ಅರವತ್ತು ವರುಷಗಳ ಚಕ್ರದಲಿ ಬಂದಿದೆ,
ನಲವತ್ತರ ಒಸಗೆಯ ಪರಾಭವ;
ಜಂಭವನು ಮೆಟ್ಟಿ, ಹುಸಿಯನ್ನು ಕಟ್ಟಿ,
ಒಳಗನ್ನು ಬೆಳಗುವುದು ನಿಜವೈಭವ.
ಬೆಳ್ಳನೆಯ ಬಾನು, ತಣ್ಣನೆಯ ನೆರಳು,
ಬೇವಿಗೂ ಬೆಲ್ಲಕ್ಕೂ ಒಗ್ಗಿರುವ ಕೊರಳು;
ಊರ ದೇಗುಲದಲ್ಲಿ ಪಂಚಾಂಗ ಶ್ರವಣವಿದೆ,
ಬಾಳಿನಂಗಳದಲ್ಲಿ ಭರವಸೆಯ ಬೆಳದಿಂಗಳು.
ಎಳೆಯೆಲೆಯ ತೊನೆದಾಟ, ಹಸಿರು ಹಬ್ಬದ ಮಾಟ,
ಸುತ್ತಲಿನ ಲೋಕದಲಿ ಚೆಲುವ ತೇರು;
ತಳಿರು ತೋರಣದಲ್ಲಿ ನಿತ್ಯಬದುಕಿನ ನಾಕ,
ಒಲವಿನಲಿ ಮೀಯುವುದು ನಮ್ಮ ಊರು.
ಮರಮರದ ಟೊಂಗೆಯಲಿ ಉಲಿವ ಹಕ್ಕಿಯ ಲೋಕ,
ಇಹದ ಪರಿಮಳವ ತರುವ ಝೇಂಕಾರ;
ಪುಣ್ಯವಿದೆ ಬಾಳಿನಲಿ, ಗಣ್ಯವಿದೆ ಲೋಕದಲಿ,
ಶುಭವ ಬಯಸುತ ಬರುವ ಧ್ವನಿಯು ಓಂಕಾರ
ಕಷ್ಟ ಬದುಕಿನ ಭಾಗ, ಇಷ್ಟ ಅರಿವಿನ ಯೋಗ,
ಹಿತವಾಗಿ ಪಿಸುಗುಡುವ ತಂಪು ತೋಪು;
ಹೋದ ಹಬ್ಬದ ನೆನಪು, ಬಂದ ಹಬ್ಬದ ಒನಪು,
ಹದವಾದ ಬಿಸಿಲಿನಲಿ ಒಂದು ಜೋಂಪು.
ಊರ ತೇರಿಗೆ ಇನ್ನು ಎಂಟು ದಿನ ಬಾಕಿ ಇದೆ
ಬೀದಿಬೀದಿಗಳಲ್ಲಿ ಉತ್ಸವದ ಪರ್ವ;
ಅಂಗಳದ ತುಂಬೆಲ್ಲ ತಿಂಗಳಿನ ತಣ್ಬೆಳಕು,
ಪರಾಭವದಲಿ ಅಳಿಯಲಿ ನಮ್ಮ ಗರ್ವ.
ಕಾದು ಬೆಂದಿರುವ ನೆಲಕೆ ನಾಲ್ಕು ಹನಿ ಬೀಳಲಿ,
ದಿವ್ಯಮಂಗಲದ ರವ ಕಿವಿ ತುಂಬಲಿ;
ಅನುದಿನವು ಅನುರಾಗ ಎದೆಯನ್ನು ತುಂಬಿರಲಿ






