ಇಂದ್ರಿಯಾತೀತ ಭವದ ಭಾವನೆಯು ಕೊಡುವ ಸ್ತರವೇ?
ಅದರಲ್ಲಿ ವಿಹರಿಸುತಿಹ ಬೆಡಗೆ
ಸದಾ ಉದ್ಭೋದಿಸುವ ನಿಶ್ಚಲ ನೀರವ ಮೌನವೇ
ನಿನಗಿದೋ ನಮನವನು ಸಲಿಸುತಿಹನು
ಭುವಿಯ ಲೌಕಿಕದ ಪರಮಾಣು ಮಹಾಶಯನು
ನೀರವತೆಯೇ ಜಗದ ಮೂಲವು
ಅದರೊಳಗಿನ ಪ್ರಶಾಂತತೆಯೇ ಜಗದ ಸತ್ಯದ ಸಾಧನವು
ಮನದಿ ಉದಯಿಸುವ ನೀರವ ಮೌನವೇ ಪರಮ ಸತ್ಯವು
ಪ್ರಶಾಂತತೆ ಮುಖ್ಯವು ಈ ದೇಹದೊಳಗಿನ ಆತ್ಮಕೆ
ನೀರವ ಮೌನದ ಅನುಸಂಧಾನದಲಿ ಇಹ ಮೌನರೂಪನಿಗೆ
ಚಿತ್ಗಗನ ದಿಟ್ಟಿಸಿ ನೆಲೆಮುಗಿಲಿನ ಭೇದವರಿಯದ ಚಿದಾತ್ಮನಿಗೆ
ನಮಿಸುವೆನು ಪರಮಾಣು ಕಿಂಕರನು.
ನೀಲ ಗಗನದ ಚಿತ್ರ ವಿಚಿತ್ರ ಚಿತ್ತಾರಗಳ ಸಾಲುಗಳು
ಮನಸಿನ ಚಿತ್ತ ವಿಕಾರದ ಪರೀಕ್ಷೆಗಳು
ಇದ ಮೀರಿ ನೀಲಾಕಾಶವ ದಿಟ್ಟಿಸೆ
ಲಭಿಪುದು ನಿರ್ವಿಕಲ್ಪ ಅನುಭವದ ಸಾಕಾರವು
ಇದ ಸಾಧಿಪನು ವಿಕೃತಿಗಳ ನಿರಾಬಾಧಿತನು
ಮಾನಸೆಯವೋಲ್ ಹಂಸೆಯವೋಲ್
ಮಾನಸವಾಗ್ವನಿತೆ ಮನದೊಳ್ ನೆಲೆನಿಂದಿರ್ಕೆ
ಮನಂ ಬಯ್ಪುದು ಬ್ರಹ್ಮಾನಂದ ಮೌನಂ
ಇದಂ ಸಾಧಿಪನ್ ಬ್ರಹ್ಮಾನಂದಾತ್ಮಭವನ್ ಮಹಾಶಯನ್






