ತೂಗುಸೇತುವೆ ನಿರ್ಮಾಣದಲ್ಲಿ ಚರಿತ್ರೆ ನಿರ್ಮಿಸಿದ ಸುಳ್ಯದ ಗಿರೀಶ್ ಭಾರದ್ವಾಜರಿಗೆ ೨೦೧೭ರಲ್ಲಿ ಪ್ರತಿಷ್ಠಿತ ’ಪದ್ಮಶ್ರೀ’ ಪ್ರಶಸ್ತಿ ಪ್ರಾಪ್ತವಾದಾಗ ಕನ್ನಾಡು ಸಂಭ್ರಮಿಸಿತ್ತು. ಇದು ’ಭಾರತಕ್ಕೆ ಸಂದ ಮಾನ’ ಎಂದರು. ’ಹಳ್ಳಿಗಳಿಗೆ ಉಸಿರು ನೀಡಿದವರು’ ಎಂದು ಶ್ಲಾಘಿಸಿದರು. ’ಮನಸ್ಸುಗಳನ್ನು ಬೆಸೆದವರು’ ಎಂದು ಖುಷಿ ಪಟ್ಟರು. ಆ ಸಜೀವ ಖುಷಿಗಳೆಲ್ಲಾ ಇಂದು ಮೌನಕ್ಕೆ ಜಾರಿವೆ. ೨೦೨೬ ಜುಲೈ ೭ರಂದು ಭಾರದ್ವಾಜರು ದೈವಾಧೀನರಾದರು. ಅವರಿಗಿದು ಅಕ್ಷರ ಅಭಿವಾದನ.

ಒಂದು ತೂಗು ಸೇತುವೆ – ಮನುಷ್ಯ ಮನುಷ್ಯರ ಹೃದಯಗಳನ್ನು ಬೆಸೆದಿವೆ. ಹಳ್ಳಿ-ಹಳ್ಳಿಗಳನ್ನು ಒಂದು ಮಾಡಿವೆ. ಪಕ್ಷ-ವಿಪಕ್ಷಗಳಲ್ಲಿ ಸ್ನೇಹ ಭಾವಗಳನ್ನು ಮಿಳಿತಗೊಳಿಸಿವೆ. ನದಿಯ ಎರಡೂ ದಡಗಳನ್ನು ಒಂದುಗೂಡಿಸಿ ಖುಷಿಯ ಬದುಕಿಗೆ ಅನುವು ಮಾಡಿಕೊಟ್ಟಿದೆ.
ಇದೇನೂ ಉತ್ಪ್ರೇಕ್ಷೆಯಲ್ಲ. ಇದು ಸುಳ್ಯದ ಗಿರೀಶ್ ಭಾರದ್ವಾಜರ (೭೬) ತಪದ ಫಲ. ಇದೇ ಅಲ್ಲವೆ ಗ್ರಾಮಾಭಿವೃದ್ಧಿ. ಇದಕ್ಕಾಗಿ ದೇಶದ ಹಳ್ಳಿಗಳಲ್ಲಿ ಓಡಾಡಿದ್ದಾರೆ. ಜನರ ಮಧ್ಯೆ ಜೀವಿಸಿ ಬದುಕನ್ನು ಓದಿದ್ದಾರೆ. ಕಷ್ಟಗಳಿಗೆ ಮರುಗಿದ್ದಾರೆ. ಸಂಪರ್ಕ ಸೇತು ಇಲ್ಲದೆ ಒದ್ದಾಡುತ್ತಿದ್ದ ಕುಟುಂಬಗಳ ದುಃಸ್ಥಿತಿ ಕಂಡು ’ಇಂತಹವರಿಗೆ ಏನಾದರೂ ಮಾಡಬೇಕು’ ಎನ್ನುವ ಪಣತೊಟ್ಟರು. ಇದರ ಫಲವಾಗಿ ಇತ್ತ ಕೇರಳ, ಅತ್ತ ಕರ್ನಾಟಕ, ಅದರಾಚೆಗೆ ದೇಶಮಟ್ಟದ ತನಕ ನೂರನಲವತ್ತಕ್ಕೂ ಮಿಕ್ಕಿ ತೂಗುಸೇತುವೆಗಳನ್ನು ನಿರ್ಮಿಸಿ ’ಜೀವಭಾವ’ಗಳಿಗೆ ಗೌರವ ನೀಡಿದ್ದಾರೆ.

ಪರಿಸ್ಥಿತಿಗಳು ಕನಸುಗಳನ್ನು ಕಸಿಯುತ್ತವೆ!
ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರು ಗಿರೀಶ್ ಭಾರದ್ವಾಜರನ್ನು ಸಂದರ್ಶಿಸಿದ್ದರು. ಅವರ ಮಾತುಕತೆಯಲ್ಲಿ ಉಲ್ಲೇಖವಾದ ಒಂದು ’ಮನಪರಿವರ್ತನೆ’ಯ ಗಾಥೆ ನಿಮಗಾಗಿ –
ಆಂಧ್ರಪ್ರದೇಶದ ಲಕ್ನಾವರಂನಲ್ಲಿ ತೂಗುಸೇತುವೆಗಳ ನಿರ್ಮಾಣ ನಡೆದಿತ್ತು. ನಕ್ಸಲ್‌ಪೀಡಿತ ಪ್ರದೇಶವಾದ ಕಾರಣ ಗಿರೀಶ್ ತಂಡಕ್ಕೆ ಇಪ್ಪತ್ತು ಕಿ.ಮೀ. ದೂರದಲ್ಲಿ ವಸತಿ ಕಲ್ಪಿಸಲಾಗಿತ್ತು. ನಿರ್ಮಾಣ ಸಾಮಗ್ರಿಯನ್ನು ತಲೆಯ ಮೇಲೆ ಹೊತ್ತು ಸಾಗಿಸಬೇಕಾಗುತ್ತಿತ್ತು. ದಾರಿಯಲ್ಲಿ ನಕ್ಸಲರು ವಾಹನ ತಡೆಯುವುದು, ದೇಣಿಗೆ ಪೀಕಿಸುವುದು ನಡೆದೇ ಇತ್ತು.
