ಸರ್ ವಿಲಿಯಮ್ ಮಾರ್ಕ್ ಟುಲಿ.
ಇಷ್ಟೇ ಸಾಕು. ಹಲವು ನೆನಪುಗಳ ಮೆರವಣಿಗೆ!
ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೋರೇಷನ್ (ಬಿಬಿಸಿ) ಮತ್ತು ಮಾರ್ಕ್ ಟುಲಿ – ಬಹುತೇಕ ಹಿರಿ ತಲೆಮಾರಿನವರಿಗೆ, ಈ ಎರಡು ಹೆಸರುಗಳು, ಅನ್ವರ್ಥಕ ಅಥವಾ ಸಮಾನಾರ್ಥಕ ಪದಗಳು ಎಂಬುವಷ್ಟು ಬೆಸೆದ ನೆನಪು!
ಈ ಬಂಧ-ಅನುಬಂಧ, ಸರ್ ಮಾರ್ಕ್ ಟುಲಿ, ಹೊಸ ದಿಲ್ಲಿಯಲ್ಲಿ ತಮ್ಮ ೯೦ನೆಯ ವಯಸ್ಸಿನಲ್ಲಿ ಕೊನೆ ಬಾರಿಗೆ (ಜನವರಿ ೨೫, ೨೦೨೬) ‘ಸೈನ್ ಆಫ್’ ಆದಾಗ, ‘ಎ ಪಾಲ್ ಆಫ್ ಗ್ಲೂಮ್ ಹಂಗ್ ಇನ್ ದಿ ಏರ್’. ಮಾರ್ಕ್ ಮಹಾನುಭಾವ ಅಂದಿಗೆ ೯೦ ವಸಂತಗಳನ್ನು ಪೂರ್ಣಗೊಳಿಸಿದ್ದರು.
‘ಭಾರತದಲ್ಲಿ ಬಿಬಿಸಿ ವ್ಯಕ್ತಿ’ಯಾಗಿದ್ದ, ಸರ್ ಮಾರ್ಕ್ ಟುಲಿ, ಇಂದಿಗೆ ನಮಗೆಲ್ಲ ಕೇಳಿಸಿಕೊಳ್ಳುವ ವಿವೇಕ ಸಂಸ್ಕೃತಿಯ ರಾಯಭಾರಿಯಾಗಿ ಚಿರಸ್ಥಾಯಿಯಾದರು. ಇನ್ನೋರ್ವ ಮಹಾನುಭಾವ ರೇಡಿಯೋ ಸಿಲೋನ್ ನಿರೂಪಕರಾಗಿದ್ದ ಬಿನಾಕಾ ಗೀತಮಾಲಾ ಖ್ಯಾತಿಯ ಅಮೀನ್ ಸಯ್ಯಾನಿ. ಅವರೂ ಇಂದಿಗೆ ಕೀರ್ತಿಶೇಷ.
ಅಪರೂಪದ ಧ್ವನಿ, ಮಾನವೀಯ ಕಾಳಜಿ, ಜೀವಪರ ಒಳಸುಳಿಗಳ ವಿಶ್ಲೇಷಣೆ ಮೂಲಕ ಸಮಷ್ಟಿ ಹಿತದ ಧ್ವನಿತ, ಸಾರ್ವಜನಿಕ ಹಿತದ ವಿಷಯಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಮೂಡಿಸಬಲ್ಲ ನಿಷ್ಪಕ್ಷ ವಿವೇಕ ಎಲ್ಲವೂ ಮೇಳೈಸಿದ್ದ ಓರ್ವ ಅಪರೂಪದ ಹೃದಯವಂತನ ನಿರ್ಗಮನ ಸೃಷ್ಟಿಸಿದ ನಿರ್ವಾತ, ಬ್ರಾಡ್ಕಾಸ್ಟಿಂಗ್ ಕ್ಷೇತ್ರಕ್ಕಾದ ನಷ್ಟ ಶಬ್ದಗಳ ಅಭಿವ್ಯಕ್ತಿಗೆ ನಿಲಕದ್ದು.
‘ಬಹುಜನ ಹಿತಾಯ; ಬಹುಜನ ಸುಖಾಯ’ ಧ್ಯೇಯದ ಆಕಾಶವಾಣಿಯ ಪ್ರಾದೇಶಿಕ ಸುದ್ದಿ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುವ ನನ್ನಂತಹ ಬಹುತೇಕರಿಗೆ ಸರ್ ಮಾರ್ಕ್ ಅವರ ವೃತ್ತಿಪರತೆ ಸುದ್ದಿಗಳನ್ನು ಮಾಹಿತಿ ಮೂಲಗಳ ಮೂಲಕ ಹೆಕ್ಕಿ, ಸರ್ವ ಆಯಾಮಗಳಲ್ಲಿ ಪರೀಕ್ಷಿಸಿ, ತುಲನೆಯ ವರದಿಯೊಂದಿಗೆ ವಿಶ್ವಾಸಾರ್ಹತೆಗೆ ಬೆಳ್ಳಿಯ ಅಂಚು ತೊಡಿಸಿದಂತೆ, ಸತ್ಯ ಮತ್ತು ವಿಷಯ ನಿಷ್ಠರಾಗಿ, ವಿಷಯಗಳನ್ನು/ಸುದ್ದಿಯನ್ನು ಮಂಡಿಸುತ್ತಿದ್ದ ರೀತಿ.. ಪ್ರಸಂಗಾವಧಾನದ ಭಾಷಾ ಪ್ರೌಢಿಮೆ, ಧ್ವನಿಯ ಏರಿಳಿತ, ಪ್ರಸ್ತುತಪಡಿಸುವಲ್ಲಿ ಹೊಂದಿದ್ದ ವಿನಯಶೀಲತೆ ಅನುಕರಣೀಯ ಮಾದರಿ.
