ಸ್ನೇಹಿತರೊಬ್ಬರು ಸೇವಾಸಂಬಂಧಿತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ನಿರ್ವಹಣೆಯ ಸ್ವರೂಪದ ಕೆಲಸ ಅವರದಾಗಿತ್ತು. ಒಂದಷ್ಟು ವರ್ಷಗಳ ಅನುಭವದ ನಂತರ ಅವರ ಕೆಲಸದ ಸ್ವರೂಪ ಬದಲಾಯಿತು. ಸಾರ್ವಜನಿಕ ದೇಣಿಗೆಯಿಂದ ನಡೆಯುವ ಸಂಸ್ಥೆಯದು. ಹಾಗಾಗಿ ದೇಣಿಗೆ ಸಂಗ್ರಹಿಸುವುದೂ ದೊಡ್ಡ ಕೆಲಸವೇ ಅಲ್ಲಿ. ಈ ಕೆಲಸಕ್ಕೆ ಸ್ನೇಹಿತರು ನಿಯೋಜಿತರಾದರು.
ಸಂಸ್ಥೆಯ ನಿರ್ವಹಣೆ ಕೆಲಸವನ್ನು ಮಾಡುತ್ತಿದ್ದಾಗ ಅನೇಕರು ಸಂಪರ್ಕಕ್ಕೆ ಬರುತ್ತಿದ್ದರು. ಹೆಚ್ಚಿನವರು ಸೇವೆಯನ್ನು ಪಡೆಯಲು ಬರುತ್ತಿದ್ದರು. ಕೆಲವರು ಅಲ್ಲಿ ಉಚಿತವಾಗಿ ಕೆಲಸ ಮಾಡಲು ಬರುತ್ತಿದ್ದರು. ಕಚೇರಿ ಕಾರ್ಯವೆಂದು ಇನ್ನು ಕೆಲವರು. ಇಂಥವರ ಸಂಪರ್ಕ ಯಥೇಚ್ಛವಾಗಿ ಆಗುತ್ತಿತ್ತವರಿಗೆ. ಈಗಿನ ಕೆಲಸದ ವಿನ್ಯಾಸದಲ್ಲಿ ಇಂಥವರು ಇವರಿಗೆ ಹೆಚ್ಚು ಉಪಯೋಗಕ್ಕೆ ಬರುವುದಿಲ್ಲ. ಹಾಗಾಗಿ ಇಂಥವರ ಜೊತೆ ಹೆಚ್ಚು ಸಮಯ ಕಳೆದರೆ ಆಗಬೇಕಾದ ಕೆಲಸ ಆಗುವುದಿಲ್ಲ.
ನಾವು ಎಂಥವರ ಜೊತೆ ಸಮಯ ಕಳೆಯುತ್ತೇವೆ ಎನ್ನುವುದು ನಮ್ಮ ಲಕ್ಷ್ಯ ಪೂರೈಕೆಯ ಕ್ರಿಯೆಯಲ್ಲಿ ಲೆಕ್ಕಕ್ಕೆ ಬರುವಂತಹದ್ದು.
ದಾನಿಗಳ ಪರಿಚಯವಿರುವ ಕೆಲವು ಆಪ್ತರನ್ನು ಈ ಸ್ನೇಹಿತರು ಮೊದಲು ಹಿಡಿದುಕೊಂಡರು. ಅವರ ಜೊತೆ ಚರ್ಚಿಸಿ ದಾನಿಗಳ ಯಾದಿಯನ್ನು ಸಿದ್ಧಪಡಿಸಿದರು. ಕ್ರಮೇಣ ಅವರು ಹೇಳಿದರು, ಇವರು ಹೇಳಿದರು ಎನ್ನುತ್ತ, ಸಂಪರ್ಕಮೂಲವನ್ನು ವಿವರಿಸುತ್ತ, ಸಂಪರ್ಕಕಾರಣವನ್ನು ಅರಹುತ್ತ ಧನಸಂಗ್ರಹದ ಮರ್ಮವನ್ನು ನಿಧಾನವಾಗಿ ಅರಿತುಕೊಂಡರು. ನಿರ್ವಹಣೆಯ ಕೆಲಸಕ್ಕಾಗಿ ಮಾಡಿಕೊಳ್ಳುತ್ತಿದ್ದ ಟಿಪ್ಪಣಿ ವಿವರಗಳ ಪುಸ್ತಕ ಮೂಲೆ ಸೇರಿತು. ದಾನಿಗಳ ವಿವರಗಳಿಂದ ತುಂಬಿದ, ಆಗಾಗ ಇಂತಹ ವಿವರಗಳನ್ನು ತುಂಬುವ ‘ಸಂಗ್ರಹ ಪುಸ್ತಕ’ವೊಂದು ಮೈದುಂಬಿ ಸಿದ್ಧವಾಯಿತು.