ಒಂದು ದಿನ ಅಲ್ಲಿನ ಸರಪಂಚ ಯಾದಗಿರಿ – ಆತನೂ ನಕ್ಸಲನೇ – ಭಾರದ್ವಾಜರು ಕಾರ್ಮಿಕರ ಜೊತೆ ಊಟ ಮಾಡುವುದನ್ನು ನೋಡಿ ಆಶ್ಚರ್ಯಪಟ್ಟ. ಇಲ್ಲೆಲ್ಲ ಮಾಲಿಕರು ನಮ್ಮನ್ನು ಹತ್ತಿರಕ್ಕೂ ಬಿಡುವುದಿಲ್ಲ ಎಂದ. ಗಿರೀಶ್, ನನ್ನ ಮೇಲಿರುವ ಮಾಲಿಕ ಒಬ್ಬನೇ. ಇವರೆಲ್ಲ ನನ್ನ ಮಕ್ಕಳಂತೆ, ಎಂದರು. ಆತ ಭಾವುಕನಾಗಿ, ನಾನು ನಿಮ್ಮನ್ನು ಅಣ್ಣ ಎಂದು ಕರೆಯಬಹುದೇ? ಎಂದು ಕೇಳಿದ.
ಇದಾದ ನಂತರ ಸ್ಥಳೀಯ ಯುವಕರು ಬಂದು, ನೀವು ಇಲ್ಲೇ ಉಳಿಯಿರಿ. ಯಾರು ನಿಮಗೆ ತೊಂದರೆ ಕೊಡುತ್ತೇವೋ ನಾವು ನೋಡುತ್ತೇವೆ ಎಂದು ಭರವಸೆ ನೀಡಿದರು. ಅನಂತರ ಯಾರೂ ಇವರ ವಾಹನ ತಡೆಯಲಿಲ್ಲ; ಕಪ್ಪಕೇಳಲಿಲ್ಲ, ಅವರೆಲ್ಲಾ ನಗುತ್ತಾ ಗೌರವದಿಂದ ದಾರಿ ಬಿಡುತ್ತಿದ್ದರು. ಅ ಯುವಕರಿಗೆ ಮೂಲಸೌಲಭ್ಯಗಳಿಲ್ಲ, ಕನಸುಗಳೂ ಇಲ್ಲ. ಪರಿಸ್ಥಿತಿಯೇ ಅವರ ಕನಸುಗಳನ್ನು ಕಸಿದುಕೊಂಡಿದೆ. ಅದನ್ನು ಅರ್ಥಮಾಡಿ ವರ್ತಿಸಿದರೆ ಎಲ್ಲವೂ ಸಲೀಸು ಎನ್ನುತ್ತಿದ್ದರು ಭಾರದ್ವಾಜ್.
೧೯೭೫ನೇ ಇಸವಿ. ಗಿರೀಶ್ ಆಗಷ್ಟೇ ಇಂಜಿನಿಯರಿಂಗ್ ಪದವಿ ಮುಗಿಸಿ ಮನೆಗೆ ಮರಳಿದ್ದರು. ಬಿಳಿ ಕಾಲರ್ ಹುದ್ದೆಯ ನಿರೀಕ್ಷೆಗಳು ಮನದಲ್ಲಿ ರಿಂಗಣಿಸುತ್ತಿದ್ದುವು. ಐಷಾರಾಮಿ ಬದುಕಿಗೆ ಮನಸ್ಸು ಹಾತೊರೆಯುತ್ತಿತ್ತು. ಈ ಕನಸಿನ ಮುಂದೆ ತಂದೆ ಕಟ್ಟಿದ ಕೃಷಿ ಸಾಮ್ರಾಜ್ಯವು ಢಾಳಾಗಿ ತೋರಿತು!
ಮಗನ ಇಂಜಿನಿಯರಿಂಗ್ ಕಲಿಕೆಯು ಸಮಾಜಕ್ಕೆ ಉಪಕಾರವಾಗಬೇಕೆನ್ನುವ ಬಯಕೆ ತಂದೆ ಬಿ.ಕೆ. ಭಟ್ ಅವರದು. ಒತ್ತಾಯಕ್ಕೋ ಎಂಬಂತೆ ’ತಂದೆಗಾಗಿ’ ಸುಳ್ಯದಲ್ಲಿ ಸ್ಥಳವೊಂದನ್ನು ಗೊತ್ತುಪಡಿಸಿ ಆಧುನಿಕ ವ್ಯವಸ್ಥೆಯ ’ಅಯಶ್ಶಿಲ್ಪ’ ಹೆಸರಿನ ವರ್ಕ್‌ಶಾಪ್ ಆರಂಭಿಸಿದರು!
