ವಿಕ್ರಮಾರ್ಜಿತಸತ್ತ್ವ

ಅದೊಂದು ಕಾಲವಿತ್ತು. ಮಂಗಳಗ್ರಹ ಯಾನದಲ್ಲಿ ಭಾರತ ಸಫಲಗೊಂಡಾಗ ಧೋತಿ-ಮುಂಡಾಸು ಧರಿಸಿದ ಗ್ರಾಮೀಣನೊಬ್ಬ ಬಾಹ್ಯಾಕಾಶ ಕ್ಲಬ್‌ಗೆ ಪ್ರವೇಶ ಕೋರಿ ಬಾಗಿಲು ತಟ್ಟುತ್ತಿದ್ದಂತೆ ವ್ಯಂಗ್ಯಚಿತ್ರವನ್ನು ಅಮೆರಿಕದ ಪ್ರಸಿದ್ಧ ಪತ್ರಿಕೆಯೊಂದು ಪ್ರಕಟಿಸಿತ್ತು. ಅದು ಈಗ್ಗೆ ಒಂದು ದಶಕ ಹಿಂದೆ. ವಾಸ್ತವವಾಗಿ ಆ ವೇಳೆಗೇ ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತ ಗಣನೀಯ ಸಾಧನೆ ಮಾಡಿದ್ದಾಗಿತ್ತು. ಆದರೆ ಭಾರತ ಕಳಪೆ ದೇಶವೆಂಬ ನಿರಾಧಾರ ಮನೋಮುದ್ರಿಕೆ ಮೂಡಿಸಿಕೊಂಡಿದ್ದ ಜನಾಂಗೀಯ ಪೂರ್ವಗ್ರಹಕ್ಕೆ ಏನು ಮಾಡೋಣ! ಈಗ ರಂಗಭೂಮಿಯ ಟ್ರಾನ್ಸ್‌ಫರ್ ಸೀನ್. ಇತ್ತೀಚಿನ ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಯ ಹಿಂದುಗೂಡಿ ಅಣುಶಕ್ತಿ, ಬಾಹ್ಯಾಕಾಶವಿಜ್ಞಾನ ಕ್ಷೇತ್ರಗಳಲ್ಲಿ ಅಮೆರಿಕ-ಭಾರತಗಳ ಸಮಾನಸ್ಕಂಧ ನೆಲೆಯ ಸಹಕಾರ ಒಡಂಬಡಿಕೆ ಹೊಮ್ಮಿದೆ. ಅಮೆರಿಕದ ಫೆರ್ಮಿ ರಾಷ್ಟ್ರೀಯ ಪ್ರಯೋಗಾಲಯಕ್ಕೆ ಪ್ರೋಟಾನ್ ಆಕ್ಸಿಲರೇಟರ್ ಸಂವರ್ಧನ ಯೋಜನೆಗಾಗಿ ಭಾರತ ೧೪೦ ದಶಲಕ್ಷ ಡಾಲರ್ ದೇಣಿಗೆ ನೀಡಲಿದೆ. ಕಳೆದ ಜುಲೈ ೧೪ರ ಚಂದ್ರಯಾನ-೩ ಉಡ್ಡಯನದ ತರುವಾಯವಂತೂ ಭಾರತವನ್ನು ಅಮೆರಿಕ, ರಷ್ಯ, ಚೀಣಾಗಳ ಸಾಲಿನಲ್ಲಿ ಪರಿಗಣಿಸಲೇಬೇಕಾದ ಸ್ಥಿತಿ ಜಾಗತಿಕ ವಲಯದಲ್ಲಿ ಏರ್ಪಟ್ಟಿದೆ.

Facebook
X
WhatsApp
Print
Email