ದಿನ ಬೆಳಗಾಗೆದ್ದು ಪತ್ರಿಕೆ ತೆರೆದು ನೋಡಿದರೆ ಸಾಕು. ಯಾರಾದರೊಬ್ಬ ಟೆಕ್ಕಿ ಮೋಸಕ್ಕೊಳಗಾಗುತ್ತಿರುವುದನ್ನು ಓದುತ್ತಲೇ ಇರುತ್ತೀರಾ. ಎಂತಹ ತಾಂತ್ರಿಕ ಕ್ಲಿಷ್ಟ ಸಮಸ್ಯೆಗಳಿಗೂ ಪರಿಹಾರ ಹುಡುಕುವ, ಹಲವಾರು ಘನ ಕಾರ್ಯಕ್ರಮಗಳನ್ನು ರೂಪಿಸುವ, ತಮ್ಮ ಅಸಾಧಾರಣ ಬುದ್ಧಿಮತ್ತೆಯಿಂದ ಹಲವಾರು ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ, ಅಷ್ಟೇಕೆ ಕೃತಕ ಬುದ್ಧಿಮತ್ತೆಗೆ ಬುದ್ಧಿಹೇಳಿಕೊಡುವ ಟೆಕ್ಕಿಗಳು ಹಾಗಾದರೆ ಮೋಸ ಹೋಗುವುದಾದರೂ ಹೇಗೆ?

ಕೆಲವರು ಹತಾಶಭಾವದಿಂದ, ಸೋತ ಮುಖದಿಂದ “ಯಾಕೋ ಈ ನಡುವೆ ನನ್ನ ಟೈಮೇ ಸರಿಯಿಲ್ಲ. ಏನು ಮಾಡಲು ಹೋದರೂ ಬರಿ ಎಡವಟ್ಟು. ಬಹುಶಃ ನಾನು ಪ್ರಾರಂಭಿಸುವ ಟೈಮ್ ಸರಿಯಿಲ್ಲದಿರಬಹುದು ಎಂದು ಪೇಚಾಡುವ ಸ್ನೇಹಿತರನ್ನು ನೀವು ನೋಡಿರಬಹುದು. ಅಥವಾ ನಿಮ್ಮ ಬಳಿಯೇ ಕೆಲವರು ಅಲವತ್ತುಕೊಂಡಿರಲೂಬಹುದು.
ಹಾಗಾದರೆ ಟೈಮ್ ಸರಿಯಿಲ್ಲ ಅಂದರೆ ಏನು? ಹಿಂದುಗಳ ನಂಬಿಕೆಯಂತೆ ನಾವು ಹುಟ್ಟಿದ ಸಮಯದಲ್ಲಿ ಗ್ರಹಗಳ ಚಲನೆಯನ್ನಾಧರಿಸಿ ಶುಭ-ಅಶುಭಗಳು ಅಥವಾ ಹಣೆಬರೆಹ ನಿರ್ಧರಿತವಾಗುತ್ತದೆ.
ಪ್ರತಿದಿನವೂ ನಾವು ಮಾಡ ಹೊರಡುವ ಕೆಲಸವನ್ನು ಪ್ರಾರಂಭಿಸುವಾಗ ಆ ನಿರ್ದಿಷ್ಟ ಸಮಯದಲ್ಲಿ ಗ್ರಹಗಳ ಚಲನೆ ಹೇಗಿರುತ್ತದೋ ಅದರ ಆಧಾರದ ಮೇಲೆ ಶುಭಕಾರಕವೇ, ಅಶುಭಕಾರಕವೇ ಎಂಬುದು ನಿರ್ಧರಿತವಾಗುತ್ತದೆ. ಆದರೆ ಪ್ರತಿದಿನ ಜಾತಕ ಹಿಡಿದುಕೊಂಡು ಅಥವಾ ಮತ್ಯಾವುದೋ ಶಾಸ್ತç ಕೇಳಿಕೊಂಡು ದೈನಂದಿನ ಕೆಲಸದಲ್ಲಿ ತೊಡಗಲಾಗದು. ಜೀವನದಲ್ಲಿ ಘಟಿಸುವ ಪ್ರಮುಖ ಕಾರ್ಯಗಳಾದ ಮದುವೆ, ಮುಂಜಿ, ನಾಮಕರಣ ಇಂಥವಕ್ಕೆ ನೋಡಬಹುದು.
