ಪರಿಭ್ರಮಣ

ಮಗ ಹೊರಗಡೆ ಹೋಗುತ್ತಲೇ ಕನಕಮ್ಮನನ್ನು ಕರೆದು ಈಗಿಂದೀಗಲೇ ಮನೆಗೆ ಹೋಗೆ ಗಸಗಸೆ ಪಾಯಸ ಮಾಡೆಂದು ಹೇಳಿದಳು. “ನಿನಗಿರುವ ಶುಗರ್‌ಗೆ ಇದೆಲ್ಲ ಬೇಕಾ ನಿಂಗೆ’’ ಕನಕಮ್ಮನ ಮಾತನ್ನು ಸೀತಮ್ಮ ಏಕಾಏಕಿ ತುಂಡರಿಸಿ “ಮಗನ ಮುಂದೆ ಕೊನೆಯ ಆಸೆಯೊಂದನ್ನು ನೆರವೇರಿಸಲಾರೆಯಾ’’ ಎಂದು ಭಿನ್ನಯಿಸಿದಳು. ಆಕೆ ಆಸ್ಪತ್ರೆಯಿಂದ ಹೊರಟು ಹೋಗುವವರೆಗೂ ಖಾತರಿಪಡಿಸಿಕೊಂಡು ನಾನಾ ಲೆಕ್ಕಾಚಾರ ಹಾಕಿ ಬೆಡ್ಡಿಗೊರಗಿದಳು.

ಆಗಷ್ಟೇ ಕತ್ತಲಾಗಿ ಹುಣ್ಣಿಮೆಯ ಚಂದಿರ ಆಗಸದಲ್ಲಿ ನಿಶ್ಚಿಂತೆಯಿಂದ ಏಗುತ್ತಿದ್ದ. ಪಸರಿಸಿದ ಬೆಳದಿಂಗಳನ್ನು ಸೀಳಿ ಬಾವಲಿಗಳು ಸೀಬೆ, ಗೇರುಹಣ್ಣುಗಳನ್ನು ಗೆಬರಿಕೊಳ್ಳುವುದು ಯಥಾವಾತ್ತು ನಡೆದೇ ಇತ್ತು. ತೋಟದ ಮದ್ಯೆ ಈ ನಿಶಾಚರಿಗಳು ಎಗರುವ ರಭಸಕ್ಕೆ ಬಾಳೆಯ ದಿಂಡು ಮತ್ತು ಎಲೆ ದೊಪ್ ದೊಪ್ ಎಂದು ಮುಗ್ಗರಿಸಿ ಜೋಲುವುದು ಕಣ್ಣಮುಂದೆ ಹಾಯದಿರಲಿಲ್ಲ. ದಶಂಬರದ ಚಳಿ ಇಬ್ಬನಿಯ ರೂಪು ತಾಳಿ ಮಾವು, ಹಲಸು ಮೊದಲಾದ ಮರಗಳ ಶಿರವೇರಿ ಕತ್ತಲೆಯನ್ನು ನವಿರಾಗಿ ಚಿಮುಟುತ್ತಲೇ ಇತ್ತು. ಪಶ್ಚಿಮಘಟ್ಟದ ಓರೆಕೋರೆ ಪರ್ವತಗಳ ಮಧ್ಯೆ ಕಾಡ್ಗಿಚ್ಚಿನ ಕೆಂಪು ರೇಖೆ ಮಂಡಲ ಹಾಕುತ್ತಿದ್ದುದು ನೀರವ ಕತ್ತಲೆಯಲ್ಲಿ ಹೊತ್ತು ಕಳೆದಂತೆ ಇನ್ನಷ್ಟು ದಟ್ಟವಾಗುತ್ತಿತ್ತು. ಹಾವು, ಹಂದಿಗಳಿಗೆ ಹೆದರುವ ಟಿಟ್ಟಿಟ್ಟೀ ಹಕ್ಕಿ ತನ್ನ ಮೊಟ್ಟೆಯುಳಿಸುವ ಸಲುವಾಗಿ ಒಂದೇ ಸಮನೆ ಬಾಯಿಬಡಿದುಕೊಂಡು ಗೋಳಿಡುತ್ತಿದ್ದುದು ಕಿವಿಯಲ್ಲಿ ಅನುರಣನವಾಗುತ್ತಿತ್ತು. ಮರಗೆಣಸಿನ ಕಾಂಡಶೋಧನೆಗೆ ತೊಡಗಿ ಅಲ್ಲಲ್ಲಿ ದಡ್ ದಡ್ ಎಂದು ಸದ್ದು ಮೊಳಗಿಸುವ ಹೆಗ್ಗಣಗದ ಸವಾರಿಗೆ ನಾಯಿಗಳು ತೋಟಮುಖವಾಗಿ ಆಗೀಗ ಚಿಗಿತುಕೊಂಡು ಕಾಟಾಚಾರದ ಬೌಬಾ ಬೊಗಳಿ, “ಇದರಿಂದ ಅಷ್ಟೇನು ಅಪಾಯವಿಲ್ಲ’’ ಎಂಬಂತೆ ಸುಮ್ಮನಾಗುತ್ತಿದ್ದವು. ಅಡಕೆ ಗರಿಗಳನ್ನು ಬಡಿಬಡಿದು ತಿರುಗುವ ನಿಸ್ತೇಜ ಕೈಂಕರ್ಯದಲ್ಲಿ ಮುಳುಗಿದ್ದ ಸ್ಪಿಂಕ್ಲರ್ರುಗಳು; ರೊಂಯ್ ಎಂದು ಏಕಕಂಠದಲ್ಲಿ ಮುಗಿಯದ ಸ್ವರ ತೆಗೆಯುತ್ತಿರುವ ಪಂಪ್‌ಸೆಟ್ಟು, ಈಂದ್ ಹಣ್ಣಿನ ಜಾಡರಸಿ ಕೊಂಬೆಬದಲಿಸುವ ಕೆಂಚಳಿಲು, ಹುಣ್ಣಿಮೆಯ ಸೊಬಗು ಹೆಚ್ಚಿಸಲು ಪ್ರಕೃತಿಯ ಮದ್ಯೆ ಇನ್ನಿಲ್ಲದ ಬಣ್ಣಕಲಸುತ್ತಿದ್ದವು. ತುಳಸಿಕಟ್ಟೆಯ ಮೇಲೆ ಪಕ್ಕದ ಮನೆಯವರು ಇಟ್ಟು ಹೋದ ಕಾರ್ತಿಕದ ದೀಪ ಮಿಣುಕು ಮಿಣುಕೆಂದು ಕುಣಿದು ಉರಿಯುತ್ತಿತ್ತು. ಗುರುತಿಲ್ಲದವ ಮನೆಬಾಗಿಲಿಗೆ ಎಡತಾಕಿದನೆಂದು ಹಟ್ಟಿಯಲ್ಲಿ ಕಟ್ಟಿದ ಹಸುಗಳು ಗೊರಸೆತ್ತಿ ಬಡಿದು ಹ್ನೊಂಯ್ ಹ್ನೊಂಯ್ ಎಂದು ನಿಡುಸುಯ್ದವು.

