ಬೀಗರು ಬಂದರು!

“ನಿಮ್ಮ ಬೀಗರು ಬರ್ತಾರಂತೆ!”

ವಾಟ್ಸ್ಯಾಪ್‍ನಲ್ಲಿ ತೂರಿಬಂದಿತ್ತು ಮಗಳು ಪಿಂಕಿಯ ಸಂದೇಶ.  

“ಹಬ್ಬಕ್ಕೆ?” ಇತ್ತಲಿಂದ ಸಾಗಿತು ಪ್ರಶ್ನೆ.

“ಹೂಂ. ಇಲ್ಲಿಯ ವಿಷಯ ಅಲ್ಲಿಗೆ, ಅಲ್ಲಿಯ ವಿಷಯ ಎಲ್ಲ ಕಡೆಗೆ ಹಬ್ಬಕ್ಕೆ!” ಎಂಬ ಸಂದೇಶ ತಂದಿತು ವಾಟ್ಸ್ಯಾಪ್‍ನ ಮತ್ತೊಂದು ಪ್ಲಿಂಕ್.

ಮದುವೆಯ ನಂತರ ಪಿಂಕಿ ಸಾಕಷ್ಟು ಗಂಟು ಮಾಡಿಕೊಂಡಿದ್ದಾಳೆ – ಹುಬ್ಬಿನಲ್ಲಿ!

“ಅದ್ಯಾಕೇ ‘ನಿಮ್ಮ ಬೀಗರು’ ಅಂತೀಯಾ? ‘ನನ್ನ ಅತ್ತೆ ಮಾವ’ ಅನ್ಬಾರ್ದೇನೆ?” ಪಾಂಡುಸತಿ ಪದ್ಮಿನಿ ಮೂತು ತೂರಿಸಿದಳು.

“ಈಗ್ಯಾರಮ್ಮ ಆ ಗೊಡ್ಡು ಹೆಸರಿಂದ ಕರೀತಾರೆ! ನಿನ್ನ ಬಲವಂತಕ್ಕೆ ಕೆಲವೊಮ್ಮೆ ಆಕೆಯನ್ನ ಅತ್ಯಾಂಟಿ, ಆತನನ್ನ ಮಾವಂಕಲ್ ಅಂತ ಕರೀತೀನಿ.”

“ಯುಗಾದಿಗೆ ಬರ್ತಾರಂತೇನೇ? ಮುಂಚೆಯೋ, ಅವತ್ತೇನೋ?”

ಹಬ್ಬದ ಹಿಂದಿನ ದಿನ ಐಪಿಎಲ್ ಮ್ಯಾಚ್ ನೋಡುವ ಪ್ಲ್ಯಾನ್ ಇತ್ತು ಪಾಂಡುವಿಗೆ. ಕ್ರಿಕೆಟ್ ದ್ವೇಷಿ ಬೀಗರು ಬಂದರೆ ಆ ಯೋಜನೆಗೇ ಬೀಗಮುದ್ರೆ ಗ್ಯಾರಂಟಿ!

“ಗೊತ್ತಿಲ್ಲ. ನೀರು ತುಂಬೋ ಹಬ್ಬದ ದಿನವೇ ಬರಬಹುದು.”

“ನೀರು ತುಂಬೋ ಹಬ್ಬ? ಅದು ದೀಪಾವಳಿಯ ಹಿಂದಿನ ದಿನದ್ದು ಕಣೇ. ಯುಗಾದಿಯ ಹಿಂದಿನ ದಿನದ್ದಲ್ಲ” ಎಂದು ಮಗಳ ವಿಚಾರಧಾರೆಯನ್ನು ದಾರಿಗೆ ತರಲು ಯತ್ನಿಸಿದ ಪಾಂಡು.

“ಯಾವ್ದೋ ಒಂದು! ಮಾವಂಕಲ್ ಆಡೋ ಮಾತು ಯಾವ ಪಟಾಕಿಗೂ ಕಡಿಮೆಯಿಲ್ಲ. ಪೊಲಿಟಿಷಿಯನ್ಸ್ ಜೈಲಿಂದ ಹೊರಬಂದಾಗಲೋ, ಬರ್ತ್‍ಡೇ ಆಚರಿಸಿಕೊಳ್ಳುವಾಗಲೋ ಪಟಾಕಿ ಷಾರ್ಟೇಜ್ ಬಂದರೆ ಅಂಕಲ್‍ನ ಮಾತಾಡಕ್ಕೆ ಹೇಳ್ತಾರಂತೆ. ಟೆನ್ ಥೌಸೆಂಡ್ ವಾಲಾ ಸೌಂಡು ಅವರದು” ಎಂಬ ದೀರ್ಘ ಸಂದೇಶದೊಡನೆ ಮಗಳ ಸಂಭಾಷಣೆ ಅಂತ್ಯಗೊಂಡಿತು.