ಹೀಗೆ ನಾವು ಪರಿಶೀಲಿಸಲು ಅಸಾಧ್ಯವಾದುದರಿಂದಲೇ ನಿರ್ದಿಷ್ಟ ಸಮಯದಲ್ಲಿ ಯಾವ ಗ್ರಹ ಯಾವ ರೀತಿ ಪ್ರಭಾವ ಬೀರುತ್ತದೆಂಬುದನ್ನು ತಿಳಿಯಲಾಗದೆ ನಾವು ಕಷ್ಟ-ನಷ್ಟಗಳಿಗೆ ಈಡಾಗುತ್ತಿರುವುದು.
ನಿವೃತ್ತಿಯ ನಂತರ ಆರಾಮವಾಗಿ ಜೀವನ ಸಾಗಿಸುತ್ತಿರುವ ನನ್ನ ಸ್ನೇಹಿತನೊಬ್ಬನಿದ್ದಾನೆ. ಬಡಪೆಟ್ಟಿಗೆ ಯಾವುದನ್ನೂ ನಂಬದವ. ಇವನೊಬ್ಬನೇ ಮನೆಯಲ್ಲಿದ್ದ ಸಂದರ್ಭದಲ್ಲಿ ಠಾಕುಠೀಕಾದ ಅಪರಿಚಿತರಿಬ್ಬರು ಇವನ ಮನೆಗೆ ಬಂದರು. ವೇಷಭೂಷಣಗಳಲ್ಲಿ ಸಭ್ಯರಂತೆ ಕಾಣುತ್ತಿದ್ದರು. ಬಂದವರು “ಆಧಾರ್ಕಾರ್ಡ್ ಅಪ್ಡೇಟ್ ಮಾಡಿಸಿಕೊಂಡಿದ್ದೀರಾ” ಎಂದರು.
“ಇಲ್ಲ ಮಾಡಿಸಬೇಕಿದೆ.”
“ನಮ್ಮ ಸ್ವಯಂ ಸೇವಾ ಸಂಸ್ಥೆಯಿಂದ ನಾವೇ ಮನೆಮನೆಗೆ ಹೋಗಿ ಅಪ್ಡೇಟ್ ಮಾಡಿಸುತ್ತಿದ್ದೇವೆ” ಎಂದು ವಿಸಿಟಿಂಗ್ ಕಾರ್ಡ್ ತೋರಿಸಿದರು.
ಅರೆ ಘಳಿಗೆ ಯೋಚಿಸಿದ ನನ್ನ ಸ್ನೇಹಿತ. ‘ಇದರಲ್ಲಿ ಮೋಸವೇನಿದ್ದಿತು, ಸಭ್ಯಜನ’ ಎಂದು ಆಧಾರ್ಕಾರ್ಡ್ ತಂದುಕೊಟ್ಟ.
ಸರಿ ಎಂದು ವಿಳಾಸ, ಆಧಾರ್ಕಾರ್ಡ್ ಸಂಖ್ಯೆ ಬರೆದುಕೊಂಡು ನಂತರ “ಹಣವೇನಾದರೂ ಇಟ್ಟಿದ್ದರೆ ಅದರ ಫೋಟೋ ತೆಗೆದುಕೊಳ್ಳುತ್ತೇವೆ ಕರೆನ್ಸಿ ಇದ್ದರೆ ತನ್ನಿ” ಎಂದರು.
ಈತ ಆರು ಸಾವಿರ ಚಿಲ್ಲರೆಯ ಐನೂರರ ನೋಟುಗಳನ್ನು ಟೀಪಾಯ್ ಮೇಲೆ ತಂದಿಟ್ಟ. ನೋಟನ್ನೆಲ್ಲ ಹರಡಿದ ಅವರು ಮೊಬೈಲ್ನಲ್ಲಿ ಫೋಟೋ ತೆಗೆದುಕೊಂಡರು.
