ಬಿದಿರಿನ ಅಳಲು

ಅಳುತ ಕೇಳಿತು ಬಿದಿರು ಬೊಮ್ಮಗೆ

ನೆಳಲು ಕೊಡದೆಲೆ ಫಲವ ಬಿಡದೆಲೆ

ಬೆಳೆದು ಸಾಧಿಪೆನೇನು ದೇವನೆಯೆನುತ ಕೈ ಮುಗಿದು

ಗಳಿಸುವೆಯೊ ಹಲವಾರು ಭಾಗ್ಯವ

ಬೆಳೆದು ನೋಡೈ ಛಲದಿಯೆಂಬಾ

ಜಲಜ ಸಂಭವ ನುಡಿಯ ಕೇಳುತ ಬೆಳೆಯಿತಾ ಬಿದಿರು

ಕಳಲೆಯಾಯಿತು ಬಾಲ್ಯದಲಿ ಮಂ

ಗಳದ ಮೊರವದು ಬಾಗಿನದಿ ತಾ

ಬಳಕೆಯಾಯಿತು ತೊಟ್ಟಿಲಲು ಕೊನೆಗಾಲ ಪಯಣದಲು

ಎಳೆಯ ಕೃಷ್ಣನ ಹೊಳೆಯ ದಾಟಿಸಿ

ಕಳಿಪ ತಂದೆಗೆ ನೆರವ ನೀಡಿತು

ಕೊಳಲೆ ತಾನಾಗುತಲಿ ಮೆರೆಯಿತು ಹರಿಯ ಕರದೊಳಗೆ

Facebook
X
WhatsApp
Print
Email