ವೃಷಭಾವತಿ ಎಂಬ ನದಿಯೊಂದು ಬೆಂಗಳೂರಿನಲ್ಲೇ ಹುಟ್ಟುತ್ತಿತ್ತು, ಅನಂತರ ಅದು ಅಲ್ಲೇ ಸತ್ತುಹೋಯಿತು ಎಂದು ರಾಜ್ಯದ ಬಹುತೇಕರಂತೆ ನಾನೂ ತಿಳಿದಿದ್ದೆ. ಆದರೆ ಅದು ಸತ್ತಿಲ್ಲ, ಇನ್ನೂ ಕೋಮಾದಲ್ಲಿದೆ, ಅದು ನಿತ್ಯವೂ ಬೆಂಗಳೂರಿನ ಕೊಳೆಯನ್ನು ಸ್ವಚ್ಛಮಾಡುತ್ತಿದೆ.
ಸರ್ಕಾರ ಮನಸ್ಸು ಮಾಡಿದರೆ ಅದಕ್ಕೆ ಜೀವ ತಂದು ಅಮರತ್ವವನ್ನು ನೀಡಬಹುದು. ಊಹಿಸಿಕೊಳ್ಳಿ, ತುಲಾ ಸಂಕ್ರಮಣದ ದಿನ ತಲಕಾವೇರಿಯಲ್ಲಿನ ಸಂಭ್ರಮವನ್ನು. ಬೆಂಗಳೂರಿನಲ್ಲಿ ಯಾವುದಾದರೂ ಒಂದು ಸಂದರ್ಭ ಕೊಟ್ಟರೆ? ಅದೊಂದು ದೊಡ್ಡ ಹಬ್ಬ ಆಗುವುದಾದರೆ? ಅಬ್ಬಾ! ಅಂದಹಾಗೆ ೨೦೧೭ರಲ್ಲಿ ಐಐಎಸ್ಸಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ವೃಷಭಾವತಿಯ ಮೂಲ ನಕ್ಷೆ ಇತ್ಯಾದಿಗಳ ಬಗ್ಗೆ ಸುದೀರ್ಘ ವರದಿಯೊಂದನ್ನು ಸಿದ್ಧಪಡಿಸಿ ರಾಜ್ಯಸರ್ಕಾರಕ್ಕೆ ಕೊಟ್ಟಿತ್ತು. ಈಗ ಅದೆಲ್ಲೋ ವಿಧಾನಸೌಧದಲ್ಲಿ ಧೂಳು ತಿನ್ನುತ್ತ ಬಿದ್ದಿರಬಹುದು. ಆದರೆ ವೃಷಭಾವತಿ ಸತ್ತಿಲ್ಲ ಕಣ್ರಿ, ಅದು ಕೋಮಾದಲ್ಲಿದೆ. ಅದರ ಮೂಲ ಇನ್ನೂ ಜೀವಂತವಾಗಿ ದೊಡ್ಡ ಬಸವನ ಪಾದದಡಿ ಇದೆ. ಅದು ಮುಂದೆ ಹರಿಯುವ ಸ್ಥಳವನ್ನು ಭಕ್ತಿ, ಶ್ರದ್ಧೆಗಳಿಂದ ಸಂಸದರಾಗಿದ್ದ ಅನಂತಕುಮಾರ್ ಅವರು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಒದಗಿಸುವ ಯೋಜನೆಯಾದ ಅದಮ್ಯ ಚೇತನ ಕಟ್ಟಡದ ಒಳಗೆ ‘ದಕ್ಷಿಣಗಂಗೆ’ ಎಂಬ ಹೆಸರಿನಲ್ಲಿ ಕಾದಿಟ್ಟುಕೊಂಡಿದ್ದಾರೆ. ಅದು ಅಲ್ಲಿ ಎಂಥ ಶುದ್ಧ ರೂಪದಲ್ಲಿದೆ ಅಂತೀರಾ, ನಿಜಕ್ಕೂ ಗಂಗೋತ್ರಿಯ ಗಂಗೆಯಷ್ಟು ಶುದ್ಧ.
