ಮಾರ್ಚ್ ತಿಂಗಳು ಪರೀಕ್ಷೆಗಳ ಋತು ಶುರುವಾಗುವ ಕಾಲ. ಮೊಬೈಲ್ ಎತ್ತಿಟ್ಟು ಪುಸ್ತಕದ ಕಡೆ ಗಮನ ಕೊಡುವಂತೆ ವಿದ್ಯಾರ್ಥಿಗಳಿಗೆ ತಾಕೀತುಮಾಡುವ ಸಮಯವೂ ಹೌದು. ವರ್ಷಪೂರ್ತಿ ಕಲಿತದ್ದನ್ನು ನೆನಪಿಸಿಕೊಂಡು ಪರೀಕ್ಷೆಗಳಿಗೆ ಸಿದ್ಧರಾಗುವಾಗ ಮೊಬೈಲು-ಇಂಟರ್ನೆಟ್ಟುಗಳೆಲ್ಲ ಅವರ ಏಕಾಗ್ರತೆಗೆ ಭಂಗ ತರಬಾರದು ಎನ್ನುವುದು ಪೋಷಕರ – ಶಿಕ್ಷಕರ ವಾದ.
ವಿದ್ಯಾರ್ಥಿಗಳು ಈ ವಾದವನ್ನು ಒಪ್ಪುತ್ತಾರೋ ಬಿಡುತ್ತಾರೋ ಎನ್ನುವುದು ಬೇರೆಯದೇ ವಿಷಯ, ಬಿಡಿ. ಆದರೆ ಶಿಕ್ಷಣದ ವಿಷಯಕ್ಕೆ ಬಂದಾಗ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನೆಲ್ಲ ವಿಲ್ಲನ್ನುಗಳಂತೆಯೇ ನೋಡುವುದು ಎಷ್ಟು ಸರಿಯೆನ್ನುವುದರ ಬಗೆಗೆ ನಾವು ವಿಚಾರ ಮಾಡಲೇಬೇಕು.
ಇಂದಿನ ಪೋಷಕರು – ಶಿಕ್ಷಕರೆಲ್ಲ ವಿದ್ಯಾರ್ಥಿಗಳಾಗಿದ್ದಾಗ ನಮ್ಮೆಲ್ಲರ ಕಲಿಕೆಯ ವಿಧಾನ ಹೆಚ್ಚೂಕಡಮೆ ಒಂದೇ ರೀತಿ ಇರುತ್ತಿತ್ತು: ಸರಕಾರ ನಿಗದಿಪಡಿಸಿದ ಪಠ್ಯಪುಸ್ತಕ, ಅದನ್ನು ಆಧರಿಸಿ ನಡೆಯುತ್ತಿದ್ದ ಪಾಠ, ಅದನ್ನು ಆಧರಿಸಿ ಸಿದ್ಧವಾಗುತ್ತಿದ್ದ ಪ್ರಶ್ನೆಪತ್ರಿಕೆ ಹಾಗೂ ಅದಕ್ಕೆ ನಮ್ಮ ಉತ್ತರಗಳನ್ನು ಆಧರಿಸಿದ ಫಲಿತಾಂಶ! ವಿದ್ಯಾರ್ಥಿಗೆ ಯಾವ ವಿಷಯದಲ್ಲಿ ಹೆಚ್ಚಿನ ಆಸಕ್ತಿಯಿದೆ, ಯಾವ ವಿಷಯದ ಕಲಿಕೆ ಕಷ್ಟವಾಗುತ್ತಿದೆ, ಯಾವ ವಿಷಯದಲ್ಲಿ ಇನ್ನಷ್ಟು ಕಲಿಯುವ ಸಾಮರ್ಥ್ಯವಿದೆ – ಶಿಕ್ಷಕರೋ ಪೋಷಕರೋ ವೈಯಕ್ತಿಕವಾಗಿ ತಲೆಕೆಡಿಸಿಕೊಳ್ಳದ ಹೊರತು ಈ ಯಾವ ಅಂಶವೂ ಲೆಕ್ಕಕ್ಕೇ ಬರುತ್ತಿರಲಿಲ್ಲ. ಹಾಗೊಮ್ಮೆ ಅವರು ತಲೆಕೆಡಿಸಿಕೊಂಡರೂ ಇವೆಲ್ಲ ಶಾಲೆಯ ಪಠ್ಯಕ್ರಮದ ಹೊರಗಷ್ಟೇ ಉಳಿಯುತ್ತಿದ್ದವು.
ಈಗಿನ ಪರಿಸ್ಥಿತಿಯೂ ಹೆಚ್ಚೇನೂ ಬದಲಾಗಿಲ್ಲ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ ಏನೆಲ್ಲ ಬದಲಾವಣೆ ತರಬಹುದು ಎನ್ನುವುದರ ಬಗ್ಗೆ ಗಂಭೀರ ಆಲೋಚನೆಯಂತೂ ನಡೆದಿದೆ. ಅಂತಹ ಬದಲಾವಣೆಗಳ ಕೆಲ ಉದಾಹರಣೆಗಳೂ ನಮ್ಮ ಕಣ್ಣೆದುರಿಗಿವೆ. ಪಾಠ ಮತ್ತು ಪರೀಕ್ಷೆಯಂತಹ ಕ್ಷೇತ್ರಗಳಲ್ಲೂ ಈಗ ಡೇಟಾದ ಆಟ ಶುರುವಾಗಿದೆ!
ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ
ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸಿಕೊಂಡು ನಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಫೋನಿನೊಳಗೇ ಶಾಲೆಯನ್ನು ತಂದಿಟ್ಟ ಆನ್ಲೈನ್ ತರಗತಿಗಳ ಪರಿಕಲ್ಪನೆ ನಮಗೆ ತಿಳಿದೇ ಇದೆ. ಕೋವಿಡ್ ಕಾಲದಲ್ಲಿ ಹೊರಗಡೆಯ ಓಡಾಟ ಸಾಧ್ಯವಿಲ್ಲದ ಪರಿಸ್ಥಿತಿ ಇದ್ದಾಗ ಈ ಪರಿಕಲ್ಪನೆ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಸಾಮಾನ್ಯವಾದದ್ದು. ಸದ್ಯ ಭೌತಿಕ ತರಗತಿಗಳು ನಡೆದಿದ್ದರೂ ಆ ಕಾಲದಲ್ಲಿ ಪರಿಚಯವಾದ ಹಲವು ಸಾಧನಗಳ ಬಳಕೆಯನ್ನು ಅನೇಕ ವಿದ್ಯಾರ್ಥಿಗಳು-ಶಿಕ್ಷಕರು ಮುಂದುವರಿಸಿದ್ದಾರೆ. ವಾಟ್ಸ್ಆಪ್ನಂತಹ ಸಾಧನಗಳನ್ನೂ ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸಿಕೊಂಡು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವಿನ ಸಂವಹನಕ್ಕೆ ಹೊಸ ಆಯಾಮವನ್ನೇ ಕೊಟ್ಟಿದ್ದಾರೆ.
ಹಾಗೆಂದಮಾತ್ರಕ್ಕೆ ಕಲಿಕೆಯಲ್ಲಿ ತಂತ್ರಜ್ಞಾನದ ಪಾತ್ರ ಗೂಗಲ್ ಕ್ಲಾಸ್ರೂಮ್, ಜûÆಮ್ ಹಾಗೂ ವಾಟ್ಸಾಪ್ಗಳಂತಹ ಸಾಧನಗಳಿಗಷ್ಟೇ ಸೀಮಿತವಲ್ಲ. ಇವುಗಳ ಬಳಕೆ ಶುರುವಾದದ್ದೇ ಕೋವಿಡ್ ಕಾಲದಲ್ಲಿ ಎನ್ನುವಂತೆಯೂ ಇಲ್ಲ. ಭಾರತದ ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ದೊಡ್ಡ ಪ್ರಮಾಣದಲ್ಲಿ ಶುರುವಾದದ್ದು ಬಹುಶಃ ಆಕಾಶವಾಣಿ ಹಾಗೂ ದೂರದರ್ಶನಗಳ ಮೂಲಕವೇ ಇರಬೇಕು. ಅಂತರಜಾಲದ ವ್ಯಾಪ್ತಿ ವಿಸ್ತರಿಸಿದಂತೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಆವಿಷ್ಕಾರಗಳು ನಮ್ಮ ಕೈಗೆಟುಕಿದಂತೆ ಶಿಕ್ಷಣ ಕ್ಷೇತ್ರದ ಮೇಲೆ ತಂತ್ರಜ್ಞಾನದ ಪ್ರಭಾವ ಹೆಚ್ಚಾಗಿದೆ. ಪಠ್ಯಪುಸ್ತಕ ಹಾಗೂ ಅಭ್ಯಾಸ ಸಾಮಗ್ರಿಗಳ ರಚನೆ ಹಾಗೂ ವಿತರಣೆಯಿಂದ ಪ್ರಾರಂಭಿಸಿ ಕಲಿಕೆಯ ಒಟ್ಟಾರೆ ಸ್ವರೂಪದವರೆಗೆ ಹಲವಾರು ವಿಷಯಗಳು ಇದೀಗ ಬದಲಾಗಿವೆ.
