“ಕೂತ್ಕೊಂಡ್ ತಿಂದ್ರೆ ಕುಡುಕೆ ಹೊನ್ನು ಸಾಲಲ್ಲ. ಅದಕ್ಕೇ ಬಫೆ ಸಿಸ್ಟಂ ಕಂಡುಹಿಡಿದದ್ದು” ಎಂದ ಸೀನು.
“ನಿಂತ್ಕೊಂಡ್ ತಿಂದ್ರೆ ಸಾಲತ್ತಾ?”
“ಹೂಂ. ಎಲೆಕ್ಷನ್ನಿಗೆ ನಿಂತ್ಕೊಂಡು ವರ್ಷವಿಡೀ ತಿಂದರೂ ಇನ್ನೂ ಲೂಟಿ ಬಾಬ್ತು ಉಳಿದಿರತ್ತಲ್ಲ!”
“ರಾಜಕಾರಣಿಗಳಿಗೂ ಬಫೆಗೂ ಎಲ್ಲಿಗೆಲ್ಲಿಯ ಸಂಬಂಧವಯ್ಯ!”
“ಒಂದೇ ಅಕ್ಷರ ವ್ಯತ್ಯಾಸ. ಇದು ಬಫೆ; ಅವನು ಬಫೆಲೋ” ಎಂದ ಸೀನು.
ಈ ಹೋಲಿಕೆ ನನಗೆ ಇನಿತೂ ಸರಿಕಾಣಲಿಲ್ಲ. ಬಫೆಲೋ ಉರುಫ್ ಎಮ್ಮೆ ನಿಂತಲ್ಲೇ ತಿನ್ನುತ್ತದೆ. ರಾಜಕಾರಣಿ ಉರುಫ್ ಎಮ್ಮೆಲ್ಲೆ ಊರೆಲ್ಲಾ ತಿರುಗಿ ತಿನ್ನುತ್ತಾನೆ ಎಂದಿದ್ದಾರೆ ಬೀಚಿ. ಎಮ್ಮೆಯಿಂದ ಹಾಲು; ಎಮ್ಮೆಲ್ಲೆಯಿಂದ ಹಾಳು. ಎಮ್ಮೆ ಕೋಣನನ್ನು ಕಟ್ಟಿಕೊಂಡು ಒದ್ದಾಡುತ್ತದೆ. ಎಮ್ಮೆಲ್ಲೆ ಸ್ವಯಂ ಕೋಣ. ಎಮ್ಮೆ ಮಹಿಷಿ; ಎಮ್ಮೆಲ್ಲೆ ಮಹಿನಾಶಿ.
ಮಹಿಷಿಯಲ್ಲಿ she ಇಹುದು ಕಾಣ
ಮಹಿಳೆಯಂತೆಯೆ ಇವಳು ಸೇವೆಯ ತಾಣ
ಮಹಿಷಿಯನು ಪೋಷಿಸಿರೆ ಪಡೆವೆ ಬೆಣ್ಣೆ
ಮಹಿನಾಶಿಯ ಪೋಷಿಸೆ ಬಾಯಿಗೆ ಮಣ್ಣೆ
ಮಹಿಯ ಹೆಸರಲ್ಲೆಲ್ಲೆಡೆ ಇಹುದು ಸಿಟಿ
ಇಹುದಿಲ್ಲಿ ಮಹಿಷಪುರ ಅಲ್ಲಿ ಬಫೆಲೋ ಸಿಟಿ
ಎಂದೆ. ಎಮ್ಮೆಯ ‘ಶ್ರೇಷ್ಠ ಕಸಿನ್’ ಆದ ಹಸುವನ್ನು ಎಷ್ಟೇ ಕೊಂಡಾಡಿದರೂ ‘ಹಸುನಗರ’, ‘ಗೋಪುರ’, ‘ಕೌ ಸಿಟಿ’ಗಳು ಎಲ್ಲಿಯೂ ಇದ್ದಂತಿಲ್ಲ. ‘ಕೌಬಾಯ್’ ಎಂಬ ಪದದ ಅರ್ಥವು ಲೆಕ್ಕಾಚಾರವಾಗಿ ‘ಕರು’ ಎಂದೇ ಆಗಬೇಕಿತ್ತು. ಅಮೆರಿಕದವರು ಗೋಪಾಲಕನನ್ನು ಕೌಬಾಯ್ ಎಂದು ಕರೆದು ಅನರ್ಥಗೈದಿದ್ದಾರೆಂಬುದು ಶುದ್ಧ ಕಂಗ್ಲೀಷರ ಖಚಿತ ನಿಲುವಾಗಿದೆ” ಎಂದೊದರಿದೆ.
