೧೯೭೦ರ ಸಮಯದಲ್ಲಿ ಚೀನಾವೊಂದು ಬಡ ರಾಷ್ಟ್ರ, ಅಲ್ಲಿ ಜನರು ಉಣ್ಣಲು ಕೂಳಿಲ್ಲದೆ ಸಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲಿಯ ಕೋಟ್ಯಾಂತರ ಜನರು ಕಡುಬಡತನದ ಬೇಗೆಯಿಂದ ಬಳಲುತ್ತಿದ್ದರು. ತಲಾ ಆದಾಯದ ಕುರಿತು ಯೋಚಿಸುವ ಅಗತ್ಯವೇ ಇಲ್ಲ, ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾಕ್ಕೆ ಆಗ ಕೊನೆಯ ಸ್ಥಾನ! ಹಳೆಯ ತಂತ್ರಜ್ಞಾನ, ಪಾಳುಬಿದ್ದ ಕಾರ್ಖಾನೆಗಳು, ಕೌಶಲರಹಿತ ಕಾರ್ಮಿಕವರ್ಗ, ಅತ್ಯಂತ ಕಳಪೆ ಉತ್ಪಾದನೆ; ಜರ್ಮನಿ, ಜಪಾನ್, ಅಮೆರಿಕ ಕಂಪೆನಿಗಳ ಕ್ವಾಲಿಟಿಯ ಜೊತೆ ಸ್ಪರ್ಧೆಯಲ್ಲಿ ಚೀನಾದ ಉತ್ಪನ್ನಗಳು ನಿಲ್ಲಬಹುದೇ ಎಂದು ಕೇಳಿದರೆ ನಗುವ ಪರಿಸ್ಥಿತಿ ಅಲ್ಲಿಯದು. ಐದು ದಶಕಗಳ ನಂತರ ಆ ದೇಶ ಹೇಗಾಗಿದೆ ನೋಡಿ – ತಿಂಗಳಿಗೊಂದು ಎಐ ಫ್ರಂಟಿರಿಯರ್ ಮಾಡೆಲ್ಗಳು ಬಿಡುಗಡೆಯಾಗುತ್ತಿವೆ; ಜಗತ್ತಿನಲ್ಲಿ ರಾಕೆಟ್ ಚಿಮ್ಮಿಸಿ ಪುನರ್ಬಳಕೆಗೆ ಕೆಳಗೆ ತರಬಲ್ಲ ತಂತ್ರಜ್ಞಾನ ಹೊಂದಿದ ಎರಡನೆಯ ದೇಶ; ಇ-ಕಾಮರ್ಸ್ ಅಂತೂ ಹಳೆಯ ವಿಷಯ; ಶಬ್ಧವೇಗಿ ಬುಲೆಟ್ ಟ್ರೇನ್ಗಳು; ವಿದ್ಯುತ್ ಮೇಲೆ ನಡೆಯುವ ಕಾರು ತಯಾರಿಕೆಯಲ್ಲಿ ನಂಬರ್ ಒನ್; ಪ್ರಯಾಣಿಕ ವಿಮಾನವನ್ನು ಕೂಡ ಸಿದ್ಧಪಡಿಸಿದ್ದಾರೆ; ಅಣ್ವಸ್ತ್ರ, ಸೋಲಾರ್, ವಿಂಡ್ ಎನರ್ಜಿ ಇವುಗಳಲ್ಲಿ ವಿಶ್ವದ ಅತೀ ದೊಡ್ಡ ಎಕನಾಮಿ ಅಮೆರಿಕಾಕ್ಕಿಂತ ಒಂದೆರಡು ಹೆಜ್ಜೆಯಲ್ಲ ಮೈಲಿ ದೂರ ಮುಂದೆ; ಎಐಯನ್ನು ಕಾರ್ಯರೂಪಕ್ಕೆ ತರುವುದು ಅವರ ಎಡಗೈ ಕೆಲಸವಾಗಿದೆ, ರೋಬಾಟಿಕ್ಸ್ನಲ್ಲಿ ಏಕಮೇವಾದ್ವೀತಿಯರು! ’ಪ್ರತಿಯೊಬ್ಬ ರೈತನೂ ಕೂಡ ಎಐ ಬಳಸಿ ಕೃಷಿ ಮಾಡಬೇಕು, ಸಣ್ಣ ಅಂಗಡಿಯವನೂ ಕೂಡ ಎಐ ಮೂಲಕ ವಸ್ತುಗಳನ್ನು ಕೊಂಡು ಮಾರಬೇಕು, ಜನರು ಉಣ್ಣುವ ಅಕ್ಕಿಯ ಕಾಳು-ಕಾಳು ಕೂಡ ಡಿಜಿಟಲ್ ದಾರದಲ್ಲಿ ಬೆಸೆದಿರಬೇಕು’ ಎನ್ನುವುದು ಆ ದೇಶದಲ್ಲಿ ಪ್ರತಿಯೊಬ್ಬರ ಕನಸು; ಅದನ್ನು ಜನರ ಮನದಲ್ಲಿ ಅರಳಸಿದ್ದೇ ಅಲ್ಲಿಯ ನಾಯಕರು. ಹೀಗಾಗಿ ಸೆಮಿಕಂಡಕ್ಟರ್, ಡಿಫೆನ್ಸ್, ಏರೋಸ್ಪೇಸ್ ಮೊದಲಾದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಮೆರಿಕ ಎಷ್ಟೊಂದು ನಿರ್ಬಂಧಗಳನ್ನು ಹೇರಿದ್ದರೂ ಕೂಡ ಅವರ ಬೆಳವಣಿಗೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇಂದು ಯಾವುದೇ ಸಂಶಯವಿಲ್ಲದೆ ಹೇಳಬಹುದು – ಚೀನಾವು ಈ ವಿಶ್ವದ ಕೃತಕ ಬುದ್ಧಿಮತ್ತೆಯ ಸೂಪರ್ಪವರ್ ಆಗಿದೆ.