“ಆಧಾರ್ಕಾರ್ಡ್ ನಿಮ್ಮಲ್ಲೇ ಇರಲಿ. ಅಪ್ಡೇಟ್ ಆದನಂತರ ತಿಳಿಸುತ್ತೇವೆ. ಜೋಪಾನವಾಗಿ ಒಳಗಿಡಿ” ಎಂದು ಸ್ನೇಹಿತನ ಕೈಗೆ ಕೊಟ್ಟರು. ಜೋಪಾನ ಮಾಡಲು ಒಳ ಹೋದದ್ದೇ ತಡ ಹಣದ ಸಮೇತ ಇಬ್ಬರೂ ಪರಾರಿ.
ಹೊರಗೆ ಬಂದ ನನ್ನ ಸ್ನೇಹಿತ ಅಕ್ಕಪಕ್ಕದಲ್ಲೆಲ್ಲ ಹುಡುಕಾಡಿದ, ಕಾಣಲಿಲ್ಲ. ಅವರೇನು ಸ್ಕೂಟರಿನಲ್ಲಿ ಬಂದಿದ್ದರಾ, ಕಾರಿನಲ್ಲಿ ಬಂದಿದ್ದರಾ ಇವನಿಗೆ ಒಂದೂ ತಿಳಿಯದು. ಹೆಂಡತಿ ಮನೆಗೆ ಬಂದಾಗ ವಿಷಯ ತಿಳಿಸಿದ. ಹಿಗ್ಗಾಮುಗ್ಗಾ ಝಾಡಿಸಿದರು. “ಅಷ್ಟೂ ಗೊತ್ತಾಗಲಿಲ್ವಾ ನಿಮ್ಗೆ. ಹಣ ಯಾಕೆ ತೋರಿಸಿದಿರಾ? ಹಣದ ಫೋಟೋ ತೆಗೆಯಲು ಅವರಾರು? ಅವರ ವಿಳಾಸವೇನಾದರೂ ಬಿಟ್ಟು ಹೋಗಿದ್ದಾರಾ” ಎಂದರು.
“ಹೌದು ಅವರು ವಿಸಿಟಿಂಗ್ ಕಾರ್ಡ್ ತೋರಿಸಿದರು, ಆದರೆ ಕೊಡಲಿಲ್ಲ” ಎಂದ. “ನಿಮ್ಮ ಬುದ್ಧಿಗಿಷ್ಟು” ಎಂದು ಮನಸ್ಸು ಶಾಂತತೆಗೆ ಬರುವವರೆಗೂ ಬೈದು ಹಣ ಕಳೆದುಕೊಂಡ ದುಃಖದಲ್ಲಿ ಕಾಫಿ ಕೂಡ ಕುಡಿಯದೆ ತೆಪ್ಪಗೆ ಕುಳಿತರು.
ಇಲ್ಲಿ ನನ್ನ ಪ್ರಶ್ನೆ ಇಷ್ಟೆ. ಅಷ್ಟೆಲ್ಲ ಬುದ್ಧಿವಂತನೆನಿಸಿಕೊಂಡ ಸ್ನೇಹಿತ ಪೆದ್ದನಾದದ್ದಾದರೂ ಹೇಗೆ? ಅದೇ ಟೈಮ್ ಎನ್ನುವುದು. ಆ ಕ್ಷಣ, ಅವರು ಬಂದ ಘಳಿಗೆ ಅವರಿಗೆ ಶುಭವಾಗಿದ್ದರೆ, ನನ್ನ ಸ್ನೇಹಿತನಿಗೆ ಅಶುಭ ಘಳಿಗೆ. ಆದ್ದರಿಂದಲೇ ಬುದ್ಧಿವಂತನಾದರೂ ಮೋಸ ಹೋದ. ಹಾಗೊಂದು ವೇಳೆ ನನ್ನ ಸ್ನೇಹಿತ ಅಶುಭ ಘಳಿಗೆ ದಾಟಿ ಹೋಗಲು ಒಂದೈದು ನಿಮಿಷ ತಡೆದಿದ್ದರೂ ಇವನ ವರ್ತನೆಯೇ ಬೇರೆ ರೀತಿಯೇ ಆಗಿರುತ್ತಿತ್ತೋ ಏನೋ!
