ಎರಡು ಮಹತ್ತ್ವದ ಒಡಂಬಡಿಕೆಗಳು

ಯೂರೋಪ್-ಅಮೆರಿಕ ದೇಶಗಳು ಭಾರತದ ಹೆಚ್ಚಿನ ಬೇಡಿಕೆಗಳಿಗೆ ಅನುಕೂಲಕರವಾಗಿ ಸ್ಪಂದಿಸುತ್ತಿರುವುದು ವೈಶ್ವಿಕವಾಗಿ ಭಾರತ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವೆನಿಸಿರುವುದನ್ನು ತೋರಿಸುತ್ತದೆ – ಎಂದು ನರೇಂದ್ರ ಮೋದಿ ಮಲೇಶ್ಯದಲ್ಲಿ ಹೇಳಿದುದರಲ್ಲಿ ಉತ್ಪ್ರೇಕ್ಷೆಯಿಲ್ಲ.

ಅಂತಾರಾಷ್ಟ್ರೀಯ ವಾಣಿಜ್ಯ ಸಮಯಾಚಾರಗಳಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2024ರ ಅಂತ್ಯದಲ್ಲಿ ಅಧಿಕಾರಕ್ಕೆ ಬಂದೊಡನೆ ಏಕಾಏಕಿ ವಿಘಾತ ತಂದರು. ಇದಕ್ಕೆ ಸಮರ್ಥ ಪ್ರತಿರೋಧ ತೋರಲು ಅಮೆರಿಕೇತರ ರಾಷ್ಟ್ರಗಳೆಲ್ಲ ಬಗೆಬಗೆಯ ಕ್ರಮಗಳನ್ನು ಕೈಗೊಳ್ಳತೊಡಗಿದವು. ಭಾರತವೂ ಇದಕ್ಕೆ ಹೊರತಲ್ಲ. ಕಳೆದ (2026) ಜನವರಿ 29ರಂದು ಬಿಡುಗಡೆಯಾದ ಕೇಂದ್ರಸರ್ಕಾರದ ವಾರ್ಷಿಕ ಆರ್ಥಿಕ ಸಮೀಕ್ಷೆ ಹೇಳಿದಂತೆ “ಪರಸ್ಪರ ಅನುಕೂಲಕರವಾದ ಜಾಗತಿಕ ವಾಣಿಜ್ಯ ವ್ಯವಸ್ಥೆಯ ಆಯುಸ್ಸು ಈಗ ಮುಗಿದಿದೆ.” ಹೀಗಾಗಿ ಭಾರತಾದಿ ರಾಷ್ಟ್ರಗಳು ಸದ್ಯದ ಕುತ್ತನ್ನು ಎದುರಿಸುವುದರ ಜೊತೆಗೆ ತಮ್ಮ ದೀರ್ಘಾವಧಿ ಹಿತದ ಮಾರ್ಗಗಳನ್ನು ಕುರಿತೂ ಗಂಭೀರವಾಗಿ ಚಿಂತಿಸತೊಡಗಲೇಬೇಕಾಗಿದೆ. ಏಷ್ಯಕ್ಕಿಂತ ಅಮೆರಿಕದೊಡನೆ ಹೆಚ್ಚು ನಿಕಟ ಬಾಂಧವ್ಯ ತಳೆದಿರುವುದು ಯೂರೋಪ್. ಈಗಲಾದರೋ ಯೂರೋಪಿನ ಪ್ರಬಲ ರಾಷ್ಟ್ರಗಳೂ ಅಮೆರಿಕದಿಂದ ವಿಮುಖಗೊಳ್ಳಲೇಬೇಕಾದ ಪರಿಸ್ಥಿತಿಯುಂಟಾಗಿದೆ.