ಪ್ರಣವ್ ಊರಿನ ದಾರಿ ತುಳಿದದ್ದು ಬರೋಬ್ಬರಿ ೧೫ ವರ್ಷಗಳ ನಂತರ. ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿಗೆ ಹೋದವನಿಗೆ ಮರಳಿ ಮನೆಗೆ ಮರಳಬೇಕೆಂದು ಹೊಸದರ ಎರಡು ವರ್ಷದಲ್ಲಿ ಅನ್ನಿಸಲೇ ಇಲ್ಲ. ಒಬ್ಬನೇ ಮಗನಾದರೂ ಹೇಳಿಕೊಳ್ಳುವಂತಹ ಅಪ್ಪನ ಪ್ರೀತಿ ಇರಲಿಲ್ಲ. ಪ್ರೀತಿ ಸಿಗುವುದಕ್ಕೆ ಅಪ್ಪ ಯಾವತ್ತೂ ಮನೆಗೆ ಸಮಯ ಹೊಂದಿಸಿ ಇದ್ದವನಲ್ಲ. ಅಸೈನ್‌ಮೆಂಟು, ಟೀಮ್‌ವರ್ಕ್, ಕಮಿಟ್‌ಮೆಂಟ್ ಎಂದೆಲ್ಲ ಮುಗಿಯದ ಸಬೂಬು ಹೇಳಿ ಅಮ್ಮನಿಗೆ ದುಡ್ಡು ಕಳಿಸಿದುದು ಬಿಟ್ಟರೆ ಆತನನ್ನು ತಿಂಗಳಾನುಗಟ್ಟಲೆ ಮುಖತಃ ನೋಡುವುದೇ ದುಸ್ತರವಾಗಿತ್ತು. ಇದ್ದುದರಲ್ಲಿ ಅಮ್ಮನೇ ಎಲ್ಲದಕ್ಕೂ ಬಡಿದಾಡುತ್ತಿದ್ದಳು. ನಡುಬೈಲಿನ ಮನೆಯಿಂದ ಉಜಿರೆಗೆ ಬೀಡಿ ಹೊತ್ತುಕೊಂಡು, ಬರಿಗಾಲಿನಲ್ಲಿಯೇ ಮುಳ್ಳು ಚುಚ್ಚಿಸಿಕೊಂಡು, ಕಲ್ಲುಗಳ ಜೊತೆಗೆ ಕಾಲಹೆಬ್ಬೆರಳ ಉಗುರು ಚಚ್ಚಿಸಿಕೊಂಡು, ಬೋನಸ್ಸಿನ ಹೊಸವಸ್ತ್ರಕ್ಕೆ ಮೊಗವರಳಿಸಿ, ಗುಂಪಿನ ಸಾಲ ಕಟ್ಟಿ, ಸೊಸೈಟಿಯ ಚಿನ್ನದ ಸಾಲದ ಏಲಂನ್ನು ಊರಪ್ರಮುಖರ ಕೈಕಾಲು ಹಿಡಿದು ಇನ್ನೊಂದು ವರ್ಷಕ್ಕೆ ದೂಡುವುದು ಆಕೆಯ ವರ್ಷಪೂರ್ತಿಯ ಯೋಜನೆಗಳಾಗೇ ಬದಲಾಗಿದ್ದವು. ಈ ಹೊಡೆದಾಟದಲ್ಲಿಯೇ ಆಕೆ ಬಹುಪಾಲು ಜೀವನವನ್ನು ಕಳೆದುಹಾಕಿದ್ದಳು.

ಬೆಂಗಳೂರಿನಲ್ಲಿ ಕೆಲಸ ಸಿಕ್ಕ ತರುವಾಯವೂ ಆಕೆ ಅದೇ ಗುಡಿಸಲಿನಲ್ಲಿ ಒಂಟಿಯಾಗಿರಲು ಹಠಮಾಡಿದುದು ಪ್ರಣವನಿಗೆ ಸರಿ ತೋರಲಿಲ್ಲ. ಉಳಿದುಕೊಳ್ಳಲು ಎರಡುರೂಮಿನ ಮನೆ, ಅನ್ನಸಾಂಬಾರು ಮಾಡಿಕೊಳ್ಳಲು ಗ್ಯಾಸು, ಕಾಲಕಳೆಯಲು ಟಿ.ವಿ ಇಂತದ್ದೆನ್ನಲ್ಲ ಇ.ಎಂ.ಐ.ನಲ್ಲಿ ಖರೀದಿಸಿ ಜೋಡಿಸಿದ ಬಳಿಕವೂ ಅಮ್ಮ ಒಂದೇ ವಾರದಲ್ಲಿ ಮರಳಿ ಊರಿನ ದಾರಿ ಹಿಡಿದಿದ್ದಳು. ಅಮ್ಮನ ಮೊಂಡು ಹಠ ಪ್ರಣವನಿಗೇನೂ ಹೊಸತಲ್ಲ. ಇವತ್ತು ಸರಿಯಾಗಬಹುದು, ನಾಳೆ ಸರಿಯಾಗಬಹುದೆಂದು ಕಾದು ತಿಂಗಳು ವರ್ಷಗಳೇ ಸರಿದವು. ಈ ಮದ್ಯೆ ಫೋನಿನಲ್ಲಿ ನಡೆಯುವ ವಾಗ್ಯುದ್ಧಗಳು, ಮುನಿಸಿನ ಅಂತಿಮ ಫಲವಾಗಿ ಅಮ್ಮನ ಮೊಂಡುತನ ಹಾಗೇ ಉಳಿಯಿತು. ಸರಿಯಾಗಿ ಕಾಲೂರಿ ನಡೆಯಲಾಗದ ಮುದಿ ಹಸು ಶಮ್ಮಿಯನ್ನು ಆಕೆಯಿಂದ ಬಿಟ್ಟಿರಲಾಗಲಿಲ್ಲವಂತೆ. ಶಮ್ಮಿಯನ್ನು ಮೊದಲೇ ಮಾರಲೊಪ್ಪದಿದ್ದುದು, ಆಕೆಯ ಸಲುವಾಗಿ ಹಟ್ಟಿ ಕೆಡವಿ ಕಾಂಕ್ರೀಟಿನ ಗೋದಾಮು ಕಟ್ಟಿಸುವುದಕ್ಕೆ ಅಮ್ಮ ಮಕ್ಕಳ ಹಾಗೆ ಹಠ ಕಟ್ಟಿ “ಬೇಡ್ವೇ ಬೇಡ’’ ಅಂದಿದ್ದು, ಪ್ರಣವನ ಬದುಕಿನಲ್ಲಿ ಸುಖಾಸುಮ್ಮನೆ ಟೆನ್ಶನ್ ಸೃಷ್ಟಿ ಮಾಡಿತು. ಅಮ್ಮನಿಗೆ ಕೇಳಲ್ಪಡುತ್ತಿದ್ದ ಪ್ರಶ್ನೆಗಳಾದ “ಹುಡುಗಿ ಸಿಕ್ಕಳಾ’’ ಯಾಕೆ ಮಗನಿಗೆ ಮದುವೆಯಾಗುತ್ತಿಲ್ಲ? ಜಾತಕ ಸರಿ ಇಲ್ಲವಾ? ಕುಜ ದೋಷವಾ? ಏನಾದ್ರೂ ಪ್ರಾಬ್ಲಂ ಉಂಟಾ? ಜೋಯಿಸರಲ್ಲಿಗೆ ಹೋಗಿಲ್ಲವಾ? ಎಂಬಿತ್ಯಾದಿ ವರಾತಗಳು ಅಂತಿಮವಾಗಿ ಪ್ರಣವನಲ್ಲಿಗೇ ಜಿದ್ದಿನಲ್ಲಿ ವಗಾಯಿಸಲ್ಪಡುತ್ತಿದ್ದವು. ಮನೆ ತೀರಾ ನೆನಪಾಗಿ ಉಜಿರೆಗೆ ಬಂದಿಳಿದು ರಾಘಣ್ಣನಂಗಡಿಗೆ ಕಾಫಿಗೆ ನಿಂತರೆ ಜನ ಮತ್ತದೇ “ಮದ್ವೆ ಫಿಕ್ಸಾಯ್ತಾ’’ ಎಂದು ಕೇಳಲು ದುಂಬಾಲು ಬೀಳುತ್ತಿದ್ದರು. ಹೀಗಾಗಿ ಪ್ರಣವನಿಗೆ ಊರಿನ ದಾರಿ ಎಂದರೆ ವರ್ಜ್ಯವೇ ಆಗುಳಿಯಿತು. ವಿಚಾರಿಸುವವರಿಲ್ಲದ ಬೆಂಗಳೂರು ತಗಾದೆ ತೆಗೆಯದ ಪರಿಸರವೇ ಹೆಚ್ಚು ಆಪ್ತವಾಯಿತು.

“ಯಾರು ಸೀತಮ್ಮನ ಸಂಬಂಧಿಕರಾ?’’ ದೀಪವಿಟ್ಟು ಹೋದ ಕನಕಮ್ಮನವರು ಕರೆದಾಗ ಪ್ರಣವ ದಡಕ್ಕನೆ ವಾಸ್ತವಕ್ಕೆ ಮರಳಿ ಹೌದೆಂಬಂತೆ ತಲೆಯಾಡಿಸಿದ. ಕೈಯಲ್ಲಿ ಬೆಂಗಳೂರಿನ ಮಹಾಲಕ್ಷ್ಮಿಯಿಂದ ತಂದ ಸ್ವೀಟಿನ ಪೊಟ್ಟಣ ರ‍್ರನೆ ಕೈಜಾರಿ ನೆಲಕ್ಕೆ ಬಿದ್ದುಬಿಟ್ಟಿತು. “ನೀವ್ಯಾರು ತಿಳಿಯಲಿಲ್ಲವಲ್ಲಾ?’’ ಕನಕಮ್ಮ ಹೆದರಿಕೊಂಡು ಪ್ರಶ್ನೆ ಹಾಕಿದರು. ನಾನು ಸೀತಮ್ಮನ ಮಗ ಪ್ರಣು ಅಂದಿದ್ದಕ್ಕೆ ಕನಕಮ್ಮ ಅಚ್ಚರಿಗೊಂಡು ಮುಖವರಳಿಸಿದರು. “ಎಲ್ಲೋಗಿದ್ರಪ್ಪಾ ನೀವುಗಳೆಲ್ಲಾ.. ಹತ್ತು ದಿನಗಳಾಯ್ತು ಸೀತಮ್ಮ ಬೆಳ್ತಂಗಡಿಯ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ. ಅವರ ಕಾಲಿನ ಗಾಯ ಗುಣವಾಗುತ್ತಲೇ ಇಲ್ಲ, ದೇಹ ಬೇರೆ ಭಾರ; ಆಚೀಚೆ ಹೊತ್ತು ಸಾಗಿಸಲು ಕಷ್ಟವಾಗುತ್ತದೆ ಅಂತ ಡಾಕ್ರ‍್ರು ಆಪರೇಷನ್ನಿಗೆ ಹೇಳಿದ್ದಾರೆ’’ ಅಂದರು.

