ಕಲ್ಲಿದ್ದಲು ಗಣಿಗಾರಿಕೆಗೆ ತಪ್ಪು ವಿತರಣೆಯ ಮಸಿ

ನೈಸರ್ಗಿಕ ರಾಷ್ಟ್ರೀಯ ಸಂಪನ್ಮೂಲಗಳು ರಾಷ್ಟ್ರದ ಸಂಪತ್ತಾಗಿದ್ದು ಅವುಗಳ ರಕ್ಷಣೆಯ ಹೊಣೆ ಮತ್ತು ಅದರ ಯುಕ್ತ ಬಳಕೆಗಾಗಿ ಮಾಡುವ ವಿತರಣೆಗಳು ಆಡಳಿತದ ಚುಕ್ಕಾಣಿ ಹಿಡಿದವರ ಆದ್ಯತೆಯಾಗಿದೆ. ದೇಶದ ಮುಖ್ಯ ನಿಕ್ಷೇಪಗಳಲ್ಲಿ ‘ಕಪ್ಪು ಬಂಗಾರ’ ಎಂದು ಗುರುತಿಸಿಕೊಂಡಿರುವ ಕಲ್ಲಿದ್ದಲು ಶತಮಾನದಿಂದಲೂ ದೇಶದ ಬೆಳವಣಿಗೆಗಾಗಿ ಕಾಯ್ದಿಟ್ಟು ಉಪಯೋಗಿಸಲ್ಪಡಬೇಕಿರುವ ರಕ್ಷಿತ ನಿಧಿಯೆನಿಸಿದೆ.

ಭಾರತದ ಇಂಧನ ಅಗತ್ಯಗಳಿಗೆ ಕಲ್ಲಿದ್ದಲು ಮೂಲ ಸಂಪನ್ಮೂಲವಾಗಿದ್ದು, ದೇಶದ ಅರ್ಧಕ್ಕಿಂತಲೂ ಹೆಚ್ಚು ವಿದ್ಯುತ್ ಉತ್ಪಾದನೆಯು ಕಲ್ಲಿದ್ದಲು ಆಧಾರಿತ ಉಷ್ಣ ಸ್ಥಾವರಗಳನ್ನು ಅವಲಂಬಿಸಿದೆ. ದೇಶದ ವಾಣಿಜ್ಯ ಇಂಧನ ಅಗತ್ಯಗಳಲ್ಲಿ ಶೇಕಡಾ ೬೫ಕ್ಕಿಂತಲೂ ಹೆಚ್ಚು ಕಲ್ಲಿದ್ದಲಿನಿಂದ ಪೂರೈಸಲ್ಪಡುತ್ತದೆ. ಇದು ವಿದ್ಯುತ್ ಉತ್ಪಾದಿಸಲು, ಉಕ್ಕು ಮತ್ತು ಸಿಮೆಂಟ್ ತಯಾರಿಸಲು ಅವಶ್ಯವಾದ ಇಂಧನವೆನಿಸಿದೆ.

ವಿಶ್ವದ ಬೃಹತ್ ಕಲ್ಲಿದ್ದಲು ಉತ್ಪಾದಕರಲ್ಲಿ ಒಂದಾಗಿರುವ ಭಾರತವು ಈ ಖನಿಜದಲ್ಲಿ ಸಂಪದ್ಭರಿತವಾಗಿದ್ದು, ಜಾರ್ಖಂಡ್, ಛತ್ತೀಸ್‌ಗಢ, ಬಂಗಾಳ, ಒರಿಸ್ಸಾ, ಮಧ್ಯಪ್ರದೇಶ ಮತ್ತು ದೇಶದ ದಕ್ಷಿಣದ ರಾಜ್ಯಗಳಲ್ಲಿ ಸಮೃದ್ಧವಾಗಿ ಸಿಗುತ್ತದೆ. ಉತ್ತಮ ಗಣಿಗಾರಿಕೆಗಾಗಿ ಸರ್ಕಾರವು ಕಲ್ಲಿದ್ದಲು ಹೊಂದಿರುವ ಪ್ರದೇಶಗಳನ್ನು ಖಾಸಗಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆ/ಕಂಪೆನಿಗಳಿಗೆ ‘ಬ್ಲಾಕ್’ಗಳನ್ನಾಗಿ ವಿಂಗಡಿಸಿ ಗುತ್ತಿಗೆ ನೀಡುತ್ತಿದೆ. ಸರ್ಕಾರೀ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್ (Coal India Ltd.) ಭಾರತದಲ್ಲಿ ಕಲ್ಲಿದ್ದಲನ್ನು ಮಾರಾಟ ಮಾಡುವ ಏಕೈಕ ಸಂಸ್ಥೆಯಾಗಿದ್ದು, ವಿಶ್ವದ ಅತಿದೊಡ್ಡ ಕಲ್ಲಿದ್ದಲು ಉತ್ಪಾದಕ ಸಂಸ್ಥೆಯೂ ಆಗಿದೆ.

ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಹೆಚ್ಚಾಗಿ ಖಾಸಗಿಯವರ ಕೈಯಲ್ಲಿತ್ತು, ಇದನ್ನು ಬ್ರಿಟಿಷ್ ಕಂಪೆನಿಗಳು ಮತ್ತು ಭಾರತೀಯ ಉದ್ಯಮಿಗಳು ನಡೆಸುತ್ತಿದ್ದರು. ಸ್ವಾತಂತ್ರಾö್ಯನಂತರದಲ್ಲಿ ಕಲ್ಲಿದ್ದಲನ್ನು ಕೈಗಾರಿಕೀಕರಣ ಮತ್ತು ಇಂಧನ ಭದ್ರತೆಗೆ ಸಂಪನ್ಮೂಲವೆಂದು ಪರಿಗಣಿಸಿ, ಗಣಿಗಳ ಕಾಯ್ದೆ-೧೯೫೨ ಮತ್ತು ಇತರ ಸುರಕ್ಷತಾ ನಿಯಮಗಳ ಕಾಯ್ದೆಗಳನ್ನು ತರಲಾಯಿತು. ಆದರೆ ಗಣಿಗಳ ಮಾಲೀಕತ್ವವು ಖಾಸಗಿಯಾಗಿಯೇ ಉಳಿಯಿತು. ಅವೈಜ್ಞಾನಿಕ ಗಣಿಗಾರಿಕೆ, ಸುರಕ್ಷತೆಯ ಮಾನದಂಡಗಳ ಕೊರತೆ ಇತ್ಯಾದಿ ಕಾರಣಗಳಿಂದ ಕೇಂದ್ರಸರ್ಕಾರವು ೧೯೭೩ರಲ್ಲಿ ಕಲ್ಲಿದ್ದಲು ಗಣಿಗಾರಿಕೆಯನ್ನು ರಾಷ್ಟ್ರೀಕರಣಗೊಳಿಸಿತು. ೧೯೭೬ರಲ್ಲಿ ಕಬ್ಬಿಣ ಮತ್ತು ಉಕ್ಕಿನ ಖಾಸಗಿ ಉತ್ಪಾದಕರು ತಮ್ಮ ಸ್ವಂತ ಬಳಕೆಗಾಗಿ ಕಲ್ಲಿದ್ದಲು ಗಣಿಗಳನ್ನು ಗುತ್ತಿಗೆ ಪಡೆಯುವ ಅವಕಾಶವನ್ನು ಮತ್ತೆ ಸರ್ಕಾರ ಮಾಡಿಕೊಟ್ಟಿತು.

