ಬಿದ್ದವರೆದ್ದಾಗ…


ಬೆಳಗಿನ ಚಳಿಗೆ ಇನ್ನೂ ಮುದುರಿಕೊಂಡು ಮಲಗಿಯೇ ಇದ್ದ ಮಹೇಶನನ್ನು ಎಬ್ಬಿಸುವಾಗ ರಾಜಶೇಕರನಿಗೆ ’ಅಯ್ಯೋ’ ಎನ್ನಿಸಿಬಿಟ್ಟಿತು. ’ಹೋಗಲಿ’ ಎಂದು ಬಿಟ್ಟುಹೋಗುವಂತೆಯೂ ಇಲ್ಲ. ನಿನ್ನೆ ಫೋನ್ ಮಾಡಿದ್ದಾಗ ಮಾಲಕ್ಸ್ಮಿ “ಮರೀದೆ ಮಯೇಸನ್ನ ಕರ‍್ಕಬಾ. ಅವನ್ನ ನೋಡೋಂಗಾಗದೆ ಅಂತಿದಾನೆ ಅವನಪ್ಪ” ಎಂದು ಎರಡೆರೆಡು ಸಲ ಒತ್ತೊತ್ತಿ ಹೇಳಿದ್ದಳು. ಇಷ್ಟು ಸಣ್ಣ ಹುಡುಗನನ್ನು ಅಂತಹ ಆಸ್ಪತ್ರೆಗೆ ಕರೆದುಕೊಂಡು ಹೋಗಲು ರಾಜಶೇಕರನಿಗೆ ಸುತಾರಾಂ ಮನಸ್ಸಿಲ್ಲ. ಹಾಗೆಂದೇ ಪ್ರತಿಸಲವೂ ಅವನನ್ನು ಪಕ್ಕದ ಮನೆಯ ತಿಮ್ಮಜ್ಜಿಯ ಬಳಿ ನೋಡಿಕೊಳ್ಳುವಂತೆ ಹೇಳಿ ಬಿಟ್ಟುಹೋಗುತ್ತಿದ್ದ. ’ಆದರೂ ಯಾಕೋ ಒಂದ್ಸಲ ತಂದೆ-ಮಗ ಒಬ್ರನೊಬ್ರು ನೋಡ್ಕೊಬಿಡ್ಲಿ’ ಎನ್ನಿಸಿದ್ದಕ್ಕೆ ಅಕ್ಕನ ಒತ್ತಾಯದ ಮಾತೂ ಸೇರಿ ಅವನನ್ನು ಕರೆದೊಯ್ಯುವ ಮನಸ್ಸು ಮಾಡಿದ್ದ.
“ಮಯೇಸು, ಏಳಪ್ಪಾ ರಾಜ. ಪ್ಯಾಟೆಗೋಗಿ ಅಲ್ಲಿ ನಿಮ್ಮಪ್ಪನ ನೋಡ್ಕಾಬರಾನಂತೆ. ಏಳ್‌ಕಂದಾ. ಏಳೂವರೆ ಬಸ್ ಬುಟ್ರೆ ಮತ್ತೆ ಅತ್ತೂವರೆ ಬಸ್ಸೇ ಸಿಗಾದು. ವೋಗೋವತ್ಗೆ ಮದ್ದಿನ ಆಗೋಯ್ತದೆ” ಎಂದು ಅಲುಗಾಡಿಸಿ ಎಚ್ಚರಿಸಲು ನೋಡಿದ. “ನಾ ಬರಾಕುಲ್ಲ, ತಿಮ್ಮಜ್ಜಿ ತಾವಿದ್ಗತೀನಿ” ಎಂದು ಮತ್ತೆ ಮುದುರಿಕೊಂಡವನನ್ನು ರಾಜಶೇಕರ ಬಲವಂತದಿಂದ ಎತ್ತಿಕೊಂಡು ಬಚ್ಚಲಿಗೆ ಕರೆದುಕೊಂಡು ಹೋಗಿ ಮುಖಕ್ಕಿಷ್ಟು ತಣ್ಣೀರೆರೆಚಿದಾಗ ಅಂತೂ ಮಹೇಶ ಕಣ್ಣುಬಿಟ್ಟ. “ನಾ ಬರಾಕಿಲ್ಲ, ನೀವೋಗ್ಬಾ” ಎನ್ನುತ್ತಿದ್ದವನನ್ನು ಬಲವಂತದಿಂದ ಹಿತ್ತಲಲ್ಲಿ ಕೂರಿಸಿ ಬಂದ. ಅಷ್ಟರಲ್ಲಿ ರೊಟ್ಟಿ ಬುತ್ತಿಯನ್ನು ತಂದ ತಿಮ್ಮಜ್ಜಿ “ಎಂಗವ್ನಪ್ಪಾ ನಿಂ ಭಾವ. ಇನ್ನೂ ಎಸ್ಟ್ ದಿನ್ವಂತೆ ಆಸ್ಪತ್ರೆನಾಗೆ” ಎಂದಾಗ “ಯಾರಿಗ್ಗೊತ್ತಜ್ಜಿ. ನಮ್ಗೂ ಸಾಕಾಗೋಗದೆ. ವರ್ಸವಾಯ್ತು ಆಸ್ಪತ್ರೆಗೂ ಮನಿಗೂ ಓಡಾಡ್ತಾ. ನಂಗೇನೋ ಅವ್ನು ಉಸಾರಾಗ್ತಾನೆ ಅನ್ನೋ ನಂಬಿಕ್ಯೇ ಒಂಟೋಗದೆ. ಮಾಲಕ್ಸ್ಮಿಗೆ ಗಂಡನಲ್ವೇ. ಅಂಗನ್ಕಳಕ್ಕೆ ಕಸ್ಟವಾಯ್ತದೆ. ಇವತ್ತೇನೋ ಮಗನ್ನ ನೋಡ್ಬೇಕು ಅಂತಿದ್ನಂತೆ. ಅದ್ಕೆ ಕರ‍್ಕಂಡು ವೊಂಟಿವ್ನಿ” ಎನ್ನುತ್ತಿರುವಾಗ ಹಿತ್ತಲಿಂದ ಮಹೇಶ “ಮಾವ ಆಯ್ತು…” ಎಂದು ಕಿರುಚಿದ್ದು ಕೇಳಿ “ಬಂದೆ ಕಣ್ಲಾ” ಎನ್ನುತ್ತಾ ಹಿತ್ತಲಿಗೋಡಿದ.
* * *
ಅಮ್ಮ ನಂಜಮ್ಮ, ತಮ್ಮ ಮಾದೇಸ, ತಂಗಿ ಸುಸೀಲ ಎಲ್ಲರೂ ವಾರದ ಹಿಂದೆ ಆಸ್ಪತ್ರೆಗೆ ಹೋದವರು ಮಾಲಕ್ಸ್ಮಿಯ ಜೊತೆಗೇ ಇದ್ದಾರೆ. ವಾರ್ಡಿನಲ್ಲಿ ಒಬ್ಬರನ್ನೇ ಬಿಡುವುದು. ಎಲ್ಲರೂ ಸರದಿಯ ಮೇಲೆ ಒಬ್ಬರಾದ ಮೇಲೊಬ್ಬರು ಒಳಗೆ ಹೋಗಿ ಕುಳಿತಿರುತ್ತಾರೆ; ಮಿಕ್ಕವರು ಮರದ ನೆರಳಿನಲ್ಲಿ ಕೂತು ಕಣ್ಣನ್ನು ಆಸ್ಪತ್ರೆಯೆಡೆಗೇ ನೆಟ್ಟಿರುತ್ತಾರೆ. ಯಾರಿಗೂ ಮಾತುಕತೆ ಏನೂ ಬೇಕಿಲ್ಲ; ನಂಜುಂಡನನ್ನು ವಾಪಸ್ಸು ಕರೆದುಕೊಂಡು ಊರಿಗೆ ಎಂದು ಹೋಗುವುದೋ ಎನ್ನುವ ಚಿಂತೆಯಲ್ಲೇ ಅವರೆಲ್ಲರ ಹಗಲು-ರಾತ್ರಿಗಳು ಉರುಳಿಹೋಗುತ್ತಿವೆ. ರಾಜಶೇಕರನೊಬ್ಬ ಎರಡು ದಿನಕ್ಕೊಮ್ಮೆ ಎಲ್ಲರಿಗೂ ಎರಡು ಹೊತ್ತಿಗೂ ಆಗುವಷ್ಟು ರೊಟ್ಟಿಯನ್ನು, ಖಾರವನ್ನು ತಿಮ್ಮಜ್ಜಿಯಿಂದ ಮಾಡಿಸಿಕೊಂಡು ಊರಿಗೂ ಪಟ್ಟಣದ ಆಸ್ಪತ್ರೆಗೂ ಓಡಾಡಿಕೊಂಡಿದ್ದಾನೆ. ತಿಮ್ಮಜ್ಜಿಯೂ ಪಾಪ ಇದನ್ನೊಂದು ಸೇವೆ ಅನ್ನುವ ಹಾಗೆ ವರ್ಷದಿಂದಲೂ ಮಾಡಿಕೊಂಡು ಬಂದಿದ್ದಾಳೆ.
