುಗಳೇ ಸಾಕ್ಷಿ ಎಂದು ಕನ್ನಡಿಗರು ನುಡಿದರೆ ಹಿಂದಿಗರು “ತುಮ್ಹೆ ಗೀತೋಂಮೇ ಢಾಲೂಂಗಾ; ಸಾವನ್ ಕೋ ಆನೇ ದೋ’’ ಎನ್ನುತ್ತಾರೆ. ಪ್ರಾಯಶಃ ದಕ್ಷಿಣಭಾರತೀಯರ ಲವ್ ಮಾರ್ಚ್ ತಿಂಗಳಲ್ಲೂ, ಉತ್ತರಭಾರತೀಯರ ಲವ್ ಆಗಸ್ಟ್ನಲ್ಲೂ ವಿಕಸನವಾಗುತ್ತಿತ್ತೋ ಏನೋ.

ಕಣ್ಣರಳಿ ಹೂವಾಗಿ ಮನವು ಮಲ್ಲಿಗೆಯಾಗಿ

ಮೆಲ್ಲ ನುಡಿಗಳ ಮೋದಕ್ಕೆ ಒಳಗಾದ ಪ್ರೇಮಜ್ಞ

ಎನ್ನುವುದು ಪ್ರೇಮಿಗಳ ತ್ರಿಪದಿಯಂತೆ. ಆದರೆ ಪ್ರೇಮಿಗಳ ಪಯಣದ ಆರಂಭ ಚತುಷ್ಪದದಿಂದ – ಅವನೆರಡು ಪಾದಗಳೊಡನೆ ಅವಳದೆರಡು ಹೆಜ್ಜೆ.

ಚತುಷ್ಪದದಿಂದ ಆರಂಭವಾಗುವ ಪಯಣ

ಮುಗಿಯುವುದು ಸಪ್ತಪದಿಯಲ್ಲಿ

ಕರ ಪಿಡಿದ ನಂತರ ಮನ ಕಿರಿಕಿರಿಯ ಸದನ

ಪ್ರೇಮಕ್ಕೆ ಜಾಗ ಇನ್ನೆಲ್ಲಿ

ಎನ್ನುವುದು ಸಾಮಾನ್ಯರ ಅನುಭವದ ಮಾತು. ಎಲ್ಲ ಪ್ರೇಮಿಗಳೂ ಮದುವೆ ಆಗಬೇಕೆಂದೇನಿಲ್ಲ; ‘Choose three; Love two; Marry one’ ಎನ್ನುತ್ತಿದ್ದರು ಹಳೆಯ ಕಾಲದ ಲವ್ ಗುರುಗಳು. ‘ಮ್ಯಾರಿ ಒನ್’ ಎನ್ನುತ್ತಿದ್ದುದು ‘ಪ್ರೀತಿಸಿದವರನ್ನಲ್ಲ, ಇನ್ನೊಬ್ಬಳನ್ನು’ ಎಂಬ ಷರಾ ಕೂಡಾ ಇದ್ದಿತಂತೆ.

ಪುರಾತನ ಕಾಲದಲ್ಲಿ (ಯಾರೀ ಪುರಾತ? ಎಷ್ಟನೆಯ ಇಸವಿಯಿಂದ ಎಷ್ಟನೆಯ ಇಸವಿಯವರೆಗೆ ರಾಜ್ಯವಾಳಿದ? ಅವನಾಳಿದ ರಾಜ್ಯ ಯಾವುದು ಮೊದಲಾದವುಗಳ ಸಂಶೋಧನೆ ಆಗಬೇಕಾಗಿದೆಯಂತೆ) ವಸಂತ/ಶ್ರಾವಣಗಳೇ ಪ್ರೀತಿಯ ಪರ್ವಕಾಲವೆನ್ನಲು ‘ವಸಂತದಲ್ಲಿ ಸಂತನಾಗಬೇಡ’, ‘ತುಮ್ಹೆ ಗೀತೋಂಮೇ ಢಾಲೂಂಗಾ ಸಾವನ್ ಕೋ ಆನೇ ದೋ’ ಮೊದಲಾದ ಹಾಡುಗಳಿವೆ. ಆದರೆ ಈಗ ಕಾಲ ಬದಲಾಗಿದೆ. ಚಳಿಯ ಚುಮುಚುಮು ತನುವನ್ನು ಸಣ್ಣದಾಗಿ ನಡುಗಿಸುತ್ತಿರುವಾಗಲೇ ಪ್ರೇಮದ ಪುಳಕದ ಕಾವು ಏರಲು ಫೆಬ್ರವರಿ ಹದಿನಾಲ್ಕನ್ನು ಮುಹೂರ್ತವೆಂದು ನಿಶ್ಚಯಿಸಲಾಗಿದೆ. ಪಶ್ಚಿಮದಿಂದ ಬೀಸಿಬಂದ ಈ ‘ವಿಂಡ್ ಆಫ್ ಲವ್’ ಹದಿಹರೆಯದವರಲ್ಲಿ ಹಿತವಾದ ಸುಳಿಗಾಳಿ ಎಬ್ಬಿಸಿದೆ.