೧೯೯೩ರಲ್ಲಿ ಬಂದ ಉದಾರೀಕರಣ ನೀತಿಯ ಕಾರಣ, ಕೇಂದ್ರವು ಕಲ್ಲಿದ್ದಲು ಗಣಿಗಳನ್ನು ವಿವಿಧ ಸಂಸ್ಥೆಗಳಿಗೆ ಉದ್ದೇಶಿತ (Captive) ಬಳಕೆಗಾಗಿ ಹಂಚಿಕೆ ಮಾಡಲು ನಿರ್ಧರಿಸಿತು. (ಉದ್ದೇಶಿತ ಅಥವಾ ಕ್ಯಾಪ್ಟಿವ್ ಗಣಿಗಾರಿಕೆಯಲ್ಲಿ ಸಂಸ್ಥೆಯು ಕಲ್ಲಿದ್ದಲನ್ನು ತನ್ನದೇ ಬಳಕೆಗೆ ಉಪಯೋಗಿಸಬೇಕು ಮತ್ತು ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಬಾರದು ಎನ್ನುವ ನಿರ್ಬಂಧವಿದೆ.)

೧೯೯೩ರಿಂದ ಕಂಪೆನಿಗಳು ತಮ್ಮದೇ ಆದ ಕಲ್ಲಿದ್ದಲು ಗಣಿಗಳನ್ನು ಗುತ್ತಿಗೆ ಪಡೆಯಲು ಅವಕಾಶ ಪಡೆದವು. ಆ ಕಾರಣದಿಂದ ೧೯೯೩ ಮತ್ತು ೨೦೦೫ರ ನಡುವೆ ಅಂತಹ ಗಣಿಗಳನ್ನು ನಿರ್ವಹಿಸಲು ೪೧ ಪರವಾನಗಿಗಳನ್ನು ಖಾಸಗಿ ಕಂಪೆನಿಗಳಿಗೆ ಮತ್ತು ೨೯ ಸರ್ಕಾರೀ ಸ್ವಾಮ್ಯದ ಕಂಪೆನಿಗಳಿಗೆ ವಿತರಣೆ ಮಾಡಲಾಯಿತು.

ದೋಷಪೂರಿತ ನಿರ್ಧಾರಗಳು

ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ೨೦೦೪ರಲ್ಲಿ ಅಧಿಕಾರಕ್ಕೆ ಬಂದಾಗ, ಯೋಜಿತ ಹೊಸ ಉಷ್ಣ ವಿದ್ಯುತ್ ಸ್ಥಾವರಗಳ ಆವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ಕಲ್ಲಿದ್ದಲನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ ಎಂದು ಭಾವಿಸಿತು. ಆದ್ದರಿಂದ, ಖಾಸಗಿ ಮತ್ತು ಸರ್ಕಾರೀ ಸ್ವಾಮ್ಯದ ಕಂಪೆನಿಗಳೆರಡಕ್ಕೂ ಹೆಚ್ಚಿನ ಗಣಿಗಳನ್ನು ವಿತರಿಸಲು ನಿರ್ಧರಿಸಿತು. ೨೦೦೬ ಮತ್ತು ೨೦೦೯ರ ನಡುವೆ ಹೊಸದಾಗಿ ೭೫ ಕಲ್ಲಿದ್ದಲು ಬ್ಲಾಕ್‌ಗಳ ಪರವಾನಗಿಗಳನ್ನು ಖಾಸಗಿ ಸಂಸ್ಥೆಗಳಿಗೆ ಮತ್ತು ೭೦ ಸರ್ಕಾರೀ ಸಂಸ್ಥೆಗಳಿಗೆ ನೀಡಲಾಯಿತು.

೨೦೦೪ರಿಂದ ಕಲ್ಲಿದ್ದಲು ವಿತರಣೆಯಲ್ಲಿ ಅನೇಕ ಲೋಪಗಳು ಕಂಡುಬಂದವು. ಅವು ಹಗರಣದ ಸ್ವರೂಪ ಪಡೆದು ‘ಕೋಲ್‌ಗೇಟ್ ಹಗರಣ’ (Coalgate Scam) ಎಂದು ಕುಪ್ರಸಿದ್ಧಗೊಂಡು, ದೇಶದ ಕಲ್ಲಿದ್ದಲು ಬ್ಲಾಕ್ ವಿತರಣೆಗೆ ಸಂಬಂಧಿಸಿದ ಅಕ್ರಮಗಳು ಮತ್ತು ಭ್ರಷ್ಟಾಚಾರಗಳು ಅನಾವರಣಗೊಂಡವು. ಕಲ್ಲಿದ್ದಲು ಬ್ಲಾಕ್‌ಗಳ ವಿತರಣೆ ಮಾಡುವ ವಿಧಾನಗಳಲ್ಲಿ ಕಾನೂನುಬಾಹಿರ ಅಂಶಗಳಿದ್ದು ಸರ್ಕಾರದ ಖಜಾನೆಗೆ ಗಣನೀಯ ಆರ್ಥಿಕ ನಷ್ಟವಾಗಿರುವುದು ಕಂಡುಬಂದಿತು. ಕೇಂದ್ರದ ಸಚಿವರು ಮತ್ತು ಅಧಿಕಾರಿಗಳು ಸೇರಿದಂತೆ ಹಲವಾರು ಸರ್ಕಾರೀ ನೌಕರರು ಹಗರಣದಲ್ಲಿ ಭಾಗಿಯಾಗಿ ಖಾಸಗಿ ಕಂಪೆನಿಗಳೊಂದಿಗೆ ಕೈಜೋಡಿಸಿದ್ದು ಬಹಿರಂಗವಾಗಿ ಸಾರ್ವಜನಿಕರಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಯಿತು.

ಕೇಂದ್ರಸರ್ಕಾರವು ಸ್ಪರ್ಧಾತ್ಮಕವಾದ ಹರಾಜು (bidding) ಪ್ರಕ್ರಿಯೆಯ ಮೂಲಕ ಕಲ್ಲಿದ್ದಲು ಬ್ಲಾಕ್‌ಗಳನ್ನು ಹಂಚುವ ಅಧಿಕಾರವನ್ನು ಹೊಂದಿದ್ದರೂ ಸಹ ಆ ಪ್ರಕ್ರಿಯೆಯನ್ನು ನಿಲ್ಲಿಸಲಾಯಿತು. ಅದರ ಬದಲು, ಕಲ್ಲಿದ್ದಲು ನಿಕ್ಷೇಪಗಳನ್ನು ಕಂಪೆನಿಗಳಿಗೆ ಪಾರದರ್ಶಕವಲ್ಲದ ವಿಧಾನಗಳ ಮೂಲಕ ಹಂಚುವಿಕೆ ಮಾಡಲಾಯಿತು.