ಮನೆಯವರೆಲ್ಲರಿಗೂ ನಂಜುಂಡನನ್ನು ಹುಷಾರು ಮಾಡಿಸಿಕೊಂಡು ಮನೆಗೆ ಕರೆದುಕೊಂಡು ಹೋಗುತ್ತೇವೆನ್ನುವ ಆಸೆಯಲ್ಲಿದ್ದರೆ ರಾಜಶೇಕರನಲ್ಲಿ ಯಾವ ಆಸೆಯೂ ಉಳಿದಿರಲಿಲ್ಲ. ವರ್ಷದಿಂದ ಭಾವನ ಚಿಕಿತ್ಸೆಗೆ ದುಡ್ಡು ಹೊಂಚಿ ಹೊಂಚಿ ಸುಸ್ತಾಗಿದ್ದಾನೆ. ಜರಡಿಯಲ್ಲಿ ಸುರಿದ ನೀರಿನಂತೆ ಎಷ್ಟು ದುಡ್ಡು ತಂದು ಸುರಿದರೂ ಸಾಕಾಗುತ್ತಿಲ್ಲ. ಆಸ್ಪತ್ರೆಗೆ, ಮನೆಗೆ ಎಡತಾಕುತ್ತಾ ಇದ್ದ ಎರಡೆಕರೆ ಹೊಲ, ಊರಂಚಿನಲ್ಲಿದ್ದ ಸೈಟು, ಪೇಟೆಯಲ್ಲಿದ್ದ ಮಳಿಗೆ ಎಲ್ಲವನ್ನೂ ನೀಗಿ ನೀರು ಕುಡಿದಿದ್ದಾಯಿತು. ಬಕಾಸುರನ ಹೊಟ್ಟೆಗೆ ಯಾವುದೂ ಈಡಾಗುತ್ತಿಲ್ಲ. ಒಂದೊಂದು ಇಂಜೆಕ್ಷನ್ನಿಗೇ ಸಾವಿರಾರು ರೂಪಾಯಿಗಳು. ಅಷ್ಟೊಂದು ಔಷದ ಕುಡಿಯುತ್ತಿರುವ ಜೀವ ಉಳಿದಾತಾ ಎಂದವನಿಗೆ ಚಿಂತೆಯಾಗುತ್ತದೆ.
ಮಾರಲು ಇನ್ನೇನೂ ಉಳಿದಿಲ್ಲ, ಅವನ ಜೀವ ಉಳಿದರೆ ಸಾಕು ಎಂದು ಚಿಂತಿಸುತ್ತಿರುವಾಗಲೇ ನಿನ್ನೆ ಮಾಲಕ್ಸ್ಮಿ “ಸೇಕ್ರು ಎಂಗಾರ ಮಾಡಿ ಇನ್ನೊಂದು ಮೂವತ್ತು ಸಾವ್ರ ವೊಂಚಾಕಾದ್ದಾ ನೋಡೋ. ನಾಳಿಕೆ ದುಡ್ಡು ಕಟ್ಟಿದ್ರೆ ದಾಕ್ಟ್ರು ನೋಡ್ತರೆ; ಏನಾ ವಸಾ ಇಂಜಿಕ್ಸನ್ ಬಂದದಂತೆ, ಬಾರಿ ಒಳ್ಳೆದಂತೆ. ಅದ್ನ ಕೊಡ್ತರಂತೆ. ’ಇಲ್ಲಾದ್ರೆ ನಿಮ್ಮಿಷ್ಟ; ಅಂಗೇ ಕರ‍್ಕಂಡೋಗಿ. ಇದ್ದಷ್ಟು ದಿನ ಇರ‍್ತಾರೆ’ ಅಂದವ್ರೆ. ಅವ್ರ ಕಳ್ಕಂಡು ನಾನೆಂಗೋ ಬದ್ಕಿರ‍್ತೀನಿ. ಏನಾರಾ ಮಾಡೋ. ಅವ್ರು ಉಸಾರಾದ್ಮೇಲೆ ನಾವಿಬ್ರೂ ಎಂಗಾರಾ ಗೇದು ನಿನ್ನ ರಿಣ ತೀರಿಸ್ತೀವ್ಕಣೋ” ಎಂದು ಗೊಳೋ ಎಂದು ಅತ್ತಿದ್ದಳು. ಅವಳಿಗೂ ಗೊತ್ತಿದೆ ಮಾರಲು ತನ್ನ ಬಳಿ ಇನ್ನೇನೂ ಉಳಿದಿಲ್ಲ ಎಂದು; ಆದರೂ ತಮ್ಮ ಏನೋ ಮಾಡುತ್ತಾನೆನ್ನುವ ಭರವಸೆಯಿಂದ ಕೇಳಿದ್ದಳು. ನಂಜಮ್ಮ ತನ್ನ ಮದುವೆಯಲ್ಲಿಟ್ಟಿದ್ದ, ಮುಂದೆ ಬರಲಿರುವ ಸೊಸೆ ರಾಜಶೇಕರನ ಹೆಂಡತಿಗೆಂದು ನಿಧಿಯಂತೆ ಕಾಪಾಡಿಕೊಂಡಿದ್ದ ವಾಲೆ ಝುಮುಕಿಯನ್ನು ನಿನ್ನೆ ತೆಗೆದು ಅಕ್ಕಸಾಲಿ ಭರಮ ನಾಯ್ಕನಿಗೆ ಮಾರಿ ದುಡ್ಡು ಹೊಂದಿಸಿ ತಂದಾಯಿತು. ಮತ್ತೂ ದುಡ್ಡೆಂದರೆ ತನ್ನನ್ನೇ ಮಾರಿಕೊಳ್ಳಬೇಕಷ್ಟೇ ಎಂದು ನಿಟ್ಟುಸಿರು ಬಿಟ್ಟನಷ್ಟೇ.
ಹೊತ್ತಾಗಿಹೋಯಿತೆಂದು ಸರಸರನೆ ಮಹೇಶನಿಗೂ ಬಟ್ಟೆ ಹಾಕಿ, ತಾನೂ ತಯಾರಾಗಿ, ರೊಟ್ಟಿ ಬುತ್ತಿಯನ್ನೆತ್ತಿಕೊಂಡು, ಇಬ್ಬರೂ ಬಸ್‌ಸ್ಟಾಪಿನೆಡೆಗೆ ಓಡಿದರು. ಪುಣ್ಯಕ್ಕೆ ಇನ್ನೂ ಬಸ್ಸು ಬಂದಿರಲಿಲ್ಲ. ಪೇಟೆಗೆ ಹೊರಟಿದ್ದ ಕೆಂಪೇಗೌಡ್ರು, ನೀಲಜ್ಜ, ಕರಿಯ ಎಲ್ಲರೂ ನಂಜುಂಡನ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡರು. ’ಅಯ್ಯೋ ಪಾಪ!’ ಎಂದು ಸಂತಾಪವನ್ನೂ ವ್ಯಕ್ತಪಡಿಸಿದರು. ಅವರು ತಾನೇ ಇನ್ನೇನು ಮಾಡಲು ಸಾಧ್ಯ?! ಅರ್ಧಗಂಟೆ ತಡವಾಗಿ ಬಸ್ಸು ಬಂತು. ಕಾಯುತ್ತಾ ನಿಂತಿದ್ದವರೆಲ್ಲರೂ ಸರಸರನೆ ಹತ್ತಿ ಒಳತೂರಿಕೊಂಡರು. ರಾಜಶೇಕರ ಒಂದು ಕೈಯಲ್ಲಿ ಮಹೇಶನನ್ನೆತ್ತಿಕೊಂಡು, ಇನ್ನೊಂದು ಕೈಯಲ್ಲಿ ಬುತ್ತಿಯನ್ನು ಹೊತ್ತು ಬ್ಯಾಲೆನ್ಸ್ ಮಾಡುತ್ತಾ ನಿಂತಿರುವಾಗ ಪಕ್ಕದ ಸೀಟಿನಲ್ಲಿದ್ದ ಮುದುಕಿ “ಮೊಗಾನ ಇತ್ಕಡೆ ಕೊಡಪ್ಪ; ನೀನ್ ಮ್ಯಾಲಿನ ಕುಣ್ಕೆ ಇಡ್ಕಂಡು ಜ್ವಾಪಾನ್ವಾಗಿ ನಿಂತ್ಕ. ಬಿದ್ದೋಗೀಯೇ” ಎನ್ನುತ್ತಾ ಮಹೇಶನನ್ನು ಕರೆದುಕೊಂಡಳು.
