ನಿಷ್ಕಾಮ ಭಕ್ತಿ

ಪ್ರೀತಿಸುವುದು ಮನುಷ್ಯನ ಸಹಜ ಸ್ವಭಾವ. ಹೃದಯದ ಮಾಧುರ್ಯ. ವಸ್ತುಗಳು ಇರದೇ ಇದ್ದರೂ ಪ್ರೇಮವೂ ಹೃದಯದಲ್ಲಿ ತನ್ನಷ್ಟಕ್ಕೆ ತಾನೇ ಇರುವಂಥದ್ದಾಗಿದೆ. ಬಳಸಿದರೆ ಅದು ಸುವ್ಯಕ್ತ. ಇಲ್ಲದಿರೆ ಅದು ಅವ್ಯಕ್ತ, ಆತ್ಮಸ್ಥ.

ನಾನು ಒಂದು ವಸ್ತುವನ್ನು ನೋಡುತ್ತೇನೆ. ಆಗ ನನ್ನ ಜ್ಞಾನವು ಆ ವಸ್ತುವಿನ ರೂಪು ತಾಳುತ್ತದೆ. ಆದರೆ ನಾನು ಯಾವ ವಸ್ತುವನ್ನೂ ನೋಡದೇ ಇದ್ದಾಗ ನನ್ನಲ್ಲಿ ಜ್ಞಾನವು ಇಲ್ಲವೆಂದಲ್ಲ! ಇರುತ್ತದೆ, ಆದರೆ ಯಾವುದೇ ವಸ್ತುವಿನ ರೂಪು ತಾಳದೆ ನಿರಾಕಾರವಾಗಿ ಇರುತ್ತದೆ. ಅದಕ್ಕೆ ಚಿತ್ ಎನ್ನುತ್ತಾರೆ. ಹಾಗೆಯೇ ಎಲ್ಲ ಮಾನವರಲ್ಲಿ ಎಲ್ಲ ಜೀವಿಗಳಲ್ಲಿ ವಸ್ತುವಿನ ಹಂಗಿಲ್ಲದೆ ಇರುವಂಥ ಒಂದು ಪ್ರೇಮವಿದೆ. ಅದು ಸಹಜ ಪ್ರೇಮ. ಅದು ಪರಿಶುದ್ಧ, ಪರಿಪೂರ್ಣ.

ಇಂಥ ಸಹಜ ಪ್ರೇಮದ ಅರಿವುಳ್ಳಾತನೇ ಭಕ್ತ. ಆತ ಸದಾ ಸಂತೃಪ್ತನು. ಅವನು ನಮ್ಮಂತೆ ಪ್ರಾಪಂಚಿಕ ವಸ್ತುಗಳ ಹಿಂದೆ ಹರಿಯುವುದಿಲ್ಲ. ಕೀರ್ತಿವಾರ್ತೆಗಾಗಿ ಹಂಬಲಿಸುವುದಿಲ್ಲ. ನಾವು ದಾನ ಮಾಡುತ್ತೇವೆ. ನಮ್ಮ ಹೆಸರಿಗಾಗಿ! ಭಿಕ್ಷೆ ನೀಡುತ್ತೇವೆ, ನಾಲ್ಕು ಜನ ನೋಡಲೆಂದು! ಆದರೆ ಭಕ್ತನು ಎಷ್ಟೋ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾನೆ. ಮಾಡಿಯೂ ಮಾಡದಂತೆ ಇರುತ್ತಾನೆ.

