
‘ಜಿರಳೆಗಳಿಗೇನು ಗೊತ್ತು ಲೀಕಿನ ಮಹತ್ವ!’ ಎಂದರು ಟೀಕಾಚಾರ್ಯರು.
ಪ್ರಶ್ನೆಪತ್ರಿಕೆಗಳು ಲೀಕ್ ಆದುದನ್ನು ಜಿರಳೆಗಳು ಜೋರಾಗಿ ಮೀಸೆ ಆಡಿಸುತ್ತಾ ಪ್ರತಿಭಟಿಸುತ್ತಿದ್ದುದನ್ನು ಟಿವಿಯಲ್ಲಿ ವೀಕ್ಷಿಸುತ್ತಾ ತಮ್ಮ ಅಸಮಾಧಾನವನ್ನು ಹೀಗೆ ಹೊರಹಾಕಿದ್ದರವರು.
‘ಲೀಕ್ ಒಳ್ಳೆಯದೆ?’
‘ಲೀಕ್ ಇಲ್ಲದಿದ್ದರೆ ನೀನೂ ಇಲ್ಲ, ನಾನೂ ಇಲ್ಲವೆಂಬ ಸತ್ಯವನ್ನು ಅರಿ. ಜನನಿಯ ಶರೀರದಲ್ಲಿನ ಪನಿಕುಡವು ಸೀಳಿ ಸುತ್ತಲಿನ ದ್ರವವು ಲೀಕ್ ಆಗಲು ಆರಂಭವಾಗುವುದೇ ಶಿಶುವು ಹೊರಬರಲು ಸಿದ್ಧವೆಂಬುದರ ಸೂಚನೆ. ಅಮ್ಮನಿಗೆ, ತನ್ಮೂಲಕ ಮಿಡ್‍ವೈಫ್‍ಗೆ ಅಥವಾ ವೈದ್ಯರಿಗೆ ಪ್ರಸವದ ವಿಷಯ ಲೀಕ್ ಆಗುವುದೇ ಹೀಗೆ!’
‘ಎಲ್ಲ ಪ್ರಸವಗಳಲ್ಲಿಯೂ ಲೀಕ್ ಆಗುವುದಿಲ್ಲ ಅಲ್ಲವೆ?’
‘ಆಗದಿದ್ದರೆ ಲೀಕ್ ಮಾಡಿಸುತ್ತಾರೆ. ‘ಮೊದಲು ಸಮುದ್ರದ ಜಲದಲ್ಲಿ ಒಂದು ಕೋಶದಿಂದ ಜೀವವು ಆರಂಭವಾಯಿತು’ ಎಂದ ಡಾರ್ವಿನ್. ಇಲ್ಲಿಯೂ ‘ಅಮ್ನಿಯಾಟಿಕ್ ಜಲಾಶಯದ ಕೋಶ’ದಿಂದ ಜೀವವೊಂದರ ಪಯಣದ ಆರಂಭ.’
‘ಶಿಶುಪ್ರಸವಕ್ಕೆ ಲೀಕ್ ಬೇಕೆಂದು ಒಪ್ಪುವೆ. ಜಗದ ಏಳ್ಗೆಗೆ ಲೀಕ್ ಒಳಿತಲ್ಲ ಅಲ್ಲವೆ?’