ಚಲವಾಣಿಯಲ್ಲಿ ಹಳೆಯ ಸಂಪರ್ಕಸಂಖ್ಯೆಗಳೇನೋ ಇದ್ದುವು, ಉಪಯೋಗಕ್ಕೆ ಬಾರದು ಎಂಬಂತೆ. ಹೆಚ್ಚಿನವು ನಿಷ್ಕಿçಯ ಸಂಪರ್ಕಸಂಖ್ಯೆಗಳಾಗಿ ಉಳಿದವು. ಉಳಿದವು ಹಾಗೂ ಹೀಗೂ ಎಂಬಂತೆ ಅಷ್ಟಿಷ್ಟು ಸಕ್ರಿಯತೆಯನ್ನು ಉಳಿಸಿಕೊಂಡವು. ಹೊಸ ಸಂಪರ್ಕಸಂಖ್ಯೆಗಳಿಂದ ಚಲವಾಣಿ ಸಂಪನ್ನಗೊಂಡಿತ್ತು.
ಒಮ್ಮೆ ಆ ಸ್ನೇಹಿತರು ಸಿಕ್ಕಿದರು. ಒಂದೂರಿಗೆ ಹೋಗಬೇಕಿತ್ತು. ಅವರಿಗೆ ಪರಿಚಯದ ಊರು. ಬರುತ್ತಿದ್ದೇವೆಂದು ಅಲ್ಲಿಯ ಯಾರಿಗಾದರೂ ಹೇಳಿ ಎಂದಾಗ ಅವರು ತುಸು ಯೋಚಿಸಿದರು. ಛೇ! ಒಬ್ಬರೂ ನೆನಪಾಗುತ್ತಿಲ್ಲ ಎಂದರು. ಒಂದೆರಡು ಹೆಸರುಗಳು ನೆನಪಾದರೂ ಕರೆ ಮಾಡದೆ ವರ್ಷಗಳೇ ಸಂದುಹೋಗಿದ್ದವು. ಈಗ ಬರುತ್ತಿದ್ದೇವೆಂದು ಕಿರು ಸಮಯದ ಅಂತರದಲ್ಲಿ ಹೇಳುವುದು ಹೇಗೆ ಎಂಬ ಸವಾಲು ಅವರನ್ನು ಕಾಡಿತು.
ಸರಿ, ಬೇಡ ಬಿಡಿ ಎಂದರೂ ಮತ್ತೆ ಯೋಚನೆಗೆ ತೊಡಗಿದರು; ಯೋಚಿಸದೆ ತುಂಬಾ ಸಮಯವಾಗಿತ್ತು ಎಂಬಂತೆ. ಯೋಚಿಸುತ್ತಿದ್ದರೆನ್ನಿ. ಹೊಸ ಕೆಲಸದಲ್ಲಿ ತೊಡಗಿಕೊಂಡ ಮೇಲೆ ಯೋಚನೆಯ ವಿನ್ಯಾಸವೇ ಬದಲಾಗಿತ್ತು. ಬದಲಾದ ಈ ವಿನ್ಯಾಸದ ಕುರಿತಾಗಿತ್ತು ಅವರ ಈಗಿನ ಯೋಚನೆ.