ಚೀನಾದ ಬೆಳವಣಿಗೆಯ ಹಾದಿಯು ಒಂದು ದೊಡ್ಡ ತಿರುವನ್ನು ಕಂಡಿದ್ದು ೧೯೭೮ರ ಡಿಸೆಂಬರ್ನಲ್ಲಿ. ಆಗಿನ ಚೀನಾದ ಅಧ್ಯಕ್ಷ ಡೆಂಗ್ ಷಿಯಾವೋಪಿಂಗ್ ಅವರು ತಂದ ’ರೀಫೊರ್ಮ್ ಆಂಡ್ ಓಪನ್ ಅಪ್’ ನೀತಿಯು ಇಡೀ ದೇಶದ ಆರ್ಥಿಕ ನಕ್ಷೆಯನ್ನು ಬದಲಾಯಿಸಿತು. ೧೯೮೦ರಿಂದ ೨೦೧೦ರ ವರೆಗೆ ಚೀನಾದ ಜಿಡಿಪಿ ಸತತವಾಗಿ ಸರಿಸುಮಾರು ಎರಡಂಕೆಯ ಬೆಳವಣಿಗೆಯನ್ನು ಕಂಡಿದೆ. ಆ ಸಮಯದಲ್ಲಿ ಚೀನಾದ ಸುಮಾರು ಎಂಬತ್ತು ಕೋಟಿ ಜನರು ಬಡತನದ ರೇಖೆಯ ಮೇಲೆ ಬಂದಿದ್ದು ಇತಿಹಾಸದಲ್ಲಿ ಒಂದು ದಾಖಲೆ! ಒಂದು ಕಾಲದಲ್ಲಿ ಚೀನಾದ ಗ್ರಾಮೀಣ ಪ್ರದೇಶದ ೯೭% ಜನರು ಕಡುಬಡತನದ ರೇಖೆಯ ಕೆಳಗಿದ್ದರು, ಅದೇ ೨೦೨೦ರ ಹೊತ್ತಿಗೆ ಚೀನಾದಲ್ಲಿ ಬಡತನದ ರೇಖೆಯ ಕೆಳಗೆ ಇದ್ದವರ ಸಂಖ್ಯೆ ಎಷ್ಟು ಗೊತ್ತೆ? ಶೂನ್ಯ! ಇಂದು ಚೀನಾ ಜಗತ್ತಿನ ಎರಡನೆಯ ದೊಡ್ಡ ಎಕಾನಮಿ; ಅದರ ಜಿಡಿಪಿ ಹತ್ತು ಟ್ರಿಲಿಯನ್ ಡಾಲರ್ಗಳನ್ನು ಮೀರಿಸಿದೆ. ಇದರರ್ಥ ಅಲ್ಲಿಯವರ ನರನರವೂ ಅಭಿವೃದ್ಧಿಯ ರಕ್ತಕಣಗಳಿಂದ ತುಂಬಿ ಹರಿಯುತ್ತಿದೆ. ಚೈನಾ ಅಷ್ಟೊಂದು ದೊಡ್ಡ ಎಕನಾಮಿಯಾಗಿದ್ದು ಕೇವಲ ಬಟ್ಟೆ ಮತ್ತು ಆಟದ ಸಾಮಾನುಗಳನ್ನು ರಫ್ತು ಮಾಡಿ ಅಲ್ಲ; ಚೀನಾ ಇಡೀ ಜಗತ್ತಿನ ತಯಾರಿಕಾ ಕೇಂದ್ರ! ಮೊದಲು ಯೂರೋಪ್, ಅಮೆರಿಕ, ಜಪಾನ್ಗಳಲ್ಲಿ ತಯಾರಾಗುತ್ತಿದ್ದ ಹೈಟೆಕ್ ಯಂತ್ರೋಪಕರಣಗಳು ಈಗ ಚೀನಾದಲ್ಲಿ ತಯಾರಾಗುತ್ತಿವೆ. ಈ ಭೂಮಿಯ ಯಾವುದೇ ಮೂಲೆಯಿರಲಿ ಅಲ್ಲಿ ಬ್ಯಾಟರಿ ತಯಾರಾಗಬೇಕು ಅಂದರೆ ಅದಕ್ಕೆ ಬೇಕಾಗುವ ೯೯% ಮೂಲಸಾಮಗ್ರಿಗಳು ಚೀನಾದಿಂದಲೇ ಬರಬೇಕು. ಆ ರಾಷ್ಟ್ರವೀಗ ರೈಲು, ವಿಮಾನ, ಕಾರು, ಕಂಪ್ಯೂಟರ್, ಇಲೆಕ್ಟ್ರಾನಿಕ್ ಉಪಕರಣಗಳು, ಔಷಧ, ಅದು, ಇದು, ಎಲ್ಲವನ್ನೂ ತಯಾರಿಸಿ ಜಗತ್ತಿನಾದ್ಯಂತ ರಫ್ತುಮಾಡುತ್ತದೆ. ಅವರ ಎಕನಾಮಿಯ ಮೂಲವಾಹಿನಿಯೇ ರಫ್ತು! ಅದೂ ಕ್ವಾಲಿಟಿ ಪ್ರಾಡಕ್ಟ್ಗಳು; ಚಲೇತೋ ಚಾಂದ್ ತಕ್, ನಹೀ ತೋ ಶ್ಯಾಮ್ ತಕ್ (ಓಡಿದರೆ ಚಂದ್ರನ ತನಕ, ಇಲ್ಲವಾದರೆ ಸಂಜೆಯ ತನಕ) ಎನ್ನುವ ಕಳಪೆ ವಸ್ತುಗಳ ಸರಬರಾಜಿನ ದಿನಗಳಿಂದ ಚೀನಾದ ಕಂಪೆನಿಗಳು ಬಹುದೂರ ಸಾಗಿ ಬಂದಿವೆ. ಚೀನಾದ ನಗರಗಳ ವಿನ್ಯಾಸ ಜಗತ್ತಿನ ಯಾವುದೇ ಅತ್ಯಾಧುನಿಕ ನಗರಕ್ಕಿಂತ ಐವತ್ತು ವರ್ಷಗಳಷ್ಟು ಮುಂದಿದೆ ಎಂದು ಅಲ್ಲಿಗೆ ಇತ್ತೀಚೆಗಷ್ಟೇ ಕೆಲಸದ ನಿಮಿತ್ತ ಹೋಗಿಬಂದವರು ಹೇಳಿದ ಮಾತು. ರೋಮ್ ವಾಸ್ ನಾಟ್ ಬಿಲ್ಟ್ ಇನ್ ಅ ಡೇ ಎನ್ನುವ ಮಾತಿದೆಯಲ್ಲ ಹಾಗೆಯೇ ಈ ಹೈಟೆಕ್ ಚೀನಾ ಒಂದೇ ದಿನದಲ್ಲಿ ನಿರ್ಮಾಣವಾಗಿದ್ದಲ್ಲ; ಇದೆಲ್ಲ ಸಾಧ್ಯವಾಗಿದ್ದು ಅಲ್ಲಿಯ ಸರ್ಕಾರ ನಿರಂತರವಾಗಿ ಶಿಕ್ಷಣ, ಸಂಶೋಧನೆ ಹಾಗೂ ಕೈಗಾರಿಕೆಗಳ ಬೆಳವಣಿಗೆಗೆ ತೀವ್ರವಾದ ಆಸಕ್ತಿ ಹಾಗೂ ಒತ್ತು ನೀಡಿದ್ದು ಒಂದು ಕಾರಣವಾದರೆ; ದಶಕ ದಶಕಗಳ ಕಾಲ ಅಲ್ಲಿಯ ಜನರು ಹಗಲು ರಾತ್ರಿಯೆನ್ನದೆ ಬೆವರು ಸುರಿಸಿ ದುಡಿದಿದ್ದು ಇನ್ನೊಂದು!
ಕೇವಲ ಕೈಗಾರಿಕೆ, ಉದ್ಯೋಗ, ಎಕಾನಮಿ ಅಷ್ಟೇ ಅಲ್ಲ, ಚೀನಾವು ಸರ್ವಾಂಗೀಣ ದೃಷ್ಟಿಯಿಂದ ಬೆಳೆಯುತ್ತಿರುವ ರಾಷ್ಟ್ರ. ಕ್ರೀಡೆ, ಸಂಸ್ಕೃತಿ, ತಂತ್ರಜ್ಞಾನ, ವಿಜ್ಞಾನ ಎಲ್ಲವೂ ಅಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ ಆದರೆ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಒತ್ತು ಕೊಂಚ ಹೆಚ್ಚು. ಚೀನಾವು ಕಳೆದ ಐದು ದಶಕಗಳಿಂದ ಹಂತಹಂತವಾಗಿ ಶಿಕ್ಷಣ ವ್ಯವಸ್ಥೆಯನ್ನು ಬಲಗೊಳಿಸುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ಥಿಯರಿಯ ಜೊತೆ ಪ್ರಯೋಗಗಳಿಗೂ ಆದ್ಯತೆ ಹೆಚ್ಚು. ಶಿಕ್ಷಣ ಪರಿಸರದಲ್ಲಿ ’ಸ್ಟೆಮ್’ (ಸೈನ್ಸ್, ಟೆಕ್ನಾಲಜಿ, ಇಂಜಿನಿಯರಿಂಗ್ ಹಾಗೂ ಮೆಥೆಮೆಟಿಕ್ಸ್)ದು ಪ್ರಮುಖ ಪಾತ್ರ. ಪ್ರತಿವರ್ಷವೂ ಲಕ್ಷಾಂತರ ವಿದ್ಯಾರ್ಥಿಗಳು ಸ್ಟೆಮ್ ರಂಗದಿಂದ ಹೊರಗಡೆ ಬರುತ್ತಾರೆ, ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಸಿದ್ಧತೆಯ ಜೊತೆ. ಹೀಗಾಗಿ ಅವರಿಗೆ ಎಂದೂ ಕೌಶಲದ ಕೊರತೆ ಎದುರಾಗಿಲ್ಲ. ನೂರು, ಇನ್ನೂರು ಬಿಲಿಯನ್ ಡಾಲರ್ಗಳಲ್ಲಿ ಇರುತ್ತಿದ್ದ ಶೈಕ್ಷಣಿಕ ಬಜೆಟ್ ಕೆಲವು ವರ್ಷಗಳಿಂದ ಅಲ್ಲಿಯ ಜಿಡಿಪಿಯ ೨-೩%ಗೆ ತಲಪಿದೆ. ಅಷ್ಟೇ ಅಲ್ಲ ಜನರ ವಲಸೆಯೂ ಅಲ್ಲಿ ಸುಲಭ; ಸಾವಿರಾರು ಮೈಲಿ ದೂರದವರೆಗೆ ಹಬ್ಬಿಕೊಂಡಿರುವ ರೈಲ್ವೆ ಸಂಪರ್ಕ ವ್ಯವಸ್ಥೆ; ಇಂಡಸ್ಟ್ರಿಯ ಸುತ್ತ ಸುಸಜ್ಜಿತ ಟೌನ್ಶಿಪ್ಗಳು ಜನರ ಓಡಾಟಕ್ಕೆ, ಜೀವನಕ್ಕೆ ತುಂಬಾ ಅನುಕೂಲಕರ. ಇವೆಲ್ಲ ಇಂದೋ, ನಿನ್ನೆಯೋ ರೂಪಗೊಂಡಿದ್ದಲ್ಲ; ದಶಕಗಳ ಯೋಜನೆಯ ಫಲ! ಚೀನಾವನ್ನು ಇಷ್ಟೊಂದು ಮುಂದೆ ತರುವುದಕ್ಕೆ ಅವರಲ್ಲಿಯ ಜಗತ್ತಿನ ಅತೀ ಹೆಚ್ಚು ಸಾಂದ್ರತೆಯುಳ್ಳ ಇಂಡಸ್ಟ್ರಿ ಕ್ಲಸ್ಟರ್ಗಳು ಮುಖ್ಯ ಕಾರಣ; ಇದು ಅವರಿಗೆ ದರದಲ್ಲಿ ಯಾವ ದೇಶವೂ ಸ್ಪರ್ಧೆಗೆ ನಿಲ್ಲದಂತೆ ನೋಡಿಕೊಂಡಿದೆ. ಟೆಲಿಕಾಂ ವಿಷಯದಲ್ಲಿ ಅವರ ವೇಗವೇ ಬೇರೆ. ಈಗಾಗಲೇ ಲಕ್ಷಾನುಗಟ್ಟಲೆ ೫ಜಿ ಸ್ಟೇಷನ್ಗಳು ತಲೆಯೆತ್ತಿವೆ; ೬ಜಿ ಪರೀಕ್ಷೆಯೂ ಮುಗಿದಿದೆ. ಇವೆಲ್ಲವೂ ಚೀನಾವನ್ನು ಭವಿಷ್ಯದ ಎಐ ಯುಗಕ್ಕೆ ರೆಡಿ ಮಾಡಿವೆ. ಚೀನಾ ಎಐ ಸ್ಪರ್ಧೆಯಲ್ಲಿ ಅಮೆರಿಕವನ್ನು ಕೂಡ ಹಿಂದಕ್ಕೆ ತಳ್ಳುವಷ್ಟು ಮುಂದೆ ಬಂದು ತೊಡೆ ತಟ್ಟಿ ನಿಂತಿದೆ!
ಎಐ ಯುದ್ಧದಲ್ಲಿ ಚೀನಾದ ಬ್ರಹ್ಮಾಸ್ತ್ರ – ಡೀಪ್ಸೀಕ್
ಡೀಪ್ಸೀಕ್ ಎನ್ನುವುದು ನಿನ್ನೆ ಮೊನ್ನೆಯ ತನಕ ಚೀನಾದ ಅಜ್ಞಾತ ಕಂಪೆನಿಯಾಗಿತ್ತು. ಇತ್ತೀಚೆಗೆ ಅದು ಬಿಡುಗಡೆ ಮಾಡಿದ ಎಐ ಸಾಫ್ಟ್ವೇರ್ಗಳು ಅದನ್ನು ಜಗತ್ತಿನ ನಕಾಶೆಯಲ್ಲಿ ಮಿನುಗುವಂತೆ ಮಾಡಿದೆ. ಡೀಪ್ಸೀಕ್ ಎಐ ಚಾಟ್ಬಾಟ್ ಪ್ರಭಾವವು ಹೇಗಿತ್ತೆಂದರೆ ಒಂದು ಕ್ಷಣ ಜಗತ್ತಿನ ಬಹುತೇಕ ಷೇರು ಮಾರುಕಟ್ಟೆಗಳು ನಿಂತಲ್ಲೇ ನಡುಗಿಬಿಟ್ಟವು! ಎಐ ಕ್ಷೇತ್ರದಲ್ಲಿ ತಾನೇ ದೊಡ್ಡಣ್ಣ ಎಂದುಕೊಂಡಿದ್ದ ಓಪನ್ ಎಐ, ಗೂಗಲ್, ಮೆಟಾಗಳೆಲ್ಲ ಒಮ್ಮೆಲೆ ಕಂಗಾಲು! ಮೊದಲ ಆವೃತ್ತಿಯಲ್ಲಿ ಡೀಪ್ಸೀಕ್ ಕಂಪೆನಿಯು ಮೂರು ಬಗೆಯ ಸಾಫ್ಟ್ವೇರ್ ಬಿಡುಗಡೆ ಮಾಡಿತ್ತು; ಡೀಪ್ಸೀಕ್ ವಿ, ಡೀಪ್ಸೀಕ್ ಆರ್ ಹಾಗೂ ಡೀಪ್ಸೀಕ್ ಕೋಡರ್. ಚಾಟ್ಜಿಪಿಟಿಯನ್ನು ಬಳಸಿದ ರೀತಿಯಲ್ಲಿಯೇ ಇದನ್ನೂ ಬಳಸಬಹುದು, ಅದಕ್ಕಿಂತಲೂ ಕೆಲವೊಂದು ವಿಷಯದಲ್ಲಿ ಇದು ಉತ್ತಮವಾಗಿದೆ ಎಂದರೆ ತಪ್ಪಾಗದು. ಡೀಪ್ಸೀಕ್ ಪ್ರಾಬಲ್ಯವನ್ನು ನೋಡಿ ಜೆನ್ಎಐ ಜಗತ್ತಿನ ದಿಗ್ಗಜರುಗಳಾದ ಓಪನ್ ಎಐ ಸಿಇಓ ಸ್ಯಾಮ್ ಅಲ್ಟ್ಮ್ಯಾನ್, ಪರ್ಪ್ಲೆಕ್ಸಿಟಿ ಎಐ ಸಿಇಓ ಅರವಿಂದ್ ಶ್ರೀನಿವಾಸ್ ಮೊದಲಾದವರು ಶ್ಲಾಘಿಸಿದ್ದರು. ಅವರು ತಯಾರಿಸಿದ ತರಹದ್ದೇ ಇನ್ನೊಂದು ಉತ್ಪನ್ನವನ್ನು ಚೀನಾದ ವಿಜ್ಞಾನಿಗಳು ೯೫% ಕಡಮೆ ವೆಚ್ಚದಲ್ಲಿ ಸೃಷ್ಟಿಸಿದ್ದನ್ನು ನೋಡಿ ಅಮೆರಿಕದ ಕಂಪ್ಯೂಟರ್ ವಿಜ್ಞಾನಿಗಳಿಗೆ ಜೀರ್ಣಿಸಿಕೊಳ್ಳುವುದೂ ಕಷ್ಟವಾಗಿತ್ತು, ಆಗುತ್ತಿದೆ! ಅತ್ಯಂತ ಕಡಮೆ ಸಮಯದಲ್ಲಿ ಅಮೆರಿಕದ ಆಪ್ ಸ್ಟೋರ್ಸ್ನಲ್ಲಿ ಚಾಟ್ಜಿಪಿಟಿಯನ್ನು ಹಿಂದಕ್ಕೆ ತಳ್ಳಿ ಮೊದಲನೆಯ ಸ್ಥಾನ ಪಡೆದ ಹೆಗ್ಗಳಿಕೆ ಡೀಪ್ಸೀಕ್ ಎಐನದ್ದು. ಇಷ್ಟು ದಿನ ಎಐ ಯಾಗದಲ್ಲಿ ಓಡುತ್ತಿದ್ದ ಚಾಟ್ಜಿಪಿಟಿಯ ಅಶ್ವವನ್ನು ಹಿಡಿದು ನಿಲ್ಲಿಸುವವರು ಯಾರು ಎಂದು ಕೇಳಿದರೆ ಉತ್ತರವೇ ಇರಲಿಲ್ಲ, ಅದರ ಹತ್ತಿರ ಹೋಗುವ ಧೈರ್ಯವೂ ಇರಲಿಲ್ಲ. ಆದರೆ ಡೀಪ್ಸೀಕ್ ಅಮೆರಿಕದ ಎಐ ಅಶ್ವಮೇಧ ಯಾಗದ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಿಬಿಟ್ಟಿದ್ದು ಜಗತ್ತಿಗೇ ಅಚ್ಚರಿ! ಡೀಪ್ಸೀಕ್ ಅವರ ಇತ್ತೀಚಿನ ಆವೃತ್ತಿಯ ಮಾದರಿಗಳು ಹೊಸ ಓಪನ್ ಎಐ, ಅಂಥ್ರಾಪಿಕ್ಗಳ ಉತ್ಪನ್ನಗಳಿಗಿಂತ ಉನ್ನತ ಮಟ್ಟದಲ್ಲಿವೆ ಎನ್ನುವ ಮಾಹಿತಿಗಳಿವೆ!