“ನಿನ್ ಮಗ್ನಾ” ಆ ಮುದುಕಿ ಮಾತಿಗೆಳೆದಳು. “ಇಲ್ಲ ನಮ್ಮಕ್ಕಂದು” ಚುಟುಕಾಗಿ ಉತ್ತರಿಸಿದ. “ಮಂತೆ ಅವ್ಳೆಲ್ಲಿ?” ’ಈ ಮುದ್ಕಿಗೆ ಪೂರಾ ರಾಮಾಣ್ಯವೇ ಬೇಕು’ ಎಂದು ತುಸು ಬೇಸರವಾದರೂ ಅವಳು ಮಹೇಶನನ್ನು ತೊಡೆಯ ಮೇಲೆ ಕೂರಿಸಿಕೊಂಡ ದಾಕ್ಷಿಣ್ಯಕ್ಕೆ ಪಕ್ಕಾಗಿ “ನಂಭಾವ ಆಸ್ಪತ್ರೆಗೆ ಅಡ್ಮಿಟ್ ಆಗವ್ರೆ. ಅವ್ಳು ಅವ್ರನ ನೋಡ್ಕಂತವ್ಳೆ” ಎಂದ. ಅಷ್ಟಕ್ಕೆ ಬಿಡದವಳು “ಯಾನು ಕಾಯಿಲ್ಯೋ. ಯಾವಾಸ್ಪೆಟ್ಲು” ಮತ್ತೆ ಕೇಳಿದಳು. “ಮಆತ್ಮ ಗಾಂಜಿ ಆಸ್ಪಿಟ್ಲು. ವರ್ಸದಿಂದ ನೋಡ್ತಾವ್ರೆ; ಇನ್ನೂ ಖಾಯ್ಲೆ ಏನೂಂತ ಕಂಡಿಡಿಯಾದ್ರಾಗೇ ಇದಾರೆ”. “ವೋ… ಆ ಆಸ್ಪತ್ರಿಯಾ. ದ್ವಡ್ಡ ಕಾಯ್ಲೇನೆ ಅಂಗಾರೆ. ’ಮಆತ್ಮನ ಎಸರಿಟ್ಕಂಡು ಸುಲ್ಗೆ ಮಾಡ್ತಾವ್ರೆ. ಅಲ್ಲಿ ಜನೊಗ್ಳ ಬೆವ್ರನಲ್ಲ; ಜೀವಾನೇ ಈರಿಬಿಡ್ತಾರೆ? ಅಂತ ಕೇಳಿದೀನಲ್ಲಪೋ. ಆಸ್ತಿ ಪಾಸ್ತಿ ಉಳ್ದಾವ, ಇಲ್ಲಾ ವೆಲ್ಲಾ ಸೀದುದ್ದಾಯ್ತಾ” ಎಂದದ್ದಕ್ಕೆ ರಾಜಶೇಕರ ಒಣನಗೆ ನಕ್ಕು ಸುಮ್ಮನಾದ. ಆ ಮುದುಕಿ ಬಿಡದೆ ಊರು ಬರುವವರೆಗೆ ಅದೂ ಇದೂ ಮಾತಾಡುತ್ತಲೇ ಇತ್ತು.
ಮೊದಲ ಸ್ಟಾಪಿನಲ್ಲೇ ಇಳಿಯಬೇಕಿತ್ತು. ಬಸ್ ನಿಂತ ತಕ್ಷಣ “ಬರ‍್ತೀನ್ ಕಣಜ್ಜಿ. ಬೋಉಪ್ಕಾರವಾಯ್ತು ನಿನ್ನಿಂದ” ಎನ್ನುತ್ತಾ ಮಹೇಶನನ್ನೆತ್ತಿಕೊಂಡು ಕೆಳಗಿಳಿದ. ಅಲ್ಲಿಂದ ಐದು ನಿಮಿಷವಷ್ಟೇ. ಇನ್ನೆಷ್ಟು ದಿನ ಈ ಅಲೆದಾಟವೋ ಎನ್ನಿಸಿಬಿಟ್ಟಿತು ಅವನಿಗೆ. “ಮಾವ ಹಸಿವಾಯ್ತಿದೆ” ಎಂದ ಮಹೇಶ. ಪಾಪ! ಬೆಳಗ್ಗೆದ್ದ ತಕ್ಷಣ ವೊಟ್ಟೆ ಖಾಲಿ ಮಾಡ್ಕಂಡು ಬಂದದೆ. ತಿಮ್ಮಜ್ಜಿ ಮನೇಲಿದ್ದಿದ್ರೆ ಏನಾರಾ ವಂದಿಷ್ಟು ವೊಟ್ಟೆಗಾಕಿರೋಳು? ಎಂದುಕೊಂಡ ರಾಜಶೇಕರ ಅಲ್ಲೇ ಇಡ್ಲಿ ಮಾರುತ್ತಿದ್ದ ಗಾಡಿಯವನಿಂದ ಎರಡು ಇಡ್ಲಿಯನ್ನು ಮುತ್ತುಗದೆಲೆಯಲ್ಲಿ ಹಾಕಿಸಿಕೊಟ್ಟ. “ನಿಂಗ್ಮಾವ?” ಮಹೇಶನೆಂದಾಗ “ನಂಗ್ ಅಸೀತಿಲ್ಲ ಮಗಾ; ನೀ ತಿನ್ಕಾ” ಎಂದ ರಾಜಶೇಕರ. ’ಜೇಬ್ನಾಗೆ ಉಳ್ಕಂಡಿರೋ ಕಾಸು ಮಳ್ಳಿವೋಗಕ್ಬೇಕಲ್ಲ’ ಎಂದು ಲೆಕ್ಕ ಹಾಕಿಕೊಂಡು ಹೊಟ್ಟೆಯ ಕಲಮಲವನ್ನು ತಡೆದುಕೊಂಡು ಅವನಿಗೆ ತಿನ್ನಿಸತೊಡಗಿದ. ಮೂರೊರ‍್ಸದ ಮಗ. ಜಗತ್ತೇನು ಕಂಡೈತೆ! ಅಕಸ್ಮಾತ್ ಅಪ್ಪನ್ನ ಕಳ್ಕಂಡೇ ಬುಟ್ರೆ… ಆಸ್ತಿಪಾಸ್ತಿ ಎಲ್ಲಾ ನುಂಗ್‌ನೀರ‍್ಕುಡುದೋಗದೆ. ಇವ್ನ ದೊಡ್ಡೋನ್ಮಾಡೋದೆಂಗೆ? ಇನ್ಮುಂದಕೆ ತನಗಾದ್ರೂ ದುಡ್ಯೋ ದಾರ‍್ಯೇನು? – ಎನ್ನಿಸಿ ಕಣ್ಣಲ್ಲಿ ನೀರಾಡಿತು. ಹೊದ್ದಿದ್ದ ಟವಲಿನಿಂದ ಒರೆಸಿಕೊಂಡ. “ಮಾವ ಅಳ್ತಿದ್ಯಾ” ಎಂದು ಮಹೇಶ ಕೇಳಿದ್ದಕ್ಕೆ “ಇಲ್ಕನಾ. ಕಣ್ಣಾಗೇನೋ ದೂಳ್ಬಿತ್ತು” ಎನ್ನುತ್ತಾ ತಿಂದೆಲೆಯನ್ನು ಮುದಿರೆಸೆದು ಗಾಡಿಯವನ ಹತ್ತಿರವೇ ನೀರು ಪಡೆದುಕೊಂಡು ಅವನ ಮೂತಿ ತೊಳೆಸಿ, ಒಂದಷ್ಟನ್ನು ಕುಡಿಸಿ ಅಲ್ಲಿಂದ ಕರೆದುಕೊಂಡು ಹೊರಟ.
ಮಾಮೂಲಿ ಮರದ ಕೆಳಗೆ ನಂಜಮ್ಮ, ಸುಸೀಲ, ಮಾಲಕ್ಸ್ಮಿ ಎಲ್ಲರೂ ಕಾಯುತ್ತಾ ಕುಳಿತಿದ್ದರು. ಇವನನ್ನು ದೂರದಿಂದ ನೋಡಿದವಳೇ ಮಾಲಕ್ಸ್ಮಿ ಎದ್ದುಬಂದು “ಕಾಸ್ ತಂದ್ಯಾ ಸೇಕ್ರು” ಎನ್ನುತ್ತಾ ದೇಹವನ್ನಿಷ್ಟು ಮಾಡಿಕೊಂಡು ಕೇಳಿದಳು. “ತಂದಿವ್ನಿ ಕಣವ್ವ” ಎನ್ನುತ್ತಾ ಒಳಗಿನ ಚಡ್ಡಿ ಜೇಬಿನಿಂದ ತೆಗೆದು ಎಣಿಸಿಕೊಟ್ಟ. “ಕಟ್ಬುಟ್ ಬಂದ್ಬಿಡ್ತಿನಿ. ಈಗತ್‌ಗಂಟೆಗೆ ದಾಕುಟ್ರು ಬರ‍್ತರೆ. ವಸಾ ಇಂಜಿಕ್ಸನ್ ಚುಚ್ಚುದ್ಮೇಕಾದ್ರೂ ವಾಸ್ಯಾದ್ರೆ ಸಾಕು. ನಂಜುಂಡೇಸ್ವರನಿಗೆ ಮುಡಿಕೊಟ್ಟೇನು” ಎಂದುಕೊಳ್ಳುತ್ತಾ ಯಾವುದೋ ಭರವಸೆಯೊಂದಿಗೆ ಅವಸರವಸರದಿಂದ ಆಸ್ಪತ್ರೆಯೊಳಗೆ ನಡೆದಳು. ಅವಳು ಒಳಹೋಗುವುದನ್ನೇ ನೋಡುತ್ತಿದ್ದ ನಂಜಮ್ಮ “ಏನ್‌ಮಾರಿ ತಂದೆ ಮಗಾ” ಎಂದು ಕೇಳಿದಳು. ಉತ್ತರ ಕೊಡದೆ ಸುಮ್ಮನಿದ್ದಾಗ “ಜುಮ್ಕಿಯ ಮಾರೇಬಿಟ್ಯಾ?” ಕೇಳಿದಳು ಹತಾಶೆಯಿಂದ. “ಇನ್ನೇನು ಮಾಡದವ್ವಾ. ಎಂಗಾರ ಬಾವನ್ನುಳುಸ್ಕೊಂಡ್ರೆ ಮುಂದೆದಾದ್ರೂ ಕೊಳ್ಬೋದು” ತಲೆತಗ್ಗಿಸಿಯೇ ಹೇಳಿದ. “ಅಂತಾ ಚೆಂದಾಕಿದ್ದೋನ್ಗೆ ಅದ್ಯಾವ ಆಳು ಕಾಯ್ಲೆ ವಕ್ರುಸ್ಕೋತೋ, ಅಟ್ಟಿಯೆಲ್ಲಾ ಗುಡಿಸ್ಕಂಡೋಯ್ತಲ್ಲ. ಇನ್ನ ಸುಸೀಲನ ಮದಿವ್ಯ ಎಂಗ್ಮಾಡೇವು; ನಿನ್ಗತಿಯೇನು; ಈ ಪುಟ್ಟೋನ್ದೇನ್ಗತಿ” ಎನ್ನುತ್ತಾ ಮಹೇಶನನ್ನು ತಬ್ಬಿಕೊಂಡು ಕಣ್ಣೀರು ಸುರಿಸಿದಳು. “ಸುಮ್ಕಿರವ್ವ; ಇಲ್ಲೆಲ್ಲ ಅಂಗಳ್ಬೇಡ. ಮದ್ಲು ಬಾವ ಉಸಾರಾಗ್ಲಿ” ಎಂದು ಸುಸೀಲ ಸಂತೈಸಿದಳು.