“ರಾಜಕಾರಣಿಯೂ ಒಂದು ವಿಧದಲ್ಲಿ ಬಫೆಲೋನೇ ಕಣೋ. ಇಲ್ಲಿ ‘ಲೋ’ ಹಿಂದಿಯದು. ‘ಬಫೆಯನ್ನು ತೊಗೊ’ ಎಂದು ಪಕ್ಷವು ಅನುಮತಿಸುತ್ತದೆ. ಇವನು ತನಗೆ ಬೇಕಾದ್ದನ್ನು, ಬೇಕಾದಷ್ಟನ್ನು ಪಡೆಪಡೆದು ನುಂಗುತ್ತಾನೆ. ಜೊತೆಗೆ ಪುಢಾರಿ ಎಂದಿಗೂ ಕ್ವಾಲಿಟಿಯಲ್ಲಿ ‘ಹೈ’ ಅಲ್ಲವೇ ಅಲ್ಲ, ‘ಲೋ’ ಎಂದು ಸಂಬೋಧಿಸಲು ಯೋಗ್ಯನಾದ ‘low’ನೇ. ಅವನಿಂದ ಕಡೆಗೆ ದೇಶಕ್ಕಾಗುವುದೂ loanಏ” ಎಂದ ಸೀನು.
ಸೀನುವೇ ಹೀಗೆ ಬಫೆಯಿಂದ ಹೊರಟ ಮಾತನ್ನು ಬಫೆಲೋ ಸಿಟಿಯಲ್ಲೋ, ವಾರನ್ ಬಫೆ(ಟ್) ಹಣ ಹೂಡಿದ ಕಂಪನಿಗಳ ವಿಷಯದಲ್ಲೋ ನಿಲ್ಲುತ್ತದೆ. ವಾರನ್ ಬಫೆಯಲ್ಲಿನ ‘ವಾರನ್’ನಿಂದ ಹೊರಟು ‘ಕಲಹಪ್ರಿಯ ಟ್ರಂಪ್’ ಕಡೆಗೋ, ಹಿಂದಿನ ಕಾಲದಲ್ಲಿ ವಿದ್ಯಾರ್ಥಿಯ ಜೀವನಾಡಿಯಾಗಿದ್ದ ‘ವಾರಾನ್ನ’ದ ಕಡೆಗೋ ಸಾಗಿದರೂ ಅಚ್ಚರಿಯಲ್ಲ.
“ಬಫೆಯತ್ತ ಮರಳೋಣವೇ?” ಎಂದೆ.
“ಆಹಾ! ಬಫೆಯೆಂದರೆ ನನಗೆ ಘೋರಿ, ಘಜನಿಗಳದೇ ನೆನಪು” ಎಂದನವ.
“ಎತ್ತಣ ಊಟ, ಎತ್ತಣ ನೋಟವಯ್ಯ!” ಎಂದೆ.
“ಘೋರಿ, ಘಜನಿಗಳು ಅದೇ ಊರುಗಳಿಗೆ ಪದೇ ಪದೇ ಬಂದು ಇದ್ದುದನ್ನು ದೋಚಿಕೊಂಡು ಹೋದಂತೆಯೇ ಬಫೆಯಲ್ಲಿ ನಾವು ಸಹ ಅದೇ ಕೊಡುಗೈ, ಕೊಡುಸೌಟುಗಳ ಬಳಿ ಸಾರಿ ಬಡಿಸಿಕೊಳ್ಳುತ್ತೇಲ್ಲ!”
