ನಮ್ಮ ಹಳ್ಳಿಯ ತೋಟದ ಮನೆಯ ಮುಂದೆ ಕುರ್ಚಿ ಹಾಕಿಕೊಂಡು ಕುಳಿತು ಓದುತ್ತಿದ್ದೆ. ಪುಸ್ತಕ – ನನ್ನ ಅಚ್ಚುಮೆಚ್ಚಿನ ನಾಟಕಕಾರ ಷೇಕ್ಸ್ಪಿಯರ್ನ ‘ಕಿಂಗ್ ಲಿಯರ್.’ ನನಗೆ ಮೊದಲು ಷೇಕ್ಸ್ಪಿಯರ್ನ ಕೃತಿಗಳ ಪರಿಚಯ ಆದದ್ದು ನಾನು ಏಳನೆಯ ತರಗತಿಯಲ್ಲಿದ್ದಾಗ. ಅಂದಿನಿಂದ ಆರಂಭವಾದ ಷೇಕ್ಸ್ಪಿಯರ್ನ ಕೃತಿಗಳ ಬಗೆಗಿನ ಪ್ರೇಮ ಇನ್ನೂ ಕಡಮೆಯಾಗಿಲ್ಲ.
ತೋಟದ ರಮಣೀಯ ವಾತಾವರಣದಲ್ಲಿ ಓದುತ್ತ ಕುಳಿತಿದ್ದೆ. ನೀನೇ ಇಂದ್ರ ಚಂದ್ರ ದೇವೇಂದ್ರ ಎಂದು ಹಾಡಿಹೊಗಳಿ ತಂದೆ ಲಿಯರ್ನಿಂದ ರಾಜ್ಯವನ್ನು ಪಡೆದುಕೊಂಡಿದ್ದ ಗಾನೆರಿಲ್ ಮತ್ತು ರೀಗನ್ ಬಣ್ಣ ಬದಲಾಯಿಸಿ, ಅವನನ್ನು ಅವಮಾನಿಸಿ, ಬಿರುಗಾಳಿಯ ರಾತ್ರಿ ಮನೆಯಿಂದ ಹೊರಗಟ್ಟಿದ ಮನಕದಡುವ ದೃಶ್ಯ, ಕಣ್ಣುಗಳಲ್ಲಿ ನೀರು ತುಂಬಿತ್ತು.
ಅಷ್ಟು ಹೊತ್ತಿಗೆ ನಮ್ಮ ಪಕ್ಕದ ಹೊಲದ ಹಳ್ಳಿ ಹೆಂಗಸು ಗಂಗಮ್ಮ ವಾಡಿಕೆಯಂತೆ ಎಲೆ-ಅಡಿಕೆ ಮೆಲ್ಲುತ್ತ ನನ್ನ ಜೊತೆ ಹರಟೆ ಕೊಚ್ಚಲು ಬಂದಳು. ನನ್ನ ಕಣ್ಣೀರನ್ನು ಕಂಡು ಹೌಹಾರಿದ ಅವಳು, “ಇದೇನು ಅಮ್ಮಯ್ಯ, ಇಂಗೆ ಕಣ್ಣೀರು ಆಗ್ತಾ ಕುಂತಿದ್ದೀಯ? ಏನಾಯ್ತು” ಎಂದಳು.
ನಾನು, “ಏನಿಲ್ಲ ಗಂಗಮ್ಮ, ಈ ಪುಸ್ತಕ ಓದ್ತಾ ಇದ್ದೆ… ಅದರಲ್ಲಿ….” ಎಂದು ಕಥೆ ವಿವರಿಸಿದೆ.
ಅವಳ ಪ್ರತಿಕ್ರಿಯೆಯಿಂದ ನನಗೆ ಅಚ್ಚರಿಯಾಯಿತು.
“ಏಯ್, ಬುಡು ಬುಡು…. ಇದನ್ನೆಲ್ಲ ಪುಸ್ತಕ್ದಾಗ್ ಓದಿ ಕಣ್ಣೀರು ಆಗ್ತಾ ಕುಂತಿದ್ಯಲ್ಲ, ಏನ್ ಯೇಳನ? ಅದ್ಕೆ ಮತ್ತೆ ಪಟ್ನದೊರಿಗ್ ಬುದ್ಧಿ ಇಲ್ಲ ಅನ್ನೋದು” ಎಂದಳು ಎಲೆ ಅಡಿಕೆ ಮಡಚುತ್ತಾ.