ಇದಕ್ಕೆ ನಾನು ಟೈಮ್ ಎನ್ನುವುದು.
ಸಂಜೆ ಸಿಕ್ಕಾಗ “ಅಲ್ಲಯ್ಯಾ, ಅಷ್ಟು ಹುಷಾರಿನಲ್ಲಿದ್ದವ ನೀನೇ ಮೋಸಕ್ಕೆ ಒಳಗಾಗಿದ್ದಾದರೂ ಹೇಗೆ?” ಎಂದೆ.
“ಅವರೇನು ಮೆಸ್ಮರೈಸ್ ಮಾಡಿದರೋ, ಅವರ ಸಭ್ಯ ನಡವಳಿಕೆಗೆ ಮಾರುಹೋಗಿ ಅವರು ಹೇಳಿದಂತೆ ಕೇಳುವ ಮನಸ್ಸು ನನಗೆ ಹೇಗೆ ಬಂದಿತೋ ನಾ ಕಾಣೆ” ಎಂದ ಪರಿತಪಿಸುತ್ತಾ.
ಇದನ್ನೇ ನಾನು ಟೈಮ್ ಎಂದು ಹೇಳುವುದು, ಆ ನಿರ್ದಿಷ್ಟ ಸಮಯದಲ್ಲಿ ನಿಮ್ಮ ಗ್ರಹಗತಿಯು ಚೆನ್ನಾಗಿಲ್ಲದಿದ್ದರೆ ನೀವೆಷ್ಟೇ ಹುಷಾರಿನಿಂದಿದ್ದರೂ ಅವರ ಮಾತಿಗೆ ಮರುಳಾಗಿ ಕಷ್ಟಕ್ಕೆ ಗುರಿಯಾಗುವುದು ಪಕ್ಕಾ.
ದಿನ ಬೆಳಗಾಗೆದ್ದು ಪತ್ರಿಕೆ ತೆರೆದು ನೋಡಿದರೆ ಸಾಕು. ಯಾರಾದರೊಬ್ಬ ಟೆಕ್ಕಿ ಮೋಸಕ್ಕೊಳಗಾಗುತ್ತಿರುವುದನ್ನು ಓದುತ್ತಲೇ ಇರುತ್ತೀರಾ. ಎಂತಹ ತಾಂತ್ರಿಕ ಕ್ಲಿಷ್ಟ ಸಮಸ್ಯೆಗಳಿಗೂ ಪರಿಹಾರ ಹುಡುಕುವ, ಹಲವಾರು ಘನ ಕಾರ್ಯಕ್ರಮಗಳನ್ನು ರೂಪಿಸುವ, ತಮ್ಮ ಅಸಾಧಾರಣ ಬುದ್ಧಿಮತ್ತೆಯಿಂದ ಹಲವಾರು ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ, ಅಷ್ಟೇಕೆ ಕೃತಕ ಬುದ್ಧಿಮತ್ತೆಗೆ ಬುದ್ಧಿಹೇಳಿಕೊಡುವ ಟೆಕ್ಕಿಗಳು. ಹಾಗಾದರೆ ಮೋಸ ಹೋಗುವುದಾದರೂ ಹೇಗೆ?
ಅದಕ್ಕೆ ಟೈಮ್ ಎನ್ನುವುದು. ನಿಮಗೆ ಯಾವುದೇ ಇಂತಹ ಸಂದರ್ಭ ಎದುರಾದಾಗ ೫-೧೦ ನಿಮಿಷ ಶಾಂತರಾಗಿ ಕುಳಿತುಬಿಡಿ. ತಡೆದು ವ್ಯವಹರಿಸಿ. ನೀವು ಇಂತಹ ಸಮಸ್ಯೆಯಿಂದ ಖಂಡಿತ ಬಚಾವಾಗುತ್ತೀರ.