ರಾಜ್ಯಗಳ ಶಿಫಾರಸು ಪತ್ರ ಪಡೆದು ಬರುವ ಅರ್ಜಿದಾರರಿಗೆಲ್ಲ ಕಲ್ಲಿದ್ದಲು ಘಟಕಗಳನ್ನು ಮಂಜೂರು ಮಾಡಲಾಯಿತು. ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿಯು ಅಧ್ಯಕ್ಷರಾಗಿದ್ದ ‘ಅಂತರ್ ಸಚಿವಾಲಯದ ಪರಿಶೀಲನಾ ಸಮಿತಿ’ಯು (Inter-Ministerial Review Committee) ಶಿಫಾರಸು ಮಾಡಿದ ಖಾಸಗಿ ಕಂಪೆನಿಗಳಿಗೆ ಕೋಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಗಣಿಗಾರಿಕೆಯ ಗುತ್ತಿಗೆ ನೀಡತೊಡಗಿತು. ಖಾಸಗಿ ಕಂಪೆನಿಗಳಿಗೆ ಮಾಡುವ ಬ್ಲಾಕ್‌ಗಳ ಹಂಚುವಿಕೆಯಲ್ಲಿ ಅಕ್ರಮಗಳು ಕಾಣಿಸಿಕೊಂಡವು. ಕಲ್ಲಿದ್ದಲು ದೊರಕುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇತರ ಸಚಿವರು ನಿರ್ದಿಷ್ಟ ಖಾಸಗಿ ಕಂಪೆನಿಗಳಿಗೆ ಬ್ಲಾಕ್‌ಗಳ ಹಂಚಿಕೆ ಮಾಡುವಂತೆ ಪ್ರಭಾವ ಬೀರತೊಡಗಿದರು. ಈ ರೀತಿ ಪ್ರಭಾವಕ್ಕೊಳಗಾದ ಕ್ರಮಗಳು ಪಕ್ಷಪಾತ ಮತ್ತು ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿತು.

ಅನೇಕ ಪ್ರಭಾವೀ ಖಾಸಗಿ ಸಂಸ್ಥೆಗಳು ತಮ್ಮ ಸ್ವಂತ ವಿದ್ಯುತ್ ಉತ್ಪಾದಿಸಲು ಅಗತ್ಯಕ್ಕಿಂತ ಹೆಚ್ಚಿನ ಕಲ್ಲಿದ್ದಲನ್ನು ಹೊಂದಿರುವ ಕಲ್ಲಿದ್ದಲು ನಿಕ್ಷೇಪಗಳಿಗೆ ಪರವಾನಗಿಗಳನ್ನು ಪಡೆದವು. ಹಲವಾರು ಖಾಸಗಿ ಸಂಸ್ಥೆಗಳು ತಮ್ಮ ಸ್ವಂತ ಬಳಕೆಗಾಗಿ ಉದ್ದೇಶಿಸಲಾದ ಕಲ್ಲಿದ್ದಲನ್ನು ಮುಕ್ತ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಿರುವುದು ಕಂಡುಬಂತು.

ಆ ಸಮಯದಲ್ಲಿ ಕೇಂದ್ರದ ಕಲ್ಲಿದ್ದಲು ಸಚಿವಾಲಯವು ೧೯೯೨ರಲ್ಲಿ ಸ್ಥಾಪಿಸಲಾದ ‘ಸ್ಕ್ರೀನಿಂಗ್ ಸಮಿತಿ’ಯ (Screen Committee) ಮೂಲಕ ಸರ್ಕಾರೀ ಸ್ವಾಮ್ಯದ ಮತ್ತು ಖಾಸಗಿ ಕಂಪೆನಿಗಳಿಗೆ ಕಾಯ್ದಿಟ್ಟ ಬ್ಲಾಕ್‌ಗಳ (Captive blocks) ಪರವಾನಗಿಗಳನ್ನು ನೀಡಿತು. (ಕ್ಯಾಪ್ಟಿವ್ ಬ್ಲಾಕ್‌ಗಳೆಂದರೆ ವಿದ್ಯುತ್ ಉತ್ಪಾದನೆ, ಉಕ್ಕು ಮತ್ತು ಸಿಮೆಂಟ್ ಕೈಗಾರಿಕೆಗಳ ಬಳಕೆಗಾಗಿ ನಿರ್ದಿಷ್ಟ ಸಂಸ್ಥೆಗಾಗಿ ನಿಗದಿಪಡಿಸಿದ ಗಣಿಗಳು.) ಈ ಪರವಾನಗಿಗಳನ್ನು ವಿತರಣೆ ಮಾಡುವ ಮಾನದಂಡಗಳನ್ನು ೨೦೦೫, ೨೦೦೬ ಹಾಗೂ ೨೦೦೮ರಲ್ಲಿ ಮೂರು ಬಾರಿ ಮಾರ್ಪಡಿಸಲಾಯಿತು.

ಅಂದಿನ ಕೇಂದ್ರಸರ್ಕಾರವು ‘ಪರವಾನಗಿ ರಾಜ್’ (Licence Raj) ಪದ್ಧತಿಯನ್ನು ಹಿಂಬಾಗಿಲಿನಿಂದ ತರಲು ಉತ್ಸುಕವಾಗಿರುವಂತೆ ಕಂಡುಬಂತು. ಇದು ಮೇಲ್ನೋಟಕ್ಕೆ ಸರಳ ವಿಧಾನವೆನಿಸಿದರೂ ಸೂಕ್ಷö್ಮವಾಗಿ ಗಮನಿಸಿದಾಗ ಅದು ಭ್ರಷ್ಟಾಚಾರಕ್ಕೆ ಸಹಕಾರಿಯಾಗುವ ಯೋಜನೆಯಾಗಿತ್ತು. ‘ಮೊದಲು ಬಂದವರಿಗೆ ಮೊದಲ ಆದ್ಯತೆ’ಯ ಕಾರಣವಾಗಿ ಆ ವ್ಯವಸ್ಥೆಯು ವಂಚನೆಗೆ ಅನುಕೂಲಕರವೆನಿಸಿತು.

೨೦೦೪ರಿಂದ ಈ ಪ್ರಕ್ರಿಯೆಯು ಉದಾರೀಕರಣ ಮತ್ತು ಖಾಸಗೀಕರಣಕ್ಕೆ ಬದಲಾಯಿತು. ಇದು ಖಾಸಗಿ ಸಂಸ್ಥೆಗಳಿಗೆ ಕಲ್ಲಿದ್ದಲು ಬ್ಲಾಕ್‌ಗಳ ಹಂಚಿಕೆಗೆ ಕಾರಣವಾಯಿತು. ಮುಕ್ತ ಹರಾಜು ನಡೆಸುವ ಬದಲು, ವೈಯಕ್ತಿಕ ಆಯ್ಕೆಯಿಂದ ಕಲ್ಲಿದ್ದಲು ಬ್ಲಾಕ್‌ಗಳನ್ನು ಸರ್ಕಾರವು ವಿತರಣೆ ಮಾಡಲು ಪ್ರಾರಂಭಿಸಿತು. ಯಾವುದೇ ಸ್ಪರ್ಧಾತ್ಮಕ ಹರಾಜಿನ ಪ್ರಕ್ರಿಯೆ ಇಲ್ಲದೆ, ತನ್ನದೇ ಆದ ಆದ್ಯತೆಗಳ ಆಧಾರದ ಮೇಲೆ ಕಂಪೆನಿಗಳಿಗೆ ಕಲ್ಲಿದ್ದಲು ಬ್ಲಾಕ್‌ಗಳನ್ನು ಹಂಚಿಕೆ ಮಾಡಿತು. ರಾಜಕೀಯ ಪ್ರಭಾವವಿರುವ ಸಂಸ್ಥೆಗಳು ಬ್ಲಾಕ್‌ಗಳನ್ನು ಪಡೆಯತೊಡಗಿದವು. ಗಣಿಗಾರಿಕೆ ಮತ್ತು ಸಂಪನ್ಮೂಲಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದ ಸಂಸ್ಥೆಗಳು ಮೂಲೆಗುಂಪಾದವು. ಪಕ್ಷಪಾತ ಮತ್ತು ಪ್ರಭಾವಗಳ ಕಾರಣ ವಿತರಣೆಗಳಲ್ಲಿ ನಿಯಂತ್ರಣ ತಪ್ಪಿತು.