ಹೀಗೆ ಆರಂಭವಾದ ’ವರ್ಕ್‌ಶಾಪ್’ನೊಳಗೆ ಬದುಕಿನ ಕನಸುಗಳನ್ನು ಕಟ್ಟಿಕೊಳ್ಳುತ್ತ ಬೆಳೆದರು. ಇಲ್ಲಿಂದ ಶುರುವಾದ ಪಯಣವು ’ಸೇತು-ಬಂಧ’ದ ವರೆಗೆ ಸಾಗಬಹುದೆಂದು ಗಿರೀಶರು ಕಲ್ಪಿಸಿರಲಿಲ್ಲ. ಪಯಣದ ಹಾದಿಯಲ್ಲಿ ಹೆಜ್ಜೆಯೂರುತ್ತ್ತ ಸಾಗಿದರು. ಸಾಮಾಜಿಕ ವ್ಯವಸ್ಥೆ, ಅವ್ಯವಸ್ಥೆಗಳು ಪಾಠವಾಗಿ ಒದಗಿದುವು. ಸೇತುವೆಯ ಕನಸನ್ನು ಕಟ್ಟಿಕೊಂಡಿದ್ದ ಸಾವಿರಾರು ಮಂದಿಯ ನನಸಿಗೆ ಈ ಪಾಠಗಳು ನೆರವಾದುವು. ಕಾಲಿಗೆ ಚಕ್ರ ಕಟ್ಟಿಕೊಂಡು ತನ್ನ ಬಳಗದೊಂದಿಗೆ ಒಡಾಡಿದರು. ಜನ ಮನವನ್ನು ಗೆದ್ದರು. ಇದೆಲ್ಲ್ಲ ಹೇಗೆ ಸಾಧ್ಯವಾಯಿತು?





ಏನಿದು ತೂಗು ಸೇತು?
ಕಾಂಕ್ರೀಟ್ ಸೇತುವೆ ರಚನೆಗೆ ’ಪ್ರಾಮಾಣಿಕ ಗುತ್ತಿಗೆದಾರ’ ಸಿಕ್ಕರೆ ಎರಡು ವರುಷದಲ್ಲಿ ಪೂರ್ತಿಯಾಗಬಹುದು. ಭಾರದ್ವಾಜರ ತೂಗುಸೇತುವೆ ನಿರ್ಮಾಣಕ್ಕೆ ಮೂರೇ ತಿಂಗಳು ಸಾಕು. ಕಾಂಕ್ರೀಟ್ ಸೇತುವೆ ವೆಚ್ಚದ ಐದನೇ ಒಂದು ಪಾಲು ಈ ತೂಗುಸೇತುವೆಗೆ ಸಾಕು.
ನದಿಯ ಆಚೀಚೆ ದಡದಲ್ಲಿ ಎರಡು ಪೈಲಾನ್(ಗೋಪುರ)ಗಳು. ಇವಕ್ಕೆ ಬಂಧಿಸಲ್ಪಟ್ಟ ರೋಪ್‌ಗಳು ಸೇತುವೆಗೆ ಮೂಲಾಧಾರ. ಎರಡೂ ತುದಿಯಿರುವುದು ದಡದಾಚೆಗಿನ ಕಾಂಕ್ರೀಟ್ ರೂಪಿತ ’ಅಂಕರ್’ನಲ್ಲಿ. ಕೇಬಲ್‌ಗಳಿಗೆ ಸಸ್ಪೆಂಡರ‍್ಸ್ ತೂಗಿಸಿ, ಅದಕ್ಕೆ ಚ್ಯಾನೆಲ್ ಬಂಧಿಸುತ್ತಾರೆ. ಈ ಚ್ಯಾನೆಲ್ ಮೇಲೆ ಫೆರೋಸಿಮೆಂಟ್ ಸ್ಲ್ಯಾಬ್‌ಗಳನ್ನು ಬಂಧಿಸಿದರೆ ತೂಗುಸೇತು ರೆಡಿ! ಇದು ನಾಲ್ಕು ವಾಕ್ಯದಲ್ಲಿ ಹೇಳಿದಷ್ಟು ಸುಲಭವಲ್ಲ! ಅದರ ಹಿಂದೆ ರೋಚಕ ಅನುಭವಗಳಿವೆ.
ಕುಶಾಲನಗರದ ನಿಸರ್ಗಧಾಮದ ಸೇತುವೆ ಗಿರೀಶರ ಚೊಚ್ಚಲ ಸೇತು. ಅದನ್ನು ಸೇತುವೆ ಎನ್ನುವುದಕ್ಕಿಂತಲೂ ಸ್ಥಳೀಯ ಪರಿಭಾಷೆಯಲ್ಲಿ ’ಪಾಲ, ಕೈತಾಂಗು’ ಅನ್ನೋಣ. ಇದಕ್ಕೆ ಪ್ರೇರಣೆ ಸುಳ್ಯ ಸನಿಹದ ಸಾಮಾಜಿಕ ಕಾರ್ಯಕರ್ತ, ಕೃಷಿಕ ಪೆರಾಜೆ-ಅಮಚೂರಿನ ಶ್ರೀಧರ ಭಟ್ಟರು. ಅವರು ಆಗಲೇ ಮರದಿಂದ ಮರಕ್ಕೆ ಕೇಬಲ್‌ಗಳನ್ನು ಜೋಡಿಸಿ ಅತ್ತಿತ್ತ ಸಾಗಲು ವ್ಯವಸ್ಥೆ ಮಾಡಿಕೊಂಡಿದ್ದರು. ಈ ತಂತ್ರಜ್ಞಾನವು ಗಿರೀಶರನ್ನು ಸೆಳೆದಿತ್ತು. ಆಗಲೇ ನಿಸರ್ಗಧಾಮದ ’ಪಾಲ’ ಪತ್ರಿಕೆಗಳಲ್ಲಿ ವರದಿಯಾಗಿದ್ದುವು.