ದುಡ್ಡು ಕಟ್ಟಿದ ನೆಮ್ಮದಿಯಿಂದ ಹೊರಬಂದ ಮಾಲಕ್ಸ್ಮಿ ಮಹೇಶನನ್ನು ಕರೆದುಕೊಂಡು “ತೋರಿಸ್ಕಬತ್ತಿನಿ” ಎಂದು ತಾನು ವಾರ್ಡಿನೊಳಗೆ ಹೋಗಿ ಮಾದೇಸನನ್ನು ಆಚೆಗೆ ಕಳಿಸಿದಳು. “ಅಯ್ಯೋ ರಾತ್ರಿಂದ ಅವ್ಳು ವೊಟ್ಟೆಗೇನೂ ಆಕ್ಕೊಂಡಿಲ್ಲ. ಈಗೊಂದಿಂಕ್ರ ರೊಟ್ಟೀನಾರ ಬಾಯ್ಗಾಕ್ಕೊಂಡು ವೋಗಿದ್ರೆ ಚೆಂದಾಗಿತ್ತು” ಎಂದ ನಂಜಮ್ಮ ಬುತ್ತಿಯ ಗಂಟನ್ನು ಬಿಚ್ಚಿದಳು. “ಪಾಪ ತಿಮ್ಮಜ್ಜಿ ಈಗೆಲ್ಡು ವರ‍್ಸದಿಂದ ಒಂದ್ಕಿತಾನೂ ಬ್ಯಾಸ್ರ ಮಾಡ್ಕಳ್ದೆ ನಾವ್ ಆಸ್ಪತ್ರೇಗ್ ಬಂದಾಗ್ನೆಲ್ಲಾ ಬುತ್ತಿ ಕಳಸ್ತಳೆ. ಪುಣ್ಣೇತ್ಮಳು ತಂಪಾಗಿರ‍್ಲಿ” ಎಂದುಕೊಳ್ಳುತ್ತಾ ಎಲ್ಲರಿಗೂ ಎರೆಡೆರೆಡು ರೊಟ್ಟಿಯ ಮೇಲೊಂದಿಷ್ಟು ಕಾರವನ್ನು ಹಾಕಿಕೊಟ್ಟು ತಾನೂ ತಿನ್ನಲಾರಂಭಿಸಿದಳು. “ನಂಗಿನ್ನೂ ವಟ್ಟೆ ತುಂಬ್ನಿಲ್ಲ. ಇನ್ನೆಲ್ಡು ರೊಟ್ಟಿ ಕೊಡು” ಎಂದ ನಂಜುಂಡ. ಇನ್ನೆಷ್ಟು ರೊಟ್ಟಿ ಉಳಿದಿವೆ ಎಂದು ಲೆಕ್ಕ ಹಾಕಿಕೊಂಡು ನಂಜಮ್ಮ “ಕೋ” ಎನ್ನುತ್ತಾ ಒಂದು ರೊಟ್ಟಿಯನ್ನು ಅವನೆಡೆಗೆ ಚಾಚಿದಳು.
ಮಗನನ್ನು ನೋಡಿದಾಕ್ಷಣ ನಿತ್ರಾಣನಾಗಿ ಎಲುಬಿನ ಗೂಡಾಗಿದ್ದ ನಂಜುಂಡನಿಗೆ ದುಃಖ ಒತ್ತರಿಸಿಕೊಂಡು ಬಂದು ತಡೆಯಿಲ್ಲದೆ ಕಣ್ಣಲ್ಲಿ ನೀರು ಸುರಿಯಲಾರಂಭಿಸಿತು. ದೇಹದ ಸಕಲ ಅಂಗಗಳಿಗೂ ಟ್ಯೂಬುಗಳನ್ನು ತೂರಿಸಿಕೊಂಡು ನಿಸ್ತೇಜನಾಗಿ ಮಲಗಿ ತನ್ನೆಡೆಗೆ ಕೈಚಾಚಿದ್ದ ಅಪ್ಪನನ್ನು ಕಂಡ ಮಹೇಶನಿಗೆ ದಿಗಿಲಾಗಿ ಅಮ್ಮನ ಹಿಂದೆ ಬಚ್ಚಿಟ್ಟುಕೊಂಡ. ಮಾಲಕ್ಸ್ಮಿ “ಅಪ್ಪುನ ಮಾತಾಡ್ಸು ಮಗಾ” ಎಂದು ಹಿಂದಿನಿಂದೆಳೆದುಕೊಂಡಷ್ಟೂ ಮತ್ತೂ ಭಯವಾಗಿ ಅವಳನ್ನು ಹಿಂದಿನಿಂದಲೇ ತಬ್ಬಿಕೊಂಡು ಕಣ್ಣುಮುಚ್ಚಿಕೊಂಡು ನಿಂತುಬಿಟ್ಟ. “ಇಂಜೆಕ್ಸನ್ನಿಗೆ ದುಡ್ಡುಕಟ್ಟಿ ಬಂದಿವ್ನಿ” ಎಂದ ಮಾಲಕ್ಸ್ಮಿಯ ಮಾತು ನಂಜುಂಡನ ಕಿವಿಗೆ ಬಿತ್ತೋ ಇಲ್ಲವೋ ತಿಳಿಯಲಿಲ್ಲ; ಅವನ ಉಸಿರು ಸಿಕ್ಕಿಕೊಂಡು ಮೇಲೂ ಕೆಳಗೂ ಆಗುತ್ತಾ ಕಣ್ಣುಕಣ್ಣು ಬಿಡತೊಡಗಿದ.
ಮಾಲಕ್ಸ್ಮಿ ಓಡಿ ಹೋಗಿ ನರ್ಸಮ್ಮನನ್ನು ಕರೆದುಕೊಂಡು ಬಂದಳು. “ಇನ್ನೇನು ಡಾಕ್ಟ್ರು ಬರೋ ಹೊತ್ತು. ಅವ್ರು ಹೇಳಿದ್ಮೇಲೆ ಡ್ರಿಪ್ಪಿಗೆ ಇಂಜೆಕ್ಷನ್ ಹಾಕ್ತೀವಿ. ಸ್ವಲ್ಪ ಹೊತ್ತಲ್ಲಿ ಸರಿಯಾಗುತ್ತೆ. ಡ್ರಿಪ್ಪು ಪೂರ್ತಿಯಾಗಕ್ಕೆ ಮೂರು ಗಂಟೆ ಹಿಡಿಸತ್ತೆ. ನೀವು ಮಗೂನ ಕರ‍್ಕೊಂಡು ಹೊರಗಡೆ ಹೋಗಿ ಯಾರಾದ್ರೂ ಗಂಡಸ್ರನ್ನ ಒಳಗೆ ಕಳ್ಸಿ” ಎಂದು ಮಾಲಕ್ಸ್ಮಿಯನ್ನು ಹೊರಗೆ ಕಳುಹಿಸಿದಳು. ಅವಳು ರಾಜಶೇಖರನನ್ನು ಒಳಗೆ ಕಳಿಸಿ ತಾನು ಎಲ್ಲರೊಡನೆ ಮರದ ಕೆಳಗೆ ಕುಳಿತಳು. ಕಣ್ಣಲ್ಲಿ ನೀರು, ಹೊಟ್ಟೆಯಲ್ಲಿ ತಳಮಳ ಮನಸ್ಸಿಗೆ ಅರಿವಾಗದ ಸಂಕಟದಲ್ಲಿ ಕುದ್ದುಹೋದಳು ಮಾಲಕ್ಸ್ಮಿ. ಅವಳ ಬೆನ್ನಮೇಲೆ ಕೈಯಾಡಿಸುತ್ತಾ “ಇಕಾ, ನಿನ್ನೆ ಚಂಜೇನಿಂದ ನೀನು ಯಾನೂ ತಿಂದಿಲ್ಲ. ಈಗ ಸೊಲ್ಪೊತ್ತಿಗ್‌ಮುಂಚೆ ನಾವೆಲ್ಲಾ ರೊಟ್ಟಿ ತಿನ್ಕಂಡ್ವಿ. ನೀನೂ ಎಲ್ಡು ರೊಟ್ಟಿ ತಿನ್ಕ ಮಗಾ. ಈಗ ಇಂಜಿಕ್ಸನ್ನು ಆಕ್ತೀವೀಂದಿದಾರಲ್ಲ. ವಾಸಿಯಾಯ್ತದೆ ಬಿಡು. ಏನಾ… ಕಸ್ಟ ಕಳೆಯೋ ಕಾಲ ಬಂತೇನೋ. ಅಸ್ಕಂಡಿದ್ರೆ ಇನ್ನೂ ಸಂಕ್ಟ ಜಾಸ್ತಿಯಾಯ್ತದೆ ಕನಮ್ಮಿ. ತಗಾ” ಎನ್ನುತ್ತಾ ರೊಟ್ಟಿ ಖಾರವನ್ನು ಕೊಟ್ಟಾಗ ಹೆಚ್ಚು ಹೇಳಿಸಿಕೊಳ್ಳದೆ ಕೈಗೆತ್ತಿಕೊಂಡಳು. “ಮಯೇಸು, ನೀನೇನ್ ತಿಂದಿದ್ದೆ ಮಗಾ” ಎಂದಾಗ ಅವನು “ಮಾವ ಇಡ್ಲಿ ಕೊಡ್ಸಿದ್ದ” ಎಂದ ಮೇಲೆ ನೆಮ್ಮದಿಯಿಂದ ರೊಟ್ಟಿ ಅವಳ ಹೊಟ್ಟೆಯನ್ನು ಸೇರತೊಡಗಿತು.
