ವಿಸ್ಮೃತಿ!

ಆ ದಿನಗಳಲ್ಲಿ ತಾನು ತೀವ್ರ ಮಾನಸಿಕ ಯಾತನೆ ಅನುಭವಿಸಿದ್ದೆ. ಅಪ್ಪನೆನ್ನುವ ಪ್ರಾಣಿ ನಾನು ಹುಟ್ಟಿದ ಕೂಡಲೇ ನಮ್ಮನ್ನು ಬಿಟ್ಟು ಓಡಿಹೋಗಿದ್ದನಂತೆ! ಹಾಗೊಂದು ಕತೆ ಹುಟ್ಟಿಕೊಂಡಿತ್ತು. ಅಮ್ಮ ಮಾತ್ರ ಈ ಬಗ್ಗೆ ತುಟಿ ಪಿಟಕ್ ಎನ್ನುತ್ತಿರಲಿಲ್ಲ. ಮೊದಲು ಅಪ್ಪ ಇಲ್ಲ ಎನ್ನುವ ಕೊರತೆ, ಸಂಕಟ ಕಾಡುತ್ತಿತ್ತು. ಆಮೇಲೆ ‘ಇಂಥ ಅಮ್ಮನನ್ನು ಬಿಟ್ಟು ಅಪ್ಪ ಏಕೆ ಓಡಿಹೋದ?’ ಎಂಬ ಜಿಜ್ಞಾಸೆ ಕಾಡುತ್ತಿತ್ತು.

ಅಲೋಕ್ ಹೋಟೆಲ್ ರೂಮಿನ ಕಿಟಕಿಯ ಬಳಿ ನಿಂತು ಹೊರಗೆ ನೋಡುತ್ತಿದ್ದ. ದೂರದಲ್ಲಿ ಮಣಿಕರ್ಣಿಕಾ ಘಾಟ್‌ನಲ್ಲಿ ಎಂದಿನಂತೆ ಆ ಮಧ್ಯರಾತ್ರಿಯಲ್ಲೂ ಹೊಗೆಯುಗುಳುತ್ತ ಬೆಂಕಿಯ ಜ್ವಾಲೆಗಳೊಂದಿಗೆ ಶವವೊಂದು ಸುಡುತ್ತಿತ್ತು. ವಿಪರೀತ ಚಳಿಗೆ ಕವಿದ ಮಂಜಿನ ಜೊತೆ ಈ ಹೊಗೆ ಸೇರಿ ಒಂದು ದಟ್ಟ ಪದರ ನಿರ್ಮಾಣವಾಗಿ ಗಂಗಾನದಿ ತಾನೂ ನಿದ್ದೆಗೆ ಜಾರಿದಂತಿದೆ ಎನಿಸಿತು. ಮಧ್ಯಾಹ್ನ ಕಾಶಿಗೆ ಬಂದ ನಂತರ ಕಾಲಭೈರವನ ದರ್ಶನ ಮಾಡಿ ಆಗಿತ್ತು. ಅನಂತರ ಕಾಶಿಯ ಬೀದಿಗಳಲ್ಲಿ ಒಂದಿಷ್ಟು ಓಡಾಡಿದ್ದಾಗಿತ್ತು. ಎಲ್ಲೆಲ್ಲೂ ಜನ, ಭಕ್ತರು, ಭಿಕ್ಷುಕರು, ಸಾಧುಸಂತರು, ಜ್ಯೋತಿಷಿಗಳು, ವಿಶ್ವನಾಥನ ದರ್ಶನಕ್ಕೆ ಟಿಕೆಟ್ ಬುಕ್ ಮಾಡಿಸುವವರು, ಗಂಗಾರತಿಗೆ ದೋಣಿ ಕೊಡಿಸುವವರು. ಈ ಜನಸಾಗರದ ಮಧ್ಯೆಯೇ ದಾರಿ ಮಾಡಿಕೊಂಡು ನುಗ್ಗಿ ಹೋಗುವ ಸೈಕಲ್ ರಿಕ್ಷಾದವರು, ಅಲೋಕನಿಗೆ ಈ ಗಜಿಬಿಜಿ ನೋಡಿ ತಲೆಕೆಟ್ಟುಹೋಗಿತ್ತು. ಅಮ್ಮನನ್ನು ಈ ಜನಸಾಗರದ ಮಧ್ಯೆ ನಡೆಸುವುದೇ ಕಷ್ಟವಾಗಿತ್ತು. ಶ್ರಾವಣಿಯೇ ಅವಳ ಕೈ ಹಿಡಿದು ಓಡಾಡಿಸಿದ್ದಳು. ಭಗೀರಥಮ್ಮ ಯಾರನ್ನೋ ಹುಡುಕುವವಳಂತೆ ಶ್ರಾವಣಿಯನ್ನೂ ಎಳೆದುಕೊಂಡು ಎತ್ತೆತ್ತಲೋ ಹೋಗುತ್ತಿದ್ದಳು. ಅವಳೆಲ್ಲಿ ಕಳೆದುಹೋಗುತ್ತಾಳೋ ಎಂಬ ಭಯದಲ್ಲೇ ಬೇಗ ಹೋಟೆಲ್ ರೂಮ್ ಸೇರಿದ್ದರು. ಸಂಜೆ ಒಂದು ಪ್ರತ್ಯೇಕ ಲಾಂಜ್ ಮಾಡಿ ಅಮ್ಮ, ಮಗಳೊಂದಿಗೆ ಗಂಗಾ ಆರತಿ ನೋಡಿ ಊಟ ಮುಗಿಸಿ ಲಾಡ್ಜ್ಗೆ ವಾಪಸ್ ಆಗಿದ್ದ ಅಲೋಕ್. ಶ್ರಾವಣಿ ಬೆಳಗಿನ ಜಾವ ಮೂರು ಗಂಟೆಯ ಪೂಜೆಗೆ ಟಿಕೆಟ್ ಬುಕ್ ಮಾಡಿಸಿದ್ದಳು. ವಿಶ್ವನಾಥನ ದೇವಾಲಯ ತಲಪಬೇಕೆಂದರೆ ಸ್ನಾನ ಮುಗಿಸಿ ಎರಡೂವರೆಗಾದರೂ ಹೋಟೆಲ್‌ನಿಂದ ಹೊರಡಬೇಕಿತ್ತು. ಅಲೋಕ ಕಿಟಿಕಿಯಿಂದ ಕಾಟ್ ಕಡೆ ಸರಿದು ಗಡಿಯಾರದ ಕಡೆ ನೋಡಿದ. ಅದಿನ್ನೂ ೧೨.೩೦ ತೋರಿಸುತ್ತಿತ್ತು. ನಿಟ್ಟುಸಿರಿಟ್ಟು ಹಾಗೆಯೇ ಹಾಸಿಗೆ ಮೇಲೆ ಉರುಳಿದ.

ವಾಸ್ತವವಾಗಿ ಅಲೋಕನಿಗೆ ಈ ಕಾಶಿ, ಪೂಜೆ, ಆರತಿ ಯಾವುದೂ ಬೇಕಿರಲಿಲ್ಲ. ಈ ದೇವರನ್ನು ಕೈಬಿಟ್ಟು ಯಾವುದೋ ಕಾಲವಾಗಿತ್ತು. ಅಲೋಕ ನಾಗರಿಕನಾದಂತೆಲ್ಲ ಅವನ ಪಾಲಿಗೆ ಈ ದೇವರು ಎನ್ನುವುದೊಂದು ಮೂಢನಂಬಿಕೆ ಎನ್ನುವಂತಾಗಿತ್ತು. ಆ ದೇವರಿರಲಿ, ಹೆತ್ತ ದೇವರನ್ನೇ ಅವನು ಗೋರೆಗಾಂವ್‌ನ ವೃದ್ಧಾಶ್ರಮಕ್ಕೆ ಸೇರಿಸಿಬಿಟ್ಟಿದ್ದ. ಭಾಗೀರಥಮ್ಮ ಅಲೋಕನ ಜೊತೆಯಲ್ಲೇ ಮುಂಬೈನಲ್ಲಿದ್ದಳು. ಇವನಿಗಿಂತ ನಾಗರಿಕಳು ಎನಿಸಿದ್ದ ಇಶಾನಿಗೆ ಈ ಅತ್ತೆ ಎನ್ನುವುದೊಂದು ಮನೆಯಲ್ಲಿ ಸಾಕಿದ ಪ್ರಾಣಿಗಿಂತ ಕಡೆಯಾಗಿದ್ದರು. ಹಳ್ಳಿಯಲ್ಲಿ ಮಾಡಿದಂತೆ ಮೈಮುರಿದು ಮಾಡುವ ಕೆಲಸ ಇರಲಿಲ್ಲ, ಯಂತ್ರ-ತಂತ್ರಗಳ ಸೂಕ್ಷ್ಮ ವಿಷಯಗಳು ಭಾಗೀರಥಮ್ಮನಿಗೆ ಗೊತ್ತಾಗುತ್ತಿರಲಿಲ್ಲ. ಹೀಗಾಗಿ ಭಾಗೀರಥಮ್ಮ ಕೆಲಸಕ್ಕೆ ಬಾರದ ದಡ್ಡಿ ಆಗಿ ಸೊಸೆಯ ಪಾಲಿಗೆ ಹೊರೆ, ಅನಾಗರಿಕ ಹಳ್ಳಿ ಗುಗ್ಗು ಆಗಿಹೋಗಿದ್ದರು. ಈ ಹಳ್ಳಿ ಗುಗ್ಗುವಿನಿಂದ ಪಾಪ ಇಶಾನಿಯ ಘನತೆ, ಗೌರವಗಳಿಗೂ ಕುಂದುಂಟಾಗುತ್ತಿತ್ತು. ಮನೆಗೆ ಯಾರಾದರೂ ಬಂದಾಗ, ಪಾರ್ಟಿ ಮಾಡಬೇಕಾದಾಗ ಭಾಗೀರಥಮ್ಮ ದೊಡ್ಡ ಪೀಡೆ ಎನ್ನುವಂತಾಗಿತ್ತು. ಅಂತೂ-ಇಂತೂ ಗಂಡ-ಹೆಂಡತಿ ಸೇರಿ ಭಾಗೀರಥಮ್ಮನವರನ್ನು ಗೋರೆಗಾಂವ್‌ನ ಒಂದು ವೃದ್ಧಾಶ್ರಮಕ್ಕೆ ಸೇರಿಸಿದ್ದರು.

ಜರ್ಮನಿಯಲ್ಲಿ ಎಂ.ಎಸ್. ಮಾಡುತ್ತಿದ್ದ ಶ್ರಾವಣಿ ಮುಂಬೈಗೆ ಬಂದಾಗ ಅಜ್ಜಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿರುವುದು ಕೇಳಿ ಅವಳಿಗೆ ತೀವ್ರ ಆಘಾತವಾಗಿತ್ತು. ಅಪ್ಪ- ಅಮ್ಮನೊಂದಿಗೆ ಜಗಳಕ್ಕೇ ಬಿದ್ದಿದ್ದಳು. ಅವರಿಬ್ಬರ ಬಗ್ಗೆ ಇದ್ದ ಗೌರವವೇ ಹೊರಟುಹೋಗಿತ್ತು. ಶ್ರಾವಣಿ ಸೀದಾ ಹೋಗಿ ಗೋರೆಗಾಂವ್‌ನಿಂದ ಅಜ್ಜಿಯನ್ನು ವಾಪಸ್ ಕರೆತಂದಿದ್ದಳು. ಮನೆಯಲ್ಲಿ ಒಬ್ಬರಿಗೊಬ್ಬರಿಗೆ ಮಾತುಕತೆಯೇ ಇಲ್ಲದೆ ಒಬ್ಬರ ಮುಖ ಒಬ್ಬರು ನೋಡಲಾಗದೆ ಅಸಹನೀಯ ಮೌನದಲ್ಲೇ ಒಂದು ವಾರ ಕಾಲ ಹಾಕಿದ್ದರು. ಕೆಲವೊಮ್ಮೆ ಎದುರಿಗಿದ್ದವರು ಗಿಲ್ಟಿಯಾಗಿ ಮೆತ್ತಗಿದ್ದಾಗಲೇ ನಿಷ್ಠುರ ಸತ್ಯಗಳನ್ನು ಹೇಳಿಬಿಡಬೇಕು. ಶ್ರಾವಣಿಗೂ ಈ ನಿಷ್ಠುರ ಹೊತ್ತಿನಲ್ಲೇ ಮನಸ್ಸಿನಲ್ಲಿರುವ ನಿಜ ಹೇಳಬೇಕು ಅನಿಸಿಬಿಟ್ಟಿತು. ಒಂದು ರಾತ್ರಿ ಶ್ರಾವಣಿ ತಾನೊಬ್ಬ ಬೇರೆ ಜಾತಿಯ ಹುಡುಗನನ್ನು ಪ್ರೀತಿಸುತ್ತಿರುವುದಾಗಿಯೂ ಅವನನ್ನೇ ಮದುವೆ ಆಗುವುದಾಗಿಯೂ ನೇರವಾಗಿ ಅಪ್ಪ, ಅಮ್ಮನ ಮುಂದೆ ಹೇಳಿಬಿಟ್ಟಳು. ಈಗ ಆಘಾತವಾಗುವ ಸರದಿ ಅಲೋಕ ಮತ್ತು ಇಶಾನಿಯದಾಗಿತ್ತು. ಇಬ್ಬರೂ ಮಗಳ ಮೇಲೆ ತಿರುಗಿಬಿದ್ದರು. ‘ನಮ್ಮ ರೆಪ್ಯುಟೇಶನ್ ಏನು, ಅವನ ಯೋಗ್ಯತೆ ಏನು? ಯಾವುದೇ ಕಾರಣಕ್ಕೆ ಈ ಮದುವೆಗೆ ನಾವು ಒಪ್ಪೋದಿಲ್ಲ’ ಎಂದು ಕಡ್ಡಿ ತುಂಡಾದಂತೆ ಹೇಳಿಬಿಟ್ಟ ಅಲೋಕ. ಇಶಾನಿಯೂ ತೀವ್ರ ಪ್ರತಿರೋಧ ವ್ಯಕ್ತಪಡಿಸಿದಳು. “ನಿನ್ನನ್ನು ಜರ್ಮನಿಗೆ ಕಳಿಸಿದ್ದು ಓದೋಕೆ. ಲವ್ ಮಾಡೋಕಲ್ಲ, ಇದ್ನೆಲ್ಲ ಮರೆತು ಸುಮ್ನೆ ನಾವು ತೋರಿಸಿದ ಹುಡುಗನನ್ನು ಮದುವೆ ಆಗು. ಇಲ್ಲ ಅಂದ್ರೆ ನಾವು ತಲೆಎತ್ತೋಕಾಗಲ್ಲ, ನಮ್ ಮರ್ಯಾದೆ ಹಾಳಾಗಿಹೋಗುತ್ತೆ” ಎಂದು ಇಶಾನಿ ಮಗಳಿಗೆ ವಾರ್ನ್ ಮಾಡಿದಳು. ಮೂವರ ಮಧ್ಯೆ ಏರುದನಿಯ ಮಾತುಕತೆಗಳಾದವು. ಆಗ ಭಗೀರಥಮ್ಮನವರು “ಹೋಗ್ಲಿ ಬಿಡು ಮಗ, ಅವಳಿಗೆ ಇಷ್ಟ ಬಂದವನನ್ನೇ ಲಗ್ನ ಆಗಲಿ” ಎಂದು ಒಂದು ಮಾತು ಅಂದುಬಿಟ್ಟರು. ಅಷ್ಟೇ, ಗಂಡ- ಹೆಂಡತಿ ಇಬ್ಬರೂ ತಮ್ಮ ಆಕ್ರೋಶವನ್ನೆಲ್ಲ ಭಾಗೀರಥಮ್ಮನವರ ಮೇಲೆ ತೀರಿಸಿಬಿಟ್ಟರು.