ನಾನು ತಬ್ಬಿಬ್ಬಾಗಿರುವುದನ್ನು ನೋಡಿ, “ಅಲ್ಲ ಅಮ್ಮಯ್ಯ, ಇದು ಅಳೆ ಕಾಲ್ದಿಂದ ನಡ್ಕೊಂಡು ಬಂದಿರೋದೆಯ, ಅದರಲ್ಲಿ ಹ್ವಸದೆನು ಅದೆ? ನಾನು ಚಿಕ್ಕ ಹುಡುಗಿ ಆಗಿದ್ದಾಗ ಕೆಂಕರೆ ಅನ್ನೋ ಅಳ್ಳಿಯಾಗಿದ್ದೆ. ಅಲ್ಲಿ ಒಬ್ಬ ಜಮೀನ್ದಾರ ಇಂಗೆಯ, ಆಸ್ತಿ, ಒಲ, ಮನೆ ಎಲ್ಲ ಮಕ್ಳಿಗ್ ಬರ್ಕೊಟ್ಟು, ಕೊನೆಗಾಲ್ದಲ್ಲಿ ಒಂದು ತೊಟ್ಟು ನೀರಿಗೂ ಗತಿಯಿಲ್ದೆ ಬೀದಿಲ್ ಪಿರಾಣಬಿಟ್ಟ. ನಮ್ಮ ಅಳ್ಳಿಯವರೇ ಅವನಿಗೆ ಆಗಾಗ ಊಟ, ತಿಂಡಿ ಕೊಡ್ತಿದ್ರು, ಆದ್ರೆ ಅವ್ನ್ ಮಕ್ಳು… ಅವ್ರ ಮನೆ ಆಳಾಗಿ ಓಗ…. ಅವ್ನ ಮಣ್ಣು ಮಾಡಕ್ಕೂ ಬರ್ಲಿಲ್ಲ… ಅಯ್ಯೋ ಇಂಥ ಕಥೆಗಳು ಅಳ್ಳಿ ಅಳ್ಳಿಯಾಗೂ ಅವೆ ಬುಡು. ಅದ್ಕೆ ನೀನು ಸುಕ್ರವಾರ ಕಣ್ಣೀರು ಆಗ್ತಾ ಕುಂತಿದ್ದಿಯ… ಯೋಳು ಯೋಳು…” ಎಂದು ಅಲ್ಲಿಂದ ಹೊರಟಳು.
ಅಷ್ಟು ಹೊತ್ತಿಗೆ ನನ್ನ ಬಾಲ್ಯ ಗೆಳೆಯನ ಫೋನ್ ಬಂದಿತು. ಅವನೂ ಸಾಹಿತ್ಯದ ವಿದ್ಯಾರ್ಥಿಯೇ. ಆದ್ದರಿಂದ ನಡೆದ ವೃತ್ತಾಂತವನ್ನೆಲ್ಲ ವಿವರಿಸಿ, “ನೋಡು ಇದೇ ಷೇಕ್ಸ್ಪಿಯರ್ನ ಗ್ರೇಟ್ನೆಸ್…. ಶತಮಾನಗಳ ಹಿಂದೆ ಬರೆದ ಕಥೆ ಈಗಲೂ ಪ್ರಸ್ತುತವಾಗಿದೆ. ಅವಿದ್ಯಾವಂತರೂ ಕೂಡ ಆ ಕಥೆಗೆ ಸ್ಪಂದಿಸುತ್ತಾರೆ” ಎಂದೆ.