ರಾಜಶೇಖರ ಒಳಹೋದ ಸ್ವಲ್ಪ ಹೊತ್ತಿಗೇ ಡಾಕ್ಟರು ಬಂದರು. ಜನರಲ್ ವಾರ್ಡಿನ ಕೊನೆಯ ಬೆಡ್ಡಿನಲ್ಲಿದ್ದ ನಂಜುಂಡನ ಬಳಿ ಬಂದವರೇ ಪಕ್ಕದಲ್ಲಿದ್ದ ನರ್ಸನ್ನು “ದುಡ್ಡು ಕಟ್ಟಿದಾರೆ ತಾನೆ” ಎಂದು ವಿಚಾರಿಸಿಕೊಂಡರು. ಅವಳು ತಲೆಯಲ್ಲಾಡಿಸಿದ ಮೇಲೆ ಕೇಸ್‌ಶೀಟಿನ ಮೇಲೆ ಕಣ್ಣಾಡಿಸಿ, ಏನನ್ನೋ ಬರೆದು ಡ್ರಿಪ್ಪಿನ ಬಾಟಲಿಗೆ ಔಷದಿಯ ಇಂಜೆಕ್ಷನ್ನನ್ನು ಚುಚ್ಚಲು ಹೇಳಿದರು. “ಡಾಕ್ಟ್ರೇ ಇದ್ರಿಂದ ನಮ್ಮ ಭಾವಂಗೆ ಗುಣ್ವಾಯ್ತದಾ?” ಹೆದಹೆದರುತ್ತಾ ಸೇಕ್ರು ಕೇಳಿದ. “ಗುಣವಾಗತ್ತೆ ಅಂತ ತಾನೆ ಕೊಡ್ತಿರೋದು” ಎಂದು ತೀಕ್ಷ್ಣವಾಗಿ ನೋಡಿ ನರ್ಸಿನತ್ತ ಮುಂದುವರಿಯುವಂತೆ ಸನ್ನೆಮಾಡಿದರು. ನರ್ಸ್ ಚುಚ್ಚಿದ ತಕ್ಷಣ ಬಾಟಲಿನಲ್ಲಿದ್ದ ದ್ರವವೆಲ್ಲಾ ಹಳದಿಯಾಯಿತು. “ಮೂರು ಗಂಟೆಯಲ್ಲಿ ಹೋಗಬೇಕು. ಡ್ರಾಪ್ಸ್ ಅಡ್ಜಸ್ಟ್ ಮಾಡಿ ಎಲ್ಲಾ ಮಾನಿಟರ್‌ಗಳ್ನೂ ಸೆಟ್ ಮಾಡಿ. ಬಿಪಿ ಮಾನಿಟರ್ ಮಾಡ್ತಿರಿ. ಅರ್ಧ ಗಂಟೆಗೊಂದ್ಸಲ ಎಲ್ಲಾ ರೆಕಾರ್ಡ್ ಮಾಡಿ ನಂಗೆ ತೋರಿಸ್ತಿರಿ. ಏನು ಅಬ್‌ನಾರ್ಮಾಲಿಟಿ ಕಂಡುಬಂದ್ರೂ ತಕ್ಷಣ ನನ್ನ ಗಮನಕ್ಕೆ ತನ್ನಿ” ಎಂದವರೇ ಹೊರನಡೆದರು.
ಅವರು ಹೋಗುತ್ತಿದ್ದ ದಿಕ್ಕನ್ನೇ ನೋಡುತ್ತಿದ್ದ ಸೇಕ್ರು ನಿಟ್ಟುಸಿರಿಟ್ಟು ಬೆಡ್ ಪಕ್ಕದ ನೆಲದ ಮೇಲೆ ಗೋಡೆಗೊರಗಿ ಕುಳಿತು ಡ್ರಿಪ್ ಬಾಟಲಿಯನ್ನೇ ನಿಟ್ಟಿಸತೊಡಗಿದ. ಇದುವರೆಗೂ ಇಂತಹ ಯಾವ್ಯಾವುದೋ ಔಷಧಿಗಳ, ಎಷ್ಟೆಷ್ಟೋ ಡ್ರಿಪ್ಪುಗಳಿಗೆ ಇದ್ದಬದ್ದ ಆಸ್ತಿಯೆಲ್ಲಾ ಕರಗಿ ಎಷ್ಟೆಷ್ಟು ಲಕ್ಷಗಳು ಖರ್ಚಾಗಿದ್ದವೋ! ದಿನದಿಂದ ದಿನಕ್ಕೆ ನಂಜುಂಡನ ಆರೋಗ್ಯ ಇನ್ನಷ್ಟು ಮತ್ತಷ್ಟು ಹಾಳಾಗುತ್ತಾ ನಡೆದಿತ್ತೇ ಹೊರತು ಒಂದಿಷ್ಟೂ ಸುಧಾರಿಸಿರಲಿಲ್ಲ. ಪ್ರತಿ ಬಾರಿಯೂ ಏನೋ ಒಂದು ಹೊಸ ಭರವಸೆಯಿಂದ ದುಡ್ಡು ಹೊಂಚಿ ತಂದು ಸುರಿಯುವುದು. ಎಲ್ಲವೂ ನೀರಿಗೆ ಸುರಿದಂತೆಯೇ ಸೈ. ನಂಜುಂಡನ ಮುಖವನ್ನೇ ನೋಡಿದ ಶೇಖರ. ಎಚ್ಚರವಿದೆಯೋ, ಇಲ್ಲವೋ ತಿಳಿಯಲಿಲ್ಲ. ಎದೆಯೊಂದು ಏರಿಳಿಯುತ್ತಿದ್ದುದರಿಂದ ಬದುಕಿದ್ದಾನೆಂದು ತಿಳಿಯುತ್ತಿತ್ತಷ್ಟೇ. ಒಂದು ಕಾಲದಲ್ಲಿ ಕರಿಕಲ್ಲಿನ ವಿಗ್ರಹದಂತೆ ಗಟ್ಟಿಮುಟ್ಟಾಗಿದ್ದ ನಂಜುಂಡ ಈ ಒಂದು ವರ್ಷದಲ್ಲಿ ಎಲುಬಿನ ಗೂಡಾಗಿಹೋಗಿದ್ದ.
ಅಪ್ಪ, ಅಮ್ಮ ಇಬ್ಬರೂ ಇಲ್ಲದ ತಬ್ಬಲಿಗೆ ಮಗಳನ್ನು ಕೊಡುವ ಇಷ್ಟವಿರಲಿಲ್ಲ ನಂಜಮ್ಮನಿಗೆ. ಆದರೆ ಅವನ ಮೈಕಟ್ಟಿಗೇ ಒಲಿದುಬಿಟ್ಟಿದ್ದಳು ಮಾಲಕ್ಸ್ಮಿ. ’ಅವುನ್ನೇ ಲಗ್ನ ಮಾಡ್ಕತಿನಿ’ ಎಂದು ಹಠಹಿಡಿದು ಮದುವೆಯಾಗಿದ್ದಳು. ಯಾರಿಗೋ ಬಾಡಿಗೆಗೆ ಕೊಟ್ಟಿದ್ದ ಪೇಟೆಬೀದಿಯಲ್ಲಿದ್ದ ಮಳಿಗೆಯನ್ನು ಬಿಡಿಸಿಕೊಂಡು ಅಳಿಯನಿಗೆ ದಿನಸಿ ಅಂಗಡಿ ಹಾಕಿಕೊಟ್ಟಿದ್ದರು. ಅವನೂ ನಿಯತ್ತಾಗಿ ದುಡಿದುಕೊಂಡು ಉದ್ಧಾರವಾಗಿದ್ದನಲ್ಲ. ನಂಜುಂಡ ನೆನಪಿಸಿಕೊಂಡ… ಮಹೇಶಉಟ್ಟಿದ ಎರಡನೆ ವರ್ಸದಲ್ಲಿ ಬಂದು ಅಡರಿಕೊಂಡಿದ್ದ ಕೆಮ್ಮು ನೆಗಡಿ ಅವನನ್ನು ಬಿಟ್ಟು ಹೋಗಲೇಯಿಲ್ಲ. ದಿನದಿನಕ್ಕೂ ಹೆಚ್ಚಾಗುತ್ತಲೇ ಹೋಗಿ ಕೊನೆಗೆ ಯಾರೋ ಈ ಆಸ್ಪತ್ರೆಯ ಡಾಕುಟ್ರ ಬಗ್ಗೆ ಯೋಳಿದ್ದದ್ದು. ಎಸ್ಟೆಸ್ಟೋ ಜನಕ್ಕೆ ಎಂಥೆಂಥದೋ ಖಾಯಿಲೆಗೋಳು ವಾಸಿಯಾಗವೆ ಅಂತಂದಿದ್ರು. ನಮ್ಮ ಗಾಚಾರವೋ, ಮಾಲಕ್ಸ್ಮಿಯ ಇದಿಯೋ, ಮಹೇಶನ ನಸೀಬೋ ನಂಜುಂಡನ ಖಾಯಿಲೆ ಅಲುಗಾಡದೆ ಕುಂತೇಬಿಟ್ಟಿತಲ್ಲ ಎಂದುಕೊಂಡ ಶೇಖರ ಡ್ರಿಪ್ಪಿನ ಬಾಟಲಿಯ ಕಡೆಗೆ ನೋಡಿದ. ಒಂದು ಗಂಟ್ಯಾಗದೇನೋ ಅಸ್ಟೇಯ. ಇನ್ನೂ ಎಲ್ಡುಗಂಟೆ ವೌಸ್ತಿ ಒಳೀಕೋಗ್ಬೇಕು. ಈ ಒಂದು ಬಾಟ್ಲಿಗೆ ಮೂವತ್ತು ಸಾವ್ರ ರೂಪಾಯಂತಲ್ಲಾ… ಏನಾದ್ರೂ ಬಡವರ‍್ಗೆ ಇಂಥಾ ಕಾಯ್ಲೆಗೋಳು ಬರ‍್ಬ್ಯಾಡ್ದು ಎನ್ನಿಸಿಬಿಟ್ಟಿತು ಅವನಿಗೆ.