ಇನ್ನು ನನ್ನದೇ ಒಂದು ಉದಾಹರಣೆ ಕೊಡಬೇಕೆಂದರೆ ಮನೆಯ ಕಿಟಕಿಯ ರಿಪೇರಿ ಕೆಲಸಕ್ಕೆ ಕಾರ್ಪೆಂಟರ್ ಒಬ್ಬನನ್ನು ಹುಡುಕುತ್ತಿದ್ದಾಗ ನಮ್ಮ ಮುಂದಿನ ರಸ್ತೆಯಲ್ಲಿದ್ದ ಸ್ನೇಹಿತರೊಬ್ಬರು ಅವರಿಗೆ ತಿಳಿದ ಒಬ್ಬನನ್ನು ಕಳಿಸಿದರು.
ಬಂದವ, “ನಿಮ್ಮ ಸ್ನೇಹಿತರ ವಿಳಾಸ ಕೊಟ್ಟೇ ಆಧಾರ್ಕಾರ್ಡ್ ಮಾಡಿಸಿಕೊಂಡಿದ್ದೇನೆಂದು” ಕಾರ್ಡ್ ತೋರಿಸಿದ. ನಂಬಬಹುದೆನಿಸಿತು. ಮಾತುಕತೆಯ ನಂತರ “ಮರ ತರಲು ಏಳು ಸಾವಿರ ರೂ. ಕೊಡಿ, ನನಗೆ ಗೊತ್ತಿರುವ ಸಾಮಿಲ್ನಲ್ಲಿ ಖರೀದಿಸಿದರೆ ಕೊಂಚ ಡಿಸ್ಕೌಂಟ್ ಇದೆ” ಎಂದ. ನನ್ನ ಮಗನೊಡನೆ ಚರ್ಚಿಸಿದೆ. ಅವನ ಮಾತಿನ ರೀತಿಯನ್ನು ನೋಡಿದಾಗ ಮೋಸಗಾರನಲ್ಲವೆನಿಸಿತು. ಶನಿವಾರದ ದಿವಸ ಏಳು ಸಾವಿರ ರೂ. ಕೊಟ್ಟೆವು. ನಾಳೆಯೇ ಬರುತ್ತೇನೆಂದ. ಭಾನುವಾರವಾಯ್ತು, ಸೋಮವಾರವಾಯ್ತು, ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಲೇಯಿಲ್ಲ. ಮಂಗಳವಾರವೂ ಆಯಿತು. ಖಂಡಿತ ಮೋಸಹೋದೆವೆನ್ನಿಸಿತು.
ನನ್ನ ಹಾಗೆ ನನ್ನ ಮಗಾ ಕೂಡ ನಂಬಿಬಿಟ್ಟನಾ? ರಾತ್ರಿ ನಿದ್ರೆ ಹಾರಿಹೋಯಿತು. ಕೆಲಸಗಾರರಿಗೆ ಯಾವತ್ತೂ ಮುಂಗಡ ಹಣ ಕೊಡಬಾರದೆಂದು ಇತರರಿಗೆ ಉಪದೇಶ ಮಾಡುತ್ತಿದ್ದವ ನಾನೇ ಮೋಸಕ್ಕೊಳಗಾದೆನಲ್ಲ ಎನಿಸಿದಾಗ ಪರಿಚಯಿಸಿದ ನನ್ನ ಸ್ನೇಹಿತನ ಬಳಿ ಓಡಿದೆ.
“ಹೌದಾ! ಆತ ನಿಯತ್ತಿನವನೇ. ಹೆದರಬೇಡಿ. ಏನೋ ತೊಂದರೆಯಾಗಿರಬಹುದು” ಎಂದರು.
ಆದರೆ ಫೋನು ಕೂಡ ಸ್ವೀಕರಿಸುತ್ತಿಲ್ಲವಲ್ಲ? ಹೀಗೇಕೆ ಮಾಡುತ್ತಿದ್ದಾನೆಂದೆ. ಅವರಿಗೂ ಏನು ಮಾಡಲೂ ತೋಚಲಿಲ್ಲ. ಮನೆ ಗೊತ್ತಾ ಎಂದೆ.