ಅವನು ನಗುತ್ತ, “ಹೌದು ಕಣೆ, ನಿನ್ನ ಮಾತು ನಿಜ. ಯೋಚಿಸಿ ನೋಡು, ಲಿಯರ್ ಒಬ್ಬ ಕಾಲ್ಪನಿಕ ವ್ಯಕ್ತಿಯೇ? ಇಲ್ಲ, ಅವನು ಇನ್ನೂ ಬದುಕಿದ್ದಾನೆ, ನಮ್ಮ ನಡುವೆಯೇ ಇದ್ದಾನೆ. ವ್ಯತ್ಯಾಸವಿಷ್ಟೇ, “Not all Lears wear crowns, not all Lears are old” ಎಂದು ಹೇಳಿ ಜೋರಾಗಿ ನಕ್ಕು, “ನಮ್ಮ ಮನೆಗಳಲ್ಲಿ, ಆಫೀಸಿನಲ್ಲಿ, ಕಾಲೇಜಿನಲ್ಲಿ, ಕಾರ್ಪೊರೇಟ್ ಪ್ರಪಂಚದಲ್ಲಿ, ಅಷ್ಟೇ ಏಕೆ, ರಾಜಕಾರಣದಲ್ಲಿ ಕೂಡ ಲಿಯರ್ ಇದ್ದಾನೆ. ಕೆಲವು ವರ್ಷಗಳ ಹಿಂದೆ ರೇಮಂಡ್ ಕಂಪೆನಿಯ ಮಾಲೀಕ ಮಗನಿಗೆ ಎಲ್ಲ ಷೇರ್ಗಳನ್ನು ವರ್ಗಾಯಿಸಿ, ನಂತರ ಬಾಡಿಗೆ ಮನೆಯಲ್ಲಿ ಹೀನಸ್ಥಿತಿಯಲ್ಲಿ ಬದುಕಿದ ವಿಷಯ ಪೇಪರ್ನಲ್ಲಿ ಓದಿದ್ದು ನೆನಪಿರಬೇಕಲ್ಲ? ಟೈಗರ್ ಜಿಂದಾ ಹೈ ಅಂತ ಸಿನೆಮಾ ಬಂದಿತ್ತಲ್ಲ, ಅದೇ ಧಾಟಿಯಲ್ಲಿ ಹೇಳುವುದಾದರೆ, ಲಿಯರ್ ಜಿಂದಾ ಹೈ…” ಎಂದು ನಕ್ಕ. ನಾನೂ ನಗುತ್ತಾ, “ಲಿಯರ್ ಮಾತ್ರ ಅಲ್ಲ, ಗಾನೆರಿಲ್ ಜಿಂದಾ ಹೈ, ರೀಗನ್ ಜಿಂದಾ ಹೈ, ಅದೇ ರೀತಿ ಕಾರ್ಡಿಲಿಯಾ ಜಿಂದಾ ಹೈ” ಎಂದು, “ಸರಿ ಮಹರಾಯ, ನಮ್ಮ ಚರ್ಚೆ ಇನ್ನೊಂದು ದಿನ ಮುಂದುವರಿಸೋಣ. ಈಗ ನಾನು ಒಳಗೆ ಹೋಗದಿದ್ದರೆ ಈ ಸೊಳ್ಳೆಗಳು, “ಸೌಮ್ಯಾ ಜಿಂದಾ ಥೀ” ಎಂದು ನನ್ನನ್ನು ಫಾಸ್ಟ್ಟೆನ್ಸ್ ಮಾಡಿಬಿಡುತ್ತವೆ” ಎಂದು ಒಳನಡೆದೆ.