ಅಹುದಲ್ಲವೆ! ಬಫೆ ಬೆಂಗಳೂರಿನಲ್ಲಿ ಆರಂಭವಾದುದು 1970ರ ದಶಕದ ಉತ್ತರಾರ್ಧದಲ್ಲಿ. ಜೈಲುಗಳಲ್ಲಿ ಖೈದಿಗಳಿಗೆ ನೀಡುವಷ್ಟೇ ಖಡಕ್ಕಾಗಿ ಬಡಿಸುವ ಮಂದಿ ಕೌಂಟರಿನ ಹಿಂದೆ ಇರುತ್ತಿದ್ದರು. ‘ಕೌಂಟರ್’ ಪದವು ಮುಂಗಟ್ಟಿಗೆ ಹೇಗೆ ಹೊಂದುವುದೋ ಹಾಗೆಯೇ ಬಡಿಸುವರಿಗೂ ಹೊಂದುತ್ತಿತ್ತು. ‘ನೀವು ಆಗಲೇ ಜಾಮೂನ್ ಹಾಕಿಸಿಕೊಂಡಿರಿ. ಎರಡನೆಯ ಜಾಮೂನಿಗೆ ಅವಕಾಶವಿಲ್ಲ’ ಎನ್ನುತ್ತಾ ಊಟಕ್ಕೆ ನಿಂತವನನ್ನು ಅಪರಾಧಿಯಂತೆ ಕಾಣುವ ‘ಹಿಡಿಗೈದೊರೆ’ಗಳ ಬಗ್ಗೆ ‘ಸರಿಯಾದ ಕೌಂಟ್ ಇಟ್ಟುಕೊಂಡಿರುವ ಇವನಲ್ತೆ ಕೌಂಟರ್!’ ಎನಿಸಿದ್ದುಂಟು.
‘ಬುಫೆ’ ಎಂದೂ ಕರೆಸಿಕೊಳ್ಳುವ ಈ ‘ಬಫೆ’ಯ ಬಗೆ ನನಗೆ ಇಂದಿಗೂ ಅಪ್ರಿಯವೇ. ಬಾಳೆಯೆಲೆಯಲ್ಲಿ ವಿಕ್ರಮಾದಿತ್ಯನ ಆಸ್ಥಾನದಲ್ಲಿ ರಾರಾಜಿಸಿದ ಪಂಡಿತಮಣಿಗಳಂತೆ ಸಾಲಾಗಿ ಕುಳಿತು ಕಣ್ಣಿಗೆ ಹಬ್ಬ ಉಂಟಾಗಿಸುವ ಕೋಸಂಬರಿ(ಸೀನುವಿನ ಪ್ರಕಾರ ಕೋಸನ್ನೇ ಬಟ್ಟೆಯಾಗಿ ಧರಿಸಿದವಳು ಕೋಸಂಬರಿ! ‘ಶ್ವೇತಾಂಬರಿ’ಯಂತೆಯೇ’ ಎನ್ನುವುದು ಅವನ ವ್ಯಾಖ್ಯಾನ), ಪಲ್ಯ(ನಮ್ಮ ಹೊಟ್ಟೆ ಸೇರುವ ವಸ್ತು ಪಲ್ಯ, ಇತರ ದೇಶದ ಹೊಟ್ಟೆ ಸೇರುವುದು ಮಲ್ಯ ಎನ್ನುವುದು ಹಗರಣಾಧ್ಯಯನಿಗಳ ಅಂಬೋಣ), ಪಾಯಸ(ಇದೇ ರುಚಿಕರ ಊಟಕ್ಕೆ ಪಾಯ ಎನ್ನುವವರಿದ್ದಾರೆ), ಗೊಜ್ಜು, ಚಿತ್ರಾನ್ನ ಮೊದಲಾದ ಜಿಹ್ವಾಜಲಪ್ರಚೋದಕಗಳ ‘ದೃಶ್ಯಮಾತ್ರೇನ ಕ್ಷುದ್ಬಾಧಾ ನಿವಾರಣಂ’ ಎನಿಸುವ ಸೊಬಗಿನ ಮುಂದೆ, ಮೈಸೂರಿನ ದೊಡ್ಡಕೆರೆ ಮೈದಾನದಲ್ಲಿ ನಡೆಯುವ ಎಕ್ಸಿಬಿಷನ್ಗಳಲ್ಲಿ ಕಾಣಬರುವ ಸ್ಟಾಲ್ಗಳಂತೆ ಕಾಣುವ ಬಫೆ ಕೌಂಟರುಗಳ ಸೊಬಗು ಜೋಗ್ ಜಲಪಾತದ ಸೊಬಗಿಗೆ ನಲ್ಲಿಯಿಂದ ಸೋರುವ ನೀರಿನ ಸೊಬಗನ್ನು ಹೋಲಿಸುವುದಕ್ಕೆ ಸಮ!