“ಎಷ್ಟಾಗುತ್ತಂತೆ’’ ಪ್ರಣವ ಹಿಂದುಮುಂದು ಏನೂ ಯೋಚಿಸದೆ ಮರುನುಡಿದ. “ಈಗಾಗಲೇ ನಾನು ಸೀತಮ್ಮನಿಗೆ ಮೂವತ್ತು ಸಾವಿರ ಕೊಟ್ಟಿದ್ದೇನೆ ಆಕೆಯ ಸ್ಥಿತಿ ದಯನೀಯ ಆಗಿ ಹೋಗಿದೆ. ಹೊಟ್ಟೇಲಿ ಹುಟ್ಟಿದ ಮಕ್ಕಳು ಹೀಗೆ ವೃದ್ಧಾಪ್ಯದಲ್ಲಿ ಕೈಕಾಲು ಸರಿ ಇದ್ಕೊಂಡು ಕಷ್ಟಕೊಡಬಾರದಪ್ಪ’’ – ಆಕೆಯ ಮಾತುಗಳು ಪ್ರಣವನನ್ನು ಕೊಂಚ ಸಮಯ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದವು. ಕನಕಮ್ಮ ಇನ್ನೊಂದು ಚರ್ಚೆಗೆ ಆಸ್ಪದವೂ ಇಲ್ಲದಂತೆ ಮಾತು ಮುಂದುವರಿಸಿ “ಈ ಸ್ವೀಟಿನ ಪೊಟ್ಟಣ ಇಲ್ಲಿ ಯಾರಿಗೆ ಅಂತ ತಂದಿದ್ದೀ? ಅಮ್ಮನಿಗೆ ಶುಗರ್ ಬಂದು ವರ್ಷವೇ ಉರುಳಿತು ಅದೇ ಆಕೇನ ಹಿಂಡಿ ಹಿಪ್ಪೆ ಮಾಡಿದ್ದು’’ ಎಂದರು.

ಐದಾರು ವರ್ಷಗಳಿಂದ ಮಹಾಲಕ್ಷಿö್ಮಯ ಸ್ವೀಟು ಮನೆಗೆ ಕಳುಹಿಸುತ್ತಲೇ ಇರುತ್ತೇನೆ. ಆಕೆಗೆ ಕಾಜು ಬರ್ಫಿಯೆಂದರೆ ಜೀವ. ಜಹಾಂಗೀರು, ಜಿಲೇಬಿಗಳನ್ನೆಲ್ಲ ಚಪ್ಪರಿಸಿ ನೋಡಿ “ಇಂತಹ ಸ್ವೀಟು ಈ ಊರಲ್ಲೆಲ್ಲ ಇಲ್ಲವಪ್ಪಾ’’ ಎಂದು ಫೋನಲ್ಲಿ ಹೇಳ್ತಿದ್ಲಲ್ವಾ? ಅಮ್ಮ ತನಗೆ ಹೇಳಿದ್ದೆಲ್ಲವೂ ಸುಳ್ಳಾ? ಪ್ರಣವ ಗೊಂದಲದಲ್ಲಿ ಬಿದ್ದ. ಸ್ವೀಟಿನ ಪೊಟ್ಟಣ ನೆಲದಲ್ಲೇ ಇತ್ತು. ಮನೆಯೊಳಗಡೆ ಮಗ ಬರುತ್ತಾನೆ ಎನ್ನುವ ಕಾರಣಕ್ಕೆ ಮಾಡಿಟ್ಟ ಗಸಗಸೆ ಪಾಯಸ ದುರ್ನಾತ ಬೀರುತ್ತಿತ್ತು. ಅಮ್ಮ ಇಂತಹ ಎಷ್ಟು ಪಾಯಸ ಮಾಡಿಟ್ಟು ಕಾದಳೋ ಎಂದು ಅರೆಕ್ಷಣ ಪ್ರಣವನ ಮನಸ್ಸು ಮನೆಯೊಳಗಡೆಯೇ ಜಗ್ಗಿತು. ಅಷ್ಟೊತ್ತಿಗಾಗಲೇ ಆಟೋ ಬಂದು ಹಾರನ್ ಹಾಕಿದುದು ಕೇಳಿಸಿತು.

ಪ್ರಣವ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಯಲ್ಲಿ ಸೀತಮ್ಮಳ ಬೆಡ್ ಬಳಿ ಕುಳಿತಿದ್ದ. “ಸಿಕ್ಕಾಪಟ್ಟೆ ವಯಸ್ಸೇನೂ ಆಗಿಲ್ಲ, ೬೪ ವಯಸ್ಸಿಗೆ ಈ ರೋಗ ಶುಗರ್ ಎಲ್ಲ ಹೇಗೆ ಬಂತು? ನಾನೇನು ನಿನ್ನ ಹಾಗೆ ಆಫೀಸ್ ಕೆಲಸದವಳೇ? ಮನಸೋ ಇಚ್ಚೆ ಸಿಹಿಯೂ ತಿಂದವಳಲ್ಲ, ಇಡೀ ದಿನ ಕಾಡಿನ ಕಟ್ಟಿಗೆ ಹೊತ್ತು, ರಾತ್ರಿ ಬೀಡಿ ಕಟ್ಟುವ ಸಲುವಾಗಿ ನೀನು ಮಗುವಾಗಿದ್ದಾಗ ನಿದ್ದೆ ಬಿಟ್ಟುದುದರಿಂದ ಏನಾದರೂ ಬಂದಿರಬಹುದೇ? ಚಿಮಿಣಿ ಬೆಳಕಿನಲ್ಲೇ ರಾತ್ರಿ ಕಳೆದದ್ದರಿಂದ ದೃಷ್ಟಿ ಮಂಜೇ? ಪೂಜೆ-ಪುನಸ್ಕಾರಗಳು ಏನಾದರೂ ಇನ್ನೂ ಸಲ್ಲಿಕೆಯಾಗದೆ ಬಾಕಿಯೇ? ಇಲ್ಲಿವರೆಗೆ ಯಾರಿಗೂ ಕೆಡುಕು ಮಾಡಿಲ್ಲ ಯಾಕೆ ಹೀಗಾಯ್ತು? ಆಕೆ ಒಂದೇ ಸಮನೆ ಬಹುಆಯಾಮದ ಸಾಧ್ಯತೆಗಳನ್ನು ತಡಕಿ ತಡಕಿ ವ್ಯಾಕುಲಳಾಗುತ್ತಿದ್ದಳು. ಆಕೆಯ ಆರೋಗ್ಯ ಏರುಪೇರಾದುದು, ಕಣ್ಣು ಮಂಜಾಗುತ್ತಿದ್ದುದು, ಮೂತ್ರದ ನಂತರ ಇರುವೆ ಬರುತ್ತದಾ ಎಂದು ಪದೇ ಪದೇ ಹಿತ್ತಲಲ್ಲಿ ನೋಡಿ ರೋಗದ ಖಾತರಿ ಮಾಡಿಕೊಂಡಿದ್ದು, ಕಾಲಿನಲ್ಲಿ ಇರುವೆ ಪಸರಿಸಿದಂತಾದುದು, ಸಕ್ಕರೆಯ ಡಬ್ಬ ಮೂಲೆಗೆಸೆದು ಪ್ರಯೋಗಕ್ಕೆ ಬೆಲ್ಲದ ಚಹಾ ಮಾಡಿ ಕುಡಿಯುತ್ತಿದ್ದುದು, ಬೆಳಗ್ಗೆದ್ದು ಕಹಿಬೇವಿನ ಎಲೆ ಜಗಿದಿದ್ದು ತಲೆ ಚಕ್ರಬಂದಾಗ ಲಿಂಬೆಯ ಶರಬತ್ತು ಕುಡಿದು ಸಾವರಿಸಿದ್ದನ್ನೆಲ್ಲಾ ಆಕೆ ಕೃಶಳಾಗಿ ಬಿಡದೇ ಗುನುಗುನಿಸುತ್ತಿದ್ದಳು.