ಮಾರ್ಕ್ ‘ಸರ್’ ನೈಟ್ ಹುಡ್ ಪಡೆದಿದ್ದು, ಅವರಿಗೆ ೬೭ ವರ್ಷ ತುಂಬಿದಾಗ. ಆರ್ಡರ್ ಆಫ್ ದಿ ಬ್ರಿಟಿಷ್ ಎಂಪಾಯರ್ ಗೌರವಕ್ಕೆ (೧೯೮೫) ಅವರು ಭಾಜನರಾಗಿದ್ದರು. ಶ್ರೀ ಟುಲಿ ಭಾರತೀಯ ಬ್ರಿಟಿಷ್ ಪ್ರಸಾರಕ್ಕೆ ಸಮಾನಾರ್ಥಕ ಪದ! ‘ಟುಲ್ಲಿ ಟೆಲ್ಲಿ’ ಎಂದೇ ಜನಜನಿತ!
ಅವರು ಬಿಬಿಸಿಯಿಂದ ಸ್ವಯಂ ನಿವೃತ್ತಿ ಪಡೆದ ಬಳಿಕವೂ ಫ್ರೀ ಲ್ಯಾನ್ಸರ್ ಆಗಿ ನಾಲ್ಕು ದಶಕಗಳ ಬಳಿಕವೂ ಅವರನ್ನು ಇನ್ನೂ ನಾವು “ಓಹ್! ಬಿಬಿಸಿ (ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್) ವ್ಯಕ್ತಿ” ಎಂದೇ ನೆನಪಿಸಿಕೊಳ್ಳುವಂತಹ ಕೆಲಸ ಅವರದ್ದು. ಪಕ್ಕಾ ಪ್ರೊಫೆಷನಲ್!
ಹೆಚ್ಚೂ ಕಡಮೆ ಎರಡು ದಶಕಗಳ ಕಾಲ ಬಿಬಿಸಿ ದಕ್ಷಿಣ ಏಷ್ಯಾದ ಧ್ವನಿಯಾಗಿದ್ದ ಸರ್ ಮಾರ್ಕ್ ಭಾರತೀಯರಿಗೆ ‘ಆಕ್ಸೆಂಟ್’ ಉಚ್ಛಾರದಿಂದ ಪಕ್ಕಾ ಇಂಗ್ಲಿಷ್ಮನ್ ಆಗಿ, ಕೇಳಿಸಿಕೊಂಡ ಅನುಭವವಿದ್ದರೂ, ಹಳೆ ದಿಲ್ಲಿ ನಿವಾಸಿಯಾಗಿ, ಹಿಂದಿ ಭಾಷೆಯನ್ನು ನಿರರ್ಗಳ ಮಾತನಾಡಬಲ್ಲವರು ಎಂದರೆ ಬಹುತೇಕರಿಗೆ ಆಶ್ಚರ್ಯ.
ನಮ್ಮ ಜನರ (ಅವರ ಮಾತಿನಲ್ಲಿ, ತನ್ನವರ) ದುಃಖ, ದುಮ್ಮಾನ, ಖುಷಿ ಮತ್ತು ಸಾಧನೆ, ಕಾಲದ ಗೊಂದಲ, ಸಮಕಾಲೀನ ಪರಿಹಾರಗಳನ್ನು ಹಂಚಿಕೊಳ್ಳುತ್ತಿದ್ದ ಅಭ್ಯುದಯ ಪತ್ರಕರ್ತ.
ಹೊಸ ದಿಲ್ಲಿಯಿಂದ ೨೨ ವರ್ಷಗಳ ಕಾಲ ಬಿಬಿಸಿಯ ದಕ್ಷಿಣ ಏಷ್ಯಾ ಬಾತ್ಮೀದಾರರಾಗಿ ಸೇವೆ ಸಲ್ಲಿಸಿದ ಮಾರ್ಕ್, ೧೯೯೪ರಲ್ಲಿ ತಮ್ಮ ಹುದ್ದೆಗೆ ರಾಜಿನಾಮೆ ನೀಡಿ, ರಾಷ್ಟç ರಾಜಧಾನಿಯಿಂದ ಹೊರಗೆ ಫ್ರೀ ಲ್ಯಾನ್ಸ್ ‘ಸ್ವತಂತ್ರ’ ಪತ್ರಕರ್ತರಾಗಿ ಗಣನೀಯ ಕೆಲಸ ಮಾಡಿದವರು.
ಮಾರ್ಕ್ ತಮ್ಮ ಸಂಗಾತಿ ಹಾಗೂ ಲೇಖಕಿ, ಅನುವಾದಕಿ ಗಿಲಿಯನ್ ರೈಟ್ ಜೊತೆ ಶ್ರೀಸಾಮಾನ್ಯನಂತೆ ಸಹಜ, ಸರಳ ಮತ್ತು ಸುಂದರ ಬದುಕು ಬಾಳಿದರು. ಹೊಸ ದಿಲ್ಲಿಯ ನಿಜಾಮುದ್ದೀನ್ ಪಶ್ಚಿಮದಲ್ಲಿದ್ದ ತಮ್ಮ ಸ್ವಂತ ಮನೆಯಲ್ಲಿ ವಾಸ. ಹೆಸರಾಂತ ಲೇಖಕ, ಕಿರುಗತೆಗಾರ ರಸ್ಕಿನ್ ಬಾಂಡ್ ಅವರಂತೆ ಹಿಮಾಲಯದ ತಪ್ಪಲಿನಲ್ಲಿ ನೈನಿತಾಲದ ಕುಟೀರವೊಂದರಲ್ಲಿ ಪ್ರಕೃತಿಯ ನಡುವೆ ಸಂತೋಷದಿಂದ ಬದುಕಬಹುದು ಎಂದು ಎಣಿಸಿದ್ದರು. ಆದರೆ, ಹಲವು ವರ್ಷಗಳಿಂದ ಪತ್ರಕರ್ತನೋರ್ವ ಕಟ್ಟಿಕೊಂಡ ನಗರ ಜೀವನದ ಬೇರುಗಳಿಂದ ಬೇರ್ಪಡುವುದು ಅವರಿಗೆ ಸುಲಭವಾಗಲಿಲ್ಲ!
