ಚಿತ್ರಕ ಹಾಗೂ ಉಳಿದವರು ಶಂಖನ ಸೂಚನೆಯಂತೆ ನದಿ ತಟದಲ್ಲಿ ನಿರೀಕ್ಷಿಸುತ್ತ ಕುಳಿತರು. ಅವನು ಹೇಳಿದಂತೆ ಒಂದು ಪ್ರಹರದೊಳಗೆ ಹಿಂದಿರುಗಬೇಕಿತ್ತು. ಒಂದು ಪ್ರಹರ ಕಳೆಯಿತು. ಆದರೆ ಶಂಖ ಮರಳಿ ಬರಲಿಲ್ಲ. ಮತ್ತೂ ಒಂದು ಪ್ರಹರದಷ್ಟು ಕಾಲ ಕಾದರು. ಉಹುಂ. ಅವನ ಸುಳಿವಿಲ್ಲ. ಅವನ ಮಾತಿನ ಪ್ರಕಾರ ಮತ್ತೆ ಕಾಯುವಂತಿಲ್ಲ. ಹೊರಡಲೇಬೇಕು.
ದೋಣಿಗಾರ ಜಯ ಹೇಳಿದ,
“ಅಯ್ಯಾ, ನಿಮ್ಮವನ ಸೂಚನೆಯ ಪ್ರಕಾರ ನಾವು ಪ್ರಯಾಣ ಆರಂಭಿಸಬೇಕು. ಆದರೆ ಒಂದು ಸಲ ನದಿಯನ್ನು ನೋಡಿ. ಆವರಿಸಿದ ಕತ್ತಲು. ಅದರ ಮೇಲೆ ತೆಳುವಾಗಿ ಮಂಜು ಬೀಳುತ್ತಿದೆ. ಏನೆಂದರೆ ಏನೂ ಕಾಣಿಸದು. ನದಿಯ ಈ ಭಾಗದಲ್ಲಿ ಒಂದೆರಡು ಹರದಾರಿಗಳಷ್ಟು ದೂರ ನೀರಿನ ನಡುವೆ ಬಂಡೆಗಲ್ಲುಗಳಿವೆ. ಬೆಳಕಿರುವ ವೇಳೆಯಲ್ಲಿ ಅವುಗಳನ್ನು ಗುರುತಿಸಿ ದೋಣಿ ನಡೆಸುವುದು ಸುಲಭ. ಆದರೆ ಈಗ ಕತ್ತಲಲ್ಲಿ ಬಹಳ ಕಷ್ಟ. ಎಲ್ಲಾದರೂ ದೋಣಿ ಬಂಡೆಗೆ ತಾಗಿದರೆ ಒಡೆದೀತು ಅಥವಾ ಮುಳುಗೀತು. ಮೊಸಳೆಗಳಿರುವ ಪ್ರದೇಶ ಇದು. ಹಾಗೇನಾದರೂ ಆದರೆ…. ಬೆಳಗಿನ ಬೆಳಕು ಬರುವವರೆಗೆ ಇಲ್ಲೇ ಕಾದರೇನು? ಅಷ್ಟು ಹೊತ್ತಿಗೆ ನಿಮ್ಮವನು ಬಂದರೂ ಬರಬಹುದು. ಆಗದೆ?’’
ಚಿತ್ರಕನಿಗೆ ಅವನ ಮಾತು ಸರಿಯೆಂದು ಕಂಡಿತು. ಉಳಿದವರೂ ಸಮ್ಮತಿಸಿದರು. ಅವರಾರಿಗೂ ಶಂಖನಿಲ್ಲದೆ ಮುಂದುವರಿಯುವ ಉತ್ಸಾಹವಿರಲಿಲ್ಲ. ಅವನು ಹೇಳಿದ ಅವಧಿ ಕಳೆದಿದ್ದರೂ, ತಡವಾಗಿಯಾದರೂ ಬಂದಾನು ಎಂಬ ಒಂದು ಕ್ಷೀಣ ಆಶಾಕಿರಣ ಅವರೊಳಗಿತ್ತು. ಅವರೆಲ್ಲರೂ ಬೆಳಗಿನ ತನಕ ಅಲ್ಲಿಯೇ ಕಾದು ಕುಳಿತರು.
ಬೆಳಗಾಯಿತು, ಆದರೆ ಶಂಖ ಬರಲಿಲ್ಲ. ಅವನು ಹೋದುದು ರುದ್ರನ ಭಟರನ್ನು ತಡೆಯುವುದಕ್ಕೆ ಎಂದು ಅವರಿಗೆ ಅರ್ಥವಾಗಿತ್ತು. ತಮ್ಮನ್ನು ಹಿಂಬಾಲಿಸುವವರನ್ನು ಹೇಗೋ ತಪ್ಪಿಸುವ ಪ್ರಯತ್ನ ಮಾಡುವುದು ಅವನ ಉದ್ದೇಶವಾಗಿತ್ತು.
