ಈ ೨೦೨೬ರ ವರ್ಷ ಕದನ, ಸಂಘರ್ಷಗಳಲ್ಲಿ ಇಡೀ ಜಗತ್ತನ್ನು ವ್ಯಸ್ತವಾಗಿಸಿದೆ. ತೀರ ಎಲ್.ಪಿ.ಜಿ. ಸಿಲಿಂಡರ್ ಸಿಗಲಾರದ ಸ್ಥಿತಿಯಿಂದ ಹೊರಬಂದಿರುವುದು ಹೌದಾದರೂ, ಇನ್ಯಾವಾಗ ಪರಿಸ್ಥಿತಿ ಬಿಗಡಾಯಿಸುವುದೋ, ಮತ್ಯಾವ ಸಂಘರ್ಷದಲ್ಲಿ ಭಾರತವೂ ಸೇರಿದಂತೆ ಜಗತ್ತು ಎಳೆಯಲ್ಪಡುವುದೋ ಎಂಬ ದುಗುಡವೊಂದು ಇದ್ದೇ ಇದೆ. ಮೇಲ್ನೋಟಕ್ಕೆ ಉಕ್ರೇನ್-ರಷ್ಯಗಳು ತಣ್ಣಗಾಗಿವೆ, ಇರಾನಿನ ವಿಷಯ ಮುಗಿಯಿತು ಎಂದೆಲ್ಲ ಅನಿಸಿದರೂ ಆ ಸಂಘರ್ಷಗಳು ಸಂಪೂರ್ಣವಾಗಿಯೇನೂ ನಂದಿಹೋಗಿಲ್ಲ. ಮತ್ತಾವಾಗ ಧಗಧಗಿಸಿಬಿಡುತ್ತವೋ ಎಂಬ ಆತಂಕಕ್ಕೆ ಕೊನೆ ಇಲ್ಲ.
ಹೀಗೆಲ್ಲ ಇರುವಾಗ ದೇಶ ಮತ್ತದರ ಪ್ರಜೆಗಳೆಲ್ಲ ಯುದ್ಧದ ಮಾನಸಿಕ ತಯಾರಿಯೊಂದರಲ್ಲಿ ಇರಬೇಕಿರುತ್ತದೆ. ಶಾಂತಿ-ಸಹಬಾಳ್ವೆಗಳೇ ಬದುಕಿನ ಉನ್ನತ ಆದರ್ಶ ಎಂಬುದೆಲ್ಲ ಹೌದಾದರೂ, ವೈರಿಯು ಸಂಘರ್ಷವನ್ನು ನಮ್ಮ ಮನೆ ಬಾಗಿಲಿಗೆ ತಂದಾಗ ಅವರನ್ನು ಉಪವಾಸ ಸತ್ಯಾಗ್ರಹ ಮಾಡಿ ಹೆದರಿಸುವುದಕ್ಕಂತೂ ಆಗುವುದಿಲ್ಲವಲ್ಲ! ಇದರರ್ಥ, ನಾಳೆಯಿಂದಲೇ ಪಾಕಿಸ್ತಾನದ ಮೇಲೆ ಯುದ್ಧ ಸಾರಿ ಎಂದು ಆಗ್ರಹಿಸುವ ಯುದ್ಧೋನ್ಮಾದ ತೋರಬೇಕು ಎಂದಲ್ಲ. ಬದಲಿಗೆ, ಸಂಘರ್ಷದ ಅಲೆಗಳೇ ವರ್ತಮಾನವನ್ನು ಬಡಿಯುತ್ತಿರುವ ಸಂದರ್ಭದಲ್ಲಿ ಭಾರತವು ಸ್ವಾತಂತ್ರ್ಯಾನಂತರ ಎದುರಿಸಿದ ಸಂಘರ್ಷಗಳನ್ನು, ಅಲ್ಲಿ ತೋರಿದ ವೀರಕ್ಷಾತ್ರವನ್ನು ಒಮ್ಮೆ ಸಂದರ್ಭಸಹಿತ ನೆನಪಿಸಿಕೊಳ್ಳುವುದಕ್ಕೆ ಇದು ಸೂಕ್ತ ಕಾಲ. ಅದು ನಮಗೆ ವಿಶ್ವಾಸವೊಂದನ್ನು ತಂದುಕೊಡುತ್ತದೆ. ಇತ್ತೀಚಿನ ಆಪರೇಶನ್ ಸಿಂದೂರ, ಅದಕ್ಕೂ ಹಿಂದಿನ ಸರ್ಜಿಕಲ್ ಸ್ಟ್ರೈಕ್ ಹಾಗೂ ಬಾಲಾಕೋಟ್ ದಾಳಿಗಳೆಲ್ಲ ಹಾಗೊಂದು ವಿಶ್ವಾಸವನ್ನು ತುಂಬಿವೆ. ಆದರೆ, ಅದಕ್ಕೂ ಪೂರ್ವದಲ್ಲಿ ಸಣೆಸಿದ ಯುದ್ಧಗಳಲ್ಲಿ ಸಹ ಭಾರತಕ್ಕೆ ತುಂಬ ಪ್ರತಿಕೂಲ ಪರಿಸ್ಥಿತಿಗಳಿದ್ದವು. ಅವನ್ನೆಲ್ಲ ಭಾರತ ಮತ್ತದರ ಸೇನಾಬಲವು ನಿರ್ವಹಿಸಿದ ರೀತಿಯನ್ನು ಅವಲೋಕಿಸಿದಾಗಲಷ್ಟೇ ನಿಜ ವಿಶ್ವಾಸ ಮೊಳೆಯುತ್ತದೆ. ಅದಲ್ಲದಿದ್ದರೆ, ಭಾರತವು ಯಾರನ್ನಾದರೂ, ಹೇಗಾದರೂ ಮಣಿಸಿಬಿಡಬಲ್ಲದೆಂಬ ಅತಾರ್ಕಿಕ ಭಾವನೆಗಳಿಗೂ ದಾರಿಯಾಗಿಬಿಡುತ್ತದೆ. ನಮ್ಮಲ್ಲಿ ಭಾರತದ ಸಾಮರ್ಥ್ಯದ ಬಗ್ಗೆ ದೃಢನಂಬಿಕೆ ಇರಬೇಕು, ಆದರದು ವಾಸ್ತವದಲ್ಲಿ ಬೇರೂರಿರಬೇಕು.
ಕಾಶ್ಮೀರದ ಮೊದಲ ಸಂಘರ್ಷ, ಭಾರತದ ಹರಸಾಹಸ
ಸ್ವಾತಂತ್ರ್ಯ ದೊರೆತ ಬೆನ್ನಲ್ಲೇ ಜಮ್ಮು-ಕಾಶ್ಮೀರದಲ್ಲಿ ೧೯೪೪೭-೪೮ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ ತೆರೆದುಕೊಂಡಿತು. ಭಾರತವು ಆ ಯುದ್ಧವನ್ನು ಅದೆಂಥ ಬಿಕ್ಕಟ್ಟಿನಲ್ಲಿ ಎದುರಿಸಬೇಕಾಯಿತು ಎಂಬ ವಿವರಗಳನ್ನು ಓದಿಕೊಂಡಾಗ ಮಾತ್ರವೇ ಇವತ್ತಿಗೂ ಜಮ್ಮು-ಕಾಶ್ಮೀರ ಅದೇಕೆ ಜ್ವಲಂತ ಸಮಸ್ಯೆಯಾಗಿಯೇ ಉಳಿದಿದೆ ಎಂಬುದು ಅರ್ಥವಾಗುತ್ತದೆ. ನಿಜ, ಜಮ್ಮು-ಕಾಶ್ಮೀರವನ್ನು ಪ್ರತ್ಯೇಕತೆಯಲ್ಲಿರಿಸಿದ್ದ ೩೭೦ನೇ ವಿಧಿಯನ್ನು ೨೦೧೯ರಲ್ಲಿ ತೆರವುಗೊಳಿಸಿದ ನಂತರ ಅದು ನಿಜಾರ್ಥದಲ್ಲಿ ಭಾರತದೊಂದಿಗೆ ವಿಲೀನವಾಗಿದೆ. ಆದರೆ ಪಾಕಿಸ್ತಾನ ಆಕ್ರಮಿತ ಜಮ್ಮು-ಕಾಶ್ಮೀರ ಹಾಗೆಯೇ ಉಳಿದಿದೆಯಲ್ಲ? ಈ ಪರಿಸ್ಥಿತಿ ಬಂದಿರುವುದಕ್ಕೆ ಮೂಲ ಕಾರಣ ೧೯೪೬-೪೭ರ ಸಂಘರ್ಷ.