ಅಂದಿನ ವಸಾಹತುಶಾಹಿ ಕೋಲ್ಕೊತ್ತಾದಲ್ಲಿ ಬ್ರಿಟಿಷ್ ಪೋಷಕರಿಗೆ ಜನಿಸಿದ ಮಾರ್ಕ್ ಟುಲಿ, (ಜನನ: ಅಕ್ಟೋಬರ್ ೨೪, ೧೯೩೫ ಮರಣ: ಜನವರಿ ೨೫, ೨೦೨೬) ೧೯೬೫ರ ಸುಮಾರಿಗೆ, ಹೊಸ ದಿಲ್ಲಿಗೆ ಬದುಕನ್ನು ಅರಸಿಕೊಂಡು ಬಂದರು.
ಆಗ ‘ಬಿಬಿಸಿ’ ಸಹಾಯಕ ಬಾತ್ಮೀದಾರನಾಗಿ ಕೆಲಸ ಮಾಡುತ್ತಿದ್ದ ಅವರು ತಮ್ಮ ಪತ್ನಿ, ಮಕ್ಕಳು ಮತ್ತು ಮೀರತ್ನ ಗರೀಬ್ ಎಂಬ ಅಡುಗೆಯವರೊಂದಿಗೆ ಹೌಜ್ಖಾಸ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ವಾಸ ಆರಂಭ.
ಮಾರ್ಕ್ ಟುಲಿ ಮತ್ತು ಅವರ ಪತ್ನಿ ಬಹಳ ಹಿಂದೆಯೇ ವಿಚ್ಛೇದನ ಪಡೆದುಕೊಂಡಿದ್ದರು. ಅಡುಗೆ ಸಹಾಯಕ ಗರೀಬ್ ನಿಧನರಾದರು. ಮಗಳು ಬಬ್ಲಿ ಉಟೋಪಚಾರದ ಹೊಣೆ ಹೊತ್ತರು. ಅವರ ಮಗ ಕಾಕಾ ಆಗಾಗ ಸರ್ ಟುಲಿಯನ್ನು ಹೊಸ ದಿಲ್ಲಿಯನ್ನು ಸುತ್ತಿಸುತ್ತಿದ್ದರು.
ಆರಂಭದಲ್ಲಿ ಆಂಗ್ಲಿಕನ್ ಪಾದ್ರಿಯಾಗಬೇಕು ಎಂದು ಆಶಿಸಿದ್ದ ಮಾರ್ಕ್ ತತ್ತ್ವಶಾಸ್ತ್ರ ಮತ್ತು ದೇವತಾಶಾಸ್ತ್ರದ ವಿದ್ಯಾರ್ಥಿಯಾಗಲು ಬಯಸಿದ್ದರು.
ದೈವ ಬಗೆದಂತೆ ಜೀವನದ ಕೆಲವು ದೊಡ್ಡ ಪ್ರಶ್ನೆಗಳನ್ನು ಪರಿಶೀಲಿಸುವ ನೈತಿಕ ಮತ್ತು ಧಾರ್ಮಿಕ ಚರ್ಚೆಗಳ ಕುರಿತು, ಬಿಬಿಸಿ ರೇಡಿಯೊ ೪ರ ‘ಸಮ್ಥಿಂಗ್ ಅಂಡರ್ಸ್ಟುಡ್’ ಕಾರ್ಯಕ್ರಮದ ಹೆಸರಾಂತ ನಿರೂಪಕರಲ್ಲಿ ಒಬ್ಬರಾದರು.
‘ಕಂಟ್ರಿ ಸೈಡ್ ಲೈಫ್ ವುಡ್ ಬಿ ಮಚ್ ಬೆಟರ್’ ಎಂಬ ಅವರ ಅನುಭಾವವನ್ನು ನಗರ ಪರಿಸರದಿಂದ ಹೊರಬಂದು, ಗ್ರಾಮಾಂತರದಲ್ಲಿ ನೆಲೆಸುವ ಬಯಕೆಯ ಹಿನ್ನೆಲೆಯಿಂದ ನಾವು ಗ್ರಹಿಸುವುದಾದರೆ ನಗರದ ಜನ ಹೆಚ್ಚಿನ ಒತ್ತಡವನ್ನು ನಿಭಾಯಿಸಿ ಬದುಕುತ್ತಾರೆ! “ಮತ್ತು ಅದು ಅವರ ನಡವಳಿಕೆಯಲ್ಲಿ ಸ್ವತಃ ಪ್ರಕಟವಾಗುತ್ತದೆ!” ಎಂಬುದು ಮಾರ್ಕ್ ಅವರ ಬಲವಾದ ನಂಬುಗೆಯಾಗಿತ್ತು.
ವಿಶೇಷವಾಗಿ, ಕಾರು ಚಾಲನೆಯ ವಿಷಯದಲ್ಲಿ ದಿಲ್ಲಿಗರಿಗೆ ತುಂಬ ಸಹನೆ ಬೇಕು. ಅನೇಕ ಭಯಾನಕ ಅನುಭವಗಳಿಗೆ ರಸ್ತೆ ಮಧ್ಯೆ ಮುಖಾಮುಖಿಯಾಗಬೇಕು. ಸ್ವಂತದ ಕೋಪವನ್ನು ಪ್ರಕಟಿಸದೆ ನಿಗ್ರಹಿಸಬೇಕು! ತಪ್ಪಿಸಿಕೊಳ್ಳಲು ಸುಲಭದ ಹಾದಿ ದೂರದಲ್ಲಿರುವಂತೆ ತೋರುತ್ತಿತ್ತು! ಎಂದು ಮಾರ್ಕ್ ಸ್ವಗತದಲ್ಲಿ ಹೇಳುತ್ತಿದ್ದುದುಂಟು.