ಹದಿನಾರನೇ ಶತಮಾನದಲ್ಲಿ ಸ್ಕ್ಯಾಂಡಿನೇವಿಯಾದಲ್ಲಿ ಸ್ಮೋರ್ಗಸ್ಬಾರ್ಡ್ (smorgasbord) ಎಂದು ಕರೆಯಲಾದ ‘ಸರ್ವಖಾದ್ಯಬಂದರು’ ಬಫೆಯ ಮೊದಲ ರೂಪ. ‘ಲಲನೆಯ ಮುಂದೆ ಮಂಡಿಯೂರಲು ಹೊತ್ತಲ್ಲದ ಹೊತ್ತಲ್ಲಿ ಬಂದು ವಕ್ಕರಿಸಿದನಲ್ಲ! ಅಡುಗೆಯ ಕಥೆ ಏನು!’ ಎಂದು ಬಾಣಸಿಗರು ಗೋಳಾಡುತ್ತಿದ್ದಾಗ ‘ಇರುವುದನ್ನೇ ತಂದು ಬಡಿ’ ಎಂದು ಮನೆಯೊಡತಿ ಗೊಣಗಾಣತಿ ನೀಡಿದುದೇ ಮೊದಲ ಬಫೆಗೆ ಕಾರಣವಂತೆ. (‘ತಂದು ಬಡಿ’ ಎನ್ನುವುದೇ ‘ಬಡಿಸು’ ಆದುದೋ ಏನೋ!) ಎಲ್ಲೇ ಒಳಿತಿದ್ದರೂ ಅದನ್ನು ಕದ್ದೊಯ್ಯುವ ‘ಜಗತ್ಕಿಲಾಡಿ’ಗಳಾದ ಬ್ರಿಟಿಷರು ಈ ಪದ್ಧತಿಯನ್ನೂ ಕದ್ದು ತಮ್ಮದಾಗಿಸಿಕೊಂಡರು. ಬ್ರಿಟಿಷರ್ ಪಡೆದುದಂ ಭಾರತವು ಬಿಡುವುದೇಂ! ಹತ್ತೊಂಬತ್ತನೆಯ ಶತಮಾನದಲ್ಲಿ ಬ್ರಿಟಿಷರಲ್ಲಿ ಆರಂಭವಾದುದು ಇಪ್ಪತ್ತನೆಯ ಶತಮಾನದಲ್ಲಿ ನಮ್ಮಲ್ಲಿಗೂ ದಾಪುಗಾಲಿಕ್ಕಿತು. ಅಂದಿನಿಂದಲೇ
ದೀನ ನಾ ನಿಂತಿರುವೆ; ತಟ್ಟೆಯನು ಹಿಡಿದಿರುವೆ
ಖಾದ್ಯಭಿಕ್ಷೆಯ ನೀಡಿ ದಯೆ ತೋರು ಪ್ರಭುವೆ |
ರೇಷನಂಗಡಿಯಾಚೆ ನಿಂತ ಬಡವನ ರೀತಿ
ಕಾದಿರುವೆ ಹಸಿದಿರುವೆ ಎನ್ನ ಕಡೆ ಗಮನಿಸೆಯ ಗುರುವೆ |
ಕೌಂಟರಾ ಬಳಿ ಬಂದು ಪ್ಲೇಟು ಮುಂದಿರಿಸಿರುವೆ
ಗುರು ನೀವು ಸರ್ವ್ ಮಾಡೆ ನಾ ತಿನ್ನೆ ಬಂದೆ
ನಿಮ್ಮ ಕೌಂಟರ ಬಳಿಯೆ ನಿಲ್ಲಲಾಶ್ರಯ ನೀಡಿ