ನಾವು ಮನೆಯಲ್ಲೇ ಕುಳಿತು ಜಗತ್ತಿನ ಪ್ರತಿಷ್ಠಿತ ಶಿಕ್ಷಣಸಂಸ್ಥೆಗಳಿಂದ ತರಬೇತಿ ಪಡೆಯಲು ಸಾಧ್ಯವಾಗಿರುವುದು ಇಂತಹ ಬೆಳವಣಿಗೆಗಳಲ್ಲೊಂದು. ದೂರಶಿಕ್ಷಣದ ಪರಿಕಲ್ಪನೆ ಹಿಂದಿನ ಕಾಲದಲ್ಲೇ ಇತ್ತಾದರೂ ಅಂದಿನ ವಿದ್ಯಾರ್ಥಿಗಳು ಹೆಚ್ಚಾಗಿ ಅಂಚೆಯಲ್ಲಿ ಬರುವ ಪಠ್ಯವನ್ನೇ ಅವಲಂಬಿಸಬೇಕಿತ್ತು, ಇಲ್ಲವೇ ವರ್ಷಕ್ಕೊಮ್ಮೆ ನಡೆಯುತ್ತಿದ್ದ ಸಂಪರ್ಕ ತರಗತಿಗಳನ್ನು ನೆಚ್ಚಿಕೊಳ್ಳಬೇಕಿತ್ತು. ಹೊಸ ಕಾಲದ ಅಗತ್ಯಕ್ಕೆ ತಕ್ಕಂತೆ ‘ಓಪನ್ ಆಂಡ್ ಡಿಸ್ಟೆನ್ಸ್ ಲರ್ನಿಂಗ್’ (ODL) ಎಂದು ಬದಲಾಗಿರುವ ಇಂದಿನ ದೂರಶಿಕ್ಷಣ, ವಿಶ್ವವಿದ್ಯಾನಿಲಯದ ತರಗತಿಗಳನ್ನು ನಮ್ಮ ಅಂಗೈಯಲ್ಲೇ ತಂದಿಟ್ಟಿದೆ. ಪಾಠಗಳನ್ನು ಕೇಳುವುದಷ್ಟೇ ಅಲ್ಲ, ಬೇರೆಬೇರೆ ಊರುಗಳಲ್ಲಿರುವ ಶಿಕ್ಷಕರ-ಸಹಪಾಠಿಗಳ ನಡುವೆ ತಕ್ಷಣದ ಒಡನಾಟವನ್ನೂ ಅದು ಸಾಧ್ಯವಾಗಿಸಿದೆ.
ಈ ಪರಿಕಲ್ಪನೆಯು ಕಲಿಕೆಯ ಭೌಗೋಳಿಕ ಮಿತಿಗಳನ್ನು ತಕ್ಕಮಟ್ಟಿಗೆ ನಿವಾರಿಸಿದೆಯಾದರೂ ಅದರಲ್ಲಿ ನಿರ್ದಿಷ್ಟ ಸಮಯದಲ್ಲೇ ಕಲಿಯುವ ಅನಿವಾರ್ಯ ಇನ್ನೂ ಉಳಿದುಕೊಂಡಿದೆ. ‘ಮ್ಯಾಸಿವ್ ಓಪನ್ ಆನ್ಲೈನ್ ಕೋರ್ಸ್’ ಅಥವಾ ‘MOOC’ ಎನ್ನುವ ಇನ್ನೊಂದು ಪರಿಕಲ್ಪನೆ ಈ ಪರಿಸ್ಥಿತಿಯನ್ನೂ ಬದಲಿಸುತ್ತಿದೆ. ವಿಶ್ವವ್ಯಾಪಿ ಜಾಲದ ಮೂಲಕ ಮುಕ್ತವಾಗಿ ಲಭ್ಯವಿರುವುದು, ಮತ್ತು ಯಾರು ಬೇಕಾದರೂ ಬಳಸಲು ಸಾಧ್ಯವಿರುವುದು ಈ ಕೋರ್ಸ್ಗಳ ವೈಶಿಷ್ಟ್ಯ. ಪಾಠದ ವೀಡಿಯೊಗಳು, ಬಹುಮಾಧ್ಯಮ ಪ್ರಸ್ತುತಿಗಳು, ಓದಿಕೊಳ್ಳಲು ಪೂರಕ ಸಾಮಗ್ರಿ – ಹೀಗೆ ವಿವಿಧ ಅಂಶಗಳು ಇಂತಹ ಕೋರ್ಸಗಳಲ್ಲಿ ಇರುವುದು ಸಾಧ್ಯ. ಇವೆಲ್ಲದರ ಜೊತೆಗೆ ಇಲ್ಲಿ ಆನ್ಲೈನ್ ಪರೀಕ್ಷೆಗಳೂ ಇರುತ್ತವೆ. ಕಂಪ್ಯೂಟರ್ ವಿಜ್ಞಾನ, ಇಂಜಿನಿಯರಿಂಗ್, ವಾಣಿಜ್ಯ ಅಧ್ಯಯನ, ನಿರ್ವಹಣೆ, ಸಂವಹನ, ಜೀವವಿಜ್ಞಾನ – ಹೀಗೆ ವಿವಿಧ ವಿಷಯಗಳಿಗೆ ಸಂಬಂಧಪಟ್ಟ MOOCಗಳು ಲಭ್ಯವಿವೆ. ಹೆಸರಾಂತ ವಿಶ್ವವಿದ್ಯಾನಿಲಯಗಳು, ಸರಕಾರಗಳು, ವಾಣಿಜ್ಯ ಹಾಗೂ ಸ್ವಯಂಸೇವಾ ಸಂಸ್ಥೆಗಳು ಇದನ್ನೆಲ್ಲ ಸಾಧ್ಯವಾಗಿಸಿವೆ. ವಿದ್ಯಾರ್ಥಿಗಳಿಗಷ್ಟೇ ಅಲ್ಲ, ನಿರಂತರ ಕಲಿಕೆ ಅನಿವಾರ್ಯವಾಗಿರುವ ಈ ಕಾಲದಲ್ಲಿ ಉದ್ಯೋಗಿಗಳು ಹಾಗೂ ವೃತ್ತಿಪರರೂ ಇಂತಹ ಸೌಲಭ್ಯಗಳನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ.