‘ಐ ಲವ್ ಯೂ’ ಎನ್ನುವುದು ಸಕಲಪ್ರೇಮಿಗಳ global anthem ಆದರೂ ಅದರ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಒಂದೊಂದು ಕಡೆ ಒಂದೊಂದು ವಿಧವಂತೆ. ಆಂಗ್ಲದವರ ಹೃದಯ ಥಡ್ ಎನ್ನುತ್ತದಂತೆ; ಕನ್ನಡಿಗರ ಹೃದಯ ತಂನಂ ತಂನಂ ಎನ್ನುತ್ತದೆ (ತಂನಂ ತಂನಂ ನನ್ನೀ ಮನಸು…); ಹಿಂದಿಗರದು ತಡಪ್ ತಡಪ್ ಎನ್ನುತ್ತದೆ (ದಿಲ್ ತಡಪ್ ತಡಪ್ ಕೆ ಕೆಹ ರಹಾ ಹೈ ಆಭಿಜಾ), ತೆಲುಗಿನ ಹೃದಯಕ್ಕೆ ಇಂತಹದೇ ರಾಗವೆಂದಿಲ್ಲವಂತೆ. ಅದು ‘ಎದೋ ಒಕ ರಾಗಂ’ ಎಂದು ಮಿಡಿಯುವುದಂತೆ. ಚೀನೀಯರದು ಪ್ಲಂಕ್ ಪ್ಲಂಕ್ ಪ್ಲಂಕ್ ಪ್ಲಂಕ್ ಪ್ಲಂಕ್ ಪ್ಲಕ ಪ್ಲಂಕ್ ಎಂದೇ ಮಿಡಿಯುತ್ತದೆ ಎನಿಸಲು ಕಾರಣ ಸಿಂಗಾಪೂರದಲ್ಲಿ ರಾಜಾಕುಳ್ಳ ಚಿತ್ರದ ‘ಯಾಂಚಿ ಕ್ವಾಂಚಿನಿ ಲೇಲೈ’ ಹಾಡಿನ ಮೊದಲ ಬೀಟ್ಸ್.

ಲವ್ ಕಾಣಿಸುವುದೂ ಒಬ್ಬೊಬ್ಬರಿಗೆ ಒಂದೊಂದು ವಿಧದಲ್ಲಂತೆ. ‘ನಿನ್ನಾ ರೂಪು ಎದೆಯ ಕಲಕಿ ತನು ಮಿಂದಾಗ; ನಿನ್ನ ನೋಟ ಸೇರಿದಾಗ ಕಂಡೆ ಅನುರಾಗ’ ಎನ್ನುವಲ್ಲಿ ಲವ್ ಎನ್ನುವುದು ಹೃದಯಸಮುದ್ರವನ್ನು ಕಲಕಿದಾಗ ಮೂಡಿಬಂದ ನವನೀತ. ಹಳೆಯ ಹಿಂದಿಗರಿಗೆ ‘ಆಂಖೋ ಹೀ ಆಂಖೋಂಮೇ ಇಷಾರಾ ಹೋಗಯಾ’. “ಇಷಾರೆಗಳ ಮೂಲಕ ಲವ್ ಆದಮೇಲೆ ಹಂಚಿಕೊಂಡು ತಿನ್ನುವುದು ಸಹಜವೇ. ಆದ್ದರಿಂದಲೇ ಆ ಹಾಡಿನ ಮುಂದಿನ ಸಾಲು ಬೈಟೂ ಬೈಟೂ ಜೀನೇ ಕಾ ಸಹಾರಾ ಹೋಗಯಾ ಎಂದಿದೆ’’ ಎಂದಿದ್ದ ಸೀನು. ಹಿಂದಿಯ “ಬೈಠೇ’’ ಸೀನುವಿನ ಬಾಯಲ್ಲಿ ಬೈಟೂ ಆಗಿತ್ತು.