ಮನೆಯ ಗೋಡೆಗಳ ಮೇಲೆ ವರ್ಣಚಿತ್ರಗಳು ನಮ್ಮ ಗಮನ ಸೆಳೆದರೆ, ಕಾಫಿ ಟೇಬಲ್ ಮೇಲೆ ಸಣ್ಣ ಟ್ರಿಕ್-ನಾಕ್ಸ್ ಕಪಾಟಿನ ಮೇಲೆ ಪುಟ್ಟ ಗಾತ್ರದ ಬಹು ಬ್ಯಾಂಡ್ ಗ್ರಹಿಸಿ ಬಿತ್ತರಿಸುವ ರೇಡಿಯೋ ರುಡ್ಯಾರ್ಡ್ ಕಿಪ್ಲಿಂಗ್ ಜಾರ್ಜ್ ಎಲಿಯಟ್ ಮುಂತಾದವರ ಪುಸ್ತಕಗಳಿಂದ ತುಂಬಿದ ಕಪಾಟುಗಳು ಸುತ್ತ.
ಮಧ್ಯೆ ಸಾಹೇಬರ ರಾಕಿಂಗ್ ಚೇರ್! ಅವರು ಬಳಸುತ್ತಿದ್ದ ವಾಕಿಂಗ್ ಸ್ಟಿಕ್ ಕೈಯಲ್ಲಿ ಇರದಿದ್ದರೆ ಮೂಲೆಗೆ ಆತು ನಿಲ್ಲುತ್ತಿತ್ತು!
ನಿಜಾಮುದ್ದೀನ್ ಬಸ್ತಿ ಎಂಬ ಐತಿಹಾಸಿಕ ಗ್ರಾಮ, ಮಾರ್ಕ್ ಮನೆಯ ಹಿಂದೆಯೇ ಇದೆ. ಕೆಲವೊಮ್ಮೆ ಅವರೊಳಗಿನ ಕಸುಬುದಾರ ಪತ್ರಕರ್ತ ಜಾಗೃತನಾದಾಗ, ನಯೀ ದಿಲ್ಲಿಯ ಹೃದಯಭಾಗದಲ್ಲಿ ಅನಿರೀಕ್ಷಿತವಾಗಿ ಅಡಗಿರುವ ಪುರಾನಿ ದಿಲ್ಲಿಯನ್ನು ಅನುಭವಿಸಲು ಅಲ್ಲಿಗೆ ನಡೆದೇ ಹೋಗುತ್ತಿದ್ದರು. ಆದರೆ ಅವರನ್ನು ಗುರುತಿಸುವವರು ಕಮ್ಮಿ ಎಂಬುದೇ ಸಮಾಧಾನ ತರುತ್ತಿತ್ತು.
ನಿಜಾಮುದ್ದೀನ್ ಪಶ್ಚಿಮ ಭಾಗವನ್ನು ನಿಜಾಮುದ್ದೀನ್ ಪೂರ್ವಕ್ಕೆ ಹೋಲಿಸಿದರೆ ಚೂರು ಮಸುಕು. ಮುಖ್ಯರಸ್ತೆಯ ಇನ್ನೊಂದು ಬದಿಯಲ್ಲಿರುವ ಸುಂದರ ಅಲಂಕೃತ ನೆರೆಹೊರೆ ಮಾರ್ಕ್ ಅವರಿಗೆ ಸಾಥಿಯಾಗಿತ್ತು.
ಹಲವು ದಶಕಗಳ ಹಿಂದೆ ಜೋರ್ಬಾಗ್ನಲ್ಲಿ ವಾಸಿಸುತ್ತಿದ್ದ ಮಾರ್ಕ್ ಅವರ ರೆಸಿಡೆನ್ಶಿಯಲ್ ಅಪಾರ್ಟ್ಮೆಂಟ್ನಿಂದ ಸಫ್ದರ್ಜಂಗ್ ಸಮಾಧಿಯನ್ನು ವೀಕ್ಷಿಸುತ್ತಿದ್ದರು. ಹೆಚ್ಚೂಕಡಮೆ, ಮೂರು ದಶಕಕ್ಕಿಂತ ಹೆಚ್ಚು ಕಾಲ ಅವರು ನಿಜಾಮುದ್ದೀನ್ ಪೂರ್ವದಲ್ಲಿ ವಾಸಿಸಿದವರು.
ಭಾರತಕ್ಕೆ ಹಿಂದಿರುಗಿದ ಬಳಿಕ ೧೯೭೭ರಲ್ಲಿ ಮಾರ್ಕ್ ಅಲ್ಲಿಗೆ ತೆರಳಿದ್ದು; ಆದರೆ ಇಂದಿರಾಗಾಂಧಿಯವರ ಸರ್ಕಾರ ತುರ್ತುಪರಿಸ್ಥಿತಿಯ ಸಮಯದಲ್ಲಿ ಅವರನ್ನು ಹೊರಹಾಕಿತ್ತು. ಆ ಬಗ್ಗೆ ಅವರಲ್ಲಿ ಅನೇಕ ಕಹಿ ಅನುಭವಗಳು ಹರಳುಗಟ್ಟಿದ್ದವು. ನಿರ್ಲಿಪ್ತ, ನಿಷ್ಪಕ್ಷ ಮತ್ತು ಧ್ಯೇಯನಿಷ್ಠನಾಗಿ ಬದುಕಲು ಈ ದಿಲ್ಲಿ ಅವರನ್ನು ರೂಪಿಸಿತ್ತಂತೆ!