ಜಮ್ಮು-ಕಾಶ್ಮೀರದ ರಾಜ ಹರಿಸಿಂಗ್ ತಾನು ಯಾವ ಕಡೆಗೂ ಸೇರದೇ ಸ್ವತಂತ್ರವಾಗಿರುವ ಪ್ರಯತ್ನದಲ್ಲಿದ್ದಾಗ, ಪಾಕಿಸ್ತಾನವು ದೊಡ್ಡಮಟ್ಟದಲ್ಲಿ ಬುಡಕಟ್ಟು ಮಂದಿಯ ಪಡೆಯನ್ನು ತನ್ನ ಸೇನೆಯ ನೇತೃತ್ವದಲ್ಲಿ ಕಾಶ್ಮೀರಕ್ಕೆ ನುಗ್ಗಿಸಿತು. ಆ ಜನರಿಗೆ ಕೊಟ್ಟಿದ್ದ ಆಮಿಷ ಎಂದರೆ – “ದಾರಿಯುದ್ದಕ್ಕೂ ನೀವು ದೋಚುವ ಸಂಪತ್ತು ಹಾಗೂ ಕೈಗೆ ಸಿಗುವ ಹೆಣ್ಣುಗಳೆಲ್ಲ ನಿಮ್ಮ ಸ್ವತ್ತು” ಎನ್ನುವುದು. ಹೀಗಾಗಿ ಕೆಲ ತಿಂಗಳಲ್ಲೇ ಅಲ್ಲಿ ಆದ ಅತ್ಯಾಚಾರ ಮತ್ತು ಲೂಟಿಗಳಿಗೆ ಲೆಕ್ಕವೇ ಇಲ್ಲವಾಗಿತ್ತು. ನಂತರ ಹರಿಸಿಂಗ್‌ರಿಗೆ ಪರಿಸ್ಥಿತಿ ಅರಿವಾಗಿ ಭಾರತದೊಂದಿಗೆ ವಿಲೀನ ಒಪ್ಪಂದ ಮಾಡಿಕೊಂಡಾಗ ನಮ್ಮ ಸೇನೆ ಶ್ರೀನಗರ ಹಾಗೂ ಲೇಹ್-ಲಢಾಕ್ ಉಳಿಸಿಕೊಳ್ಳುವುದರಲ್ಲಿ ಅಪರಿಮಿತ ಶೌರ್ಯ ಹಾಗೂ ಬಲಿದಾನವನ್ನು ತೋರಿತು.
ಆದರೆ? ಆ ಯುದ್ಧದಲ್ಲಿ ಪಾಕಿಸ್ತಾನದ ಜೊತೆಗೆ ಇನ್ನೆರಡು ಸಂಗತಿಗಳು ಬಹುಮುಖ್ಯ ಸವಾಲಾಗಿ ಪರಿಣಮಿಸಿದ್ದವು. ಇವೇ ಕಾರಣಗಳಿಗಾಗಿ ಜಮ್ಮು-ಕಾಶ್ಮೀರದ ಬಹುದೊಡ್ಡ ಭಾಗವನ್ನು ಭಾರತವು ಕಳೆದುಕೊಂಡು, ಇವತ್ತಿಗೆ ಕಾನೂನುಬಾಹಿರವಾಗಿ ಪಾಕಿಸ್ತಾನವು ಅದನ್ನು ಆಕ್ರಮಿಸಿಕೊಂಡಿರುವುದಕ್ಕೆ ಸಾಧ್ಯವಾಗಿದೆ. ಇವುಗಳಲ್ಲೊಂದು ಬ್ರಿಟಿಷ್ ದ್ರೋಹದ ಕಥೆ.
ಭಾರತ-ಪಾಕಿಸ್ತಾನಗಳೆರಡು ವಿಭಜನೆ ಆದಾಗ ಸೇನೆ ಸಹ ವಿಭಜನೆ ಆಯಿತು. ೧೮೫೭ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಾಟ್ ಸಮುದಾಯದ ಯೋಧರು ಹೆಚ್ಚಿನ ಸಂಖ್ಯೆಯಲ್ಲಿ ಸಿಡಿದೆದ್ದಿದ್ದರೆಂಬುದನ್ನು ಗುರುತಿಸಿದ್ದ ಬ್ರಿಟಿಷರು ನಂತರದಲ್ಲಿ ಹಿಂದು-ಸಿಖ್-ಮುಸ್ಲಿಂ ಯೋಧರಲ್ಲಿ ಬೇಧವನ್ನು ತಂದಿಟ್ಟು ಹೆಚ್ಚಿನ ಮುಸ್ಲಿಂ ಸೈನಿಕರ ನೇಮಕಕ್ಕೆ ಕಾರಣವಾಗಿದ್ದರು. ಹೀಗಾಗಿ ಪಾಕಿಸ್ತಾನವು ಸೃಷ್ಟಿಯಾದಾಗ ಅದರ ಭೂಭಾಗಕ್ಕೆ ಹೋಲಿಸಿದರೆ ಹೆಚ್ಚೇ ಎನಿಸುವ ರೀತಿಯಲ್ಲಿ ಯೋಧರು ಅತ್ತ ಕಡೆ ಜಮೆಯಾದರು. ಇನ್ನು, ಭಾರತ ಹಾಗೂ ಪಾಕಿಸ್ತಾನಗಳೆರಡೂ ಆಗಷ್ಟೇ ಸ್ವತಂತ್ರಗೊಂಡಿದ್ದರಿಂದ, ಸಂಕ್ರಮಣ ಕಾಲವನ್ನು ನಿಭಾಯಿಸುವುದಕ್ಕೆ ಎರಡೂ ಕಡೆಯ ಸೇನಾ ಮುಖ್ಯಸ್ಥರು ಹಾಗೂ ಹಲವು ಅಧಿಕಾರಿ ಹುದ್ದೆಗಳನ್ನು ಬ್ರಿಟಿಷರೇ ನಿಭಾಯಿಸುತ್ತಿದ್ದರು. ಹೀಗಿರುವಾಗ, ಅವತ್ತಿಗೆ ಸೋವಿಯತ್ ಆತಂಕವನ್ನು ಗಮನದಲ್ಲಿರಿಸಿಕೊಂಡು ಬ್ರಿಟಿಷ್ ಆಡಳಿತವು ಜಮ್ಮು-ಕಾಶ್ಮೀರದ ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನ ಪ್ರದೇಶದಲ್ಲಿ ನಿಯೋಜಿಸಿದ್ದ ಗಿಲ್ಗಿಟ್ ಸ್ಕೌಟ್ಸ್ ನೇತೃತ್ವವನ್ನು ಬ್ರಿಟಿಷ್ ಅಧಿಕಾರಿಗಳೇ ವಹಿಸಿದ್ದರು. ಮಹಾರಾಜರ ಪ್ರತಿನಿಧಿ ಕೇವಲ ಸಮಾಲೋಚನೆಗೆ ಮಾತ್ರ ನಿಯೋಜನೆಯಲ್ಲಿದ್ದರು. ಯಾವಾಗ ಕಾಶ್ಮೀರ ಸಂಘರ್ಷ ತೆರೆದುಕೊಂಡಿತೋ ಆಗ ಗಿಲ್ಗಿಟ್ ಸ್ಕೌಟ್ಸ್ ನೇತೃತ್ವ ವಹಿಸಿದ್ದ ಬ್ರಿಟಿಷ್ ಅಧಿಕಾರಿ ಮೇಜರ್ ಬ್ರೌನ್, ಪಾಕಿಸ್ತಾನದ ಕಡೆಯಲ್ಲಿ ನಿಯೋಜಿತವಾಗಿದ್ದ ಇನ್ನೊಬ್ಬ ಬ್ರಿಟಿಷ್ ಸೇನಾಧಿಕಾರಿ ಸಹೋದ್ಯೋಗಿಯನ್ನು ಕರೆಸಿಕೊಂಡು ಆತನಿಗೆ ಆ ಪ್ರದೇಶವನ್ನು ಹಸ್ತಾಂತರಿಸಿಬಿಟ್ಟ! ಇವತ್ತಿಗೆ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶವು ಪಾಕಿಸ್ತಾನ ಆಕ್ರಮಿತವಾಗಿರುವುದಕ್ಕೆ ಇದೇ ಕಾರಣ. ಭಾರತವು ವಿಶ್ವ ರಾಜಕಾರಣದಲ್ಲಿ ಬೆಳೆಯಬಾರದು ಎಂಬ ಪಾಶ್ಚಾತ್ಯ ಎಚ್ಚರಿಕೆ ಈಗಿನದ್ದಲ್ಲ, ಅದು ಬ್ರಿಟಿಷ್ ಕಾಲದಲ್ಲೇ ಇತ್ತು. ಹಾಗೆಂದೇ ಅವತ್ತಿಗೆ ಅಫಘಾನಿಸ್ತಾನದ ಆಚೆಯಿಂದಲೇ ಶುರುವಾಗುತ್ತಿದ್ದ ಸೋವಿಯತ್ ಭೂಭಾಗದಿಂದ ಭಾರತವನ್ನು ಆದಷ್ಟು ದೂರವಿರಿಸುವುದಕ್ಕೆ ಬಫರ್ ಜೋನ್ ಒಂದನ್ನು ಸೃಷ್ಟಿಸಲಾಯಿತೆಂದು ಈ ವಿದ್ಯಮಾನವನ್ನು ವಿಶ್ಲೇಷಿಸಲಾಗುತ್ತದೆ.