ಇಲ್ಲೇ ವೀರಭದ್ರನಗರದಲ್ಲಿ ಎಂದು ಹೇಳಿದ್ದ. ನನಗೂ ಸರಿಯಾಗಿ ತಿಳಿಯದು ಎಂದರು.
ಮೋಸಹೋದೆನೆಂಬುದು ಖಚಿತವಾಯಿತು, ಸಪ್ಪೆ ಮುಖದಿಂದ ವಾಪಸ್ಸು ಬಂದೆ.
ಗುರುವಾರ ಬೆಳಗ್ಗೆ ನೋಡೋಣವೆಂದು ಫೋನ್ ಮಾಡಿದಾಗ ಸಿಕ್ಕಿದ. “ಇವತ್ತು ಬರ್ತೇನೆ ಸರ್” ಎಂದ. ನಂಬಿಕೆ ಹೊರಟು ಹೋಗಿದ್ದರೂ ನಂಬದೆ ಬೇರೆ ದಾರಿಯೇನು? ರೇಗಾಡಲಿಲ್ಲ. ರೇಗಿದರೆ ಬಾರದೆ ಹೋದರೆ? ವಿವೇಕದಿಂದ ವರ್ತಿಸುವುದೊಳಿತೆಂದು ಸುಮ್ಮನಾದೆ.
ಆದರೆ ಈ ನಾಲ್ಕೈದು ದಿನದಲ್ಲಿ ಏಳು ಸಾವಿರದ ಮೋಸವೇ ಮನಸ್ಸಿನಲ್ಲಿ ತುಂಬಿಕೊಂಡು ಬೇರೆ ಕೆಲಸದಲ್ಲಿ ತೊಡಗಿಸಿಕೊಳ್ಳಲಾಗಲೇಯಿಲ್ಲ. ಮಧ್ಯಾಹ್ನ ಎರಡು ಗಂಟೆಗೆ ಮರ ಮತ್ತಿತರ ಸಾಮಗ್ರಿಗಳೊಂದಿಗೆ ಹಾಜರಾದ. ತಕ್ಷಣ ನನ್ನ ಮಗನಿಗೆ ವಿಷಯ ತಿಳಿಸಿದೆ. ಎರಡು ದಿವಸ ಪಟ್ಟಾಗಿ ಕುಳಿತು ಕೆಲಸ ಮುಗಿಸಿಕೊಟ್ಟು ಹೋದ.
ಇಲ್ಲಿ ನನ್ನನ್ನು ಕಾಡಿದ ಪ್ರಶ್ನೆಯೆಂದರೆ ಗುರುತು ಪರಿಚಯವಿರದ, ವಿಳಾಸ ತಿಳಿಯದ, ನನ್ನ ಸ್ನೇಹಿತರೊಬ್ಬರ ರೆಫರೆನ್ಸ್ ಹೇಳಿದಷ್ಟನ್ನೇ ನೆಚ್ಚಿದ, ಬರೀ ಮೊಬೈಲ್ ನಂಬರಷ್ಟನ್ನೇ ನಂಬಿದ, ಅವನ ಮಾತಿನ ಮೋಡಿಗೆ ಒಳಗಾದ ನಾನು ನನ್ನ ಮಗ ನಂಬಿದ್ದಾದರೂ ಹೇಗೆ?
ಅದೇ ಟೈಮ್ ಎನ್ನುವುದು. ಈ ವ್ಯವಹಾರವನ್ನು ಮಾಡಿದ್ದು ಬೆಳಗ್ಗೆ. ಬಹುಶಃ ಸಂಜೆಯೋ ಇಲ್ಲ ಭಾನುವಾರವೋ ಮಾಡಿದ್ದರೆ ಅಪರಿಚಿತನಿಗೆ ಹಣ ಕೊಡಲು ನಾವು ಒಪ್ಪುತ್ತಿರಲಿಲ್ಲವೇನೋ! ಕೆಲಸವೇನೊ ಮುಗಿಸಿದ. ಆದರೆ ನಾಲ್ಕೆöÊದು ದಿವಸ ಪರಿತಾಪಪಟ್ಟೆವಲ್ಲ! ಇದಕ್ಕೆ ನಾನು ಹೇಳುವುದು ಟೈಮ್ ಎಂದು.