ಬೆಳಗ್ಗೆ ಕೆಂಪೇಗೌಡ್ರು ಬಸ್ಟಾಪಿನಾಗಿ ಸಿಕ್ಕಿದ್ದಾಗ ಅವ್ರ ಗದ್ದೇಲೆ ನಂಗೂ, ಮಾದೇಸಂಗೂ ಕೂಲಿ ಕೆಲ್ಸ ಕೊಟ್ಟಾರ ಅಂತ ಕೇಳ್ಬೈದಿತ್ತು ಎಂದುಕೊಂಡ ಶೇಖರ. ವೋದ್ವರ್ಸ ಪಟೇಲ್ ಚೆನ್ನಪ್ಪಾರೂ ಕೂಲಿಗ್ಳೇ ಸಿಗ್ದಂಗಾಬುಟ್ಟದೆ. ನಿಂಗ್ಯಾರಾದ್ರೂ ಕಣ್ಣಿಗ್ಬಿದ್ರೆ ಯೋಳ್ಲಾ ಅಂದಿದ್ರಲ್ಲ. ಈಗೋಗಿ ಅವರ ತಾಪೂ ಕೇಳ್ಬೋದೇನೋ. ನಾವಿಬ್ರೂ ಬತ್ತೀವಿ ಆಯ್ತದಾಂತ. ಈ ಆಸ್ಪತ್ರೆ ವೋಡಾಟ ಒಂದ್ಮುಗುದ್ರೆ ಏನಾರ ಮಾಡ್ಬೈದು. ಎಲ್ಡೆಲ್ಡು ದಿನಕ್ಕೂ ಇಲ್ಲಿ ಬಂದೋಗೋದೂಂದ್ರೆ ಯಾವ್ನು ಕೂಲೀಗೆ ಕರ‍್ದಾನು ಎನ್ನಿಸಿ ತಲೆಕೊಡವಿದ. ಎದ್ದು ಕಿಟಕಿಯ ಬಳಿ ಹೋಗಿನಿಂತು ಹೊರಗೆ ದಿಟ್ಟಿಸಿದ. ಅವನವರೆಲ್ಲರೂ ಇತ್ತ ಕಡೆಯೇ ಮುಖವಿಟ್ಟು ಕುಳಿತಿದ್ದಾರೆ. ಮಾಲಕ್ಸ್ಮಿ ತಲೆಗೆ ಕೈಕೊಟ್ಟು ಎಲ್ಲೋ ಮುಳುಗಿಹೋಗಿದಾಳೆ. ’ಮಯೇಸನಿಗೆ ವತ್ತುವೋಗ್ವಲ್ದು. ಅದ್ಕೆ ಅವ್ನು ’ಬರಲ್ಲ ಮಾವೋ’ ಅಂತ ಬಡ್ಕಂಡ. ’ಅತ್ತಿತ್ತ ನೋಡ್ಕಂಡು ಕುಂತವ್ನೆ, ಅಯ್ಯೋ’ ಅನ್ನಿಸಿಬಿಟ್ಟಿತು.
ಇದ್ದಕ್ಕಿದ್ದಂತೆ ಸದ್ದಾದಂತಾಗಿ ನಂಜುಡನ ಕಡೆಗೆ ತಿರುಗಿ ನೋಡಿದ. ಮೈಯೆಲ್ಲಾ ನಡುಕ ಬಂದು ಸರೀರ ಎಗರೆಗರಿ ಬೀಳ್ತಿದೆ. “ನಂಜುಂಡಾ… ನಂಜುಂಡಾ…” ಎಂದು ಕರೆದರೆ ಇತ್ತ ಗ್ಯಾನವೇ ಇಲ್ಲ. ಅವನ ಸ್ಥಿತಿ ನೋಡಿ ಗಾಬರಿಯಾಯಿತು. “ಸಿಸ್ಟರ್… ಸಿಸ್ಟರ್” ಎಂದು ಹುಚ್ಚನಂತೆ ಅರಚಿದ. ಸುತ್ತಾಲು ಒಬ್ಬ ನರ್ಸಮ್ಮನೂ ಇಲ್ಲ. ಹೊರಗೋಡಿ ನರ್ಸುಗಳ ರೂಮಿಗೆ ಹೋದರೆ ನಾಲ್ಕೈದು ಜನ ಸೇರಿಕೊಂಡು ಬೋಂಡಾ ತಿನ್ನುತ್ತಾ, ಕಾಫಿ ಕುಡಿಯುತ್ತಾ ನಗೆಯಾಡ್ತಾ ಕುಂತಿದಾರೆ. ಮೈಯೆಲ್ಲಾ ಉರಿದೋಗಿ “ಅಲ್ಲಿ ಪೇಸೆಂಟು ಸಾಯ್ತಾ ಬಿದ್ದಿದಾರೆ. ಇಡೀ ವಾರ್ಡ್‌ನಾಗೆ ಒಬ್ಬರಿಲ್ದಂಗೆ ಇಲ್ಲಿ ನಗೆಚಾಟ್ಗೆ ಮಾಡ್ಕಂಡು ಕುಂತಿದೀರಲ್ಲ. ಇದು ನ್ಯಾಯವಾ ನಿಮ್ಗೆ” ಎಂದು ದೊಡ್ಡ ಆವಾಜು ಹಾಕಿದಾಗ ಅವರಲ್ಲೊಬ್ಬಳು ಎದ್ದು “ಏನು ಸದಾ ಅವರ‍್ಮುಖವೇ ನೋಡ್ತಾ ಕುಂತ್ಕಳಾಕ್ಕಾದ್ದಾ. ಬರ‍್ತೀವ್ ನಡೀರಿ” ಎನ್ನುತ್ತಾ ನಿಧಾನವಾಗಿ ಅವನ ಹಿಂದೆ ಹೆಜ್ಜೆಹಾಕಿದಳು.
ಒಳಗೆ ಬಂದು ನೋಡಿದರೆ ಎಲ್ಲಾ ಮಾನಿಟರ್‌ಗಳೂ ಎರ್ರಾಬಿರ್ರಿ ಹೊಡೆದುಕೊಳ್ತಿವೆ. ಬಿ ಪಿ ಪೂರಾ ಇಳಿದು ಮಾನಿಟರ್ ನಿಧಾನವಾಗಿ ’ಡಣ್… ಡಣ್…’ ಎಂದು ಚರ್ಚಿನ ಸಾವಿನ ಗಂಟೆಯಂತೆ ಸದ್ದು ಮಾಡುತ್ತಿದೆ. ಗಾಬರಿಯಿಂದ ಓಡಿಹೋಗಿ ಡಾಕ್ಟ್ರನ್ನ ಕರೆತಂದಳು. ಸಿಡುಕುತ್ತಲೇ ಒಳಬಂದ ಡಾಕ್ಟರ್ ’ನೀವು ಸ್ವಲ್ಪ ಹೊರಗಿರಿ’ ಎಂದು ಶೇಖರನನ್ನು ಹೊರಕಳಿಸಿ ಪಕ್ಕದ ಬೆಡ್ಡಿನ ನಡುವಿನ ಪರದೆಯನ್ನು ಸರಿಸಿ ಮುಚ್ಚಿದರು. ಐದಾರು ಜನ ಒಳಸೇರಿಕೊಂಡು ಬಾಗಿಲ ತನಕ ಬಂದಾಗಿದ್ದ ಪ್ರಾಣವನ್ನು ಎಳೆದು ತರಲು ಏನೇನೋ ಪ್ರಯತ್ನ ನಡೆಸಿದರು. ಹತ್ತು ನಿಮಿಷ… ಹತ್ತು ಗಂಟೆಯಂತೆ ಭಾಸವಾಯಿತು. ಹೊರಗೆ ನಿಂತಿದ್ದವನಿಗೆ ಒಳಗಿನಿಂದ ಏನೇನೋ ಗದ್ದಲ ಕೇಳುತ್ತಿತ್ತು. ಇದ್ದಕ್ಕಿದ್ದಂತೆ ಎಲ್ಲವೂ ನಿಶ್ಯಬ್ದ…! ಮಾನಿಟರ್‌ನ ಗಂಟೆಯ ಸದ್ದು ನಿಂತೇಹೋಯಿತು ಹೊರಬಂದ ಡಾಕ್ಟರ್ “ಮಿ. ರಾಜಶೇಕರ್ ನಿಮ್ಮ ಭಾವನ್ನ ಉಳಿಸಕ್ಕೆ ನಾವು ನಮ್ಮ ಕೈಲಾದ ಪ್ರಯತ್ನ ಮಾಡಿದ್ವಿ. ಅವ್ರು ನಮ್ಮ ಚಿಕಿತ್ಸೆಗೆ ಸ್ಪಂದಿಸ್ಲಿಲ್ಲ. ಒಂದರ್ಧ ಗಂಟೆ. ಪ್ಯಾಕ್ ಮಾಡಿ ಕೊಡ್ತೀವಿ. ಒಂದು ಅಂಬುಲೆನ್ಸ್ ಅರೇಂಜ್ ಮಾಡ್ಕೊಂಡು ಬಾಡಿ ತೊಗೊಂಡ್ಹೋಗಿ” ಎನ್ನುತ್ತಾ ಮುಂದಿನ ಮಾತಿಗೆ ಅವಕಾಶವೀಯದೆ ಗಂಭೀರವದನರಾಗಿ ತಮ್ಮ ಕೋಣೆಯೆಡೆಗೆ ಸಾಗಿದರು.