ಸುಗ್ರಾಸ ಸುಧೆಯ ಬಡಿಸಿ ಕುಡಿಸಿರಿ ಗುರುವೆ |
ಎಂಬ ‘ಬೋನದೀನ ಗೀತೆ’ ನಮ್ಮಲ್ಲಿ ಆರಂಭವಾಯಿತು. (ಬೋನ ಎನ್ನುವುದು ಭೋಜನದ ಹ್ರಸ್ವರೂಪ).
ನನಗೆ ಅಪ್ರಿಯವೆಂದಾಕ್ಷಣ ಜಗಕ್ಕೆ ಪ್ರಿಯವಾಗಬಾರದೆಂದೇನಿಲ್ಲವಲ್ಲ. ಬಫೆಯನ್ನು ಸ್ಥೂಲವಾಗಿ ಎರಡು ವಿಧವಾಗಿ ವಿಂಗಡಿಸಬಹುದು. ‘ಸ್ಥಾವರ ಬಫೆ’ ಮತ್ತು ‘ಜಂಗಮ ಬಫೆ’. ಸ್ಥಾವರ ಬಫೆಯಲ್ಲಿ ತಿನ್ನುವವರು ಇದ್ದಲ್ಲೇ ಇರುತ್ತಾರೆ. ಫ್ಯಾಷನ್ ಷೋಗಳಲ್ಲಿ ಡ್ರೆಸ್ಗಳನ್ನು ಪ್ರದರ್ಶಿಸುವ ಮಾಡೆಲ್ಗಳು ಒಯ್ಯಾರದಿಂದ ಪ್ರೇಕ್ಷಕರ ಮುಂದೆ ಸಾಗುವ ರೀತಿಯಲ್ಲಿಯೇ ಘಮಘಮಿಸುವ ಲಾಲಾರಸಪ್ರವಾಹಕಗಳು ಉಣ್ಣುವಾಸೆ ಇರುವವರ ಮುಂದೆ ಪೆರೇಡ್ ಬಂದು ಬೇಕೆಂದವರ ತಟ್ಟೆ, ಹೊಟ್ಟೆ ಸೇರುತ್ತವೆ. ಈ ಪದ್ಧತಿ ಇರುವುದೆಂದೇ ತಿಳಿಯದಿದ್ದ ನಾನು ಮಸ್ಕತ್ಗೆ ಹೋದಾಗ ಕಣ್ಮುಂದೆ ಹಾದುಹೋದ ಖಾದ್ಯಗಳನ್ನೆಲ್ಲ ‘ಫುಡ್ ಪೆರೇಡ್’ನಂತೆ ನೋಡುತ್ತಾ ‘ಮುಂದೆ ತಟ್ಟೆಗೆ/ಎಲೆಗೆ ಬಿದ್ದಾಗ ತಿಂದರಾಯ್ತು’ ಎಂದುಕೊಂಡಿದ್ದೆ. ಎಷ್ಟೇ ಹೊತ್ತಾದರೂ ಎಲೆ ಹಾಕುವ ಸೂಚನೆಯೇ ಕಾಣದಿದ್ದಾಗ ವಿಚಾರಿಸಿದರೆ ಆ ಪೆರೇಡೇ ಫಸ್ಟ್ ಅಂಡ್ ಫೈನಲ್ ಸರ್ವಿಂಗ್ ಎಂದು ತಿಳಿಯಿತು. ಬೆಳಗಿನ ಆಹಾರವಿದ್ದು, ರಾತ್ರಿ ಖೋತಾ ಆದುದರಿಂದ ನನಗೆ ಅಂದು ರಿವರ್ಸ್ ಏಕಾದಶಿ!