ಈಗಿನವರ ಪ್ರೇಮನಿವೇದನೆ ಕಣ್ಣು, ಹೃದಯಗಳಲ್ಲಷ್ಟೇ ಆಗದು; ಅದಕ್ಕೆ ಗುಲಾಬಿಯೇ ಆಗಬೇಕು. ಹುಡುಗನು ಮಂಡಿಯೂರಿ ಕುಳಿತು, ಕೈಯಲ್ಲಿನ ಗುಲಾಬಿಯನ್ನು ಅವನ ತಲೆಗಿಂತ ಎತ್ತರದಲ್ಲಿ ಹಿಡಿದು, ಹುಡುಗಿಯನ್ನೇ ನೋಡುತ್ತಾ “ಐ ಲವ್ ಯೂ’’ ಎಂದಾಗ ಹುಡುಗಿಯ ಕಣ್ಣಲ್ಲಿ ಸಮ್ಮತಿ ಕಂಡರೆ ಅವನು ಗೆದ್ದಂತೆ.

“ಹುಡುಗರೇಕೆ ಹಾಗೆ ಮಂಡಿಯೂರುತ್ತಾರೆ?’’ ಎಂದು ಕೇಳಿದ್ದರೊಬ್ಬರು.

“ಹುಡುಗಿ ಒಪ್ಪಿದರೆ ಎದ್ದುನಿಲ್ಲಲು, ಒಪ್ಪದಿದ್ದರೆ ಹಾಗೆಯೇ ಹಿಂದಕ್ಕೊರಗಿ ನಿರಾಶೆಯಿಂದ ಮಲಗಿಬಿಡಲು ಆ ಪೋಸೇ ಸೂಕ್ತ’’ ಎಂದುತ್ತರಿಸಿದ್ದೆ.

“ಪ್ರೇಮನಿವೇದನೆಗೆ ಗುಲಾಬಿಯೇ ಏಕೆ?’’

“ಅವಳ ಕೆನ್ನೆಯ ರೌಜ್, ತುಟಿಯ ಲಿಪ್‌ಸ್ಟಿಕ್‌ಗೆ ಮ್ಯಾಚ್ ಆಗಲಿಕ್ಕೆ. ಅಲ್ಲದೆ ಆ ಗುಲಾಬಿ ‘ಎಸ್’ ಎಂದರೂ ಮನೆಯಲ್ಲಿ ‘ಮುಳ್ಳು’ಗಳು ಇರಬಹುದು ಎಂದು ಸೂಚಿಸಲು’ ಎಂದಿದ್ದೆ.

‘ದಿಲ್ ಕೀ ನಜರ್ ಸೇ’ಯಿಂದ ಹಿಡಿದು ‘ಪ್ರೀತ್ಸೇ ಪ್ರೀತ್ಸೇ’ಯನ್ನು ತಲುಪಿ, ಅಲ್ಲಿಂದಾಚೆಗಿನ ಈವರೆಗಿನ ಅನೇಕ ಪ್ರೇಮಗೀತೆಗಳನ್ನು ಕೇಳಿರುವ ನನಗೆ ಗೊಂದಲ ಉಂಟುಮಾಡಿಸಿದ ಪ್ರೇಮಗೀತೆಯೆಂದರೆ “ಬಿಸಿಲಾದರೇನು ಮಳೆಯಾದರೇನು’ ಎಂಬ ‘ಬೆಂಕಿಯ ಬಲೆ’ ಚಿತ್ರದ ಗೀತೆ. ಇದಕ್ಕೆ ಸರಿಸಮವಾಗಿ ಕಂಡುಬರುವ ಮತ್ತೊಂದು ಹಾಡೆಂದರೆ ಹಿಂದಿಯ ‘ಅಮರ್ ಪ್ರೇಮ್’ ಚಿತ್ರದ ‘ಏ ಕ್ಯಾ ಹುವಾ; ಕೈಸೆ ಹುವಾ; ಕಬ್ ಹುವಾ’ ಹಾಡು. ಹಿಂದಿಯದಕ್ಕಿಂತ ಕನ್ನಡದ ಹಾಡು ಬರೀ ಪ್ರಶ್ನೆಮಯ. ಮದುವೆಯಾದ ನಂತರ ಪ್ರಶ್ನಿಸುವ ಹಕ್ಕು ಸತಿಯದೇ ಆದ್ದರಿಂದ ಪ್ರೇಮಿಯು ಈ ಹಾಡಿನಲ್ಲಿ ಪ್ರಶ್ನಾವಕಾಶವನ್ನು ಪೂರ್ತಿ ಬಳಸಿಕೊಂಡಿದ್ದಾನೆ ಎನಿಸುತ್ತದೆ.