ಈಗ ಅವನು ಮರಳಿ ಬಂದಿಲ್ಲವೆಂದರೆ… ದೇವರೇ! ಏನೋ ಆಗಿದೆ.
“ಹೊರಡೋಣ. ಇನ್ನು ಅವನು ಬರುವ ಸಾಧ್ಯತೆಯಿಲ್ಲ’’ ಎಂದ ಚಿತ್ರಕ. ಅವನ ಧ್ವನಿ ಭಾರವಾಗಿತ್ತು.
“ಪುಣ್ಯಾತ್ಮ. ಅವನನ್ನು ಹೆತ್ತ ಹೊಟ್ಟೆ ತಣ್ಣಗಿರಲಿ. ನಮಗಾಗಿ ಎಷ್ಟೆಲ್ಲ ಕಷ್ಟಪಟ್ಟ. ಅಯ್ಯೋ… ಏನಾಯಿತೋ ಅವನಿಗೆ. ಅವನ ಜೀವಕ್ಕೆ ತೊಂದರೆಯಾಗದಿದ್ದರೆ ಸಾಕಿತ್ತು’’ ಎಂದ ಚಾರು ಸೆರಗಿನಿಂದ ಕಣ್ಣೊರೆಸಿಕೊಂಡಳು.
“ಅಪ್ಪಾ, ಶಂಖನಿಗೆ ಏನೂ ಆಗುವುದಿಲ್ಲ. ಅವನು ಅವರನ್ನು ಸೋಲಿಸಿ ಬರುತ್ತಾನೆ ನೋಡಿ’’ ಎಂದ ಜಿತು. ಅವನಿಗೆ ಶಂಖನ ಮೇಲೆ ತುಂಬು ಭರವಸೆ.
“ಹಾಗೇ ಆಗಲಪ್ಪ. ಅವನು ಕ್ಷೇಮವಾಗಿ ಬಂದರೆ ಸಾಕು’’ ಎಂದ ಚಿತ್ರಕ.
ಚಂಪೆ ಒಂದು ಮಾತನ್ನೂ ಆಡಲಿಲ್ಲ. ಅವಳ ಕಣ್ಣುಗಳು ಆಗಾಗ ಹನಿದುಂಬಿಕೊಳ್ಳುತ್ತಿದ್ದವು. ಯಾಕೋ ಏನೋ. ದೋಣಿಗಾರನೂ ಖಿನ್ನನಾಗಿದ್ದ. ಮನಸ್ಸಿಲ್ಲದಿದ್ದರೂ ಅವರೆಲ್ಲ ದೋಣಿಯನ್ನು ಏರಿದರು. ನೀರ ಮೇಲಿನ ನಾವೆ ನಿಧಾನವಾಗಿ ಚಲಿಸತೊಡಗಿತು.
* * *
“ಅದೋ ಅಲ್ಲಿ ಎತ್ತರವಾದ ಭವನಗಳು ಕಾಣುತ್ತಿವೆಯಲ್ಲ, ಅದೇ ಪಾಂಚಾಲ’’ ದೋಣಿಗಾರ ಜಯ ಕೈದೋರಿ ಹೇಳಿದ. ಅವರು ಶಂಖನನ್ನು ಬಿಟ್ಟು ಬಂದ ಮೇಲೆ ಕೆಲವು ದಿನಗಳ ಕಾಲ ದೋಣಿಯ ಯಾನವನ್ನು ಮಾಡಿ, ಗಂಗಾನದಿಯ ದಕ್ಷಿಣ ತಟದಲ್ಲಿದ್ದ ಆ ಪಟ್ಟಣದ ಸಮೀಪ ಬಂದಿದ್ದರು. ದೋಣಿ ತೀರದತ್ತ ಸರಿಯುತ್ತಿದ್ದಂತೆ ಪಾಂಚಾಲದ ವಿಸ್ತಾರ ಹಾಗೂ ವೈಭವ ಅವರ ಗಮನಕ್ಕೆ ಬರತೊಡಗಿತು. ಹಸ್ತಿನಾವತಿಯಂತೆ ಸಮೃದ್ಧವಾದ ರಾಜ್ಯವಂತೆ ಪಾಂಚಾಲ. ಬಹುವಿಸ್ತಾರವಾಗಿದ್ದ ಆ ರಾಜ್ಯದ ಉತ್ತರ ಭಾಗವನ್ನು ದ್ರೋಣರು ವಶಮಾಡಿಕೊಂಡ ಮೇಲೆ ಅರ್ಧವಷ್ಟೇ ರಾಜಾ ದ್ರುಪದನ ಆಳ್ವಿಕೆಯಲ್ಲಿತ್ತು. ಆದರೂ ಬಲಿಷ್ಠವೂ, ಶ್ರೀಮಂತವೂ ಆಗಿತ್ತು. ಹೀಗೆಲ್ಲ ಬೇರೆಯವರು ಆಡುವುದನ್ನು ಕೇಳಿದ್ದ ಚಿತ್ರಕನಿಗೆ ಈ ಮಹಾನಗರದಲ್ಲಿ ರುದ್ರನ ಭಯವಿರಲಿಲ್ಲ. ಆದರೂ ಅನ್ನಕ್ಕೆ, ಆಶ್ರಯಕ್ಕೆ ಏನು ಮಾಡುವುದೆಂದು ಚಿಂತೆಯಿತ್ತು. ತಮ್ಮಲ್ಲಿರುವ ತೀರ ಅಲ್ಪಪ್ರಮಾಣದ ಹೊನ್ನು ಯಾವುದಕ್ಕೂ ಸಾಲದು. ದುಡಿದು ಗಳಿಸೋಣವೆಂದರೆ ತನಗೆ ಒಗ್ಗುವ ಉದ್ಯೋಗ ಕೊಡುವವರು ಯಾರು?
