ನ ಗೆ ಹ ನಿ ಗ ಳು

ನಾನಿರಲಿಲ್ಲವಲ್ಲ

ರಮಾಕಾಂತನ ಕುದುರೆ ಕಳೆದುಹೋಯ್ತು. ಎಷ್ಟು ಹುಡುಕಿದರೂ ಸಿಗಲಿಲ್ಲ. ಅವನು ಮಾತ್ರ ಸಂತೋಷದಿಂದ  ದೇವರಿಗೆ ಕೃತಜ್ಞತೆ ಬೇರೆ ಹೇಳಿದ. ಗೆಳೆಯ ಕಾರಣ ಕೇಳಿದ.

ರಮಾಕಾಂತ (ಸಂಭ್ರಮದಿಂದ): ಪುಣ್ಯಕ್ಕೆ ಆ ಕುದುರೆ ನಾನು ಅದರ ಮೇಲೆ ಇಲ್ಲದ ವೇಳೆ ಕಳೆದುಹೋಗಿದೆ. ಇಲ್ಲದಿದ್ದರೆ…….

ಗೆಟ್–ಇನ್ ಗೆಟ್– ಔಟ್

ತಿಂಮ ಎಫ್.ಡಿ.ಎ. ಪರೀಕ್ಷೆಗೆ ಅರ್ಜಿ ಸಲ್ಲಿಸಲೋ ಬೇಡವೋ ಅಂತ ಗೊಂದಲದಲ್ಲಿ ಇದ್ದ.

ತಿಂಮ:    ಲೇ ಏನ್ ಮಾಡ್ಲೇ?

ತಿಂಮಿ:    ಅದಕ್ಯಾಕ್ರಿ ತಲೆ ಕೆಡಿಸಿಕೊಳ್ತೀರಿ; ಹಾಕೋ ಮನಸ್ಸಿದ್ರೆ ಹಾಕಿಬಿಡಿ. ಅದೃಷ್ಟ ಇದ್ರೆ ಗೆಟ್-ಇನ್ ಆಗ್ತೀರಿ. ಅದೃಷ್ಟ ಇಲ್ದಿದ್ರೆ ಗೆಟ್-ಔಟ್ ಅಗ್ತೀರಿ!

ಅಭ್ಯಾಸಬಲ

ತಿಂಮ:    ನಾನು  ಆಗಾಗ ರೈಲಿನಿಂದ ಬರುವಾಗ ಯಾರದೋ ಬ್ಯಾಗನ್ನು ಬದಲಿಸಿ ತಂದುಬಿಡುತ್ತೇನೆ.

ಗುಂಡ:    ಜ್ಞಾಪಕಶಕ್ತಿ ತುಂಬಾ ಕಡಮೆಯೇ?

ತಿಂಮ:    ಹಾಗೇನೂ ಇಲ್ಲ; ಅದು ನನ್ನ ಜೀವನದ ಬಹು ದೊಡ್ಡ ಅಭ್ಯಾಸಬಲ!

ಲಕ್ಷಾಧೀಶ

ಮಗ:       ಅಪ್ಪಾ…. ನಾಳೆಯಿಂದ ನಾವು ಲಕ್ಷಾಧೀಶರಾಗಬಹುದು.

ತಂದೆ:     ಅದ್ಹೇಗೆ?

ಮಗ:       ನಾಳೆ ಸ್ಕೂಲಿನಲ್ಲಿ ನಮ್ಮ ಟೀಚರ್ ರೂಪಾಯಿಗಳನ್ನು ಪೈಸೆಗಳನ್ನಾಗಿ ಮಾಡೋದು ಹೇಗೇಂತ ಹೇಳಿಕೊಡ್ತಾರಂತೆ!

ರವಿವಾರ

ತಂದೆ:     ಏನೋ, ಮಾರ್ಕೆಟ್‌ನಲ್ಲಿ ನಿಮ್ಮ ಮೇಷ್ಟ್ರು ಕಂಡರೂ ಅವರಿಗೆ ಯಾಕೆ ನಮಸ್ಕಾರ ಮಾಡಲಿಲ್ಲ?

ಮಗ:       ಅಪ್ಪಾ, ನಿನಗೆ ಒಂದು ಚೂರೂ ನೆನಪಿರೊಲ್ಲ, ಇವತ್ತು ರವಿವಾರ.

ಆಟ ಆಡ್ತಿದ್ದಾನೆ

ರಾಮು:   ಪೆಟ್ರೋಲ್ ಇಲ್ಲದೆ ಓಡಿಸೋ ಕಾರು ಕೊಂಡಿದ್ದೀರಂತೆ. ತೋರಿಸಿ ನೋಡೋಣ ಹೇಗಿದೇಂತ.

ಗೋಪಿ:   ನನ್ನ ಮಗ ಆಟ ಆಡ್ತಿದ್ದಾನೆ; ಅಲ್ಲೇ ಹೊರಗೆಹೋಗಿ ನೋಡಿ!

ಸಿಸಿಟಿವಿ

ಅಜ್ಜ:        ಒಂದು ಕಾಲದಲ್ಲಿ ನಾನು ಜೇಬಲ್ಲಿ ಎರಡು ರೂಪಾಯಿಯ ನೋಟು ಇಟ್ಟುಕೊಂಡು ಹೋದ್ರೆ ಮನೆಗೆ ಬೇಕಾದ ಎಲ್ಲಾ ಕಿರಾಣಿ ಸಾಮಾನು, ಬ್ರೆಡ್, ಬಿಸ್ಕತ್ತು, ತರಕಾರಿ, ಹಾಲು, ಬೆಣ್ಣೆ, ದಿನಪತ್ರಿಕೆ ಎಲ್ಲಾ ತರುತ್ತಿದ್ದೆ.

ಮೊಮ್ಮಗ:              ನೀವು ಪುಣ್ಯವಂತರು, ಈಗ ಹಾಗೆಲ್ಲಾ ಮಾಡೋಕಾಗೊಲ್ಲ ತಾತ; ಎಲ್ಲಾ ಕಡೆ ಸಿಸಿಟಿವಿ ಕಣ್ಗಾವಲು ಇರುತ್ತೆ!

ಪ್ರತಿಸ್ಪರ್ಧಿ

ಹೆಂಡತಿ:  ಏನ್ರೀ, ಇತ್ತೀಚೆಗೆ ಪ್ರತಿಯೊಂದು ವಿಷಯದಲ್ಲೂ ನನಗೆ ಪ್ರತಿಸ್ಪರ್ಧಿ ಆಗ್ತಾ ಇದ್ದೀರಿ?

ಗಂಡ:      ಮೊದಲು ಹೆಂಡತಿಯನ್ನು ಗೆದ್ದರೆ ಆಮೇಲೆ ಜಗತ್ತನ್ನೇ ಗೆಲ್ಲಬಹುದೂಂತ ಯಾರೋ ಮಹಾನುಭಾವ ಹೇಳಿದ್ದನ್ನು ಇತ್ತೀಚೆಗೆ ಓದಿದೆ ಕಣೆ!

Facebook
X
WhatsApp
Print
Email