ಅಂತೆಯೇ ಬಸವಣ್ಣನವರು “ಬ್ರಹ್ಮ ಪದವಿಯನೊಲ್ಲೆ ವಿಷ್ಣು ಪದವಿಯನೊಲ್ಲೆ, ರುದ್ರ ಪದವಿಯನೊಲ್ಲೆ ಮತ್ತಾವ ಪದವಿಯನೊಲ್ಲೆ” ಎಂದರು. ಕ್ಷೀರಸಾಗರದೊಳಗಿರುವ ಹಂಸವು ಹಾಲನ್ನು ಬಯಸದು. ಪುಷ್ಪರಾಶಿಯೊಳಿರುವ ಭೃಂಗವು ಬೇರೆ ಪರಿಮಳ ಬಯಸದು. ಹಾಗೆಯೇ ಲಿಂಗಸಂಗದೊಳಗಿರುವವನು ಅಂಗಸಂಗವನು ಬಯಸನು! ಎಂದರೆ ಪರಮ ಪ್ರೇಮರೂಪ ಭಕ್ತಿಯೋಗಾನಂದದಲ್ಲಿ ಇರುವವನು ಪ್ರಾಪಂಚಿಕ ಸುಖಕ್ಕಾಗಿ ಹಾತೊರೆಯನು. ಫಲಾಪೇಕ್ಷೆಯನ್ನು ಇಟ್ಟುಕೊಂಡು ಕಾಯಕದಲ್ಲಿ ನಿರತನಾಗನು!

ಭಕ್ತನು ಭಾವಪರವಶನಾಗಿ ದೇವನನ್ನು ಪೂಜಿಸುವನು, ಹಾಡಿ-ನಲಿಯುವನು, ಆನಂದ ಬಾಷ್ಪ ಸುರಿಸುವನು! ಆದರೆ ಅದನ್ನೆಲ್ಲ ಗುರು-ದೇವರಾಗಲೀ ಮತ್ತೆ ಯಾರಾಗಲೀ ನೋಡಲಿ ಎನ್ನನು! ಅಂತೆಯೇ ಮಹಾಶಿವಶರಣೆ ಅಕ್ಕಮಹಾದೇವಿ, “ನೀನೋಡಿದರೆ ನೋಡು, ನೋಡದಿರ್ದಡೆ ಮಾಣು. ನಾ ನಿನ್ನ ಪೂಜಿಸದಲ್ಲದೆ ಸೈರಿಸೆನು” ಎಂದು ಹಾಡಿರುವಳು.

ಮಹಾ ವಿಜ್ಞಾನಿ ಐನ್‌ಸ್ಟೀನ್‌ರಿಗೆ ನೊಬೆಲ್ ಪ್ರಶಸ್ತಿ ದೊರೆಯಿತು. ಆ ಕುರಿತು ಅವರು ಒಮ್ಮೆಯೂ ಮಾತನಾಡಲಿಲ್ಲ. ಆಗ ಜನರು ಕೇಳಿದರು “ಹೀಗೇಕೆ?” ಎಂದು. ಅದಕ್ಕೆ ಸತ್ಯದ ಭಕ್ತರಾದ ಐನ್‌ಸ್ಟೀನ್‌ರು ಹೇಳಿದರಂತೆ – “ನನಗೆ ಸತ್ಯವನ್ನು ಅರಿಯುವಲ್ಲಿ ಆಸಕ್ತಿಯೇ ವಿನಾ ಪ್ರಶಸ್ತಿಯನ್ನು ಪಡೆಯುವುದರಲ್ಲಿ ಅಲ್ಲ.”

ಕೀರ್ತಿವಾರ್ತೆಗಳಿಗಾಗಿ, ಪದವಿ ಪಟ್ಟಗಳಿಗಾಗಿ ಜಗತ್ತೆಲ್ಲ ಹೋರಾಡುತ್ತದೆ. ಆದರೆ ಭಗವದ್ಭಕ್ತನು ಅವುಗಳನ್ನು ಕನಸು-ಮನಸ್ಸಿನಲ್ಲಿಯೂ ಬಯಸನು. ಅದುವೇ ನಿಷ್ಕಾಮಭಕ್ತಿ! ಅದರಲ್ಲಿಯೇ ಆತ ಸಂತೃಪ್ತನು!

[ಪೂಜ್ಯ ಸ್ವಾಮಿಗಳ ‘ಭಕ್ತಿಯೋಗ’ ಪ್ರವಚನ ಸಂಕಲದಿಂದ

ಸಂಪಾದನ: ಡಾ. ಶ್ರದ್ಧಾನಂದಸ್ವಾಮಿಗಳು

ಕೃಪೆ: ಜ್ಞಾನಯೋಗ ಫೌಂಡೇಶನ್, ವಿಜಾಪುರ]

Facebook
X
WhatsApp
Print
Email
Leave A Reply