ಹಾಗೆ ನೋಡಿದರೆ ಗುಂಡೂರಾಯರು ಕೆಟ್ಟವರೇನಲ್ಲ. ಬ್ರಹ್ಮನು ಅವರನ್ನು ಮ್ಯಾನುಫ್ಯಾಕ್ಚರ್ ಮಾಡುವ ಸಮಯದಲ್ಲಿ ಇಂದ್ರಸಭೆಯಲ್ಲಿ ಇದ್ದನಂತೆ. ಯಾವುದೋ ಜ್ಞಾನದಲ್ಲಿ ಸಭೆಯಲ್ಲಿದ್ದ ಮೈಕನ್ನು ಇವರ ಗಂಟಲಿಗೆ ಅಟ್ಯಾಚ್ ಮಾಡಿ ಭೂಮಿಗೆ ಅಟ್ಟಿಬಿಟ್ಟನಂತೆ. ಶಿಸ್ತನ್ನು ಮೈಗೂಡಿಸಿಕೊಂಡೇ ಹುಟ್ಟಿದ ಗುಂಡೂರಾಯರು ಶಿಶುವಾಗಿದ್ದಾಗ ಅಳುವಿನಲ್ಲೂ ಶಿಸ್ತನ್ನು ಕಾಪಾಡಿಕೊಂಡವರಂತೆ. ಬೆಳಗ್ಗೆ ಒಂಬತ್ತಕ್ಕೆ, ಸಂಜೆ ಆರಕ್ಕೆ ಸರಿಯಾಗಿ ಅಳುತ್ತಿದ್ದ ಗುಂಡೂಪುಟ್ಟನ ಸ್ವರವು ಕನಿಷ್ಠ ಐನೂರು ಮೀಟರ್ ತಲುಪುತ್ತಿತ್ತೆಂದೂ, ಪಕ್ಕದಲ್ಲೇ ಇದ್ದ ಫ್ಯಾಕ್ಟರಿಯ ಸೈರನ್ ಕೆಟ್ಟುನಿಂತಾಗ ಅದರ ರಿಪೇರಿಗೆ ದುಡ್ಡು ಸುರಿಯುವ ಬದಲು ಫ್ಯಾಕ್ಟರಿಯು ಗುಂಡುಪುಟ್ಟನ ಅಳುವನ್ನೇ ಸೈರನ್ ಆಗಿ ಬಳಸುತ್ತಿತ್ತೆಂದೂ ಗುಂಡೂರಾಯರ ಅಜ್ಜಿ ಗೋದೂಬಾಯಿ ಆಗಾಗ್ಗೆ ಅವರಿವರೊಡನೆ ಗುಡುಗುಸ್ವರದಲ್ಲಿ ಪಿಸುಗುಡುತ್ತಿದ್ದರು ಎಂದು ಬಲ್ಲ ಮೂಲಗಳು ತಿಳಿಸಿವೆ. ಸತಿ ಸುಲೋಚನೆಯ ಕೈಹಿಡಿದ ನಂತರ ಗುಂಡೂರಾಯರ ಸ್ವರ ಉಡುಗಿದಂತಾಗಿ ಈಗ ಅವರ ಸ್ವರವು ಸೈಲೆನ್ಸರ್ ಕಿತ್ತುಹಾಕಿದ ಆಟೋರಿಕ್ಷಾದ ಸದ್ದಿನ ಮಟ್ಟಕ್ಕೆ ಇಳಿದುಬಿಟ್ಟಿದೆ.   

‘ಓಹ್! ಸುಲೋಚನೆಯದು ಸಿಡಿಲುಧ್ವನಿ ಇರಬೇಕು’ ಎಂದು ಊಹಿಸಿಬಿಟ್ಟಿರಲ್ಲವೆ? ಊಹೂಂ. ಆಕೆಯದೇನಿದ್ದರೂ ಐ-ಲೆವೆಲ್ ಕಂಟ್ರೋಲ್. ಮದುವೆಯ ಹೊಸತರಲ್ಲಿ ಪ್ರೀತಿಯನ್ನು ಸೂಸಿದ ಕಣ್ಣುಗಳು ಕ್ರಮೇಣ ನವರಸಗಳನ್ನೂ ಬಿಂಬಿಸತೊಡಗಿ ಪತಿಯತ್ತ ಕರುಣರಸ, ರೌದ್ರರಸಗಳನ್ನಷ್ಟೇ ಬೀರುವುದು ಸಾಮಾನ್ಯವೆನಿಸಿದೆ. ನಾರ್ತಿಂಡಿಯನ್ ಹೊಟೇಲ್‍ಗಳಲ್ಲಿ ಟೊಮೆಟೊ ಸೂಪನ್ನೋ, ಕ್ಲಿಯರ್ ಸೂಪನ್ನೋ (ಈ ಸೂಪಂತೂ ಪಾತ್ರೆ ತೊಳೆದ ನಂತರದ ನೀರಿಗೆ ಉಪ್ಪು-ಮೆಣಸು ಹಾಕಿಕೊಟ್ಟಿರುವರೇನೋ ಎಂಬ ಗುಮಾನಿ ಪಾಂಡುವಿನದು) ಕೊಡುವ ಪಿಂಗಾಣಿ ಬಟ್ಟಲಿನಷ್ಟು ಅಗಲದ ಕಂಗಳುಳ್ಳ ಸುಲೋಚನೆ ತನ್ನ ‘ಬ್ರೋ ಡ್ಯಾನ್ಸ್’ನಿಂದಲೇ ಕುಟುಂಬವನ್ನು ಹದ್ದುಬಸ್ತಿನಲ್ಲಿಟ್ಟಿರುವಾಕೆ. ಸುಲೋಚನೆಯ ಹುಬ್ಬೇರಿದರೆ ಸತಿಸುತಮರಿಗಳು ಅಲರ್ಟ್ ಆಗುತ್ತಾರೆ; ಹುಬ್ಬು ಗಂಟಿಕ್ಕಿದರೆ ಅವರಲ್ಲಿ ರಿಕ್ಟರ್ ಮಾಪನದ 4.5 ಪ್ರಮಾಣದ ಕಂಪನ. ಪತಿಗೆ, ಮರಿಗೆ ಬ್ರೋ ಡ್ಯಾನ್ಸಿನಿಂದ ತಪ್ಪಿಸಿಕೊಳ್ಳುವ ಉಪಾಯ ತಿಳಿಯದಿದ್ದರೂ, ಮಕ್ಕಳು ಅಮ್ಮನಿಗೆ ಕೋಪ ಬಂದಾಗ ಆಕೆಯ ಕಣ್ಣಿನತ್ತ ನೋಡುವುದನ್ನು ತಪ್ಪಿಸುವುದರ ಮೂಲಕ ಆಜ್ಞಾಮುಕ್ತರಾಗುತ್ತಿದ್ದರು. ಮಕ್ಕಳ ಬೆನ್ನೇರಬೇಕಾಗಿದ್ದ ಹೊರೆ ಪತಿಯ ಹೆಗಲೇರುತ್ತಿತ್ತು.

