“ಅವನಿಗೆ ಸ್ವಂತಿಕೆ ಎನ್ನುವುದೇ ಇಲ್ಲ. ಪರಾವಲಂಬಿ. ನನಗೆ ಅವನನ್ನು ಕಂಡರೆ ಆಗದು” ಎನ್ನುವವರು ಇಡ್ಲಿಯತ್ತ ತಮ್ಮ ಗಮನವನ್ನು ಹರಿಸುವುದು ಸೂಕ್ತ. ಸ್ವಯಂ ಟೇಸ್ಟ್ಲೆಸ್ ಆಗಿದ್ದು, ಚಟ್ನಿ, ಸಾಂಬಾರುಗಳ ನೆರವಿನಿಂದ ವರ್ಲ್ಡ್ ಫೇಮಸ್ ಆಗಿರುವ ತಿಂಡಿಗಳ ಪೈಕಿ ಇಡ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ನಮ್ಮ ಕವಿವರ್ಯರೇಕೋ ಇದನ್ನು ವರ್ಣಿಸಲು ಮನಸ್ಸು ಮಾಡಿಲ್ಲ. ಒಂದೊಮ್ಮೆ ಮಾಡಿದ್ದಿದ್ದರೆ
ಅಂತಿಂಥ ತಿಂಡಿ ನೀನಲ್ಲ; ನಿನ್ನಂಥ ತಿಂಡಿ ಇನ್ನಿಲ್ಲ
ಸುಡುಸುಡುವ ಬಿಸಿಯು ಇಹುದಲ್ಲ; ರೇಶಿಮೆಯ ಮೃದುವು ತನುವೆಲ್ಲ
ತುಣುತುಣುಕು ಮೆಲ್ಲೆ ಸೊಗವೆಲ್ಲ; ನೀ ತೀರಿಸುತಿಹೆ ಹಸಿವೆಲ್ಲ ||
ಬೆಳತಿಂಡಿಗೆಂದು ನೀನುಂಟು; ಈವ್ನಿಂಗು ಸ್ನ್ಯಾಕ್ಸಿಗೂ ನಂಟು
ಮುಳುಗೇಳೆ ರಸದ ಹೊಳೆಯಲ್ಲಿ ಮೆಚ್ಚುವರ ದೊಡ್ಡ ದಂಡುಂಟು ||
ಎಂದು ಕೆಎಸ್ನ ಬರೆಯಬಹುದಾಗಿತ್ತು. ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಮೊದಮೊದಲು ಕಂಡುಬರುವ ತಿಂಡಿಗಳ ಪೈಕಿ ಇಡ್ಲಿಯೂ ಒಂದು. ಸಾವಿರ ವರ್ಷಗಳ ಹಿಂದಿನ ಕಥೆಯೊಂದರಲ್ಲಿ ‘ಮನೆಗೆ ಬಂದ ಅತಿಥಿಗಳಿಗೆ ಇಡ್ಡಲಿಗೆಯಂ ಉಣಬಡಿಸಿದರು’ ಎಂಬ ಉಲ್ಲೇಖವಿದೆಯಂತೆ. ಇದನ್ನೋದಿದ ಪ್ರೊಫೆಸರ್ ಡಿ.ಎಲ್. ನರಸಿಂಹಾಚಾರ್ಯರಿಗೆ ಕೂಡಲೆ ಇಡ್ಲಿಯನ್ನು ತಿನ್ನಬೇಕೆಂಬ ಬಯಕೆ ಉಂಟಾಯಿತು. ನೇರವಾಗಿ ಕಾಲೇಜಿನ ಕ್ಯಾಂಟೀನಿಗೆ ಹೋಗಿ ಇಡ್ಲಿಗೆ ಆರ್ಡರ್ ಮಾಡಿದರು. ಥಾಲಿಸಿಂಹಾಸನದಲ್ಲಿ ವಿರಾಜಮಾನವಾದ ಇಡ್ಲಿಯನ್ನು ಇನಿತೇ ತುಣುಕಾಗಿಸಿ ಬಾಯಿಗೆ ರವಾನಿಸಿ ಮೆಲ್ಲನೆ ಜಗಿದರು. ಇಡ್ಲಿಯು ಸಾವಿರ ವರ್ಷ ಹಳೆಯದೆಂದು ಸಾಬೀತಾಯಿತು!