ನಮ್ಮದು ಬಡ ದೇಶವಲ್ಲ
ಟೋನಿ ರುಟ್ಟಿಮಾನ್ ಸ್ವಿಟ್ಚರ್‌ಲ್ಯಾಂಡಿನವರು. ದಕ್ಷಿಣ ಅಮೆರಿಕ, ಕಾಂಬೋಡಿಯಾ, ಲಾವೋಸ್ ಹಾಗೂ ವಿಯೆಟ್ನಾಂ ದೇಶಗಳ ಬಡ ಸಮುದಾಯಗಳಿಗಾಗಿ ತೂಗುಸೇತುವೆ ನಿರ್ಮಿಸುತ್ತಿದ್ದ ಮಾನವತಾವಾದಿ. ೨೦೦೭ರಲ್ಲಿ ಗಿರೀಶರ ಸಾಧನೆಯನ್ನು ತಿಳಿದು ತಾಂತ್ರಿಕತೆಗಳ ವಿನಿಮಯಕ್ಕಾಗಿ ಸುಳ್ಯಕ್ಕೆ ಬಂದಿದ್ದರು. ಅವರಿಬ್ಬರ ಮಾತುಗಳ ಮಧ್ಯೆ ಹಾದು ಹೋದ ಒಂದಂಶವನ್ನು ಗಿರೀಶರು ಹೇಳಿದ್ದರು – ಅಲ್ಲಿ ತೂಗು ಸೇತುವೆಗೆ ಬಳಕೆಯಾಗುವ ಕಿಲೋಮೀಟರ್‌ಗಟ್ಟಲೆ ಸ್ಟೀಲ್ ವಯರ್ ರೋಪನ್ನು ಉಚಿತವಾಗಿ ಸ್ವಿಡ್ಜರ್‌ಲ್ಯಾಂಡ್‌ನ ಕೇಬಲ್‌ಕಾರ್ ಕಂಪೆನಿಯವರು ಕೊಡುತ್ತಾರೆ. ಜನರಿಗಾಗಿ ಮಾಡುವ ಕೆಲಸಕ್ಕೆ ಅವರ ಸಹಾಯ. ಈಗ ಕೇಬಲ್ ಬಹಳಷ್ಟು ಮಿಗತೆ ಇದೆ. ಅವರಲ್ಲಿ ಸಂಗ್ರಹವೂ ಇತ್ತು. ಭಾರತ ಬಡದೇಶ. ಈ ಕೇಬಲನ್ನು ಉಚಿತವಾಗಿ ಕೊಟ್ಟರೆ ಸಹಾಯ ಆಗಬಹುದೋ ಏನೋ!
ಟೋನಿ ಮನವಿಗೆ ಭಾರದ್ವಾಜ್ ಏನು ಹೇಳಿರಬಹುದು? ನಮ್ಮದು ಬಡದೇಶವಲ್ಲ. ನಮ್ಮ ವ್ಯವಸ್ಥೆ ಕೆಟ್ಟಿದೆ ಅಷ್ಟೇ. ನೀವು ಉಚಿತವಾಗಿ ಕೇಬಲ್ ಕಳುಹಿಸಿದರೂ ನಮ್ಮ ಭ್ರಷ್ಟ ವ್ಯವಸ್ಥೆಯಲ್ಲಿ ಅಲೆದಾಡಲು ಆಗಲಿಕ್ಕಿಲ್ಲ ಹಾಗೂ ಸೆಕೆಂಡ್‌ಹ್ಯಾಂಡ್ ರೋಪ್ ಎಂದರೆ ನಮ್ಮಲ್ಲಿ ಒಪ್ಪುವವರೇ ಇಲ್ಲ. ಹಾಗಾಗಿ ನಯವಾಗಿ ತಿರಸ್ಕರಿಸಿದೆ.
ಮೊದಲ ಸೇತುವೆ
ಸುಳ್ಯ ಸನಿಹದ ಅರಂಬೂರಿನ ’ಇಡ್ಯಡ್ಕ’ ಗಿರೀಶರ ಊರು. ಸನಿಹದ ಪಯಸ್ವಿನಿ ನದಿಯನ್ನು ದಾಟಲು ಸೇತುವೆಯಿದ್ದಿರಲಿಲ್ಲ. ದೋಣಿಯಲ್ಲಿ ಅತ್ತಿತ್ತ ಸಾಗಬೇಕಾಗಿತ್ತು. ದೋಣಿಯಲ್ಲಿ ಏನಾದರೂ ತೂತಾಗಿ ತೊಂದರೆಯಾಯಿತೆಂದರೆ ದೇವರೇ ಗತಿ! ಇದಕ್ಕೆ ಪರ್ಯಾಯವಾಗಿ ಇನ್ನೊಂದು ದೋಣಿಯನ್ನು ತರುವಂತಿಲ್ಲ. ದೋಣಿ ದುರಸ್ತಿ ಆಗುವಲ್ಲಿಯ ತನಕ ಅತಂತ್ರ. ಇಂತಹ ಸ್ಥಿತಿಯಲ್ಲಿದ್ದಾಗ ಗ್ರಾಮಸ್ಥರು ತೂಗು ಸೇತುವೆಗಾಗಿ ಮನವಿ ಮಾಡಿದರು.
ನಿಸರ್ಗಧಾಮದಲ್ಲ್ಲಿ ಮಾಡಿದ್ದು ಚಿಕ್ಕ ಸೇತುವೆ. ಇಲ್ಲಿ ಹಾಗಲ್ಲ. ಪಯಸ್ವಿನಿ ಹೊಳೆಗೆ ಸೇತುವೆ! ತಾಂತ್ರಿಕಾಂಶಗಳನ್ನು ಅರಿಯಲು ನಿದ್ದೆಗೆಟ್ಟರು! ಸುರತ್ಕಲ್ ಇಂಜಿನಿಯರಿಂಗ್ ಕಾಲೇಜಿನ ವರಿಷ್ಠರನ್ನು ಭೇಟಿಯಾದರು. ಪುಸ್ತಕಗಳನ್ನು ಅಭ್ಯಸಿಸಿದರು. ಗಿರೀಶರೊಂದಿಗೆ ಸ್ನೇಹಿತರು ಸ್ಪಂದಿಸಿದರು. ಸುಳ್ಯದ ಇಂಜಿನಿಯರ್ ಡಿ.ಎಂ. ಸುಮಿತ್ರ ನೆರವಾದರು. ನೀಲನಕ್ಷೆ ಸಿದ್ಧವಾಯಿತು.