ಡಾಕ್ಟರು ಬಂದಾಗ ಪ್ರಣವ “ಆಕೆ ಗಟ್ಟಿಮುಟ್ಟಾಗಿ ಕೆಲಸ ಮಾಡುತ್ತಿದ್ದವಳು ಅವಳಿಗೆ ಶುಗರ್ ಎಂದು ಹೀಗೆ ಸತಾಯಿಸಿದರೆ ಹೇಗೆ?’’ ಎಂದು ತಣ್ಣಗಿನ ಆಕ್ರೋಶ ಹೊರತೆಗೆದ. ಡಾಕ್ಟರು ರಿಪೋರ್ಟುಗಳು, ಆಕೆಯ ಕಾಲಿನ ಗಾಯಗಳ ಕುರಿತಾಗಿ ವಿವರವಾಗಿಯೇ ಹೇಳಿ “ರಿಪೊರ್ಟ್ಗಳನ್ನೆಲ್ಲ ಕಣ್ಕಟ್ಟು ಮಾಡಲಾಗುತ್ತೇನ್ರೀ?’’ ಎಂದು ಕೆಕ್ಕರಿಸಿ ನೋಡಿದರು. ಕಾಲು ಇಷ್ಟೊಂದು ಕೊಳೆತಾಗಲೂ ಹಟ್ಟಿಯ ಕೆಲಸ ಮಾಡುತ್ತ ಗಾಯವನ್ನು ವಿಸ್ತರಿಸಿದ ಬಗೆಗೆ ಡಾಕ್ಟ್ರು ಅಸಮಾಧಾನ ವ್ಯಕ್ತಪಡಿಸಿದರು. “ಇದನ್ನೆಲ್ಲಾ ಯಾಕೆ ನಿರ್ಲಕ್ಷಿಸುತ್ತೀರಿ? ಆಳೆತ್ತರದ ಮಕ್ಕಳಿಗಾದರೂ ಜ್ಞಾನ ಬೇಡವೇ’’ ಎಂದೆಲ್ಲ ಕನ್ನಡಕ ಎಳೆದೆಳೆದು ಹಂಗಿಸಿದರು.

ಕನಕಮ್ಮ ಚಪಾತಿ ಕಟ್ಟಿಕೊಂಡು ಆಸ್ಪತ್ರೆಯ ವರಾಂಡದಲ್ಲಿ ಕಾದು ಕುಳಿತಿದ್ದಳು. ಡಾಕ್ಟ್ರು ಇನ್ನೊಂದಷ್ಟು ಜನರ ನಾಡಿ ಹಿಡಿದು ಕಣ್ಣು ಪಿಟಿಕಿಸಲು ಹೇಳಿ ತಪಾಸಣೆ ಮಾಡಿ ಒಂದಷ್ಟು ದೈನಂದಿನ ಬೈಗಳು ಬೈದು ಮುಂದಿನ ವಾರ್ಡಿಗೆ ಹೋದರು.

ಕನಕಮ್ಮ ಬಂದುದು ನೋಡುತ್ತಲೇ ಸೀತಮ್ಮ ಬೆಡ್ಡಿನಿಂದ ಎದ್ದು “ಶಮ್ಮಿಗೆ ಏಳಲು ಸಾಧ್ಯವಾಗುತ್ತಿದೆಯಾ’’ “ಹುಲ್ಲು ಎಷ್ಟು ಕಟ್ಟು ತಂದಿರಿ’’ ಎಂದು ಕೀರಲು ದ್ವನಿಯಲ್ಲಿ ಕೇಳಿದಳು. ಸೀತಮ್ಮನ ಪ್ರಶ್ನೆಗೆ ಹತ್ತಿರದ ಬೆಡ್‌ನವರೆಲ್ಲ ತಿರುಗಿ ನೋಡುವಂತಾಯ್ತು. ದಾದಿಯೊಬ್ಬಳು “ಸುಮ್ನೆ ಇರ್ತಿರಾ ಗಲಾಟೆ ಮಾಡದೆ’’ ಅಂದಿದ್ದಕ್ಕೆ ಇಡೀ ವಾತಾವರಣ ಮೌನಕ್ಕೆ ಜಾರಿತು. ಕನಕ “ಶ್..’’ ಎಂದು ಬಾಯಿಗೆ ಕೈಹಿಡಿದು ಸ್ವಲ್ಪ ಮೆತ್ತಗೆ ಮಾತಾಡೆಂದು ಸನ್ನೆ ಮಾಡಿದಳಾದರೂ. ಸೀತಮ್ಮನ ಮುಖದಲ್ಲಿದ್ದ ಪ್ರಶ್ನಾರ್ಥಕ ಗೆರೆಗಳು ಮಾಯವಾಗಲೇ ಇಲ್ಲ.

ಅಷ್ಟೊತ್ತಿಗೆ ಪ್ರಣವ ಧಾವಿಸಿ ಬಂದು ಕನಕ-ಸೀತಮ್ಮರ ನಡುವೆ ಹಲ್ಲುಕಡಿದ “ಈಕೆಯ ಈ ಹೋಮ್‌ಸಿಕ್‌ಗಳೇ ನಮಗೆ ಜೀವ ತೆಗೆಯುವವರೆಗೆ ಕಂಟಕವಾಗಿಬಿಟ್ಟಿವೆ. ಶಮ್ಮೀ.. ಶಮ್ಮೀ.. ಏಳೆಂಟು ವರ್ಷದಿಂದ ಹಸುವೊಂದರ ಸಲುವಾಗಿ ಬಡಿದಾಡಿ ಜೀವ ಹುಡಿ ಮಾಡಿಕೊಂಡಿದ್ದಾಳೆ ನಮಗಾದರೂ ಸಾಕಾಗಿ ಹೋಗಿದೆ. ಇಷ್ಟೆಲ್ಲ ಆರೋಗ್ಯ ಕೆಟ್ಟರೂ ನಯಾಪೈಸೆ ಬುದ್ಧಿ ಬಂದಿಲ್ಲವೆಂದು ಹಲ್ಲುಕಡಿದು ಕೈಯಲ್ಲಿದ್ದ ಬುತ್ತಿಯ ಮುಚ್ಚಳ ರಪ್ಪೆಂದು ಅಸಹನೆಯಿಂದ ಹಾಕಿ ಮೇಲೆದ್ದ. ಬೂಟನ್ನು ಅಸಹನೆಯಿಂದ ನೆಲಕ್ಕೆ ಕುಕ್ಕಿ ಹೊರಗಡೆ ನಡೆದ.

ಕನಕ ಪ್ರಣವನನ್ನು ಸಮಾಧಾನಪಡಿಸುತ್ತಿರುವಾಗಲೇ ಸೀತಮ್ಮ ಜೋರಾಗಿ ಅಳಲಾರಂಭಿಸಿದಳು.

ಏನು ಕರ್ಮನೋ ಎನೋ ಬದುಕು ನಿಂತಲ್ಲೇ ನಿಂತಿದೆ. ಒಂದು ಹುಡುಗೀನೂ ನಮ್ಮ ಮನೆಗೆ ಬರೋಕೆ ಒಪ್ತಾ ಇಲ್ಲ. “ಮನೆ ತಾರಸಿಯಾಗಲಿಲ್ಲ’’, “ಮನೆಗೆ ಕಾರು ಬರಲ್ಲ’’, “ಅಂಗಳ ತಲಪುವ ರೋಡಿಗೆ ಗ್ರೌಂಡು ಕ್ಲಿಯರೆನ್ಸು ಇಲ್ಲ’’, “ಮನೆಯಲ್ಲಿ ಹಟ್ಟಿತುಂಬ ಹಸುಗಳಿದ್ದರೆ ಸೆಗಣಿ ಗಂಜಲ ಬಾಚುವವರಿಲ್ಲ’’ ಇದನ್ನೆಲ್ಲ ಮಾಡಿಸದೇ ಸೊಸೆಯನ್ನು ಮನೆ ತುಂಬಿಸಿಕೊಳ್ತೇನೆ ಎಂದರೂ ಸಂಬಂಧದಲ್ಲಿ ನಂಬುವವರಿಲ್ಲ. ಹಸು, ಕೆಲಸ, ಮನೆಯದಾರಿ ಹೀಗೆ ನಾನಾ ನೆವಗಳಿಂದ ಪ್ರಣುಗೆ ಸಂಬಂಧಗಳೇ ಕೂಡುತ್ತಿರಲಿಲ್ಲ. ಹಾಲಿನ ಹಣದಲ್ಲಿ ಇದ್ದಬದ್ದ ಶಾಂತಿ ಹೋಮಗಳಿಗೆ ದುಡ್ಡು ಸುರುವಿದರೂ ಪ್ರಯೋಜನವಾಗಲಿಲ್ಲ, “ನನ್ನದೆಂತಹಾ ದುರ್ದೈವ’’ ಎಂದು ಸೀತಮ್ಮ ಹಲುಬಿದಳು.

