ಕರ್ನಾಟಕ ವೀರರೇಳಿ

ಕರ್ನಾಟಕ ವೀರರೇಳಿ | ರಣಭೇರಿ ಕೊಂಬ ಕೇಳಿ |

ಸ್ವಾತಂತ್ರ್ಯ ಮಂತ್ರವನು ಹೇಳಿ | ಪರದಾಸ್ಯ ದೇಹ ಸೀಳಿ         ||ಪಲ್ಲವಿ||

ಪರತಂತ್ರ ಕತ್ತಲೆಯು ಹಾರಿ | ಸ್ವಾತಂತ್ರ್ಯ ಸೂರ್ಯ ತೋರಿ ||

ಭಾರತೀಯ ಜೀವ ಕಳೆಯೇರಿ | ಪರವೈರಿಗಾಯ್ತು ಮಹಾಮಾರಿ  ||೧||

ಧುರಧೀರ ಬುಕ್ಕ ಮಾಧವರು | ಪುಲಕೇಶಿ ವೀರ ವಿಕ್ರಮರು ||

ಸ್ವಾತಂತ್ರ್ಯ ಮಂತ್ರ ಸಾರಿದರು | ಪರರಾಜರನ್ನು ಮೆಟ್ಟಿದರು||೨||

ಲಾಲಾಜಿ ಲಾಠಿ ಹೊಡೆತದಲ್ಲಿ | ಕಲಿ ಜತಿನದಾಸ ಬಹುಬಳಲಿ ||

ನಿಮಗಾಗಿ ಕೊಟ್ಟಿರಾತ್ಮಬಲಿ | ಕುಳಿತಿಹರು ನಗುತ ಸ್ವರ್ಗದಲಿ   ||೩||

ಭಾರತದ ರಕ್ತವನು ಹೀರಿ | ವೀರತೆಯ ಕುಕ್ಕಿ ನೆಲಕೂರಿ |

ಭಾರತೀಯ ಮಾನವನು ಮಾರಿ | ಮಾಡಿದರು ನಾಡ ಸೆರೆ ಸೂರಿ       ||೪||

ಸ್ವಾತಂತ್ರ್ಯ ಸ್ವಾಭಿಮಾನ | ಹೊಮ್ಮಿಕ್ಕಿ ಕಾದಿರಣ್ಣ ||

ಧುಮ್ಮಕ್ಕಿರಣದೊಳಿನ್ನಾ | ಹಗೆಯನ್ನು ಮೆಟ್ಟಿರಣ್ಣಾ ||೫||

ಕರ್ನಾಟಕ ವೀರರೇಳಿ | ರಣಭೇರಿ ಕೊಂಬ ಕೇಳಿ |

ಸ್ವಾತಂತ್ರ್ಯ ಮಂತ್ರವನು ಹೇಳಿ | ಪರದಾಸ್ಯ ದೇಹ ಸೀಳಿ ||ಪಲ್ಲವಿ||

–ಜಿ. ರಾಮರಾವ ಹೇಜೀಬ

(‘ಬೆಳಗಾವಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಸಮರ’ ಸಂಗ್ರಹದಿಂದ)

Facebook
X
WhatsApp
Print
Email