ನಗೆ ಭೋಗ ಭಾಗ್ಯ ಬೇಡ

ಎನಗೆ ಭೋಗ ಭಾಗ್ಯ ಬೇಡ

ಎನಗೆ ಜಪವು ತಪವು ಬೇಡ

ಎನಗೆ ನಿಮ್ಮ ತೊತ್ತು ಸೇವೆ ನಿತ್ಯವಾಗಲೈ ||       ||ಪ||

ಎನ್ನ ಕಂದಿಸುತ್ತ ಬಹಳ

ಎನ್ನ ಬಾಧಿಸುತ್ತ ಬಿಡದೆ

ಎನ್ನನೊಂದು ನೆವಗಳಿಂದ ಕಾಡಿದವರಿಗೆ |

ಎನ್ನ ಕೊಂದಡವರಿಗೆಲ್ಲ

ಎನ್ನ ಪೂಜೆ ಫಲಗಳೆಲ್ಲ

ಉನ್ನತದೊಳಗವರಿಗಾಗಿ ಸುಖದಿ ಬಾಳಲಿ ||        ||1||

ಹಿಂದೆಯೆನ್ನ ಬೈದವರಿಗೆ

ಮುಂದೆಯೆನ್ನ ಬೈದವರಿಗೆ

ಕುಂದದೆಲ್ಲ ಜನರ ನಡುವೆ ಬೈದಡವರಿಗೆ |

ಇಂದುಧರನ ಕರುಣದಿಂದೆ

ಅಂದಣವನು ಏರುವಂತೆ

ಕುಂದದೊಲೆದು ಅವರಿಗೆಲ್ಲ ಭೋಗವಾಗಲಿ||        ||2||

ಹಿಂಗದೆನ್ನ ನಿಂದಿಸಿದ ಜ

ನಂಗಳೆಲ್ಲ ಸುಖದೊಳಿರುವ

ಹಾಂಗೆ ಶಿವನು ಅವರಿಗೆಲ್ಲ ಭಾಗ್ಯವೀಯಲಿ|

ಮಂಗಳಾತ್ಮ ಷಡಕ್ಷರಿಯ

ಲಿಂಗ ನಿನ್ನ ತೊತ್ತು ಸೇವೆ

ಸಾಂಗಮಾಗಿ ಧರೆಯೊಳೆನಗೆ ನಿತ್ಯವಾಗಲಿ||       ||3||

Facebook
X
WhatsApp
Print
Email