“ಅತ್ತೆ, ನೀವ್ಯಾಕೆ ನಮ್ ವ್ಯವಹಾರದಲ್ಲಿ ತಲೆ ಹಾಕ್ತೀರಿ? ಇದಕ್ಕೇ ನಿಮ್ಮನ್ನ ಓಲ್ಡೇಜ್ ಹೋಂಗೆ ಸರ‍್ಸಿದ್ದು. ಇಲ್ ಬಂದ್ಮೇಲೆ ತೆಪ್ಪಗೆ ಹಾಕಿದ್ದು ತಿಂದ್ಕೊಂಡು ಒಂದು ಮೂಲೇಲಿ ಬಿದ್ದರ‍್ಬೇಕು ತಾನೆ?”

ಅಜ್ಜಿಗೆ ಬೈದಿದ್ದನ್ನು ನೋಡಿ ಶ್ರಾವಣಿ ಪೂರಾ ಅಪ್ಸೆಟ್ಟಾಗಿಬಿಟ್ಟಳು: “ನೀವೆಲ್ಲ ಕಲ್ಚರ್ಡ್ ಜನನಾ? ಶಿಟ್, ಅಜ್ಜಿನ ಈ ರೀತಿ ಹುಮಿಲಿಯೇಟ್ ಮಾಡ್ತೀರಲ್ಲ, ಆರ್ ನಾಟ್ ಯೂ ಆಶ್ಶೇಮ್ಡ್?” ಎಂದು ಅಜ್ಜಿಯನ್ನು ಸಮಾಧಾನ ಮಾಡಲು ಹೊರಟಳು. ಥಟ್ಟನೆ ಕೆರಳಿ ಕೆಂಡವಾದ ಇಶಾನಿ ಅವಳ ಕೈ ಹಿಡಿದು ನಿಲ್ಲಿಸಿ “ಏಯ್ ನಿಂತ್ಕೊಳೇ, ಏನ್ ಸೀಮೆಗಿಲ್ದೆರೋ ಅಜ್ಜಿನೇನೇ?” ಎಂದು ಗಂಡನ ಕಡೆ ನೋಡಿ “ಅಲೋಕ್, ಏನ್ ನೋಡ್ತಿದೀಯ.. ಮೊದ್ಲು ಈ ಮದುಕೀನ ರ‍್ಕೊಂಡ್ ಹೋಗಿ ರೂಮೊಳಗೆ ಕೂಡ್ ಹಾಕು” ಎಂದು ಆರ್ಡರ್ ಮಾಡಿದಳು. ಅಲೋಕ “ಛೇ! ನಡಿಯಮ್ಮ ನೀನು. ನಿನಗ್ಯಾಕ್ ಈ ಉಸಾಬರಿ ಎಲ್ಲಾ” ಎಂದು ಸ್ವಲ್ಪ ಒರಟಾಗಿಯೇ ಅಮ್ಮನನ್ನು ರೂಮಿನ ಕಡೆ ನೂಕಿಕೊಂಡು ಹೋಗಿ ಒಳಗೆ ತಳ್ಳಿದ. ತಳ್ಳಿದ ರಭಸಕ್ಕೆ ಭಾಗೀರಥಮ್ಮನವರು ಮಕಾಡೆ ಬಿದ್ದು ಅವರ ತಲೆ ಕಾಟಿನ ಕಾಲಿಗೆ ಬಡಿಯಿತು. ಭಾಗೀರಥಮ್ಮ “ಅಮ್ಮಾ…” ಎಂದು ಕೂಗುತ್ತ ಕುಸಿದು ಪ್ರಜ್ಞಾಹೀನರಾದರು. ಕ್ಷಣಮಾತ್ರದಲ್ಲಿ ದೊಡ್ಡ ಅನಾಹುತವೇ ನಡೆದುಹೋಗಿತ್ತು.

ಭಾಗೀರಥಮ್ಮನವರ ತಲೆಗೆ ಅಷ್ಟೇನೂ ದೊಡ್ಡ ಪೆಟ್ಟಾಗಿರಲಿಲ್ಲ. ಆದರೆ ಈ ಆಘಾತದಿಂದ ಅವರ ನೆನಪಿನ ಶಕ್ತಿಯೇ ಹೊರಟುಹೋಗಿತ್ತು. ಎಂ.ಆರ್.ಐ. ಸಿಟಿ ಸ್ಕ್ಯಾನ್ ಎಲ್ಲ ಆಗಿತ್ತು. ಗಂಭೀರ ಸಮಸ್ಯೆ ಏನೂ ಇಲ್ಲದಿದ್ದರೂ ಕಾಲಕ್ರಮೇಣ ನೆನಪು ಬರಬಹುದು ಅಥವಾ ವಯಸ್ಸಾಗಿರುವುದರಿಂದ ಮತ್ತೆ ಬಾರದೆಯೂ ಇರಬಹುದು ಎಂದು ಹೇಳಿಬಿಟ್ಟಿದ್ದರು ಡಾಕ್ಟರ್‌ಗಳು! ತನ್ನ ಈ ಅಚಾತುರ್ಯದ, ಅವಿವೇಕದ ಕೆಲಸ ಇಂತದ್ದೊಂದು ಪ್ರಮಾದಕ್ಕೆ ಎಡೆಮಾಡಿಕೊಟ್ಟಿತಲ್ಲ ಎಂದು ಅಲೋಕ ವಿಲವಿಲ ಒದ್ದಾಡಿದ. ಇಶಾನಿಯಂತೂ ಅನ್ನಲಾಗದೆ, ಅನುಭವಿಸಲಾಗದೆ ಒಳಗೊಳಗೇ ಕುದಿಯುತ್ತಿದ್ದಳು. ಮನೆಯಲ್ಲಿ ಇಟ್ಟುಕೊಂಡು ಉಪಚರಿಸಲು ಮನಸ್ಸಿಲ್ಲ, ಆದರೆ ವಾಪಸ್ ಈ ಸ್ಥಿತಿಯಲ್ಲಿ ಓಲ್ಡೇಜ್ ಹೋಂಗೆ ಕಳಿಸುವಂತಿಲ್ಲ. ಹಾಗೆ ಮಾಡಲು ಶ್ರಾವಣಿ ಬಿಡುತ್ತಲೂ ಇರಲಿಲ್ಲ. ಅಪ್ಪ, ಅಮ್ಮನನ್ನು ಶತ್ರುಗಳು ಎಂಬಂತೆ ನೋಡಲಾರಂಭಿಸಿದ್ದ ಶ್ರಾವಣಿಯನ್ನು ಮಾತಾಡಿಸುವುದಿರಲಿ, ಅವಳತ್ತ ಕಣ್ಣೆತ್ತಿ ನೋಡಲೂ ಇಬ್ಬರಿಗೂ ಧೈರ್ಯವಿರಲಿಲ್ಲ. ಮಗುವಂತಾಗಿದ್ದ ಅಜ್ಜಿಯ ಸೇವೆಯನ್ನು ಶ್ರಾವಣಿಯೇ ಮಾಡಲಾರಂಭಿಸಿದಳು. ಅವರಿಗೆ ಸ್ನಾನ, ಊಟ, ತಿಂಡಿ ಮಾಡಿಸುವುದು, ಅವರನ್ನು ವಾಕ್ ಕರೆದೊಯ್ಯುವುದು, ಹೊತ್ತು ಹೊತ್ತಿಗೆ ಮೆಡಿಸಿನ್ಸ್ ನೀಡುವುದು ಎಲ್ಲವನ್ನೂ ಶ್ರಾವಣಿಯೇ ಮುತುವರ್ಜಿಯಿಂದ ಮಾಡುತ್ತಿದ್ದಳು. ಸ್ವಲ್ಪ ಏಮಾರಿದರೂ ಭಾಗೀರಥಮ್ಮ ಮನೆಯಿಂದ ಹೊರಗೆ ಹೊರಟುಹೋಗುತ್ತಿದ್ದರು. ಅವರನ್ನು ಕಾಯುವುದೇ ಒಂದು ದೊಡ್ಡ ಸವಾಲಾಗಿತ್ತು.

ಒಂದು ವಾರದ ಹಿಂದೆ ಹೆಚ್ಚುಕಮ್ಮಿ ಮಾತಾಡುವುದನ್ನೇ ನಿಲ್ಲಿಸಿದ್ದ ಭಾಗೀರಥಮ್ಮ ಬೆಳಗ್ಗೆ ಎದ್ದವರೇ ಶ್ರಾವಣಿಗೆ “ನೀನು ಯಾರು?” ಎಂದು ಕೇಳಿದರು. “ನಾನಜ್ಜಿ, ನಿನ್ನ ಮೊಮ್ಮಗಳು ಶ್ರಾವಣಿ” ಎಂದಳು ಶ್ರಾವಣಿ. “ಸುಳ್ ಹೇಳ್ಬೇಡ. ನೀನು ನನ್ನ ಮಗಳು” ಎಂದರು ಭಾಗೀರಥಮ್ಮ. ಶ್ರಾವಣಿ ಅಜ್ಜಿಯನ್ನು ತಬ್ಬಿಕೊಂಡು ಬೋರೆಂದು ಅತ್ತುಬಿಟ್ಟಳು. ಭಾಗೀರಥಮ್ಮನೇ “ಯಾಕೆ ಮಗು ಅಳ್ತಿದೀಯ? ಸಮಾಧಾನ ಮಾಡ್ಕೊ… ನಂಗೊಂದು ಸಹಾಯ ಮಾಡ್ತಿಯಾ?” ಎಂದರು. ಅದೇನು ಕೇಳಿ ಎಂಬಂತೆ ಕಣ್ಣು ಒರೆಸಿಕೊಂಡು ತಲೆಯಾಡಿಸಿದಳು ಶ್ರಾವಣಿ.

“ನನಗೆ ಕಾಶಿಗೆ ಹೋಗ್ಬೇಕು ಅನಿಸ್ತಿದೆ ಕಣೆ, ರ‍್ಕೊಂಡ್ ಹೋಗ್ತೀಯ?” ಎಂದು ಕೇಳಿಬಿಟ್ಟರು. ಶ್ರಾವಣಿಗೆ ಏನು ಹೇಳಬೇಕೆಂದೇ ತೋರಲಿಲ್ಲ, ಅಜ್ಜಿಯ ಕಡೆ ಅಚ್ಚರಿಯಿಂದ ನೋಡಿದಳು. ಅವರ ಕಣ್ಣಲ್ಲಿದ್ದ ಆಸೆಯನ್ನು ನೋಡಿ ಏನನಿಸಿತೋ ಏನೋ? “ಸರಿ, ನಾನು ನಿನ್ನನ್ನ ಕಾಶಿಗೆ ರ‍್ಕೊಂಡ್ ಹೋಗ್ತೀನಿ”ಎಂದು ಭರವಸೆ ಕೊಟ್ಟು ಅಂದೇ ತಯಾರಿ ಶುರುಮಾಡಿಬಿಟ್ಟಳು. ಶ್ರಾವಣಿಯೇನೋ ಹೊರಟುಬಿಟ್ಟಳು, ಆದರೆ ಅವಳೊಬ್ಬಳನ್ನೇ ಅಷ್ಟು ದೂರ ಕಳಿಸುವುದು ಹೇಗೆ? ಅದೂ ಅಮ್ಮನ ಜವಾಬ್ದಾರಿ ಕೊಟ್ಟು ಒಬ್ಬಳನ್ನೇ ಹೇಗೆ ಕಳಿಸುವುದು? ನೋಡಿದವರು ತಾನೆ ಏನೆಂದಾರು? ಮಗನಾಗಿ ತಾನಿದ್ದು ಮರೆವಿನ ಕಾಯಿಲೆಯಿಂದ ಬಳಲುತ್ತಿರುವ ಅಮ್ಮನನ್ನು ಮಗಳ ಜೊತೆ ಕಾಶಿಗೆ ಕಳಿಸುವುದು ಹೇಗೆ? ಎಂದೆಲ್ಲ ಗೊಂದಲಕ್ಕೆ ಬಿದ್ದ ಅಲೋಕ. ಇಶಾನಿಯೇ ಅವನಿಗೊಂದು ದಾರಿ ತೋರಿಸಿದಳು: “ಇದು ನಿಮ್ಮಮ್ಮನ ಕೊನೆ ಆಸೆ ಇರಬಹುದು. ವಾಪಸ್ ರ‍್ತಾರೋ ಇಲ್ವೋ? ನೀನು ಶ್ರಾವಣಿ ಜೊತೇಲಿ ಹೋಗು. ನಾನಾದ್ರೂ ಇಲ್ಲಿ ನಾಲ್ಕು ದಿನ ನೆಮ್ಮದಿಯಾಗರ‍್ತೀನಿ” ಎಂದು ಮೂವರನ್ನೂ ಕಳಿಸಿ ಕೈ ತೊಳೆದುಕೊಂಡಿದ್ದಳು. ಇದೊಂದು ಅನಿವಾರ್ಯ ಕರ್ಮ ಎನ್ನುವಂತೆ ಅಲೋಕ ಅಮ್ಮ, ಮಗಳ ಜೊತೆ ಕಾಶಿಗೆ ಬಂದಿದ್ದ.