ಜಾರ್ಜ್ ಬುಷ್ ಅಧ್ಯಕ್ಷನಾಗಿದ್ದ ಕಾಲದಲ್ಲಿ ಅಮೆರಿಕೆಯ ಅಟ್ಲಾಂಟಾಗೆ ವಲಸೆ ಹೋಗಿ ನೆಲೆಸಿದ್ದ ಬೀಗರು ಎರಡು-ಮೂರು ವರ್ಷಕ್ಕೊಮ್ಮೆ ಭಾರತಕ್ಕೆ ಬಂದು, ಇಲ್ಲಿನ ಹವೆಯನ್ನು ಮೂಗು-ಗಂಟಲುಗಳಲ್ಲಿ ಇಂಫೆಕ್ಷನ್ ರೀತಿಯಲ್ಲಿ ತುಂಬಿಕೊಂಡು ಸೊರಬರನೆ ಮರಳುತ್ತಿದ್ದುದು ವಾಡಿಕೆ. ಈಗ ಹಬ್ಬಕ್ಕೆ ಪಾಂಡುವಿನ ಮಗಳು, ಅಳಿಯ, ಅಳಿಯನ ತಮ್ಮ ಮತ್ತು ಬೀಗ-ಬೀಗಿತ್ತಿಯರು ಬರುವವರಿದ್ದರು.

“ಅಡುಗೆ ಏನ್ಮಾಡೋದೇ?” ಪದ್ಮಿನಿ ಪಿಂಕಿಗೆ ಫೋನಾಯಿಸಿ ಕೇಳಿದರು.

“ಸಿಲ್ಲಿ ರೀಸನ್ಸ್‍ಗೆಲ್ಲ ಫೋನ್ ಮಾಡ್ಬೇಡಮ್ಮ. ಕಾಲ್‍ನಲ್ಲಿದ್ದೀನಿ.” ಪಿಂಕಿಯ ಧ್ವನಿಯಲ್ಲಿ ರೆಡ್ ಸಿಗ್ನಲ್!

ಸಂಕಟ ಬಂದಾಗ ಸೀನುವಿನ ಆಗಮನ. “ಅಟ್ಲಾಂಟಾ ಮಂದಿಗೆ ಏನಡಿಗೆ?” ಎಂದ ಪಾಂಡು.

“ಅಡಿಗೆ ಸೋಫಾ, ಕುರ್ಚಿ, ಮೆತ್ತೆ; ಯಾವುದಾದರೂ ಆದೀತು” ಎಂದ ಸೀನು.

“ತಿನ್ನೋ ಐಟಂ ಕಣೋ” ಕ್ಲಾರಿಫೈಯಿಸಿದ ಪಾಂಡು.

“ಅಡುಗೆ ಅನ್ನು. ಅಡಿಗೆ ಎಂದರೆ ಕೆಳಕ್ಕೆ, ತಳಕ್ಕೆ, ತಳಪಾಯಕ್ಕೆ ಎಂದರ್ಥ. ಅಡುಗೆ ಎಂದರೆ ಪಾಕಶಾಲೆಯ ಪ್ರೊಡಕ್ಷನ್ನು. ಡಗುಣಿಸು ಡಿ ಅಲ್ಲ, ಡ ಕೊಂಬು ಡು.” ಸೀನುವಿನದು ಸಂಕಟದಲ್ಲೂ ವ್ಯಾಕರಣ!

“ವಿಷಯಕ್ಕೆ ಬಾರೋ…” ಗೋಗರೆದ ಪಾಂಡು.