ಕಳೆದ (2026) ಜನವರಿ 27ರಂದು ನವದೆಹಲಿಯಲ್ಲಿ ಭಾರತದ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಅವರಿಗೂ ಯೂರೋಪ್ ಒಕ್ಕೂಟದ ಕಮಿಶನರ್ ಮಾರೋಸ್ ಸೆಫ್‌ಕೊವಿಚ್ ಅವರಿಗೂ ನಡುವೆ ಏರ್ಪಟ್ಟ ‘EII-FTA’ ಮುಕ್ತ ವಾಣಿಜ್ಯ ಒಪ್ಪಂದವು ಈಚಿನ (ಈಗಲೂ ಮುಂದುವರಿದಿರುವ) ಮಹಾಸಂಘರ್ಷದ ಒಂದು ಪ್ರಮುಖ ಮಜಲೆಂದು ಗುರುತಿಸಬೇಕಾಗಿದೆ. ಒಂದು ದೃಷ್ಟಿಯಿಂದ ನೋಡಿದರೆ ಫೆಬ್ರುವರಿ 7ರಂದು ಅಂಕಿತಗೊಂಡ ಭಾರತ-ಅಮೆರಿಕ ವಾಣಿಜ್ಯ ಸೂಚಿಯನ್ನೂ ಅದರೊಡಗೂಡಿದ ಅನ್ಯ ಒಡಂಬಡಿಕೆಗಳನ್ನೂ ತ್ವರಿತಗೊಳಿಸಿದ್ದು ಭಾರತ-ಯೂರೋಪ್ ಸಂಧಾನಗಳು ಎಂಬ ಊಹೆ ನಿರಾಧಾರವಿರಲಾರದು.

ಸಫಲ ಸಂಧಾನಗಳು

ಹಾಗೆ ನೋಡಿದರೆ ಭಾರತ-ಯೂರೋಪ್ ಒಪ್ಪಂದ ಈಗ ದಿಢೀರನೆ ಏರ್ಪಟ್ಟಿತ್ತೆಂದೇನಲ್ಲ. 2024ಕ್ಕೆ ಹಿಂದೆ ಅದು ನೆನೆಗುದಿಗೆ ಬಿದ್ದಿತ್ತು. ಅದಕ್ಕೆ ಮರುಜೀವ ಬಂದದ್ದು ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ಮೇಲೆ. ಅದೇ ವೇಳೆಗೆ (ಡಿಸೆಂಬರ್ 2024) ಮಾರೋಸ್ ಸೆಫ್‌ಕೊವಿಚ್ ಯೂರೋಪ್ ಒಕ್ಕೂಟದ ವಾಣಿಜ್ಯ ಖಾತೆಯ ಕಮಿಷನರ್ ಆಗಿ ನೇಮಕಗೊಂಡರು. ಹೀಗೆ ಅನುಕೂಲಕರ ಸನ್ನಿವೇಶ ಏರ್ಪಟ್ಟದ್ದರಿಂದ ಸಂಧಾನಗಳಿಗೆ ಮರುಜೀವ ಬಂದಿತು. 2025ರ ಫೆಬ್ರುವರಿಯಲ್ಲಿಯೆ ಒಪ್ಪಂದದ ಹಾದಿಯಲ್ಲಿದ್ದ ತಾಂತ್ರಿಕ ಸಿಕ್ಕುಗಳನ್ನು ಬಿಡಿಸುವ ಪ್ರಯತ್ನಗಳು ಸತ್ವರಗೊಂಡವು. ಅದಕ್ಕೆ ಏಳೆಂಟು ತಿಂಗಳ ಹಿಂದೆಯೆ (ಜುಲೈ 2024) ಯೂರೋಪ್ ಒಕ್ಕೂಟದ ಅಧ್ಯಕ್ಷ ಪದವಿಗೆ ಮರು ಆಯ್ಕೆಗೊಂಡಿದ್ದ ಉರ್ಸುಲಾ ಫಾನ್ ಡೆರ್ ಲೆಯೆನ್ ಅವರೂ ತೀವ್ರ ಉತ್ಸುಕತೆ ತಳೆದಿದ್ದರು.