ಕವಿಗಳ ವಿಷಯಕ್ಕೆ ಮರಳೋಣ. ಇಡ್ಲಿಯ ಬಗ್ಗೆ ಅನ್ಯರು ಅಸೂಯೆ ಪಟ್ಟುಕೊಳ್ಳುವಷ್ಟರ ಮಟ್ಟಿಗೆ ಜೀರ್ಣಶಕ್ತಿಯಿದ್ದ ಜಿ.ಪಿ. ರಾಜರತ್ನಂ ಕವನ ರಚಿಸಿದ್ದಿದ್ದರೆ
ಇಡ್ಲಿ ನಿಂಗೆ ಜೋಡಿಸ್ತೀನಿ ಚಟ್ನಿ ಮುಟ್ಟಿದ್ ಕೈನ
ನಿನ್ನ ಉದ್ಕೂ ಬೊಗ್ಗಿಸ್ತೀನಿ ಸಾಂಬಾರ್ ತುಂಬಿದ್ ಬೌಲ್ನ |
ಬುರ್ ಬುರ್ ನೊರೆ ಬಸ್ಯೊವಂಥ ಒಳ್ಳೆ ಬಿಳಿ ಇಟ್ನ
ತಟ್ಟೇಲ್ ಮಡ್ಗಿ ಬೇಯ್ಸ್ಬುಟ್ಟಾಂದ್ರೆ ತಕ್ಕೋ ಅಸಿವೇ ಖತ್ನ ||
ಎಂಬ ಸಾಲುಗಳು ಮೂಡುತ್ತಿದ್ದವೆನಿಸುತ್ತದೆ. ಇದೇ ತಿಂಡಿಯ ಬಗ್ಗೆ ಗೋಪಾಲಕೃಷ್ಣ ಅಡಿಗರೇನಾದರೂ ಬರೆದಿದ್ದರೆ
ರಸದ ಕಡಲೊಳು ತೇಲಿ ಬರುತಲಿದೆ ಬಿಳಿಯ ಬಿಸಿಯ ಇಡ್ಲಿ
ಮೇಲೆ ಉದ್ದಿನ ವಡೆಯ ಸಖ್ಯವಿರೆ ಕಾಂಬಿನೇಷನ್ ಲವ್ಲಿ
ಮೆರೆದಿದೆ ಬೆರೆತಿದೆ ವಿವಿಧ ತರದ ತೆರೆತೆರೆದ ಪ್ಲೇಟಿನಲ್ಲಿ
ಜನರ ಉದರಗಳ ಉಬ್ಬು ತಗ್ಗು ಹೊರಳುರುಳುವಾಟದಲ್ಲಿ
ಎಂಬ ಸಾಲುಗಳು ಕಾಣಬರುತ್ತಿದ್ದವೇನೋ. ಉದರವೆಂಬ ಮಿಕ್ಸಿಯಲ್ಲಿ ಸೇರಿ ಬೈಲ್ ಜ್ಯೂಸಿನಲ್ಲಿ ಬೆರೆತು ಮೇಲೇರಿ, ಕೆಳಗಿಳಿವ ಸ್ವಿಮಿಂಗ್ ಆಟವು ಹೊರಳುರುಳುವಾಟವೇ ಅಲ್ಲವೇ!
