ದೀಪ್ತಿ

ಆರಂಭಂತೇಽಲ್ಪಮೇವಾಜ್ಞಾಃ ಕಾಮಂ ವ್ಯಗ್ರಾ ಭವಂತಿ ಚ |

ಮಹಾರಂಭಾಃ ಕೃತಧಿಯಃ ತಿಷ್ಠಂತಿ ಚ ನಿರಾಕುಲಾಃ ||

 – ಶಿಶುಪಾಲವಧ

“ಸಾಮಾನ್ಯ ಪ್ರವೃತ್ತಿಯವರು ಒಂದು ಚಿಕ್ಕ ಕೆಲಸ ಮಾಡಬೇಕಾದರೂ ‘ಇದನ್ನು ಹೇಗಪ್ಪಾ ನಿಭಾಯಿಸುವುದು?’ ಎಂದು ವ್ಯಗ್ರರಾಗುತ್ತಾರೆ, ಚಿಂತೆಗೊಳಗಾಗುತ್ತಾರೆ. ಆದರೆ ಪ್ರಾಜ್ಞರು ಭಾರೀ ಕೆಲಸಗಳನ್ನು ಕೈಗೆತ್ತಿಕೊಂಡರೂ ಗಾಬರಿಗೊಳ್ಳದೆ ಶಾಂತರಾಗಿ ತಾವು ನಿಶ್ಚಯಿಸಿದ ಮಾರ್ಗದಲ್ಲಿ ಮುನ್ನಡೆಯುತ್ತಾರೆ.”

ಖ್ಯಾತ ಹಿಂದೀ ಕವಿ ಭರತ್ ವ್ಯಾಸ್ ಅವರ ಪ್ರಸಿದ್ಧ ಕವನವೊಂದರ ಪಂಕ್ತಿಗಳಿವು:

ತೂ ಜೋ ಚಾಹೇ ಪರ್ವತ್ ಪಹಾಡೋಂಕೋ ಫೋಡ್‌ದೇ

ತೂ ಜೋ ಚಾಹೇ ನದಿಯೋಂಕೇ ಮುಖಕೋ ಭೀ ಮೋಡ್‌ದೇ

“ನೀನು ಮನಸ್ಸು ಮಾಡಿದರೆ ಪರ್ವತಗಳನ್ನೂ ಪುಡಿ ಮಾಡಬಲ್ಲೆ, ನದಿಗಳ ದಿಕ್ಕನ್ನೂ ಬದಲಾಯಿಸಬಲ್ಲೆ.”

ಕವಿಯ ಈ ಹೇಳಿಕೆಯನ್ನು ಅಕ್ಷರಶಃ ನಿಜವಾಗಿಸಿದ ಒಂದು ಉಜ್ಜ್ವಲ ನಿದರ್ಶನ ಇಲ್ಲಿದೆ.

ಬಿಹಾರದ ರಾಜಧಾನಿ ಪಟ್ನಾದಿಂದ ಸುಮಾರು ೧೦೦ ಕಿಲೋಮೀಟರ್ ದೂರದಲ್ಲಿ ಗೆಹ್ಲೋರ್ ಎಂಬ ಗ್ರಾಮವಿದೆ. ಹೊರಜಗತ್ತಿಗೂ ಈ ಗ್ರಾಮಕ್ಕೂ ನಡುವೆ ಒಂದು ಬೆಟ್ಟ ಹರಡಿಕೊಂಡಿದೆ. ಹೀಗೆ ಆ ಗ್ರಾಮದವರು ಏನು ಕೊಳ್ಳಬೇಕಾದರೂ, ವೈದ್ಯಕೀಯ ಅಗತ್ಯ ಬಿದ್ದಾಗಲೂ ಹತ್ತಿರದ ಪಟ್ಟಣಕ್ಕೆ ಹೋಗಬೇಕಾದರೆ ಬೆಟ್ಟವನ್ನು ಪ್ರದಕ್ಷಿಣೆ ಮಾಡಿಯೆ ಹೋಗಬೇಕಾಗುತ್ತಿತ್ತು. ಹೀಗೆ ಮೂವತ್ತೆರಡು ಕಿಲೋಮೀಟರ್ ಪಾದಯಾತ್ರೆ ಮಾಡಬೇಕಾಗುತ್ತಿತ್ತು. ನಡುವೆ ಬೆಟ್ಟ ಇರದಿದ್ದರೆ ಹತ್ತಿರದ ಊರಿಗೆ ಮೂರು-ನಾಲ್ಕು ಕಿಲೋಮೀಟರಿನಷ್ಟೆ ಆಗುತ್ತಿತ್ತು. ಆದರೆ ಇಂಥ ವಿಷಯಗಳಲ್ಲಿ ಯಾರು ತಲೆಕೆಡಿಸಿಕೊಳ್ಳುತ್ತಾರೆ?