ನರೇಂದ್ರ ಮೋದಿಯವರಂತೂ ಮೇಲಿಂದ ಮೇಲೆ ತ್ವರೆಪಡಿಸುತ್ತಿದ್ದರು. ಹೀಗೆ ಜಟಿಲತೆಗಳೆಲ್ಲ ಅಣಗುತ್ತಹೋದವು. ಭಾರತದ ವಾಣಿಜ್ಯ ಮಂತ್ರಿ ಪೀಯೂಷ್ ಗೋಯಲ್‌ರೂ ಸಜ್ಜಾಗಿಯೇ ಇದ್ದರು. ಯಾವುದೇ ಸಂಧಾನದಲ್ಲಿ ಕೊಡು-ಕೊಳ್ಳುಗಳು ಇದ್ದೇ ಇರುತ್ತವಷ್ಟೆ. ಆದರೆ ಎರಡು ಪಕ್ಷಗಳವರೂ ಸುಮುಖರಾಗಿದ್ದುದರಿಂದ ತೀಕ್ಷ್ಣ ಸಮಸ್ಯೆಗಳೇನೂ ಉದ್ಭವಿಸಲಿಲ್ಲವೆಂದೇ ಹೇಳಬೇಕು. ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಂಡಿದ್ದರ ಬಗೆಗೆ ಒಂದೆರಡು ಬಾರಿ ಅಸಮಾಧಾನ ವ್ಯಕ್ತವಾಯಿತು. ಆದರೆ ಯೂರೋಪಿನ ದೇಶಗಳೂ ರಷ್ಯಾದಿಂದ ತೈಲವನ್ನು ತರಿಸಿಕೊಳ್ಳುತ್ತಲೇ ಇವೆಯಷ್ಟೆ.

ಮಧ್ಯಮ ಮಾರ್ಗ

ಸೇಬುಹಣ್ಣಿನ ಮತ್ತಿತರ ವಹಿವಾಟುಗಳಿಗೆ ಸಂಬಂಧಿಸಿ ಆಯಾತ- ನಿರ್ಯಾತಗಳ ಶರತ್ತುಗಳಲ್ಲಿ ‘ಇರಲೇಬೇಕು’, ‘ಬೇಡವೇ ಬೇಡ’ ಎಂದು ಹಠಕ್ಕೆ ಬಿದ್ದಲ್ಲಿ ಮಾತುಕತೆಗಳೇ ಮುರಿದು ಬೀಳುವ ಸಂಭವ. (ಈ ಸೂಕ್ಷ್ಮವು ಒಪ್ಪಂದಗಳನ್ನು ಸಗಟಾಗಿ ವಿರೋಧಿಸುತ್ತಿರುವ ವಿಪಕ್ಷಗಳಿಗೆ ಏಕೆ ಗಮನಕ್ಕೆ ಬಾರದೋ ತಿಳಿಯೆವು.) ಇಂಥ ಹಲವು ಬಾಬುಗಳಲ್ಲಿ ‘ವಹಿವಾಟುಗಳಲ್ಲಿ ಒಂದು ಪರಿಮಿತಿಯನ್ನು ನಿಶ್ಚಯಿಸಿಕೊಳ್ಳೋಣ’ ಎಂದು ನರೇಂದ್ರ ಮೋದಿಯವರು ಪ್ರಾಜ್ಞತೆ ತೋರಿ ನಿರ್ಣಯದತ್ತ ಸಾಗುವ ಪಥವನ್ನು ಪ್ರಶಸ್ತಗೊಳಿಸಿದರು. (ಉದಾಹರಣೆಗೆ ಶೇ.20 ಸುಂಕದಲ್ಲಿ ಯೂರೋಪ್ ಭಾರತಕ್ಕೆ ಮುಂದಿನ ಐದು ವರ್ಷಗಳಲ್ಲಿ ಗರಿಷ್ಠ ವಾರ್ಷಿಕ 50,000 ಟನ್ ಸೇಬನ್ನು ಮಾತ್ರ ಮಾರಬಹುದು – ಇತ್ಯಾದಿ). ಅಂತಾರಾಷ್ಟ್ರೀಯ ಸಂಧಾನಗಳು ತುಂಬಾ ನಾಜೂಕಿನವಾಗಿರುತ್ತವೆ. ಅಮೆರಿಕದ ಧೋರಣೆಯಿಂದಾಗಿ ಸಮುದ್ರೋತ್ಪನ್ನ ಆಹಾರೋಪಯೋಗಿ ವಸ್ತುಗಳು, ಚರ್ಮೋತ್ಪನ್ನಗಳು, ಜವಳಿ – ಈ ವಲಯಗಳ ರಫ್ತಿಗೆ ಧಕ್ಕೆ ಬಂದಿತ್ತು. ಈ ಬಾಬುಗಳ ರಫ್ತಿಗೆ ಯೂರೋಪಿನ ಮಾರುಕಟ್ಟೆಗಳನ್ನು ‘EII-FTA’ ಒಪ್ಪಂದವು ಲಭ್ಯಗೊಳಿಸಿದೆ. ಈ ಭಾರತಾನುಕೂಲಿ ಬೆಳವಣಿಗೆಗಳು ಈಚಿನವರೆಗೆ ಅಮಲಿನಲ್ಲಿದ್ದ ವಾಣಿಜ್ಯ ಜಾಗತೀಕರಣ ಪ್ರಸ್ಥಾನವನ್ನೇ ಹಿಮ್ಮುಖಗೊಳಿಸಿವೆ ಎಂದು ಅಮೆರಿಕದ ವಾಣಿಜ್ಯಾಧಿಕಾರಿ ಜೇಮೀಸನ್ ಗ್ರೀರ್ ಗೊಣಗಿದರು.

