ಕಾಲವೇ ಸಮ ಇಲ್ಲೆ, ಕಾಣಿ…

“ಅದಕ್ಕೆ ನನ್ ಗಂಡ ಯಾವಾಗ್ಲು ಆಡ್ಕಂತಿದ್ರ್…ಲೆಕ್ಕಕ್ಕಿಂತ ಹೆಚ್ಚು ಆಸ್ತಿ ಇಪ್ಪುಕಾಗ, ಹಸಿವಿಗಿಂತ ಹೆಚ್ಚು ಊಟ ಮಾಡುಕಾಗ ಅಂತ…”

DSC01780-001ವಯಸ್ಸಾಗೋದು ಅಂದ್ರೆ ಅದೊಂದು ಬಗೆಯ ಶಾಪ. ಅದಕ್ಕೇ ಯಯಾತಿ ತನ್ನ ಮುಪ್ಪನ್ನು ಆ ಬಗೆಯಲ್ಲಿ ತಿರಸ್ಕಾರ ಮಾಡಿದ್ದು. ಮಗನಿಗೇ ಅದನ್ನು ಧಾರೆ ಎರೆಯುವಷ್ಟು ಧಾರ್ಷ್ಟ್ಯ ತೋರಿದ್ದು. ಯೌವ್ವನದಲ್ಲಿ ಕಂಡದ್ದೆಲ್ಲವೂ ವೃದ್ಧಾಪ್ಯದಲ್ಲಿ ವಿವಿಧ ಭಾವಗಳನ್ನು ಹುಟ್ಟಿಸುತ್ತವೆ. ಕೆಲವರಿಗೆ ಕೌತುಕ, ಇನ್ನು ಕೆಲವರಿಗೆ ಆಸೆ, ಇನ್ನು ಕೆಲವರಲ್ಲಿ ಹತಾಶೆ, ಮತ್ತೆ ಕೆಲವರಿಗೆ ರೇಜಿಗೆ; ಕೈ ಸಿಗದ್ದೆಲ್ಲವೂ ಹುಳಿ ಎಂದಾದಾಗ ಅಸಹನೆ ಸಹಜ. ಒಂದು ವೇಳೆ  ಮುಪ್ಪಿನಲ್ಲೂ  ಸಂತೋಷವಾಗಿ ಇರುತ್ತಾರೆ ಎಂದರೆ ಅವರು ಪೂರ್ವಜನ್ಮದಲ್ಲಿ ಏನೋ ಪುಣ್ಯ ಮಾಡಿದ್ದಾರೆ ಎಂದರ್ಥ. ಅಷ್ಟು ವರ್ಷ ಮಕ್ಕಳು ಸಂಸಾರ ಅಂತೆಲ್ಲ ಆದರ್ಶಗಳಿಗೆ ಬಲಿಯಾಗಿ ಕೊನೆಗೆ ಇದ್ದೂ ಇಲ್ಲವಾಗುವುದೇ ಮುಪ್ಪು. ರಾತ್ರಿ ಎಷ್ಟೇ ಹೊರಳಾಡಿದರೂ ನಿದ್ದೆ ಬಾರದು, ಬೆಳಗ್ಗೆ ಬೇಗನೆ ಎಚ್ಚರವಾದರೆ ರಾತ್ರಿವರೆಗೆ ಹೊತ್ತು ಹೋಗದು. ಎಷ್ಟು ಕಷ್ಟ ಅಲ್ವಾ? ಇದು ಮಗನ ಮನೆ, ಮಗಳ ಮನೆ, ವೃದ್ಧಾಶ್ರಮ, ಅನಾಥಾಶ್ರಮ ಎಲ್ಲ ಕಡೆಯಲ್ಲಿನ ಸಾಮಾನ್ಯ ಚಿತ್ರಣ. ಹೊತ್ತು ಹೋಗದವನಿಗೆ ಮುಪ್ಪು ಬರಬಾರದು. ಹೊತ್ತು ಕಳೆಯುವ ಕಲೆಯಿದ್ದವನಿಗಂತೂ ಮುಪ್ಪು ಬಂದುದೇ ತಿಳಿಯದು.