ಪ್ರಣು ಕನಕಮ್ಮನನ್ನು ಕರೆದು ಗುಸುಗುಸು ಮಾತನಾಡಿ ಸಿಡುಕತೊಡಗಿದ. “ಇವರಿಗೆ ಎಷ್ಟು ಹೇಳಿದ್ರೂ ಅರ್ಥವಾಗೋಲ್ಲ, ಈ ಶಮ್ಮೀ ಸಮೇತ ಹಟ್ಟಿಯನ್ನು ಖಾಲಿ ಮಾಡಿಸುತ್ತೇನೆ ನೋಡಿ’’ ಈ ಹೈನುಗಾರಿಕೆಯ ರಗಳೆಯಿಂದ ಉದ್ಬವಿಸಿದ ಸಮಸ್ಯೆಗಳು ಒಂದೆರಡಲ್ಲ ಎಂದು ಹೊರನಡೆದ.

ಮುಖ್ಯರಸ್ತೆಗೆ ತಾಗಿಕೊಂಡಿರುವ ಜೈನ್ ಹೋಟೇಲಿನಲ್ಲಿ ಅಲ್ಪಸಲ್ಪ ತಿಂದವನಿಗೆ ಹಸುಗಳನ್ನು ಮಾರಾಟ ಮಾಡುವುದೇ ಒಂದು ಬಹುದೊಡ್ಡ ಟಾಸ್ಕ್ ಆಗಿ ಪರಿಣಮಿಸಿತು. ಸೋಮವಾರದ ಸಂತೆಯ ತುಂಬೆಲ್ಲ ಹುಡುಕಿ ಮಾತನಾಡಿ ಲಾಭವೋ ನಷ್ಟವೋ ಒಮ್ಮೆ ವಿಲೇವಾರಿಯಾಗಿಬಿಡಲೆಂದು ಶತಪಥ ತಿರುಗತೊಡಗಿದ. ದನದ ವ್ಯಾಪಾರಿ ಲೋಬೋ ಸಿಕ್ಕಿ ಶಮ್ಮಿ ಸಮೇತ ಐವತ್ತು ಸಾವಿರಕ್ಕೆ ವ್ಯಾಪಾರವೆಂದು ಮಾತನಾಡಿದ. ಮೂವತ್ತು ಕನಕನಿಗೆ ಕೊಟ್ಟು ಉಳಿದಿಪ್ಪತ್ತನ್ನು ಅಮ್ಮನಿಗೆ ಕೊಟ್ಟು ಆದಷ್ಟು ಬೇಗ ಈ ಊರು ಬಿಟ್ಟು ಬಿಡಬೇಕು ಇಲ್ದಿದ್ರೆ ಹುಚ್ಚೇ ಹಿಡೀತದೆ ಎಂದು ತರ್ಕಿಸಿದ.

ಸಂಜೆಯಷ್ಟರಲ್ಲಿ ಮನೆಗೆ ಬಂದು ರೇಟು ಫೈನಲ್ ಮಾಡಿಕೊಂಡು ಹೋಗಿ ಎಂದು ಹೇಳಿ ಲೋಬೋ ಜೊತೆ ಮಾತುಕತೆಯೂ ನಡೆದು ಹೋಯ್ತು. ಮನೆಯ ದಾರಿ, ಲೊಕೇಶನ್ ಶೇರಿಂಗ್ ನಡೆದು ಪ್ರಣವ್ ಮನಸ್ಸಿನಲ್ಲಿ ಸಮಾಧಾನ ಮೂಡಿತು.

ಸಂಜೆ ಆರು ಗಂಟೆಗೆ ಲೋಬೋ ಪಿಕ್ ಅಪ್ ಸಮೇತ ಬಂದರು. ಹಟ್ಟಿಎಲ್ಲ ನೋಡಿ “ಎಷ್ಟು ಕರು ಹಾಕಿದೆ ಇದು ಮುದ್ಕಿ’’ ಎಂದರು ಪ್ರಣು ಕನಕಮ್ಮನ ಮುಖ ನೋಡಿದ. “ಐದೋ ಆರೋ ಆಗಿರಬಹುದು ಸ್ವಾಮೀ” ಆಕೆಯ ಉತ್ತರ ಸಾವಧಾನವಾಗಿ ಬಂತು. ಕನಕಮ್ಮನಿಗೂ ಮನಸ್ಸಿನಲ್ಲಿ ಆನಂದ ತೇಲಾಡುತ್ತಿತ್ತು. ಯಾಕೆಂದರೆ ಇತ್ತೀಚೆಗಿನ ಒಂದು ವರ್ಷದಲ್ಲಿ ಸೀತಮ್ಮನಿಗೆ ಯದ್ವಾತದ್ವಾ ಆರೋಗ್ಯ ಕೆಡುತ್ತಿತ್ತು. ಈ ಹಸುಗಳ ಸಂಬಾಳಿಕೆ, ಅಕ್ಕಚ್ಚು ಕಲಸುವುದು, ಸೀತಮ್ಮಳ ಗೋಳು ಕೇಳುವುದು ಅವಳಿಗಾದರೂ ಸಾಕುಸಾಕಾಗಿಯೇ ಇತ್ತು.

ಹಸುವಿನ ಹಗ್ಗ ಬಿಚ್ಚಿ ಮೂಗುದಾರಕ್ಕೆ ಲೋಬೋ ಕೈಯಿಕ್ಕಿದ್ದೇ ತಡ ಗೂಡಲ್ಲಿರದ ಸೀತಮ್ಮನ ನಾಯಿ ಹಟ್ಟಿಯ ದಿಡ್ಡು ಏರಿ ಒಂದೇ ರಭಸದಲ್ಲಿ ಮುಂದೆ ನುಗ್ಗಿತು. ಪ್ರಣು ಕೈಯಲ್ಲಿದ್ದ ಬಡಿಗೆ ಬೀಸಿದನಾದರೂ ಅದು ಅಕ್ಕಚ್ಚಿನ ಪಾತ್ರೆಗೆ ತಗುಲಿ ನೆಲವೆಲ್ಲ ತೇವವಾಯ್ತು. ಲೋಬೋ ತಪ್ಪಿಸಿಕೊಳ್ಳಲು ಹಾರಿದಾಗ ಗೂಟಕ್ಕೆ ಚಪ್ಪಲಿ ಸಿಕ್ಕಿ ಹಾಕಿಕೊಂಡಿತು. ನಾಯಿ ನೋಡನೋಡುತ್ತಲೇ ಲೋಬೋರ ಮೊಣಕಾಲಿಗೆ ಬಾಯಿ ಹಾಕಿಯಾಗಿತ್ತು. ಕನಕಮ್ಮ ಹಚಾ.. ಹಚಾ ಎಂದು ಅಬ್ಬರಿಸಿದಷ್ಟು ನಾಯಿ ಕಚ್ಚಿ ಗರ್ವಮೆರೆದು ಛಂಗನೆ ಗೊಬ್ಬರದ ರಾಶಿಗೆ ನೆಗೆದು ದೂರಕ್ಕೆ ನಿಂತು ಬೊಗಳತೊಡಗಿತು. ಲೋಬೋ ಪಂಚೆ ಕೊಡವಿ ಮೊಣಕಾಲಿನ ಹಿಂಬದಿಗೆ ತಿರುಗಿದರು. ಮೂರು ಹಲ್ಲುಗಳ ಗೀರುವಿಕೆಯಲ್ಲಿ ನೆತ್ತರು ಪುಟಿಯುತ್ತಿತ್ತು. ಪ್ರಣು ದಡದಡನೆ ಎದ್ದು ಸಾವರಿಸಿಕೊಂಡು ತನ್ನ ಕಾರನ್ನು ಹರ‍್ರಾಮರ‍್ರ ತಿರುಗಿಸಿ ಪೇಟೆಯ ಕಡೆಗೆ ಮುಖ ಮಾಡಿಸಿ ನಿಂತ. ಎಲ್ಲ ಕ್ಷಣಾರ್ಧದಲ್ಲಿ ಹತ್ತಿ ಉಜಿರೆಯತ್ತ ಧಾವಿಸಿದರು.