ಅನೇಕ ಸಂಸ್ಥೆಗಳು ತಮ್ಮ ಸಾಮರ್ಥ್ಯಕ್ಕೂ ಮೀರಿ ನಿಜವಾಗಿ ಅಗತ್ಯವಿರುವ ಕಲ್ಲಿದ್ದಲಿನ ಬಗೆಗೆ ಪುರಾವೆಗಳಿಲ್ಲದೆ ಮತ್ತು ಸಮರ್ಥನೆಗಳನ್ನು ಕೊಡದೆ ಬ್ಲಾಕ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದವು.

ಸಚಿವರುಗಳ ವೈಫಲ್ಯ

ಕೇಂದ್ರದಲ್ಲಿ ಪರಿಸರ ಮತ್ತು ಅರಣ್ಯ ರಾಜ್ಯ ಸಚಿವರು ಕಲ್ಲಿದ್ದಲು ಗಣಿಗಾರಿಕೆಗೆ ಸಂಬಂಧಿಸಿದ ಅನೇಕ ಅನುಮತಿಗಳು ಪರಿಸರದ ಹಾನಿಗೆ ಕಾರಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಅವರ ಹೇಳಿಕೆಯು ಮಾಧ್ಯಮಗಳ ಮತ್ತು ವಿರೋಧ ಪಕ್ಷಗಳ ಗಮನ ಸೆಳೆಯಿತು. ಆ ಮೂಲಕ ಸಾಕಷ್ಟು ಗುಪ್ತವಾಗಿದ್ದ ಗಣಿಗಾರಿಕೆ ವಿಷಯ ಬಹಿರಂಗವಾಗತೊಡಗಿತು. ಆ ಕಾರಣದಿಂದ, ಕಲ್ಲಿದ್ದಲು ಗಣಿ ಹಂಚುವಿಕೆಯಲ್ಲಿ ನಡೆದ ಲೋಪಗಳು ಸ್ಪಷ್ಟವಾಗತೊಡಗಿದವು.

ಮನಮೋಹನಸಿಂಗ್ ಪ್ರಧಾನಿಯಾಗಿ ಕಲ್ಲಿದ್ದಲು ಹಂಚಿಕೆ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಹೆಚ್ಚಿನ ಆದ್ಯತೆ ನೀಡದ ಕಾರಣದಿಂದ ವೈಫಲ್ಯಗಳು ಹೆಚ್ಚಾದವು. ವೀರಪ್ಪ ಮೊಯ್ಲಿ ಕಲ್ಲಿದ್ದಲು ಸಚಿವರಾಗಿ (೨೦೦೯ರಿಂದ ೨೦೧೪) ಸರಿಯಾದ ಪರಿಶೀಲನೆಗಳಿಲ್ಲದೆ ವಿತರಣೆ ಮಾಡಿದ ಆರೋಪಗಳನ್ನು ಎದುರಿಸಬೇಕಾಯಿತು. ಸುಶೀಲ್‌ಕುಮಾರ್ ಶಿಂಧೆ ಸಚಿವರಾಗಿದ್ದ (೨೦೦೪ರಿಂದ ೨೦೦೯) ಅವಧಿಯಲ್ಲಿ ಸಹ ವಿತರಣೆಗಳ ಪ್ರಕ್ರಿಯೆಯಲ್ಲಿ ಅಕ್ರಮಗಳಾಗಿವೆ ಎಂಬ ಆರೋಪಗಳು ಕೇಳಿಬಂದವು.

ಕಲ್ಲಿದ್ದಲು ಸಚಿವಾಲಯದ ಹಲವಾರು ಹಿರಿಯ ಅಧಿಕಾರಿಗಳು, ಕಾರ್ಯನಿರ್ವಾಹಕರು ಮತ್ತು ಕೆಲವು ಕಂಪೆನಿಗಳು ಹರಾಜು (Bidding) ಪ್ರಕ್ರಿಯೆಗಳಿಲ್ಲದೆ ಕಲ್ಲಿದ್ದಲು ನಿಕ್ಷೇಪ ಪಡೆದ ಆರೋಪಕ್ಕೊಳಗಾದರು.

‘ಸಿಎಜಿ’ ವರದಿ

ಮಾರ್ಚ್ ೨೦೧೨ರಲ್ಲಿ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (Comptroller and Auditor General of India) ಕಲ್ಲಿದ್ದಲು ಬ್ಲಾಕ್‌ಗಳ ಗುತ್ತಿಗೆ ನೀಡುವ ಕೇಂದ್ರಸರ್ಕಾರದ ಮಾರ್ಗಸೂಚಿಗಳು ಪಾರದರ್ಶಕವಾಗಿಲ್ಲ ಎಂದು ತನ್ನ ಕರಡು ವರದಿಯಲ್ಲಿ ತಿಳಿಸಿತು. ಗಣಿಗಳ ಹಂಚುವಿಕೆ ಪ್ರಕ್ರಿಯೆಯಲ್ಲಿನ ಹಲವಾರು ದೋಷಗಳನ್ನು ಈ ವರದಿ ಪ್ರಮುಖವಾಗಿ ತೋರಿಸಿತು.

ಪಾರದರ್ಶಕ ಹರಾಜು ವ್ಯವಸ್ಥೆಯ ಕೊರತೆ

ಸರ್ಕಾರವು ಕಲ್ಲಿದ್ದಲು ಬ್ಲಾಕ್‌ಗಳನ್ನು ಹರಾಜು ಮಾಡುವ ಬದಲು ಸ್ಕ್ರೀನಿಂಗ್ ಸಮಿತಿಗಳ ಮೂಲಕ ಹಂಚಿಕೆ ಮಾಡಿದ ಕಾರಣ ದೇಶದ ಬೊಕ್ಕಸಕ್ಕೆ ಬಹು ದೊಡ್ಡ ನಷ್ಟವಾಗಿದೆ ಎಂದು ವರದಿ ತಿಳಿಸಿತು.

ವಿತರಣೆಯಲ್ಲಿ ಪಕ್ಷಪಾತ

ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಯಾವುದೇ ಪೂರ್ವ ಅನುಭವವಿಲ್ಲದ ಹಲವಾರು ಸಂಸ್ಥೆಗಳಿಗೆ ಬ್ಲಾಕ್‌ಗಳನ್ನು ನೀಡಲಾಗಿದೆ. ಅರ್ಹ ಸಂಸ್ಥೆಗಳ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಕಲ್ಲಿದ್ದಲು ಬ್ಲಾಕ್‌ಗಳ ದುರುಪಯೋಗ

ಬ್ಲಾಕ್‌ಗಳನ್ನು ಪಡೆದ ಹಲವಾರ ಸಂಸ್ಥೆಗಳು ಅವುಗಳನ್ನು ಅಭಿವೃದ್ಧಿಪಡಿಸಲು ವಿಫಲವಾಗಿವೆ. ಕೆಲವು ಸಂಸ್ಥೆಗಳು ಅವುಗಳನ್ನು ಹೆಚ್ಚಿನ ಲಾಭಕ್ಕಾಗಿ ಮಾರಾಟ ಮಾಡಿವೆ.