“ಏನಜ್ಜೀ…. ಎಲೆಯಡಿಕಿ ಹಾಕ್ಕಂಡು ಆರಾಮಾಗಿ ಕೂಕಂಡ್ರಿ?”

“ಮತ್ತೆ ಮಣಭಾರದ ಆ ಗೋಣೀಚೀಲ ಹಾಯ್ಕಂಡ್ ನಿನ್ನ ಹಾಗೆ ಶಾಲೆಗೆ ಹೋಯ್ಕಿತ್ತೇನು?”

“ಅಯ್ಯೋ ಬೇಡಜ್ಜಿ, ನಮ್ಮ ಪಾಡು ನಮಗೇ ಗೊತ್ತು. ಈ ಭಾರಾನೂ ಸಾಕು, ಈ ಶಾಲೆನೂ ಸಾಕು.”

“ಹಾಗಂದ್ರೆ ಹ್ಯಾಂಗೇ ಪುಟ್ಟೀ, ನಮ್ಗೆಲ್ಲಾರೆ ಶಾಲೆ ಕಡೆ ತಲಿಹಾಕಿ ಮನ್ಕಂಡ್ದಿದ್ರೂ ಬದುಕು ಇಲ್ಲಿತಂಕ ಬಂತು. ನಿಂಗೆ ಹಾಂಗಲ್ದೇ?”

“ಹುಂ ಅಜ್ಜಿ, ನಿಮಗೆಲ್ಲ ಎಷ್ಟು ಗಮ್ಮತ್ ಕಾಣ್? ಬೆಳಗ್ಗೆ ಬೇಗ ಏಳ್ಕಂತಿಲ್ಲೆ, ಕೋಳಿಗೂಡು ಹಾಂಗ್ ಇಪ್ಪೋ ವ್ಯಾನಲ್ಲಿ ಗಬ್ಬು ವಾಸ್ನೆ ತಿಂದ್ಕಂಡು ನೇತಾಡ್ಕಂತಿಲ್ಲೆ. ಹೋಮ್‌ವರ್ಕ್ ಇಲ್ಲೆ, ಎಕ್ಸಾಂ ಇಲ್ಲೆ, ವಾವ್…. ಎಂಥ ಮಜಾ ಅಲ್ದಾ? ಛೆ…. ನಾನೊಂದು ಎಪ್ಪತ್ತು ವರ್ಷ ಮೊದ್ಲೇ ಹುಟ್ಟುತ್ತಿದ್ರೆ…..”

“ಸಾಕು ಮಾಡು ಹೆಣ್ಣೇ…. ನೀನೀಗ ಹುಟ್ಟಿದ್ದಕ್ಕೇ ಹೀಗಿಪ್ಪದು ಗೊತ್ತಿತ್ತ್ತಾ? ನಮ್ಮ ಕಾಲದಲ್ಲಿ ಏನಿತ್ತು ಅಂತ ಆಸೆ ಪಡ್ತೆ? ನಮ್ದೂ ಒಂದು ಜನ್ಮಾನಾ?”

“ಯಾಕಜ್ಜೀ…. ಮೂರು ಹೊತ್ತೂ ಹಾಯಾಗಿರೋದು ನಿನಗೆ ಇಷ್ಟ ಇಲ್ಯಾ?…. ಹೋಯ್ಲಿ, ನಿಮ್ಮ ಕಾಲದ ಕಥೆ ಹೇಳ್….ನಾನ್ ಕೇಂತೆ….”

