“ಹಿಮಗಿರಿ ತನಯೆ ಹೇಮಲತೇ” ಎಂಬ ಹಾಡು ಮೊಳಗುತ್ತಿತ್ತು.
“ಬ್ಯೂಟಿ ಪಾರ್ಲರನ್ನು ಇದಕ್ಕಿಂತ ಚೆನ್ನಾಗಿ ವರ್ಣಿಸಲು ಸಾಧ್ಯವಿಲ್ಲ” ಎಂದ ಸೀನು.
“ಎಲ್ಲಿಗೆಲ್ಲಿಯ ಹೋಲಿಕೆ!” ಎಂದುದ್ಗರಿಸಿದೆ.
“ಹಿಮ ಎಂದರೆ ಕೋಲ್ಡ್. ಹಿಮಗಿರಿ ಎಂದರೆ ಕೋಲ್ಡಿನಲ್ಲಿ ಅತಿಶಯವಾದುದು ಉರುಫ್ ಕೋಲ್ಡ್ ಪ್ಯಾಕ್…”
“ಹಿಮಗಿರಿ ಎಂದರೆ ಹಿಮಾತಿಶಯ ಹೇಗಾದೀತು?”
“ದಾದಾ ಎಂದರೆ ರೌಡಿ; ದಾದಾಗಿರಿ ಎಂದರೆ ರೌಡಿಸಂನಲ್ಲಿ ತೊಡಗಿಕೊಳ್ಳುವಿಕೆ; ಹಿಮಗಿರಿ ಎಂದರೆ ಹಿಮದಲ್ಲೇ ತೊಡಗಿಕೊಳ್ಳುವಿಕೆ ಉರುಫ್ ಅತಿಹಿಮ ಉರುಫ್ ಕೋಲ್ಡ್ ಪ್ಯಾಕ್! ಹಿಮಗಿರಿ ತನಯೆ ಎಂದರೆ ಕೋಲ್ಡ್ಪ್ಯಾಕ್ನ ದೊಡ್ಡ ಬಾಕ್ಸ್ನಲ್ಲಿರುವ ಒಂದು ಸಣ್ಣ ಪ್ಯಾಕ್.”
ಸೀನುವಿನದು ಕುತರ್ಕವೆಂದು ಸಾರಾಸಗಟಾಗಿ ಖಂಡಿಸಲಾಗದ ವಿಚಿತ್ರ ತರ್ಕ.
“ಹೇಮಲತೆ ಎನ್ನುವುದಕ್ಕೆ ನಿನ್ನ ವ್ಯಾಖ್ಯಾನವೇನು?”
“ಹೇಮ ಈಕ್ವಲ್ಸ್ ಚಿನ್ನ ಈಕ್ವಲ್ಸ್ ಸಿರಿ ಈಕ್ವಲ್ಸ್ ಹಣ. ಹೇಮಲತೆ ಎಂದರೆ ಹಣದ ಬಳ್ಳಿ. ಅಲ್ಲಿಗೆ ಬರುವ ರೂಪಕುಂಠಿತೆಯು ರೂಪಾಂತರಿಗಳು (ಬ್ಯೂಟಿಷಿಯನ್ಸ್) ಹಬ್ಬಿಸಿಕೊಳ್ಳತಕ್ಕ ಹಣದ ಬಳ್ಳಿಯೇ!” ವಿವರಣೆಯಿತ್ತ ಸೀನು.
“ಆ ಹಾಡಿನ ಮಿಕ್ಕ ಸಾಲುಗಳು ನಿನ್ನ ತರ್ಕಕ್ಕೆ ಹೊಂದುವುದಿಲ್ಲ” ಎಂದು ಆಕ್ಷೇಪವೆತ್ತಿದೆ.
“ಪಾಶಾಂಕುಶೇಶು ದಂಡಕರೇ ಎಂದಿದೆಯಲ್ಲವೆ. ಪಾಶ ಎಂದರೆ ಹಗ್ಗ; ಸ್ಥೂಲವಾಗಿ ಇದನ್ನು ದಾರ ಎಂದು ಅರ್ಥೈಸಬಹುದು. ವ್ಯಾಕ್ಸಿಂಗ್ ಮತ್ತು ತ್ರೆಡಿಂಗ್ ಪಾರ್ಲರಿನ ಸೇವಾಂಗವೇ ಅಲ್ಲವೆ! ಪಾಶದೊಡನೆ ಅಂಕುಶವೂ ಇದ್ದೇ ಇರುತ್ತದೆ. ಚೂಪುಮೊನೆಯ ಮಿನಿ ಅಂಕುಶದಿಂದಲೇ ಮುಖದಲ್ಲಿನ ಬ್ಲಾಕ್ ಹೆಡ್ಗಳನ್ನು ತೆಗೆಯುವುದು!”