ಆಟ, ಪಾಠ ಮತ್ತು ತಂತ್ರಜ್ಞಾನ
ಕಲಿಕೆಯಲ್ಲಿ ತಂತ್ರಜ್ಞಾನದ ಬಳಕೆ ಹಲವು ಬಗೆಯದಾಗಿರುವುದು ಸಾಧ್ಯ. ಪಠ್ಯಪುಸ್ತಕ – ಅಭ್ಯಾಸ ಪತ್ರಿಕೆಗಳನ್ನೆಲ್ಲ ಡಿಜಿಟಲ್ ರೂಪದಲ್ಲಿ ಒದಗಿಸುವುದು ಸಾಧ್ಯವಾದರೆ ಅವೆಲ್ಲವೂ ನಿರ್ದಿಷ್ಟ ಸಮಯದಲ್ಲಿ ಎಲ್ಲ ವಿದ್ಯಾರ್ಥಿಗಳನ್ನೂ ತಲಪುವಂತೆ ನೋಡಿಕೊಳ್ಳಬಹುದು. ಮಾಹಿತಿಯನ್ನು ಪಠ್ಯದ ಜೊತೆಗೆ ವೀಡಿಯೋ ಹಾಗೂ ಧ್ವನಿ ರೂಪದಲ್ಲೂ ಒದಗಿಸಿದರೆ, ಸಂವಹನವನ್ನು ಹೆಚ್ಚು ಪರಿಣಾಮಕಾರಿಯಾಗಿಸಬಹುದು. ಅಷ್ಟೇ ಅಲ್ಲ, ವಿಶೇಷ ಅಗತ್ಯಗಳುಳ್ಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸವಲತ್ತುಗಳನ್ನು ಒದಗಿಸುವುದಕ್ಕೂ ತಂತ್ರಜ್ಞಾನದ ಬಳಕೆ ಒಂದು ಉತ್ತಮ ಮಾರ್ಗ.
ಆಟದ ಮೂಲಕ ಪಾಠ ಎನ್ನುವುದು ಬಹಳವೇ ಹಳೆಯ ಪರಿಕಲ್ಪನೆ. ಕಲಿಕೆಯ ಪ್ರಕ್ರಿಯೆಯಲ್ಲಿ ಮನರಂಜನೆಯನ್ನೂ ಸೇರಿಸಿದರೆ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಈ ಪರಿಕಲ್ಪನೆ ಹೇಳುತ್ತದೆ. ಈ ಪರಿಕಲ್ಪನೆಯ ಪರಿಣಾಮಕಾರಿ ಅನುಷ್ಠಾನದಲ್ಲೂ ತಂತ್ರಜ್ಞಾನದ ಸಹಾಯ ಪಡೆದುಕೊಳ್ಳುವುದು ಸಾಧ್ಯ. ಗಣಿತ-ವಿಜ್ಞಾನಗಳೆಲ್ಲ ಕಷ್ಟ ಎನ್ನುವ ವಿದ್ಯಾರ್ಥಿಗಳಿಗೆ ಆ ವಿಷಯಗಳನ್ನು ಅನಿಮೇಶನ್ ಅಥವಾ ವೀಡಿಯೊ ಗೇಮ್ಗಳ ಮೂಲಕ ಪರಿಚಯಿಸಿದರೆ ಅವರು ಹೆಚ್ಚು ವೇಗವಾಗಿ ಕಲಿಯುತ್ತಾರೆ, ಖುಷಿಯಿಂದಲೂ ಕಲಿಯುತ್ತಾರೆ. ಆಟದೊಳಕ್ಕೇ ಪಾಠವನ್ನು ತರುವ ‘ಗೇಮಿಫಿಕೇಶನ್’ ಎಂಬ ಈ ಪ್ರಕ್ರಿಯೆಗೆ ತಂತ್ರಜ್ಞಾನವೇ ಜೀವಾಳ. ವರ್ಚುಯಲ್ ರಿಯಾಲಿಟಿ(ವಿಆರ್) ಹಾಗೂ ಆಗ್ಮೆಂಟೆಡ್ ರಿಯಾಲಿಟಿಯಂತಹ (ಎಆರ್) ತಂತ್ರಜ್ಞಾನಗಳೂ ಇಲ್ಲಿ ಬಳಕೆಯಾಗುತ್ತವೆ.