“ಅಟ್ಲಾಂಟಾ… ಅಂದ್ರೆ ಖಾರ ಆಗಲ್ಲ. ಖಾದ್ಯಾನಂ ಮರೀಚ ದರ್ಶನಂ; ನ ತು ಅಧಿಕ ಮಿಶ್ರಣಂ” ಎಂದ.

“ಅರ್ಥ ಆಗುವಂತೆ ಒದರು ಅಥವಾ ತೊಲಗು” ಎಂಬುದನ್ನು ಪದ್ಮಿನಿಯ ನಯನಗಳು ಪರಿಣಾಮಕಾರಿಯಾಗಿ ಸೂಚಿಸಿದವು. ಸುಲೋಚನೆಯೇನಾದರೂ ಈ ಪರ್ಫಾರ್ಮೆನ್ಸನ್ನು ಕಂಡಿದ್ದಿದ್ದರೆ ‘ಭೇಷ್ ಬೀಗಿತ್ತಿ’ ಎಂದು ಬೀಗುತ್ತಿದ್ದುದು ನಿಶ್ಚಿತ.

“ಮರೀಚ ಎಂದರೆ ಮೆಣಸಿನಕಾಯಿ. ಆಂಬೊಡೆ, ಕೂಟು, ಮಜ್ಜಿಗೆಹುಳಿಗಳಿಗೆ ಬಳಸುವ ಮೆಣಸಿನಕಾಯಿ ಫೇಸ್ಬುಕ್ ಫ್ರೆಂಡ್‍ಶಿಪ್ಪಿನಂತಿರಲಿ.”

“ಹಾಗೆಂದರೆ ಏನೋ?”

“ಫೇಸ್ಬುಕ್ಕಲ್ಲಿ ಐದು ಸಾವಿರ ಸ್ನೇಹಿತರು ಇರುತ್ತಾರೆ. ಕಷ್ಟಕ್ಕೆ ಒದಗಿರೋ ಎಂದರೆ ದುಃಖದ ಸ್ಮೈಲಿಯೊಂದನ್ನು ಲೇಪಿಸಿ ತಟಸ್ಥರಾಗುತ್ತಾರೆ. ಹಾಗೆಯೇ ಇಲ್ಲಿಯೂ ಮೆಣಸಿನಕಾಯಿ ಕಾಣಲಿ, ಆದರೆ ಘಾಟು ಇಲ್ಲದಿರಲಿ. ಒಂದು ವಿಧದಲ್ಲಿ ಇದು ಸೀಡ್‍ಲೆಸ್ ಕಡಲೆಕಾಯಿಯಂತೆ ಇರಬೇಕು. ಅರ್ಧ ಕಿಲೋ ಹಿಟ್ಟಿಗೆ ಐದೋ ಆರೋ ಮೆಣಸಿನಕಾಯನ್ನು ಸೇರಿಸಿ. ಅಧಿಕ ಸೇರಿಸುವಿಕೆ ಬೇಡ.”

ತಿಳಿಯಿತು ಪದ್ಮಿನಿಗೆ. ‘ಘಾಟಿಲ್ಲದ, ಬೋಂಡ, ಬಜ್ಜಿಗೆ ಬಳಸುವ ಮೆಣಸಿನಕಾಯನ್ನು ತನ್ನಿ. ವಿಯಟ್ನಾಂ ಸ್ಟೋರ್‍ಗೆ ಹೋಗಬೇಡಿ.” ಪಾಂಡುವಿಗೆ ತಾಕೀತು ಮಾಡಿದಳು ಪದ್ಮಿನಿ.  ವಿಯಟ್ನಾಂ ಮೆಣಸಿನಕಾಯಿಯ ಖಾರದ ಪ್ರಮಾಣ ಸಕಲ ಉಗ್ರರ ಸಮುದಾಯದ ಮನಸ್ಸಿಗಿಂತ ಹೆಚ್ಚು ಘಾಟುಳ್ಳದ್ದು.

“ಅನ್ನ?”

“ಯೋಚಿಸಬೇಕಾದ್ದೇ. ಅವರಿಗೆ ಮೋಸ್ಟ್ಲೀ ಶಾಂತಿಕಾಲದ ಅನ್ನ ಹೊಂದದು. ಕಮ್ಯೂನಿಸ್ಟ್ ರೈಸ್ ಟ್ರೈ ಮಾಡು.”

“ಕಮ್ಯೂನಿಸ್ಟ್ ರೈಸು?”

“ಕೆಂಪಕ್ಕಿ ಕಣಯ್ಯಾ. ರೆಡ್ಡು ಕಮ್ಯುನಿಸಂನ ಬಣ್ಣ. ಶಾಂತಿಯನ್ನು ಸೂಚಿಸಲು ವೈಟ್ ಫ್ಲ್ಯಾಗ್ ಬಳಸುತ್ತಾರೆ. ಶಾಂತಿಕಾಲದ ಅನ್ನ ಎಂದರೆ ವೈಟ್ ರೈಸು.”

‘ವಾಟ್ ಎಬೌಟ್ ಒಬ್ಬಟ್ಟು?”

“ಅದು ನಿನ್ನ ಬೀಗರ ಡಯಾಮೀಟರ್ ಮತ್ತು ಡಯಾಬಿಟಿಸ್ ಅನ್ನು ಅವಲಂಬಿಸಿದೆ.”