* * *

ರಾತ್ರಿ 2.30ರ ವೇಳೆಗೇ ವಿಶ್ವನಾಥನ ಬೆಳಗಿನ ಜಾವದ ಪೂಜೆಗೆ ಜನಜಂಗುಳಿ ನೆರೆದಿತ್ತು. ಮೂವರಿಗೂ ಕಾಶಿ ವಿಶ್ವನಾಥನ ದರ್ಶನವಾಯಿತು. ಶ್ರಾವಣಿ ಪಾತಾಳಂಕಣದಲ್ಲಿದ್ದ ವಿಶ್ವನಾಥನನ್ನು ಅಜ್ಜಿಯ ಕೈಲಿ ಮುಟ್ಟಿಸಿ ಸಂಭ್ರಮಪಟ್ಟಳು. ಧನ್ಯತೆಯ ಭಾವದಿಂದ ಈಚೆ ಬಂದರು. ತಿರುಗಿ ನೋಡಿದರೆ ಪಕ್ಕದಲ್ಲಿ ಭಾಗೀರಥಮ್ಮ ಇಲ್ಲ. ಶ್ರಾವಣಿ ಗಾಬರಿಯಾದಳು. “ಅಜ್ಜಿ… ಅಜ್ಜಿ” ಎಂದು ಕೂಗುತ್ತ ಸಾಲುಗಟ್ಟಿ ನಿಂತ ಜನಗಳ ಮಧ್ಯೆ ಭಾಗೀರಥಮ್ಮನವರನ್ನು ಹುಚ್ಚಳಂತೆ ಹುಡುಕುತ್ತ ಹೋದಳು. ಉಹುಂ! ಎಲ್ಲೂ ಅವರ ಸುಳಿವೇ ಇಲ್ಲ. ಭಕ್ತಿಭಾವದ ಪರಾಕಾಷ್ಠೆಯಲ್ಲಿ ‘ಜೈ ಮಹಾದೇವ್’ ಎಂದು ಭಾವೋನ್ಮಾದದಲ್ಲಿ ಕೂಗುತ್ತಿದ್ದ ಭಕ್ತರ ನೆರಳು ಬೆಳಕಿನ ಅಸ್ಪಷ್ಟ ಚಿತ್ರಗಳ ಮಧ್ಯೆ ಭಾಗೀರಥಮ್ಮನವರ ಮುಖ ಹುಡುಕುತ್ತ ಅಳುತ್ತಲೇ ಜನಜಂಗಳಿಯಲ್ಲಿ ತಳ್ಳಾಡಿಕೊಂಡು ಈಚೆ ಬಂದಳು ಶ್ರಾವಣಿ.

ನಿಧಾನಕ್ಕೆ ಕತ್ತಲು ಕರಗಿ ಬೆಳಕು ಮೂಡುತ್ತಿತ್ತು. ಮುಂದೇನು ಮಾಡುವುದೆಂದು ದಿಕ್ಕೇ ತೋಚದೆ ಸುತ್ತ ನೋಡುತ್ತ ನಿಂತರು. ಇದ್ದಕ್ಕಿದ್ದಂತೆ ಶ್ರಾವಣಿಗೆ ಏನೋ ಯೋಚನೆ ಬಂದು ಬಿರಬಿರನೆ ಹೆಜ್ಜೆ ಹಾಕುತ್ತ ಕಾರಿಡಾರ್ ಉದ್ದಕ್ಕೂ ಓಡಿದಳು. ಏನೂ ಅರ್ಥವಾಗದೆ ಅಲೋಕ ಅವಳ ಹಿಂದೆ ಓಡಿದ. ಶ್ರಾವಣಿ ನಂದಿಯಂಚಿಗೆ ಬಂದವಳೇ ದಡದಡನೆ ಮೆಟ್ಟಿಲು ಇಳಿದು ಅಲ್ಲಿದ್ದ ದೋಣಿಯವರನ್ನೆಲ್ಲ ಅಜ್ಜಿಯ ಫೋಟೋ ತೋರಿಸಿ ವಿಚಾರಿಸಿದಳು. ‘ಹಮ್ನೇ ಉಸೇ ನಹೀ ದೇಖಾ ಹೈ’ ಎಂದುಬಿಟ್ಟರು. ಶ್ರಾವಣಿ ಅಸಹಾಯಕಳಾಗಿ ಚುಮುಗುಟ್ಟುತ್ತಿದ್ದ ಚಳಿಯಲ್ಲಿ ಮಂಜಿನ ಹೊದಿಕೆ ಹೊದ್ದು ಮಲಗಿದ್ದ ಗಂಗಾನದಿಯುದ್ದಕ್ಕೂ ದೃಷ್ಟಿ ಹಾಯಿಸಿದಳು. ‘ಅಜ್ಜೀ’ ಎಂದು ಗಟ್ಟಿಯಾಗಿ ಕೂಗುತ್ತ ರೋದಿಸಿದಳು. ಇನ್ನೇನು ವಾಪಸ್ ಮೆಟ್ಟಿಲು ಹತ್ತಬೇಕು ಅನ್ನುವಷ್ಟರಲ್ಲಿ ಅವಳ ದೃಷ್ಟಿ ಸ್ವಲ್ಪದೂರದಲ್ಲಿ ಕುಳಿತ ಬಾಬಾ ಕಡೆಗೆ ಹೋಯಿತು. ಸುಮಾರು ಅಜ್ಜಿಗಿಂತ ಸ್ವಲ್ಪ ದೊಡ್ಡವರು ಎನ್ನಬಹುದಾದ ವಯಸ್ಸು. ಮುಖದ ಚಹರೆಯೇ ಸಿಗದಂತೆ ಆವರಿಸಿದ ಗಡ್ಡ, ಮೀಸೆ. ಕಣ್ಣಿನಲ್ಲೊಂದು ದಿವ್ಯ ತೇಜಸ್ಸು. ಹಣೆಯ ಮೇಲೆ ಗಂಧ, ಮೈತುಂಬಾ ಬಳಿದ ಭಸ್ಮ, ಕೊರಳಲ್ಲಿ ಎರಡು ರುದ್ರಾಕ್ಷಿ ಸರಗಳು, ಯಾರು ನೋಡಿದರೂ ಪೂಜ್ಯಭಾವ ಬರುವಂತಹ ವ್ಯಕ್ತಿತ್ವ. ಭಾಗೀರಥಮ್ಮ ಅವನ ಮುಂದೆ ಕೈಮುಗಿದು ಕುಳಿತುಬಿಟ್ಟಿದ್ದಾರೆ. ಶ್ರಾವಣಿ ಅಮಿತಾನಂದದಲ್ಲಿ ‘ಅಜ್ಜಿ’ ಎಂದು ಕೂಗುತ್ತ ಧಾವಿಸಿ ಬಂದಳು. ಭಾಗೀರಥಮ್ಮನವರು ಕಣ್ತೆರೆದು ನಿರ್ವಿಕಾರವಾಗಿ ಶ್ರಾವಣಿ ಕಡೆ ಯಾರೋ ಎಂಬAತೆ ನೋಡಿದರು. ಶ್ರಾವಣಿ ಅಜ್ಜಿಯನ್ನು ಗಟ್ಟಿಯಾಗಿ ತಬ್ಬಿ ಅತ್ತಳು. ಅಲೋಕ ಮಾತ್ರ “ಅಮ್ಮ, ಎಂತ ಕೆಲಸ ಮಾಡ್ಬಿಟ್ಟೆ ನೀನು? ಹೇಳ್ದೆ ಕೇಳ್ದೆ ಬಂದ್‌ಬಿಟ್ರೆ ನೀನು ಇಲ್ಲಿದೀಯ ಅಂತ ನಮಗೆ ಹೇಗ್ ಗೊತ್ತಾಗ್ಬೇಕು? ನಮಗೆ ಎಷ್ಟು ಗಾಬರಿ ಆಗ್ಬೇಡ? ನಿನಗೋಸ್ಕರ ನಾವು ಎಲ್ಲೆಲ್ಲಿ ಹುಡುಕಿದ್ವಿ ಗೊತ್ತಾ? ಇಲ್ಲೇನ್ ಮಾಡ್ತಿದೀಯ? ನಡಿ ಹೋಗೋಣ” ಎಂದು ಒಂದೇ ಉಸಿರಿಗೆ ಬಡಬಡಿಸಿದ.

“ಡ್ಯಾಡ್ ಕಂಟ್ರೋಲ್ ಯುವರ್‌ಸೆಲ್ಫ್. ಅಜ್ಜಿ ಮೇಲೆ ಈ ತರ ಕೂಗಾಡುದ್ರೆ ಏನ್ ಪ್ರಯೋಜನ? ಅವರಿಗೆ ನಾವ್ಯಾರು ಅಂತಾನೇ ಗೊತ್ತಿಲ್ಲ.”

ಬಾಬಾ ತಲೆಎತ್ತಿ ಶ್ರಾವಣಿ ಕಡೆ ನೋಡುದ್ರು: “ಇವರಿಗೆ ಯಾವ ನೆನಪೂ ಇಲ್ವಾ?”

“ಇಲ್ಲ, ಬಾಬಾ.. ಇವರಿಗೆ ಹಳೆಯ ಯಾವ ನೆನಪೂ ಇಲ್ಲ. 6 ತಿಂಗಳಾಯ್ತು. ತಲೆಗೆ ಒಂದು ಚಿಕ್ಕ ಏಟು ಬಿದ್ದು ಹೀಗಾಗೋಯ್ತು” ಸಿಟ್ಟಿನಿಂದ ಅಪ್ಪನ ಕಡೆ ನೋಡಿದಳು. ಅಲೋಕ ದೃಷ್ಟಿ ತಪ್ಪಿಸಿದ. ಶ್ರಾವಣಿ ಮುಂದುವರಿಸಿದಳು, “ಇನ್ನೂ ಟ್ರೀಟ್‌ಮೆಂಟ್ ಕೊಡುಸ್ತಾನೇ ಇದೀವಿ. ಏನೂ ಪ್ರಯೋಜನ ಆಗ್ತಿಲ್ಲ…”

“ವಾರಣಾಸಿಗೆ ಇವರಿಗೋಸ್ಕರ ಪೂಜೆ ಮಾಡ್ಸಕ್ಕೆ ಬಂದ್ರಾ?”

“ಹಾಂ, ಬಾಬಾ, ಅಜ್ಜಿಗೆ ಏನೋ ಕನಸು ಬಿದ್ದಿತ್ತಂತೆ. ಕಾಶಿಗೆ ರ‍್ಕೊಂಡ್ ಹೋಗಿ ಅಂದ್ರು. ಅದಕ್ಕೇ ರ‍್ಕೊಂಡ್ ಬಂದ್ವಿ. ಹೌದು, ನಿಮಗೆ ಕನ್ನಡ ಬರುತ್ತಾ?”

“ಹಾಂ! ಬೇಟಿ ಬರುತ್ತೆ.”

“ಬಾಬಾ, ನಿಮ್ಮನ್ನ ನೋಡುದ್ರೆ ದೊಡ್ಡ ಸಾಧನೆ ಮಾಡಿರೋ ತರ ಕಾಣ್ತಿದೀರಿ. ನಮ್ಮಜ್ಜಿಗೆ ಹೇಗಾದ್ರೂ ಮಾಡಿ ನೆನಪಿನ ಶಕ್ತಿ ಬರೋ ಹಾಗ್ ಮಾಡಿ” ಅಲೋಕ ಉಡಾಫೆಯಿಂದ ಮುಖ ತಿರುಗಿಸಿಕೊಂಡ.

“ಬೇಟಿ, ಹಳೇ ನೆನಪು ಮರೀಬೇಕು ಅಂತ ಜನ ನನ್ ಹತ್ರ ರ‍್ತಾರೆ. ಆದ್ರೆ ನೀನು ನಿಮ್ಮಜ್ಜಿ ನೆನಪುಗಳನ್ನು ವಾಪಸ್ ಬರೋ ಹಾಗೆ ಮಾಡಿ ಅಂತ ಕೇಳ್ತಿದೀಯ. ಅವರಿಗೆ ನೆನಪಿನ ಹಂಗಿಲ್ಲ ಅನಿಸುತ್ತೆ. ನೆನಪೇ ಬದುಕು, ಅದೇ ಶಕ್ತಿ, ಅದೇ ಎಲ್ಲವನ್ನೂ ವ್ಯವಸ್ಥಿತವಾಗಿ ಜೋಡಿಸುತ್ತೆ. ನಾವು ಜೀವಿಸೋದು ಈ ನೆನಪುಗಳಲ್ಲಿ. ನೆನಪುಗಳಲ್ಲಿ ಕಟ್ಟಿಕೊಂಡ ಸಂಬAಧಗಳಲ್ಲಿ. ನೆನಪು ಹೋದ್ರೆ ಆ ಮನಸ್ಸು ಬಂಧನದಿAದ ಮುಕ್ತ. ಒಬ್ಬರ ನೆನಪನ್ನೇ ನಾಶ ಮಾಡ್ತೀವಿ ಅಂದ್ರೆ ಅವರನ್ನು ಕೊಂದ ಹಾಗೆ.”

ಬಾಬಾ ಮಾತು ನಿಲ್ಲಿಸಿದರು. ಬಾಬಾ ಏನೋ ಯೋಚಿಸುತ್ತ ತಮ್ಮ ಮುಂದಿದ್ದ ನಾಲ್ಕಾರು ಪುಟ್ಟ ಕಲ್ಲುಗಳನ್ನು ಆನೆ ಕಲ್ಲಾಟ ಆಡುವವರಂತೆ ಅತ್ತಿತ್ತ ಜರುಗಿಸುತ್ತಾ ಹೋದರು. ಸ್ವಲ್ಪ ಹೊತ್ತು ಬಿಟ್ಟು ನಿಟ್ಟುಸಿರಿಟ್ಟು ಶ್ರಾವಣಿ ಕಡೆ ನೋಡಿದರು: “ನನಗೆ ಇವರ ನೆನಪನ್ನ ವಾಪಸ್ ಕೊಡಿಸೋ ಶಕ್ತಿ ಇಲ್ಲ. ನಿಮ್ಮಜ್ಜಿನ ಅವರ ಊರಿಗೆ ರ‍್ಕೊಂಡ್ ಹೋಗಿ. ಶಿವನಿಚ್ಚೆ ಇದ್ರೆ ಅವರಿಗೆ ನೆನಪು ವಾಪಸ್ ಬಂದ್ರೂ ಬರಬಹುದು.”

“ಸರಿ ಬಾಬಾ, ಹಾಗೇ ಆಗ್ಲಿ. ಅಜ್ಜೀನ ಅವರೂರಿಗೆ ರ‍್ಕೊಂಡ್ ಹೋಗ್ತೀನಿ” ಶ್ರಾವಣಿ ಬಾಬಾಗೆ ನಮಸ್ಕರಿಸಿದಳು. “ಒಳ್ಳೇದಾಗ್ಲಿ, ಹರ್ ಹರ್ ಮಹಾದೇವ್” ಎಂದು ಬಾಬಾ ಅವಳ ಹಣೆಗೆ ಭಸ್ಮವಿಟ್ಟು ತಲೆ ಸವರಿದರು. ಅಲೋಕ ಮುಜಗರದಿಂದ ಮುಖ ಹಿಂಡಿದ. ಅಲೋಕ, ಶ್ರಾವಣಿ ಭಾಗೀರಥಮ್ಮನವರನ್ನು ಕರೆದುಕೊಂಡು ಅಲ್ಲಿಂದ ಹೊರಟರು.

* * *

ಅಲೋಕ ಭಾಗೀರಥಮ್ಮ ಮತ್ತು ಮಗಳೊಂದಿಗೆ ತುಂಬೆಪುರಕ್ಕೆ ಬಂದಿಳಿದಾಗ ಯಾವುದೋ ಕಂಡು ಕೇಳರಿಯದ ಊರಿಗೆ ಬಂದAತೆ ಅನಿಸಿತು. ತುಂಬೆಪುರದ ಚಹರೆಯೇ ಬದಲಾಗಿಹೋಗಿತ್ತು. ಆಧುನಿಕ ಅಭಿವೃದ್ಧಿಯ ಅಲೆ ತುಂಬೆಪುರದ ಮೇಲೂ ಬೀಸಿಹೋಗಿತ್ತು. ಹಿಂದೆಲ್ಲ ಹೆದ್ದಾರಿಯಿಂದ ಮೂರು ಕಿಲೋಮೀಟರ್ ದೂರ ಗುಡ್ಡ ಹತ್ತಿಳಿದು, ಬಂಡೆ ದಾಟಿ, ಗದ್ದೆ ಬದುವಲ್ಲಿ ಸರ್ಕಸ್ ಮಾಡುತ್ತ ನಡೆದು, ಜಾರುವ ಸಂಕಗಳನ್ನು ದಾಟಿ ಊರು ಸೇರಬೇಕಾಗಿತ್ತು. ಈಗ ಆರಾಮಾಗಿ ಹೋಗಲು ಟಾರ್ ರಸ್ತೆಯಾಗಿತ್ತು. ರಿಕ್ಷಾ ಸೌಕರ್ಯವಿತ್ತು. ಒಂದೆರಡು ಬಸ್ಸುಗಳೂ ಬಂದು ಹೋಗುತ್ತಿದ್ದವು. ಊರಲ್ಲೆರಡು ತಂಗುದಾಣ, ಸಮುದಾಯ ಆರೋಗ್ಯಕೇಂದ್ರ, ಸಂತೆ ಸಂಕೀರ್ಣ – ಹೀಗೆ ತುಂಬೆಪುರ ಹೊಸ ರೂಪ ಪಡೆದು ನಳನಳಿಸುತ್ತಿತ್ತು. ತಾನು ಓದಿದ ಶಾಲೆ ಗುರುತೇ ಹಿಡಿಯಲಾಗದಷ್ಟು ಬದಲಾಗಿಹೋಗಿತ್ತು. ಗುಡಿಸಲು ಹೋಟೆಲ್‌ಗಳು ಹೋಗಿ ದರ್ಶಿನಿ ಬಂದಿತ್ತು. ಗಾಡಿಯಲ್ಲಿ ಗೋಲುಗುಪ್ಪ, ಗೋಬಿ ಮಾರುವವರು ಎದುರಾದರು. ಮತ್ತೆ ಈ ದಿಕ್ಕಿಗೆ ತಲೆ ಹಾಕಿ ಕೂಡ ಮಲಗುವುದಿಲ್ಲ ಎಂದುಕೊAಡು ಎಷ್ಟೋ ವರ್ಷಗಳ ಹಿಂದೆ ಊರುಬಿಟ್ಟು ಹೋಗಿದ್ದ ಅಲೋಕ ಮತ್ತೆ ಈ ಊರಿಗೆ ಮನಸ್ಸಿಲ್ಲದ ಮನಸ್ಸಿನಿಂದಲೇ ಬಂದಿದ್ದ. ಹಚ್ಚ ಹಸುರಿನ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದ್ದ ತುಂಬೆಪುರ ನಾಮಾವಶೇಷವಾಗಿ ಅಲ್ಲೊಂದು ಕಾಂಕ್ರೀಟ್ ನಾಡು ಅವತರಿಸಿದಂತಿತ್ತು. ಶ್ರಾವಣಿ ಮಾತ್ರ ಅಚ್ಚರಿಯಿಂದಲೇ ತನ್ನಜ್ಜಿಯ ಊರನ್ನು ಕಣ್ತುಂಬಿಕೊಳ್ಳುತ್ತ ಹೋದಳು.

ಇದನ್ನೆಲ್ಲ ನಿರ್ವಿಕಾರವಾಗಿ ನೋಡುತ್ತ ನಡೆಯುತ್ತ ಹೋದ ಅಲೋಕನಿಗೆ ಒಂದು ಅನುಮಾನ ಶುರುವಾಯಿತು. ಯಾವನೋ ತಲೆಕೆಟ್ಟ ಬಾಬಾ ಹೇಳಿದ ಎಂದು ಅಮ್ಮನನ್ನು ದೂರದ ಮುಂಬೈಯಿಂದ ಇಲ್ಲಿಗೆ ಕರೆತಂದಿದ್ದಾಗಿತ್ತು. ಆದರೆ ಅಮ್ಮನಿಗೆ ಇಲ್ಲಿ ನೆನಪಿಗೆ ಬರುವಂತಾದ್ದು ಏನಿದೆ? ಎಲ್ಲ ಬದಲಾಗಿ ಹೋಗಿದೆ. ಯಾಕೋ ಇದೊಂದು ವ್ಯರ್ಥ ಕಸರತ್ತು ಎನಿಸಿತು. ಅದನ್ನೇ ಮಗಳಿಗೆ ಹೇಳಿದ:

“ಇದೆಲ್ಲಾ ವೇಸ್ಟ್ ಅನಿಸುತ್ತೆ. ನಿಮ್ಮಜ್ಜಿಗೆ ಯಾವ ಪ್ರಯೋಜನನೂ ಆಗಲ್ಲ.”

“ವೈ ಆರ್ ಯು ಸೋ ಡೆಸ್ಪರೇಟ್? ನಮ್ ಪ್ರಯತ್ನ ಮಾಡೋಣ.”

“ಏನ್ ಪ್ರಯತ್ನ ಮಾಡ್ತೀಯ? ಇಲ್ ಯಾವ್ದೂ ಮೊದಲಿನ ತರ ಇಲ್ಲ. ಎಲ್ಲಾ ಬದ್ಲಾಗಿಹೋಗಿದೆ. ಹಳೇ ತುಂಬೆಪುರದ ಮೇಲೆ ಕಾಂಕ್ರೀಟ್ ನಾಡು ಕಟ್ಟಿದಂತಿದೆ. ನನಗೇ ಇಲ್ ಏನಿತ್ತು ಅನ್ನೋ ನೆನಪಾಗ್ತಿಲ್ಲ. ಇನ್ನು ನಿಮ್ಮಜ್ಜಿ ಮೆಮೊರಿ ಹೇಗ್ ರಿಕಾಲ್ ಮಾಡೋಕೆ ಸಾಧ್ಯ?”

ವಾಸ್ತವವಾಗಿ ಶ್ರಾವಣಿಗೂ ಅದು ನಿಜ ಅನಿಸಿತ್ತು. ಆದ್ರೆ ಅವಳು ಏನೂ ಮಾತಾಡದೆ ಮೌನವಾಗಿಯೇ ಹೆಜ್ಜೆ ಹಾಕಿದಳು. ಬಾಬಾ ನೋಡಿದಾಕ್ಷಣ ಅವಳಲ್ಲಿ ಏನೋ ಒಂದು ಕಂಪನ ಉಂಟಾಗಿತ್ತು. ಅವರ ಮಾತಲ್ಲಿ ನಂಬಿಕೆ ಇಟ್ಟು ದೇವರ ಮೇಲೆ ಭಾರ ಹಾಕಿ ಅಜ್ಜಿನ ರ‍್ಕೊಂಡು ಬಂದಿದ್ದಳು. ಈ ಊರಿನ ದಿಕ್ಕು ದೆಸೆಯೇ ಅಲೋಕನಿಗೆ ಗೊತ್ತಿರಲಿಲ್ಲ, ಭಾಗೀರಥಿಗಂತೂ ಯಾವುದೂ ನೆನಪಿರಲಿಲ್ಲ. ಹಾಗಾಗಿ ಇಲ್ಲಿ ಹೋಗುವುದೆಲ್ಲಿ? ಉಳಿಯುವುದೆಲ್ಲಿ? ಎಂಬುದೇ ಯಕ್ಷಪ್ರಶ್ನೆಯಾಗಿತ್ತು.

ಸಮೀಪದ ತಾಲ್ಲೂಕು ಕೇಂದ್ರ ಶಿವಪುರದಲ್ಲೇ ಇಳಿದು ಅಲ್ಲೇ ಒಂದು ಲಾಡ್ಜ್ ಮಾಡಿ ಬಂದಿದ್ದರು. ತಾನು ಬೆಳೆದ ಊರಿನಲ್ಲೇ ಅಲೋಕ ಅಪರಿಚಿತನಂತೆ ನಡೆಯುತ್ತಿದ್ದ. ಅವನಿಗೆ ಗೆಳೆಯರಾಗಲಿ, ಬಂಧುಗಳಾಗಲಿ ಯಾರೂ ನೆನಪಿರಲಿಲ್ಲ. ಅಪ್ಪ ಓಡಿ ಹೋದ ಮೇಲೆ ಈ ಊರಿನಲ್ಲಿ ತಾನೊಂದು ಗೇಲಿಯ ವಸ್ತುವಾಗಿ ಹೋಗಿದ್ದ. ಹಾಗಾಗಿ ಎಲ್ಲ ಸಂಬAಧಗಳನ್ನೂ ನೆನಪಿನಿಂದ ಅಳಿಸಿ ಹಾಕಿಬಿಟ್ಟಿದ್ದ.

ಶ್ರಾವಣಿ ಏನೋ ಯೋಚಿಸುತ್ತ ನಡೆಯುತ್ತಿದ್ದವಳು ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಎದುರು ಹಾದುಹೋದದ್ದು ನೋಡಿ ತಟ್ಟನೆ ನಿಂತಳು. “ನಮಸ್ತೆ ಸರ್, ಇವರು ನಮ್ಮಜ್ಜಿ, ಭಾಗೀರಥಮ್ಮ ಅಂತ. ಸುಮಾರು 25 ವರ್ಷಗಳ ಹಿಂದೆ ನಮ್ಮಜ್ಜಿ ಇಲ್ಲಿದ್ರಂತೆ! ನಿಮಗೆ ನಮ್ಮಜ್ಜಿನ ನೋಡಿದ ನೆನಪಿದೆಯಾ?”

ಆ ವ್ಯಕ್ತಿ ಭಾಗೀರಥಮ್ಮನವರನ್ನೇ ದಿಟ್ಟಿಸಿ ನೋಡಿದ. ಇಲ್ಲ ಎಂಬAತೆ ತಲೆಯಾಡಿಸಿದ. “ಆ ಹೆಸರಿನೋರು ಯಾರಿದ್ರೋ ನಂಗೊತ್ತಿಲ್ಲ. ಶಾನೆ ವರ್ಷ ಆಯ್ತಲ್ಲ. ಒಂದು ಕೆಲಸ ಮಾಡಿ, ನೀವು ಹೊನ್ನಜ್ಜನ ಹತ್ರ ಓಗಿ ಕೇಳಿ. ಅವನೊಬ್ನೇ ಹಳಬ ಅಂತ ಊರಲ್ಲಿರೋನು. ಅವನಿಗೆ ನಿಮ್ಮಜ್ಜಿ ಗುರುತು ಸಿಕ್ರು ಸಿಗ್ಬಹುದು. ಅವನ ಮನೆ ಹೀಗೇ ಸೀದಾ ಹೋಗಿ ಎಡಕ್ಕೆ ತಿರುಗಿ, ಅಲ್ಲಿಂದ ಸ್ವಲ್ಪ ದೂರ ಹೋದ್ರೆ ಬಲಕ್ಕೆ ಆನಂದನ ಪಾಳ್ಯದಲ್ಲಿ ಯಾರನ್ ಕೇಳುದ್ರೂ ಯೋಳ್ತಾರೆ. ಸ್ವಲ್ಪ ದೂರ ಆಯ್ತದೆ. ರಿಕ್ಷಾ ಗಾಡಿ ಮಾಡ್ಕಂಡು ಓಗಿ” – ಎಂದು ಬೀಡಿ ಧಂ ಎಳೆಯುತ್ತಾ ಮುಂದೆ ಹೋದ.

ಅಂತೂ ದಿಕ್ಕುದೆಸೆ ಇಲ್ಲದೋರಿಗೆ ಒಂದು ಹಲ್ಲುಕಡ್ಡಿ ಆಸರೆ ಸಿಕ್ಕಿತ್ತು. ಭಾಗೀರಥಮ್ಮನವರಿಗೆ ಒಂದಿಷ್ಟು ನೀರು ಕುಡಿಸಿ ಮೂವರೂ ರಿಕ್ಷಾ ಮಾಡಿಕೊಂಡು ಹೊರಟರು.

* * *

ಆನಂದನಪಾಳ್ಯ ಸರ್ಕಾರೀ ಯೋಜನೆಗಳಡಿ ಕಟ್ಟಿದ ಮನೆಗಳ ಒಂದು ಲೇಔಟ್ ತರ ಇತ್ತು! ಎಲ್ಲ ಒಂದೇ ಪಡಿಯಚ್ಚಿನ ಮನೆಗಳು. ಯಾರೋ ಒಬ್ಬ ಹುಡುಗ ಹೊನ್ನಜ್ಜನ ಮನೆ ತೋರಿಸಿ “ಅಜ್ಜೋ, ಯಾರೋ ಸಿಟಿಯಿಂದ ನಿನ್ ಹುಡುಕ್ಕಂಡ್ ಬಂದವ್ರೆ” ಎಂದು ಗಟ್ಟಿಯಾಗಿ ಕೂಗಿ ಹೇಳಿ ಓಡಿ ಹೋದ. ಹೊನ್ನಜ್ಜ ಕೆಮ್ಮುತ್ತಲೇ “ನನ್ ಯರ‍್ಲಾ ನೋಡಕ್ ಬತ್ತಾರೆ?” ಎಂದು ನಿಧಾನವಾಗಿ ಕೂಲೂರಿಕೊಂಡು ಈಚೆ ಬಂದ. ಕೆದರಿನ ಕೂದಲು, ಗುಳಿಬಿದ್ದ ಕಣ್ಣುಗಳು, ಒಂದು ಗಾಜು ಸೀಳಿ ಒಂದು ಕಿವಿಗೆ ಸಿಕ್ಕಿಕೊಂಡ ಕನ್ನಡಕ – ಹೀಗೆ ಹಣ್ಣಾಗಿರುವ ಈ ಮುದುಕನಿಗೆ ಯಾವ ನೆನಪಿದ್ದೀತು ಅಂದುಕೊAಡ ಅಲೋಕ. ಹೊನ್ನಜ್ಜ ನಿಧಾನವಾಗಿ ಹತ್ರ ಬಂದ. “ಯಾರ್ ಬೇಕಿತ್ತು?” ಕೇಳಿದ.