ಇನ್ನು, ಜಮ್ಮು-ಕಾಶ್ಮೀರದ ಬೇರೆ ಭೂಭಾಗಗಳಲ್ಲಿ ಹೋರಾಡುತ್ತಿದ್ದ ಸೇನೆಯ ಸ್ಥಿತಿ ಹೇಗಿತ್ತು ಗಮನಿಸಿ. ಮಿಲಿಟರಿ ಗುಪ್ತಚರ ವಿಭಾಗದ ಮುಖ್ಯ ಕಚೇರಿ ಪಾಕಿಸ್ತಾನದ ಕಡೆ ಹೋಗಿಬಿಟ್ಟಿತ್ತು. ಬ್ರಿಟಿಷ್ ಮುಖ್ಯ ಮಿಲಿಟರಿ ಕಮಾಂಡ್ ಹಾಗೂ ಭಾರತದ ಕಮಾಂಡ್ ಎರಡರ ಕಚೇರಿಯೂ ಒಂದೆಡೆ ಇದ್ದರೆ ತಾನು ಪಕ್ಷಪಾತ ಮಾಡಿದಂತಾಗುತ್ತದೆ ಎಂಬ ಕಾರಣ ಒಡ್ಡಿ ಬ್ರಿಟಿಷ್ ಆಡಳಿತವು ಭಾರತದ ಸೇನೆಯ ಕಚೇರಿ ಕಾರ್ಯಸ್ಥಾನವನ್ನು ಕೆಂಪುಕೋಟೆಗೆ ಸ್ಥಳಾಂತರಿಸಿತ್ತು. ಆ ಜಾಗವೇನೋ ದೊಡ್ಡದಿರಬಹುದು, ಆದರೆ ಕಚೇರಿ ಮೂಲಸೌಕರ್ಯಗಳಿಗೆ ಬೇಕಾದ ವ್ಯವಸ್ಥೆ ಅಲ್ಲಿರಲಿಲ್ಲ. ಅತ್ತ ಪಾಕಿಸ್ತಾನಿ ಲೂಟಿಕೋರರು ಜಮ್ಮು-ಕಾಶ್ಮೀರದ ಹಲವು ಭಾಗಗಳಿಗೆ ನುಗ್ಗುತ್ತಿರುವ ಸಂದೇಶಗಳು ಬಂದಿದ್ದವಾದರೂ, ಆ ಸ್ಥಳಗಳು ಎಲ್ಲಿವೆ ಎಂದು ನಿಖರವಾಗಿ ಗುರುತಿಸುವ ನಕ್ಷೆಗಳೇ ನಮ್ಮಲ್ಲಿರಲಿಲ್ಲ.
ಈ ಎಲ್ಲ ನ್ಯೂನತೆಗಳ ನಡುವೆಯೂ ಶ್ರೀನಗರ ಹಾಗೂ ಲಢಾಕ್ ಅನ್ನು ಭಾರತದಲ್ಲೇ ಉಳಿಸಿಕೊಳ್ಳುವಂತೆ ಮಾಡಿದ್ದು ಇಲ್ಲಿನ ಕ್ಷಾತ್ರಬಲ. ಆ ಕುರಿತ ಅಸಂಖ್ಯ ವೀರಗಾತೆಗಳು ನಮ್ಮನ್ನು ರೋಮಹರ್ಷಿತಗೊಳಿಸುತ್ತವಾದರೂ, ಮಾದರಿಗಾಗಿ ಕೆಲವಷ್ಟನ್ನೇ ಇಲ್ಲಿ ಗಮನಿಸೋಣ.

ಶ್ರೀನಗರದತ್ತ ನುಗ್ಗುತ್ತಿದ್ದ ಸುಮಾರು ೭೦೦ ಆಕ್ರಮಣಕಾರರನ್ನು ಬಡಗಾಂವ್’ನಲ್ಲಿ ತಮ್ಮ ಕೆಲವೇ ನೂರು ಸೈನಿಕರೊಂದಿಗೆ ದೀರ್ಘ ಸಮಯದವರೆಗೆ ತಡೆದು ನಿಲ್ಲಿಸಿದವರು ಮೇಜರ್ ಸೋಮನಾಥ ಶರ್ಮ. ಅವರ ಒಂದು ಕೈಗೆ ಪ್ಲಾಸ್ಟರ್ ಅಂಟಿತ್ತು. ಆದರೂ ಸುರಕ್ಷತೆಗಾಗಿ ತೋಡಿಕೊಂಡಿದ್ದ ಕಾಲುವೆಗಳಲ್ಲಿ ಅತ್ತಿಂದಿತ್ತ ಚಲಿಸುತ್ತ, ಯೋಧರನ್ನು ಹುರಿದುಂಬಿಸುತ್ತ ಪಾಕಿಸ್ತಾನಿಯರು ಮುಂದೆ ಬರುವುದಕ್ಕೆ ಅಡ್ಡವಾಗಿದ್ದರು. ಅವರ ಕೊನೆಯ ರೆಡಿಯೊ ಸಂದೇಶ ಹೀಗಿತ್ತು – “ವೈರಿಗಳು ಕೇವಲ ೫೦ ಯಾರ್ಡ್ ದೂರದಲ್ಲಿದ್ದಾರೆ. ನಮ್ಮ ಜನಬಲ ತುಂಬ ಕಡಮೆ ಇದೆ. ದೊಡ್ಡಮಟ್ಟದಲ್ಲಿ ನಮ್ಮ ಮೇಲೆ ಸಿಡಿಮದ್ದಿನ ಪ್ರಹಾರವಾಗುತ್ತಿದೆ. ಆದರೆ ನಾವು ಒಂದು ಇಂಚು ಸಹ ಹಿಂದಕ್ಕೆ ಅಡಿ ಇಡದಿರಲು ನಿರ್ಧರಿಸಿದ್ದೇವೆ. ಕೊನೆಯ ಗುಂಡು, ಕೊನೆಯ ವ್ಯಕ್ತಿ ಇರುವವರೆಗೂ ಹೋರಾಡುತ್ತೇವೆ.” ಮಾತಿನಂತೆಯೇ ನಡೆದು ವೀರಗತಿ ಪಡೆದ ಮೇಜರ್ ಸೋಮನಾಥ ಶರ್ಮರಿಗೆ ನಂತರ ಮರಣೋತ್ತರ ಪರಮವೀರ ಚಕ್ರವನ್ನು ನೀಡಲಾಯಿತು. ಯುದ್ಧಭೂಮಿಯ ಸರ್ವೋಚ್ಚ ಗೌರವ ಅದು. ಅದನ್ನು ಪಡೆದ ಮೊದಲಿಗರು ಮೇಜರ್ ಸೋಮನಾಥ ಶರ್ಮ.
ಇತ್ತ, ಲೇಹ್ ಅನ್ನು ಉಳಿಸಿಕೊಳ್ಳಬೇಕಾದರೆ ಜೋಜಿ ಲಾ ಕಣಿವೆಯ ಶಿಖರದಲ್ಲಿ ಕುಳಿತಿದ್ದ ಪಾಕಿಸ್ತಾನಿಯರನ್ನು ಹಿಮ್ಮೆಟ್ಟಿಸಬೇಕಾಗಿದ್ದು ಅನಿವಾರ್ಯವಾಗಿತ್ತು. ಆದರೆ, ಮೇಲಿನ ಸ್ಥಾನದಲ್ಲಿದ್ದ ಅವರಿಗೆ ಕೆಳಗಿನಿಂದ ಬರುತ್ತಿದ್ದ ಭಾರತೀಯರನ್ನು ನಿಯಂತ್ರಿಸುವುದು ಸುಲಭವಾಗಿತ್ತು. ಹಾಗೆಂದೇ ಭಾರತೀಯ ಸೇನೆಯ ನೂರಾರು ಯೋಧರು ಜೋಜಿ ಲಾ ವಶಪಡಿಸಿಕೊಳ್ಳುವ ಯತ್ನದಲ್ಲಿ ಹುತಾತ್ಮರಾಗಿಹೋದರು. ಆಗ ಮೇಜರ್ ಜನರಲ್ ಕೆ.ಎಸ್. ತಿಮ್ಮಯ್ಯ ಯಾರೂ ಊಹಿಸಿದ, ಎಲ್ಲರೂ ಇದೊಂದು ಹುಚ್ಚಾಟ ಎಂದು ಹೇಳಬಹುದಾಗಿದ್ದ ಧೀರ ನಿರ್ಣಯವನ್ನು ಕೈಗೊಂಡರು. ಕೇವಲ ಯಾಕ್ ಎಂಬ ಪ್ರಾಣಿಯೊಂದು ನಡೆಯಬಹುದಾಗಿದ್ದ, ೧೧,೫೭೮ ಅಡಿಗಳ ಎತ್ತರಕ್ಕೆ ಯುದ್ಧ ಟ್ಯಾಂಕುಗಳನ್ನು ಕೊಂಡೊಯ್ಯುವ ನಿರ್ಧಾರವದು! ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಎಂಬ ರೆಜಿಮೆಂಟಿನ ಯೋಧರು ವೈರಿಗಳ ಗುಂಡಿನ ಭೋರ್ಗರೆತಗಳ ನಡುವೆಯೇ ಇಪ್ಪತ್ತು ದಿನಗಳಲ್ಲಿ ಟ್ಯಾಂಕ್ ಹೋಗುವ ಮಾರ್ಗ ನಿರ್ಮಿಸಿದರು. ಅವನ್ನು ಬಳಸಿಕೊಂಡು ಮುನ್ನುಗ್ಗಿಹೋದ ಟ್ಯಾಂಕರುಗಳನ್ನು ಕಂಡು ಪಾಕಿಸ್ತಾನಿಯರು ಇದೇನು ತಾವು ಕನಸಿನಲ್ಲಿದ್ದೇವೋ ಎಂಬಂತೆ ಅಚ್ಚರಿಗೊಳಗಾದರು. ಯುದ್ಧ ಟ್ಯಾಂಕುಗಳು ಜೋಜಿ ಲಾದಲ್ಲಿ ಅಗ್ನಿಮಳೆಯನ್ನು ಪ್ರಾರಂಭಿಸುತ್ತಲೇ ಪಾಕಿಸ್ತಾನಿಯರು ಅಲ್ಲಿಂದ ಕಾಲ್ಕಿತ್ತರು.
ಹೀಗೆ, ಎಲ್ಲ ಬಲಹೀನತೆಗಳ ನಡುವೆಯೂ ಗೆಲ್ಲಬಲ್ಲ ಭಾರತೀಯ ಯೋಧರ ಛಾತಿಯನ್ನು ಸ್ವಾತಂತ್ರ್ಯಾನಂತರದ ಮೊದಲ ಸಂಗ್ರಾಮವೇ ಖಾತ್ರಿಗೊಳಿಸಿತ್ತು.