ಈಗ ಬಿಡಿ. ಆದರೆ ೧೯೭೦ರ ದಶಕದಲ್ಲಿ ನಿಜಾಮುದ್ದೀನ್ ಪೂರ್ವ ಭಾಗ ಗಾಲ್ಫ್ ಲಿಂಕ್ಸ್ ಮತ್ತು ಸುಂದರ ನಗರದಷ್ಟು ಐಷಾರಾಮಿ ಎಂದು ಪರಿಗಣಿತವಾಗಿರಲಿಲ್ಲ. ಅನೇಕ ಬಂಗಲೆಗಳನ್ನು ಹೊಂದಿದ್ದ ಜನವಿರಳ ನಿದ್ರಾಜನಕ ಪ್ರದೇಶವಾಗಿತ್ತು!
ಮಾರ್ಕ್ ಹೇಳುವಂತೆ, ಕ್ರಮೇಣ ಅಲ್ಲಿ ಅಪಾರ್ಟ್ಮೆಂಟ್ ಸಂಕೀರ್ಣಗಳಿಗೆ ಲ್ಯಾಂಡ್ ಮಾಫಿಯಾ, ರಿಯಲ್ ಎಸ್ಟೇಟ್ ಕುಳಗಳು, ದಲ್ಲಾಳಿಗರು ಹೆದ್ದಾರಿ ಸೃಷ್ಟಿಸಿಬಿಟ್ಟರು. ಪ್ರಶಾಂತತೆ ಅರಸುವಂತಾಯಿತು! ಒಂಥರಾ ಮರಭೂಮಿಯಲ್ಲಿ ಓಯಾಸಿಸ್ ಅರಸಿದಂತಹ ಪಾಡು.
ನಿತ್ಯ ವಾಯುವಿಹಾರಕ್ಕೆ ಮಾರ್ಕ್ ಮತ್ತು ಗಿಲಿಯನ್ ರೈಟ್ ೧೯೮೨ರಿಂದ ತಮ್ಮ ಎರಡು ನಾಯಿಗಳೊಂದಿಗೆ ನೆರೆಯ ಹುಮಾಯೂನ್ ಸಮಾಧಿಯ ಸುತ್ತಲೂ ವಿಹರಿಸುತ್ತಿದ್ದರು. ನಿಜಾಮುದ್ದೀನ್ ಪೂರ್ವದಿಂದ ಸುಂದರವಾದ ಅರಬ್ ಕೀ ಸರೈ ಗೇಟ್ವೇ ಮೂಲಕ ಮೊಘಲ್ ಯುಗದ ಸ್ಮಾರಕವನ್ನು ಪ್ರವೇಶಿಸಿ ಹಿಂತಿರುಗುತ್ತಿದ್ದರು.
ಆ ದಿಲ್ಲಿ ದಿನಗಳು ಮಾರ್ಕ್ ಅವರಿಗೆ ದೀರ್ಘ ಬೇಸಿಗೆಯ ದಿನಗಳಂತೆ ಭಾಸವಾಗುತ್ತಿತ್ತು. ರಾಜ್ಯಮಟ್ಟದ ಪ್ರಸಾರಗಳಿಗೆ ಮೀಸಲಿದ್ದ ದೂರದರ್ಶನದೊಂದಿಗೆ ಆಕಾಶವಾಣಿ ಮತ್ತು ಅಂತಾರಾಷ್ಟ್ರೀಯ ಪ್ರಸಾರಕ್ಕೆ ಹೆಸರಾದ ಬಿಬಿಸಿ ರೇಡಿಯೋ ಭಾರತೀಯರಿಗೆ ಅತ್ಯಂತ ವಿಶ್ವಾಸಾರ್ಹ ಮಾಹಿತಿಯ ಮೂಲಗಳಾಗಿದ್ದವು. ಸೆಕೆಯಲ್ಲಿ ಚೂರು ತಂಗಾಳಿಯ ಹಿತಾನುಭವ ಆ ಸುದ್ದಿಗಳು ಹೊತ್ತು ತರುತ್ತಿದ್ದವಂತೆ!
೧೯೮೪ರಲ್ಲಿ ತಮ್ಮ ತಾಯಿ ಇಂದಿರಾಗಾಂಧಿಯವರ ಹತ್ಯೆಯ ಸುದ್ದಿಯನ್ನು ದೃಢೀಕರಿಸಲು ರಾಜೀವ್ಗಾಂಧಿ ಬಿಬಿಸಿ ಆಲಿಸಿ ಖಾತ್ರಿಪಡಿಸಿಕೊಂಡಿದ್ದರು ಎನ್ನುವಷ್ಟು! ಖ್ಯಾತಿ ಮತ್ತು ವಿಶ್ವಾಸಾರ್ಹತೆ ಆ ರೇಡಿಯೋಕ್ಕೆ ಮತ್ತು ಬಿಬಿಸಿ ಬಾತ್ಮೀದಾರನಿಗೆ! ಬಿಬಿಸಿಯ ದಕ್ಷಿಣ ಏಷ್ಯಾ ವಲಯ ಮುಖ್ಯಸ್ಥರಾಗಿ ಮಾರ್ಕ್ ಟುಲಿ ಭಾರತೀಯ ಕೇಳುಗ ಸಮುದಾಯದಲ್ಲಿ ಅತ್ಯುನ್ನತ ಸ್ಥಾನಮಾನವನ್ನು ಹೊಂದಿದ್ದರು.