ಇಡ್ಲಿಯಲ್ಲಿ ‘ಸಮ್ಮರ್ ಇಡ್ಲಿ’ ಮತ್ತು ‘ವಿಂಟರ್ ಇಡ್ಲಿ’ ಎಂಬ ಎರಡು ವಿಧಗಳಿವೆ ಎಂದು ನನ್ನ ಫ್ಯಾಷನ್ ಡಿಸೈನರ್ ಗೆಳೆಯರೊಬ್ಬರು ನುಡಿದಿದ್ದಾರೆ. ಗೋವಾದ ಬೀಚುಗಳಲ್ಲಿ ಕಂಡುಬರುವ ‘ಕ್ಲಾತ್ ಅಲರ್ಜಿಕ್’ ವಿದೇಶೀಯರಂತೆ ಇಡ್ಲಿಗೂಡಿನಿಂದ ನೇರವಾಗಿ ಪ್ಲೇಟಿಗೆ ಡೈವ್ ಮಾಡುವ ಇಡ್ಲಿಯೇ ಸಮ್ಮರ್ ಇಡ್ಲಿ. ಸುಡುಬಿಸಿಲಿನ ಮದ್ರಾಸಿನಿಂದ ನೇರವಾಗಿ ಇಂಗ್ಲೆಂಡಿನ ಫ್ರೀಜಿಂಗ್ ಕೋಲ್ಡ್ ವಿಂಟರ್ಗೆ ದಾಖಲಾದವರು ಮೈಭರ್ತಿ ಬಟ್ಟೆ ಹಾಕಿಕೊಂಡು ಕಣ್ಣನ್ನಷ್ಟೇ ಪಿಳಿಪಿಳಿ ಬಿಡುತ್ತಾ, ಸೊಂಟದ ಸುತ್ತಲಿನ ಬೆಲ್ಟನ್ನು ಮತ್ತಷ್ಟು ಬಿಗಿಯಾಗಿಸುತ್ತಾ, ಕುತ್ತಿಗೆಯ ಸುತ್ತಲಿನ ಕಾಲರನ್ನು ಮತ್ತಷ್ಟು ಕಂಠಾಲಿಂಗನಗೊಳಿಸುತ್ತಾ ‘ಥೂ ಚಳಿ’ ಎಂದು ದೂರುವಂತೆಯೇ, ಎಲೆಯಲ್ಲಿ ಕುಳಿತು, ಸುತ್ತಲೂ ಕಡ್ಡಿಗಳೆಂಬ ಬಟನ್ಸ್ ತೊಟ್ಟು, ಪುರಾತನ ಕಾಲದ ಹೆಣ್ಣಿನಂತೆ ತನ್ನ ಕಾಲೂ ಸಹ ಇತರರಿಗೆ ಕಾಣದಂತೆ ಎಚ್ಚರ ವಹಿಸಿ, ‘ಕೊಟ್ಟೆ ಕಡುಬು’ ಎಂಬ ಹೆಸರಿನಡಿಯಲ್ಲಿ ಹಸಿದವರ ಪ್ಲೇಟಿನಲ್ಲಿ ಪ್ರತ್ಯಕ್ಷವಾಗುವ ಇಡ್ಲಿಯೇ ವಿಂಟರ್ ಇಡ್ಲಿ.