ಅರ್ಕಾವತಿ
ಇಂದು ಸೈಟು ಹಂಚಿಕೆ ವಿವಾದದಿಂದ ಈ ಹೆಸರು ಜನರಿಗೆ ಪರಿಚಿತವೇ ವಿನಾ ಇದೊಂದು ನದಿಯಾಗಿತ್ತು, ಅದರ ಸಮಾಧಿ ಮೇಲೆ ಈ ಸೈಟುಗಳನ್ನು ಮಾಡಲಾಗಿದೆ ಎಂಬುದು ನಮ್ಮ ಜನರಿಗೆ ತಿಳಿದಿಲ್ಲ. ಅದನ್ನು ತಿಳಿಯುವ ಆಸಕ್ತಿಯೂ ಇಲ್ಲ.
ಬೇಸಿಗೆ ಈಗ ಜೋರಾಗುತ್ತಿದೆ, ಅಂದರೆ ಇನ್ನೇನು ಬೆಂಗಳೂರಿನ ನೀರಿನ ಸಮಸ್ಯೆ, ತಮಿಳುನಾಡಿನ ಗಲಾಟೆಯ ಸೀಸನ್ ಪ್ರಾರಂಭವಾಗಿದೆ ಎಂದೇ ಅರ್ಥ. ಅರ್ಕಾವತಿ ಸಾಯಲು ನಮ್ಮ ನಗರದ ಅನಿಯಂತ್ರಿತ ಬೆಳವಣಿಗೆ, ಕಂಡಕಂಡಲ್ಲಿ ಸಾವಿರಾರು ಅಡಿ ಆಳಕ್ಕೆ ಕೊಳವೆಬಾವಿ ಕೊರೆಸುವುದು, ಅತಿಕ್ರಮಣ – ಹೀಗೆ ಉದ್ದದ ಪಟ್ಟಿಯನ್ನೇ ಮಾಡಬಹುದು. ಈಗಂತೂ ಅರ್ಕಾವತಿ ಎಂಬುದು ಬಡಾವಣೆಯೇ ವಿನಾ ನದಿ ಅಲ್ಲವೇ ಅಲ್ಲ. ಯಾವ ನಾಚಿಕೆಯೂ ಇಲ್ಲದೆ ನಮ್ಮ ನೇತಾರರು ಹಾಗೂ ಅಧಿಕಾರಿಗಳು ಅರ್ಕಾವತಿಯ ಹೆಸರು ಬಂದಾಗಲೆಲ್ಲ ಬಡಾವಣೆಯ ಮಾತನ್ನೇ ಆಡಿ ಅದರ ಬೆಳವಣಿಗೆ ಬಗ್ಗೆ ಮಾತನಾಡುತ್ತಾರೆ, ರೀ ಡೂ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ. ಆದರೆ ಕತೆ ಏನು? ರಾಮನಗರ ಬಳಿ ಇನ್ನೂ ಅರೆಬರೆ ಸತ್ತಂತೆ ಇರುವ ಈ ನದಿಯಲ್ಲಿ ತೊಳೆದುಕೊಳ್ಳಲೂ ನೀರಿಲ್ಲ. ಅಲ್ಲಿರುವ ನೀರನ್ನು ಈಚೆಗೆ ಪರೀಕ್ಷೆಗೆ ಒಡ್ಡಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯ ಪ್ರಕಾರ ಈ ನೀರಿನಲ್ಲಿ ಕಾರ್ಲಿಆರ್ಮ್ ಬ್ಯಾಕ್ಟೀರಿಯಾ ಅಸಾಧ್ಯ ಪ್ರಮಾಣದಲ್ಲಿವೆಯಂತೆ. ಇವು ಕೈಗಾರಿಕಾ ತ್ಯಾಜ್ಯದಿಂದ ಬರುವಂಥವು. ಸತ್ತು ನರಕ ಕಂಡಿರುವ ಈ ನದಿಯ ಅಳಿದುಳಿದ ಭಾಗದಲ್ಲೂ ಕೈಗಾರಿಕೆಯ ತ್ಯಾಜ್ಯ ಇನ್ನೂ ಸೇರುತ್ತಿದೆಯೆಂದರೆ ನಮ್ಮ ನವನಾಗರಿಕತೆಯ ದುರಾಸೆ ಎಷ್ಟರದ್ದಿರಬೇಡ!