“ಏನ್ ಕಥೆನೋ ಮಣ್ಣೋ…. ಬಿಡು ಮಗಾ…. ಎಲ್ಲ ಬೇರೆಯವರ ಆಣತಿಯಾಂಗೇ ಆಯ್ಕ್….. ಹುಟ್ತಾನೇ ಅಪ್ಪಯ್ಯ ಜೊತೆಗಿರ್‍ತ. ನೀ ಹೆಣ್ಣ್…. ನಿನ್ನಪ್ಪ ನಾನ್. ನೀನ್ ನಾನ್ ಹೇಳ್ದಾಂಗೆ ಕೇಣ್ಕ್. ಅಕ್ಕ್… ೪-೫ ವರ್ಷಕ್ಕೇ ಅಡುಗೆ ಮನೆ ಖಾಯಂ ಆತ್. ಜೊತೆಗೆ ತಮ್ಮಂದಿರನ್ನ ತಂಗಿಯರನ್ನು ಕಂಡ್ಕ. ಅಣ್ಣ ತಮ್ಮಂದಿರಿಗೆಲ್ಲಾ ಎಂಥ ಗಮ್ಮತ್ತು! ಎಲ್ಲಿಗೆ ಬೇಕಾರೂ ಹೋಯ್ಲಕ್ಕ್…. ಆಡ್ಲಕ್ಕ್. ಹಾಲು ತುಪ್ಪದ ಸಮಾರಾಧನೆ. ನಮ್ಗೆ ಅವರುಂಡು ಬಿಟ್ಟದ್ದು. ಹತ್ತು ಹನ್ನೆರಡು ವರ್ಷದೊಳಗೆ ಮದುವೆ. ಅದು ಮದುವೆಯಾ? ಮಸಣ. ಗಂಡ ಎಂಥವನೋ! ಅಪ್ಪನಂಥವನಾದರೂ ಸರಿಯೆ. ಆಮೇಲೆ ಗಂಡನ ಮನೆ. ಜಾಗ ಬದಲಾವಣೆ ಅಷ್ಟೆ, ಕೆಲಸ ಅದೇ. ಕೆಲವರಿಗೆ ಸ್ವಲ್ಪ ಕಷ್ಟ, ಕೆಲವರಿಗೆ ಸ್ವಲ್ಪ ಸುಲಭ. ನಾಯಿಮರಿಗಳ ಥರಾ ಮಕ್ಳು. ಬೆವರು ಸುರಿಸಿದ್ದೆ ಅಂಬುದು ಸುಳ್ಳೇ….ಸುರಿದದ್ದು ರಕ್ತ…..ಪುಟ್ಟೀ ರಕ್ತ.”

“ಅಯ್ಯಾ ನಿಮ್ಮನ್ ಯಾರೂ ಏನೂ ಕೇಂಬೋರಿಲ್ಯಾ ಅಜ್ಜೀ?”

“ಯಾಕೆ ಕೇಣ್‌ತ್ರ್ ಮಗಾ, ಗಂಡಸ್ರಿಗೆ ಅವ್ರು ಮಾಡಿದ್ದೇ ಸರಿ ಅಂತಾನೇ ಇಪ್ಪುದು… ನಮ್ ಮಕ್ಳೇ ನಮ್ಮಾತ್ ಕೇಂಬುದಿಲ್ಲೆ. ಅಪ್ಪಯ್ಯ, ಗಂಡ, ಭಾವ ಎಲ್ರೂ ಯಾಕ್ ಕೇಣ್‌ತ್ರ್? ಅಷ್ಟೆಲ್ಲಾ ಮಾಡಿಯೂ ನಮ್ ಮಕ್ಳಿಗೆ ನಾವು ಭಾರ.”

“ನಿಮ್ಮಗ ನಿಮ್ಮನ್ ಇಷ್ಟು ಚೆನ್ನಾಗ್ ಕಂಡ್ಕಂತ್ರಲ್ಲೆ?”

“ಹ್ಞುಂ ಅಂದ್ರೂ ಸರಿ, ಊಹೂಂ ಅಂದ್ರೂ ಸರಿ…”

“ಅಜ್ಜಿ, ನಿಮ್ ಫ್ರೆಂಡ್ ಬಂದ್ರ್ ಕಾಣಿ…. ನಾನ್ ಹೋತ್ತೆ ಅಕ್ಕಾ….”

“ಬನ್ನಿ ಜಾನಕಮ್ಮ…. ನೀವು ಬರೋವರೆಗೆ ಆ ಹುಡ್ಗಿ ಜೊತೆ ಹರಟೆ ಹೊಡ್ಕೊಂಡ್ ಕುಂತಿದ್ದೆ.”