* * *

ಕಳೆದ ಜನವರಿ ಕೊನೆಯ ವಾರದಲ್ಲಿ ಭಾರತ- ಯೂರೋಪ್ ‘ಮುಕ್ತ ವಾಣಿಜ್ಯ’ ಒಪ್ಪಂದ ಅಂತಿಮ ಹಂತಕ್ಕೆ ಮುಟ್ಟುವ ಸೂಚನೆ ಬರತೊಡಗಿದೊಡನೆ ಹಿಂದಿನಿಂದಲೇ ನಿರೀಕ್ಷಿತವಾಗಿದ್ದ ಭಾರತ-ಅಮೆರಿಕ ಮಾತುಕತೆಗೆ ವೇಗ ಬಂದಿತು.

ಸುಂಕ ಕಡಿತ

ಫೆಬ್ರುವರಿ 2ರಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಡನೆ ಸೌಹಾರ್ದಪೂರ್ಣ ಸಂವಾದ ನಡೆಸಿದರು. ಎರಡು ರಾಷ್ಟ್ರಗಳೂ ಪರಸ್ಪರ ಆಮದು ಸುಂಕದಲ್ಲಿ ಕಡಿತ ಮಾಡುವ ಇಂಗಿತವನ್ನು ಮೊದಲೇ ವ್ಯಕ್ತಪಡಿಸಿದುದು ಒಪ್ಪಂದವನ್ನು ಸುಗಮಗೊಳಿಸಿತು. ಭಾರತದ ಉತ್ಪನ್ನಗಳ ಮೇಲಿನ ಪ್ರತಿಸುಂಕವನ್ನು ಶೇ.25 ರಿಂದ ಶೇ.18ಕ್ಕೆ ಇಳಿಸಲು ಅಮೆರಿಕ ಸಮ್ಮತಿಯನ್ನು ಮೊದಲಿಗೇ ಖಾತರಿಪಡಿಸಿದುದು ಉಳಿದ ವಿಷಯಗಳಲ್ಲಿಯೂ ಸತರ್ಕ ನಿರ್ಣಯಗಳಾಗುವ ಸಂಭವವನ್ನು ಸೂಚಿಸಿದವು. ಇದು ಭಾರತದ ದೊಡ್ಡ ವಿಜಯದ ಸಂಕೇತವೆಂದು ವಿವಿಧ ವಲಯಗಳಲ್ಲಿ ಅಭಿಮತ ಹೊಮ್ಮಿದುದು ಸಹಜ. ವಿವರಗಳ ಪರಿಷ್ಕರಣದ ತರುವಾಯ ಮಾರ್ಚ್ 2026ರಲ್ಲಿ ಒಪ್ಪಂದಕ್ಕೆ ಸಹಿ ಬೀಳಲಿದೆ.

ಭಾರತದ ಮುಂದಿನ ಯೋಜನೆಗಳಿಗೆ ದೊಡ್ಡ ಪ್ರಮಾಣದ ಇಂಧನವೂ ಡೇಟಾ ಸೆಂಟರ್ ಉಪಕರಣಗಳೂ ತತ್ಸಂಬಂಧಿತ ಅನ್ಯ ಸಾಧನಗಳೂ ಅವಶ್ಯ ಬೀಳುತ್ತವಾದ್ದರಿಂದ ಈಗಿನ ಒಪ್ಪಂದವು ಅವಕ್ಕೆ ದಾರಿ ಮಾಡುವುದು ನಿಶ್ಚಿತ.