ದಕ್ಷಿಣ ಪಿನಾಕಿನಿ
ದಕ್ಷಿಣ ಪಿನಾಕಿನಿ ಇಂದಿನ ನಂದಿಬೆಟ್ಟದಲ್ಲಿ ಹುಟ್ಟಿ, ಅಲ್ಲಿಂದ ಇಳಿದು ಬೆಂಗಳೂರಿನ ಕಡೆಗೆ ಹರಿದುಬರುತ್ತಿತ್ತು. ಇದರ ಅಲ್ಪ ನೆನಪು ನಮಗೆ ಆಗುವುದು ಬೆಂಗಳೂರಿನ ಕಾಡುಗೋಡಿ ಪ್ರದೇಶದಿಂದ. ಇಲ್ಲಿ ಪ್ರಸಿದ್ಧ ವಿಶ್ವೇಶ್ವರ ದೇಗುಲವಿದೆ. ಇದು ಚೋಳರ ಕಾಲದ ದೇಗುಲ. ಕಾಡಿನ ಗುಡಿ ಅಥವಾ ಕಾಡಿನಲ್ಲಿರುವ ಗುಡಿ ಅಂದರೆ ಫಲವತ್ತಾದ ಮಣ್ಣು ಎಂಬರ್ಥದ ಹಳೆಯ ಪ್ರದೇಶÀ. ಕಾಡಿನಿಂದ ಹರಿದುಬರುವಾಗ ಹೊತ್ತುತರುತ್ತಿದ್ದ ಗುಡಿಮಣ್ಣನ್ನು ಇಲ್ಲಿ ಈ ನದಿ ತಂದುಹಾಕುತ್ತಿದ್ದ ಕಾರಣಕ್ಕೆ ಈ ಹೆಸರು.
ಪಿನಾಕಿನಿ ನದಿಯು ನಂದಿಬೆಟ್ಟದಲ್ಲಿ ಹುಟ್ಟಿ, ಪೂರ್ವ ದಿಕ್ಕಿಗೆ ಹರಿದು ೪೨೫ ಕಿ.ಮೀ. ಪ್ರವಹಿಸಿ ತಮಿಳುನಾಡಿನ ಮೂಲಕ ಬಂಗಾಳಕೊಲ್ಲಿಯನ್ನು ಸೇರುತ್ತಿತ್ತು. ಶೇ.೮೫ ಭಾಗ ಕರ್ನಾಟಕದಲ್ಲಿಯೂ, ಉಳಿದ ಶೇ.೧೫ ಭಾಗ ತಮಿಳುನಾಡಿನಲ್ಲಿಯೂ ಹರಿಯುತ್ತಿತ್ತು ಎನ್ನಲಾಗಿದೆ. ಇದಕ್ಕೆ ಪೊನ್ನೈಯಾರ್ ಎಂಬ ತಮಿಳು ಹೆಸರೂ ಇತ್ತು. ಈ ನದಿ ಜೀವಂತವಾಗಿ ಇರುವವರೆಗೂ ಬೆಂಗಳೂರಿನ ಉತ್ತರಭಾಗದ ಸಂಪೂರ್ಣ ನೀರಿನ ಆವಶ್ಯಕತೆಯನ್ನು ಪೂರೈಸುತ್ತಿತ್ತು. ದಕ್ಷಿಣ ಪಿನಾಕಿನಿಗೆ ವೃಷಭಾವತಿಗೆ ಇರುವಷ್ಟು ಅದೃಷ್ಟವೂ ಇಲ್ಲ! ವೃಷಭಾವತಿಗೆ ಅದರ ಉದ್ಧಾರದ ಉದ್ದೇಶವುಳ್ಳ ಒಂದು