“ದಂಡಕರೇ?”
“ರುಚಿರುಚಿಯಾದ ಸೌತೆಕಾಯಿಯನ್ನು ಕಣ್ಣಿನ ಮೇಲಿಟ್ಟು ದಂಡ ಮಾಡುತ್ತಾರೆ; ಸಿಹಿಯಾದ ಕ್ಯಾರೆಟ್ಟನ್ನು ಸ್ಕಿನ್ ಎಲಾಸ್ಟಿಸಿಟಿ ಹೆಚ್ಚಾಗಿಸಲು ಕ್ಯಾರೆಟ್ ಮಾಸ್ಕ್ ಮಾಡಿ ಬಳಸಿ ದಂಡ ಮಾಡುತ್ತಾರೆ. ತರಕಾರಿಗಳನ್ನು ದಂಡ ಮಾಡುವ ಕೈಗಳೇ ದಂಡಕರಗಳು!ಇನ್ನೂ ಕೇಳುವಂಥವನಾಗು. ಆಶಾಂಬರೇ ಎಂದರೆ ಆಶಿಸಿದ ಅಂಬರಗಳು ಅರ್ಥಾತ್ ವಸ್ತ್ರಗಳು. ಬಯಸಿದ ವಸ್ತ್ರಗಳನ್ನು ಧರಿಸುವವಳು ಆಶಾಂಬರಿ.”
“ಹರಿಕೇಶ ಎಂದರೆ ಸ್ಪ್ಲಿಟ್ ಹೇರ್ಸ್ ಎನ್ನುವೆಯೇನು?”
“ಆಹಾ! ನಿನಗೂ ನನ್ನಂತೆಯೇ ಯೋಚಿಸುವ ಕ್ರಮ ಕಡೆಗೂ ಒಲಿಯಿತು. ಕಂಗ್ರಾಜುಲೇಷನ್ಸ್” ಎಂದ ಸೀನು.
“ಇಂತಹ ಅನರ್ಥಗಳನ್ನಿತ್ತ ನಿನ್ನನ್ನು ಕೃತಿಕಾರರಾದ ಮುತ್ತಯ್ಯ ಭಾಗವತರು ಎಂದಿಗೂ ಕ್ಷಮಿಸರು” ಎಂದು ದುರುಗುಟ್ಟಿದೆ.
“ದೊಡ್ಡವರು ನಿನ್ನಂತೆ ಸಣ್ಣತನ ತೋರುವುದಿಲ್ಲ. ಅವರ ಕ್ಷಮೆ ದೊರೆತೀತು. ನಿನ್ನದು ದೊರೆಯುವುದು ಕಷ್ಟ. ಹಸು ಸುಮ್ಮನಿರುತ್ತದೆ; ಬಾಲದ್ದೇ ಅಲುಗಾಟ” ಎಂದ ಅಡ್ಡವಾದಿ ಸೀನು.
ಹಿಂದೊಮ್ಮೆ ದಾಸರ ಪದಗಳ ಮೇಲೆ ಇವನ ವಕ್ರದೃಷ್ಟಿ ಬಿದ್ದಿತ್ತು. “ಈಗಿನ ಕಾಲಕ್ಕೆ ಆ ಹಾಡು ಸೂಕ್ತವಲ್ಲ” ಎಂದನವ.
“ಯಾವ ಹಾಡು?”
“ದಾಸನ ಮಾಡಿಕೊ ಎನ್ನ…”
“ಯಾಕೆ ಸೂಕ್ತವಲ್ಲ?”
“ದಾಸ್ಯ ಅರ್ಥಾತ್ ಸ್ಲೇವರಿಯನ್ನು ಅಬಾಲಿಷ್ ಮಾಡಲಾಗಿದೆ. ಹಾಗೆಯೇ ‘ಕುಲದಲ್ಲಿ ಕೀಳ್ಯಾವುದೋ’ ಹಾಡೂ ಇಂದಿಗೆ ಪ್ರಸ್ತುತವಲ್ಲ.” ದಾಸರ ಪದದಿಂದ ಚಿತ್ರಗೀತೆಗೆ ಲಾಂಗ್ ಜಂಪ್ ಮಾಡಿದ್ದ ಸೀನು.