‘ಲೀಕ್ ಅನೇಕ ಒಳಿತುಗಳ ಆಗರವೆನ್ನಲು ನೀನರಿಯದ ಲೀಕು ಪುರಾಣವಂ ಪೇಳ್ವೆನು. ಆಲಿಸುವಂಥಾತ್ತನಾಗು. ಸಮುದ್ರಮಥನದ ತರುವಾಯ ಅಮೃತವನ್ನು ಹಂಚುವ ಸಮಯದೊಳ್ ಸುರರ ನಡೆಯನ್ನು ಅನುಮಾನದಿಂದ ನೋಡಿದ ಅಸುರನೊಬ್ಬನು ಸುರನ ವೇಷವನ್ನು ಧರಿಸಿ ಬಂದನೆಂಬ ವಿಷಯವು ಸುರಗಣದಲ್ಲಿ ಲೀಕ್ ಆದುದೇ ಜಗದ ಮೊದಲ ಲೀಕ್. ಹಾಗೆ ಲೀಕ್ ಆದುದರ ಫಲಿತವೇ ವಿಷ್ಣುವಿನ ಚಕ್ರಕ್ಕೆ ಸಿಲುಕಿ ಆ ಅಸುರನು ‘ಒನ್ ಬೈ ಟೂ ಗ್ರಹ’ ಆದುದು. ಆ ಬೈಟೂ ಗ್ರಹಗಳೇ ರಾಹುಕೇತುಗಳು. ಇದು ವಿಷಯವು ಲೀಕ್ ಆದುದರಲ್ಲಿ ಮೊದಲಿನದಾದರೆ ಜಲಸೋರಿಕೆಯು ಮೊದಲು ಸಂಭವಿಸಿದುದು ಕೈಲಾಸ ಪರ್ವತದೊಳ್ ಎಂದು ಅರಿಯುವಂಥವನಾಗು’ ಎಂದರು ಟೀಕಾಚಾರ್ಯರು.
‘ಆಹಾ! ಪರಶಿವನ ಆವಾಸದೊಳ್ ಆದ ಲೀಕೇಜಿನ ಬಗ್ಗೆ ಅರಿಯಲು ಕಾತುರನಾಗಿದ್ದೇನೆ. ತಡಮಾಡದೆ ಆ ಪ್ರಸಂಗವನ್ನರುಹಿರಿ ಗುರುವರ್ಯ’ ಎಂದನಾ ಶಿಷ್ಯೋತ್ತಮ.
‘ಆಲಿಸೈ. ಪೂರ್ವದೊಳ್ ಪರಶಿವನು ತನ್ನ ವಾಟರ್ ಟೈಟ್ ಜಟೆಯ ಪದರಪದರಗಳಲ್ಲಿ ಗಂಗೆಯನ್ನು ಸ್ಟೋರ್ ಮಾಡಿಕೊಂಡನು. ಸಾಮಾನ್ಯವಾಗಿ ಯಾವುದೇ ಜಲಾಶಯವು ವೀಪ್ ಹೋಲ್ಸ್ ಎಂಬ ಸಣ್ಣ ರಂಧ್ರಗಳನ್ನು ಹೊಂದಿರುತ್ತದೆ. ಜಲವು ಒಂದೆಡೆ ಶೇಖರವಾದಾಗ ಉಂಟಾಗುವ ಒತ್ತಡವನ್ನು ತಡೆಯಲು ಈ ತೂತುಗಳನ್ನು ಮಾಡಲಾಗುತ್ತದೆ.’
‘ಅವುಗಳನ್ನು ವೀಪ್ ಹೋಲ್ಸ್ ಎಂದೇಕೆ ಕರೆಯುತ್ತಾರೆ?’