೧೯೬೨: ಅವಮಾನದ ನಡುವೆಯೂ ಸ್ಮರಿಸಿಕೊಳ್ಳಬೇಕಾದ ಶೌರ್ಯಕಥನ
ಭಾರತ-ಚೀನಾ ಯುದ್ಧದಲ್ಲಿ ಖುದ್ದು ಪಾಲ್ಗೊಂಡಿದ್ದ ಬ್ರಿಗೇಡಿಯರ್ ಜಾನ್ ಪಿ. ದಳವಿ ಬರೆದ ‘ದ ಹಿಮಾಲಯನ್ ಬ್ಲಂಡರ್’ ಪುಸ್ತಕವು ಬಹಳ ಹಿಂದೆಯೇ ರವಿ ಬೆಳಗೆರೆಯವರಿಂದ ಕನ್ನಡದಲ್ಲಿ ಅನುವಾದಗೊಂಡು ಜನಪ್ರಿಯವಾಗಿದೆ. ಹೀಗಾಗಿ, ೧೯೬೨ರಲ್ಲಿ ಚೀನಾದ ಜೊತೆಗಿನ ಯುದ್ಧ ಸೋಲುವಲ್ಲಿ ಅವತ್ತಿನ ನೆಹರು ಸರ್ಕಾರದ ಪ್ರಮಾದವಿತ್ತೇ ವಿನಃ ಸೈನಿಕರ ಶೌರ್ಯದ ಕೊರತೆ ಅಲ್ಲ ಎಂಬುದು ಬಹುತೇಕರಿಗೆ ಮನದಟ್ಟಾಗಿದೆ.

ಸೇನೆಯ ಪದೋನ್ನತಿಯಲ್ಲಿ ಸರ್ಕಾರದ ಹಸ್ತಕ್ಷೇಪ, ಅದರಲ್ಲೂ ನೆಹರು ಆಪ್ತ ಹಾಗೂ ರಕ್ಷಣಾ ಸಚಿವ ಕೃಷ್ಣ ಮೆನನ್ ದುರಾಗ್ರಹಗಳು ಅತಿಯಾಗಿದ್ದವು. ಆಗ ಸೇನೆಯ ಜನರಲ್ ಆಗಿದ್ದವರು ಪಿ.ಎನ್. ಥಾಪರ್. ಇವತ್ತು ನೀವು ಕೇಳುವ ಹೆಸರುಗಳಾದ ಇತಿಹಾಸಕಾರ್ತಿ ರೊಮಿಲಾ ಥಾಪರ್, ಪತ್ರಕರ್ತ ಕರಣ್ ಥಾಪರ್ – ಇವರೆಲ್ಲ ಅದೇ ಕುಟುಂಬದ ಹಲವು ಕವಲುಗಳು. ಅದಿರಲಿ, ಈ ಹಿಂದಿನ ಜನರಲ್ ಆಗಿದ್ದ ತಿಮ್ಮಯ್ಯನವರಿಗೆ ಸರ್ಕಾರದ ಒತ್ತಡಗಳನ್ನು ಧಿಕ್ಕರಿಸುವ ಛಾತಿ ಇತ್ತು. ಆದರೆ, ಥಾಪರ್ ಕಾಲದಲ್ಲಿ ಸೇನೆಯ ಉನ್ನತ ಅಧಿಕಾರಿ ವಲಯಕ್ಕೆ ಎಂಥೆಂಥವರೋ ನೇಮಕವಾಗಿಹೋದರು. ಉದಾಹರಣೆಗೆ, ಸೇನಾ ತುಕಡಿಯನ್ನು ಮುನ್ನಡೆಸಿಯೇ ಅನುಭವವಿಲ್ಲದ ಬಿ.ಎಂ. ಕೌಲ್ ಎಂಬ ಮನುಷ್ಯನ್ನು ಕೇವಲ ಅವರು ನೆಹರು ಪರಿವಾರಕ್ಕೆ ಆಪ್ತ ಎಂಬ ಕಾರಣಕ್ಕೆ ಚೀಫ್ ಆಫ್ ಜನರಲ್ ಸ್ಟಾಫ್ ಹುದ್ದೆಗೆ ತರಲಾಯಿತು. ಹಿಮಕಂದರಗಳಲ್ಲಿ ನಡೆಯಲುಬೇಕಾದ ಬೂಟು-ಬಟ್ಟೆ, ಮದ್ದುಗುಂಡು ಇವ್ಯಾವುದನ್ನೂ ಸಮರ್ಪಕವಾಗಿ ಒದಗಿಸದೆ ನಮ್ಮ ಯೋಧರನ್ನು ಕಾದಾಡಲು ಕಳುಹಿಸಲಾಯಿತು.
ಇವೆಲ್ಲದರ ನಡುವೆಯೂ ವೀರಗಾಥೆಗಳು ಬಂದವು. ರೆಜಾಂಗ್ ಲಾ ಹಿಮಪರ್ವತದ ತಪ್ಪಲಿನಲ್ಲಿ ಕುಮಾಂವ್ ರೆಜಿಮೆಂಟಿನ ೧೨೦ ಯೋಧರು ೫,೦೦೦ ಚೀನಿಯರ ವಿರುದ್ಧ ಹೋರಾಡಿದ ಘಟನೆ ಜಗತ್ತಿನ ಮಿಲಿಟರಿ ಇತಿಹಾಸದಲ್ಲೇ ಒಂದು ಅಚ್ಚಳಿಯದ ಅಧ್ಯಾಯ. ತಿಂಗಳುಗಳ ನಂತರ ರೆಡ್‌ಕ್ರಾಸ್ ಸಂಸ್ಥೆ ಅಲ್ಲಿಗೆ ಹೋದಾಗ, ಆ ಹಿಮಭೂಮಿಯಲ್ಲಿ ಭಾರತೀಯ ಯೋಧರು ಬಂದೂಕಿನ ನಳಿಗೆಯ ಮೇಲೆ ಬೆರಳಿಟ್ಟುಕೊಂಡೇ ವೀರಮರಣ ಹೊಂದಿ, ಅಲ್ಲಿನ ವಾತಾವರಣದ ಕಾರಣದಿಂದ ಅದೇ ಭಂಗಿಯಲ್ಲಿಯೇ ಹಿಮಗಟ್ಟಿದ ಸ್ಥಿತಿಯಲ್ಲಿದ್ದರು! ಲೆಕ್ಕ ಹಾಕಿ ಸುಸ್ತಾಗುವಷ್ಟು ಚೀನಿಯರ ಹೆಣಗಳು ಹತ್ತಿರದಲ್ಲಿ ಬಿದ್ದು ಹೆಪ್ಪುಗಟ್ಟಿದ್ದವು. ಕೊನೆಯ ಮನುಷ್ಯ, ಕೊನೆಯ ಗುಂಡು ಇರುವವರೆಗೂ ನಮ್ಮವರು ತೋರಿದ ಪರಾಕ್ರಮ ಅದೆಂಥದ್ದಿದ್ದಿರಬಹುದು ಊಹಿಸಿ.
೧೯೬೨ರ ಕದನವನ್ನು ೧೯೬೭ರಲ್ಲಿ ನತುಲಾದಲ್ಲಿ ನಡೆದ ಘಟನೆಯೊಂದಿಗೆ ಸಮೀಕರಿಸದಿದ್ದರೆ ಈ ಯುದ್ಧದ ಒಟ್ಟಾರೆ ಪಾಠ ಅರ್ಥವಾಗುವುದಿಲ್ಲ. ೨೦೨೦ರ ಗಲ್ವಾನ್ ಕಣಿವೆ ಸಂಘರ್ಷವನ್ನೂ ಇದರ ಜೊತೆ ಸಮೀಕರಿಸಿಕೊಳ್ಳಬಹುದು.
