ಕಾವ್ಯಗಂಗಾ

ಲಗುನ-ಮರಣವನುದಿನ

Laguna-Maranavanudina

ಹೋಮ ಹೊಗೆಯುಕ್ಕುತಿದೆ ಸಪ್ತಪದಿ ತುಳಿಯಲಿಕೆ

ಧೂಮವಿಕ್ಕಿದೆ ಕೊಳ್ಳಿ ಸೂತಕವ ತೋರಲಿಕೆ             ||೧||

 

ಸಿರಿಸೌಖ್ಯದಿಂ ಬಾಳಿರೆಂದಕ್ಕಿಯಿಕ್ಕುವರು

ಚಿರಶಾಂತಿ ಲಭಿಸಲೆನೆ ಬಾಯ್ಗಕ್ಕಿ ಹಾಕುವರು      ||೨||

 

ಮೆರವಣಿಗೆ ಹೊರಟಿಹುದು ನಾಲ್ಚಕ್ರರಥದಲ್ಲಿ

ಮೆರೆಸುವರು ಶವವನ್ನು ನಾಲ್ಜನರ ಹೆಗಲಲ್ಲಿ             ||೩||

 

ಖುಷಿಯಲ್ಲಿ ಹಾಕುವರು ನವಪುಷ್ಪಗಳ ಮಾಲೆ

ವ್ಯಸನ ಸೂಸಿಡುವರು ಸುಮಸರವ ಶವದ ಮೇಲೆ   ||೪||

 

ಮಲಗುವರು ಕೋಣೆಯೊಳು ಒರುಜನ್ಮವೀಯಲಿಕೆ

ಮಲಗಿಪರು ಕುಳಿಯೊಳಗೆ ಮರುಜನ್ಮ ಪಡೆಯಲಿಕೆ        ||೫||

 

ತಳ್ಕೈಸಿ ಕಳುಹೆ ವಧುವನು ಬಿಕ್ಕುತಳುತಿಹರು

ಬೀಳ್ಕೊಡಲು ಶವವನ್ನು ಕಂಬನಿಯ ಕರೆಯುವರು   ||೬||

 

ಹರಿಯುತಿದೆ ಜನಜಂಗುಳಿಯು ಹುಚ್ಚುಹೊಳೆಯಂತೆ

ಹಿರಿಕಿರಿಯರೆನ್ನದಲೆ ಭೇದವೇನಿರದಂತೆ                 ||೭||

 

ನೋಡಿದಾಗಿವನೆರಡ ತುಸುಸಾಮ್ಯ ಕಂಡೊಡಂ

ಗಾಢವಿಹುದೈ ಭೇದ ತೋರುತತಿಜಂಜಡಂ         ||೮||

 

ಇಂತೊಂದು ಶುಭಲಗುನ ಮತ್ತೊಂದಶುಭಮರಣ

ಸಂತಸದಿ ಸಂಕಟದಿ ಸಾಗುತ್ತಿದೆಯನುದಿನ               ||೯||

—  ಶ್ರೀ ಕುಮಾರನಿಜಗುಣ ಸ್ವಾಮಿಗಳು

ಲೇಖಕರು ಅಧ್ಯಾತ್ಮ ಸಾಧಕರು; ಕೊಳ್ಳೇಗಾಲ ಚಿಲುಕವಾಡಿಯ ನಿಜಗುಣ ಫೌಂಡೇಷನ್ಸ್ ಅಧ್ಯಕ್ಷರು ಹಾಗೂ ಕವಿಗಳು.

 

ನೀಲಿಬಾನಿನಂಗಳದಿ ಅರಳಿ ನಿಂತ ಮೋಡಗಳೆ…

Image0031ನೀಲಿಬಾನಿನಂಗಳದಿ ಅರಳಿ ನಿಂತ ಮೋಡಗಳೆ

ನನ್ನ ಭುವಿಗೆ ಮಳೆಯ ತನ್ನಿ |

ಉರಿ ಬಿಸಿಲ ಬೇಗುದಿಗೆ ಬೆಂದು ಬಳಲಿ ಬಸವಳಿದ

ಈ ಧರೆಯ ತಣಿಸ ಬನ್ನಿ || ನನ್ನ ಭುವಿಗೆ ಮಳೆಯ ತನ್ನಿ ||

 

ಬತ್ತ, ರಾಗಿ, ಜೋಳ, ಗೋದಿ, ಹುರುಳಿ, ತೊಗರಿ, ಹೆಸರುಕಾಳ

ಬಗ್ಗಡದಿ ಬಿತ್ತ ಬನ್ನಿ |

ತೇವಕಾವವು ಬೆಸೆದು ಹೊಸ ಸೃಷ್ಟಿ ಚಿಗುರು ಒಡೆದು

ಹೊಲಕೆಲ್ಲ ಹಸಿರು ತನ್ನಿ || ನನ್ನ ಭುವಿಗೆ ಮಳೆಯ ತನ್ನಿ ||

 

ಒಡೆದ ಏರಿಯ ಬೆಸೆದು ನೆಲದಾಳದ ಹೂಳು ತೆಗೆದು

ಕೆರೆ ಒಡಲ ತುಂಬ ಬನ್ನಿ |

ಕೋಡಿ ತೂಬಿನ ಕದವ ಬಾಡ ಬದುಕಿಗೆ ತೆರೆದು

ಹೊಸತನವನು ನೀಡ ಬನ್ನಿ || ನನ್ನ ಭುವಿಗೆ ಮಳೆಯ ತನ್ನಿ ||

 

ಬೆಟ್ಟ ಕಣಿವೆಯಾ ಕೊರೆದು ಹಳ್ಳ ತೊರೆಗಳ ಹೆಣೆದು

ಗಂಗೆಯಾಗಿ ಹರಿಯ ಬನ್ನಿ |

ನೈಜತೆಯ ರೂಪತಳೆದು ಜೀವಸಂಕುಲ ಪೊರೆದು

ಸಾಗರವ ಸೇರ ಬನ್ನಿ || ನನ್ನ ಭುವಿಗೆ ಮಳೆಯ ತನ್ನಿ ||

—  ಪೆ|| ನಾರಾಯಣ ಶೆಣೈ ಕೆ.

ಲೇಖಕರು ತಂತ್ರಜ್ಞಾನ ಪ್ರೊಫೆಸರ್ ಹಾಗೂ ಪರಿಸರ ಚಳವಳಿ ಕಾರ್ಯಕರ್ತರು

Facebook
X
WhatsApp
Print
Email