ಭಗವನ್ನಾಮವನ್ನು ಮನಸ್ಸಿನಲ್ಲಿ ಅಥವಾ ಉಚ್ಚಾರ ಮಾಡಿ ತೆಗೆದುಕೊಳ್ಳಲು ಬರುತ್ತದೆ. ಯಾವಾಗಲೂ ನಾಮದಲ್ಲಿಯೇ ಇರಬೇಕು ಅಂದರೆ ಅಂತಃಕರಣವುಶುದ್ಧವಾಗುತ್ತದೆ. ಅಂತಃಕರಣವು ಶುದ್ಧವಾಯಿತೆಂದರೆ ಭಗವತ್ಪ್ರೇಮ ಬರುತ್ತದೆ.
ಕೇವಲ ಬಹಳಷ್ಟು ಜಪ ಮಾಡುವುದಕ್ಕಿಂತ ವಿವೇಕ ಹಾಗೂ ವಿಚಾರದಿಂದ ಉಂಟಾದ ಪ್ರೇಮವು ನಾಮದಲ್ಲಿರಬೇಕು. ಹಾಗೆ ನೋಡಿದರೆ ನಾಮದಲ್ಲಿಯೇ ನಾಮದ ಪ್ರೇಮವಿರುತ್ತದೆ. ಮಜ್ಜಿಗೆಯಲ್ಲಿ ಬೆಣ್ಣೆ ಇದ್ದೇ ಇರುತ್ತದೆ. ಆದರೆ ಅದು ಮೇಲೆ ಕಾಣುವುದಿಲ್ಲ. ಮಜ್ಜಿಗೆ ಕಡೆಯುವುದರಿಂದ ಅದು ಮೇಲೆ ಬರುತ್ತದೆ. ಅದರಂತೆ ನಾವು ಕೇವಲ ಭಗವಂತನ ನಾಮ ತೆಗೆದುಕೊಳ್ಳುವುದರಿಂದ ಭಗವತ್ಪ್ರೇಮವು ತಾನಾಗಿಯೇ ಮೇಲೆ ಬರುತ್ತದೆ. ಸಾಮಾನ್ಯಶಬ್ದಗಳದ್ದೂ ಕೂಡ ನಮ್ಮ ವೃತ್ತಿಗಳ ಮೇಲೆ ಪರಿಣಾಮವಾಗಿ ಆ ಶಬ್ದಗಳಿಗನುಸಾರವಾದ ಭಾವವು ಮನಸ್ಸಿನಲ್ಲಿ ಜಾಗೃತವಾಗುತ್ತದೆ. ಅಂದಮೇಲೆ ಭಗವಂತನ ನಾಮದಿಂದ ಭಗವತ್ಪ್ರೇಮ ಹೇಗೆ ತಾನೆ ಬರಲಿಕ್ಕಿಲ್ಲ?
ಬಹಳಷ್ಟು ದಿವಸ ಒಂದು ಮನೆಯಲ್ಲಿ ಇರುವುದರಿಂದ ಆ ಮನೆಯ ಬಗ್ಗೆ ನಮಗೆ ಪ್ರೇಮ ಬರುತ್ತದೆಯಲ್ಲ! ಪ್ರಪಂಚದ ಪ್ರೇಮವು ನಮಗೆ ಸಹವಾಸದಿಂದ ಬರುತ್ತದೆ. ಅದೇ ರೀತಿನಾಮದ ಅಖಂಡ ಸಹವಾಸದಿಂದ ನಾಮದ ಪ್ರೇಮ ತಾನಾಗಿಯೇ ಬರುತ್ತದೆ.
ಯಾವಾಗಲೂ ಉತ್ತಮವಾದದ್ದನ್ನು ಸಾಧಿಸುವುದು ಕಠಿಣವಾಗುತ್ತದೆ. ಆದರೆ ಅತ್ಯಂತ ಕಡಮೆ ಶ್ರಮದಿಂದ ಬಹಳಷ್ಟು ಸಾಧಿಸಿಕೊಡುವುದರಲ್ಲಿ ನಾಮಸ್ಮರಣೆಯಂಥ ಬೇರೆ ಸಾಧನೆ ಇಲ್ಲ. ಆದ್ದರಿಂದ ಯಾವಾಗಲೂ ನಿಯಮದಿಂದ ನಾಮ ತೆಗೆದುಕೊಳ್ಳುತ್ತಿರಬೇಕು.
[ಸದ್ಗುರು ಮಹಾರಾಜರ ಪ್ರವಚನದಿಂದ.
ಅನುವಾದ: ದತ್ತಾತ್ರೇಯ ಅವಧೂತರು.
ಕೃಪೆ: ಚೈತನ್ಯಾಶ್ರಮ, ಹೆಬ್ಬಳ್ಳಿ.]