ಜಂಗಮ ಬಫೆಯಲ್ಲಿ ತಿಂಬುವರು ಓಡಾಡಿಕೊಂಡಿರುತ್ತಾರೆ, ಸ್ಟಾಲ್ಗಳು ಸ್ಥಾವರವಾಗಿರುತ್ತವೆ. ಚಿಕ್ಕ ಜಾಗದಲ್ಲಿ ದೊಡ್ಡ ಗುಂಪಿದ್ದರೆ ಇದೇ ಉತ್ತಮ ಪದ್ಧತಿ. ಇಲ್ಲಿಯೂ ಕ್ಯೂ ಜಂಪ್ ಮಾಡುವ ಅನ್ನಾತುರರು, ಟ್ರಾಫಿಕ್ ಜ್ಯಾಮ್ ಮಾಡುವ ಅಡ್ಡಾದಿಡ್ಡಿಗರು, ರೋಡ್ ಬ್ಲಾಕ್ ಮಾಡುವ ಶುದ್ಧ ಎಮ್ಮೆಗಳುಂಟು. ಹಿಡಿದ ತಟ್ಟೆಯಿಂದ ಮತ್ತೊಬ್ಬರ ತಟ್ಟೆಗೆ ಢೀ ಕೊಟ್ಟು ತಟ್ಟೆಯನ್ನು ಚಪ್ಪಾಚೂರಾಗಿಸುವ ‘ಸ್ಪ್ಲಿಟ್ ಪರ್ಸನಾಲಿಟಿ’ಗಳು, ಪ್ಲೇಟನ್ನು ಲೀನಿಂಗ್ ಟವರ್ನಂತೆ ಓರೆಯಾಗಿಸಿ ನೆಲಕ್ಕೆ ‘ರಸಾನುಭವ’ ಉಂಟಾಗಿಸುವ ‘ಚೆಲ್ಲು ಬುದ್ಧಿಯವರು’ ಉಂಟು. ಪ್ರತಿಯೊಂದನ್ನೂ ಹೊಗಳುತ್ತಾ ಭುಂಜಿಸುವ ‘ರಸಋಷಿ’ಗಳುಂಟು.
‘ಬಫೆ ನನಗೆ ಅತ್ಯಂತ ಪ್ರಿಯವಾದುದು. ಬಫೆಯೆ ಜೀವನ ಸಾಕ್ಷಾತ್ಕಾರ’ ಎಂದ ಡ್ರೈಕ್ಲೀನರ್ ದೇವಣ್ಣ. ಏಕೆಂದು ಹುಬ್ಬೇರಿಸಿದೆ.
ಸಾರಿನ ಕರೆಯಿಹ ಬಿಳಿ ಷರ್ಟುಂಟು
ಸ್ಯಾರಿಯ ಪದರದಿ ಜಿಡ್ಡಿನ ಅಂಟು
ಕುರ್ತಾ ಜುಬ್ಬಾ ಪೈಜಾಮಗಳಲಿ
ಫಳಫಳ ಹೊಳೆಯುವ ಕಾಸ್ಟ್ಲಿ ಡ್ರೆಸ್ಸಲಿ
ಕಳೆಕಳೆ ಎನಿಸುವ ರೇಷ್ಮೆಯ ಅಂಚಲಿ
ಕಾರುತ ಕೂರುತ ಸಾಗದ ಅಂದದಿ
ಕರೆಯು ಮೂಡಿಹುದು ನೋಡಿದಿರಾ…
ಎಂದು ಪದ ಹಾಡತೊಡಗಿದನವನು.