ಶ್ರಾವಣಿ “ಅಜ್ಜ, ಇವರನ್ನು ನೋಡಿರೋ ಜ್ಞಾಪಕ ಇದ್ಯಾ?” ಕೇಳಿದಳು. ಹೊನ್ನಜ್ಜ ಇನ್ನೂ ಹತ್ತಿರಕ್ಕೆ ಬಂದು ಮುಂಗೈ ಕಣ್ಣಿಗೆ ಹಿಡಿದು ಬಿಸಿಲ ಝಳ ತಡೆದು ಭಾಗೀರಥಿ ಮುಖವನ್ನು ದಿಟ್ಟಿಸಿ ನೋಡಿದ. ಅವನ ಕಣ್ಣುಗಳು ಮಿಂಚಿದವು. “ಓ.. ಮುತ್ತೀರಮ್ಮ” ಎಂದು ಉದ್ಗರಿಸಿದ. ಅಲೋಕ, ಶ್ರಾವಣಿ ಮುಖ ಮುಖ ನೋಡಿಕೊಂಡರು. ಅಲೋಕ “ಇವನಿಗೂ ಬೈನ್ ಸರ್ಕ್ಯುಟ್ ಡಮಾರ್ ಅಂದಿರೋ ಹಾಗಿದೆ. ಹ್ಯೂಮನ್ ಸಾಲಿಡ್ ವೇಸ್ಟ್ ಇವನು.. ಯುಸ್ ಲೆಸ್ ಫೆಲೋ” ಎಂದು ಗೊಣಗಿದ. ಅದನ್ನು ಗಮನಿಸಿದ ಶ್ರಾವಣಿ ಅಪ್ಪನ ಕಡೆ ದುರುಗುಟ್ಟಿದಳು.

“ಇವರು ಮುತ್ತೀರಮ್ಮ ಅಲ್ಲ, ನಮ್ಮಜ್ಜಿ ಭಾಗೀರಥಮ್ಮ” ಎಂದಳು ಶ್ರಾವಣಿ.

ಹೊನ್ನಜ್ಜ ‘ಹೇ..ಹೇ…’ ಎಂದು ಬೊಚ್ಚು ಬಾಯಲ್ಲೇ ನಕ್ಕ. “ನಂಗ್ ಕಣ್ ಮದ್ದಿಷ್ಟ ಆಗದೆ ನಿಜ, ಆದ್ರೆ ಜನ ಗರ‍್ತಾಗ್ತಾರೆ.. ಇವಳು ಮುತ್ತೀರಮ್ಮನೇಯ.. ನಂಗ್ ಅಷ್ಟು ಗೊತ್ತಾಗಕಿಲ್ವಾ?” ಎಂದು ಅಲೋಕನ ಮುಖ ನೋಡಿದ: “ಇರ‍್ಯಾರು?”

“ನಮ್ಮಪ್ಪ” ಎಂದಳು ಶ್ರಾವಣಿ.

“ಓಹೋ! ನಮ್ ಮುತ್ತಿರಮ್ಮನ ಮಗ ಹಲಗನಾ?” ಶ್ರಾವಣಿ ಅರ್ಥವಾಗದಂತೆ ಅಪ್ಪನ ಕಡೆ ನೋಡಿದಳು. ಅಲೋಕ ತನ್ನ ಒರಿಜಿನಲ್ ಐಡೆಂಟಿಟಿ ಪತ್ತೆಯಾಯಿತಲ್ಲ ಎಂದು ಅವಮಾನದಿಂದ ಒಳಗೊಳಗೇ ಕುದ್ದು ಹೋದ. ಅಪ್ಪನ ಚಡಪಡಿಕೆ ನೋಡಿಯೇ ಶ್ರಾವಣಿಗೆ ಅಜ್ಜಿಯ ಹೆಸರು, ಅಪ್ಪನ ಹೆಸರು ಈಗಿರುವುದಲ್ಲ ಎಂದು ಗೊತ್ತಾಗಿಹೋಯಿತು. ಅಷ್ಟರಲ್ಲಿ ಹೊನ್ನಜ್ಜ “ಸಂದಾಕಿದೀಯಾ ಮುತ್ತೀರಮ್ಮ?” ಎಂದ. ಭಾಗೀರಥಿ ಅವನತ್ತ ನೋಡಿದರಷ್ಟೇ ಹೊರತು ಏನೂ ಪ್ರತಿಕ್ರಿಯಿಸಲಿಲ್ಲ. ಆಗ ಶ್ರಾವಣಿ “ಅಜ್ಜ, ಅಜ್ಜಿಗೆ ಯಾವ ನೆನಪೂ ಇಲ್ಲ, ಹೆಚ್ಚು ಮಾತೂ ಆಡಲ್ಲ” ಎಂದಳು. “ಅಯ್ಯೋ! ಸಿವನೇ, ಅಂಗಾಗೋಯ್ತಾ? ಛೇ..ಛೇ..” ಲೊಚಗುಟ್ಟಿದ ಹೊನ್ನಜ್ಜ.

“ಅದಕ್ಕೇ ಇಲ್ಲಿ ಹಳೇದೆಲ್ಲಾ ನೋಡುದ್ರೆ ಅವರಿಗೆ ಮತ್ತೆ ನೆನಪಿನ ಶಕ್ತಿ ಬರಬಹುದು ಅಂತ ರ‍್ಕೊಂಡ್ ಬಂದ್ವಿ. ಅಜ್ಜಿ ಮುಂಚೆ ಎಲ್ಲಿದ್ರು? ಆ ಮನೆ ಈಗ ಇದ್ಯಾ?”

“ಅಯ್ಯೋ, ಇಲ್ಲ ಕಣವ್ವ, ನಿಮ್ಮಜ್ಜಿ ಇದ್ದದ್ದು ಕೆಳಗಿನ ಅಟ್ಟೀಲಿ. ಅಲ್ ಈಗ ಯಾರೂ ಇಲ್ಲ ಕಣವ್ವ, ಎಲ್ಲಾ ಸರ್ಕಾರದ ಮನೆ ತಗಂಡು ಇಲ್ಲೇ ಬಂದ್ಬುಟ್ಟವ್ರೆ. ಲಕ್ಷ್ಮಣಯ್ಯಂಗೂ ಅವನ ತಮ್ಮ ತಿರುಮಲಂಗೂ ಆಸ್ತಿ ವಿಷಯದಾಗ ವ್ಯಾಜ್ಯ ಆತು. ಅವನು ಸತ್ರೂ ಅದು ಬಗೆರ‍್ದಿಲ್ಲ. ಕೋರ್ಟಾಗೇ ಐತಂತೆ. ಮನೆ ಪಾಳು ಬಿದ್ದು ಓಗದೆ” ಎಂದ ಹೊನ್ನಜ್ಜ. “ಅಲ್ಲಿಗೆ ನಮ್ಮನ್ನ ರ‍್ಕೊಂಡ್ ಹೋಗ್ತೀರಾ?” ಕೇಳಿದಳು ಶ್ರಾವಣಿ. “ಅದಕ್ಕೆನಂತೆ, ತರ‍್ತೀನಿ ನಡೀರಿ. ನೆತ್ತಿ ಸುಡ್ತಾ ಅದೆ.. ಇರವ್ವ.. ಛತ್ರಿ ರ‍್ತೀನಿ” ಎಂದು ಒಳಗೆ ಹೋದ ಹೊನ್ನಜ್ಜ. ಶ್ರಾವಣಿ ಅಜ್ಜಿ ಕಡೆ ನೋಡಿ ಒಂದು ಸಮಾಧಾನದ ನಿಟ್ಟುಸಿರಿಟ್ಟಳು.

* * *

ಅದೊಂದು ಚಿಕ್ಕ ಮಾಡುಹೆಂಚಿನ ಮನೆ. ಪೂರಾ ಶಿಥಿಲಗೊಂಡು ಮುಕ್ಕಾಲು ಭಾಗ ಬಿದ್ದುಹೋಗಿತ್ತು. ಸುತ್ತಾ ಲಾಂಟಾನಾ, ಕಳ್ಳಿ ಪೊದೆಗಳು ಆವರಿಸಿಕೊಂಡಿದ್ದವು. ಅವುಗಳ ಮಧ್ಯೆ ದಾರಿ ಮಾಡಿಕೊಂಡು ಹೋಗುವುದೇ ಕಷ್ಟವಾಯಿತು. ಆದರೂ ಶ್ರಾವಣಿಗೆ ಏನೋ ಉತ್ಸಾಹ. ಅಜ್ಜಿಯ ಕೈ ಹಿಡಿದು ಜೋಪಾನವಾಗಿ ಕರೆ ತಂದಳು.

“ಅಜ್ಜಿ ನೋಡು, ಇದೇ ನೀನಿದ್ದ ಮನೆ…? ನಿಂಗೇನಾದ್ರೂ ಜ್ಞಾಪಕ ರ‍್ತಿದ್ಯಾ?”

ಭಾಗೀರಥಮ್ಮ ಮನೆಯನ್ನೇ ದಿಟ್ಟಿಸಿ ನೋಡಿದರು. ‘ಇಲ್ಲ’ ಎಂದು ತಲೆಯಾಡಿಸಿದರು. ಶ್ರಾವಣಿ ನಿರಾಶಳಾದಳು. ಹೊನ್ನಜ್ಜನ ಕಡೆ ನೋಡಿದಳು.

“ಮುತ್ತೀರವ್ವ, ಸರಿಯಾಗ್ ನೋಡವ್ವ, ಮನೆ ಮುಂದೆ ದಿನಾ ದೊಡ್ ರಂಗೋಲಿ ಬುಡ್ತಿದ್ದೆ. ಮನೆ ಮುಂದೆಲ್ಲಾ ಕಣಗಲೆ, ಮಲ್ಲಿಗೆ, ಜಾಜಿ ಇಂಗೆ ನೂರೆಂಟು ಗಿಡ ಆಕ್ಕಂಡಿದ್ದೆ. ಇಲ್ಲೇ ಹಲಗಂಗೆ ಅಂಡಿಗೆ ನೀರು ಹುಯ್ತಿದ್ದೆ. ಮೇಕೆ ಮೈ ತೊಳೀತಿದ್ದದ್ದೂ ಇಲ್ಲೇಯ..” ಭಾಗೀರಥಮ್ಮ ಏನೂ ಅರ್ಥವಾಗದವರಂತೆ ಮನೆ ಕಡೆಗೊಮ್ಮೆ, ಹೊನ್ನಜ್ಜನ ಕಡೆಗೊಮ್ಮೆ ನೋಡಿದರು. ಅಲೋಕ ಮಾತ್ರ ಸಿಟ್ಟಿನಿಂದ ಮುಖ ಹಿಂಡಿದ.

ಅಸಹನೆ, ಮುಜಗರದ ಮಧ್ಯೆಯೂ ಅಲೋಕನಿಗೆ ಒಂದೊAದೇ ನೆನಪಾಗುತ್ತಾ ಹೋಯಿತು. ತಾನು ಆಡಿ ಬೆಳೆದಿದ್ದ ಮನೆಯ ಚಿತ್ರಗಳು ಕಣ್ಮುಂದೆ ಬಂದವು. ತಾನು ಸ್ಕೂಲಿಗೆ ಹೋಗಲು ಹಠ ಮಾಡುತ್ತಿದ್ದುದು. ಒಗೆದ ಬಟ್ಟೆ ಹಾಕಿದೊಡನೆ ಅದರ ಮೇಲೆ ಕಾಫಿ ಚೆಲ್ಲಿ ಕಲೆ ಮಾಡಿಕೊಂಡು ಅಂಗಿ ಬಿಚ್ಚಿ ಎಸೆಯುತ್ತಿದ್ದುದು, ಇನ್ನೊಂದು ಅಂಗಿ ಇಲ್ಲದೆ ಅದೇ ನೆಪ ಮಾಡಿಕೊಂಡು ಸ್ಕೂಲಿಗೆ ಚಕ್ಕರ್ ಹೊಡೀತಿದ್ದದ್ದು, ಸ್ನಾನಕ್ಕೆಂದು ತಲೆಗೆ ಎಣ್ಣೆ ತಟ್ಟಿದಾಗೆಲ್ಲಾ ಮನೆ ಎದುರ ಮರಳ ರಾಶಿಯ ಮೇಲೆ ಬಿದ್ದು ಮೈ ಎಲ್ಲಾ ಮಣ್ ಮಾಡಿಕೊಳ್ತಿದ್ದದ್ದು, ಅಮ್ಮ ಜಗಲಿಯಲ್ಲಿ ಕೂರಿಸಿಕೊಂಡು ತಲೆ ಬಾಚುತ್ತಿದ್ದುದು, ನಾಯಿ ಮೋಳು ಬಂದು ಕುಯ್ಗುಡುತ್ತಾ ಕಾಲು ಉಜ್ಜುತ್ತಿದ್ದುದು, ಅಮ್ಮ ಅವನಿಗೂ ಗಂಜಿ ಹಾಕುತ್ತಿದ್ದುದು ಎಲ್ಲಾ ನೆನಪಾಯಿತು. ಕಿತ್ತ ಚಪ್ಪಲಿಗೆ ತಾನೊಂದು ಪಿನ್ ಹಾಕಿಕೊಂಡಿದ್ದ. ಅದು ಕಾಲಿಗೊಮ್ಮೆ ಹೊಕ್ಕಿ ಗಾಯವಾದಾಗ ಅಮ್ಮ ಪೇಚಾಡಿಕೊಂಡು ಜೋಡುಗಟ್ಟೆ ಸಂತೆಗೆ ಹೋಗಿ ಆಡು ಮಾರಿ ತನಗೆ ಹೊಸ ಬಟ್ಟೆ, ಚಪ್ಪಲಿ ತಂದದ್ದು ಕಣ್ಮುಂದೆ ಬಂತು. ಆ ಕಾಲಕ್ಕೆ ಇದ್ದದ್ದೇ ನಾಲ್ಕಾರು ಮಣ್ಣಿನ ಕುಡಿಕೆ ಮಡಿಕೆಗಳು. ಬೆಳಗ್ಗೆ ಎದ್ದು ಅಮ್ಮ ಹೇಗೋ ತನಗೆ ಗಂಜಿ ಬೇಯಿಸುತ್ತಿದ್ದಳು. “ನಿನಗೆಲ್ಲಿ ಗಂಜಿ?” ಎಂದಾಗಲೆಲ್ಲ ಮೂಲೆಯ ಮಡಕೆಯಲ್ಲಿದ್ದ ಗಂಜಿ ತೋರುತ್ತಿದ್ದಳು.