‘ಬಿಸಿಲಾದರೇನು, ಮಳೆಯಾದರೇನು’ ಎಂಬ ಮೊದಲ ಪ್ರಶ್ನೆಗೆ ಸೀನುವಿನ ಉತ್ತರ, ‘ಎರಡೂ ಸಂದರ್ಭಗಳಲ್ಲಿ ಛತ್ರಿ ಬೇಕಾಗುತ್ತದೆ’ ಎಂದು. ಅವನ ಪ್ರಕಾರ ಪ್ರೇಮಿಗಿಂತ ದೊಡ್ಡ ಛತ್ರಿ ಮತ್ತೊಂದಿಲ್ಲ. ಬೇಕಾದಾಗ ಅಗಲವಾಗಿ ಹರಡಿದ ಕೈಗಳೊಂದಿಗೆ ಸಮೀಪಿಸಿ, ಬೇಡವೆನಿಸಿದಾಗ ಮುದುಡಿ ಮೂಲೆ ಸೇರಿಬಿಡುವ ಗುಣವು ಪ್ರೇಮಿಗಳಿಗೆ ಅನ್ವಯಿಸುತ್ತದಲ್ಲ!

‘ಜೊತೆಯಾಗಿ ಇಂದು ನಾನಿಲ್ಲವೇನು?’ ಎಂಬ ಸಾಲು ಅನೇಕ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ‘ಇಂದು ನಾನಿಲ್ಲವೇನು?’ ಎಂದರೆ ‘ನೆನ್ನೆ, ನಾಳೆ ನನ್ನ ಸರದಿ; ಇಂದು ಮತ್ತೊಬ್ಬನ ಸರದಿ’ ಎಂದು ಸೂಚಿಸುವುದೆಂದೂ, ಹುಡುಗಿಯದು ‘ಸರದಿ ಪ್ರೇಮಪ್ರಕರಣ’ವೆಂದೂ ಅರ್ಥ ಬರುವುದಂತೆ. ‘ಲವ್ ಈಸ್ ಎ ಗೇಮ್. ಇದರಲ್ಲಿಯೂ ಬೆಸ್ಟ್ ಆಫ್ ತ್ರೀ ಆರಿಸುವ ಹಕ್ಕು ಆ ಹುಡುಗಿಗೆ ಇದೆ’ ಎಂದೂ ಲವ್ ಗುರುವೊಬ್ಬನು ಹೇಳಿದನಂತೆ. ‘ಜೊತೆಯಾಗಿ ಇಂದು ನಾನಿಲ್ಲವೇನು?’ ಎಂದಾಗ ‘ಜೊತೆ ಇರುವುದು ಬೇಡ; ದೂರದಲ್ಲಿ ನಿಂತಿದ್ದು ನನ್ನ ಕಣ್ಗಾವಲಾಗಿರು’ ಎಂದು ಹುಡುಗಿ ಆದೇಶಿಸುವುದನ್ನು ಸೂಚಿಸುವುದಂತೆ. ‘ಇಂದೂ ನಾನಿಲ್ಲವೇನು’ ಎಂದು ರಾಗ ಎಳೆದಿರುವುದರಿಂದ ‘ನೆನ್ನೆಯೂ ಇರಲಿಲ್ಲ, ಇಂದೂ ಇಲ್ಲವೇನು?’ ಎಂಬ ಪ್ರಶ್ನೆಯನ್ನು ಮೂಡಿಸುವುದಂತೆ.