ಬಫೆಯಲ್ಲಿ ಕೋಲ್ಡ್ ಬಫೆ, ಹಾಟ್ ಬಫೆ, ಫಿಂಗರ್ ಬಫೆ ಎಂದಿದೆಯಂತೆ. ಹಾಟ್ ಬಫೆ ಎಂದಾಕ್ಷಣ ಕುಡುಕರ ಕಣ್ಣರಳಿತೆ? ಊಹೂಂ. ಅಷ್ಟು ಹಾಟ್ ಅಲ್ಲವದು. ಆದರೆ ಕೋಲ್ಡ್ ಬಫೆ ‘ಯುದ್ಧ ಬೇಡವೋ’ ಎಂಬ ಮೊರೆಗೆ ಕರಗದ ಟ್ರಂಪಿನ ಹೃದಯದಷ್ಟೇ ಶೀತಲವಾಗಿರುವ ಖಾದ್ಯಗಳಿಗೆ ಸೀಮಿತ. ಫಿಂಗರ್ ಬಫೆಯಲ್ಲಿ ಬೆರಳಿನಿಂದ ಹೆಕ್ಕಿ ತಿನ್ನುವ ಕೇಕ್ ಮೊದಲಾದ ವಸ್ತುಗಳದೇ ಸಾಮ್ರಾಜ್ಯ.
ಬಫೆಗೂ, ಬಾಳೆಯೆಲೆಯೂಟಕ್ಕೂ ಪ್ರಮುಖವಾದ ವ್ಯತ್ಯಾಸವೆಂದರೆ ಬಾಳೆಯೆಲೆಯ ಮುಂದೆ ಕುಳಿತು ತಿನ್ನುವ ಬಕಾಸುರೋದರರನ್ನು ನೋಡುವುದೇ ಕಣ್ಣಿಗೆ ಹಬ್ಬ. ಬಫೆಯಲ್ಲಿಯೂ ಅವರುಗಳು ಅಷ್ಟೇ ತಿಂದರೂ, ಕಂತಿನಲ್ಲಿ ಬಡಿಸಿಕೊಳ್ಳುವುದರಿಂದ ‘ಅನ್ನದ ಗಿರಿಯೊ, ಸಾರಿನ ತೊರೆಯೊ, ಸಿಹಿಯೂ ಖಾರವು ಬಲು ರುಚಿಯೊ; ಬಾಳೆಯೆ ಊಟದ ಪರಮಾನಂದವೆ ಸುಮಧುರ ಸುರುಚಿಯ ವಿಧಿಯೋ’ ಎಂದು ನೋಡುಗರು ಹಾಡುವುದು ತಪ್ಪುತ್ತದೆ.
ಆದೊಡೇಂ! ಫುಡ್ ವೇಸ್ಟನ್ನು ಮಿನಿಮೈಸಿಸುವ, ಉಷ್ಟ್ರಗಳೋಪಾದಿಯಲ್ಲಿ ನಿಧಾನವಾಗಿ ಮೆದ್ದು, ತರಾತುರಿಯಲ್ಲಿರುವ ‘ಆತುರಮುಖ’ರು ರಿಕ್ತೋದರರಾಗಿ ತೆರಳುವಂತಾಗಿಸುವ ‘ಬಡಿಸೂಟ’ಕ್ಕಿಂತ, ಕ್ಷಿಪ್ರವಾಗಿ ‘ಆಯ್ಕೊಂಡು ತಿಂದು’ ಹೊರಡಲು ಅನುವಾಗಿಸುವ ಈ ‘ಓಡಾಡೂಟ’ವು ‘hurry ನಾಮವೇ ಚೆಂದ’ ಎನ್ನುವವರಿಗೆ ವರದಾನವೆಂಬುದು ಸತ್ಯಸ್ಯ ಸತ್ಯ.






