ನಮ್ಮ ಮನೆ

ನಮ್ಮ ಮನೆ ಇದು ನಮ್ಮ ಮನೆ

ನಲಿವಿನ ಅರಿವಿನ ನಮ್ಮ ಮನೆ |

ರೀತಿಯ ನೀತಿಯ ಭದ್ರ ಬುನಾದಿಯ

ಮೇಲೆ ನಿಂತಿದೆ ನಮ್ಮ ಮನೆ ||ಪ||

ತಾಯಿಯ ಮಮತೆಯ ತಂದೆಯ ಪ್ರೀತಿಯ

ಸೆಲೆಯಲಿ ತೆರೆದಿದೆ ನಮ್ಮ ಮನೆ

ಅಜ್ಜಿಯ ಕಥೆಯ ಅಜ್ಜನ ಶಿಸ್ತಿನ

ನಿಲವಲಿ ನಿಂತಿದೆ ನಮ್ಮ ಮನೆ ||1||

ಹಕ್ಕಿಗಳುಲಿವಿಗೆ ನೇಸರನುದಯಕೆ

ಏಳುವರೆಲ್ಲರು ಮುದದಿಂದ

ಮೀಯುತ ಮಡಿಯಲಿ ನೆನೆಯುತ ದೇವಗೆ

ಭಕುತಿಯ ನಮನವು ಕರದಿಂದ ||2||

ಅಕ್ಕತಂಗಿಯರ ಅಣ್ಣತಮ್ಮದಿರ

ಕದನಕುತೂಹಲ ಮುದವಿರಲು

ಬೆಳೆಯುತ ನಾವು ಮುಂದಿನ ಪ್ರಜೆಗಳು

ದೇಶದ ಆಸ್ತಿಯು ನಾವೆನಲು ||3||

ಹಬ್ಬಹರಿದಿನದಿ ಮಾವು ಬಾಳೆಯು

ಸಿಂಗರಿಸಿರಲು ಹಸಿರಿಂದ

ರಂಗವಲ್ಲಿಯ ಹೊಸ್ತಿಲದೀಪವು

ರುಚಿ ರುಚಿ ಅಡುಗೆಯು ಘಮ್ಮೆಂದು ||4||

ಏಳು ಬೀಳಿಗೆ ಕದಲದ ಮನವು

ಛಲದಲಿ ದುಡಿಯುವ ಕೈಗಳಿವು

ಬೀಳಿಗೆ ಆಸರೆ ಏಳ್ಗೆಗೆ ಹರಕೆ

ತುಂಬಿದ ಮನೆ ಮೇಲ್ತಾಣವು ||5||

ಶಾಲೆಯು ಇದುವೆ ಬದುಕಿನ ಪಾಠಕೆ

ನಾಳೆಯ ಕನಸಿಗೆ ಚೇತನವು

ದೇಶವ ಕಟ್ಟುವ ಸಂಸ್ಕೃತಿಸಾರಕೆ

ಕೇಶವಕುಲದ ನಿಕೇತನವು ||6||

– ಧನ್ಯತಾ

Facebook
X
WhatsApp
Print
Email