“ಮತ್ತಿನ್ನೇನು ಮಾಡೋದು? ನಮಗೆ ಅದಲ್ದೆ ಇನ್ನೆಂಥ ಇಪ್ಪುದು ಮಣ್ಣು ಬದುಕಲ್ಲಿ? ಯಾರ್ ಮಾತಾಡೂಕೆ ಸಿಕ್ಕ್‌ತ್ರ್ ಅಂತಾನೆ ಕಾಯ್ಕಂಡಿಪ್ಪುದ್…ನಂಗೂ ಅದ್ಕೇ ತಡ ಆಯಿತ್…ನಮ್ಮನಿಗೆ ನನ್ ಸೊಸೆ ತಾಯಿ ಬಂದೀರ್…ಇನ್ನು ಇಲ್ಲೇ ಆಯ್ಕಂತ್ರೇನೋ…”

“ಅರೆ ಹೌದಾ? ಹಾಂಗಾರೆ ನಿಮ್ಗೆ ಇನ್ನು ಗಮ್ಮತ್ತ್…ಮನೆಲೆ ಹರಟೆಗೆ ಜನ ಸಿಕ್ರಲ್ಲಾ?”

“ಏನು ಗಮ್ಮತ್ತೋ ಏನೋ…ಅವ್ರು ಒಂಥರಾ ಹೆಂಗ್ಸು…ಮೂರು ಜನ ಮಗಂದಿರ ಮನೆಲೂ ಆಯಿಲ್ಲಾಂದ್ರೆ ನೀವೇ ಹೇಳಿ…”

“ಹೌದಾ…ಅದ್ಯಾಕ್ರಿ ಹಾಂಗೇ…?”

“ಗೊತ್ತಿಲ್ಲೆ…ಮನೆಲಿ ನಿನ್ನೆ ನನ್ ಮಗಂಗೂ ಸೊಸೆಗೂ ಭಾರೀ ಚರ್ಚೆ ನಡೀತಿತ್ತ್. ಏನು ಅಂತ ಗೊತ್ತಾಯ್ಲೆ.”

“ಯಾಕೆ ನಿಮ್ ಜೊತೆ ಹ್ಯಾಂಗಿದ್ರ್ ಅವ್ರ್?”

“ಅದೇ ಹೇಳ್ನಲ್ಲಾ? ಅವ್ರ್ ಒಂದು ರೀತಿ ಅಂತ…ನೀವು ಯಾರಿಗೂ ಹೇಳ್ಬೇಡಿ ಅಕ್ಕಾ?…ಅವ್ರ ಗಂಡಂಗೆ ಇವ್ರು ಎರಡ್ನೇ ಹೆಂಡ್ತಿಯಂಬ್ರ್.”

“ಅಯ್ಯೋ ರಾಮಾ? ಅದ್ ಈಗ ಹ್ಯಾಂಗ್ ತಿಳೀತ್? ಇನ್ನೇನ್ ಮಾಡ್‌ತ್ರಂತೆ?”

“ಏನೋಪ್ಪಾ…ನಿನ್ನೆ ರಾತ್ರಿ ನಿದ್ದೆ ಬತ್ತಿಲ್ಲಾಂದ್ಕಂಡ್ ತಾರಸಿಯ ಮ್ಯಾಲ್ ಹೋಯಿ ಕೂಕಂಡಿದ್ನಾ…ಎಷ್ಟು ನಿರಾಳ ಅನ್ನಿಸ್ತು ಗೊತ್ತಿತ್ತಾ? ಜತಿಗೊಂದು ಹಿತವಾದ ಬೇನೆ…ನಕ್ಷತ್ರ ಕಾಣ್ತಾ ಆಯ್ಕಂಡ್ರೆ ನಾವ್ ಏಗಳಿಕೆ ಹೋಯಿ ಅಲ್ಲಿಗ್ ಸೇರತ್ತ್ ಅಂತಾನೇ ಯೋಚ್ನೆ…ಅಷ್ಟೊತ್ತಿಗೆ ಇವ್ರ ರಾಮಾಯಣ ಶುರುವಾಯ್ತು ಕಾಣಿ…ನಾನಿಲ್ಲಿ ಇಪ್ಪ್‌ದ್ ಗೊತ್ತಾರೆ ಏನೂ ಮಾತಾಡ್ತಿರ್‍ಲ ಬಿಡಿ. ನಮ್ ಸೊಸೆ ಮತ್ತವ್ರ ಅಣ್ಣಂದಿರು ಕಡಿಮೆಯವ್ರಾ? ನಂಗ್ ನಿನ್ನೆನೇ ಗೊತ್ತಾಯಿದ್ದ್, ಅವ್ರ ತಾಯಿ ಹೆಸರಲ್ಲಿದ್ದ ಆಸ್ತಿಯನ್ನೆಲ್ಲಾ ಇವ್ರೆ  ಸೇರಿ ಹಂಚಿಕೊಂಡಿದ್ರ್ ಅಂತ.”