ಆಸ್ಪತ್ರೆಯ ಟಿ.ಟಿ ಇಂಜೆಕ್ಷನ್, ಮಾತ್ರೆ ಕನ್ಸಲ್ಟೆಂಟ್ ಎಲ್ಲವನ್ನು ಲೋಬೋರವರೇ ಭರಿಸಿ. “ನಿಮಗೆ ನಾಯಿ ಇದೆ ಎಂದು ಹೇಳಲು ನಾಲಿಗೆಗೆ ದನ ಮೆಟ್ಟಿದೆಯಾ? ಎಂತಾ ವೇಸ್ಟ್ ಬಾಡಿ ಮರ‍್ರೆ ನೀವು’’ ಎಂದು ಪ್ರಣವನತ್ತ ತಿರುಗಿದರು. ಅನಿರೀಕ್ಷಿತ ಮಾತಿನಿಂದ ಸ್ವಲ್ಪ ಮುಖ ವಿವರ್ಣವಾದುದು ಬಿಟ್ಟರೆ ಮಾತು ಪ್ರಣು ಮೇಲೆ ಅಂತಹಾ ಪರಿಣಾಮವನ್ನೇನೂ ಬೀರಲಿಲ್ಲ. ಹಸುವಿನ ವ್ಯಾಪಾರ ಅಲ್ಲಿಗೆಯೇ ಮುರಿದು ಬಿತ್ತು. ‘ಬರ್ತೇವೆ’ ಅಂದಿದ್ದಕ್ಕೆ ಲೋಬೋ ಮೆಡಿಸಿನ್ನಿನ ಪ್ಲಾಸ್ಟಿಕ್ ಚೀಲ ಹಿಡಿದ ಕೈಎತ್ತಿ ವ್ಯಂಗ್ಯದಿಂದ ದೊಡ್ಡನಮಸ್ಕಾರ ತೋರಿದರು.

ಡಾಕ್ಟರ್ ಮತ್ತು ಪ್ರಣು ಮದ್ಯೆ ಶುಗರ್ ಕುರಿತಾದ ಮಾತುಕತೆ ನಡೆಯುತ್ತಿತ್ತು. “ಈಗೆಲ್ಲ, ಸಣ್ಣ ಮಕ್ಕಳಿಗೂ, ಮಧ್ಯ ವಯೋಮಾನದವರಿಗೂ, ಹೆರಿಗೆಯಾಗುವ ಬಾಣಂತಿಯರಿಗೂ ಶುಗರ್ ಇರುತ್ತದೆ’’ ಎಂದರು ಡಾಕ್ಟರ್.

“ಈ ಮಧುಮೇಹ ನಿವಾರಿಸಲು ಸಾಧ್ಯವೇ ಇಲ್ಲವೆ?’’ ಪ್ರಣು ಕುತೂಹಲದಿಂದ ಕೇಳಿದ.

“ನಿವಾರಣೆಯಲ್ಲ ನಿಯಂತ್ರಿಸಬಹುದು, ಆಹಾರಪದ್ದತಿಗಳನ್ನು ಸರಿ ಮಾಡಿಕೊಳ್ಳಬೇಕು’’ ಎನ್ನುತ್ತಲೇ “ನಿಮ್ಮಲ್ಲಿ ಯಾರಿಗಾದರೂ ಹೆರಿಡಿಟರಿ ಅಂದರೆ ಪೂರ್ವಜರಿಗೆ ಉಂಟೋ” ಎಂದರು.

ಪ್ರಣು ಪ್ರಶ್ನೆಯ ಬಗ್ಗೆ ಹೆಚ್ಚು ಯೋಚಿಸಲಿಲ್ಲ. ಟೆನ್ಶನ್ನು, ವ್ಯಾಯಾಮ ಇಲ್ಲದೇ ಇರುವುದು, ಜಿದ್ದಿಗೆ ಬಿದ್ದು ಸಿಹಿ ತಿನ್ನುವುದೆಲ್ಲ ಆತನ ಕಲ್ಪನೆಯಲ್ಲಿ ಓಡುತ್ತಲೇ ಇದ್ದವು. ನನಗೆ ಅಂತ ಒಂದು ಕೆಲಸ ಸಿಕ್ಕಿದ ಮೇಲೂ ಅಮ್ಮ ಹಠ ಮಾಡಿದ ಪರಿಣಾಮ ನೆನೆದು ಆತ ಕ್ರುದ್ಧನಾದ. ಈ ತರಹದ ಹಸುವಿನ ಚಾಕರಿ, ಎಲ್ಲಿ ಕಾರ್ಯಕ್ರಮಕ್ಕೆ ಹೋದರೂ ಸಂಜೆ ವೇಳೆಗೆ ಮನೆಗೆ ಮರಳಲೇಬೇಕಾದ ಅಮ್ಮನ ಅನಿವಾರ್ಯತೆ, ವರ್ಷಕ್ಕೊಮ್ಮೆ ಮಿಸ್ಸೇ ಇಲ್ಲದೆ ಬರುವ ಕೆಚ್ಚಲುಬಾವು – ಹೀಗೆ ಅಮ್ಮ ಸಾಕಿದ ಹಸುಗಳೇ ಆಕೆಯನ್ನು ಬಸವಳಿಯುವಂತೆ ಮಾಡಿದವು. ಇದನ್ನು ಏನಾದರಾಗಲೀ ಸರಿಮಾಡಿಯೇ ತೀರುವೆನೆಂದು ಆತ ಮನಸ್ಸು ಗಟ್ಟಿ ಮಾಡಿಕೊಂಡಿದ್ದ.

ಆಸ್ಪತ್ರೆಯ ವರಾಂಡಕ್ಕೆ ಕನಕಮ್ಮ ಓಡೋಡಿ ಬಂದರು. “ಶಮ್ಮೀ ನಾಲಗೆ ಹೊರಗೆ ಚಾಚಿ ಪ್ರಾಣ ಬಿಟ್ಟಿದ್ದಾಳೆ, ಸೀತಮ್ಮಳಿಗೆ ಹೇಳುವುದಾದ್ರೂ ಹೇಗೆ ಮಹರಾಯ’’ ಆಕೆ ಕಳವಳಗೊಂಡು ಸೆರಗಿನಿಂದ ಹಣೆಯೊರಸಿಕೊಂಡಳು. ಪ್ರಣುವಿನ ಮನಸ್ಸಿನಲ್ಲಿ ಸಮಾಧಾನ ಹಬ್ಬಿತು. ಈ ವಿಷಯ ಸೀತಮ್ಮಳಿಗೆ ಹೇಳಬಾರದೆಂದು ಪ್ರಣು ಕನಕಮ್ಮನಿಗೆ ತಾಕೀತು ಮಾಡಿ ಹೊರಬಿದ್ದ.

“ಶಮ್ಮೀ ಅಕ್ಕಚ್ಚು ಕುಡಿದಳಾ? ಎದ್ದು ಓಡಾಡಿದಳಾ’’ ಸೀತಮ್ಮ ಕೇಳುತ್ತಲೇ ಇದ್ದಳು. ಕನಕಮ್ಮ ಸತ್ಯವನ್ನು ಹೇಳಲೂ ಆಗದೆ ಇತ್ತ ಶಮ್ಮಿಯ ಸಾವಿನ ಸುದ್ದಿಯನ್ನು ಅಡಗಿಸಿಡಲೂ ಬಯಸದೆ ತೊಯ್ದಾಟದಲ್ಲಿ ಬಿದ್ದಳು. ಪ್ರಣು ಉಜಿರೆಯ ರೈಟರ್ ಮೂರ್ತಿಯವರಿಂದ ನಾಲ್ಕಾರು ಆಳುಗಳನ್ನು ಕರೆದುಕೊಂಡು ಹೋಗಿ ಶಮ್ಮಿಯನ್ನು ಮಣ್ಣು ಮಾಡಲು ಹೇಳಿ ಹೂತ ಜಾಗದಿಂದ ಹಂದಿ, ಹೆಗ್ಗಣಗಳು ಅಗೆಯದಂತೆ ಚೂರಿಮುಳ್ಳಿನ ಗಿಡ ಹಾಕಿಸಿ ನಾಲ್ಕಾರು ಬಲವಾದ ಕಲ್ಲುಗಳನ್ನು ಒಗೆದು ಮತ್ತೆ ಆಸ್ಪತ್ರೆಗೆ ಹಿಂತಿರುಗಿದ.