“ಯಾಕೆ ಪ್ರಸ್ತುತವಲ್ಲ?”
“ಸರ್ಕಾರದಲ್ಲಿ ಅಲ್ಪಸಂಖ್ಯಾತರ ಜಾತಿಯು ಮೇಲು, ಬಹುಸಂಖ್ಯಾತರ ಜಾತಿಯು ಕೀಳು ಎಂಬ ಧೋರಣೆಯು ಢಾಳಾಗಿರುವುದರಿಂದ ಕೀಳು, ಮೇಲುಗಳು ಯಾವುವೆಂದು ಸುಲಭವಾಗಿ ಹೇಳಬಹುದು.”
ಸೀನುವಿನ ಪ್ರಕಾರ ಆಧುನಿಕ ದಿನಗಳಲ್ಲಿ ಮೇಲ್ಜಾತಿ ಮತ್ತು ಕೀಳ್ಜಾತಿಗಳೆಂದರೆ ನೆಟ್ವರ್ಕ್ ಮಾರ್ಕೆಟಿಂಗ್ ಮಂದಿ ಮತ್ತು ಸೈಬರ್ ಕ್ರಿಮಿನಲ್ಗಳು. “ಮಿಂಚಂಚೆಯ ಮೂಲಕವೇ ಮಾರ್ಕೆಟಿಂಗ್ ಮಾಡುವುದರಿಂದ ಅವರು mail ಜಾತಿ; ಕುಳಿತಲ್ಲಿಂದಲೇ ಯಾರ್ಯಾರದೋ ಖಾತೆಗಳಲ್ಲಿರುವ ಹಣವನ್ನು ಮೋಸದಿಂದ ಕಿತ್ತುಕೊಳ್ಳುವ ಸೈಬರ್ ಕಳ್ಳರು ಕೀಳ್ಜಾತಿ ಉರುಫ್ ಕೀಳುವ ಜಾತಿ” ಎಂಬುದು ಸೀನುವಿನ ವಿವರಣೆ.
ಕವಿಗಳಿಗೆ ತಿಳಿಯದ ಅರ್ಥಗಳು ಸೀನುವಿಗೆ ಬಹಳ ಬೇಗ ಹೊಳೆದುಬಿಡುತ್ತವೆ. ‘ಮಾಮರವೆಲ್ಲೋ, ಕೋಗಿಲೆಯೆಲ್ಲೋ; ಏನೀ ಸ್ನೇಹ ಸಂಬಂಧ’ ಎಂಬ ಸಾಲನ್ನು ಕೇಳಿದ ಕೂಡಲೆ ಸೀನುವು ‘ಮಾವಿನಕಾಯಿ ಹಣ್ಣಾಗಿ ತಿರುಗುತ್ತಿದ್ದುದರಿಂದ ಹಳದಿ; ಕೋಗಿಲೆಗೆ ಜಾಂಡೀಸ್ ಆಗಿದ್ದರಿಂದ ಅದರ ಕಣ್ಣು ಹಳದಿ. ಎಲ್ಲೋ, ಎಲ್ಲೋ ಎಂದು ಕವಿಯು ಬರೆದಿರುವುದು ಈ ಅರ್ಥದಲ್ಲೇ’ ಎಂದುಸುರಿದ್ದ. ‘ಯಾರು ಹಿತವರು ನಿನಗೆ ಈ ಮೂವರೊಳಗೆ; ನಾರಿಯೋ, ಧಾರುಣಿಯೋ, ಬಲುವಿಧದ ಸಿರಿಯೋ?’ ಎಂಬುದಕ್ಕೆ ‘ನಾರಿಯೇ; ಅವಳಿಲ್ಲದಿದ್ದರೆ ಕೊಳೆತು ನಾರುವಷ್ಟು ಸಿರಿ ಇದ್ದರೂ ನಗಣ್ಯ’ ಎಂದಿದ್ದ. ‘ಕ್ಯಾ ಹುವಾ ತೇರಾ ವಾದಾ?’ ಎಂಬ ಸಾಲನ್ನು ಕೇಳಿದಾಕ್ಷಣ “ಹಳೆಯದಾಗಿದೆ ಅಷ್ಟೆ. ತೇರಾವಾದ ಎನ್ನುವುದು ಪಾಳಿ ಭಾಷೆಯಲ್ಲಿ ಬರೆದಿರುವ ಬೌದ್ಧ ಗ್ರಂಥ” ಎಂದು ನುಡಿದಿದ್ದ.