ಗುಂಡೂರಾಯರು ಹೆಸರಿಗೆ ತಕ್ಕಂತೆ ಗುಂಡಗಿದ್ದರು. ಸೊಂಟದ ಸುತ್ತಲಿನ ಟೈರು ಯಾವುದಾದರೂ ಲಾರಿ ಪಂಕ್ಚರ್ ಆದರೆ ಸ್ಟೆಪ್ನಿಯಾಗಿ ಬಳಸುವ ಮಟ್ಟಕ್ಕೆ ವಿಸ್ತಾರವಾಗಿತ್ತು. ಅಂತಹವರಿಗೆ ‘ಹಾಲಿನ ತುಪ್ಪದ ಕಾಲುವೆ ಹರಿಸಿ ಯುಗಾದಿಯೂಟದ ಬಾಳೆಲೆಯೊಳಗೆ; ಅಕ್ಕರೆಯಿಂದ ಬಡಿಸಲು ಹೋದರೆ’ ಚೊಕ್ಕ ಕಂಗ್ಲಿಷಲಿ ಬೈಗುಳ ಖಚಿತ ಎಂದು ಅಭಿಪ್ರಾಯ ಪಟ್ಟ ಪಾಂಡು. ‘ಇದ್ದುದರಲ್ಲಿ ಬೇಳೆ ಒಬ್ಬಟ್ಟು ಉತ್ತಮ’ ಎಂಬ ಅಭಿಪ್ರಾಯಕ್ಕೆ ಬಹುಮತ ದೊರಕಿತು.

ಸೀನು, ಪಾಂಡು, ಪದ್ಮಿನಿಯರ ದ್ವಿವೇಣಿ ಸಂಗಮದಿಂದ (ಪಾಂಡು ಆಗಷ್ಟೇ ತಿರುಪತಿಗೆ ಹೋಗಿ ಬಂದಿದ್ದರಿಂದ ವೇಣಿಸಂಹಾರವಾಗಿತ್ತಲ್ಲ) ಅಡುಗೆಯ ಪಟ್ಟಿ ಸಿದ್ಧವಾಯಿತು. ಹಬ್ಬಕ್ಕೆ ಮೊದಲಿನ ಕೆಲಸಗಳತ್ತ ಪದ್ಮಿನಿಯ ಗಮನ ಹರಿಯಿತು.

“ಬೀಗರು ಎರಡು ದಿನ ಮುಂಚೆಯೇ ಬಂದಾರು. ಸಂಧ್ಯಾವಂದನೆ ಮಾಡದಿದ್ದರೂ ಮೂಗು ಹಿಡಿಯೋದು ತಪ್ಪಿಲ್ಲ ಬೀಗರಿಗೆ. ‘ದೇವರಿಲ್ಲದ ಜಾಗವಿದ್ದೀತು, ಧೂಳಿಲ್ಲದ ಜಾಗವಿಲ್ಲ’ ಎಂದು ಗೊಣಗುತ್ತಲೇ ದಿನವಹಿ ಟವಲ್ ಸೈಜಿನ ಕರ್ಚೀಫುಗಳನ್ನು ವಾಷಿಂಗ್ ಮೆಷಿನ್ನಿನ ಒಂದು ಲೋಡ್‍ಗೆ ಆಗುವಷ್ಟು ಬಳಸುತ್ತಾರೆ. ನೆಲಮಟ್ಟದಿಂದ ಹಿಡಿದು ಅಟ್ಟದವರೆಗೆ ಕ್ಲೀನ್ ಮಾಡಿಸಿಬಿಡಿ” ಎಂಬ ಆದೇಶ ಹೊರಟಿತು. ಕೂಡಲೆ ಪಾಂಡುವಿನಿಂದ ಅರ್ಬನ್ ಕ್ಲೀನಿಂಗ್‍ಗೆ ಫೋನ್ ಹೋಯಿತು.

“ಅದೇನಾತುರವೋ ನಿಮ್ಮದು! ಮೊದಲು ಚಿನ್ನ ಬೆಳ್ಳೀನೆಲ್ಲ ಬ್ಯಾಂಕ್ ಲಾಕರಲ್ಲಿಟ್ಟು ಅವರನ್ನು ಕರೆಸಬೇಕು. ಈಗಲೇ ಫೋನ್ ಮಾಡಿಬಿಟ್ಟಿರಲ್ಲ!”