ದೋಣಿಯಾತ ತಟವನ್ನು ಸೇರಿ, ದೋಣಿಯನ್ನು ಅಲ್ಲಿ ಕಟ್ಟಿದ್ದ ಹತ್ತಾರು ದೋಣಿಗಳ ಸಾಲಿನಲ್ಲಿ ನಿಲ್ಲಿಸಿದ.
ಚಿತ್ರಕನೂ, ಅವನ ಹೆಂಡತಿ ಮಕ್ಕಳೂ ತಮ್ಮ ಗಂಟು ಮೂಟೆಗಳೊಂದಿಗೆ ಕೆಳಗಿಳಿದರು. ನದೀ ತಟದಲ್ಲಿ ಓಡಾಡುತ್ತಿದ್ದ ಜನರ ಸಂಖ್ಯೆ ಗಣನೀಯವೇ ಆಗಿತ್ತು.
“ನಗರದಲ್ಲಿ ಏನೋ ಉತ್ಸವ ನಡೆಯುತ್ತಿರುವಂತಿದೆ. ಬಹುಶಃ ನಿಮಗೆ ಕೆಲವು ದಿನಗಳ ಕಾಲ ಧರ್ಮಸತ್ರದಲ್ಲಿ ಊಟ ಹಾಗೂ ವಸತಿಗಳಿಗೆ ಅನುಕೂಲವಿದ್ದೀತು, ನೋಡಿ. ನಾನೂ ನನ್ನ ಮಗನೂ ಇಂದು ವಿಶ್ರಾಂತಿ ಪಡೆದು ನಾಳೆ ಹಿಂದಿರುಗುತ್ತೇವೆ’’ ಎಂದ.
ಅವನ ಮಾತಿನಿಂದ ಚಿತ್ರಕನ ಚಿಂತೆಯ ಭಾರ ಒಂದಿಷ್ಟು ತಗ್ಗಿತು.
“ಅಯ್ಯಾ, ನಿಮ್ಮಿಂದ ನಮಗೆ ತುಂಬ ಉಪಕಾರವಾಯಿತಯ್ಯ. ಕೈಮುಗಿಯುವುದರ ಹೊರತು ಬೇರೇನನ್ನೂ ನಾವು ಕೊಡಲಾರೆವು. ನಿನ್ನ ಹೆಂಡತಿ ಮಕ್ಕಳು ಸೊಂಪಾಗಿರಲಿ’’ ಎಂದು ಚಿತ್ರಕ ಅವನಿಗೆ ತಲೆಬಾಗಿ ವಂದಿಸಿದ.
“ಅದೆಲ್ಲ ಏನು ದೊಡ್ಡದು? ನನಗೆ ಇದಕ್ಕೆ ತಕ್ಕ ಪ್ರತಿಫಲವನ್ನು ಶಂಖ ಈಗಾಗಲೇ ಕೊಟ್ಟಿದ್ದಾನೆ. ನೀವು ಹೋಗಿ ಬನ್ನಿ. ನಿಮಗೆ ಒಳಿತಾಗಲಿ’’ ಎಂದು ತನ್ನ ಮಗನೊಂದಿಗೆ ಅವನು ಜನಸಂದಣಿಯಲ್ಲಿ ಕರಗಿದ.