ಮಂಡಳಿ, ಐಐಎಸ್ಸಿ ವರದಿ, ಒಂದು ಅಡ್ರೆಸ್ ಎಲ್ಲವೂ ಇದೆ; ಆದರೆ ಪಿನಾಕಿನಿಗೆ ಪಾನಿ ಡಾಟ್ ಅರ್ಥ್ನವರ ಒಂದು ವರದಿಯನ್ನು ಬಿಟ್ಟರೆ ಬೇರೇನೂ ಇಲ್ಲ. ಜೊತೆಗೆ ಕಾಡುಗೋಡಿ ಎಂಬ ಹೆಸರು. ಕಾಡುಗೋಡಿ ಎಂಬುದಕ್ಕೆ ಎರಡು ಅರ್ಥಗಳಿವೆ, ಒಂದು – ಕಾಡಿನಲ್ಲಿರುವ ಗುಡಿ. ಅದು ಈಗಲೂ ಕಾಡುಗೋಡಿಯಲ್ಲಿರುವ ಚೋಳರ ಕಾಲದ ಕಾಶಿ ವಿಶ್ವೇಶ್ವರ ದೇಗುಲ. ಇನ್ನೊಂದು ಕಾಡಿನಿಂದ ಸಮೃದ್ಧವಾದ ಗುಡಿ ಮಣ್ಣನ್ನು ತಂದುಹಾಕುತ್ತಿದ್ದ ಪ್ರದೇಶ. ಇವೆರಡೇ ಇದಕ್ಕಿರುವ ಸದ್ಯದ ಸಾಕ್ಷಿಗಳು. ಬೆಳ್ಳಂದೂರಿನಂತೆ ನೊರೆ ಕಾರುತ್ತಿರುವ ವಿಷವಾದ ಕೆರೆಗಳೂ ಪಿನಾಕಿಯ ನೆನಪಿಗಿದೆ! ಪಿನಾಕಿನಿ ಇರುವವರೆಗೂ ಕಾವೇರಿ ನೀರು ಕುರಿತು ತಮಿಳುನಾಡಿನ ಗದ್ದಲ ಇರಲಿಲ್ಲ ಎಂಬುದು ಗಮನಿಸಬೇಕಾದ ತಥ್ಯ. ಇದರ ಒಟ್ಟು ೨೮,೨೮೮ ಚದರ್ ಕಿ.ಮೀ ನೀರು ಹರಿಯುವ ಪ್ರದೇಶದಲ್ಲಿ ನೂರಾರು ಕೆರೆಗಳು, ಉಪನದಿಗಳು ಜೀವಂತವಾಗಿದ್ದವು. ಇದು ಕಾವೇರಿ ಮತ್ತು ಪಾಲಾರ್ ನದಿಗಳಿಗೆ ಹೊಂದಿಕೊಂಡಿತ್ತು. ಆದ್ದರಿಂದ ತಮಿಳುನಾಡಿಗೆ ನೀರಿನ ಕೊರತೆ ಆಗುತ್ತಿರಲಿಲ್ಲ. ಯಾವಾಗ ಇದು ಸತ್ತಿತೋ ಅಂದಿನಿಂದ ತಮಿಳುನಾಡಿನ ಕಣ್ಣು ಕಾವೇರಿಯ ಮೇಲೆ ಬಿತ್ತು. ಕಾವೇರಿ ನೀರಿನ ಬಗ್ಗೆ ಗದ್ದಲ ಎಬ್ಬಿಸುವ ಯಾರೊಬ್ಬರೂ ಈ ನದಿಯ ಬಗ್ಗೆ ಉಸಿರು ಎತ್ತುವುದಿಲ್ಲ.