“ಹಬ್ಬಕ್ಕೆ ಇನ್ನೂ ಆರು ದಿನ ಇದೆ. ಬೀಗರು ನನ್ನ ಐಪಿಲ್ ಮ್ಯಾಚ್ ನೋಡುವ ಆಸೆಗೆ ಎಳ್ಳುನೀರು ಬಿಡುವುದಕ್ಕೆಂದೇ ಎರಡು ದಿನ ಮುಂಚೆ ಬರ್ತಾರೇಂದ್ರೂ ಇನ್ನೂ ನಾಲ್ಕು ದಿನ ಇರತ್ತೆ. ಇವತ್ತಿನಿಂದ ಮೂರನೆಯ ದಿನಕ್ಕೆ ಅರ್ಬನ್…” ಎನ್ನುತ್ತಿದ್ದಂತೆಯೇ ಪದ್ಮಿನಿಯು, “ಅವರು ಬಂದುಹೋದಮೇಲೆ ಅವರು ಸರಿಸಿದ್ದನ್ನ ಸರಿಪಡಿಸಕ್ಕೆ ಒಂದು ದಿನ ಬೇಕು. ಬೀಗರು ಲಾಕ್ ಆಗಕ್ಕೂ, ಅರ್ಬನ್‍ನವರು ಲುಕ್ ಕೊಡಕ್ಕೂ ಮಧ್ಯೆ ಒಂದು ದಿನದ ಬಿಡುವು ಬೇಕು. ಆದ್ದರಿಂದ ನಾಳಿದ್ದೇ ಕ್ಲೀನಿಂಗಿಗೆ ಬರಹೇಳಬೇಕು. ನಾಳೆಯೇ ಬ್ಯಾಂಕಿಗೆ ಹೋಗಬೇಕು. ಆದರೆ ಹೋಗುವುದು ಹೇಗೆ?” ಎಂದಳು.

“ತೊಂದರೆಯೇನಿದೆ?”

“ಬ್ಯಾಂಕಿಗೆ ಉಟ್ಟುಕೊಂಡು ಹೋಗಲು ಒಂದು ಒಳ್ಳೆಯ ಸೀರೆ ಇಲ್ಲ. ಮೇಕಪ್ ಮಾಡಿಸಿಕೊಳ್ಳಲು ಪಾರ್ಲರಲ್ಲಿ ಇನ್ನೂ ಅಪಾಯಿಂಟ್‍ಮೆಂಟ್ ಸಿಕ್ಕಿಲ್ಲ.”

ಪಾಂಡು ತರಾತುರಿಯಿಂದ ಹೆಂಡತಿಯನ್ನು ಹೊರಡಿಸಿ ಸೀರೆಯ ಪ್ರಾಬ್ಲಂ ಸಾಲ್ವ್ ಮಾಡಿದ. ತನ್ನ ಸ್ನೇಹಿತನ ಮಡದಿಯ ಇಂಫ್ಲುಯೆನ್ಸ್ ಉಪಯೋಗಿಸಿ ಪಾರ್ಲರಿನಲ್ಲಿ ಒರಗುಸೀಟಿಗೂ ವ್ಯವಸ್ಥೆ ಮಾಡಿದ. ಸಖಸತಿಯಿಂದ ಇದು ಸಾಧ್ಯವಾಯಿತೆಂಬ ಗುಟ್ಟನ್ನು ರಟ್ಟು ಮಾಡಲಿಲ್ಲ. ಮಾಡಿದ್ದರೆ ಯುಗಾದಿಯ ಶ್ಲೋಕದ ಬದಲು ಕಾಮನಹಬ್ಬದ ಹುಯಿಲು ಏಳುತ್ತಿತ್ತಲ್ಲ!

ಪದ್ಮಿನಿ ಸಿದ್ಧಳಾದಳು. ಬ್ಯಾಂಕ್ ಲಾಕರ್‍ಗೆ ಒಡವೆಗಳು ಸೇರಿದವು. ಅರ್ಬನ್ ಕ್ಲೀನಿಂಗ್ ಮಂದಿ ಬಂದು ಅಲ್ಲಲ್ಲಿ ಅಷ್ಟಷ್ಟು ಧೂಳನ್ನುಳಿಸಿ ಪಾಂಡುವಿಗೂ ಒಂದಿಷ್ಟು ಕೆಲಸ ಕೊಟ್ಟು ತಮ್ಮ ಪರ್ಸನ್ನು ತುಂಬಿಕೊಂಡು ತೆರಳಿದರು. ಹಬ್ಬಕ್ಕೆ ಎರಡು ದಿನ ಹಿಂದೆ ಗುಂಡೂ-ಸುಲೋಚನೆಯಿಂದ ಗ್ರೂಪ್ ಕಾಲ್ ಬಂದಿತು.

“ಹಬ್ಬದ ಮಾರ್ನಿಂಗ್ ಬೇವು-ಬೆಲ್ಲ  ತೊಗೊಂಡೇ ಬರ್ತಿದ್ದೀವಿ. ಬಿಟ್ಟರ್ ಸ್ವೀಟ್ ಹಬ್ಬವನ್ನ ಸ್ವೀಟ್ & ಶಾರ್ಟ್ ಆಗಿ ಆಚರಿಸೋಣ” ಎಂದರು ಸುಲೋಚನೆ. ಮ್ಯಾಚ್ ತಪ್ಪಲಿಲ್ಲವೆಂದು ಹರ್ಷಿಸಿದ ಪಾಂಡು.

“ಆಗಲಿ. ನಿಮಗೆ ಹೊಂದುವಂತಹ ಅಡುಗೆಯನ್ನೇ ಮಾಡಿರುತ್ತೇನೆ” ಎಂದಳು ಪದ್ಮಿನಿ.

“ಯಾವ ಒಬ್ಬಟ್ಟು?” ಸೈಲೆನ್ಸರ್ ಕಿತ್ತ ಆಟೋದ ಸದ್ದು ಅತ್ತಲಿಂದ ಮೊಳಗಿತು.