ಈ ಸೇತುವೆಯ ಕೆಲಸ ನನಗೆ ’ಮಾಡು ಇಲ್ಲವೆ ಮಡಿ’ ಎಂಬಂತಾಗಿತ್ತು – ಆಗಿನ ಅಸಹಾಯಕತೆಯನ್ನು ಗಿರೀಶರು ಒಂದು ಸಂದರ್ಶನದಲ್ಲಿ ಹೇಳುತ್ತಾ ಜನರು ನನ್ನ ಮೇಲೆ ಇರಿಸಿದ ಅಚಲ ವಿಶ್ವಾಸವು ಸೇತುವೆ ಕೆಲಸದಿಂದ ಹಿಂದೆ ಸರಿಯಲಾಗಲಿಲ್ಲ. ಮತ್ತೆ ಅದೊಂದು ಪ್ರತಿಷ್ಠೆಯಾಗಿತ್ತು.
ಸೇತುವೆ ಸಿದ್ಧವಾಯಿತು. ಅದು ಹತ್ತೂರು ಸುದ್ದಿಯಾಯಿತು. ಮಾಧ್ಯಮ ಬೆಳಕು ಬಿತ್ತು. ಸೇತುವನ್ನು ವೀಕ್ಷಿಸಲು ದೂರದೂರದಿಂದ ಬಂದು ಗಿರೀಶರ ಬೆನ್ನು ತಟ್ಟಿದರು. ಆ ಕಾಲಘಟ್ಟದಲ್ಲಿ ಜನರ ಶ್ಲಾಘನೆಯಿಂದ ಉಬ್ಬಿ ಹೋಗಿದ್ದೆ. ಜತೆಗೆ ಜವಾಬ್ದಾರಿ ಎಚ್ಚರವಾಗಿತ್ತು. ವಿನೋದಕ್ಕೆ ಹೇಳುತ್ತಿದ್ದರು.
ಅರಂಬೂರಿನ ಮೊದಲ ಸೇತುವೆಯು ಜನಸಹಭಾಗಿತ್ವದ ಖಾಸಗಿ ಸೇತುವೆ. ಈ ಯಶೋಗಾಥೆಯು ಸಂಪರ್ಕದ ಕೊರತೆಯಿರುವ ಪ್ರದೇಶಗಳಿಗೆ ತಲಪಿದುವು. ಆಡಳಿತವೂ ಕಿವಿಯರಳಿಸಿತು. ಪಂಚಾಯತ್ ಮೂಲಕ ಕೆಲವು ಸೇತುವೆಗಳ ನಿರ್ಮಾಣಕ್ಕೆ ’ಗುತ್ತಿಗೆ’ಯು ಅರಸಿ ಬಂತು.
ಗಿರೀಶ್ ಭಾರದ್ವಾಜರು ಕಳೆದ ಮೂರುವರೆ ದಶಕಗಳಲ್ಲಿ ಕಟ್ಟಿದ ಒಟ್ಟು ಸೇತುವೆಗಳು ೧೪೦ಕ್ಕೂ ಮಿಕ್ಕಿ. ಒಂದೊಂದು ಸೇತುವೆಗಳು ಒಂದೊಂದು ತರಹ. ಅಲ್ಲಿನ ಭೂಗೋಳಿಕ ರಚನೆಯಿದ್ದಂತೆ. ಬಹುಶಃ ಈ ಎಲ್ಲಾ ಸೇತುವೆಗಳ ರಚನೆಯ ಹಿಂದೆ ಕಣ್ಣಿಗೆ ಕಾಣದ ವ್ಯವಸ್ಥೆಗಳಿದ್ದುವು. ಆಡಳಿತದ ಕೆಂಪುಪಟ್ಟಿಯ ಧೋರಣೆಗಳಿದ್ದುವು. ನಗು ಅರಿಯದ ಅಧಿಕಾರಿಗಳ ಗಂಟುಮೋರೆಯ ಮನಃಸ್ಥಿತಿಗಳಿದ್ದುವು!
ಅರಂತೋಡು, ಕೊಟ್ಯಾಡಿ, ತಚ್ಚರಕಡವು, ಕರಿಕೆ, ಅಂಬಿಲಾಡಿ, ಮೂನಾಂಕಡವು, ಚೇರೂರು ಕಡವು; ಕೊಡಗಿನ ದರ್ಭೆಕ್ಕಾಡು, ಮಕ್ಕಂದೂರು; ಕಣ್ಣೂರಿನ ಕೂವೇರಿ, ಚಪ್ಪಾರಪಡವು; ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿ ನದಿಗೆ ಅಡ್ಡವಾಗಿ ಸೇತುವೆ, ಬಿದರಳ್ಳಿ, ಡೋಂಗ್ರಿ, ಹೆಗ್ಗರಣಿ, ಗುಂಡುಬಾಳ… ಈ ಎಲ್ಲ ಸೇತುವೆಗಳೂ ಜನರ ಆವಶ್ಯಕತೆಗಳನ್ನು ನೂರಕ್ಕೆ ನೂರು ಪೂರೈಸಿದೆ!
ಸುಳ್ಯದ ಸನಿಹದ ದೊಡ್ಡೇರಿ ಅತೀ ಎತ್ತರದ ಸೇತುವೆ. ಸುಮಾರು ೧೧೫ ಮೀಟರ್ ಉದ್ದ. ಕುಶಾಲನಗರ-ಹಾಸನ ಮಧ್ಯೆ ಕೊಣನೂರಿನಲ್ಲಿ ಕಾವೇರಿ ನದಿಗೆ ೧೮೦ ಮೀಟರ್ ಉದ್ದದ ಸೇತುವೆ, ಬೆಳಗಾಂ ಜಿಲ್ಲೆಯ ಹುಕ್ಕೇರಿ ತಾಲೂಕು ಗೋಡ್ಗೇರಿಯಲ್ಲಿ ೨೨೦ ಮೀ. ಸೇತುವೆ… ಹೀಗೆ ವೈವಿಧ್ಯ ವಿನ್ಯಾಸದ ಸೇತುವೆಗಳು.