ಯೋಚನೆಯ ಕುರಿತಾದ ಯೋಚನೆ.
ಬದಲಾದ ಯೋಚನೆಯಲ್ಲಿ ಮನುಷ್ಯನನ್ನು ನೋಡುವ ನೋಟವೇ ಬದಲಾಗಿತ್ತು. ಬದಲಾಗಬಾರದಂತೆ ಬದಲಾಗಿತ್ತಲ್ಲ ಎಂದು ಅವರನ್ನದು ಯೋಚನೆಗೀಡುಮಾಡಿತ್ತು.
ಹಿಂದೆ ಒಬ್ಬ ಪರಿಚಿತ ಸಿಕ್ಕಾಗ ಪರಿಚಯದ ಹಿನ್ನೆಲೆಯಲ್ಲಿ ಯಾವುದೇ ಅಪೇಕ್ಷೆಯಿಲ್ಲದ ಸಹಜವಾದ ಉಭಯಕುಶಲೋಪರಿ ಮಾತುಕತೆ ಸಾಗುತ್ತಿತ್ತು. ಪರಿಚಯವಿಲ್ಲದವರು ಸಿಕ್ಕರೂ ಪರಿಚಯ ಮಾಡಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ಅಪೇಕ್ಷೆಯಿಲ್ಲದೆ ಸಹಜವಾದ ಮಾತುಕತೆ ನಡೆಯುತ್ತಿತ್ತು.
ಈಗ ಹಾಗಲ್ಲ; ಎದುರಿಗೆ ಯಾರೇ ಸಿಕ್ಕರೂ ಅವರು ದಾನಿಗಳಿರಬಹುದೇ, ನಮ್ಮ ಸಂಸ್ಥೆಗೆಷ್ಟು ಕೊಟ್ಟಾರು, ದಾನದ ಸಾಮರ್ಥ್ಯವೆಷ್ಟಿದ್ದೀತು… ಇತ್ಯಾದಿ ಲೆಕ್ಕಾಚಾರಗಳೇ ಸುಳಿದುಬಿಡುತ್ತವೆ.
ಮನುಷ್ಯನನ್ನು ಆತನಲ್ಲಿರುವ ಸಂಪತ್ತಿನ ಸಾಮರ್ಥ್ಯದಲ್ಲಿ, ದಾನದ ಬುದ್ಧಿಯಲ್ಲಿ ನೋಡುವ ನೋಟವೇ ಕಲುಷಿತವಾದುದು ಎಂಬ ನಿರ್ಣಯಕ್ಕೆ ಈಗಿನ ಅವರ ಯೋಚನೆ ಸಾಗಿದಂತಿತ್ತು.
ಇಂತಹÀ ಅವಲೋಕನದ ಯೋಚನೆಗೆ ನೋಟವನ್ನೇ ಬದಲಿಸಿಬಿಡಬಲ್ಲ ಸಾಮರ್ಥ್ಯವಿದೆ. ಪ್ರತಿಯೊಬ್ಬನಲ್ಲಿಯೂ ದಾನಿಯನ್ನು ನೋಡಬೇಕಿಲ್ಲ ಸರಿ, ದಾನವನ್ನು ಪ್ರಚೋದಿಸುವುದು ತಪ್ಪಲ್ಲ. ಹಣ ಕೀಳುವುದು ತಪ್ಪು. ದಾನ ಕೇಳುವುದು ಸರಿ.