“ಬೇಳೆ-ಹೂರಣದ್ದು. ಶುಗರ್ ಬೇಡ ಅಂತ…” ದನಿಯೆಳೆದ ಪಾಂಡು.

“ಆಬ್ಸಲ್ಯೂಟ್ಲಿ ನಾಟ್. ಇಂಡಿಯಾಗೆ ಬಂದು ಮಂಡ್ಯಾದ ಶುಗರ್ ತಿನ್ನದಿದ್ದರೆ ಟ್ರಂಪ್ ಕೂಡ ಬೇಜಾರು ಮಾಡಿಕೊಳ್ತಾನೆ” ಅಬ್ಬರದ ಬೇಡಿಕೆ ಮುಂದಿಟ್ಟರು ಬೀಗರು. ಟ್ರಂಪ್ ಬೇಜಾರು ಮಾಡಿಕೊಂಡರೆ ತಮ್ಮ ಮನೆಗೂ ವೆನೆಜುಯೆಲಾದ ಪರಿಸ್ಥಿತಿ ಉಂಟಾದೀತು, ರಾತ್ರೋರಾತ್ರಿ ತಮ್ಮಿಬ್ಬರನ್ನೂ ಅಪಹರಿಸಿಯಾರು ಎಂದು ಬೆದರಿದ ಪಾಂಡು ‘ಸಕ್ಕರೆ ಒಬ್ಬಟ್ಟ‍ನ್ನೇ ಮಾಡಿಸುತ್ತೇನೆ” ಎಂದ.

“ಜೊತೆಗೆ ಸಕ್ಕರೆ ಬೆರೆಸಿದ ಹಾಲು, ಬೂರಾ ಸಕ್ಕರೆ, ಬೆಣ್ಣೆ ಕಾಯಿಸಿದ ತುಪ್ಪ…”

“ಬೂರಾ ಸಕ್ಕರೆ ಚಿರೋಟಿ, ಫೇಣಿಗೆ ಬಳಸುತ್ತಾರೆ. ಒಬ್ಬಟ್ಟಿಗೆ…?”

“ಊಟ ತನ್ನಿಚ್ಛೆ, ಲೋಟ ಪರರಿಚ್ಛೆ ಎಂದು ಕೇಳಿಲ್ಲವೆ? ಗಸಗಸೆ ಪಾಯಸಕ್ಕೆ ಹೇಗೂ ಬೆಲ್ಲ ಇರುತ್ತದಲ್ಲ. ಅದು ನಿಮ್ಮಿಚ್ಛೆಯಂತೆಯೇ ಆಗಲಿ.”

“ಆದರೂ… ಗುಂಡೂರಾಯರೇ… ನಿಮ್ಮ ಸೊಂಟ… ಸುತ್ತಳತೆ… ಶುಗರ್ ಲೆವೆಲ್ಲೂ…”

“ಆಹಾರ ಇಲಾಖೆಯೇ ಬೇರೆ, ಆರೋಗ್ಯ ಇಲಾಖೆಯೇ ಬೇರೆ ಅಂತ ನನ್ನ ಹೆಸರಿನವರೇ ಅಪ್ಪಣೆ ಹೊರಡಿಸಿದ್ದಾರಲ್ಲಾ!” ಎಂದು ಗರಗಸದ ಕೊಯ್ತದಂತೆ ಗಹಗಹಿಸಿದರು ಗುಂಡೂರಾಯರು. ಡಿವಿಜಿ ಹೇಳಿದ ಮಾತುಗಳು ಅವರ ನೆನಪಿನಲ್ಲಿ ಅಚ್ಚಾಗಿದ್ದವು.

“ಕೂಟಿಗೆ, ಆಂಬೊಡೆಗೆ, ಚಿತ್ರಾನ್ನಕ್ಕೆ ಗುಂಟೂರಿನ…” ಎಂದು ಪದ್ಮಿನಿಯು ನುಡಿಯುತ್ತಿದ್ದಂತೆಯೇ, “ಫರ್ಗೆಟ್ ದಟ್ ಮೆಣಸಿನಕಾಯಿ. ನಾವು ಹಿಂದಿನ ದಿನವೇ ಬರ್ತೀವಲ್ಲ, ವಿಯೆಟ್ನಾಂ ಮೆಣಸಿನಕಾಯನ್ನ ಅಟ್ಲಾಂಟಾದಿಂದ ತಂದಿದ್ದೇವೆ. ಫ್ರೋಜನ್ ಮೆಣಸಿನಕಾಯಿಯ ಘಾಟನ್ನು ಬಳಸಿದ ಆಂಬೊಡೆ ತಿನ್ನುವುದೇ ಮಜ. ಅದೇ ಖಾರದ ಪ್ರಕಾರ ಮಿಕ್ಕಿದ್ದರಲ್ಲೂ ಇರಲಿ” ಎಂದರು ಸುಲೋಚನೆ.