ಸರಕಾರಿ ವರಸೆ
ಸರಕಾರದ ಹಣವು ಬಿಡುಗಡೆಯಗುವ ಪ್ರಕ್ರಿಯೆಯು ’ನಿಧಾನ ನಡಿಗೆ’ಯದ್ದು. ಹಾಗಾಗಿ ಮೊದಮೊದಲು ಸಾಲ ಮಾಡಿ ಕಾಮಗಾರಿ ನಡೆಸುತ್ತಿದ್ದರು. ಸರಕಾರದಿಂದ ಹಣ ಕೈಗೆ ಬಂದಾಕ್ಷಣ ಸಾಲ ಚುಕ್ತಾ ಮಾಡುತ್ತಿದ್ದರು. ಕೆಲವೊಂದು ಸೇತುವೆಗಳು ’ಟೋಪಿ’ ಹಾಕಿದ್ದುಂಟು! ಅಲ್ಲಿಗೆ ಸಾಲಕ್ಕೆ ವಿದಾಯ. ಹಣ ಕೈಗೆ ಬಂದರಷ್ಟೇ ಮುಂದಿನ ಕೆಲಸ.
ಪಂಚಾಯತ್ ಕೆಲಸವಾದ್ದರಿಂದ ಹಣಕ್ಕೆ ತೊಂದರೆಯಿಲ್ಲ. ವಿಳಂಬವಾದರೆ ಜನರೇ ಇಲಾಖೆಯ ಅಧಿಕಾರಿಗಳನ್ನು ಎಚ್ಚರಿಸುತ್ತಾರೆ. ಆ ಹಳ್ಳಿಗೆ ತೂಗುಸೇತುವೆ ಅನಿವಾರ್ಯವಾದ ಕಾರಣ ಜನರ ಸಹಭಾಗಿತ್ವ ಇರುತ್ತದೆ. ಹಾಗಾಗಿ ಪಾವತಿಗೆ ತೊಂದರೆಯಿಲ್ಲ. ಆದರೆ ಸರಕಾರದ ’ಕೆಂಪು ಪಟ್ಟಿ’ಯ ರುಚಿ ಗಿರೀಶರನ್ನು ಕೆಲವೆಡೆ ಹೈರಾಣ ಮಾಡಿತ್ತು. ’ಅದಕ್ಕೆ ಸೊಪ್ಪು ಹಾಕದ’ ಇವರ ಪ್ರಾಮಾಣಿಕತೆಯ ಮುಂದೆ ’ಪರ್ಸಂಟೇಜ್’ ಅಧಿಕಾರಿಗಳು ನಾಪತ್ತೆಯಾದ ಘಟನೆಗಳು ಹತ್ತಾರು ಇವೆ.
’ನಾನು ಗುತ್ತಿಗೆದಾರ ಅಲ್ಲ. ಅವರು ಹೇಳುವುದು, ನಾನು ಮಾಡುವುದು’ ಗಿರೀಶ್ ಹೇಳುತ್ತಿದ್ದರು. ನಮ್ಮ ಬಹುತೇಕ ಗುತ್ತಿಗೆದಾರರು ಹೇಗಿರುತ್ತಾರೆ ಊಹಿಸಿ. ಸರಕಾರದಿಂದ ಮಂಜೂರಾದ ಹಣದಲ್ಲಿ ಕಾಮಗಾರಿಗೆ ಶೇ.೫೦ ವಿನಿಯೋಗವಾದರೆ ಅದು ’ಗ್ರೇಟ್’. ಗಿರೀಶ್ ಹಾಗಲ್ಲ. ಹೇಳಿದಂತೆ ಮಾಡಿ ತೋರಿಸುವ ಜಾಯಮಾನ. ಒಂದೊಂದು ಪೈಸೆಗೂ ಲೆಕ್ಕ-ಪಕ್ಕಾ.
ತೂಗುಸೇತುವೆ ಕೆಲಸವಾಗುವೆಡೆಯೆಲ್ಲಾ ಕುತೂಹಲಿಗಳ ದಂಡು ಅಧಿಕ. ಸೇತುವೆ ಕೆಲಸ ನಡೆಯುತ್ತಿದ್ದಾಗ ಕೇರಳದಲ್ಲಿ ಬೆಂಬಲ ಸಿಕ್ಕಿದಷ್ಟು ಕರ್ನಾಟಕದಲ್ಲಿ ಸಿಗುತ್ತಿಲ್ಲ. ಕೇರಳದಲ್ಲಿ ನಮ್ಮ ಸೇತುವೆ ಕೆಲಸ ಮುಗಿಯುವಷ್ಟರಲ್ಲಿ ಒಂದಷ್ಟು ಜನ ಸ್ನೇಹಿತರಾಗಿ ಬಿಡುತ್ತಾರೆ. ಕರ್ನಾಟಕದಲ್ಲಾದರೆ…? ಗುತ್ತಿಗೆ ಕೆಲಸ ಅಂದರೆ ಜನ ಹತ್ತಿರ ಬರುವುದಿಲ್ಲ. ನಮ್ಮ ಅಧಿಕಾರಿಗಳು ಅದನ್ನು ಅಷ್ಟು ’ಕುಲಗೆಡಿಸಿ’ ಬಿಟ್ಟಿದ್ದಾರೆ. ’ಬಿಕ್ಷುಕ ಹತ್ತಿರ ಬಂದಂತೆ ಅಧಿಕಾರಿಗಳು ವರ್ತಿಸುತ್ತಾರೆ. ಇವರ ವರ್ತನೆಗಳನ್ನು ನೋಡಿದಾಗ ಸೇತುವೆ ಸಹವಾಸವೇ ಬೇಡ ಅನ್ನಿಸುತ್ತದೆ. ಆದರೆ ಜನರ ಕಣ್ಣೀರನ್ನು ಕಂಡಾಗ ನೋವು ಮರೆಯಾಗುತ್ತದೆ’ ಎಂದಿದ್ದರು.