ನನ್ನ ಸಾಹಿತ್ಯ ರಚನೆಗೆ, ಅಧ್ಯಯನಕ್ಕೆ ಬೇಕಾದ ಒಂದು ಪರಾಮರ್ಶನ ಗ್ರಂಥ ಬೇಕಾಗಿದ್ದು ಪ್ರಕಾಶಕರ ವಿಳಾಸವನ್ನು ಹುಡುಕಾಡತೊಡಗಿದೆ. ನನ್ನ ಈ ಹುಡುಕಾಟವನ್ನು ಕಂಡ ನನ್ನ ಸ್ನೇಹಿತರೊಬ್ಬರು ತಮಗೂ ಒಂದು ಪ್ರತಿ ಬೇಕೆಂದರು. ಎರಡು ಪ್ರತಿ ಕೊಂಡರೆ ಮತ್ತಷ್ಟು ರಿಯಾಯಿತಿ ಸಿಗಬಹುದೆಂಬ ಆಸೆಯಿಂದ ಇನ್ನಷ್ಟು ಸೀರಿಯಸ್ಸಾಗಿ ಹುಡುಕಿ ಲೇಖಕರ ಮನೆ ತಲಪಿದೆ, ಲೇಖಕರಿರಲಿಲ್ಲ.
ಅವರು ಅನರ್ಘ್ಯ ಕಾರ್ಯವನ್ನಷ್ಟೇ ಕನ್ನಡ ಸಾಹಿತ್ಯಕ್ಕೆ ಬಿಟ್ಟು ಕಾಲವಾಗಿದ್ದರು. ಅವರ ಮಗಳನ್ನು ಭೇಟಿಯಾಗಿ ಗ್ರಂಥಕ್ಕಾಗಿ ಬಂದ ವಿಷಯ ತಿಳಿಸಿದನಂತರ, ನನ್ನೊಬ್ಬರು ಸ್ನೇಹಿತರ ಮೂಲಕ ಅವರ ತಂದೆಯವರೊಡನಿದ್ದ ಅಲ್ಪ-ಸ್ವಲ್ಪ ಒಡನಾಟ, ಅವರ ಸಂಶೋಧನೆಗೆ ಬೇಕಾಗಿದ್ದ ಒಂದೆರಡು ಗ್ರಂಥಗಳನ್ನು ಒದಗಿಸಿದ್ದು, ಸ್ನೇಹಿತರೊಡನೆ ಭೇಟಿ ಮಾಡುತ್ತಿದ್ದುದು – ಇವೆಲ್ಲವನ್ನೂ ನನ್ನ ಪರಿಚಯದ ಭಾಗವಾಗಿ ಆಕೆಯೊಡನೆ ಹೇಳಿದಾಗ ಅವರಿಗೇನನ್ನಿಸಿತೋ ಏನೋ!
ಐದು ನಿಮಿಷ ಬಿಟ್ಟು ನಾನು ಅಪೇಕ್ಷಿಸಿದ್ದ ಪುಸ್ತಕವೊಂದನ್ನು ತಂದು ನನ್ನ ಕೈಲಿಟ್ಟರು. ಘನವಾದ ಪುಸ್ತಕ. ಅದರ ಮುಂಭಾಗದ ಗೆಟಪ್ ನೋಡಿ ಬೆರಗಾಗಿ ಬೆನ್ನಕಡೆ ತಿರುಗಿಸಿದೆ.