ರಾತ್ರಿಯ ಅಡುಗೆಗೆ ಕುಕ್ಕರ್ ಇಟ್ಟು ಪಲ್ಯಕ್ಕಾಗಿ ತರಕಾರಿ ಹೆಚ್ಚುತ್ತ ಕುಳಿತಾಗ, ಆಗ ತಾನೆ ನಡೆದ ಸಂಭಾಷಣೆಯ ಬಗ್ಗೆ ಯೋಚಿಸತೊಡಗಿದೆ – ಹೌದು, ಅವನ ಮಾತು ನಿಜ. ಲಿಯರ್ ಕಥೆಯಲ್ಲಿ ಸುಳ್ಳಿನ ಸರಮಾಲೆಯನ್ನು ಪೋಣಿಸಿದ ಗಾನೆರಿಲ್, ರೀಗನ್ ತಂದೆಯ ಪ್ರೀತಿ, ವಿಶ್ವಾಸ, ಆಸ್ತಿ ಎಲ್ಲವನ್ನೂ ಗಳಿಸುತ್ತಾರೆ. ಆದರೆ ಸುಳ್ಳಿನ, ಕಪಟದ ಮೊರೆಹೋಗದ ಕಾರ್ಡಿಲಿಯಾಳನ್ನು ಲಿಯರ್ ಹೊರಹಾಕುತ್ತಾನೆ. ಅಂತೆಯೇ ನಮ್ಮ ಸುತ್ತಮುತ್ತಲಿನ ಪ್ರಪಂಚದಲ್ಲಿ ಕೂಡ ಪೊಳ್ಳು ಮಾತಾಡದೆ, ತಮ್ಮ ಒಳ್ಳೆಯತನವನ್ನು ಸಾಬೀತುಪಡಿಸಿಕೊಳ್ಳದ, ಕಪಟವರಿಯದ ಜನಜೀವನದಲ್ಲಿ ಕಷ್ಟಪಡುವ ಸಂದರ್ಭಗಳನ್ನು ನಾವು ನೋಡಿಲ್ಲವೆ? ಮ್ಯಾನೇಜರ್ನನ್ನು ಹಾಡಿಹೊಗಳಿ ಎಂಪ್ಲಾಯೀ ಆಫ್ ದಿ ಮಂತ್, ಪ್ರಮೋಶನ್ ಗಿಟ್ಟಿಸಿಕೊಳ್ಳುವವರ ಎದುರು, ಸದ್ದುಗದ್ದಲವಿಲ್ಲದೆ ಕೆಲಸ ಮಾಡುವವರು ಕೈ ಕೈ ಹಿಸುಕಿಕೊಂಡು ಸುಮ್ಮನಾಗುವ ದೃಶ್ಯ ಎಲ್ಲ ಆಫೀಸುಗಳಲ್ಲಿ ಸರ್ವೇಸಾಮಾನ್ಯವಾದದ್ದು. ಅದೇ ದೃಶ್ಯ ಕಾಲೇಜುಗಳಲ್ಲಿ ಶಿಕ್ಷಕ-ಪ್ರಿನ್ಸಿಪಾಲ್ ಹಾಗೂ ಶಿಕ್ಷಕ-ವಿದ್ಯಾರ್ಥಿಗಳ ನಡುವೆ ಕಾಣಿಸುತ್ತದೆ. ಅಷ್ಟೇ ಏಕೆ, ಮನೆಗಳಲ್ಲಿ – ಸಿಕ್ಕಾಪಟ್ಟೆ ಮಾತನಾಡುವ ಮಗನಿಗಿಂತ ಕಡಮೆ ಮಾತಿನ ಮಗ, ಯಾವ ಪ್ರತಿಫಲಾಪೇಕ್ಷೆಯನ್ನಿಟ್ಟುಕೊಳ್ಳದೆ, ಸದ್ದಿಲ್ಲದೆ ಮಾಡುವ ಸೇವೆ ಎಷ್ಟೋ ಬಾರಿ ತಂದೆ-ತಾಯಿಯ ಗಮನಕ್ಕೆ ಬಾರದೆ ಹೋಗುತ್ತದೆ.
ಮತ್ತೊಂದೆಡೆ, ಅಧಿಕಾರ ಹೋದರೂ ಅದರ ಸವಲತ್ತುಗಳನ್ನು ಬಿಟ್ಟುಕೊಡದ ಜನರನ್ನು ನಾವು ಇಂದಿಗೂ ನಮ್ಮ ಸುತ್ತಮುತ್ತಲಿನ ಪ್ರಪಂಚದಲ್ಲಿ ಕಾಣುತ್ತೇವೆ. ಇನ್ನು ರಾಜಕಾರಣಿಗಳ ವಿಷಯವಂತೂ ಹೇಳುವ ಹಾಗೇ ಇಲ್ಲ. ಫೆವಿಕಾಲ್ ಜಾಹೀರಾತಿಗೆ ತಕ್ಕ ರಾಯಭಾರಿಗಳು ಅವರು. ಕುರ್ಚಿಗೆ ಅಂಟಿಕೊಂಡು ಬದುಕುತ್ತಾರೆ. ತಮಗೆ ಕಾರ್ಯನಿರ್ವಹಿಸಲು ಅನುವಾಗಲು ಕೊಟ್ಟ ಕೊಠಡಿಗಳನ್ನು, ಮನೆಗಳನ್ನು ನಿವೃತ್ತಿಯ ನಂತರವೂ ತೆರವು ಮಾಡದೆ ಸರಕಾರಕ್ಕೆ ತಲೆನೋವಾಗಿರುವವರು ಕೆಲವರು. ಇನ್ನು ಕೆಲವರು, ಅನಿವಾರ್ಯವಾಗಿ ಕುರ್ಚಿಯನ್ನು ಬಿಟ್ಟುಕೊಟ್ಟು, ಅಹಂ ಅನ್ನು, ಅಧಿಕಾರದ ಆಸೆಯನ್ನು ಬಿಡದೆ ಒದ್ದಾಡುತ್ತಾರೆ.