೧೯೬೨ರ ನಂತರ ಚೀನಾಕ್ಕೆ ತಾನು ಯಾವತ್ತಿಗಿದ್ದರೂ ಭಾರತವನ್ನು ಆಟವಾಡಿಸಬಹುದು ಎಂಬಂತಹ ಭಾವನೆ ಬಂದಂತಿತ್ತು. ಹಾಗೆಂದೇ ನತುಲಾ ಪರ್ವತ ಶ್ರೇಣಿಯಲ್ಲಿ ಸೇನೆಯ ಗುಂಪನ್ನು ಕ್ರೋಢಿಕರಿಸಿ ಅಲ್ಲಿ ಪಹರೆಗಿದ್ದ ಭಾರತೀಯ ಸೇನೆಯನ್ನು ಹಿಮ್ಮೆಟ್ಟಿಸುವುದಕ್ಕೆ ಮುಂದಾದರು. ಆದರೆ ಅವರಿಗೆದುರಾಗಿದ್ದು ‘೧೭ ಮೌಂಟೇನ್ ಡಿವಿಶನ್’ ಮುನ್ನಡೆಸುತ್ತಿದ್ದ, ಅವತ್ತಿಗೆ ಮೇಜರ್ ಜನರಲ್ ಆಗಿದ್ದ ಸಗತ್‌ಸಿಂಗ್. ಅವರದ್ದು ವರ್ಣರಂಜಿತ ವೀರ ವ್ಯಕ್ತಿತ್ವ. ಇತ್ತ ಸರ್ಕಾರವು ಚೀನಾದ ಜೊತೆ ಮತ್ತೆ ಸಂಘರ್ಷ ಬೇಡ, ಮಾತುಕತೆಯಲ್ಲಿ ಬಗೆಹರಿಸಿಕೊಳ್ಳೋಣ ಎಂಬಂತೆ ಯೋಚಿಸುತ್ತಿತ್ತು. ಮೇಜರ್ ಜನರಲ್ ಸಗತ್ ಸಿಂಗ್ ಮಾತ್ರ ನತುಲಾದ ಆ ಜಾಗ ಕಾರ್ಯತಂತ್ರ ರೀತ್ಯಾ ಭಾರತಕ್ಕೆ ಅವಶ್ಯವಾಗಿರುವುದರಿಂದ ಅಲ್ಲಿಂದ ಸ್ವಲ್ಪವೂ ಕದಲುವ ಪ್ರಶ್ನೆ ಇಲ್ಲ ಎಂಬ ನಿಲವಿಗೆ ಬಂದರಲ್ಲದೇ, ಅಲ್ಲಿನ ಗಡಿಗುಂಟ ವಯರಿನ ಬೇಲಿ ನಿರ್ಮಾಣಕ್ಕೆ ಮುಂದಾದರು. ಆಗ ಚೀನಾ ಅತ್ತ ಕಡೆಯಿಂದ ಮದ್ದುಗುಂಡು ಮಳೆಯನ್ನು ಪ್ರಾರಂಭಿಸಿತು. ಅದಕ್ಕೆ ಉತ್ತರವಾಗಿ ಸಗತ್ ಸಿಂಗ್ ಅವರು ಫಿರಂಗಿಗಳನ್ನೇ ನಿಯೋಜಿಸಿ ವೈರಿಗಳ ಮೇಲೆ ಬೆಂಕಿ ಸುರಿಸಿದರು. ಹಾಗೆ ನೋಡಿದರೆ ಅವರಿಗೆ ಅದರ ಅಧಿಕಾರ ಇದ್ದಿರಲಿಲ್ಲ. ನಿಯಮ ಉಲ್ಲಂಘಿಸಿದರೂ ಆ ಜಾಗ ಭಾರತದೊಡನೆ ಉಳಿಯುವಂತೆ ಮಾಡುವಲ್ಲಿ ಅವರ ನಿರ್ಧಾರ ಕೆಲಸ ಮಾಡಿತು. ತನ್ನ ಮುನ್ನೂರು ಯೋಧರನ್ನು ಕಳೆದುಕೊಳ್ಳುತ್ತಲೇ ಚೀನಾವು ತಕ್ಷಣಕ್ಕೆ ಅಲ್ಲಿಗೇ ಸಂಘರ್ಷದಿಂದ ಹಿಂತೆಗೆಯಿತು.
೨೦೨೦ರ ಗಲ್ವಾನ್ ಸಂಘರ್ಷದಲ್ಲೂ ಅಷ್ಟೆ. ಭಾರತದ ಯೋಧರು ಹುತಾತ್ಮರಾದರೆಂಬುದು ನಿಜ. ಆದರೆ ಚೀನಾದ ಮೇಲೆ ಭೀಕರ ಮರುಪ್ರಹಾರ ನಡೆಸಿ ಹಿಮ್ಮೆಟ್ಟಿಸಿದರೆಂಬುದೂ ಅಷ್ಟೇ ಸತ್ಯ. ತಿರುಗಿ ತಟ್ಟಿದಾಗೆಲ್ಲ ಚೀನಾ ಮೆತ್ತಗಾಗುತ್ತದೆ ಎಂಬುದೇ ಇಲ್ಲಿಂದ ಆಯ್ದುಕೊಳ್ಳಬಹುದಾದ ಪಾಠ.
೧೯೬೫: ಉಪಕರಣವಷ್ಟೇ ಸಾಲದು, ಅದನ್ನು ಚಲಾಯಿಸುವ ವ್ಯಕ್ತಿ ಮುಖ್ಯ!
೧೯೬೫ರಲ್ಲಿ ಪಾಕಿಸ್ತಾನವು ಭಾರತದ ಮೇಲೆ ಹೇರಿದ ಯುದ್ಧದ ಚಿತ್ರಕತೆ ಹಳೆಯದೇ. ಪ್ರಾರಂಭದಲ್ಲಿ ಸೇನೆಯಲ್ಲಿಲ್ಲದವರನ್ನು ಆಕ್ರಮಣಕ್ಕೆ ಬಿಟ್ಟು, ಕಾಶ್ಮೀರದ ಸ್ಥಳೀಯರನ್ನೂ ಬಳಸಿಕೊಂಡು ಜಮ್ಮು-ಕಾಶ್ಮೀರ ವಶಪಡಿಸಿಕೊಳ್ಳುವ ತನ್ನ ಹಳೆಯ ಗುರಿಯನ್ನು ಈಡೇರಿಸಿಕೊಳ್ಳುವುದು. ಅದು ಫಲಿಸಲಿಲ್ಲ. ಲಾಲ್ ಬಹಾದೂರ್ ಶಾಸ್ತ್ರಿಯವರ ಧಾಡಸಿ ರಾಜಕೀಯ ನೇತೃತ್ವವೂ ಭಾರತಕ್ಕೆ ಒಲಿದಿತ್ತು. ಕೇವಲ ಕಾಶ್ಮೀರದಲ್ಲಿ ರಕ್ಷಣಾತ್ಮಕ ಯುದ್ಧವನ್ನಷ್ಟೇ ಮಾಡಬೇಕೇಕೆ, ಪಶ್ಚಿಮದ ಗಡಿಯಿಂದ ಪಾಕಿಸ್ತಾನದ ಮೇಲೆ ಆಕ್ರಮಣವನ್ನೂ ಮಾಡಬಹುದೆಂದು ಸೇನೆಗೆ ಅವಕಾಶ ಕೊಟ್ಟರವರು! ಕೇವಲ ಕಾಶ್ಮೀರದಲ್ಲಿ ತಮ್ಮೊಂದಿಗೆ ಭಾರತ ಸೆಣೆಸಬಹುದೆಂದುಕೊಂಡಿದ್ದ ಪಾಕಿಸ್ತಾನಕ್ಕೆ, ಭಾರತೀಯ ಸೇನೆ ಅಂತಾರಾಷ್ಟ್ರೀಯ ಗಡಿರೇಖೆಯನ್ನು ದಾಟಿ ಲಾಹೋರಿನ ಹತ್ತಿರ ಬಂದು ಕುಳಿತಿದ್ದು ದೊಡ್ಡ ಆಘಾತವನ್ನೇ ಕೊಟ್ಟಿತು.

ಆದರೆ, ಇವೆಲ್ಲ ಪ್ರಾರಂಭವಾಗುವುದಕ್ಕೆ ಮುಂಚೆ ಎಲ್ಲ ಅಂಶಗಳೂ ಪಾಕಿಸ್ತಾನದ ಪರವಾಗಿದ್ದವು. ಅವತ್ತಿನ ಕಾಲಕ್ಕೆ ಯುದ್ಧಟ್ಯಾಂಕುಗಳದ್ದು ನಿರ್ಣಾಯಕ ಪಾತ್ರ. ಭಾರತವು ಇನ್ನೂ ಹಳೆಯ ಸೆಂಚುರಿಯನ್ ಬ್ರಾಂಡಿನ ಟ್ಯಾಂಕುಗಳನ್ನು ಹೊಂದಿದ್ದರೆ, ಅವತ್ತಿಗೆ ಆಧುನಿಕ ಎಂದು ಕರೆಸಿಕೊಂಡಿದ್ದ ಪ್ಯಾಟನ್ ಟ್ಯಾಂಕುಗಳು ಪಾಕಿಸ್ತಾನದ ಬಳಿ ಇದ್ದವು. ಅದಾಗಲೇ ಕೇವಲ ತರಬೇತಿಗೆ ಮಾತ್ರ ಉಪಯೋಗಿಸಬಹುದಾಗಿದ್ದು ಎಂಬ ಹಂತಕ್ಕೆ ತಲಪಿದ್ದ ಬ್ರಿಟಿಷ್ ನಿರ್ಮಿತ ನ್ಯಾಟ್ ಯುದ್ಧವಿಮಾನಗಳು ಭಾರತದ ಬಳಿ ಇದ್ದರೆ, ಅಮೆರಿಕ ತಂತ್ರಜ್ಞಾನದ ಎಫ್-೮೬ ಸ್ಯಾಬರ್ ಯುದ್ಧವಿಮಾನಗಳನ್ನು ಪಾಕಿಸ್ತಾನ ಹೊಂದಿತ್ತು. ಅಲ್ಲದೇ ಆಗಷ್ಟೇ ಬಿಲಿಯನ್ ಡಾಲರುಗಳ ಅಮೆರಿಕ ಧನಸಹಾಯವೂ ಪಾಕಿಸ್ತಾನಕ್ಕೆ ಸಂದಿತ್ತು.