ಅಂದಾಜು ನಷ್ಟ

ಸರ್ಕಾರವು ಕಡಮೆ ಬೆಲೆಗೆ ಅಮೂಲ್ಯವಾದ ಸಂಪನ್ಮೂಲಗಳನ್ನು ಬಿಟ್ಟುಕೊಟ್ಟಿದೆ. ಇದರ ಪರಿಣಾಮವಾಗಿ ದೇಶದ ಖಜಾನೆಗೆ ಸುಮಾರು ೧.೮೬ ಲಕ್ಷ ಕೋಟಿ ರೂಪಾಯಿಗಳ ನಷ್ಟವಾಗಿರುವ ಅಂದಾಜು ವರದಿಯಲ್ಲಿ ತೋರಿಸಲಾಯಿತು.

ಈ ಭಾರೀ ಮೊತ್ತದ ನಷ್ಟದ ಸುದ್ದಿಯು ಕೇಂದ್ರ ವಿಜಿಲೆನ್ಸ್ ಆಯೋಗವು (Central Vilgilance Commission) ಕಾರ್ಯಪ್ರವೃತ್ತವಾಗಲು ಕಾರಣವಾಯಿತು. ಅದು ಕೇಂದ್ರ ತನಿಖಾ ದಳ(Central Bureau of Investigation)ಕ್ಕೆ ಆಗಿರಬಹುದಾದ ಭ್ರಷ್ಟಾಚಾರಗಳ ತನಿಖೆಗೆ ಆದೇಶಿಸಿತು. ಅನೇಕ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಖಾಸಗಿ ಕಂಪೆನಿಗಳ ವಿರುದ್ಧ ‘ಸಿಬಿಐ’ ಹಲವಾರು ದಾವೆ/ ‘ಎಫ್‌ಐಆರ್’ (‍First Information Report)ಗಳನ್ನು ದಾಖಲಿಸಿತು. ರಾಜಕೀಯ ಹಸ್ತಕ್ಷೇಪಗಳಿದ್ದರೂ ಸರ್ವೋಚ್ಚ ನ್ಯಾಯಾಲಯ ಈ ಹಗರಣದ ಮೇಲ್ವಿಚಾರಣೆಯನ್ನು ವಹಿಸಿತು.

‘ಸಿಎಜಿ’ ವರದಿಯು ಸಂಸತ್ತಿನಲ್ಲಿ ಹೆಚ್ಚಿನ ವಾದ, ವಿವಾದಗಳಿಗೆ ದಾರಿಮಾಡಿತು. ಅಂದಿನ ಪ್ರಧಾನಿ ಮನಮೋಹನಸಿಂಗ್ ಗಣಿ ಹಂಚುವಿಕೆಗಳಲ್ಲಿ ಯಾವುದೇ ಹಗರಣ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದರೂ ಸಹ, ಮುಂದೆ ನಡೆದ ಬೆಳವಣಿಗೆಗಳು ಅವರ ಘನತೆಗೆ ಕಳಂಕ ತಂದಿತು.

ವಿತರಣೆಯ ಪ್ರಕ್ರಿಯೆಯಲ್ಲಿ ಸ್ಪರ್ಧೆಯ ಕೊರತೆಯಿಂದಾಗಿ ಸರ್ಕಾರವು ಗಣನೀಯ ಆದಾಯ ಕಳೆದುಕೊಳ್ಳುವುದರ ಜೊತೆಗೆ ದೇಶಕ್ಕೆ ಕಲ್ಲಿದ್ದಲನ್ನು ಇಂಡೋನೇಷ್ಯಾ, ಆಸ್ಟ್ರೇಲಿಯಾ ಮುಂತಾದ ದೇಶಗಳಿಂದ ಆಮದು ಮಾಡಿಕೊಳ್ಳುವುದು ಹೆಚ್ಚಾಯಿತು.

ಹಗರಣವು ಪರಿಸರ ಕಾಳಜಿಯನ್ನೂ ಸಹ ಹುಟ್ಟುಹಾಕಿತು. ಗಣಿಗಾರಿಕೆಯಲ್ಲಿ ಯಾವುದೇ ಅನುಭವವಿಲ್ಲದ ಕಂಪೆನಿಗಳಿಗೆ ಕಲ್ಲಿದ್ದಲು ಬ್ಲಾಕ್‌ಗಳ ಹಂಚಿಕೆಯು ನೈಸರ್ಗಿಕ ಸಂಪನ್ಮೂಲಗಳ ತಪ್ಪು ನಿರ್ವಹಣೆ, ಪರಿಸರದ ಅವನತಿ ಮತ್ತು ಅರಣ್ಯನಾಶಕ್ಕೂ ಕಾರಣವಾಯಿತು.

ವಿಚಾರಣೆಗಳು

ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯಲ್ಲಿ ನಡೆದ ಭ್ರಷ್ಟಾಚಾರದ ಬಗೆಗೆ ‘ಸಿಬಿಐ’ ತನಿಖೆ ಆರಂಭಿಸಿತು. ದೆಹಲಿಯಲ್ಲಿ ವಿಚಾರಣೆಗಳನ್ನು ನಡೆಸಲು ‘ವಿಶೇಷ ಸಿಬಿಐ’ ನ್ಯಾಯಾಲಯಗಳನ್ನು ಸ್ಥಾಪಿಸಲಾಯಿತು. ಹಲವಾರು ಕಾರ್ಪೊರೇಟ್ ಕಾರ್ಯನಿರ್ವಾಹಕರು, ಅಧಿಕಾರಿಗಳು ಮತ್ತು ರಾಜಕಾರಣಿಗಳು ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಿದರು.

ಆ ಸಮಯದಲ್ಲಿ ಕಲ್ಲಿದ್ದಲು ಸಚಿವರಾಗಿದ್ದ ಪವನ್‌ಕುಮಾರ್ ಬನ್ಸಾಲ್ ತಮ್ಮ ಕುಟುಂಬದ ಸದಸ್ಯರು ನಡೆಸುತ್ತಿದ್ದ ಸಂಸ್ಥೆಗಳಿಗೆ ಕಲ್ಲಿದ್ದಲು ಬ್ಲಾಕ್‌ಗಳನ್ನು ಹಂಚಿಕೆ ಮಾಡಿದ್ದಾರೆಂದು ಆರೋಪಿಸಲಾಯಿತು.

ಸಂಸದರಾದ ವಿಜಯ್ ದರ್ದಾ ಅವರ ಕುಟುಂಬದ ಸದಸ್ಯರ ಕೆಲವು ಸಂಸ್ಥೆಗಳಿಗೆ ಕಲ್ಲಿದ್ದಲು ಬ್ಲಾಕ್‌ಗಳನ್ನು ಹಂಚಿದ್ದಾರೆಂದು ಮತ್ತು ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷ ಕುಮಾರ್‌ಮಂಗಲಂ ಬಿರ್ಲಾ, ತಮ್ಮ ಕಂಪೆನಿಗೆ ಕಲ್ಲಿದ್ದಲು ಬ್ಲಾಕ್‌ಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಯಿತು.

‘ಸಿಬಿಐ’ ಇಲ್ಲಿಯವರೆಗೆ ೧೪ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿದೆ, ಇದರಲ್ಲಿ ನವೀನ್ ಜಿಂದಾಲ್, ಎಎಂಆರ್ ಐರನ್ & ಸ್ಟೀಲ್ ಪ್ರೈವೇಟ್ ಲಿಮಿಟೆಡ್, ವಿನಿ ಐರನ್ & ಸ್ಟೀಲ್ ಉದ್ಯೋಗ್ ಮುಂತಾದ ಉನ್ನತ ಕೈಗಾರಿಕೋದ್ಯಮಿಗಳು ಸೇರಿದ್ದಾರೆ.

ವಿಚಾರಣೆಗೆ ಅಡೆತಡೆಗಳು

ವಿಚಾರಣೆಯನ್ನು ಕೈಗೆತ್ತಿಕೊಂಡಾಗ ಸರ್ಕಾರೀ ಅಧಿಕಾರಿಗಳಿಂದ ಸಹಕಾರ ಸಿಗದೆ ಆ ಬಗೆಗೆ ‘ಸಿಬಿಐ’ ನ್ಯಾಯಾಲಯಕ್ಕೆ ದೂರು ನೀಡಿತು. ತನಿಖಾ ತಂಡಕ್ಕೆ ಬೇಕಿರುವ ಕಡತಗಳನ್ನು ಸರ್ಕಾರದ ವತಿಯಿಂದ ತೋರಿಸುವ/ಒದಗಿಸುವ ಕಾರ್ಯಗಳಿಗೆ ಅಡೆತಡೆಗಳಾದವು. ಅನೇಕ ಕಡತಗಳು ಕಾಣೆಯಾದವು. ಕಾಣೆಯಾದ ಕಡತಗಳಿಗೆ ಸಂಬಂಧಿಸಿದ ಪ್ರಕರಣದ ತನಿಖೆಗಾಗಿ ಸರ್ಕಾರ ತನ್ನದೇ ಆದ ಸಮಿತಿಯನ್ನು ರಚಿಸಿತು!

ಕಚೇರಿಗಳಲ್ಲಿ ಸರಿಯಾದ ದತ್ತಾಂಶ ಮಾಹಿತಿ, ಕೈಬರಹದ ಟಿಪ್ಪಣಿಗಳು, ಸಭೆಗಳಲ್ಲಿ ತೆಗೆದುಕೊಂಡ ನಿರ್ಧಾರಗಳ ಟಿಪ್ಪಣಿ, ಅನೇಕ ಪ್ರಮುಖ ಮಾಹಿತಿಗಳ ಕಡತಗಳು ವಿಚಾರಣೆಯ ಸಮಯದಲ್ಲಿ ಕಾಣೆಯಾಗಿರುವುದು ಕಂಡುಬಂತು. ಇವೆಲ್ಲವೂ ವಿಚಾರಣೆಗಳ ದಾರಿತಪ್ಪಿಸುವ, ತಡೆಯೊಡ್ಡುವ ಉಪಾಯಗಳಾಗಿದ್ದವು.

ನ್ಯಾಯಾಲಯದ ತೀರ್ಪುಗಳು

ಕಲ್ಲಿದ್ದಲು ಹಗರಣ ತನಿಖೆಯಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯ (Supreme Court) ನಿರ್ಣಾಯಕ ಪಾತ್ರ ವಹಿಸಿತು. ಕಲ್ಲಿದ್ದಲು ಬ್ಲಾಕ್‌ಗಳ ಅಕ್ರಮ ವಿತರಣೆಗೆ ಸಂಬಂಧಿಸಿದಂತೆ ಹಲವಾರು ಮಹತ್ತ್ವದ ತೀರ್ಪುಗಳನ್ನು ನೀಡಿತು.

೧೯೯೩ರಿಂದ ೨೦೧೦ರ ನಡುವೆ ಭಾರತ ಸರ್ಕಾರ ಮಾಡಿದ ಕಲ್ಲಿದ್ದಲು ನಿಕ್ಷೇಪಗಳ ವಿತರಣೆ ಕಾನೂನುಬಾಹಿರ ಎಂದು ಘೋಷಿಸಿತು. ಪಾರದರ್ಶಕತೆಯ ಕೊರತೆ ಮತ್ತು ಸರಿಯಾದ ಹರಾಜು ಪ್ರಕ್ರಿಯೆಯನ್ನು ಅನುಸರಿಸದೆ ಖಾಸಗಿ ಮತ್ತು ಸಾರ್ವಜನಿಕವಲಯದ ಕಂಪೆನಿಗಳಿಗೆ ಕಲ್ಲಿದ್ದಲು ನಿಕ್ಷೇಪಗಳನ್ನು ನೀಡಿದ ವಿಧಾನ ಅಕ್ಷೇಪಾರ್ಹ ಎಂದಿತು. ಹಂಚಿಕೆ ಪ್ರಕ್ರಿಯೆಯನ್ನು ಯಾವುದೇ ವಸ್ತುನಿಷ್ಠ ಮಾನದಂಡಗಳಿಲ್ಲದೆ ಮಾಡಲಾಗಿದೆ ಮತ್ತು ನಿರ್ಧಾರಗಳು ನ್ಯಾಯಯುತವಾಗಿಲ್ಲ. ಕೆಲವು ಕಂಪೆನಿಗಳಿಗೆ ಅನಗತ್ಯ ಪ್ರಯೋಜನಗಳಾಗಿವೆ ಎಂದು ಅಭಿಪ್ರಾಯಪಟ್ಟಿತು.

ನ್ಯಾಯಾಲಯವು ತನ್ನ ಅಂತಿಮ ತೀರ್ಪಿನಲ್ಲಿ ಈ ಅವಧಿಯಲ್ಲಿ ಮಾಡಲಾದ ೨೧೮ ಕಲ್ಲಿದ್ದಲು ನಿಕ್ಷೇಪಗಳ ವಿತರಣೆಗಳಲ್ಲಿ ೨೧೪ ನಿಕ್ಷೇಪಗಳನ್ನು ರದ್ದುಗೊಳಿಸಿತು. ರದ್ದುಗೊಂಡ ಎಲ್ಲ ಕಲ್ಲಿದ್ದಲು ನಿಕ್ಷೇಪಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಬೇಕೆಂದು ಆದೇಶಿಸಿತು.

ಅಕ್ರಮ ಹಂಚಿಕೆಗಳಿಂದ ಲಾಭ ಪಡೆದ ಕಂಪೆನಿಗಳಿಗೆ ಹಣಕಾಸಿನ ದಂಡವನ್ನು ವಿಧಿಸಲಾಯಿತು. ಈ ಬ್ಲಾಕ್‌ಗಳಿಂದ ಗಣಿಗಾರಿಕೆ ಮಾಡಿದ ಕಲ್ಲಿದ್ದಲಿಗೆ ಪರಿಹಾರವಾಗಿ ಹಣ ಪಾವತಿಸಲು ನ್ಯಾಯಾಲಯವು ಆಯಾ ಕಂಪೆನಿಗಳಿಗೆ ಆದೇಶಿಸಿತು.