“ಅಸಿಡಿಟಿ ಆಗತ್ತೆ ಅಂತ ಪಿಂಕಿ ಹೇಳ್ತಿದ್ಲೂ…”

“ಡ್ಯಾಮ್ ಯುವರ್ ಡಾಟರ್. ರುಚಿ ಮುಖ್ಯಾರೀ… ಕಣ ಕಣ ರುಚಿರಾ ಅಂತ ಯಾವುದೋ ತೆಲುಗು ಹಾಡೇ ಇದೆಯಲ್ಲಾ! ಲೆಟ್ ಅಸ್ ಇಂಡಲ್ಜ್ ಇನ್ ಸಮ್ ಸಿನ್ ಫಸ್ಟ್; ಆನಂತರ ಮೆಡಿಸಿನ್” ಎಂದರು ಸುಲೋಚನೆ.

ಯುಗಾದಿಯಂದು ಕೂಟು, ಆಂಬೊಡೆಗಳನ್ನು ಮೆಲ್ಲುತ್ತಾ ಬೀಗರು

‘ಒಲವೆ ಜೀವನ ಹಾ ಹಾ ಖಾರ 

ಮೆಣಸಿನ್ಕಾಯೆನೆ ಮಮಕಾರ |

ರಸವುಕ್ಕಿ ಹರಿಯುವ ರುಚಿ ಕೂಟಿನಲ್ಲೂ

ತೈಲದಿ ತೇಲಿದ ಆಂಬೋಡೆಯಲ್ಲೂ

ಸೊರ್ರನೆ ಹೀರುತಿಹ ತಿಳಿ ಸಾರಿನಲ್ಲೂ

ಸೂಸಿದೆ ಚಿಲ್ಲೀಸಿನ ಖಾರ ಖಾರ ||

ಎನ್ನುತ್ತಾ ಸುಲೋಚನೆ ಮತ್ತೆ ಮತ್ತೆ ಬಡಿಸಿಕೊಂಡು ಸೇವಿಸಿದರು. ಖಾರವೇರಿದ ಮೂಗನ್ನು ಪ್ಲಗ್ ಮಾಡಲು ಪ್ಲಂಬರನ್ನು ಕರೆಸಬೇಕಾಯಿತು. ಸಿಹಿ ಹೆಚ್ಚಾದ ಕಾರಣ ಗುಂಡೂರಾಯರಿಗೆ ನಿಂತಲ್ಲೇ ಮೆರಿ ಗೋ ರೌಂಡ್ ಹೋದಂತಾಯಿತು. ಆದೊಡೇಂ! “ಯುಗಯುಗಾದಿ ಕಳೆದರೂ ಒಬ್ಬಟ್ಟು ಮರಳಿ ಬರುತಿದೆ; ಹೊಸ ಎಲೆಯಲಿ ಹಳೆ ರುಚಿಯಲಿ ಸೊಗಸು ಸೊಗಸು ಎನಿಸಿದೆ; ಮತ್ತೆ ಬೇಕು ಎನಿಸಿದೆ” ಎಂದು ಗುಂಡೂರಾಯರು ಹಾಡಲು, ಹಬ್ಬದಂದು ಮಾಡಿದ್ದ ಸಾರಿಗೆ ಮಾರುಹೋದ ಅಳಿಯನ ತಮ್ಮನು “ಮೈ ನಾ ಭೂಲೂಂಗಾ… ಇನ್ ರಸಮೋಂಕೋ…” ಎಂದು ಹಾಡಿದ.

“ಅಳಿಯಂದಿರೆ, ಖಾರ ಜಾಸ್ತಿ ಆಯಿತೆ?” ಕೇಳಿದ ಪಾಂಡು.

“ಇಲ್ಲ ಪಾಂಡಂಕಲ್, ಪಿಂಕಿ ಪಕ್ಕದಲ್ಲೇ ಕೂತು ಮಾತಾಡ್ತಿದ್ಳಲ್ಲ. ಅವಳ ಸಿಹಿನುಡಿಗಳ ಮುಂದೆ ಖಾರ ಗೊತ್ತಾಗಲೇ ಇಲ್ಲ” ಎಂದನವ. ಪಿಂಕಿ ಪತಿಯ ಹೊಗಳುಮಾತನ್ನು ಕೇಳಿ ವ್ಯಾಲೆಂಟೈನ್ ದಿನದ ಗುಲಾಬಿಯಾದಳು. ‘ಅವಳ ಮಾತಿನ ಖಾರದ ಮುಂದೆ ಅಡುಗೆ ಸಿಹಿಸಿಹಿ’ ಎಂಬ ಒಳ ಅರ್ಥವನ್ನು ಗುಂಡೂ-ಪಾಂಡುಗಳಷ್ಟೇ ಗ್ರಹಿಸಿದ್ದರು.

ವರ್ಣಭೇದವನ್ನು ಧಿಕ್ಕರಿಸುವಂತೆ ಇರಿಸಿದ್ದ ವೆನಿಲಾ ಐಸ್‍ಕ್ರೀಂ ಮಿಶ್ರಿತ ಕಾಲಾ ಜಾಮೂನಿನೊಡನೆ ಊಟ ಮುಗಿಯಿತು.

ಬೀಗರು ಸಂತೃಪ್ತರಾದರು. ಮರುದಿನ ಪಾಂಡುವಿನ ಮನೆಯ ಬಳಿಯಿದ್ದ ಫ್ಯಾಮಿಲಿ ಡಾಕ್ಟರ್‍ಗಳೂ ಸಹ.

Facebook
X
WhatsApp
Print
Email