‘ಪರಶಿವನ Hair dam ಸಂಪೂರ್ಣ Air tight ಆಗಿತ್ತು. ಅಲ್ಲಿಂದ ಒಂದು ಹನಿ ನೀರೂ ಹೊರಬರುತ್ತಿರಲಿಲ್ಲ. ಹಾಗೆ ಹೊರಬರದಂತೆ ವ್ಯವಸ್ಥೆಯಾಗಲು ಮತ್ತೊಂದು ಬಲವಾದ ಕಾರಣವೂ ಇದ್ದೀತು. ಗಂಗೆಯು ಕೇಶಪಾಶದಿಂದ ಸೋರಿ ತೊಡೆಗಿಳಿದರೆ ತೊಡೆಯ ಮೇಲೆ ಕುಳಿತ ಪಾರ್ವತಿಯು ‘Damn it! Dam that Damsel’ ಎಂಬುದರ ಸಂಸ್ಕೃತ ಅನುವಾದದಲ್ಲಿ ಉರಿದೇಳುವ ಸಾಧ್ಯತೆ ಇದ್ದಿತು. ಪರಶಿವೆಯ ಕ್ರೋಧವನ್ನು ತಡೆಯಲು ಪರಶಿವನು ಲೀಕ್ ಪ್ರೂಫ್ ಡ್ಯಾಮ್ ಕಟ್ಟಿಕೊಂಡು ಗಂಗೆಯ ಒತ್ತಡವನ್ನು ಒಳಗೊಳಗೇ ಅನುಭವಿಸಿದ್ದಾನು. ಇತ್ತ ಬುವಿಯಲ್ಲಿ ಭಗೀರಥನು ಇಂದಿನ ತಮಿಳುನಾಡಿನವರು ಕರ್ನಾಟಕದವರ ಮುಂದೆ ಆಗ್ರಹಪೂರ್ವಕವಾಗಿ ‘ನೀರು ಬಿಡಿ’ ಎಂದು ಕೇಳುವಂತೆಯೇ ‘ಬಿಡು ಗಂಗೆಯ!’ ಎಂದನು. ಮೊದಮೊದಲು ಪರಶಿವನು ಕರ್ನಾಟಕದಂತೆಯೇ ‘ಆಗದು’ ಎಂದರೂ, ರಾಜ್ಯವು ಕೋರ್ಟಿನ ತೀರ್ಮಾನಕ್ಕೆ ಮಣಿದು ನೀರು ಬಿಟ್ಟಂತೆಯೇ ಪರಶಿವನು ಭಕ್ತಿಯೆಂಬ ಪವರ್‍ಫುಲ್ ಟೂಲ್‍ಗೆ ಮಣಿದು ‘ಎರಡನೆಯ ಹೆಂಡತಿಯು ನನಗೆ ಪ್ರಿಯಳಾದವಳೆಂದು ಅವಳನ್ನು ತಲೆಯ ಮೇಲೆ ಕೂಡಿಸಿಕೊಂಡಿರುವುದನ್ನು ಕಂಡೂ ಅವಳನ್ನು ತೊರೆ ಎನ್ನುವುದು ತರವೆ? ಆದರೂ ನಿನ್ನ bleak ಪರಿಸ್ಥಿತಿಗೆ ಮನವು ಕರಗಿ, ಗಂಗೆಯನ್ನು ಕೊಂಚವೇ leak ಮಾಡುತ್ತೇನೆ. ನಿನ್ನ weeping ಕಾರಣ ನನ್ನ ಕೇಶಜಲಾಶಯದಲ್ಲಾದ ಈ ತೂತುಗಳು ಜಗದಲ್ಲಿ weep holes ಎಂದೇ ಪ್ರಸಿದ್ಧವಾಗಲಿ ಮತ್ತು ಮುಂದೆ ಎಲ್ಲ ಜಲಾಶಯಗಳಲ್ಲಿಯೂ ಕಂಡುಬರಲಿ. ಇದೋ, ವಿಶ್ವದ ಮೊದಲ ವೀಪ್ ಹೋಲ್ ರಚನೆಗೆ ಸಾಕ್ಷಿಯಾಗು’ ಎನ್ನುತ್ತಾ ಗಂಗೆಯು ಹೊರಹೋಗಲು ಸಣ್ಣ ದಾರಿಯೊಂದನ್ನು ತನ್ನ ಕೇಶಪಾಶದಲ್ಲಿ ಮಾಡಿಕೊಟ್ಟನಂತೆ. ಅದೇ ಗಂಗಾವತರಣ!’
‘ಸ್ವಯಂ ಗಂಗೆಯೇ ತಾನು ಯಾರೆಂಬ ವಿಷಯವನ್ನು ಶಂತನುವಿಗೆ ಲೀಕ್ ಮಾಡಿರಲಿಲ್ಲವಲ್ಲ ಗುರುಗಳೆ!’ ಗಹಗಹಿಸಿದ ಶಿಷ್ಯ.