ವಿವಿಧ ಬಣ್ಣಗಳ ಬಳಕೆ, ಕಾರ್ಟೂನ್ ಚಿತ್ರಗಳ ಆಕರ್ಷಣೆ, ನಾವೂ ಪಾಲ್ಗೊಳ್ಳಬಹುದಾದ ಸಂವಾದಾತ್ಮಕ ಅನುಭವಗಳೆಲ್ಲ ಸೇರಿರುವ ಅನೇಕ ಮೊಬೈಲ್ ಆ್ಯಪ್ಗಳು – ಜಾಲತಾಣಗಳು ಜಗತ್ತಿನೆಲ್ಲೆಡೆಯ ಮಕ್ಕಳನ್ನು ಸೆಳೆಯುತ್ತಿರುವುದು ಹೊಸ ವಿಷಯವೇನೂ ಅಲ್ಲ. ಪ್ರಾಥಮಿಕ ಹಂತದ ವಿಷಯಗಳಷ್ಟೇ ಅಲ್ಲ, ಹೊಸ ಭಾಷೆಗಳನ್ನು ಕಲಿಯುವುದು, ಗಣಿತದ ಸಮಸ್ಯೆಗಳನ್ನು ಬಿಡಿಸುವುದು, ವಿಜ್ಞಾನದ ಸೂತ್ರಗಳನ್ನು ಅರ್ಥಮಾಡಿಕೊಳ್ಳುವುದೇ ಮುಂತಾದ ಉದ್ದೇಶಗಳಿಗೂ ಈ ತಂತ್ರ ಸಹಕಾರಿ.
ಡೇಟಾದ ವಿಶ್ವರೂಪ
ಆನ್ಲೈನ್ ತರಬೇತಿಯಿರಲಿ, ಆಟದ ಮೂಲಕ ಪಾಠವೇ ಇರಲಿ, ಎಲ್ಲದರ ಹಿನ್ನೆಲೆಯಲ್ಲೂ ಡೇಟಾದ ಕೈವಾಡ ಇದ್ದೇ ಇರುತ್ತದೆ ಎನ್ನುವುದು ವಿಶೇಷ. ಆನ್ಲೈನ್ ಕೋರ್ಸುಗಳನ್ನು ತೆಗೆದುಕೊಳ್ಳುವವರು ಯಾವ ಭಾಗದಲ್ಲಿ ಎಷ್ಟು ಸಮಯ ಕಳೆಯುತ್ತಾರೆ, ಯಾವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುತ್ತಾರೆ, ಎಲ್ಲಿ ತಪ್ಪುಮಾಡುತ್ತಾರೆ ಎನ್ನುವುದನ್ನೆಲ್ಲ ತರಬೇತಿ ತಂತ್ರಾಂಶ ಸಂಗ್ರಹಿಸಿ ವಿಶ್ಲೇಷಿಸುತ್ತದೆ. ಆ ಡೇಟಾದ ಆಧಾರದ ಮೇಲೆ ಯಾವ ಭಾಗಗಳಿಗೆ ಹೆಚ್ಚಿನ ಗಮನ ಕೊಡಬೇಕು ಎನ್ನುವುದನ್ನು ಸೂಚಿಸುತ್ತದೆ, ಮುಂದೆ ಯಾವ ಕೋರ್ಸು ಮಾಡಬಹುದು ಎಂಬ ಸಲಹೆಯನ್ನೂ ಕೊಡುತ್ತದೆ. ಪ್ರಾಥಮಿಕ ವಿಷಯಗಳನ್ನು ಚೆನ್ನಾಗಿ ಕಲಿತವರಿಗೆ ಮುಂದಿನದನ್ನೂ ಕಲಿಯುವಂತೆ ಹುರಿದುಂಬಿಸುತ್ತದೆ.
ಕಲಿಕೆಗೆ ಸಂಬಂಧಿಸಿದ ಡೇಟಾವನ್ನು ಇನ್ನಷ್ಟು ವಿವರವಾಗಿ ಬಳಸುವುದೂ ಸಾಧ್ಯವಿದೆ. ಗಣಿತ ಕಲಿಯುವ ವಿದ್ಯಾರ್ಥಿಗಳ ಪೈಕಿ ಕೆಲವರು ನಿಧಾನವಾಗಿ, ಕೆಲವರು ಬೇಗಬೇಗ ಕಲಿಯುವುದು ಸಹಜ ತಾನೆ? ಪ್ರತಿ ಹಂತದಲ್ಲೂ ಅವರು ಕೊಡುವ ಉತ್ತರಗಳನ್ನು ಗಮನಿಸುವ ತಂತ್ರಾಂಶ ವಿದ್ಯಾರ್ಥಿಗಳ ಶಕ್ತಿ ಹಾಗೂ ದೌರ್ಬಲ್ಯಗಳನ್ನು ಗುರುತಿಸಬಲ್ಲದು. ಪಾಠದ ಮೊದಲು ಒಂದಷ್ಟು ಪ್ರಶ್ನೆಗಳನ್ನು ಕೇಳುವ ಮೂಲಕ ಅವರಿಗೆ ಈಗಾಗಲೇ ಏನು ಗೊತ್ತಿದೆ ಎನ್ನುವುದನ್ನು ತಿಳಿಯಬಲ್ಲದು, ಗೊತ್ತಿಲ್ಲದ ವಿಷಯಗಳ ಪುನರಾವರ್ತನೆಯನ್ನೂ ಮಾಡಿಸಬಲ್ಲದು. ಬೇಗಬೇಗ ಕಲಿಯುವವರಿಗೆ ಈಗಾಗಲೇ ಗೊತ್ತಿರುವ ವಿಷಯ ಬಿಟ್ಟು ಮುಂದಿನ ವಿಷಯಗಳನ್ನು ಬೋಧಿಸಬಲ್ಲದು, ವಿಷಯ ಅರ್ಥವಾಗಿಲ್ಲ ಎನ್ನುವವರಿಗೆ ಸರಳ ಉದಾಹರಣೆಗಳ ಮೂಲಕ ಹೆಚ್ಚಿನ ವಿವರಣೆ ಕೊಡಬಲ್ಲದು.