ನಿಜಾಮುದ್ದೀನ್ ಪೂರ್ವದಲ್ಲಿ ಬಾಡಿಗೆಗಳು ಕ್ರಮೇಣ ಗಗನಚುಂಬಿಯಾದವು. ಮಾರ್ಕ್ ಬಾಡಿಗೆಗಿದ್ದ ಮನೆ ಮಾಲೀಕ ತಿಂಗಳಿಗೆ ಒಂದು ಲಕ್ಷ ರೂಪಾಯಿ ಬಾಡಿಗೆಗೆ ಬೇಡಿಕೆ ಇತ್ತರು. ಅಷ್ಟು ಹೊತ್ತಿಗೆ ಮಾರ್ಕ್ ಬಿಬಿಸಿಯಲ್ಲಿ ತಮ್ಮ ಕೆಲಸವನ್ನು ತೊರೆದಿದ್ದರು. ಗಿಲಿಯನ್ ಮತ್ತು ಮಾರ್ಕ್ಗೆ ಮನೆ ಮಾಲೀಕರ ಬೇಡಿಕೆಗಳು ವಿಪರೀತ ಮತ್ತು ಅನ್ ರೀಸನೇಬಲ್ ಎನಿಸಿ ಹೊಸ ದಿಲ್ಲಿಯಲ್ಲಿ ಬದುಕುವುದು ನಿಶ್ಚಿತ ಎಂದು ತೀರ್ಮಾನಿಸಿದ್ದರಿಂದ ಅಷ್ಟು ಹಣದಲ್ಲಿ ಸ್ವಂತದ ಫ್ಲಾಟ್ ಖರೀದಿಸಲು ನಿರ್ಧರಿಸಿದರು.
ಮಾರ್ಕ್, ೨೦೧೦ರಲ್ಲಿ ನಿಜಾಮುದ್ದೀನ್ ಪಶ್ಚಿಮದಲ್ಲಿ ಒಂದು ಆಸ್ತಿಯ ನೆಲ ಮಹಡಿಯನ್ನು ಖರೀದಿಸಿದರು. ಆದರೆ ಆ ಪ್ರಕ್ರಿಯೆ ಅವರಿಗೆ ಹೊಸ ಜಗತ್ತನ್ನೇ ಅನಾವರಣಗೊಳಿಸಿತು.
ಕಪ್ಪು ಹಣದಲ್ಲಿ ಮಾತ್ರ ಪಾವತಿಯನ್ನು ಬಯಸುವ ದಲ್ಲಾಳಿಗಳೊಂದಿಗೆ ವ್ಯವಹರಿಸುವುದು ಮಾರ್ಕ್ ಅವರಿಗೆ ಅತ್ಯಂತ ಕಷ್ಟಕರ ಪ್ರಸಂಗ ತಂದೊಡ್ಡಿತು. ಕಾರಣ, ಅವರ ಬಳಿ ಇದ್ದದ್ದೇ ‘ಬಿಳಿ ಹಣ’ ಮಾತ್ರ! ಈ ಫಜೀತಿ ದೆಸೆಯಿಂದ ಅವರಿಗೆ ಹೊಸದೊಂದು ಕಲಿಕೆ ಸಿದ್ಧಿಸಿತಂತೆ!
ಈ ಮಧ್ಯೆ ಓರ್ವ ಬ್ರೋಕರ್ ಮಾರ್ಕ್ ಬಳಿ ಬಂದು, (ಅವರು ಯಾರಾದರೇನಂತೆ ಎಂಬ ಧೋರಣೆಯೊಂದಿಗೆ?!) ಬಿಳಿ ಹಣವನ್ನೇ ಕಪ್ಪು ಹಣವನ್ನಾಗಿ ಪರಿವರ್ತಿಸುವ ಅದ್ಭುತವಾದ ಸಂಕೀರ್ಣ ಮಾರ್ಗವನ್ನು ನೀಡಿದ!
ಆದರೆ ಹಿರಿಯ ಪತ್ರಕರ್ತ ಸರ್ ಮಾರ್ಕ್ ಅವರಿಗೆ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸುವುದು ಸಾಮಾನ್ಯ ವಿಷಯ ಎಂಬ ಭಾವನೆ ಸುಳ್ಳಾಗಿ, ತಿರುವು ಮುರುವು ಪ್ರಕ್ರಿಯೆ ಹುಬ್ಬೇರಿಸಿತ್ತು! ಸ್ವಾತಂತ್ರ್ಯ ಗಳಿಸಿದ ಕೆಲವೇ ವರ್ಷಗಳಲ್ಲಿ ಇಷ್ಟು ಬದಲಾಗಿದ್ದೆವು.
ಹಂಗೂ ಹಿಂಗೂ… ಇಂಗು ತಿಂದ ಅನುಭವದೊಂದಿಗೆ ಮಾರ್ಕ್ ಮತ್ತು ಶ್ರೀಮತಿ ರೈಟ್ ತಮ್ಮ ಕನಸಿನ ಮನೆಯನ್ನು ಹುಡುಕಲು ಒಂದು ವರ್ಷ ಬೇಕಾಯಿತು! ಅಂತೂ ಸೂರಾಯಿತು ಎನ್ನುವಷ್ಟರಲ್ಲಿ ಹೊಸ ಜಗತ್ತು ನಿಧಾನವಾಗಿ ಅವರ ಮುಂದೆ ಅನಾವರಣಗೊಳ್ಳತೊಡಗಿತು. ಹಿಮಾಲಯದ ತಪ್ಪಲು ಸೇರ ಬಯಸಿದ್ದವರು ಕನ್ನೌಟ್ ಪ್ಲೇಸ್ನಲ್ಲಿ ಅಂಗಡಿ ತೆರೆದ ಅನುಭವ!
ಅವರ ಕನಸಿನ ಮನೆಯ ಡ್ರಾಯಿಂಗ್ ರೂಮ್ ಕಿಟಕಿ ತೆರೆದರೆ ರಸ್ತೆಯಾದ್ಯಂತ ಸತತ ನಿರ್ಮಾಣ ಕಾರ್ಯಗಳಿಂದ ಸೃಷ್ಟಿಯಾದ ಧೂಳಿನ ಮಬ್ಬು ಚಿತ್ರಣವೇ ಕಣ್ಣಿಗೆ ಕಟ್ಟುವಂತಾಯಿತು! ಸಂತೆಯಲ್ಲಿ ಸಂತನೋರ್ವ ನಿಂತ ಅನುಭವ!