ಚಿತ್ರಕನೂ ಅವನ ಸಂಸಾರವೂ ಆ ಜನ ಸಮ್ಮರ್ದ ಬೀದಿಗಳಲ್ಲಿ ಬಟ್ಟೆಯ ಗಂಟುಗಳನ್ನು ಹೊತ್ತುಕೊಂಡು ಅಲೆದಾಡಿದರು. ನಡೆದಷ್ಟೂ ಮುಗಿಯದ ಬೀದಿಗಳು. ನೋಡಿದಷ್ಟೂ ಮುಗಿಯದ ಅಲಂಕಾರಗಳು, ಎಲ್ಲ ಮಾರ್ಗಗಳೂ ಒಂದೇ ರೀತಿ ಕಾಣುತ್ತಿದ್ದವು. ಅವುಗಳಲ್ಲಿ ಸುತ್ತಾಡುವುದೇ ಜೀವನದ ಏಕೈಕ ಉದ್ದೇಶವೋ ಎನ್ನುವಂತೆ ಗುಂಪುಗುಂಪಾಗಿ ಅಲೆಯುತ್ತಿದ್ದ ಹೆಣ್ಣು-ಗಂಡುಗಳ ಸಂದೋಹ. ಅವರ ಸಂಭ್ರಮ, ಸಂತೋಷಗಳು ತಮ್ಮಲ್ಲಿಯೂ ಪ್ರತಿಫಲಿಸಿದವೋ ಎಂಬಂತೆ ಚಿತ್ರಕಾದಿಗಳ ಮನಸ್ಸೂ ಪ್ರಫುಲ್ಲಿತವಾಗತೊಡಗಿತು. ಅದಕ್ಕೆ ಇನ್ನೊಂದು ಹಿನ್ನೆಲೆಯೂ ಇತ್ತು ಅನ್ನೋಣ. ಇಲ್ಲಿಯವರೆಗೆ ಸದಾ ತಮ್ಮನ್ನು ಬೆನ್ನಟ್ಟಿದ ಸಾವಿನ ಭಯ ದೂರವಾಯಿತು ಎಂಬ ವಿಶ್ವಾಸ ಅವರ ಸಂತೋಷಕ್ಕೆ ಮುಖ್ಯ ಕಾರಣ. ಆದರೆ ಆ ಸಂತೋಷದ ಬಾನಿನಲ್ಲಿ ಶಂಖನಿಲ್ಲ ಎಂಬ ವಿಷಾದವು ಆಗೀಗ ಮುಸುಕಿ ಸಂಭ್ರಮವನ್ನು ಮಸುಕಾಗಿ ಮಾಡುತ್ತಿತ್ತು.
ಎಲ್ಲಿ ಹೋದನೋ ಶಂಖ? ಅವನು ತಮ್ಮನ್ನು ಸೇರಿಕೊಳ್ಳಬೇಕಾಗಿತ್ತು. ಬದುಕಿದ್ದರೆ ಬಂದೇ ಬರುತ್ತಿದ್ದ. ಬಂದಿಲ್ಲ ಅಂದರೆ ಆ ಯೋಧರೇನಾದರೂ ಅವನನ್ನು ಹಿಡಿದು…
ಅವರಿಗೆ ಅದಕ್ಕಿಂತ ಆಚೆಗೆ ಯೋಚಿಸುವುದು ಸಾಧ್ಯವಾಗುತ್ತಿರಲಿಲ್ಲ. ಅವನಿಲ್ಲದೆ ಪಾಂಚಾಲದಲ್ಲಿ ಜೀವನಕ್ಕೆ ಒಂದು ನೆಲೆಯನ್ನು ಕಲ್ಪಿಸಿಕೊಳ್ಳುವುದು ಅವರಿಗೆ ಕಷ್ಟಸಾಧ್ಯವಿತ್ತು. ಅದಕ್ಕಿಂತ ಹೆಚ್ಚು, ತನಗೆ ಯಾವ ಪ್ರಯೋಜನವೂ ಇಲ್ಲದಿದ್ದಾಗಲೂ ತನ್ನ ಪ್ರಾಣವನ್ನು ಒತ್ತೆಯಿಟ್ಟು ತಮ್ಮನ್ನು ರುದ್ರನ ಕಡೆಯವರಿಂದ ರಕ್ಷಿಸಿದನಲ್ಲ. ಅಂತಹ ಒಬ್ಬ ನಿಸ್ವಾರ್ಥಿ, ಅಮಾಯಕರ ಪರವಾಗಿ ನಿಲ್ಲುವ ಒಬ್ಬ ಅಂತಃಕರಣವುಳ್ಳ ಹಿತವಂತನನ್ನು ಕಳಕೊಂಡೆವಲ್ಲ ಎಂಬ ನೋವು ಅವರ ಮನಸ್ಸನ್ನು ಇರಿಯುತ್ತಲೇ ಇತ್ತು.
ಅತ್ತ ಸಂತೋಷವನ್ನೂ ಅನುಭವಿಸಲಾರದ, ಇತ್ತ ಕಾಡುವ ವಿಷಣ್ಣತೆಗೂ ಪರಿಹಾರ ಸಿಗದ ದ್ವಂದ್ವದಲ್ಲಿ ಅವರೆಲ್ಲ ಸಿಲುಕಿದ್ದರು. ಪಟ್ಟಣದಲ್ಲಿ ನಡೆಯುತ್ತಿದ್ದ ಉತ್ಸವಾಚರಣೆಯ ಅಂಗವಾಗಿ ಎಲ್ಲೆಡೆ ಅನ್ನಸಂತರ್ಪಣೆ ನಡೆಯುತ್ತಿದ್ದ ಕಾರಣ ಹೊಟ್ಟೆಯ ಚಿಂತೆ ಇರಲಿಲ್ಲ. ಅವರ ಅದೃಷ್ಟಕ್ಕೆ ಉಳಿಯುವುದಕ್ಕೂ ಒಂದು ಧರ್ಮಶಾಲೆಯ ಆವರಣದಲ್ಲಿ ಅವಕಾಶ ಸಿಕ್ಕಿತ್ತು. ಮುಂದಿನ ದಿನಗಳಲ್ಲಿ ತಮ್ಮ ಭವಿಷ್ಯ ಅನಿಶ್ಚಿತವಾಗಿದ್ದರೂ ಸದ್ಯ ಒಂದು ಆಶ್ರಯ ದೊರಕಿದ ನೆಮ್ಮದಿಯಲ್ಲಿದ್ದರು.