ಹೀಗೆ ಯೋಚಿಸುತ್ತಿದ್ದಾಗ ಒಂದು ವಾಟ್ಸಾಪ್ ಮೆಸೇಜ್ ಬಂದಿತು. ತೆಗೆದು ನೋಡಿದೆ. ನಮ್ಮ ಫ್ರೆಂಡ್ಸ್ ಗ್ರೂಪ್ನಲ್ಲಿ ಒಬ್ಬರು ತಮ್ಮ ಹೊಸ ರೀಲ್ನ ಲಿಂಕ್ ಹಾಕಿದ್ದರು. ಅದನ್ನು ನೋಡಿ ನಗು ಬಂದಿತು. ‘ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ’ ಎಂಬಂತೆ ನನಗೆ ಎಲ್ಲೆಲ್ಲೂ ಲಿಯರ್ನ ಕಥೆಯ ಕುರುಹುಗಳೇ ಕಾಣಿಸುತ್ತಿದ್ದವು. ಇಲ್ಲೂ ಹಾಗೇ ನನಗೆ ಗಾನೆರಿಲ್ ಹಾಗೂ ರೀಗನ್ರ ಅರ್ಥವಿಲ್ಲದ ಪೊಳ್ಳು ಮಾತುಗಳು ನೆನಪಾದವು – “Full of sound and fury signifying nothing” ಎಂಬ ಷೇಕ್ಸ್ಪಿಯರ್ನ ಮಾತಿನಂತೆ, ಯಾವ ಮಹತ್ ಕಾರ್ಯವನ್ನೂ ಮಾಡದೆ ನಿತ್ಯವೂ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಕೆಲವರು, ಅದಕ್ಕೆ ಪ್ರತಿಯಾಗಿ, ಅವರಂತಹವರು ಪ್ರಪಂಚದಲ್ಲಿ ಎಲ್ಲೂ ಇಲ್ಲ ಎಂದು ಹೊಗಳುವ ‘ಆಸ್ಥಾನ ವಿದ್ವಾಂಸರು’. ಅದಕ್ಕೆ ವಿರುದ್ಧವಾಗಿ, ನಿಜವಾಗಿಯೂ ಒಳ್ಳೆಯ ಕೆಲಸಗಳನ್ನು ಮಾಡಿ, ಯಾವ ಪ್ರಚಾರವನ್ನೂ ಬಯಸದೆ ಎಲೆಮರೆಯ ಕಾಯಿಗಳಂತೆ ಬದುಕುವ ಕೆಲವರು…
ಹೀಗೆ ಆಲೋಚಿಸುತ್ತಿದ್ದಾಗ ಹೊರಗಡೆ ಹೋಗಿದ್ದ ನನ್ನ ಪತಿ ಹಿಂದಿರುಗಿ ಬಂದು, “ಕುಕ್ಕರ್ ಕೂಗ್ತಾ ಇದೆ, ಆರಿಸಬಾರ್ದಾ?” ಎನ್ನುತ್ತ ಕುಕ್ಕರ್ ಆರಿಸಿದರು. ನಾನು ನಡೆದ ವಿಷಯವನ್ನೆಲ್ಲ ವಿವರಿಸಿದೆ. ಅವರು, “ತಮ್ಮ ಸುತ್ತ ಹೊಗಳುಭಟ್ಟರನ್ನು ಇಟ್ಟುಕೊಂಡು, ಹೊಗಳಿಕೆಯ ಮಾತನ್ನು ಅಪೇಕ್ಷಿಸುವವರು ಇರುವವರೆಗೂ, ಅವರ ದೌರ್ಬಲ್ಯವನ್ನು ದುರುಪಯೋಗಪಡಿಸಿಕೊಳ್ಳುವ ಜನರು ಇದ್ದೇ ಇರುತ್ತಾರೆ. ಹಾಗಾಗಿ, ಲಿಯರ್ನ ಕಥೆ ನೂರಾರು ವರ್ಷಗಳು ಕಳೆದರೂ ಪ್ರಸ್ತುತವೆನಿಸುತ್ತದೆ” ಎಂದರು.
