ವಿಪಕ್ಷಗಳಿಗೂ ಹೊಣೆಗಾರಿಕೆಯಿದೆ

ಆರೋಗ್ಯಕರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಡಳಿತ ಪಕ್ಷದಷ್ಟೇ ಸಮರ್ಥವಾದ ವಿರೋಧಪಕ್ಷವೊಂದು ಇರುವುದು ಆವಶ್ಯಕ. ಇದು ಸಮರ್ಪಕವಾಗಿ ನಡೆಯಬೇಕಾದಲ್ಲಿ ಆಳುವ ಪಕ್ಷ, ವಿರೋಧಪಕ್ಷ – ಎರಡೂ ಹೊಣೆಗಾರಿಕೆಯಿಂದ ವರ್ತಿಸಬೇಕಾಗುತ್ತದೆ. ಅಧಿಕಾರಾರೂಢ ಪಕ್ಷಕ್ಕೆ ತಾನು ಇಡೀ ಪ್ರಜಾಸಮುದಾಯಕ್ಕೆ ಬಾಧ್ಯವೆಂಬ ಪ್ರಜ್ಞೆ ಇರಬೇಕಾಗುತ್ತದೆ; ವಿರೋಧಪಕ್ಷಕ್ಕೆ ತನ್ನ ಟೀಕೆಗಳು ಆಧಾರಸಹಿತವೂ ಜನಹಿತಸಾಧಕವೂ ಆಗಿರಬೇಕೆಂಬ ದೃಷ್ಟಿ ಇರಬೇಕಾಗುತ್ತದೆ. ಈ ಎರಡು ಅಂಗಗಳಲ್ಲಿ ಯಾವೊಂದು ‘ತಾಳ’ ತಪ್ಪಿದರೂ ಪ್ರಜಾಪ್ರಭುತ್ವರಥದ ಪಯಣ ಮುಗ್ಗರಿಸುತ್ತದೆ. ಸ್ವಾತಂತ್ರ್ಯ ಸಿದ್ಧಿಯ ಆರಂಭದ ವರ್ಷಗಳಲ್ಲಿ ಈ ರೀತಿಯ ಹೊಂದಾಣಿಕೆಯೂ ಸಮತೋಲನವೂ ಒಂದಷ್ಟುಮಟ್ಟಿಗೆ ಇದ್ದಿತು. ಈಗ ಅದು ಮಾಯವಾಗಿರುವುದು ವಿಷಾದಕರ. ಆಳುವ ಪಕ್ಷದಿಂದ ವಿರೋಧಪಕ್ಷವು ಹೊಣೆಗಾರಿಕೆಯನ್ನು ನಿರೀಕ್ಷಿಸಬೇಕಾದರೆ ತಾನೂ ಹೊಣೆಗಾರಿಕೆಯಿಂದ ವರ್ತಿಸಲೇಬೇಕಲ್ಲವೇ? ಕಳೆದ ಒಂದು ದಶಕದಲ್ಲಿ ಆಡಳಿತ ಮತ್ತು ವಿಪಕ್ಷಗಳು ಚರ್ಚೆ ನಡೆಸಿ ಮಸೂದೆಗಳನ್ನು ಅಂಗೀಕರಿಸಿದ ಉದಾಹರಣೆಗಳು ಅತ್ಯಲ್ಪ. ಅಧಿವೇಶನಗಳಲ್ಲಿ ಜವಾಬ್ದಾರಿಯುತ ಚರ್ಚೆಗೆ ಅನಾಸಕ್ತಿ ತೋರಿಸುತ್ತಾ, ಮಾಧ್ಯಮಗಳ ಮೂಲಕ ಬಿಟ್ಟಿ ಪ್ರಚಾರಕ್ಕೇ ಆದ್ಯತೆ ನೀಡುವುದರ ಔಚಿತ್ಯವೇನು? ಯಾವುದೇ ಅಭಿಪ್ರಾಯಭೇದಗಳ ಮಂಡನೆಗೆ ಸಂವಿಧಾನದಲ್ಲಿ ಹಲವು ಅವಕಾಶಗಳಿವೆ. ನಾವು ಶಿಷ್ಟತೆಗೆ ಬೆಲೆ ಕೊಟ್ಟಲ್ಲಿ ಮಾತ್ರ ರಾಜ್ಯಾಂಗ ಸಂರಚನೆಯಲ್ಲಿ ನಮ್ಮನ್ನು ಪಾಲಿಸುವ ಶಕ್ತಿಯು ಸಂಚಿತಗೊಂಡೀತು. ವಿವಿಧ ಪಕ್ಷಗಳ ಆತ್ಮಾವಲೋಕನ ನಡೆಯಲೆಂದು ಆಶಿಸೋಣ.

Facebook
X
WhatsApp
Print
Email
Leave A Reply