ನಿರಾಭರಣ ಸುಂದರಿಯಾದ ಇಡ್ಲಿಗೆ ಕೆಲವೊಮ್ಮೆ ಸಿಂಗಾರಭಾಗ್ಯವೂ ಸಿಗುತ್ತದೆ. ಇಡ್ಲಿಯೊಡನೆ ಬಿಳುಪಿನಲ್ಲಿ ಸ್ಪರ್ಧಿಸುವ ಬೆಣ್ಣೆಯೋ, ಬೆಣ್ಣೆಯ ಮಗಳಾದ ತುಪ್ಪವೋ (ಖಾರ, ಸಿಹಿ, ಸಪ್ಪೆ ಮೊದಲಾದ ಎಲ್ಲ ರುಚಿಗಳೊಡನೆ ಹಿತವಾಗಿ ಬೆರೆತು, ಆ ಖಾದ್ಯಗಳಿಗೆಲ್ಲ ವಿಶಿಷ್ಟ ರುಚಿಯನ್ನಿತ್ತು, ‘ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂಬಂತೆ ತಿನಿಸುಗಳಲ್ಲಿ ಬೆರೆತುಬಿಡುವ ಗುಣವುಳ್ಳದ್ದು ಸ್ತ್ರೀಲಿಂಗವೇ ಸರಿ!) ಇಡ್ಲಿಯೊಡನೆ ಬೆರೆತಾಗ ಸೂಸುವ ಘಮಕ್ಕೆ ಮರುಳಾಗದ ನಾಲಿಗೆಯೇ ಇಲ್ಲ. ಇಂತಹ ಇಡ್ಲಿಯೊಡನೆ ನಡೆದ ಒಂದು ಕಾಲ್ಪನಿಕ ಸಂದರ್ಶನ ಇಂತಿದೆ:
ಸಂ: ನಿಮಗೆ ಇಡ್ಲಿ ಎಂದು ಹೆಸರು ಬರಲು ಕಾರಣವೇನು?
ಇ: ಅದು ‘ಇಡಿಯಾಗಿಯೇ ಕೊಡಲಿ’ ಎಂಬುದರ ಹ್ರಸ್ವ ರೂಪ. ಬೈಟೂ ಕಾಫಿ, ಬೈಟೂ ಮಸಾಲೆದೋಸೆ ತೆಗೆದುಕೊಳ್ಳುವವರಿದ್ದಾರೆ. ಆದರೆ ಬೈಟೂ ಇಡ್ಲಿ ಕೇಳಿದ ದಾಖಲೆ ಇಲ್ಲ. ‘ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ’ ಎಂಬುದರ ಸಾಕಾರವೇ ನಾನು. ಪಾತ್ರೆಯಲ್ಲಿನ ಇಡ್ಲಿಹಿಟ್ಟನ್ನು ಇಡಿಯಾಗಿ ಬೇಯಿಸಿದರೆ ಒಂದು ಬೃಹತ್ ಇಡ್ಲಿ ಆಗುತ್ತದೆ. ಅದರಿಂದ ಸೌಟುಸೌಟೇ ತೆಗೆದು ಹಾಕಿದರೂ ಇಡ್ಲಿಯೇ. ತಟ್ಟೆ ಇಡ್ಲಿಯಿಂದ ಪುಟ್ಟಿಡ್ಲಿಯವರೆಗೆ ಇಡ್ಲಿಯು ಇಡ್ಲಿಯಾಗಿಯೇ ತನ್ನ ಗುಣವನ್ನು ಕಾಪಾಡಿಕೊಳ್ಳುತ್ತದೆ ಎಂಬುದೇ ಇದರ ಅರ್ಥ.
ಸಂ: ನಿಮಗೆ ಸ್ವಂತಿಕೆ ಇಲ್ಲ ಎನ್ನುವರಲ್ಲ?
ಇ: ಗಾಳಿಗೆ, ನೀರಿಗೆ ಸ್ವಂತಿಕೆ ಇಲ್ಲ. ವಿಶಾಲ ಬಯಲಲ್ಲೂ, ಕಿರಿದಾದ ಸಂದಿಯಲ್ಲೂ ಗಾಳಿಯು ಚಲಿಸಬಲ್ಲಂತೆಯೇ ನಾನೂ ಪುಟ್ಟ ಇಡ್ಲಿ ಸ್ಟ್ಯಾಂಡಿನಲ್ಲೂ, ದೊಡ್ಡ ಬಿಡದಿ ಇಡ್ಲಿ ತಟ್ಟೆಯಲ್ಲೂ ಇರಬಲ್ಲೆ. ನೀರಿನಂತೆಯೇ ಹಾಕಿದ ಪಾತ್ರೆಯ ಆಕಾರಕ್ಕೆ ಹೊಂದಿಕೊಳ್ಳುವ ಗುಣ ಇರುವುದರಿಂದಲೇ ನನ್ನನ್ನು ಪಿರಮಿಡ್, ತಟ್ಟೆ, ಗುರುಗ್ರಹ ಮುಂತಾದ ಆಕಾರಗಳಲ್ಲಿ ತಯಾರಿಸಲು ಸಾಧ್ಯವಾಗುವುದು.