ಹೃದಯದ ಮಾತು
ಹಳ್ಳಿಯವರ ಸಮಸ್ಯೆಗಳು ಸರಕಾರಕ್ಕೆ ಅರ್ಥವಾಗಿ, ಆ ಊರಿನಲ್ಲಿ ಸೇತುವೆಯಾಗುವಾಗ ಎರಡು ತಲೆಮಾರು ದಾಟಬಹುದು. ಭಾರದ್ವಾಜರ ಸೇತುವೆ ಕಲ್ಪನೆ ಇಲ್ಲದಿರುತ್ತಿದ್ದರೆ ಇಂದು ಎಷ್ಟೋ ಹಳ್ಳಿಗಳು ಕುಗ್ರಾಮವಾಗಿಯೇ ಇರಬೇಕಿತ್ತು. ಮಕ್ಕಳ ವಿದ್ಯಾಭ್ಯಾಸ, ಕೃಷಿ, ಆರೋಗ್ಯ ಎಲ್ಲವೂ ಕನಸಿನ ಮಾತಾಗುತ್ತಿತ್ತು. ಹಿಂದೊಮ್ಮೆ ಯಕ್ಷಗಾನ ಸಂಶೋಧಕ, ಕೃಷಿಕ ಅಡೂರು ಶ್ರೀಧರರಾವ್ ಹೇಳುತ್ತಿದ್ದಾಗ ಗಿರೀಶರ ಕಣ್ಣಂಚಿನಲ್ಲಿ ಖುಷಿಯ ಕಣ್ಣೀರು ಜಿನುಗಿರುವುದನ್ನು ನೋಡಿದ್ದೇನೆ. ಇಂತಹ ಎಷ್ಟೋ ’ಮನಸ್ಸು’ಗಳೇ ಇವರ ಆಸ್ತಿ.
ನಮ್ಮ ಚಾಲಕನ ಮನೆಯಿರುವುದು ಆಚೆ ದಡದಲ್ಲಿ. ಮಳೆಗಾಲದಲ್ಲಿ ಆತನ ವಸತಿ ನಮ್ಮ ಮನೆಯಲ್ಲಿ. ಆಚೆ ದಡದ ಊರಿಗೆ ಹದಿನಾಲ್ಕು ಕಿಲೋಮೀಟರ್ ಸುತ್ತು ಬಳಿಸಿ ಪ್ರಯಾಣಿಸಬಹುದು. ಅದೂ ವಾಹನವುಳ್ಳವರ ಮಾತಾಯಿತು. ಇಲ್ಲದವರು? ಹಾಗಾಗಿ ಮಳೆಗಾಲದಲ್ಲಿ ಅಚೆ ದಡದ ದೇಲಂಪಾಡಿ ಊರು ಒಂದು ದ್ವೀಪವಾಗಿಬಿಡುತ್ತದೆ. ಈ ಸೇತುವೆಯಾದರೆ ಹಳ್ಳಿಗೆ ಉಸಿರು ಬಂದಂತೆ, ಕುಂಟಾರಿನಲ್ಲಿ ಸೇತುವೆ ಕಾಮಗಾರಿ ನಡೆಯುತ್ತಾಗ ವೇ.ಮೂ. ರವೀಶ ತಂತ್ರಿಯವರ ಉದ್ಗಾರವಿದು.
ಎಂಟು ವರ್ಷದ ಹಿಂದೆ ಪೂರ್ಣವಾದ ಬಳವಂತಡ್ಕ ಸೇತುವೆ ಸಮಿತಿಯ ವರಿಷ್ಠರು ಈಗಲೂ ಪ್ರತೀ ಗಣೇಶ ಚತುರ್ಥಿಯಂದು ನಮ್ಮ ಮನೆಗೆ ಬಂದು ಆತಿಥ್ಯವನ್ನು ಸ್ವೀಕರಿಸಿ, ಕೃತಜ್ಞತೆ ಹೇಳಿ ಹೋಗುತ್ತಾರೆ. ಮಾನವತೆ ಅಂದರೆ ಇದಲ್ವಾ… ಇಂತಹ ಘಟನೆಗಳನ್ನು ಹೇಳುವಾಗ ಗಿರೀಶರು ಭಾವುಕರಾಗುತ್ತಿದ್ದರು.
ಯಶದ ಗುಟ್ಟು
ಸೇತುವೆ ಅಂದಾಕ್ಷಣ ಫಕ್ಕನೆ ನೆನಪಾಗುವುದು ಗಿರೀಶ ಭಾರದ್ವಾಜ್. ಆದರೆ ಅವರ ಹಿಂದೆ ದೊಡ್ಡ ’ಶ್ರಮಸೇನಾ ಪಡೆ’ಯಿದೆ. ಅದು ಅಂತಿಂಥ ಪಡೆಯಲ್ಲ, ಮಿಲಿಟರಿಯಂತಹ ಶಿಸ್ತಿನ ಪಡೆ. ಗಂಟೆ ನೋಡಿ ಕೆಲಸವಲ್ಲ. ಇವರೊಂದಿಗೆ ಗಿರೀಶರೂ ಜತೆಗಿದ್ದಾಗ ಯಜಮಾನ ಯಾರು? ಕೆಲಸದವರು ಯಾರು? ವ್ಯತ್ಯಾಸವೇ ಗೊತ್ತಾಗುವುದಿಲ್ಲ. ’ಹಾಗಾಗಿ ನನ್ನಲ್ಲಿ ಕೆಲಸದವರು ಬಿಟ್ಟು ಹೋಗುವುದಿಲ್ಲ’ ಎಂದಿದ್ದರು ಗಿರೀಶ್. ಕೀರ್ತಿ ಸಲ್ಲಬೇಕಾದ್ದು ನನಗಲ್ಲ. ನನ್ನ ಸಹೋದ್ಯೋಗಿಗಳಿಗೆ ಎನ್ನುತ್ತಿದ್ದರು.