ಹಲವು ಪ್ರಮುಖ ಕ್ಷೇತ್ರಗಳು

ಅನ್ಯ ಪ್ರಮುಖ ಕ್ಷೇತ್ರಗಳಲ್ಲಿಯೂ ಇದು ಬಿಂಬಿತವಾಗಲಿದೆ. ಉದಾಹರಣೆಗೆ – ಮುಂದಿನ ಐದು ವರ್ಷಗಳಲ್ಲಿ ಭಾರತದ ಉಕ್ಕು ತಯಾರಿಕೆಯ ಸಾಮರ್ಥ್ಯ 14 ಕೋಟಿ ಟನ್ನಿನಿಂದ ಮೂವತ್ತು ಕೋಟಿ ಟನ್ನಿಗೆ ಏರಲಿದೆ. ಈಗಿನದೇ ವೃದ್ಧಿವೇಗ ಮುಂದುವರಿದರೆ ವೈಮಾನಿಕ ಬೇಡಿಕೆಯ ಮೌಲ್ಯವೇ ಸುಮಾರು ರೂ. 7 ಲಕ್ಷ ಕೋಟಿಯಷ್ಟು ಆಗಲಿದೆ; ಬಿಡಿಭಾಗಗಳ ಮೌಲ್ಯ ಸುಮಾರು 9 ಲಕ್ಷ ಕೋಟಿಯಷ್ಟು. ಮುಂದಿನ ಐದು ವರ್ಷಗಳಲ್ಲಿ ಭಾರತವು ವಿದೇಶಗಳಿಂದ ರೂ. 180 ಲಕ್ಷ ಕೋಟಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳಬೇಕಾದ ಸ್ಥಿತಿ ಇದೆ. ಅಮೆರಿಕದೊಡನೆಯ ವಹಿವಾಟನ್ನು ರೂ. 45 ಲಕ್ಷ ಕೋಟಿಗೆ ಪರಿಮಿತಿಗೊಳಿಸಿದರೂ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿರುತ್ತದೆಂದು ವಿವರಿಸುವ ಆವಶ್ಯಕತೆಯಿಲ್ಲ.

ಯೂರೋಪ್-ಅಮೆರಿಕಗಳಲ್ಲದೆ ಭಾರತ ಇನ್ನೂ 11 ರಾಷ್ಟ್ರಗಳೊಡನೆ ಮುಕ್ತ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಳ್ಳುವ ಸಿದ್ಧತೆಯಲ್ಲಿದೆ. ಹೀಗೆ ಯಾವುದೇ ದೃಷ್ಟಿಯಿಂದಲೂ ಭಾರತ ಆತಂಕಗೊಳ್ಳಬೇಕಾದ ಸ್ಥಿತಿಯಿಲ್ಲ. ಭಾರತದ ರಫ್ತುದಾರರಿಗೆ ಅಮೆರಿಕದ ಮೂವತ್ತು ಟ್ರಿಲಿಯನ್ ಮೌಲ್ಯದ ಮಾರುಕಟ್ಟೆ ತೆರೆದುಕೊಳ್ಳಲಿದೆ. ರಫ್ತು ಹೆಚ್ಚಳದಿಂದಾಗಿ ಭಾರತದಲ್ಲಿನ ಮಹಿಳೆಯರಿಗೂ ಯುವಕರಿಗೂ ಹೆಚ್ಚಿನ ಉದ್ಯೋಗನಿರ್ಮಾಣಕ್ಕೆ ಆಸ್ಪದವಾಗುತ್ತದೆಂದು ಹೇಳುವ ಆವಶ್ಯಕತೆಯಿಲ್ಲ. ಅಂತೆಯೇ ಈ ಒಪ್ಪಂದಗಳ ಪರಿಣಾಮವಾಗಿ ಭಾರತದ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಜಾಗತಿಕ ನೆಲೆಯಲ್ಲಿ ಅವಕಾಶಗಳು ಹೆಚ್ಚಲಿವೆ.

ವಿಶ್ವಾಸಾರ್ಹತೆಯೇ ತಳಹದಿ

ಯೂರೋಪ್-ಅಮೆರಿಕ ದೇಶಗಳು ಭಾರತದ ಹೆಚ್ಚಿನ ಬೇಡಿಕೆಗಳಿಗೆ ಅನುಕೂಲಕರವಾಗಿ ಸ್ಪಂದಿಸುತ್ತಿರುವುದು ವೈಶ್ವಿಕವಾಗಿ ಭಾರತ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವೆನಿಸಿರುವುದನ್ನು ತೋರಿಸುತ್ತದೆ – ಎಂದು ನರೇಂದ್ರ ಮೋದಿ ಮಲೇಶ್ಯದಲ್ಲಿ ಹೇಳಿದುದರಲ್ಲಿ ಉತ್ಪ್ರೇಕ್ಷೆಯಿಲ್ಲ.