“ಅಯ್ಯೋ ಅದೇನ್ ಮಹಾ…ಈಗ ನಾನಿಲ್ಯಾ ಎಲ್ಲ ಕೊಟ್ಕಂಡ್ ಭಿಕಾರಿ ಥರಾ…ಇದ್ರಲ್ಲಿ ನಮ್ ಮಕ್ಕಳದೇನು ತಪ್ಪಿಲ್ಲ ಬಿಡಿ. ಅವ್ರ್ ಮಾತಿಗ್ ಮರುಳಾಯಿ ಖಾಲಿಯಾಪುದಿತ್ತಲ್ಲೆ  ಅದು ಅವ್ರ ಜಾಣತನ ಅಲ್ಲ ನಮ್ಮ ಮೂರ್ಖತನ.”

“ಹೋಯ್ಲಿ ಬಿಡಿ. ನೀವ್ಯಾಕ್ ಬೇಜಾರ್ ಮಾಡ್ಕಂತ್ರಿ?…ನಿಮ್ಮೆಲೇನೂ ಕೇಸುಹಾಕೋರು ಯಾರೂ ಇಲ್ಲೆ ಅಲ್ದಾ…”

“ಕೇಸಾ… ಯಾರ್ ಕೇಸ್ ಹಾಕ್ರ್?”

“ಅದೇ ಇವ್ರ್ ಎರಡನೇ ಹೆಂಡ್ತಿ ಅಲ್ದಾ? ಅವ್ರ ಮೊದಲ್ನೇ ಹೆಂಡ್ತಿ ಮಕ್ಳೆಲ್ಲಾ ಕೋರ್ಟ್ ಮೆಟ್ಲು ಹತ್ತಿದ್ದೊ. ನಮ್ಮಪ್ಪಯ್ಯನ ಆಸ್ತೀಲಿ ಪಾಲ್ ಕೊಡ್ಕ್ ಅಂತ…”

“ಅಯ್ಯೋ ರಾಮಾ…ಇದೊಳ್ಳೆ ಕತಿಯಾಯ್ತಲ್ಲೆ…ಅದು ಪಿತ್ರಾರ್ಜಿತ ಆಸ್ತಿಯಾ ಹಂಗಾರೆ?”

“ಅದೇನೋ ನಾ ಕಾಣೆ…ನನ್ನ ಮಗ ಗಟ್ಟಿ ದನಿಲಿ ಬೈಕಂತಿದ್ದ. ಬೇಡಾಂದ್ರೂ ಕೇಳದೆ ಆಸ್ತಿ ಬರಿಸ್ಕೊಂಡಿದೀಯಾ ಈಗ ಅನುಭವಿಸು ಅಂತ…”

“ಮುಂದೇನ್ ಹಂಗಾರೆ?”

“ನಂಗೊಂದು ಗೊತ್ತಾತಿಲ್ಲೆ…ಮನೇಲಿ ಮೊದಲೇ ದಿನಾ ಜಗ್ಳ ಆಗ್ತಿರತ್, ಇನ್ನಂತೂ ಕೇಂಬುದ್ ಬ್ಯಾಡ.”