ಬೆಳಗಾವಿಯಲ್ಲಿ ಸೇತುವೆ ಕೆಲಸ ಮುಗಿದಾಗ ಹಳ್ಳಿಯ ವೃದ್ಧರೊಬ್ಬರು ಗಿರೀಶರ ಹತ್ತಿರ ಬಂದು ’ದೇವರು ಬಂದಾಗೆ ನಮ್ಮೂರಿಗೆ ಬಂದ್ರಿ’ ಎಂದರಂತೆ. ಇನ್ನೊಂದೆಡೆ ಅನಕ್ಷರಸ್ಥ ಗ್ರಾಮಸ್ಥ ’ನಿಮ್ಮ ವಿದ್ಯೆ ದೊಡ್ಡದು’ ಎಂದು ಹರಸಿದ್ದರಂತೆ. ’ಹಳ್ಳಿಯವರ ಮನತುಂಬಿದ ಈ ಹಾರೈಕೆಯ ಮುಂದೆ ನಮ್ಮ ಯಾವ ಪ್ರಶಸ್ತಿ, ಪುರಸ್ಕಾರಗಳು ಗೌಣ’ ಎಂದಿದ್ದರು.

ತೂಗುಸೇತುವೆಗಳು ಮನುಷ್ಯ ಸಂಚಾರಕ್ಕೆ ಮಾತ್ರ. ವಾಹನಗಳಿಗಲ್ಲ. ಒಂದೆರಡು ಸೇತುವೆಗಳು ದ್ವಿಚಕ್ರಗಳಿಗೆ ಓಕೆ. ಎಲ್ಲಿ ಜನರ ಕಾಳಜಿ ಇರುತ್ತದೋ, ಅಲ್ಲಿ ಸೇತುವೆ ಗಟ್ಟಿ ಇರುತ್ತದೆ. ಗಿರೀಶರ ಸೇತುಯಾನದ ಅನುಭವ.
ಭಾರದ್ವಾಜರು ಎನ್‌ಡಿಟಿವಿ ಪ್ರಶಸ್ತಿ, ಕನ್ನಡ ಪ್ರಭ ಸುವರ್ಣ ವಾಹಿನಿಯ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಸಿಎನ್‌ಎನ್-ಐಬಿಎನ್ ಪ್ರಶಸ್ತಿ.. ಹೀಗೆ ರಾಷ್ಟ್ರದ ಪ್ರತಿಷ್ಠಿತ ಪ್ರಶಸ್ತಿ ಪಡೆದಿದ್ದಾರೆ. ೨೦೧೭ರಲ್ಲಿ ಪದ್ಮಶ್ರೀ ಪ್ರಶಸ್ತಿ. ಮಣ್ಣಿನ ಮಗನಾಗಿ, ಮಣ್ಣನ್ನು ನಂಬಿರುವವರ ಬಾಳಿಗೆ ನಿಜಾರ್ಥದಲ್ಲಿ ಭಾರದ್ವಾಜರು ದೀವಿಗೆಯಾಗಿದ್ದರು.
ಗಿರೀಶರ ಸೇತುಯಾನದಲ್ಲಿ ನಾವೆಲ್ಲ ಅವರ ’ಮಾನವತಾವಾದ’ವನ್ನು ಗಮನಿಸಬೇಕು. ಇದರಿಂದಾಗಿ ಅವರಿಗೆ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಾಯಿತು. ಸಜ್ಜನಿಕೆ, ಸಾತ್ವಿಕತೆಯು ಮೈದೋರಿ ಬಂದರೆ ಹೇಗಿರಬಹುದು? ಈ ಪ್ರಶ್ನೆಗೆ ಉತ್ತರ ಗಿರೀಶ್ ಭಾರದ್ವಾಜ್ ಆಗಿದ್ದರು. ಗಿರೀಶರಿಗೆ ಗಿರೀಶರೇ ಸಾಟಿ. ’ಬದಲಿ’ ಇಲ್ಲ. ಆದರೆ ಒಂದು ಖುಷಿ – ಅವರ ಪುತ್ರ ಪತಾಂಜಲಿ ಭಾರದ್ವಾಜ್ ತಂದೆಯ ಹಾದಿಯಲ್ಲಿ ಸಾಗುತ್ತಿದ್ದಾರೆ.
ಬಾಕ್ಸ್ ೧
ಬಾಕ್ಸ್ ೨
ಚಿತ್ರ ವಿವರ:
೦೧ ಶ್ರೀ ಗಿರೀಶ್ ಭಾರದ್ವಾಜ್
೦೨ ನೀಳ ಸೇತುವೆಯ ಸೌಂದರ್ಯ
೦೩ ಬಾಗಿ ಬಳುಕುವ ವಿನ್ಯಾಸ
೦೪ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ
೦೫ ಗಿರೀಶ್ ಭಾರದ್ವಾಜರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ – ೨೦೧೭
೦೬ ಶ್ರಮ ಬೇಡುವ ಕಾಯಕ
೦೭ ’ಅಳರಸ ಬೇಧ ಇಲ್ಲಿಲ್ಲ. ನಾನೂ ಒಬ್ಬ ಕೆಲಸಗಾರನೇ’: ಗಿರೀಶ್
೦೮ ’ಸೇತು ಬಂಧ ಪೂರ್ಣಗೊಂಡ ಸಂತಸ’