ಭಾರತದಲ್ಲಿ ವಿಪಕ್ಷಗಳವರು ತೀಕ್ಷ್ಣವಾಗಿ ಆಕ್ಷೇಪಿಸುತ್ತ ಬಂದಿರುವುದು ಈಗಿನ ಒಪ್ಪಂದಗಳು ಭಾರತದ ಕೃಷಿ ಕ್ಷೇತ್ರಕ್ಕೆ ಮಾರಕವೆಂದು. ಇವೆಲ್ಲ ಗತಾನುಗತಿಕ ಶುಷ್ಕ ಟೀಕೆಗಳಷ್ಟೆ. ವಾಸ್ತವ ಬೇರೆಯೆ ಇದೆ. ಅಮೆರಿಕವು ಭಾರತದಿಂದ 44 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಶೂನ್ಯ ಸುಂಕದಲ್ಲಿ ಸ್ವೀಕರಿಸಲೊಪ್ಪಿದೆ. ಹೀಗಾಗಿ ಕೃಷಿ-ಡೈರಿ ಉತ್ಪನ್ನಗಳು, ಅಕ್ಕಿ, ಗೋಧಿ, ಮೆಕ್ಕೆಜೋಳ, ಸೋಯಾ, ಕೆಲವು ತರಕಾರಿ-ಮಾಂಸಗಳು – ಇವನ್ನೆಲ್ಲ ಸುಂಕದ ಕಕ್ಷೆಯ ಹೊರಗಿರಿಸಲಾಗಿದೆ. ಬೇಳೆಕಾಳುಗಳು, ಡಿಜಿಟಲ್ ಸಾಧನಗಳು – ಮೊದಲಾದವನ್ನೂ ಮೊದಲ ಹಂತದ ‘ಫ್ಯಾಕ್ ಷೀಟ್’ನಿಂದ ಭಾರತದ ಕೋರಿಕೆಯಂತೆ ಹೊರಗಿರಿಸಲಾಗಿದೆ. ಇಷ್ಟು ರಿಯಾಯತಿಗಳನ್ನು ಭಾರತ ಪಡೆಯಲಾಗಿರುವುದು ವಿಸ್ಮಯಕರವೆಂದೇ ಅನ್ಯ ವಲಯಗಳು ಅಭಿಪ್ರಾಯಪಟ್ಟಿವೆ. ಹೀಗೆ ಅಧಿಕ ಅಂಶಗಳು ಭಾರತಕ್ಕೆ ಅನುಕೂಲಕರವಾಗಿ ಪರಿಣಮಿಸಿರುವುದು ಭಾರತವು ಮಾತುಕತೆಗಳಲ್ಲಿ ದೃಢಮನಸ್ಕತೆ ತೋರಿರುವುದನ್ನೂ ಅಮೆರಿಕದ ಸದ್ಯದ ಮನೋವೃತ್ತಿಯನ್ನೂ ಪ್ರತಿಫಲಿಸುತ್ತಿದೆ.

ಯಾವುದೇ ದ್ವಿಪಕ್ಷೀಯ ಸಂಧಾನಗಳಲ್ಲಿ ಫಲಿತವು ಶತಾಂಶ ಏಕಮುಖವಾಗಿ ಇರಲಾರದೆಂಬ ಮತ್ತು ವ್ಯವಹಾರಗಳು ನಲ್ಲಿಕಟ್ಟೆ ಜಗಳಗಳ ರೀತಿಯಲ್ಲಿ ನಡೆಯಲಾರವೆಂಬ ಪ್ರಾಥಮಿಕ ವಾಸ್ತವದಿಂದ ನಮ್ಮ ವಿಪಕ್ಷಗಳು ವಿಮುಖವಾಗಿರುವುದು ಅಚ್ಚರಿ ತರುತ್ತಿದೆ. ವಿಪಕ್ಷಗಳಿಂದ ಹೆಚ್ಚಿನ ಪ್ರಬುದ್ಧತೆಯನ್ನು ನಿರೀಕ್ಷಿಸಬೇಕಾಗಿದೆ.

***

Facebook
X
WhatsApp
Print
Email
Leave A Reply