ಕಲ್ಲಿದ್ದಲು ಬ್ಲಾಕ್‌ಗಳ ವಿತರಣಾ ಅಕ್ರಮಗಳು ೨೦೦೪ರಿಂದ ೨೦೦೯ರ ಅವಧಿಯಲ್ಲಿ ನಡೆದಿದ್ದು, ರಾಜಕಾರಣಿಗಳು, ಅಧಿಕಾರಿಗಳು ಮತ್ತು ಖಾಸಗಿ ಸಂಸ್ಥೆಗಳ ವಿರುದ್ಧ ‘ಸಿಬಿಐ’ ಹಲವಾರು ಪ್ರಕರಣಗಳನ್ನು ಹೂಡಿತು.

ಪ್ರಮುಖ ಆರೋಪಿಗಳಲ್ಲಿ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ. ಗುಪ್ತಾ, ಮಾಜಿ ಕಲ್ಲಿದ್ದಲು ಅಧಿಕಾರಿಗಳಾದ ಕೆ.ಎಸ್. ಕ್ರೋಫಾ ಮತ್ತು ಕೆ.ಸಿ. ಸಾಮ್ರಿಯಾ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ, ಜೆಎಎಸ್ ಇನ್‌ಫ್ರಾಸ್ಟçಕ್ಚರ್ ಸಂಸ್ಥೆಯ ಮನೋಜ್‌ಕುಮಾರ್ ಜೈಸ್ವಾಲ್, ವಿಎಂಪಿಎಲ್ ಸಂಸ್ಥೆಯ ವಿಕಾಸ್ ಪಟ್ನಿ ಮತ್ತು ಆನಂದ್ ಮಲ್ಲಿಕ್ ಮುಂತಾದ ಕೈಗಾರಿಕೋದ್ಯಮಿಗಳು ಸೇರಿದ್ದಾರೆ. ಕಮಲ್ ಸ್ಪಾಂಜ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ಮುಂತಾದವು ಆರೋಪಿತ ಸಂಸ್ಥೆಗಳಾಗಿವೆ.

‘ವಿಶೇಷ ಸಿಬಿಐ’ ನ್ಯಾಯಾಲಯಗಳು ವಿಚಾರಣೆಗಳನ್ನು ನಡೆಸಿವೆ. ಹಲವಾರು ತೀರ್ಪುಗಳನ್ನೂ ಸಹ ನೀಡಿವೆ. ಮೊಯಿರಾ ಮತ್ತು ಮಧುಜೋರ್ ಕಲ್ಲಿದ್ದಲು ಬ್ಲಾಕ್ ಪ್ರಕರಣದಲ್ಲಿ (ಪಶ್ಚಿಮ ಬಂಗಾಳ), ಗುಪ್ತಾ, ಕ್ರೋಫಾ, ಸಾಮ್ರಿಯಾ, ಪಟ್ನಿ ಮತ್ತು ಮಲ್ಲಿಕ್ ಅವರ ಅಪರಾಧ ದೃಢಗೊಂಡು ಶಿಕ್ಷೆ ನೀಡಲಾಗಿದೆ.

ರುದ್ರಪುರ ಬ್ಲಾಕ್ ಪ್ರಕರಣದಲ್ಲಿ (ಮಧ್ಯಪ್ರದೇಶ), ಗುಪ್ತಾ, ಕ್ರೋಫಾ, ಸಾಮ್ರಿಯಾ, ಕೆಎಸ್‌ಎಸ್‌ಪಿಎಲ್ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ. ಅಹ್ಲುವಾಲಿಯಾ ತಪ್ಪಿತಸ್ಥರೆಂದು ತೀರ್ಮಾನ ಕೊಡಲಾಗಿದೆ.

ರಾಜ್‌ಹರಾ ನಾರ್ತ್ಬ್ಲಾಕ್(ಜಾರ್ಖಂಡ್)ನಲ್ಲಿ ಗುಪ್ತಾ ಮತ್ತು ಇತರರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಜೆಎಎಸ್ ಇನ್ಫ್ರಾಸ್ಟ್ರಕ್ಚರ್ ಮತ್ತು ಅದರ ನಿರ್ದೇಶಕ ಮನೋಜ್‌ಕುಮಾರ್ ಜೈಸ್ವಾಲ್ ಅವರಿಗೆ ನಕಲಿ ದಾಖಲೆಗಳನ್ನು ಬಳಸಿದ ಆರೋಪದಡಿ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಕೊಡಲಾಗಿದೆ.

ಹಲವಾರು ಪ್ರಸಿದ್ಧ ಸಂಸ್ಥೆಗಳು, ಅವುಗಳ ಮುಖ್ಯಸ್ಥರು, ಕೈಗಾರಿಕೋದ್ಯಮಿಗಳು ಆರೋಪ ಪಟ್ಟಿಯಲ್ಲಿದ್ದಾರೆ. ಈ ಪ್ರಕರಣಗಳಲ್ಲಿ ಹಲವು ಇತ್ಯರ್ಥಗೊಂಡಿವೆ. ಕೆಲವು ತನಿಖೆಗಳ ಪ್ರಕ್ರಿಯೆಯಲ್ಲಿ ಬಲವಾದ ಪುರಾವೆಗಳಿಲ್ಲದೆ ಅಥವಾ ತಾಂತ್ರಿಕತೆಯ ಕೊರತೆಗಳಿಂದ ವಜಾಗೊಂಡಿವೆ.

ಇತರ ಹಲವು ‘ಎಫ್‌ಐಆರ್’ಗಳು ಮತ್ತು ಚಾರ್ಜ್ಶೀಟ್‌ಗಳು ವಿಚಾರಣೆಯ ಹಂತದಲ್ಲಿ ಉಳಿದಿದ್ದು, ಕೆಲವು ಶಿಕ್ಷೆಗಳು ಮೇಲ್ಮನವಿಯಲ್ಲಿವೆ. ಕೆಲವು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.

ಹಗರಣದ ಪರಿಣಾಮಗಳು

ನ್ಯಾಯಾಲಯದ ತೀರ್ಪುಗಳು ಬಂದ ನಂತರ ಕಲ್ಲಿದ್ದಲು ಉದ್ಯಮ ಮತ್ತು ವಿತರಣೆಗಳಲ್ಲಿ ಗಮನಾರ್ಹವಾದ ಬದಲಾವಣೆಗಳಾದವು. ಈಗಾಗಲೇ ಗಣಿಗಾರಿಕೆ ಮತ್ತು ವಿದ್ಯುತ್ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದ ಸಂಸ್ಥೆಗಳ ಮೇಲೆಯೂ ಅದು ಪರಿಣಾಮ ಬೀರಿತು.

ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆಗಳ ಮೂಲಕ ಈ ಕಲ್ಲಿದ್ದಲು ಬ್ಲಾಕ್‌ಗಳನ್ನು ಮರುಹಂಚಿಕೆ ಮಾಡುವ ಸಲುವಾಗಿ ಪಾರದರ್ಶಕ ಪ್ರಕ್ರಿಯೆಯನ್ನು ಕೇಂದ್ರಸರ್ಕಾರವು ಜಾರಿಗೆ ತಂದಿತು.

ಸಮಯಕ್ಕೆ ಸರಿಯಾಗಿ ಅಭಿವೃದ್ಧಿಪಡಿಸಲಾಗದ ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯನ್ನು ರದ್ದುಗೊಳಿಸುವ ಬಗ್ಗೆ ನಿರ್ಧರಿಸಲು ಅಂತರ-ಸಚಿವಾಲಯ ಗುಂಪು (Inter-Ministrial Group) ರಚನೆಯಾಯಿತು. ಅದು ೧೩ ಬ್ಲಾಕ್‌ಗಳ ಹಂಚಿಕೆಯನ್ನು ರದ್ದುಗೊಳಿಸಿ, ೧೪ ಹಂಚಿಕೆದಾರರ ಬ್ಯಾಂಕ್ ಗ್ಯಾರಂಟಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಶಿಫಾರಸು ಮಾಡಿತು.