ಪಿನಾಕಿನಿ ನದಿ ಮೊದಲು ಕುಲಗೆಟ್ಟಿದ್ದು ಬೆಂಗಳೂರಿನಲ್ಲಿ. ಈ ನದಿಯ ಕೊಲೆಗಾರ ಬೆಂಗಳೂರು ಎಂಬ ಮಹಾನಗರ. ನಂದಿಬೆಟ್ಟದಲ್ಲಿ ಹುಟ್ಟಿ ಚಿಕ್ಕಬಳ್ಳಾಪುರ, ಮಾಲೂರು, ಕಾಡುಗೋಡಿ, ಸರ್ಜಾಪುರದಿಂದ ಹೊಸಕೋಟೆಗೆ ಬಂದು, ಹೊಸೂರಿಗೆ ಹೋಗಿ, ಕೃಷ್ಣಗಿರಿ ಬಳಸಿ ವಿಲ್ಲುಪುರಂನಿಂದ ಮುಂದೆ ಹೋಗಿ ಕಡಲೂರು, ಪಾಂಡಿಚೇರಿ ಬಳಿ ಬಂಗಾಳಕೊಲ್ಲಿ ಸೇರುತ್ತಿತ್ತು. ಈ ಹರಿವಿನಲ್ಲಿ ಇದು ತುಂಬುತ್ತಿದ್ದ ಕೆರೆಗಳ ಸಂಖ್ಯೆ ಅಗಣಿತ. ಬೆಂಗಳೂರಲ್ಲಿ ಕೈಗಾರಿಕಾ ತ್ಯಾಜ್ಯ, ಕೊಳಚೆ ನೀರು ಹೊತ್ತುಸಾಗುತ್ತ ತಮಿಳುನಾಡಿನ ಪ್ರಮುಖ ನಗರ ಪಟ್ಟಣಗಳನ್ನು ಸುತ್ತಿ ಅಲ್ಲಿನ ಕೊಚ್ಚೆ ತೊಳೆದು ಮಡಿಲಲ್ಲಿ ಹಾಕಿಕೊಂಡು ಸಾಗುತ್ತ ಕ್ರಮೇಣ ಒಣಗಿತು. ಈ ನದಿಯ ಮಹತ್ತ್ವವನ್ನು ನಾವೆಂದೂ ಗುರುತಿಸಲಿಲ್ಲ ಎನ್ನುವುದು ನದಿ-ಪರಿಸರಗಳ ಬಗೆಗೆ ನಮ್ಮ ಧೋರಣೆಯ ದ್ಯೋತಕವಾಗಿದೆ. ಇಂದು ನೊರೆಕಾರುತ್ತ ಪ್ರಪಂಚದ ಗಮನಸೆಳೆಯುತ್ತಿರುವ ಬೆಳ್ಳಂದೂರು ಕೆರೆ ಕೂಡ ಒಂದುಕಾಲದಲ್ಲಿ ದಕ್ಷಿಣ ಪಿನಾಕಿನಿಯ ಅಂದದ ಕೂಸಾಗಿತ್ತು. ವೃಷಭಾವತಿ ಮತ್ತು ದಕ್ಷಿಣ ಪಿನಾಕಿನಿಗಳು ಜೀವಂತ ಇರುವವರೆಗೆ ಕರ್ನಾಟಕ ಮತ್ತು ತಮಿಳುನಾಡುಗಳ ಮಧ್ಯೆ ನೀರಿನ ಗದ್ದಲವೇ ಇರಲಿಲ್ಲ. ಇಂದು ಈ ಗಲಾಟೆ ಎಲ್ಲಿಗೆ ಬಂದು ನಿಂತಿದೆ? ದಕ್ಷಿಣ ಪಿನಾಕಿನಿಯ ಮಹತ್ತ÷್ವ ಅರಿತ ಶಿಡ್ಲಘಟ್ಟದ ಜನರು ಇದರ ಪುನರುತ್ಥಾನಕ್ಕೆ ಯತ್ನಿಸಿದ್ದಾರೆ, ಮಾಲೂರು ಬಳಿ ಬರುವಷ್ಟರಲ್ಲಿ ಇದು ಈಗ ಒಣಗುತ್ತದೆ. ಅಲ್ಲಿಂದ ಕೊಳಚೆ ಹೊತ್ತು ಬರುತ್ತ ಬೆಂಗಳೂರು ಮೂಲಕ ಹೊಸೂರು ತಲಪುವಷ್ಟರಲ್ಲಿ ಸಂಪೂರ್ಣ ನಾಪತ್ತೆಯಾಗುತ್ತದೆ. ಇದು ಬದುಕಿದ್ದಾಗ ೪,೭೦೦ ಹೆಕ್ಟೇರ್ ಭೂಮಿಗೆ ನೀರುಣಿಸುತ್ತಿತ್ತು. ೨೦೧೬ರಲ್ಲಿ ಈ ನದಿಗೆ ಪುನರುಜ್ಜೀವ ಕೊಡುವ ಯತ್ನ ಶಿಡ್ಲಘಟ್ಟದಲ್ಲಿ ಸ್ವಲ್ಪ ನಡೆದು ಈಗ ನಿಂತಿದೆ. ಪಿನಾಕಿನಿ ಮತ್ತು ವೃಷಭವತಿಗಳಿದ್ದಾಗ ಬೆಂಗಳೂರಲ್ಲಿ ಸಾವಿರಕ್ಕೂ ಅಧಿಕ ಶುದ್ಧನೀರಿನ ಕೆರೆಗಳಿದ್ದವು. ೨೦೦೦ ವೇಳೆಗೆ ೪೦೦ರಷ್ಟಿದ್ದ ಕೆರೆಗಳು, ೨೦೧೬ರಲ್ಲಿ ೨೦೦ಕ್ಕೆ ಕುಸಿದವು. ಸದ್ಯ ಬೆಂಗಳೂರಿನಲ್ಲಿ ನೋಡಲು ಸಿಗುವ ಕೆರೆಗಳು ೧೭ ಮಾತ್ರ. ಇಂದು ಬೆಂಗಳೂರು ಬೃಹತ್ತಾಗಿ ಬೆಳೆದಿದೆ ಅಂದರೆ ಅಷ್ಟು ಕೆರೆಗಳು ಅದರ ಹೊಟ್ಟೆ ಸೇರಿವೆ ಎಂದರ್ಥ. ಬೆಂಗಳೂರಿನಲ್ಲಿದ್ದ ಕೆರೆಗಳ ಸಂಖ್ಯೆ ಬಿಬಿಎಂಪಿ ನಕಾಸೆಯಲ್ಲೇ ಸಿಗುತ್ತವೆ. ಇಂದು ಬೆಂಗಳೂರಿನ ಯಾವ ಸ್ಥಳಗಳಿಗೆ ನಾಗಸಂದ್ರ, ದೊಡ್ಡಸಂದ್ರ ಇತ್ಯಾದಿ ಸಂದ್ರ ಎಂಬ ಹೆಸರಿದೆಯೋ ಅಲ್ಲೆಲ್ಲ ಈ ಹಿಂದೆ ದೊಡ್ಡ ಕೆರೆಗಳಿದ್ದವೆಂದೇ ಅರ್ಥ. ಈಗ ಇಲ್ಲೆಲ್ಲ ಹೆಸರಿನಲ್ಲಿ ಮಾತ್ರ ಇವೆ. ಜಾನಕಿ ನಾಯರ್ ಅವರ ‘ಪ್ರಾಮಿಸ್ ಆಫ್ ದಿ ಮೆಟ್ರೋಪಾಲಿಸ್’ (The Promise of the Metropolis) ಎಂಬ ಕೃತಿಯಲ್ಲಿ ಬೆಂಗಳೂರಿನ ಕೆರೆಗಳ ಹಣೆಬರೆಹ ಬಹಳ ವಿವರವಾಗಿ ದೊರೆಯುತ್ತದೆ. ಒಂದು ಕಾಲದಲ್ಲಿ ಬೆಂಗಳೂರಿಗೆ ಇಂದಿನ ಸಿಲಿಕಾನ್ ವ್ಯಾಲಿ ಎಂಬ ಹೆಸರು ಇರಲಿಲ್ಲ, ಆಗ ಇದು ಕೆರೆಗಳ ನಗರ, ನದಿಗಳ ವ್ಯಾಲಿ ಆಗಿತ್ತು.