ಆದರೆ, ಉಪಕರಣಗಳು ಅತ್ಯಾಧುನಿಕವಾಗಿದ್ದರೆ ಸಾಲದು, ಅದರ ಹಿಂದಿರುವ ವ್ಯಕ್ತಿಯ ಬಾಹು ಮತ್ತು ಬುದ್ಧಿಬಲಗಳ ಮೇಲೆ ಯುದ್ಧದ ಗೆಲವು ನಿರ್ಣಯವಾಗುತ್ತದೆ ಎಂಬುದನ್ನು ಭಾರತ ಆ ಸಮರದಲ್ಲಿ ಸಾರಿತು. ನಮಗೆಲ್ಲ ಅಭಿನಂದನ್ ವರ್ಧಮಾನ್ ಅವರ ಘಟನೆ ನೆನಪಿನಲ್ಲಿರುತ್ತದೆ. ಬಾಲಾಕೋಟ್ ದಾಳಿ ನಂತರದ ಪಾಕಿಸ್ತಾನದ ಪ್ರತಿಕ್ರಿಯೆಗೆ ಉತ್ತರ ಕೊಡುತ್ತ, ಹಳೆಯ ಮಿಗ್ ಶ್ರೇಣಿಯ ವಿಮಾನದಲ್ಲಿ ಕುಳಿತು ಪಾಕಿಸ್ತಾನದ ಎಫ್ ಶ್ರೇಣಿಯ ಆಧುನಿಕ ವಿಮಾನವನ್ನು ಹೊಡೆದುರುಳಿಸಿದ ಖ್ಯಾತಿ ಅವರದ್ದು. ಇಂಥದೊಂದು ಮಾದರಿಯನ್ನು ಕೀಲೂರ್ ಸಹೋದರರು ೧೯೬೫ರಲ್ಲೇ ತೋರಿಸಿದ್ದರು. ಫೊಲಂಡ್ ನ್ಯಾಟ್ ಯುದ್ಧವಿಮಾನಗಳ ಹಗುರ ಹಾಗೂ ಕಡಮೆ ಗಾತ್ರವನ್ನೇ ಲಾಭವಾಗಿಸಿಕೊಂಡ ಭಾರತೀಯ ಪೈಲಟ್ ಟ್ರೆವರ್ ಕೀಲೂರ್, ದೊಡ್ಡ ಗಾತ್ರದ ಸ್ಯಾಬರ್ ವಿಮಾನಗಳಿಗೆ ಇನ್ನಾವುದೇ ಗುರಿಯ ಆಮಿಷ ತೋರಿಸಿ ಒಳಬರುವಂತೆ ಮಾಡಿದರು. ಅನಂತರ, ಸುಲಭಕ್ಕೆ ತಿರುಗಿಕೊಳ್ಳಬಹುದಾದ ನ್ಯಾಟ್ ವಿಮಾನಗಳನ್ನು ಬೇರೆಡೆಯಿಂದ ಇವುಗಳ ಹಿಂದಕ್ಕೆ ತಂದು ಪ್ರಹಾರ ಮಾಡಿದರು. ಅವರ ಸಹೋದರ ಡೆಂಜಿಲ್ ಕೀಲೂರ್ ಇದೇ ಮಾದರಿ ಅನುಸರಿಸಿದರು. ಪಾಕಿಸ್ತಾನದ ದುಬಾರಿ ಯುದ್ಧವಿಮಾನಗಳು ಇನ್ನು ಪಾರಾಡಿಕೊಂಡು ಅವಮಾನ ಮಾಡಿಸಿಕೊಳ್ಳುವುದು ಬೇಡ ಎಂದು ನಿರ್ಧರಿಸುವಷ್ಟರಮಟ್ಟಿಗೆ ಹೊಡೆತ ತಿಂದವು. ‘ಪಾಕೆಟ್ ಫೈಟರ್ಸ್’ ಅಂತ ಲಘುವಾಗಿ ಕರೆಸಿಕೊಳ್ಳುತ್ತಿದ್ದ ನ್ಯಾಟ್ ಯುದ್ಧವಿಮಾನಗಳಿಗೆ ಆ ಯುದ್ಧದಲ್ಲಿ ‘ಸ್ಯಾಬರ್ ಸ್ಲೇಯರ್’ ಎಂಬ ಹೆಗ್ಗಳಿಕೆ ದೊರೆಯಿತು.
ಅದೇ ರೀತಿ ಪಾಕಿಸ್ತಾನದ ಯುದ್ಧ ಟ್ಯಾಂಕುಗಳನ್ನು ಪಂಜಾಬಿನ ಕಬ್ಬಿನಗದ್ದೆಗಳಿಗೆ ಬರುವಂತೆ ವ್ಯೂಹ ರಚಿಸಿ, ಅಲ್ಲಿ ರಾತ್ರೋರಾತ್ರಿ ನೀರು ಹಾಯಿಸಿಟ್ಟು, ಜಯಿಸುವೆನೆಂಬ ಗರ್ವದಲ್ಲಿ ಬಂದ ಬೃಹತ್ ಟ್ಯಾಂಕುಗಳೆಲ್ಲ ಅವುಗಳ ಭಾರಕ್ಕೆ ಅವೇ ಕೆಸರಿನಲ್ಲಿ ಸಿಲುಕುವಂತೆ ಮಾಡಿ, ಪಾಕಿಸ್ತಾನದ ಟ್ಯಾಂಕ್ ಬಲವನ್ನೇ ಅಪ್ರಸ್ತುತವಾಗಿಸಿತು ಭಾರತದ ‘ಅಸಲ್ ಉತ್ತರ್’ ಮರುಪ್ರಹಾರ. ತೆರೆದ ಜೀಪಿನ ಮೇಲೆ ನಿಂತು, ಬುಲೆಟ್ ಸುರುಳಿಯ ಗನ್ (ರಿಕಾನ್ಸಿಲರ್ ಮಷಿನ್‌ಗನ್) ಒಂದನ್ನು ಬಳಸಿಯೇ ಪಾಕಿಸ್ತಾನದ ಕನಿಷ್ಟ ನಾಲ್ಕು ಪ್ಯಾಟನ್ ಟ್ಯಾಂಕುಗಳನ್ನು ಧ್ವಂಸವಾಗಿಸಿ ವೀರಮರಣ ಹೊಂದಿದ, ಪರಮವೀರ ಖ್ಯಾತಿಯ ಅಬ್ದುಲ್ ಹಮೀದ್ ಭಾರತೀಯರಿಗೊಂದು ಆದರ್ಶ.
೧೯೭೧: ಹದಿನಾಲ್ಕೇ ದಿನಗಳಲ್ಲಿ ಪಾಕಿಸ್ತಾನದ ಮಹಾಶರಣಾಗತಿ
ಯೋಧರೂ ಸೇರಿದಂತೆ ೯೩,೦೦೦ ಯುದ್ಧಕೈದಿಗಳನ್ನು ಶರಣಾಗತರನ್ನಾಗಿ ಪಡೆದ ದಾಖಲೆ ಎರಡನೇ ವಿಶ್ವಯುದ್ಧ ಹೊರತುಪಡಿಸಿದರೆ ಈ ಬಾಂಗ್ಲಾ ವಿಮೋಚನೆ ಯುದ್ಧದ್ದೇ ಜಾಗತಿಕ ಮಿಲಿಟರಿ ಚರಿತ್ರೆಯಲ್ಲಿ ನಿಂತಿರುವ ಸಂಖ್ಯೆ. ರಾಜಕೀಯ ನಾಯಕತ್ವ, ಮಿಲಿಟರಿ ಸ್ವಾಯತ್ತೆ, ಗುಪ್ತಚರ ವ್ಯವಸ್ಥೆ – ಇವೆಲ್ಲದರ ಸಮನ್ವಯವಿದ್ದರೆ ಎಂಥ ಅದ್ಭುತ ಸಾಧಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆ.
ಅವತ್ತಿಗೆ ಪೂರ್ವ ಪಾಕಿಸ್ತಾನವೆಂದು ಕರೆಸಿಕೊಳ್ಳುತ್ತಿದ್ದ ಬಾಂಗ್ಲಾದೇಶದಲ್ಲಿ ಪಾಕಿಸ್ತಾನದ ದಬ್ಬಾಳಿಕೆ ಹೆಚ್ಚಿ, ಜನರ ಪ್ರತಿರೋಧ ದಮನಿಸುವ ಅಲ್ಲಿನ ಸೇನಾ ಕಾರ್ಯಾಚರಣೆಗಳಿಂದ ಹುಟ್ಟಿಕೊಂಡ ಬಿಕ್ಕಟ್ಟು ಅದಾಗಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಭಾರತಕ್ಕೆ ಹರಿದುಬಂದ ಯುದ್ಧಸಂತ್ರಸ್ತರು ದೇಶಕ್ಕೆ ಸುರಕ್ಷತಾ ಸವಾಲನ್ನೇ ಸೃಷ್ಟಿಸಿದಾಗ ಅವತ್ತಿನ ರಾಜಕೀಯ ನಾಯಕತ್ವ ಯುದ್ಧದಲ್ಲಿ ಭಾಗಿಯಾಗುವ ನಿರ್ಧಾರ ಕೈಗೊಂಡಿತು. ಅವತ್ತಿನ ಮಿಲಿಟರಿ ನಾಯಕತ್ವವು ಅವಸರಕ್ಕೆ ಈಡಾಗದೇ, ಯಾವ ಸಮಯದಲ್ಲಿ ಯುದ್ಧಕ್ಕೆ ಇಳಿದರೆ ಲಾಭದಾಯಕ ಎಂಬುದರ ಆಧಾರದಲ್ಲಿ ನಿಲವು ತೆಗೆದುಕೊಂಡಿತು. ಪಾಕಿಸ್ತಾನ ಸೇನೆಯ ವಿರುದ್ಧ ಸೆಣೆಸುತ್ತಿದ್ದ ಬಾಂಗ್ಲಾದ ಸಶಸ್ತ್ರ ಗುಂಪು ‘ಮುಕ್ತಿ ಬಾಹಿನಿ’ ಜೊತೆ ಸಮನ್ವಯ ಮಾಡಿಕೊಂಡು ವ್ಯೂಹಗಳನ್ನು ರಚಿಸಿದ್ದರಲ್ಲಿ ಭಾರತದ ಗುಪ್ತಚರ ವಿಭಾಗವಾದ ರೀಸರ್ಚ್ ಆಂಡ್ ಅನಾಲಿಸಿಸ್ ವಿಂಗ್ ಪಾತ್ರ ದೊಡ್ಡದು.