‘ಗಂಡನಿಗೆ ಲೀಕ್ ಆಗದ ಹೆಂಡತಿಯ ರಹಸ್ಯಗಳು, ಹೆಂಡತಿಗೆ ಲೀಕ್ ಆಗದ ಗಂಡನ ರಹಸ್ಯಗಳು ಇರುವುದರಿಂದಲೇ ಪ್ರಪಂಚ ಮುಂದುವರಿಯುತ್ತಿರುವುದು. ಆದರೂ ಅವರಿಬ್ಬರ ರಹಸ್ಯಗಳು ಇನ್ನಾರಿಗೋ ತಿಳಿದಿರುತ್ತದೆ. ಗಂಗೆಯ ರಹಸ್ಯವು ವ್ಯಾಸರಿಗೆ ತಿಳಿದಿತ್ತಲ್ಲ!’
‘ನದಿಗಳ ವಿಷಯಕ್ಕೆ ಮರಳೋಣ. ಎಲ್ಲ ನದಿಗಳಿಗೆ ಅಣೆಕಟ್ಟು ಇರದು. ಆ ಜಲವನ್ನು ಕುಡಿದು ಜೀವಿಸುವವರಿಗೆ ಲೀಕ್‍ನ ಅಗತ್ಯತೆ ಕಾಣದು’
‘ಸ್ವಯಂ ನದಿಗಳ ಹುಟ್ಟೇ ಲೀಕೇಜಿನಿಂದ ಆಗುವುದಲ್ಲವೆ! ಬೆಟ್ಟಗಳ ರಂಧ್ರಗಳಿಂದ ಲೀಕ್ ಆಗಿ ಚಿಮ್ಮುವ ಜಲರಾಶಿಯೇ ನದಿಯೆಂದು ಕರೆಯಲ್ಪಡುವುದಲ್ಲವೆ!’ ನುಡಿದರು ಟೀಕಾಚಾರ್ಯರು, ‘ಜಲಕ್ಕೂ ಲೀಕ್‍ಗೂ ಜನ್ಮಜನ್ಮದ ಸಂಬಂಧವಯ್ಯ. ಬಾವಿಗಳನ್ನು ಅಗೆದಾಗ ಸುತ್ತಲಿನ ‘ಜಲದ ಕಣ್ಣು’ಗಳಿಂದ ಲೀಕ್ ಆಗಿಯೇ ಬಾವಿಯು ತುಂಬುವುದು. ಬುವಿಯ ಮೇಲೆ ಬಿದ್ದ ನೀರು ಮಣ್ಣಿನ ಮೂಲಕ ಲೀಕ್ ಆಗದಿದ್ದರೆ ವಾಟರ್ ಟೇಬಲ್ಲೇ ಡಿಸೇಬಲ್ ಆಗಿಬಿಡುತ್ತದೆ. ಬಾವಿಯಲ್ಲಿನ ಕಣ್ಣಿನಿಂದ ಹಿಡಿದು ಅಗಸ್ತ್ಯ ಮುನಿಗಳ ಕಿವಿಯಿಂದ ಹೊರಟ ಸಮುದ್ರದ ನೀರಿನವರೆಗೆ ಲೀಕಿನದು ಆಣೋರಣೀಯವೂ, ಮಹತೋಮಹೀಮವೂ ಆಗಿದೆ!’
‘ನೀವೇನೇ ಹೇಳಿ ಗುರುಗಳೆ, ಲೀಕೇಜ್ ಕೆಟ್ಟದು’ ಎಂದ ಶಿಷ್ಯ.
‘ಹ್ಹ! ನಿನ್ನ ತಲೆಯಲ್ಲಿ ಒನ್ ವೇ ಟ್ರಾಫಿಕ್ ಇರುವುದರಿಂದಲೇ ಒಂದೇ ವಾದಕ್ಕೆ ಸಿಲುಕಿದ್ದೀಯೆ. ತಲೆ, ಬೆನ್ನುಹುರಿ, ಮಂಡಿಗಳಲ್ಲಿ ಸೇರಿದ ನೀರನ್ನು ಇಂಗಿಸುವರೇನು? ಅದನ್ನು ಲೀಕ್ ಮೂಲಕವೇ ಹೊರತೆರೆಯುವುದು. ಹಾವು ಕಚ್ಚಿದ ಜಾಗದ ಸುತ್ತ ಬಟ್ಟೆ ಕಟ್ಟಿ ‘ಬ್ಲಡ್ ಲೆಟಿಂಗ್’ ಮಾಡುವುದೂ ಒಂದು ವಿಧದ ಲೀಕಿಂಗೇ. ಆಯುರ್ವೇದದಲ್ಲಿ ಜಿಗಣೆಗಳನ್ನು ಬಳಸಿ ಚಿಕಿತ್ಸೆ ನೀಡುವುದು ಸಹ ಲೀಕಿಂಗಿನ ವಿಧಾನವೇ.’