ಇದೀಗ ಕರ್ನಾಟಕ ಸರ್ಕಾರ ಬೆಂಗಳೂರು ಮಹಾನಗರಪಾಲಿಕೆಯನ್ನು ಆಡಳಿತಾತ್ಮಕ ದೃಷ್ಟಿಯಿಂದ ಐದು ವಿಭಾಗಗಳಾಗಿ ವಿಭಜಿಸಿದೆ. ಬೆಂಗಳೂರಿನಲ್ಲಿ ಸತ್ತು ಹೋಗಿರುವ ಅಥವಾ ನಿರ್ಜೀವಗೊಂಡಿರುವ ಈ ನದಿಗಳನ್ನು ಹಾಗೂ ಲೇಔಟ್ಗಳಾದ ನೂರಾರು ಕೆರೆಗಳ ಪುನರುಜ್ಜೀವನಕ್ಕೆ ಈ ಹೊಸ ಪಾಲಿಕೆಗಳಿಗೆ ಸರ್ಕಾರ ಜವಾಬ್ದಾರಿ ವಹಿಸಿದರೆ ಅವುಗಳಿಗೆ ಗುರುತರ ಹೊಣೆಗಾರಿಕೆ ಬರುವುದರ ಜೊತೆಗೆ ಈ ಕಾರ್ಯದಲ್ಲಿ ಸ್ವಲ್ಪ ಯಶಸ್ಸು ಸಿಗುತ್ತದೆ. ಸರ್ಕಾರಕ್ಕೂ ದೊಡ್ಡ ಹೆಗ್ಗಳಿಕೆ ದೊರೆಯುತ್ತದೆ.
ನಮ್ಮದು ನಾಗರಿಕ ಸಮಾಜವಾಗಿದ್ದರೆ, ನ್ಯಾಯದ ಬಗ್ಗೆ ಕಾಳಜಿಯಿದ್ದರೆ ಈ ಕೆರೆ ಮತ್ತು ನದಿ ಭಾಗಗಳನ್ನು ಕದಿಯಲು ನೆರವಾದ ಆ ಕಾಲದ ಅಧಿಕಾರಿಗಳು ಹಾಗೂ ಪುಢಾರಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು. ಕನಿಷ್ಠಪಕ್ಷ ಜನರ ಮುಂದೆ ತಂದು ನಿಲ್ಲಿಸುವ ಪುಣ್ಯವನ್ನಾದರೂ ನಮ್ಮ ಮಾಧ್ಯಮಗಳು ಮಾಡಬೇಕಿದೆ. ಯಾರಾದರೂ ಸಮಾಜದ ಕಾಳಜಿಯುಳ್ಳ ಸಂಘ-ಸಂಸ್ಥೆಯವರು ಆರ್ಟಿಐ ಮೂಲಕ ಇವುಗಳನ್ನು ಕದ್ದವರು ಮತ್ತು ಅಂತಹ ಪುಣ್ಯಾತ್ಮರ ವಂಶದವರನ್ನಾದರೂ ಇಂದಿನ ಜನತೆಗೆ ಪರಿಚಯಿಸುವ ಕೆಲಸ ಮಾಡಲಿ. ಈ ಆ ಮೂಲಕವಾದರೂ ನಮ್ಮ ನೈಜ ಶ್ರದ್ಧಾಂಜಲಿಯನ್ನು ಈ ನದಿಗಳಿಗೆ, ಕೆರೆಗಳಿಗೆ ಅರ್ಪಿಸೋಣ.
***