ಎಐ ಕುರಿತ ಕೆಲವು ವಿಶೇಷ ಮಾಹಿತಿಗಳು:
೧. ಫ್ರಾಂಟಿಯರ್ ಮಾಡೆಲ್ಗಳು – ಚೀನಾ: ೩೫, ಅಮೆರಿಕ: ೫೯
೨. ಟಾಪ್ ಮಾಡೆಲ್ ಪರ್ಫಾರ್ಮೆನ್ಸ್ – ಚೀನಾ: ೧೦೦%, ಅಮೆರಿಕ: ೧೦೩%
೩. ಡಾಟಾ ಸೆಂಟರ್ – ಚೀನಾ: ೪೪೯, ಅಮೆರಿಕ: ೫೪೨೯
೪. ಎಐ ಕಂಪೆನಿಗಳು – ಚೀನಾ: ೬೦೦೦+, ಅಮೆರಿಕ: ನಿಖರವಾದ ಮಾಹಿತಿ ಲಭ್ಯವಿಲ್ಲ, ಆದರೆ ಚೀನಾಕ್ಕಿಂತ ಕಡಮೆ.
೫. ಹೊಸ ತಲೆಮಾರಿನ ಎಐ ಕಂಪೆನಿಗಳು – ಚೀನಾ: ಸರಿಯಾದ ಮಾಹಿತಿಯಿಲ್ಲ, ಅಮೆರಿಕ: ೨೦೦೦+
೬. ಸೃಷ್ಟಿಶೀಲ ಕೃತಕ ಬುದ್ಧಿಮತ್ತೆ ಬಳಕೆದಾರರು – ಚೀನಾ: ೬೦೨ ದಶಲಕ್ಷ, ಅಮೆರಿಕ: ಸರಿಯಾದ ಲೆಕ್ಕದ ಲಭ್ಯವಿಲ್ಲ.
೭. ಜೆನ್-ಎಐ ವ್ಯಾಪ್ತಿ – ಚೀನಾ: ೪೨.೫% ಅಂತರ್ಜಾಲ ಬಳಕೆದಾರರು, ಅಮೆರಿಕ: ೨೮.೩% ಜನಸಂಖ್ಯೆ
೮. ಇಂಡಸ್ಟ್ರಿಯಲ್ ರೋಬಾಟ್ ಬಳಕೆ – ಚೀನಾ:x, ಅಮೆರಿಕ: ೯x
೯. ಎಐ ಪ್ರಕಟಣೆ – ಚೀನಾ: #೧, ಅಮೆರಿಕ: #೨
೧೦. ಎಐ ಪೇಟೆಂಟ್ – ಚೀನಾ: #೧, ಅಮೆರಿಕ: #೨
ಸ್ಪುಟ್ನಿಕ್ ಮೂಮೆಂಟ್?
ಚೀನಾದ ಈ ಹೊಸ ಅಸ್ತ್ರದ ಆಗಮನದಿಂದ ಹಾಗೂ ಅದರ ಜೊತೆಗೆ ಇನ್ನೂ ಹಲವು ಮಾದರಿಗಳು ಪೈಪೋಟಿಗೆ ನಿಂತಾಗಿನಿಂದ ಸೃಷ್ಟಿಶೀಲ ಕೃತಕ ಬುದ್ಧಿಮತ್ತೆಯ ಓಟಕ್ಕೆ ಇನ್ನೂ ಹೆಚ್ಚು ರಂಗು ಬಂದಂತಾಗಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಓಪನ್ ಎಐ, ಅಂಥ್ರಾಪಿಕ್, ಫೇಸ್ಬುಕ್ ಹಾಗೂ ಗೂಗಲ್ ತಮ್ಮದೇ ಆದ ಎಲ್ಎಲ್ಎಮ್ (ಲಾರ್ಜ್ ಲಾಂಗ್ವೇಜ್ ಮಾಡೆಲ್) ತಯಾರಿಸಲು ಬಿಲಿಯನ್ ಗಟ್ಟಲೆ ಹಣ ಸುರಿದಿದ್ದವು. ಜಗತ್ತಿನ ಮೂಲೆಮೂಲೆಗೆ ಹೋಗಿ ಅಲ್ಲಿದ್ದ ಅಂತರ್ಜಾಲ ಪುಟಗಳನ್ನು ಓದಿ ತಮ್ಮ ಮಾದರಿಗೆ ತರಬೇತಿ ಕೊಟ್ಟವು. ಇದರ ಪರಿಣಾಮವೇ ಚಾಟ್-ಜಿಪಿಟಿ, ಲಾಮಾ ಹಾಗೂ ಗೂಗಲ್ ಜೆಮಿನಿ. ಇದರಲ್ಲಿ ಹೊಸದಾಗಿ ಪ್ರವೇಶ ನೀಡಿದ್ದು ಅಂಥ್ರಾಪಿಕ್. ಈ ಸೃಷ್ಟಿಶೀಲ ಕೃತಕ ಬುದ್ಧಿಮತ್ತೆ ತಯಾರಿಸಲು ಅತ್ಯಾಧುನಿಕ ಜಿಪಿಯು, ತುಂಬಾ ದುಬಾರಿ ಸೂಪರ್ ಕಂಪ್ಯೂಟರ್ (ಡಾಟಾ ಸೆಂಟರ್) ಬೇಕು ಎನ್ನಲಾಗುತ್ತಿತ್ತು. ಇದರಿಂದಾಗಿಯೇ ಎನ್ವಿಡಿಯಾ ಕಂಪೆನಿಯ ಷೇರಿನ ಬೆಲೆ ರಾಕೆಟ್ ಮೇಲೆ ಹತ್ತಿ ಜಿಗಿದು ಕಣ್ಣುಮುಚ್ಚಿ ತೆಗೆಯುವುದರೊಳಗೆ ಅದು ಎರಡು ಟ್ರಿಲಿಯನ್ ಡಾಲರ್ ಕಂಪೆನಿಯಾಗಿದ್ದು. ಈಗ ಅದರ ಮೌಲ್ಯವು ಭಾರತದ ಎಕನಾಮಿ ಅಂದರೆ ೫ ಟ್ರಿಲಿಯನ್ ಡಾಲರ್ಗಳಿಗೆ ತಲಪಿದೆ. ಇವೆಲ್ಲ ಇನ್ನು ಮುಂದೇ ತಾವೇ ಎಐ ಸಾಮ್ರಾಜ್ಯದ ಶೇನ್ಶಾಹ ಎಂದು ತಮ್ಮನ್ನೆ ತಾವು ಘೋಷಿಸಿಕೊಂಡಿದ್ದವು. ಆದರೆ ಈ ಚೈನೀಸ್ ಸಾಫ್ಟ್ವೇರ್ ಪರಿಣಿತರು ಚಾಟ್ಜಿಪಿಟಿ, ಲಾಮಾ ಎಐ ಮಾದರಿಗಳನ್ನು ಬಳಸಿಕೊಂಡು ತಮ್ಮದೇ ಆದ ರೀತಿಯಲ್ಲಿ ಹೊಸಬಗೆಯ ಕೃತಕ ಬುದ್ಧಿಮತ್ತೆಯ ಆವಿಷ್ಕಾರ ಮಾಡಿದ್ದಾರೆ; ನೋಡುನೋಡುತ್ತಿದ್ದಂತೆ ಅವೆಲ್ಲದರಕ್ಕಿಂತ ಉತ್ಕೃಷ್ಟ ದರ್ಜೆಯ, ಹೆಚ್ಚು ಪರಿಣಾಮಕಾರಿಯಾದ, ಕಡಮೆ ವೆಚ್ಚದ, ಸುಸ್ಥಿರತೆಯ ಎಲ್ಎಲ್ಎಮ್ನ್ನು ತಯಾರಾಗಿಬಿಟ್ಟಿದೆ. ’ನಮ್ಮ ಕಂಪೆನಿಯಲ್ಲಿ ಒಬ್ಬ ಉನ್ನತ ಮಟ್ಟದ ಉದ್ಯೋಗಿಗೆ ಕೊಡುವ ಆದಾಯದಲ್ಲಿ ಇವರು ಚಾಟ್ಜಿಪಿಟಿಯಂತಹ ಚಾಟ್ಬಾಟ್ ತಯಾರಿಸಬೇಕಾದರೆ ಅಷ್ಟೊಂದು ಆದಾಯಕ್ಕೆ ನ್ಯಾಯ ಒದಗಿಸಿಕೊಡುವುದು ಹೇಗೆ?’ ಎಂಬುದು ಡೀಪ್ಸೀಕ್ ಆಪ್ ಹೊರಗಡೆಗೆ ಬಂದಾಗ ಮೆಟಾ ಕಂಪನಿಯೊಳಗೆ ಆದ ಗುಸುಗುಸು ಚರ್ಚೆ!