‘ಎಲ್ಲೆಡೆಯ ಲೀಕ್‍ಗಳು ಒಳ್ಳೆಯದಲ್ಲ ಗುರುಗಳೆ. ಫಾರ್ ಎಕ್ಸಾಂಪಲ್, ಸೂರು ಸೋರುವುದು.’ ಲೀಕ್ ವಿರೋಧಿಯಾದ ಶಿಷ್ಯೋತ್ತಮ.
‘ಸೂರಿನದೇ ಆಗಲಿ, ಪೈಪುಗಳದೇ ಆಗಲಿ, ಗೋಡೆಗಳಲ್ಲಿನ ಲೀಕೇ ಆಗಲಿ, ಅವುಗಳನ್ನು ಉದ್ಯೋಗ ಸೃಷ್ಟಿಯ ಅವಕಾಶಗಳೆಂದು ತಿಳಿ. ಸರ್ಕಾರಿ ಶಾಲೆಗಳ ಸೂರಿನಲ್ಲಿ ಲೀಕ್ ಆದನಂತರ ಉಳಿದುಕೊಂಡ ನೀರಿನ ಕರೆಯನ್ನು ತೋರಿಸುತ್ತಾ ಅಧ್ಯಾಪಕರು ‘ಇದೋ ಆಸ್ಟ್ರೇಲಿಯಾದ ನಕ್ಷೆ’, ‘ಇದು ಕ್ಯೂಬಾದ ನಕ್ಷೆ’ ಎನ್ನುತ್ತಾ ಛಾವಣಿಯನ್ನೇ ಅಟ್ಲಾಸ್ ಆಗಿ ಪರಿವರ್ತಿಸಿದ ಉದಾಹರಣೆಗಳಿವೆ. ‘ಸೋರುವಿಕೆಯಿಂದ ಜ್ಞಾನದ ಹೀರುವಿಕೆ’ ಎಂಬ ಸಿಲಬಸ್ಸನ್ನೇ ಇಂತಹ ಕಟ್ಟಡಗಳಲ್ಲಿ ಆರಂಭಿಸಬಹುದಿತ್ತು.’
‘ವಾಹನಗಳಲ್ಲಿ ಪೆಟ್ರೋಲ್, ಆಯಿಲ್ ಲೀಕ್ ಆಗುವುದಂತೂ ಯಾರಿಗೂ ಒಳ್ಳೆಯದಲ್ಲ ಗುರುಗಳೆ!’ ಶಿಷ್ಯನು ತನ್ನ ವಾದಕ್ಕೊಂದು ಹೊಸ ಆಯಾಮವಿತ್ತ.
‘ಆಯಿಲ್ ಸೀಲ್ ತಯಾರಿಸುವ ಕಂಪನಿ, ಅವುಗಳನ್ನು ಮಾರುವ ಏಜೆಂಟರು, ಅವುಗಳನ್ನು ಅಳವಡಿಸುವ ಮೆಕ್ಯಾನಿಕ್ಕುಗಳಿಗೆ ಜೀವನಾಡಿಯದು.’
‘ವಾಹನ ಓಡಿಸುವವರಿಗೆ ಕೆಟ್ಟದಲ್ಲವೆ?’
‘ಇದ್ದೀತು. One man’s ಪಾಯಸ is other man’s ಪಾಯ್ಸನ್ನೂ. ಸರ್ವೇ ಜನಾಃ ಸುಖಿನೋ ಭವಂತು ಎನ್ನುವಾಗ ಮೆಕ್ಯಾನಿಕ್ಕುಗಳೂ ನಮ್ಮ ದೃಷ್ಟಿಯಲ್ಲಿರಬೇಕಲ್ಲವೆ!’