ಉಳಿದಿದ್ದು ಭಾರತೀಯ ಯೋಧರ ಎಂದಿನ ಕ್ಷಾತ್ರತೇಜಸ್ಸು. ಸಾಕು, ಹಿಂದಕ್ಕೆ ಬಾ ಎಂಬ ಆದೇಶವನ್ನೂ ಪರಿಗಣಿಸದೇ, “ನನ್ನ ಟ್ಯಾಂಕ್ ಫಿರಂಗಿಯಲ್ಲಿ ಇನ್ನೂ ಮದ್ದುಗುಂಡುಗಳು ಉಳಿದವೆ ಸರ್..ನಾನು ಹಿಂದೆ ಬರಲಾರೆ, ಇವರನ್ನು ಸಂಹರಿಸುತ್ತೇನೆ” ಎಂದು ರಣಭೀಕರ ಶತ್ರುಸಂಹಾರವೆಸಗುತ್ತಲೇ ವೀರಮರಣ ಪಡೆದ, ಕೇವಲ ೨೧ರ ಹರೆಯದ ಪರಮವೀರ, ಸೆಕೆಂಡ್ ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್ ಮರೆಯಬಾರದ ಹೆಸರು. ಪಾಕಿಸ್ತಾನಿ ಸ್ಯಾಬರ್ ಯುದ್ಧವಿಮಾನಗಳ ಬಲವನ್ನು ಮತ್ತೊಮ್ಮೆ ಉಡುಗಿಸುತ್ತಲೇ ವೀರಮರಣ ಹೊಂದಿದ ಫ್ಲೈಯಿಂಗ್ ಆಫೀಸರ್ ನಿರ್ಮಲಜೀತ್ ಸಿಂಗ್ ಸೇಕಾನ್, ಗುಂಡುಗಳಿಗೆ ನಿರ್ಭೀತವಾಗಿ ಎದೆಯೊಡ್ಡಿ ಶತ್ರು ಪಾಳೆಯದ ಗುಂಡಿನ ಶಿಭಿರವೊಂದನ್ನು ತನ್ನ ಪ್ರಾಣ ತೆತ್ತು ಸುಮ್ಮನಾಗಿಸಿದ ಲ್ಯಾನ್ಸ್ ನಾಯಕ್ ಎಲ್ಬರ್ಟ್ ಎಕ್ಕಾ, ಶೇಖ್ ಹಸೀನಾ ಕುಟುಂಬವನ್ನು ಸುತ್ತುವರಿದಿದ್ದ ಪಾಕಿಸ್ತಾನಿ ಯೋಧರ ನಡುವೆ ಪ್ರವೇಶಿಸಿ ಅವರನ್ನು ಶಸ್ತ್ರಕೆಳಗಿಡುವಂತೆ ಮಾಡಿದ ಕರ್ನಲ್ ಅಶೋಕ್ ತಾರಾ- ಹೀಗೆಲ್ಲ ಲೆಕ್ಕವಿಲ್ಲದಷ್ಟು ವೀರಗಾಥೆಗಳು.
ಯುದ್ಧದಲ್ಲಿ ಉಳಿದೆಲ್ಲೆಡೆ ಪಾಕಿಸ್ತಾನಕ್ಕೆ ಹಿನ್ನಡೆ ಆಗಿದ್ದರೂ ಢಾಕಾ ವಶವಾಗದ ಹೊರತೂ ಅವರ ಶರಣಾಗತಿ ಸಾಧ್ಯವಾಗುತ್ತಿರಲಿಲ್ಲ. ಢಾಕಾ ತಲಪುವುದಕ್ಕೆ ಭಾರತೀಯ ಸೇನೆಗೆ ಅಡ್ಡಿಯಾಗಿ ನಿಂತಿತ್ತು ಉಕ್ಕಿ ಹರಿಯುತ್ತಿದ್ದ ಮೇಘನಾ ನದಿ. ಅದಕ್ಕೆ ಸೇತುವೆ ಕಟ್ಟಿ ಆಚೆ ದಾಟುವುದಕ್ಕೆ ಬಹಳ ದಿನಗಳೇ ಹಿಡಿಯುತ್ತಿದ್ದವು. ಅಷ್ಟರಲ್ಲಾಗಲೇ ಲೆಫ್ಟಿನೆಂಟ್ ಜನರಲ್ ಸ್ಥಾನದಲ್ಲಿದ್ದುಕೊಂಡು ಪಡೆಯನ್ನು ಮುನ್ನಡೆಸುತ್ತಿದ್ದ ಸಗತ್‌ಸಿಂಗ್ ಆಗಲೂ ಊಹಿಸಲಾಗದ ನಿರ್ಧಾರ ಕೈಗೊಂಡರು. ಇರುವ ಹೆಲಿಕಾಪ್ಟರುಗಳನ್ನೇ ಬಳಸಿಕೊಂಡು ನಿರಂತರವಾಗಿ ಯೋಧರನ್ನು ಆಚೆ ಸಾಗಿಸಿದರು. ಒಂದರ್ಥದಲ್ಲಿ ಅದು ಹೆಲಿಕಾಪ್ಟರ್ ಸೇತುವೆಯೇ ಆಗಿಹೋಯಿತು. ಹೇಗೂ ಭಾರತೀಯ ಸೇನೆ ನದಿ ದಾಟಿ ಬರುವ ಸ್ಥಿತಿ ಸದ್ಯಕ್ಕಿಲ್ಲ ಎಂದುಕೊಂಡಿದ್ದ ಪಾಕಿಸ್ತಾನಿ ಸೇನೆಯು ಢಾಕಾದಲ್ಲಿ ಭಾರತದ ಯೋಧರನ್ನು ನೋಡುತ್ತಲೇ ಇನ್ನು ತನ್ನಾಟ ಮುಗಿಯಿತೆಂದು ಶಸ್ತ್ರ ಕೆಳಗಿಳಿಸಿತು.
ಅಂದಹಾಗೆ, ಭಾರತವು ಯುದ್ಧಪ್ರವೇಶಿಸದಂತೆ ಬೆದರಿಸುವುದಕ್ಕೆ ಪಾಕಿಸ್ತಾನದ ಪರವಾಗಿ ಯುದ್ಧನೌಕೆಯನ್ನು ಕಳುಹಿಸಿಕೊಟ್ಟಿತ್ತು ಅಮೆರಿಕ. ಆದರೆ ಅದು ಬಂಗಾಳಕೊಲ್ಲಿ ತಲಪುವ ಮೊದಲೇ, ಹದಿನಾಲ್ಕು ದಿನಗಳಲ್ಲಿ ಯುದ್ಧ ಮುಗಿಸಿದ್ದು ಭಾರತದ ತಾಕತ್ತು.
೧೯೯೯: ವಿಜಯದ ಜೊತೆಗೆ ಪಾಠವನ್ನೂ ಹೇಳಿಕೊಟ್ಟ ಕಾರ್ಗಿಲ್
ಭಾರತದ ಕಾರ್ಗಿಲ್ ವಿಜಯಗಾಥೆಯನ್ನು ಹೆಚ್ಚೇನೂ ವಿಸ್ತರಿಸಿ ಹೇಳಬೇಕಿಲ್ಲ. ಏಕೆಂದರೆ ಟಿವಿ ವಾಹಿನಿಗಳು ಪ್ರಚಲಿತಕ್ಕೆ ಬಂದಿದ್ದರಿಂದ ಎಲ್ಲರ ಮನೆಯ ಜಗುಲಿಗೇ ಆ ಯುದ್ಧ ಬಿತ್ತರವಾಯಿತು. ಕ್ಯಾಪ್ಟನ್ ವಿಕ್ರಂ ಬಾತ್ರ, ಗ್ರೆನೇಡಿಯರ್ ಯೋಗಿಂದರ್ ಯಾದವ್ ಮುಂತಾದ ಪರಮವೀರರ ಹೆಸರುಗಳನ್ನು ಹೆಚ್ಚಿನವರು ಕೇಳಿಯೇ ಇರುತ್ತಾರೆ.
ಚಳಿಗಾಲದ ಸಂದರ್ಭದಲ್ಲಿ ಅಲ್ಲಿನ ಪ್ರತಿಕೂಲ ಪರಿಸ್ಥಿತಿ ಕಾರಣಕ್ಕೆ ಭಾರತ ತೆರವುಗೊಳಿಸಿ ಬಂದಿದ್ದ ಜಾಗಗಳನ್ನು ಪಾಕಿಸ್ತಾನ ಆಕ್ರಮಿಸಿದ್ದು ಸಂಘರ್ಷದ ಸಾರಾಂಶವಷ್ಟೆ. ಇದಕ್ಕೆ ಪ್ರತಿಯಾಗಿ ಆ ಶಿಖರಗಳನ್ನು ಮತ್ತೆ ವಶಪಡಿಸಿಕೊಳ್ಳುವುದಕ್ಕೆ ಹೋದಾಗ ಭಾರತೀಯ ಯೋಧರು ಕೆಳಗಿನಿಂದ ಮೇಲಿರುವ ಪಾಕ್ ಸೈನಿಕರೊಂದಿಗೆ ಸೇಣೆಸಬೇಕಿತ್ತು. ಮೇಲಿಂದ ಗಂಡಿನ ಮಳೆಗರುವ ಒಬ್ಬ ವ್ಯಕ್ತಿ ಕೆಳಗಿರುವ ಒಂಬತ್ತು ವ್ಯಕ್ತಿಗಳಿಗೆ ಸಮ. ಹಾಗೆಂದೇ ದೊಡ್ಡಮಟ್ಟದಲ್ಲಿ ಭಾರತವು ಯೋಧರನ್ನು ಕಳೆದುಕೊಳ್ಳಬೇಕಾಯಿತು. ಕಾರ್ಗಿಲ್ ವಿಜಯಕ್ಕೆ ಭಾರತವು ತೆತ್ತ ಬೆಲೆ ಬಹಳ ದೊಡ್ಡದು.