ಚುನಾವಣೆಗಳ ಪರಿಣಾಮ

ಈ ಹಗರಣದಿಂದ ಅಂದಿನ ಆಡಳಿತ ಪಕ್ಷದ ಬಗೆಗೆ ಜನರ ವಿಶ್ವಾಸ ಕುಂದತೊಡಗಿತು. ದೇಶದಲ್ಲಿ ನಡೆದ ೨೦೧೪ರ ಸಾರ್ವತ್ರಿಕ ಚುನಾವಣೆಯಲ್ಲಿ ಕಲ್ಲಿದ್ದಲು ಹಗರಣವು ವಿರೋಧ ಪಕ್ಷಗಳಿಗೆ ಪ್ರಮುಖ ವಿಷಯಗಳಲ್ಲಿ ಒಂದಾಯಿತು. ಜನರು ಬದಲಾವಣೆಯತ್ತ ಮುಖ ಮಾಡಿದರು. ಹೊಸ ಪಕ್ಷವೊಂದರ ಗೆಲವಿಗೆ ಹಗರಣವೂ ಪ್ರಮುಖ ಕಾರಣವೆನಿಸಿತು. ಭಾರತೀಯ ಜನತಾ ಪಕ್ಷವು ‘ಎನ್‌ಡಿಎ’ ಬಣದೊಂದಿಗೆ ಬಹುಮತ ಪಡೆದು, ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿದು ರಾಜಕೀಯ ಸ್ಥಿತ್ಯಂತರಕ್ಕೆ ಮುನ್ನುಡಿ ಬರೆದರು.

ಕೇಂದ್ರದಲ್ಲಿ ಬಂದ ಹೊಸ ಸರ್ಕಾರವು ೨೦೧೫ರಲ್ಲಿ ಕಲ್ಲಿದ್ದಲು ಹರಾಜು ವ್ಯವಸ್ಥೆಯನ್ನು ತಂದಿತು. ೨೦೨೦ರಲ್ಲಿ ಖನಿಜ ಕಾನೂನುಗಳು (ತಿದ್ದುಪಡಿ) ಕಾಯ್ದೆಯನ್ನು ತಂದು ಕಲ್ಲಿದ್ದಲು ನಿಕ್ಷೇಪಗಳ ನ್ಯಾಯಯುತ ವಿತರಣೆಗೆ ಗಮನಕೊಟ್ಟಿತು. ಹಗರಣದ ನಂತರ ಪರಿಚಯಿಸಲಾದ ಕೆಲವು ಕಾನೂನು ಸುಧಾರಣೆಗಳು ಸರ್ಕಾರಕ್ಕೆ ಮತ್ತಷ್ಟು ಹೆಚ್ಚಿನ ಆದಾಯವನ್ನು ಗಳಿಸುವುದರಲ್ಲಿ ಮತ್ತು ಉದ್ಯಮವನ್ನು ಸಾಕಷ್ಟು ಸುಗಮಗೊಳಿಸುವಲ್ಲಿ ಸಹಕಾರಿಯಾಯಿತು.

ಅಂತಿಮವಾಗಿ ಹೇಳುವುದಾದರೆ, ಕಲ್ಲಿದ್ದಲು ಹಗರಣವು ಆರ್ಥಿಕವಷ್ಟೇ ಅಲ್ಲದೆ ನೈತಿಕ ಹಗರಣವೂ ಆಗಿದ್ದು, ಅಧಿಕಾರದಲ್ಲಿರುವ ರಾಜಕೀಯ ಧುರೀಣರ ಹೊಣೆಗಾರಿಕೆಯಲ್ಲಿನ ಲೋಪದೋಷಗಳನ್ನು ತೋರಿಸಿಕೊಟ್ಟಿತು. ದುರ್ಬಲ ಆಡಳಿತ ಮತ್ತು ರಾಜಿ ಮಾಡಿಕೊಳ್ಳುವ ಅನೈತಿಕ ಪ್ರವೃತ್ತಿಯ ಅಪಾಯಗಳ ಬಗೆಗೂ ಪ್ರಕರಣ ಪಾಠವಾಯಿತು. ಪಾರದರ್ಶಕತೆ ಇಲ್ಲದಿದ್ದಾಗ ಅತ್ಯಂತ ಅಮೂಲ್ಯವಾದ ರಾಷ್ಟ್ರೀಯ ಸಂಪತ್ತು ಶೋಷಣೆಯ ಸಾಧನಗಳಾಗಬಹುದು. ಪಕ್ಷಪಾತ ಮತ್ತು ರಾಜಕೀಯ-ವ್ಯವಹಾರದ ಸಂಬಂಧಗಳು ಪ್ರಜಾಪ್ರಭುತ್ವದ ತತ್ತ್ವಗಳನ್ನೇ ಹೇಗೆ ಹಾಳುಮಾಡುತ್ತವೆ ಎಂಬುದನ್ನು ಇದು ತೋರಿಸಿಕೊಟ್ಟಿದೆ.

ಕಲ್ಲಿದ್ದಲಿನಂತಹ ನೈಸರ್ಗಿಕ ಸಂಪನ್ಮೂಲಗಳು ರಾಜಕೀಯ ನಾಯಕರು ಅಥವಾ ನಿಗಮಗಳ ಖಾಸಗಿ ಆಸ್ತಿಯಲ್ಲ; ಅವು ದೇಶದ ಜನರಿಗೆ ಸೇರಿದ್ದಾಗಿದೆ. ಅವುಗಳನ್ನು ಅನ್ಯಾಯವಾಗಿ ವಿತರಿಸಿದಾಗ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಸಂಪನ್ಮೂಲಗಳನ್ನು ವೈಯಕ್ತಿಕ ಅಥವಾ ರಾಜಕೀಯ ಲಾಭದ ದೃಷ್ಟಿ ತೊರೆದು ತಮ್ಮ ಜವಾಬ್ದಾರಿಗಳೆಂದು ಜನನಾಯಕರು ಪರಿಗಣಿಸಿದಾಗ ಸಾರ್ವಜನಿಕರಲ್ಲಿ ನಂಬಿಕೆಯು ನಿರ್ಮಾಣವಾಗುತ್ತದೆ.

ಅದೇ ರೀತಿ ಗುತ್ತಿಗೆಯ ದೋಷಪೂರಿತ ಹಂಚುವಿಕೆಗಳನ್ನು ರದ್ದುಗೊಳಿಸುವಲ್ಲಿ ನ್ಯಾಯಾಂಗವು ತನ್ನ ಮಹತ್ತ್ವದ ಪಾತ್ರವನ್ನು ತೋರಿಸಿಕೊಟ್ಟಿದೆ. ರಾಜಕೀಯ ಶಕ್ತಿಯನ್ನು ಲೆಕ್ಕಿಸದೆ ಅದು ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಿರುವುದು ಪ್ರಶಂಸಾರ್ಹ.

***

Facebook
X
WhatsApp
Print
Email
Leave A Reply