‘ದ್ರವ ಸೋರುವಿಕೆಯ ವಿಷಯ ಅಂತಿರಲಿ. ವಿಷಯ ಸೋರುವಿಕೆಯ ಬಗ್ಗೆ ಹೇಳಿ.’
‘ಪುರಾಣೇತಿಹಾಸಗಳ ಪ್ರಮುಖ ಆಧಾರವೇ ಇಂಫರ್ಮೇಷನ್ ಲೀಕೇಜ್ ಎಂದು ತಿಳಿ. ಹಿರಣ್ಯಕಶಿಪುವು ‘ಎಲ್ಲಿರುವನು ಹರಿ? ಈ ಕಂಬದಲ್ಲಿ ಇರುವನೇ?’ ಎಂದಾಗ ‘ಇರುವನು’ ಎಂದು ಪ್ರಹ್ಲಾದನು ನುಡಿಯಬೇಕಾದರೆ ಅವನಿಗೆ ಆ ಕಂಬದ ಬಗ್ಗೆ ಮಾಹಿತಿಯು ಮೊದಲೇ ಲೀಕ್ ಆಗಿತ್ತೆಂಬ ವದಂತಿ ಇದೆ. ಹಾಗೆ ಅವನಿಗೆ ತಿಳಿದಿರದಿದ್ದರೆ ‘ನನಗೇನು ಗೊತ್ತು? ನೀನೇ ಈ ಅರಮನೆಯನ್ನು ಕಟ್ಟಿಸಿದ್ದು. ನಿನಗೇ ಎಲ್ಲೆಲ್ಲಿ ಏನೇನಿದೆ ಎಂದು ತಿಳಿದಿರಬೇಕು’ ಎಂದು ಉತ್ತರಿಸುತ್ತಿದ್ದನೆಂದು ಢೋಂಗಿ ಸುಳ್ಳಾಚಾರ್ಯರು ನುಡಿದಿದ್ದಾರೆ. ‘ಕೋಳಿಯ ಮಿಮಿಕ್ರಿ ಮಾಡಿದರೆ ಗೌತಮರು ಹೊರನಡೆಯುತ್ತಾರೆ’ ಎಂಬ ರಹಸ್ಯವು ಲೀಕ್ ಆದುದರಿಂದಲೇ ಇಂದ್ರನಿಗೆ ಅಹಲ್ಯೆಯ ಮನೆಗೆ ಪ್ರವೇಶ ದೊರಕಿತು.’
‘ಆದರೆ ಸೂರ್ಯಸ್ತವಾಗಿಲ್ಲವೆಂಬ ವಿಷಯವು ಲೀಕ್ ಆಗದಿದ್ದುದರಿಂದ ಅರ್ಜುನನಿಗೆ ಜಯದ್ರಥನನ್ನು ಕೊಲ್ಲಲು ಸಾಧ್ಯವಾಯಿತು. ಬಭ್ರುವಾಹನನು ತನ್ನ ಮಗನೆಂಬ ವಿಷಯ ಲೀಕ್ ಆಗದಿದ್ದುದರಿಂದಲೇ ಅರ್ಜುನನ ತಲೆ ಹಾರಿದ್ದಾಯಿತು’ ಎಂದು ಸವಾಲೆಸೆದ ಶಿಷ್ಯೋತ್ತಮ.
‘ವ್ಯಾಸರಿಗೆ ತಿಳಿದಿತ್ತಲ್ಲ! ಎಲ್ಲ ರಹಸ್ಯಗಳೂ ಸೃಷ್ಟಿಕರ್ತರಿಗೆ ತಿಳಿದಿರುತ್ತದೆ. Need to know basisನಲ್ಲಿ ಅವನ್ನು ಲೀಕ್ ಮಾಡಲಾಗುತ್ತದೆ.’
‘ಪ್ರಶ್ನೆಪತ್ರಿಕೆಗಳ ಲೀಕ್ ಅಂತೂ ಸರಿ ಅಲ್ಲವೇ ಅಲ್ಲ.’