ಆಟದ ಮೂಲಕ ಪಾಠವನ್ನು ಸಾಧ್ಯವಾಗಿಸುವ ವ್ಯವಸ್ಥೆಗಳೂ ಅಷ್ಟೇ. ತಾವು ಸಂಗ್ರಹಿಸುವ ಡೇಟಾ ಬಳಸಿ ವಿದ್ಯಾರ್ಥಿಯ ಪ್ರಗತಿಯನ್ನು ಗಮನಿಸಿಕೊಳ್ಳುವ ಅವು ಅದಕ್ಕೆ ತಕ್ಕಂತೆ ಪಾಯಿಂಟ್, ಬ್ಯಾಜ್, ಪ್ರಮಾಣಪತ್ರ ಇತ್ಯಾದಿಗಳನ್ನು ಕೊಡುತ್ತವೆ. ಅಷ್ಟೂ ಬಳಕೆದಾರರ ಪೈಕಿ ಯಾರು ಯಾವ ಸ್ಥಾನದಲ್ಲಿದ್ದಾರೆಂದು ತೋರಿಸುವ ಪಟ್ಟಿಗಳನ್ನೂ ಪ್ರಕಟಿಸುತ್ತವೆ. ಆಟವಾಡುವಷ್ಟು ಖುಷಿಯಲ್ಲೇ ಪಾಠ ಕಲಿಯಲು ಇದು ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತದೆ.
ಸವಾಲುಗಳೂ ಇವೆ
ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯಿಂದ ಇಷ್ಟೆಲ್ಲ ಪ್ರಯೋಜನಗಳಿವೆ, ನಿಜ. ಅದರ ಜೊತೆಯಲ್ಲೇ ಹಲವು ಸವಾಲುಗಳೂ ಇವೆ. ಮೊದಲನೆಯ ಸವಾಲು, ಶಿಕ್ಷಣದ ಶಿಸ್ತನ್ನು ಕುರಿತಾದದ್ದು. ಪರೀಕ್ಷೆಯೆಲ್ಲ ಕಂಪ್ಯೂಟರಿನಲ್ಲೇ ಆದರೆ ಅದರಲ್ಲಿ ಮೋಸವೂ ನಡೆಯಬಹುದಲ್ಲ?
ಪರೀಕ್ಷೆಯಲ್ಲಿ ಮೋಸ ತಡೆಯುವುದಕ್ಕೂ ತಂತ್ರಜ್ಞಾನ ಸಹಾಯ ಮಾಡುತ್ತದೆ. ಕಂಪ್ಯೂಟರಿನ ಮುಂದೆ ಕುಳಿತು ಪರೀಕ್ಷೆ ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿಯ ವರ್ತನೆಯನ್ನು ಅದೇ ಕಂಪ್ಯೂಟರಿನಲ್ಲಿರುವ ಕ್ಯಾಮೆರಾ ಮೂಲಕ ಗಮನಿಸುವ ವ್ಯವಸ್ಥೆಗಳನ್ನು ಅದು ಮಾಡಿಕೊಡಬಲ್ಲದು. ಹಾಗೆಯೇ, ಕಂಪ್ಯೂಟರಿನ ಬೇರೊಂದು ಪರದೆಯಲ್ಲಿ ಉತ್ತರಗಳನ್ನು ಗೂಗಲ್ನಲ್ಲೋ ಚಾಟ್ಜಿಪಿಟಿ ಮೂಲಕವೋ ಹುಡುಕಲು ಹೊರಟರೆ ಅದನ್ನೂ ಗುರುತಿಸಬಲ್ಲದು.
ಇದು ತಂತ್ರಜ್ಞಾನವನ್ನು ಬಳಸಲು ತುಸು ಚೆನ್ನಾಗಿಯೇ ಬಲ್ಲವರ ಸಮಸ್ಯೆಯಾಯಿತು. ತಂತ್ರಜ್ಞಾನವನ್ನು ಬಳಸಲು ಬಾರದವರು, ಅಥವಾ ಬಳಸಲು ಸಾಧ್ಯವಿಲ್ಲದವರು ಅವಕಾಶಗಳಿಂದ ವಂಚಿತರಾಗುವ ಸಾಧ್ಯತೆ ಇಲ್ಲಿನ ಇನ್ನೊಂದು ಸವಾಲು. ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಿದಂತೆ ಉತ್ತಮ ಅಂತರಜಾಲ ಸಂಪರ್ಕ ಹಾಗೂ ಮೊಬೈಲ್-ಕಂಪ್ಯೂಟರ್ ಇತ್ಯಾದಿಗಳ ಸೌಲಭ್ಯವಿಲ್ಲದ ವಿದ್ಯಾರ್ಥಿಗಳು ಈ ಡಿಜಿಟಲ್ ಕ್ರಾಂತಿಯಿಂದ ಹೊರಗೇ ಉಳಿದುಬಿಡುವ ಅಪಾಯವೂ ಹೆಚ್ಚಾಗಿದೆ.