ಆರುನೂರು ರೂ. ಬೆಲೆಯ ಪುಸ್ತಕ ಕೊಂಚ ದುಬಾರಿ ಎನಿಸಿದರೂ ಕೊಳ್ಳುವ ಮನಸ್ಸು ಮಾಡಿದ್ದೆ. ಆದರೆ ಪುಟ ತೆರೆದು ನೋಡಿದಾಗ ನನಗಾದ ಆಶ್ಚರ್ಯವೆಂದರೆ ಅವರು ನನ್ನ ಪರಿಚಯದ ಕುರುಹಾಗಿ ಪುಸ್ತಕಕ್ಕೆ ಹಸ್ತಾಕ್ಷರ ಹಾಕಿ ಬರೆದು ಕೊಟ್ಟೇಬಿಟ್ಟಿದ್ದರು. ಮನಸ್ಸಿಗಾದ ಆನಂದ ಹೇಳತೀರದಾಗಿತ್ತು, ಆದರೂ ಸಂಕೋಚದಿಂದ “ಏನ್ ಮೇಡಂ ಗೌರವ ಪ್ರತಿಯೆಂದು ಬರೆದು ಕೊಟ್ಟೇಬಿಟ್ಟಿದ್ದೀರಲ್ಲ!” ಎಂದೆ.
“ನಮ್ಮ ತಂದೆಯವರಿಗೆ ಬೇಕಾಗಿದ್ದವರು, ಅವರು ಹೆಸರಿನಲ್ಲಿ ಇಟ್ಟುಕೊಳ್ಳಿ” ಎಂದರು. ಮಮತೆಯಿಂದ ಕೊಟ್ಟಿದ್ದಕ್ಕೆ ಮತ್ತೊಮ್ಮೆ ವಂದಿಸಿ ಸ್ನೇಹಿತನಿಗಾಗಿ ಮತ್ತೊಂದು ಪ್ರತಿ ಕೊಂಡು ಹೊರಟೆ.
ಬಹುಶಃ ಒಂದು ಪ್ರಸಕ್ತ ಸಮಯಕ್ಕೆ ಸರಿಯಾಗಿ ಹೋಗಿರದೆ ಬೇರಾವುದೋ ಟೈಮ್ನಲ್ಲಿ ಹೋಗಿದ್ದರೆ ನನಗೆ ವಿಶ್ವಾಸದಿಂದ ಆ ಪುಸ್ತಕ ದೊರೆಯುತ್ತಿರಲಿಲ್ಲವೆಂದೇ ನನ್ನ ಅನಿಸಿಕೆ. ಆ ಒಂದು ಟೈಮ್, ಘಳಿಗೆ – ಮಹತ್ತರವಾದುದೆಂಬುದನ್ನು ಸೂಚಿಸುತ್ತದೆ.
ಪುಸ್ತಕವನ್ನು ಕೊಂಡು ತಂದ ನಂತರ ನನ್ನ ಸ್ನೇಹಿತನಿಗೆ ಕೊಟ್ಟು, ನಡೆದ ವಿಷಯವನ್ನು ಆತನೊಡನೆ ಹಂಚಿಕೊಂಡಾಗ ನೋಡಿದಿರಾ, ನಾನು ಬೇಕೆಂದಿದ್ದಕ್ಕೆ ನೀವು ಗಂಭೀರವಾಗಿ ಹುಡುಕಾಟ ನಡೆಸಿದ್ದು, ಅಂದು ನೀವು ಹೋದದ್ದು, ಆಕೆಗೆ ನಿಮಗೊಂದು ಗೌರವ ಪ್ರತಿ ಕೊಡಲು ಮನಸ್ಸು ಮಾಡಿದ್ದು, ನಾನು ಕೊಳ್ಳುತ್ತೇನೆ ಎಂದು ಹೇಳಿದ್ದು ಇವೆಲ್ಲವೂ ಪ್ರೇರಕವಾಗಿರಬೇಕಲ್ಲವೇ ಎಂದು ನಗಾಡಿದಾಗ ಇದಕ್ಕೆ ನೋಡಿ ಟೈಮ್ ಎನ್ನುವುದು ಎಂದು ಅವರ ಜೊತೆ ನಾನು ನಕ್ಕೆ.
***