ಯಾವುದರಲ್ಲಿ ತೊಡಗಿರುವೆವೋ ಅದರ ನೆಲೆಯಲ್ಲೇ ಪ್ರಪಂಚವನ್ನು ನೋಡುವುದು ಮನಸ್ಸಿಗೆ ಸಹಜ. ಮನೆಕಟ್ಟಲು ಪ್ರಾರಂಭಿಸಿದವನೊಬ್ಬ ಯಾವುದೇ ಮನೆಯನ್ನು ನೋಡುವ ನೋಟವು ಉಳಿದವರಿಗಿಂತ ಭಿನ್ನವಾಗಿರುತ್ತದೆ. ತನ್ನ ಮನೆಯಲ್ಲಿ ಯಾವುದನ್ನು ಅಳವಡಿಸಿಕೊಳ್ಳಬಹುದು, ಯಾವುದನ್ನು ಬಿಡಬಹುದು ಇತ್ಯಾದಿ ವಿವರಗಳಲ್ಲಿ ಸ್ಪಷ್ಟತೆಯನ್ನು ಮೂಡಿಸಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ಮನೆಯ ಕುರಿತ ಆತನ ನೋಟ ಸಾಗಿರುತ್ತದೆ.
ಹೊಟ್ಟೆಯಲ್ಲಿ ಮಗುವನ್ನು ಹೊತ್ತವಳೊಬ್ಬಳು ಶಿಶುವನ್ನು, ಅದರಮ್ಮನನ್ನು ನೋಡುವ ನೋಟವು ತಾನು ಕಲಿತುಕೊಳ್ಳಬೇಕಾದ ಸಂಗತಿಗಳ ಕುರಿತಾಗಿ ಸಾಗಿರುತ್ತದೆ.
ಒಬ್ಬ ಉತ್ತಮ ಶಿಕ್ಷಕನಿಗೆ ಚೆನ್ನಾಗಿ ಓದುತ್ತಿರುವ ತನ್ನದಲ್ಲದ ವಿದ್ಯಾರ್ಥಿಯನ್ನು ಕಂಡಾಗಲೂ ಭೇಷ್ ಎನಿಸುತ್ತದೆ. ಓದಿನಲ್ಲಿ ಹಿಂದೆ ಬಿದ್ದ ಯಾವುದೇ ವಿದ್ಯಾರ್ಥಿಯನ್ನು ನೋಡಿದಾಗ ಹೇಗಾದರೂ ಮಾಡಿ ಆತನನ್ನು ಮೇಲಕ್ಕೆತ್ತಬೇಕು ಎಂದನಿಸುತ್ತದೆ. ಶಿಕ್ಷಕನಲ್ಲಿ ಉಂಟಾಗುವ ಬದ್ಧತೆಯದು.
ನೋಟಕ್ಕೆ ಸಿಕ್ಕ ಯಾವುದೇ ಮನೆಗಿಂತ ತನ್ನದೇ ಚೆನ್ನಾಗಿದೆ ಅಂತಾಗಲಿ; ಯಾವುದೇ ಶಿಶುವಿಗಿಂತ ತನ್ನದು ವಿಶೇಷವಿದೆ ಎಂದಾಗಲಿ; ಯಾವುದೇ ವಿದ್ಯಾರ್ಥಿ ಹೇಗಿದ್ದರೇನು, ತನ್ನ ಕರ್ತವ್ಯ ಪೂರೈಸಿದರಾಯಿತು ಎಂದಾಗಲಿ… ಇಂತಹ ನಿರ್ಣಯಗಳನ್ನು ತಾಳುವ ಮನಸ್ಸು ತನಗೊದಗಿದ ಕಾರ್ಯದ ಬಗ್ಗೆ ಬದ್ಧತೆಯಿಂದ ಕೂಡಿಲ್ಲವೆಂದೇ ಅರ್ಥ.
ತಾನು ತೊಡಗಿದ ಕಾರ್ಯದ ನೆಲೆಯಲ್ಲಿ ಪ್ರಪಂಚವನ್ನು ನೋಡುತ್ತಲೇ ನೋಟವನ್ನು ಕೀಳಾಗಿಸದೆ ಎತ್ತರಿಸಿಕೊಂಡರೆ ಉದಾತ್ತೀಕರಿಸಿಕೊಂಡರೆ ಬದ್ಧತೆ ಸಿದ್ಧಿಸೀತು.
***