ನಾನು, “ಹಾಗಾದರೆ, ಈ ‘ಲಿಯರಿಸಂ’ಗೆ ಕೊನೆಯೇ ಇಲ್ಲವೆ? ಒಣಮಾತುಗಳನ್ನು ಆಡುವವರೇ ಎಲ್ಲೆಡೆ ಜಯಗಳಿಸುತ್ತಾರೆಯೆ? ತಮ್ಮ ಒಳ್ಳೆಯತನಕ್ಕೆ ಮಾತಿನ ಮೆರುಗು ಕೊಡಲು ಇಚ್ಛಿಸದ ಮಂದಿ ‘ಪೊಳ್ಳು ಮಾತುಗಳನ್ನಾಡದ ನಿಷ್ಠರು ನಾವು ನಮಗೇನೇನೂ ಭಯವಿಲ್ಲ, ಸುಳ್ಳಿನ ಸರಪಳಿ ಪೋಣಿಸದ ನಮಗೆ ಎಂದೆಂದಿಗೂ ಜಯವಿಲ್ಲ’
(ಕೆ.ಎಸ್. ನರಸಿಂಹಸ್ವಾಮಿಗಳ ಕ್ಷಮೆ ಕೋರಿ) ಎಂದು ಪರಿತಪಿಸಬೇಕೇ?” ಎಂದೆ.
ಅವರು, “ನೋಡು, ವಾಸ್ತವವಾಗಿ ಸಾಹಿತ್ಯ ಎಲ್ಲಿಂದ ಸೃಷ್ಟಿ ಆಗುತ್ತದೆ? ನಮ್ಮ ಸುತ್ತಲಿನ ಸಮಾಜದಿಂದ… ವಿದ್ಯಾವಂತರಾದ ನಾವು ಸಾಹಿತ್ಯದಿಂದ ಪಾಠ ಕಲಿಯುತ್ತೇವೆ. ಓದು-ಬರೆಹ ತಿಳಿಯದ ಗಂಗಮ್ಮನಂತಹವರು ಸಮಾಜದಿಂದ ಪಾಠ ಕಲಿಯುತ್ತಾರೆ. ಒಟ್ಟಿನಲ್ಲಿ, ನಾವೆಲ್ಲರೂ ಸಾಹಿತ್ಯದಿಂದ ಅಥವಾ ನಮ್ಮ ಸುತ್ತಮುತ್ತಲಿನ ಪರಿಸರದಿಂದ ಪಾಠ ಕಲಿಯಬೇಕು. ಗಟ್ಟಿಯಾದ ಕಾಳು ಯಾವುದು, ಜೊಳ್ಳು ಯಾವುದು ಎಂಬುದನ್ನು ಪರೀಕ್ಷಿಸುವಂತೆ ಜನರ ನಡವಳಿಕೆಯನ್ನು ಸೂಕ್ಷö್ಮವಾಗಿ ಗಮನಿಸಿ, ಪೊಳ್ಳು ಜನರನ್ನು ದೂರ ಇಡಬೇಕು. ಆಗ ನೀನು ಹೇಳಿದೆಯಲ್ಲ, ಲಿಯರಿಸಂ – ಅದು ಅಂತ್ಯವಾಗುತ್ತದೆ. ಗಾದೆಯೇ ಇಲ್ಲವೆ? ‘ಬೊಗಳುವ ನಾಯಿ ಕಚ್ಚುವುದಿಲ್ಲ’ ಹಾಗೆಯೇ, ಮಾತಾಡುವ ಮಂದಿ ಸಮಯ ಬಂದಾಗ ನಿಂತು ಕೆಲಸ ಮಾಡುವುದಿಲ್ಲ. ಎಷ್ಟೋ ವೇಳೆ, ಯಾವುದೇ ಸಮಾರಂಭ ಇದ್ದ ಸಮಯದಲ್ಲಿ ಬಂದು ನಿಂತು ಹೊಗಳಿಕೆಯ ಮಾತುಗಳನ್ನು ಆಡುವವರು ಎಷ್ಟೋ ಮಂದಿ ಸಿಗುತ್ತಾರೆ. ಆದರೆ, ‘ಯೋಚಿಸಬೇಡಿ, ನಾನು ನಿಮ್ಮ ಜೊತೆ ಇದ್ದೇನೆ’ ಎಂದು ಹೇಳಿ ಅಥವಾ ಕೆಲವೊಮ್ಮೆ ಹೇಳದೇ, ಯಾವ ಪ್ರತಿಫಲವನ್ನೂ ಬಯಸದೆ, ಸದ್ದಿಲ್ಲದೆ ಕೆಲಸ ಮಾಡುವ ಮಂದಿ ವಿರಳ. ಹುಷಾರಿಲ್ಲದಿದ್ದಾಗ ಎಲ್ಲರೂ ಯೋಗಕ್ಷೇಮ ಅಥವಾ ರೋಗಕ್ಷೇಮ ವಿಚಾರಿಸಲು ಬರುವ ಜನರನ್ನು ಗೌರವಿಸುವುದು ಸಹಜ. ಆದರೆ ಕಷಾಯ ಮಾಡಿಕೊಂಡು ಬರುವವರು, ಅಡುಗೆ ಮಾಡಿ ಆರೈಕೆ ಮಾಡುವವರು ಸಾಮಾನ್ಯವಾಗಿ ಯಾರ ಗಮನಕ್ಕೂ ಬರುವುದಿಲ್ಲ. ಏಕೆಂದರೆ ಅಂತಹವರು ತಮ್ಮ ಪ್ರೀತಿಯನ್ನು ಕಾರ್ಯದಲ್ಲಿ ತೋರಿಸುತ್ತಾರೆ, ಬಣ್ಣದ ಮಾತುಗಳನ್ನು ಆಡಿ ಪ್ರೀತಿ ತೋರಿಸುವುದಿಲ್ಲ. ನಾವು ವಿವೇಚನೆಯಿಂದ ನಡೆದುಕೊಂಡರೆ, ಹೆಚ್ಚು ಮಾತುಗಳನ್ನಾಡದ ಒಳ್ಳೆಯ ಮನಸ್ಸಿನ ಜನರಿಗೆ ಅವಮಾನವಾಗುವ ಪರಿಸ್ಥಿತಿ ಎಂದೆಂದಿಗೂ ಉದ್ಭವಿಸುವುದಿಲ್ಲ” ಎನ್ನುತ್ತ್ತ, “ಈ ಎಲ್ಲ ಯೋಚನೆಗಳ ಮಧ್ಯೆ ಕುಕ್ಕರ್ ಆರಿಸುವುದನ್ನು ಮರೆತೆಯಲ್ಲ? ನಾನು ಬರುವುದು ಸ್ವಲ್ಪ ತಡವಾಗಿದ್ದರೆ ಅದರೊಳಗಿನ ನೀರು ಇಂಗಿ ಕುಕ್ಕರ್ ಸಿಡಿಯುತ್ತಿತ್ತು. ಇನ್ನು ಮುಂದೆ ಅಡುಗೆ ಮಾಡುವ ಸಮಯದಲ್ಲಿ ನಿನ್ನ ಆಲೋಚನಾ ಸರಣಿಗೆ ಹಾಲ್ಟ್ ಬೋರ್ಡ್ ತೋರಿಸು ಮಹಾರಾಯ್ತಿ” ಎಂದು ತಮಾಷೆ ಮಾಡಿದರು
***