“ಛೆ! ಅದಕ್ಕೆ ನನ್ ಗಂಡ ಯಾವಾಗ್ಲು ಆಡ್ಕಂತಿದ್ರ್…ಲೆಕ್ಕಕ್ಕಿಂತ ಹೆಚ್ಚು ಆಸ್ತಿ ಇಪ್ಪುಕಾಗ, ಹಸಿವಿಗಿಂತ ಹೆಚ್ಚು ಊಟ ಮಾಡುಕಾಗ ಅಂತ.”

“ನಿಮ್ಮೆಜಮಾನ್ರು ಇರ್‍ಕಾರೆನೆ ಆಸ್ತಿ ಪಾಲಾಯಿತ್ತಾ?”

“ಹ್ಞುಂ…ಆದರೆ ಏನು ಪ್ರಯೋಜ್ನ? ಅದೇ ಅವ್ರ್ ಪಾಲಿಗೆ ನೇಣಾಯ್ತ್…”

“ಯಾಕೆ? ಹೋ… ನಿಮ್ದೂ ಕೂಡು ಕುಟುಂಬ ಅಲ್ದಾ…?”

“ಹೌದೇ. ಎಲ್ಲಾ ಜೊತಿಗೆ ಐವತ್ತು ಬಟ್ಲ್ ಹೊತ್ತಿನೂಟಕ್ಕೆ. ಮನೆಗೆ ನಮ್ಮೆಜಮಾನ್ರೆ ಹಿರಿ ತಲೆ. ಅವ್ರ ಆಣತಿ ಇಲ್ದೆ ಒಂದು ಲೋಟಾನೂ ಅಲ್ಲಾಡ್ತಿರ್‍ಲಿಲ್ಲೆ. ಗಂಡುಮಕ್ಳೂ ಅವ್ರ ಎದರಿಗೆ ಗಟ್ಟಿ ಉಸಿರೂ ಎತ್ತುಹಾಂಗಿಲ್ಲೆ ಗೊತ್ತಿತ್ತಾ? ಸಾಯೋವಾಗ ಮಾತ್ರ ಇಲಿಮರಿ ಥರಾ ಆಯಿದ್ರ್. ಎಪ್ಪತ್ತ್ರವರೆಗೂ ಏನೂ ಖಾಯಿಲೆ ಇರ್‍ಲಿಲ್ಲೆ ಅಕ್ಕಾ?”

“ಪುಣ್ಯವಂತರು ಕಾಣಿ.”

“ಹ್ಯಾಂಗ್ ಹೇಳುದ್ ಅವ್ರ್ ಪುಣ್ಯಾನಾ? ಕಡಿಗೂ ಅವ್ರ್ ಒಂದೇ ಒಂದು ಆಸೆ ಈಡೇರ್‍ಲೇ ಇಲ್ಲ ಕಾಣಿ – ಸಾಯೋವರೆಗೂ ತಾನು ಹುಟ್ಟಿಬೆಳೆದ ಮನೇಲಿ ಎಲ್ರೂ ಜೊತೆಯಾಗೇ ಇರ್‍ಕ್ ಅಂಬುದು. ಅವ್ರಿಗೆ ಸಕ್ಕರೆ ಖಾಯಿಲೆ ಇದೆ ಅಂತ ಗೊತ್ತಾಪುಲ್ಲೊರೆಗೂ ಎಲ್ರೂ ಜೊತಿಗೇ ಇದ್ದಿದ್ದು. ಆಮೇಲೆ ಎಲ್ರೂ ಬದಲಾದ್ರ್.”

“ಅದೊಂದು ಖಾಯಿಲೆ ಎಷ್ಟು ವಿಚಿತ್ರ ಕಾಣಿ. ಹುಟ್ದಾಗಿಂದಾನೂ ನಂಗ್ ಸಿಹಿ ಅಂದ್ರೆ  ಆಗ. ಯಾವಾಗ ತಿನ್ನುಕಾಗ ಅಂತ ಡಾಕ್ಟ್ರು ಹೇಳೀರೋ ಕದ್ದಾದ್ರೂ ತಿನ್ಕ್ ಅನ್‌ಸ್ತ್…ಕೂಸಿನ್ ಚಾಕ್ಲೇಟ್ ಕದ್ದು ತಿಂದ್ ಬೈಸ್ಕಂತ್ನೇ ಎಷ್ಟೋ ಸಲ…!”