ಒಮ್ಮೆ ಅಮ್ಮ ಕೂಲಿಗೆ ಹೋದಾಗ ಸ್ಕೂಲಿಂದ ಬಂದು ಹೊಟ್ಟೆ ಹಸಿಯುತ್ತಿದೆಯೆಂದು ಆ ಮೂಲೆಯಲ್ಲಿಟ್ಟ ಮಡಕೆಯಲ್ಲಿದ್ದ ಗಂಜಿಯನ್ನೇ ಕರಟಕ್ಕೆ ಬಸಿದು ಬಾಯಿಗೆ ಬಸಿದುಕೊಂಡಿದ್ದ. ಬಾಯೆಲ್ಲ ಕಹಿವಗಚಾಗಿ ವಯಕ್ಕನೆ ವಾಂತಿ ಮಾಡಿದ್ದ. ಆಮೇಲೇ ನಿಜ ಗೊತ್ತಾಗಿದ್ದು. ಅಮ್ಮ ಕೊಂಡಮಾವಿನ ರಾಳವನ್ನು ಒಟ್ಟು ಮಾಡಿ ಅದನ್ನೇ ನೀರಲ್ಲಿ ಕುದಿಸಿ ಅಂಟು ಮಾಡಿಟ್ಟಿದ್ದಳು. ತನ್ನ ಪಾಲಿನ ಗಂಜಿ ಎಂದು ಅವಳು ದಿನಾ ತೋರಿಸುತ್ತಿದ್ದುದು ಅದನ್ನೇ! ತನಗಷ್ಟೇ ಗಂಜಿ ಮಾಡಿಕೊಟ್ಟು ತಾನು ಉಪವಾಸವೇ ಇರುತ್ತಿದ್ದಳು ಎಂದು ಅವನಿಗೆ ಆಗ ಅರಿವಾಗಿತ್ತು. ಅಲೋಕ ಹಾಗೇ ಮನೆ ಅವಶೇಷಗಳನ್ನು ನೋಡುತ್ತ ಹೋದ. ಒಂದೆರಡು ಕಡೆ ಶಿಥಿಲ ಗೋಡೆಯಲ್ಲಿ ಮಾಸಿದ ಕಲೆಗಳು ಕಂಡವು. ಅಲ್ಲೇ ಅಮ್ಮ ಬೆರಣಿ ತಟ್ತಾ ಇದ್ದದ್ದು. ತನಗೆ ಅಸಹ್ಯವೆಂದರೂ ಕೇಳದೆ ಕೈ ಹಿಡಿದೆಳೆದು ಆ ಬೆರಣಿಯಲ್ಲೇ ಅ, ಆ, ಇ, ಈ… ಅಕ್ಷರ ತಿದ್ದಿಸುತ್ತಿದ್ದಳು. ತಾನು ಮುಖಹಿಂಡಿದಾಗ, ‘ಅಸಹ್ಯ ಮಾಡ್ಕಬರ‍್ದು ಕಣ್ಲಾ.. ಬೆರಣಿ, ಇದ್ಯೆ ಎರಡೂ ಬೇಕು ಕಣ್ಲಾ ಹಲಗ, ನೀನು ಓದಿ ದೊಡ್ ಮನುಷ್ಯನಾಗ್ಬೇಕು ಕಣ್ಲಾ’ ಎಂದು ತಲೆ ಸವರುತ್ತಿದ್ದಳು. ಕೈಗೆ ಹತ್ತಿದ ಸಗಣಿಯನ್ನು ಅವಳ ಮುಖಕ್ಕೆ ಕೊಡವಿ ಚಡ್ಡಿಗೆ ಒರೆಸಿಕೊಂಡು ಹಾಗೇ ಸ್ಕೂಲಿಗೆ ಹೋಗಿ ನಗೆಪಾಟಲಾಗಿತ್ತು. ಎಷ್ಟೋ ವರ್ಷ ಆ ಬೆರಳಿಗೆ ಸಗಣಿ ಮೆತ್ತಿದೆಯೇನೋ ಎಂಬ ಭ್ರಮೆಯಲ್ಲಿ ಪದೇ ಪದೇ ಕೈ ತೊಳೆದುಕೊಳ್ಳುವ ಗೀಳು ರೋಗಕ್ಕೆ ಬಿದ್ದಿದ್ದ ಅಲೋಕ! ಭಾಗೀರಥಮ್ಮ ಮಾತ್ರ ಯಾವ ಪ್ರತಿಕ್ರಿಯೆಯೂ ಇಲ್ಲದೆ ಶಿಲೆಯಂತೆ ಒಂದೆಡೆ ಕುಳಿತುಬಿಟ್ಟರು. “ಅಜ್ಜಿ ಏನೂ ಜ್ಞಾಪಕ ರ‍್ತಿಲ್ವಾ?” ಕೇಳಿದಳು ಶ್ರಾವಣಿ. ಭಾಗೀರಥಮ್ಮ ಶುಷ್ಕವಾಗಿ ‘ಇಲ’್ಲ ಎಂದು ತಲೆಯಾಡಿಸಿ “ನಂಗ್ ಹೊಟ್ಟೆ ಹಸೀತಿದೆ” ಅಂದ್ರು. ಹೊನ್ನಜ್ಜ “ಇಲ್ಲೇ ನೆನಪು ರ‍್ಲಿಲ್ಲ ಅಂದ್ ಮ್ಯಾಗೆ ಹೊಲದ ನೆನಪು ಬತ್ತದೋ ಎಂಗೋ. ಉಂಡು ಒಂದ್ಕಿತ ಅಲ್ಲೂ ಓಗಿ ಬಂದ್ ಬುಡಾಣ ನಡೀರಿ” ಎಂದು ಅವರನ್ನು ಅಲ್ಲಿಂದ ಹೊರಡಿಸಿದ.

* * *

ಭಗೀರಥಮ್ಮನವರ ತುಂಡು ಭೂಮಿ ಇದ್ದ ಜಾಗವೂ ಸೇರಿ ಅಲ್ಲೊಂದು ಲೇಔಟ್ ನಿರ್ಮಾಣವಾಗಿತ್ತು. ಹೊನ್ನಜ್ಜ ದಿಕ್ಕು, ಕಟ್ಟೆ, ಸ್ಮಶಾನ ಎಲ್ಲದರ ಚಕ್ಕುಬಂದಿನ ಲೆಕ್ಕಹಾಕಿ ಕಷ್ಟಪಟ್ಟು ಮುತ್ತೀರಮ್ಮನ ಹೊಲ ಇದ್ದಲ್ಲಿಗೆ ಕರೆತಂದ. ಅಲ್ಲೊಂದು ಮನೆ ಅರ್ಧಬಂರ್ಧ ಆಗಿ ನಿಂತಿತ್ತು.

“ನೋಡವ್ವ, ಮುತ್ತಿರವ್ವ, ಇದೇ ಕಣವ್ವ ನಿನ್ ಹೊಲ. ಇದ್ರಾಗೆ ನೀನು ತೆಂಗಿನ ಸಸಿ ಇಡ್ಬೇಕು ಅಂತ ಒಬ್ಳೇ ಹರಸಾಹಸ ಮಾಡಿ ಬಾವಿ ತೋಡಿದ್ದೆ ಕಣವ್ವ.”

ಶ್ರಾವಣಿಗೆ ಆಶ್ಚರ್ಯವಾಯಿತು. “ಏನು, ಅಜ್ಜಿ ಒಬ್ರೇ ಬಾವಿ ತೋಡಿದ್ರಾ?” ಕೇಳಿದಳು.

“ಊ ಕಣವ್ವ, ಅಂತ ಛಲದ ಎಂಗ್ಸು ನಿಮ್ಮಜ್ಜಿ. ಎಂಟಾಳುದ್ದ ತೋಡಿದ್ಮೇಲೆ ನೀರು ಬಂದಿತ್ತು ಕಣವ್ವ.”

ಶ್ರಾವಣಿ ದಿಗ್ಮೂಢಳಾದಳು. ಹೊನ್ನಜ್ಜ ಹೇಳುತ್ತಲೇ ಇದ್ದ. ಅಲೋಕನಿಗೆ ಮತ್ತೆ ನೆನಪಿನ ಸುರಳಿಗಳು ಬಿಚ್ಚಿಕೊಂಡವು. ಹಾಗೇ ಮನೆ ಹಿಂದೆ ಬಂದು ಮರಳುಗುಡ್ಡೆಯ ಮೇಲೆ ಕುಳಿತ. ಹೌದು, ಈ ಒಂದೂವರೆ ಗುಂಟೆ ಭೂಮಿಯಲ್ಲಿ ಅಮ್ಮ ರಾಗಿ, ಜೋಳ ಬೆಳೆಯುತ್ತಿದ್ದಳು. ಮಳೆ ಹೆಚ್ಚೋ ಕಮ್ಮಿಯೋ ಆಗಿ ಯಾವ ವರ್ಷವೂ ರಾಗಿ ಬೇಕಾದಷ್ಟು ಕೈಗೆ ದಕ್ಕುತ್ತಿರಲಿಲ್ಲ, ನಾಕು ತಿಂಗಳು ಮುದ್ದೆಗೋ, ಗಂಜಿಗೋ ಆದರೆ ಅದೇ ಹೆಚ್ಚು. ಕುರಿ, ಮೇಕೆಗಳಿಗೆ ಒಂದಿಷ್ಟು ಮೇವಾಗುತ್ತಿತ್ತು. ತಾನಿನ್ನೂ ಎರಡೋ, ಮೂರನೆಯೋ ಕ್ಲಾಸಲ್ಲಿದ್ದೆ. ಅಮ್ಮನಿಗೆ ಅದ್ಯಾವ ಪ್ರೇರಣೆಯಾಗಿತ್ತೋ? ಬಾವಿ ತೋಡಿಸಬೇಕೆಂದು ನಿರ್ಧರಿಸಿದಳು, ಆದರೆ ಕೂಲಿ ಕೊಡುವಷ್ಟು ದುಡ್ಡಿರಲಿಲ್ಲ, ಸಾಲದ್ದಕ್ಕೆ ಈ ಒಣಬಾರೆ ಮೇಲೆ ಬಾವಿ ತೋಡುವ ಅಮ್ಮನ ಹಂಬಲ ಕೇಳಿಯೇ ಜನ ನಕ್ಕರು. ಅಮ್ಮ ಹಠಕ್ಕೆ ಬಿದ್ದವಳಂತೆ ಒಂದು ತಿಂಗಳು ಏಕಾಂಗಿಯಾಗಿ ಬಾವಿ ತೋಡಿದ್ದಳು. ನೀರೂ ಬಂದಿತ್ತು. ಒಂದು ವಾರ ಕಾಲ ಜ್ವರದ ಜಡ್ಡು ಹಿಡಿದು ಮಲಗಿಬಿಟ್ಟಿದ್ದಳು. ಆಮೇಲೆ ಅಲ್ಲೊಂದು 20 ತೆಂಗಿನಸಸಿ ಹಾಕಿ ತಾನೇ ಬಾವಿಯಿಂದ ನೀರೆತ್ತಿ ಅವನ್ನು ಕಾಪಾಡಿದ್ದಳು. ಸುತ್ತಮುತ್ತಲ ಹತ್ತೂರು ಜನ ಬಂದು ಬಾವಿ ನೋಡಿ ಬೆರಗಾಗಿ ಅಮ್ಮನನ್ನು ಗಟ್ಟಿಗಿತ್ತಿ ಎಂದು ಕೊಂಡಾಡಿಹೋಗಿದ್ದರು. ಹಾಗೆ ಬೆವರು, ರಕ್ತ ಸುರಿಸಿ ರೂಢಿಸಿದ್ದ ಭೂಮಿಯನ್ನು ಅಮ್ಮ ತನ್ನನ್ನು ಕಾಲೇಜು ಸೇರಿಸಲು ಹಿಂದೆ ಮುಂದೆ ನೋಡದೆ ಮಾರಿಬಿಟ್ಟಿದ್ದಳು. ಆ ದುಡ್ಡಿನೊಂದಿಗೆ ತಾನು ಹಳ್ಳಿ ಬಿಟ್ಟಿದ್ದೆ.