ಸಂ: ನಿಮಗೂ ದೋಸೆಗೂ ಒಂದೇ ಹಿಟ್ಟನ್ನು ಬಳಸುವರು. ನಿಮ್ಮಿಬ್ಬರಲ್ಲಿನ ಗುಣವ್ಯತ್ಯಾಸವೇನು?
ಇ: ಡಿಯರ್ ಕಸಿನ್ ದೋಸೆ ಪುಣ್ಯವಂತಳು. ಅವಳಿಗೆ ದೊಡ್ಡದಾದ ಹಾಸನ್ನು ಒದಗಿಸಿ, ಹಾಸಿನ ಮೇಲೆ ಹರಡಿಕೊಂಡ ಅವಳಿಗೆ ತೈಲವನ್ನು ಎರೆದು ಮೊಗುಚುವ ಕೈಗಳಿಂದ ಆಯಿಲ್ ಮಸಾಜ್ ಮಾಡಿ, ಹಿಂದುಮುಂದು ತಿರುಗಿಸಿ ಹಿತವಾದ ಹೀಟ್ ಟ್ರೀಟ್ಮೆಂಟ್ ಕೊಡುತ್ತಾರೆ. ನನ್ನನ್ನು ಕುಪ್ಪೆಯಂತೆ ಹೊಯ್ದು, ಪಾತ್ರೆಯಲ್ಲಿರಿಸಿ, ಸ್ಟೀಮ್ ಚೇಂಬರಿನಲ್ಲಿ ಕೂಡಿಹಾಕಿಬಿಡುತ್ತಾರೆ. ದೋಸೆಗೆ ಸುತ್ತಮುತ್ತಲಿನ ಹವೆಯನ್ನು ಅನುಭವಿಸುವ ಪುಣ್ಯವಿದೆ. ನಾನು ಸಂಪೂರ್ಣವಾಗಿ ಸಿದ್ಧಳಾಗುವವರೆಗೆ ಹೊರಗಿನ ಪ್ರಪಂಚವನ್ನೇ ಕಾಣುವಂತಿಲ್ಲ.
ಸಂ: ಇಷ್ಟೆಲ್ಲ ಕಷ್ಟವನ್ನು ಅನುಭವಿಸಿಯೂ ನಿಮ್ಮಿಂದ ಧಿಕ್ಕಾರದ ಧ್ವನಿ ಹೊರಟಂತಿಲ್ಲವಲ್ಲ?
ಇ: ದೋಸೆಗಿಲ್ಲದ ಭಾಗ್ಯಗಳು ನನಗೆ ಇವೆಯಲ್ಲ! ದೋಸೆಯು ತನ್ನ ಇಡೀ ದೇಹವನ್ನು ಸಾಂಬಾರ್ ಸಾಗರದಲ್ಲಿ ಮುಳುಗಿಸಿಕೊಂಡು ಸ್ವಿಮ್ ಮಾಡುವ ಸೌಭಾಗ್ಯವನ್ನು ಹೊಂದಿಲ್ಲ. ದೋಸೆಗೆ ನನ್ನಂತೆ ಇಡೀ ದೇಹದಲ್ಲಿ ಒಂದೇ ವಿಧವಾದ ವರ್ಣವನ್ನು ಹೊಂದುವ ಭಾಗ್ಯವಿಲ್ಲ. ಅದರ ವಕ್ಷೋದರಗಳು ಬಿಳುಪೋ, ಕಂದೋ ಆಗಿದ್ದರೆ ಬೆನ್ನು ಮಾತ್ರ ಕೆಂಪಾಗಿರುತ್ತದೆ. ಕಲರ್ ಯೂನಿಫಾರ್ಮಿಟಿ ಹೊಂದಿರುವುದರಲ್ಲಿ ನಾನೇ ಬೆಸ್ಟು.