ಶೇಖರನಿಗೆ ಮೊದಲು ಒಳಗೆ ಹೋಗಿ ಭಾವನನ್ನು ನೋಡಬೇಕೋ… ಹೊರಗೋಡಿ ಸಾವಿನ ಸುದ್ದಿಯನ್ನು ಮನೆಯವರಿಗೆ ತಿಳಿಸಬೇಕೋ ಗೊಂದಲವಾಗಿ ತಲೆಚಚ್ಚಿಕೊಂಡು ವಾರ್ಡಿನ ಒಳನುಗ್ಗಿದ. ಹೋರಾಟ ನಡೆಸಿ ಸುಸ್ತಾಗಿದ್ದ ನಂಜುಂಡ ಎಲ್ಲಾ ನೋವುಗಳಿಂದಲೂ ಮುಕ್ತನಾಗಿ ಮಲಗಿದ್ದ! ನರ್ಸುಗಳು, ಆಯಾಗಳು ಎಲ್ಲಾ ನಳಿಕೆಗಳನ್ನೂ ಕಿತ್ತು ದೇಹವನ್ನು ಪ್ಯಾಕ್ ಮಾಡುವುದರಲ್ಲಿ ಮಗ್ನರಾಗಿದ್ದರು. ಒಬ್ಬ ನರ್ಸ್ ಪಕ್ಕದ ಡ್ರಾವರಿನಲ್ಲಿದ್ದ ಉಳಿದಿದ್ದ ಔಷಧಗಳನ್ನು ಮತ್ತು ಉಪಯೋಗಿಸದೆ ಉಳಿದಿದ್ದ ಡ್ರಿಪ್ಪಿನ ಬಾಟಲಿಗಳನ್ನು ತುಂಬಿಕೊಂಡು ಹೊರಟಳು. ಇವನನ್ನು ಕಂಡವಳೇ ಇಲ್ಲೇನು ಮಾಡ್ತಿದೀರಿ. ಹೋಗಿ ನಿಮ್ಮ ಮನೆಯವ್ರಿಗೆ ತಿಳಿಸಿ. ಬಾಡಿ ಕೊಡಕ್ಕೆ ಇನ್ನೂ ಕಾಲು ಗಂಟೆ ಆಗತ್ತೆ. ಬಿಲ್ಲಿಂಗ್ ಸೆಕ್ಷನ್‌ಗೆ ಹೋಗಿ. ನಿಮ್ಮ ಬಿಲ್ಲು ರೆಡಿ ಮಾಡಿದ್ಮೇಲೆ ಕಟ್ಟಿ ಬಾಡಿ ಬಿಡಿಸಿಕೊಂಡು ತೆಗೆದುಕೊಂಡು ಹೋಗಿ” ಎನ್ನುತ್ತಾ ದಪದಪ ಹೆಜ್ಜೆ ಹಾಕುತ್ತಾ ಹೊರಟೇಹೋದಳು.
ಶೇಖರ ಓಡಿಬರುತ್ತಿರುವುದನ್ನು ನೋಡಿದ ಮಾಲಕ್ಸ್ಮಿ, ನಂಜಮ್ಮ “ಏನೋ ಸೇಕ್ರು; ಯಾಕಾ ಇಂಗ್ ಗಾಬ್ರಿಯಿಂದ ಓಡಿಬರ‍್ತಿದಿ” ಎಂದು ತಾವೂ ಅವನತ್ತ ಓಡಿದರು. “ಎಲ್ಲಾ ಮುಗ್ದೋಯ್ತು ಕನವ್ವ. ನಂಜುಂಡ ವೊಂಟೋದ…” ಎನ್ನುತ್ತಾ ತಲೆತಲೆ ಚಚ್ಚಿಕೊಂಡು ಅಳತೊಡಗಿದ. “ಅಯ್ಯೋ ಸಿವ್ನೆ” ಎಂದ ಮಾಲಕ್ಸ್ಮಿ ಜ್ಞಾನತಪ್ಪಿ ಕುಸಿದಳು. ನಂಜವ್ವ ಅವಳನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡು “ನೀರು ತಾವ್ವ ಸುಸೀಲ” ಎಂದು ಆರ್ತಳಾಗಿ ಕೂಗಿಕೊಂಡಳು. ಓಡಿ ಬಂದ ಮಾದೇವು, ಸುಸೀಲರಿಗೂ ವಿಷಯ ಅರ್ಥವಾಗಿ ಎಲ್ಲರೂ ಎದೆ ಬಡಿದುಕೊಂಡು ಭೋರಾಡಿ ಅಳತೊಡಗಿದರು. ಎಲ್ಲರೂ ಅಳುತ್ತಿರುವುದೇಕೆಂದು ಅರ್ಥವಾಗದ ಮಹೇಶ ಸ್ವೊಲ್ಪ ಹೊತ್ತಿನ ನಂತರ ತಾನೂ ಅವರವ್ವನ ಪಕ್ಕ ಕುಳಿತು ಅಳತೊಡಗಿದ. ಎಚ್ಚರವಾದ ಮಾಲಕ್ಸ್ಮಿ ಬೆಪ್ಪು ಬಡಿದಂತೆ ಕುಳಿತುಬಿಟ್ಟಳು. ಯಾರಿಗೆ ಯಾರನ್ನು ಸಂತೈಸಬೇಕೆನ್ನುವುದೇ ಅರಿವಾಗದೆ ಎಲ್ಲರೂ ಬೆಪ್ಪಾಗಿ ಮತ್ತೆ ಮತ್ತೆ ನೆನೆಸಿಕೊಂಡು ಅಳುತ್ತಿದ್ದಾಗ ಬಾಗಿಲಲ್ಲಿ ಕಾಣಿಸಿಕೊಂಡ ನರ್ಸ್ ರಾಜಶೇಖರನನ್ನು ಕರೆದಳು. ಅವನ ಹಿಂದೆಯೇ ಹೋದ ಮಿಕ್ಕವರೆಲ್ಲರೂ ವಾರ್ಡಿಗೆ ಹೋಗಿ ತಣ್ಣಗೆ ಮಲಗಿದ್ದ ನಂಜುಂಡನನ್ನು ತಬ್ಬಿಕೊಂಡು, ಎದೆಯ ಮೇಲೆ ಬಿದ್ದು ಅಳಹತ್ತಿದರು. “ಇಲ್ಲೆಲ್ಲಾ ನೀವು ಹೀಗೆ ಅತ್ತು ರಂಪ ಮಾಡ್ಬಾರದು. ಹೊರಗ್ಹೋಗಿ. ಹೆಣಾನ ನಿಮ್ಮ ಸುಪರ್ದಿಗೆ ಕೊಟ್ಮೇಲೆ ಹೊರಗಡೆ ಅಳೋವ್ರಂತೆ” ಎನ್ನುತ್ತಾ ನರ್ಸ್ ಎಲ್ಲರನ್ನೂ ಆಚೆಗಟ್ಟಿದಳು.