ಪಾಂಚಾಲದ ಕಾಂಪಿಲ್ಯವೆಂಬ ಆ ನಗರದಲ್ಲಿ ಇಂತಹ ಒಂದು ಮಹಾ ಸಂಭ್ರಮಕ್ಕೆ ಕಾರಣವೇನು?
ಅವರಿದ್ದ ಧರ್ಮಶಾಲೆಯಲ್ಲಿ ಉಳಿದುಕೊಂಡಿದ್ದ ಕೆಲವರ ಮಾತುಕತೆÉಗಳಿಂದ ಚಿತ್ರಕಾದಿಗಳಿಗೆ ತಿಳಿದದ್ದು ಇಷ್ಟು. ಅಲ್ಲಿಯ ಅರಸ ದ್ರುಪದನ ಮಗಳು ದ್ರೌಪದಿಯ ವಿವಾಹವಂತೆ. ಅವಳ ಸ್ವಯಂವರದಲ್ಲಿ ಇತರರಿಗೆ ಅಸಾಧ್ಯವಾಗಿದ್ದ, ಮತ್ಸö್ಯಯಂತ್ರ ಭೇದನವೆಂಬ ಮಹಾಕಾರ್ಯವನ್ನು ಯಾರೋ ಒಬ್ಬ ಬ್ರಾಹ್ಮಣ ಯುವಕ ಸಾಧಿಸಿದನಂತೆ. ದ್ರೌಪದಿ ಅವನಿಗೆ ಮಾಲೆಯಿಕ್ಕಿದಳಂತೆ. ಅದರಿಂದ ಕುಪಿತರಾಗಿ ಮೇಲೆ ಬಿದ್ದ ಕ್ಷತ್ರಿಯ ವೀರರನ್ನೆಲ್ಲ ಆ ಯುವಕ ಸೋಲಿಸಿದನಂತೆ.
ಆಮೇಲೆ ಅವನೂ ಅವನ ಸಹೋದರರೂ ಬ್ರಾಹ್ಮಣರಲ್ಲವೆಂದೂ, ಅವರು ಐವರು ಪಾಂಡವರೆಂದೂ ತಿಳಿಯಿತಂತೆ. ಯಂತ್ರವನ್ನು ಭೇದಿಸಿದವನು ಅರ್ಜುನನಂತೆ. ಅವರು ಐವರೂ ದ್ರೌಪದಿಯನ್ನು ಮದುವೆಯಾಗುತ್ತಾರಂತೆ. ಅದು ಧರ್ಮವೆಂದು ಮಹರ್ಷಿಗಳಾದ ವೇದವ್ಯಾಸರೇ ಹೇಳಿದರಂತೆ. ಹಾಗಾಗಿ ಎಲ್ಲರೂ ಈ ವಿವಾಹ ಸಂಭ್ರಮದಲ್ಲಿ ಮುಳುಗಿದ್ದಾರಂತೆ.
ಈ ವರ್ತಮಾನವನ್ನು ಕೇಳಿದ ಆ ನಾಲ್ವರಿಗೂ ಆಶ್ಚರ್ಯವೂ ಆನಂದವೂ ಏಕಕಾಲದಲ್ಲಿ ಉಂಟಾಯಿತು. ಯಾವ ಪಾಂಡವರ ವಿರೋಧವಾದ ಒಳಸಂಚು ತಿಳಿದ ಕಾರಣ ಅವರ ಸಂಸಾರ ಆಪತ್ತಿಗೆ ಸಿಲುಕಿತ್ತೋ, ಆ ಪಾಂಡವರು ಯಾವ ಸಂಕಟಕ್ಕೂ ಒಳಗಾಗದೆ ಕ್ಷೇಮವಾಗಿ ಇದ್ದಾರೆ. ಇದರಿಂದಾಗಿ ತಮ್ಮ ಆಪತ್ತೂ ದೂರವಾದಂತೆ ತಾನೇ… ಅಲ್ಲದೆ ಜನಪ್ರಿಯರೂ, ಧಾರ್ಮಿಕರೂ ಆದ ಪಾಂಡವರು ಬದುಕಿದ್ದಾರೆ ಎನ್ನುವುದು ಅವರಿಗೆ ಒಂದು ಭರವಸೆಯಾಗಿಯೇ ಕಾಣಿಸಿತು.