ಸಂ: ಮೂರು ದಿನಕ್ಕೇ ನೀವು ಹುಳ್ಳಹುಳ್ಳಗಾಗಿಬಿಡುವಿರಂತಲ್ಲ?
ಇ: Fishes, vegetables and relatives stink after three days ಎಂಬ ಗಾದೆಯೇ ಇದೆ. ಅವರೆಲ್ಲರಿಗಿಂತ ನಾನು ಭಿನ್ನವಾಗಿರಲು ಇಷ್ಟ ಪಡುವುದಿಲ್ಲ. ಹುಳಿಯಾದರೇನು? ಕಡಲೆಬೇಳೆ, ಹಸಿಮೆಣಸಿನಕಾಯಿ, ತೆಂಗು ಮೊದಲಾದವನ್ನು ನನ್ನ ಜೊತೆಗಾರರನ್ನಾಗಿಸಿ ನನ್ನ ರುಚಿಯನ್ನು ಆಸ್ವಾದಿಸುವ ಮಂದಿಗೇನು ಕೊರತೆಯಿಲ್ಲ.
ಸಂ: ನಿಮ್ಮಿಂದ ವಿಜ್ಞಾನಕ್ಷೇತ್ರಕ್ಕೆ ಏನಾದರೂ ಲಾಭವಿದೆಯೆ?
ಇ: ಇದೆ. ಕೆಲವೇ ವರ್ಷಗಳ ಹಿಂದೆ ಕನ್ನಡದ ಕವಿಜ್ಞಾನಿಯೊಬ್ಬರು ‘ಮುದ್ದೆಗೆ ಬುಡವಿಲ್ಲ, ಇಡ್ಲಿಗೆ ತುದಿಯಿಲ್ಲ’ ಎಂಬ ರಿಸರ್ಚ್ ಪೇಪರನ್ನು ಮಂಡಿಸಿದ್ದಾರೆ. ಕೆಲವು ಹೊಟೇಲುಗಳವರು ನನ್ನನ್ನು ಫ್ರಿಡ್ಜಿನಲ್ಲಿರಿಸಿ, ಫ್ರೋಜನ್ ಪ್ರಾಡಕ್ಟುಗಳನ್ನೇ ಪ್ರೀತಿಸುವ ಸಪ್ಪೆಜೀವನದ ಜೆನ್ ಆಲ್ಫಾಗಳಿಗೆ ‘ಫ್ರೋಜನ್ ಇಡ್ಲಿ’ ಮಾರುತ್ತಿದ್ದಾರೆ. ಈವನಿಂಗ್ ಸ್ನ್ಯಾಕ್ಸ್ಗೆಂದು ಹೊಸದಾಗಿ ‘ಫ್ರೈಡ್ ಇಡ್ಲಿ’ ತಯಾರಾಗುತ್ತಿದೆ. ಮುಂದಿನ ದಿನಗಳಲ್ಲಿ ಆಹಾರವನ್ನು ಜಗಿಯಲೂ ಸಮಯವಿಲ್ಲದ ಜೆನ್ ಬೀಟಾಗಳಿಗೆಂದು ‘ಪೌಡರ್ಡ್ ಇಡ್ಲಿ ಡಿಪ್ಡ್ ಇನ್ ಪ್ರೋಟೀನ್ ಸಾಸ್’ ತಯಾರಿಸಲು ಕಂಪನಿಗಳು ಮುಂದಾಗಿವೆ.