‘ಯದಾ ಯದಾ ಹಿ ಧರ್ಮಸ್ಯ… ಎಂಬುದನ್ನು ಕೇಳಿಲ್ಲವೇನಯ್ಯ? ಮೊದಲು ಧರ್ಮವು ಕೆಡಬೇಕು. ನಂತರ ಅದರ ರಿಪೇರಿ ಕೆಲಸ ಆಗಬೇಕು. ಕೇಡೇ ಇಲ್ಲದಿದ್ದರೆ ಪೊಲೀಸರು, ವಕೀಲರು, ನ್ಯಾಯಾಧೀಶರು ಮೊದಲಾದವರು ನಿರುದ್ಯೋಗಿಗಳಾಗುವುದು ಅಂತಿರಲಿ, ಸ್ವಯಂ ದೇವನೂ ನಿರುದ್ಯೋಗಿಯಾಗಿಬಿಡುತ್ತಾನೆ. ಆದ್ದರಿಂದಲೇ anti virus pack ಕೊಡುವಾಗಲೇ ಅದರಲ್ಲೊಂದು ವೈರಸ್ಸನ್ನು ಹುದುಗಿಸಿ ಕೊಡುವ ಕಂಪನಿಗಳಂತೆಯೇ ದೇವನೂ ತನ್ನ ಸಿಸ್ಟಮ್ಮಿನಲ್ಲಿ ರಾವಣ, ದುರ್ಯೋಧನನಂತಹ ವೈರಸ್ಸುಗಳನ್ನು ಇರಿಸುತ್ತಾನೆ. ಅವುಗಳ ಹಾವಳಿ ವಿಪರೀತವಾದಾಗ anit virus ಆಗಿಯೋ, fire wall ಆಗಿಯೋ ಅವತರಿಸುವುದೇ ದೇವನ ಕೆಲಸ. ಸರ್ಕಾರದ ಕೆಲಸ ದೇವರ ಕೆಲಸ. ಆದ್ದರಿಂದ ಇಲ್ಲಿಯೂ ಸಿಸ್ಟಮ್ ಜೊತೆಗೇ ವೈರಸ್ಸೂ ಇರುತ್ತದೆ. antivirus pack ಮಾರುವವನು ಟ್ರೋಜಾನ್ ಹಾರ್ಸನ್ನು ಹೋಗಲಾಡಿಸುವ ಕೆಲಸ ಮಾಡುವುದಿಲ್ಲ. ಅದಕ್ಕೇ ಬೇರೆ ಪ್ರೊಫೆಷನಲ್ಸ್ ಇರುತ್ತಾರೆ. ಹಾಗೆಯೇ ವಿದ್ಯಾ ಇಲಾಖೆ ಲೀಕಿಸುತ್ತದೆ, ಜಿರಳೆಗಳಂತಹ ಪಕ್ಷಗಳು ಬಂದು ತಮ್ಮ ಮೀಸೆಯಿಂದ ಆ ಲೀಕನ್ನು ಮುಚ್ಚುತ್ತವೆ. ಲೀಕಾಗುವುದು, ಅದನ್ನು ಸ್ಟಾಪ್ ಮಾಡುವುದು ನಿರಂತರ ಕ್ರಿಯೆಗಳೆಂದು ತಿಳಿ. ಪುನರಪಿ ಲೀಕೇಜ್ ಪುನರಪಿ ಸ್ಟಾಪೇಜ್ ಪುನರಪಿ ಸೀಕ್ರೆಟ್ಸ್ ಜಠರೇ ಶಯನಂ’ ಎಂದರು ಟೀಕಾಚಾರ್ಯರು.
ಈ ಮಹತ್ತರವಾದ ಚಿಂತನೆಗಳನ್ನು ಜಗತ್ತಿಗೇ ಲೀಕ್ ಮಾಡಲೆಂದು ಶಿಷ್ಯೋತ್ತಮನು ತ್ವರಿತವಾಗಿ ಹೊರನಡೆದ.