ಸೀತಮ್ಮ ಮಗನ ಎರಡೂ ಕೈಗಳನ್ನು ಹಿಡಿದು ಅಳಲಾರಂಭಿಸಿದಳು. “ನಾನು ನಿನ್ನಲ್ಲಿಗೆ ಬರದಿದ್ದುದರಿಂದ ಎಷ್ಟೆಲ್ಲ ಅನರ್ಥವಾಯ್ತು ಕಂದಾ..! ಮದುವೆಯೂ ಆಗದೆ ಇತ್ತ ನನ್ನ ಆರೋಗ್ಯವೂ ಹಾಳಾಗಿ ನೀನು ನರಳುವಂತಾಯ್ತು, ಇನ್ನು ಹಾಗಾಗಲು ಬಿಡಲಾರೆನಪ್ಪಾ.. ಶಮ್ಮೀಯನ್ನು ಇಷ್ಟು ದಿನ ಕೈಬಿಡಲಿಲ್ಲವೆನ್ನುವ ಸಂತೃಪ್ತಿಯಿದೆ. ಆಕೆಯನ್ನು ಆಶ್ರಮಕ್ಕೆ ಹಾಕಿ ನಾನು ನಿನ್ನೊಂದಿಗೆ ಬರಬೇಕೆಂದುಕೊಂಡಿದ್ದೇನೆ ಮಗನೇ..’’ ಆಕೆ ಬಿಕ್ಕಳಿಸಿದಳು.

ಮಗ ಹೊರಗಡೆ ಹೋಗುತ್ತಲೇ ಕನಕಮ್ಮನನ್ನು ಕರೆದು ಈಗಿಂದೀಗಲೇ ಮನೆಗೆ ಹೋಗೆ ಗಸಗಸೆ ಪಾಯಸ ಮಾಡೆಂದು ಹೇಳಿದಳು. “ನಿನಗಿರುವ ಶುಗರ್‌ಗೆ ಇದೆಲ್ಲ ಬೇಕಾ ನಿಂಗೆ’’ ಕನಕಮ್ಮನ ಮಾತನ್ನು ಸೀತಮ್ಮ ಏಕಾಏಕಿ ತುಂಡರಿಸಿ “ಮಗನ ಮುಂದೆ ಕೊನೆಯ ಆಸೆಯೊಂದನ್ನು ನೆರವೇರಿಸಲಾರೆಯಾ’’ ಎಂದು ಭಿನ್ನಯಿಸಿದಳು. ಆಕೆ ಆಸ್ಪತ್ರೆಯಿಂದ ಹೊರಟು ಹೋಗುವವರೆಗೂ ಖಾತರಿಪಡಿಸಿಕೊಂಡು ನಾನಾ ಲೆಕ್ಕಾಚಾರ ಹಾಕಿ ಬೆಡ್ಡಿಗೊರಗಿದಳು.

ಕನಕಮ್ಮನಿಗೂ ಮನಸ್ಸಿನ ತುಂಬಾ ಬೇಜಾರೇ ತುಂಬಿಹೋಗಿತ್ತು. ಆಕೆಗಾದರೂ ಮನೆಯ ನೆರೆಕರೆ ಎಂದು ಇದ್ದದ್ದು ಸೀತಮ್ಮ ಮಾತ್ರ. ದಿನ ಬೆಳಗಾದರೆ ಸಂಪಗೆ ಮರದ ಕೆಳಗಡೆ ಮಾತುಕತೆ, ಊರಿನ ಸುದ್ದಿ, ಹಕ್ಕಿ ಗೂಡುಕಟ್ಟಿ ಮರಿ ಮಾಡಿದ ಸಂಗತಿಗಳೆಲ್ಲ ವಿನಿಮಯವಾಗುತ್ತಲೇ ಇದ್ದವು. ಸ್ವಸಹಾಯ ಸಂಘಕ್ಕೆ ಹೋಗುವಾಗ, ಊರಜಾತ್ರೆಗೆ, ಶಾರದೋತ್ಸವದ ನಾಟಕ, ಗಣೇಶವಿಸರ್ಜನೆ – ಹೀಗೆ ಬದುಕಿಗೆ ಸೀತಮ್ಮ ನೆರಳಿನಂತೆಯೇ ಇದ್ದವಳು. “ಮಗನಿಗೆ ಮದುವೆಯಾಗಲಿಲ್ಲ’’ ಎಂದಾಗ ಕನಕಮ್ಮ ಅನೇಕ ಬಾರಿ ಮೌನಕ್ಕೆ ಜಾರುತ್ತಿದ್ದಳು. ಯಾಕೆಂದರೆ ಕನಕಮ್ಮನಿಗೆ ಜೀವನಪೂರ್ತಿ ಮದುವೆಯ ಭಾಗ್ಯವೇ ಒದಗಿ ಬಂದಿರಲಿಲ್ಲ. ಮನೆಯ ಒಡಹುಟ್ಟಿದವರೆಲ್ಲ ಸಿಡಿಲಿಗೆ ಬಲಿಯಾಗಿ ಆಕೆಯೊಬ್ಬಳೇ ಉಳಿದಿದ್ದು ಆಕೆಯ ಪಾಲಿನ ಮಹಾನ್ ದುರಂತವಾಗಿತ್ತು. ಈಗ ಸೀತಮ್ಮ ಊರು ಬಿಟ್ಟು ಹೋದರೆ ನನಗ್ಯಾರು ಆಗುವವರು? ನಾನು ಯಾರ ಬಳಿ ಮಾತಾಡಲಿ, ಮುಂದಿನ ಜೀವನ ಹೇಗೋ ಎಂಬಿತ್ಯಾದಿ ಆಲೋಚನೆಗಳ ಮಧ್ಯೆಯೇ ಪೇಟೆ ಪೂರ್ತಿ ಅಲೆದು ದಿನಸಿ ಕೊಂಡಳು.

ಸಂಜೆಯ ಹೊತ್ತಿಗೆ ಕನಕಮ್ಮ ಗಸಗಸೆ ಪಾಯಸ ಮಾಡಿಟ್ಟು ಪ್ರಣವನಿಗೆ ಕಾಯುತ್ತಿರುವಾಗಲೇ ಏಕಾಏಕಿ ಪಿಕ್‌ಅಪ್ ವಾಹನದಲ್ಲಿ ಲೋಬೋರವರು ಬಂದರು. ಕಾಲಿಗೆ ಬ್ಯಾಂಡೇಜು ಮಾಡಿದುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಬಂದವರೇ “ಆ ಬೆಂಗಳೂರಿನ ಹುಡ್ಗ ಹೋದ್ನಾ’’ ಎಂದರು. “ಇಲ್ಲಣ್ಣ ಇನ್ನೇನು ಬಂದು ಬಿಡ್ತಾರೆ’’ ಕನಕಮ್ಮ ಉತ್ತರಿಸಿದರು.

“ನನಗೂ ಗೊತ್ತಾಗದೆ ಬಿರುಸಲ್ಲಿ ನಾಲ್ಕು ಲೆಕ್ಕ ತಪ್ಪಿ ಮಾತಾಡಿದೆ. ನಾಯಿ ಕಚ್ಚಿದಾಗ ಸ್ವಲ್ಪ ಗಡಿಬಿಡಿ ಆಯ್ತು’’ ಲೋಬೋ ಹೇಳುತ್ತಿರುವಾಗಲೇ ಪ್ರಣವ್‌ನ ಕಾರು ಬಂದು ಅಂಗಳದಲ್ಲಿ ನಿಂತಿತು.