“ಎಷ್ಟಪಾ ದೊಡ್ಡ್ ಸಂಸಾರ ನಮ್ದ್! ಈ ಆಸ್ತಿ ಅಂತಸ್ತು ಜಗ್ಳ ಮನಸ್ತಾಪ ಎಲ್ಲ ಎಂಥ ಸೊಬಗನ್ನೂ  ಹಾಳ್ ಮಾಡತ್ತ್ ಕಾಣಿ. ಖಾಯ್ಲೆ ಹೆಚ್ಚಾತ್. ಮನೆಯಿಂದ ಒಬ್ಬೊಬ್ರೆ ಹೊರಹೋಯ್ರ್. ಪ್ರತೀ ಸಲ ಮಕ್ಳೂ ಹೋಪ್ಪೋತ್ತಿಗೂ ಇವ್ರ್ ಕೋಣೆಯೊಳಗೆ ಛಾವಣಿ ಕಂಡ್ಕಂಡ್ ಕೂಕಂತ್ರ್. ಅಣ್ಣ ತಮ್ಮಂದಿರ ಮಕ್ಳಲ್ ಯಾರೇ ಹೋಯ್ಲಿ ನಮ್ಮೆಜಮಾನ್ರಿಗಂತೂ ತನ್ನ ಸ್ವಂತ ಕೂಸು ಕಳ್ದು ಹೋದ್ದೇ ಸಂಕ್ಟ.”

“…”

“ಪಾಲು ಪಟ್ಟೆಲಿ ವ್ಯತ್ಯಾಸ ಆಯಿತ್ತ್ ಅಂತ ಇವ್ರ ತಮ್ಮಂದ್ರ ಹೆಂಡತೀರು ಕಿವಿ ಕಚ್ಚೀರ್. ನೂರು ಸಲ ಒಂದೇ ಸುಳ್ಳನ್ನು ಹೇಳ್ರೆ ಅದು ನಿಜ ಆತ್ತಂತ ನಮ್ಮಮ್ಮ ಯಾವಾಗ್ಲೂ ಹೇಳ್ತಿರ್ತ್ಳ್. ಹಾಂಗೆ ಆಯ್ತ್ ಕಾಣಿ.”

“ಮರ್‍ಕ್‌ಬೇಡಿ ಪದ್ದಮ್ಮ. ಛೆ! ಈ ಆಸ್ತಿ, ಬಂಗಾರ ಎಲ್ಲ ಆಗಬಾರದ್ದನ್ನೇ ಮಾಡಬಾರದ್ದನ್ನೇ  ಮಾಡಿಸ್ತಂಬ್ರ್. ಕಾಲವೇ ಸಮ ಇಲ್ಲೆ ಕಾಣಿ.”

“ಕಾಲವನ್ನು ದೂರಿ ಏನ್ ಮಾಡ್ತ್ರಿ? ವಿಧಿ ಅದು. ನಮ್ಮೆಜಮಾನ್ರು ಸಾಯೋ ಕಾಲದಲ್ಲಿ ಮಗ ಎಷ್ಟೇ ಲಾಯ್ಕ್ ಮಾಡಿ ಕಂಡ್ಕಂಡ್ರೂ ನನ್ನ ಮನಿಯಲ್ಲ ಇದ್ ಅನ್ನೋ ಕೊರಗಲ್ಲೇ ತೀರ್‍ಕಂಡ್ರ್… ಅಯ್ಯೋ ಸೊಸೆ ಗ್ಯಾಸ್ ಮೇಲೆ ಹಾಲಿಟ್ಟು `ಚೂರ್ ಕಾಣಿ ಅತ್ತೇ’ ಅಂದೀಳ್. ನಮ್ ಹರಟೆ ವ್ಯಾಪಾರ ಮುಗಿತಿಲ್ಲ ಬಿಡಿ…ಹೋಯಿ ಬತ್ತೆ. ನೀವ್ ಕುಂತಿರಿ…ಅಕ್ಕಾ?”

Facebook
X
WhatsApp
Print
Email