ನಿಜಾಮುದ್ದೀನ್ ಪೂರ್ವದಲ್ಲಿದ್ದಂತೆ ಪಶ್ಚಿಮದಲ್ಲಿರುವ ಹೆಚ್ಚಿನ ಹಳೆಯ ಮನೆಗಳನ್ನು ಸಹ ರೆಸಿಡೆನ್ಶಿಯಲ್ ಮತ್ತು ಬುಡದಲ್ಲಿ ಕಮರ್ಷಿಯಲ್ ಅಪಾರ್ಟ್ಮೆಂಟ್ ಸಂಕೀರ್ಣಗಳಿಗೆ ದಾರಿ ಮಾಡಿಕೊಡಲು ಕೆಡವಲು ಶುರು ಮಾಡಿದರು! ನೆಮ್ಮದಿ ಎಂಬುದು ದಿಲ್ಲಿ ಆಚೆ ಇದೆ ಎಂಬಂತೆ ಮಾರ್ಕ್ ಅವರಿಗೆ ಅನುಭವಗಳಾದವು.
ಮಾರ್ಕ್ ಕೆಲ ತಿಂಗಳುಗಳ ಕೆಳಗೆ ವಯೋಸಹಜ ಕಾಯಿಲೆಯಿಂದ ಅಸ್ವಸ್ಥರಾಗುವವರೆಗೆ ತಮ್ಮ ಶ್ರೀನಿವಾಸದ ಸುತ್ತ್ತಲಿನ ಪ್ರದೇಶಗಳು ಮೊದಲನಂತಿರದೆ ಹೋದರೂ, ತಮ್ಮ ದಿನಚರಿಯ ಕಟ್ಟೋಡಿಯಲ್ಲಿ ದಿಲ್ಲಿ ನೀಡಬಲ್ಲ ಎಲ್ಲ ಉತ್ತಮ ವಸ್ತುಗಳಿಂದ ಕಾಪಿಟ್ಟುಕೊಂಡಿದ್ದು ಆ ಹಿರಿ ಜೀವದ ಜೀವನಪ್ರೀತಿಗೆ ಸಾಕ್ಷಿ.
ಲೋಧಿ ಗಾರ್ಡನ್ಸ್ನಲ್ಲಿ ತೀರ ಇತ್ತೀಚಿನವರೆಗೆ, ಮಾರ್ಕ್ ಅವರ ಬೆಳಗಿನ ನಡಿಗೆ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ ಮತ್ತು ಜಿಮ್ಖಾನಾ ಕ್ಲಬ್ನ ಸದಸ್ಯತ್ವ, ಖಾನ್ ಮಾರುಕಟ್ಟೆಯಲ್ಲಿರುವ ಫಕೀರ್ ಚಂದ್ & ಸನ್ಸ್ ಪುಸ್ತಕ ಮಳಿಗೆ, ರಾಷ್ಟ್ರಪತಿ ಭವನದ ಬಳಿಯ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್ನಲ್ಲಿ ಭಾನುವಾರದ ಪ್ರಾರ್ಥನೆ, ಜನಪಥ್ನಲ್ಲಿರುವ ಸರವಣ ಭವನದಲ್ಲಿ ಪ್ರತಿ ಶನಿವಾರ ರಾತ್ರಿ ದಕ್ಷಿಣ ಭಾರತೀಯ ಊಟ, ಅದಕ್ಕಾಗಿ ಅಲ್ಲಿ ಕನಿಷ್ಟ ೨೦ ನಿಮಿಷಗಳ ಕಾಯುವಿಕೆ.
ಹಲವು ಹಿರಿಕಿರಿ ತಲೆಮಾರಿನವರ ಹೊತ್ತು ಗೊತ್ತಿಲ್ಲದ ಮಾತು-ಪರಿಚಯ. ಶುಭಾಶಯ ವಿನಿಮಯ. ಮಾರ್ಕ್ ಅವರ ಸ್ನಿಗ್ಧ ನಗೆ ಉತ್ತರ ರೂಪದಲ್ಲಿ. ಎಲ್ಲವೂ ಅವರೊಂದಿಗೆ ಇತಿಹಾಸ ಪುಟ ಸೇರಿದವು.
ಅಮೃತಸರ್; ಮಿಸ್ಸೆಸ್ ಇಂದಿರಾ ಗಾಂಧೀ’ಸ್ ಲಾಸ್ಟ್ ಬ್ಯಾಟಲ್ (೧೯೮೫) ಅವರ ಬಹು ಚರ್ಚಿತ ಕೃತಿ. ‘ನೋ ಫುಲ್ಸ್ಟಾಪ್ ಇನ್ ಇಂಡಿಯಾ’ (೧೯೮೮) ಮತ್ತೊಂದು ಪ್ರಸಿದ್ಧ ಪುಸ್ತಕ ಮಾರ್ಕ್ ಅವರು ಬರೆದದ್ದು. ಇಂಡಿಯಾ ಇನ್ ಸ್ಲೋ ಮೋಷನ್ (೨೦೦೨) ನಾವು ಓದಲೇಬೇಕಾದ ಪುಸ್ತಕ. ಅಪ್ ಕಂಟ್ರಿ ಟೇಲ್ಸ್; ಒನ್ಸ್ ಅಪಾನ್ ಅ ಟೈಮ್, ಇನ್ ದಿ ಹಾರ್ಟ್ ಆಫ್ ಇಂಡಿಯಾ’ (೨೦೧೭) ಅನೇಕರು ಮೆಚ್ಚಿಕೊಂಡ ಪುಸ್ತಕ, ಮಾರ್ಕ್ ಅವರು ಬರೆದ ಕೊನೆ ಕೃತಿ.