ಬಿಲ್ಲಿಂಗ್ ಸೆಕ್ಷನ್ನಿಗೆ ಕರೆದುಕೊಂಡು ಹೋದ ನರ್ಸ್ ಅಲ್ಲಿನ ಮ್ಯಾನೇಜರ್‌ಗೆ ರಾಜಶೇಕರನನ್ನು ತೋರಿಸಿ. ಇವ್ನೇ, ಈಗ ಡೆತ್ ಆಯ್ತಲ್ಲ; ಆ ಕಡೆಯವ್ನು ಎಂದಳು. ಅವನು “ನೀನೇನಾಪ್ಪಾ, ನೋಡೀಪ್ಪ, ಇವತ್ತಿನವರೆಗೆ ಬಾಕಿ ಇರೋ ವಾರ್ಡ್ ಚಾರ್ಜು, ನರ್ಸಿಂಗ್, ಡಾಕ್ಟ್ರ ಫೀಸು, ಬಳಸಿರೋ ಔಷಧಿಗಳ ಬಾಬ್ತು ಮೂವತ್ತೊಂದು ಸಾವಿರದ ಆರ‍್ನೂರಾ ಎಪ್ಪತ್ತಾಗಿದೆ. ಅದನ್ನು ಕಟ್ಟಿ ಅಂಬುಲೆನ್ಸ್ ಅರೇಂಜ್ ಮಾಡ್ಕೊಂಡು ಬಂದ್ರೆ ಹೆಣಾನ ನಿಮ್ಮ ಸುಪರ್ದಿಗೆ ಕೊಡ್ತೀವಿ. ತೊಗೊಂಡು ಹೋಗಬಹುದು ಎನ್ನುತ್ತಾ ಅವನ ಮುಖವನ್ನೇ ನೋಡಿದ. “ಇವತ್ತು ಬೆಳ್ಗಷ್ಟೇ ಮೂವತ್ಸಾವ್ರ ಕಟ್ಟೈತಲ್ಲ ಸೋಮಿ. ಇನ್ನೇನು ಬಾಕಿ ಇದ್ದಾತು?” ಎಂದವನಿಗೆ “ಅದು, ನೀವು ಕಟ್ಟಿದ್ದು ಇವತ್ತು ಕೊಟ್ಟ ಇಂಜೆಕ್ಷನ್ನಿಗೆ. ಇದೆಲ್ಲಾ ಮೂರ‍್ದಿನದಿಂದ ಬಾಕಿ ಇದ್ದೇಇದೆ. ಕಟ್ಟೋತಂಕ ಹೆಣ ಕೊಡಕ್ಕಾಗಲ್ಲ” ಎಂದ ನಿಷ್ಠುರವಾಗಿ. ಸೇಕರನಿಗೆ ಮೈಯೆಲ್ಲಾ ಉರಿದುಹೋಯಿತು. “ನನ್ಕೈಲಿ ಇನ್ನೊಂದು ದಮ್ಮಡೀನೂ ಇಲ್ಲ ಸೋಮಿ. ನಾನೇನೂ ಕಟ್ಟಕ್ಕಾಗಲ್ಲ” ಎಂದ ಕೋಪದಿಂದ. “ನೀನು ಹಾಗೆ ಹೇಳೋಹಾಗಿಲ್ಲ. ನಾವು ಪಾಪಾಂತ ಮೂರ‍್ದಿನ ಟ್ರೀಟ್ಮೆಂಟ್ ಕೊಟ್ಟಿದ್ದೇ ತಪ್ಪಾಯ್ತಾ. ಡಾಕ್ಟ್ರತ್ರ ಹೇಳು ಈ ಮಾತ್ನ” ಎಂದ. “ಏನು ಬಯ್ವಾ ಯೋಳ್ತೀನ್‌ನಡೀರಿ” ಎನ್ನುತ್ತಾ ತಾನೇ ಮುಂದಾಗಿ ಡಾಕ್ಟರ ರೂಮಿನತ್ತ ನಡೆದ.
ಡಾಕ್ಟರ ರೂಮಿನೊಳಗೆ ಮೊದಲು ಹೋದ ಮ್ಯಾನೇಜರ್ ಐದುನಿಮಿಷದ ನಂತರ “ಒಳಗ್ಬಂದು ಮಾತಾಡು” ಎನ್ನುತ್ತಾ ಶೇಖರನನ್ನು ಕರೆದುಕೊಂಡು ಹೋದ. “ಏನಯ್ಯಾ. ದುಡ್ಡು ಕಟ್ಟಕ್ಕಾಗಲ್ಲ ಅಂದ್ಯಂತಲ್ಲ. ನಾವೇನು ಇಲ್ಲಿ ಬಿಟ್ಟಿ ಧರ್ಮಾಸ್ಪತ್ರೆ ನಡಿಸ್ತಿದೀವಾ? ಹೆಚ್ಗೆ ಮಾತಾಡ್ದೆ ದುಡ್ಡು ಹೊಂದಿಸ್ಕೊಂಡ್ಬಂದು ಕಟ್ಟಿ ಹೆಣ ಬಿಡಿಸ್ಕೊಂಡ್ಹೋಗು” ಎಂದರು ಕೋಪದಿಂದ ಅವನನ್ನೇ ನೋಡುತ್ತಾ. “ಸೋಮಿ ದಾಕುಟ್ರೇ. ನಿಮ್ಮಾತಿನ್ ಮ್ಯಾಗ್ ನಿಗವಿರ‍್ಲಿ. ನೀವೂ ಒಂದ್ವರ‍್ಸದಿಂದ ಉಸಾರ‍್ಮಾಡ್ಕೊಡ್ತೀನಿ, ಉಸಾರ‍್ಮಾಡ್ಕೊಡ್ತೀನಿ ಅಂತ್ಯೋಳ್ತಾ ನಾವೂನು ನಮ್ಮೊಲ, ಸೈಟು, ಅಂಗ್ಡಿ, ಮನ್ಲಿರೋದೆಲ್ಲಾನೂವೆ ಮಾರಿ, ಮಾರಿ ಲಕ್ಸಾಂತ್ರ ರೂಪಾಯ ನಿಮ್ಮೆದೆ ಮ್ಯಾಲೇ ಸುರ‍್ದಿದೀವಿ. ಕಡ್ಗೂ ಬದುಕುಸ್ಲಿಲ್ಲ. ನೀವೇನು ಧರ್ಮಕ್ಕೆ ನಮ್ ನಂಜುಂಡ್ಗೆ ವೌಸ್ತಿ ಕ್ವಟ್ಟಿಲ್ಲ. ಸೋತು ಸುಣ್ವಾಗಿದೀವಿ. ಊರಿಗ್ ವಾಪ್ಸುವೋಗಕ್ಕೂ ಕಾಸಿಲ್ಲ. ಬಸ್‌ಸ್ಟಾಂಡ್‌ನಾಗ ಈ ಆಸ್ಪತ್ರೇಲಿಂಗಾಯ್ತು ಅಂತೇಳಿ ಯಾರಾದ್ರೂ ದರ‍್ಮಾತ್ಮರ ತಾವ ಬೇಡ್ಕಂಡು ಎಂಗೋ ಮನೆ ಸೇರ‍್ಕತೀವಿ. ಎಣ್ವ ನೀವೇ ಮಡಿಕ್ಕಳಿ. ನಿಮ್ಮಿಂದ ಬೋಉಪ್ಕಾರ‍್ವಾಯ್ತು. ನಾವಿನ್ ಓಯ್ತೀವಿ” ಎನ್ನುತ್ತಾ ಹೊರಬಂದು ಬಾಗಿಲನ್ನು ತಳ್ಳಿದ.
“ಏ ಯಾರಪ್ಪ ಅಲ್ಲಿ ಕರೀರಿ ಅವುನ್ನ” ಎನ್ನುತ್ತಾ ಡಾಕ್ಟರ್ ಗಡಬಡಿಸಿ ಎದ್ದುನಿಂತರು. ಮ್ಯಾನೇಜರ್ ವಾಚ್‌ಮನ್‌ನ್ನು ಕರೆದು ಅವನನ್ನು ಕರೆಸಿಕೊಂಡು ಬಂದರು. “ಏನಯ್ಯಾ ಹಂಗ್ ಹೊರ‍್ಟೋದ್ರೆ. ಹಾಳಾಗೋಗ್ಲಿ ಏನೂ ದುಡ್ಡು ಕಟ್ಬೇಡ. ಹೆಣ ತೊಗೊಂಡೋಗು” ಎಂದರು ರೇಗುತ್ತಾ. ಶೇಖರ ರೇಗದೆ “ಬ್ಯಾಡ ಸ್ವಾಮಿ; ನೀವೇ ಮಡಿಕ್ಕಳಿ. ತಗಂಡೋಗಕ್ಕೆ ಅಂಬುಲೆನ್ಸಿಗೂ, ಮಣ್‌ಮಾಡಕ್ಕೂ ದುಡ್ಡೆಲ್ಲಿಂದ ತರಾನ?! ನಿಮ್ಮಾಂಗೆ ನಾವು ದರೋಡೆ ಮಾಡಕಾಯ್ತದಾ?” ಎನ್ನುತ್ತಾ ಕೈಮುಗಿದು ಹೊರಹೊರಟ. ಬಿಟ್ಟಬಾಯಿ ಬಿಟ್ಟಂತೆಯೇ ಕುಳಿತಿದ್ದ ಡಾಕ್ಟರ್ ಒಂದು ಘಳಿಗೆ ಸುಧಾರಿಸಿಕೊಂಡು. “ಹಾಳಾಗೋಗ್ಲಿ; ಇವತ್ಬೆಳಗ್ಗೆ ಕಟ್ಟಿದ್ದ ಮೂವತ್ಸಾವರ ವಾಪಸ್ಸು ಕೊಟ್ಟು, ಆಸ್ಪತ್ರೆ ಅಂಬುಲೆನ್ಸ್‌ನಲ್ಲೇ ಅವರೂರಿಗೆ ಹೆಣ ಕಳಿಸಿ. ದರಿದ್ರದೋವು. ಊರ‍್ಗೆಲ್ಲಾ ಟಾಂಟಾಂ ಮಾಡಿದ್ರೆ ನಮ್ಬುಡಕ್ಕೆ ಬರತ್ತೆ” ಎಂದಾಗ “ರೀ… ರಾಜಶೇಖರ್. ಒಂದ್ನಿಮ್ಷ ನಿಲ್ರೀ” ಎನ್ನುತ್ತಾ ಮ್ಯಾನೇಜರ್ ದಾಪುಗಾಲಿಡುತ್ತಾ ಹೊರನಡೆದರು.

Facebook
X
WhatsApp
Print
Email