ಮುಂದುವರಿದಂತೆ ‘ಹೂವು ಹಾವಾದರೇನು?’ ಎನ್ನುವುದಕ್ಕೆ ‘ಅದೇ ಹೂವಿನ ಗಿಡದ ಕಾಂಡದಿಂದ ಹಾವನ್ನು ಹಿಡಿದು ಹೊರಹಾಕಿ’ ಎಂದೂ, ‘ಹಾಲು ವಿಷವಾದರೇನು?’ ಎಂಬುದಕ್ಕೆ ‘ಆ ಹಾಲನ್ನು ಅಸೆಂಬ್ಲಿ ಹಾಲ್ ಅಥವಾ ಪಾರ್ಲಿಮೆಂಟ್ ಹಾಲ್ ಎಂದು ಕರೆಯಿರಿ’ ಎಂದೂ, ‘ಈ ನಿನ್ನ ನೋಟ ಬೆರೆತಾಗ ಮುಳ್ಳು ಹೂವಾಗಿ ಅರಳದೇನು?’ ಎಂಬ ಸಾಲಂತೂ ಗೊಂದಲದ ಗೂಡಾಗಿದ್ದು, ‘ನೋಟ ಬೆರೆಯುವ ಮುನ್ನ ಹೂವಾಗಿದ್ದದ್ದು, ನೋಟ ಬೆರೆತ ಕೂಡಲೆ ಮುಳ್ಳು ಎಂದು ಅರ್ಥವೋ ಅಥವಾ ಮುಳ್ಳುಹೂವು ಎಂಬ ಒಂದು ಹೂವಿನ ಪ್ರಬೇಧವೇ ಇರುವುದೋ ತಿಳಿಯದಾಗಿದೆ’ ಎಂದು ಗೀತಾರ್ಥಪಂಡಿತರು ಅಲವತ್ತಿಕೊಳ್ಳುತ್ತಿರುವರಂತೆ. ಅಂತೆಯೇ ‘ಬುವಿಯೇ ಬಾಯ್ಬಿಟ್ಟರೇನು?’ ಎಂದಾಗ ‘ಜೆಸಿಬಿ ಕಂಟ್ರಾಕ್ಟರುಗಳಿಗೆ ಡಿಗ್ಗಿಂಗ್ ಕಂಟ್ರಾಕ್ಟ್ ತಪ್ಪಿಹೋಗುತ್ತದೆ’ ಎಂದೂ, ‘ಸಿಡಿಲೇ ಎದುರಾದರೇನು?’ ಎಂದಾಗ ‘ಸಿಡಿಯಲ್ಲಿ ಎದುರಾದ ಸಾಕ್ಷಿಗಳಿಂದಲೇ ಎಷ್ಟೋ ಜನಗಳ ಮಾನಹಾನಿ ಆಗುತ್ತಿರುವುದು’ ಎಂದೂ ಉತ್ತರಗಳನ್ನು ಅರಿತವರು ನೀಡಿರುವರಂತೆ. ಇಲ್ಲಿ ಅರಿತವರು ಎನ್ನುವುದು ಒಂದೇ ಪದವಾಗಿದ್ದು, ‘ಅರಿ ತವರು’ ಅರ್ಥಾತ್ ಶತ್ರುಗಳ ಜನ್ಮಸ್ಥಳ ಎಂದು ಅರ್ಥೈಸಬಾರದೆಂದೂ ಅರಿತವರು ವಿನಂತಿಸಿಕೊಂಡಿರುವರಂತೆ.

‘ಬೆಂಕಿಯ ಬಲೆ’ಯ ಹಾಡನ್ನು ಅತ್ತ ಬಿಟ್ಟು ಫೆಬ್ರವರಿಯ ಪ್ರೇಮಿಗಳಿಗೆ ಶುಭ ಹಾರೈಸುವೆ. ಒಬ್ಬೊಬ್ಬರ ಲವ್ ಅಫೇರಿನ ಅನುಭವ ಒಂದೊಂದು ವಿಧವಾದದ್ದು. ಆದ್ದರಿಂದ ನೀವೂ ನಿಮ್ಮ ಪ್ರೀತಿಯ ಅನುಭವಗಳನ್ನು ಹೇಳಲೆಂದು ಮುಂದಾಗಿ ‘ದಿಲ್ ಕಾ ಹಾಲ್ ಸುನ್ ಏ ದಿಲ್‌ವಾಲಾ’ ಎಂದಿರಾದರೆ ‘ಬೋಲ್ ಪ್ರೇಮಿ ಬೋಲ್ ಸಂಗಮ್ ಹೋಗಾ ಕೇ ನಹೀ’ ಎನ್ನುತ್ತಾ ಕಿವಿ ನಿಮಿರಿಸಿ ಕುಳಿತುಕೊಳ್ಳಲು ನಾನಂತೂ ರೆಡಿ.

Facebook
X
WhatsApp
Print
Email
Leave A Reply