ಹಿಂದೊಮ್ಮೆ ನಮ್ಮೂರ ಗೌಡರೊಬ್ಬರು ಡಾಕ್ಟರ್ ಶ್ರೀಕಂಠಯ್ಯನವರ ಮನೆಗೆ ಹೋಗಿದ್ದರು. ವೈದ್ಯರ ಮನೆಯಲ್ಲಿ ಅಂದು ಇಡ್ಲಿ-ವಡೆ ಮಾಡಿದ್ದರು. ಗೌಡರು “ಬೇಡ ಡಾಕ್ಟ್ರೇ. ಇಡ್ಲಿಯಲ್ಲಿ ಉದ್ದಿರತ್ತೆ. ವಾಯು! ವಡೆಯಲ್ಲಿ ಮೆಣಸು ಇರತ್ತೆ. ಹೀಟು! ನನಗೆ ಎರಡೂ ಆಗಲ್ಲ” ಎಂದರು.
ವೈದ್ಯರು, “ಯೋಚಿಸಬೇಡಿ ಗೌಡ್ರೇ. ಉದ್ದಿನ ವಾಯುವನ್ನು ವಡೆಯಲ್ಲಿರುವ ಮೆಣಸು ಹೊಡೆಯುತ್ತದೆ, ಮೆಣಸಿನ ಉಷ್ಣವನ್ನು ಇಡ್ಲಿಯಲ್ಲಿನ ಉದ್ದು ಹೊಡೆಯುತ್ತದೆ. ನೀವು ಎರಡನ್ನೂ ಪಟ್ಟಾಗಿ ಹೊಡೆಯಿರಿ” ಎಂದಿದ್ದರು. ತತ್ಪರಿಣಾಮ ಅಂದು ತಯಾರಾದ ಅಷ್ಟೂ ತಿಂಡಿಯು ಗೌಡರ ಗುಡಾಣದ ಹೊಟ್ಟೆಗೆ ನೈವೇದ್ಯವಾಗಿತ್ತು.
‘ಬಟನ್ ಇಡ್ಲಿ’ಯಾಗಿ ಹಸಿವೆಂಬ ಅರಿವೆಯ ಕಾಜಾದಲ್ಲಿ ತೂರಿ, ಮಾಮೂಲು ಇಡ್ಲಿಯಾಗಿ ಹಸಿವೆಯನ್ನು ಇಡಿಯಾಗಿ ಹೋಗಿಸಿ, ತಟ್ಟೆ ಇಡ್ಲಿಯಾಗಿ ಕ್ಷುದ್ಬಾಧೆಯನ್ನು ತಟಾಯಿಸಿ, ‘ಕೊಟ್ಟೆ ಕಡುಬು’ ಎಂದರವಿಂದ ‘ಇಸ್ಕೊಂಡ ಇಡ್ಲಿ’ ಆಗಿ, ಸ್ವಸ್ಥರಿಗೆ ಚಟ್ನಿ, ಸಾಂಬಾರುಗಳ ರಸಸಹಿತವಾಗಿಯೂ, ಅಸ್ವಸ್ಥರಿಗೆ ರಸರಹಿತವಾಗಿಯೂ ಅವಶ್ಯವೆನಿಸಿರುವ ‘ಸ್ಟೊಮಕ್ ಫ್ರೆಂಡ್ಲಿ’ ಇಡ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗ. ತತ್ಕಾರಣ ತತ್ಸಂಬಂಧಿತವಾಗಿ ಇದೇ ನನ್ನ ಘೋಷವಾಕ್ಯ:
ಸಾಂಬಾರ್ ಶರಣಂ ಗಚ್ಛಾಮಿ; ಚಟ್ನಿ ಶರಣಂ ಗಚ್ಛಾಮಿ; ಇಡ್ಲಿಂ ಶರಣಂ ಗಚ್ಛಾಮಿ!