ಹಿಂದಿಯವರ ಪ್ರಮುಖ ಡಯಟ್ ಎಂದರೆ ಕಸಮ್ ಅಂತೆ. ಬಹುತೇಕ ಹಿಂದಿ ಚಿತ್ರಗಳಲ್ಲಿ ‘ಮೈ ಕಸಮ್ ಖಾತಾ ಹೂ’ ಎನ್ನುವ ಡೈಲಾಗ್ ಇರುತ್ತದೆ. ‘ಕಸಮ್ ಅನ್ನದಂತಹ ವಸ್ತು. ಅದರೊಡನೆ ಕಲೆಸಿಕೊಳ್ಳಲು ಅವರು ರಸಂ ಬಳಸುತ್ತಾರೆ’ ಎಂದಿದ್ದನವ. ಇದಕ್ಕೆ ಆಧಾರ?
‘ಮೈ ನಾ ಭೂಲೂಂಗಾ’ ಹಾಡಿನಲ್ಲಿ ‘ಇನ್ ರಸಮೋಂಕೋ ಇನ್ ಕಸಮೋಂಕೋ; ಇನ್ ರಿಷ್ತೇ ನಾತೋಂಕೋ’ ಎಂದಿದೆಯಲ್ಲ. ರಸಮ್ ಮತ್ತು ಕಸಮ್ ಮಧ್ಯೆ ಇರುವ ಬಾಂಧವ್ಯವನ್ನು (bondage) ಮರೆಯುವುದು ಸಾಧ್ಯವೇ ಇಲ್ಲ ಎನ್ನುವುದೇ ಅದರ ಅರ್ಥವಂತೆ.
ಸರಳ ಕವಿಸಿದರಿವರು ಮತ್ತದ
ಪರಿಹರಿಸಿದನು ಪಾರ್ಥನಾತನ
ಸರಳುಗಳ ಸಂವರಿಸಿ ಮುಸುಕಿದರರ್ಜುನನ ರಥವ
ತೆರಳೆಗಡಿದನು ಮತ್ತೆ ದ್ರೋಣನ
ಗುರುಸುತನ ಸೈಂಧವನ ಮಾದ್ರೇ
ಶ್ವರನ ಚಾಪವ ಕಡಿದು ಹೂಳಿದನೊಡಲೊಳಂಬುಗಳ
(ಕೌರವರು ಅರ್ಜುನನನ್ನು ಬಾಣಗಳಿಂದ ಮುತ್ತಿದರು. ಅರ್ಜುನನು ಬಿಟ್ಟ ಬಾಣಗಳನ್ನು ಕತ್ತರಿಸಿ ಅವನ ರಥಕ್ಕೆ ಮುತ್ತಿಗೆ ಹಾಕಿದರು. ಆದರೆ ಅರ್ಜುನನು ಎಲ್ಲರ ಬಾಣಗಳನ್ನೂ ಕಡಿದುಹಾಕಿ ವಿಜೃಂಭಿಸಿದನು.)
ಅರ್ಜುನನ ಶೌರ್ಯವನ್ನು ಸೊಗಸಾಗಿ ಪ್ರಕಟಿಸುವ ಕುಮಾರವ್ಯಾಸನ ಈ ಪದ್ಯವೂ ಸೀನುವಿನಿಂದ ಸೇಫ್ ಅಲ್ಲ. ‘ಇದರಲ್ಲಿನ ಮೊದಲ ಪಾದವು ಇವತ್ತಿನ ಪಾಲಿಟಿಕ್ಸ್ ಬಗ್ಗೆ ನೀಡಿರುವ ಸೊಗಸಾದ ವಿವರಣೆ’ ಎಂದ.
“ಹೇಗೆ?”