“ಅಪ್ಪಾ, ಹಾಗಾದರೆ ನಾವು ಮತ್ತೆ ನಮ್ಮ ಮನೆಗೆ ಹೋಗಬಹುದೆ?’’ ಎಂದು ಸಣ್ಣವನಾದ ಜಿತು ಕೇಳಿದ. ಅದು ಅವನಿಗೆ ಮಾತ್ರವಲ್ಲದೆ ಅವರೆಲ್ಲರಿಗೂ ಪ್ರಶ್ನೆಯಾಗಿಯೇ ಇತ್ತು.
“ಗೊತ್ತಿಲ್ಲ ಮಗೂ. ಹೋದರೂ ಹೊಗಬಹುದು. ಅಥವಾ ಸಾಧ್ಯವಾಗದೆಯೂ ಇರಬಹುದು. ಯಾರಿಗೆ ಗೊತ್ತು? ಇದಕ್ಕೆ ಉತ್ತರ ಹೇಳಬಲ್ಲವನು ಶಂಖ ಒಬ್ಬನೇ. ಅವನಿಗೆ ಏನಾಗಿದೆಯೋ ಗೊತ್ತಿಲ್ಲ. ನಮಗಾಗಿ ಅವನು ಅಪಾಯವನ್ನು ಮೈಮೇಲೆ ಎಳೆದುಕೊಂಡುಬಿಟ್ಟ. ಮುಂದೆ ಏನೋ ನನಗೂ ತಿಳಿಯುತ್ತಿಲ್ಲ’’ ಎಂದ ಚಿತ್ರಕ.
ಅವರ ಮಾತುಗಳನ್ನು ಕೇಳುತ್ತಿದ್ದ ಚಂಪೆಯ ಮನಸ್ಸಿನಲ್ಲಿ, ತಾವು ತಿಂಗಳುಗಳ ಹಿಂದೆ ಬಿಟ್ಟು ಬಂದ ಹಳ್ಳಿಯೂ, ತಮ್ಮ ಆ ಮನೆಯೂ ನೆನಪಿನ ಚಿತ್ರಗಳಾಗಿ ಸುಳಿಯುತ್ತಿದ್ದವು. ತಾವು ಪ್ರೀತಿಯಿಂದ ಬೆಳೆಸಿದ ಗಿಡ-ಮರ-ಬಳ್ಳಿಗಳು, ತಮ್ಮನ್ನು ಕಂಡೊಡನೆ ಅಂಬಾ ಅನ್ನುತ್ತಿದ್ದ ಹಸುಗಳು, ಬಾಲವೆತ್ತಿ ಕುಣಿಯುವ ಕರುಗಳು – ಎಲ್ಲವೂ ಅವಳ ಮನಸ್ಸನ್ನು ಕಾಡುತ್ತಿದ್ದವು. ಮತ್ತೊಮ್ಮೆ ಅವುಗಳನ್ನು ಕಂಡೇನೇ ಎಂದು ಹೃದಯ ಹಾತೊರೆಯುತ್ತಿತ್ತು. ಆ ಭಾವನೆಗೆ ಜಿತು ಮಾತಿನ ರೂಪ ಕೊಟ್ಟನಷ್ಟೆ. ಅವನಿಗೆ ಉತ್ತರಿಸಿದ ಚಿತ್ರಕನ ಮಾತುಗಳಲ್ಲಿದ್ದ ನಿರಾಶೆಯೂ, ಅನಿಶ್ಚಿತತೆಯೂ ಅವಳ ಅಂತರಂಗದಲ್ಲಿ ಅಗೋಚರವಾದ ಭಯವನ್ನೂ ಬಿತ್ತಿದವು. ತಾವು ಮತ್ತೆ ತಮ್ಮ ಹಳ್ಳಿಗೆ ಮರಳಲಾರೆವೋ ಏನೋ. ಇದೇ ಪಾಂಚಾಲದಲ್ಲಿಯೇ ಉಳಿದ ಆಯುಸ್ಸನ್ನೆಲ್ಲ ಕಳೆಯಬೇಕೋ ಏನೋ ಎಂದು ಶಂಕೆ ಮನಸ್ಸನ್ನು ಆವರಿಸುತ್ತಿತ್ತು.