ಈ ಸನ್ನಿವೇಶ ಸೃಷ್ಟಿಯಾಗದ ರೀತಿಯಲ್ಲಿ ಬೇಹುಗಾರಿಕೆ ನಿಭಾಯಿಸುವಲ್ಲಿ ಭಾರತ ಎಡವಿದ್ದು ಒಂದಂಶ. ತಂತ್ರಜ್ಞಾನದಲ್ಲಿ ಆದಷ್ಟೂ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕೆಂಬ ಪಾಠವನ್ನೂ ಕಾರ್ಗಿಲ್ ಬಹುಮುಖ್ಯವಾಗಿ ಕಲಿಸಿಹೋಗಿತ್ತು. ಇವತ್ತಿಗೆ ಬಾಲಾಕೋಟ್ ಹಾಗೂ ಆಪರೇಶನ್ ಸಿಂದೂರ್ ಇವುಗಳಲ್ಲಿ ಗುರಿ ನಿರ್ದೇಶಿತ ಯಶಸ್ವಿ ದಾಳಿಗಳನ್ನು ಜಗತ್ತೇ ಬೆರಗಿನಿಂದ ನೋಡಿದೆ. ಬಹುಶಃ ಇವೆಲ್ಲದರ ಕಲಿಕೆಯ ಬೇರುಗಳು ಕಾರ್ಗಿಲ್ ಅನುಭವದಲ್ಲಿ ಮೊಳೆತಂಥವುಗಳು. ಏಕೆಂದರೆ, ಅಷ್ಟು ಎತ್ತರದಲ್ಲಿ ಕುಳಿತಿರುವ ವೈರಿಯನ್ನು ದಮನಿಸುವುದಕ್ಕೆ ಭಾರತವು ವಾಯುಬಲವನ್ನು ಬಳಸಿದಾಗ ಮೊದಲ ಕೆಲವು ದಿನಗಳಲ್ಲಿ ಅದು ನಿರೀಕ್ಷಿತ ಯಶಸ್ಸು ಕೊಡಲಿಲ್ಲ. ಆದರೆ, ಸೀಮಿತವಾಗಿದ್ದ ತಂತ್ರಜ್ಞಾನದ ನಡುವೆಯೂ ಭಾರತದ ಯುದ್ಧ ಪೈಲೆಟ್‌ಗಳು ಅಲ್ಲಿ ಅಪರಿಮಿತ ಸಾಹಸ ಹಾಗೂ ಶ್ರಮ ತೋರಿದ್ದರು. ವಾಯುಸೇನೆಯ ಆಪರೇಷನ್ ಸಫೇದ್ ಸಾಗರ್ ಪ್ರಹಾರವೇ ಸೇನೆಯ ಕಾಲಾಳುಗಳಿಗೆ ಆ ಎತ್ತರಗಳನ್ನು ಸಣೆಸುತ್ತ ಏರುವುದಕ್ಕೆ ದಾರಿ ಮಾಡಿಕೊಟ್ಟಿತು. ಅವತ್ತಿಗೆ ಅಮೆರಿಕವು ಯುದ್ಧಬಳಕೆಗೆ ಜಿಪಿಎಸ್ ತಂತ್ರಜ್ಞಾನವನ್ನು ಭಾರತಕ್ಕೆ ನಿರಾಕರಿಸಿತ್ತು. ಅದರ ಪರಿಣಾಮವಾಗಿಯೇ ನಂತರದಲ್ಲಿ ಹುಟ್ಟಿದ್ದು ನಮ್ಮದೇ ಆದ ಉಪಗ್ರಹಾಧರಿತ ನಾವಿಕ್ ದಿಕ್ಸೂಚಿ. ನಮ್ಮ ವಾಯುಬಲಕ್ಕೆ ಥರಹೇವಾರಿ ಕ್ಷಿಪಣಿಗಳ ಮೂಲಕ ಬಲ ತುಂಬಿದ ಏಕಮಾತ್ರ ಮಿತ್ರದೇಶವೆಂದರೆ ಇಸ್ರೇಲ್. ನಿಜ ಸ್ನೇಹಿತ ಯಾರೆಂಬುದು ಪಕ್ಕಾ ಆಗಿದ್ದೂ ಕಾರ್ಗಿಲ್ ಸಮರಾಂಗಣದಲ್ಲೇ. ಇತ್ತೀಚಿನ ಆಪರೇಷನ್’ಗಳೆಲ್ಲದರಲ್ಲೂ ಇಸ್ರೇಲಿ ಶಸ್ತ್ರಗಳು ಮುಖ್ಯ ಭೂಮಿಕೆ ನಿರ್ವಹಿಸಿರುವುದನ್ನು ಗಮನಿಸಬಹುದು.

ಯುದ್ಧಕುಶಲಿಗಳ ನೆಲವಿದೆಂಬುದೇ ನಿಜ ವಿಶ್ವಾಸ
ಇವತ್ತಿಗೆ ಸಂಘರ್ಷ ತೆರೆದುಕೊಂಡರೆ ಯಾವೆಲ್ಲ ದೇಶಗಳ ಬಲ ಎಷ್ಟು ಎಂಬ ಬಗ್ಗೆ ಆಗಾಗ ತುಲನಾತ್ಮಕ ವರದಿಗಳು ಬರುತ್ತಿರುತ್ತವೆ. ಇತ್ತೀಚಿನ ವರ್ಷಗಳಲ್ಲಿ ರಕ್ಷಣಾ ಉಪಕರಣಗಳ ಅಭಿವೃದ್ಧಿ ಮತ್ತು ಖರೀದಿಗಳಲ್ಲಿ ಭಾರತವು ಗಣನೀಯ ಪ್ರಗತಿ ಸಾಧಿಸಿರುವ ಅಂಶವು ನಿಚ್ಚಳವಾಗಿಯೇ ತೋರುತ್ತಿದ್ದರೂ, ಚೀನಾಕ್ಕೆ ಹೋಲಿಸಿದರೆ ಯಾವೆಲ್ಲ ಅಂಶಗಳಲ್ಲಿ ಭಾರತ ಹಿಂದಿದೆ ಎಂಬೆಲ್ಲ ವಿಶ್ಲೇಷಣೆಗಳು ಕೆಲವೊಮ್ಮೆ ಶಂಕೆ ಹುಟ್ಟಿಸುವುದು ಹೌದು.
ಆದರೆ, ಈ ಮೇಲಿನ ಎಲ್ಲ ಯುದ್ಧಗಳ ವಿವರಣೆಯನ್ನು ಓದಿಕೊಂಡಾಗ ಒಂದಂಶ ಸ್ಪಷ್ಟವಾಗುತ್ತದೆ. ಭಾರತದ ಬಲವೆಂಬುದು ಕೇವಲ ಉಪಕರಣಗಳ ಮೇಲೆ ನಿಂತಿರುವಂಥದ್ದಲ್ಲ. ವೀರಾಭೋಗ್ಯಾ ವಸುಂಧರಾ ಎಂಬ ಘೋಷವಾಕ್ಯವನ್ನು ರಕ್ತಗತ ಮಾಡಿಕೊಂಡು, ಸಂಘರ್ಷಗಳ ನೆಲದಲ್ಲಿ ನಿರಂತರವಾಗಿ ರೂಪಗೊಂಡಿರುವ ಕದನ ಕಲಿಗಳ ದೇಶ ಇದು. ಕೆಲವೊಮ್ಮೆ ಸಾಧನಗಳ ಅಭಾವ ಇದ್ದಾಗಲೂ ಅದನ್ನು ಮೀರಿ ವಿಜಯವನ್ನು ಒಲಿಸಿಕೊಂಡ ವೀರಗಾಥೆಗಳೇ ನಮಗೆ ಇಂಧನ. ಈ ಇಂಧನವು ೧೯೪೭ರ ಅನಂತರ ತುಂಬಿಸಿಕೊಂಡಿದ್ದಲ್ಲ. ಪರಮವೀರ ಚಕ್ರದಲ್ಲಿ ಚಿತ್ರಿತಗೊಂಡಿರುವ ದಧೀಚಿಯ ಎಲುಬಿನ ವಜ್ರಾಯುಧ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಭವಾನಿ ಖಡ್ಗಗಳು ನಾವು ನಿಂತಿರುವ ಆದರ್ಶ ಎಂಥ ಮಹೋನ್ನತವಾದದ್ದು ಎಂಬುದನ್ನು ಸಾರಿ ಹೇಳುತ್ತಿವೆ.
ಜಗತ್ತು ಸಂಘರ್ಷದ ಅಲೆಗಳಲ್ಲಿ ಕಳವಳಗೊಂಡಿರುವಾಗ ನಮ್ಮ ಈ ವಾರಸುದಾರಿಕೆ ನಮಗೆ ನೆನಪಿನಲ್ಲಿರಲಿ, ಅಷ್ಟೆ.