ಆ ದಿನಗಳಲ್ಲಿ ತಾನು ತೀವ್ರ ಮಾನಸಿಕ ಯಾತನೆ ಅನುಭವಿಸಿದ್ದೆ. ಅಪ್ಪನೆನ್ನುವ ಪ್ರಾಣಿ ನಾನು ಹುಟ್ಟಿದ ಕೂಡಲೇ ನಮ್ಮನ್ನು ಬಿಟ್ಟು ಓಡಿಹೋಗಿದ್ದನಂತೆ! ಹಾಗೊಂದು ಕತೆ ಹುಟ್ಟಿಕೊಂಡಿತ್ತು. ಅಮ್ಮ ಮಾತ್ರ ಈ ಬಗ್ಗೆ ತುಟಿ ಪಿಟಕ್ ಎನ್ನುತ್ತಿರಲಿಲ್ಲ. ಮೊದಲು ಅಪ್ಪ ಇಲ್ಲ ಎನ್ನುವ ಕೊರತೆ, ಸಂಕಟ ಕಾಡುತ್ತಿತ್ತು. ಆಮೇಲೆ ‘ಇಂಥ ಅಮ್ಮನನ್ನು ಬಿಟ್ಟು ಅಪ್ಪ ಏಕೆ ಓಡಿಹೋದ?’ ಎಂಬ ಜಿಜ್ಞಾಸೆ ಕಾಡುತ್ತಿತ್ತು. ಅವನ ಮುಖ ನೋಡಲೂ ಒಂದು ಫೋಟೋ ಇರಲಿಲ್ಲ, ಬೆಳೆಯುತ್ತಾ ಹೋದಂತೆಲ್ಲ ಈ ಸಂಕಟ ಸಹಿಸಲಾಗದ ಯಾತನೆ ಆಯಿತು. ತನ್ನ ಒಂದೊAದು ಸೋಲನ್ನೂ ಅಪ್ಪನ ಚಾಳಿಯೊಂದಿಗೆ ಹೋಲಿಸಲಾರಂಭಿಸಿದರು. ‘ಎಷ್ಟಾಗಲೀ ಹೇಡಿ ಅಪ್ಪನ ಮಗ ಅಲ್ವಾ?’ ‘ನಿಮ್ಮಪ್ಪನ ತರ ಓಡ್ ಹೋಗ್ಬೇಡ ಕಣೋ’ ಈ ತರದ ಮಾತು, ಅಣಕ ಅಪ್ಪ ಎನ್ನುವ ಆ ಹೇಡಿ ಗಂಡಸನ್ನು ತೀವ್ರವಾಗಿ ದ್ವೇಷಿಸುವಂತೆ ಮಾಡಿತು. ಈ ಜನ, ಈ ಊರು, ಇಲ್ಲಿನ ಗಾಳಿ, ನೀರು ಎಲ್ಲವೂ ತನ್ನನ್ನು ಗೇಲಿ ಮಾಡುತ್ತಿರುವಂತೆ ಭಾಸವಾಗುತ್ತಿತ್ತು. ಈ ಚಿತ್ರಹಿಂಸೆ ತಡೆಯಲಾರದೆ ಅಲೋಕ ಊರು ಬಿಟ್ಟು ಹೋಗುವ ನಿರ್ಧಾರ ಮಾಡಿದ್ದ. ಅಮ್ಮನಿಗೂ ತನ್ನ ಮನಃಸ್ಥಿತಿ ಅರ್ಥವಾಗಿತ್ತೇನೋ? ಸಿಟಿಗೆ ಹೋಗುತ್ತೇನೆಂದ ಕೂಡಲೇ ಮರುಮಾತಾಡದೆ ಭೂಮಿ ಮಾರಿ ದುಡ್ಡು ಹೊಂದಿಸಿ ಕೊಟ್ಟುಬಿಟ್ಟಿದ್ದಳು. ಆಮೇಲೆ ಓದು ಪದವಿ, ಪ್ರತಿಷ್ಠೆ, ಹಣ, ಹೆಂಡತಿ ಎಲ್ಲ ಬಂದವು. ಹಲಗಪ್ಪ ಅಲೋಕನಾದ, ತನ್ನ ಸಂಭ್ರಮಗಳ ನಡುವೆ ಎಷ್ಟೋ ವರ್ಷ ಅಮ್ಮನನ್ನು ಮರೆತೇಬಿಟ್ಟಿದ್ದ. ಕೊನೆಗೆ ಲೋಕಾಪವಾದಕ್ಕೆ ಹೆದರಿ ಅಮ್ಮನನ್ನು ಮುಂಬೈಗೆ ಕರೆತಂದಿದ್ದ. ಅಮ್ಮನ ಉಸಿರಲ್ಲಿ ಬೆರೆತಿದ್ದ ಮಣ್ಣು, ಸಗಣಿ, ವಾಸನೆ ಹೆಂಡತಿಗಷ್ಟೇ ಅಲ್ಲ ಸ್ವತಃ ತನಗೇ ಅಸಹ್ಯವೆನಿಸಿತ್ತು. ಮುತ್ತೀರಮ್ಮನನ್ನು ಭಾಗೀರಥಮ್ಮ ಮಾಡಿ ಗೋರೆಗಾಂವ್‌ನ ವೃದ್ಧಾಶ್ರಮಕ್ಕೆ ಸೇರಿಸಿ ಕೈ ತೊಳೆದುಕೊಂಡಿದ್ದ.

ಶ್ರಾವಣಿ ಬಂದು “ಇಲ್ಲೇನ್ ಮಾಡ್ತಿದೀಯ, ಬಾ ಹೋಗೋಣ. ಅಜ್ಜಿ ಯಾವ ಮೆಮೊರೀಸ್ನೂ ರಿಕಾಲ್ ಮಾಡ್ಲಿಲ್ಲ” ಎಂದು ಹತಾಶಳಾಗಿ ಹೇಳಿದಳು. ಅಲೋಕ ನಿಟ್ಟುಸಿರಿಟ್ಟು ಮೇಲೆದ್ದ. ಹೊನ್ನಜ್ಜನೂ ದಣಿದಿದ್ದ. “ಅಜ್ಜ, ನಿಮಗೆ ತುಂಬಾ ತೊಂದ್ರೆ ಕೊಟ್ವಿ, ಬನ್ನಿ ನಿಮ್ಮನ್ನ ಮನೆ ಹತ್ರ ಬಿಟ್ಟು ನಾವು ಹೊರಡ್ತೀವಿ” ಎಂದಳು ಶ್ರಾವಣಿ. ಹೊನ್ನಜ್ಜ ಏನೋ ಯೋಚಿಸುತ್ತಾ ಮೇಲೆದ್ದ. “ಎಲ್ಲಾ ಶಿವನಿಚ್ಚೆ! ಇನ್ನೇನೂ ಮಾಡಂಗಿಲ್ಲ, ಸುಮ್ಕೆ ವಾಪಸ್ ರ‍್ಕೊಂಡ್ ಒಂಟೋಗಿ. ಇರಾಗಂಟ ಚೆನ್ನಾಗಿ ನೋಡ್ಕಳಿ” ಎಂದು ದೊಡ್ಡ ನಿಟ್ಟುಸಿರಿಟ್ಟು ಅವರ ಜೊತೆ ಹೆಜ್ಜೆ ಹಾಕಿದ.

* * *

ಅಲೋಕನಿಗೆ ರಾತ್ರಿ ಎಷ್ಟೋ ಹೊತ್ತು ನಿದ್ರೆ ಬಂದಿರಲಿಲ್ಲ. ನಡೆದ ಘಟನೆಗಳು ಅವನ ಕಣ್ಮುಂದೆ ಹಾದುಹೋದವು. ಅಮ್ಮನನ್ನು ನೂಕಿದ್ದು, ಅವಳು ಬಿದ್ದು ನೆನಪಿನಶಕ್ತಿ ಕಳೆದುಕೊಂಡಿದ್ದು, ಕಾಶಿಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಊರಿಗೆ ಕರೆದುಕೊಂಡು ಬಂದದ್ದು, ಹಳೇ ಮನೆ, ಹೊಲ ಎಲ್ಲಾ ಮತ್ತೆ ಮತ್ತೆ ಅವನ ಮನಃಪಟಲದಲ್ಲಿ ಗಿರಕಿ ಹೊಡೆದು ಅವನನ್ನು ಹಂಗಿಸಿ ನಕ್ಕವು. ಅಮ್ಮ ತನಗಾಗಿ ಎಷ್ಟೆಲ್ಲ ತ್ಯಾಗ ಮಾಡಿದ್ದಳು, ಎಷ್ಟು ಯಾತನೆಯ ಬದುಕು ಬಾಳಿದ್ದಳು, ಅಂತಹವಳನ್ನು ನಾನು ಹೆಂಡತಿಯ ಮೇಲಿನ ವ್ಯಾಮೋಹಕ್ಕೆ ತುಚ್ಛೀಕರಿಸಿಬಿಟ್ಟೆನಲ್ಲ ಎಂದು ಬಿಕ್ಕಿಬಿಕ್ಕಿ ಅತ್ತ. ಅವಳ ತ್ಯಾಗವನ್ನು ಹೇಗೆ ಮರೆತೆ? ತಾನೆಷ್ಟು ಕೇಳಿದರೂ ಓಡಿ ಹೋದ ಅಪ್ಪನ ಬಗ್ಗೆ ಹೇಳದೆ ತನ್ನ ಜನ್ಮರಹಸ್ಯ ಗುಟ್ಟಾಗಿಟ್ಟಳು ಎಂಬ ಕಾರಣಕ್ಕೆ ಅವಳ ಮೇಲೆ ಇಂತಹ ಸೇಡು ತೀರಿಸಿಕೊಂಡೆನಾ? ಅಲೋಕ ಪಶ್ಚಾತ್ತಾಪದ ಕುಂಡದಲ್ಲಿ ಬೆಂದುಹೋದ. ಇಲ್ಲ, ಅಮ್ಮನಿಗೆ ನೆನಪಿನ ಶಕ್ತಿ ಬಾರದಿದ್ದರೂ ಪರವಾಗಿಲ್ಲ, ಅವಳು ಬದುಕಿರುವಷ್ಟು ದಿನ ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಇದೇ ನಾನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಎಂದು ನಿರ್ಧರಿಸಿದ. ಮನಸ್ಸಿಗೆ ಹಗುರವೆನಿಸಿ ಹಾಗೇ ಕಣ್ಮುಚ್ಚಿದ.

ಇಡೀ ದಿನ ಅಲೆದು ದಣಿದಿದ್ದ ಶ್ರಾವಣಿ, ಅಲೋಕ ಇಬ್ಬರಿಗೂ ಈ ಲೋಕದ ಪರಿವೆಯೇ ಇಲ್ಲದಷ್ಟು ಗಾಢ ನಿದ್ದೆ. ಬೆಳಗ್ಗೆ ಎದ್ದು ನೋಡಿದಾಗ ಭಾಗೀರಥಮ್ಮ ಹೋಟೆಲ್ ರೂಮಲ್ಲಿರಲಿಲ್ಲ. ಅಪ್ಪ, ಮಗಳು ಇಬ್ಬರೂ ವಾಪಸ್ ತುಂಬೆಪುರ, ಆನಂದನಪಾಳ್ಯಕ್ಕೆ ಹೋಗಿ ಭಗೀರಥಮ್ಮನಿಗಾಗಿ ಹುಡುಕಿದರು. ಎಲ್ಲೂ ಅವರ ಸುಳಿವು ಸಿಗಲಿಲ್ಲ. ಸುತ್ತಮುತ್ತಲ ಕೆರೆ, ಕಟ್ಟೆ, ಕಾಡು ಮೇಡು ಎಲ್ಲ ಸುತ್ತಿದ್ದಾಯಿತು. ಯಾವ ಪ್ರಯೋಜನವೂ ಆಗಲಿಲ್ಲ. ವಿಧಿ ಇಲ್ಲದೆ ಪೊಲೀಸ್ ಕಂಪ್ಲೇAಟ್ ಕೊಟ್ಟಿದ್ದೂ ಆಯಿತು. ಶ್ರಾವಣಿ ‘ಅಜ್ಜಿ ಇಲ್ಲದೆ ವಾಪಸ್ ಹೋಗಲ್ಲ’ ಎಂದು ಹಠ ಹಿಡಿದು ಅಳುತ್ತ ಕುಳಿತಳು. ಊರವರೊಬ್ಬರು “ದೊಡ್ಡ ಬಾರೆ ಮುಳಕಟ್ಟಮ್ಮನಿಗೆ ಹರಕೆ ಕಟ್ಕೊಳಿ. ನಿಮ್ಮಜ್ಜಿ ಸಿಕ್ರೂ ಸಿಗಬಹುದು” ಎಂದು ಶ್ರಾವಣಿಗೆ ಹೇಳಿದರು. ಅಜ್ಜಿಗಾಗಿ ಯಾರು ಏನು ಹೇಳಿದರೂ ಮಾಡಲು ಸಿದ್ಧವಾಗಿದ್ದ ಶ್ರಾವಣಿ ಮುಳಕಟ್ಟಮ್ಮನ ದೇವಸ್ಥಾನಕ್ಕೆ ಹೊರಟಳು.

ಆನಂದನಪಾಳ್ಯದಿಂದ ದೊಡ್ಡಬಾರೆಗೆ ಹೋಗಲು ಯಾವುದೇ ರಸ್ತೆ ಇರಲಿಲ್ಲ, ಅದಕ್ಕೊಂದು ಕಚ್ಚಾ ಕಾಡು ದಾರಿ ಇತ್ತು ಅಷ್ಟೇ. ಪಕ್ಕದ ಚಿಮ್ಮಸಂದ್ರ ಎಂಬ ಸಣ್ಣ ಹಳ್ಳಿಯಿಂದ ಈ ಕಾಡು ದಾರಿಯಲ್ಲೇ ಗುಡ್ಡ ಹತ್ತಿ ಬೆಟ್ಟದ ಮೇಲಿನ ಮುಳುಕಟ್ಟಮ್ಮನಿಗೆ ಹೋಗಬೇಕಿತ್ತು. ಅಲ್ಲಿ ಪೂಜೆ ಮಾಡುವ ಶಿವನಂಜಪ್ಪನ ಮನೆ ಇದ್ದದ್ದು ಈ ಚಿಮ್ಮನಹಳ್ಳಿಯಲ್ಲೇ! ಅವರಿಗೆ ವಿಷಯ ತಿಳಿಸಿ ಮರುದಿನ ಬೆಳಗಿನ ಜಾವವೇ ಶಿವನಂಜಪ್ಪನೊಂದಿಗೆ ಇಬ್ಬರೂ ಹೊರಟರು. ಕಾಡುಕಳೆಗಳು, ಮುಳ್ಳುಕಂಟಿಗಳ ನಡುವೆ ಅಂಕುಡೊAಕಾಗಿ ಸಾಗಿ ಹೋದ ಕಾಲು ದಾರಿಯದು. ಗುಡ್ಡದ ಮೇಲ್ಭಾಗಕ್ಕೆ ಬಂದಾಗ ಬಿಸಿಲು ಮೇಲೇರಿತ್ತು. ತೀರಾ ಕಡಿದಲ್ಲವಾದರೂ ಅಭ್ಯಾಸವಿಲ್ಲದ ಕಾರಣ ಅಲೋಕ, ಶ್ರಾವಣಿ ಇಬ್ಬರೂ ದಣಿದಿದ್ದರು. ಅಕ್ಕಪಕ್ಕದ ಮುಳ್ಳುಕಂಟಿಗಳು ಬಟ್ಟೆಗೆ ಸಿಕ್ಕಿಕೊಂಡು ತರಚು ಗಾಯಗಳಾಗಿದ್ದವು. ಪೂಜಾರಪ್ಪ “ಒಸಿ ಕೂತ್ಕಂಡು ದಣಿವಾರಿಸ್ಕಳಿ. ನಾನು ಅಮ್ಮನ ಗುಡಿ ಬಾಗ್ಲು ತೆಗೆದು ಪೂಜೆಗೆ ಸಿದ್ಧ ಮಾಡ್ತೀನಿ” ಎಂದು ಮುಂದೆ ಹೋದ. ಇಬ್ಬರೂ ಅಲ್ಲೇ ಇದ್ದ ಒಂದು ಕಲ್ಲಿನ ಮೇಲೆ ಕುಳಿತು ಸುತ್ತಾ ಕಣ್ಣಾಡಿಸಿದರು. ದೂರದ ಕೆರೆಕಟ್ಟೆಗಳು ಹೊಸ ಕೆಂಪುನೀರು ತುಂಬಿಕೊAಡು ಸೂರ್ಯನ ಬಿಸಿಲಿಗೆ ಹೋಮಕ್ಕೆ ಅಣಿಮಾಡಿದ ಅಗ್ನಿಕುಂಡಗಳಂತೆ ಕಾಣುತ್ತಿದ್ದವು. ಮಂಜು ಹೊದ್ದು ಮಲಗಿದ್ದ ಹಸಿರು ಕಾಡು ಸೂರ್ಯನ ಕಿರಣಕ್ಕೆ ಕರಗಿ ಆಕಳಿಸಿ ಎದ್ದು ಕೂತಿತ್ತು. ಆ ವಿಹಂಗಮ ದೃಶ್ಯ ನೋಡಿ ಇಬ್ಬರಿಗೂ ಸ್ವಲ್ಪ ಆಯಾಸ ಪರಿಹಾರವಾದಂತೆನಿಸಿತು. ಶ್ರಾವಣಿ ಕಾಲು ತೊಳೆದು ಬರುತ್ತೇನೆಂದು ಹೇಳಿ ಅಲ್ಲಿಂದ ಹೋದಳು. ಅಲೋಕ್ ಅಮ್ಮನ ಬಗ್ಗೆಯೇ ಯೋಚಿಸುತ್ತ ಕುಳಿತ.