ಆ ಗ್ರಾಮದ ಒಬ್ಬ ಕೃಷಿಕಾರ್ಮಿಕ, ದಶರಥ ಮಂಜೀ. ಒಮ್ಮೆ ಅವನಿಗೆ ಬುತ್ತಿ ತರುವಾಗ ಅವನ ಹೆಂಡತಿ ಫಾಗುಣೀದೇವಿ ಬೆಟ್ಟದ ತಪ್ಪಲಿನಲ್ಲಿ ಕಾಲು ಜಾರಿ ಬಿದ್ದುಬಿಟ್ಟಳು. ಸಕಾಲಕ್ಕೆ ವೈದ್ಯರಲ್ಲಿಗೆ ಹೋಗಲಾಗದೆ ಅವಳ ಅವಸಾನವಾಯಿತು.

ನಿಧಾನವಾಗಿ ಯೋಚಿಸಿ ದಶರಥ ಮಂಜೀ ನಿರ್ಣಯಿಸಿದ – ಏನಾದರೂ ಮಾಡಿ ಈ ಬೆಟ್ಟದ ಮೂಲಕ ಹೊರ ಪ್ರಪಂಚಕ್ಕೆ ದಾರಿ ಮಾಡಬೇಕು- ಎಂದು. ಕೂಡಲೇ ಹೋಗಿ ಉಳಿಗಳನ್ನೂ ಸುತ್ತಿಗೆಯನ್ನೂ ಕೊಂಡ. ಅವರ ಯೋಜನೆ ಕೇಳಿ ಹಾಸ್ಯ ಮಾಡದವರೇ ಇಲ್ಲ. ಆದರೆ ಈತ ಯಾರ ಮಾತನ್ನೂ ಕೇಳಿಸಿಕೊಳ್ಳದೆ ಬೆಟ್ಟದ ಶೃಂಗಕ್ಕೆ ಹೋಗಿ ಬಂಡೆಯನ್ನು ಬಿಡಿಸತೊಡಗಿದ – ೧೯೬೭ರಲ್ಲಿ. ಪ್ರತಿ ದಿನ ಹೊಲದ ಕೆಲಸ ಬಿಟ್ಟು ಉಳಿದ ಹಲವು ಗಂಟೆಗಳಷ್ಟು ಕಾಲ ಪರಿಶ್ರಮ ಮಾಡಿದ. ಒಂದರೆಡು ದಿನಗಳಲ್ಲ; ಸತತ ಇಪ್ಪತ್ತೆರಡು ವರ್ಷ! ಇಂಥ ಪ್ರಯತ್ನದಾರ್ಢ್ಯದ ಮುಂದೆ ಎಂಥ ಬೆಟ್ಟವೂ ದಾರಿ ಬಿಡಲೇಬೇಕು.

ಹೆಂಡತಿಯ ನೆನಪಿಗೆ ಷಾಜಹಾನ ತಾಜಮಹಲ್ ಕಟ್ಟಿಸಿದ. ಆದರೆ ಅವಘಡಕ್ಕೀಡಾದ ತನ್ನ ಹೆಂಡತಿಯ ದುರ್ದಶೆ ಅನ್ಯರಿಗೆ ಬಾರದಿರಲೆಂದು ಇಂಥ ಲೋಕಾತೀತ ಸಾಧನೆ ಮಾಡಿದ. ಬೇರೊಂದು ಉದಾಹರಣೆ ಜಗತ್ತಿನಲ್ಲೇ ದುರ್ಲಭ.

***

Facebook
X
WhatsApp
Print
Email
Leave A Reply