“ನೀವು ಕೇಳಿದ ಹಸು ಸತ್ತು ಹೋಯಿತು, ಮತ್ತೆ ನಿಮಗೂ ಇಲ್ಲಿಗೆ ಬಂದ ಮೇಲೆ ಅನಾನುಕೂಲವಾಯ್ತು’’ ಪ್ರಣು ಕಂಪಿಸಿದ ಸ್ವರದಲ್ಲಿ ಹೇಳಿದ. ಲೋಬೋ ಪೆನ್ನು ಮತ್ತು ಕಿಸೆಯಲ್ಲಿದ್ದ ನೋಟುಪುಸ್ತಕ ತೆಗೆದು “ನಿಮಗೆ ನನ್ನ ಮಾತಿಂದ ಬೇಜಾರಾಯ್ತಲ್ಲವೇ.. ಬೇಕೆಂದು ಹಾಗೆ ಮಾತಾಡಲಿಲ್ಲ ಕ್ಷಮಿಸಬೇಕು ದೊಡ್ಡ ಮನಸ್ಸು ಮಾಡಿ’’ ಎಂದರು. ಪ್ರಣು ಉತ್ತರ ಹೇಳಲಾರದೆ ಸುಮ್ಮನೆ ನಿಂತು ಬಿಟ್ಟಾಗ ಲೋಬೋ “ನನ್ನ ಹಣೆಯಲ್ಲಿ ನಿಮ್ಮ ನಾಯಿಯೇ ಇಂತಹದಿನ ಕಚ್ಚುವುದು ಕಚ್ಚುವುದು ಅಂತ ಬರೆದಿದ್ದರೆ ಯಾರಿಂದಲಾದರೂ ತಪ್ಪಿಸಲಾದೀತೇ’’ ಎಂದು ಹಲ್ಲರಳಿಸಿ ನಕ್ಕರು. “ನಾವು ಮಾತಾಡಿಕೊಂಡಂತೆ ಐವತ್ತು ಸಾವಿರಕ್ಕೆ ಫೈನಲ್ ಮಾಡುವಾ, ಹಸು ಅಷ್ಟಾಗಿ ಏನೂ ಪ್ರಯೋಜನವಿಲ್ಲ. ಆದರೂ ನಿಮ್ಮ ಮುಖ ನೋಡಿ ವ್ಯಾಪಾರ ಮುಗಿಸುವಾ ಮತ್ತೆ ವ್ಯವಹಾರದಲ್ಲಿ ಹೆಚ್ಚು ಕಮ್ಮಿ ನೋಡ್ಕೊಂಡು ಮುಂದುವರಿಯುವಾ’’ ಎಂದು ಹೇಳಿ ಪೆನ್ನಿನಲ್ಲಿ ನಾಲ್ಕಕ್ಷರ ಬರೆದು ಟೇಬಲ್ಲಿನ ಮೇಲಿಟ್ಟರು. ಪಿಕ್ ಅಪ್‌ನ ವಾಹನ ಹಟ್ಟಿಯ ಬಾಗಿಲಿಗೆ ಹಿಮ್ಮುಖವಾಗಿ ಚಲಿಸಿ ಹಿಂಬದಿ ಡೋರ್ ತೆರೆದು ಲೋಡ್ ಮಾಡಿಕೊಳ್ಳಲು ನಿಂತಿತು.

ಕನಕಮ್ಮ ಗಸೆಗಸೆ ಪಾಯಸ, ಮಹಾಲಕ್ಷ್ಮಿ ಸ್ವೀಟುಗಳನ್ನು ಮೂರು ಪ್ಲೇಟಿನಲ್ಲಿ ಹರವಿ ಎಲ್ಲರ ಕೈಗಿತ್ತರು.

“ನಿಮಗೆ ಈ ಪಾಯಸ ಮಾಡಲು ಯಾರು ಹೇಳಿದರು’’ ಕನಕಮ್ಮನಿಗೆ ಪ್ರಣು ತುಸು ಗಂಭೀರವಾಗಿ ಪ್ರಶ್ನೆ ಎಸೆದ.

“ನಿಮ್ಮಮ್ಮನೇ ಕಣಪ್ಪಾ? ನಿನಗೆ ಇಷ್ಟವಂತಲ್ಲಾ..’’ ಕನಕಮ್ಮ ಹೇಳುತ್ತಿರುವಾಗಲೇ ಪ್ರಣು ಪ್ಲೇಟು ಎತ್ತಿ ಎಸೆದು ಬಿಟ್ಟ. ಒಳಗೆ ಹೋದವನೇ ಬಿಸಿ ಬಿಸಿ ನೀರು ತಂದು ಕುಡಿಯತೊಡಗಿದ. ಕನಕಮ್ಮ ಗಾಬರಿಯಿಂದ “ನಿನಗೇನಾಯ್ತು ಪ್ರಣು’’ ಎಂದಳು.

“ನನಗೆ ಸಕ್ಕರೆ ಕಾಯಿಲೆ ಬಂದು ಹನ್ನೆರಡು ವರ್ಷವೇ ಕಳೆದಿದೆ. ಈ ಪಾಯಸ, ಸ್ವೀಟು, ಟೀ, ಕಾಫಿಗಳನ್ನು ಎಂದೋ ಬಿಟ್ಟಿದ್ದೇನೆ. ಅಮ್ಮ ಏನಾದ್ರೂ ಇದನ್ನು ಕೇಳಿದ್ರೆ ಭಯಭೀತಳಾಗುತ್ತಾಳೆ. ಅಂತಲೇ ಇಷ್ಟು ದಿನ ಸುಮ್ಮನಿದ್ದದ್ದು. ಆಕೆಗೆ ಶುಗರ್ ಅಂಟಿಕೊಂಡ ದಿನದಿಂದಲೂ – ಇದು ಪೇಟೆಯ ಖಾಯಿಲೆ, ಪೇಟೆಯ ಖಾಯಿಲೆ – ಅಂತ ಗೊಣಗಿದುದು ಕಂಡು ಎಲ್ಲೂ ಬಾಯಿಯೇ ಬಿಟ್ಟಿರಲಿಲ್ಲ. ಮೊದಲೇ ಹುಡುಗಿ ಸಿಗದೆ ಮದುವೆಯಾಗದೆ, ಅಮ್ಮನಿಗೂ, ಮನೆಗೂ ಭಾರವಾಗಿರುವಾಗ ಇನ್ನೊಂದು ಟೆನ್ಶನ್ ಯಾಕೆ ಕೊಡುವುದೆಂದು ಸುಮ್ಮನಾಗಿದ್ದೆ. ಇವತ್ತು ಗಟ್ಟಿ ಮನಸ್ಸು ಮಾಡಿದ್ದೇನೆ ಆಕೆಯೆದುರು ಹೇಳುವ ಸತ್ಯ ಆಕೆಗೂ ಧೈರ್ಯ ತಂದುಕೊಡಲಿದೆ’’ ಎಂದು ಪ್ರಣು ಗದ್ಗದಿತನಾದ.

ಅಂದ ಹಾಗೆ ಇನ್ನೊಂದು ವಿಷ್ಯ ಲೋಬೋರವರೆ “ಹಸುಗಳನ್ನು ನಾನೇ ಸಾಕುತ್ತೇನೆಂದು ನಿಶ್ಚಯ ಮಾಡಿದ್ದೇನೆ. ಅಮ್ಮನ ಜಾಗದಲ್ಲಿ ನಾನೇ ನಿಂತು ಸಂಭಾಳಿಸುತ್ತೇನೆ. ನಿಮ್ಮ ಪಿಕ್ ಅಪ್‌ನ ವೆಚ್ಚ ಹೇಳಿ ನಾನೇ ಕೊಡ್ತೇನೆ. ಅಮ್ಮನಿಗೂ ನೆಮ್ಮದಿ ಸಿಗ್ತದೆ ಎಂದು ಧೈರ್ಯದಲ್ಲಿ ಮಾತು ಮುಂದುವರಿಸಿದ. ಲೋಬೋಗೂ ಕೂಡ ಬಲವಂತ ಮಾಡುವುದು ಇಷ್ಟವಾಗಲಿಲ್ಲ.

ಬೆಳಕು ಝಗಮಗಿಸುತ್ತ, ಅಂಬುಲೆನ್ಸ್ ಒಂದು ಮನೆಯ ಗೇಟ್ ಬಳಿ ನಿಂತಿತು. ಲೋಬೋರ ಆಳು ಪಿಕ್ ಅಪ್ ಡೋರ್ ಹಾಕಿ ಗೇಟ್‌ನಿಂದ ಹೊರಕ್ಕೆ ಅಗಚುವುದು ಸ್ಪಷ್ಟವಾಗಿ ಕಾಣುತ್ತಿತ್ತು.

ಸೀತಮ್ಮ ಹಾಯಾಗಿ ಮಲಗಿ ವಾಪಾಸು ಮನೆಗೆ ಬಂದಿದ್ದಳು. ಶಮ್ಮಿ ಇರಲಿಲ್ಲ. ಹಸುಗಳು ಈ ಬಾರಿ ಗೊರಸೆತ್ತಿ ಹ್ನೊಂಯ್ ಹ್ನೊಂಯ್ ಎಂದು ಹೇಳಲಿಲ್ಲ. ಕನಕಮ್ಮ ಬಾಗಿಲಲ್ಲಿ ಸೆರಗು ಬಾಯಿಗೆ ತುರುಕಿ ಗರಬಡಿದು ನಿಂತಿದ್ದಳು. “ನನಗೂ ಶುಗರ್ ಇದೆ ನೀನು ಭಯಪಡಬೇಡ’’ ಎಂದು ಧೈರ್ಯದಿಂದ ಉರುಹೊಡೆದ ಮಾತುಗಳು ಪ್ರಣು ಗಂಟಲಲ್ಲೇ ಉಳಿದವು.

***

Facebook
X
WhatsApp
Print
Email