* * *

ಅದೊಂದು ಕಂಬ ಸಾಲಿನ ಹಳೆಯ ಕಾಲದ ದೇವಾಲಯ. ಎರಡೂ ಬದಿಯಲ್ಲಿ ಬೇತಾಳಗಳ ಪ್ರತಿಮೆಯಿತ್ತು. ಗರ್ಭಗುಡಿಯಲ್ಲಿ ಅಮ್ಮನಿಗೆ ಅಲಂಕಾರ ಮಾಡಿ ಪೂಜಾರಪ್ಪ ಭಾಗೀರಥಮ್ಮನವರ ಹೆಸರಿನಲ್ಲಿ ಅರ್ಚನೆ ಮಾಡಿದರು. ಆರಡಿ ಎತ್ತರದ ನಿಂತ ಭಂಗಿಯ ಮುಳುಕಟ್ಟಮ್ಮನ ದಿವ್ಯ ರೂಪವನ್ನು ಇಬ್ಬರೂ ಕಣ್ತುಂಬಿಕೊಂಡರು. “ಅಮ್ಮ ತಾಯಿ, ನಿನ್ನನ್ನೇ ನಂಬಿ ಬಂದಿದೀನಿ. ನಮ್ಮಜ್ಜಿ ಎಲ್ಲೇ ಇದ್ರೂ ವಾಪಸ್ ಬರೋ ಹಾಗ್ ಮಾಡಮ್ಮ” ಎಂದು ಕೈಮುಗಿದು ಕೇಳಿಕೊಂಡಳು ಶ್ರಾವಣಿ. ಮಂಗಳಾರತಿಯೂ ಆಯಿತು. ಆರತಿ ತೆಗೆದುಕೊಳ್ಳುವಾಗ ಶ್ರಾವಣಿ ಕಣ್ಣಂಚಿನ ನೀರು ಕೆನ್ನೆಯ ಮೇಲೆ ಹರಿಯಿತು. ಹಾಗೇ ಸಮಾಧಾನ ಮಾಡಿಕೊಂಡು ಅಲ್ಲಿನ ಒಂದು ಕಂಬಕ್ಕೆ ಒರಗಿ ಕೂತಳು. ಆ ದಿವ್ಯ ಮೌನದೊಳಗೆ ಅವಳೊಳಗೇ ಒಂದು ಕಂಪನ ಶುರುವಾಯಿತು. ಆ ಶಕ್ತಿಯ ಸಾಕ್ಷಾತ್ಕಾರ ಮಾಡಿಕೊಳ್ಳಬೇಕೆನಿಸಿತೇನೋ? “ಸ್ವಲ್ಪ ಹೊತ್ತು ನಾನು ಇಲ್ಲೇ ರ‍್ತೀನಿ..” ಎಂದು ಕಣ್ಮುಚ್ಚಿ ಕುಳಿತುಬಿಟ್ಟಳು.

ಅಲೋಕ ಈಚೆ ಬಂದು ಸುತ್ತ ನೋಡುತ್ತಾ ನಿಂತ. ಆ ವೇಳೆಗೆ ಪೂಜಾರಪ್ಪನೂ ಈಚೆ ಬಂದ. “ಬನ್ನಿ, ಅಮ್ಮ ಇದ್ದ ಮೂಲ ಜಾಗ ತೋರುಸ್ತಿವ್ನಿ” ಅಂತ ಅಲೋಕನನ್ನು ಕರೆದುಕೊಂಡು ದೇವಸ್ಥಾನದ ಹಿಂದೆ ಒಂದಿಷ್ಟು ಕೆಳಗೆ ತಗ್ಗಿನಲ್ಲಿ ಇಳಿದು ಬಂದ. ಅಲ್ಲೊಂದು ಅರಳೀಮರ, ಬೋನ್ಸಾಯ್‌ನಂತೆ ಅಡ್ಡಡ್ಡ ಕೊಂಬೆಯೊಡೆದು ಹರಡಿ ನಿಂತಿತ್ತು, ಅದಕ್ಕೊಂದು ಕಟ್ಟೆ ಕಟ್ಟಿದ್ದರು.

“ನೋಡಿ ಸ್ವಾಮಿ, ಇದಕ್ಕೆ ಸುಮಾರು 200 ವರ್ಷ ಆಗರ‍್ಬಹುದು ಅಂತ ಹೇಳ್ತಾರೆ. ಮುಳಕಟ್ಟಮನ ಆವಾಸಸ್ಥಾನ ಇದೇ ಅಂತೆ. ಇಲ್ಲಿ ದೇವಸ್ಥಾನ ಕಟ್ಟಕ್ಕಾಗಲ್ಲ ಅಂತ ಅಮ್ಮನ ಅಪ್ಪಣೆ ತಗಂಡು ಮುಂದೆ ದೇವಸ್ಥಾನ ಕಟ್ಟವ್ರೆ, ಇದು ಶಾನೆ ಮಹಿಮೆ ಇರೋ ಜಾಗ.”

ಅಲೋಕ ಅಚ್ಚರಿಯಿಂದ ನೋಡಿದ. ಅದರ ಬಾಗಿದ್ದ ಕೊಂಬೆಯಲ್ಲಿ ಹಲವಾರು ಅರಿಶಿನ ಕುಂಕುಮ ಬಳಿದ ಚಿಕ್ಕ ಚಿಕ್ಕ ಗಂಟುಗಳು, ಪುಟ್ಟ ಪುಟ್ಟ ಕನ್ನಡಿಗಳ ಜೊತೆ ನೇತಾಡುತ್ತಿದ್ದವು. “ಇವೆಲ್ಲಾ ಏನು?” ಎಂದು ಕೇಳಿದ.

ಪೂಜಾರಪ್ಪ ವಿವರಣೆ ಕೊಟ್ಟ: “ಸ್ವಾಮಿ ಈ ಸುತ್ತಮುತ್ತ ನಡ್ಕಂಡು ಬಂದಿರೋ ಒಂದು ಸಂಪ್ರದಾಯ ಐತೆ. ಅಪ್ಪ ಅಮ್ಮ ಇಲ್ದೋವು, ಎಲ್ಲೋ ಸಿಕ್ದೋವು, ಬೇಡ ಅಂತ ಬುಟ್ಟೋದೋರು ಇಂಗೆ ಅನಾಥ ಮಕ್ಕಳನ್ ತಂದು ಇಲ್ಲಿಗೆ ಬುಡ್ತಾರೆ. ಯಾರಾರೂ ಸಾಕ್ಕಳೋರು ಇದ್ರೆ ಅಮ್ಮನ ಅಪ್ಪಣೆ ತಗಂಡು ಸಾಕ್ಕೊಬೋದು. ಅದು ಅಮ್ಮ ಅವ್ರಿಗೆ ಕೊಟ್ ಜವಾಬ್ದಾರಿ ಇದ್ದಂಗೆ. ಪ್ರತಿವರ್ಷ ಬಂದು ಆ ಮಗು ಹೆಸ್ರಲ್ಲಿ ಇಲ್ಲಿ ಈ ತರ ಗಂಟು ಕಟ್ಟಬೇಕು. ಇಲ್ಲಿ ಒಂದು ಸಾಲಿಗ್ರಾಮದ ತರ ನುಣ್ಣನೆ ಕಲ್ಲು ಸಿಗ್ತದೆ. ಅದು ಇಲ್ ಮಾತ್ರ ಸಿಗಾದು..”

ಕೆಳಗೆ ಬಿದ್ದದ್ದ ಒಂದು ನಾಲ್ಕು ನುಣುಪು ಕಲ್ಲುಗಳನ್ನು ಆಯ್ದು ಅಲೋಕನ ಕೈಗಿಟ್ಟ. ಅಲೋಕ ಅವನ್ನು ಅಂಗೈಲಿ ಹಿಡಿದು ಹಾಗೇ ನೋಡಿದ. ಈ ತರದ ಕಲ್ಲುಗಳನ್ನು ಎಲ್ಲೋ ನೋಡಿದ್ದೇನೆ ಎನಿಸಿತು. ಹಾಗೇ ಗೊಂದಲದಲ್ಲಿ ಮತ್ತೆ ಮತ್ತೆ ಅವನ್ನು ನೋಡಿದ. ಕಾಶಿಯಲ್ಲಿ ಬಾಬಾ ತನ್ನ ಮುಂದೆ ಇದೇ ತರದ ಕಲ್ಲುಗಳನ್ನು ಇಟ್ಟುಕೊಂಡಿದ್ದು ಆಚೀಚೆ ಸರಿಸುತ್ತಿದ್ದುದು ತಟ್ಟನೆ ನೆನಪಿಗೆ ಬಂತು.

ಪೂಜಾರಪ್ಪ ಮುಂದುವರಿಸಿದ: “ಇದನ್ನ ತೊಳೆದು ಪೂಜೆ ಮಾಡಿ ಅರಿಶಿನ ಕುಂಕಮದ ಬಟ್ಟೆಲಿ ಕನ್ನಡಿ ಜೊತೆ ಇಲ್ ಕಟ್ಬೇಕು. ಅಂಗಾದ್ರೆ ಆ ಮಕ್ಕಳಿಗೆ ಶ್ರೇಯಸ್ಸಾಗ್ತದೆ ಅನ್ನೋ ನಂಬಿಕೆ ಐತೆ..”

“ಇಷ್ಟೊಂದು ಜನ ರ‍್ತಾರಾ?”

“ಇಲ್ಲ ಸ್ವಾಮಿ, ನಮ್ಮಪ್ಪನ ಕಾಲ್ದಲ್ಲಿ ಬತ್ತಿದ್ರಂತೆ. ಈಗ ಎಲ್ಲೋ ಅಪರೂಪಕ್ಕೆ ಒಬ್ರು ಬತ್ತಾರೆ. ಮೊನ್ನೆ ಯಾರು ಬಂದಿದ್ರೋ ಗೊತ್ತಿಲ್ಲ. ಎಷ್ಟು ವರ್ಷ ಆಗಿತ್ತೋ ಏನ್ ಕತೆನೋ? ಒಟ್ಟಿಗೆ ಈಟೊಂದು ಗಂಟು ಕಟ್ ಹರಕೆ ತರ‍್ಸಿ ಓಗವ್ರೆ.”

ಅಲೋಕನಿಗೆ ಒಂದು ಕ್ಷಣ ಶಾಕ್ ಹೊಡೆದಂತಾಯಿತು. ಹಾಗೇ ಗಂಟುಗಳನ್ನು ಎಣಿಸಿದ. 23 ಗಂಟುಗಳು! ‘ಅಮ್ಮಾ..’ ಎನ್ನಲು ಹೋದವನಿಗೆ ಧ್ವನಿ ಗಂಟಲಲ್ಲೇ ಸಿಕ್ಕಿಕೊಂಡಂತಾಗಿ ನಾಲಿಗೆ ಬಿದ್ದು ಹೋದವನಂತೆ ನಿಂತ. ತಲೆ ಗರ‍್ರನೆ ಸುತ್ತಲಾರಂಭಿಸಿತು. ನೇತಾಡುತ್ತಿದ್ದ ಕನ್ನಡಿಗಳು ಗಾಳಿಗೆ ಹೊಯ್ದಾಡಿದವು. ಅವುಗಳಲ್ಲಿ ತಾನು, ಬಾಬಾ, ಅಮ್ಮ, ಶ್ರಾವಣಿ ಎಲ್ಲರ ಬಿಂಬಗಳು ಹಾದುಹೋದವು. ಅಮ್ಮನನ್ನು ನೂಕಿದ್ದು, ಅವಳಿಗೆ ನೆನಪಿನ ಶಕ್ತಿ ಹೋದದ್ದು, ಅವಳನ್ನು ಕಾಶಿಗೆ ಕರೆದೊಯ್ದದ್ದು, ಅಲ್ಲಿನ ಬಾಬಾ, ವಿಶ್ವನಾಥ, ಅಲ್ಲಿಂದ ಹಳ್ಳಿಗೆ ಬಂದದ್ದು, ಹಳೆಯ ನೆನಪುಗಳು ಎಲ್ಲವೂ ಗರಗರನೆ ಸುತ್ತಿ ಒಂದಕ್ಕೊಂದು ಕಲಸು ಮೇಲೋಗರವಾಗಿ ಅವನ್ನೆಲ್ಲ ಉಕ್ಕಿ ಬಂದ ಗಂಗಾನದಿ ಎತ್ತಿ ಹೊತ್ತೊಯ್ದಂತಾಗಿ ತೂರಾಡಿ ತಲೆ ಹಿಡಿದು ಕುಸಿದು ಕುಳಿತ. ಒಳಗೆ ಕಣ್ಮುಚ್ಚಿ ಕುಳಿತಿದ್ದ ಶ್ರಾವಣಿ ತಟ್ಟನೆ ಕಣ್‌ಬಿಟ್ಟಳು. ತೇಜಸ್ಸೊಂದು ಮುಳಕಟ್ಟಮ್ಮನ ಮೇಲೆ ಆವಾಹನೆಯಾಗಿ ಅದು ತನ್ನಜ್ಜಿಯ ರೂಪ ತಾಳಿ ನಕ್ಕು ಮರೆಯಾಯಿತು. ಶ್ರಾವಣಿ ಅಳುತ್ತಲೇ ಕೈ ಮುಗಿದಳು.

***

Facebook
X
WhatsApp
Print
Email
Leave A Reply