ತಂತ್ರಜ್ಞಾನದ ಮೂಲಕ ಕಲಿಕೆ ಎನ್ನುವುದೇ ಕಾರಣವಾಗಿ ಪರದೆಯ ಮೇಲಿನ ಅವಲಂಬನೆ ಹೆಚ್ಚಾಗುತ್ತಿರುವುದೂ ಇನ್ನೊಂದು ಸವಾಲು. ವಿವಿಧ ಕಾರಣಗಳಿಗೆ ಮೊಬೈಲನ್ನೂ ಕಂಪ್ಯೂಟರನ್ನೂ ಈಗಾಗಲೇ ಹೆಚ್ಚುಹೆಚ್ಚಾಗಿ ಬಳಸುತ್ತಿರುವ ವಿದ್ಯಾರ್ಥಿಗಳು ಇನ್ನೂ ಹೆಚ್ಚು ಸಮಯವನ್ನು ಅವುಗಳೊಡನೆ ಕಳೆಯುವುದು ಎಷ್ಟು ಸರಿ ಎನ್ನುವ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ.
ಕಲಿಕೆಯನ್ನು ಕುರಿತ ಡೇಟಾ ಬಳಸುವುದೇನೋ ಸರಿ, ಆದರೆ ಅದು ವಿದ್ಯಾರ್ಥಿಗಳ ಖಾಸಗಿತನಕ್ಕೆ ಧಕ್ಕೆತರಬಹುದೇ ಎನ್ನುವುದು ಇನ್ನೊಂದು ಪ್ರಶ್ನೆ. ಪರೀಕ್ಷೆ ಬರೆಯುವಾಗ ವೀಡಿಯೊ ದಾಖಲಿಸಿಕೊಳ್ಳುವುದಷ್ಟೇ ಅಲ್ಲ, ಸಣ್ಣ ತರಗತಿಯೊಂದರಲ್ಲಿ ನಾನು ಗಣಿತ ಕಲಿಯಲು ಕಷ್ಟಪಟ್ಟಿದ್ದೆ ಎನ್ನುವಂತಹ ಅಂಶ ಡಿಜಿಟಲ್ ದಾಖಲೆಗಳಲ್ಲಿ ಶಾಶ್ವತವಾಗಿ ಉಳಿದುಕೊಂಡುಬಿಟ್ಟರೆ? ಇಂತಹ ವಿಷಯಗಳು ಮುಂದೆ ಯಾವಾಗಲೋ ಬೇರೆಯವರ ಕೈಗೆ ಸಿಕ್ಕು ದುರುಪಯೋಗವಾಗುವ ಸಾಧ್ಯತೆ ಗಂಭೀರ ಆತಂಕವನ್ನು ಹುಟ್ಟುಹಾಕುತ್ತದೆ.
ತಂತ್ರಜ್ಞಾನದ ಸವಾಲಿಗೆ ತಂತ್ರಜ್ಞಾನದ್ದೇ ಜವಾಬು
ಇಷ್ಟೆಲ್ಲ ಸವಾಲುಗಳ ನಡುವೆ ಒಂದು ಕುತೂಹಲದ ಸಂಗತಿಯೂ ಇದೆ: ತಂತ್ರಜ್ಞಾನದ ಬಳಕೆಯಿಂದಾಗಿ ತಲೆಯೆತ್ತುವ ಸವಾಲುಗಳಿಗೆ ತಂತ್ರಜ್ಞಾನದ ಸಹಾಯದಿಂದಲೇ ಜವಾಬು ನೀಡುವುದೂ ಸಾಧ್ಯ!
ಅದು ಹೇಗೆ? ಇಂದಿನ ಬಹುತೇಕ ಸಾಧನಗಳು ತಮ್ಮ ಕೆಲಸ ಸಾಧಿಸಲು ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ತಂತ್ರಜ್ಞಾನ ಬಳಸುತ್ತವೆ. ಕೆಲಸ ಕಲಿಯಲು ಅವು ಬಳಸುವ ಪ್ರಕ್ರಿಯೆಗೆ ಮಶೀನ್ ಲರ್ನಿಂಗ್ (machine learning – ಎಂಎಲ್) ಎಂದು ಹೆಸರು. ಹಾಗೆ ಅವು ಕಲಿಯುವುದು ಡೇಟಾದಿಂದಲೇ. ಲಕ್ಷಾಂತರ ವಿದ್ಯಾರ್ಥಿಗಳು ಗಣಿತದ ಸಮಸ್ಯೆ ಬಿಡಿಸುವ ಅಥವಾ ಭಾಷೆಯ ವ್ಯಾಕರಣ ಕಲಿಯುವ ಕ್ರಮವನ್ನು ಗಮನಿಸುವ ತಂತ್ರಾಂಶ ಅದರಿಂದಲೇ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತದೆ. ಪರೀಕ್ಷೆಯಲ್ಲಿ ಯಾವೆಲ್ಲ ಬಗೆಯ ಮೋಸಗಳು ನಡೆಯಬಹುದು ಎಂದು ತಿಳಿದುಕೊಂಡು ವಿದ್ಯಾರ್ಥಿಯ ಸಂಶಯಾಸ್ಪದ ವರ್ತನೆಗಳನ್ನು ಗುರುತಿಸುತ್ತವೆ.