ಅಮೆರಿಕವು ಕಳೆದ ನಾಲ್ಕೈದು ವರ್ಷಗಳಿಂದ ಚೀನಾಕ್ಕೆ ಅತ್ಯಾಧುನಿಕ ಜಿಪಿಯುವನ್ನು ಆಮದು ಮಾಡಿಕೊಡಲು ಬಿಡದೆ ಅದರ ಮೇಲೆ ಚಿಪ್ ಹೇರಿಕೆಯನ್ನು ಹಾಕುತ್ತಲೇ ಇದೆ. ಆದರೆ ಚೀನಾ ಕೈಕಟ್ಟಿ ಕುಳಿತಿಲ್ಲ. ಕಡಮೆ ಪ್ರಾಬಲ್ಯದ ಜಿಪಿಯುವಿನಲ್ಲೇ ಹೇಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬೆಳೆಸಬಹುದು ಎಂಬ ಸಂಶೋಧನೆ ನಡೆಸುತ್ತಿದೆ. ಇಂದು ಡೀಪ್ಸೀಕ್ನಲ್ಲಿ ಬಳಸಿರುವುದು ಅಂತಹುದೇ ಒಂದು ಹೊಸಬಗೆಯ ಗಣಕ ತಂತ್ರಜ್ಞಾನ; ಅದನ್ನು ರಿ-ಇನ್ಫೋರ್ಸ್ಡ್ ಲರ್ನಿಂಗ್ ಎನ್ನುತ್ತಾರೆ. ಹಾಗೆಯೇ ಅವರು ಬಳಸಿದ್ದು ಪಾರಂಪರಿಕವಾದ ಎಲ್ಎಲ್ಎಮ್ ಅಲ್ಲ ಬದಲಾಗಿ ಮಿಕ್ಸರ್ ಆಫ್ ಎಕ್ಸ್ಫರ್ಟ್ಸ್(ಎಮ್ಒಇ) ಎಲ್ಎಲ್ಎಮ್. ಹೊಸ ಆವಿಷ್ಕಾರವೇನೂ ಇರದೇ ಹೋದರೂ ಇರುವ ತಂತ್ರಜ್ಞಾನವನ್ನೇ, ಈಗಾಗಲೇ ಜನರು ತಯಾರಿಸಿಟ್ಟ ಓಪನ್ ಸೋರ್ಸ್ ಕೋಡ್, ಎಲ್ಎಲ್ಎಮ್ಗಳನ್ನೇ ಬಳಸಿ ಒಂದು ಅತ್ಯಂತ ದಕ್ಷ ಸಾಫ್ಟ್ವೇರ್ ತಯಾರಿಸಿದ್ದು ಇಡೀ ಜಗತ್ತೇ ಮೆಚ್ಚುವಂತಹ ಕೆಲಸವಾಗಿದೆ. ಹೀಗಾಗಿ ಇದನ್ನು ಡೊನಾಲ್ಡ್ ಟ್ರಂಪ್ ಅವರಿಗೆ ಸಲಹೆಗಾರರಾಗಿರುವ ಮಾರ್ಕ್ ಆಂಡರ್ಸನ್ ’ಎಐ ಕ್ಷೇತ್ರದ ಸ್ಪುಟ್ನಿಕ್ ಮೂಮೆಂಟ್’ ಎಂದಿದ್ದಾರೆ.

ಡೀಪ್ಸೀಕ್ ಕಂಪೆನಿಯ ಹುಟ್ಟಿದ್ದು ಹೇಗೆ?
ಡೀಪ್ಸೀಕ್ ಎನ್ನುವುದು ಇಷ್ಟು ದಿನ ಯಾರಿಗೂ ಗೊತ್ತಿರದ, ಚೀನಾದಲ್ಲಿನ ಹ್ವಾಂಗ್ಜಾವ್ನಲ್ಲಿರುವ ಒಂದು ಸಣ್ಣ ಸ್ಟಾರ್ಟ್ಅಪ್. ಇದರ ಸಂಸ್ಥಾಪಕ ನಲವತ್ತು ವರ್ಷದ ತರುಣ ಲಿಯಾನ್ ವೆನ್ಫೆಂಗ್. ಮೂಲತಃ ಇಲೆಕ್ಟ್ರಾನಿಕ್ಸ್ ಇಂಜಿನಿಯರ್. ಲಿಯಾನ್ಗೆ ಯಾವುದೇ ಬ್ಯುಸಿನೆಸ್ ಮನೆತನದ ಹಿನ್ನಲೆಯಿಲ್ಲ. ತಂದೆ-ತಾಯಿ ಇಬ್ಬರೂ ಪ್ರಾಥಮಿಕ ಶಾಲೆಯ ಶಿಕ್ಷಕರು. ತನ್ನ ಮೂವತ್ತನೆಯ ವಯಸ್ಸಿನಲ್ಲಿಯೇ ಗೆಳೆಯರನ್ನು ಸೇರಿಸಿ ಹೈ-ಫೈಯರ್ ಕ್ವಾಂಟ್ ಎನ್ನುವ ಹೆಜ್ ಫಂಡ್ ಶುರುಮಾಡಿದ್ದರು. ಶುರುವಾದ ಕೆಲವೇ ವರ್ಷಗಳಲ್ಲಿ ಹದಿನೈದು ಬಿಲಿಯನ್ ಡಾಲರ್ಗಳಷ್ಟು ಹಣವನ್ನು ಕೂಡಿಸಿ ಚೀನಾದಲ್ಲಿ ಈ ಕ್ವಾಂಟ್ ಫಂಡ್ ಮನೆಮಾತಾಗಿತ್ತು. ಇತ್ತೀಚೆಗೆ ಚೀನಾದ ನಾಯಕರ ಜೊತೆಗೂ ಕಾಣಿಸಿಕೊಂಡಿದ್ದರು ಲಿಯಾನ್! ಇಂದು ಇದೇ ಸಂಸ್ಥೆ ಡೀಪ್ಸೀಕ್ಗೆ ಫಂಡಿಂಗ್ ಮಾಡುತ್ತಿದೆ. ಅವರು ತಮ್ಮ ಫಂಡಿನ ಹಣಕಾಸಿನ ವಿಶ್ಲೇಷಣೆಗೆಂದು ಸಾವಕಾಶವಾಗಿ ಒಂದೊಂದೇ ಎನ್ವಿಡಿಯಾ ಚಿಪ್ ಖರೀದಿಸಿ ಒಂದು ಸೂಪರ್ ಕಂಪ್ಯೂಟರ್ ತಯಾರಿಸಿದ್ದರಂತೆ. ೨೦೨೩ರಲ್ಲಿ ಅದಕ್ಕೆ ಇನ್ನಷ್ಟು ಜಿಪಿಯುಗಳನ್ನು ಸೇರಿಸಿ ಕೃತಕ ಬುದ್ಧಿಮತ್ತೆಯ ಮೇಲೆ ಸಂಶೋಧನೆ ನಡೆಸಲು ಪ್ರಾರಂಭಿಸಿದ್ದರು. ಹೀಗೆ ಹುಟ್ಟಿದ್ದು ಈ ಡೀಪ್ಸೀಕ್ ಎನ್ನುವ ಕಂಪೆನಿ. ಲಿಯಾನ್ ಪ್ರಕಾರ, ಇದು ಕೇವಲ ವಿಜ್ಞಾನದ, ತಂತ್ರಜ್ಞಾನದ ಕುತೂಹಲಕ್ಕೆ ಎಂದು ಹುಟ್ಟಿಕೊಂಡ ಕಂಪೆನಿ. ಯಾವುದೇ ವ್ಯಾಪಾರದ ಉದ್ದೇಶ ಇರಲಿಲ್ಲ; ಆದರೆ ಇಂದು ಇಡೀ ಜಗತ್ತನ್ನು ಇದು ಚಕಿತಗೊಳಿಸಿದೆ. ಅಲ್ಲಿ ಕೆಲಸ ಮಾಡುತ್ತಿರುವ ಕಂಪ್ಯೂಟರ್ ವಿಜ್ಞಾನಿಗಳಲ್ಲಿ ಬಹುತೇಕ ಎಲ್ಲರೂ ಹೊಸಬರು! ಸಾಮಾನ್ಯವಾಗಿ ಎಐ ಕ್ಷೇತ್ರದಲ್ಲಿ ಸಂಶೋಧನೆ ಎಂದಾಗ ಗೂಗಲ್, ಮೆಟಾ ಇವರೆಲ್ಲ ಆಯ್ಕೆ ಮಾಡುವುದು ಇಂಡಸ್ಟ್ರಿಯಲ್ಲಿ ಅನುಭವ ಪಡೆದ ಪರಿಣಿತರನ್ನು. ಆದರೆ ಲಿಯಾನ್ ಹಾಗೆ ಮಾಡಲಿಲ್ಲ; ಚೀನಾದ ಪ್ರಖ್ಯಾತ ವಿಶ್ವವಿದ್ಯಾಲಯಗಳಿಂದ ಪಿಎಚ್ಡಿ ಪಡೆದ ಮೇಧಾವಿಗಳನ್ನು ಕೆಲಸಕ್ಕೆ ನಿಯೋಗಿಸಿಕೊಂಡರು. ಹೊಸಬರಿಗೆ ತಮ್ಮ ಪ್ರತಿಭೆಯನ್ನು ಸಿದ್ಧ ಮಾಡುವ ಛಲ, ಸಂಸ್ಥಾಪಕರಿಗೆ ಕಡಮೆ ಖರ್ಚಿನಲ್ಲಿ ಉತ್ತಮ ಪ್ರತಿಭೆಯುಳ್ಳವರ ಬಲ; ಇದೇ ಡೀಪ್ಸೀಕ್ ಎಂಬ ಚಮತ್ಕಾರದ ಮೂಲ!
ಡೀಪ್ಸೀಕ್ ವಿಶೇಷತೆಗಳು
೧) ಮೊದಲ ಅವೃತ್ತಿಯ ಡೀಪ್ಸೀಕ್ ಅಷ್ಟೊಂದು ಬೇಗ ಜನಪ್ರಿಯವಾಗಲು, ನೆಷ್ಟ್ ಚಾಟ್ಜಿಪಿಟಿಯೇ ಎನ್ನುವ ಭ್ರಮೆ ಹುಟ್ಟಲು ಕಾರಣ ನಾವು ಕೇಳುವ ಪ್ರಶ್ನೆಗಳಿಗೆ ಇದು ತುಂಬಾ ಸುಂದರವಾಗಿ ಉತ್ತರಿಸುತ್ತಿತ್ತು. ವಿಶೇಷವಾಗಿ ಗಣಿತ, ಭೌತಶಾಸ್ತ್ರದ ಪ್ರಶ್ನೆಗಳಿಗೆ ಅದು ಉತ್ತರಿಸುವ ಬಗೆಯಂತೂ ಅದ್ಭುತ.
೨) ಉಳಿದ ಜೆನ್-ಎಐ ಉತ್ಪನ್ನಗಳಿಗೆ ಹೋಲಿಸಿದರೆ ಇದರ ಬಳಕೆಗೆ ತಗಲುತ್ತಿದ್ದ ವೆಚ್ಚವೂ ಅತ್ಯಂತ ಕಡಮೆ; ಓಪನ್ ಎಐ ಕಂಪೆನಿಯ ಓ೧ ಚಾಟ್ ಒಂದು ಮಿಲಿಯನ್ ಇನ್ಪುಟ್ ಟೋಕನ್ಗಳಿಗೆ $೧೫ ಚಾರ್ಜ್ ಮಾಡುತ್ತಿದ್ದರೆ ಅದೇ ಡೀಪ್ಸೀಕ್ ಆರ್೧ ಒಂದು ಮಿಲಿಯನ್ ಇನ್ಪುಟ್ ಟೋಕನ್ಗಳಿಗೆ ಕೇವಲ $೦.೫೫ ಚಾರ್ಜ್ ಮಾಡುತ್ತಿತ್ತು.
೩) ಸಾಫ್ಟ್ವೇರ್ ಕೋಡ್ ಜನರೇಷನ್ನಲ್ಲಿ ಓಪನ್ ಎಐಗಿಂತಲೂ ಬಹಳಷ್ಟು ಮಾನದಂಡಗಳಲ್ಲಿ ಒಂದು ಹೆಜ್ಜೆ ಮುಂದಿತ್ತು ಎನ್ನುವುದು ಮುಖ್ಯ.
೪) ಓಪನ್ ಎಐ ತರಹದ ಎಐ ಮಾದರಿಗಳಿಗೆ ತರಬೇತಿ ನೀಡಲು ಸೂಪರ್ವೈಸ್ಡ್ ಲರ್ನಿಂಗ್ ಬಳಸುತ್ತಾರೆ. ಆದರೆ ಡೀಪ್ಸೀಕ್ ಮಾದರಿಯು ಹಾಗಲ್ಲ ಇಲ್ಲಿ ರೀಎನ್ಫೋರ್ಸ್ಡ್ ಲರ್ನಿಂಗ್ ಹಾಗೂ ಮಲ್ಟಿಸ್ಟೇಜ್ ಲರ್ನಿಂಗ್ ಬಗೆಯನ್ನು ಆಯ್ಕೆಮಾಡಿಕೊಳ್ಳಲಾಗಿದೆ.
೫) ಇದು ಓಪನ್ ಸೋರ್ಸ್ ಕೋಡ್. ಎಲ್ಲರಿಗೂ ಉಚಿತ. ಅಷ್ಟೇ ಅಲ್ಲ ಡೀಪ್ಸೀಕ್ ತಂಡವು ಎಮ್ಐಟಿಯೊಡನೆ ಒಪ್ಪಂದ ಮಾಡಿಕೊಂಡು, ಮಾದರಿಯನ್ನು ೭೦ ಬಿಲಿಯನ್ ನಿಯತಾಂಕಗಳಿಗೆ ಟ್ಯೂನ್ ಮಾಡಿಟ್ಟು, ಯಾರು ಬೇಕಾದರೂ ಈ ಎಐ ಮಾದರಿಯನ್ನು ತಮಗೆ ಅನುಕೂಲ ಆಗುವಂತೆ ಬದಲಾಯಿಸಿ ಉಚಿತವಾಗಿ ವ್ಯಾಪಾರಕ್ಕೆ ಬಳಸುವ ಹಾಗೆ ತಯಾರಿಸಿದ್ದರು.