‘ಸರಳ ಕವಿಸಿದರಿವರು’ ಎಂದರೆ ಸಿಬಿಐ, ಇಡಿ ಮೊದಲಾದವರಿಂದ ರೈಡ್ ಮಾಡಿಸಿ ವಿಪಕ್ಷದವರು ಆಡಳಿತ ಪಕ್ಷದವನನ್ನು ಕಂಬಿಗಳ (ಸರಳುಗಳ) ಹಿಂದೆ ಹೋಗುವಂತೆ ಮಾಡಿದರು. ‘ಕವಿಸಿದರು’ ಎಂದರೆ ಜೈಲಿನ ಕತ್ತಲೆಯಲ್ಲಿ ಹಾಕಿದರೆಂಬುದರ ಸೂಚನೆ. ಬಂಧಿತನಾದವನು ಮತ್ತೆ ಅದನ್ನು ಪರಿಹರಿಸಿದನು. ‘ಪಾರ್ಥ’ ಎಂದರೆ ಮಧ್ಯಮ. ಮಧ್ಯಮ ಎಂದರೆ ಮೀಡಿಯೇಟರ್. ಇಲ್ಲಿ ಮೀಡಿಯೇಟರ್ ಎಂದರೆ ಅಡ್ವೊಕೇಟ್. ‘ಪಾರ್ಥನಾತನ ಸರಳುಗಳ ಸಂವರಿಸಿ’ ಎಂದರೆ ‘ಸೀನಿಯರ್ ಅಡ್ವೊಕೇಟ್ sum ಎಂದರೆ ಫೀಸನ್ನು ವರಿಸಿ(ಜೊತೆಗೂಡಿ) ಇವನ ಸರಳುಗಳನ್ನು ಹೋಗಲಾಡಿಸಿದನು. ಹೊರಬಂದ ಅಡ್ವೊಕೇಟನ ಕಾರನ್ನು ವಾಹಿನಿಗಳವರು ಮುಸುಕಿದರು ಎಂದು ಮೊದಲ ಪಾದದ ಅರ್ಥ’ ಎಂದುತ್ತರಿಸಿದ ಸೀನು.
“ಎರಡನೆಯ ಪಾದದ್ದು?”
“ತೆರಳೆಗಡಿದನು ಎಂದರೆ ಜೈಲಿನಿಂದ ಪಾರ್ಲಿಮೆಂಟಿಗೆ ತೆರಳಿದ ಮೇಲೆ ಮಂತ್ರಿಯು ಅಲ್ಲಿ ಇಂತಿಂತಹವರ ಬಾಲ ಕತ್ತರಿಸಿದನು (ಕಡಿದನು) ಎಂದರ್ಥ.”
“ಎಂತಹವರದು?”
“ಈ ಸಂದರ್ಭದಲ್ಲಿ ದ್ರೋಣ ಎಂದರೆ ರಾಜಕೀಯ ಗುರು; ಗುರುಸುತ ಎಂದರೆ ಡೈನಾಸ್ಟಿಕ್ ಡೆಮಾಕ್ರಸಿಯಲ್ಲಿ ಮುಂದಿನ ದಿನಗಳ ಕುರ್ಚಿಮೋಹಿ; ಸೈಂಧವ ಎನ್ನುವುದು ಕನ್ನಡ-ಸಂಸ್ಕೃತ ಮಿಶ್ರಪದ. ಇವನ ವಿರುದ್ಧ ಸಿಗ್ನೇಚರ್ ಕಲೆಕ್ಷನ್ ಕ್ಯಾಂಪೇನ್ ನಡೆಸುವವನೇ sign ಧವ(ಧವ ಎಂದರೆ ಹೊಂದಿದವನು; ಖೂಳ ಎಂಬ ಅರ್ಥಗಳಿವೆ). ಮದ್ರ ಎಂದರೆ ಸಂತೋಷ; ಮಾದ್ರ ಎಂದರೆ ಸಂತೋಷ ನೀಡುವವನು. ಮಾದ್ರೇಶ್ವರ ಎಂದರೆ ಎಂಟರ್ಟೈನ್ಮೆಂಟ್ ಚಾನಲ್ನ ಬಾಸ್. ಇವರೆಲ್ಲರನ್ನು ಜೈಲ್ ರಿಟರ್ನ್ಡ್ ಮಂತ್ರಿಯು ಬಗ್ಗುಬಡಿದನು. ಹೂಡಿದನು ಒಡಲಲ್ಲಿ ಅಂಬುಗಳನ್ನು ಎಂದರೆ ಹೊಟ್ಟೆಯಲ್ಲಿ ಸಂಕಟ ಉಂಟಾಗುವಂತೆ ಮಾಡಿದನು ಎಂದರ್ಥ” ಎಂದ.