ನಗರದ ಆ ಉತ್ಸಾಹದ ಉತ್ಸವದ ಮಧ್ಯೆಯೂ ಚಿತ್ರಕನಿಗೆ ತಮ್ಮ ಜೀವನೋಪಾಯಕ್ಕಾಗಿ ಮುಂದೇನು ಮಾಡುವುದು ಎಂಬ ಪ್ರಶ್ನೆಯೊಂದು ಕೊರೆಯುತ್ತಲೇ ಇತ್ತು. ಈಗೇನೋ ನಾಲ್ಕಾರು ದಿನ ಹೊಟ್ಟೆ ತುಂಬುವಷ್ಟು ಅನ್ನ ದೊರೆಯುತ್ತಿದೆ. ಇದೇನೂ ಶಾಶ್ವತವಲ್ಲವಷ್ಟೆ. ಉತ್ಸವ ಮುಗಿದ ಬಳಿಕ ಏನು? ಇರುವುದಕ್ಕೆ ಒಂದು ಗೂಡು, ಉಣ್ಣುವುದಕ್ಕೊಂದು ಸಂಪಾದನೆಯ ಉದ್ಯೋಗ ಬೇಕಲ್ಲ? ತಾವಿರುವ ಈ ಅಪರಿಚಿತ ಪಟ್ಟಣದಲ್ಲಿ ತನ್ನ ಚಿತ್ರಗಾರಿಕೆಗೆ ಏನಾದರೂ ಬೆಲೆ ಇದ್ದೀತೆ?
“ಶಂಖ ನಮ್ಮ ಜೊತೆ ಇರುತ್ತಿದ್ದರೆ ಏನಾದರೂ ದಾರಿ ತೋರಿಸುತ್ತಿದ್ದ. ಅವನಿಗೆ ಗೊತ್ತಿಲ್ಲದ ವಿಚಾರವೇ ಇರಲಿಲ್ಲ. ಇಲ್ಲಾದರೂ ಅಷ್ಟೇ. ನಮ್ಮ ಜೀವನಕ್ಕೆ ಏನೋ ಒಂದು ಕೆಲಸ ಕೊಡಿಸುತ್ತಿದ್ದ. ಈಗ ಅವನನ್ನೂ ಕಳೆದುಕೊಂಡೆವು. ಬರೀ ದುರದೃಷ್ಟದ ಯೋಗ ನಮ್ಮದು. ನಮಗೆ ಮಾತ್ರವಲ್ಲ, ನಮ್ಮ ನೆರವಿಗೆ ಬಂದವರಿಗೂ ಅಪಾಯ ತಪ್ಪಿದ್ದಲ್ಲ. ಶಂಖನಿಗೂ ಏನೋ ಆಪತ್ತು ಒದಗಿರಬೇಕು’’ ಎಂದಳು ಚಾರು. ಅವಳ ತಾಯಿಯ ಕರುಳು ಶಂಖನಿಗಾಗಿ ಮಿಡಿಯುತ್ತಿತ್ತು.
ಚಂಪೆ ಮಾತನಾಡಲಿಲ್ಲ. ಆದರೂ ಅವಳ ಎದೆಯೊಳಗೆ ಸಾವಿರ ಮಾತುಗಳಿದ್ದವು. ಆದರೆ ಆ ಮಾತುಗಳಿಗೆ ಧ್ವನಿಯಿರಲಿಲ್ಲ. ಉಟ್ಟ ಸೀರೆಯ ಸೆರಗಿನ ತುದಿಯಿಂದ ತುಂಬಿದ ಕಣ್ಣುಗಳನ್ನು ಒರೆಸಿಕೊಂಡಳು.
ಅಂತೂ ಪಾಂಚಾಲದ ವೈಭವದ ಮಹೋತ್ಸವದ ಸಡಗರದಲ್ಲಿ ಇವರೂ ಸೇರಿಕೊಂಡರು. ನಾಲ್ಕಾರು ದಿನಗಳ ಕಾಲ ನಡೆದ ಉತ್ಸವದಲ್ಲಿ ಚಿತ್ರಕ ಮತ್ತಿತರರಿಗೆ ಸಡಗರವೇನೂ ಇರಲಿಲ್ಲ. ಅವರ ಬದುಕು ಅತಂತ್ರವಾಗಿದ್ದಾಗ ಸಡಗರವೆಲ್ಲಿಂದ? ಹಾಗೆಂದು ಉತ್ಸವವಿದ್ದ ಕಾರಣ ಅವರಿಗೆ ಹೊಟ್ಟೆ ತುಂಬಿಸಿಕೊಳ್ಳುವುದು ಸುಲಭವಾಗಿತ್ತು. ಅಲ್ಲದೆ ಅವರಿವರ ಬಾಯಿಯಿಂದ ರಾಜಕುಟುಂಬದ ವಿವರಗಳೂ ಸಿಗುತ್ತಿದ್ದವು. ಪಾಂಡವರು ಹೇಗೋ ಬ್ರಾಹ್ಮಣರ ವೇಷದಲ್ಲಿ ತಲೆಮರೆಸಿಕೊಂಡು ಬಂದಿದ್ದಾರೆ ಎಂದರೆ ತಮಗೆ ಬಂದ ಕಷ್ಟವು ಅವರಿಗೂ ಬಂದಿರಬೇಕು. ಚಕ್ರವರ್ತಿಯ ಮಕ್ಕಳೇ ಪ್ರಾಣರಕ್ಷಣೆಗಾಗಿ ಎಲ್ಲೆಲ್ಲೋ ಅಲೆಯಬೇಕಾಗಿ ಬಂದಿದೆ ಎಂದರೆ ತಮ್ಮಂತಹ ಬಡವರ ಪಾಡು ಹೀಗಾದುದರಲ್ಲಿ ಆಶ್ಚರ್ಯವಿಲ್ಲ. ಹೀಗೆಲ್ಲ ಯೋಚಿಸಿ ಸಮಾಧಾನಪಟ್ಟುಕೊಳ್ಳುತ್ತಿದ್ದರು.