೬) ಇದು ಬಳಸುವ ಎಮ್ಒಇ ಎಲ್ಎಲ್ಎಮ್ ಅದರಲ್ಲಿರುವ ೭೦ ಬಿಲಿಯನ್ ನಿಯತಾಂಕಗಳನ್ನು ಒಟ್ಟಿಗೇ ಬಳಸುತ್ತಿರಲಿಲ್ಲ, ಏಕಕಾಲಕ್ಕೆ ಹೆಚ್ಚು ಅಂದರೆ ೩೭ ಬಿಲಿಯನ್ ನಿಯತಾಂಕಗಳನ್ನಷ್ಟೇ ಬಳಸುವ ವಿನ್ಯಾಸ ಹೊಂದಿತ್ತು. ಹೀಗಾಗಿ ಉಳಿದ ಎಲ್ಎಲ್ಎಮ್ಗಳಿಗಿಂತ ಅದಕ್ಕೆ ಬೇಕಾಗುವ ಶಕ್ತಿಯ ಮೂಲವು ಬಹಳಷ್ಟು ಕಡಮೆ.
೭) ಡೀಪ್ಸೀಕ್ ಪ್ರಕಟಿಸಿರುವ ಸಂಶೋಧನ ವರದಿಯಲ್ಲಿ ಎನ್ವಿಡಿಯಾದ ೨,೦೦೦ ಎನ್೮೦೦ ಜಿಪಿಯು ಬಳಕೆ ಮಾಡಿರುವುದಾಗಿ ಹೇಳಿತ್ತು. ಆಗ ಉಳಿದ ಕಂಪೆನಿಗಳಿಗೆ ಇದೇ ಮಾದರಿಯ ಎಐ ಸಾಫ್ಟ್ವೇರ್ ನಿರ್ಮಿಸಲು ಕನಿಷ್ಠ ೧೦,೦೦೦ ಅತ್ಯಾಧುನಿಕ ಜಿಪಿಯುಗಳಾದರೂ ಬೇಕಾಗುತ್ತಿತ್ತು.
ಡೀಪ್ಸೀಕ್ ಒಂದು ಸಣ್ಣ ಉದಾಹರಣೆ ಅಷ್ಟೇ. ಈಗಾಗಲೇ ಡೀಪ್ಸೀಕ್ ತರಹದ ಹತ್ತಾರು ಫ್ರಾಂಟಿಯರ್ ಮಾಡೆಲ್ಗಳು ಅಮೆರಿಕದ ಓಪನ್ ಎಐ, ಕ್ಲಾಡ್, ಜೆಮಿನಿಯನ್ನು ನಡುಗಿಸಿವೆ. ಹೊಸ ಮಾದರಿ, ನವನವೀನ ಅಲ್ಗೋರಿದಮ್ ಬಳಕೆ ಎಲ್ಲವೂ ಮನುಷ್ಯನ ಮಿದುಳಿನ ಪರಧಿಯನ್ನು ಆಗಸದ ಎತ್ತರಕ್ಕೆ ಹಿಗ್ಗಿಸುತ್ತಿದೆ. ಎಐ ಕುರಿತಾದ ಪೇಟೆಂಟ್ಗಳ ಬಗೆಗೆ ಅರಿತರೆ ಅಚ್ಚರಿ ಆದೀತು – ಅಮೆರಿಕ, ಇಂಗ್ಲೆಂಡ್ ಹಾಗೂ ಯೂರೋಪ್ ಸೇರಿ ಎಷ್ಟು ಪೇಟೆಂಟ್ ಮಾಡಿವೆಯೋ ಅವುಗಳಿಗೂ ಹೆಚ್ಚು ಎಐ ವಿಷಯದ ಪೇಟೆಂಟ್ ಚೀನಾ ಹೊಂದಿದೆ. ಇವೆಲ್ಲ ಕೇವಲ ಕಾಲೇಜುಗಳಲ್ಲಿ ಪ್ರಯೋಗಕ್ಕೆ ಮಾತ್ರ ಸೀಮಿತವಾಗಿಲ್ಲ. ಅಲ್ಲಿಯ ೩೦% ಕಂಪೆನಿಗಳು ಈಗಾಗಲೇ ಎಐಯನ್ನು ಅಳವಡಿಸಿಕೊಂಡಿವೆ ಎನ್ನುತ್ತವೆ ಒಂದು ವರದಿ. ಎಐ ಮಾಡೆಲ್ಗಳನ್ನು ಅತೀ ಹೆಚ್ಚು ಡೌನ್ಲೋಡ್ ಮಾಡುತ್ತಿರುವ ದೇಶ ಚೀನಾ. ಮಾನವರೂಪಿ ರೋಬಾಟ್ ಒಳ್ಳೆಯ ಹಂತಕ್ಕೆ ಬೆಳೆಯಬೇಕು ಅಂದರೆ ಬಹುಮುಖ್ಯವಾಗಿ ಎಐ ಬೇಕು – ಇದನ್ನೇ ಭೌತಿಕ ಎಐ ಎನ್ನುತ್ತೇವೆ. ಇಂದು ಚೀನಾ ಈ ಕ್ಷೇತ್ರದಲ್ಲಿ ನಂಬರ್ ಒನ್! ನಿಮಗೆ ಚೀನಾದ ಎಐ ಪರಿಸರದ ರೆವಿನ್ಯೂ ಎಷ್ಟು ಗೊತ್ತೆ? ಸುಮಾರು $೨೦೦ – $೩೦೦ ಬಿಲಿಯನ್ ಡಾಲರ್; ಕಾಲಕ್ರಮೇಣ ಇದು ಕ್ಷಿಪ್ರವಾಗಿ ಬೆಳೆಯುವುದಂತೂ ಖಂಡಿತ. ಅವರ ಎಐ ಪರಿಸರವು ನಮ್ಮ ಕಲ್ಪನೆಗೂ ಮೀರಿದ್ದು; ೬೦೦೦ಕ್ಕೂ ಹೆಚ್ಚು ಎಐ ಕಂಪೆನಿಗಳು, ೧೫೦೦ಕ್ಕೂ ಮಿಗಿಲಾದ ಎಐ ಮಾಡೆಲ್ಗಳು, ಅವುಗಳ ಬಳಕೆ ಮಾಡುತ್ತಿರುವ ಕಂಪೆನಿಗಳ ಸಮೂಹ, ಡಾಟಾ ಸೆಂಟರ್ ವ್ಯವಸ್ಥೆ ಇವೆಲ್ಲವೂ ಚೀನಾವನ್ನು ಎಐ ಕ್ಷೇತ್ರದಲ್ಲಿ ಬಹು ಎತ್ತರಕ್ಕೆ ಕೊಂಡೊಯ್ದಿವೆ.
ಭಾರತವು ಎಐನಲ್ಲಿ ಹಿಂದೆ ಬೀಳುತ್ತಿದೆಯೇ?