ಎಐ ಸಹಾಯ ಪಡೆದು ನಡೆಸುವ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳೂ ಎಐ ಬಳಸಿ ವಂಚಿಸಬಹುದಲ್ಲ? ಗುರುವಿಗೇ ತಿರುಮಂತ್ರ ಹಾಕುವ ಅಂತಹ ಸನ್ನಿವೇಶಗಳನ್ನು ಗುರುತಿಸುವುದನ್ನೂ ತಂತ್ರಾಂಶಗಳು ಕಲಿಯುತ್ತಿವೆ.
ಆದರೆ ಇಲ್ಲೂ ಇನ್ನೊಂದು ಸವಾಲಿದೆ: ಎಲ್ಲ ಕೆಲಸಗಳನ್ನೂ ಎಐ ತಂತ್ರಜ್ಞಾನಕ್ಕೇ ಒಪ್ಪಿಸುವುದು ಕೂಡ ಅಪಾಯಕಾರಿಯಾಗಬಲ್ಲದು. ಡೇಟಾ ಸಹಾಯದಿಂದ ಅದು ಕಲಿಯುವುದೇನೋ ಸರಿಯೇ. ಆದರೆ ಹಾಗೆ ಕಲಿಯಲು ಅದು ಬಳಸುವ ಡೇಟಾದಲ್ಲಿ ಏನಾದರೂ ತಪ್ಪು ಅಥವಾ ಪೂರ್ವಗ್ರಹಗಳಿದ್ದರೆ ಅದು ವಿದ್ಯಾರ್ಥಿಗಳಿಗೆ ತೊಂದರೆ ಉಂಟುಮಾಡುವುದೂ ಸಾಧ್ಯ. ಹಾಗಾಗಿಯೇ, ಎಐ ತಂತ್ರಜ್ಞಾನ ಹೇಗೆ ಕಲಿಯುತ್ತಿದೆ ಎನ್ನುವುದರ ಜೊತೆಯಲ್ಲೇ ಏನನ್ನು ಕಲಿಯುತ್ತಿದೆ ಎನ್ನುವುದೂ ಮುಖ್ಯವಾಗುತ್ತದೆ.
ಅಲ್ಲಿಗೆ, ಶಿಕ್ಷಣದಲ್ಲಿ ತಂತ್ರಜ್ಞಾನವೆನ್ನುವುದು ಕೇವಲ ಗೂಗಲ್ ಕ್ಲಾಸ್ರೂಮ್ ಅಥವಾ ವಾಟ್ಸ್ಆಪಿನ ಸಂವಾದವಷ್ಟೇ ಆಗಿ ಉಳಿದಿಲ್ಲ. ಇಡೀ ಶಿಕ್ಷಣ ಕ್ಷೇತ್ರದ ಸ್ವರೂಪವನ್ನೇ ಬದಲಿಸಬಲ್ಲ ಅಗಾಧ ಸಾಮರ್ಥ್ಯವನ್ನು ಅದು ತೋರಿಸುತ್ತಿದೆ. ಹಾಗಿದ್ದರೂ ಅದು ಗುರು-ಶಿಷ್ಯರ ನಡುವಿನ ಸಂಬಂಧಕ್ಕೆ ಅಥವಾ ಶಾಲೆಯ ವಾತಾವರಣಕ್ಕೆ ಪರ್ಯಾಯವಲ್ಲ, ಆಗಲೂಬಾರದು. ಹೊಸ ವಿಷಯಗಳನ್ನು ಕಲಿಯುವ ವಿದ್ಯಾರ್ಥಿಗೆ, ವಿದ್ಯಾರ್ಥಿಗೆ ಮಾರ್ಗದರ್ಶನ ನೀಡುವ ಗುರುಗಳಿಗೆ ತಂತ್ರಜ್ಞಾನ ಸಹಾಯಕನಂತೆ ಮಾತ್ರವೇ ಇರಬೇಕು. ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಮೊಬೈಲ್ ಎತ್ತಿಟ್ಟು ಓದಿಕೊಳ್ಳಬೇಕು ಎನ್ನುವಲ್ಲಿ ನಾವು ತೋರಿಸುವ ಶಿಸ್ತು ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಅಳವಡಿಸುವಲ್ಲೂ ಇರಬೇಕು. ಹಾಗೆ ಆದಾಗ ಮಾತ್ರವೇ ನಮ್ಮ ಶಿಕ್ಷಣ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಿ ತಂತ್ರಜ್ಞಾನದ ಸಹಾಯ ಪಡೆದುಕೊಳ್ಳಬಲ್ಲದು, ವಿದ್ಯಾರ್ಥಿಗಳ ಪ್ರತಿಭೆಗೆ ಹೆಚ್ಚಿನ ಮೆರುಗು ತಂದುಕೊಡಬಲ್ಲದು.
***