ತಮ್ಮ ಮನೆ ಅಂಗಳದಲ್ಲಿ ಬೀದಿನಾಯಿಗಳಿಗೆ ಅವರು ಆಶ್ರಯದಾತರಾಗಿದ್ದರು. ಆಗಾಗ ಕಿಂಗ್ಫಿಷರ್ ಬಿಯರ್ನಿಂದ ಜೇಮ್ಸನ್ ಐರಿಷ್ ವಿಸ್ಕಿವರೆಗೆ ಪೆಗ್ ಹೀರುತ್ತ ಪ್ರಚಲಿತ ವಿದ್ಯಮಾನಗಳನ್ನು ವಿಶ್ಲೇಷಿಸಿ ಲೇಖನ ಬರೆಯುವುದು, ಸಂದರ್ಶನ ನೀಡುವುದು, ಮಾರ್ಕ್ ದೈನಂದಿನ ಬದುಕಾಗಿದ್ದ ಚಿತ್ರ ಮಸುಕಾಯಿತು.
ದಿ ಇಂಡಿಯನ್ ಎಕ್ಸ್ಪ್ರೆಸ್ ಮತ್ತು ಹಿಂದಿ ದಿನಪತ್ರಿಕೆ ದೈನಿಕ್ ಭಾಸ್ಕರ್ ಅವರ ನಿತ್ಯ ಬೆಳಗಿನ ಸಂಗಾತಿಗಳಾಗಿದ್ದವು. ಅವರು ತೀರಿಕೊಂಡ ಮರುದಿನ ಅವು ಶ್ರದ್ಧಾಂಜಲಿ ಪ್ರಕಟಿಸಿವೆ. ಯಥಾಪ್ರಕಾರ ಮಾರ್ಕ್ ಮನೆ ಬಾಗಿಲಿಗೆ ಪತ್ರಿಕೆ ಬಂದಿವೆ ಆದರೆ…
ಆ ಸಮಯದಲ್ಲಿ ಪತ್ರಿಕೆಗಳ ಹೊರಗಿನ ಪ್ರಪಂಚ ಸಂಪೂರ್ಣ ಪ್ರಶಾಂತವಾಗಿದೆ. ಇಂಗ್ಲೆಂಡ್ನ ಮಾರ್ಕ್ ಟುಲಿ (ಟುಲ್ಲಿ) ಆಂತರ್ಯದಲ್ಲಿ ಭಾರತೀಯನಾಗಿ ಹಲವು ಏಳು-ಬೀಳುಗಳಿಗೆ ಸಾಕ್ಷಾತ್ ಸಾಕ್ಷಿಯಾಗಿ ಶ್ರುತವಾಣಿಯ ಚಿರಂಜೀವಿ ಬಾತ್ಮೀದಾರನಾಗಿ ಕೊನೆಬಾರಿಗೆ – ‘ದ್ಯಾಟ್ಸ್ ಆಲ್ ಫಾರ್ ನೌ; ಮಾರ್ಕ್ ಸೈನ್ಸ್ ಆಫ್’ ಎಂಬಂತೆ ಮುದ್ರಿತ ಧ್ವನಿ ಭಂಡಾರದ ಪ್ರತಿಧ್ವನಿತದಲ್ಲಿ ಲೀನರಾಗಿದ್ದಾರೆ.
ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರಗಳಾದ ಪದ್ಮಶ್ರೀ (೧೯೯೨) ಹಾಗೂ ಪದ್ಮವಿಭೂಷಣ (೨೦೦೫) ಅವರ ಕೊರಳನ್ನು ಅಲಂಕರಿಸಿವೆ.
ಭಾರತ-ಪಾಕಿಸ್ತಾನ ಯುದ್ಧಗಳು, ಭೂಪಾಲ ಅನಿಲ ದುರಂತ, ಆಪರೇಷನ್ ಬ್ಲೂ ಸ್ಟಾರ್, ತುರ್ತುಪರಿಸ್ಥಿತಿ ಮತ್ತು ಆ ಕರಾಳ ದಿನಗಳು ಪ್ರಧಾನಮಂತ್ರಿ ಇಂದಿರಾಗಾಂಧಿ ಅವರ ಹತ್ಯೆ, ಆ ಬಳಿಕದ ಸಿಖ್ ವಿರೋಧಿ ದಂಗೆಗಳು, ಪ್ರಧಾನಮಂತ್ರಿ ರಾಜೀವ್ಗಾಂಧಿ ಹತ್ಯೆ, ಬಾಬರಿ ಮಸೀದಿ ಧ್ವಂಸ – ಮಾರ್ಕ್ ಅವರು ವರದಿ ಮಾಡಿದ ಕೆಲ ಮಹತ್ತ್ವದ ಐತಿಹಾಸಿಕ ಘಟನೆಗಳು.
ಪಾಕಿಸ್ತಾನದುದ್ದಕ್ಕೂ ರೈಲಿನಲ್ಲಿ ಪ್ರಯಾಣ ಬೆಳೆಸಿ ‘ಕರಾಚಿ ಟು ಖೈಬರ್ಪಾಸ್’ ಹೆಸರಿನ ಬಿಬಿಸಿಗಾಗಿ ಅವರು ಸಿದ್ಧಪಡಿಸಿದ ‘ಗ್ರೇಟ್ ರೇಲ್ವೆ ಜರ್ನೀಸ್’ ಎಪಿಸೋಡ್ ವರ್ಲ್ಡ್ ಸ್ಟೀಮ್ಸ್ ಕ್ಲಾಸಿಕ್ಸ್ ಸರಣಿಗಾಗಿ ಅವರು ಸಿದ್ಧಪಡಿಸಿ ನಿರೂಪಿಸಿದ ‘ಸ್ಟೀಮ್ಸ್ ಇಂಡಿಯನ್ ಸಮ್ಮರ್’ ನಾವು ನೆನಪಿನಲ್ಲಿಡಬಹುದಾದ ಮಾರ್ಕ್ ಕೊಡುಗೆಗಳು.
ಹೋಗಿ ಬನ್ನಿ ಸರ್ ಮಾರ್ಕ್ ಟುಲಿ. ತಮಗೆ ಕೊನೆ ನಮಸ್ಕಾರ.