ಚೀನಾವು ಜಗತ್ತಿಗೆ ಉಚಿತವಾಗಿ ಒಪನ್ ಸೋರ್ಸ್ ಕೋಡ್ ಕೊಟ್ಟಿದೆ ಅಂದರೆ ಅದರಲ್ಲಿ ಏನೋ ಒಳಗುಟ್ಟು ಇರಲೇಬೇಕು. ಜಗತ್ತು ಅದನ್ನು ಬಳಸಿದಷ್ಟು, ಡಾಟಾ ಅದರೊಳಗೆ ಸೇರಿದಷ್ಟು ಆ ಎಐ ಮಾಡೆಲ್ಗಳಿಗೆ ಇನ್ನಷ್ಟು ಪ್ರಬುದ್ಧತೆ ಬರುವುದು. ಈಗಾಗಲೇ ಚೀನಾದ ಕಂಪೆನಿಗಳು ಈ ತರಹದ ಪರಿಣಾಮಕಾರಿ ಎಐ ಮಾಡೆಲ್ಗಳನ್ನು ಬಳಸಿ ಏನೇನು ಅನ್ವೇಷಣೆ ಮಾಡಿವೆಯೋ ಊಹೆಗೂ ನಿಲುಕದ್ದು! ಡೀಪ್ಸೀಕ್ ಎನ್ನುವ ಎಐ ಸಾಫ್ಟ್ವೇರ್ ತಯಾರಿಸಲು ಬೇಕಾಗಿದ್ದು ಕೈಬೆರಳಿಕೆಯಷ್ಟು ಇಂಜಿನಿಯರ್ಸ್ ಹಾಗೂ ೫೦ ಕೋಟಿ ರೂಪಾಯಿಗಳು ಮಾತ್ರ (ಇದರ ಕುರಿತು ಇನ್ನೂ ಸಂಪೂರ್ಣ ಮಾಹಿತಿ ಬಹಿರಂಗವಾಗಿಲ್ಲ). ಡೀಪ್ಸೀಕ್ ಜೊತೆಜೊತೆಗೇ ಮೂನ್ಶಾಟ್ ಎಐ ಎನ್ನುವ ಚೀನಾದ ಕಂಪೆನಿಯು ತನ್ನ ಕಿಮಿ.ಎಐ ಎನ್ನುವ ಉನ್ನತ ದರ್ಜೆಯ ಚಾಟ್ಬಾಟ್ನ್ನು ಬಿಡುಗಡೆ ಮಾಡಿದೆ. ಇದರ ಉಚಿತವಾದ ಆವೃತ್ತಿಯು ಚಾಟ್ಜಿಪಿಟಿಯ ದುಬಾರಿ ಆವೃತ್ತಿಗೆ ಸಮವಾಗಿದೆ! ಹಾಗಿದ್ದರೆ ಭಾರತದಲ್ಲಿ ಡೀಪ್ಸೀಕ್ ಅಥವಾ ಕಿಮಿ ತರಹದ ಒಂದು ಅತ್ಯದ್ಭುತ ಸಾಫ್ಟ್ವೇರ್ ತಯಾರಿಕೆ ಯಾಕೆ ಆಗಿಲ್ಲ ಎನ್ನುವುದು ಮಿಲಿಯನ್ ಡಾಲರ್ ಬೆಲೆಯ ಪ್ರಶ್ನೆ! ಇಂದು ನಾವು ಬಳಸುವ ಜನಪ್ರಿಯ ಚಾಟ್ಬಾಟ್ಗಳನ್ನು ತಯಾರಿಸಿದ್ದು ಭಾರತೀಯ ಮೂಲದವರೇ ಆಗಿದ್ದಾರೆ. ಹೊಸ ಭರವಸೆ ಮೂಡಿಸಿದ ಓಲಾದ ಕೃತ್ರಿಮದ ಬಗ್ಗೆ ಸುದ್ದಿಯೇ ಇಲ್ಲ; ಸರ್ವಮ್ ಎಐ ಸಣ್ಣದೊಂದು ಸದ್ದು ಮಾಡುತ್ತಿದೆ. ಐಟಿ ಸೇವಾ ಕಂಪೆನಿಗಳ ವ್ಯಾಪಾರದ ಮಾದರಿಗಳು ಎಐ ಫ್ರಾಂಟಿಯರ್ ಮಾಡೆಲ್ ಅಭಿವೃದ್ಧಿಪಡಿಸುವುದಲ್ಲ, ಅವುಗಳನ್ನು ಬಳಸಿ ಸೇವೆ ನೀಡುವುದು. ಜಗತ್ತಿನ ಅತೀ ಹೆಚ್ಚು ಜನಸಂಖ್ಯೆಯುಳ್ಳ ದೇಶ ಭಾರತ. ನಮ್ಮಲ್ಲಿ ಡಿಜಲೀಕರಣವೂ ಸಾಕಷ್ಟು ಆಗಿದೆ. ನಮ್ಮಲ್ಲಿಯ ಡಾಟಾ ಬಳಸಿ ಅಮೆರಿಕ ಹಾಗೂ ಚೀನಾದವರು ತಮ್ಮ ಎಐ ಮಾದರಿಯನ್ನು ಸಾಕಷ್ಟು ಉನ್ನತಮಟ್ಟಕ್ಕೆ ಒಯ್ಯುತ್ತಿದ್ದಾರೆ. ಹೀಗಿರುವಾಗ ನಮ್ಮಲ್ಲಿ ಚೀನಾ ತರಹವೇ ಎಐ ಹಾಗೂ ಅದರ ಪರಿಸರದ ಬೆಳವಣಿಗೆ ಯಾಕೆ ಆಗಬಾರದು? ಇದನ್ನು ಪ್ರೋತ್ಸಾಹಿಸುವುದಕ್ಕೆ ಸರ್ಕಾರದ ಒಲವು, ನಿಲವು, ನೀತಿ – ಎಲ್ಲವೂ ಬೇಕಾಗುತ್ತದೆ. ಸರ್ಕಾರ ಹಾಗೂ ದೊಡ್ಡ ಖಾಸಗಿ ಕಂಪೆನಿಗಳು ಜೊತೆಯಾಗಿ ಕೆಲಸ ಮಾಡಿದರೆ ಇದು ಕಷ್ಷವೇನಲ್ಲ. ಇಂದಲ್ಲ ನಾಳೆ, ತಡವಾಗಿಯಾದರೂ ಸರಿ ಚೀನಾದ ಜೊತೆ ಸ್ಪರ್ಧೆ ಮಾಡಬಲ್ಲೆವು. ಚೀನಾದ ಇಂದಿನ ವೇಗವನ್ನು ಗಮನಿಸಿದಾಗ ಎಲ್ಲೋ ಒಂದು ಕಡೆ ಈ ಎಐ ಸ್ಪರ್ಧೆಯಲ್ಲಿ ನಾವು ಚೀನಾಕ್ಕೆ ಸೋಲುತ್ತಿದ್ದೆವೆಯೋ ಎಂದು ಅನಿಸುತ್ತದೆ. ಏನೇ ಹೇಳಿ ಎಐ ಎನ್ನುವ ಈ ಮಹಾಯುದ್ಧ ಇಲ್ಲಿಗೇ ನಿಲ್ಲುವುದಲ್ಲ, ಇದು ಪ್ರಾರಂಭ ಮಾತ್ರ!
ಬಾಕ್ಸ್
- ಎಐ ಮಾಡೆಲ್ಗಳು
ಚೀನಾದ ಪ್ರಸಿದ್ಧ ಎಐ ಫ್ರಂಟಿರಿಯರ್ ಮಾಡೆಲ್ಗಳು:
೧. ಡೀಪ್ಸೀಕ್: ವೀ ೩/ ಆರ್ ೧
೨. ಅಲಿಬಾಬ: ಕ್ವೆನ್ ಫ್ಯಾಮಿಲಿ
೩. ಮೂನ್ಶೂಟ್ ಎಐ: ಕಿಮಿ ಕೆ೨/ಕೆ೩
೪. ಬೈಟ್ಡ್ಯಾನ್ಸ್: ಸೀಡ್
೫. ಝಿ.ಎಐ: ಜಿಎಲ್ಎಮ್ ಫ್ಯಾಮಿಲಿ
೬. ಮಿನಿಮ್ಯಾಕ್ಸ್: ಮಿನಿಮ್ಯಾಕ್ಸ್ ಸಿರೀಸ್
೭. ಬೈಡು: ಎರ್ನಿ
೮. ೦೧. ಎಐ: ಯಿ ಫ್ಯಾಮಿಲಿ
ಅಮೆರಿಕದ ಪ್ರಸಿದ್ಧ ಎಐ ಫ್ರಂಟಿರಿಯರ್ ಮಾಡೆಲ್ಗಳು
೧. ಒಪನ್ಎಐ: ಜಿಪಿಟಿ
೨. ಅಂಥ್ರಾಪಿಕ್: ಕ್ಲಾಡ್ ಒಪಸ್/ಸಾನೆಟ್
೩. ಗೂಗಲ್ ಡೀಪ್ಮೈಂಡ್: ಜೆಮಿನಿ
೪. ಎಕ್ಸ್ ಎಐ: ಗ್ರೋಕ್
೫. ಮೆಟಾ: ಲಾಮಾ
೬. ಮೈಕ್ರೋಸಾಫ್ಟ್: ಎಮ್ಎಐ
೭. ಅಮೆಜಾನ್: ನೊವಾ
೮. ಐಬಿಎಮ್: ಗ್ರಾನೈಟ್