ಚಿತ್ರಕನಿಗೂ ಚಾರುವಿಗೂ ಮುಂದಿನ ಹೊಟ್ಟೆಪಾಡಿನ ಚಿಂತೆ. ಮಕ್ಕಳಿಬ್ಬರ ಭವಿತವ್ಯದ ಚಿಂತೆ. ಜಿತುವಿಗೆ ಬಿಟ್ಟುಬಂದ ಆಮ್ರಪುರದ ಮನೆಯೂ, ತನ್ನ ಒಡನಾಡಿ ಹುಡುಗರೂ ನೆನಪಾಗಿ ಕಾಡುತ್ತಿದ್ದರು. ಯಾವಾಗ ಅಲ್ಲಿಗೆ ಹೋದೇನೋ ಎಂದು ಅವನ ಮನಸ್ಸು ಕಾತರಿಸುತ್ತಿತ್ತು.
ಅವರಲ್ಲಿ ಮೂವರ ಚಿಂತೆ ಒಂದಾದರೆ ಚಂಪೆಯ ಚಿಂತೆಯೇ ಇನ್ನೊಂದು. ಮನೆಯಿಂದ ಹೊರಟು, ನಿರಾಶ್ರಿತರಾಗಿ, ಪ್ರಾಣವುಳಿಸಿಕೊಳ್ಳುವುದಕ್ಕಾಗಿ ಎಲ್ಲೆಲ್ಲೋ ಅಲೆಯುತ್ತಿದ್ದ ಕಾಲದಲ್ಲಿ ಸಹಾಯಕ್ಕೆ ಒದಗಿ ಬಂದವನು ಶಂಖ. ಆಗುವುದಕ್ಕೆ ಚಾರುವಿನ ಕಡೆಯಿಂದ ದೂರದ ಬಂಧು. ಅಷ್ಟೇ ಮೊದಲಿದ್ದ ಪರಿಚಯ. ಕ್ರಮೇಣ ದಿಕ್ಕು ದೆಸೆಯಿಲ್ಲದ ಅಲೆದಾಟದಲ್ಲಿ, ಅವನ ಒಡನಾಟದಲ್ಲಿ ಚಂಪೆ ಏನೋ ಹಿತವನ್ನು ಅನುಭವಿಸತೊಡಗಿದ್ದಳು. ಅದಾವುದೋ ಮಧುರ ಗಳಿಗೆಯಲ್ಲಿ ಅವಳ ಹೃದಯದ ತಂತಿಯನ್ನು ಅವನು ಮೀಟಿದ್ದ. ಅವನ ಅರಿವಿಗೆ ಬಂತೋ ಇಲ್ಲವೋ ತಿಳಿಯದು. ಆದರೆ ಅವನ ರೂಪ ಅವಳ ಮನಸ್ಸಿನಲ್ಲಿ ಅರ್ಚನೆಯ ಮೂರ್ತಿಯಾಗಿ ಸ್ಥಾಪನೆಯಾಗಿತ್ತು.
ಅವನಿಂದು ತಮ್ಮೊಂದಿಗಿಲ್ಲ. ಶಾಶ್ವತವಾಗಿ ಅಗಲಿದ್ದಾನೆ ಎಂಬ ಸತ್ಯವನ್ನು ಜೀರ್ಣಿಸಿಕೊಳ್ಳುವುದಕ್ಕೆ ಅವಳಿಂದ ಸಾಧ್ಯವಾಗಲಿಲ್ಲ. ಮತ್ತೆ ಮತ್ತೆ ಕಾಡುವ ಶಂಖನ ಸ್ಮರಣೆಯೊಂದಿಗೆ ಅವಳು ಉಳಿದವರ ಜೊತೆಯಲ್ಲಿದ್ದರೂ ಏಕಾಂಗಿನಿಯಾಗಿದ್ದಳು. ದುಃಖಿತೆಯಾಗಿದ್ದಳು. ಹಾಗೆಂದು ಅದನ್ನು ಬೇರೆಯವರಲ್ಲಿ ಹೇಳಿಕೊಳ್ಳುವಂತೆಯೂ ಇರಲಿಲ್ಲ.
ಮೀರಿದ ಹೊತ್ತಿನಲ್ಲಿ ಹೇಳಿ ಪ್ರಯೋಜನವಾದರೂ ಏನು?
ಹೀಗೆಲ್ಲ ಇರುವಾಗ ಒಂದು ಅನಿರೀಕ್ಷಿತ ವಿದ್ಯಮಾನ ಘಟಿಸಿತು.
***
(ಸಶೇಷ)