‘ಕೂಗಿದರೆ ದನಿ ಕೇಳಲಿಲ್ಲವೆ, ನರಹರಿಯೆ’ ಎಂದರೆ ‘ಗಂಟಲು ಹರಿದುಹೋಗುವಂತೆ ಕೂಗಿಕೊಂಡರೂ ಕೇಳಿಸಲಿಲ್ಲವೆ?’ ಎಂದೇ ಅರ್ಥವೆಂದು ಪ್ರೊಫೆಸರ್ ಮಿತ್ರ ಅವರೇ ಸಭೆಯೊಂದರಲ್ಲಿ ಹೇಳಿದಾಗಿನಿಂದ ಸೀನುವಿಗೆ ಹಾಡುಗಳಿಗೆ ಅನ್ಯಾರ್ಥಗಳನ್ನು ಆರೋಪಿಸುವ ರೋಗ ಬಡಿದುಕೊಂಡಿದ್ದಂತೆ. ಕೀರ್ತನೆ, ಚಿತ್ರಗೀತೆ, ಭಜನೆಗಳ ಅರ್ಥವಿರೂಪದಿಂದ ಆರಂಭಗೊಂಡ ಈ ಚಾಳಿಯು ಈಗ ಸಂಸ್ಕೃತದ ಸುಭಾಷಿತಗಳಿಗೂ ಹಬ್ಬಿಕೊಂಡಿದೆ.
‘ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನಹಿ ನಹಿ ರಕ್ಷತಿ ಢುಕೃಯ್ಕರಣೇ’ ಎಂದರೆ “ಸಾವು ಸನ್ನಿಹಿತವಾದ ಕಾಲದಲ್ಲಿ sum ಪ್ರಾಪ್ತವಾದರೆ ಯಾವ ದೇವರ ಪ್ರಾರ್ಥನೆಯೂ ಅವರನ್ನು ರಕ್ಷಿಸದು” ಎಂದು ಅರ್ಥವಂತೆ. ‘ವಿದ್ಯಾ ವಿನಯೇನ ಭೂಷತೇ’ ಎನ್ನುವುದು ಅಹಂಕಾರಿಗಳಿಗೂ ಅನ್ವಯವಾಗುವುದಂತೆ(ವಿದ್ಯಾ ವಿನಯೇ ನ ಭೂಷತೇ). ಇವನ ಮಾತನ್ನೇ ಗಾಢವಾಗಿ ನಂಬಿದ ಇವನ ಸ್ನೇಹಿತನೊಬ್ಬನು ತನ್ನ ಮಗಳು ವಿದ್ಯಾಳನ್ನು ವಿನಯ ಎಂಬ ವರನಿಗೆ ಕೊಡಲು ನಿರಾಕರಿಸಿದನಂತೆ. ಮಂತ್ರಗಳಲ್ಲಿ ಬರುವ ‘ಪುಷ್ಪವಾನ್ ಪ್ರಜಾವಾನ್ ಪಶುವಾನ್ ಭವತಿ’ ಎನ್ನುವುದು ಎಲೆಕ್ಷನ್ ಸಮಯದಲ್ಲಿ ಮುಖಂಡರಿಗೆ ಹಾರಗಳನ್ನು, ಭಾಷಣ ಕೇಳಲು ಜನಗಳನ್ನು, ಆ ಜನಗಳಿಗೆ ಬಾಡೂಟ ಮಾಡಿಸಲೆಂದು ಪಶುಗಳನ್ನು ತರಲು ಬಳಸುವ van ಅನ್ನು ಸೂಚಿಸುವುದಂತೆ.
ವಿಶ್ವ ಸಂಗೀತ ದಿನವಾದ ಜೂನ್ 21ರಂದು ಸೀನುವಿನ ಭಾಷಣವಿದೆಯಂತೆ. ನಾನಂತೂ ತಪ್ಪಿಸಿಕೊಳ್ಳುವ ಮಾರ್ಗವನ್ನು ಹುಡುಕುತ್ತಿದ್ದೇನೆ. ನೀವು?






